ಟ್ರಯಲ್ ರೂಮಿನ ಅಪ್ಸರೆಯರಿಗೆ ಕೊನೆಗೂ ಉಳಿಯುವು ಆಯ್ಕೆ ಯಾವುದು? ಸ್ವಮರುಕವೆ? ಆಕ್ರೋಶವೆ? ವಿಷಾದವೆ? ಈ ಪ್ರಶ್ನೆಗಳ ಪ್ರಸ್ತಾಪವೇ ಹಳಹಳಿಕೆಯಂತೆ ಕಂಡರೆ ಅದು ಸಂವೇದನೆಯ ದೋಷವಲ್ಲವೆ? ಸಂಕೀರ್ಣವಾದ ಹೆಣ್ಣಿನ ವಿಷಯಗಳನ್ನು ಸರಳಗೊಳಿಸದೇ ಅದರ ಸಾಂದ್ರತೆಯಲ್ಲಿ ಇದು ಮಂಡಿಸುತ್ತದೆ. ಇಲ್ಲಿ ಹೆಣ್ಣಿನ ದೃಷ್ಟಿಕೋನವೂ, ಅವಳ ಆ ದೃಷ್ಟಿಕೋನವನ್ನು ನಿರ್ಧರಿಸಲು ಅಧಿಕಾರ ಬಲದಿಂದ ಪ್ರಯತ್ನಿಸುವ ಮೌಲ್ಯವ್ಯವಸ್ಥೆಯೂ, ಅದರಿಂದ ಹೊರಬರಬೇಕೋ ಬೇಡವೋ ಎನ್ನುವ ಹೆಣ್ಣಿನ ಸಂದಿಗ್ಧತೆಗಳೂ ಏಕಕಾಲಕ್ಕೆ ಪ್ರತ್ಯಕ್ಷವಾಗುತ್ತವೆ
ಭುವನಾ ಹಿರೇಮಠ ಕವಿತಾ ಸಂಕಲನಕ್ಕೆ ಡಾ.ಎಂ.ಎಸ್.ಆಶಾದೇವಿ ಬರೆದ ಮುನ್ನುಡಿ
ಕಾವ್ಯಕ್ಕೆ ಬೀಸಣಿಕೆಯ ಗುಣವೂ ಉಂಟು. ನಮ್ಮ ಬುದ್ಧಿ ಭಾವಗಳ ತಾಪವನ್ನು ತಣಿಸಲು ಕಾವ್ಯದ ಬೀಸಣಿಕೆಯನ್ನು ಬೀಸಿಕೊಳ್ಳುತ್ತಾ , ಬರುವ ತಂಗಾಳಿಯನ್ನು ಆನಂದಿಸುತ್ತಾ, ಕಾವ್ಯದ ಬಗೆಗಿನ ನಮ್ಮ ಪ್ರೀತಿ, ಕೃತಜ್ಞತೆಯನ್ನು ಹೆಚ್ಚಿಸಿಕೊಳ್ಳುವ ಸ್ನೇಹದ ನಂಟು ಕಾವ್ಯದ್ದು. ಆದ್ದರಿಂದಲೇ ಕವಿಗಳ ಮೊದಮೊದಲ ಧೋರಣೆ, ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ ಎನ್ನುವುದಾಗಿರುತ್ತದೆ. ಕಾವ್ಯಕ್ಕೆ, ಕಾವ್ಯ ಪರಂಪರೆಗೆ, ಭಾಷೆ ಮತ್ತು ಕಾವ್ಯ ಸಂಸ್ಕೃತಿಗೆ ನಾನೇನು ಕೊಟ್ಟೆ ಎನ್ನುವ ಪ್ರಶ್ನೆಯೇ ಅಲ್ಲಿ ಉದ್ಭವಿಸುವುದಿಲ್ಲ. ಬದಲಿಗೆ ಕಾವ್ಯ ನನಗೇನು ಕೊಟ್ಟಿತು ಎನ್ನುವ ಸಂಗತಿಯೇ ಗಾಢವಾಗಿ ಕಾಡುತ್ತದೆ. ಇಲ್ಲಿಯ ತನಕ ಕವಿಗೂ ಕಾವ್ಯಕ್ಕೂ ಇರುವುದು ಅಂತರಂಗದ ಸಂಬಂಧ.
ಆದರೆ ಕಾವ್ಯವೆನ್ನುವ ಮೋಹಿನಿಯ ಜೊತೆಗಿನ ಸಂಬಂಧ ಅಷ್ಟು ಸುಲಭದ್ದಲ್ಲ. ಅಂತರಂಗದ ಸುಪ್ತ ಸಂಬಂಧ ಅದ್ಯಾವುದೋ ಘಳಿಗೆಯಲ್ಲಿ ಲೋಕದೊಂದಿಗೆ ಸಂಬಂಧ ಕಟ್ಟಿಕೊಳ್ಳಲು ತಹತಹಿಸುತ್ತದೆ. ಲೋಕದ ಅಂಗೀಕಾರವೂ ಅದಕ್ಕೆ ಬೇಕು ಎನ್ನುವ ಉತ್ಕಟೇಚ್ಛೆ ಜ್ವರದಂತೆ ಕಾಡುತ್ತದೆ. ಇಲ್ಲಿಂದಾಚೆಗೆ ಕಾವ್ಯದ ಜೊತೆಗಿನ ಸಂಬಂಧದ ಸ್ವರೂಪವೂ ಬದಲಾಗುತ್ತಾ ಹೋಗುತ್ತದೆ. ಅಲ್ಲಿಯ ತನಕ ಕಾವ್ಯ ನನಗೆ ಕೊಟ್ಟದ್ದೇನು ಎನ್ನುವುದು ಮುಖ್ಯವಾದದ್ದು. ಈಗ ಕಾವ್ಯಕ್ಕೆ ನಾನು ಕೊಟ್ಟದ್ದೇನು ಎನ್ನುವ ಯು ಟರ್ನ್ ಅನ್ನು ಈ ಸಂಬಂಧ ಅನಿವಾರ್ಯವಾಗಿ ಪಡೆದುಕೊಳ್ಳುತ್ತದೆ.
ಆದರೆ ಯಾವಾಗ ಕಾವ್ಯವು ಓದುಗರ ತೆಕ್ಕೆಗೆ ಬೀಳುತ್ತದೋ ಆಗ ಅದು ಹಲವು ಪ್ರಶ್ನೆಗಳನ್ನು ಎದುರಾಗಬೇಕಾಗುತ್ತದೆ. ಮುಖ್ಯವಾಗಿ ಅದು ಕಾವ್ಯದ ಮೂಲಭೂತ ಗುಣಲಕ್ಷಣಗಳನ್ನು ಪಡೆದಿದೆಯೋ ಇಲ್ಲವೋ ಎನ್ನುವ ಅರ್ಹತಾ ಪರೀಕ್ಷೆಯಲ್ಲಿ ಅದು ಉತ್ತೀರ್ಣವಾಗಬೇಕು. ಕಾವ್ಯವು ಏಕಾಂತ ವಾಸದಿಂದ ಲೋಕಾಂತದ ಕಡೆಗೆ ಪಯಣಿಸುವಾಗ ಈ ಅಗ್ನಿದಿವ್ಯವನ್ನು ಅದು ಹಾಯಲೇಬೇಕು.
ಇಂಥ ಪ್ರಾಥಮಿಕ ಸಂಗತಿಗಳನ್ನು ಉಲ್ಲೇಖಿಸಲು ಕಾರಣವಿದೆ. ವರ್ಷವೊಂದರಲ್ಲಿ ಪ್ರಕಟವಾಗುವ ಎಲ್ಲ ಪ್ರಕಾರಗಳ ಪುಸ್ತಕಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರಕಟವಾಗುವುದು ಕವನ ಸಂಕಲನಗಳು. ಅವುಗಳನ್ನು ಓದಲು ಉಪಕ್ರಮಿಸಿದರೆ ಎದೆ ಒಡೆಯುತ್ತದೆ. ಕಾವ್ಯದ ಹೆಸರಿನ ಮತ್ತು ಕಾವ್ಯದ ವೇಷಧಾರಿಯಾದ ಬರವಣಿಗೆಗಳು ಕಾವ್ಯಾಸಕ್ತರಲ್ಲಿ ಆಘಾತವನ್ನುಂಟು ಮಾಡುತ್ತವೆ. ಕವಿಗಳಿಗೆ ತಮ್ಮ ಕಾವ್ಯವನ್ನು ಪ್ರಕಟಿಸಬೇಕಾದಾಗ ಅಗತ್ಯವಾಗಿ ಇರಬೇಕಾದ ಆತ್ಮವಿಮರ್ಶೆ ಮತ್ತು ಸ್ವ್ಯಯಂ ಮೌಲ್ಯಮಾಪನದ ವಿವೇಕದ ಗೈರು ಹಾಜರಿ ಎದ್ದು ಕಾಣುತ್ತದೆ. ಏಕಾಂತ ಮತ್ತು ಲೋಕಾಂತದ ನಡುವೆ ‘ಮೇಘದೂತ’ನಂತೆ ಕಾರ್ಯ ನಿರ್ವಹಿಸಬೇಕಾದ ಕಾವ್ಯ ‘ಏಜೆಂಟ್’ ನ ಪಾತ್ರವಹಿಸಬಾರದು.
ಭುವನಾ ಹಿರೇಮಠ ಇಂಥ ಆತುರಕ್ಕೆ ಬಲಿಬಿದ್ದಿಲ್ಲ ಎನ್ನುವುದಕ್ಕೆ ಈ ಸಂಕಲನ ಉದಾಹರಣೆಯಾಗಿದೆ. ಕಾವ್ಯದ ಮೇಲಿನ ಅನುರಕ್ತಿ ಇಲ್ಲಿದೆ. ಮೊದಲ ಸಂಕಲನದ ಶಕ್ತಿ ಮಿತಿಗಳು ಇಲ್ಲಿನ ಕವಿತೆಗಳಲ್ಲಿವೆ ಎನ್ನುವುದು ನಿಜ. ಆದರೆ, ಕಾವ್ಯ ಇವರಿಗೆ ತಾತ್ಕಾಲಿಕವಾದ ಆಶ್ರಯತಾಣವಾಗದೆ , ಕಾವ್ಯದ ಜೊತೆಗಿನ ನಿಡುಗಾಲದ ಸಖ್ಯಕ್ಕೆ ಇವರು ಹಂಬಲಿಸುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿನ ಕವಿತೆಗಳಲ್ಲಿ ಪುರಾವೆಯಿದೆ ಎನ್ನುವುದೇ ಇವರ ಕಾವ್ಯದ ಬಗೆಗೆ ನಮಗೆ ಆಸಕ್ತಿ ಹುಟ್ಟಲು ಕಾರಣವಾಗುತ್ತದೆ.
ಯಾವಾಗ ಕಾವ್ಯವು ಓದುಗರ ತೆಕ್ಕೆಗೆ ಬೀಳುತ್ತದೋ ಆಗ ಅದು ಹಲವು ಪ್ರಶ್ನೆಗಳನ್ನು ಎದುರಾಗಬೇಕಾಗುತ್ತದೆ. ಮುಖ್ಯವಾಗಿ ಅದು ಕಾವ್ಯದ ಮೂಲಭೂತ ಗುಣಲಕ್ಷಣಗಳನ್ನು ಪಡೆದಿದೆಯೋ ಇಲ್ಲವೋ ಎನ್ನುವ ಅರ್ಹತಾ ಪರೀಕ್ಷೆಯಲ್ಲಿ ಅದು ಉತ್ತೀರ್ಣವಾಗಬೇಕು. ಕಾವ್ಯವು ಏಕಾಂತ ವಾಸದಿಂದ ಲೋಕಾಂತದ ಕಡೆಗೆ ಪಯಣಿಸುವಾಗ ಈ ಅಗ್ನಿದಿವ್ಯವನ್ನು ಅದು ಹಾಯಲೇಬೇಕು.
ಮಹಿಳಾ ಕಾವ್ಯದ ಪ್ರಧಾನ ವಸ್ತುಗಳಲ್ಲಿ ಒಂದಾದ ‘ಗಂಡು ಹೆಣ್ಣಿನ ಸಂಬಂಧ’ದ ಪದರಗಳು ಈ ಸಂಕಲನದ ಮೂಲಾಶಯ. ಇದೊಂದು ವಿಲಕ್ಷಣವಾದ ಸಂಗತಿ. ಮಹಿಳಾ ಸಾಹಿತ್ಯ ಸೀಮಿತ ಲೋಕದ್ದು ಎನ್ನುವ ಆರೋಪದ ಹಿಂದೆ ಇರುವುದು ಮಹಿಳೆಯರು ವೈಯಕ್ತಿಕ ಸಂಬಂಧಗಳು ಮತ್ತು ಕೌಟುಂಬಿಕ ನೆಲೆಯಾಚೆಗೆ ತಮ್ಮನ್ನು ವಿಸ್ತರಿಸಿಕೊಳ್ಳುವುದಿಲ್ಲ ಎಂದು. ಆದರೆ, ಸಂಬಂಧಗಳು ಮತ್ತು ಕೌಟುಂಬಿಕತೆಯನ್ನು ಹೆಣ್ಣು ಭದ್ರಕೋಟೆಯಂತೆ ಕಟ್ಟದೇ ಹೋಗಿದ್ದರೆ ನಾಗರಿಕತೆಯ ಯಾವ ಸಂಸ್ಥೆಗಳೂ ಇಷ್ಟು ಬಾಳಿಕೆ ಬರುತ್ತಿರಲಿಲ್ಲ. ಎಂದರೆ, ಯಾವುದು ಸೀಮಿತವಾಗಿ ಕಾಣಿಸುತ್ತದೋ ಅಥವಾ ಹಾಗೆಂದು ಹೇಳಲಾಗುತ್ತದೆಯೋ ಅದು ನಿಜದಲ್ಲಿ, ಕುಟುಂಬವೂ ಸೇರಿದಂತೆ ನಾಗರಿಕ ಸಂಸ್ಥೆಗಳ ಮೂಲಾಧಾರವೇ ಆಗಿದೆ. ಎಂದರೆ, ಈ ಸಂಗತಿಗಳನ್ನು ಕುರಿತ ಹೆಣ್ಣಿನ ಆಸ್ಥೆಯು ಅವಳ ಅನನ್ಯತೆ ಮತ್ತು ಶಕ್ತಿಯೇ ಹೊರತು ಅವಳ ಮಿತಿ ಅಥವಾ ದೌರ್ಬಲ್ಯವಲ್ಲ. ಅಥವಾ ಇದನ್ನು ಅನುಭವಲೋಕದ ಮಿತಿ ಎಂದು ಹೇಳುವುದೂ ಸರಿಯಲ್ಲ. ಗಂಡು ಹೆಣ್ಣಿನ ಆದ್ಯತೆಗಳು ಬದಲಾದಾಗ ಅವರ ಅನುಭವಲೋಕಗಳೂ ಸಹಜವಾಗಿಯೇ ಬದಲಾಗುತ್ತವೆ ಎನ್ನುವ ಹಿನ್ನೆಲೆಯಲ್ಲಿ ನೋಡುವುದು ಮಹಿಳಾ ಸಾಹಿತ್ಯವನ್ನು ಗ್ರಹಿಸುವ ಸರಿಯಾದ ಕ್ರಮ.
ಗಂಡು ಹೆಣ್ಣಿನ ಸಂಬಂಧ ಪುರುಷ ಲೇಖಕರಲ್ಲಿ ಅವರ ಹಲವು ಶೋಧಗಳಲ್ಲಿ ಒಂದಾದರೆ, ಲೇಖಕಿಯರಲ್ಲಿ ಬಹಳಷ್ಟು ಸಲ,ಅದು ಪ್ರಧಾನಶೋಧವಾಗುತ್ತದೆ. ಭುವನಾ ಹಿರೇಮಠ ಅವರಲ್ಲಿ ಈ ಲಕ್ಷಣ ಎದ್ದು ಕಾಣುತ್ತದೆ. ಹಾಗೆಯೇ ಈ ಸಂಕಲನದ ಇನ್ನೊಂದು ಮುಖ್ಯ ಕಾಳಜಿಯೆಂದರೆ ಅದು ಹೆಣ್ಣಿನ ಸಮಕಾಲೀನ ಸ್ಥಿತಿಗತಿಗಳನ್ನು, ಅದರ ನಿಜದ ನೆಲೆಯಲ್ಲಿ ಕಾಣಲು ಯತ್ನಿಸುವುದು.
ಯಾವ ಕಾಲದಲ್ಲಿಯೂ ಅನೇಕ ಸವಾಲುಗಳನ್ನು ಎದುರಿಸುತ್ತಲೇ ಬಂದಿರುವ ಹೆಣ್ಣು ಈ ಕಾಲದಲ್ಲಿ ಎದುರಿಸುತ್ತಿರುವ ಸವಾಲುಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಭುವನಾ ತವಕಿಸುತ್ತಾರೆ. ಈ ಸಂಕಲನದ ಒಳ್ಳೆಯ ಕವಿತೆಗಳಲ್ಲಿ ಒಂದಾದ ‘ಟ್ರಯಲ್ ರೂಮಿನ ಅಪ್ಸರೆಯರು’ ಕವಿತೆಯನ್ನೇ ನೋಡೋಣ. ಟ್ರಯಲ್ ರೂಮಿನಲ್ಲಿಯೂ ಕೊನೆಗೂ ಹೆಣ್ಣು ತನ್ನನ್ನು ತಾನು ನೋಡಿಕೊಳ್ಳುತ್ತಾಳೆಯೋ? ‘ಅವರ’ ಕಣ್ಣೀರಿನಲ್ಲಿ ತನ್ನನ್ನು ನೋಡಿಕೊಳ್ಳುತ್ತಾಳೆಯೊ? ಟ್ರಯಲ್ ರೂಮಿನಲ್ಲಿ ಮೊಣಕಾಲಿನ ಮೇಲಿನ ಸ್ಕರ್ಟ್ನಲ್ಲಿ, ವ್ಯಾಕ್ಸ್ ಮಾಡಿಲ್ಲದ ಕಾಲಿನಲ್ಲಿ ಹೆಣ್ಣು ತನ್ನನ್ನು ತಾನು ಗ್ರಹಿಸಿಕೊಳ್ಳುವುದು ಹೇಗೆ? ವ್ಯಾಕ್ಸ್ ಮಾಡಬೇಕಾದ್ದಾದರೂ ಯಾರಿಗೆ? ತನಗಾಗಿಯೇ? ಅವರಿಗಾಗಿಯೇ? ವ್ಯಾಕ್ಸ್ ಮಾಡದೇ ಹೋದರೂ ಮಾಡೆಲ್ ನಂತೆ ಕಾಣಿಸುವುದು ಸ್ವಮೋಹವೂ ಇದ್ದೀತು, ವಾಸ್ತವವೂ ಇದ್ದೀತು. ಆದರೆ ‘ಲೋಕದ ಕಣ್ಣು’ ಇದನ್ನು ಒಪ್ಪಲಾರದು ಎಂದ ಮೇಲೆ ತಾನು ಟ್ರಯಲ್ ರೂಮಿನಲ್ಲಿ ಮಾತ್ರ ಅಪ್ಸರೆಯಾಗುವುದು ಖಂಡಿತ.
ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಗಂಡಸಿಗೆ ವಯಸ್ಸೇ ಆಗುವುದಿಲ್ಲವೆ? ಅವನಿಗೆ ಮಾತ್ರ ಆಜೀವ ಪರ್ಯಂತ ‘ಲುಕಿಂಗ್ ಸ್ಮಾರ್ಟ್’ ವಿಶೇಷಣ ಯಾಕೆ? ಸರಿ, ಪ್ರಶ್ನೆಗಳಿಗೇನು ಹೀಗೆ ಕೇಳುತ್ತಲೇ ಹೋಗಬಹುದು, ಆದರೆ ಉತ್ತರ ಯಾರು ಕೊಡಬೇಕು? ಹೆಣ್ಣು ತನಗೆ ತಾನೇ ಕೊಟ್ಟುಕೊಳ್ಳಬೇಕೆ? ಅಥವಾ ಲೋಕ ಲಾಗಾಯ್ತಿನಿಂದಲೂ ಉತ್ತರದಂತಲ್ಲ, ವಿಧಿಸಿದ ಶಾಸನದಂತೆ ಸ್ಥಾಪಿತವಾಗಿರುವ ಸತ್ಯವನ್ನು ಮರುದರ್ಶನದಲ್ಲಿ ಒಪ್ಪಿಕೊಳ್ಳಬೇಕೆ? ಇಷ್ಟಕ್ಕೂ ಈ ಸವಾಲು ಇಂದಿನದು ಮಾತ್ರವೆ? ಅದು ಎಲ್ಲ ಕಾಲದ್ದೂ ಹೌದಲ್ಲವೆ? ಟ್ರಯಲ್ ರೂಮಿನ ಅಪ್ಸರೆಯರಿಗೆ ಕೊನೆಗೂ ಉಳಿಯುವು ಆಯ್ಕೆ ಯಾವುದು? ಸ್ವಮರುಕವೆ? ಆಕ್ರೋಶವೆ? ವಿಷಾದವೆ? ಈ ಪ್ರಶ್ನೆಗಳ ಪ್ರಸ್ತಾಪವೇ ಹಳಹಳಿಕೆಯಂತೆ ಕಂಡರೆ ಅದು ಸಂವೇದನೆಯ ದೋಷವಲ್ಲವೆ? ಇಂಥ ಹಲವು ಉತ್ತರವಿಲ್ಲದ, ಅಥವಾ ಉತ್ತರದಂತೆ ಕಂಡರೂ ನಿಜದಲ್ಲಿ ಉತ್ತರವಲ್ಲದ ವಾಸ್ತವಗಳನ್ನು ಈ ಕವಿತೆ ನಮ್ಮೆದುರಿಗೆ ಇಡುತ್ತದೆ. ಇಡೀ ಸಂಕಲನದಲ್ಲಿ ಇದೊಂದು ಪ್ರಾತಿನಿಧಿಕ ಕವಿತೆಯಾಗುವುದಕ್ಕೆ ಇದೇ ಕಾರಣ. ಸಂಕೀರ್ಣವಾದ ಹೆಣ್ಣಿನ ವಿಷಯಗಳನ್ನು ಸರಳಗೊಳಿಸದೇ ಅದರ ಸಾಂದ್ರತೆಯಲ್ಲಿ ಇದು ಮಂಡಿಸುತ್ತದೆ. ಇಲ್ಲಿ ಹೆಣ್ಣಿನ ದೃಷ್ಟಿಕೋನವೂ, ಅವಳ ಆ ದೃಷ್ಟಿಕೋನವನ್ನು ನಿರ್ಧರಿಸಲು ಅಧಿಕಾರ ಬಲದಿಂದ ಪ್ರಯತ್ನಿಸುವ ಮೌಲ್ಯವ್ಯವಸ್ಥೆಯೂ, ಅದರಿಂದ ಹೊರಬರಬೇಕೋ ಬೇಡವೋ ಎನ್ನುವ ಹೆಣ್ಣಿನ ಸಂದಿಗ್ಧತೆಗಳೂ ಏಕಕಾಲಕ್ಕೆ ಪ್ರತ್ಯಕ್ಷವಾಗುತ್ತವೆ.
‘ಮಿಲಿಯನ್ ಡಾಲರ್ ಮುಗುಳ್ನಗೆ’ ಕವಿತೆ ಇದರ ಮುಂದುವರಿಕೆಯಂತೆಯೇ ಕಾಣಿಸುತ್ತದೆ. ಯಾಕಾಗಿ ಲೋಕಕ್ಕೆ ಹೆಣ್ಣನ್ನು ತಾಳಕ್ಕೆ ಕುಣಿಸುವ ಕ್ರೌರ್ಯ ಎನ್ನುವುದು ಕೊನೆಯೇ ಇಲ್ಲದ ಉದ್ಗಾರವಷ್ಟೇ. ತುಂಬಿ ತುಳುಕುವ ಮೊಲೆಗಳೂ ಬಿಟ್ಟಿಯಾಗಿ, ತಮಗೆ ಬೇಕೆಂದಾಗ , ಕಣ್ಣು ಬಿಟ್ಟಾಗಲೆಲ್ಲ ಬೇಕು, ಅಪಾರ ಆತ್ಮವಂಚನೆಯಲ್ಲಿ ‘ಏನು ಹೆಂಗಸರಪ್ಪಾ..!’ ಎಂದು ಮೂಗು ಮುರಿಯುವುದನ್ನೂ ಬಿಡಲಾರರು. ಫೇಸ್ಬುಕ್ಕಿನಲ್ಲಿ ಹೆಸರೂ ಹಾಕಲೂ ಧೈರ್ಯವಿಲ್ಲದ ‘ಗಂಡಸರ’ ಬಗ್ಗೆ ಅಸಹ್ಯ ಹುಟ್ಟಿದರೂ ಅವರನ್ನು ಮಣಿಸುವ ದಾರಿ ಕಾಣದು. ಹೆಣ್ಣಿನ ಸವಾಲುಗಳು ಅಮೂರ್ತ ಎಂದು ಮತ್ತೆ ಮತ್ತೆ ಹೇಳುತ್ತೇವಲ್ಲ. ಅದು ಅಮೂರ್ತವೂ ಹೌದು, ಅಗಮ್ಯವೂ ಹೌದು ಅನೇಕ ಬಾರಿ. ಮಾತ್ರವಲ್ಲ, ಅಸ್ಪಷ್ಟವೂ ಹೌದು. ಏಕೆಂದರೆ ಎಷ್ಟೋ ಬಾರಿ ಹೆಣ್ಣು ಮಕ್ಕಳಿಗೆ ಸಮಸ್ಯೆ ತಮ್ಮದೇ, ಲೋಕದ್ದೇ ಎನ್ನುವುದೇ ತಿಳಿಯುವುದಿಲ್ಲ. ಹೆಣ್ಣು ಮಕ್ಕಳನ್ನು, ಅವರ ಲೋಕದೃಷ್ಟಿಯನ್ನು ಅಷ್ಟು ಗೊಂದಲಗೊಳಿಸಲಾಗಿದೆ. ‘ಸಾಕಿಯರು ನಾವು’ ಕವಿತೆ ಕೂಡ ಇದನ್ನೇ ಮುಂದುವರಿಸಿದೆ.
ಗಂಡು ಹೆಣ್ಣಿನ ಸಂಬಂಧಗಳಲ್ಲಿ ಹೆಣ್ಣಿನ ಮಟ್ಟಿಗೆ , ‘ಕೊಡುವುದೇನು ಕೊಂಬುದೇನು, ಒಲವು ಸ್ನೇಹ ಪ್ರೀತಿ’ ಎನ್ನುವ ನಿರುಮ್ಮಳತೆ ಕಷ್ಟ ಸಾಧ್ಯದ್ದು. ಸ್ವಪ್ರಜ್ಞೆಯ ಹೆಣ್ಣಿಗಂತೂ ಅದು ಇನ್ನೂ ಕಷ್ಟದ್ದು. ಗಾಢ ಬೆಸುಗೆಯಲ್ಲೂ ಎಲ್ಲಿಂದಲೋ ಗಂಡಿನ ಅಧಿಕಾರ ನುಸುಳಲು ಸದಾ ಹವಣಿಸುತ್ತಿರುತ್ತದೆ. ಅದನ್ನು ಗಮನಿಸದೇ ಇರುವುದು ಅಸಾಧ್ಯ ಎನ್ನುವ ಸೂಕ್ಷ್ಮ ಗ್ರಹಿಕೆ ಭುವನಾ ಅವರ ಹಲವು ಕವಿತೆಗಳನ್ನು ರೂಪಿಸಿದೆ.
‘ನಾನು ಅವನು’ ಕವಿತೆಯನ್ನು ಈ ದೃಷ್ಟಿಯಿಂದ ನೋಡಬಹುದು. ಯಾವುದೇ ಸಂಬಂಧಗಳಲ್ಲೂ ನಿರೀಕ್ಷೆಗಳು, ಕನಸು ಕನವರಿಕೆಗಳು ಇರುವುದು ಹೌದು, ಆದರೆ ಕಾಯುವುದು, ನಿರಾಸೆಗೊಳ್ಳುವುದು ಹೆಣ್ಣನ್ನೇ ಯಾಕೆ ಹೆಚ್ಚು ಕಾಡುತ್ತದೆ ಎನ್ನುವ ವಿಷಾದ ಇಲ್ಲಿದೆ. ಇದನ್ನು ದಾಟಿ ಸಂಬಂಧವೊಂದು ಫಲಿಸುವ ಅಮೃತಮುಹೂರ್ತವನ್ನು ‘ಸ್ವರ್ಗದ ಕದ ತೆರೆದಾಗ’ ಕವಿತೆ ಹಂಬಲಿಸುತ್ತದೆ.
ಭುವನಾ ಅವರ ಕವಿತೆಗಳನ್ನು ಮೆಚ್ಚುತ್ತಿರುವಾಗಲೇ ನನಗನ್ನಿಸಿದ ಇತರ ಕೆಲವು ಸಂಗತಿಗಳನ್ನೂ ಹೇಳಬೇಕು, ಅದು ನನ್ನ ವೃತ್ತಿಧರ್ಮ. ‘ಸ್ವ’ದ ದ್ವೈತ ಎನ್ನುವುದು ಲೋಕದ ಜೊತೆಯಲ್ಲಿ ‘ಅದ್ವೈತ’ವಾಗದೇ ನಮ್ಮ ಲೋಕ ಮೀಮಾಂಸೆ ಅಧಿಕೃತವಾಗಲಾರದು. ಅದನ್ನು ಲೋಕದ ಇತರ ಮುಖ್ಯ ಚಲನೆಗಳ ಜೊತೆಯಲ್ಲಿ ಇಡುತ್ತಾ ಅದರೊಂದಿಗೆ ಸ್ನೇಹ, ಜಗಳಗಳನ್ನು ಮಾಡುವುದು ತೀರಾ ಅನಿವಾರ್ಯ. ಅದನ್ನು ಕೇವಲ ಹೆಣ್ಣಿನ ವಿಷಯಗಳಿಗೆ ಮಾತ್ರವಲ್ಲ, ಲೋಕದ ಇತರ ಘಟಿತಗಳ ಜೊತೆಯಲ್ಲೂ ಮಾಡಬೇಕು. ಇದು ಭುವನಾ ಅವರ ಮೊದಲ ಸಂಕಲನವಾದ್ದರಿಂದ ಈ ಮಾತುಗಳನ್ನು ಹೇಳಲೇ ಬೇಕು. ಇವರು ನಡೆಯಬೇಕಾದ ದಾರಿ ಇನ್ನೂ ದೀರ್ಘವಾಗಿದೆ. ವಿಸ್ತಾರ ಸಹಜವಾಗಿಯೇ ಆದೀತು. ಆದರೆ ಅದರ ಅಗತ್ಯವನ್ನು ಹೇಳಲೇಬೇಕು. ಲೋಕದ ಅನಂತತೆಯ ಅಗಾಧತೆಯ ಅರಿವು ಇವರ ಬರವಣಿಗೆಯನ್ನು ಹಿಗ್ಗಿಸುತ್ತಾ ಪುಷ್ಟಗೊಳಿಸಲಿ. ಕವಿಯ ಪ್ರಯಾಣವು ಸತತೋದ್ಯೋಗದ ಫಲ. ಇಂಥ ಸತತೋದ್ಯೋಗದ ತಪಸ್ಸು ಇವರಿಗೆ ಸಾಧ್ಯವಾಗಲಿ, ಕನ್ನಡ ಜಗತ್ತು ಇವರ ಕಾವ್ಯವನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಿ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ