ರಸ್ತೆಯಲ್ಲಿ ನಡೆದು ಹೋಗುತ್ತಿರುವ ಐವತ್ತೈದು ವರ್ಷದ ಒಬ್ಬಳು ಸ್ತ್ರೀಯ ಮೇಲೆ ಮೂವತ್ತೈದು ಒಬ್ಬ ವರ್ಷದ `ಮನುಜ’ ಕೈ ಮಾಡಿದ. ಯಾಕೆ ಎಂದು ವಿಚಾರಿಸಿದಾಗ `ಆಕೆ ಪ್ರಚೋದನಕಾರಿಯಾಗಿ ಉಡುಪು ಹಾಕಿಕೊಂಡಿದ್ದಳು’ ಎಂದು ಹೇಳಿದ. ನ್ಯಾಯಾಧೀಶರು ಅವನಿಗೆ ಒಂದು ಲಘು ಶಿಕ್ಷೆ ವಿಧಿಸಿ ತೀರ್ಪಿನ ಜೊತೆಗೆ ಒಂದು ಷರಾ ಬರೆದರು. `ಸ್ತ್ರೀಯ ಉಡುಪು ಪ್ರಚೋದನಕಾರಿಯಾಗಿರಬಾರದು’.
ಇದು ಬುದ್ಧಿಯುಳ್ಳವರು ಮತ್ತು ಪ್ರಜ್ಞೆಯುಳ್ಳವರು ಎಂದು ತಿಳಿಯಲ್ಪಡುವ ಮನುಷ್ಯರ ನಡುವೆ ಎಷ್ಟು ವಾದ ವಿವಾದ, ತರ್ಕ ಕುತರ್ಕಗಳಿಗೆ ದಾರಿ ಮಾಡಿಕೊಟ್ಟಿತೆಂದರೆ, ಅದರಿಂದ ಹುಟ್ಟಿದ ಪ್ರಶ್ನೆಗಳ ಸ್ಯಾಂಪಲ್ ಕುತೂಹಲಕಾರಿಯೂ ಪ್ರಚೋದನಕಾರಿಯೂ ಆಗಿದೆ. `ಪ್ರಚೋದನಕಾರಿಯಾಗಿ ಉಡುಪು ಹಾಕಿಕೊಳ್ಳುವುದು’ ಮತ್ತು `ಉಡುಪು ಪ್ರಚೋದನಕಾರಿಯಾಗಿಯಾಗಿರುವುದು’ ಎರಡೂ ಒಂದೆಯೇ ಅಥವಾ ಬೇರೆ ಬೇರೆಯೇ’ ಎನ್ನುವುದು ಮುಖ್ಯ ಪ್ರಶ್ನೆ. ಈ ಉಪದೇಶ ಪ್ರಪಂಚದ ಎಲ್ಲಾ ದೇಶಗಳಿಗೆ ಅನ್ವಯಿಸುತ್ತದೆಯೆ, ಭಾರತಕ್ಕೆ ಮಾತ್ರವೆ? ಒಂದು ವೇಳೆ ಭಾರತಕ್ಕೆ ಮಾತ್ರ ಎಂದಾದರೆ, ಅಖಂಡ ಭಾರತಕ್ಕೊ ಅಥವಾ ಕೆಲವು ರಾಜ್ಯಗಳಿಗೆ ಮಾತ್ರವೊ? ಇದು ಎಲ್ಲ ಸಮುದಾಯಗೆ ಅನ್ವಯಿಸುತ್ತದೆಯೋ, ಕೆಲವು ಸಮುದಾಯಗಳಿಗೆ ಮಾತ್ರವೊ? ಒಂದು ಸಮುದಾಯದ ಸ್ತ್ರೀಯ ಉಡುಪು ಇನ್ನೊಂದು ಸಮುದಾಯದಲ್ಲಿ ಪ್ರಚೋದನಕಾರಿಯೆನಿಸಬಹುದೆಂದಾದರೆ, ಪ್ರಚೋದನಕಾರಿಯಾದ ಉಡುಪಿನ ಬಗ್ಗೆ ಸರ್ವಸಮ್ಮತವಾದಂಥ ವ್ಯಾಖ್ಯಾನ ಇದೆಯೆ? ಇಂಥ ಒಂದಲ್ಲ ಎರಡಲ್ಲ, ನೂರು ಪ್ರಶ್ನೆಗಳನ್ನು ಕೇಳಬಹುದು. ಉತ್ತರಗಳು ಕೂಡ ಉಡುಪುಗಳಷ್ಟೇ ವರ್ಣಮಯವೂ ವೈವಿಧ್ಯಮಯವೂ ಆಗಿರಬಹುದು. `ಪ್ರಚೋದನಕಾರಿಯಾದ ಉಡುಪು ಎನ್ನುವುದು ಹೆಣ್ಣಿಗೆ ಮಾತ್ರ ಸಂಬಂಧಿಸಿದ್ದೆ?’ ಎಂಬ ಪ್ರಶ್ನೆಯಂತೂ ಇನ್ನೂ ಯಾಕೆ ಹುಟ್ಟಿಲ್ಲ ಎನ್ನುವ ಪ್ರಶ್ನೆಯೇ ಹೊಸ ಹೊಸ ಪ್ರಶ್ನೆಗಳಿಗೆ ಪ್ರಚೋದನೆ ನೀಡಬಹುದು. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಕಾಮಶಿಲ್ಪಗಳಿರುವ ದೇಶ ನಮ್ಮದು. ಅವು ಕಾಮ ಪ್ರಚೋದಕ ಎಂದು ನಾವು ಭಾವಿಸುವುದಿಲ್ಲ. ಕಲೆಯೆಂದು ಪರಿಭಾವಿಸುತ್ತೇವೆ. ನಮ್ಮ ಪುರಾತನ ನಾರಿಯರ ಉಡುಪನ್ನು ನಾವು ಪ್ರಚೋದನಕಾರಿ ಎಂದು ತಿಳಿಯುವುದಿಲ್ಲ. ಹಾಗಿರುವಾಗ ಯಾವ ಉಡುಪು ಪ್ರಚೋದನಕಾರಿ ಎಂದು ತಿಳಿಯಬೇಕು?
ಭಾರತದೊಳಗೆ ಎರಡು ಭಾರತಗಳಿವೆ. ಒಂದು ನಗರ ಭಾರತ ಇನ್ನೊಂದು ಗ್ರಾಮೀಣ ಭಾರತ. ಗ್ರಾಮೀಣ ಭಾರತದಲ್ಲಿ ಕೆಲವು ಕಡೆ ಸಾಂಪ್ರದಾಯಿಕವಾಗಿಯೇ ಎಷ್ಟೋ ಸ್ತ್ರೀಯರು ಕಡಿಮೆ ಬಟ್ಟೆ ಹಾಕಿಕೊಳ್ಳುತ್ತಾರೆ. ಕೆಲಸದ ಸಂದರ್ಭಗಳಲ್ಲಿ ಅದು ಇನ್ನಷ್ಟು ಕಡಿಮೆಯಾಗಿರಬಹುದು. ಬಡವರದ್ದು ಮತ್ತಷ್ಟು ಕಡಿಮೆಯಾಗಿರಬಹುದು. ಇದೆಲ್ಲ ಯಾರನ್ನೂ ಪ್ರಚೋದಿಸುವುದಿಲ್ಲ. ನಮ್ಮ ನಗರಗಳಲ್ಲಿ ಆಗಾಗ ಅಲ್ಲಿ ಇಲ್ಲಿ ಪಶ್ಚಿಮದ ನಾರಿಯರು ಎರ್ರಾಬಿರ್ರಿಯಾಗಿ ಉಡುಪು ಹಾಕಿಕೊಂಡು ಓಡಾಡುವುದನ್ನು ಕಾಣಬಹುದು. ನಾಲ್ಕೈದು ದಶಕಗಳ ಹಿಂದೆ ಅವರನ್ನು ಬೆರಗಿನಿಂದ ಬಾಯಗಲಿಸಿ ವೀಕ್ಷಿಸುವವರನ್ನು ಕಾಣಬಹುದಾಗಿತ್ತು. ಈಗ ಆ ಬೆರಗು ಮಾಯವಾಗಿದೆ ಎಂದೇ ಹೇಳಬಹುದು. ಯಾಕೆಂದರೆ, ಅಂತಹ ದೃಶ್ಯ ನಗರದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಪೂರ್ವದ, ಪಶ್ಚಿಮದ ಮತ್ತು ಆಫ್ರಿಕದ ಎಷ್ಟೋ ದೇಶಗಳಲ್ಲಿ ಸ್ತ್ರೀಯರು ಸೊಂಟದಿಂದ ಮೇಲೆ ಮತ್ತು ಮೊಳಕಾಲ ಕೆಳಗೆ ಹೆಚ್ಚು ಬಟ್ಟೆ ಹಾಕಿಕೊಳ್ಳದೆ ಒಡಾಡುತ್ತಾರೆ. ಸೊಂಟದ ಮೇಲೆ ಬಟ್ಟೆ ಹಾಕಿಕೊಳ್ಳದ ಸಮುದಾಯಗಳು ಕೂಡ ಇವೆ. ಅವರ ನಡುವೆ ಅಲ್ಲಿನವರು, ಬಂದವರು ಎಲ್ಲರೂ ಆರಾಮವಾಗಿ ಓಡಾಡಿಕೊಂಡಿರುತ್ತಾರೆ. ಯಾರಿಗೂ ತಲೆಬಿಸಿ ಆಗುವುದಿಲ್ಲ.
ನಮ್ಮ ನಡುವೆ ಇರುವ ತರುಣ ವಯಸ್ಸಿನವರಲ್ಲಿ `ನೋಡುವ ಹುಡುಗರು’ ಎಂಬೊಂದು ವರ್ಗವಿದೆ. ಇವರು ನೋಡುವುದಕ್ಕೋಸ್ಕರ ಜಾತ್ರೆಗೆ ಹೋಗುತ್ತಾರೆ. ನಗರಕ್ಕೆ ಹೋಗುತ್ತಾರೆ. ನಗರದಲ್ಲಿ ಪ್ರತ್ಯೇಕವಾದ ರಸ್ತೆ ಬೀದಿಗಳಿಗೆ ಹೋಗುತ್ತಾರೆ. ಜಗತ್ತನ್ನು ನೋಡುತ್ತಾರೆ. ಏನೋ ತಿಳಿದುಕೊಂಡು ಮನೆಗೆ ಮರಳುತ್ತಾರೆ. ಇವರಿಂದ ಯಾರಿಗೂ ಯಾವ ಅಪಾಯವೂ ಇಲ್ಲ. ಇವರಲ್ಲಿ ಕೆಲವರು ಬೇಗ ಮದುವೆಯಾಗುತ್ತಾರೆ, ಕೆಲವರು ಬಹಳ ತಡವಾಗಿ ಮದುವೆಯಾಗುತ್ತಾರೆ. ನೂರರಲ್ಲಿ ಒಬ್ಬಿಬ್ಬರು ಹಾಳಾಗಿ ಹೋಗಲು ಅವರಿಗೆ ಸಿಕ್ಕ ಪ್ರಚೋದನೆ ಯಾವುದು ಎನ್ನುವ ಬಗ್ಗೆ ಸಮಾಜ ತಲೆ ಕೆಡಿಸಿಕೊಳ್ಳುವುದಿಲ್ಲ. ಮನುಷ್ಯ ಹಾಳಾಗಲು ಅಥವಾ ಒಳ್ಳೆಯವನಾಗಲು ಪ್ರಚೋದನೆ ಹೊರಗೆ ಅವನು ಕಂಡ ವಸ್ತುವಿನಿಂದಲೇ ಹುಟ್ಟಬೇಕೆಂದಿಲ್ಲ. ಕಾಮ ಕೆಟ್ಟದಲ್ಲ. ಸುಂದರವಾಗಿಟ್ಟುಕೊಂಡರೆ ಅದು ಸುಂದರ; ವಿಕಾರವಾಗಿಟ್ಟುಕೊಂಡರೆ ವಿಕಾರ. ಈ ಮಾತು ಎಲ್ಲದಕ್ಕೂ ಅನ್ವಯಿಸುತ್ತದೆ. ಪ್ರಚೋದನೆಗೊಳಗಾಗುವ ಗುಣವನ್ನು ಸುಟ್ಟು ಹಾಕಲಿಕ್ಕೆ ಆಗಲಿಕ್ಕಿಲ್ಲ.
ಸಮಾಜದಲ್ಲಿ ಜೀವಿಸುವ ನಿಜವಾದ ಮನುಷ್ಯನ ಒಳಗೆ ನೀತಿಪ್ರಜ್ಞೆಯಿರುತ್ತದೆ, ಇರಲೇ ಬೇಕು. ಇವತ್ತಿನ ಸಮಾಜ ವ್ಯಕ್ತಿಗೆ ಎಂಥ ನೀತಿಯ ಮಾದರಿಗಳನ್ನು ನೀಡುತ್ತಿದೆ. ಮನುಷ್ಯನನ್ನು ಸಾಂಸ್ಕೃತಿಕವಾಗಿ ಎಷ್ಟು ವಿಚಾರಶೀಲನನ್ನಾಗಿ ಮಾಡುತ್ತಿದೆ? ದೈಹಿಕ ಆರೋಗ್ಯವನ್ನು ಹೆಚ್ಚಿಸುವ ಕ್ಯಾಂಪುಗಳು ನಿರಂತರ ನಡೆಯುತ್ತವೆ. ಸ್ನಾಯುಬಲ ವರ್ಧನೆಗೆ ಅಸಂಖ್ಯ ಜಿಮ್‌ಗಳಿವೆ. ವ್ಯಕ್ತಿತ್ವ ವಿಕಾಸದ, ಯಶಸ್ಸಿನ ಪಾಠಗಳನ್ನು ಕಲಿಸುವ ಗುರುಗಳಿದ್ದಾರೆ. ಆದರೆ ಮನುಷ್ಯನ ಒಳಗೆ ಇರುವ ನೀತಿಪ್ರಜ್ಞೆಯನ್ನು ಎಚ್ಚರಿಸಲು ಯಾರು ಏನು ಮಾಡುತ್ತಿದ್ದಾರೆ? `ಮನುಷ್ಯನ ಎಜುಕೇಶನ್’ ಎನ್ನುವುದು ಶಾಲೆ ಕಾಲೇಜುಗಳಲ್ಲಿ ನಡೆಯುತ್ತಿದೆಯೆ? ಪ್ರತಿ ಮನುಷ್ಯನಲ್ಲಿ ಸೆಕೆಂಡ್ ಥಾಟ್ ಅಥವಾ ಮರುಚಿಂತನೆ ಎನ್ನುವ ಒಂದು ಗುಣವಿದೆ. ಅದನ್ನು ಉಪಯೋಗಿಸುವ ಮೂಲಕ ಅರೆವಾಸಿ ಅಪರಾಧಗಳನ್ನು ತಡೆಗಟ್ಟಬಹುದು, ಅಸಂಖ್ಯಾತ ಜಗಳಗಳನ್ನು ತಪ್ಪಿಸಬಹುದು. ಆ ಗುಣವನ್ನು ಕತೆ ಕಾವ್ಯದ ಮೂಲಕ ಕಲಿಸಬೇಕೇ ವಿನಾ `ನಾತಿ ಚರಾಮಿ’ ವಿಧಾನದ ನೀತಿ ಬೋಧನೆ, ಧರ್ಮಪ್ರವಚನ ಅಥವಾ ಧರ್ಮೀಯ ಧ್ವನಿಯ ಮೋರಲ್ ಸಯನ್ಸ್ ಇತ್ಯಾದಿಗಳಿಂದಲ್ಲ. ಈ ಸತ್ಯವನ್ನು ಶಿಕ್ಷಣದಲ್ಲಿ ಗುರುತಿಸಿ ಅನುಷ್ಠಾನಕ್ಕೆ ತರುವ ಪ್ರಯತ್ನ ಯಾರು ಮಾಡಿದ್ದಾರೆ?
ಇಷ್ಟಕ್ಕೂ ಈ `ಪ್ರಚೋದನೆ’ಗೊಳಗಾಗಿ ಸ್ತ್ರೀಯೊಬ್ಬಳ ಮೇಲೆ ಕಾಮಾಕ್ರಮಣ ಮಾಡುವ ಮಂದಿ ಯಾರು? ಅವರ ಸಂಖ್ಯೆ ಎಷ್ಟು? ಎಲ್ಲೋ ನಡೆದ ಒಂದು ಪ್ರಕರಣಕ್ಕೆ `ಆ ಹೆಣ್ಣು ಮತ್ತು ಆ ಗಂಡು’ ಇಬ್ಬರೂ ಕಾರಣವಾಗಿರುವುದೂ ಇದೆ. ಆದರೆ ಮಾಧ್ಯಮಗಳಲ್ಲಿ ಇಂಥ ಪ್ರಕರಣಗಳ ಕುರಿತು ಚರ್ಚೆ ನಡೆಯುವ ರೀತಿ ನೋಡಿದರೆ ಪ್ರಚೋದನೆಗೊಳಗಾಗುವುದು ಮನುಕುಲದ ಪ್ರಾರಬ್ಧ ಎಂದು ಸಾರುವಂತೆ ಇದೆ. `ನೋಡಿ, ಮರಳಿ ಮರಳಿ ನೋಡುತ್ತಾ ಇರಿ, ಅದರೆ ಪ್ರಚೋದನೆಗೊಳಗಾಗಬೇಡಿ’ ಎನ್ನುವ ಕಮರ್ಷಿಯಲ್ ಮತ್ತು ಇಮೋಶನಲ್ ದೃಶ್ಯಪಾಠಗಳಂತೂ ದೃಶ್ಯಮಾಧ್ಯಮವನ್ನು ತುಂಬಿ ಹೊರ ಚೆಲ್ಲುತ್ತಾ ಇವೆ. ಪ್ರಚೋದನೆಯ ಕುರಿತು ಇಷ್ಟು ಶಬ್ದ ಮತ್ತು ಚಿತ್ರ ಮಾಡುವಾಗ, ಸ್ವರಕ್ಷಣೆ ಮತ್ತು ಜಾಗ್ರತೆಯ ವಿಧಾನಗಳನ್ನು ತಿಳಿಸಬೇಕಲ್ಲ? ಉಡುಗೆ ತೊಡುಗೆಯ ಮೇಲೆ ಮಾತಿನ ಆಕ್ರಮಣ ಮಾಡಿದಷ್ಟೂ ಉಡುಪು ಹೆಚ್ಚು ಹೆಚ್ಚು ಆಕರ್ಷಕವಾಗುವುದನ್ನು ಎಷ್ಟು ವರ್ಷಗಳಿಂದ ನಾವು ನೋಡುತ್ತಿಲ್ಲ?
ಪ್ರಚೋದನೆ ಎನ್ನುವುದು ಕೇವಲ ಹೆಣ್ಣಿನ ಉಡುಗೆಗೆ ಸಂಬಂಧಪಟ್ಟದ್ದೆ? ಕುಡಿತಕ್ಕೆ ಪ್ರಚೋದನೆ ನೀಡುವ ಶರಾಬಂಗಡಿಯ ಬೋರ್ಡು, ದರೋಡೆಗೆ ಪ್ರಚೋದನೆ ನೀಡುವ ಆಭರಣದಂಗಡಿಗಳು, ತಿನ್ನಲು ಪ್ರಚೋದನೆ ನೋಡುವ ಬೇಕರಿಗಳು ಮತ್ತು ರಸ್ತೆ ಬದಿ ತಿಂಡಿಯ ಗಾಡಿಗಳು, ಕದ್ದುಕೊಳ್ಳಲು ಪ್ರಚೋದನೆ ನೀಡುವ ಯಾರದೋ ಕೈಯಲ್ಲಿರುವ ಹಣದ ಚೀಲ ಇವೆಲ್ಲ ಪ್ರಚೋದಕಗಳಲ್ಲವೆ? ಇಂಥವು ಎಷ್ಟಿರುತ್ತವೆ ಎಂದರೆ, ದುರ್ಬಲ ಮನಸ್ಸಿನ ವ್ಯಕ್ತಿಯನ್ನು ಪ್ರತಿ ದಿನ ಯಾವುದಾದರೊಂದಕ್ಕೆ ಪ್ರಚೋದನೆ ನೀಡುವಷ್ಟಿರುತ್ತವೆ. ಇವುಗಳಿಂದಾಗಿ ಪ್ರಚೋದನೆಗೊಳಗಾಗುವವರ ಸಚಿತ್ರ ಕರ್ಮಕಾಂಡ ಪ್ರತಿ ದಿನ ಪತ್ರಿಕೆಗಳಲ್ಲಿ, ಟೀವಿಯಲ್ಲಿ ವರದಿಯಾಗುತ್ತಲೂ ಇದೆ. ಪ್ರಚೋದನೆಗೊಳಗಾಗಿ ಹೆಣ್ಣಿನ ಮೇಲೆ ಎರಗುವ ಮೃಗವನ್ನು ಬುರ್ಖಾ ಕೂಡ ತಡೆಯಲಾರದು.
ಒಮ್ಮೆ ಯಾರೋ ಒಬ್ಬ ಸಾಕ್ರಟಿಸನೊಡನೆ, `ನಿನ್ನ ಮುಖದಲ್ಲಿ ಕಾಮುಕನ ಲಕ್ಷಣಗಳಿವೆ’ ಎಂದು ಹೇಳಿದನಂತೆ. ಅದಕ್ಕೆ ಸಾಕ್ರಟಿಸ್ `ಹೌದು ನಾನು ತುಂಬಾ ಕಾಮುಕ. ಆದರೆ ನಾನು ನನ್ನ ಕಾಮವನ್ನು ನಿಯಂತ್ರಿಸಿಕೊಂಡಿದ್ದೇನೆ’ ಎದನಂತೆ. ಉಡುಪು ಪ್ರಚೋದನಕಾರಿ ಎಂದು ನಿರ್ಧರಿಸುವುದಾದರೆ ಬುರ್ಖಾ ಧಾರಣೆ ಪ್ರಚೋದನಕಾರಿಯಲ್ಲ ಎಂದು ಹೇಳಬಹುದು. ಪ್ರಚೋದನೆಯ ಮೂಲ ಉಡುಪು ಅಲ್ಲ; ಪ್ರಚೋದನೆಯ ಮೂಲ ಪ್ರಚೋದನೆಗೊಳಗಾಗುವ ವ್ಯಕ್ತಿಯ ಮನಸ್ಸಿನಲ್ಲಿರುವಂಥದು. ಎಲ್ಲರೂ ಬುರ್ಖಾ ಹಾಕಿಕೊಳ್ಳಬೇಕು ಎನ್ನುವ ಕಾನೂನನ್ನು ಜಾರಿಗೆ ತಂದರೆ, ಪ್ರಜಾಪ್ರಭುತ್ವ ಸತ್ತೇ ಹೋದೀತು. ಬುರ್ಖಧಾರಿಗಳ ರಕ್ಷಣೆಗೆ ಶರೀಯತ್, ಸೈನ್ಯಾಧಿಪತ್ಯ, ತಾಲಿಬಾನ್ ಇತ್ತಯಾದಿಯೆಲ್ಲ ಬೇಕಾದೀತು. ನಮ್ಮ ಶಿಲ್ಪಕಲೆ, ಚಿತ್ರಕಲೆ ಮಾತ್ರವಲ್ಲ, ಕಾವ್ಯ, ಕಥೆ ಕಾದಂಬರಿಗಳಲ್ಲಿ ಕೂಡ ಅರ್ಧಾಂಶವನ್ನು ನಾಶಮಾಡಬೇಕಾದೀತು.
ಉಜಿರೆಯಲ್ಲಿ ನೆಲೆಸಿರುವ ಕನ್ನಡದ ಖ್ಯಾತ ಕಾದಂಬರಿಗಾರ. ಇಂಗ್ಲಿಷ್ ಭಾಷಾ ಬೋಧನೆಯ ವಿಶೇಷಜ್ಞ