”ಈ ಕೃತಿಯನ್ನು ಓದುತ್ತ ನನಗೆ ಇತಿಹಾಸವೆಂಬ ಜ್ಞಾನ ಶಾಖೆಯ ಕುರಿತು ಇನ್ನಷ್ಟು ಗೌರವ ಮೂಡಿದೆ: ಇತಿಹಾಸ ಒಂದು ರೀತಿಯಲ್ಲಿ ವಿಜ್ಞಾನಕ್ಕೆ ಸಮಾನ. ವಿಜ್ಞಾನದಲ್ಲಿ ಪ್ರಯೋಗವಿದೆ, ಇತಿಹಾಸದಲ್ಲಿ ಇಲ್ಲ, ಅದೊಂದು ವ್ಯತ್ಯಾಸ; ಇನ್ನು ವಿಜ್ಞಾನಕ್ಕೆ ಕಾಲದ ಹಂಗಿಲ್ಲ, ಇತಿಹಾಸ ಕಳೆದುಹೋದುದನ್ನು ಹುಡುಕುತ್ತದೆ. ಇತಿಹಾಸಕಾರನ ಜವಾಬ್ದಾರಿ ವಿಜ್ಞಾನಿಯ ಜವಾಬ್ದಾರಿಯಂತೆಯೇ ಬಹಳ ದೊಡ್ಡದು. ಇತಿಹಾಸಕಾರ ಒಬ್ಬ ಸತ್ಯಾರ್ಥಿ, ಯಾಕೆಂದರೆ ಆತನ ಕೆಲಸ ಸತ್ಯ ಶೋಧನೆಯಲ್ಲದೆ ಇನ್ನೇನೂ ಅಲ್ಲ”
ಇಂದು ಬಿಡುಗಡೆಗೊಂಡ ಇತಿಹಾಸಜ್ಞ ಷ. ಶೆಟ್ಟರ್ ಅವರ ಹೊಸ ಪುಸ್ತಕಕ್ಕೆ ಕೆ.ವಿ.ತಿರುಮಲೇಶ್ ಬರೆದ ಮುನ್ನುಡಿ.
ಶೆಟ್ಟರ್ ಅವರ ಈ ಹಿಂದಣ `ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ: ಆರಂಭ ಕಾಲದ ದ್ರಾವಿಡ ಸಂಬಂಧದ ಚಿಂತನೆ’ (2007) ಓದಿ ಮೆಚ್ಚಿಕೊಂಡ ನಾನು, ಈ ಕೃತಿಯ ಮೊದಲ ಓದುಗನಾಗುವ ಹುಮ್ಮಸ್ಸಿನಲ್ಲಿ ಇದಕ್ಕೆ ಮುನ್ನುಡಿ ರೂಪದ ಕೆಲವು ಮಾತುಗಳನ್ನು ಬರೆಯಲು ಒಪ್ಪಿಕೊಂಡೆನಲ್ಲದೆ ಯೋಗ್ಯತೆಯಿಂದಲ್ಲ. ಎರಡೆರಡು ಬಾರಿ ಓದಿದೆನಾದರೂ ಇನ್ನೂ ನನ್ನ ಗ್ರಹಣಶಕ್ತಿಗೆ ಬಾರದ ಎಷ್ಟೋ ವಿಷಯಗಳು ಉಳಿದಿವೆ. ಯಾಕೆಂದರೆ, ಪುಸ್ತಕದ ಶೈಲಿ ಸರಳವಾಗಿದ್ದರೂ ದಟ್ಟ ಬರವಣಿಗೆಯಾಗಿದೆ. ಶೆಟ್ಟರ್ ಅವರು ನಿರೂಪಿಸುವ ವಿಷಯ ಹಲವು ಪರಾಮೀಟರುಗಳನ್ನು ಒಳಗೊಂಡಿದೆ: ಕಾಲ, ದೇಶ, ಧರ್ಮ, ಭಾಷೆ, ಲಿಪಿ, ಸಾಹಿತ್ಯ, ರಾಜಕೀಯ ಮುಂತಾಗಿ. ಕ್ರಿ.ಪೂ. ಮೂರನೆಯ ಶತಮಾನದಿಂದ ಕ್ರಿ.ಶ. ಮೂರನೆಯ ಶತಮಾನದ ತನಕದ ಅರ್ಧಸಹಸ್ರಮಾನಗಳನ್ನು ಮಾತ್ರವಲ್ಲದೆ, ಅದರ ನಿಕಟೋತ್ತರದ ಐದಾರು ಶತಮಾನಗಳಷ್ಟು ಕಾಲವನ್ನು ನಾವು ಲೇಖಕರ ಜತೆ ಕ್ರಮಿಸಬೇಕಾಗುತ್ತದೆ; ಭರತಖಂಡದ ಪಶ್ಚಿಮೋತ್ತರ, ಮಧ್ಯ ಹಾಗೂ ದಖ್ಖಣದ ಮಿಕ್ಕ ಭಾಗಗಳಲ್ಲೂ, ಎಂದರೆ ಪ್ರಧಾನವಾಗಿ ಅಶೋಕನ ಸಾಮ್ರಾಜ್ಯದಲ್ಲಿ, ಅವರು ನಮ್ಮನ್ನು ಅಲೆಸುತ್ತಾರೆ; ಬೌದ್ಧ ಮತ್ತು ಜೈನಧರ್ಮಗಳ ಆರಂಭದ ಮತ್ತು ತದನಂತರದ ಕೆಲವು ಭಾಷಾನೀತಿಗಳನ್ನು ನಮಗೆ ಪರಿಚಯಿಸುತ್ತಾರೆ.
ಪ್ರಾಕೃತವೇ ಈ ಕೃತಿಯ ಪ್ರಮುಖ ವಿಷಯವಾಗಿದ್ದರೂ, ಅದರ ಉನ್ನತಿ ಮತ್ತು ಅವನತಿಗಳನ್ನು ಸಂಸ್ಕೃತ ಮತ್ತು ಕನ್ನಡದ ಗತಿಸ್ಥಿತಿಗಳ ಜತೆಯಿರಿಸಿಯೇ ವಿವರಿಸಲಾಗಿದೆ. ಯಾಕೆಂದರೆ ಇಲ್ಲಿನ ಪ್ರಧಾನ ವಿಷಯ ಕೇವಲ ಒಂದು ಭಾಷೆಯಲ್ಲ, ಭಾಷೆಗಳ ನಡುವಿನ ಅನುಸಂಧಾನ. ಈ ಎಲ್ಲ ವಿಷಯಗಳೂ (1) `ಕೆಳದಖ್ಖಣದ ಪ್ರಾಕೃತ ಭಾಷಾ ಬರಹ: ಬೌದ್ಧ ಮತ್ತು ಜೈನ ಕೊಡುಗೆ’, (2) `ಬೌದ್ಧರು ನಿರ್ಮಿಸಿದ ಪ್ರಾಕೃತ ಜಗದ್ವಲಯ’, (3) `ಆರಂಭದ ಕಾಲದ ಜೈನರ ಭಾಷಾ ನೀತಿ’, (4) `ಚಾವುಂಡರಾಯ ಮತ್ತು ಶಿವಕೋಟ್ಯಾಚಾರ್ಯರ ಪ್ರಾಕೃತ ಭಾಷಾ ಅನುಸಂಧಾನ’, (5) `ಪ್ರಾಕೃತ ಶಾಸನಗಳಲ್ಲಿ ಬರುವ ‘ಇಸಿಲ’ ಪದದ ಮರುಚಿಂತನೆ’, (6) `ಭಾರತೀಯ ವಾಸ್ತುಶಿಲ್ಪಕ್ಕೆ ಪ್ರಾಕೃತದ ಕೊಡುಗೆ: I. ಬೌದ್ಧಕಾಲೀನ ವಾಸ್ತು-ಶಿಲ್ಪಿಗಳು’, (7) `ಆರಂಭಕಾಲದ ಭಾರತೀಯ ವಾಸ್ತುಶಿಲ್ಪಕ್ಕೆ ಪ್ರಾಕೃತ ಭಾಷಾ ಕೊಡುಗೆ : II. ಬೌದ್ಧ ವಾಸ್ತುಶಿಲ್ಪಗಳು’, (8) `ಪ್ರಾಕೃತ ಕನ್ನಡ ಮತ್ತು ಸಂಸ್ಕೃತ ಪದಗಳ ಅನುಸಂಧಾನ’ ಎಂಬ ಎಂಟು ಅಧ್ಯಾಯಗಳಲ್ಲಿ ಅಡಕವಾಗಿವೆ.
ಒಟ್ಟಾರೆ ಇತಿಹಾಸ ಕಥನದಲ್ಲಿ ವಿಷಯ ಸಮೀಪನದ ದೃಷ್ಟಿಯಿಂದ ಕುತೂಹಲ ಹುಟ್ಟಿಸುವ ಹಲವು ಸಂಗತಿಗಳಿವೆ. ಅವುಗಳಲ್ಲಿ ಒಂದು ಪುಸ್ತಕಕ್ಕೆ ಶೀರ್ಷಿಕೆಯನ್ನು ನೀಡಿದ ‘ಪ್ರಾಕೃತ ಜಗದ್ವಲಯ’ ಎಂಬ ಪರಿಕಲ್ಪನೆ-ಕೃತಿ ನಿರೂಪಣೆಯಲ್ಲೂ ಈ ಪದಗುಚ್ಛ ಹಲವಾರು ಸಲ ಬರುತ್ತದೆ. ಏಕತ್ವವನ್ನೂ ಬಹುತ್ವವನ್ನೂ ಒಟ್ಟಿಗೇ ಹಿಡಿಯುವ ಸುಂದರವಾದ ನುಡಿಗಟ್ಟು ಇದು. ನೃಪತುಂಗನ ‘ವಸುಧಾವಲಯ’ ಎಂಬ ಪದವನ್ನು ನೆನಪಿಗೆ ತರುವಂಥದು. ನೃಪತುಂಗನು ‘ಕನ್ನಡಂಗಳ್’ ಎನ್ನುವಂತೆ, ಅದನ್ನು ನೆನೆದುಕೊಳ್ಳುತ್ತ ಶೆಟ್ಟರ್ ಅವರು ‘ಪ್ರಾಕೃತಂಗಳ್’ ಎಂಬ ಪದವನ್ನು ಬಳಸುತ್ತಾರೆ-ವೈವಿಧ್ಯಮಯವಾದ ಹಲವಾರು ಪ್ರಾದೇಶಿಕ ಪ್ರಾಕೃತಗಳನ್ನು ಮನ್ನಿಸುವುದಕ್ಕೆ. ಪಾಲಿ, ಮಗಧಿ, ಅರ್ಧಮಾಗಧಿ, ಶೌರಸೇನಿ, ಮಹಾರಾಷ್ಟ್ರೀ, ಅಪಭ್ರಂಶ, ಪೈಶಾಚೀ ಎಲ್ಲವೂ ಪ್ರಾಕೃತಗಳೇ. ಇವುಗಳ ಸ್ವಾಯತ್ತತೆ, ಭಿನ್ನತೆ, ಪ್ರಾದೇಶಿಕತೆ, ಲಿಪೀಕರಣ, ಸಾಹಿತ್ಯ, ಕಾಲಭೇದ ಮುಂತಾದವು ವಿಶ್ಲೇಷಣೆಗೆ ಬಿಟ್ಟ ವಿಷಯಗಳು. ಪಾಲಿ ಬಹುಶಃ ಉಳಿದೆಲ್ಲಕ್ಕಿಂತಲೂ ಪ್ರಾಚೀನವಾದ್ದು ಮತ್ತು ಅಪಭ್ರಂಶ ಹಾಗೂ ಪೈಶಾಚೀ ಅರ್ವಾಚೀನವಾದವು. ಪಾಲಿಯನ್ನು ಬೌದ್ಧರು ಪೋಷಿಸಿದ ಕಾರಣ ಅದಕ್ಕೆ ಹೆಚ್ಚಿನ ಪ್ರಸಿದ್ಧಿ ಮತ್ತು ಪ್ರತಿಷ್ಠೆ ದೊರಕಿದವು. ಪೈಶಾಚೀ ಭಾಷೆ ಬಹುಶಃ ಬುಡಕಟ್ಟು ಜನಾಂಗದವರ ಆಡುಮಾತಾದ ಕಾರಣವೋ ಏನೋ, ಅದಕ್ಕೆ ಅಂಥ ಗೌರವ ದೊರಕಿದಂತೆ ತೋರುವುದಿಲ್ಲ. ಅಂತೂ ಸಂಸ್ಕೃತವಲ್ಲದ ಈ ಇಂಡೋ-ಆರ್ಯನ್ ಭಾಷೆಗಳೆಲ್ಲವೂ ಪ್ರಾಕೃತವೆಂದೇ ಅನಿಸಿಕೊಳ್ಳುತ್ತವೆ.
ಸಂಸ್ಕೃತವು ಶಿಷ್ಟ ಭಾಷೆಯೆಂದು ಪರಿಗಣಿತವಾಗಿದ್ದು, ಬಹುಶಃ ಯಾರೂ ಅದನ್ನು ವ್ಯಾವಹಾರಿಕವಾಗಿ ನುಡಿಯುತ್ತಿರಲಿಲ್ಲ. ಸಂಸ್ಕೃತ ನಾಟಕಗಳಲ್ಲಿ ‘ಉಚ್ಚ’ ಪಾತ್ರಗಳ ಮಾತು ಸಂಸ್ಕೃತವೆನ್ನುವುದು ನಿಜ; ಗುರುಕುಲಗಳಲ್ಲಿ, ವಿದ್ವತ್ ಸಭೆಗಳಲ್ಲಿ, ವೈದಿಕ ಆಚರಣೆಗಳಲ್ಲಿ ಪ್ರಾಯಶಃ ಸಂಸ್ಕೃತದ ಬಳಕೆಯಾಗುತ್ತಿತ್ತು. ಅದರೆ ಯಾವಾಗ ಮಹಾವೀರ ಮತ್ತು ಗೌತಮ ಬುದ್ಧರು ವೈದಿಕಧರ್ಮಕ್ಕೆ ಹೊರತಾದ ಜೈನ ಮತ್ತು ಬೌದ್ಧ ಧರ್ಮಗಳನ್ನು (ಈ ಹೆಸರುಗಳನ್ನು ಇಟ್ಟವರು ಅವರ ಅನುಯಾಯಿಗಳು) ಪ್ರಚಾರ ಮಾಡಲು ತೊಡಗಿದರೋ, ಅದಕ್ಕಾಗಿ ಅವರು ಜನರ ಆಡುಮಾತನ್ನು, ಅರ್ಥಾತ್ ಪ್ರಾಕೃತವನ್ನು, ಬಳಸುವುದು ಅಗತ್ಯವಾಯಿತು. ಜನಸಾಮಾನ್ಯರು ಈ ಹೊಸ ಧರ್ಮಗಳಿಂದ ಆಕರ್ಷಿತರಾದರು. ಆದರೆ ಈ ಧರ್ಮಗಳ ಪ್ರಸಾರಕ್ಕೆ ಕೇವಲ ಅವುಗಳಲ್ಲಿನ ನೀತಿಗಳು ಮಾತ್ರವೇ ಕಾರಣ ಎನ್ನುವಂತೆಯೂ ಇಲ್ಲ; ಪ್ರದೇಶದಿಂದ ಪ್ರದೇಶಕ್ಕೆ, ಕಾಲದಿಂದ ಕಾಲಕ್ಕೆ ರಾಜ-ರಾಣಿಯರು ಈ ಧರ್ಮಗಳನ್ನು ಸ್ವೀಕರಿಸಿದ ಚರಿತ್ರೆಯಿದೆ. ರಾಜರು ಹೊಸ ಮತವನ್ನು ಸ್ವೀಕರಿಸಿದರೆ ಜನರೂ ಹಾಗೆ ಮಾಡುತ್ತಾರೆ ಎನ್ನುವುದಕ್ಕೆ ನಮಗೆ ಬೇರೆ ನಿದರ್ಶನಗಳು ಸಾಕಷ್ಟು ಸಿಗುತ್ತವೆ. ಉದಾಹರಣೆಗೆ, ಕ್ರಿಸ್ತಶಕಾರಂಭದಲ್ಲಿ ರೋಮಿನಲ್ಲಿ ಕ್ರಿಶ್ಚಿಯನ್ ಧರ್ಮ ಆಳರಸರ ಕೈಯಿಂದ ಹಿಂಸಾಚಾರಕ್ಕೆ ಒಳಗಾದರೂ ಮುಂದೆ ಸಾಮ್ರಾಟ ಕಾನ್ಸ್ ಟಾಂಟೈನ್ ಸ್ವತಃ ಆ ಧರ್ಮಕ್ಕೆ ಪರಿವರ್ತನೆಗೊಂಡುದರಿಂದ ಇಡೀ ರೋಮ್ ಕ್ರಿಶ್ಚಿಯಾನಿಟಿಯ ಆಶ್ರಯತಾಣವಾಯಿತು. ಮಹಾವೀರ ಜೈನ ಮತ್ತು ಗೌತಮ ಬುದ್ಧ ಇಬ್ಬರೂ ರಾಜಕುಮಾರರಾಗಿದ್ದವರು. ಆದ್ದರಿಂದ ಸಮಾಜದ ಯಾವುದೇ ವರ್ಗದವರಿಗೂ ಅವರು ಪ್ರಚುರಪಡಿಸಿದ ಧರ್ಮಗಳನ್ನು ಸ್ವೀಕರಿಸುವುದರಲ್ಲಿ ಮುಜುಗರವಿರಲಿಲ್ಲ. ಕ್ರಿ.ಪೂ. ಮೂರನೆಯ ಶತಮಾನದ ಅಶೋಕ, ಕ್ರಿ.ಶ. ಎರಡನೆಯ ಶತಮಾನದ ಕಣಿಷ್ಕ, ಪ್ರಸಿದ್ಧ ರಾಜರಾಗಿದ್ದವರು; ಇಬ್ಬರು ಬೌದ್ಧ ಧರ್ಮಕ್ಕೆ ಮತಾಂತರಗೊಂಡು ತಮ್ಮ ಪ್ರಜಾಜನರನ್ನು ಆ ದಿಕ್ಕಿನಲ್ಲಿ ಪ್ರೇರೇಪಿಸಿದರು. ಕುಶಾನರ ಕಣಿಷ್ಕ ವಾಯವ್ಯ ಪ್ರದೇಶಕ್ಕೆ ಸೇರಿರುವುದರಿಂದ ‘ಪ್ರಾಕೃತವಲಯ’ದಲ್ಲಿ ಬರುವುದಿಲ್ಲ. ಆದರೆ ಮೌರ್ಯ ಅಶೋಕ ಹಾಗಲ್ಲ; ಭಾರತದ ಹೃದಯಭಾಗವೆಲ್ಲಾ ಅವನ ಆಧಿಪತ್ಯಕ್ಕೆ ಸೇರಿತ್ತು. ಹೃದಯಪರಿವರ್ತನೆಯಿಂದಲೇ ಅವನು ತನ್ನ ರಾಜಪ್ರಭುತ್ವದ ಉತ್ತುಂಗ ಸ್ಥಿತಿಯಲ್ಲಿದ್ದಾಗ ಎಲ್ಲವನ್ನೂ ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು. ಆದ್ದರಿಂದ ಅದನ್ನು ತನ್ನ ಪ್ರಜಾಜನರಲ್ಲಿ ಪ್ರಚಾರ ಮಾಡುವ ಉತ್ಸಾಹ ಅವನಲ್ಲಿ ಅದಮ್ಯವಾಗಿತ್ತು. ಅವನು ಸ್ಥಾಪಿಸಿದ ಸ್ತೂಪಗಳು, ತೋಡಿಸಿದ ಲೇಣಗಳು, ಎಲ್ಲಕ್ಕಿಂತಲೂ ಹೆಚ್ಚಾಗಿ ಬರೆಸಿದ ಶಿಲಾಶಾಸನಗಳು ಇತಿಹಾಸದಲ್ಲಿ ಪ್ರಸಿದ್ಧವಾಗಿವೆ. ಹೀಗೆ ಬರೆಸುವುದಕ್ಕೆ ಅವನು ಬಳಸಿದ ಭಾಷೆ ಪ್ರಾಕೃತ, ಲಿಪಿ ಬ್ರಾಹ್ಮಿ.
ಶೆಟ್ಟರ್ ಅವರು ನಿರೂಪಿಸುವ ವಿಷಯ ಹಲವು ಪರಾಮೀಟರುಗಳನ್ನು ಒಳಗೊಂಡಿದೆ: ಕಾಲ, ದೇಶ, ಧರ್ಮ, ಭಾಷೆ, ಲಿಪಿ, ಸಾಹಿತ್ಯ, ರಾಜಕೀಯ ಮುಂತಾಗಿ. ಕ್ರಿ.ಪೂ. ಮೂರನೆಯ ಶತಮಾನದಿಂದ ಕ್ರಿ.ಶ. ಮೂರನೆಯ ಶತಮಾನದ ತನಕದ ಅರ್ಧಸಹಸ್ರಮಾನಗಳನ್ನು ಮಾತ್ರವಲ್ಲದೆ, ಅದರ ನಿಕಟೋತ್ತರದ ಐದಾರು ಶತಮಾನಗಳಷ್ಟು ಕಾಲವನ್ನು ನಾವು ಲೇಖಕರ ಜತೆ ಕ್ರಮಿಸಬೇಕಾಗುತ್ತದೆ; ಭರತಖಂಡದ ಪಶ್ಚಿಮೋತ್ತರ, ಮಧ್ಯ ಹಾಗೂ ದಖ್ಖಣದ ಮಿಕ್ಕ ಭಾಗಗಳಲ್ಲೂ, ಎಂದರೆ ಪ್ರಧಾನವಾಗಿ ಅಶೋಕನ ಸಾಮ್ರಾಜ್ಯದಲ್ಲಿ, ಅವರು ನಮ್ಮನ್ನು ಅಲೆಸುತ್ತಾರೆ.
ಪ್ರಾಕೃತ ಭಾಷಾವಲಯಕ್ಕೆ ಅಶೋಕನ ಕೊಡುಗೆ ಅಪಾರವಾದುದು. ಕ್ರಿ.ಪೂ. ನಾಲ್ಕನೆಯ ಶತಮಾನದ ಚಂದ್ರಗುಪ್ತ ಮೌರ್ಯ ಇದೇ ಅಶೋಕನ ತಾತ, ಹಾಗೂ ಭಾರತದೇಶ ಹಿಂದೆಂದೂ ಕಂಡರಿಯದಷ್ಟು ಬೃಹತ್ತಾದ ಮೌರ್ಯ ಸಾಮ್ರಾಜ್ಯವನ್ನು ಚಾಣಕ್ಯನ ಸಹಾಯದಿಂದ ಸ್ಥಾಪಿಸಿದವ. ಚಂದ್ರಗುಪ್ತನೂ ತನ್ನ ಜೀವಿತದ ಕೊನೆ ಘಟ್ಟದಲ್ಲಿ ಜೈನ ಧರ್ಮವನ್ನು ಸ್ವೀಕರಿಸಿ ಗುರು ಭದ್ರಬಾಹುವಿನ ಜತೆ ದಕ್ಷಿಣದ ಶ್ರವಣಬೆಳಗೊಳಕ್ಕೆ ಬಂದು ಅಲ್ಲಿ ದೇಹತ್ಯಾಗ ಮಾಡಿದನೆಂದು ಐತಿಹ್ಯವಿದೆ. ಆದರೆ ಚಂದ್ರಗುಪ್ತ ಬರೆಸಿದ ಯಾವ ಶಿಲಾಶಾಸನವೂ ಇಲ್ಲ, ಬಹುಶಃ ಅವನು ಮತಪ್ರಚಾರದಲ್ಲಿ ಆಸಕ್ತಿ ತೋರಿಸದ ಕಾರಣ ಹಾಗೂ ಮತಪರಿವರ್ತನೆಗೊಂಡ ಬೆನ್ನಲ್ಲೇ ಸಿಂಹಾಸನ ತ್ಯಾಗ ಮಾಡಿದ ಕಾರಣ, ಹೀಗಾಗಿರಬಹುದು. ಆದರೆ ಒಟ್ಟಾರೆಯಾಗಿ ಬೌದ್ಧರಷ್ಟು ಜೈನರು ಪ್ರಾಕೃತ ಬರಹಗಳನ್ನು ಆರಂಭದ ಆರು ಶತಮಾನಗಳಲ್ಲಿ ಬಿಟ್ಟುಹೋಗಿಲ್ಲ ಎನ್ನುವುದು ಶೆಟ್ಟರ್ ಅವರ ಅಭಿಮತ.
‘ಜಗದ್ವಲಯ’ದಷ್ಟೇ ಸ್ವಾರಸ್ಯಕರವಾದ ಇನ್ನೊಂದು ಶೆಟ್ಟರ್ ಅವರ ಪರಿಕಲ್ಪನೆ ‘ಭಾಷಾನುಸಂಧಾನ’ ಎನ್ನುವುದು. ‘ಪ್ರಾಕೃತ, ಕನ್ನಡ, ಸಂಸ್ಕೃತ ಭಾಷಾನುಸಂಧಾನ’ ಎಂಬ ಉಪಶೀರ್ಷಿಕೆಯಲ್ಲಿ ಬರುವ ಈ ಪದ ಇಡೀ ನಿರೂಪಣೆಯನ್ನು ವ್ಯಾಪಿಸಿರುವಂಥದು. ವೈಚಾರಿಕರೂ ಸೇರಿದಂತೆ ಜನ ಯಾವತ್ತೂ ‘ಸಂಘರ್ಷ’ದ ಕುರಿತು ಹೇಳುವುದೇ ಜಾಸ್ತಿ; ‘ಅನುಸಂಧಾನ’ ಎನ್ನುವುದು ಇತ್ತೀಚೆಗೆ ಬಳಕೆಯಾಗುತ್ತಿರುವ ಪದ. ಎರಡು ಅಥವಾ ಅದಕ್ಕಿಂತ ಹೆಚ್ಚಿನ ಭಾಷೆಗಳು ಮುಖಾಮುಖಿಯಾದಾಗ, ಅರ್ಥಾತ್ ಅವುಗಳನ್ನು ಮಾತಾಡುವ ಮಂದಿ ಸಂಪರ್ಕಕ್ಕೆ ಬಂದಾಗ, ಏನಾಗುತ್ತದೆ-ಸಂಘರ್ಷವೇ? ಅನುಸಂಧಾನವೇ? ಸಂಘರ್ಷವನ್ನು ಅನುಸಂಧಾನವಾಗಿಯೂ, ಅನುಸಂಧಾನವನ್ನು ಸಂಘರ್ಷವಾಗಿಯೂ ನೋಡುವುದು ಸಾಧ್ಯ. ಎರಡರಲ್ಲಿ ಒಂದು ಭಾಷೆ ಕೆಲವು ಸಂಗತಿಗಳಿಗೆ, ಉದಾ: ಶಿಕ್ಷಣಕ್ಕೆ, ಬರಹಕ್ಕೆ, ಆಡಳಿತಕ್ಕೆ, ಬಳಕೆಯಾಗಬಹುದು; ಇನ್ನೊಂದು ಬಝಾರ್ ಭಾಷೆಯಾಗಿ ಉಳಿಯಬಹುದು.
ಯಾವುದು ಏನಾಗುತ್ತದೆ ಎನ್ನುವುದು ಹಲವಾರು ವಿಷಯಗಳ ಮೇಲೆ ಹೊಂದಿಕೊಂಡಿದೆ. ಸಂಸ್ಕೃತ, ಇಂಗ್ಲಿಷ್ ಭಾಷೆಗಳನ್ನು ಎದುರಿಸಿದ ಕನ್ನಡಿಗರಿಗೆ ಈ ಕುರಿತು ಸಾಕಷ್ಟು ಅನುಭವವಿರುವುದರಿಂದ ಇಲ್ಲಿ ಅವನ್ನೆಲ್ಲ ವಿವರಿಸುವ ಅಗತ್ಯವಿಲ್ಲ. ಮೊದಲು ಜನಾಂಗ ದ್ವಿಭಾಷಿಯಾಗುತ್ತದೆ, ದ್ವಿಭಾಷಿತ್ವ ಭಾಷಾಮರಣಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಇಲ್ಲದಾಗುವುದು, ಅಥವಾ ಹಿನ್ನೆಲೆಗೆ ಸರಿಯುವುದು, ದೇಸೀ ಭಾಷೆಯೇ. ಆದರೆ ದೇಸೀ ಭಾಷೆ ತಾನು ಎದುರಿಸುವ ಹೊರ ಭಾಷೆಯಿಂದ ತನಗೆ ಬೇಕಾದ ಸತ್ವವನ್ನು ಪಡೆದುಕೊಂಡು ಬೆಳೆಯುವುದೂ ಸಾಧ್ಯ. ಸಂಸ್ಕೃತದ ಸಂಪರ್ಕಕ್ಕೆ ಹಿಂದೆ ಕನ್ನಡ ಬಂದಾಗಲೂ ಇಂದು ಇಂಗ್ಲಿಷನ್ನು ಎದುರಿಸುತ್ತಿರುವಾಗಲೂ ಹೀಗೆ ಆಗಿದೆಯೆಂದು ನನಗನಿಸುತ್ತದೆ. ಹೀಗಿರುತ್ತ, ಸಂಘರ್ಷ ಎಂಬ ಪದ ನಕಾರಾತ್ಮಕವಾಗಿಯೂ, ಅನುಸಂಧಾನ ಎನ್ನುವುದು ಹೆಚ್ಚು ಸಕಾರಾತ್ಮಕವಾಗಿಯೂ, ಕನಿಷ್ಠ ವಸ್ತುನಿಷ್ಠವಾಗಿಯೂ ತೋರುವಂಥದು.
ಶೆಟ್ಟರ್ ಅವರು ಪ್ರಾಕೃತ, ಕನ್ನಡ, ಸಂಸ್ಕೃತದ ಸಂಪರ್ಕ ಸಂದರ್ಭದಲ್ಲಿ ಉಪಯೋಗಿಸುವುದು ಅನುಸಂಧಾನ ಎನ್ನುವ ನುಡಿಗಟ್ಟನ್ನೇ. ಯಾಕೆ ಈ ಮಾತು ಪ್ರಸ್ತುತವಾಗುತ್ತದೆ ಎಂದರೆ, ಕನ್ನಡ ಸಂಸ್ಕೃತಮಯವಾಗಿದೆ, ಅದರಿಂದ ಸಂಸ್ಕೃತ ಮೂಲದ ಮಹಾಪ್ರಾಣ, ಅನುಸ್ವಾರ, ವಿಸರ್ಗ, ಷಕಾರ, ಋಕಾರ, ಅರ್ಕಾವೊತ್ತು ಇತ್ಯಾದಿ ಅಕ್ಷರಗಳನ್ನು ತೆಗೆದುಹಾಕಬೇಕು ಎಂಬ ಒತ್ತಾಯ ಆಗಾಗ ಕೆಲವರಿಂದ ಕೇಳಿಸುವುದಿದೆ. ಒಬ್ಬರು ಬಿಂದು (ಅನುಸ್ವಾರ ಚಿಹ್ನೆ) ಸಂಸ್ಕೃತದ್ದೆಂದೂ ಅದನ್ನು ಕನ್ನಡ ವರ್ಣಮಾಲೆಯಿಂದ ಒದ್ದೋಡಿಸಬೇಕೆಂದೂ ಹೇಳುವುದನ್ನು ನಾನು ಕೇಳಿದ್ದೇನೆ. ಇದು ಬೇಸರದ ವಿಷಯ, ಒದ್ದೋಡಿಸಬೇಕು ಎಂಬ ಪದಪ್ರಯೊಗಕ್ಕಾಗಿಯೇ ಅಲ್ಲ, ಅದನ್ನು ಹೇಳಿದವರು ಒಬ್ಬರು ಭಾಷಾವಿಜ್ಞಾನಿ ಎನ್ನುವ ಕಾರಣಕ್ಕೆ. ಯಾಕೆಂದರೆ ವೈಚಾರಿಕ ಕ್ಷೇತ್ರದಲ್ಲಿ ನಮ್ಮ ಸಮೀಪನ ಆದಷ್ಟೂ ನಿರ್ಲಿಪ್ತವಾಗಿರಬೇಕು. ಶೆಟ್ಟರ್ ಅವರ ಶೈಲಿಯಲ್ಲಿ ಅಂಥ ನಿರ್ಲಿಪ್ತತೆ ಇರುವುದರಿಂದಲೇ ಅವರ ಬರಹವನ್ನು ಓದಲು ಖುಷಿಯಾಗುತ್ತದೆ.
ಈ ಭಾಷಾನುಸಂಧಾನದ ಒಂದು ಸಂದರ್ಭವನ್ನು ಗಮನಿಸಿ: ಕನ್ನಡ ನಾಡಿನಲ್ಲಿ ಜೈನರು ಬೌದ್ಧರಷ್ಟು ಪ್ರಾಕೃತವನ್ನು ಪ್ರಚುರಪಡಿಸಲಿಲ್ಲ. ಜೈನರು ಪ್ರಚುರ ಪಡಿಸಲು ಶುರುಮಾಡುವ ಸಮಯಕ್ಕೆ, ಎಂದರೆ ಸುಮಾರು ಕ್ರಿ.ಶ. ಆರನೆಯ ಶತಮಾನಕ್ಕೆ ಕನ್ನಡವೇ ಒಂದು ಪ್ರಾಕೃತವೆಂಬ ಭಾವನೆ ಅವರಿಗೆ ಬಂದಿರಲೂ ಸಾಕು. ಶೆಟ್ಟರ್ ಅವರ ಈ ಊಹೆ ಸ್ಫೂರ್ತಿಯುತವಾದ್ದೆಂದು ಅನಿಸಿದರೂ ಅಷ್ಟೇ ಸ್ವೀಕಾರಯೋಗ್ಯವೂ ಹೌದು. ಯಾಕೆಂದರೆ ಸಂಸ್ಕೃತದ ಹೊರತಾದ ಜನಾಂಗ ಭಾಷೆಗಳೆಲ್ಲವೂ ಒಂದು ವಿಧದಲ್ಲಿ ‘ಪ್ರಾಕೃತ’ವೇ! ಆದ ಕಾರಣವೋ ಏನೋ ಜೈನರು ಕನ್ನಡದಲ್ಲೇ ಕಾವ್ಯರಚನೆಗೆ (ಲೌಕಿಕ ಮತ್ತು ಧಾರ್ಮಿಕ) ತೊಡಗಿ ಕನ್ನಡವನ್ನು ಶ್ರೀಮಂತಗೊಳಿಸಿದರು.
ಇಲ್ಲಿ ನಾವು ಸಂಸ್ಕೃತ ಮತ್ತು ಪ್ರಾಕೃತದ (ಅರ್ಥಾತ್ ಪ್ರಾಕೃತಂಗಳ) ಸಂಬಂಧದ ಕುರಿತು ಸ್ವಲ್ಪ ಯೋಚಿಸಬೇಕು. ಪ್ರಾಕೃತ ಭಾಷೆಗಳನ್ನೇ ಸಂಸ್ಕರಿಸಿ ಸಂಸ್ಕೃತವನ್ನು ಸಂಸ್ಕರಿಸಿಕೊಳ್ಳಲಾಯಿತೋ ಅಥವಾ ಸಂಸ್ಕೃತವೇ ಬೇರೆ ಬೇರೆ ಪ್ರದೇಶಗಳ ಜನರ ಆಡುಮಾತಿನಲ್ಲಿ ಬೇರೆ ಬೇರೆ ಪ್ರಾಕೃತ ಭಾಷೆಗಳಾಗಿ ಬದಲಾಯಿತೋ ಎನ್ನುವುದು ಬಹಳ ಹಳೆಯ ಪ್ರಶ್ನೆ. ಸಂಸ್ಕೃತ ಎನ್ನುವ ಪದ ಅದು ಸಂಸ್ಕರಿಸಲ್ಪಟ್ಟ ಭಾಷೆ ಎನ್ನುವುದನ್ನು ಸೂಚಿಸುತ್ತದಾದರೂ, ಮೊದಲ ವ್ಯಾಕರಣವನ್ನು ಬರೆದ ಪಾಣಿನಿ ಅದನ್ನು ಆ ಹೆಸರಿನಿಂದ ಕರೆಯದೆ ‘ಛಂದಃ’ ಎಂದು ಕರೆದ (ಶೆಟ್ಟರ್ ಅವರ ಈ ಕೃತಿಯಲ್ಲೂ ಕೆಲವೆಡೆ ಇದೇ ಪದವನ್ನು ಬಳಸಲಾಗಿದೆ). ಭಾಷೆಗೆ ಜನರ ಆಡುಮಾತೇ ಮೂಲವೆನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅದು ಹೇಗೆ ಪ್ರಬುದ್ಧಾವಸ್ಥೆಯನ್ನು ತಲುಪುತ್ತದೆ ಎಂದು ಹೇಳುವುದು ಕಷ್ಟ; ಪ್ರಮಾಣೀಕರಣ (ಧ್ವನಿ, ಪದ, ವಾಕ್ಯ ಇತ್ಯಾದಿಗಳಲ್ಲಿ) ಅದಕ್ಕೆ ಅಗತ್ಯ. ಪಾಣಿನಿ ಮಾಡಿದ್ದೂ ಇದನ್ನೇ. ಭಾಷೆಯ ಗತಿ ಯಾವತ್ತೂ ಏಕಮುಖವಾಗಿ ಇರುವುದಿಲ್ಲ. ಜನಪದದಿಂದ ಮೂಡಿ ಬಂದ ಭಾಷೆಯಿಂದ ಕವಲುಗಳು ಹುಟ್ಟುವುದು ಸಾಧ್ಯ. ಇವನ್ನೇ ನಾವು ಉಪಭಾಷೆಗಳೆಂದು ಕರೆಯುವುದು. ಹಾಗೂ ಈ ಉಪಭಾಷೆಗಳು ಕ್ರಮೇಣ ಹೆಚ್ಚೆಚ್ಚು ಸ್ವಾಯತ್ತತೆಯನ್ನು ಪಡೆದುಕೊಂಡು ತಾವೇ ಸ್ವತಂತ್ರ ಭಾಷೆಗಳಾಗುವುದು ಸಾಧ್ಯ. ಭಾರತ ಉಪಖಂಡದಲ್ಲಿ ಇದಕ್ಕೆಲ್ಲ ಬಹಳಷ್ಟು ಉದಾಹರಣೆಗಳಿವೆ.
ಹೀಗೆಯೇ ಪಾಲಿ, ಮಗಧಿ, ಅರ್ಧಮಾಗಧಿ ಮುಂತಾದುವು ಮೂಲ ಸಂಸ್ಕೃತದಿಂದಲೇ ಮೂಡಿಬಂದಿರುವಂಥವು ಎನ್ನುವುದೇ ಹೆಚ್ಚು ಸೂಕ್ತ ಅನಿಸುತ್ತದೆ. ಈ ಅರ್ಥದಲ್ಲಿ ಸಂಸ್ಕೃತ ಪ್ರಕೃತಿಯೂ ಅದರಿಂದ ಜನಿಸಿದ ಭಾಷೆಗಳು ಪ್ರಾಕೃತಗಳೂ ಆಗುತ್ತವೆ.
ಈ ಭಾಷೆಗಳಲ್ಲಿ(ಎಂದರೆ ಪ್ರಾಕೃತದಲ್ಲಿ) ಕಂಡುಬರುವ ಪದಗಳನ್ನು ಅವಲೋಕಿಸಿದರೆ ಇದು ಗೊತ್ತಾಗುತ್ತದೆ. ಇವು ಹಲವು ‘ತದ್ಭವ’ ಎಂಬ ಪ್ರಕ್ರಿಯೆಯನ್ನು ದಾಟಿ ಬಂದಂಥವು ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಮೂಲದಿಂದ ನಾವು ತದ್ಭವವನ್ನು ಸುಸೂತ್ರವಾಗಿ ಪಡೆಯಬಹುದೇ ವಿನಾ ತದ್ಭವದಿಂದ ಮೂಲವನ್ನಲ್ಲ. ಹೀಗೆ ಸಂಸ್ಕೃತದ ‘ಆರ್ಯ’ದಿಂದ ಪ್ರಾಕೃತದ ‘ಅಜ್ಜ’ ಪದವನ್ನು ಪಡೆಯಬಹುದು: ಪ್ರಾಕೃತದಲ್ಲಿ ದೀರ್ಘಾಕ್ಷರದ ನಂತರ ಎರಡು ವ್ಯಂಜನಾಕ್ಷರಗಳು ಬರುವುದಿಲ್ಲ; ಆಗ ದೀರ್ಘಾಕ್ಷರವನ್ನು ಹ್ರಸ್ವವಾಗಿ ಮಾಡಲಾಗುತ್ತದೆ. ಇನ್ನು ವಿಜಾತೀಯ ವ್ಯಂಜನಾಕ್ಷರಗಳನ್ನೂ ಪ್ರಾಕೃತ ಇಷ್ಟಪಡುವುದಿಲ್ಲ; ಅಂಥವು ಬಂದಾಗ ಅಲ್ಲಿ ಒಂದನ್ನು ಇನ್ನೊಂದಕ್ಕೆ ಸಮೀಕರಣ ಮಾಡಿಕೊಳ್ಳಲಾಗುತ್ತದೆ. ‘ಆರ್ಯ’ (ಮೊದಲಿನ ದೀರ್ಘಸ್ವರವನ್ನು ಹ್ರಸ್ವಗೊಳಿಸಿದ ಮೇಲೆ ‘ಅರ್ಯ’) ಎಂಬ ಪದದಲ್ಲಿ ರಕಾರವನ್ನು ಯಕಾರಕ್ಕೆ ಸಮೀಕರಿಸಿದಾಗ ನಮಗೆ ‘ಅಯ್ಯ’ ಸಿಗುತ್ತದೆ; ಪ್ರಾಕೃತದಲ್ಲಿ ಈ ರೂಪವೂ ಇದೆ. ಇನ್ನು ಯಕಾರವು ತಾಲವ್ಯವಾದ ಕಾರಣ ಇನ್ನೊಂದು ಪಲ್ಲಟ ಕೂಡ ಉಂಟಾಗಬಹುದು: ಅರ್ಧಸ್ವರವಾದ ಯಕಾರದ ಬದಲಿಗೆ ಸ್ಫೋಟಾಕ್ಷರವಾದ ಜಕಾರ ಬರುವುದು. ಯಕಾರ ಮತ್ತು ಜಕಾರ ಎರಡೂ ತಾಲವ್ಯಗಳೇ ಎನ್ನುವುದು ಗಮನಾರ್ಹ. ಈಗ ನಮಗೆ ಸಿಗುವುದೇ ‘ಅಜ್ಜ’ ಎಂಬ ತದ್ಭವ ರೂಪ. ಇದರಲ್ಲಿ ಜಕಾರಕ್ಕೆ ದ್ವಿತ್ವ ಬಂದಿರುವುದನ್ನು ಕೂಡ ಗಮನಿಸಬೇಕು. ಪ್ರಾಕೃತದಲ್ಲಿ ದ್ವಿತ್ವಗಳು ಹೇರಳವಾಗಿರುವುದು ಇಂಥ ಸೂತ್ರಬದ್ಧವಾದ ತದ್ಭವೀಕರಣದಿಂದಲೇ. ಈಗ ‘ಅಯ್ಯ’ ಮತ್ತು ‘ಅಜ್ಜ’ ಪದಗಳಿಂದ ‘ಅರ್ಯ’ವನ್ನು ಉತ್ಪತ್ತಿ ಮಾಡಬಹುದೇ ಎಂದರೆ ಕಷ್ಟಸಾಧ್ಯ ಎಂದೇ ಹೇಳಬೇಕಾಗುತ್ತದೆ. ಆದ್ದರಿಂದ ಪ್ರಾಕೃತವು ಸಂಸ್ಕೃತದಿಂದ ಹುಟ್ಟಿ ಬೆಳೆದುದು ಎಂದು ತಿಳಿಯುವುದೇ ಸೂಕ್ತವಾದುದು. ಈ ವಿಚಾರವನ್ನು ಒಂದು ಉದ್ದೇಶದಿಂದ ಇಲ್ಲಿ ಎತ್ತುತ್ತಿದ್ದೇನೆ. ಅದು ಕನ್ನಡವು ಪ್ರಾಕೃತ ಮತ್ತು ಸಂಸ್ಕೃತ ಎರಡೂ ಭಾಷೆಗಳ ಜತೆ ಮಾಡಿಕೊಂಡ ಅನುಸಂಧಾನ.
ಕನ್ನಡವು ಯಾವಾಗ ಒಂದು ಸ್ವತಂತ್ರ ಭಾಷೆಯೆನಿಸಿತು, ಯಾವಾಗ ಸಂಸ್ಕೃತದ ಸಂಪರ್ಕಕ್ಕೆ ಬಂತು, ಯಾವಾಗ ಲಿಪೀಕರಣಗೊಂಡಿತು ಎನ್ನುವ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ ಪ್ರಾಕೃತ, ಕನ್ನಡ, ಸಂಸ್ಕೃತವೂ ಸೇರಿದಂತೆ ಭಾರತದ ಅನೇಕ ಭಾಷೆಗಳ ಲಿಪಿಮೂಲ ಬ್ರಾಹ್ಮಿಯೇ ಎಂದು ಹೇಳಲಾಗುತ್ತಿದೆ. ಅಶೋಕನ ಶಿಲಾಶಾಸನಗಳಿರುವುದೂ ಇದೇ ಲಿಪಿಯಲ್ಲಿ. ಪ್ರಾಕೃತದಂತೆ ಕನ್ನಡವೂ ಸಂಸ್ಕೃತದಿಂದ ಅನೇಕ ಪದಗಳನ್ನು ತೆಗೆದುಕೊಂಡಿತು, ಕೆಲವನ್ನು ತತ್ಸಮವಾಗಿ, ಹಲವನ್ನು ತದ್ಭವವಾಗಿ. ಪ್ರಾಕೃತದ ಸಂಪರ್ಕಕ್ಕೆ ಬಂದಾಗ ಬಹುಶಃ ಆ ಮೂಲದಿಂದಲೂ ಅದು (ಈಗಾಗಲೇ ಪ್ರಾಕೃತಕ್ಕೆ ತದ್ಭವಗೊಂಡಿದ್ದ) ಪದಗಳನ್ನು ಪಡೆಯಿತು. ತದ್ಭವವೆಂದರೆ ಒಂದು ರೀತಿಯ ಸರಳೀಕರಣ-ದೇಸೀಯ ಧ್ವನಿ ಮತ್ತು ಪದವಿನ್ಯಾಸಗಳಿಗೆ ಪರಭಾಷೆಯ ಶಬ್ದಗಳನ್ನು ಒಗ್ಗಿಸಿಕೊಳ್ಳುವುದು.
ಕನ್ನಡವು ಪ್ರಾಕೃತದ ಸಂಪರ್ಕಕ್ಕೆ ಬಂದಾಗ ಪ್ರಾಕೃತ ಭಾಷೆ ಕನ್ನಡಕ್ಕೆ ವಿಲಕ್ಷಣವಾಗಿ ಕಾಣಿಸಿರಲಾರದು, ಅದೇ ರೀತಿ ಕನ್ನಡವೂ ಪ್ರಾಕೃತಕ್ಕೆ ವಿಚಿತ್ರವಾಗಿ ಅನಿಸಿರಲಾರದು, ಬದಲು ಕನ್ನಡವೂ ಒಂದು ಪ್ರಾಕೃತ ಭಾಷೆಯೆಂದೇ ಅನಿಸಿರಬೇಕು. ಇದಕ್ಕೆ ಕಾರಣ ಸಮಾನವಾದ ತದ್ಭವಗಳು ಮಾತ್ರವಲ್ಲ, ಹಲವು ರೀತಿಯ ಇತರ ಸಾಮ್ಯಗಳು. ಅವುಗಳಲ್ಲಿ ಒಂದು ಪ್ರಾಕೃತ ಮತ್ತು ಮೂಲ ಕನ್ನಡದಲ್ಲಿನ ಸ್ವರಸಾಮ್ಯ. ಎರಡರಲ್ಲೂ ಒಟ್ಟು ಹತ್ತು ಸ್ವರಗಳು, ಅವೂ ಸಮತೋಲದಲ್ಲಿ: ಅ ಆ ಇ ಈ ಉ ಊ ಎ ಏ ಒ ಓ ಎಂಬ ಇವು ಮುಂಭಾಗದ ಇ ಈ ಎ ಏ (4), ಹಿಂಭಾಗದ ಉ ಊ ಒ ಓ (4), ಮತ್ತು ಕೆಳ ಮಧ್ಯದ ಅ ಆ (2) ಎಂಬುದಾಗಿ ವಿತರಣಗೊಂಡಿವೆ. ಐ ಮತ್ತು ಔ ಎಂಬವುಗಳ ಸ್ಥಾನವೇನು? ಮೂಲತಃ ಇವು ಸಂಸ್ಕೃತದ ದೀರ್ಘ ಸ್ವರಗಳು. ಪ್ರಾಕೃತದಲ್ಲಿ ಇವು ಕ್ರಮವಾಗಿ ಎ ಮತ್ತು ಒ ಆಗುತ್ತವೆ. ಕನ್ನಡದಲ್ಲಿ ಹಿಂದೆ ಇವು ‘ಅಯಿ’ (ಅ+ಇ) ಮತ್ತು ‘ಅವು’ (ಅ+ಉ) ಆಗಿದ್ದುವು. ಈಗಲೂ ಕೆಲವರು ಐದನ್ನು ಅಯಿದು (ಅಇದು = ಅಯಿದು = ಅಯ್ದು) ಎಂದೂ ಹೌದನ್ನು ಹವುದು (ಹಉದು = ಹವುದು = ಹವ್ದು) ಎಂದೂ ಉಚ್ಚರಿಸುವುದು ಮತ್ತು ಬರೆಯುವುದು ಉಂಟು. ಸಂಸ್ಕೃತದ ಪ್ರಭಾವದಿಂದ ಕನ್ನಡಕ್ಕೆ ಐ ಮತ್ತು ಔ ಅಕ್ಷರಗಳು ಬಂದಿರಬೇಕು. ಸಂಸ್ಕೃತದಲ್ಲಿಲ್ಲದ ಹ್ರಸ್ವ ಎ ಮತ್ತು ಒ ಪ್ರಾಕೃತದಲ್ಲೂ ಇವೆ, ಕನ್ನಡದಲ್ಲೂ ಇವೆ ಎನ್ನುವುದು ಗಮನಾರ್ಹ. ಒಂದೇ ಒಂದು ವ್ಯತ್ಯಾಸವೆಂದರೆ, ಪ್ರಾಕೃತದಲ್ಲಿ ಎ/ಏ ಮತ್ತು ಒ/ಓ ಧ್ವನ್ಯಂತರ ಪಾಠಗಳು, ಎಂದರೆ ಎ ಬರುವಲ್ಲಿ ಏ ಬರುವುದಿಲ್ಲ, ಏ ಬರುವಲ್ಲಿ ಎ ಬರುವುದಿಲ್ಲ; ಅದೇ ರೀತಿ ಒ ಬರುವಲ್ಲಿ ಓ ಬರದು, ಓ ಬರುವಲ್ಲಿ ಒ ಬರದು. ಮುಂದೆ ಸಂಯುಕ್ತಾಕ್ಷರಗಳಿದ್ದರೆ ಹ್ರಸ್ವವೂ (ಎ ಮತ್ತು ಒ), ಇತರ ಕಡೆ ದೀರ್ಘವೂ (ಏ ಮತ್ತು ಓ) ಬರಬಹುದು. ಇತರ ಸಾಮ್ಯತೆಗಳೆಂದರೆ: ಪ್ರಾಕೃತದಲ್ಲಾಗಲಿ ಪ್ರಾಚೀನ ಕನ್ನಡದಲ್ಲಾಗಲಿ ಪದಾದಿಯೂ ಸೇರಿದಂತೆ ಉಚ್ಚಾರಾಂಶದ (‘ಸಿಲೆಬಲ್’ನ) ಆದಿಯಲ್ಲಿ ಸಂಯುಕ್ತಾಕ್ಷರಗಳಿರುವುದಿಲ್ಲ (ಈಗ ಕನ್ನಡದಲ್ಲಿರುವ ಪ್ರಿಯ, ಸ್ವರ, ನ್ಯಾಯ, ಪ್ರಾಯ, ಮ್ಲಾನ ಮುಂತಾದ ಪದಗಳೆಲ್ಲವೂ ಸಂಸ್ಕೃತದಿಂದ ಬಂದುವು). ಇತರೆಡೆ ಅವು ಬಂದಾಗ ಸ್ವಜಾತೀಯವಾಗಿರುತ್ತವೆ, ಎಂದರೆ ದ್ವಿತ್ವಗಳಾಗಿರುತ್ತವೆ. ಆದ್ದರಿಂದಲೇ ಎರಡೂ ಭಾಷೆಗಳಲ್ಲಿ, ಮೂಲದಲ್ಲಿ ಮತ್ತು ತದ್ಭವದಲ್ಲಿ, ದ್ವಿತ್ವಗಳು ಜಾಸ್ತಿ. ಇದೆಲ್ಲದರ ತಾತ್ಪರ್ಯವೆಂದರೆ, ಪ್ರಾಕೃತ ಮತ್ತು ಪ್ರಾಚೀನ ಕನ್ನಡಗಳ ಮಧ್ಯೆ ವ್ಯತ್ಯಾಸವಿಲ್ಲ ಎಂದಲ್ಲ, ಬದಲು ಸಾಕಷ್ಟು ಸಾಮ್ಯತೆಗಳಿವೆ ಎಂದು. ಆದ್ದರಿಂದ ಧರ್ಮಪ್ರಚಾರದ ದೃಷ್ಟಿಯಿಂದ ಸಂಸ್ಕೃತಕ್ಕೆ ಹೋಲಿಸಿದರೆ ಕನ್ನಡವೂ ಒಂದು ‘ಪ್ರಾಕೃತ’ ಭಾಷೆ ಎಂದು ಆಗಿನವರಿಗೆ ಅನಿಸಿದ್ದರೆ ಆಶ್ಚರ್ಯವಿಲ್ಲ.
ಕನ್ನಡವು ಯಾವಾಗ ಒಂದು ಸ್ವತಂತ್ರ ಭಾಷೆಯೆನಿಸಿತು, ಯಾವಾಗ ಸಂಸ್ಕೃತದ ಸಂಪರ್ಕಕ್ಕೆ ಬಂತು, ಯಾವಾಗ ಲಿಪೀಕರಣಗೊಂಡಿತು ಎನ್ನುವ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ ಪ್ರಾಕೃತ, ಕನ್ನಡ, ಸಂಸ್ಕೃತವೂ ಸೇರಿದಂತೆ ಭಾರತದ ಅನೇಕ ಭಾಷೆಗಳ ಲಿಪಿಮೂಲ ಬ್ರಾಹ್ಮಿಯೇ ಎಂದು ಹೇಳಲಾಗುತ್ತಿದೆ. ಅಶೋಕನ ಶಿಲಾಶಾಸನಗಳಿರುವುದೂ ಇದೇ ಲಿಪಿಯಲ್ಲಿ. ಪ್ರಾಕೃತದಂತೆ ಕನ್ನಡವೂ ಸಂಸ್ಕೃತದಿಂದ ಅನೇಕ ಪದಗಳನ್ನು ತೆಗೆದುಕೊಂಡಿತು, ಕೆಲವನ್ನು ತತ್ಸಮವಾಗಿ, ಹಲವನ್ನು ತದ್ಭವವಾಗಿ.
ಶೆಟ್ಟರ್ ಅವರ ಈ ಪುಸ್ತಕದಲ್ಲಿ ‘ಮಿಶ್ರಭಾಷೆ’ ಎಂಬ ಪದಪ್ರಯೋಗ ಅಲ್ಲಲ್ಲಿ ಬರುತ್ತದೆ. ವಿಭಿನ್ನ ಭಾಷೆಗಳು ಸಂಪರ್ಕಕ್ಕೆ ಬಂದಾಗ ಮಿಶ್ರಭಾಷೆಗಳು ಹುಟ್ಟಿಕೊಳ್ಳುತ್ತವೆ. ಇದು ಭಾಷಾನುಸಂಧಾನದ ಒಂದು ಬಗೆಯೂ ಹೌದು. ಕ್ರಿಸ್ತ ಶಕಾರಂಭದ ಮೊದಲ ಶತಮಾನಗಳಲ್ಲಿ ದಖ್ಖಣದಲ್ಲಿ, ಮುಖ್ಯವಾಗಿ ಬೌದ್ಧರಿಂದಾಗಿ, ಪ್ರಾಕೃತಪ್ರೇರಿತ ಸಂಸ್ಕೃತ, ಸಂಸ್ಕೃತಪ್ರೇರಿತ ಪ್ರಾಕೃತ ಮಿಶ್ರಭಾಷೆಗಳು ಹುಟ್ಟಿಕೊಂಡುದನ್ನು ಶೆಟ್ಟರ್ ಅವರು ದಾಖಲೆ ಸಮೇತ ವಿವರಿಸುತ್ತಾರೆ. ಈ ಮಿಶ್ರಣ ಆಂತರಿಕವಾಗಿಯೂ (ಧ್ವನಿರಚನೆ, ಪದರಚನೆ, ವಾಕ್ಯರಚನೆ ಮುಂತಾಗಿ), ಬಾಹ್ಯವಾಗಿಯೂ (ಪದ, ವಾಕ್ಯ, ಪದ್ಯ ಮಿಶ್ರಣ) ಆಗಿನ ಕಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಪ್ರಾಕೃತ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಸಂಸ್ಕೃತವು ಕನ್ನಡ ನುಡಿ ಮತ್ತು ಬರಹಗಳನ್ನು ಯಾವಾಗ ಪ್ರವೇಶಿಸಿದುವು ಎನ್ನುವುದಕ್ಕೆ ನಿಖರ ಮಾಹಿತಿಯಿಲ್ಲ. ಆದರೆ ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ಕನ್ನಡವನ್ನು ಆಮೂಲಾಗ್ರವಾಗಿ ಪ್ರಭಾವಿಸಿದ್ದು ಒಂದು ಐತಿಹಾಸಿಕ ಘಟನೆ. ಇದು ಒಂದೆರಡು ದಶಕಗಳಲ್ಲಿ ಆದ ಘಟನೆಯೂ ಆಗಿರದು, ಹಲವು ಶತಮಾನಗಳಲ್ಲಿ ನಡೆದ ವಿದ್ಯಮಾನವಿರಬೇಕು. ಇದರಿಂದಾಗಿ ಕನ್ನಡಕ್ಕೆ ಮಹಾಪ್ರಾಣಗಳು, ಶ, ಷ, ಋ, ವಿಸರ್ಗ, ಅನುಸ್ವಾರ ಮುಂತಾದವು ಬಂದುವು, ಬಹುದೊಡ್ಡ ಶಬ್ದಭಂಡಾರ ನಿರ್ಮಾಣವಾಯಿತು, ಪದ್ಯ, ಗದ್ಯ, ಕಾವ್ಯ, ವ್ಯಾಕರಣ, ಛಂದಸ್ಸು ಇತ್ಯಾದಿಗಳು ಪ್ರವೇಶಿಸಿದುವು. ಇದಕ್ಕೆಲ್ಲ ಜೈನರ ಕೊಡುಗೆ ಅಪಾರವಾದುದು.
ಈ ನಿಟ್ಟಿನಿಂದ ‘ಚಾವುಂಡರಾಯ ಮತ್ತು ಶಿವಕೋಟ್ಯಾಚಾರ್ಯರ ಪ್ರಾಕೃತ ಭಾಷಾ ಅನುಸಂಧಾನ’ ಎಂಬ ನಾಲ್ಕನೆಯ ಅಧ್ಯಾಯವು ಬಹಳ ಮಹತ್ವದ್ದಾಗುತ್ತದೆ. ಚಾವುಂಡರಾಯ `ವಡ್ಡಾರಾಧನೆ’ಯ ಕರ್ತೃವಾದರೆ ಶಿವಕೋಟ್ಯಾಚಾರ್ಯರು `ತ್ರಿಷಷ್ಟಿಶಲಾಕಮಹಾಪುರಾಣ’ದ ಕವಿ. ಇಬ್ಬರೂ ಕ್ರಿ.ಶ. ಹತ್ತನೆಯ ಶತಮಾನದವರು. ಆಗಲೇ ಕ್ಷೀಣವಾಗುತ್ತಿದ್ದ ಪ್ರಾಕೃತವನ್ನು ಜೀವಂತವಾಗಿಡಲು ಇವರು ಮಿಶ್ರ ವಿಧಾನದ ಮೂಲಕ (ಪ್ರಾಕೃತ-ಸಂಸ್ಕೃತ-ಕನ್ನಡ) ಪ್ರಯತ್ನಿಸಿದರೂ ಇವರ ನಿಜವಾದ ಕೊಡುಗೆಯನ್ನು ಇಂದು ನಾವು ಗುರುತಿಸುವುದು ಕನ್ನಡ ಸಾಹಿತ್ಯಕ್ಷೇತ್ರದಲ್ಲಿಯೇ. ಮುಂದೆ ಬರುವ ಪಂಪ, ಪೊನ್ನ, ರನ್ನ, ಜನ್ನ ಮುಂತಾದವರಿಗೆ ಇವರು ಹರಿಕಾರರಾದರು. ಇದೆಲ್ಲ 10-11ನೆಯ ಶತಮಾನದ ಬೆಳವಣಿಗೆ, ಎಂದರೆ ಪ್ರಾಕೃತದ ಸಂಧ್ಯಾಕಾಲ. ಇನ್ನು ಕನ್ನಡವು ಸಂಸ್ಕೃತ ಜತೆ ನಡೆಸಿದ ಅನುಸಂಧಾನ ಬಾಕಿ ಇತಿಹಾಸ. ಅದು ಶೆಟ್ಟರ `ಪ್ರಾಕೃತ ಜಗದ್ವಲಯ’ಕ್ಕೆ ಸೇರುವುದಿಲ್ಲ.
ಐದನೆಯ ಅಧ್ಯಾಯದಲ್ಲಿ ಕನ್ನಡ ಭಾಷೆಯ ಪುರಾತನತ್ವಕ್ಕೆ ಸಂಬಂಧಿಸಿದ ‘ಇಸಿಲ’ ಪದದ ಮರುಚಿಂತನೆಗೆ ಶೆಟ್ಟರ್ ನಮ್ಮನ್ನು ಆಹ್ವಾನಿಸಿದ್ದಾರೆ. ಈಗ ಆರೇಳು ದಶಕಗಳಿಂದ ಕನ್ನಡದ್ದೆಂದು ನಂಬುತ್ತಾ ಬಂದಿರುವ ಈ ಪದವು ಪ್ರಾಕೃತದ್ದೆಂದು, ಈ ಪದವನ್ನು ಅಶೋಕನು ಮೊದಲು ಇಲ್ಲಿ ಬಳಸಿದ್ದರೂ ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಪದವಲ್ಲ ಎಂಬುದನ್ನು ಸಾದಾರವಾಗಿ ತೋರಿಸಿ ಕೊಟ್ಟಿದ್ದಾರೆ. ಜೊತೆಗೆ ಇದರಿಂದ ವ್ಯಾಕುಲಕ್ಕೊಳಗಾಗಬೇಕಾದ ಅವಶ್ಯಕತೆ ಇಲ್ಲವೆಂದೂ, ಸರಿಸುಮಾರು ಇಷ್ಟೇ ಪುರಾತನವಾದ ಕನ್ನಡ ಪದಗಳು, ವಿಶೇಷವಾಗಿ ಸ್ಥಳನಾಮಗಳು, ಮೌರ್ಯ ಮತ್ತು ಸಾತವಾಹನರ ಕಾಲದಲ್ಲಿ ಪ್ರಸಾರದಲ್ಲಿದ್ದವೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಮುಂದಿನ ಎರಡು ಅಧ್ಯಾಯಗಳು ಬೌದ್ಧವಾಸ್ತುಶಿಲ್ಪಿಗಳಿಗೆ ಮತ್ತು ಅವರು ಪ್ರಚಾರಕ್ಕೆ ತಂದ ಪದಸಂಪತ್ತಿಗೆ ಸಂಬಂಧಿಸಿವೆ. ಸಂಸ್ಕೃತ ಭಾಷೆಯಲ್ಲಿ ವಾಸ್ತು ಮತ್ತು ಶಿಲ್ಪಗ್ರಂಥಗಳು ಬರುವುದಕ್ಕಿಂತ ಬಹುಕಾಲ ಮುಂಚೆಯೇ ಬೌದ್ಧಶಿಲ್ಪಿಗಳು ಮಾಡಿದ ಪ್ರಯೋಗಗಳ ಸಮಗ್ರ ಚಿತ್ರವನ್ನು ಶೆಟ್ಟರ್ ಕೊಟ್ಟಿರುವರು. ಇಂಗ್ಲಿಷ್ನಲ್ಲಿ ಬರೆದಿರುವ ಈ ಲೇಖನಗಳು ಪ್ರಕಟವಾಗುವ ಮುಂಚೆಯೇ ಅವನ್ನು ಕನ್ನಡಿಗರಿಗೆ ಪರಿಚಯಿಸಿರುವುದು ಒಂದು ವಿಶೇಷ. ಈವರೆಗೂ ಬೌದ್ಧಶಿಲ್ಪಿಗಳ ಬಗ್ಗೆ ಯಾರೊಬ್ಬರೂ ಬರೆದಿಲ್ಲವೆನ್ನುವುದು ನನ್ನ ಅರಿವಿಗೆ ನಿಲುಕುವ ವಿಷಯ; ಇಷ್ಟೇ ಮುಖ್ಯವಾದದ್ದು ಭಾರತೀಯ ಕಲಾ ಇತಿಹಾಸದ ಪಿತಾಮಹರೆನಿಸಿದ್ದ ಆನಂದ ಕೆಂಟಿಷ್ ಕುಮಾರಸ್ವಾಮಿಯವರು ಸುಮಾರು 90 ವರ್ಷಗಳ ಹಿಂದೆ ಪ್ರಕಟಿಸಿದ್ದ `ಇಂಡಿಯನ್ ಆರ್ಕಿಟೆಕ್ಚರಲ್ ಟರ್ಮ್ಸ್’ ಲೇಖನವನ್ನು ಹೊರತುಪಡಿಸಿದರೆ, ಈ ವಿಷಯದ ಬಗ್ಗೆ ಮತ್ತೊಂದು ಲೇಖನವು ಪ್ರಕಟವಾಗದಿರುವುದು. ಕುಮಾರಸ್ವಾಮಿಯವರು ಪಾಲೀ ಗ್ರಂಥವನ್ನಾಧರಿಸಿ ಬರೆದ ಲೇಖನಕ್ಕೂ ಶಾಸನಗಳನ್ನು ಆಧರಿಸಿ ಬರೆದಿರುವ ಶೆಟ್ಟರ್ ಲೇಖನಕ್ಕೂ ಬಹಳ ಅಂತರವಿದೆ, ಅಲ್ಲದೆ ಈ ಚರ್ಚೆ ಕುಮಾರಸ್ವಾಮಿಯವರ ಚರ್ಚೆಗಿಂತಲೂ ಹೆಚ್ಚು ಸಮಗ್ರವಾಗಿದೆ, ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಬೌದ್ಧರ ವಾಸ್ತು ಮತ್ತು ಶಿಲ್ಪದ ‘ಅಪ್ಲೈಡ್ ವೊಕಾಬುಲರಿ’ಯನ್ನು ವಿಶ್ವಕ್ಕೆ ಪರಿಚಯಿಸುವುದಕ್ಕಿಂತ ಮುಂಚೆ ಅವನ್ನು ಕನ್ನಡಕ್ಕೆ ಪರಿಚಯಿಸಿರುವುದು.
ಬಹು ಸಮೃದ್ಧವಾದ ಈ ಕೃತಿ ಒಮ್ಮೆ ಓದಿ ಮರೆತುಬಿಡುವಂಥದು ಅಲ್ಲ, ಅದು ನಮ್ಮನ್ನು ಕಾಡುತ್ತ ಇರುತ್ತದೆ. ಬೌದ್ಧ, ಜೈನ ಶ್ರಾವಕರ, ಸನ್ಯಾಸಿಗಳ, ಶ್ರಮಣರ, ಶ್ರಮಣಿಯರ, ರಾಜರುಗಳ, ರಾಣಿಯರ, ಕವಿಗಳ ಜತೆ ಆರಂಭದಲ್ಲೇ ಹೇಳಿದಂತೆ ನಾವು ಭರತಖಂಡದ ಬಹುಪಾಲು ಭಾಗಗಳನ್ನು ಸುತ್ತುತ್ತೇವೆ, ಶತಮಾನಗಳನ್ನು ದಾಟುತ್ತೇವೆ. ನಮ್ಮ ಕೈಹಿಡಿದು ನಡೆಸುವ ಪ್ರೊಫೆಸರ್ ಶೆಟ್ಟರ್ ಅವರ ಬಗ್ಗೆ ಹೆಮ್ಮೆ ತಳೆಯುತ್ತೇವೆ. ಇಂಥ ಬಹುಶ್ರುತ ಇತಿಹಾಸಜ್ಞರೊಬ್ಬರು ನಮ್ಮ ನಡುವೆ ಇದ್ದುದಕ್ಕೆ ಕೃತಜ್ಞರಾಗುತ್ತೇವೆ.
ಈ ಕೃತಿಯನ್ನು ಓದುತ್ತ ನನಗೆ ಇತಿಹಾಸವೆಂಬ ಜ್ಞಾನ ಶಾಖೆಯ ಕುರಿತು ಇನ್ನಷ್ಟು ಗೌರವ ಮೂಡಿದೆ: ಇತಿಹಾಸ ಒಂದು ರೀತಿಯಲ್ಲಿ ವಿಜ್ಞಾನಕ್ಕೆ ಸಮಾನ. ವಿಜ್ಞಾನದಲ್ಲಿ ಪ್ರಯೋಗವಿದೆ, ಇತಿಹಾಸದಲ್ಲಿ ಇಲ್ಲ, ಅದೊಂದು ವ್ಯತ್ಯಾಸ; ಇನ್ನು ವಿಜ್ಞಾನಕ್ಕೆ ಕಾಲದ ಹಂಗಿಲ್ಲ, ಇತಿಹಾಸ ಕಳೆದುಹೋದುದನ್ನು ಹುಡುಕುತ್ತದೆ. ಇತಿಹಾಸ ಯಾಕೆ ಬೇಕು ಎಂಬುದಕ್ಕೆ ಉತ್ತರಿಸುವುದು ಪ್ರಶ್ನೆ ಕೇಳುವಷ್ಟೇ ಬಾಲಿಶವಾಗುತ್ತದೆ: ಇಂದಿನದನ್ನು ಅರಿತುಕೊಳ್ಳುವುದಕ್ಕೆ ಹಿಂದಿನದರ ಪರಿಜ್ಞಾನ ಬೇಕಾಗುತ್ತದೆ, ಅಲ್ಲದೆ ಮುಂದಿನದಕ್ಕೂ ಅದರಿಂದ ಪಾಠ ಸಿಗಬಹುದು ಎಂದು ಸರಳವಾಗಿ ಹೇಳಬಹುದೇನೊ. ಇತಿಹಾಸದಲ್ಲಿ ಊಹೆಗೆ, ನಿರೂಪಣೆಗೆ ಸ್ಥಾನವಿಲ್ಲವೆಂದಿಲ್ಲ, ವಿಜ್ಞಾನದಲ್ಲೂ ಇದೆ. ಆದರೆ, ಎರಡರಲ್ಲೂ ಪ್ರತಿಯೊಂದು ನಿರ್ಣಯವೂ ಆಧಾರಸಹಿತವಾಗಿ, ವೈರುಧ್ಯರಹಿತವಾಗಿ ಇರತಕ್ಕದ್ದು. ಯಾವ ನಿರ್ಣಯವೂ ಅಂತಿಮವೆಂದು ಹೇಳುವಂತೆಯೂ ಇಲ್ಲ. ಹೊಸ ಪುರಾವೆಗಳು ಸಿಕ್ಕಂತೆ ಅದು ಮಾರ್ಪಡಬಹುದು. ವಸ್ತುನಿಷ್ಠತೆ, ತರ್ಕಬದ್ಧತೆ, ಸ್ವಾನುಮಾನ, ಅಪೂರ್ಣತೆಯ ಅರಿವು, ತನ್ಮೂಲದ ವಿನಯ ಮುಖ್ಯ. ಇತಿಹಾಸಕಾರನ ಜವಾಬ್ದಾರಿ ವಿಜ್ಞಾನಿಯ ಜವಾಬ್ದಾರಿಯಂತೆಯೇ ಬಹಳ ದೊಡ್ಡದು. ಇತಿಹಾಸಕಾರ ಒಬ್ಬ ಸತ್ಯಾರ್ಥಿ, ಯಾಕೆಂದರೆ ಆತನ ಕೆಲಸ ಸತ್ಯ ಶೋಧನೆಯಲ್ಲದೆ ಇನ್ನೇನೂ ಅಲ್ಲ.
ಶೆಟ್ಟರ್ ಅವರ ವಿಚಾರಗಳೊಂದಿಗೆ ನನ್ನದೇ ಕೆಲವು ಅನಿಸಿಕೆಗಳನ್ನು ಒಬ್ಬ ಓದುಗನಾಗಿ ನಾನಿಲ್ಲಿ ಜೋಡಿಸಿದ್ದೇನೆ. ಇದಕ್ಕೆ ನನ್ನನ್ನು ನಿಯುಕ್ತನಾಗಿಸಿದ್ದು ಅವರು ಸಾಮಾನ್ಯನೊಬ್ಬನಿಗೆ ತೋರುವ ಗೌರವ ಎಂದು ತಿಳಿದಿದ್ದೇನೆ. ಇದಕ್ಕಾಗಿ ನಾನು ಅವರಿಗೆ ಋಣಿ. ಇಲ್ಲಿ ನಾನು ಈ ಪುಸ್ತಕದ ಓದಿನ ನನ್ನ ಸಂತೋಷವನ್ನು ಓದುಗರ ಜತೆ ಹಂಚಿಕೊಳ್ಳುವುದಕ್ಕಿಂತ ಹೆಚ್ಚಿನದೇನನ್ನೂ ಮಾಡಿಲ್ಲ. ಇದುವರೆಗೆ ದೂರದಿಂದಲೆ ವೀಕ್ಷಿಸುತ್ತಿದ್ದ ಕ್ಷೇತ್ರವೊಂದರಿಂದ ನಾನೀಗ ಹೆಚ್ಚು ಆಕರ್ಷಿತನಾದಂತೆ ಅನಿಸುತ್ತಿದೆ. ಇಂಥ ಭಾವನೆ ಈ ಕೃತಿಯನ್ನು ಓದಿದ ಇತರರಿಗೂ ಬಂದೇ ಬರುತ್ತದೆ ಎನ್ನುವುದು ನನ್ನ ವಿಶ್ವಾಸ.
`ಪ್ರಾಕೃತ ಜಗದ್ವಲಯ’ ಕನ್ನಡಕ್ಕೆ ಒಂದು ಅಮೂಲ್ಯ ಕೊಡುಗೆ.
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.