ತಂಜಾವೂರಿನ ದೇವಸ್ಥಾನ. ಕಲ್ಲುಗಂಬಗಳು ಮನ ಮೋಹಕವಾಗಿ ಸಿಂಗರಿಸಿಕೊಂಡಿವೆ. ಶಿರವೆತ್ತಿ ನಗುವ ಗೋಪುರಗಳು, ಅನಂತ ಅಗಲದ ಅಂಗಣ, ಎಲ್ಲವೂ ಮಾಯೆಯೆನ್ನುವ ಗರ್ಭ ಗುಡಿಯಲ್ಲಿ ಕುಳಿತ ಆತ್ಮ. ಅಲ್ಲಿಯ ಜಗುಲಿಯ ಮೇಲೆ ಅಂಗಾತ ಆಗಸಾಭಿಮುಖವಾದ ಅರುಲ್ ಕಣ್ಣಲ್ಲಿ ನೀರು ಕದ ತೆರೆದು ಹೊರ ಪ್ರವಹಿಸಿದೆ. ಮನದೊಳಗಿನ ಪ್ರವಾಹ ಇದಕ್ಕೆ ಕಾರಣ. ವಯಸ್ಸು ಏರುತ್ತಲೇ ಮನುಷ್ಯ ಹಿಂದೆ ಚಲಿಸುವ ಕಾರಣ ಮನಸ್ಸುಗಳು ದೂರವಾಗುತ್ತದೆ. ಅದರದೇ ಭಾಗವಾದ ಆಸ್ತಿಯ ಹಂಚಿಕೆ ಹಾಗೂ ಮನೆಗೆ ವಿದಾಯ ಹೇಳಬೇಕಾದ ಅನಿವಾರ್ಯತೆ ಅರುಲ್ ನೋವಿಗೆ ಮೂಲ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಕನ್ನಡದ ‘ಮೆಯ್ಯಳಗನ್’ ಸಿನಿಮಾದ ವಿಶ್ಲೇಷಣೆ

ಸಾಗರದಂತೆ ಬದುಕು
ನದಿಗಳಂತೆ ಸಂಬಂಧಗಳು
ಮಳೆಯಂತೆ ಭಾವನೆಗಳು
ಸಂಕಲನಗೊಂಡರೆ
ಕನಸು ಮಾತನಾಡುವ ಬದುಕು
ಬಣ್ಣ ಮೆತ್ತಿದ ಉಸಿರು
ಮಾತು ಬಿಟ್ಟರೆ
ಮನದ ಮೂಲೆಯ ಆಪೋಷನ ತೆಗೆದುಕೊಳ್ಳುವ
ನೋವಿನ ಕೊಸರು

ಬದುಕು ಭೂಮಿಯಂತಾದರೆ ಸಂಬಂಧಗಳು ವಾತಾವರಣದಂತೆ. ಮಾನವ ಸಂಘ ಜೀವಿ ಎಂಬ ಮಾತಿಗೆ ಪೂರಕವವೆಂಬಂತೆ, ಆತನ ಜೀವನ ತೂಗು ಸೇತುವೆಯಂತೆ. ಅವು ಅಪ್ಪಿದ ದಾರಗಳೇ ಸಂಬಂಧಗಳು. ದಾರಗಳು ಕೋಪಗೊಂಡೋ, ಬೇಸರಗೊಂಡೋ ಅಥವಾ ಸೇತುವೆಯು ಹೆಚ್ಚು ಒತ್ತಡ ಹಾಕಿಯೋ ಈ ಒಗ್ಗಟ್ಟು ಮುರಿಯುತ್ತದೆ. ಆಗ ಅಲ್ಲೊಂದು ಅನಾಥ ಭಾವ ಹಾಜರಿ ಹಾಕುತ್ತದೆ. ಸೂರ್ಯನಿಲ್ಲದೆ ಶಶಿಯಿಲ್ಲ, ಭಾವವಿಲ್ಲದೆ ಗೀತೆಯಿಲ್ಲ, ದಾರಿಯಿಲ್ಲದೆ ಪಯಣವಿಲ್ಲ, ಸಂಬಂಧಗಳ ಸೂತ್ರವ ಮರೆತ ಬದುಕೆಂಬ ಗಾಳಿಪಟ ಮಾತಿಲ್ಲದ ಆಕಾಶವಾಣಿಯೇ ಸರಿ. ಅದೊಂದು ಅನಾಮಧೇಯ ನಿರ್ವಾತ. ಮಾತಿಲ್ಲದ ಅರಮನೆಯಲ್ಲಿ ಮೌನವೂ ಭಾರವಾಗುತ್ತದೆ. ಉಸಿರಿಲ್ಲದ ದೇಹಕ್ಕೆ ಆತ್ಮವೂ ಭಾರವೇ. ಅಂತೆಯೇ ಒಂಟಿ ಕಾಲ ಪಯಣ, ಒಂದು ಕೈಯ ಚಪ್ಪಾಳೆ ಅಕ್ಷರ ಮಾಸಿದ ಪತ್ರಿಕೆಯಂತೆ. ಬಟವಾಡೆಯಾಗದ ಪ್ರೇಮ ಪತ್ರದಂತೆ. ಸಂಬಂಧಗಳು ಸಂಭ್ರಮಿಸಿದರೆ ಬದುಕು ಬೆಳಗುವುದು. ಈ ಸಂಕೀರ್ಣ ಭಾವನೆಗಳ ಹೂವಿನ ರಾಶಿಯನ್ನು ಪೋಣಿಸಿ, ಮನ ಮೆಚ್ಚುವ -ಮುಟ್ಟುವ ಮಾಲೆಯಾಗಿ ಪರಿವರ್ತಿಸುವ ಕಾರ್ಯ ಮಾಡಿದ್ದು ಸೂತ್ರಧಾರ ‘ಪ್ರೇಮ್ ಕುಮಾರ್’ ‘ಮೆಯ್ಯಳಗನ್’ ಚಿತ್ರದ ಮುಖಾಂತರ.

ತಂಜಾವೂರಿನ ದೇವಸ್ಥಾನ. ಕಲ್ಲುಗಂಬಗಳು ಮನ ಮೋಹಕವಾಗಿ ಸಿಂಗರಿಸಿಕೊಂಡಿವೆ. ಶಿರವೆತ್ತಿ ನಗುವ ಗೋಪುರಗಳು, ಅನಂತ ಅಗಲದ ಅಂಗಣ, ಎಲ್ಲವೂ ಮಾಯೆಯೆನ್ನುವ ಗರ್ಭ ಗುಡಿಯಲ್ಲಿ ಕುಳಿತ ಆತ್ಮ. ಅಲ್ಲಿಯ ಜಗುಲಿಯ ಮೇಲೆ ಅಂಗಾತ ಆಗಸಾಭಿಮುಖವಾದ ಅರುಲ್ ಕಣ್ಣಲ್ಲಿ ನೀರು ಕದ ತೆರೆದು ಹೊರ ಪ್ರವಹಿಸಿದೆ. ಮನದೊಳಗಿನ ಪ್ರವಾಹ ಇದಕ್ಕೆ ಕಾರಣ. ವಯಸ್ಸು ಏರುತ್ತಲೇ ಮನುಷ್ಯ ಹಿಂದೆ ಚಲಿಸುವ ಕಾರಣ ಮನಸ್ಸುಗಳು ದೂರವಾಗುತ್ತದೆ. ಅದರದೇ ಭಾಗವಾದ ಆಸ್ತಿಯ ಹಂಚಿಕೆ ಹಾಗೂ ಮನೆಗೆ ವಿದಾಯ ಹೇಳಬೇಕಾದ ಅನಿವಾರ್ಯತೆ ಅರುಲ್ ನೋವಿಗೆ ಮೂಲ. ಯಾರೋ ಕರೆಯುತ್ತಾರೆ. ಮನಸ್ಸನ್ನು ಅಲ್ಲೇ ಬಿಟ್ಟು ಹೊರಡುತ್ತಾನೆ ಅರುಲ್. ಹೊರಗೆ ದೇವಾಲಯದ ಆನೆ ಆತನ ಗುರುತು ಹಿಡಿದು, ಕುಶಲೋಪರಿ ಕೇಳುತ್ತದೆ. ಎಷ್ಟೆಂದರೂ ಅದು ಮನುಷ್ಯನಲ್ಲ ಅಲ್ಲವೇ? ಬಾಗಿಲ ಬಳಿ ಪ್ರಸಾದ ಬಾಚಿಕೊಂಡು, ತಿರುಗಿಯೂ ನೋಡದೆ ಹೊರಡುತ್ತಾನೆ. ಮನೆಯಲ್ಲಿ ಟ್ರಕ್ಕಿನ ಬೆನ್ನಿಗೆ ಸರಕುಗಳನ್ನು ತುಂಬಿಸಲಾಗುತ್ತಿದೆ. ಮನೆಗೆ ಒರಗಿದ ಹಳೆಯ ಬೈಸಿಕಲ್ಲು ಅನುತ್ತೀರ್ಣಗೊಳ್ಳುತ್ತದೆ. ವರುಷಗಳು ಸಮಾಧಿಯಾಗುತ್ತದೆ. 22 ವರುಷಗಳ ನಂತರ ಅರುಲ್ ಚಿಕ್ಕಪ್ಪನ ಮಗಳ ವಿವಾಹದ ಸಲುವಾಗಿ ಮರಳಿ ತನ್ನ ಹಳೆಯ ನೆನಪುಗಳಿಗೆ ಜಾರಬೇಕಾಗುತ್ತದೆ. ಒಲ್ಲದ ಮನಸ್ಸಿನ ಭಾರ ಹಿಡಿದು, ಪಯಣ ಬೆಳೆಸುತ್ತಾನೆ.

ತಂಜಾವೂರಿನಲ್ಲಿ ಇಳಿದು, ಪಟ್ಟಣ, ದೇವಾಲಯವೆಲ್ಲವ ಪ್ರದಕ್ಷಿಣೆ ಹಾಕುತ್ತಾನೆ. ಅವನ ಬಾಲ್ಯದ ಗೆಳೆಯ ದೇವಸ್ಥಾನದ ಆನೆ ಬಾಲ್ಯ ಮರೆತು, ಅಗಾಧವಾಗಿ ಬೆಳೆದಿದೆ. ಜೊತೆಗೆ ಅವನನ್ನು ಕೂಡ. ಅರುಲ್ ಮುಂದೆ ಹಳೆಯ ಬಸ್ಸಿನ ಹೆಗಲನ್ನೇರಿ ಮದುವೆ ನಡೆವ ಸ್ಥಳದತ್ತ ಸಾಗುತ್ತಾನೆ. ಅರುಲ್ ತಂದೆ ಶಿಕ್ಷಕರಾಗಿದ್ದರಿಂದ, ಆ ಬಸ್ಸಿನ ಕಂಡಕ್ಟರ್ ಸಹ ಅವರ ವಿದ್ಯಾರ್ಥಿಯೇ ಆಗಿರುತ್ತಾನೆ. ಮಾತು ಹರಿಯುತ್ತದೆ. ಕೊನೆಗೆ ತನ್ನ ಗಮ್ಯ ಸ್ಥಳವ ತಲುಪುತ್ತಾನೆ. ದ್ವಿ ದಶಕಗಳ ನಂತರದ ಭೇಟಿಯಿಂದ ಅಲ್ಲಿರುವ ಕಣ್ಣಾಲಿಗಳು ತುಂಬುತ್ತವೆ. ಭಾವುಕತೆಯ ಸಾಗರದ ಮೌನ ಎಲ್ಲೆಡೆಯೂ ಆವರಿಸುತ್ತದೆ. ಅಲ್ಲಿ ಅರುಲ್‌ನನ್ನು ಆದರದಿಂದ ಆರೈಕೆ ಮಾಡುವುದು, ಆತಿಥ್ಯ ನೀಡುವುದು ಒಬ್ಬ ಯುವಕ. ಅವನು ಯಾರೆಂದು ತಿಳಿಯದೆ ಹೋದರೂ ಅರುಲ್ ಬೆರಗಾಗುತ್ತಾನೆ ಅವನ ನಡುವಳಿಕೆಗೆ. ಅಂದೇ ರಾತ್ರಿ ಮದ್ರಾಸಿಗೆ ಮರಳಬೇಕಾದ ಅರುಲ್‌ಗೆ ಬಸ್ಸು ತಪ್ಪಿ ಹೋಗುತ್ತದೆ ಅಥವಾ ಆ ಯುವಕ ಬಸ್ಸು ತಪ್ಪಿ ಹೋಗುವಂತೆ ಮಾಡುತ್ತಾನೆ. ಅವನ ಮೇಲೆ ಅರುಲ್‌ಗೆ ಇದ್ದ ಅಸಹನೆ ಕೋಪವಾಗಿ ಬದಲಾಗುತ್ತದೆ. ಕೊನೆಗೆ ರಾತ್ರಿ ಉಳಿಯಲು ಅವನ ಮನೆಗೆ ಸಾಗಬೇಕಾಗುತ್ತದೆ.

ಅಲ್ಲಿ ಅವರ ಬಾಲ್ಯದ ದಿನಗಳತ್ತ ಈರ್ವರೂ ಹೆಜ್ಜೆ ಹಾಕುತ್ತಾರೆ. ಮಾತು, ಮೌನ, ನಗು, ನೆನೆಸಿಕೊಳ್ಳಲು ಉಪ್ಪಿನಕಾಯಿಯಂತೆ ಚೂರು ಪಾರು ಅಳು ಎಲ್ಲವೂ ನಡೆಯುತ್ತದೆ ಕೆರೆಯ, ಬಾವಿಯ ತಟದಲ್ಲಿ, ಸರೀ ಸೃಪಗಳ ಹಾದಿಯಲ್ಲಿ. ಅರುಲ್ ಉಳಿಸಿಹೋದ ಸೈಕಲ್ಲು, ಅಂದಿನ ಆಟದ ದಿನಗಳು, ಅನಾಥವಾದ ಮನೆ ಎಲ್ಲವೂ ಮಾತಿಗೆ ಆಹಾರ. ನಿಶೆಯ ನಶೆ ಇಳಿವವರೆಗೆ ಮಾತು ಮುಂದುವರೆದು, ನಿದ್ದೆಗೆ ಜಾರುತ್ತಾನೆ ಆ ಯುವಕ. ಇಷ್ಟು ಸಮಯ ಹಳೆಯದಾದರೂ ಆತನ ಗುರುತು ನೆನಪಿಗೆ ಬರುತ್ತಿಲ್ಲ. ಯಾರೆಂದು ನೇರವಾಗಿ ಕೇಳುವುದು ಅಸಾಧ್ಯ. ಅದೇ ಮುಜುಗರದಲ್ಲಿ, ಅರುಲ್ ಹೇಳದೆ ಕೇಳದೆ ಭಾನು ಹಾಸಿಗೆ ಬಿಡುವ ಮುನ್ನ, ತಾನು ಮನೆಯ ಬಿಟ್ಟು ಸಾಗುತ್ತಾನೆ ಮದ್ರಾಸಿಗೆ. ಹಾಗಾದರೆ ಯಾರವನು? ಪ್ರೀತಿಯನ್ನು ಬೊಗಸೆಯಲ್ಲಿ ಹಿಡಿದು ಸುರಿವ ಅವನೊಂದಿಗಿನ ಸಂಬಂಧ ಎಂತಹದಿದ್ದಿರಬಹುದು? ಎಲ್ಲದರ ಭಾವ ತೀರ ಯಾನವೇ ‘ಮೆಯ್ಯಳಗನ್’.

ನಿರ್ದೇಶಕ ಪ್ರೇಮ್ ಕುಮಾರ್ ಕಥೆಗಳೆಂದರೆ ಅದು ಭಾವಗಳ ಕುಣಿತವ ಆಯೋಜಿಸುವ ವೇದಿಕೆ. ನೆನಪುಗಳಿಗೆ ಕರೆ ಮಾಡಲು ಪ್ರೆರೇಪಿಸುವ ದೂರವಾಣಿಯೇ ಸರಿ. ’96’ ಚಿತ್ರದಲ್ಲಿ ಹರೆಯದಿ ಮರೆತ ಪ್ರೀತಿಯ ಮಳೆಯನ್ನು ಹಲವು ವರುಷಗಳ ನಂತರ ಮರು ಪೂರಣಗೊಳಿಸುವ ಸಂಗತಿಯನ್ನು ಹೇಳಿ ಕಲ್ಲು ಹೃದಯಗಳನ್ನು ಕರಗಿಸಿದ್ದರು. ಅದೆಷ್ಟೋ ಗಮ್ಯ ತಲುಪುವ ಮುನ್ನವೇ ಮಂಜಿನಂತೆ ಕರಗಿದ ಪ್ರೀತಿಯ ತಂಗಾಳಿಯ ಮರು ಸ್ಪರ್ಶಕ್ಕೆ ಕಾರಣೀಭೂತವಾಯಿತು ಆ ಚಿತ್ರ. ವಿಶೇಷತಃ ಅಲ್ಲಿರುವ ಭಾವುಕತೆ, ‘ಕಾದಲೇ ಕಾದಲೇ’ ಎನ್ನುತ್ತಾ ಅವಳ ಕಣ್ಣ ಸುತ್ತ ಅಪ್ಪಿದ ಕಾಡಿಗೆಯಂತೆ ಕಾಡುವ ಸಾಲುಗಳು ಎಲ್ಲವೂ ಮೊದಲ ಮುತ್ತಿನಂತೆ ಉಳಿದು ಬಿಟ್ಟಿತ್ತು. ಅದೇ ತೆರನಾದ ಚಿತ್ರವಿದು. ಇಲ್ಲಿಯೂ ಭಾವನೆಗಳಿಗೆ ಬ್ರಹ್ಮಕಲಶಾಭಿಷೇಕ. ಕೂಡು ಕುಟುಂಬ, ಮಕ್ಕಳ ರಾಶಿಯ ಮಧ್ಯೆ ಬೆಳೆದ ಜನರು, 90 ರ ದಶಕದವರು, ಎಲ್ಲರ ಮನೆಯ ಮಾಸಿದ ಕಥೆಯಿದು.

ಸೈಕಲ್ಲು, ಬ್ಯಾಟು, ಆಟಿಕೆಗಳು ಇಂತಹ ಎಲ್ಲಾ ನಿರ್ಜಿವ ವಸ್ತುಗಳೇ ಆಗ ನಮ್ಮ ಎಮೋಷನ್ನು. ಮುಂದೆ ಬೆಳೆದು ದೂರವಾಗುತ್ತ, ಈ ಭಾವನೆಗಳನ್ನು ಮನುಷ್ಯರ ಮೇಲೆಯೇ ಮರೆತು ಸಾಗುತ್ತೇವೆ. ಹೊಸ ಜನ, ಬದುಕು ಹಳೆಯದ್ದೆಲ್ಲವನ್ನು ನುಂಗುತ್ತದೆ ಥೇಟು ಅಲೆಗಳ ಸಾಲಿನಂತೆ. ಇಲ್ಲಿ ಆ ಅಳಿಸಿ ಹೋದ ಮನುಷ್ಯನೊಬ್ಬನ ಪುನರ್ಜನ್ಮವಿದೆ. ಮನೆಯೊಂದರ ಹೆಗಲನ್ನು ಸ್ಮರಿಸುವ ಸುಂದರ ಕ್ಷಣವಿದೆ. ಎಲ್ಲವೂ ಭಾವನೆಗಳೆಂಬ ನದಿಯಲ್ಲಿ ಅದ್ದಿ ತೆಗೆದಂಥದ್ದು. ಇಲ್ಲಿ ಅರುಲ್, ತಂಗಿಯ ಮದುವೆಯಲ್ಲಿ, ಅವಳ ಕಾಲುಗಳನ್ನು ತನ್ನ ಮಂಡಿಯಲ್ಲಿಟ್ಟು ಗೆಜ್ಜೆಯ ಸದ್ದಿನಿಂದ ಅಲಂಕರಿಸುತ್ತಾನೆ. ಅವಳಿಷ್ಟದ ಆಭರಣಗಳೆಲ್ಲವನ್ನು ಹಾಕಿ ಅವಳ ಅಲಂಕರಿಸುತ್ತಾನೆ ಅದೇ ಹಳೆಯ ಉಳಿದ ಪ್ರೀತಿಯಿಂದ. ಅಲ್ಲಿ ಅರುಲ್ ಸಂಬಂಧಿಯೂ, ಹಳೆಯ ಗೆಳತಿಯೂ ಸಿಗುತ್ತಾಳೆ. ಎಲ್ಲವೂ ಸರಿ ಹೋಗಿದ್ದರೆ, ಇಂದು ಅರುಲ್‌ಗೆ ಅವಳೇ ಅರ್ಧಾಂಗಿಯಾಗಬೇಕಿತ್ತು ಎನ್ನುವಾಗ, ಬದುಕೆಂಬ ನಾವೆ ನಾವು ಬಯಸಿದ ತೀರದತ್ತ ಸಾಗುವುದಿಲ್ಲ ಎಂಬ ಸತ್ಯ ಅವಳ ಕಣ್ಣುಗಳಲ್ಲಿ ನಗ್ನಗೊಳ್ಳುತ್ತದೆ. ಇನ್ನು ಆ ಯುವಕನ ನಿಷ್ಕಲ್ಮಶ, ಬೇಷರತ್ ಪ್ರೀತಿಯು ಮನುಷ್ಯನೊಬ್ಬ ಮನುಷ್ಯನಾಗಿಯೇ ಉಳಿಯಬಹುದು ಎಂದು ಸಾಬೀತುಗೊಳಿಸುವ ಸಾಕ್ಷಿ ಪ್ರಜ್ಞೆ. ಹೀಗೆ ಭವದ ಹಂಗು ತೊರೆಯುವಂತೆ ಮಾಡುವ ಭಾವದ ಅತ್ಯಂತಿಕ ಚಿತ್ರಣವೇ ಈ ‘ಮೇಯಳಗನ್’ ಎಂಬ ದೃಶ್ಯ ಕಾವ್ಯ.

90 ರ ದಶಕದಲ್ಲಿ ಕಾದಲ್ ರೋಜಾವೆ ಎಂದು ಹಾಡಿದ್ದ ಅರವಿಂದ್ ಇಲ್ಲಿ ಅರುಲ್ ಆಗಿ ಜೀವಿಸಿದ್ದಾರೆ. ಕಾರ್ತಿ ಆ ಯುವಕನ ಪಾತ್ರದಲ್ಲಿ ನೈಜ ಪರಿಪಕ್ವ ಅಭಿನಯ. ಅರುಲ್ ತಂಗಿಯಾಗಿ ‘ಸ್ವಾತಿ ಕೊಂಡೆ’ ಹುಸಿಕೋಪ, ಭಾವುಕತೆ ಎಲ್ಲವನ್ನೂ ಬಿಗಿದಪ್ಪಿ ನಟಿಸಿದ್ದಾರೆ. ಪತ್ನಿಯಾಗಿ ‘ದೇವ ದರ್ಶಿನಿ’ ಇಷ್ಟು ಅರ್ಥ ಮಾಡಿಕೊಳ್ಳುವ ಅರ್ಧಾಂಗಿ ಸಿಗಲಿ ಎಂದು ಕನಸು ಕಾಣುವಂತೆ ಅಭಿನಯಿಸಿದ್ದಾರೆ. ಪ್ರೇಮ್ ಕುಮಾರ್ ಯಥಾ ಪ್ರಕಾರ ಕಥಾ ಬೀದಿಯಲ್ಲಿ ಭಾವ ತೇರಿನ ಪಯಣವ ಮಾಡಿಸಿದ್ದಾರೆ ಈ ಕಥೆಯ ಮೂಲಕ ಎಂದರೆ ಅತಿಶಯೋಕ್ತಿಯಲ್ಲ.

ಮುಗಿಸುವ ಮುನ್ನ :

ಜಯಂತ ಕಾಯ್ಕಿಣಿಯವರ ಕವಿತೆಯ ಸಾಲೊಂದಿದೆ ‘ಬಡವನ ಕಣ್ಣಲಿ ಬೆಳಕಾದರೆ ಅದು ಪ್ರೇಮವೇ’ ಎಂದು. ಈ ಪ್ರೇಮವೆಂಬುದು ಎಲ್ಲಾ ಅಂತರಗಳ ದೂರ ಮಾಡುವ ವ್ಯಾಕ್ಸಿನ್ನು. ಅಭಿಪ್ರಾಯ ಭೇದಗಳೇ ಬೇಲಿಯಾಗಿ, ಬದುಕಿನ ಪರಿಧಿ ನಾಲ್ಕು ಗೋಡೆಗಳಿಗೆ ಮೀಸಲಾಗುತ್ತಿರುವ ಈ ಕಾಲಮಾನದಲ್ಲಿ, ಎಲ್ಲವುಗಳ ತೊರೆದು ಪ್ರೀತಿಯೊಂದರ ಲಗಾಮು ಹಿಡಿದು ಅದರ ಪ್ರಸರಣದಲ್ಲಿ ಜರೂರಾಗಿ ತೊಡಗಬೇಕಿದೆ. ಏಕೆಂದರೆ ಸಂಬಂಧಗಳ ತೊರೆದು ಸಂಪೂರ್ಣ ಬೇರೆಯಾಗಿ ಬದುಕುವ ನಮ್ಮ ಪೀಳಿಗೆಯ ಮಕ್ಕಳು ಮತ್ತದೇ ಸಂಬಂಧವ ಹೊರಗೆಲ್ಲೊ ಬೆಸೆವ ನೆಪದಲ್ಲಿ ತಮ್ಮನ್ನೇ ತಾವು ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಆತಂಕಕ್ಕೆ ಮುಲಾಮು ನಿರಪೇಕ್ಷ ಪ್ರೇಮವೊಂದೇ……