ಕನ್ನಡ ಸಂಯುಕ್ತ ರಂಗ ಎನ್ನುವ ಸಂಘಟನೆ ಚಳವಳಿಗೆ ಅಂತಲೇ ರೂಪುಗೊಂಡಿತ್ತು. ರಾಮಮಂದಿರದ ಬಳಿಯ ಒಂದು ಅಂಗಡಿಯ ಮೇಲೆ ಎರಡು ಮೈಕ್ ಸ್ಟಾಂಡ್ ಇಟ್ಟು ಮೂರು ನಾಲ್ಕು ಕಬ್ಬಿಣದ ಫೋಲ್ಡಿಂಗ್ ಖುರ್ಚಿ ಹಾಕುತ್ತಿದ್ದ ವೇದಿಕೆ ಅದು. ಪಕ್ಕದಲ್ಲೇ ಇಪ್ಪತ್ತು ಮೂವತ್ತು ಅಡಿ ಎತ್ತರದ ಬೊಂಬಿನ ಏಣಿ ಇಟ್ಟಿರುತ್ತಿದ್ದರು. ಅದರ ಮೂಲಕ ಅಂಗಡಿ ಚಾವಣಿ ಏರುತ್ತಿದ್ದರು, ಭಾಷಣಕಾರರು. ಒಬ್ಬೊಬ್ಬರ ಭಾಷಣವೂ ಉದ್ರೇಕ ರಹಿತ ಮತ್ತು ಅತ್ಯಂತ ಸೌಮ್ಯ. ಹೇಳಬೇಕಾದ್ದನ್ನು ಅತಿಶಯೋಕ್ತಿ ಇಲ್ಲದೆ ಚಿಕ್ಕ ಚೊಕ್ಕದಾಗಿ ಹೇಳುತ್ತಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಆರನೆಯ ಕಂತು ನಿಮ್ಮ ಓದಿಗೆ

ಕೆರೆಗಳು ಬಿಲ್ಡಿಂಗ್ ಗಳಾಗಿ ಪರಿವರ್ತನೆ ಆದದ್ದು ಹೇಳಿದೆ. ಮೂವರು ಗೆಳೆಯರ ಸಾವಿನ ಕತೆ ಹಂಚಿಕೊಂಡೆ. ಕಲಿಕೆ ಜತೆಗೆ ಗಳಿಕೆಯ ಪ್ರಸಂಗ, ಗವರ್ನಮೆಂಟ್ ಸೋಪ್ ಫ್ಯಾಕ್ಟರಿ, ಸ್ಯಾಂಡಲ್ ಸೋಪು, ಅಬ್ಬಕ್ಕನ ಪ್ರತಿಮೆ, ನಮ್ಮ ಕೆಲವು ಖ್ಯಾತರ ಕುರಿತು ಮಾತನಾಡಿದ ಮೇಲೆ, ಕಲಾವಿದ ರುಮಾಲೆ ಚನ್ನಬಸಪ್ಪ ಅವರ ಗ್ಯಾಲರಿ, ಕಾಯಕಲ್ಪ ಚಿಕಿತ್ಸೆ ಪಡೆದದ್ದು, ಕುಮಾರ ವ್ಯಾಸ ಮಂಟಪ…… ಈ ಕುರಿತು ಕಳೆದ ಸಂಚಿಕೆಗಳಲ್ಲಿ ಹೇಳಿದೆ. ಈಗ ಅಲ್ಲಿಂದ ಮುಂದಕ್ಕೆ…

ಸ್ಥೂಲವಾಗಿ ನಮ್ಮ ರಿಕ್ರಿಯೇಷನ್ ಮೂಲಗಳು. ದೈಹಿಕ ಚಟುವಟಿಕೆಗಳಿಗೆ ಕ್ರಿಕೆಟ್ ಆಟ, ಫುಟ್ ಬಾಲ್, ಚಿನ್ನಿಕೋಲು, ಸೂರ್ ಚೆಂಡು ಮೊದಲಾದವು ಇದ್ದವು. ಬೆಂಗಳೂರಿನಲ್ಲಿ ಯಾರೂ ಅಷ್ಟಾಗಿ ಹಾಕಿ ಆಡುತ್ತಿರಲಿಲ್ಲ. ಹಾಕಿಗೆ ಅಷ್ಟು ಉತ್ತೇಜನ ಇರಲಿಲ್ಲ. ಹಾಗೆ ನೋಡಿದರೆ ನಾವು ಕಾಲೇಜು ಸೇರಿದ ಮೇಲೇನೆ ಹಾಕಿ ಟೀಮಿನ ಬಗ್ಗೆ ಕೇಳಿದ್ದು ಮತ್ತು ಕಾಲೇಜಿನಲ್ಲಿ ಹಾಕಿ ಟೀಮ್ ಇದ್ದದ್ದು. ಫುಟ್ ಬಾಲ್ ಬರಿಗಾಲಿನಲ್ಲಿ ಆಡುತ್ತಿದ್ದೆವು. ಗೋಲ್ ಪೋಸ್ಟ್‌ಗೆ ಅತ್ತ ಇತ್ತ ಎರಡು ಸೈಜ್ ಕಲ್ಲುಗಳು, ಚಂದಾ ಹಾಕಿಕೊಂಡ ಒಂದು ಫುಟ್ ಬಾಲು ಅಷ್ಟೇ. ಕ್ರಿಕೆಟ್ ಅಂತೂ ಟೆನಿಸ್ ಬಾಲ್ ನದ್ದು. ಅದರಿಂದ ಗ್ಲೌಸು, ಪ್ಯಾಡು , ಗಾರ್ಡು, ಹೆಲ್ಮೆಟ್ಟು.. ಇವು ಯಾವುವೂ ಇರಲಿಲ್ಲ. ಜತೆಗೆ ಅವುಗಳಿಗೆ ಸುರಿಯುವಷ್ಟು ಹಣವೂ ಇರಲಿಲ್ಲ. ಎಲ್ಲರೂ ತಳ ಮಧ್ಯಮ ಗುಂಪಿನವರು, ಕಾರ್ಖಾನೆ ನೌಕರರ ಮಕ್ಕಳು, ಸಂಬಂಧಿಗಳು. ಗೋಡೆ ಮೇಲೆ ಇದ್ದಲಿನಿಂದ ಮೂರು ಗೆರೆ ಎಳೆದರೆ ಅದೇ ವಿಕೆಟ್ಟು, ಅದರ ಎದುರು ಮೂವತ್ತು ನಲವತ್ತು ಅಡಿ ದೂರದಲ್ಲಿ ಒಂದು ಕಲ್ಲು ಇಟ್ಟರೆ ಅದೇ ಬೌಲರ್ ಎಂಡ್…! ಚಂದಾ ಎತ್ತಿ ಅತಿ ಕಡಿಮೆ ದುಡ್ಡಿನ ಬ್ಯಾಟ್ ಮತ್ತು ಬಾಲ್ ತರುತ್ತಿದ್ದೆವು. ಎರಡೂ ಕಡೆ ವಿಕೆಟ್ ನೆಟ್ಟು ಆಡಿದ್ದು ನಾವು ಕಾಲೇಜು ಸೇರಿದ ಮೇಲೇನೆ…

(ಎನ್.‌ ನರಸಿಂಹಯ್ಯ)

ರಾಜಾಜಿನಗರದಲ್ಲಿ ಹತ್ತಾರು ಆರ್ ಎಸ್ ಎಸ್ ಶಾಖೆಗಳು ಇದ್ದವು. ಅಲ್ಲಿ ಆಡಿಸುತ್ತಿದ್ದ ಹಲವು ಬಗೆಯ ದೇಶಿ ಕ್ರೀಡೆಗಳು ಕುಂಟಾಟ, ಕೊಕ್ಕೋ, ಕಬಡ್ಡಿ, ಭುಜದಿಂದ ನೂಕುವ ಆಟ…. ಮುಂತಾದವು ಆಗ ನಮಗೆ ಚೈತನ್ಯ ತುಂಬುತ್ತಿತ್ತು. ಆರ್ ಎಸ್ ಎಸ್ ನ ದೊಡ್ಡವರು (ಅದರಲ್ಲಿ ಕೆಲವರು hal, hmt, iti , ರಾಜ್ಯ ಸರ್ಕಾರಗಳಲ್ಲಿ ಕೆಲಸ ಮಾಡುತ್ತಿದ್ದರು) ಮನೆಗೆ ಹುಡುಕಿಕೊಂಡು ಬಂದು ಶಾಖೆಗೆ ಕರೆದುಕೊಂಡು ಹೋಗುತ್ತಿದ್ದರು. ಅವರು ಖಾಕಿ ಚಡ್ಡಿ ಬಿಳೀ ಅಂಗಿ ಯೂನಿಫಾರಂ ಆದರೆ ನಾವು ನಮ್ಮ ಮಾಮೂಲಿ ಡ್ರೆಸ್ಸು! ಒಂದು ರೀತಿ ಪ್ರೀತಿ ವಿಶ್ವಾಸ ಹೆಚ್ಚಾಗಿ ತೋರಿಸುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಮನೆಯಿಂದ ಸಿಹಿ ತಂದು ಹಂಚುತ್ತಿದ್ದರು. ಆಗಾಗ ಮನೆಗೆ ಕರೆದು ಊಟ ತಿಂಡಿ ಹಾಕುತ್ತಿದ್ದರು. ತುಂಬಾ ಆಕರ್ಷಕ, ವ್ಯಕ್ತಿತ್ವ ಹಾಗೂ ಮನೋಭಾವದವರು. ಸುಮಾರು ಎಪ್ಪತ್ತರ ಮಧ್ಯ ಭಾಗದವರಿಗೆ ಈ ಆರ್ ಎಸ್ ಎಸ್ ಶಾಖೆಗಳು ತುಂಬಾ ಚೆನ್ನಾಗೇ ಸೊಂಪಾಗಿ ಬೆಳೆದವು. ಈಗಲೂ ನನಗೆ ಅಲ್ಲಿನ ಹಾಡು “ನಮಸ್ತೆ ಸದಾ ವತ್ಸಲೇ ಮಾತೃ ಭೂಮೇ” ಯ ಒಂದೆರೆಡು ಚರಣ ನೆನಪಿನಲ್ಲಿದೆ. ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆದಾಗ ಆರ್ ಎಸ್ ಎಸ್ ಬ್ಯಾನ್ ಆಯಿತು. ಅದರ ಚಟುವಟಿಕೆ ಸ್ಥಬ್ಧ ಆಯಿತು. ತುರ್ತು ಪರಿಸ್ಥಿತಿ ನಂತರ ಬ್ಯಾನ್ ತೆಗೆದರು. ಆದರೆ ಆರ್ ಎಸ್ ಎಸ್ ತನ್ನ ಮೊದಲಿನ ಹಾಗಿನ ಆಕರ್ಷಣೆ ಕಳೆದುಕೊಂಡಿತ್ತು. ಈಚೆಗೆ ಮತ್ತೆ ಅದು ತನ್ನ ಅಂದಿನ ಸೊಬಗನ್ನು ಪಡೆಯುತ್ತಿದೆ ಎಂದು ಕೇಳಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಆರ್ ಎಸ್ ಎಸ್ ಹುಟ್ಟಿಸಿದ ಆಕರ್ಷಣೆ ಇನ್ನೂ ನಮ್ಮ ಬಾಳಿನಲ್ಲಿ ಇದೆ! ಅದು ಹೇಳಿಕೊಟ್ಟ ಕೆಲವು ಶ್ಲೋಕಗಳು ತಲೆಯಲ್ಲಿವೆ, ಅಂದು ಕಲಿತ ಕೆಲವು ಯೋಗಾಸನಗಳನ್ನು ಇಂದೂ ಮಾಡುತ್ತೇವೆ ಮತ್ತು ಅಂದು ರೂಢಿಸಿಕೊಂಡ ಹಲವು ಅಭ್ಯಾಸಗಳು ಮುಂದುವರೆದಿವೆ. ಕೆಲವರು ಈಗ ಅಂದರೆ ತುಂಬಾ ಈಚೆಗೆ ಲೆಫ್ಟ್ ಆಗಿರುವವರು ತಮ್ಮ ಚಿಕ್ಕಂದಿನ ಆರ್ ಎಸ್ ಎಸ್ ನಂಟಿನ ಬಗ್ಗೆ ಬರೆದು ನಂತರ ಅದರ ಬಗ್ಗೆ ಅಸಹನೆ ಹುಟ್ಟಿತು ಎಂದು ಬರೆದುಕೊಂಡಿದ್ದಾರೆ. ನನಗೆ ಹಾಗೇನೂ ಆಗಲಿಲ್ಲ…!

(ಪಿ. ಕಾಳಿಂಗರಾವ್)

ಇನ್ನು  ಚಿನ್ನಿ ಕೋಲು ಅಥವಾ ಗಿಲ್ಲಿ ದಾಂಡು ಆಟ. ಇದು ಆಗ ಎಲ್ಲಾ ಬಡವರ ಆಟ. ನಮ್ಮ ಪೀಳಿಗೆಯ ಪ್ರತಿಯೊಬ್ಬರೂ ಆಡಿರುವ ಆಟ ಇದು. ಒಂದು ಪುಟ್ಟ ಮೈದಾನ, ಒಂದು ಒಂದೂವರೆ ಅಡಿ ಉದ್ದದ ಕೋಲು ಮತ್ತು ನಾಲ್ಕು ಇಂಚಿನಷ್ಟು ಉದ್ದದ ಎರಡೂ ಕಡೆ ಹೆರೆದ ಕೋಲಿನ ತುಂಡು. ಇವಿಷ್ಟು ಇದ್ದರೆ ಸಾಕು, ಈ ಆಟಕ್ಕೆ. ಅದರಿಂದ ಇದು ಒಂದು ರೀತಿ ನ್ಯಾಷನಲ್ ಗೇಮ್ ಆಗಿತ್ತು. ಅದರಿಂದ ಅಪ್ಪ ಅಮ್ಮ ಅಥವಾ ಅಣ್ಣಂದಿರು ಬಂದು ಎಳೆದುಕೊಂಡು ಹೋಗುವ ತನಕ, ಪೂರ್ತಿ ಕಣ್ಣೆ ಕಾಣದಿರುವ ಕತ್ತಲು ಆವರಿಸುವವರೆಗೂ ಈ ಆಟ ಆಡುತ್ತಿದ್ದೆವು. ಆಟದಲ್ಲಿ ಏಟು ಬೀಳುವುದು, ಪೆಟ್ಟು ಆಗುವುದು, ಕೈಕಾಲು ಮೂಳೆ ಮುರಿಯುವುದು ಅತಿ ಸಹಜ. ಹಾಗೆ ನೋಡಿದರೆ ನನಗೆ ಎರಡು ಸಲ ಕೈ ಮೂಳೆ ಮುರಿದಿತ್ತು!

ರಾಜಾಜಿನಗರ ಕ್ರಿಕೆಟರ್ಸ್ ಎನ್ನುವ ಕ್ಲಬ್ ಆಗ ಶುರು ಆಗಿತ್ತು ಮತ್ತು ಸುಮಾರು ಕ್ರಿಕೆಟ್ ಆಟಗಾರರು ಇದರ ಮೂಲಕ ಮತ್ತು ಮಿಕ್ಕ ಅಸೋಸಿಯೇಶನ್ (ಎಮಿನೆಂಟ್ ಕ್ರಿಕೆಟ್ ಕ್ಲಬ್, ರಾಜಾಜಿನಗರ ಕೋಲ್ಟ್ಸ್ ಇತ್ಯಾದಿ) ಮೂಲಕ ಹೆಸರು ಮಾಡಿದರು. ಈಗಿನ ಹಾಗೆಯೇ ಕ್ರಿಕೆಟ್ ಬಗ್ಗೆ ಹೆಚ್ಚು ಕ್ರೇಜ್ ಇದ್ದ ಕಾಲ ಅದು. ಅದರಿಂದ ಮಿಕ್ಕ ಕ್ರೀಡೆಗಳಲ್ಲಿ ಅದರಲ್ಲೂ ಕಬಡ್ಡಿಯಲ್ಲಿ ಹೆಸರು ಮಾಡಿದ ಸುಮಾರು ಜನ ಇದ್ದರೂ ಅವರು ಯಾರೂ ಹೀರೋ ಸ್ಟೇಟಸ್ ಪಡೆಯಲಿಲ್ಲ! ಜೂಗನ ಹಳ್ಳಿಯಲ್ಲಿ ಸುಮಾರು ಕಬಡ್ಡಿ ಕಲಿಗಳು ಇದ್ದರು. ಪಾಪ ಅವರು ಯಾರೂ ಕ್ರಿಕೆಟ್ ನವರಶ್ಟು ಹೆಸರು ಮಾಡಲಿಲ್ಲ.

ಅರವತ್ತರ ದಶಕದಲ್ಲಿ ಕನ್ನಡ ಚಳವಳಿ ಆರಂಭವಾದಾಗ ಪ್ರತಿ ತಿಂಗಳಿಗೆ ಎರಡು ಮೂರು ಸಾರ್ವಜನಿಕ ಸಭೆ ರಾಜಾಜಿನಗರದಲ್ಲಿ ಆಗುತ್ತಿತ್ತು. ಕನ್ನಡ ಸಂಘಟನೆಗಳು ಈ ಸಭೆಗಳನ್ನು ಏರ್ಪಾಟು ಮಾಡುತ್ತಿತ್ತು. ಕನ್ನಡ ಸಹೃದಯ ಸಂಘ ಇಲ್ಲೂ ಕುಮಾರವ್ಯಾಸ ಮಂಟಪದಲ್ಲಿಯೂ ಚಟುವಟಿಕೆ ನಡೆಸುತ್ತಿತ್ತು.

(ಅ ನ ಕೃ)

ಚಿನ್ನಿ ಕೋಲು ಅಥವಾ ಗಿಲ್ಲಿ ದಾಂಡು ಆಟ. ಇದು ಆಗ ಎಲ್ಲಾ ಬಡವರ ಆಟ. ನಮ್ಮ ಪೀಳಿಗೆಯ ಪ್ರತಿಯೊಬ್ಬರೂ ಆಡಿರುವ ಆಟ ಇದು. ಒಂದು ಪುಟ್ಟ ಮೈದಾನ, ಒಂದು ಒಂದೂವರೆ ಅಡಿ ಉದ್ದದ ಕೋಲು ಮತ್ತು ನಾಲ್ಕು ಇಂಚಿನಷ್ಟು ಉದ್ದದ ಎರಡೂ ಕಡೆ ಹೆರೆದ ಕೋಲಿನ ತುಂಡು. ಇವಿಷ್ಟು ಇದ್ದರೆ ಸಾಕು, ಈ ಆಟಕ್ಕೆ. ಅದರಿಂದ ಇದು ಒಂದು ರೀತಿ ನ್ಯಾಷನಲ್ ಗೇಮ್ ಆಗಿತ್ತು.

ಅ ನ ಕೃ, ಮೈ. ಸೂ. ನಟರಾಜ್, ಮ. ರಾಮಮೂರ್ತಿ, ಶೇಷಗಿರಿರಾವ್, ತ ರಾ ಸು, ನಾಡಿಗೇರ ಕೃಷ್ಣರಾವ್, ಕುಮಾರ ವೆಂಕಣ್ಣ ಇವರುಗಳ ಭಾಷಣ ಇರುತ್ತಿತ್ತು ಮತ್ತು ಸಾವಿರಾರು ಜನ ಈ ಭಾಷಣ ಕೇಳುತ್ತಿದ್ದರು. ಕಾದಂಬರಿ, ಕತೆ ಬರೆಯುವವರು ನಮಗೆ ಆಗ ಆದರ್ಶ. ಒಮ್ಮೊಮ್ಮೆ ಕಾಳಿಂಗ ರಾಯರು, ಮೋಹನ್ ಕುಮಾರಿ, ಸೋಹನ್ ಕುಮಾರಿ ಅವರೊಂದಿಗೆ ಹಾಡುತ್ತಿದ್ದರು. ಕೆಲವು ಸಲ ಬೀಚಿ ಸಹ ಭಾಷಣ ಮಾಡುತ್ತಿದ್ದರು. (ಬೀಚಿ ಅವರ ಬಗ್ಗೆ ಒಂದು ಸಂಗತಿ ನಿಮಗೆ ನಂತರ ತಿಳಿಸುವೆ. ಈ ಪ್ರಸಂಗ ಹಲವಾರು ರೀತಿಯ ರೂಪ ಪಡೆಯಿತು.) ಕನ್ನಡ ಸಂಯುಕ್ತ ರಂಗ ಎನ್ನುವ ಸಂಘಟನೆ ಚಳವಳಿಗೆ ಅಂತಲೇ ರೂಪುಗೊಂಡಿತ್ತು. ರಾಮಮಂದಿರದ ಬಳಿಯ ಒಂದು ಅಂಗಡಿಯ ಮೇಲೆ ಎರಡು ಮೈಕ್ ಸ್ಟಾಂಡ್ ಇಟ್ಟು ಮೂರು ನಾಲ್ಕು ಕಬ್ಬಿಣದ ಫೋಲ್ಡಿಂಗ್ ಖುರ್ಚಿ ಹಾಕುತ್ತಿದ್ದ ವೇದಿಕೆ ಅದು. ಪಕ್ಕದಲ್ಲೇ ಇಪ್ಪತ್ತು ಮೂವತ್ತು ಅಡಿ ಎತ್ತರದ ಬೊಂಬಿನ ಏಣಿ ಇಟ್ಟಿರುತ್ತಿದ್ದರು. ಅದರ ಮೂಲಕ ಅಂಗಡಿ ಚಾವಣಿ ಏರುತ್ತಿದ್ದರು, ಭಾಷಣಕಾರರು. ಒಬ್ಬೊಬ್ಬರ ಭಾಷಣವೂ ಉದ್ರೇಕ ರಹಿತ ಮತ್ತು ಅತ್ಯಂತ ಸೌಮ್ಯ. ಹೇಳಬೇಕಾದ್ದನ್ನು ಅತಿಶಯೋಕ್ತಿ ಇಲ್ಲದೆ ಚಿಕ್ಕ ಚೊಕ್ಕದಾಗಿ ಹೇಳುತ್ತಿದ್ದರು. ಅ ನ ಕೃ ಅವರು ಇವರಿಗೆ ತರಬೇತಿ ನೀಡುತ್ತಾರೆ ಎಂದು ಕೇಳಿದ್ದೆ. ಕನ್ನಡ ಯುವಜನ ಎನ್ನುವ ವಾರ ಪತ್ರಿಕೆ ಸಹ ಪ್ರಕಟ ಆಗುತ್ತಿತ್ತು. ಈ ಪತ್ರಿಕೆಗೆ ನಾವು ಕಾಯುತ್ತಿದ್ದೆವು. ಅ ನ ಕೃ ಎರಡು ಮೂರು ಗಂಟೆ ಒಂದೇ ಒಂದು ರೆಫರೆನ್ಸ್ ಚೀಟಿ ಇಲ್ಲದೆ ಕನ್ನಡಿಗರ ಸಂಸ್ಕೃತಿ ಕುರಿತು ನಿರರ್ಗಳ ಮಾತು ಆಡಿದ್ದು ಇಂತಹ ಹಲವಾರು ವೇದಿಕೆಯಲ್ಲಿ ನಾನು ಹಲವು ಬಾರಿ ಕೇಳಿದ್ದೇನೆ. ಅಂತಹ ಭಾಷಣ ಮತ್ತೆ ನಾನು ನನ್ನ ಜೀವಮಾನದಲ್ಲಿ ಕೇಳೆ ಇಲ್ಲ. ನನ್ನ ಪೀಳಿಗೆ ಕನ್ನಡಕ್ಕೆ ಅಂಟಲು, ಕನ್ನಡ ನಾಡು ನುಡಿಯ ಬಗ್ಗೆ ಒಲವು ಹೊಂದಲು ಅ.ನ .ಕೃ ಮತ್ತು ಕನ್ನಡ ಚಳವಳಿ ದೊಡ್ಡ ಕಾರಣ. ಕನ್ನಡ ಓದುವಿಕೆ ಒಂದು ಚಟ ಆಗಿದ್ದು ಇವರು, ನರಸಿಂಹಯ್ಯ, ರಾಮಮೂರ್ತಿ ಅವರ ಕಾದಂಬರಿಗಳ ಮೂಲಕ. ಮನೆಗಳಲ್ಲಿ ಹೆಂಗಸರು ಗಂಡನಿಗೆ ಒತ್ತಾಯ ಮಾಡಿ ಕನ್ನಡ ಪುಸ್ತಕ ತರಿಸಿ ಓದುತ್ತಿದ್ದರು. ನಮ್ಮ ಸುತ್ತಮುತ್ತಲೂ ಇದೇ ಸ್ಥಿತಿ ಸಹಜ ಅನ್ನುವ ಹಾಗೆ ನಿರ್ಮಿತವಾಗಿತ್ತು. ಈಗಲೂ ನನ್ನ ಪೀಳಿಗೆಯವರ ಮೊದಲ ಆಯ್ಕೆ ಅಂದರೆ ಕನ್ನಡವೇ. ಕೊನೆಯದೂ ಸಹಾ ಅದೇ, ಕಾರಣ ಕನ್ನಡ ಬಿಟ್ಟು ಬೇರೆ ಗೊತ್ತಿಲ್ಲ! ಕನ್ನಡ ಸಹೃದಯ ಸಂಘ ಮೊದಮೊದಲು ಚಳವಳಿ ಸಭೆ ಏರ್ಪಡಿಸುತ್ತಿತ್ತು. ನಂತರ ಅದು ಕುಮಾರವ್ಯಾಸ ಭಾರತ ವಾಚನ ಪ್ರಚಾರಕ್ಕೆ ಇಳಿಯಿತು ಎಂದು ನೆನಪು.

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು
ಕಾಮನ ಬಿಲ್ಲನು ಕಾಣುವ ಕವಿಯೊಳು
ತೆಕ್ಕನೆ ಮನ ಮೈಮರೆಯುವುದು
ಕನ್ನಡಾ… ಕನ್ನಡಾ… ಹಾ ಸವಿಗನ್ನಡ
ಕನ್ನಡದಲಿ ಹರಿ ಬರೆಯುವವನು
ಕನ್ನಡದಲಿ ಹರ ತಿರಿಯುವನು
ಕನ್ನಡದಲ್ಲಿಯೆ ಬಿನ್ನಹಗೈದೊಡೆ
ಹರಿ ವರಗಳ ಮಳೆ ಕರೆಯುವನು
ಹರ ಮುರಿಯದೆ ತಾ ಪೊರೆಯುವನು
ಬಾಳುವುದೇತಕೆ? ನುಡಿ, ಎಲೆ ಜೀವ
ಸಿರಿಗನ್ನಡದಲಿ ಕವಿತೆಯ ಹಾಡೆ
ಸಿರಿಗನ್ನಡದೇಳಿಗೆಯನು ನೋಡೆ
ಕನ್ನಡ ತಾಯಿಯ ಸೇವೆಯ ಮಾಡೆ
– ಕುವೆಂಪು

(ತರಾಸು)

ಈ ಹಾಡು ಈಗ ಕೇಳಿದರೂ ಅದೇನೋ ಖುಷಿ ಅನಿಸುತ್ತೆ. ನಾಡಿಗೇರ ಕೃಷ್ಣರಾಯರದು ಹಂಚಿ ಕಡ್ಡಿ ಶರೀರ. ಪಂಚೆಯನ್ನು ಕಚ್ಚೆ ರೀತಿ ಕಟ್ಟಿಕೊಂಡು ಮೈ ಮೇಲಿನ ಉತ್ತರೀಯ ಸೊಂಟಕ್ಕೆ ಬಿಗಿದು ಎರಡೂ ಕಾಲು ಅಗಲಿಸಿ ಕೈಯನ್ನು ಪೈಲ್ವಾನರು ಬೈಸೆಪ್ಸ್ ಕುಣಿವ ರೀತಿ ಹಿಡಿದು “ನಾಟಕಗಳಲ್ಲಿ ನಾನು ಭೀಮನ ಪಾತ್ರ ಮಾಡುತ್ತಿದ್ದೆ …..” ಎಂದು ಮೈಯೆಲ್ಲಾ ಮೂಳೆ ಮೂಳೆಯ ಅವರು ಭಾಷಣ ಆರಂಭಿಸಿದರೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯಬೇಕು..! ಕನ್ನಡ ಚಳವಳಿ ಇತಿಹಾಸದ ಬಗ್ಗೆ ಒಂದು ಪುಸ್ತಕವನ್ನು (ಇಟ್ಟ ಹೆಜ್ಜೆ – ಪಟ್ಟ ಶ್ರಮ) ನನ್ನ ಗೆಳೆಯರಾದ ಶ್ರೀ ಎಚ್ ಆನಂದ ರಾಮರಾವ್, ಶ್ರೀ ಮು. ಪಾರ್ಥಸಾರಥಿ ಮತ್ತು ಶ್ರೀ ಮಂ. ಅ. ವೆಂಕಟೇಶ್ ಅವರು ರಚಿಸಿದ್ದಾರೆ. ಇದು ಮಹತ್ವದ ಚಾರಿತ್ರಿಕ ದಾಖಲೆ.

(ರಾಮಮೂರ್ತಿ)

ನವೋದಯದ ನಂತರದ ನವ್ಯ ಕಾಲದ (ನಾವೂ ಈ ಗುಂಪಿಗೆ ಅದು ಹೇಗೋ ಸೇರಿಬಿಟ್ಟಿದ್ದೆವು) ಬುದ್ಧಿಜೀವಿಗಳು ಅನಕೃ ಹಾಗೂ ಅವರ ಕಾಲದ ಸಾಹಿತಿಗಳನ್ನು ಕುರಿತು ಎಂತಹ ಹೀಗಳಿಕೆಯ ಚೀಪ್ ಮಾತು ಆಡಿದರೂ, ಹಿಗ್ಗಾ ಮುಗ್ಗಾ ಜಾಡಿಸಿದರೂ, ಅವರ ಕೃತಿಗಳ ಕಟು ವಿಮರ್ಶೆ ಮಾಡಿದರೂ ಅವರ ಮೇಲಿನ ಮೆಚ್ಚುಗೆ ಹಾಗೂ ಪ್ರೀತಿ ಕಡಿಮೆ ಆಗದಿರುವಷ್ಟು ಪ್ರಭಾವವನ್ನು ಅವರು ನಮ್ಮ ಮೇಲೆ ಅಂದರೆ ನಮ್ಮ ಪೀಳಿಗೆ ಮೇಲೆ ಬೀರಿದ್ದರು. ನವ್ಯರ ಈ ಒರಟುತನದ ಬಗ್ಗೆ ನಾವು ಆಕ್ರೋಶ ತೋರಿಸಿದ್ದು ಉಂಟು. ಆದರೆ ನಮ್ಮ ಆಕ್ರೋಶ ಅಷ್ಟು ಪ್ರಭಾವಿ ಆಗಿರಲಿಲ್ಲ. ಈಗಲೂ ಅನಕೃ, ತರಾಸು, ರಾಮಮೂರ್ತಿ ಅವರ ಪುಸ್ತಕ ಕಂಡರೆ ಕೈಚಾಚಿ ತೆಗೆದುಕೊಂಡು ಕೆಲವು ಪುಟ ತಿರುವಿ ಹಾಕಿದರೆ ಅದೇನೋ ಸಂತೋಷ, ಪುಳಕ. ಅದೇರೀತಿ ಅನಕೃ, ರಾಮಮೂರ್ತಿ, ನಾಡಿಗೇರ ಅವರ ಫೋಟೋ ಕಂಡರೆ ಕೆಲಹೊತ್ತು ಅದರ ಮುಂದೆ ನಿಲ್ಲುವ ಆಸೆ ಹುಟ್ಟುತ್ತದೆ. ಒಂದು ಪೀಳಿಗೆಯಲ್ಲಿ ಓದುವ ಹವ್ಯಾಸ ಬೆಳೆಸಿದ ಕೀರ್ತಿ ಈ ಗುಂಪಿಗೆ ಸಲ್ಲಬೇಕು.

ನವ್ಯರ ಆಗಮನ ಆಯಿತಾ. ಹಿಂದಿನದು ಎಲ್ಲವೂ ಕಳಪೆ ಎನ್ನುವ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆಯಿತು. ಅದಕ್ಕೆ ಪೂರಕವಾಗಿ ಕೆಲವು ಪತ್ರಿಕೆಗಳೂ ಸಹ ಸೈಡು ಮಾಡಿದವು.

ನವ್ಯರ ಬಗ್ಗೆ ಹೇಳಲು ಹೊರಟರೆ ಒಂದು ತಮಾಷೆ ಪ್ರಸಂಗ ನೆನಪಿಗೆ ಬರುತ್ತಿದೆ. ಹಿಂದಿನ ಎಲ್ಲಾ ಸಾಹಿತಿಗಳ ಕೃತಿಗಳನ್ನು ಅತ್ಯಂತ ಕಟುವಾಗಿ ನವ್ಯರ ಗುಂಪು ವಿಮರ್ಶಿಸಿ ಚೆನ್ನಾಗಿ ಉಪ್ಪು ಖಾರ ಹಾಕಿ ರುಬ್ಬಿ ರುಬ್ಬಿ ಬಿಟ್ಟಿತ್ತು. ವಿ. ಸೀ ಅವರ ಕೃತಿಯೊಂದನ್ನು ಆಗ ಯುವಕರಾಗಿದ್ದ ಅನಂತ ಮೂರ್ತಿ ಅವರು ಕಟು ವಿಮರ್ಶೆ ಮಾಡಿ ವಿ.ಸೀ. ಅವರ ಬರಹ ತುಂಬಾ ಸಪ್ಪೆ ಎಂದು ಬರೆದಿದ್ದರು. ವಿ.ಸೀ ಆಗಾಗಲೇ ಕನ್ನಡ ಸಾರಸ್ವತ ಲೋಕದಲ್ಲಿ legend ಒಂದು ದಂತ ಕತೆ ಆಗಿದ್ದರು. ವಿ ಸೀ ಅವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ…

(ಮುಂದುವರೆಯುವುದು…)