ಕನ್ನಡ  ಕಾವ್ಯ ಲೋಕದಲ್ಲಿ ಪ್ರಸಿದ್ಧರ ಕವನಗಳನ್ನು, ಪ್ರಸಿದ್ಧವಾದ ಕವನಗಳನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ ಎಷ್ಟೋ ಅತ್ಯುತ್ತಮವಾದ ಕವನಗಳು ಕಂಡೂ ಕಾಣದಂತೆ ಮರೆಯಾಗಿವೆ. ಗದ್ಯಪ್ರಕಾರದಲ್ಲಿ ಹೆಚ್ಚು ಬರಹಗಳನ್ನು ಬರೆದವರೂ ಒಳ್ಳೆಯ ಪದ್ಯಗಳನ್ನು ಬರೆದುದುಂಟು. ಅಂತಹ ಅಪರೂಪದ ಕವನಗಳನ್ನು ಹುಡುಕಿ ನಿಮ್ಮ ಮುಂದೆ ಇರಿಸುವ ಪ್ರಯತ್ನವನ್ನು ಕೆಂಡಸಂಪಿಗೆ ಮಾಡಲಿದೆ. ಈ ಸರಣಿಯಲ್ಲಿ ಮೊದಲ ಕವನವಾಗಿ ಸೋಮಶೇಖರ ಇಮ್ರಾಪೂರ ಅವರು ಬರೆದ ‘ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ’ ಎಂಬ ಕವನ ನಿಮ್ಮ ಓದಿಗಾಗಿ ಇಲ್ಲಿದೆ. ಪ್ರತೀ ಗುರುವಾರ ಹೀಗೊಂದು ಕವನದ ಪುಟವಿಲ್ಲಿ ಅರಳಿಕೊಳ್ಳಲಿದೆ.

 

ಸೋಮಶೇಖರ ಇಮ್ರಾಪೂರ ಅವರು ಹುಟ್ಟಿದ್ದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ. 1940ರ ಫೆಬ್ರುವರಿ 14ರಂದು. ತಂದೆ ಗುರಪ್ಪ, ತಾಯಿ ಸಂಗಮ್ಮ. ಅವರ  ಪ್ರಾರಂಭಿಕ ಶಿಕ್ಷಣ ಅಬ್ಬಿಗೇರಿಯಲ್ಲಿ ನಡೆಯಿತು. ಹೈಸ್ಕೂಲು ಓದಿದ್ದು ಹೊಳೆ ಆಲೂರು ಹಾಗೂ ಧಾರವಾಡದ ಕರ್ನಾಟಕ ಹೈಸ್ಕೂಲು. ಜೆ.ಎಸ್‌.ಎಸ್‌. ಕಾಲೇಜಿನಿಂದ ಬಿ.ಎ. ಪದವಿ ಪಡೆದರು.  ಹಾಗೂ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಕನ್ನಡ ಮತ್ತು ಭಾಷಾ ವಿಜ್ಞಾನದಲ್ಲಿ ಸುವರ್ಣಪದಕದೊಡನೆ ಎಂ.ಎ. ಪದವಿ ಪಡೆದರು. ಕವಿ, ವಿದ್ವಾಂಸ, ಜಾನಪದ ತಜ್ಞ, ಸಂಶೋಧಕ, ಪ್ರಾಧ್ಯಾಪಕರಾಗಿ ಅವರು ಹಲವಾರು ಕೃತಿಗಳನ್ನು ರಚಿಸಿದರು. ಸುವರ್ಣ ಪದಕದೊಡನೆ ಪಿಎಚ್.ಡಿ ಪದವಿಯನ್ನೂ ಪಡೆದರು. ಬಿಸಿಲು ಹೂವು, ಬೆಳದಿಂಗಳು, ಬೆಂಕಿ, ಬಿರುಗಾಳಿ, ಜಲತರಂಗ, ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ, ಹುತ್ತಗಳು, ಬೇವು ಬೆಲ್ಲ -ಮುಂತಾದ ಕಾವ್ಯ ಕೃತಿಗಳನ್ನು ಬರೆದಿದ್ದಾರೆ.ಒಟ್ಟು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ ಶೀರ್ಷಿಕೆಯ ಕೃತಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರವೂ ದೊರೆತಿದೆ.

ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ

‘ಏಳಹೊತ್ತು ಹೊಡೆಮರಳಿ ಬಂತು
ಕಸಹೊತ್ತು ಹಾಕು ಹೊರಗೆ
ದೊಡ್ಡೆಮ್ಮೆ ಎಲ್ಲಿ ಹೋಗೈತಿ ಹ್ಯಾಂಗ
ಕರಕಟ್ಟು ಹಿತ್ತಲೊಳಗ’

‘ಕಟ್ಯಾರ ಕಟ್ಟು ಬಿಟ್ಟಾರ ಬಿಟಗೋ
ಒಟ್ಟೈತಿ ಕೆಲಸ ನನಗ
ಕುಟ್ಟಾಕ ಮತ್ತು ಬೀಸಾಕ ಇದಕ
ಕೊಟ್ಟಿಲ್ಲ ನನ್ನ ನಿನಗ’

‘ಏಳೇಳ ಊರ ಎತ್ತೆಲ್ಲ ಹೊಲಕ
ಹೊಂಟಾವ ತಿಳಿಯಿತೇನ ?
ಮಾರೀಯ ಗಂಟು ಹಾಕೀದಿ ಯಾಕ
ನಿಟ್ಟಿಲುವು ಮುರಿಯಲೇನ ?’

‘ಹೆಣ್ಣಾಗಿ ಯಾಕ ಬಂದೇನ ಎವ್ವಾ
ಈ ಜೀವ ಸಾಕು ಸಾ
ನಮ್ಮಪ್ಪ ಅವ್ವ ಕೊಟ್ಟಾರ ಇಲ್ಲಿ
ಇನ್ನೇಟು ಬದುಕಬೇಕ.’

‘ನಿಮ್ಮಪ್ಪ ಸತ್ತು ಪಾರಾದ ಇದ್ರೆ
ಅವನೆದೆಯ ಸೀಳುತಿದ್ದ್ಯಾ
ನಿಮ್ಮವ್ವ ಅಂದ್ರ ನಮ್ಮಕ್ಕ ಅಂತ
ಬಿಟ್ಟೀನಿ ಹುಗಿಯುತಿದ್ದ್ಯಾ’

‘ನಮ್ಮಪ್ಪ ಅವ್ವ ಮಾಡ್ಯಾರ ಏನ
ಸುಮ್ ಸುಮಕ ಬೈಯ್ಯಬ್ಯಾಡ
ಉಟ್ಟರವಿಮ್ಯಾಗ ಬದುಕಿದ್ದ ನಿನ್ನ
ಸಲುಹಿದ್ದು ಮರಿಯಬ್ಯಾಡ’

‘ ಎಲ್ಲಿದ್ದಿ ಏನೋ ಛೀಮಾರಿ ನಿನ್ನ
ಕಟ್ಯಾರ ಗುದ್ದಿ ಹಾಂಗ
ಸೊಸಿ ಅಂತ ಕೈ ಯ ತಡದೀನಿ ಜ್ವಾಕಿ
ಹೀಂಗಾದ್ರ ಮುಂದ ಹ್ಯಾಂಗ ?’

‘ಮುಂದೇನು ಏನ ಹೋಗ್ತೀನಿ ಇಂದ
ನಾ ಬೆಳೆದ ತವರಿಗೀಗ
ಹೊಗಿ ಬಿಡದು ಬುದ್ಧಿ ಮಬ್ಬಾದಮ್ಯಾಗ
ಬರತೀನಿ ಇಲ್ಲಿಗಾಗ’

‘ಎಂಥ ಚಂಡಿ ನೀ ಗಂಟು ಬಿದ್ದಿ
ಹೇಳಿದ್ದು ಕೇಳಲೊಲ್ಲಿ
ಶಾರಾ ಬಿಟ್ಟು ಹಳ್ಳ್ಯಾಗ ಬಂದಿ
ಆಯ್ತೇನ ಹೇಳಲೊಲ್ಲಿ’

‘ಮದುವೀಯ ಸಿರಿ ಹರಿದ್ಹೋಗಿ ಮತ್ತ
ಹೊಲಿದದ್ದು ಪಿಸಿದು ಹೋಯ್ತ
ನಿನ ಕೈಯ್ಯ ಹಿಡಿದು ಮೂಗುತಿಗೆ ಹೊರತು
ನನ ಜೀವ ಕಾಣದಾಯ್ತು ‘

‘ನೈಲಾನ ಸೀರಿ ಬಂದೈತಿ ಅಂತ
ಒಂದೆಮ್ಮಿ ಮಾರಿ ತರಲೆ!
ಧಾರ್ವಾಡದಾಗ ಹುಡಿ ಬಾಳ ಅಂತ
ಪೌಡರಕ ಹೇಳಿ ಬರಲೆ’

‘ಪುಂಡೀಯ ಪಲ್ಲೆಗೊಂದಿಷ್ಟು ನುಚ್ಚು
ಐತೇನ ನೋಡ ಒಳಗ
ಒಣ ಟಿಬರು ಯಾಕ ತೆಲಿಗಿಲ್ಲ ಎಣ್ಣಿ
ನಾನಾದೆ ಮನೆಗೆ ಸೊಣಗ’

‘ಪ್ಯಾಟೀಯ ನೀರಿಗಿಳಿಬ್ಯಾಡ ನಿಲ್ಲ
ಸ್ವಾಟೀಯ ತಿರುವಬ್ಯಾಡಾ
ಒಂದೊಂದು ಹಲ್ಲು ಉದುರ್ಯಾವು ನೋಡ
ನನಗ್ವಾದ ಮಾಡಬ್ಯಾಡ’

‘ಮನಿ ತುಂಬಾ ಎಲ್ಲ ಮಣ್ಣೀನ ಗಡಿಗಿ
ಒಂದಾದ್ರು ಗಟ್ಟಿ ಇಲ್ಲಾ
ನನ ತವರು ಮನೆಯ ಕೊಡ ನೆಗ್ಗಿದ್ದನ್ನ
ಮಾಡ್ಯೂದು ಆಗಲಿಲ್ಲಾ’

‘ನಿಮ್ಮ್ಪನ್ಹಾಂಗ ನಾ ಸೋಗು ಮಾಡಿ
ಜೋಗಪ್ಪನಾಗಲೇನ
ಹಾಸಿದಷ್ಟರಲೆ ಕಾಲುಚಾಚಿ ನೀ
ಬಾಳಲಾರಿಯೇನ ‘

‘ಎಲ್ಲೈತಿ ಬಾಳು ಸುಡುಗಾಡಿಗಿಟ್ಟು ಬಾ
ಹಾಳು ಜಲುಮ ಹೊತ್ತು
ನಮ್ಮಪ್ಪ ಅವ್ವ ಕೊಟ್ಟಾರ ನಿನಗ
ಕೈತುಂಬ ರೊಕ್ಕ ತೆತ್ತು’

‘ಜನ ತುಂಬಿ ನಿಂತ ಹಂದರದ ಒಳಗ
ನಿಮ್ಮಪ್ಪ ಕೈಯ ಕೊಟ್ಟಾ
ಕಡೆಗೆ ಎಲ್ಲಾ ಕೊಡತೀನಿ ಅಂತ
ಕೊಡಲಿಲ್ಲ ಒಂದು ಚುಟ್ಟಾ’

‘ಸಾಕವ್ವಾ ಸಾಕು, ಕೆರೆಭಾವಿ ಪಾಲು
ನಾನಾಗಿ ಹೋಗಲೇನ
ದಿನಗಳಿಗೆಗೂನು ಕಟಿಪಿಟಿಯ ತಿಂದು
ಉಪವಾಸ ಸಾಯಲೇನ ‘

‘ಹ್ಯಾಂಗಾರ ಮಾಡಿ ಆ ಭಾವಿಗ್ಹೋಗು
ಇದರಾಗ ಇಲ್ಲ ನೀರ..
ಹೊಟ್ಟೆ ತುಂಬ ನೀ ನೀರು ಹಿಗ್ಗಿ
ನನಮ್ಯಾಲ ಕರುಣ ತೋರ’

‘ನನಗೆಂತ ಗಂಡ ಜತಿಯಾದ ಇಸಾ
ಕುಡಿಲಾಕ ಇಲ್ಲ ಕಾಸ
ಸುಡುಗಾಡಿನ್ಯಾಗ ಸುಖ ಐತಿ
ಅಂತ ಹೋಗೋದು ನನಗ ಲೇಸ’

‘ಹೋಗ್ತಿದ್ದಿ ಅಂದ್ರ ವಿಮಾ ಇಳಸತಿದ್ಯಾ
ಮೊದಲನ ತಿಳಿಸಬಾರ್ದಾ
ಸುಡುಗಾಡಿಗ್ಯಾಕ ಬೇಕೇನು ಇಲೆ
ತರತೀನಿ ಸಾಯಬಾರ್ದಾ’

‘ಹೊಟ್ಯಾನ ಕಿಚ್ಚು ಎಷ್ಟಂತ ಹಿಡಿದು
ಕಟ್ಟೀನ ಕಳ್ಳಿನೊಳಗೆ
ಕಳ್ಳೀಯ ಹಾಲು ಕುಡಿದ್ಹಾಂಗ ಆತು
ಸೊಗಸಿಲ್ಲ ಮನಸಿನೊಳಗ ‘

‘ನಿನ ಕೈಯ್ಯ ಹಿಡಿದು ಮುಳಜಾಲಿ ಗಿಡವ
ಏರಿದ ಹಾಂಗ ಆಯ್ತು
ತೆಲಿ ಕೆಡಿಸಬ್ಯಾಡ ನಾ ಹೊಂಟಿ ಹೊರಗ
ಈ ಜೀವ ಬ್ಯಾಸರಾಯ್ತ’

‘ಮಾರಾಯ ನಿನ ಕಾಲ್ಮುಗಿಯುತೀನಿ
ಸಾಕೇಳ ಸೆಟಗೊಬ್ಯಾಡಾ
ಕಸಮುಸುರಿ ತೊಳೆದು ಬಿಸಿಬುತ್ತಿ ಕಟ್ಟಿ
ಕಳುಸ್ತೀನಿ ನಿನ್ನ ಕೂಡ’

‘ಅಳಬ್ಯಾಡ ಮಳ್ಳಿ ಬಾಬಾರ ಇಲ್ಲಿ
ಅಳತಾರ ಏನ ಹೀಂಗ
ಗಂಡ ಹೆಂಡ್ರ ಜಗಳಂದ್ರ ನೋಡ ಏ
ಗಂಧ ತೀಡಿದ್ಹಾಂಗ’