Advertisement
ಕನ್ನಡದ ಹೆಣ್ಮನಗಳ ಕನ್ನಡಾಭಿಮಾನ: ರೂಪಶ್ರೀ ಕಲ್ಲಿಗನೂರ್ ಬರಹ

ಕನ್ನಡದ ಹೆಣ್ಮನಗಳ ಕನ್ನಡಾಭಿಮಾನ: ರೂಪಶ್ರೀ ಕಲ್ಲಿಗನೂರ್ ಬರಹ

ಕನ್ನಡ ನಾಡಿನ ಮಕ್ಕಳು ಇಡೀ ಜಗತ್ತಿನ ತುಂಬಾ ಓಡಾಡಿದರೂ, ಮನೆಗೆ ಬಂದು ಅಮ್ಮನೊಟ್ಟಿಗೆ ಕನ್ನಡ ಮಾತನಾಡಿದಾಗಲೇ ಅವರಿಗೂ ಸಮಾಧಾನ. ಯಾಕೆಂದರೆ ಅವರೆಲ್ಲ ಮೊದಲು ಕಲಿತ ಪದವೇಅಮ್ಮಅಲ್ಲವೇ! ಜಗತ್ತಿನ, ಬೆಳವಣಿಗೆಯೆಂಬ ಸಂಕೀರ್ಣತೆಯ ಸಂದಿಗ್ಧತೆಯಲ್ಲಿ ಕನ್ನಡ ಭಾಷೆ ಚೂರು ನಲುಗುತ್ತಿದೆ ಎನ್ನಿಸುತ್ತಿದೆಯಾದರೂ ದೊಡ್ಡಮಟ್ಟದಲ್ಲಿಯಲ್ಲವಾದರೂ, ತಮಗೆ ಸಿಕ್ಕ ಅವಕಾಶಗಳಲ್ಲಿ ಕನ್ನಡದ ಬೆಳವಣಿಗೆಗೆ, ಉಳಿವಿಗೆ ಶ್ರಮಿಸುವ ಹಲವು ಶ್ರೀಸಾಮಾನ್ಯರಿದ್ದಾರೆ. ಕರ್ನಾಟಕದಲ್ಲಿ ಅಲ್ಲದೇ ಬೇರೆಡೆಗಳಲ್ಲಿ ನೆಲೆಸಿರುವ, ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಲವು ಕನ್ನಡದ ಹೆಣ್ಮಗಳ ಮಾತುಗಳು, ರೂಪಶ್ರೀ ಕಲ್ಲಿಗನೂರ್‌ ನಿರೂಪಣೆಯಲ್ಲಿ….

ಕನ್ನಡವೆಂದರೆ ಹಲವರಿಗೆ ಹಲವು ಬಗೆ. ಉದ್ಯೋಗ, ಅವಕಾಶ ಬೇಡಿ ಬರುವವರನ್ನು ತನ್ನ ತೋಳ್ತೆರೆದು ಬರಮಾಡಿಕೊಳ್ಳುವಲ್ಲಿ ಕರ್ನಾಟಕದಷ್ಟು ಬೇರೆ ಯಾವ ರಾಜ್ಯವೂ ಉದಾರಿಯಲ್ಲ. “ಬನ್ನಿ ಮಕ್ಕಳೇಎಂದು ಎಲ್ಲ ರಾಜ್ಯದ ಮಕ್ಕಳನ್ನೂ ತನ್ನ ಮಕ್ಕಳಂತೇ ಒಳಮಾಡಿಕೊಳ್ಳುವ ಕನ್ನಡವನ್ನು ಒಳಬರುವವರು ಕೊಂಚ ಅಸಡ್ಡೆಯಿಂದಲೇ ಕಾಣುತ್ತಾರೆ. “ಉದ್ರಿ ಸಿಗೋದಕ್ಕೆ ಬೆಲೆಯಿಲ್ಲಎನ್ನುತ್ತಾರಲ್ಲ ಹಾಗೆ. ಕನ್ನಡ ನಾಡಿನ ಮಕ್ಕಳು ಇಡೀ ಜಗತ್ತಿನ ತುಂಬಾ ಓಡಾಡಿದರೂ, ಮನೆಗೆ ಬಂದು ಅಮ್ಮನೊಟ್ಟಿಗೆ ಕನ್ನಡ ಮಾತನಾಡಿದಾಗಲೇ ಅವರಿಗೂ ಸಮಾಧಾನ. ಯಾಕೆಂದರೆ ಅವರೆಲ್ಲ ಮೊದಲು ಕಲಿತ ಪದವೇಅಮ್ಮ” ಅಲ್ಲವೇ! ಜಗತ್ತಿನ, ಬೆಳವಣಿಗೆಯೆಂಬ ಸಂಕೀರ್ಣತೆಯ ಸಂದಿಗ್ಧತೆಯಲ್ಲಿ ಕನ್ನಡ ಭಾಷೆ ಚೂರು ನಲುಗುತ್ತಿದೆ ಎನ್ನಿಸುತ್ತಿದೆಯಾದರೂ ದೊಡ್ಡಮಟ್ಟದಲ್ಲಿಯಲ್ಲವಾದರೂ, ತಮಗೆ ಸಿಕ್ಕ ಅವಕಾಶಗಳಲ್ಲಿ ಕನ್ನಡದ ಬೆಳವಣಿಗೆಗೆ, ಉಳಿವಿಗೆ ಶ್ರಮಿಸುವ ಹಲವು ಶ್ರೀಸಾಮಾನ್ಯರಿದ್ದಾರೆ. ಕರ್ನಾಟಕದಲ್ಲಿ ಅಲ್ಲದೇ ಬೇರೆಡೆಗಳಲ್ಲಿ ನೆಲೆಸಿರುವ, ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಲವು ಕನ್ನಡದ ಹೆಣ್ಮಗಳ ಮಾತುಗಳು ನಿಮಗಾಗಿ.

ಬಳಸ್ತಾ ಹೋದ್ರೆ, ಭಾಷೆಗೆ ಕೊನೆಯೆಲ್ಲಿ?: ಕ್ಷಮಾ ವಿ. ಭಾನುಪ್ರಕಾಶ್

ಬೆಂಗಳೂರು ಕರ್ನಾಟಕದ ರಾಜಧಾನಿಯೇನೋ ಸರಿ. ಆದ್ರೆ ಈಗ ಸಂಪೂರ್ಣ ಕಾಸ್ಮೋಪಾಲಿಟನ್ ನಗರವಾಗಿಬಿಟ್ಟಿದೆ. ಇದು ಒಂದು ದಿನದ ಬೆಳವಣಿಗೆಯಲ್ಲ. ಅನೇಕ ದಶಕಗಳಿಂದ ದೇಶದ, ಜಗತ್ತಿನ ಇತರ ಭಾಗಗಳಿಂದ ಇಲ್ಲಿ ಬದುಕ ಅರಸಿ ಬರುವವರನ್ನೆಲ್ಲಾ ಸ್ವಾಗತಿಸುತ್ತಾ ಅವರ ಸಂಸ್ಕೃತಿ ಮತ್ತು ಭಾಷೆಯನ್ನೂ ಸಹಜವಾಗಿ ಸ್ವಾಗತಿಸಿದೆ ನಮ್ಮ ಬೆಂಗಳೂರು. ಇಂತಹ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಾನು ನಮ್ಮ ಅಪಾರ್ಟ್ಮೆಂಟ್ ಮತ್ತು ನಾನು ಕೆಲ್ಸ ಮಾಡುವ ಇಂಟರ್ನ್ಯಾಷನಲ್ ಶೈಕ್ಷಣಿಕ ಸಂಸ್ಥೆಯಲ್ಲಿ ದಿನವೂ ಕನ್ನಡಕ್ಕಾಗಿ ನನ್ನ ಮಟ್ಟಿನ ಹೋರಾಟ ಮಾಡ್ತಾ ಬಂದಿದ್ದೇನೆ ಮತ್ತು ಮಾಡ್ತಾನೇ ಇರ್ತೇನೆ. ಕನ್ನಡಕ್ಕಾಗಿ ಹೋರಾಟ ಮಾಡುವ ಅನಿವಾರ್ಯತೆ ಖಂಡಿತಾ ಎಲ್ಲರಂತೆ ನನಗೂ ಇಷ್ಟವಿಲ್ಲ. ಆದ್ರೆ ಇದೆಲ್ಲ ಅನಿವಾರ್ಯ ಕರ್ಮ ನಮಗೆ. ಬಾಯ್ಬಿಟ್ರೆ ಇಂಗ್ಲೀಶ್ ಹಿಂದಿ ಮಾತಾಡೋ ಇಲ್ಲಿ, ಆ ಭಾಷೆಗಳು ಚೆನ್ನಾಗೇ ಬಂದರೂ ಅದರಲ್ಲಿ ಉತ್ತರಿಸದೇ ಕನ್ನಡವನ್ನು ಸಂಭಾಷಣೆಯಲ್ಲಿ ತರುವುದನ್ನ ಪ್ರಯತ್ನಪೂರ್ವಕವಾಗಿ ಮಾಡ್ತೇನೆ‌. ಕಾರ್ಯಕ್ರಮಗಳಲ್ಲಿ ಹಾಡು ಎಂದಾಗ ಮೊದಲೊಂದು ಕನ್ನಡದ್ದು ಹಾಡಿಯೇ ನಂತರ ಅವರು ಕೇಳುವ ಬೇರೆ ಹಾಡು ಹಾಡೋದು. ಕಾರ್ಯಕ್ರಮಗಳ ಆಹ್ವಾನಪತ್ರಿಕೆಯಲ್ಲಿ, ಬೋರ್ಡ್‌ಗಳಲ್ಲಿ ಕನ್ನಡ ಇರದಿದ್ರೆ ತಕ್ಷಣವೇ ಯಾರ ಹಿಂದೆ ಬೀಳಬೇಕೋ ಬಿದ್ದು ಹಠ ಹಿಡಿದು ಮಾಡಿಸೋದು, ನನ್ನ ಮಗನ ಸ್ನೇಹಿತರನ್ನು ಇಂಗ್ಲಿಷ್ ಮಾತಾಡಿಸ್ತಾ ಕನ್ನಡ ಕಲಿಸ್ತಾ ಕನ್ನಡ ಪದಗಳನ್ನು ಅವರೊಂದಿಗೆ ಮಾತಿನಲ್ಲಿ ಬಳಸೋದು – ಹೀಗೆ ದಿನನಿತ್ಯದ ಪ್ರತಿ ನಡೆಯಲ್ಲೂ ನಾವು ಕನ್ನಡಿಗರೆಂಬ ಹೆಮ್ಮೆ, ಕನ್ನಡಕ್ಕೆ ಇತರರಿಂದ ಅವಮಾನವಾಗಬಾರದೆಂಬ ಎಚ್ಚರಿಕೆ ಇದ್ದೇ ಇದೆ.

ಮತ್ತೊಂದು ನನಗೆ ಯಾವಾಗ್ಲೂ ಅನ್ನಿಸೋದು ಏನಂದ್ರೆ, ನಮ್ಮ ದಿನನಿತ್ಯದ ನಡೆನುಡಿಯನ್ನ ಎಲ್ಲರೂ ಕೇವಲ ನಮ್ಮದೆಂದು ಗಮನಿಸೋದಿಲ್ಲ, ಅದರಲ್ಲೂ ಅನ್ಯಭಾಷಿಕರೇ ತುಂಬಿರುವ ಅಪಾರ್ಟ್ಮೆಂಟ್, ಆಫೀಸ್ ಇತ್ಯಾದಿ ಸ್ಥಳಗಳಲ್ಲಿ, ನಮ್ಮನ್ನ ಕನ್ನಡದ ಪ್ರತಿನಿಧಿಗಳಾಗಿ ಕೂಡ ನೋಡ್ತಾರೆ.

ಹಾಗಾಗಿ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತಾ, ಗುರುತರ ಜವಾಬ್ದಾರಿಯ ಸ್ಥಾನಗಳನ್ನು ಅಲಂಕರಿಸಿ, ದಿನನಿತ್ಯದ ಜೀವನದಲ್ಲಿ ಗೌರವ, ಪ್ರೀತಿ ಸಂಪಾದಿಸಿದರೆ, ನಾವು ಪ್ರತಿನಿಧಿಸುವ ನಾಡು ಮತ್ತು ಭಾಷೆಯೂ ಪ್ರೀತಿ ಮತ್ತು ಗೌರವ ಪಡೆಯುತ್ತದೆ. ಅಪ್ಪಿತಪ್ಪಿಯೂ ಅನ್ಯಭಾಷಿಕರ ಮುಂದೆ ನಮ್ಮ ನಾಡು ಮತ್ತು ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಬಾರದೆಂಬುದು ನಾನು ಅನುಕರಿಸುತ್ತಿರುವ ಮತ್ತೊಂದು ನಿಯಮ.

ಹೇಗೆ ಕನ್ನಡ ನಮ್ಮ ಹೆಮ್ಮೆಯೋ, ಹಾಗೇ ನಾವೂ ಕನ್ನಡದ ಹೆಮ್ಮೆ ಹೇಗಾಗಬಹುದು ಅಂತ ಯೋಚಿಸಿದ್ರೆ ತಂತಾನೆ ದಾರಿ ಗೋಚರಿಸುತ್ತೆ. ಅಲ್ವೇ?

*****

ಕನ್ನಡ ಭಾಷೆಯ ಉಳಿವಿರುವುದು ಮಕ್ಕಳ ಕೈಯಲ್ಲಿಯೇ: ಡಾ. ಎಲ್.‌ ಜಿ. ಮೀರಾ, ಕನ್ನಡ ಅಧ್ಯಾಪಕಿ, ಲೇಖಕಿ

ನಮ್ಮ ಕಾಲೇಜಿಗೆ ಬರುವ ಶೇಕಡಾ ೬೦-೭೦ ರಷ್ಟು ಮಕ್ಕಳು ಗ್ರಾಮೀಣ ಪ್ರದೇಶದವರು. ಹಾಗಾಗಿ ಅವರ ಆಡು ಮಾತು ಕನ್ನಡವೇ ಆಗಿರುತ್ತೆ. ಹಾಗಂದ ಮಾತ್ರಕ್ಕೆ ಅವರು ಕನ್ನಡವನ್ನು ತುಂಬಾ ಅಭಿಮಾನದಿಂದ ಬಳಸುತ್ತಾರೆ ಅಂತೇನೂ ಅಲ್ಲ. ಮಾತಿನಲ್ಲಿ ಸಾಕಷ್ಟು ಇಂಗ್ಲೀಷ್‌ ಪದಗಳನ್ನು ಬಳಸಿ, ಒಂದು ರೀತಿಯ ಕಂಗ್ಲೀಷ್ಭಾಷೆಯನ್ನೇ ಅವರು ಮಾತನಾಡುತ್ತಾರೆ. ವಿಜ್ಞಾನದ ಕಾಲೇಜಿನಲ್ಲಿ ನಾನು ಪಾಠ ಮಾಡೋದಾದ್ದರಿಂದ, ಇಲ್ಲಿ ಕನ್ನಡದ ಬಗ್ಗೆ ವಿಶೇಷ ಒಲವು ಉಳ್ಳವರು ಕೆಲವೇ ಕೆಲವು ಜನ. ಸಾಕಷ್ಟು ಮಕ್ಕಳು ಕನ್ನಡವನ್ನು ತೇರ್ಗಡೆ ಹೊಂದಲು ಬೇಕಾದ ಒಂದು ಭಾಷೆಯನ್ನಾಗಿ ಮಾತ್ರವೇ ನೋಡುತ್ತಾರೆ. ಹಾಗಾಗಿ, ಕನ್ನಡ ಅಧ್ಯಾಪಕರಾದ ನಾವು, ಮಕ್ಕಳಲ್ಲಿ ಕನ್ನಡದ ಬಗ್ಗೆ ಅರಿವು ಅಭಿಮಾನ ಮೂಡಿಸಲು ಕೊಂಚ ಹೆಚ್ಚೇ ಪ್ರಯತ್ನ ಮಾಡುತ್ತಿರುತ್ತೇವೆ.

ಕನ್ನಡದ ಅಧ್ಯಾಪಕಿಯಾಗಿರುವ ನಾನು ಗರಿಷ್ಠ ಕನ್ನಡದ ಪದಗಳನ್ನು ಬಳಸಿಯೇ ಮಾತನಾಡುತ್ತೇನೆ. ಆ ಮೂಲಕ ಕನ್ನಡದ ಆದಷ್ಟೂ ಪದಗಳು ಮಕ್ಕಳ ಕಿವಿಗೆ ಬೀಳಲಿ, ಬಿದ್ದು ಅವರ ಭಾಷಾ ಸಂಪತ್ತು ಜಾಸ್ತಿಯಾಗಲಿ ಅನ್ನೋ ದೃಷ್ಟಿಯಿಂದ. ಇದರಿಂದ ಕೆಲವು ಮಕ್ಕಳು ಪ್ರಭಾವಿತರಾಗೋದೂ ಉಂಟು. ಇನ್ನು ಕನ್ನಡವನ್ನು ಓದುವ, ಬರೆಯುವ ಅಭ್ಯಾಸವನ್ನು ಮಾಡಿಸುವ ಕೆಲಸವನ್ನೂ ಮಾಡುತ್ತಿರುತ್ತೇವೆ. ಕನ್ನಡ ಭಾಷೆಯ ಉಳಿವಿರುವುದು ಮಕ್ಕಳ ಕೈಯಲ್ಲಿಯೇ! ಅವರು ಕನ್ನಡಲ್ಲಿ ಮಾತನಾಡೋದು ಅತ್ಯಂತ ಅಗತ್ಯವಾದ ಕೆಲಸವಾಗಿದೆ. ಅವರು ಕನ್ನಡದಲ್ಲಿ ಮಾತಾಡಬೇಕು, ಕನ್ನಡವನ್ನ ಓದಿನಲ್ಲಿ, ಬರಹದಲ್ಲಿ ಬಳಸಬೇಕು, ಕನ್ನಡ ಹಾಡುಗಳನ್ನ ಕೇಳಬೇಕು ಹಾಗೂ ಕನ್ನಡ ಸಿನಿಮಾಗಳನ್ನು ನೋಡಬೇಕು. ಯಾವ ಸಂದೇಶವನ್ನ ಅನಕೃ ಅವರ ಬಹಳ ಹಿಂದೆಯೇ ಕೊಟ್ಟಿದ್ದರೋ ಅದು ಇವತ್ತಿಗೆ ಹೆಚ್ಚೇ ಅನ್ವಯವಾಗತ್ತೆ ಅಂತ ನನ್ನ ನಂಬಿಕೆ. ಹಾಗಾಗಿ ಕನ್ನಡ ಅಧ್ಯಾಪಕರಿಗೆ ಈ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿಯಿದೆ ಎಂದು ನಾನು ಭಾವಿಸುತ್ತೇನೆ. ನಾವು ಕನ್ನಡದಲ್ಲಿ ಸ್ಪಷ್ಟವಾಗಿ, ಸೊಗಸಾಗಿ, ಸಂಪತ್ಭರಿತವಾಗಿ ಮಾತನಾಡಿದರೆ, ನಮ್ಮ ಮಕ್ಕಳು ಹಾಗೂ ವಿದ್ಯಾರ್ಥಿಗಳು ಅದನ್ನ ಸರಾಗವಾಗಿ ರೂಢಿಸಿಕೊಳ್ತಾರೆ ಅಂತ ನಾನು ನಂಬಿದ್ದೇನೆ. ಹಾಗಾಗಿ ನಾವು ಬಹಳ ಪ್ರಯತ್ನಪೂರ್ವಕವಾಗಿ ಕನ್ನಡವನ್ನ ಮಕ್ಕಳಲ್ಲಿ ಬೆಳೆಸಬೇಕಾದ ಕೆಲಸವನ್ನ ಮಾಡಬೇಕಾಗಿದೆ. ಇವತ್ತಿನ ಒಟ್ಟು ಶಿಕ್ಷಣ ಏನಿದೆ, ಅದು ಭಾಷೆಗಾಗಲಿ, ಸಾಹಿತ್ಯಕ್ಕಾಗಲಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುವ ಮನಸ್ಥಿತಿಯನ್ನು ಹೊಂದಿಲ್ಲ. ನಾವು ಅದನ್ನ ಮನಸ್ಸಿನಲ್ಲಿಟ್ಟುಕೊಂಡು, ಹೇಗೆ ಮಕ್ಕಳತ್ತ ಅದನ್ನು ತೆಗೆದುಕೊಂಡು ಹೋಗಬೇಕು ಅನ್ನುವುದನ್ನ ಗಮನಿಸಬೇಕು. ನಾನು ಕಾಲೇಜಿನಲ್ಲಿ ಪಾಠಮಾಡುವುದರ ಜೊತೆಗೆ, ಕಾಲೇಜಿನ ಆಚೆಗೆ ಡಿಜಿಟಲ್‌ ಕನ್ನಡದ ಮೂಲಕ ಯುವ ಜನಾಂಗದ ಜೊತೆ ತೊಡಗಿಕೊಳ್ಳುವುದಕ್ಕೂ ಪ್ರಯತ್ನ ಮಾಡುತ್ತೇನೆ. ೧೫೯ ವಾರಗಳಿಂದ “ಕನ್ನಡ ಸೇತು” ಅನ್ನುವ ಜಾಲಪುಟ, ಅಂದರೆ ಬ್ಲಾಗ್‌ ಅನ್ನು ಬರೆಯುತ್ತಿದ್ದು, ಇಲ್ಲಿ ಮಕ್ಕಳಿಗೆ ಕನ್ನಡದ ಒಂದು ಪ್ರಸಂಗ ಕನ್ನಡದ ಒಂದು ಗಾದೆಮಾತು, ಭೌತಶಾಸ್ತ್ರದ ಕನ್ನಡ ಪದಗಳನ್ನೆಲ್ಲ ಪರಿಚಯ ಮಾಡಿಕೊಡುತ್ತಿರುತ್ತೇನೆ. ಬಹುಶಃ ನಾವು ಡಿಜಿಟಲ್‌ ಪ್ರಪಂಚದ ಮೂಲಕ ಕನ್ನಡದ ಮಕ್ಕಳನ್ನ ಕನ್ನಡದಿಂದ ತಲುಪಬಹುದೇನೋ ಅನ್ನಿಸುತ್ತೆ. ಇದು ಕಷ್ಟಸಾಧ್ಯ, ಆದ್ರೆ ಅಸಾಧ್ಯವಲ್ಲ. ಹಾಗಾಗಿ ಕನ್ನಡವನ್ನು ಉಳಿಸೋಣ ಬೆಳೆಸೋಣ ಅನ್ನುವಾಗ ಖಂಡಿತವಾಗಿ ನಾವು ನಮ್ಮ ಯುವ ಜನಾಂಗವನ್ನ ಮಕ್ಕಳನ್ನು ಒಳಗೊಳ್ಳಬೇಕು ಅನ್ನಿಸುತ್ತೆ.

*****

ಕನ್ನಡವೆಂದರೆ ಕಿವಿ ನಿಮಿರುವುದು: ಡಾ. ವಿನತೆ ಶರ್ಮಾ, ಸಮಾಜಕಾರ್ಯದ ಉಪನ್ಯಾಸಕಿ, ಆಸ್ಟ್ರೇಲಿಯಾ

ಮೆಲ್ಬರ್ನ್‌ ಆಸ್ಟ್ರೇಲಿಯಾದ ಪ್ರಸಿದ್ಧ ಉದ್ದಾನುದ್ದದ ಸಮುದ್ರ ತೀರದ ಪ್ರದೇಶದಲ್ಲಿರುವ ಒಂದು ನಗರ. ಇಲ್ಲಿಗೆ ಭಾರತದಿಂದ ಹಲವು ಜನ ವಲಸೆಗೆ ಬರುತ್ತಿದ್ದಾರೆ. ಭಾರತದಿಂದ ವಲಸೆ ಬರುವವರಲ್ಲಿ ಎಲ್ಲಾಥರದ ಭಾಷೆ ಹಾಗೂ ಉದ್ಯೋಗ, ವಿದ್ಯಾರ್ಹತೆ ಇರುವ ಜನರಿರುತ್ತಾರೆ. ಇತ್ತೀಚೆಗೆ ಬ್ರಿಸ್ಬೇನ್‌ ನಗರದಲ್ಲಿ ಕನ್ನಡ ಮಾತನಾಡುವ ಜನರ ಸಂಖ್ಯೆ ಜಾಸ್ತಿಯಾಗುತ್ತಿದೆ. ನಾನು ಆಸ್ಟ್ರೇಲಿಯಾದಲ್ಲಿ ಸುಮಾರು ಇಪ್ಪತ್ನಾಲ್ಕು ವರ್ಷಗಳಿಂದ ವಾಸವಿದ್ದು, ಬ್ರಿಬ್ಸೇನ್‌ಗೆ ಬಂದು ಹದಿನಾರು ವರ್ಷಗಳಾದವು. ನಡುವೆ ಇಂಗ್ಲೆಂಡ್‌ನಲ್ಲಿ ಸಹ ಇದ್ದು ವಾಪಸ್ಸು ಇಲ್ಲಿಗೇ ಬಂದೆ.

ಎಲ್ಲೇ ಹೋದರೂ ಕನ್ನಡ ಮಾತನಾಡುವ ಜನರ ಗುರುತು ಸಿಕ್ಕರೆ, ನಾನಾಗೇ ಮುಂದುವರಿದು ಹೋಗಿ ಕನ್ನಡದಲ್ಲಿ ಮಾತನಾಡಿಸುತ್ತೇನೆ. ಕನ್ನಡಿಗರು ಸದಾ ಕನ್ನಡದಲ್ಲಿ ಮಾತನಾಡಲು ಇಷ್ಟಪಡುತ್ತಾರೆ. ಮತ್ಯಾರೋ ಕನ್ನಡದಲ್ಲಿ ಅವರನ್ನು ಮಾತನಾಡಿಸಿದರೆ, ಅವರಿಗೆ ಕನ್ನಡದಲ್ಲೇ ಉತ್ತರ ಕೊಟ್ಟು, ಕನ್ನಡದಲ್ಲೇ ಸಂಭಾಷಿಸುತ್ತಾರೆ. ಇದರಿಂದ ಬಹಳ ಸಂತೋಷವಾಗತ್ತೆ. ಯಾಕೆಂದರೆ ಆಸ್ಟ್ರೇಲಿಯಾ ಇಂಗ್ಲೀಷ್‌ ಭಾಷೆ ಮಾತನಾಡುವವರ ದೇಶ. ಈ ದೇಶದಲ್ಲಿ ಬೇರೆ ನೆಲದಲ್ಲಿ ಬೇರೆ ಭಾಷೆ ಮಾತನಾಡುವುದು ಹೇಗೆ ಅನ್ನುವ ಹಿಂಜರಿಕೆ ಬಹಳ ಜನರಲ್ಲಿ ಇದ್ದೆ ಇರುತ್ತೆ. ಹಾಗಾಗಿ ಹೆಚ್ಚಿನ ಜನ, ತಾವೇ ಸ್ವತಃ ಮುಂದೆ ಬಂದು ತಮ್ಮೂರಿನ ಭಾಷೆಯನ್ನು ಮಾತನಾಡಲು ಹೋಗುವುದಿಲ್ಲ. ಆದರೆ ಮತ್ತೊಬ್ಬರು ತಮ್ಮ ಮಾತೃಭಾಷೆಯಲ್ಲಿ ಮಾತಾಡಿಸಿದ್ದೇ ಖಂಡಿತವಾಗಿ ಆಗ ಅದೇ ಭಾಷೆಯಲ್ಲಿ ಉತ್ತರಕೊಡುತ್ತಾರೆ. ಹೀಗಾಗಿ, ಇಲ್ಲೇ ನೆಲೆಗೊಂಡಿರುವ ನಾನು ಯಾರಾದರು ಕನ್ನಡಿಗರನ್ನು ಗುರುತು ಹಿಡಿದು ಮಾತನಾಡಿಸಿದರೆ, “ಓಹ್‌, ನೀವು ಕನ್ನಡದವರ?” “ಓಹ್‌, ನೀವೂ ಕನ್ನಡದವರ?” “ಕರ್ನಾಟಕದಲ್ಲಿ ಎಲ್ಲಿಂದ ಬಂದಿದ್ದೀರ? ಉತ್ತರ ಕನ್ನಡದವರ? ದಕ್ಷಿಣದವರ? ಬೆಂಗಳೂರಾ ಅಥವಾ ಮೈಸೂರ?…” ಹೀಗೆ ಬೇರೆ ಬೇರೆ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಸ್ನೇಹಿತರಾಗಿ, ಸಂಭಾಷಣೆ ಬೆಳೆಯುತ್ತಾ ಹೋಗುತ್ತದೆ. ಆ ಸಂದರ್ಭಗಳು ಬಹಳ ಚೆನ್ನಾಗಿರುತ್ತವೆ. ಹಾಗಾಗಿ ಇಲ್ಲಿಯೂ ಕನ್ನಡ ಮಾತನಾಡುವ ಬಹಳ ಜನ ಇದ್ದಾರೆ ಎಂದು ನಮಗೆ ಗೊತ್ತಾಗುತ್ತದೆ. ನಮ್ಮ ಭಾಷೆಯನ್ನೂ, ನಮ್ಮ ಸಂಸ್ಕೃತಿಯನ್ನೂ ಯಾವುದೇ ಹಿಂಜರಿಕೆಯಿಲ್ಲದೇ ಈ ನಾಡಿನಲ್ಲಿ ಮುಂದುವರೆಸಿಕೊಂಡು ಹೋಗಬಹುದು ಎನ್ನುವ ಧೈರ್ಯ ಬರುತ್ತದೆ. ಹೀಗಾಗಿ ಹೊರಗೆ ಹೋದಾಗಲೆಲ್ಲ, ಕನ್ನಡ ಮಾತನಾಡಬಲ್ಲ ಯಾರಾದರೂ ಸಿಗಬಹುದಾ ಎಂಬ ನಿರೀಕ್ಷೆಯಲ್ಲಿ ನನ್ನ ಕಿವಿಗಳು ಚುರುಕಾಗಿರುತ್ತವೆ.

ಇತ್ತೀಚೆಗೆ ಬ್ರಿಸ್ಬೇನ್‌ ನಗರದಲ್ಲಿ “ಬ್ಯಾಂಗಲೂರ್‌ ಡೇಸ್”‌ ಅನ್ನುವ ಒಂದು ರೆಸ್ಟೋರೆಂಟ್‌ ಆರಂಭವಾಯ್ತು. ಶುರು ಮಾಡಿದ್ದು ಬೆಂಗಳೂರಿನ ಒಬ್ಬ ಹುಡುಗ. ಕನ್ನಡಿಗರಿಗೆ ಪ್ರಿಯವಾದ ದೋಸೆಯಂಥ ಆಹಾರಗಳು ಕನ್ನಡಿಗರನ್ನು ತಲುಪಲೆಂದೆ ಈ ಹುಡುಗ ಈ ರೆಸ್ಟೋರೆಂಟ್ಶುರುಮಾಡಿದ್ದಾನಂತೆ. ಈ ವಿಷಯ ಕೇಳಿ ನಾನೇ ಅಲ್ಲಿಗೆ ಹೋಗಿಬಂದು ಖುಷಿಪಟ್ಟೆ. ಹೀಗೆ ಇಲ್ಲಿನ ಕನ್ನಡಿಗರು ಆಸ್ಟ್ರೇಲಿಯಾದಂಥ ಇಂಗ್ಲೀಷ್‌ ನಾಡಿನಲ್ಲಿ ಕನ್ನಡವನ್ನ, ಕನ್ನಡ ಸಂಸ್ಕೃತಿಯನ್ನ ಆಗಾಗ ಹುಡುಕಿಕೊಂಡು, ಪರಸ್ಪರ ಪರಿಚಯ ಮಾಡಿಕೊಂಡು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.

ಇಲ್ಲಿನ ಮೂರು ಬೇರೆಬೇರೆ ರಾಜಧಾನಿಗಳಲ್ಲಿ ನೆಲೆಸಿದ್ದ ನನಗೆ, ಅಲ್ಲಿರುವ ಮೂರೂ ಕನ್ನಡ ಸಂಘಗಳ ಪರಿಚಯವಿದೆ. ಹೆಚ್ಚಿನ ಪರಿಚಯವಿರುವುದು ಕ್ವೀನ್ಸ್‌ಲ್ಯಾಂಡ್‌ ಕನ್ನಡ ಸಂಘ. ಈ ಎಲ್ಲ ಸಂಘಗಳೂ ಪ್ರತಿ ವರ್ಷ ಸಾಕಷ್ಟು ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಇಂಥ ಕಾರ್ಯಕ್ರಮದ ತುಂಬಾ ಕನ್ನಡದ್ದೇ ಕಂಪು. ಬೇರೆಬೇರೆ ಭಾಗದ ಕನ್ನಡವನ್ನು ಸೊಗಸಾಗಿ ಮಾತನಾಡುತ್ತಾರೆ ಜನ. ಕರ್ನಾಟಕದ ಬಹುತೇಕ ಎಲ್ಲ ಭಾಗದ ಜನರೂ ಅಲ್ಲಿರುತ್ತಾರೆ. ಅಲ್ಲಿಗೆ ಬಂದ ಮೊದಲ ಪೀಳಿಗೆಯವರಾದ್ದರಿಂದ ಅವರೆಲ್ಲರೂ ಸೊಗಸಾದ ಕನ್ನಡ ಮಾತನಾಡುತ್ತಾರೆ. ಆದರೆ ಅವರ ಮಕ್ಕಳು ಮಾತ್ರ ಆಸ್ಟ್ರೇಲಿಯನ್‌ ಇಂಗ್ಲೀಷ್‌ ಮಾತನಾಡುತ್ತಾರೆ. ಅಪ್ಪ ಅಮ್ಮಂದಿರು ಮಕ್ಕಳನ್ನು ಅರೆಬರ ಕನ್ನಡ-ಪೂರ್ಣ ಇಂಗ್ಲಿಷ್‌ನಲ್ಲಿ ಮಾತನಾಡಿಸುತ್ತಾರೆ. ಮಕ್ಕಳಿಗೆ ಕನ್ನಡ ಅರ್ಥವಾಗುತ್ತದ ಎಂದು ಕೇಳಿದರೆ, “ಓಹ್‌ ಖಂಡಿತವಾಗಿಯೂ ಅರ್ಥವಾಗುತ್ತದೆ.” ಎನ್ನುತ್ತಾರೆ. ಮತ್ಯಾಕೆ ಇಲ್ಲಿ ಕನ್ನಡ ಮಾತನಾಡಲ್ಲ ಅಂತ ಕೇಳಿದರೆ ಏನೇನೋ ಉತ್ತರಗಳನ್ನು ಕೊಡುತ್ತಾರೆ. ಹಾಗಾಗಿ ಈ ಮಕ್ಕಳೆಲ್ಲ ಕನ್ನಡ ಭಾಷೆಯನ್ನು ಮುಂದೆ ಮಾತನಾಡುತ್ತಾರ? ಭಾರತೀಯ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುತ್ತಾರಾ? ಅನ್ನುವ ಪ್ರಶ್ನೆಗಳು ನನ್ನಲ್ಲಿ ಏಳುತ್ತವೆ. ಕನ್ನಡವನ್ನು ಮಾತನಾಡಲೇ ಕಷ್ಟಪಡುವ ಈ ಮಕ್ಕಳು, ಇನ್ನು ಕನ್ನಡದಲ್ಲಿ ಬರೆಯಬಲ್ಲರ? ಹೀಗಾಗಿ ಈ ಸಾಲಿನ ಮಕ್ಕಳು ಕನ್ನಡವನ್ನು ಯಾವುದೇ ರೀತಿಯಲ್ಲೂ ಉಳಿಸಿಕೊಳ್ಳಲಾರರೇನೋ ಅನ್ನಿಸುತ್ತೆ ನನಗೆ.

*****

ಕನ್ನಡ ನನ್ನ ಮೊದಲ ಪ್ರೇಮ: ಮಹಾಲಕ್ಷ್ಮೀ. ಕೆ. ಎನ್, ಎಂ. ಎಸ್ಸಿ ವಿದ್ಯಾರ್ಥಿನಿ

೧ನೇ ತರಗತಿಯಲ್ಲಿ ರಘು ಮಾಸ್ತರರೆಂಬ ಮಾಯಾವಿ ಕೈಗಳಿಂದ ಮೂಡಿದ ಅಕ್ಷರಗಳು ಅದೆಷ್ಟು ಮೋಹಕವಾಗಿದ್ದವು. ಆ ಬರಹಗಳನ್ನ ತಿದ್ದಿ ತಿದ್ದಿ ಕಲಿತು ನನ್ನ ಕೈಗೆ ಕರಗತ ಮಾಡಿಕೊಳ್ಳಬೇಕೆಂಬ ಹಂಬಲ, ಆಸಕ್ತಿ, ಕನ್ನಡದ ಕುರಿತು ಪ್ರೀತಿ ಮೊಳಕೆಯೊಡೆದದ್ದು ನನ್ನ ಮಾಸ್ತರರು ಬಿತ್ತಿದ್ದ ಅಕ್ಷರಗಳಿಂದ.

ಪದ ಪೋಣಿಸುವ ಕಲೆ ಸೆಳೆದಿದ್ದು ಹೂವಾಡಗಿತ್ತಿಯ ಹಾಡಿನಿಂದ.

ಕಥೆ ಕಟ್ಟುವ ಕಲೆ ಸೆಳೆದಿದ್ದು ನನ್ನಜ್ಜಿಯ ಬಾಲ್ಯದ ನೆನಪಿನ ಕಥೆಗಳಿಂದ.

ಹಾಡಿನ ಸಾಲುಗಳು ಗುನುಗುವುದು ಶುರುವಾಗಿದ್ದು ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಭಾರತದ ಮೇಲಿದೆ ವಿಶ್ವಾಸ”, “ವಿಶ್ವ ವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ ಜಯಭಾರತಿ” ಈ ಗೀತೆಗಳಿಂದ

ಪದ್ಯಗಳ ಗೀಳು ಹತ್ತಿದ್ದು ಕನ್ನಡ ಪಠ್ಯಪುಸ್ತಕಗಳಿಂದ. ಲೇಖನಗಳು ಪರಿಚಯವಾಗಿದ್ದು ನಮ್ಮನೆಗೆ ಬರುತ್ತಿದ್ದ ದಿನಪತ್ರಿಕೆಗಳಿಂದ. ಕಥೆ – ಕಾದಂಬರಿಗಳು ಪರಿಚಯವಾಗಿದ್ದು ನನ್ನೂರಿನ ಗ್ರಂಥಾಲಯದಲ್ಲಿ, ಮುಂದುವರೆದದ್ದು ಡಿಗ್ರಿ ಕಾಲೇಜಿನ ಲೈಬ್ರರಿಯಲ್ಲಿ.

ಡಿಗ್ರಿ ಓದುವಾಗ ಅಂದು ಕಾಲೇಜಿನ ಲೈಬ್ರರಿಯಲ್ಲಿ ಏನನ್ನೋ ಓದುತ್ತಿದ್ದ ನನ್ನನ್ನು ಏನನ್ನೋ ಬರೆಯುತ್ತಿದ್ದ ಆ ಹುಡುಗನ ಬರವಣಿಗೆಯತ್ತ ಸೆಳೆದಿದ್ದು ಅವನ ಬೆರಳುಗಳಿಂದ ಅಚ್ಚಾಗುತ್ತಿದ್ದ ದುಂಡು ಮಲ್ಲಿಗೆ ನನ್ನ ಕನ್ನಡ.

ಎಷ್ಟೋ ಪತ್ರಿಕೆಗಳ ತಲೆಬರಹದ ಕ್ಯಾಲಿಗ್ರಫಿ ಕನ್ನಡ ಬರಹಗಳು. ಆಕರ್ಷಕ ಹಸ್ತಾಕ್ಷರಗಳನ್ನ ಎಲ್ಲಿ ನೋಡಿದರೂ ಅದು ನನ್ನದೇ ಎಂಬ ಭಾವ. ಅದ್ಯಾರೋ ಅಪರಿಚಿತರು ನಿಮ್ಮ ಹಸ್ತಾಕ್ಷರ ಚೆಂದವಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದಾಗ ಮೈಮನ ರೋಮಾಂಚನವಾಗಿಸಿ ತಣಿಸುವುದು ನನ್ನ ಕನ್ನಡ. ಬರೆಯುವ ಕೈಗಳನ್ನ ಚುರುಕಾಗಿಸುವುದು ನನ್ನ ಕನ್ನಡ.

ಕುವೆಂಪು, ಕಣವಿ, ಕಂಬಾರರು, ಕಾರ್ನಾಡರು, ಬೇಂದ್ರೆ, ಕೆ. ಎಸ್. ನರಸಿಂಹಸ್ವಾಮಿ, ಕೆ. ಎಸ್. ನಿಸಾರ್ ಅಹಮ್ಮದ್, ತ್ರಿವೇಣಿ, ತೇಜಸ್ವಿ ಯವರ ಬರಹ, ಬಿ. ಜಿ. ಎಲ್. ಸ್ವಾಮಿ, …. ಎಷ್ಟೋ ಕವಿಗಳ ಎಷ್ಟೋ ಭಾವತುಂಬಿದ ಕವಿತೆಗಳಲ್ಲಿ ಮನಸ್ಸಿಗೆ ನಾಟುವ, ಅತ್ಯಂತ ಆತ್ಮೀಯ ಭಾವ ಕೊಡುವ, ಬಿಗಿದಪ್ಪುವ ಬಲವಾದ ಶಕ್ತಿ ನನ್ನ ಕನ್ನಡಕ್ಕಿದೆ. ಎದೆಯಲ್ಲಿ ದೀಪ ಝಗ್ಗೆಂದು ಹತ್ತಿಕೊಳ್ಳುತ್ತೆ, ತಣ್ಣಗೆ ಶಾಂತವಾಗಿ ಉರಿಯುತ್ತದೆ.

ವಿಶ್ವದೊಳ್ ನುಡಿಯಾಗಿ ಕನ್ನಡವು ಕನ್ನಡವ ಕನ್ನಡಿಸುತಿರಬೇಕುಬೇಂದ್ರೆ ಅಜ್ಜನ ಬರಹ ನಿಜವಾಗುತ್ತದೆ.

ಒಲಿದಾಕೆ
ಹಾಡಲು ಕಲಿಸಿದಾಕೆ
ಬಲವಾಗಿ ನಿಂತಾಕೆ
ನನ್ನೊಟ್ಟಿಗಿರುವಾಕೆ
ನಲ್ಮೆಗೆಒಲ್ಮೆಗೆಚೆಲುವಿಕೆಗೆ ಸಾಟಿಯಿಲ್ಲದ ತ್ರೈಲೋಕ್ಯ ಸುಂದರಿ ಈಕೆ ಕನ್ನಡ.

ವಸುಂಧರೆ ನನ್ನೊಡನೆ ಕನ್ನಡದಲ್ಲೇ ಮಾತನಾಡಿದರೆ, ತಂಪಾದ ಗಾಳಿ ಕನ್ನಡದಲ್ಲೇ ಸಂದೇಶವನ್ನ ರವಾನಿಸಿಬಿಡುತ್ತದೆ. ಝರಿ ಕನ್ನಡದಲ್ಲಿಯೇ ಹಾಡು ಹಾಡುಹಾಡುತ್ತಾ ಝುಳುಝುಳನೆ ಹರಿಯುತ್ತದೆ. ವೀಣೆಯ ತಂತಿ ಕನ್ನಡದಲ್ಲಿಯೇ ಸದ್ದುಮಾಡುತ್ತದೆ. ಸಂಜೆ ಹಿಡಿದ ಮಳೆ ಕನ್ನಡಲ್ಲೇ ಸೋ ಗುಟ್ಟು ಹಾಡುತಿದೆ, ಅದೇನೇನೋ ಹೊಸ ಪದಗಳನು ಹೇಳುತಿದೆ, ಇದೇನೋ ಹೊಸ ಅನುಭವ ನೀಡುತಿದೆ. ಎಲೆಗಳು ಕನ್ನಡದಲ್ಲೇ ಮಾತನಾಡಿಕೊಳ್ಳುತ್ತಿವೆ ಎಂದನಿಸಿಬಿಡುವಷ್ಟು ಮೋಹಕ ಕನ್ನಡ. ಗಿಡಮರಗಳ ಹಸಿರು ಕನ್ನಡ, ಮೈತುಂಬಿ ಹರಿವ ಜೀವನದಿ ಕನ್ನಡ. ನಿರಂತರೆ ನಿತ್ಯಹರಿದ್ವರ್ಣೆ…….

About The Author

ರೂಪಶ್ರೀ ಕಲ್ಲಿಗನೂರ್

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಕಾಡೊಳಗ ಕಳದಾವು ಮಕ್ಕಾಳು' ಮಕ್ಕಳ ನಾಟಕ . 'ಚಿತ್ತ ಭಿತ್ತಿ' ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ