ಇಂದಿನಿಂದ ಕೆಂಡಸಂಪಿಗೆಯಲ್ಲಿ ಕಾಲೇಜು ಸಂಪಿಗೆ ಪ್ರಾರಂಭವಾಗುತ್ತಿದೆ. ನೀವಿನ್ನೂ ಕಾಲೇಜು ಮೆಟ್ಟಿಲು ಹತ್ತಿದ ಮೊದಲ ಸಂಭ್ರಮದಲ್ಲಿರಬಹುದು, ಪದವಿ ಮುಗಿಸಿರಬಹುದು, ಅಥವಾ ಸ್ನಾತಕೋತ್ತರ ಪದವಿಯಲ್ಲಿರಬಹುದು. ಡಿಪ್ಲೋಮಾ ಮಾಡುತ್ತಿರಬಹುದು, ವೃತ್ತಿಪರ ಕೋರ್ಸಿನ ವಿದ್ಯಾರ್ಥಿಯಿರಬಹುದು. ನಿಮ್ಮ ಮನದೊಳಗೆಲ್ಲೋ ಬರವಣಿಗೆಯ ತುಡಿತ ಹಸಿರಾಗಿದೆಯೇ? ಮತ್ತೇಕೆ ತಡ, ಪೆನ್ನು ಕೈಗಿತ್ತಿಕೊಳ್ಳಿ ನಿಮ್ಮ ಕಲ್ಪನೆಗಳಿಗೆ, ಭಾವನೆಗಳಿಗೆ ಅಕ್ಷರ ರೂಪ ಕಲ್ಪಿಸಿ, ನಮಗೆ ಕಳುಹಿಸಿ. ಕೆಂಡಸಂಪಿಗೆಯ ಕಾಲೇಜು ಸಂಪಿಗೆಯಲ್ಲಿ ಪ್ರತಿ ಶುಕ್ರವಾರ ಆಯ್ಕೆಯಾದ ಬರಹಗಳು ಪ್ರಕಟಗೊಳ್ಳುತ್ತವೆ.
ಕಥೆ, ಕವಿತೆ, ಕನಸು, ಕನವರಿಕೆ, ಗುಸು ಗುಸು, ಪಿಸುಮಾತು, ಲಘು ಹರಟೆ, ನವಿರು ಬರಹ ಹೀಗೆ ಏನು ಬೇಕಾದರೂ ಆಗಬಹುದು. ನಿಮ್ಮ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುವ ಪುಟ್ಟ ಪುಟ್ಟ ಘಟನೆಗಳನ್ನೂ ಬರೆದು ಕಳುಹಿಸಬಹುದು. ರಾತ್ರಿ ಬಾಯಿ ತೆರೆದು ಗೊರಕೆ ಹೊಡೆಯುವ ನಿಮ್ಮ ರೂಮ್‌ಮೇಟ್ ಬಗ್ಗೆಯೂ ಬರೆಯಬಹುದು. ಆದರೆ ಯಾರನ್ನೂ ನೋಯಿಸುವಂತಿರಬಾರದು. ಇದನ್ನೇ ಬರೆಯಬೇಕು ಹೀಗೆಯೇ ಇರಬೇಕು ಎನ್ನುವ ಯಾವುದೇ ನಿಯಮವಿಲ್ಲ. ತುಂಬಾ ಉದ್ದ ಆಗುತ್ತಿದೆ ಎನ್ನುವ ಮೊದಲೇ ನೀವೇ ನಿಲ್ಲಿಸಿಬಿಡಿ.
ಲೇಖನಗಳನ್ನು ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಟೈಪಿಸಿ editor@kendasampige.com360degree.com ಗೆ ಇಮೇಲ್ ಮಾಡಬೇಕು.
ಕಾಲೇಜು ಸಂಪಿಗೆಯ ಮೊದಲ ದಿನ ಬೆಂಗಳೂರಿನ ಯು.ವಿ.ಸಿ.ಇ ಕಾಲೇಜಿನ ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಸುಪ್ರೀತ್ ಕೆ.ಎಸ್ ಬರೆದ ಲೇಖನವನ್ನು ಪ್ರಕಟಿಸುತ್ತಿದ್ದೇವೆ.
ಅಪ್ಪನಿಗೆ ಕೆಲವೊಂದು ವಿಷಯಗಳು ಈಗ ಗೊತ್ತಾವುದೇ ಇಲ್ಲ…
ಆಗಿನ್ನೂ ನನಗೂ ಎಲ್ಲಾ ತಿಳಿಯುತ್ತೆ ಅಂತ ಅನ್ನಿಸುತ್ತಲೇ ಇರಲಿಲ್ಲ. ಮನೆಗೆ ಪೇಪರ್ ಹಾಕುವ ಹುಡುಗ ಲೇಟಾಗಿ ಬಂದಾಗ, ಹಾಲಿನವನು ತನ್ನ ಸಹಜ ಅಪ್ರಮಾಣಿಕತೆಯ ಪ್ರಮಾಣವನ್ನು ಯಾವ ಸೂಚನೆಯೂ ಇಲ್ಲದೆ ಏರಿಸಿಬಿಟ್ಟಾಗ, ತಂಗಿ ದೂರದ ಗೆಳತಿಯ ಮನೆಗೆ ಹೋಗಿ ಬರಲು ಅಪ್ಪಣೆ ಕೋರುವಂತೆ ಮುಖ ಮಾಡಿಕೊಂಡು ನಿಂತಾಗ, ಮಾರ್ಕೆಟ್ಟಿನಲ್ಲಿ ಅಪ್ಪ ಅಂಗಡಿಯಾತ ಕೇಳಿದಷ್ಟು ದುಡ್ಡು ತೆತ್ತು ಬೆನ್ನು ಹಾಕಿದಾಗ ಅಂಗಡಿಯವ ಮರೆಯಲ್ಲಿ ಕಿಸಿ ಕಿಸಿ ನಕ್ಕಾಗ, ಅಮ್ಮ ಅಡುಗೆ ಮನೆಯಲ್ಲಿ ಅಸಹಾಯಕಳಾಗಿ ಪಾತ್ರೆ ನೆಲಕ್ಕೆ ಕುಟ್ಟುತ್ತಿರುವಾಗ, ಮನೆಗೆ ಯಾವ ಮಾಡೆಲ್ ಟಿವಿ ತರಬೇಕು ಎಂಬ ಚರ್ಚೆ ನಡೆಯುವಾಗ, ತೋಟದ ಕೆಲಸಕ್ಕೆ ಇವನು ಆಗ್ತಾನಾ ಎಂದು ಮನೆಯಲ್ಲಿ ಚಿಂತಿಸುವಾಗ, ನನ್ನ ಕೋಣೆಯ ಎದುರಿನ ಗೋಡೆಯ ಮೇಲೆ ಸರಸ್ವತಿ ಶಂಕರಾಚಾರ್ಯರ ಫ್ರೇಮು ಹಾಕಿದ ಫೋಟೊ ಇರಬೇಕಾ, ಬಿಜೆಪಿ ಬಂದರೆ ಒಳ್ಳೆಯದಾ ಇಲ್ಲಾ ಕಾಂಗ್ರೆಸ್ಸು ಛಲೋದಾ ಎಂದೆಲ್ಲಾ ನನ್ನೆದುರು ಅನೇಕ ಸಂಗತಿಗಳು ಜರುಗುತ್ತಿರುವಾಗ ನನಗೂ ಇವೆಲ್ಲಾ ತಿಳಿಯುತ್ತೆ ಅಂತ ಅನ್ನಿಸುತ್ತಲಿರಲಿಲ್ಲ.
ಬಟ್ಟೆ ಅಂಗಡಿಗೆ ಅಪ್ಪನ ಜೊತೆಗೆ ಹೋಗದಿದ್ದರೆ ಆತ ಬಟ್ಟೆಯನ್ನು ತೋರಿಸುವುವೇ ಇಲ್ಲ ಎಂದುಕೊಂಡಿದ್ದೆ. ತರಕಾರಿ ತರಲು ಹೋದಾಗ ಅಪ್ಪ ನನ್ನ ಹಿಂದಿರದಿದ್ದರೆ ಅಂಗಡಿಯಾಕೆ ಮುಲಾಜಿಲ್ಲದೆ ಹುಳವಿರುವ ಬದನೇಕಾಯಿ, ಬೆಂಡು ಬಂದ ಕ್ಯಾರೆಟ್ ಬ್ಯಾಗಿಗೆ ತುರುಕುತ್ತಾಳೆ ಎಂದು ಆತಂಕಗೊಂಡಿದ್ದೆ. ಸೈಕಲ್ ಶಾಪಿಗೆ ಪಂಕ್ಚರ್ ಹಾಕಿಸಲು ಹೋದಾಗ ಅಪ್ಪನ ಹೆಸರು ಹೇಳಿದರೆ ಆತ ಪಂಕ್ಚರಿನ ಕಾಸಿನಲ್ಲಿ ಒಂದು ರೂಪಾಯಿ ಕಡಿಮೆ ಪಡೆಯುತ್ತಿದ್ದ ಎಂದು ನಂಬಿಕೊಂಡಿದ್ದೆ. ಶಾಲೆಗೆ ತಾನೇಕೆ ಲೇಟು ಬಂದೆ ಅನ್ನೋದನ್ನ ಹೆಡ್ ಮಾಸ್ಟರ್‌ಗೆ ಹೇಳೋದಕ್ಕೆ ಅಪ್ಪನೇ ಬರಬೇಕು ಎಂದುಕೊಂಡಿದ್ದೆ. ಚಿಲ್ಲರೆ ಕಾಸಿನ ನಾಣ್ಯ ಬಿಟ್ಟರೆ ದೊಡ್ಡ ದೊಡ್ಡ ನೋಟುಗಳೇನಿದ್ದರೂ ಅಪ್ಪನ ಜೇಬಿನಲ್ಲಿ ಮಾತ್ರ ಇರಬೇಕು ಎನ್ನಿಸುತ್ತಿತ್ತು. ಶಾಲೆಗೆ ಹೊತ್ತಾಯಿತೆಂದು ಅಪ್ಪ ಉಟ್ಟ ಲುಂಗಿಯಲ್ಲೇ ಸ್ಕೂಟರ್ ಚಾಲು ಮಾಡಿದರೆ ನನ್ನ ಗೆಳೆಯರ್ಯಾರೂ ಅಪ್ಪನನ್ನು ನೋಡದಿದ್ದರೆ ಸಾಕು ಎಂದು ಆಶಿಸುತ್ತಿದ್ದೆ. ವಾರ್ಷಿಕೋತ್ಸವಕ್ಕೆ ಆಡಿಸುತ್ತಿದ್ದ ನಾಟಕದಲ್ಲಿ ಪಾತ್ರ ಮಾಡುತ್ತೀಯಾ ಅಂದರೆ ಅಪ್ಪನನ್ನೊಂದು ಮಾತು ಕೇಳಲೇಬೇಕು ಎಂದಿರುತ್ತಿದ್ದೆ. ದೊಡ್ಡಪ್ಪ ಅಪ್ಪನ ಮೇಲೆ ವಿನಾಕಾರಣ ರೇಗುವಾಗ ಉಮ್ಮಳಿಸಿ ಬಂದ ಅಳುವನ್ನು ಹತ್ತಿಕ್ಕಲಾಗದೆ ಮಹಡಿಗೆ ಓಡಿ ಮೂಲೆಯಲ್ಲಿ ಕಣ್ಣೀರಾಗಿದ್ದೆ. ಅಪ್ಪನಿಗೆ ನಿಜಕ್ಕೂ ಎಲ್ಲಾ ಗೊತ್ತಿದೆ ಎಂದೇ ನನಗಾಗ ಅನ್ನಿಸುತ್ತಿತ್ತು.
ಶಾಲೆಯ ಯೂನಿಫಾರಂ ಚಡ್ಡಿಯಿಂದ ಪ್ಯಾಂಟಿಗೆ ಪ್ರಮೋಶನ್ ಪಡೆದು ಮುಂದೆ ಯೂನಿಫಾರಮ್ಮೇ ಇಲ್ಲದ ಕಾಲೇಜು ಕಂಡಾಗ ಅಪ್ಪನಿಗೇನೂ ಗೊತ್ತಾಗುವುದಿಲ್ಲ ಎಂಬುದು ಗೊತ್ತಾಗತೊಡಗಿತು. ನನ್ನ ಕ್ಯಾಲ್ಕುಲಸ್, ನ್ಯೂಕ್ಲಿಯಾರ್ ಫಿಸಿಕ್ಸುಗಳ ಬಗ್ಗೆ ಅಪ್ಪನಿಗೆ ಗೊತ್ತಿರಲು ಸಾಧ್ಯವೇ ಇಲ್ಲ ಎಂಬುದು ಅರಿವಾಗತೊಡಗಿತು. ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಗೆ ಒಂದು ತಿಂಗಳಿರುವಾಗ ಅಂಗಳದಲ್ಲಿ ಪೇಪರ್ ಓದುತ್ತಾ ಕುಳಿತಿದ್ದ ಅಪ್ಪನ ಎದುರು ತಲೆ ಮೇಲೆತ್ತದೆ ಲೆಕ್ಕ ಮಾಡಲು ತಿಣುಕುತ್ತಿದ್ದ ನನ್ನನ್ನು ನೆನಪಿಸಿಕೊಂಡರೆ ಸಣ್ಣಗೆ ನಗುಬರುವುದು ಗಮನಕ್ಕೆ ಬರತೊಡಗಿತು. ತರಕಾರಿ, ಹಣ್ಣುಗಳನ್ನು ಅಪ್ಪನಿಗಿಂತ ಕಡಿಮೆ ದುಡ್ಡಿನಲ್ಲಿ ನಾನು ತರುತ್ತೀನಿ ಅಂತ ಅಮ್ಮ ನನ್ನನ್ನೇ ಮಾರ್ಕೆಟ್ಟಿಗೆ ಅಟ್ಟಲು ಶುರು ಮಾಡಿದಾಗ ಅಪ್ಪ ನನ್ನ ನೋಡಿ ನಕ್ಕಿದ್ದು ವಿಚಿತ್ರವಾಗಿ ಕಂಡಿತ್ತು. ಮನೆಗೆ ಕಂಪ್ಯೂಟರ್ ತರುವಾಗ ಅಪ್ಪ ಅಂಗಡಿಯವನೊಂದಿಗೆ ಮಾತಾಡಲು ನನಗೇ ಹೇಳುತ್ತಿದ್ದರು. ಹೊಸ ಮೊಬೈಲು ಮನೆಗೆ ಬಂದಾಗ ಮ್ಯಾನುಯಲ್ಲು ನನ್ನ ತೊಡೆಯ ಮೇಲಿರುತ್ತಿತ್ತು. ಕಾಲೇಜಿಗೆ ರಜೆ ಹಾಕಲು ಲೀವ್ ಲೆಟರ್‌ಗೆ ಅಪ್ಪನ ಸಿಗ್ನೇಚರು ಬೇಕಿರಲಿಲ್ಲ. ಶಾಪಿಂಗ್ ಮಾಲಿಗೆ ಹೋದರೆ ಅಪ್ಪ ಇಲ್ಲ ಎಂಬ ಹೆದರಿಕೆ ಸುಳಿಯುತ್ತಿರಲಿಲ್ಲ. ಥಿಯೇಟರಿನಲ್ಲಿ ಒಬ್ಬನೇ ಕುಳಿತು ನೋಡಿದರೆ ಸಿನೆಮಾದ ಮಜಾನೆ ಬೇರೆ ಅನ್ನಿಸತೊಡಗಿತ್ತು. ಮನೆಯಲ್ಲಿ ಅಮ್ಮನ ಪರವಾಗಿ ಮಾತನಾಡಿದರೆ ಅಪ್ಪ ಎದುರಾಡುತ್ತಿರಲಿಲ್ಲ. ಧರ್ಮಸ್ಥಳದಲ್ಲಿ ಕೇಶ ಮುಂಡನಕ್ಕೆ ಒಲ್ಲೆ ಎಂದರೆ ಅಮ್ಮ ‘ಹೇಳಿದಂತೆ ಕೇಳು ನಿನಗೆ ಇದೆಲ್ಲಾ ಗೊತ್ತಾಗಲ್ಲ’ ಎಂದು ಹೇಳುತ್ತಿದ್ದದ್ದು ನಿಂತು ಹೋಗಿ ಯಾವ ಕಾಲವಾಯಿತು ಎಂಬುದು ನೆನಪಿಲ್ಲ. ಮನೆಗೆ ತಡವಾಗಿ ಬರುವಾಗ ರಸ್ತೆಯುದ್ದಕ್ಕೂ ಅಪ್ಪ ಮನೆಗೆ ಬಂದಿರುವುದು ಬೇಡ ಅಂತ ದೇವರಲ್ಲಿ ಬೇಡಿಕೊಳ್ಳುವುದರ ಆವಶ್ಯಕತೆಯಿರಲಿಲ್ಲ. ಅಪರೂಪಕ್ಕೊಮ್ಮೆ ಅಪ್ಪ ‘ನಿನಗಿದೆಲ್ಲಾ ಅರ್ಥವಾಗಲ್ಲ’ ಎಂದಾಗ ನನಗೆ ಅರ್ಥವಾಗದ್ದು ಏನಿದೆ ಎಂದೇ ಅನ್ನಿಸುತ್ತಿತ್ತು.
ಈಗೇನು ಪರಿಸ್ಥಿತಿ ಬದಲಾಗಿಲ್ಲ. ನಾನು ಕ್ರಿಕೆಟ್ ನೆಟ್ ಪ್ರ್ಯಾಕ್ಟಿಸ್ ಮಾಡುತ್ತಿರುವುದು ಅಪ್ಪನಿಗೆ ಇಷ್ಟವಿಲ್ಲ. ಅಮ್ಮ ಮೊದಲು ಓದು ಮುಗಿಸು ಅನ್ನೋದು ತಪ್ಪಿಲ್ಲ. ಹಾಗಂತ ಪ್ರತಿದಿನ ನಾನು ಮೈದಾನದಲ್ಲಿ ಬೆವರಿಳಿಸುವುದು ನಿಂತಿಲ್ಲ. ಈಗ್ಲೂ ಕ್ರಿಕೆಟ್ ಕೋಚಿಂಗ್‌ಗೆ ಹೋಗ್ತಿದ್ದೀಯಾ ಅಂತ ಅಪ್ಪ ಕೇಳೋದಿಲ್ಲ. ಆದರೆ ಪ್ರತಿ ತಿಂಗಳ ಮುವತ್ತಕ್ಕೆ ಬ್ಯಾಂಕಿನ ಅಕೌಂಟಿನಲ್ಲಿ ಹಣ ಜಮೆಯಾಗಿರುತ್ತದೆ. ಅದರಲ್ಲಿ ಕ್ರಿಕೆಟ್ ಕೋಚಿಂಗ್‌ನ ಫೀಸೂ ಸೇರಿರುತ್ತೆ! ತಮ್ಮ ಸಿಇಟಿ ಆದ ಮೇಲೆ ಏನು ಮಾಡಲಿ ಎಂದು ನನ್ನ ಮೊದಲು ಕೇಳುತ್ತಾನೆ. ಮನೆಗೆ ಹೋದಾಗ ಅಮ್ಮ ಅಪ್ಪನ ಖರ್ಚು ವಿಪರೀತವಾಯ್ತು ಎನ್ನುತ್ತಿರುತ್ತಾಳೆ. ಮಾತಿಗೆ ಮಾತು ಬಂದಾಗ ನೀನೂ ಮದುವೆಯಾಗ್ತೀಯಲ್ಲಪ್ಪ ನೋಡೋಣಂತೆ ಎಂದು ಕೊಂಕು ತೆಗೆಯುತ್ತಾಳೆ. ವಾರ ವಾರ ಮನೆಗೆ ಬಂದಾಗ ನಿಂಗೂ ಕಂಪ್ಯೂಟರ್ ಕಲಿಸ್ತೇನೆ ಅಂದರೆ ನಂಗೆಲ್ಲಿ ಪುರುಸೊತ್ತು ಎಂದು ತಪ್ಪಿಸಿಕೊಳ್ಳುತ್ತಾಳೆ. ಅಪ್ಪ ಟ್ಯಾಬಲಾಯ್ಡ್‌ಗಳನ್ನು ತಮ್ಮ ಬೀಗವಿರುವ ಟೇಬಲ್ಲಿನ ಡ್ರಾದೊಳಗೆ ಇಡುವ ಎಚ್ಚರಿಕೆಯನ್ನು ಕೈಬಿಟ್ಟಿದ್ದಾರೆ. ಟಿವಿಯಲ್ಲಿ ಕಾಂಡೋಮ್ ಜಾಹೀರಾತು ಬಂದೊಡನೆ ಚಾನಲ್ ಬದಲಾಗುವುದು ನಿಂತು ಹೋಗಿದೆ. ಬೆಂಗಳೂರಿಗೆ ಬರುವ ಮೊದಲು ‘ಅಲ್ಲಿನ ಬಿ.ಎಂ.ಟಿ.ಸಿ ಬಸ್ಸು ಮತ್ತು ಬೆಂಗಳೂರಿನ ಹುಡುಗಿಯರ ಬಗ್ಗೆ ಹುಶಾರಗಿರಬೇಕು. ಎರಡೂ ಸ್ಪೀಡು ಜಾಸ್ತಿ’ ಎಂದು ಅಪ್ಪ ಹೇಳಿದ್ದು ಮತ್ತೆಂದೂ ರಿಪೀಟಾಗಿಲ್ಲ!
ನಾನು ತಿಳಿದುಕೊಂಡಿರುವುದರಲ್ಲಿ ಎಷ್ಟೋಂದು ಅಪ್ಪನಿಗೆ ಗೊತ್ತೇ ಇಲ್ಲ ಎನ್ನುವ ನನ್ನ ಉಡಾಫೆ ನಿಂತಿಲ್ಲ. ಈ ವಯಸ್ಸಿನವರೆಲ್ಲಾ ಇರೋದೇ ಹೀಗೆ ಎಂಬ ವಯಸ್ಸಾದವರ ಕಮೆಂಟಿಗೆ ಕೊರತೆಯಿಲ್ಲ, ಜೊತೆಗೆ ನಾವು ಇರಬೇಕಾದ್ದೇ ಹೀಗೆ ಎನ್ನುವ ನಮ್ಮ ಹುಂಬತನಕ್ಕೂ .