ಇದನ್ನೆಲ್ಲಾ ನಾನೀಗ ಬರೆಯುವಾಗಲೂ ಇದೆಲ್ಲ ಕನಸೇ ಅನಿಸುತ್ತದೆ, ಕಂಡು ಕೇಳರಿಯದ ಊರಿನಿಂದ ಬಂದು, ನನ್ನೂರಿನಿಂದ ಹೋಗುವಾಗ ಅಣ್ಣಂದಿರಾಗಿ ಹೋಗಿದ್ದರು. ಹೋಳಿಗೆ ಬಣ್ಣ ಕಳಿಸುತ್ತಿದ್ದೆ, ದಶರೆಗೆ ಬನ್ನಿ, ರಕ್ಷಾಬಂಧನಕ್ಕೆ ರಾಖಿ, ಸಂಕ್ರಾಂತಿಗೆ ಎಳ್ಳು, ಪತ್ರಗಳಲ್ಲಿ ಒಣಗಿದ ಹೂವು ಎಲೆಗಳು. ಅದೊಂದು ಬೇರೆಯದೇ ಲೋಕವಾಗಿತ್ತು. ಮೂವರಲ್ಲಿ ಜಾಸ್ತಿ ಪತ್ರ ಬರೆಯುತ್ತಿದ್ದುದು ದೆಹಲಿಯ ಅಶೋಕ್ ಕುಮಾರ್ ಮತ್ತು ಅಕ್ಬರ್ ಖಾನ್ ಅವರು. ಜೀತೇಂದ್ರ ಪ್ರಸಾದ್ ಅವರ ಪತ್ರ ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಬರುತ್ತಿತ್ತು. ನಾನು, ತಂಗಿ ಪತ್ರ ಬರೆಯುತ್ತಿದ್ದೆವು.
ಯೋಧರೊಟ್ಟಿಗೆ ಬೆಸೆದ ಅಪರೂಪದ ಬಂಧದ ಕುರಿತು ಅಮಿತಾ ರವಿಕಿರಣ್‌ ಬರಹ ನಿಮ್ಮ ಓದಿಗೆ

ಬಹುಶಃ ಇದು ಎಲ್ಲ ಮಧ್ಯಮ ವರ್ಗದವರ ಮನೆಯ ಕತೆ ಇರಬಹುದು. ಆ ಮನೆಗಳಲ್ಲಿ ಒಂದಷ್ಟು ಪಾತ್ರೆಸಾಮಾನು ಇರುತ್ತವೆ, ಒಂದೇ ಹದದ ತಟ್ಟೆಗಳು, ಅದಕ್ಕೆ ಹೊಂದಿಕೆಯಾಗುವಂತಹ ಬಟ್ಟಲುಗಳು, ಗಾಜಿನ ಡಿನ್ನರ್ ಸೆಟ್ಟುಗಳು, ಚಂದದ ಚಹಾ ಕಪ್ಪುಗಳು, ಬಣ್ಣ ಬಣ್ಣದ ಆ ಫೈಬರ್ ಪ್ಲೇಟುಗಳು, ಆದರೆ ಕೇವಲ ಅತಿಥಿಗಳು ಬಂದಾಗ ಅವರಿಗೆ ಬಡಿಸಲು, ಉಣಿಸಿ, ತಿನಿಸಲು ಎಂದೇ ಇಂಥ ಚಂದ ಚಂದದ ಪಾತ್ರೆಗಳನ್ನು ಅಲ್ಲೆಲ್ಲೋ ಅಟ್ಟದಲ್ಲಿ, ಗಾಜಿನ ಶೋಕೇಸಿನಲ್ಲಿ, ಒಮ್ಮೊಮ್ಮೆ ಗೋಣಿಚೀಲದಲ್ಲಿ, ಹಳೆ ಟ್ರಂಕುಗಳಲ್ಲಿ,ಅಥವಾ ಪಾತ್ರೆಗಳನ್ನು ಪೇರಿಸಿಡಲೆಂದು ಖರೀದಿಸಿದ ಕಪಾಟಿನಲ್ಲಿ ‘ನೀವು ಸೌಖ್ಯವಾಗಿರಿ’ ಎಂದು ಹಾರೈಸಿ ಅವನ್ನು ಬಳಸದೆ ಇಡಲಾಗುತ್ತದೆ.

ಉಳಿದವರ ಮನೆ ಕಥೆ ಗೊತ್ತಿಲ್ಲ. ನಮ್ಮ ಮನೆಯಲ್ಲಂತೂ ಅತಿಥಿಗಳು ಬಂದಾಗಲೂ ಅಮ್ಮ,ಅಜ್ಜಿ, ಅತ್ತೆ ಯಾರೊಬ್ಬರೂ ಈ ಕೂಡಿಟ್ಟ ಪಾತ್ರೆಗಳನ್ನು ಚಂದಮಾಡಿ ಜೋಡಿಸಿ ಅದರಲ್ಲಿ ಊಟ ತಿಂಡಿ ಬಡಿಸಿದ್ದನ್ನ ನೋಡಿದ್ದು ತೀರಾ ಕಡಿಮೆ. ಅತಿಥಿಗಳ ಸಂಖ್ಯೆ ಜಾಸ್ತಿ ಇದ್ದಾಗ, ಮತ್ತೆ ತೋಟದಿಂದ ಬಾಳೆ, ಮುತ್ತುಗದ ಎಲೆ, ತರಿಸಿ ಅಥವಾ ಬೇಸಿಗೆಯಲ್ಲಿ ಮಾಡಿಟ್ಟುಕೊಂಡ ಪತ್ರಾವಳಿಗಳ ಮೇಲೆಯೇ ಊಟ ಬಡಿಸಿ, ಪಾತ್ರೆಗಳನ್ನು ತೊಳೆಯುವ ಕೆಲಸ ಕಡಿಮೆ ಮಾಡಿಕೊಳ್ಳುತ್ತಿದ್ದರು. ಆ ಆಕರ್ಷಕ ಪಾತ್ರೆಗಳು ಅಟ್ಟದ ಮೇಲೆ ಕುತ್ತಿಗೆಗೆ ಉರುಲು ಬಿಗಿಸಿಕೊಂಡ ಗೋಣಿಯಲ್ಲಿ ಉಸಿರುಕಟ್ಟಿಸಿಕೊಂಡು ತಮ್ಮ ಅಸ್ತಿತ್ವದ ಉಳಿವಿಗೆ ಹೋರಾಟ ಮಾಡಲೂ ಆಗದಷ್ಟು ಮೌನವಾಗಿ ಹೋಗಿದ್ದವು. ಸಿಟ್ಟು, ಸೆಡವು, ಅಸಮಾಧಾನ ತೋರಿಸಲು ಪಾತ್ರೆ ಕುಟ್ಟುವ ಮನೆಯ ಹೆಣ್ಣುಮಕ್ಕಳೇ ಈ ಒಂದಿಷ್ಟು ಪಾತ್ರೆಗಳನ್ನು ಮಾತ್ರ ಎಳೆಯ ಮಕ್ಕಳನ್ನು ಜತನದಿಂದ ಕಾಯುವಂತೆಯೇ, ‘ಹೇ ಸುಂದರ ಪಾತ್ರೆಗಳಾ ಮೈ ನೋವು ಮಾಡಿಕೊಳ್ಳಬೇಡಿ’ ಎಂದು ಬಿಟ್ಟುಬಿಟ್ಟಿದ್ದಾರಲ್ಲ ಎಂಬ ನಿಟ್ಟುಸಿರಲ್ಲೆ ಇರಬಹುದಾ ಅವು,ಎಂದು ನಾನು ಅಟ್ಟ ನೋಡಿದಾಗೆಲ್ಲ ಆಲೋಚನೆ ಮಾಡುತ್ತಿದ್ದೆ.

ಈ ಕನಸುಗಳಿಗಂತು ಹೊತ್ತು ಗೊತ್ತಿಲ್ಲ ಸಿಕ್ಕಾಪಟ್ಟೆ ಸುಸ್ತಾಗಿ ಹಾಸಿಗೆಗೆ ಬೆನ್ನು ಹಚ್ಚಿದ್ದೇನಷ್ಟೇ, ಆಗಲೇ ಏನೇನೋ ಚಿತ್ರ ವಿಚಿತ್ರ, ಅಕರಾಳ ವಿಕರಾಳ,ಅಳತೆ ಆಕಾರ ಇಲ್ಲದ ಕನಸುಗಳು. ಮೊನ್ನೆ ಒಂದು ಕನಸು ಹೀಗಿತ್ತು, ಅಮ್ಮ ಕಟ್ಟಿಟ್ಟ ಆ ಗೋಣಿಯೊಳಗಿನ ಪಾತ್ರೆಗಳಿಂದ ಒಂದೊಂದೇ ನೆನಪುಗಳು ನಾ ಮುಂದು ನೀ ಮುಂದು ಎಂದು ನನ್ನಮುಂದೆ ಪ್ರಭಾತ್ ಫೇರಿ ನಡೆಸುತ್ತಿದ್ದವು.

ಒಂದಷ್ಟು ನೆನಪುಗಳು ಎಷ್ಟು ದಿನ ಇಲ್ಲೇ ನಿನ್ನ ಮನಸಲ್ಲಿ ಇರೋದು, ನಮ್ಮನ್ನೂ ನೆನಪು ಮಾಡ್ಕೋ ಅನ್ನುತ್ತಿರುವಾಗಲೇ, ಇತ್ತ ಆ ಹಳೆಯ ಟ್ರಂಕಿನ ಮೇಲೆ ಅಮ್ಮ ಪೇರಿಸಿಟ್ಟ ಎಲ್ಲ ಹಾಸಿಗೆ ಸುರುಳಿಗಳನ್ನು ಕೆಳಕ್ಕೆ ಬಿಸಾಕಿ ಅಲ್ಲೊಂದಿಷ್ಟು ನೆನಪುಗಳು ಮೈಮುರಿಯುತ್ತ ಒಯ್ಯಾರವಾಗಿ ಎದ್ದು ನಿಂತವು.

ಅಯ್ಯೋ ಇಷ್ಟೊಂದು ನೆನಪುಗಳು. ಎಲ್ಲಿದ್ದವು ಇವು? ಇವನ್ನೆಲ್ಲ ಒಂದೊಂದಾಗಿ ಮುಟ್ಟಿ, ಒಮ್ಮೆ ನೆತ್ತಿ ತಟ್ಟಿ,ನೇವರಿಸಿ ಮುದ್ದು ಮಾಡಲೇಬೇಕು ಅನ್ನಿಸುವಷ್ಟು ಮುದ್ದಾಗಿ ಕಾಣುತ್ತಿದ್ದವು. ಇಲ್ಲವಾದಲ್ಲಿ ಈ ನೆನಪುಗಳೂ ಕೂಡ ಅಮ್ಮ ಅಜ್ಜಿ ಅತ್ತೆಯರು ಕಟ್ಟಿಟ್ಟ ಅಪರೂಪಕ್ಕೆ ಬರುವ ಅತಿಥಿಗಳಿಗೆಂದು ಕಾದಿಟ್ಟ ಆ ಚಂದದ ಪಾತ್ರೆಗಳಂತೇ ಆಗಿ, ನಿಜಕ್ಕೂ ಹೇಳುವ ಕೇಳುವ ಮನಸುಗಳು ಎದುರಿದ್ದಾಗ ಕೆಲಸ ಸುಲಭ ಮಾಡಿಕೊಳ್ಳಲು ನಾನು ಬಾಳೆ ಎಲೆ, ಡಿಸ್ಪೋಜೆಬಲ್ ಪ್ಲೇಟ್ ಗಳಂಥ ನೆನಪುಗಳನ್ನ ಅವರ ಮುಂದೆ ಹರವಿ ಮೈಗಳ್ಳಿ (ನೆನಪಗಳ್ಳಿ) ಆದರೆ ಎಂಬ ಭಯ. ಅದಕ್ಕೆ ಇನ್ನು ಸಮಯ ಸಿಕ್ಕಾಗೆಲ್ಲ ಈ ನೆನಪುಗಳೊಂದಿಗೆ ಮತ್ತೆ ನನ್ನದೇ ನೆನಪ ಹಾದಿಯಲ್ಲಿ ಮತ್ತೊಮ್ಮೆ ನಡೆಯಲು ಶುರು ಮಾಡುವ ಎಂದುಕೊಂಡಿರುವೆ. ಅಂಥದ್ದೇ ಒಂದು ನೆನಪು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.

೧೯೯೯, ಈ ಇಸವಿ ಹಲವು ಕಾರಣಗಳಿಂದ ವಿಶೇಷ, ಇದೇ ವರ್ಷ ಕಾರ್ಗಿಲ್ ಕದನವಾಗಿದ್ದು, ಅದೇ ಸೆಪ್ಟೆಂಬರ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆದಿದ್ದು. ಕನ್ನಡಿಗರಿಗೆ ಅದು ಇನ್ನೂ ವಿಶೇಷ ಚುನಾವಣೆ ಏಕೆಂದರೆ ಬಳ್ಳಾರಿಯಲ್ಲಿ ಸುಷ್ಮಾ ಸ್ವರಾಜ್ ಮತ್ತು ಸೋನಿಯಾ ಗಾಂಧಿ ಚುನಾವಣಾ ಕಣದಲ್ಲಿ ಮುಖಾಮುಖಿಯಾಗಿದ್ದರು. ಸುಷ್ಮಾ ಸ್ವರಾಜ್ ಅವರು ಕನ್ನಡದಲ್ಲಿ ಮಾಡಿದ ಒಂದು ಪುಟ್ಟ ಭಾಷಣದ ಕ್ಯಾಸೆಟ್ಟನ್ನು ಅದೆಷ್ಟು ಸಲ ನಾನು ಕೇಳಿದ್ದೇನೋ ಲೆಕ್ಕವಿಲ್ಲ, ಆ ಹಿಂದಿ ಶೈಲಿಯ ಕನ್ನಡವನ್ನ ನಾನು,ತಂಗಿ ಅನುಕರಣೆ ಮಾಡಲು ಪ್ರಯತ್ನಿಸುತ್ತಿದ್ದೆವು.

ಈ ಚುನಾವಣೆಗೆ ಎರಡು ದಿನಗಳ ಮುನ್ನ ನಮ್ಮ ಊರಿಗೆ ಮೊದಲ ಬಾರಿಗೆ ೩೫ ಜನ BSF ಯೋಧರ ತಂಡವೊಂದು ಆಗಮಿಸಿತ್ತು. ಸಂಜೆ ಮುಂಡಗೋಡದ ರಸ್ತೆಗಳಲ್ಲಿ ಅವರು ಸೇನೆಯ ಸಮವಸ್ತ್ರದಲ್ಲಿ ಮಾರ್ಚಫಾಸ್ಟ್ ಮಾಡುವುದನ್ನು ನೋಡಲು ಇಡೀ ಊರಿಗೆ ಊರೇ ನೆರೆದಿತ್ತು. ಬಾಲ್ಯದಿಂದಲೂ ಟಿವಿ, ಧಾರಾವಾಹಿ ಹುಚ್ಚಿದ್ದ ನನಗೆ ಫೌಜಿ, ಅಜನಬಿ, ಎಂಬ ಯೋಧರ ಬಗೆಗಿದ್ದ ಧಾರಾವಾಹಿಗಳನ್ನ ನೋಡಿ, ಆರ್ಮಿ ಮಂದಿಯ ಹೆಸರು ಕೇಳಿದರೆ ಮನದಲ್ಲಿ ಭಕ್ತಿ, ಆರಾಧನಾ ಭಾವ ಆವರಿಸಿಕೊಳ್ಳುತ್ತಿತ್ತು.

ಗೌರಿ ಹಬ್ಬದ ಮುನ್ನಾದಿನ ಆ ಯೋಧರು ಉಳಿದುಕೊಂಡಿದ್ದ ನಮ್ಮೂರಿನ ಲೋಕೋಪಯೋಗಿ ಇಲಾಖೆಯ ಬಂಗಲೆಯ ಪಕ್ಕ ಪೂಜೆಗೆ ಗರಿಕೆ ತರುವ ನೆಪ ಮಾಡಿಕೊಂಡು ನಾನು ಮತ್ತು ತಂಗಿ ಅವರನ್ನು ಮಾತಾಡಿಸಲು ಹೋದೆವು. ಆ ಧಾರಾವಾಹಿ, ಕಾರ್ಗಿಲ್ ಯುದ್ಧದ ಸುದ್ಧಿಗಳನ್ನು ಓದಿ, ಕೇಳಿ ಒಮ್ಮೆ ಆ ಯೋಧರೊಂದಿಗೆ ಮಾತಾಡಲೇ ಬೇಕು ಎನ್ನುವ ಹುಚ್ಚು ಹುಟ್ಟಿತ್ತು.

ಒಂದು ನೂರರ ಮೇಲೆ ಗರಿಕೆ ತೆಗೆದಿದ್ದೆ, ತಲೆಯಲ್ಲಿ ಹೇಗೆ ಮಾತಾಡಿಸಲಿ? ಬೈದು ಬಿಟ್ಟರೆ ? ಹೀಗೆ ನನ್ನಲ್ಲೇ ನಾನು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಿದ್ದಾಗ. ಹಿಂದಿಯಲ್ಲಿ ಒಂದು ಗಡಸು ದನಿ ಕೇಳಿಸಿತು ‘ ಏ ಕಿಸ್ಲೀಯೇ ತೋಡ್ ರಹೇ ಹೊ ಆಪ್’ ನಾನು ಕೂಡ ಹಿಂದಿಯಲ್ಲಿ ನಾಳೆ ಗೌರಿ ಪೂಜೆಗೆ ಎಂದೆ. ಅರೆ ! ಹಬ್ಬವಿದೆಯಾ ? ನಮಗೆ ಯಾವುದೂ ಗಮನಕ್ಕೆ ಬರುವುದಿಲ್ಲ, ಉತ್ತರ ಭಾರತದಲ್ಲಿ ನವರಾತ್ರಿ,ದೀಪಾವಳಿ ಜೋರು. ಗಣಪತಿ ಹಬ್ಬದ ಸಡಗರ ಅಷ್ಟಿಲ್ಲ ಅಂದು ನಕ್ಕರು.

ನನಗೆ ಯಾಕೆ ಹಾಗೆ ಕೇಳಬೇಕು ಅನಿಸಿತೋ ಗೊತ್ತಿಲ್ಲ, ‘ನಾನು ರಾಖಿ ಕಟ್ಟಿದರೆ ನೀವು ಕಟ್ಟಿಸಿಕೊಳ್ತೀರಾ?’ ಎಂದೆ ಅರೆನಿಮಿಷವು ಯೋಚಿಸದೆ ಅರೆ ಯಾಕಿಲ್ಲ? ಆದರೆ ನನ್ನ ಇತರ ಸ್ನೇಹಿತರು ಏನಂತಾರೋ ಗೊತ್ತಿಲ್ಲ. ನನಗೆ ಅಕ್ಕ ತಂಗಿ ಯಾರೂ ಇಲ್ಲ. ಈ ಬಾರಿಯ ರಾಖಿ ಕಾಶ್ಮೀರದಲ್ಲೇ ಕಳೆದು ಹೋಯಿತು. ನೀವು ಕಟ್ಟಿದರೆ ತುಂಬಾ ಖುಷಿ ಆಗುತ್ತೆ ಎಂದರು. ನಾನು ಈಗ ಬರ್ತೇನೆ ಅಂತ ಹೇಳಿ ಮನೆಗೆ ಬಂದು ನಾನೇ ಕೈಯ್ಯಾರೆ ತಯಾರಿಸಿದ ರೇಷ್ಮೆ ನೂಲಿನ ಒಂದಷ್ಟು ರಾಖಿಗಳನ್ನು ತೆಗೆದುಕೊಂಡು ಮತ್ತೆ ಬಂಗಲೆ ಹತ್ತಿರ ಓಡಿದೆ. ಅವರು ಪ್ರೀತಿಯಿಂದ ರಾಖಿ ಕಟ್ಟಿಸಿಕೊಂಡರು. ನನಗೆ ಹೇಳಿಕೊಳ್ಳಲಾರದ ಒಂದು ಭಾವ ಆವರಿಸಿತ್ತು, ಒಂದು ರೀತಿಯ ಧನ್ಯತಾ ಭಾವ.ಅಲ್ಲಿಂದ ಹೊರಟು ಬರುವಾಗ ನಿಮಗೆ ಬಿಡುವಾದರೆ ನಮ್ಮ ಮನೆಗೆ ಬನ್ನಿ ಎಂದು ಹೇಳಿದೆ. ಎಲ್ಲಿ ಮನೆ? ಎಂದು ಕೇಳಿದರು. ಅವರೇನು ಬರುವುದಿಲ್ಲ ಅನ್ನೋದು ನನಗೂ ಗೊತ್ತಿದ್ದ ವಿಷಯ ಆಗಿದ್ದರೂ, ಸುಮ್ಮನೆ ವಿಳಾಸ ಹೇಳಿ ಕರೆದಿದ್ದೆ.

ಸಂಜೆ ತುಳಸಿ ದೀಪ ಹೆಚ್ಚುವ ಹೊತ್ತಿಗೆ ಇಬ್ಬರು ಅಜಾನುಬಾಹುಗಳು ನಮ್ಮ ಮನೆ ಮುಂದೆ ನಿಂತಿದ್ದರು. ನಾನು ಖುಷಿಯಿಂದ ಕೂಗಿ ಅವರನ್ನ ಒಳಗೆ ಬರಲು ಕೇಳಿದೆ, ರಾಖಿ ಕಟ್ಟಿಸಿಕೊಂಡವರು ಮತ್ತವರ ಸ್ನೇಹಿತರು ಬಂದಿದ್ದರು. ಅಮ್ಮ ಪಪ್ಪನಿಗೆ ಹಿಂದಿ ಅಷ್ಟೇನೂ ಚನ್ನಾಗಿ ಬರುತ್ತಿರಲಿಲ್ಲವಾದ್ದರಿಂದ ನಾನೇ ಎಲ್ಲರಿಗೂ ಪರಸ್ಪರ ಪರಿಚಯ ಮಾಡಿಕೊಟ್ಟೆ. ನನ್ನ ತಂದೆಯವರನ್ನು ಅವರೂ ಪಾಪಾಜಿ, ಎಂದು ಅಮ್ಮನನ್ನ ಮಾ ಜಿ, ಎಂದು ಕರೆದು ಅವರ ಕಾಲಿಗೆ ನಮಸ್ಕರಿಸಿದರು.

”ತಂಗಿ ರಾಖಿ ಕಟ್ಟಿದಳು ಆದರೆ ಆಕೆಗೆ ಏನೂ ಉಡುಗೊರೆ ಕೊಡಲು ಆಗಲಿಲ್ಲ ಅದಕ್ಕೆ ಮನೆ ಹುಡುಕಿಕೊಂಡು ಬಂದೆವು” ಎಂದರು. ಅದರ ಬೆನ್ನಲ್ಲೇ, ಬೇಡ ಎಂದರೂ ಕೇಳದೆ ನೂರರ ಮೂರು ನೋಟುಗಳನ್ನು. ಮಡಚಿ ನನ್ನ ಕೈಯ್ಯಲ್ಲಿ ಇಟ್ಟರು. ನಮಗಾಗಲಿ ಅವರಿಗಾಗಲಿ ಏನು ಮಾತಾಡಬೇಕು ಅನ್ನೋದು ಗೊತ್ತಾಗದಷ್ಟು ಭಾವುಕತೆ ಆವರಿಸಿಕೊಂಡಿತ್ತು.

ಅಮ್ಮ ಗೌರಿ ಪೂಜೆಗೆಂದು ಮಾಡಿಟ್ಟ ಎಲ್ಲ ತಿಂಡಿಗಳನ್ನು ಅವರ ಮುಂದೆ ತಂದು ಇಟ್ಟಳು. ಚಕ್ಕಲಿ ಹಿಟ್ಟನ್ನು ಗಿರಣಿಗೆ ಬೀಸಲು ಕೊಟ್ಟಾಗ ನೂರು ನಿಯಮ ಹಾಕುವ ನನ್ನ ಅಮ್ಮ ಪೂಜೆ ಆಗದೆ ಅದ್ಹೇಗೆ ಹಬ್ಬದ ತಿಂಡಿ ಅವರಿಗೆ ತಿನ್ನಲು ಕೊಟ್ಟಳು ಅನ್ನೋದು ನಮ್ಮನೆಯ ಎಲ್ಲರಿಗೂ ಆಶ್ಚರ್ಯ ತಂದಿತ್ತು.

ನನ್ನ ತಮ್ಮನಂತೂ ಅವರ ಸ್ಪೋರ್ಟ್ಸ್ ಶೂಗಳ ಮಾಯೆಗೆ ಬಿದ್ದಿದ್ದ ಆಗ ಅವನಿಗೆ ನಾಲ್ಕೂವರೆ ವರ್ಷ, ನಂಗೂ ಇಂಥದ್ದೇ ಬೂಟು ಬೇಕು ಎಂದು ಹಠ ಮಾಡ ತೊಡಗಿದ್ದ.

ಚಹ ಕುಡಿದ ನಂತರ ಅವರು ತಮ್ಮ ವಿಳಾಸ ಕೊಟ್ಟು ‘ತಂಗಿ ನೀನು ಪತ್ರ ಬರೆಯಲೇ ಬೇಕು ನಾವು ಕೂಡ ಬರೀತೀವಿ ನಾಳೆ ಬೆಳಿಗ್ಗೆ ೧೧ ಘಂಟೆಗೆ ಹುಬ್ಬಳ್ಳಿಯಿಂದ ನಾವು ಪಶ್ಚಿಮ ಬಂಗಾಳಕ್ಕೆ ಹೋರಡುತ್ತೇವೆ.’ ಎಂದು ನಮಸ್ಕರಿಸಿ ಹೊರಟರು. ಆ ಮಧ್ಯೆ ಅವರು ಕಾರ್ಗಿಲ್ ನಲ್ಲಿ ಇದ್ದಿದ್ದು, ಅಲ್ಲಿನ ಕೆಲ ಅನುಭವಗಳು ಹಂಚಿಕೊಂಡಿದ್ದು ನಾವು ಮರೆಯುವಂತೆಯೇ ಇಲ್ಲ.

ನಮ್ಮ ಮನೆಯಲ್ಲಿ ಎಲ್ಲರೂ ಸಂಜೆಯ ಅವರ ಭೇಟಿಯ ಗುಂಗಿನಲ್ಲೇ ಇರುವಾಗ ಮರುದಿನ ಬೆಳಿಗ್ಗೆ ೯.೪೫ ರ ಹೊತ್ತಿಗೆ ಮತ್ತೊಬ್ಬ ಸ್ನೇಹಿತರೊಂದಿಗೆ ಅವರು ಮನೆಗೆ ಬಂದರು, ‘ಈಗ ಹೋದರೆ ಮತ್ತೆಂದು ನಿಮ್ಮನ್ನೆಲ್ಲ ನೋಡುವುದೋ, ಕರ್ನಾಟಕದಲ್ಲಿ ನನಗೊಂದು ಪರಿವಾರ ಇದೆ ಅಂತ ನೆನೆಸಿಕೊಂಡರೆ ಮನಸು ತುಂಬಿ ಬರುತ್ತೆ. ಎಷ್ಟೊಂದು ಸ್ಥಳಗಳಿಗೆ ಡ್ಯೂಟಿ ಮಾಡಲು ಹೋಗಿದ್ದೇವೆ ನಮ್ಮನ್ನು ನೋಡಿದರೆ, ನಾವು ಬೇರೆಯೇ ಗ್ರಹದಿಂದ ಬಂದವರಂತೆ ನೋಡುವ ಜನರೇ ತುಂಬಿರುವಾಗ, ನೀವು ನಮ್ಮನ್ನು ಮನೆಗೂ ಕರೆದು ಇಷ್ಟು ಪ್ರೀತಿ ತೋರಿದಿರಿ ಅದಕ್ಕೆ ಈ ನನ್ನ ಪರಿವಾರವನ್ನು ಸ್ನೇಹಿತನಿಗೂ ಪರಿಚಯಿಸುವ ಅಂತ ಮನಸಾಗಿ ಕರೆದುಕೊಂಡು ಬಂದೆ’ ಎಂದು ಒಂದೇ ಉಸಿರಲ್ಲಿ ಮಾತಾಡಿದರು. ಒಂದು ರಾಖಿಗೆ ಇಷ್ಟೊಂದು ಶಕ್ತಿ ಇದೆಯೇ? ನನಗೆ ಅದರ ಮಹಿಮೆ, ಹಿರಿಮೆ ಅರ್ಥವಾಗಿದ್ದೇ ಆದಿನ. ನಾವು ಮಾತಾಡುತ್ತಿದ್ದಾಗ ಅಮ್ಮ ದೊಡ್ಡ ಸ್ಟೀಲಿನ ಡಬ್ಬಿಯ ತುಂಬಾ ಆಕೆ ಮಾಡಿದ ಎಲ್ಲ ಬಗೆಯ ಸಂಡಿಗೆ ಕರಿದು ತುಂಬಿ, ಮತ್ತೊಂದರಲ್ಲಿ ರವೇ ಉಂಡೆಗಳನ್ನು ಜೋಡಿಸಿ ಅವರ ಕೈಯ್ಯಲ್ಲಿ ತಂದಿಟ್ಟಳು. ‘ತಂಗಿ ಪತ್ರ ಬರೆಯಲು ಮರೀಬೇಡ’ ಅಂತ ಮತ್ತೆ ಮತ್ತೆ ನೆನಪಿಸುತ್ತ ಅವರು ಹೊರಟರು. ಆಗ ಎಲ್ಲರ ಕಣ್ಣೂ ತೇವವಾಗಿದ್ದವು.

ಅವರು ಹೋಗಿ ತಲುಪಿ ಒಂದುವಾರದೊಳಗೆ ಅವರಿಂದ ಮೂರು ಪುಟಗಳ ಪತ್ರ ಬಂದಿತ್ತು, ಚಂದ ಹೂಗಳ ಚಿತ್ತಾರವಿದ್ದ ನೀಲಿ ಗುಲಾಬಿ ಬಣ್ಣದ ಲೆಟರ್ ಪ್ಯಾಡಲಿ ಹಿಂದಿಯಲ್ಲಿ ಬರೆದ ಅಷ್ಟು ದೊಡ್ಡ ಪತ್ರ ನನಗೆ ಆ ಮೊದಲು ಯಾರೂ ಬರೆದಿರಲಿಲ್ಲ. ಯೋಗಕ್ಷೇಮ, ಚನ್ನಾಗಿ ಓದು, ತಂಗಿ ತಮ್ಮನ ಕಾಳಜಿ ಮಾಡು, ಅನ್ನುವಂಥ ಅಕ್ಕರೆಯ ಮಾತುಗಳಿಂದ ತುಂಬಿದ ಪತ್ರವದು. ಈ ಅಣ್ಣನ ಹೆಸರು ಅಶೋಕ್ ಕುಮಾರ್ ಅವರು ದೆಹಲಿಯವರು.

ನನಗೆ ಯಾಕೆ ಹಾಗೆ ಕೇಳಬೇಕು ಅನಿಸಿತೋ ಗೊತ್ತಿಲ್ಲ, ‘ನಾನು ರಾಖಿ ಕಟ್ಟಿದರೆ ನೀವು ಕಟ್ಟಿಸಿಕೊಳ್ತೀರಾ?’ ಎಂದೆ ಅರೆನಿಮಿಷವು ಯೋಚಿಸದೆ ಅರೆ ಯಾಕಿಲ್ಲ? ಆದರೆ ನನ್ನ ಇತರ ಸ್ನೇಹಿತರು ಏನಂತಾರೋ ಗೊತ್ತಿಲ್ಲ. ನನಗೆ ಅಕ್ಕ ತಂಗಿ ಯಾರೂ ಇಲ್ಲ . ಈ ಬಾರಿಯ ರಾಖಿ ಕಾಶ್ಮೀರದಲ್ಲೇ ಕಳೆದು ಹೋಯಿತು. ನೀವು ಕಟ್ಟಿದರೆ ತುಂಬಾ ಖುಷಿ ಆಗುತ್ತೆ ಎಂದರು.

ಅವರೊಂದಿಗೆ ಮೊದಲದಿನ ನಮ್ಮ ಮನೆಗೆ ಬಂದ ಜೀತೆಂದ್ರ ಪ್ರಸಾದ್ ಬಿಹಾರ ನವರು, ಮರುದಿನ ಬೆಳಿಗ್ಗೆ ಅವರ ಜೊತೆಗೆ ಮನೆಗೆ ಬಂದವರು ರಮೇಶ್ ಕುಮಾರ ಒಡಿಶಾ ಕೋರಾಪುಟ್ ಎಂಬ ಊರಿನವರು. ಅವರು ಮರಳಿದ ನಂತರ ತಿಂಗಳಿಗೆ ಎರಡು ಮೂರು ಪತ್ರಗಳು ನನಗೆ ಬರುತ್ತಿದ್ದವು. ಅವರ ಜಗತ್ತಿನ ಹಲವು ವಿಷಯಗಳನ್ನು ಅವರು ಪತ್ರದಲ್ಲಿ ಬರೆಯುತ್ತಿದ್ದರು. ಅವರಿಗೆ ಒಂದು ನೆಲೆ ಅಂತೇನೂ ಇರಲಿಲ್ಲ. ಆದರೆ ಪತ್ರಗಳನ್ನು ನಾನು ಪಶ್ಚಿಮ ಬಂಗಾಳದ ಕಲ್ಯಾಣಿ ಎಂಬ ಊರಿನ ವಿಳಾಸಕ್ಕೆ ಬರೆಯಬೇಕಿತ್ತು. ಅಲ್ಲಿಂದ ಅದು ಅವರಿಗೆ ಬಟವಾಡೆ ಆಗುತ್ತಿತ್ತು. ಉತ್ತರಭಾರತದ, ವಿಶೇಷವಾಗಿ ಕಾಶ್ಮೀರದ ಹಲವು ಊರಿನ ಹೆಸರುಗಳನ್ನ ನಾನು ಕೇಳಿದ್ದು ಅವರ ಪತ್ರಗಳ ಮೂಲಕವೇ.

ಈ ಮಧ್ಯೆ ಒಂದು ಘಟನೆ ನಡೆಯಿತು ಅದನ್ನು ಹೇಳದಿದ್ದರೆ, ಈ ಬರಹ ಅಪೂರ್ಣ. ನಾವು ಪತ್ರಬರೆದುಕೊಳ್ಳಲು ಶುರು ಮಾಡಿನ ಒಂದೆರಡು ತಿಂಗಳು ಕಳೆದಿತ್ತು, ಆಗ ಅಣ್ಣ ಅಶೋಕ್ ಬರೆದ ಪತ್ರದ ಸಾರಾಂಶ ಹೀಗಿತ್ತು
ಪ್ರಿಯ ತಂಗಿ,
ನಿನಗೆ ಒಂದು ವಿಷಯ ಹೇಳಬೇಕಿದೆ, ನಿನಗೆ ಮನಸಾರೆ ಕ್ಷಮೆ ಕೇಳಬೇಕಿದೆ
ಕ್ಷಮಿಸುತ್ತೀಯಾ? ನಿನಗಷ್ಟೇ ಅಲ್ಲ, ಪಪ್ಪಾ ಜಿ ,ಮಾ ಜಿ ಅವರಲ್ಲೂ ಮಾಫಿ ಕೇಳಬೇಕಿದೆ.
ನಾನು ನಿಮ್ಮ ಮನೆಗೆ ಆ ಸಂಜೆ ಭೇಟಿ ಕೊಟ್ಟು ಬಂದ ನಂತರ, ನೀವು ನಮಗೆ ತೋರಿದ ಅಕ್ಕರೆ ಕೊಡಮಾಡಿದ ಆತಿಥ್ಯ ಆಪ್ಯಾಯತೆ
ಅದನ್ನೆಲ್ಲ ನಾನು ಮತ್ತು ಜಿತೇಂದ್ರ ಮಾತಾಡಿಕೊಳ್ಳುತ್ತಿದ್ದಾಗ ನಮ್ಮ ಸ್ನೇಹಿತ, ನನಗೂ ಅವರನ್ನು ನೋಡಬೇಕು ನನ್ನನೂ ಅವರಿಗೆ ಭೇಟಿ ಮಾಡಿಸು ಅಂದ. ಅವನಿಗೆ ಇಲ್ಲ ಎನ್ನಲು ಮನಸಾಗಲಿಲ್ಲ, ನಾವೆಲ್ಲರೂ ಮನೆಗೆ ಹೋಗದೆ ವರ್ಷದ ಹತ್ತಿರವಾಗಿದೆ, ಪತ್ರಗಳು, ಅಪರೂಪದ ಫೋನ್ ಕಾಲ್ ಗಳು
ನಮ್ಮ ನಡುವಿನ ಸೇತುವೆಗಳು. ಅಂಥದ್ದರಲ್ಲಿ ಮೊದಲ ಭೇಟಿಯಲ್ಲೇ ಯಾವುದೋ ಜನ್ಮದ ಸಂಬಂಧ ಎಂಬಂತೆ ನೀವು ನಮಗೆ ಕೊಟ್ಟ ಪ್ರೀತಿ ಆ ಭಾವುಕ ಕ್ಷಣಗಳನ್ನು ಮತ್ತೊಮ್ಮೆ ಮತ್ತೊಂದಷ್ಟು ಹೊತ್ತು ಅನುಭವಿಸಬೇಕು ಅಂತ ತೀವ್ರವಾಗಿ ಅನಿಸಿತ್ತು.

ಆದರೆ ನಾ ನಿಮಗೆ ಪರಿಚಯಿಸಿದಂತೆ ಎರಡನೇ ದಿನ ನಿಮ್ಮ ಮನೆಗೆ ಬಂದ ಆ ಸ್ನೇಹಿತನ ಹೆಸರು ರಮೇಶ ಕುಮಾರ ಅಲ್ಲ. ಅಕ್ಬರ್ ಖಾನ್ ಎಂದು. ನೀನು ನಿನ್ನ ವಿಳಾಸ ಕೊಟ್ಟಾಗಲೇ ನೀವು ಪಂಡಿತ್ ಎಂದು ಅರಿವಾಗಿದ್ದು. ಒಂದು ದಕ್ಷಿಣ ಭಾರತದ ಬ್ರಾಹ್ಮಣ ಕುಟುಂಬ ಗುರುತಿರದ ಒಬ್ಬ ಮುಸ್ಲಿಂ ಮನುಷ್ಯನನ್ನು ಮನೆ ಒಳಗೆ ಸೇರಿಸುತ್ತೀರೋ ಇಲ್ಲವೋ ಎಂದು ಅನುಮಾನ ಬಂತು. ಅವನಿಗೂ ಬೇಡ ಎನ್ನಲು ಮನಸಾಗಲಿಲ್ಲ, ಅದಕ್ಕೆ ಅವನ ಹೆಸರನ್ನು ಬದಲಾಯಿಸಿ ಹೇಳಿದೆ. ಅವನಿಗೂ ಇದನ್ನು ಮನವರಿಕೆ ಮಾಡಿಸಿದ್ದೆ.
ತುಂಬಾ ಹಿಂಸೆ ಅನಿಸುತ್ತಿತ್ತು ಬೆಹನ್, ಈ ವಿಷಯ ಹೇಳಿ ಹಗುರಾಗಲೇಬೇಕಿತ್ತು.
ನೀನು ನನ್ನ ಬಯ್ಯು ಪರವಾಗಿಲ್ಲ ಆದರೆ ಪತ್ರ ಬರೆಯುವುದನ್ನ ನಿಲ್ಲಿಸಬೇಡ.
ನೀನು ಈ ಪತ್ರ ಓದಿ ನನಗೊಂದು ಉತ್ತರ ಬರೆದರೆ ನೀ ನನ್ನ ಮನ್ನಿಸಿದೆ ಅಂದು ಸಮಾಧಾನ ಪಡುತ್ತೇನೆ.
ಕ್ಷಮೆ ಇರಲಿ
ಇಂತಿ ನಿನ್ನ
ಅಣ್ಣ

ಸಾಮಾನ್ಯವಾಗಿ ಅವರು ಬರೆದ ಪತ್ರವನ್ನು ನಾನು ಜೋರಾಗಿ ಎಲ್ಲರಿಗೂ ಓದಿ ಹೇಳುತ್ತಿದ್ದೆ. ಈ ಪತ್ರ ಓದಿದ ನಂತರ ಪಪ್ಪಾ ತಾವೇ ಅದಕ್ಕೆ ಉತ್ತರ ಬರೆಯುತ್ತೇನೆ ಎಂದರು. ಸಮಸ್ಯೆ ಭಾಷೆಯದ್ದು, ಪಪ್ಪನಿಗೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಸರಾಗವಾಗಿ ಬರೆಯಲು ಬರುತ್ತಿರಲಿಲ್ಲ, ಆಗ ಸಹಾಯ ಮಾಡಿದ್ದು ನಮ್ಮೂರಿನ ಹಿರಿಯರಾದ ಕಾಮತ್ ಮಾಮ್. ಪಪ್ಪಾ ಕನ್ನಡದಲ್ಲಿ ಬರೆದ ಪತ್ರವನ್ನು ಅವರು ಇಂಗ್ಲೀಷನಲ್ಲಿ ತರ್ಜುಮೆ ಮಾಡಿ ಕೊಟ್ಟರು. ಆ ಪತ್ರದ ಒಂದು ಪ್ರತಿ ಪಪ್ಪನ ಸಂಗ್ರಹದಲ್ಲಿ ಈಗಲೂ ಇರಬಹುದು. ಹಸಿರು ಬಣ್ಣದ ಬಾಂಡ್ ಹಾಳೆಯ ಮೇಲೆ ಟೈಪ್ ಮಾಡಿದ ಪತ್ರವದು. ಅವರು ಹೇಳಿದ ಆ ಪುಟ್ಟ ಸುಳ್ಳು ನಮ್ಮ ನಡುವಿನ ಆ ಭಾವ ಬಂಧುರತೆಗೆ ಯಾವುದೇ ತೊಂದರೆ ಮಾಡದು, ಬದಲಿಗೆ ಅದನ್ನು ಇನ್ನೂ ಆಪ್ಯಾಯ ಗೊಳಿಸಿದೆ. ಮನುಷ್ಯನ ವ್ಯಕ್ತಿತ್ವ ಅವನ ನಡುವಳಿಕೆಯಲ್ಲಿ ಕಾಣಿಸಬೇಕು, ಅದಕ್ಕೆ ಜಾತಿ ಧರ್ಮದ ರಸೀದಿ ಹರಿಯುವ ಅಗತ್ಯ ಎಂದಿಗೂ ಇರಬಾರದು. ರಾವಣ ಅಗಾಧ ಜ್ಞಾನವುಳ್ಳ ಪಂಡಿತ, ಶಿವಭಕ್ತ , ಬ್ರಾಹ್ಮಣ ಕೂಡ ಆದರೆ ನನ್ನ ಮನೆಯಲ್ಲಿ ಮಗನೊಬ್ಬ ಹುಟ್ಟಿದರೆ ಅದಕ್ಕೆ ನಾನು ರಾವಣ ಎಂದು ಹೆಸರ ಇಡಲಾರೆ. ನೀವು ಗಡಿಯಲ್ಲಿ ಚಳಿ ಗಾಳಿ, ಮಳೆ ಬಿಸಿಲು ಲೆಕ್ಕಿಸದೆ ರಾತ್ರಿ ಹಗಲೆನ್ನದೆ ಸೇವೆ ಮಾಡಿದ್ದಕ್ಕೆ ನಾವಿಲ್ಲಿ ನೆಮ್ಮದಿಯ ನಿದ್ದೆ ಮಾಡುವುದು. ನಿಮ್ಮ ಈ ಋಣವನ್ನು ತೀರಿಸಲಾದೀತೇ? ಎಂದು ಪಪ್ಪಾ ಬರೆದ ಆ ಪತ್ರದ ಸಾಲುಗಳು ನನಗಿನ್ನೂ ನೆನಪಿವೆ.

ಆ ನಂತರದಲ್ಲಿ ಈ ಪತ್ರಗಳ ವಿನಿಮಯ ಇನ್ನೂ ಜಾಸ್ತಿ ಆಗುತ್ತಾ ಹೋಯಿತು, ಈ ಪತ್ರ ಬರೆದುಕೊಳ್ಳುವ ಶುರುವಿನ ತಿಂಗಳುಗಳಲ್ಲಿ ಎರಡು ಮೂರು ಬಾರಿ ಅವರಿಂದ ಮನಿ ಆರ್ಡರ್ ಬಂದಿತ್ತು, ಹಾಗೆ ಹಣ ಕಳಿಸಬಾರದು ಎಂದು ವಿನಂತಿಸಿಕೊಂಡಮೇಲೂ ಇದು ಮರುಕಳಿಸಿತು. ಆಗ ನಾನು ಸ್ವಲ್ಪ ಖಾರವಾಗಿಯೇ ಉತ್ತರಿಸಿದ್ದೆ. ಅದಕ್ಕೆ ಉತ್ತರವಾಗಿ ‘ನೀನು ನನ್ನನ್ನು ಅಣ್ಣ ಅನ್ನುತ್ತೀಯಾ, ಅಷ್ಟೇ! ಅಣ್ಣ ಅಂದುಕೊಂಡಿಲ್ಲ, ನೀ ನನ್ನ ತಂಗಿ ಅಂದಮೇಲೆ ನಿನಗೆ ಹಣ ಕಳಿಸುವುದು ನನ್ನ ಜವಾಬ್ದಾರಿ, ಮತ್ತು ನೀನೂ ಹಕ್ಕಿನಿಂದ ಇದನ್ನು ತೆಗೆದುಕೊಳ್ಳಬೇಕು ಎಂದು ಉತ್ತರಿಸಿದ್ದರು. ಆಮೇಲೆ ಪದೇ ಪದೇ ನಾನು ಬೇಸರ ಮಾಡಿದ್ದರ ಪರಿಣಾಮ ಅದನ್ನ ನಿಲ್ಲಿಸಿದ್ದರು. ಇದನ್ನೆಲ್ಲಾ ನಾನೀಗ ಬರೆಯುವಾಗಲೂ ಇದೆಲ್ಲ ಕನಸೇ ಅನಿಸುತ್ತದೆ, ಕಂಡು ಕೇಳರಿಯದ ಊರಿನಿಂದ ಬಂದು, ನನ್ನೂರಿನಿಂದ ಹೋಗುವಾಗ ಅಣ್ಣಂದಿರಾಗಿ ಹೋಗಿದ್ದರು. ಹೋಳಿಗೆ ಬಣ್ಣ ಕಳಿಸುತ್ತಿದ್ದೆ, ದಶರೆಗೆ ಬನ್ನಿ, ರಕ್ಷಾಬಂಧನಕ್ಕೆ ರಾಖಿ, ಸಂಕ್ರಾಂತಿಗೆ ಎಳ್ಳು, ಪತ್ರಗಳಲ್ಲಿ ಒಣಗಿದ ಹೂವು ಎಲೆಗಳು. ಅದೊಂದು ಬೇರೆಯದೇ ಲೋಕವಾಗಿತ್ತು. ಮೂವರಲ್ಲಿ ಜಾಸ್ತಿ ಪತ್ರ ಬರೆಯುತ್ತಿದ್ದುದು ದೆಹಲಿಯ ಅಶೋಕ್ ಕುಮಾರ್ ಮತ್ತು ಅಕ್ಬರ್ ಖಾನ್ ಅವರು. ಜೇತೇಂದ್ರ ಪ್ರಸಾದ್ ಅವರ ಪತ್ರ ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಬರುತ್ತಿತ್ತು. ನಾನು, ತಂಗಿ ಪತ್ರ ಬರೆಯುತ್ತಿದ್ದೆವು, ಆದರೆ ಪುಟ್ಟ ತಮ್ಮನಿಗೆ ಅವರ ಸ್ಪೋರ್ಟ್ಸ್ ಶೂ ಗುಂಗಿನಿಂದ ಹೊರಗೆ ಬರಲು ಆಗಿರಲೇ ಇಲ್ಲ, ಪ್ರತಿಬಾರಿ ಪತ್ರ ಬರೆಯುವಾಗಲೂ ನನಗೆ ಶೂಸ್ ಬೇಕು ಅನ್ನುವ ಸಾಲು ಸೇರಿಸು ಅಂತ ಕಾಡುತ್ತಿದ್ದ ,ಅವರಿಂದ ಉತ್ತರ ಬಂದಾಗ ಶೂಸ್ ಕಳಿಸಿದ್ದಾರಂತ? ಎನ್ನುವ ಮುಗ್ಧ ಪ್ರಶ್ನೆ ಕೇಳುತ್ತಿದ್ದ. ಅದನ್ನು ಕೇಳಿ ಕೇಳಿ ಒಮ್ಮೆ ಅಮ್ಮ ‘ನಿನಗೆ ಅಂತಹ ಬೂಟು ಬೇಕೆಂದರೆ ನೀನೂ ಆರ್ಮಿಗೆ ಸೇರಬೇಕು,ಆಗಲೇ ಸಿಗುವುದು’ ಎಂದಳು.

ಒಮ್ಮೆ ಅವರು ಬರೆದಿದ್ದರು ‘ತಂಗಿ ನಾನು ಇಲ್ಲಿ ಎಲ್ಲರ ಹತ್ತಿರ ನಿಮ್ಮ ವಿಷಯ ಹೇಳುತ್ತೇನೆ, ನಿಮ್ಮ ಫ್ಯಾಮಿಲಿ ಫೋಟೋ ಒಂದನ್ನು ಕಳಿಸುತ್ತೀಯಾ?
ಒಹ್ ಅವರಿಗೆ ಫೋಟೋ ಕಳಿಸಬೇಕೆಂದು ಎಲ್ಲ ಆಲ್ಬಮ್ ಹುಡುಕಿದರೂ, ನಾವು ೫ ಜನ ಮಾತ್ರ ಇದ್ದ ಯಾವ ಚಿತ್ರವೂ ಇರಲಿಲ್ಲ. ಅವರ ದೆಸೆಯಿಂದಾಗಿ ಮೊದಲ ಬಾರಿಗೆ ಪರಿವಾರ ಸಮೇತರಾಗಿ ರೂಪಕಲಾ ಫೋಟೋ ಸ್ಟುಡಿಯೋಗೆ ಹೋಗಿ ಒಂದು ಫೋಟೋ ತೆಗೆಸಿಕೊಂಡು ಬಂದಿದ್ದೆವು. ಅದನ್ನು ಮೂರೂ ಜನರಿಗೂ ಕಳಿಸಿದ್ದೂ ಆಯಿತು. ೧೯೯೯ ರ ಸೆಪ್ಟೆಂಬರ್ ನಿಂದ ಶುರುವಾದ ಈ ಮೈತ್ರಿ, ೨೦೦೩ ಜನೇವರಿಯ ಒರೆಗೂ ಪತ್ರಗಳ ಮೂಲಕ ನಡೆಯುತ್ತಲೇ ಇತ್ತು. ಆಮೇಲೆ ಅವರಿಗೂ ಫೋನ್ ಅನುಕೂಲವಾಯಿತು, ನಮ್ಮ ಮನೆಗೂ ಲ್ಯಾಂಡ್ ಲೈನ್ ಬಂದಿತ್ತು, ಪತ್ರದಿಂದ ಮಾತು ಫೋನ್ ಗೆ ತಿರುಗಿತು. ಅಶೋಕ್ ಕುಮಾರ್ ಅವರ ಹೆಂಡತಿ ಭಾರತಿ ಅವರೊಂದಿಗೆ , ಅಕ್ಬರ್ ಖಾನ ಅವರ ಶ್ರೀಮತಿಯವರೊಂದಿಗೂ ನಾನು ಫೋನನಲ್ಲಿ ಮಾತಾಡುತ್ತಿದ್ದೆ. ೨೦೦೩ ರಲ್ಲಿ ಸ್ಥಳೀಯ ಫೋನ್ ನಂಬರುಗಳ ಮೊದಲ ಮೂರು ಅಂಕಿಗಳನ್ನು ಬದಲಿಸಲಾಯಿತು ಆ ನಂತರ ಅವರ ಫೋನ್ ಬರುವುದು ನಿಂತಿತು. ಇದೆ ಸಮಯದಲ್ಲಿ ನಮ್ಮ ಹಳೆ ಮನೆಯನ್ನು ಮಾರಾಟ ಮಾಡಿದರು. ಹುಟ್ಟಿ ಬೆಳೆದ ಮನೆ ಇನ್ನು ಸ್ವಲ್ಪದಿನಗಳಲ್ಲಿ ಇರುವುದಿಲ್ಲ ಎಂಬ ಆಲೋಚನೆ, ಕಿರಿಕಿರಿಯಲ್ಲಿ ಇದ್ದ ನಾನು ಜಾಸ್ತಿ ಪತ್ರ ಬರೆಯಲು ಹೋಗಲಿಲ್ಲ ಒಂಚೂರು ಅಲಕ್ಷವೇ ಮಾಡಿದೆ ಅನಿಸುತ್ತಿದೆ.

ಅವರಿಂದಲೂ ಪತ್ರವಾಗಲಿ ಫೋನ್ ಆಗಲಿ ಬರಲೇ ಇಲ್ಲ. ಒಮ್ಮೆಲೇ ಈ ಪತ್ರಗಳು ನಿಂತು ಹೋದದ್ದು ನೆನೆಸಿಕೊಂಡರೆ ನನಗೆ ಈಗಲೂ ಒಂಥರಾ ಕಸಿವಿಸಿ,ನೋವು , ನಾನೇ ಮತ್ತೊಂದಿಷ್ಟು ಪತ್ರ ಬರೆಯಬೇಕಿತ್ತು. ನನ್ನ ಮದುವೆಗೆ ಕರೆಯಬೇಕಿತ್ತು, ಮಗ ಹುಟ್ಟಿದಾಗ ತಿಳಿಸಬೇಕಿತ್ತು ಅಂತೆಲ್ಲ ನಿಲ್ಲದ ಆಲೋಚನೆ ಬರುತ್ತದೆ. ಸೇನೆಯ ಯಾವ ಯೋಧ ಹುತಾತ್ಮರಾದ ಸುದ್ಧಿ ಕೇಳಿದರೂ ಮನಸು ಒಮ್ಮೆ ಆ ಮೂವರನ್ನು ನೆನೆಯುತ್ತದೆ. ಅವರು ಕ್ಷೇಮವಾಗಿರಲಿ ದೇವರೇ ಎಂದು ಪ್ರಾರ್ಥಿಸುತ್ತದೆ.

ಅಂದು ಅವರಿಂದ ಶೂಸ್ ಬರಬಹುದು ಎಂದು ಕಾಯುತ್ತಿದ್ದ ನನ್ನ ಪುಟ್ಟ ತಮ್ಮ ಇಂದು ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆ ಪಡೆದು, ಸೇವೆ ಸಲ್ಲಿಸುತ್ತಿದ್ದಾನೆ. ಇದೆಲ್ಲ ಅವರಿಗೆ ಒಮ್ಮೆ ಹೇಳಬೇಕು ಅನಿಸುತ್ತದೆ. ಆಗ ಒಂದು ಫಾಮಿಲಿ ಫೋಟೋ ಕೇಳಿದ್ದರು ಈಗ ಏನೇನೆಲ್ಲ ಇದೆ ಅವರೊಂದಿಗೆ ಹಂಚಿಕೊಳ್ಳಲು.ಎಷ್ಟು ಹಾಡುಗಳಿವೆ ಕೇಳಿಸಲು, ಮಾಮಾ ಎನ್ನಲು ತಂಗಿಯರ ಮಕ್ಕಳು ಕಾಯುತ್ತಿದ್ದಾರೆ. ಹೇಳಿ ಹೇಗೆ ಹುಡುಕಲಿ ಅವರನ್ನ?