ಯಮುನಾನದಿಯ ಮೇಲೆ ಹಾದುಬರುತ್ತಿರುವ ಗಾಳಿಯ ವರ್ಣನೆಯಿಂದ ಹಿಡಿದು ಅಲ್ಲಿಗೆ ಎಲ್ಲರೂ ಬಂದು ಜಲಕ್ರೀಡೆ ಆಡುವಾಗಿನ ಸಂದರ್ಭದವರೆಗಿನ ಎಲ್ಲಾ ವರ್ಣನೆಯನ್ನೊಮ್ಮೆ ಗಮನಿಸಿ ಇದೆಲ್ಲವೂ ಅಮೂರ್ತದಿಂದ ಮೂರ್ತಕ್ಕೆ ತರುವ ಬಹುದೊಡ್ಡ ಪ್ರಯತ್ನ. ಕೊನೆಗೆ ಅವನಿಗೇ ವರ್ಣಿಸಲು ಸಾಲದೆ ದೇಸೀ ಮಾರ್ಗ ಅನ್ನುವ ಮಾತನ್ನು ತರುತ್ತಾನೆ. ಇವುಗಳು ಸಹಾ ಓದುಗ ಪ್ರಜ್ಞೆಯಿಂದ ಆಗುವ ವಿಭಾಗಕ್ರಮ. ಕೇವಲ ಕಾವ್ಯದ ಹೊರರೂಪ ಅದನ್ನು ನಿರ್ಧರಿಸಲಾಗದು. ಇಲ್ಲಿನ ವರ್ಣನೆಗಳು ಅನುಭವಕ್ಕೆ ಬಂದಿರುವುದೇ ಆದರೆ ಅಲ್ಲಿನ ವರ್ಣನೆಯ ಮೂಲಕ ತನ್ನ ಯಶಸ್ವಿಕಾರ್ಯ ಮಾಡಿ ಬಿಡಲಾರದಂತೆ ಬಂಧ ಬೆಸೆಯುತ್ತದೆ.
ಆರ್. ದಿಲೀಪ್ ಕುಮಾರ್ ಅಂಕಣ

 

ಯಮುನಾ ನದಿಯು ಕೃಷ್ಣನ ಜೀವನದೊಂದಿಗೆ ಬೆಸೆದುಕೊಂಡಿರುವ ಬಹುಮುಖ್ಯ ನದಿಗಳಲ್ಲೊಂದು. ಬೃಂದಾವನದಿಂದ ಮಥುರೆಗೆ ಬರುವವರೆಗೆ ಅವನ ಬಾಲ್ಯದ ಎಲ್ಲ ಘಟನೆಗಳಲ್ಲೂ ಒಂದಿಲ್ಲೊಂದು ತರದಲ್ಲಿ ಯಮುನೆಯು ಬಂದೇ ಬರುತ್ತಾಳೆ. ಮಹಾಭಾರತದ ಕರ್ತೃ ವೇದವ್ಯಾಸರು ಹುಟ್ಟಿದ್ದೂ ಯಮುನಾ ನದಿಯ ಪಕ್ಕದ ದ್ವೀಪವಾದ ಕಲ್ಪಿಯಲ್ಲೆ. ಕೃಷ್ಣನ ದಶಾವತಾರಗಳಲ್ಲಿನ ಮೊದಲನೆಯ ಮತ್ಸ್ಯಾವತಾರವೂ ನೀರಿಗೆ ಅಂಟಿಕೊಂಡು ಬೆಳೆದದ್ದೇ. ಈ ಎಲ್ಲಾ ಕಾರಣದಿಂದ ನೀರು, ನದಿ, ನೀಲಿ, ಕೃಷ್ಣ ಇವುಗಳು ಒಂದನ್ನೊಂದು ಬಿಡದಂತಹಾ ಅವಿನಾಭಾವ ಸಂಬಂಧ ಮತ್ತು ಬಂಧ ಹೊಂದಿದೆ. ಪಂಪ ಭಾರತದಲ್ಲಿಯೂ ಐದನೆಯ ಆಶ್ವಾಸದಲ್ಲಿಯ ಯಮುನೆಯ ತಟದಲ್ಲಿನ ಕೃಷ್ಣಾರ್ಜುನರ ಜಲಕ್ರೀಡೆಯ ಸಂದರ್ಭ ಬಹುಮುಖ್ಯವಾದದ್ದು.

ಒಂದು ಭಾವದಿಂದ ಮತ್ತೊಂದಕ್ಕೆ, ಒಂದು ರಸದಿಂದ ಮತ್ತೊಂದಕ್ಕೆ ಬಹು ವೇಗವಾಗಿ ಹೊರಳುವ ಪಂಪ ಭಾರತದ ಭಾಗಗಳಲ್ಲಿ ನಾಲಕ್ಕು ಮತ್ತು ಐದನೆಯ ಆಶ್ವಾಸ ಬಹು ಮುಖ್ಯವಾದದ್ದು. ಸುಭದ್ರೆಯನ್ನು ವಿವಾಹವಾದ ಸಂತೋಷಕ್ಕೆ ಕೃಷ್ಣಾರ್ಜುನರು ಸಿಂಹವನ್ನು ಬೇಟೆಯಾಡುವುದನ್ನು ಹೇಳುತ್ತಲೇ, ತತ್ ಕ್ಷಣದಲ್ಲಿ ಯಮುನೆಯ ತಟದಲ್ಲಿ ಬಂದು ನಿಂತು ಜಲಕ್ರೀಡೆ ಪ್ರಾರಂಭ ಮಾಡುತ್ತಾರೆ, ಅದಾದ ಮರುಕ್ಷಣವೇ ಮತ್ತೆ ಕೃಷ್ಣ ತನ್ನ ಭೂತಕಾಲಕ್ಕೆ ನಡೆಯುತ್ತಾನೆ. ವರ್ತಮಾನದಲ್ಲಿ ನಡೆಯುತ್ತಲೇ ಭೂತಕ್ಕೆ ಪಡೆವ ಸಂಬಂಧ, ಹಾಗೆ ಭೂತ ಕಾಲದ ಘಟನೆ ವರ್ತಮಾನದಲ್ಲಿ ಕೃಷ್ಣ ಅರ್ಜುನಿಗೆ ಹೇಳಿಕೊಳ್ಳುವ ತನ್ನ ಸಾಹಸ ಇವುಗಳು ಬಹುಮುಖ್ಯವಾದದ್ದು.

ಒಂದು ಪರಿಸರವನ್ನು ಕಟ್ಟಿಕೊಡುವಾಗ ಪಂಪನ ಜಾಣ್ಮೆ ಬಹುಮುಖ್ಯವಾದದ್ದು. ಮಹಾಕಾವ್ಯಗಳಲ್ಲಿ ಸಾಮಾನ್ಯವಾಗಿ ಬರುವ ಮೃಗಯಾ ವಿಹಾರ, ವನಕ್ರೀಡೆ ಮತ್ತು ಜಲಕ್ರೀಡೆಗಳು ಕವಿಸಮಯವಾಗಿ ಬರುತ್ತದೆ. ಇಲ್ಲಿಯೂ ಹಾಗೆ ಕೃಷ್ಣ ಮತ್ತು ಅರ್ಜುನರು ವಿಹಾರಕ್ಕೆ, ಬೇಟೆಗೆ ಬಂದವರು ಕೊನೆಯಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರವೇ ಬೇರೆಯಾಗಿಬಿಡುತ್ತದೆ. ಇಲ್ಲಿನ ಸಂದರ್ಭದಲ್ಲಿನ ಮುಖ್ಯ ರಸ ಮತ್ತೊಂದು ರಸಕ್ಕೆ ಹಾರಲು ಮಾಡಿಕೊಳ್ಳುವ ಯಶಸ್ವಿಕ್ರಮವನ್ನು ಈ ಭಾಗದ ಪ್ರಕೃತಿಯಿಂದ ಹಿಡಿದು ಅವರಿಬ್ಬರ ಭಾವಪ್ರಕೃತಿಯನ್ನು ತಿಳಿಸುತ್ತದೆ. ಸಾಮಾನ್ಯವಾಗಿ ಕಂಡರೂ ಕೃಷ್ಣ ತನ್ನ ಸಾಹಸವನ್ನು ಹೇಳುವ ಕ್ರಮವು ಅರ್ಜುನನ ಖಾಂಡವ ದಹನಕ್ಕೆ ತಯಾರಿಸುವ ರೀತಿಯಾಗಿ ಮಾರ್ಪಾಡಾಗುತ್ತದೆ.

ಮಂದಗಾಳಿಯಿಂದ, ಯಮುನಾನದಿ, ನದಿಯ ಅಲೆಗಳು, ಸುತ್ತಮುತ್ತಲ ಮರಗಳು, ಆ ಮರಗಳು ಸುರಿಸಿದ ಹೂವು, ಅದರ ಪರಿಮಳದ ಜೊತೆಗೆ ಬಂದ ಗಾಳಿಗಳಿಂದ ಪ್ರಾರಂಭವಾದದ್ದು ಕೊನೆಗೆ ಸುಡುವ ಬೆಂಕಿಯ ಕಡೆಗೆ ಚಲನೆ ಪಡೆದುಬಿಡುತ್ತದೆ. ಶೃಂಗಾರದಿಂದ ಪ್ರಾರಂಭವಾಗಿ ರೌದ್ರಕ್ಕೆ ಚಲನೆ ಪಡೆದು ಭಯಾನಕ ಚಿತ್ರಗಳನ್ನು ಸೃಷ್ಟಿಸಿ ಬಿಡುತ್ತದೆ. ಆ ಶೃಂಗಾರ ರಸದ ಭಾಗವು ಬೆಳೆಯುತ್ತಾ ಬೆಳೆಯುತ್ತಾ ರಾಸನೃತ್ಯದ ಸಂದರ್ಭದ ಹಾಗೆ ಭಾಸವಾಗಿಬಿಡುತ್ತದೆ. ಆ ಭಾಗ ಹೀಗಿದೆ…

ಸರಳ ತಾಳ ತಮಾಳ ಹರಿಚಂದನ ನಂದನ
ಭೂಜ ರಾಜಿಯಿಂ ಸುರಿವ ಅಲರೋಳಿ
ತದ್ವನ ಲತಾಂಗಿಯಂ ಸೂಸುವ ಸೇಸೆಯಾಯ್ತು
ಭೃಂಗರವಮದೊಂದು ಮಂಗಳ ರವಕ್ಕೆಣೆಯಾಯ್ತು
ಮನೋ ರಾಗದಿಂ ಕರೆವವೊಲಾಯ್ತು
ಮತ್ತ ಕಳಹಂಸ ರವಂ ಪಡೆಮೆಚ್ಚೆ ಗಂಡನಂ (೫.೫೨)

ಯಮುನಾ ನದೀ ತರಂಗಮನ್ ಅಮುಂಕಿ
ವನಲತೆಯ ಮನೆಗಳಂ ಸೋಂಕಿ
ವನಭ್ರಮಣ ಪರಿಶ್ರಮಮಂ ಮುನ್ನಮೆ ಕಳೆದುದು
ಬಂದದೊಂದು ಮಂದ ಶ್ವಸನಂ (೫.೫೩)

ಭೂಮಿ ಮತ್ತು ನದಿಯ ವರ್ಣನೆಯ ಭಾಗವಿದು. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಕಾರ್ಯಾ ಕಾರಣ ಸಂಬಂಧದಿಂದ ಗ್ರಥಿಸುವ ಕೌಶವಲವು ಹೆಚ್ಚಾಗಿ ಕೆಲಸ ಮಾಡಿದೆ ಅನಿಸದೆ ಇರದು. ತೇಗ, ಹೊಂಗೆ, ತಾಳೆ, ಶ್ರೀಗಂಧ, ತೋಟಗಳಿಂದ ಕೂಡಿದ ಸುಂದರವಾದ ಚಿತ್ರವೊಂದು ಕೊಟ್ಟು ತತ್ ಕ್ಷಣದಲ್ಲೆ ಅಲ್ಲೊಂದು ರಾಜನ ಸ್ವಾಗತಕ್ಕೆ ಅವೆಲ್ಲವೂ ತಯಾರಾದ ಚಿತ್ರಣ ಬಂದು ಬಿಡುತ್ತದೆ. ಅಲ್ಲಿ ಗಾಳಿಗೆ ಸುರಿಯುವ ಹೂವುಗಳು ವನವೆಂಬ ಸ್ತ್ರೀಯು ಸೂಸುವ ಮಂತ್ರಾಕ್ಷತೆಯ ಹಾಗೆ, ದುಂಬಿಯ ಝೇಂಕಾರವು ಮಂಗಳ ವಾದ್ಯದ ಶಬ್ಧಕ್ಕೆ ಸಮಾನವಾಯಿತು. ಅಲ್ಲೆಲ್ಲಾ ನದಿಯಲ್ಲಿ ಆಡುತ್ತಿದ್ದ, ಈ ಎಲ್ಲದರಿಂದ ಮದಿಸಿದ ಕಳಹಂಸೆಗಳ ರವವು ಇವರನ್ನು ಆ ಕಡೆಗೆ ಬರುವಂತೆ ಕರೆಯಿತು. ಅಲ್ಲಿ ಮದಿಸಿರುವುದು ಕಳಹಂಸೆಗಳಾದರೂ ಅವರಿಬ್ಬರ ಮನಸ್ಸು ಹಂಸೆಯೇ. ಈ ಪರಿಸರದ ಪ್ರಭಾವಕ್ಕೆ ಮದಿಸಿತು.

ಆ ಕಾಡಿನ ಮೇಲೆ ಬಂದ ಗಾಳಿಯಾದರೂ ಎಂತಹದ್ದು! ಯಮುನಾ ನದಿಯ ಅಲೆಗಳನ್ನು ಅದುಮಿ, ಕಾಡು ಬಳ್ಳಿಯ ಮನೆಗಳನು ಮುಟ್ಟಿ, ಬಂದ ಗಾಳಿ ಅವರೆಲ್ಲರ ಆಯಾಸವನ್ನು ಹೋಗಲಾಡಿಸಿತು. ಪದ್ಯ ೫.೫೩ ರ ಬಗೆಗೆ ಆಚಾರ್ಯ ಡಿ ಎಲ್ ನರಸಿಂಹಾಚಾರ್ಯರ ಬಹುಸೂಕ್ಷ್ಮ ವ್ಯಾಖ್ಯಾನ ನೋಡಿ – ಇದು ರಚನೆಯಲ್ಲೂ ಕಲ್ಪನೆಯಲ್ಲೂ ಸುಂದರವಾದ ಪದ್ಯ. ‘ಯಮುನಾ ನದೀ ತರಂಗಮಂ’ ಎಂಬಲ್ಲಿನ ದೀರ್ಘಾಕ್ಷರಗಳು ಆ ನದಿಯ ವಿಸ್ತಾರವನ್ನೂ ಅಲೆಗಳ ಮಾಲೆಗಳನ್ನೂ ಬಿಂಬಿಸುತ್ತವೆ. ‘ಅಮುಂಕಿ’ ಎಂಬಲ್ಲಿನ ಜಗಣ ಗಾಳಿ ಹೇಗೆ ಇದನ್ನು, ಮುಟ್ಟಿ ಅಮುಕಿತು ಎಂಬುದನ್ನು ಧ್ವನಿಸುತ್ತದೆ. ಗಾಳಿ ತಂಪಾಗಲು ಕಾರಣ, ಅಲೆಗಳನ್ನು ಅಮುಕಿದ್ದು. ಬಳ್ಳಿ ಮನೆಗಳನು ಸೋಕಿದ್ದು ಮೃದು ಬಂಧ.

(೧. ಲಲಿತಲವಂಗಲತಾಪರಿಶೀಲನ ಕೋಮಲ ಮಲಯ ಸಮೀರೆ
ಮಧುಕರನಿಕರಕರಂಬಿತಕೋಕಿಲ ಕೂಜಿತ ಕುಂಜ ಕುಟೀರೆ – ಜಯದೇವ ಕವಿಯ ಗೀತಗೋವಿಂದ.
೨. ಬಾ ಸಖಿ ಬೃಂದಾವನಕೆ / ಆನಂದನಿಕೇತನಕೆ – ಬೇಗ ಬಾ ಸಖಿ / ಯಮುನೆಯ ತೆರೆತೆರೆ ತಾಳವ ಹೊಯ್ದು / ತೀರದ ತರುತರು ಅಭಿನಯಗೆಯ್ದು / ಲತೆಲತೆ ಬಳುಕಿ ಗಾಳಿಕೆ ತಳುಕಿ / ಕೊಳಲಿಗೊಲಿವಾ ತಾಣಕೆ – ಬೇಗ ಬಾ ಸಖಿ – ಪುತಿನ ಅವರ ಗೋಕುಲ ನಿರ್ಗಮನ ಗೀತಾ ನಾಟಕದ ಪ್ರಾರಂಭದ ಹಾಡು)

ತುರಗ ಚಯಂಗಳಂತಿರೆ ತರಂಗ ಚಯಂ
ಚಮರೀರುಹಂಗಳಂತಿರೆ ಕಳಹಂಸೆ
ಬೆಳ್ಗೊಡೆಗಳಂತಿರೆ ಬೆಳ್ನೊರೆ
ಗೊಟ್ಟಿಗಾಣರಂತಿರೆ ಮಱಿದುಂಬಿ
ಮೇಳದವರಂತಿರೆ ಸಾರಿಕೆ
ರಾಜಗೇಹದಂತಿರೆ ಕೊಳನ್
ಅಲ್ಲಿ ತಾಮ್ ಅರಸರಂತಿರೆ
ತಾಮರಸ ಕಮಲಂಗಳೊಪ್ಪುಗುಂ (೫.೫೮)

ಎರಡು ಭಿನ್ನ ಸನ್ನಿವೇಶಗಳನ್ನು ಒಂದು ಕಡೆ ತಂದು ಅತ್ಯದ್ಭುತ ಚಿತ್ರಣವನ್ನು ಕೊಟ್ಟಿಕೊಡುತ್ತಾನೆ. ನದೀ ತೀರದ ಪರಿಸರದಲ್ಲಿ ಇದ್ದವರು ಒಡ್ಡೋಲಗದ ಹಾಗೆ ಚಿತ್ರಣ ಮಾಡುತ್ತಾನೆ. ಇಲ್ಲಿನ ಅಲೆಗಳ ಸಮೂಹವು ಕುದುರೆಗಳ ಸಮೂಹದಂತಿರಲು, ಕೋಮಲವಾದ ಹಂಸಪಕ್ಷಿ ಚಾಮರದಂತಿರಲು, ಬಿಳಿದಾದ ನದಿಯಲ್ಲಿನ ನೊರೆ ಬೆಳ್ಗೊಡೆಯಂತಿರಲು, ದುಂಬಿಯ ಮರಿಗಳು ಗೋಷ್ಠಿಯ ಗಾಯಕರಂತಿರಲು, (ಮಱಿದುಂಬಿಯಾಗಿ ಮೆಣ್ ಕೋಗಿಲೆಯಾಗಿ ಪುಟ್ಟುವುದು ಬನವಾಸೀ ದೇಶದೊಳ್ – ಅನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಿ – ಓದುಗಬ್ಬದ ಕ್ರಮವನ್ನ ಹಾಡುಗಬ್ಬದ ಹಾಗೆ ಮಾತಾಡುವಂತೆ ಇದೆ) ಹೆಂಗಿಣಿಗಳು ಮೇಳದ ಜೊತೆಗಾರರಂತಿರಲು, ಆ ಕೊಳವು ಅರಮನೆಯ ಹಾಗಿರಲು ತಾವರೆಗಳೆಲ್ಲವೂ ತಾವೇ ರಾಜರಂತೆ ಸೊಗಸಾಗಿವೆ. ಅನ್ನುವಲ್ಲಿ ಪ್ರತಿಯೊಂದೊಂದು ಪ್ರಕೃತಿಯಲ್ಲಿನದು ಒಡ್ಡೋಲಗದ ಭಾಗಗಳಾಗಿ ಪಲ್ಲವವಾಗಿಬಿಡುತ್ತದೆ. ಅದರೊಂದಿಗೇ ನಮ್ಮನ್ನಾಳುವುದು ನಿಜವಾಗಿ ಪ್ರಕೃತಿ ಅನ್ನುವುದನ್ನು ಸೂಚ್ಯವಾಗಿ ಅರಿಕೇಸರಿಯ ಎದುರೇ ಪಂಪ ಸಾರಿಬಿಡುತ್ತಾನೆ.

ಇದಾದ ನಂತರ ಅಂತಃಪುರ ಪರಿವಾರ ಸಮೇತರಾಗಿ ಜಲಕ್ರೀಡೆಯಲ್ಲಿ ತೊಡಗಲು ನಿರ್ಧರಿಸುತ್ತಾರೆ. ಇಲ್ಲಿ ಇನ್ನೊಂದು ವಿಶೇಷತೆಯೂ ಇದೆ. ಇದ್ದಕ್ಕಿದ್ದ ಹಾಗೇ ಇವರು ನಿರ್ಧರಿಸಿದ ತಕ್ಷಣ ಅದೇ ಸಮಯಕ್ಕೆ ಕೆಲವು ರಾಣಿಯರು ಅಲ್ಲಿ ಬಂದುಬಿಡುತ್ತಾರೆ. ಇದೊಂದು ಕಾವ್ಯ ತಂತ್ರ.
ಅವರ ವರ್ಣನೆ ಗಮನಿಸಿ

ಒತ್ತಿದ ತಳ್ಕು
ಎತ್ತಿದ ತೞೆ
ಮುತ್ತಿನ ಪೊಸದುಡುಗೆ
ತಳಿತ ಸೋರ್ಮುಡಿ
ಮನಮಂ ಪತ್ತಿಸಿ ಜೊತ್ತಿಸಿ
ಮದನೋನ್ಮತ್ತೆಯರ್ ಅವಯವದೆ ಬಂದರ್
ಅರಸಿಯರರೆಬರ್ (೫.೫೯)

ಬಳಿದುಕೊಂಡ ಗಂಧವೇ ಲೇಪನ, ಹಿಡಿದುಕೊಂಡ ಛತ್ರಿಗಳು ಮುತ್ತಿನ ಹೊಸ ಒಡವೆಗಳು, ಚಿಗುರು ಸಿಕ್ಕಿಸಿಕೊಂಡ ಜಾರುಗಂಟು! ಇವೆಲ್ಲಾ ಮನಸ್ಸಿಗೆ ಅಂಟಿಕೊಂಡು ಮರುಳು ಮಾಡಲು ಕಾಮದಿಂದ ಮದಿಸಿದ ಅರಸಿಯರು ಲೀಲೆಯಿಂದ ಬಂದರು. ಅನ್ನುವುದನ್ನು ಹೇಳಿದ ತಕ್ಷಣ ಎಲ್ಲಿಂದ ಮುಂದೆ ಕಣ್ಣಿಗೆ ಕಟ್ಟುವ ಚಿತ್ರದಲ್ಲಿ ಸಿಕ್ಕಿದ ಸಹೃದಯರು ಆ ಲೀಲೆಯಲ್ಲಿ ತಲ್ಲೀನರಾಗಿಬಿಡುವರೋ ಎಂಬ ಚಿಂತೆಯಲ್ಲೆ ಕವಿ ಮುಂದಿನ ಪದ್ಯದಲ್ಲಿ ಎಲ್ಲವನ್ನೂ ಬಿಡಿಸಿ ಬಿಡಿಸಿ ಸ್ಪಷ್ಟಪಡಿಸುತ್ತಾನೆ! ಮರುಳುತನದಿಂದ ಹೊರಗೆ ಕರೆದುಕೊಂಡು ಬರುತ್ತಾನೆ. ಇಲ್ಲಿ ಕೇವಲ ಅರಿಕೇಸರಿಗಷ್ಟೇ ಅಲ್ಲ ತಲ್ಲೀನತೆಯಿಂದ ಬಿಡುಗಡೆ ನಮಗೂ ಕೂಡಾ ಅನ್ನುವುದನ್ನು ಮುಂದಿನ ಪದ್ಯ ಸುಂದರವಾಗಿ ತಿಳಿಸುತ್ತದೆ!

ಇದು ಮೃದು ಕಳಹಂಸೆಯ ರವಂ
ಇದು ನೂಪುರ ನಿನದಂ
ಇದು ರಥಾಂಗಯುಗಂ
ಮತ್ತಿದು ಕುಚಂ
ಇದು ಸರಸಿಜಮ್
ಇದು ಮೊಗಮೆನಿಸಿದುದು
ನೆರೆದ ಪೆಂಡಿರ ತಂಡಂ (೫.೬೦)

ಈ ಪದ್ಯದ ಭಾವಾರ್ಥಕ್ಕೆ ಆಚಾರ್ಯ ಡಿ ಎಲ್ ನರಸಿಂಹಾಚಾರ್ಯರು “ಸ್ತ್ರೀಯರ ಅಂದಿಗೆ ರವ, ಕುಚ, ಮುಖಗಳನ್ನು ಹಂಸ ರವಕ್ಕೆ ರಥಾಂಗಯುಗಕ್ಕೆ ತಾವರೆಗೆ ಹೋಲಿಸುವುದು ರೂಢಿ. ಇಲ್ಲಿಯಾದರೆ ಈ ಉಪಮಾನಗಳಿಗಿಂತ ಉಪಮೇಯಗಳೇ ಸೌಂದರ್ಯದಲ್ಲಿ ಮಿಗಿಲಾಗಿ ಎರಡಕ್ಕೂ ಭೇದವನ್ನು ಸೂಚಿಸುತ್ತಿದ್ದವು ಎಂದು ಭಾವಿಸಬೇಕು” ಎಂದಿದ್ದಾರೆ. ಆದರೆ ಭೇದ ಅಭೇದಗಳೆಂಬ ತರ್ಕದ ಆಚೆ ಏಕಕಾಲದಲ್ಲಿ ಸಹೃದಯ ಮತ್ತು ಅರಿಕೇಸರಿ ತಲ್ಲೀನತೆಯಿಂದ ಹೊರಬರುವುದಕ್ಕೆ ಎಚ್ಚರಿಕೆಯ ಹಾಗೆ ಈ ಸಂದರ್ಭ ಕೆಲಸ ಮಾಡುತ್ತಿದೆ. ಕೊನೆಗೆ ಎಲ್ಲರೂ ಜಲಕ್ರೀಡೆಗೆ ಮುಂದಾದರು. ಮುಂದಿನ ಆ ನೀರಾಟದ ಚಿತ್ರ ಕಣ್ಣುಹೊಕ್ಕು ಎಂದೂ ಮರೆಯಾಗದಂತೆ ಬಹುಸೂಕ್ಷ್ಮವಾಗಿ ಉಳಿದುಬಿಡುವಂತೆ ಚಿತ್ರಿಸಿಬಿಡುತ್ತಾನೆ.

ನೀಲದ ಬೆಳ್ಳಿಯ ಗಾಡಿಯಿಮ್
ಈ ಲಲಿತಾಂಗಿಯರ ಕಣ್ಗೆ ಪೋಲ್ತು
ಆಮಿಂ ಕಣ್ಣೇಳಿದಮಾಗಿರೆಮ್ ಎಂದು
ಎಳೆವಾಳೆಗಳ್ ಓಡಿದುವು ಬಾಲೆಯರ್ ಪುಗುವಾಗಳ್ (೫.೬೧)

ಇಲ್ಲಿ ಮತ್ತೊಂದು ಕಣ್ಣಿಗೆ ಕಟ್ಟುವ ಚಿತ್ರವಿದೆ. ಯಮುನಾ ನದಿಯಲ್ಲಿ ರಾಣಿಯರು ಲೀಲೆಯಿಂದ ಮದೋನ್ಮತ್ತರಾಗಿ ಜಾರುಗಂಟು ಹಾಕಿ ನೀರಿಗೆ ಕಾಲಿಟ್ಟ ಕ್ಷಣದಲ್ಲೇ ನದಿಯಲ್ಲಿದ್ದ ಬಾಳೆ ಮೀನುಗಳು ಇವರ ಸೌಂದರ್ಯದ ಮುಂದೆ ನಾವು ಹೀನವಾದೆವಲ್ಲಾ ಅಂತ ಅಲ್ಲಿಂದ ಜಾಗ ಖಾಲಿ ಮಾಡಿದವಂತೆ. ರಾಣಿಯರು ನೀರಿಗೆ ಇಳಿದ ತತ್ ಕ್ಷಣದಲ್ಲಿ ಅರ್ಜುನ ಅವರಿಗೆ ದಾರಿ ತೋರುವ ಕೆಲಸ ಪ್ರಾರಂಭಿಸಿದ. ಅಷ್ಟೇ ಅಲ್ಲದೆ ನೀರಿನ ಆಳವನ್ನು ಅವನ ಸತಿಯ ಅವಯವದ ಮೂಲಕ ಅಳತೆ ಮಾಡಿ ಹೇಳುತ್ತಾನೆ. ಅತ್ತಕಡೆ ನೀರು ಆಳವೆಂದು ಇತ್ತ ಕಡೆಯೇ ನಿಂತು, ಕಾಂತೆಗೆ ಮೊಳಕಾಲು ಮುಳುಗುವುದು, ಎದೆ ಮುಳುಗುವುದು, ಕಂಠ ಮುಳುಗುವುದು ಎಂಬ ಅಳತೆಯಲ್ಲಿ ಪ್ರೀತಿಯಿಂದ ಹೇಳುತ್ತಾ ಹೋಗುತ್ತಾನೆ (೫.೬೨)

ಶೃಂಗಾರದಿಂದ ಪ್ರಾರಂಭವಾಗಿ ರೌದ್ರಕ್ಕೆ ಚಲನೆ ಪಡೆದು ಭಯಾನಕ ಚಿತ್ರಗಳನ್ನು ಸೃಷ್ಟಿಸಿ ಬಿಡುತ್ತದೆ. ಆ ಶೃಂಗಾರ ರಸದ ಭಾಗವು ಬೆಳೆಯುತ್ತಾ ಬೆಳೆಯುತ್ತಾ ರಾಸನೃತ್ಯದ ಸಂದರ್ಭದ ಹಾಗೆ ಭಾಸವಾಗಿಬಿಡುತ್ತದೆ.

ಆದಲೆ ನೀರ್ ಗುಂಡಿತ್ತು ಎಂದು
ಈದಲೆಯೊಳೆ ನಿಂದು
ಸತಿಗೆ (ಸುಭದ್ರೆ ಇರಬಹುದೇ?) ಹರಿಗಂ ತೋಱುತ್ತಾದರದೆ
ಜಾನುದಘ್ನಮ್ ಉರೋದಘ್ನಮ್ ಕಂಠದಘ್ನಮ್
ಎಂಬ ಅಳವಿಗಳಂ (೫.೬೨)

ಅವರು ನೀರಿಗಿಳಿದ ನಂತರ ನೀರಿನ ಅಲೆಯಲ್ಲಾದ ಬದಲಾವಣೆ ಮತ್ತು ನೀರಿನಿ ಪ್ರತಿಬಿಂಬಗಳ ವರ್ಣನೆಯೊಂದನ್ನು ಗಮನಿಸಿ. ಇದೆಲ್ಲವೂ ಒಂದಕ್ಕೊಂದು ಪೂರಕವಾಗಿ ಪರಿಸರವನ್ನು ಬಹುಸೂಕ್ಷ್ಮತೆಯಿಂದ ಕಾವ್ಯತಂತ್ರವನ್ನು ಬಳಸಿ ಕಟ್ಟುತ್ತಾ ಹೋಗುತ್ತಾನೆ. ಪ್ರೊ. ಶಿವರಾಮಯ್ಯನವರು ಹೇಳುವಂತೆ “ಇದೊಂದು ಒಲಂಪಿಕ್ಸ್ ಕ್ಯಾಮರಾ ಕಣ್ಣು ಸೆರೆ ಹಿಡಿದಂತೆ ಇರುವ ದೃಶ್ಯ.”

ವಚನ : ಅಂತು ಜಗುನೆಯ (ಯಮುನೆಯ) ಮಡುವಂ ತಮ್ಮರಸಿಯರ ವಿಕಟ ನಿತಂಬಬಿಂಬಂಗಳ ಘಟ್ಟಣೆಯೊಳಮರೆ ಬಗೆದೊಗೆದ ಮೊಲೆಗಳಳ್ಳೇಱಿನೊಳಳ್ಳಾಡಿ ತಳ್ಳಂಕಗುಟ್ಟಿ ನೀರಾಟಮಾಡುವಾಗಳ್

ಪೊಸತಲರ್ದೊಂದು ತಾವರೆಯೆ ಗೆತ್ತು ಮುಖಾಬ್ಜಮನ್
ಒಂದು ತುಂಬಿ ಚುಂಬಿಸೆ
ಸತಿ ಬೆರ್ಚಿ
ಬೆಳ್ಪೆಳಿಸಿ ನೋೞ್ಪುದುಮ್
ಆಕೆಯ ಕಣ್ಣ ಬೆಳ್ಪುಗಳ್ ಪಸರಿಸೆ
ತುಂಬಿಗಳ್
ಕುವಳಯಂಗಳರಲ್ದುವೆ ಗತ್ತು
ಮತ್ತೆಯುಂ ಮುಸುಱುವುದುಂ
ಗುಣಾರ್ಣವನನ್ ಆಗಳ್ ಅವಳ್ ಭಯದಿಂದಮಪ್ಪಿದಳ್ (೫.೬೩)

ಅವಳ ಮುಖವನ್ನು ಆಗತಾನೆ ಅರಳಿದ ತಾವರೆಯೆಂದು ಭ್ರಮಿಸಿ ಒಂದು ದುಂಬಿಯು ಚುಂಬಿಸಲು ಕಾಂತೆ ಹೆದರಿ ನಡುಗಿ ನೋಡುತ್ತಲೂ ಅವಳ ಕಣ್ಣಿನ ಬಿಳುಪುಗಳು ಹಬ್ಬಲು ಬೆಳ್ದಾವರೆಗಳು ಅರಳಿವೆ ಎಂದು ಭ್ರಮಿಸಿ ದುಂಬಿಗಳು ತಿರುಗಿ ಮತ್ತಿಕೊಳ್ಳವಾಗ ಅವಳು ಹೆದರಿ ಅರ್ಜುನನನ್ನು ತಬ್ಬಿಕೊಂಡಳು.

ಅಸಿಯಳ್
ಅವುಂಕಿ ಕೆಂದಳದೊಳೊತ್ತುವ ನೀರ್
ಮೊಗಮಂ ಪಳಂಚಿ
ಬಂಚಿಸಲ್ ಇನಿಸಾನುಮಂ ಮೞುಗಿದಾಗಡೆ
ಭೋಂಕನೆ ಬಂದ ಬಾಳೆಮೀನ್ ಮುಸುಱಿ
ನಿರಂತರಂ ಕರ್ದುಕೆ
“ಸತ್ಕವಿಯೊಳ್ ಸಮನಾಗಿ
ಮಾರ್ಗಮಂ ಪೊಸಯಿಸಿ
ದೇಸೆಯಂ ಪೊಸತು ಮಾಡಿದಳೊರ್ವಳ್
ಅಪೂರ್ವ ರೂಪದಿಂ!” (೫.೬೪)

ದೇಸೀ ಮಾರ್ಗಗಳನ್ನು ಮಿಶ್ರಣಗೊಳಿಸುವ ಅವನ ಬಹಳ ಇಚ್ಛೆಯ ನಿಷ್ಠೆಯ ಮಾತಾದ “ದೇಸಿಯೊಳ್ ಪುಗುವುದು, ಪೊಕ್ಕಿ ಮಾರ್ಗದೊಳೆ ತಳ್ವುದು” ಎನ್ನುವುದಕ್ಕೆ ಈ ಪದ್ಯವೂ ಸಹಾ ಒಂದು ಉದಾಹರಣೆ. ವರ್ಣನೆಯಾಗುತ್ತಿರುವುದು ಶೃಂಗಾರ ಅಲ್ಲಿಯೂ ಕಾವ್ಯ ರಚನೆಯ ಉದ್ದೇಶ ಬೆಂಬಿಡದಂತೆ ಅವನ ತಲೆಯಲ್ಲಿಯದೆ. ಪ್ರಜ್ಞಾಪೂರ್ವಕವಾಗಿ ಕಾವ್ಯದ ಭಾಗಗಳನ್ನು ನಡೆಸಿದ್ದಾನೆ ಅನ್ನುವುದಕ್ಕೆ ಇದೂ ಒಳ್ಳೆಯ ಉದಾಹರಣೆ.

ಆ ಕೃಶಾಂಗಿಯು ಅಮುಕಿ ಕೆಂಪಾದ ಅಂಗೈಗಳಿಂದ ಸೂಸುವ ನೀರು ಮುಖವನ್ನು ತಾಗಲು ಒಬ್ಬಳು ತಪ್ಪಿಸಿಕೊಳ್ಳುವುದಕ್ಕಾಗಿ ಒಂದಿಷ್ಟು ಮುಳುಗಿದಾಗ ಅವಳನ್ನು ತಪ್ಪಿಸಿಕೊಳ್ಳಲು ಜಾಗ ಕೊಡದೆ ಒಂದು ಬಾಳೆಮೀನು ಅವಳನ್ನು ಕಚ್ಚುತ್ತಿರುವುದು, ಕವಿಯೊಬ್ಬ ಮಾರ್ಗ ಶೈಲಿಯನ್ನು ಹೊಸದಾಗಿಸಿ ದೇಸೀ ಶೈಲಿಯನ್ನು ಅಪೂರ್ವ ಮಾಡಿದ ಹಾಗೆ ಕಾಣಿಸಿತು.

ಇಲ್ಲಿಂದ ಮುಂದಿನ ಕೆಲವು ಪದ್ಯಗಳ ವಿವರಣೆಗೆ ಹೋಗದೆ ನೇರ ಪಠ್ಯವನ್ನು ಕೊಡುವೆ. ಅದರಲ್ಲಿನ ವರ್ಣನೆಗಳನ್ನೊಮ್ಮೆ ಗಮನಿಸಿ…

ಆ ಸಕಳ ಸ್ತ್ರೀ ನಿವಹದ
ಪೂಸಿದ ಮೃಗಮದದ
ಮುಡಿಯ ಪೂವಿನ ರಜದಿಂ
ವಾಸಿಸಿದ ಕದಡೆಂಬಾವಸದೊಳ್ ಸೊರ್ಕಿ
ಬೆಂಡುಮಗುೞ್ದುವು ಮೀಂಗಳ್ (೫.೬೫)

ಮುಡಿ ಬಿಡೆ ಪರೆದ ಎಸೞ್ಗಳ
ಪೊಸದುಡಿಗೆಯ ಮುತ್ತುಗಳ
ಕುಚದ ಸರಿಕಂಡದ
ಬೆಳ್ಪು
ಒಡನೊಡನೆಸೆದಿರೆ
ಜಗುನೆಯ ಮಡು (ಶ್ಲೇಷೆ ಗಮನಿಸಿ)
ಗಂಗೆಯ ಮಡುವನ್
ಇನಿಸನುಕರಿಸಿರ್ಕುಂ (೫.೬೬)

ವಚನ : ಅಂತು ನಾಡೆಯುಂ ಪೊೞ್ತು ಜಲಕೇಳೀ ಲೀಲೆಯೊಳ್ ಮಱೆದು ನಿಮಿರ್ದ ಕುರುಳ್ಗಳುಂ, ಕೆಂಪೇಱಿದ ಕಣ್ಗಳುಂ, ಬಿಳ್ಪೇರಿದ ಬಾಯ್ದೆರೆಗಳುಂ, ಪಳಂಚಿದ ಬಣ್ಣಗಳುಮ್ ಎಸೆಯೆ ಸೊಗಯಿಸುವ ನಿಜವಧೂಜನಂಬೆರಸು ಪೊರಮಟ್ಟಾಗಳ್

ತೆಱಪುವಡೆದು
ಅಂಗಜಂ ಕಯ್ಸೆರೆಗೊಳೆ ನೋಟಕರ ಮನಮನ್
ಆಗಳ್ ಕೊಳದಿಂ ಪೊರಮಡೆ
ಜಿಗಿಲ್ತು ಪತ್ತಿದ ಕುಱುವಡಿಗಳೆ (ಉಟ್ಟ ತುಂಡುಮಡಿ)
ಮೆಱೆದವು ಅವರ ನಾಣ್ಗಳ ತೆಱಪಂ ! (೫.೬೭)

ವಚನ : ಆಗಳ್ – ಮಡಿಯ ಭಂಡಾರದ, ಮಾಣಿಕ್ಯ ಭಂಡಾರದ ನಿಯೋಗಿಗಳ್ ತಂದು ಮುಂದಿಟ್ಟ ಪೊನ್ನ ಪಡಲಿಗೆಗಳೊಳ್ ಒಟ್ಟಿದ ದೇವಾಂಗ ವಸ್ತ್ರಂಗಳುಮನ್, ಅನೇಕ ವಿಧದ ತೊಡಿಗೆಗಳುಮನ್, ಎನಿತಾನುಂ ತೆಱದ ಸುಗಂಧ ದ್ರವ್ಯಂಗಳುಮನ್ ಅರಸಿಯರ್ಗಂ ಅರಸುಮಕ್ಕಳ್ಗಮ್ ಇತ್ತು, ತಾವಿರ್ಮರುಮ್ (ಕೃಷ್ಣ ಮತ್ತು ಅರ್ಜುನರು) ಉಟ್ಟುಂ ತೊಟ್ಟುಂ ಪೂಸಿಯುಂ ನೆಱೆಯೆ ಕಯ್ಗೆಯ್ದು, ದಿವ್ಯ ಆಹಾರಂಗಳನ್ ಆರೋಗಿಸಿ, ಕಯ್ಗಟ್ಟಿಗೊಂಡು, ತಂಬುಲಂಗೊಂಡಿ ಬೞಿಯಂ

ಈ ಭಾಗದ ವಚನಪೂರ್ಣ ಪದ್ಯದ ವಿವರಣೆಗಳು ಶೃಂಗಾರದ ಬುಹುಮುಖ್ಯ ಘಟ್ಟವನ್ನು ಮುಟ್ಟಿ ಇಳಿದುಬಿಡುತ್ತದೆ.ಇಲ್ಲೆಲ್ಲಾ ಬಹು ವರ್ಣನೆಗಳು ಇರುವುದರಿಂದ ಇದನ್ನೊಂದಷ್ಟು ಸೂಕ್ಷ್ಮವಾಗಿ ನೋಡುವುದು ಒಳಿತು.

ಅನುಭವವೆನ್ನುವುದು ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಿಂದ ದೇಹಕ್ಕೆ ಬರುತ್ತದೆ. ಇವುಗಳನ್ನು ಒಂದೊಂದಾಗಿ ವರ್ಣಿಸಿರುವ ಭಾಗವಿದು. ಸಾಮಾನ್ಯವಾಗಿ ಯಾವುದೇ ಒಂದು ಭಾವ ಅಥವಾ ರಸ ನೇರವಾಗಿ ಮನಸ್ಸನ್ನು ತಟ್ಟುವುದೇ ಆದರೂ ಅದನ್ನು ಬಿಡಿಸಿ ಬಿಡಿಸಿ ಹೇಳುವಾಗ ಅದರ ಪರಿಣಾಮ ಬಹಳ ತೀವ್ರವಾಗಿ ಇರುತ್ತದೆ. ಈ ತೀವ್ರತೆಯನ್ನು ತರುವುದಕ್ಕಾಗಿಯೇ ಪಂಪ ಈ ಭಾಗದಲ್ಲಿ ಯಾವುದೂ ಅನುಚಿತ ಅನಿಸದ ಹಾಗೆ ವಿವರಣೆ ಕೊಡುತ್ತಾ – ಉಪಮೆ, ಪ್ರತಿಮೆ ಮತ್ತು ರೂಪಕಗಳಲ್ಲೇ ಅನುಭವವನ್ನು ಸಶಕ್ತವಾಗಿ ಓದುಗನಿಗೆ ಹಸ್ತಾಂತರ ಮಾಡುತ್ತಾನೆ.

ಯಮುನಾನದಿಯ ಮೇಲೆ ಹಾದುಬರುತ್ತಿರುವ ಗಾಳಿಯ ವರ್ಣನೆಯಿಂದ ಹಿಡಿದು ಅಲ್ಲಿಗೆ ಎಲ್ಲರೂ ಬಂದು ಜಲಕ್ರೀಡೆ ಆಡುವಾಗಿನ ಸಂದರ್ಭದವರೆಗಿನ ಎಲ್ಲಾ ವರ್ಣನೆಯನ್ನೊಮ್ಮೆ ಗಮನಿಸಿ ಇದೆಲ್ಲವೂ ಅಮೂರ್ತದಿಂದ ಮೂರ್ತಕ್ಕೆ ತರುವ ಬಹುದೊಡ್ಡ ಪ್ರಯತ್ನ. ಕೊನೆಗೆ ಅವನಿಗೇ ವರ್ಣಿಸಲು ಸಾಲದೆ ದೇಸೀ ಮಾರ್ಗ ಅನ್ನುವ ಮಾತನ್ನು ತರುತ್ತಾನೆ. ಇವುಗಳು ಸಹಾ ಓದುಗ ಪ್ರಜ್ಞೆಯಿಂದ ಆಗುವ ವಿಭಾಗಕ್ರಮ. ಕೇವಲ ಕಾವ್ಯದ ಹೊರರೂಪ ಅದನ್ನು ನಿರ್ಧರಿಸಲಾಗದು. ಇಲ್ಲಿನ ವರ್ಣನೆಗಳು ಅನುಭವಕ್ಕೆ ಬಂದಿರುವುದೇ ಆದರೆ ಅಲ್ಲಿನ ವರ್ಣನೆಯ ಮೂಲಕ ತನ್ನ ಯಶಸ್ವಿಕಾರ್ಯ ಮಾಡಿ ಬಿಡಲಾರದಂತೆ ಬಂಧ ಬೆಸೆಯುತ್ತದೆ. ಉದಾಹರಣೆಗೆ ಕೊನೆಯ ಭಾಗದ ವಚನದಲ್ಲಿನ ವಿವರದಲ್ಲಿನ ಒಂದು ಸಾಲನ್ನು ಗಮನಿಸಿ – ದಿವ್ಯ ಆಹಾರಂಗಳನ್ ಆರೋಗಿಸಿ – ಅನ್ನುವಲ್ಲಿನ ‘ದಿವ್ಯ’ ವಿಶೇಷಣವನ್ನು ‘ಶ್ರೇಷ್ಠ’ ಎಂದು ತೆಗೆದುಕೊಳ್ಳದೇ ಸಹಜವಾಗಿಯೇ ‘ಶುದ್ಧ’ವಾದ ಆಹಾರವನ್ನು ಸೇವಿಸಿ ಎಂದು ಅರ್ಥ ಮಾಡಿಕೊಂಡರೂ, ಆ ಆಹಾರ ಸೇವನೆಯ ಸಂದರ್ಭದ ಅಡಿಯಲ್ಲಿ ಪಂಪ ಓದುಗನ ಅನುಭವದೊಂದಿಗೆ ಸಾಧಿಸುವ ಸಕೀಲ ಸಂಬಂಧವು ಬಹಳ ಮುಖ್ಯ ಮತ್ತು ಸೂಕ್ಷ್ಮವಾದದ್ದು.

ಒಮ್ಮೆ ನೀರಿನಲ್ಲಿ ಈಜಿದವರಿಗೆ ಅಥವಾ ನೀರಿನಲ್ಲಿ ಒಂದಷ್ಟು ಸಮಯ ಆಡಿ ಹೊರಬಂದವರಿಗೆ ತತ್ ಕ್ಷಣದಲ್ಲಿ ಆಗುವ ಹೊಟ್ಟೆ ಹಸಿವಿನ ಪರಿಚಯ ಇದ್ದರೆ ಈ ಸಾಲು ಅದನ್ನು ಧ್ವನಿಸುತ್ತಿದೆ ಅನ್ನುವುದು ಕಾವ್ಯ ಸಂದರ್ಭ ಮತ್ತು ಓದುಗನ ಗ್ರಹಿಕೆಗಳು ಬಂಧ ಬೆಸೆದುಬಿಡುತ್ತದೆ. ಎಲ್ಲಾ ವರ್ಣನೆಗಳಲ್ಲೂ ಅರ್ಜುನ (ಅರಿಕೇಸರಿ) ಇದ್ದು ಕೊನೆಯಲ್ಲಿ ಕೃಷ್ಣ ಬಂದು ತನ್ನ ಕಥೆ ಹೇಳಲು ಕರೆದುಕೊಂಡು ಹೋಗುತ್ತಾನೆ.

ಒಂದು ಅನುಭವದ ಹಸ್ತಾಂತರ ಕೇವಲ ವಸ್ತು, ಭಾಷೆ, ಭಾವ, ಪ್ರತಿಮೆ, ರೂಪಕ, ಉಪಮೆ, ಶೈಲಿಗಳನ್ನು ಒಳಗೊಂಡು ಸಾಧಿಸುವ ರಸದ ಆಯ್ಕೆ ಮಾತ್ರ ಸೀಮಿತಗೊಳ್ಳದೆ ಅನುಭವವು ಯಶಸ್ವಿಯಾಗಿ ಹಸ್ತಾಂತರ ಆಗುವ ಕ್ರಮದಲ್ಲಿನ ರಚನೆ ಉಳಿದ ಮೇಲಿನ ಎಲ್ಲದರ ಶ್ರಮವನ್ನು ಸಾರ್ಥಕಗೊಳಿಸುತ್ತದೆ. ಉತ್ತಮ ಕವಿ ರೂಪಕಗಳಲ್ಲಿಯೇ ಮಾತಾಡುತ್ತಾನೆ ಎನ್ನುವ ಏಟ್ಸ್ ನ ಅನುಭವದ ಮಾತೂ ಇಲ್ಲಿ ನೆನಪಾಗದೆ ಇರದು.

ಮುಕ್ತಾಯ…