ಎಲ್ಲರೂ ಅವರನ್ನೇ ನೋಡುತ್ತಿದ್ದರು. ಸೆಲ್ವಿಗೆ ಬೇರೆ ದಾರಿ ಕಾಣದೇ ಇನ್ನೊಂದು ಕೈಯಲ್ಲಿದ್ದ ಪುಸ್ತಕಗಳನ್ನು ನೆಲಕ್ಕೆ ಹಾಕಿ ಮಣಿ ಕೆನ್ನೆಗೆ ಜೋರಾಗಿ ಬಾರಿಸಿದಳು. ಬಾರಿಸಿದ ಏಟಿಗೆ ಆ ಮರದಲ್ಲಿದ್ದ ಹಕ್ಕಿಗಳೆಲ್ಲ ಹಾರಿಹೋದವು. ಸುತ್ತಲೂ ನಿಂತು ನೋಡುತ್ತಿದ್ದ ಹುಡುಗರಲ್ಲಿ ಕೆಲವರು ತಮ್ಮ ಕೆನ್ನೆಗಳನ್ನು ಮುಟ್ಟಿನೋಡಿಕೊಂಡು ಕಣ್ಣುಕಣ್ಣುಬಿಟ್ಟರು. ಹುಡುಗಿಯರಂತೂ ಹೌಹಾರಿಬಿಟ್ಟರು. ಸೆಲ್ವಿ ಕೈಬಿಟ್ಟ ಮಣಿಗೆ ಕೆನ್ನೆಯನ್ನು ಸವರಿಕೊಳ್ಳಬೇಕೆನಿಸಿದರೂ ಹಾಗೆ ಮಾಡಲಿಲ್ಲ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಮೂರನೆಯ ಕಂತು ನಿಮ್ಮ ಓದಿಗೆ
ಅಧ್ಯಾಯ – 2
“ಬ್ಲಾಕ್ ಈಸ್ ಬ್ಯೂಟಿಫುಲ್ – ಕಪ್ಪು ಸೌಂದರ್ಯ ತತ್ವಶಾಸ್ತ್ರ”ದ ಬಗ್ಗೆ ಪೌಲ್ ಸಿ ಟೈಲರ್ ಎಂಬ ಲೇಖಕ ಒಂದು ಪುಸ್ತಕ ರಚಿಸಿದ್ದಾನೆ. ಕೋಲಾರ ಚಿನ್ನದ ಗಣಿಗಳಲ್ಲಿ ಕೆಲಸ ಮಾಡುವ 100ಕ್ಕೆ 90% ಕಾರ್ಮಿಕರು ಕಪ್ಪು ಬಣ್ಣದ ತಮಿಳರು. ಕೋಲಾರ ಪಟ್ಟಣಕ್ಕೂ ಕೆಜಿಎಫ್ ನಗರಕ್ಕೂ ಯಾವುದೇ ಸಂಬಂಧ ಇಲ್ಲ. ಯಾಕೆಂದರೆ ಕೋಲಾರ ಮತ್ತು ಕೆಜಿಎಫ್ ಮಧ್ಯೆ 26 ಕಿ.ಮೀ.ಗಳು ಅಂತರದ ದೂರವಿದೆ. ಆಧುನಿಕ ಚಿನ್ನದ ಗಣಿಗಳು ಪ್ರಾರಂಭವಾಗುವ ಕಾಲಕ್ಕೆ ಕೆಜಿಎಫ್ ಎನ್ನುವ ಪಟ್ಟಣ ಇರಲೇ ಇಲ್ಲ. ಇಂದಿನ ಕೆಜಿಎಫ್ ಪಟ್ಟಣಕ್ಕೆ 26 ಕಿ.ಮೀ.ಗಳು ದೂರದಲ್ಲಿದ್ದ ಕೋಲಾರ 1,000 ವರ್ಷಗಳಿಗಿಂತ ಹಿಂದಿನ ಪುರಾತನ ಪಟ್ಟಣವಾಗಿದ್ದ ಕಾರಣ ಚಿನ್ನದ ಗಣಿಗಳ ಮುಂದೆ ಕೋಲಾರ ಹೆಸರು ಅಂಟಿಕೊಂಡುಬಿಟ್ಟಿದೆ. 1962ರಲ್ಲಿ ಪ್ರಾರಂಭವಾದ ಕೆಜಿಎಫ್ ಪ್ರಥಮ ದರ್ಜೆ ಕಾಲೇಜು ಪ್ರಖ್ಯಾತ ಕಾಲೇಜು. ಅದಕ್ಕೂ ಮುಂಚೆ 1957ರಲ್ಲಿ ಕೆಜಿಎಫ್‌ನಲ್ಲಿ “ಸ್ಕೂಲ್ ಆಫ್ ಮೈನ್ಸ್” ಡಿಪ್ಲೊಮೊ ಕಾಲೇಜು ಪ್ರಾರಂಭವಾಗಿತ್ತು. ಗಣಿ ಕಾರ್ಮಿಕರ ಮಕ್ಕಳು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಸುಮಾರು 2,000 ವಿದ್ಯಾರ್ಥಿಗಳು ಕೆಜಿಎಫ್ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು.
***
ಗಣಿ ಸೈರನ್ ಹೊಡೆದಿದ್ದೆ ಸಾವಿರಾರು ಕಾರ್ಮಿಕರು ಹೇಗೆ ಸೈಕಲ್‌ಗಳಲ್ಲಿ ಗಣಿಗಳ ಕಡೆಗೆ ಹೋಗುತ್ತಿದ್ದರೊ ಅದೇ ರೀತಿ ನೂರಾರು ವಿದ್ಯಾರ್ಥಿಗಳು ಕಾಲೇಜ್ ಕಡೆಗೆ ನಡೆದು ಹೋಗುತ್ತಿದ್ದರು. ಅಪರೂಪವಾಗಿ ಒಂದಷ್ಟು ವಿದ್ಯಾರ್ಥಿಗಳು ಸೈಕಲ್‌ಗಳಲ್ಲಿ ಬಂದರೆ ಯಾರೊ ಒಬ್ಬರಿಬ್ಬರು ಸ್ಕೂಟರ್‌ಗಳಲ್ಲಿ ಬರುತ್ತಿದ್ದರು. ದೊಡ್ಡದೊಡ್ಡ ಪ್ರೊಫೆಸರ್‌ಗಳೂ ಕೂಡ ಸ್ಕೂಟರ್‌ಗಳಲ್ಲಿ ಇಲ್ಲ ಕಾಲು ನಡುಗೆಯಲ್ಲೇ ಕಾಲೇಜಿಗೆ ಬರುತ್ತಿದ್ದರು. ಬ್ರಿಟಿಷರು ಮತ್ತು ಆಂಗ್ಲೋ-ಇಂಡಿಯನ್ನರ ಪ್ರಭಾವ ಕೆಜಿಎಫ್‌ನಲ್ಲಿ ಹೆಚ್ಚಾಗಿದ್ದ ಕಾರಣ ವಿದ್ಯಾರ್ಥಿಗಳು ಪ್ರೀತಿ ಪ್ರೇಮದಲ್ಲಿ ತುಂಬಾ ಮುಂದಿದ್ದರು. ಗಣಿ ಕಾಲೋನಿಗಳಿಂದ ಹೆಣ್ಣು-ಗಂಡೆನ್ನದೆ ವಿದ್ಯಾರ್ಥಿಗಳು ಗುಂಪುಗುಂಪಾಗಿ ಕಾಲೇಜ್ ಕಡೆಗೆ ನಡೆದು ಬರುತ್ತಿದ್ದರು. ಗುಂಪುಗಳಲ್ಲಿ ಬರುವುದು, ಹೋಗುವುದು ಅವರಿಗೆ ಒಂದು ಉಲ್ಲಾಸದ ಸಂಗತಿಯಾಗಿತ್ತು. ಕಲೆ, ವಿಜ್ಞಾನ ವಾಣಿಜ್ಯದ ಎಲ್ಲಾ ವಿಭಾಗಗಳು ಇದ್ದವು. ನೂರಕ್ಕಿಂತ ಹೆಚ್ಚು ಉಪನ್ಯಾಸಕರಿದ್ದು ಅವರಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ, ಉರ್ದು, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಪ್ರಾಧ್ಯಾಪಕರು ಇದ್ದರು.
ಬೆಳಿಗ್ಗೆ 19 ಅಥವಾ 20 ವರ್ಷಗಳ ವಯಸ್ಸಿನ ನಮ್ಮ ಕಥಾನಾಯಕ ಮಣಿ ಗಣಿಗಳ ಮಧ್ಯದ ಶ್ರೀಕೃಷ್ಣ ರಾಜೇಂದ್ರ ವಡೆಯರ್ ಮುಖ್ಯರಸ್ತೆಯಲ್ಲಿ ನಡೆದು ಬರುತ್ತಿದ್ದಾನೆ. ಅವನ ಹಿಂದೆ ಮುಂದೆ ಅನೇಕ ಹುಡುಗಿಯರ ಗುಂಪುಗಳು ನಡೆದುಬರುತ್ತಿವೆ. ಗುಂಪುಗಳೆಂದರೆ ಬಣ್ಣಬಣ್ಣದ ಬಟ್ಟೆಗಳನ್ನು ತೊಟ್ಟಿರುವ ಹುಡುಗಿಯರು. ಲಂಗಾ-ದಾವಣಿ, ಲಂಗಾ-ಬ್ಲೌಸ್, ಅಪರೂಪವಾಗಿ ಪ್ಯಾಂಟ್ ತೊಟ್ಟ ಹುಡುಗಿಯರೂ ಅವರ ಮಧ್ಯೆ ಇದ್ದಾರೆ. ಉಕ್ಕಿ ಹರಿಯುವ ಯವ್ವನ, ಅವರ ನಗು ಅವರು ನಡೆಯುತ್ತಿರುವ ರಸ್ತೆಯೇ ಅಲ್ಲದೇ ಸುತ್ತಮುತ್ತಲೂ ಚಿಮ್ಮಿ ಹರಿಯುತ್ತಿದೆ. ಕೆಲವು ಗುಂಪುಗಳಲ್ಲಿ ಹುಡುಗರ‍್ಯಾರು ಹುಡುಗಿರ‍್ಯಾರು ಎಂಬ ವ್ಯತ್ಯಾಸ ಇಲ್ಲದೆ ಬೆರೆತುಹೋಗಿದ್ದಾರೆ. ಅವರ ಮಧ್ಯೆಮಧ್ಯೆ ವಿಭಿನ್ನ ಎನ್ನುವಂತೆ ಕೆಲವು ಜೋಡಿಗಳು ಜೊತೆಜೊತೆಯಾಗಿ ನಡೆಯುತ್ತಿವೆ. ಎಳೆಬಿಸಿಲನ್ನೂ ತಡೆಯಲಾರದ ಕೆಲವು ಹುಡುಗಿಯರು ಅಂದಚಂದ ಬಣ್ಣಗಳ ಛತ್ರಿಗಳನ್ನು ತಲೆಗಳಿಗೆ ಅಡ್ಡ ಇಟ್ಟುಕೊಂಡು ವೈಯ್ಯಾರದಿಂದ ರಸ್ತೆಯ ಮೇಲೆ ನಡೆಯುತ್ತಿದ್ದಾರೆ.
ಬೆಳಿಗ್ಗೆ ಕಾಲೇಜಿಗೆ ಹೋಗುವಾಗ ಮತ್ತು ಸಾಯಂಕಾಲ ಕಾಲೇಜಿನಿಂದ ಹಿಂದಕ್ಕೆ ಬರುವಾಗ ಮಣಿ ಬೇತಾಳನಂತೆ ಒಂದು ಹುಡುಗಿಯ ಹಿಂದೆ ಬಿದ್ದಿದ್ದಾನೆ. ಅವಳ ಹೆಸರು ಕಲೈಸೆಲ್ವಿ. ಎಲ್ಲರೂ ಸೆಲ್ವಿ, ಸೆಲ್ವಿ ಎಂದು ಕರೆಯುತ್ತಾರೆ. ಕಲೈ ಎಂದರೆ ಕಲೆ, ಸೆಲ್ವಿ ಎಂದರೆ ಸೌಂದರ್ಯ. ಎರಡೂ ಎರಕವಾಗಿರುವುದೇ ಕಲೈ ಸೆಲ್ವಿ. ಆಕೆ ಗೋದಿ ಬಣ್ಣದವಳಾಗಿದ್ದು ಸುತ್ತಲಿನ ಕಪ್ಪು ಮತ್ತು ಸಾಧಾರಣ ಬಣ್ಣದ ಹುಡುಗಿಯರ ಮಧ್ಯೆ ಎದ್ದು ಕಾಣಿಸುತ್ತಿದ್ದಳು. ನೋಡಲು ಅಂದವಾಗಿರುವುದೇ ಅಲ್ಲದೇ ಯಾವಾಗಲೂ ನಗುವನ್ನ ತುಟಿಗಳ ಮೇಲೆಯೆ ಚುಚ್ಚಿಕೊಂಡಿರುತಿದ್ದಳು. ಜೊತೆಗೆ ಗೆಳೆಯ ಗೆಳತಿ ಎಲ್ಲರನ್ನೂ ತಮಾಷೆ ಮಾಡುತ್ತ ನಗಿಸುತ್ತಿದ್ದಳು.
ಯವ್ವನ ಉಕ್ಕಿ ಹರಿಯುತ್ತಿದ್ದ ಮಣಿಗೆ ಒಂದು ಹುಡುಗಿಯ ಗೆಳೆತನ ಬೇಕಾಗಿತ್ತು. ಮಣಿಯ ಮುಖದ ಮೇಲೆ ಕಪ್ಪು ಮೀಸೆ ಮತ್ತು ಓತಗಡ್ಡ ಚಿಗುರುತ್ತಿತ್ತು. ನಸು ಎಣ್ಣೆಗಂಪಿನ ತಮಿಳು ಸಿನಿಮಾಗಳ ಎಳೆ ಹೀರೋಗಳಂತೆ ಕಾಣುತ್ತಿದ್ದ ಅವನು ಯಾವಾಗಲೂ ಸೆಲ್ವಿ ಹಿಂದೆಯೆ ನಡೆದು ಬರುತ್ತಿದ್ದನು. ಮಣಿ ಆರ್ಟ್ಸ್ ವಿಭಾಗದಲ್ಲಿ ಓದುತ್ತಿದ್ದು, ಸೆಲ್ವಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದು ಅವನಿಗಿಂತ ಒಂದು ತರಗತಿ ಹಿಂದಿದ್ದಳು. ಮಣಿ ತನ್ನ ತರಗತಿಗಳನ್ನೆಲ್ಲ ಬಿಟ್ಟು ಸೆಲ್ವಿಯನ್ನು ನೋಡಲು ಬರುತ್ತಿದ್ದ. ಸೆಲ್ವಿ ಗೆಳತಿಯರು, ಮಣಿ ಅವನ ತರಗತಿಗಳನ್ನು ಬಿಟ್ಟು ನಮ್ಮ ತರಗತಿಯಲ್ಲಿ ಬಂದು ಕುಳಿತುಕೊಳ್ಳುವುದೇ ಸರಿ ಎಂದರೆ, ಇನ್ನೂ ಕೆಲವರು ಅವನು ಹೀಗೇ ಮಾಡುತ್ತಿದ್ದರೆ ಅಲ್ಲೂ ಪಾಸ್ ಆಗುವುದಿಲ್ಲ. ಇಲ್ಲಿಯೂ ಪಾಸಾಗುವುದಿಲ್ಲ ಎಂದು ನಗುತ್ತಿದ್ದರು.
ನಾಲ್ಕಾರು ಬ್ರಿಟಿಷ್ ಬಂಗಲೆಗಳನ್ನು ಒಟ್ಟುಗೂಡಿಸಿ ಕೆಜಿಎಫ್ ಪ್ರಥಮ ದರ್ಜೆ ಕಾಲೇಜ್‌ನ್ನು ಸ್ಥಾಪಿಸಲಾಗಿತ್ತು. ಒಂದು ದಿನ ಮಧ್ಯಾಹ್ನ ಸೆಲ್ವಿ ಮತ್ತು ಆಕೆಯ ಗೆಳತಿಯರು ಒಂದು ಮರದ ಕೆಳಗೆ ನಿಂತುಕೊಂಡು ನಗುನಗುತ್ತ ಮಾತನಾಡುತ್ತಿದ್ದರು. ದಿಢೀರನೆ ಅವರ ಹತ್ತಿರಕ್ಕೆ ಬಂದ ಮಣಿ ಸೆಲ್ವಿಯ ಕೈ ಹಿಡಿದುಕೊಂಡು “ಸೆಲ್ವಿ ಐ ಲವ್ ಯೂ” ಎಂದುಬಿಟ್ಟ. ಸುತ್ತಲಿದ್ದ ಹುಡುಗಿಯರು ಗಾಬರಿಯಿಂದ ಆಕಡೆ ಈಕಡೆಗೆ ಓಡಿಹೋದರು. ಸೆಲ್ವಿ ಮಾತ್ರ ಯಾವ ಭಯವೂ ಇಲ್ಲದೆ ಅವನನ್ನೇ ನೋಡುತ್ತ “ಏ ತುಃ ಕೈಬಿಡು” ಎಂದಳು. ಮಣಿ, “ನೀನು, ಐ ಲವ್ ಯೂ ಎನ್ನುವವರೆಗೂ ಕೈಬಿಡುವುದಿಲ್ಲ” ಎಂದ. ಸೆಲ್ವಿ ಅವನಿಂದ ಕೈ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಅವನು ಅವಳ ಕೈ ಬಿಡದೆ ಮತ್ತೆ, “ನೀನು, ಐ ಲವ್ ಯೂ ಎಂದು ಹೇಳುವವರೆಗೂ ಕೈಬಿಡುವುದಿಲ್ಲ” ಎನ್ನುತ್ತ ಕೈಯನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡ.
ಎಲ್ಲರೂ ಅವರನ್ನೇ ನೋಡುತ್ತಿದ್ದರು. ಸೆಲ್ವಿಗೆ ಬೇರೆ ದಾರಿ ಕಾಣದೇ ಇನ್ನೊಂದು ಕೈಯಲ್ಲಿದ್ದ ಪುಸ್ತಕಗಳನ್ನು ನೆಲಕ್ಕೆ ಹಾಕಿ ಮಣಿ ಕೆನ್ನೆಗೆ ಜೋರಾಗಿ ಬಾರಿಸಿದಳು. ಬಾರಿಸಿದ ಏಟಿಗೆ ಆ ಮರದಲ್ಲಿದ್ದ ಹಕ್ಕಿಗಳೆಲ್ಲ ಹಾರಿಹೋದವು. ಸುತ್ತಲೂ ನಿಂತು ನೋಡುತ್ತಿದ್ದ ಹುಡುಗರಲ್ಲಿ ಕೆಲವರು ತಮ್ಮ ಕೆನ್ನೆಗಳನ್ನು ಮುಟ್ಟಿನೋಡಿಕೊಂಡು ಕಣ್ಣುಕಣ್ಣುಬಿಟ್ಟರು. ಹುಡುಗಿಯರಂತೂ ಹೌಹಾರಿಬಿಟ್ಟರು. ಸೆಲ್ವಿ ಕೈಬಿಟ್ಟ ಮಣಿಗೆ ಕೆನ್ನೆಯನ್ನು ಸವರಿಕೊಳ್ಳಬೇಕೆನಿಸಿದರೂ ಹಾಗೆ ಮಾಡಲಿಲ್ಲ. ಮಣಿ, “ನಾನು ನಿನ್ನನ್ನ ಲವ್ ಮಾಡ್ತಾ ಇದ್ದೀನಿ ಅಂತ ಕಾಲೇಜ್‌ನಲ್ಲಿ ಈಗ ಎಲ್ಲರಿಗೂ ಗೊತ್ತಾಯಿತಲ್ಲ. ನೀನು ನನ್ನನ್ನ ಲವ್ ಮಾಡಲೇಬೇಕು?” ಎಂದ ಮಣಿ ಅಲ್ಲಿಂದ ಹೊರಟುಹೋದ. ಅಷ್ಟರಲ್ಲಿ ಬೆಲ್ ಹೊಡೆದು ಎಲ್ಲರೂ ತರಗತಿಗಳ ಕಡೆಗೆ ಹೆಜ್ಜೆಯಾಕಿದರು.
ಸೆಲ್ವಿ ಕೆಳಗೆ ಬಿದ್ದಿರುವ ಪುಸ್ತಕಗಳನ್ನು ಒಂದೊಂದಾಗಿ ಎತ್ತಿ ಜೋಡಿಸಿಕೊಂಡು ಕಾಲೇಜ್‌ನಿಂದ ಹೊರಕ್ಕೆ ಬಂದು ಪಕ್ಕದಲ್ಲಿದ್ದ ಜಿಮ್ಖಾನಾಫುಟ್ಬಾಲ್ ಮೈದಾನದ ಸ್ಟೇಡಿಯಮ್ ಮೆಟ್ಟಿಲುಗಳನ್ನು ಹತ್ತಿ ಮೇಲಿನ ಮೆಟ್ಟಿಲಲ್ಲಿ ಕುಳಿತುಕೊಂಡಳು. ಅವಳ ಇಬ್ಬರು ಗೆಳತಿಯರು ರಾಜಿ ಮತ್ತು ಪಾರ್ವತಿ ಅವಳ ಹಿಂದೆಯೇ ಬಂದು ಅವಳ ಪಕ್ಕದಲ್ಲಿ ಕುಳಿತುಕೊಂಡರು. ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. ಮೈದಾನ ಖಾಲಿಯಾಗಿದೆ. ಮೈದಾನದ ಅಂಚಿನಲ್ಲಿದ್ದ ಮರಗಳು ಗಾಳಿಯ ಜೊತೆಗೆ ಆಡಿಕೊಳ್ಳುತ್ತಿವೆ. ರಾಜಿ, “ಸೆಲ್ವಿ, ನೀನು ಮಣಿಗೆ ಹೊಡೆಯಬಾರದಿತ್ತು” ಎಂದಳು. ಪಾರ್ವತಿ, “ಯಾಕೆ ಹೊಡೆಯಬಾರದು? ಎಲ್ಲರ ಮುಂದೆ ಕೈಹಿಡಿದುಕೊಂಡು ಬಿಡದೇ ಹಾಗೇ ಮಾಡಿದರೆ ಮತ್ತೇ ಏನು ಮಾಡಬೇಕು? ಅವನಿಗೆ ಹೊಡೆದಿದ್ದೆ ಸರಿ. ಆದರೆ ಈಗ ಕಾಲೇಜ್‌ನಲ್ಲಿ ಎಲ್ಲರೂ ಈ ವಿಷಯವನ್ನೇ ಮಾತಾಡಿಕೊಳ್ತಾರೆ. ನಾವು ಮೂರು ದಿನ ಕಾಲೇಜ್‌ಗೆ ಬರುವುದು ಬೇಡ” ಎಂದಳು. ಸೆಲ್ವಿ, “ಲೇ ಸುಮ್ಮನೇ ಇರ‍್ರೆ. ಕಾಲೇಜ್‌ಗೆ ಬರದೆಇದ್ದರೇ ಇನ್ನೂ ಹೆಚ್ಚಾಗಿ ಮಾತಾಡಿಕೊಳ್ತಾರೆ. ಈಗಲೇ ಕ್ಯಾಂಟೀನ್‌ಗೆ ಹೋಗೋಣ ನಡೆಯಿರಿ” ಎಂದು ಎದ್ದುನಿಂತಳು. ರಾಜಿ ಮತ್ತು ಪಾರ್ವತಿ ಸೆಲ್ವಿಯನ್ನೇ ನೋಡುತ್ತ ಕಣ್ಣುಕಣ್ಣು ಬಿಟ್ಟರು. ರಾಜಿ, “ಯಾರಾದರೂ ಕೇಳಿದರೆ ಏನು ಹೇಳ್ತಿಯಾ?” ಎಂದಳು. ಸೆಲ್ವಿ, “ಯಾರು ಕೇಳ್ತಾರೆ? ನೋಡೋಣ ನಡಿ” ಎಂದು ಮೂವರು ಎದ್ದು ಕಾಲೇಜ್ ಕಡೆಗೆ ಬಂದರು.
ಮೂವರು ನೇರವಾಗಿ ಕ್ಯಾಂಟೀನ್ ಕಡೆಗೆ ಬರುತ್ತಿರುವುದನ್ನು ನೋಡಿದ ವಿದ್ಯಾರ್ಥಿಗಳು ಯಾರೂ ಅವರ ಎದುರಿಗೆ ಹೋಗಲಿಲ್ಲ. ಕೆಲವರು ನೋಡಿನೋಡದಂತೆ ಪಕ್ಕಕ್ಕೆ ತಿರುಗಿಕೊಂಡು ಹೋಗುತ್ತಿದ್ದರು. ಮೂವರೂ ಕ್ಯಾಂಟೀನ್ ಒಳಕ್ಕೆ ಹೋಗಿದ್ದೆ ಕೆಲವರು ಹೊರಕ್ಕೆ ಬಂದರು. ಎಲ್ಲಿದ್ದನೊ ಮಣಿ ಕೂಡ ಕ್ಯಾಂಟೀನ್ ಒಳಕ್ಕೆ ಬಂದು ನೇರವಾಗಿ ಕ್ಯಾಶಿಯರ್ ಹತ್ತಿರಕ್ಕೆ ಹೋಗಿ “ಅವರು ಮೂವರು ಏನು ಕೇಳ್ತಾರೊ ಕೊಡಿ. ನಾನು ನಾಳೆ ಕೊಡ್ತೀನಿ” ಎಂದ. ಕ್ಯಾಶಿಯರ್, ಸರ್ವೇಯರ್ ಕಡೆಗೆ ನೋಡಿ ಸಿಗ್ನಲ್ ಕೊಟ್ಟ. ವಡಿವೇಲು ಅವರ ಹತ್ತಿರಕ್ಕೆ ಹೋಗಿ “ಮೇಡಮ್ ಏನು ಬೇಕು ಹೇಳಿ” ಎಂದ. ರಾಜಿ, ಪಾರ್ವತಿಗೆ ನಗಬೇಕೊ ಆಳಬೇಕೊ ಅರ್ಥವಾಗದೆ ಸೆಲ್ವಿ ಕಡೆಗೆ ನೋಡಿದರು. ಸೆಲ್ವಿಯ ಮುಖದ ಮೇಲೆ ಕಾಣದಷ್ಟು ತೆಳುವಾದ ನಗುವಿದ್ದು “ಏನೇನು ಇದೆಯೊ ಎಲ್ಲಾ ಒಂದೊಂದು ಪ್ಲೇಟು ಕೊಡು” ಎಂದಳು.
ವಡಿವೇಲು, ಮಣಿ ಕಡೆಗೆ ನೋಡುತ್ತ ಒಳಕ್ಕೆ ಹೋಗಿ ಎಲ್ಲವನ್ನೂ ತಂದು ಹುಡುಗಿಯರ ಮುಂದಿಟ್ಟ. ಸೆಲ್ವಿ ತನ್ನ ಗೆಳತಿಯರಿಗೆ ತಿನ್ನುವಂತೆ ಸನ್ನೆ ಮಾಡಿದಳು. ಆದರೆ ಅವರು ತಿನ್ನಲಿಲ್ಲ. ಸೆಲ್ವಿ ತಿನ್ನತೊಡಗಿದಳು. ಕ್ಯಾಂಟೀನ್ ಒಳಕ್ಕೆ ಬರುವವರು ಹೋಗುವವರು ಮಣಿ ಮತ್ತು ಸೆಲ್ವಿ ಎರಡು ಮೂಲೆಗಳಲ್ಲಿ ಕುಳಿತಿರುವುದನ್ನು ನೋಡುತ್ತ ಹೊರಕ್ಕೆ ಹೋಗಿ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಬಾಗಿಲಲ್ಲಿ ಕೆಲವರು ಕ್ಯಾಂಟೀನ್ ಒಳಕ್ಕೆ ಇಣಿಕಿ ಇಣಿಕಿ ನೋಡುತ್ತಿದ್ದರು. ಸೆಲ್ವಿ ಮತ್ತು ಗೆಳತಿಯರು ತಿಂದು ಮುಗಿಸಿ ಹೊರಕ್ಕೆ ಬಂದರು. ಸ್ವಲ್ಪ ಹೊತ್ತಾದ ಮೇಲೆ ಮಣಿ ಕ್ಯಾಶಿಯರ್ ಹತ್ತಿರಕ್ಕೆ ಎದ್ದುಹೋಗಿ ಹಣ ನಾಳೆ ಕೊಡುವುದಾಗಿ ಹೇಳಿ ಹೊರಕ್ಕೆ ಬಂದು ಸುತ್ತಲೂ ನೋಡಿದ. ಯಾರೂ ಅವನನ್ನು ಮಾತನಾಡಿಸಲಿಲ್ಲ.
ಸೆಲ್ವಿ ಮತ್ತು ಆಕೆಯ ಗೆಳತಿಯರು ಎಂದಿನಂತೆ ಕಾಲೇಜ್‌ನಿಂದ ಹೊರಕ್ಕೆ ಬಂದು ಪೋಸ್ಟ್ ಆಫೀಸ್ ಮುಂದೆ ಬಲಕ್ಕೆ ತಿರುಗಿಕೊಂಡು ಮುಖ್ಯ ರಸ್ತೆಯಲ್ಲಿ ದಕ್ಷಿಣಕ್ಕೆ ನಡೆಯತೊಡಗಿದರು. ಆ ರಸ್ತೆ ಉತ್ತರದ ಗೋಲ್ಕೊಂಡ ಗಣಿಗಳಿಂದ ದಕ್ಷಿಣದ ಮೈಸೂರು ಗುಂಪಿನ ಗಣಿಗಳವರೆಗೂ ಸಾಗುತ್ತದೆ. ಅದಾದ ಮೇಲೆ ದಕ್ಷಿಣದ ಗಣಿಗಳು ಮತ್ತು ಕೊನೆ ಕ್ಯಾಂಪ್ ಮಾರಿಕುಪ್ಪಮ್‌ವರೆಗೂ ಹೋಗುತ್ತದೆ. ಪೋಸ್ಟ್ ಆಫೀಸ್ ಹಿಂದೆ ಗಿಡಗಳ ಮರೆಯಲ್ಲಿ ನಿಂತಿದ್ದ ಮಣಿ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕಾಣಿಸಿಕೊಂಡು ಮೂವರು ಹುಡುಗಿಯರ ಹಿಂದೆ ಸುಮಾರು 100 ಮೀಟರುಗಳ ಅಂತರದಲ್ಲಿ ನಡೆಯತೊಡಗಿದ. ಎಲೆಕ್ಟ್ರಿಕಲ್ ಕಛೇರಿಯ ಹತ್ತಿರಹತ್ತಿರ ಹೋಗುತ್ತಿದ್ದಂತೆ ಮಣಿ ಹಿಂದೆ ಬರುತ್ತಿರುವುದನ್ನು ರಾಜಿ ನೋಡಿ ಸೆಲ್ವಿಗೆ ಹೇಳಿದಳು. ಸೆಲ್ವಿ, “ನಿಂತಿದ್ದನಲ್ಲ ಪೋಸ್ಟ್ ಆಫೀಸ್ ಹಿಂದೆ ಗಿಡಗಳಲ್ಲಿ ಕಳ್ಳನಂತೆ” ಎಂದಿದ್ದೆ ಇಬ್ಬರು ಗೆಳತಿಯರು ಅವಕ್ಕಾದರು.
ಮೈನಿಂಗ್ ಆಸ್ಪತ್ರೆ ದಾಟಿ ಉದ್ದಂಡಮ್ಮಾಳ್ ದೇವಸ್ಥಾನದ ತಿರುವಿನಲ್ಲಿ ಮೂವರು ಹುಡುಗಿಯರು ತಮ್ಮ ಕ್ಯಾಂಪ್ ಕಡೆಗೆ ತಿರುಗಿಕೊಂಡು 100 ಮೀಟರುಗಳು ದೂರ ಹೋಗಿ ಹಿಂದಕ್ಕೆ ತಿರುಗಿ ನೋಡಿದರೆ ಮಣಿ ಹಿಂದೆಯೆ ನಿಂತಿದ್ದಾನೆ. ಮಣಿ ಸುತ್ತಲೂ ಒಮ್ಮೆ ನೋಡಿ ದಿಢೀರನೆ ಸೆಲ್ವಿಯ ಕೈ ಹಿಡಿದುಕೊಂಡು “ಐ ಲವ್ ಯೂ ಸೆಲ್ವಿ” ಎಂದ. ರಾಜಿ, ಪಾರ್ವತಿ ಇಬ್ಬರಿಗೂ ಗಾಬರಿಯಾದರೂ ಬೆಳಗಿನಂತೆ ದೂರ ಓಡಿಹೋಗದೆ ಸ್ವಲ್ಪ ದೂರಕ್ಕೆ ತಳ್ಳಿ ನಿಂತುಕೊಂಡರು. ಸೆಲ್ವಿ ಒಂದೆರಡು ಕ್ಷಣಗಳು ಸುತ್ತಲೂ ನೋಡಿ “ಕೈಬಿಡು” ಎಂದಳು. ಮಣಿ, “ಇಲ್ಲ ನಾನು ಬಿಡಲ್ಲ. ನೀನು ಐ ಲವ್ ಯೂ ಅಂತ ಹೇಳಬೇಕು” ಎಂದ. ಕೈಯಲ್ಲಿದ್ದ ಪುಸ್ತಕಗಳು ಕೆಳಕ್ಕೆ ಬಿದ್ದವು. ಈಗ ರಾಜಿ ಮತ್ತು ಪಾರ್ವತಿ ನಿಜವಾಗಿಯೆ ಹೆದರಿಕೊಂಡು ಇನ್ನಷ್ಟು ದೂರ ಹೋಗಿ ನಿಂತುಕೊಂಡರು. ಇನ್ನೇನು ಸೆಲ್ವಿ, ಮಣಿಯ ಕೆನ್ನೆಗೆ ಬಾರಿಸಬೇಕು. ಮಣಿ ದಬಕ್ಕನೆ ನೆಲಕ್ಕೆ ಬಿದ್ದು ಸೆಲ್ವಿಯ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡುಬಿಟ್ಟನು. ಸೆಲ್ವಿಗೆ ಏನೂ ಮಾಡಬೇಕೊ ಅರ್ಥವಾಗದೆ ಒಂದೆರಡು ಕ್ಷಣ ಯೋಚಿಸಿ ನೋಡಿದಳು. ಅವಳಿಗೆ ಏನೂ ಹೊಳೆಯಲಿಲ್ಲ. ಕೊನೆಗೆ ಸೆಲ್ವಿ “ರಾಜಿ, ಆ ಕಲ್ಲು ಎತ್ತಿಕೊಡೆ ತಲೆ ಮೇಲೆ ಹಾಕಿಬಿಡ್ತೀನಿ” ಎಂದಳು. ರಾಜಿ ಸುಮ್ಮನೇ ನಿಂತಿರುವುದು ನೋಡಿದ ಸೆಲ್ವಿ, “ಪಾರ್ವತಿ ನೀನಾದರೂ ಎತ್ತಿ ಕೊಡೆ” ಎಂದಳು. ಅಷ್ಟರಲ್ಲಿ ಯಾರೋ ಇಬ್ಬರು ಸೈಕಲ್‌ಗಳಲ್ಲಿ ಬರುತ್ತಿರುವುದು ನೋಡಿದ ಸೆಲ್ವಿ, “ಆಯಿತು, ಎದ್ದೇಳು” ಎಂದಳು. ಮಲಗಿದ ಕಡೆಯಿಂದಲೇ ಮುಖ ಹೊರಳಿಸಿ ನೋಡಿದ ಮಣಿ ವಿಧಿ ಇಲ್ಲದೆ ಎದ್ದು ನಿಂತುಕೊಂಡನು. ಹುಡುಗಿಯರು ಮುಂದಕ್ಕೆ ಸಾಗಿದರು. ಮಣಿ ಅಲ್ಲೇ ನಿಂತುಕೊಂಡು ಅವರ ಕಡೆಗೆ ನೋಡತೊಡಗಿದನು.
ಸೈಕಲ್‌ನಲ್ಲಿ ಹೋಗುತ್ತಿದ್ದವರಲ್ಲಿ ಒಬ್ಬ ನಗುತ್ತ, “ಏನು ರಾಜಾ, ಉದ್ದಂಡಮ್ಮಾಳ್ ದೇವಸ್ಥಾನ ಅಲ್ಲಿದ್ದರೆ ನೀನು ಇಲ್ಲಿ ಉರುಳು ಸೇವೆ ಮಾಡ್ತಾ ಇದ್ದೀಯ?” ಎಂದು ನಕ್ಕ. ಇನ್ನೊಬ್ಬ, “ನಮ್ಮ ಲೈನ್‌ಗಳಲ್ಲಿ ಹುಡುಗರೂ ಹುಡುಗಿಯರೂ ತುಂಬಾ ಕೆಟ್ಟೋಗಿದ್ದಾರಪ್ಪ” ಎನ್ನುತ್ತಾ ಮುಂದಕ್ಕೆ ಹೊರಟುಹೋದರು. ಸೆಲ್ವಿ ಹಲ್ಲು ಕಡಿಯುತ್ತಾ “ಇವ್ನ ಏನು ಮಾಡುವುದು? ಖಂಡಿತ ಇವನು ನನ್ನನ್ನ ಬಿಡೋತರಹ ಕಾಣಿಸ್ತಾ ಇಲ್ಲ” ಎಂದಳು. ರಾಜಿ, ಪಾರ್ವತಿ ಇಬ್ಬರೂ ಒಟ್ಟಾಗಿ “ನನಗೆ ಭಯಾ ಆಗುತ್ತೆ ಸೆಲ್ವಿ” ಎಂದರು. ಸೆಲ್ವಿ, “ಆಯಿತು. ನಾಳೆ ಯೋಚಿಸೋಣ ನಡೆಯಿರಿ” ಎಂದಳು. ಎಲ್ಲರೂ ಅವರವರ ಮನೆಗಳ ಕಡೆಗೆ ಮುಖಗಳನ್ನು ಒಣಗಿಸಿಕೊಂಡು ಹೊರಟರು. ಮಣಿ ಅಲ್ಲಿಂದ ನಿಧಾನವಾಗಿ ನಡೆದುಕೊಂಡು ಹೋಗಿ ಉದ್ದಂಡಮ್ಮಾಳ್ ದೇವಸ್ಥಾನದ ಗೋಡೆ ಮೇಲೆ ಭಿಕ್ಷುಕನಂತೆ ಸುಮಾರು ಹೊತ್ತು ಕುಳಿತುಕೊಂಡೇ ಇದ್ದನು.
ಅವನ ತಲೆಯಲ್ಲಿ ಏನೂ ಓಡಲಿಲ್ಲ. ಕತ್ತಲಾದ ಮೇಲೆ ಎಷ್ಟೋ ಹೊತ್ತಿಗೆ ಅದೇ ರಸ್ತೆಯನ್ನಿಡಿದು ಮಾರಿಕುಪ್ಪಮ್ ಕಡೆಗೆ ಹೆಜ್ಜೆಯಾಕಿದ. ಅವನ ಪುಸ್ತಕಗಳೆಲ್ಲಿ, ಅವನ ಮನಸ್ಸೆಲ್ಲಿ, ಕೊನೆಗೆ ಅವನ ಕೈಕಾಲುಗಳೆಲ್ಲಿ ಒಂದೂ ಗೊತ್ತಾಗದೆ ನಡೆದು ಹೋಗುತ್ತಿದ್ದನು. ರಸ್ತೆಯ ಎರಡೂ ಕಡೆ ಇರುವ ಗಣಿಗಳ ಹೆಡ್‌ಗೇರ್‌ಗಳ ಮೇಲಿನ ಉಕ್ಕು ಚಕ್ರಗಳು ಕಾಲದ ಚಕ್ರಗಳಂತೆ ಒಂದೇ ಸಮನೆ ಹಿಂದಕ್ಕೆ ಮುಂದಕ್ಕೆ ತಿರುಗುತ್ತಿದ್ದವು. ಒಂದು ಕಡೆ ಗಣಿ ಕಾರ್ಮಿಕರು ಗಣಿಗಳಿಂದ ಮೇಲಕ್ಕೆ ಬರುತ್ತಿದ್ದರೆ ಇನ್ನೊಂದು ಕಡೆ ಗಣಿಗಳ ಒಳಕ್ಕೆ ಇಳಿಯುತ್ತಿದ್ದರು. ಮತ್ತೊಂದು ಕಡೆ ಗಣಿಗಳಿಂದ ಮೇಲಕ್ಕೆ ಬರುತ್ತಿದ್ದ ಚಿನ್ನದ ಅದಿರನ್ನು ತುಂಬಿಕೊಂಡಿರುವ ಟ್ರಾಲಿಗಳು ಸ್ವಯಂಚಾಲಿತ ಸಾಗಣಿ ಪಟ್ಟಿಗಳ ಮೂಲಕ ಮಿಲ್ಲುಗಳಿಗೆ ಮೇಲೆಯೇ ಹೋಗುತ್ತಿದ್ದವು.
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.