ಸೀತಜ್ಜಿ, ಗೌರಜ್ಜಿ, ಅಮ್ಮಣ್ಣೆಜ್ಜಿ ಇವರ ಕತೆಗಳೂ ಇದಕ್ಕಿಂತ ಬೇರೆಯೇನಿರಲಿಲ್ಲ. ಅವರೆಲ್ಲರೂ ತಮ್ಮ ಮದುವೆಯ ಕತೆಯನ್ನು ಯಾವುದೇ ವಿಷಾದಗಳಿಲ್ಲದೇ ಹೇಳಿಕೊಳ್ಳುತ್ತಿದ್ದರು. ಆದರೆ ಇವರ ನಂತರದ ತರುವಾಯದವರಾದ ಕೆಂಪಿ, ಗಣಪಿ, ನಾಗವೇಣಿಯರು ತಮ್ಮ ಮದುವೆಯ ಕತೆಯನ್ನು ಇಷ್ಟು ತಣ್ಣಗೆ ಹೇಳುತ್ತಿರಲಿಲ್ಲ. ಅವರ ಮಾತುಗಳಲ್ಲಿ ಕಹಿ, ಸಿಟ್ಟು, ಹತಾಶೆ ಎಲ್ಲವೂ ಮಡುಗಟ್ಟಿದ್ದವು. ಇದಲ್ಲದೇ ಊರಿಗೆ ಬಂದಾಗಲೆಲ್ಲ ಒಂದು ಬಗೆಯ ನಗುವಿನ ಅಲೆಯನ್ನೇ ಹೊತ್ತು ಬರುತ್ತಿದ್ದ ಸುಗಂಧಿಯ ಕತೆಯೂ ನೀಲಿಯನ್ನು ಕಾಡತೊಡಗಿತು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೆಂಟನೆಯ ಕಂತು ನಿಮ್ಮ ಓದಿಗೆ

ಹೊಳೆಸಾಲಿನ ಶಾಲೆಯ ಗ್ಯಾದರಿಂಗ್ ಕಳೆದು ವಾರಗಳಾದರೂ ಇಡಿಯ ಊರಿನಲ್ಲಿ ಹರಡಿದ ಅದರ ಘಮವಿನ್ನೂ ಆರಿರಲಿಲ್ಲ. ಅಪರೂಪಕ್ಕೆ ನಡೆಯುವ ಗ್ಯಾದರಿಂಗನ್ನು ನೋಡಲು ದೂರದೂರಿನಿಂದ ಬಂದ ನೆಂಟರೆಲ್ಲರೂ ಊರಿನಿಂದ ಹೊರಡುವವರೆಗೂ ಊರಿನವರೆಲ್ಲರೂ ಆ ಗುಂಗಿನಿಂದ ಹೊರಬರಲು ಸುತಾರಾಂ ಸಿದ್ಧರಿರಲಿಲ್ಲ. ನೀಲಿಗಂತೂ ಗ್ಯಾದರಿಂಗ್ ಒಂದು ಮರೆಯಲಾಗದ ನೆನಪಾಗಿ ಅಚ್ಚಾಗಿತ್ತು. ಅವಳು ಮಾಡಿದ ಕಿತ್ತೂರು ಚೆನ್ನಮ್ಮನ ಪಾತ್ರವನ್ನು ಮೆಚ್ಚಿದ ಗ್ರಾಮಪಂಚಾಯಿತಿಯ ಸದಸ್ಯರೊಬ್ಬರು ನೋಟಿನ ಮಾಲೆಯನ್ನು ಅವಳ ಕೊರಳಿಗೆ ಹಾಕಿದ್ದರು. ಅವಳಿನ್ನೂ ಚಿಕ್ಕವಳಿರುವಾಗ ಹೊನ್ನಾಪುರದ ವೇದಿಕೆಯಲ್ಲಿ ಹಾಡಿ ಕಿಶೋರಭಾರತದ ಪ್ರತಿಯನ್ನು ಪಡೆದಷ್ಟೇ ಹೆಮ್ಮೆ ಅವಳಿಗೆ ಈಗಲೂ ಆಗಿತ್ತು.

ಗ್ಯಾದರಿಂಗ್ ಕಳೆದು ವಾರವಾದ ಮೇಲೆ ಒಂದು ಸಂಜೆ ಅವಳು ಮನೆಗೆ ಬರುವಾಗ ಪಕ್ಕದಮನೆಯ ಸುಭದ್ರಮ್ಮನ ಮನೆಗೆ ಬಂದ ಮಹಾದೇವಮ್ಮ ಇವರ ಮನೆಗೆ ಬಂದು ಅಮ್ಮನೊಂದಿಗೆ ಮಾತನಾಡುತ್ತಿದ್ದರು. ಅವರು ಊರಿಗೆ ಬಂದರೆಂದರೆ ನೀಲಿಯ ಅಮ್ಮ ಅವರೊಡನೆ ಮಾತನಾಡಲು ಸುಭದ್ರಮ್ಮನ ಮನೆಗೆ ಹೋಗುವುದು, ಇಲ್ಲವೆಂದರೆ ಅವರೇ ಇವರ ಮನೆಗೆ ಬರುವುದು ರೂಢಿಯಾಗಿತ್ತು. ನೀಲಿಯನ್ನು ಕಂಡವರೇ ಅವಳನ್ನು ತಬ್ಬಿಕೊಂಡ ಮಹಾದೇವಮ್ಮ, “ಏನ್ ಚಂದ ಮಾಡ್ತೀಯೆ ಕೂಸೆ! ನನ್ನ ಕಣ್ಣೇ ಬಿದ್ದೋಗದೆ ನಿಂಗೆ. ನಾಳೆ ಸಂಜೆ ಮನೆಕಡೆ ಬಾ. ದೃಷ್ಟಿ ತೆಗೆದುಕೊಡ್ತೆ. ಗಂಡ, ಮಕ್ಕಳಿಲ್ಲದ ಆ ಹೆಣ್ಣು ಅದ್ಹೇಗೆ ಎಂಥೆಂಥವರನ್ನೆಲ್ಲ ಎದುರಿಸ್ತು ನೋಡು. ನಾವೆಲ್ಲ ಇದ್ದೇವೆ, ಭೂಮಿಗೆ ಭಾರ, ಕೂಳಿಗೆ ದಂಡ.” ಎನ್ನುತ್ತಾ ಸೆರಗನ್ನು ತಮ್ಮ ಬೋಳು ಮಂಡೆ ಮುಚ್ಚುವಂತೆ ಮೇಲಕ್ಕೆ ಎಳೆದುಕೊಂಡರು. ಅವರ ತಲೆಯ ಕೂದಲನ್ನೆಲ್ಲ ನುಣ್ಣಗೆ ಬೋಳಿಸಿರುವುದನ್ನು ನೀಲಿ ಮೊದಲಬಾರಿಗೆ ಗಮನಿಸಿದಳು.

ಅವಳೂರಿನಲ್ಲೂ ಗಂಡನಿಲ್ಲದ ಕೆಲವರು ಗಂಡಸರಂತೆ ಎರಡು ತಿಂಗಳಿಗೊಮ್ಮೆ ಕೂದಲನ್ನು ಕತ್ತರಿಸಿಕೊಳ್ಳುವುದನ್ನು ನೋಡಿದ್ದಳಾದರೂ ಪೂರ್ತಿಯಾಗಿ ತಲೆಬೋಳಿಸಿಕೊಂಡಿದ್ದನ್ನು ಈಗಲೇ ನೋಡಿದ್ದು. ನೀಲಿ ಅದರ ಬಗ್ಗೆ ಯೋಚಿಸುತ್ತಿದ್ದರೆ ಅವಳಮ್ಮ ಮಹಾದೇವಮ್ಮನ ಮಾತಿಗೆ ಉತ್ತರವಾಗಿ, “ಅಯ್ಯಾ ಬಿಡಿ ಮಾದೇವಮ್ಮ, ನೀವೇನೂ ಕಡಿಮೆಯೆ. ಸುಡುಸುಡು ಪ್ರಾಯದಲ್ಲಿ ಗಂಡ ನಡುನೀರಲ್ಲಿ ಕೈಬಿಟ್ಟು ಹೋದಮೇಲೂ ಮೂರು ಮಕ್ಕಳನ್ನು ಮಡಿಲಿನಲ್ಲಿ ಕಟ್ಟಿಕೊಂಡು ಒಂದು ದಡ ಹಾಯಿಸಲಿಲ್ಲವಾ? ರಾಣಿಯರು ಇದ್ದಾಂಗೆ ನಾವೆಲ್ಲ ಇರೂಕೆ ನಮಗೇನು ಸೈನ್ಯವೇ, ಸಂಪತ್ತೇ? ನಂಗಂತೂ ನೀವು ಬದುಕಿನಲ್ಲಿ ನಡೆಸಿದ ಹೋರಾಟ ಸಣ್ಣದನಿಸೂದಿಲ್ರ” ಎಂದು ಹೇಳಿ ಸಮಾಧಾನಿಸಿದರು. “ನಿನ್ನ ಗುಣ ಚಿನ್ನ ಕಾಣು. ನಿಂಗೆಲ್ಲ ಅರ್ಥ ಆಗ್ತದೆ. ಆದ್ರೆ ಗಂಡಸರಿಗೇನು ಗೊತ್ತು ಗೌರಿದುಃಖ? ಆ ಪ್ರಾಯ ಕಳೆಯೋವರೆಗೂ ಹೇಗೆ ಕಳದ್ನೊ ದೇವರಿಗೆ ಗೊತ್ತು. ಅಲ್ಲಾ ಚೆನ್ನಿ, ಆ ಅಂಗೈಯ್ಯಗಲ ಜಾಗದಲ್ಲಿ ದೇವ್ರು ಅದೇನಂತ ಸುಖ ಇಟ್ಟಿದಾನೋ? ಮೇಲೆ ಎಷ್ಟು ಬಟ್ಟೆ ಹೊದ್ರೇನು? ಕೆಟ್ಟವರ ಕಣ್ಣಿಗೆ ಅದೇ ಕಾಣೋದು. ನಮ್ಮ ಜಾತಿ ಪದ್ಧತಿ ಗೊತ್ತಲ್ಲ ನಿಂಗೆ? ಗಂಡ ಸತ್ರೆ ಒಂದು ರವಿಕೇನೂ ಹಾಕೂಹಂಗಿಲ್ಲ. ಸೆರಗು ಜಾರಿದ್ರೆ ಅದಕ್ಕೆಷ್ಟು ಆಡಿಕೊಂಡಾರು? ಎದ್ದು ನಿಂತ ಎದೆಯನ್ನು ಮುಚ್ಚಿಕೊಳ್ಳೋದ್ರಲ್ಲಿ ಜೀವ ಮುದುಡಿಹೋಗ್ತಿತ್ತು. ಅಂತೂ ಅದೆಲ್ಲ ಕಳೆದು ಜೀವ ಹಣ್ಣಾದ ಕಾಲಕ್ಕೆ ತುಸು ನೆಮ್ಮದಿ ನೋಡು. ನಿನ್ನ ಮಗಳ ನಾಟಕ ಇದೆ ಅಂತ ಗೊತ್ತಾಗಿದ್ದೇ ಸುಭದ್ರೆಗೆ ತಿಳಿಸಿ ಬಂದೇಬಿಟ್ಟೆ. ಮುದಿತನ ಅನ್ನೋದು ನಮ್ಮಂತೋರಿಗೆ ವರದಾನ ನೋಡು. ಎಲ್ಲಿ ಹೋಗು, ಏನು ಮಾಡು ಆಡಿಕೊಳ್ಳೋ ನಾಲಿಗೆಯಿಲ್ಲ ಅಂಬೂದೇ ನೆಮ್ಮದಿ.” ಅವರ ಮಾತುಗಳೆಲ್ಲ ನೀಲಿಗೆ ತುಸುತುಸುವೇ ಅರ್ಥವಾಗತೊಡಗಿದವು.

ಗುಸು, ಗುಸು ಮಾತನಾಡುತ್ತ ಕತ್ತಲೆಯಿಳಿದರೂ ಮಾದೇವಮ್ಮ ಇವರ ಮನೆಯಲ್ಲೇ ಇದ್ದರು. ನೀಲಿಯ ಅಮ್ಮ, “ಓ, ಮಾತಾಡಿ, ಮಾತಾಡಿ ಕತ್ತಲಾಯ್ತು ನೋಡಿ. ಸುಭದ್ರಮ್ಮನ ಮನೇಲಿ ಮೂರುಸಂಜೆಗೆ ಊಟಮಾಡಿಬಿಡ್ತ್ರು. ಮನೆಗೆ ಹೋಗೋಕೆ ಬೆಳಕು ತೋರಿಸ್ತೀನಿ ನಿಲ್ಲಿ” ಎಂದು ಲಾಟೀನು ಹೊತ್ತಿಸಿದಳು. ಅದಕ್ಕೆ ನಕ್ಕ ಮಾದೇವಮ್ಮ, “ಅಯ್ಯಾ ಚೆನ್ನಿ, ನನ್ನ ಊಟ ಮಧ್ಯಾಹ್ನವೇ ಆಗೋಯ್ತಲ್ಲೆ. ಅವರು ಬದುಕಿದ್ದ ದಿನವಷ್ಟೇ ರಾತ್ರಿ ಊಟ ಮಾಡಿದ್ದು. ಅದೂ ನಮ್ಮತ್ತೆ ಆ ಉಪವಾಸ, ಈ ವ್ರತ ಅಂತ ಹಾಗೆ ಮಲಗಿಸಿದ್ದೇ ಹೆಚ್ಚು. ತಲೆಬೋಳಿಸಿಕೊಂಡು ಕೆಂಪುಸೀರೆ ಹೊದ್ದಮೇಲೆ ರಾತ್ರಿಯೂಟ ಇಲ್ವೆ ನಮಗೆಲ್ಲ. ಕೆಲವರೆಲ್ಲ ಅವಲಕ್ಕಿ, ದೋಸೆ ಅಂತ ಮಾಡಿ ತಿಂತಾರೆ. ನಮ್ಮನೆ ಪರಿಸ್ಥಿತಿ ನಿಂಗೆ ಗೊತ್ತಿತ್ತಲ್ಲ. ತಲೆಗೆ ಎಳೆದ್ರೆ ಕಾಲಿಗೆ ಮುಟ್ಟದ ಬಡತನ. ಮಕ್ಕಳ ಹೊಟ್ಟೆ ತುಂಬಲಿ ಅಂತ ಪೂರ್ತಿ ಉಪವಾಸಾನೇ ಮಾಡಿದೆ. ಈಗ ಊಟ ಇದ್ರೂ ಸೇರಲ್ಲ.” ಎಂದರು. “ಓ ಹಾಂಗೆಲ್ಲ ಇತ್ತಾ? ನಂಗೊತ್ತಿರಲಿಲ್ಲ ನೋಡಿ. ಏನೇ ಹೇಳಿ, ನಿಮ್ಮ ಜಾತಿ ಪದ್ಧತಿ ಭಾರೀ ಬಿಗಿ.” ಎಂದು ಅಲವತ್ತುಕೊಂಡ ನೀಲಿಯ ತಾಯಿ ಎಷ್ಟು ಬೇಡವೆಂದರೂ ಕೇಳದೇ ಗೊನೆಯಲ್ಲಿ ನೇತಾಡುತ್ತಿದ್ದ ಎರಡು ಬಾಳೆಹಣ್ಣುಗಳನ್ನು ತಿನ್ನಿಸಿಯೇ ಕಳಿಸಿದರು.

ರಾತ್ರಿ ಮಲಗಿದ ನೀಲಿಯ ಕಣ್ಣುಗಳಿಗೆ ನಿದ್ದೆಯೇ ಸುಳಿಯಲಿಲ್ಲ. ಗ್ಯಾದರಿಂಗಿನ ದಿನ ನಡೆದ ಘಟನೆಯೊಂದು ಕಣ್ಣೆದುರು ಬಂತು. ಚೆನ್ನಮ್ಮನ ಪಾತ್ರಕ್ಕೆ ಉಡಲು ಕೆಂಪು ಬಣ್ಣದ ಝರಿಸೀರೆಯನ್ನು ತರಲು ಅಂಗನವಾಡಿಯ ಅಕ್ಕೋರು ಹೇಳಿದ್ದರು. ಜತೆಯಲ್ಲಿ ತಲೆಗೆ ತುರುಬು ಕಟ್ಟಲು ಅಮ್ಮನ ಚೌರಿಯನ್ನೂ ತರುವಂತೆ ಹೇಳಿದ್ದರು. ನೀಲಿ ಕೆಂಪುಸೀರೆಗೆ ಹೊಂದಾಣಿಕೆಯಾಗುವುದೆಂದು ಅಮ್ಮನಿಗೆ ದುಂಬಾಲು ಬಿದ್ದು ತುರುಬಿಗೆ ಮುಡಿಸಲು ಕನಕಾಂಬರದ ದಂಡೆಯನ್ನು ಕಟ್ಟಿಸಿಕೊಂಡು ಹೋಗಿದ್ದಳು. ಅದನ್ನು ನೋಡಿದ್ದೇ ನಕ್ಕ ಅಕ್ಕೋರು, “ಚೆನ್ನಮ್ಮ ಹೂ ಮುಡಿಯೋದಿಲ್ವೆ. ಅವಳಿಗೆ ಗಂಡ ಇಲ್ಲ ಅಲ್ವಾ?” ಎಂದು ದಂಡೆಯನ್ನು ಬದಿಗಿಟ್ಟಿದ್ದರು. ನೀಲಿ ತಯಾರಿಯ ಗಡಿಬಿಡಿಯಲ್ಲಿ ಆ ಘಟನೆಯನ್ನು ಮರೆತುಬಿಟ್ಟಿದ್ದಳು. ಇಂದು ಅಮ್ಮ ಮತ್ತು ಮಾದೇವಮ್ಮನ ಸಂಭಾಷಣೆಗಳನ್ನು ಕೇಳುತ್ತಿರುವಾಗ ಮತ್ತೆ ಅದು ನೆನಪಾಗಿತ್ತು. ಮನಸ್ಸಿನಲ್ಲಿ ಮೂಡಿದ ನೂರು ಪ್ರಶ್ನೆಗಳಿಗೆ ಉತ್ತರ ಪಡೆಯಲು ಅಮ್ಮ ಮಲಗಲು ಬರುವುದನ್ನೇ ಕಾಯುತ್ತಿದ್ದಳು. ಆದರೆ ಅಮ್ಮ ಅವಳ ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ ಉತ್ತರಿಸಿ ಮಗ್ಗುಲಾಗಿಬಿಟ್ಟರು. “ಗಂಡ ಸತ್ತ ಮೇಲೆ ಒಂದೊಂದು ಜಾತೀಲಿ ಒಂದೊಂದು ಪದ್ಧತಿ, ಒಂದಕ್ಕಿಂತ ಒಂದು ಬಿಗಿ.”

ನೀಲಿ ಈ ವರ್ಷ ಹೊಸಶಾಲೆಯನ್ನು ಸೇರಿದಳು. ಅಲ್ಲಿ ಹೊಳೆಸಾಲಿನ ಶಾಲೆಯಂತಲ್ಲ. ಒಂದೊಂದು ವಿಷಯಕ್ಕೆ ಒಂದೊಂದು ಶಿಕ್ಷಕರಿದ್ದರು. ಪುಸ್ತಕದಲ್ಲಿರುವ ವಿಷಯವನ್ನು ತರಗತಿಯಲ್ಲಿ ಚರ್ಚಿಸುತ್ತಿದ್ದರು. ರಾಜಾರಾಮ್ ಮೋಹನರಾಯ್ ಅವರು ಸಾಮಾಜಿಕ ಬದುಕಿನಲ್ಲಿ ತಂದ ಸುಧಾರಣೆಗಳ ಬಗ್ಗೆ ಪಾಠ ಮಾಡುತ್ತಾ ಇತಿಹಾಸದ ಅಧ್ಯಾಪಕರು ಸತಿಪದ್ಧತಿ, ವಿಧವಾ ವಿವಾಹ, ವರದಕ್ಷಿಣೆ ವಿರೋಧೀ ಕಾನೂನು ಎಲ್ಲವನ್ನೂ ವಿವರಿಸುತ್ತಿದ್ದರೆ ನೀಲಿ ಪಾಠದ ನಡುವೆ ಹತ್ತಾರು ಪ್ರಶ್ನೆಗಳನ್ನು ಕೇಳಿ ಅವರನ್ನು ದಂಗುಬಡಿಸುತ್ತಿದ್ದಳು. ಗಂಡನ ಉರಿಯುವ ಚಿತೆಯಲ್ಲಿ ಹೆಂಡತಿಯೊಬ್ಬಳು ಸಜೀವವಾಗಿ ಬೆಂದುಹೋಗುವ ಸಂಗತಿಯನ್ನು ಅವರು ವಿವರಿಸುವಾಗ ನೀಲಿಯ ಕಣ್ಣಂಚು ಒದ್ದೆಯಾಗಿತ್ತು. ನಮ್ಮೂರಿನ ಹೆಂಗಸರು ಭಕ್ತಿಯಿಂದ ಪೂಜಿಸುವ ಮಾಸ್ತಿಯಮ್ಮ ಇಂಥದ್ದೇ ಒಬ್ಬ ಚಿತೆಯೇರಿದ ಮಹಿಳೆಯ ಗುರುತು ಎಂಬುದು ತಿಳಿದಾಗ ಅಚ್ಚರಿಯಿಂದ ಹುಬ್ಬು ಮೇಲೇರಿಸಿದಳು. ಹೆಂಡತಿಯನ್ನು ಕಳೆದುಕೊಂಡ ಹೊಳೆಸಾಲಿನ ರಾಮ ತಿಂಗಳೆರಡರಲ್ಲಿ ನಾಗಿಯನ್ನು ಮನೆತುಂಬಿಸಿಕೊಂಡಿದ್ದನ್ನು ಅವಳೇ ಸ್ವತಃ ನೋಡಿದ್ದಳು. ಆದರೆ ಹೆಂಗಸರಿಗೆ ಮಾತ್ರವೇ ಸಂಪ್ರದಾಯದ ಕುಣಿಕೆಗಳು ಬಿಗಿದಿರುವುದು ಅವಳ ಗಮನಕ್ಕೆ ಬರತೊಡಗಿತು. ಇವರೆಲ್ಲರ ಆಸಕ್ತಿಯನ್ನು ಗಮನಿಸಿದ ಇತಿಹಾಸ ಅಧ್ಯಾಪಕರು ವಿದ್ಯಾರ್ಥಿಗಳ ಊರಿನಲ್ಲಿರುವ ವಿಧವೆಯರ ಬದುಕಿನ ಬಗ್ಗೆ ಒಂದು ಅಸೈನ್‌ಮೆಂಟ್ ಬರೆಯುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿದರು.

ನೀಲಿ ಆ ಭಾನುವಾರ ಒಂದು ನೋಟ್ಸ್ ಮತ್ತು ಪೆನ್ ಹಿಡಿದು ಕೇರಿಯೊಳಗೆ ಹೊರಟೇಬಿಟ್ಟಳು. ಅವಳು ಚಿಕ್ಕವಳಿರುವಾಗಿನಿಂದಲೂ ಚಂದದ ರಾಜಕುಮಾರಿಯರ ಕಥೆ ಹೇಳುತ್ತಿದ್ದ ನಾಗಜ್ಜಿ ವಿಧವೆಯೆಂಬುದು ಅವಳಿಗೆ ಮೊದಲೇ ತಿಳಿದಿತ್ತು. ಅವಳದೊಂದು ಸಂದರ್ಶನವನ್ನು ಮಾಡಿಯೇಬಿಡೋಣ ಎಂದು ಅವಳನ್ನರಸಿ ಬಂದಳು. ನಾಗಜ್ಜಿ ಅವಳ ಗುಡಿಸಲಿನೆದುರು ಒಂದಿಷ್ಟು ಮುಂಡ್ಕಿನ ಓಲೆಯನ್ನು ಒಣಗಿಸಿ ಒಪ್ಪಮಾಡಿಕೊಂಡು ಹಸೆ ನೇಯುವುದರಲ್ಲಿ ತಲ್ಲೀನಳಾಗಿದ್ದಳು. ನೀಲಿಯನ್ನು ಕಂಡಿದ್ದೇ ಬೆವರನ್ನೊರೆಸಿಕೊಳ್ಳುತ್ತ ಮನೆಯೊಳಗೆ ಬಂದಳು. ನೀಲಿ. “ಅಜ್ಜೀ, ನಮ್ಮ ಮಾಸ್ರ‍್ರು ನಿಮ್ಮದೆಲ್ಲ ಕಥೆ ಬರೆದುಕೊಂಡು ಬರಲು ಹೇಳಿದ್ದಾರೆ. ಚಂದ ಮಾಡಿ ಬರೆದ್ರೆ ನಂಗೆ ಬಹುಮಾನ ಕೊಡ್ತಾರೆ. ನಿನ್ ಕಥೆ ಹೇಳ್ತೀಯಾ?” ಎಂದಳು. ನಾಗಜ್ಜಿ ಬೊಚ್ಚು ಬಾಯಗಲಿಸಿ ನಗುತ್ತಾ, “ಅಯ್ಯಾ ಪುಟ್ಟಗೌರಿ, ಎಷ್ಟು ಮಕ್ಕಳು ಇಲ್ಲಿತನಾ ನನ್ನ ತೊಡಿ ಮೇಲೆ ಬೆಳದ್ರು. ಎಲ್ಲಾರೂ ರಾಜಕುಮಾರಿ ಕಥೆ ಹೇಳು ಅಂತಾನೇ ಕೇಳಿದ್ರು. ನೀನೇ ಮೊದ್ಲು ಕಾಣು, ಅಜ್ಜೀ ನಿನ್ ಕಥೆ ಹೇಳು ಅಂದದ್ದು. ನನ್ನ ಕಥಿ ಎಲ್ಲಾ ಬರದ್ರೆ ಮಾಸ್ರ‍್ರು ಬಿದ್ದು, ಬಿದ್ದು ನಗಾಡೂರು. ಬೇಕಾರೆ ನೀ ಕೇಳ್ದೆ ಅಂತಾ ಹೇಳ್ತೆ. ಆದ್ರೆ ಬರೂಕೆಲ್ಲ ಹೋಗ್ಬೇಡ ಮಾರಾಯ್ತಿ.” ಎಂದಳು. ನೀಲಿ ನಾಗಜ್ಜಿಯನ್ನು ಓಲೈಸುತ್ತಾ, “ಅಜ್ಜೀ, ನಮ್ಮ ಸರೂ ಹಾಗೆಲ್ಲ ನಗಾಡುದಿಲ್ಲ. ಅವ್ರು ನಿಮ್ಮ ಬಗ್ಗೆಲ್ಲಾ ಎಷ್ಟು ಹೇಳ್ತಾರೆ ಗೊತ್ತಾ? ಈ ಥರದ ಕತೆಯೆಲ್ಲ ನಮ್ಮ ಪುಸ್ತಕದಲ್ಲೂ ಇದೆ ಅಜ್ಜೀ. ಈಗ ನೀನು ನಾನು ಕೇಳಿದ್ದಕ್ಕೆಲ್ಲ ಉತ್ತರ ಹೇಳಿದ್ರಾಯ್ತು. ನಾನು ಅದನ್ನೆಲ್ಲ ಬರೆದುಕೊಳ್ತೆ. ಅಜ್ಜೀ, ಮೊದಲಿಗೆ ನಿನ್ನ ಮದುವೆ ಕತೆ ಹೇಳೇ” ಎಂದು ಪೆನ್ನು ಹಿಡಿದು ಕುಳಿತಳು. ನಾಗಜ್ಜಿ ಆ ವಯಸ್ಸಿನಲ್ಲೂ ತುಸು ನಾಚುತ್ತ ಕಥೆ ಶುರುಮಾಡಿದಳು.

“ನನ್ನ ಮದಿ ಕತಿ ಎಂಥ ಕೇಳ್ತೆ? ನಂಗಾಗ ಒಂದು ಆರು ವರ್ಷ ಇದ್ದಿಕ್ಕು. ಬ್ಯಾರೆ ಊರಿಂದ ಒಬ್ರು ಹೆಣ್ಣು ಕೇಳ್ಕಂಡು ನಮ್ಮನಿ ಬಾಗಿಲಿಗೆ ಬಂದ್ರು. ನಮ್ಮಣ್ಣ ನನಗಿಂತ ಒಂದಿಪ್ಪತ್ತು ವರ್ಷ ದೊಡ್ಡೋನು. ನಾನು ಹುಟ್ಟಿದ ಕೂಡ್ಲೆ ಅಮ್ಮ ತೀರೋಗಿದ್ರು. ನನಗ ಬುದ್ದಿ ಬರುವಾಗ ಅಪ್ಪನೂ ಇರ್ಲಿಲ್ಲ ಅನ್ನು. ಹೆಣ್ಣು ಕೇಳೂಕ ಬಂದೋರಿಗೊಂದು ಐವತ್ತು ದಾಟಿತ್ತೇನೋ? ಅವ್ರ ಮಕ್ಕಳೆಲ್ಲ ನಮ್ಮಣ್ಣನ ಪ್ರಾಯದೋರು ಕಾಣು. ಎರಡು ಹೆಂಡ್ರು ತರ‍್ಕಂಡು ಮೂರನೇ ಮದೀಗೆ ನನ್ನ ಕೇಳೂಕೆ ಬಂದೀರು. ಅಣ್ಣಂಗೆ ಏನು ಮಾಡೂಕು ಗೊತ್ತಾಗ್ಲಿಲ್ಲ. ಊರ ದೊಡ್ಡೋರನ್ನ ಒಂದು ಮಾತು ಕೇಳ್ದ. ನನ್ ಗಂಡನ ಮನಿಲಿ ಭಾರೀ ಸೀಮಂತ್ರೆ. ಗದ್ದಿ ಬೇಸಾಯ, ಅಡಿಕಿ ತೋಟ, ತೆಂಗಿನ ತೋಟ ಎಲ್ಲ ಇತ್ತ ಗಡ. ಅದ್ಕೆ ಊರೋರೆಲ್ಲ ತಾಯಿಲ್ದ ತಬ್ಲಿ, ಉಂಡುಡುಕೆಲ್ಲ ಕಡಿಮಿಯಾಗಲ್ಲ. ಕೊಡು ಅಂದ್ರಂತೆ. ನಮ್ ಮದಿ ಇಲ್ಲೇ ನಮ್ ಮಾವನ ಮನಿ ಅಂಗಳದಲ್ಲಿ ನಡೆದೋಯ್ತು. ಮದಿ ದಿನ ಆ ಆರು ಮೊಳದ ಸೀರೀನ ನಂಗೆ ಉಡುಸೂಕಾಗ್ದೆ ಅತ್ತಿದೀರೆಲ್ಲ ಪರದಾಡಿದ್ದೊಂದು ನೆನಪಿತ್ತು ಕಾಣು. ಮದಿ ಮಗ್ದು ಇನ್ನೇನು ದಿಬ್ಬಾಣ ಗಂಡಿನ ಮನಿಗೆ ಹೊರಡ್ಬೇಕು ಅಂದಕೂಡಲೇ ಸುರುವಾಯ್ತು ಕಾಣು, ಧೋ ಅಂಬೋ ಮಳಿ. ಹೊಳಿಯೆಲ್ಲ ತುಂಬಿ ದಾಟೂಕಾಗ್ದೆ ಎಲ್ಲರೂ ಹಿಂದೇ ಬಂದ್ರು. ಬಂದ್ರೆ ನಮ್ಮನಿಯಲ್ಲಿ ಮಲಗೂಕೆಲ್ಲಿ ಜಾಗಿತ್ತು? ಮಾವನ ಮನೀಲೆ ಉಳಕಂಡ್ರು. ಬೀಗರು ಉಳದಾರೆ ಅಂದ್ಕಂಡು ಕೋಳಿ ಆಸಿ ಮಾಡಿದ್ರು. ಮೂರು ದಿನಾನೂ ಕೋಳಿನೆ. ನಾಕನೇ ದಿನಕ್ಕಂತೂ ನೆಗಸು ಇಳ್ದು ಗಂಡನ ಮನಿಗೆ ದಿಬ್ಬಣ ಹೊರಟಿತು. ಸೀರಿ ಉಟ್ಕ ನೆಡುಕಾರೂ ಬತ್ತಾ ನಂಗೆ? ಇಲ್ಲಿಂದ ಅಲ್ಲಿವರೆಗೂ ನನ್ನ ಗಂಡ ಹೆಗಲ ಮ್ಯಾನೆ ಕೂರಸ್ಕಂಡು ಹೋಗೀರು. ಮನಿಗೆ ಹೋಗಿ ವಾರ ಆಗಿತ್ತೇನೊ? ಕೋಳಿ ಆಸಿ ತಿಂದದ್ಕೊ, ಮಳಿಲಿ ನೆನಕಂಡು ಹೋದ್ದಕ್ಕೋ ನನ್ ಗಂಡ ಜರ ಏರಿ ಮಲಗಿಬಿಟ್ರು. ಮಲಗ್ದೋರು ಮತ್ತೆ ಏಳ್ಲಿಲ್ಲ ಕಾಣು. ನಾನೊಂದು ವಾರ ಅಲ್ಲಿದ್ದೆ. ಮತ್ತೆ ಹನ್ನೆರ್ಡು ದಿನಕ್ಕೆ ಮೀಸಲು ಇಡೂಕೆ ಅಣ್ಣ ಹೋಗಿದ್ನಲ್ಲೆ, ಬರೂವಾಗ ಏನನ್ಸಿತೇನೋ? ಕರ್ಕಂಡೇ ಬಂದ ಕಾಣು.” ಎಂದು ಕಥೆ ಮುಗಿಸಿದಳು.

“ನಾಗಜ್ಜೀ, ನಿನ್ನ ಗಂಡನ ಮನೀಲಿ ಅಷ್ಟು ಸೀಮಂತ್ರು ಅಂದೆ. ಮತ್ತೆ ನಿಂಗೆ ಎಷ್ಟು ಆಸ್ತಿ ಸಿಕ್ತು?” ಎಂದು ಪ್ರಶ್ನಿಸಿದಳು ನೀಲಿ. “ಅದ್ರ ಕತಿ ಎಂಥ ಕೇಳ್ತೆ. ನನ್ನ ಗಂಡನಿಗೆ ಆರು ಜನ ಹೊಂತಕಾರಿ ಗಂಡುಮಕ್ಕಳಿದ್ರೆ. ನನ್ನ ಗಂಡನ ಬೂದಿ ಮಾಡಿ ಬಂದಿದ್ದೇ ಅದೆಂಥದ್ದೋ ಕಾಗ್ತದ ಮ್ಯಾಲೆ ನನ್ ಮಸಿಬೆರಳಿಟ್ಟು ಒತ್ಗಬಿಟ್ರು. ಕೈ ಬೆರಳೊಂದು ನೋಯ್ತಿತ್ತು ಮಾರಾತಿ ಕಡಿಮೆಯಲ್ಲ. ಆದ್ರೂ ನನ್ ಮರಿತಿಲ್ಲ ಕಾಣು, ಒಳ್ಳೆ ಜನಗಳು. ಈಗ್ಲೂ ಕುಟುಂಬ್ದಲ್ಲಿ ಮದ್ವಿ, ಕಾರ್ಯ ಆದ್ರೆ ಇಲ್ಲಿವರೆಗೂ ಬಂದು ಕಾಲು ಹಿಡ್ದು ಸೀರಿ ಕೊಟ್ಟು ಹ್ವಾತ್ರು. ಇಷ್ಟ ಇತ್ತು ಕಾಣು ಅಜ್ಜಿಕತಿ.” ಎಂದಳು. ಸೀತಜ್ಜಿ, ಗೌರಜ್ಜಿ, ಅಮ್ಮಣ್ಣೆಜ್ಜಿ ಇವರ ಕತೆಗಳೂ ಇದಕ್ಕಿಂತ ಬೇರೆಯೇನಿರಲಿಲ್ಲ. ಅವರೆಲ್ಲರೂ ತಮ್ಮ ಮದುವೆಯ ಕತೆಯನ್ನು ಯಾವುದೇ ವಿಷಾದಗಳಿಲ್ಲದೇ ಹೇಳಿಕೊಳ್ಳುತ್ತಿದ್ದರು. ಆದರೆ ಇವರ ನಂತರದ ತರುವಾಯದವರಾದ ಕೆಂಪಿ, ಗಣಪಿ, ನಾಗವೇಣಿಯರು ತಮ್ಮ ಮದುವೆಯ ಕತೆಯನ್ನು ಇಷ್ಟು ತಣ್ಣಗೆ ಹೇಳುತ್ತಿರಲಿಲ್ಲ. ಅವರ ಮಾತುಗಳಲ್ಲಿ ಕಹಿ, ಸಿಟ್ಟು, ಹತಾಶೆ ಎಲ್ಲವೂ ಮಡುಗಟ್ಟಿದ್ದವು. ಇದಲ್ಲದೇ ಊರಿಗೆ ಬಂದಾಗಲೆಲ್ಲ ಒಂದು ಬಗೆಯ ನಗುವಿನ ಅಲೆಯನ್ನೇ ಹೊತ್ತು ಬರುತ್ತಿದ್ದ ಸುಗಂಧಿಯ ಕತೆಯೂ ನೀಲಿಯನ್ನು ಕಾಡತೊಡಗಿತು. ಸುಭದ್ರಮ್ಮನ ಒಬ್ಬಳೇ ಮಗಳು ಸುಗಂಧಿ ಊರಿಗೆ ಬಂದರೆ ನೀಲಿಯ ಅಮ್ಮನನ್ನು ಭೇಟಿಯಾಗದೇ ಹೋಗುವವಳಲ್ಲ. ಹಾಗೆ ಬಂದಾಗಲೆಲ್ಲ ಅಂಗಳದಲ್ಲಿರುವ ಅಜ್ಜಿಯಂದಿರು, “ನಮ್ ಸುಗಂಧಿಗೊಂದು ಮಗು ಕೊಡು ದೇವ್ರೇ ಅಂತ ನಾವು ಬೇಡದ ದೇವರಿಲ್ಲ. ಅದ್ಯಾಕೆ ಮಗಳೇ ಇನ್ನೂ ಮುಟ್ಟು ನಿಂತಿಲ್ಲ?” ಎಂದು ನೇರಾನೇರ ಕೇಳುತ್ತಿದ್ದರು. ಅದಕ್ಕೆ ಸುಗಂಧಿ ದೊಡ್ಡ ಶಬ್ದಮಾಡಿ ನಗುತ್ತಾ, “ನಾನು ಹೀಗೆ ಆರಾಮಾಗಿ ಓಡಾಡ್ಕೊಂಡು ಇರೋದು ನಿಮಗ್ಯಾರಿಗೂ ಬೇಕಾಗಿಲ್ಲ. ಮಗು, ಹೇಲು, ಉಚ್ಚೆ ಇದ್ನೆಲ್ಲ ಯಾರು ಬರಗ್ತಾರೆ ಬಿಡಜ್ಜಿ.” ಎಂದು ಮಾತು ಜಾರಿಸುತ್ತಿದ್ದಳು. ಆದರೆ ಒಳಮನೆಯಲ್ಲಿ ನೀಲಿಯ ಅಮ್ಮನೊಂದಿಗೆ ನಡೆಸುತ್ತಿದ್ದ ಮಾತುಕತೆಯೇ ಬೇರೆಯಾಗಿತ್ತು.

“ಏನಾದರೂ ಸುಧಾರಣೆ ಇದೆಯೇನೆ ಸುಗಂಧಿ?” ಎಂಬ ಅಮ್ಮನ ಮಾತಿಗೆ, “ಎಲ್ಲಿಯ ಸುಧಾರಣೆ ಚೆನ್ನಿ? ಹುಟ್ಟಾ ಬಂದ ರೋಗ ಅದು. ಹುಚ್ಚಾದ್ರೆ ಔಷಧಿ ಮಾಡಿ ಗುಣ ಮಾಡಬಹುದು. ಇದಕ್ಕೆ ಬುದ್ದಿಯೇ ಇಲ್ಲ ಚೆನ್ನಿ. ದೇಹವೊಂದೇ ಬೆಳೆದಿದೆ. ತಲೆಒಳಗೆ ಇರೋದು ಆರುತಿಂಗಳ ಮಗುವಿನ ಬುದ್ದಿ. ತಿನ್ನಿಸಿದ್ರೆ ತಿಂತದೆ, ಇಲ್ಲಾಂದ್ರೆ ಕಿರಚ್ತದೆ. ಚಾಕರಿ ಮಾಡೂಕೊಂದು ಜನ ಬೇಕಂತ ನನ್ನ ಕುತ್ತಿಗೆಗೆ ಕಟ್ಟಿದ್ರು. ಸತ್ರೂ ಸರಿ, ನಾನವನ ಕೋಣೆಗೆ ಕಾಲು ಹಾಕೋದಿಲ್ಲ ಅಂತ ಅತ್ತೆ, ಮಾವಂಗೆ ತಾಕೀತು ಮಾಡಿದ್ದೆ. ಮೊದಮೊದಲೆಲ್ಲ ಭಾರೀ ಇತ್ತು ಜೋರು. ನಾನ್ ಸೊಪ್ಪ ಹಾಕಲಿಲ್ಲ. ಈಗ ಗೊತ್ತಾಗದೆ, ಬಗ್ಗೋಳಲ್ಲ ಇವ್ಳು ಅಂತ. ರುಚಿರುಚಿಯಾಗಿ ಮೂರು ಹೊತ್ತು ಅಡುಗೆ ಮಾಡಿ ಹಾಕ್ತೇನೆ. ನಾನು ಉಂಡದ್ದಕ್ಕೊಂದು ಪರಿಹಾರ ಬೇಕಲ್ಲ. ತಿಂದ್ಕೊಂಡು ಆರಾಮಾಗಿದ್ದಾರೆ.” ಎಂದು ನಿಟ್ಟುಸಿರಾಗುತ್ತಿದ್ದಳು. “ಆದ್ರೂ ನಿಮ್ಮ ಅಪ್ಪ ಅಮ್ಮ ಒಂಚೂರು ಇಚಾರ ಮಾಡ್ಬೇಕಿತ್ತಲ್ವಾ? ಇದ್ದದ್ದೊಂದು ಮಗಳು, ಹೀಗ್ ಮಾಡ್ಬಾರ‍್ದು ಅಂತ…….” ನೀಲಿಯ ಅಮ್ಮ ರಾಗವೆಳೆದರೆ ಸುಗಂಧಿ ನಕ್ಕುಬಿಡುತ್ತಿದ್ದಳು. “ದುಡ್ಡು! ದುಡ್ಡಿನೆದುರು ಬ್ಯಾರೇ ಯಾವ್ದೂ ಲೆಕ್ಕಕ್ಕಿಲ್ಲ. ಮದುವೆಯಾದ್ರೆ ಹುಚ್ಚು ಬಿಡತ್ತೆ ಅಂತ ಜಾತ್ಕದಲ್ಲಿದೆ ಅಂತ ನಂಬಿಸಿದ್ರು. ಇವ್ರು ಬಾಯಿ ಕೆಳ್ಕೊಂಡು ನಂಬಿದ್ರು. ಹೋಗ್ಲಿಬಿಡೆ, ನನ್ ಕರ್ಮಕ್ಕೆ ಯಾರನ್ನಂದು ಏನು ಪ್ರಯೋಜನ? ಲೋಕದ ಕಣ್ಣಿಗೆ ಸುಖವಾಗೇ ಇದ್ದೀನಿ. ಕಾಲ ಹೀಗೆ ಇರೋದಿಲ್ಲ. ಹೇಗೂ ಕುಟುಂಬಕ್ಕೆ ಒಬ್ನೇ ಮಗ. ನನ್ನ ದಿನಾ ಬಂದಾಗ ನಿಮ್ ನೀಲಿಯಂಥ ಒಂದು ಮುದ್ದಾದ ಮಗೂನ ದತ್ತು ತಗೊಂಡು ಸಾಕಿ ಅಮ್ಮ ಆಗ್ತೀನಿ ನೋಡು.” ಎನ್ನುತ್ತಾ ಉಟ್ಟಿದ ಜರಿಸೀರೆಯನ್ನು ಇನ್ನಷ್ಟು ಒಪ್ಪಗೊಳಿಸುತ್ತಾ ಹೊರಡುತ್ತಿದ್ದಳು. ಅವಳು ನಡೆದರೆ ಸುತ್ತಲೂ ಉಲ್ಲಾಸದ ಅಲೆಯೊಂದು ಅವಳೊಂದಿಗೆ ನಡೆಯುತ್ತಿತ್ತು.

ನೀಲಿಯ ಅಸೈನ್‌ಮೆಂಟಿಗೆ ತರಗತಿಯಲ್ಲಿ ಪ್ರಥಮ ಬಹುಮಾನ ಬಂದಿತ್ತು. ಇತಿಹಾಸ ಅಧ್ಯಾಪಕರು ಅದನ್ನು ಚಂದದ ಫೈಲಿನಲ್ಲಿ ಜೋಡಿಸಿ ಶಾಲೆಗೆ ಬಂದವರಿಗೆಲ್ಲ ಓದಲು ನೀಡುತ್ತಿದ್ದರು. ದೊಡ್ಡ ಶಾಲೆಯ ವಾರ್ಷಿಕೋತ್ಸವದಲ್ಲಿ ಅದಕ್ಕಾಗಿ ಅವಳಿಗೆ ‘ಭಾರತೀಯ ಮಹಿಳೆಯರ ಸ್ಥಿತಿಗತಿಗಳು’ ಎಂಬ ಪುಸ್ತಕವೂ ಬಹುಮಾನವಾಗಿ ದೊರೆಯಿತು. ಉತ್ತರವೇ ಸಿಗದ ನೀಲಿಯ ಅನೇಕ ಪ್ರಶ್ನೆಗಳಿಗೆ ಆ ಪುಸ್ತಕದಲ್ಲಿ ಉತ್ತರವೂ ಅಡಕವಾಗಿತ್ತು.