ಇಂಥ ಪ್ರಶ್ನೆ ಬಂದಾಗಲೆಲ್ಲ ಆ ಕಾಲದಲ್ಲಿ ಹೆಂಗಸರು ಹಾಗೆಯೇ ಯೋಚಿಸುತ್ತಿದ್ದರು ಎಂಬ ವಾದ ಹೂಡಿ ಪ್ರಶ್ನಿಸಿದವರ ಬಾಯಿ ಮುಚ್ಚಿಸುವುದು ಸುಲಭ. ಆದರೆ ಎಲ್ಲ ಕಾಲದಲ್ಲೂ ಎಲ್ಲ ಬಗೆಯ ಹೆಣ್ಣುಗಳೂ, ಗಂಡುಗಳೂ ಇರುವುದು ಸೃಷ್ಟಿ ನಿಯಮ. ಲೇಖಕರಾಗಿ ಯಾರ ಕಥೆಯನ್ನು ನಾವು ಹೇಳಲು ಆಯ್ದುಕೊಳ್ಳುತ್ತೇವೆ ಮತ್ತದನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು ಎಲ್ಲ ಕಾಲದಲ್ಲೂ ಬರಹಗಾರರು ಒಡ್ಡಿಕೊಳ್ಳಬೇಕಾದ ಅಗ್ನಿಪರೀಕ್ಷೆ.
ಸುಪ್ರಸಿದ್ಧ ಕಾದಂಬರಿಕಾರ ಲಿಯೋ ಟಾಲ್ಸ್‌ಟಾಯ್ ಬರೆದ ಪ್ರಸಿದ್ಧ ಕಾದಂಬರಿ ‘ಅನ್ನಾ ಕರೆನೀನಾʼ ಕುರಿತು ಕಾವ್ಯಾ ಕಡಮೆ ವಿಶ್ಲೇಷಣೆ
ಜಗತ್ತಿನ ಸರ್ವಕಾಲಿಕ ಶ್ರೇಷ್ಠ ಕಾದಂಬರಿಕಾರರಲ್ಲಿ ಲಿಯೋ ಟಾಲ್ಸ್‌ಟಾಯ್ ಅವರದ್ದು ಪ್ರಥಮ ಶ್ರೇಣಿಯ ಹೆಸರು. ಹತ್ತೊಂಬತ್ತನೆಯ ಶತಮಾನದ ರಷ್ಯಾ, ಆ ಕಾಲದ ಜನರ ಸುಖ- ದುಃಖ, ಗಂಡು- ಹೆಣ್ಣು ನಡುವಿನ ನಂಟು, ರೈತರ ಸಮಸ್ಯೆಗಳು, ಒಡೆಯ- ಆಳು ಸಂಬಂಧಗಳು ಮುಂತಾದ ಹಲವು ಆಯಾಮಗಳನ್ನು ತಮ್ಮ ಕಾದಂಬರಿಗಳಲ್ಲಿ ಸ್ಪರ್ಶಸಿದ್ದಾರೆ. ಅವರ ಅನ್ನಾ ಕರೆನೀನಾ ಇಂದಿಗೂ, ಮೊದಲು ಪ್ರಕಟವಾದ ಸುಮಾರು ನೂರೈವತ್ತು ವರ್ಷಗಳ ನಂತರವೂ ಯುವ ಮನಸ್ಸುಗಳಲ್ಲಿ ಬೆಳೆಯುತ್ತಿದ್ದಾಳೆ.
ಅನ್ನಾ ಕರೆನೀನಾ ಒಂಬೈನೂರು ಪುಟಗಳಲ್ಲಿ ಹರಡಿಕೊಂಡ ವಿಶಾಲ ಕಾದಂಬರಿ. 239 ಪುಟ್ಟ ಅಧ್ಯಾಯಗಳು ಎಂಟು ಭಾಗಗಳಲ್ಲಿ ತೆರೆದುಕೊಂಡು ಓದುಗರಿಗೆ ಒಂಚೂರೂ ಪ್ರಯಾಸವಾಗದ ಹಾಗೆ ಓದಿಸಿಕೊಳ್ಳುತ್ತವೆ. ಕಾದಂಬರಿಯೊಂದರ ಮೊದಲ ಸಾಲು ಹೇಗಿರಬೇಕು ಎಂಬ ಪ್ರಶ್ನೆ ಬಂದಾಗ ಎಲ್ಲರೂ ತಡವಿಲ್ಲದೇ ಉದ್ಧರಿಸುವ ವಾಕ್ಯ “All happy families are alike; each unhappy family is unhappy in its own way” ಅನ್ನಾ ಕರೆನೀನಾ ಕಾದಂಬರಿಯ ಮೊದಲ ಸಾಲು.
ಕಾದಂಬರಿಗೆ ಅನ್ನಾ ಕರೆನೀನಾಳ ಹೆಸರಿದ್ದರೂ ಕಥನ ಮುಖ್ಯವಾಗಿ ಮೂರು ಕುಟುಂಬಗಳ ಸುತ್ತ ಸುತ್ತುತ್ತದೆ. ಅನ್ನಾಳ ಅಣ್ಣ ಸ್ಟೀವಾ, ಅವನ ಪ್ರಾಣ ಸ್ನೇಹಿತ ಲೆವಿನ್ ಮತ್ತು ಅನ್ನಾಳ ಕುಟುಂಬಗಳ ಬವಣೆಯೇ ಕಥೆಯ ಮೂಲದ್ರವ್ಯ. ಅಸುಖಿ ಸಂಸಾರಗಳ ಕುರಿತು ಹೇಳಿರುವ ಕಾದಂಬರಿಯ ಮೊದಲ ವಾಕ್ಯವೂ ಸ್ಟೀವಾನ ಮನೆಯ ಬಗ್ಗೆ ಹೇಳಿದ್ದು. ಕಾದಂಬರಿಯ ಪ್ರಾರಂಭದಲ್ಲಿ ಸ್ಟೀವಾನ ಹೆಂಡತಿ ಡಾಲಿ ಮಕ್ಕಳನ್ನು ಕರೆದುಕೊಂಡು ಮನೆಬಿಟ್ಟು ಹೋಗುತ್ತೇನೆ ಎಂದು ತಕರಾರು ತೆಗೆದಿರುತ್ತಾಳೆ. ಸ್ಟೀವಾನ ರಸಿಕತೆ ಮಿತಿಮೀರಿ ಅವನು ಇನ್ನೊಬ್ಬ ಹೆಂಗಸಿನ ಸಾಂಗತ್ಯ ಸಾಧಿಸಿದ್ದು ಡಾಲಿಗೆ ಒಂದು ಪತ್ರದಿಂದ ತಿಳಿದುಬಿಟ್ಟಿದೆ. ಅವನೆಷ್ಟು ಬೇಡಿಕೊಂಡರೂ ಡಾಲಿಗೆ ಸಮಾಧಾನವಾಗುವುದಿಲ್ಲ. ಹೀಗಾಗಿ ಸ್ಟೀವಾ ತನ್ನ ತಂಗಿ ಅನ್ನಾಳನ್ನು ಪೀಟರ್ಸ್‌ಬರ್ಗ್ ನಗರದಿಂದ ಮಾಸ್ಕೋಗೆ ಕರೆಸಿಕೊಳ್ಳುತ್ತಾನೆ, ಡಾಲಿಯ ಬಳಿ ಮಾತನಾಡಿ ತನ್ನ ಸಂಸಾರ ಸರಿಮಾಡಬಲ್ಲಳು ಈ ತಂಗಿ ಎಂಬ ಗಾಢ ನಂಬಿಕೆ ಅವನಿಗೆ.
ಸಮಾಜದ ಮೇಲ್ವರ್ಗದ ಪಾರ್ಟಿಗಳಲ್ಲಿ ಎಲ್ಲರ ಕಣ್ಣುಗಳನ್ನೂ ತನ್ನೆಡೆಗೆ ತಿರುಗಿಸಿಕೊಳ್ಳುವಷ್ಟು ಆಕರ್ಷಕಳಾಗಿರುವ ಅನ್ನಾ ಪೀಟರ್ಸ್‌ಬರ್ಗ್ ನಗರದ ಪ್ರಸಿದ್ಧ ಮಂತ್ರಿ ಅಲೆಕ್ಸಿಯ ಹೆಂಡತಿ. ಅವರಿಗೆ ಸೆರಿಯೋಶಾ ಎಂಬ ಮಗನೂ ಇದ್ದಾನೆ. ಅಲೆಕ್ಸಿ ಗಂಭೀರ ವ್ಯಕ್ತಿತ್ವದ, ಯಾರೊಂದಿಗೂ ಆತ್ಮೀಯತೆ ಬೆಳೆಸಿಕೊಳ್ಳಲು ಬಾರದ ವ್ಯಕ್ತಿ. ಅನ್ನಾಳ ವ್ಯಕ್ತಿತ್ವಕ್ಕೆ ತದ್ವಿರುದ್ಧ ಗುಣದವನು.
ಅನ್ನಾ ಕರೆನೀನಾ ಕಾದಂಬರಿಯಲ್ಲಿ ಬರುವ ರೈಲ್ವೇ ನಿಲ್ದಾಣಗಳ ಬಗ್ಗೆ ಬಹಳ ಮಾತುಗಳನ್ನು ಈಗಾಗಲೇ ಕೇಳಿರುತ್ತೇವೆ. ಅದಕ್ಕೆ ಕಾರಣ ಇಲ್ಲಿ ಬಹು ಮುಖ್ಯ ಸಂಗತಿಗಳು ನಡೆಯುವುದೇ ಈ ಟ್ರೇನ್ ಸ್ಟೇಷನ್‌ಗಳಲ್ಲಿ. ಅಣ್ಣನ ಸಂಸಾರ ಸರಿಮಾಡಲು ಮಾಸ್ಕೋಗೆ ಬಂದಿಳಿದ ಅನ್ನಾ ವ್ರಾನ್‌ಸ್ಕಿ ಎಂಬ ಸೊಗಸುಗಾರನನ್ನು ಮೊದಲು ಭೇಟಿಯಾಗುವುದು ಈ ರೈಲ್ವೆ ನಿಲ್ದಾಣದಲ್ಲೇ. ಮುಂದೆ ಅವನಿಂದ ದೂರ ಸರಿಯಬೇಕೆಂದು ಹೊರಟವಳು ಮತ್ತೆ ಆತನನ್ನು ಸಂಧಿಸುವುದೂ ಇಂಥದೇ ಇನ್ನೊಂದು ನಿಲ್ದಾಣದಲ್ಲಿ. ಕೊನೆಗೆ ಆಕೆ ತನ್ನ ಬದುಕಿನ ಅತಿ ದುರಂತಮಯ ಸಾಹಸಕ್ಕೆ ಕೈಹಾಕುವುದೂ ಇಂಥದೇ ತಾಣದಲ್ಲಿ. ಈ ಭಾಗಗಳನ್ನು ಓದುತ್ತಿದ್ದಾಗ ರೈಲುಗಳು, ಹಳಿಗಳು ಮತ್ತು ನಿಲ್ದಾಣಗಳನ್ನು ಬಳಸಿಕೊಂಡು ಟಾಲ್ಸ್‌ಟಾಯ್ ಇನ್ನೇನನ್ನೋ ಹೇಳಲು ಪ್ರಯತ್ನಿಸಿದ್ದಾರೆ ಎನ್ನಿಸುವುದು.
ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರ ಡಾಲಿಯ ತಂಗಿ ಕಿಟಿಯದು. ಕಿಟಿ ಮತ್ತು ವ್ರಾನ್‌ಸ್ಕಿ ನೃತ್ಯಕೂಟಗಳಲ್ಲಿ ಜೊತೆಯಾಗಿ ನರ್ತಿಸಿ ಎಲ್ಲರ ಮನ ಗೆದ್ದಿದ್ದಾರೆ. ಅವರಿಬ್ಬರೂ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಬೀಳುವುದರ ಒಳಗೆ ಮಾಸ್ಕೋ ಪಟ್ಟಣದ ನೃತ್ಯಕೂಟಕ್ಕೆ ಅನ್ನಾಳ ಆಗಮನವಾಗುತ್ತದೆ. ವ್ರಾನ್‌ಸ್ಕಿ ಅನ್ನಾಳ ವ್ಯಕ್ತಿತ್ವಕ್ಕೆ, ಸೌಂದರ್ಯಕ್ಕೆ ಮಾರು ಹೋಗುತ್ತಾನೆ. ಕಿಟಿಯನ್ನು ಕಡೆಗಣಿಸುತ್ತಾನೆ.
ಸ್ಟೀವಾನ ಸ್ನೇಹಿತ ಲೆವಿನ್‌ನಿಗೆ ಕಿಟಿ ಎಂದಿನಿಂದಲೂ ಇಷ್ಟ. ಒಮ್ಮೆ ಕಿಟಿಯ ಬಳಿ ಪ್ರೇಮ ನಿವೇದಿಸಿಕೊಂಡು ನಿರಾಶಗೊಂಡಿದ್ದಾನೆ. ಅವನಿಗೆ ಪಟ್ಟಣದ ಬಾಳು ಸಹಿಸಲಾಗದು. ಎಲ್ಲರೂ ನಾಟಕ ಮಾಡುತ್ತ ಮೇಲು ಮೇಲಿನ ಜೀವನ ನಡೆಸುತ್ತಾರೆ ನಗರಗಳಲ್ಲಿ ಎನ್ನುವುದು ಅವನ ನಂಬಿಕೆ. ಹೀಗಾಗಿ ಹಳ್ಳಿಯಲ್ಲಿ ತೋಟ ಮಾಡಿಕೊಂಡಿದ್ದಾನೆ. ಕಿಟಿ ತಿರಸ್ಕರಿಸಿದ ನಂತರ ಅಂತರ್ಮುಖಿಯಾಗುತ್ತ ವಿವಾಹದ ಆಸೆಯನ್ನೇ ತೊರೆದಿದ್ದಾನೆ.
ವ್ರಾನ್‌ಸ್ಕಿ ಮತ್ತು ಅನ್ನಾ ಜೊತೆಯಾದ ಮೇಲೆ ಲೆವಿನ್ ಮತ್ತು ಕಿಟಿಯೂ ಒಂದುಗೂಡುತ್ತಾರೆ. ಸ್ಟೀವಾನ ಹೆಂಡತಿ ಡಾಲಿಯೇ ಗಂಡನನ್ನು ಕ್ಷಮಿಸಿ ಸಂಸಾರ ಸರಿದೂಗಿಸುತ್ತಾಳೆ. ಕಥೆ ಇಷ್ಟೇ ಆಗಿದ್ದರೂ ಒಂಬೈನೂರು ಪುಟಗಳಲ್ಲಿ ಟಾಲ್ಸ್‌ಟಾಯ್‌ರ ರಾಜಕೀಯ ಮತ್ತು ವೈಯಕ್ತಿಕ ನಿಲುವುಗಳು ತಡೆಯಿಲ್ಲದೇ ವ್ಯಕ್ತವಾಗಿವೆ.
ಅಣ್ಣನ ಸಂಸಾರ ಸರಿಮಾಡಲು ಮಾಸ್ಕೋಗೆ ಬಂದಿಳಿದ ಅನ್ನಾ ವ್ರಾನ್‌ಸ್ಕಿ ಎಂಬ ಸೊಗಸುಗಾರನನ್ನು ಮೊದಲು ಭೇಟಿಯಾಗುವುದು ಈ ರೈಲ್ವೆ ನಿಲ್ದಾಣದಲ್ಲೇ. ಮುಂದೆ ಅವನಿಂದ ದೂರ ಸರಿಯಬೇಕೆಂದು ಹೊರಟವಳು ಮತ್ತೆ ಆತನನ್ನು ಸಂಧಿಸುವುದೂ ಇಂಥದೇ ಇನ್ನೊಂದು ನಿಲ್ದಾಣದಲ್ಲಿ.
ನಗರ ಜೀವನದ ಲಾಲಸೆ ತೊರೆದು ಹಳ್ಳಿಯಲ್ಲಿ ಬದುಕಲು ನಿರ್ಧರಿಸುವ ಲೆವಿನ್ನನ ಮೇಲೆ ಕಾದಂಬರಿಕಾರರಿಗೆ ವಿಶೇಷ ಒಲವು. ತನ್ನ ಹೊಲದಲ್ಲಿ ಕೆಲಸಗಾರರಿಗೆ ಸರಿಸಮನಾಗಿ ದುಡಿವ ಉತ್ಸಾಹವುಳ್ಳ ಲೆವಿನ್ ಸಿದ್ಧಾಂತಗಳಲ್ಲಿ ಎಷ್ಟೇ ಪ್ರಗತಿಪರನಾಗಿ ಯೋಚಿಸಲು ಪ್ರಯತ್ನಿಸಿದರೂ ಪ್ರಾಯೋಗಿಕ ಸಂಗತಿಗಳಿಗೆ ಬಂದಾಗ ಸಮಾಜದ ಸಿದ್ಧ ಮಾದರಿಗಳಿಗೇ ಹೊರಳಿಕೊಳ್ಳುತ್ತಾನೆ. ವಿವಾಹದ ನಂತರ ಕಿಟಿಯ ಮೇಲೆ ವಿನಾಕಾರಣ ಸಂಶಯ ಮಾಡುವುದರಿಂದ ಶುರುವಾಗಿ ಆಳುಗಳು ಬಹಳ ಸಂತೋಷದಿಂದ ತನ್ನ ಹೊಲದಲ್ಲಿ ದುಡಿಯುತ್ತಾರೆ ಎಂದು ತನಗೆ ತಾನೇ ನಂಬಿಸಿಕೊಳ್ಳುವ ತನಕ.
ಸ್ಟೀವಾ ಏಕೆ ವಿವಾಹದಾಚೆಯ ಪ್ರಣಯ ಬಯಸಿದ ಎಂಬ ವಿವರಣೆ ಕೊಡುವಾಗ ಆತನ ಹೆಂಡತಿ ಡಾಲಿ ಹೇಗೆ ಕಾಲಾನುಕ್ರಮದಲ್ಲಿ ತನ್ನ ಸೌಂದರ್ಯವನ್ನು ಕಳೆದುಕೊಂಡಿದ್ದಳು ಎಂದು ವಿವರಿಸುವುದರಲ್ಲಿಯೇ ಕಾದಂಬರಿಕಾರರಿಗೆ ಕಾಳಜಿ. ಹೀಗೆ ಪ್ರೇಮವೇ ಬೇರೆ- ಪ್ರಣಯವೇ ಬೇರೆ, ದೇಹವೇ ಬೇರೆ- ಮನಸ್ಸೇ ಬೇರೆ ಎಂಬ ಬೂಟಾಟಿಕೆಯನ್ನು ಬಹಳಷ್ಟು ಬರಹಗಾರರು ಭಾಷೆ- ಯುಗಗಳ ಹಂಗಿಲ್ಲದೇ ಮಾಡಿದ್ದಾರೆ. ಒಂದೇ ವರ್ಗಕ್ಕೆ ಸೇರಿದವರು ಹೇಳಿದ್ದೇ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯವಾಗಿಸುವ ಹುನ್ನಾರ ಇಲ್ಲಿ ಅಡಗಿದೆ ಅನ್ನಿಸುವುದು.
ವ್ರಾನ್‌ಸ್ಕಿಯೊಡನೆ ಸಹಜೀವನ ನಡೆಸುವ ಅನ್ನಾ ಬರಹಗಾರ್ತಿಯಾಗುವ ಕನಸು ಕಂಡಿದ್ದರೂ ಅದು ಮುಂದುವರೆದು ಅವಳ ವ್ಯಕ್ತಿತ್ವ ನಿರ್ಮಿಸುವ ಗಂಭೀರ ರೂಪವನ್ನು ಪಡೆಯುವುದಿಲ್ಲ. ತನ್ನ ಮಗ ಸೆರಿಯೋಶಾನನ್ನು ಕಾಣಲು ಬಿಡಲಿಲ್ಲ ಎಂದು ತಾನು ತೆಗೆದುಕೊಂಡ ನಿರ್ಧಾರಗಳಿಗೆ ಮರುಗುವ ಅನ್ನಾ, ವ್ರಾನ್‌ಸ್ಕಿಯನ್ನು ಪದೇ ಪದೇ “ನೀನು ನನ್ನನ್ನು ಪ್ರೀತಿಸುತ್ತೀಯಾ ತಾನೇ? ಹಾಗಾದರೆ ನಿರೂಪಿಸು” ಎಂದು ಹಿಂಸಿಸುವ ಅನ್ನಾ, ವ್ರಾನ್‌ಸ್ಕಿಯ ತಾಯಿಯ ಮೇಲೆ ಹಗೆ ಸಾಧಿಸುವ ಅನ್ನಾ, ತನ್ನ ಗಂಡನಲ್ಲಿ ಪದೇ ಪದೇ ಕ್ಷಮೆ ಯಾಚಿಸುವ ಅನ್ನಾ ಹಿಂದೊಂದು ಕಾಲದಲ್ಲಿ ಸ್ವತಂತ್ರವಾಗಿ ಯೋಚಿಸುವ ಗೆಲುವಿನ ಹೆಣ್ಣಾಗಿದ್ದಳು ಅಂತ ನಂಬುವುದಕ್ಕೇ ಆಗುವುದಿಲ್ಲ. ಸೂಜಿಗಲ್ಲಿನ ವ್ಯಕ್ತಿತ್ವದ ಈಕೆಯನ್ನು ಕಾದಂಬರಿಯೊಳಕ್ಕೆ ಕರೆತಂದು ಕಥೆ ಮುಂದುವರೆದಂತೆ ಸಮಾಜಕ್ಕೆ, ಓದುಗರಿಗೆ, ಲೇಖಕರಿಗೆ ಬೇಕಾದಂತೆ ಆಕೆಯ ವ್ಯಕ್ತಿತ್ವವನ್ನು ತಿರುಚಲಾಗಿದೆ ಎಂಬ ಅನುಮಾನ ಬರುವಂತಿದೆ. ಅವಳನ್ನು ಅವಳಾಗಿಯೇ ಇರಲು ಬಿಟ್ಟಿದ್ದರೆ ಬೇರೆಯದೇ ಕಥನಕ್ಕೆ ನಾಂದಿ ಹಾಡುತ್ತಿದ್ದಳೇನೋ.
ಕಾದಂಬರಿಯಲ್ಲಿ ಕಿಟಿ ಮತ್ತು ಅನ್ನಾರ ನಡುವೆ ಹೋಲಿಕೆಗಳು ಅಲ್ಲಲ್ಲಿ ಕಾಣಸಿಗುತ್ತವೆ. ಕಿಟಿಗೆ ತನ್ನ ಅಕ್ಕ ಡಾಲಿಯ ನಾದಿನಿಯಾದ ಅನ್ನಾಳನ್ನು ಕಂಡರೆ ಬಹಳ ಅಚ್ಛೆ. ತನ್ನ ಕೈಹಿಡಿಯಬೇಕಾದ ವ್ರಾನ್‌ಸ್ಕಿ ಅನ್ನಾಳ ಹಿಂದೆ ಹೊರಟಾಗ ಆ ಆದರ ಅಸೂಯೆ, ಹಗೆತನದಲ್ಲಿ ಕೊನೆಗೊಳ್ಳುತ್ತದೆ. ನಂತರ ಲೆವಿನ್ನನನ್ನು ವರಿಸಿ ಗಂಡುಮಗುವಿನ ತಾಯಿಯಾದ ಕಿಟಿ ವ್ರಾನ್‌ಸ್ಕಿಯೊಡನೆ ಸಹಜೀವನ ನಡೆಸಿಯೂ ಅತೃಪ್ತಳಾದ ಅನ್ನಾಳನ್ನು ಕಂಡು ಕನಿಕರಿಸುತ್ತಾಳೆ. ಟಾಲ್ಸ್‌ಟಾಯ್‌ರ ಪ್ರಕಾರ ಸರಿಯಾದ ಹಾದಿ ಹಿಡಿದು ಯಶಸ್ವಿಯಾದ ಕಿಟಿ ಮತ್ತು ಹಾದಿ ತಪ್ಪಿ ಧ್ವಂಸಗೊಂಡ ಅನ್ನಾರನ್ನು ಕಂಡಾಗ ಪುರಾಣಗಳಲ್ಲಿ ಬರುವ ಪತಿವ್ರತೆ- ವೇಶ್ಯೆಯ ಉದ್ಧರಣೆಗಳು ನೆನಪಾಗುತ್ತವೆ.
ಹತ್ತೊಂಬತ್ತನೆಯ ಶತಮಾನದಲ್ಲಿ ಬರೆದ ಕಾದಂಬರಿಯನ್ನು ಇಪ್ಪತ್ತೊಂದನೆಯ ಶತಮಾನದ ಅಳತೆಗೋಲಿನಲ್ಲಿ ಅಳೆಯಬಾರದಾದರೂ ನಡತೆ ತಪ್ಪಿದ ಹೆಣ್ಣಿಗೆ ಆತ್ಮಹತ್ಯೆಯೇ ಪರಿಹಾರ ಎನ್ನುವ ಧೋರಣೆಯನ್ನು ಲೇಖಕರು ಅನುಮೋದಿಸುತ್ತಾರೆ. ಬೈರಪ್ಪನವರ ಕಥಾನಾಯಕಿಯರಂತೆ, ಪುಟ್ಟಣ್ಣ ಕಣಗಾಲರ ದುರಂತ ಪಾತ್ರಗಳಂತೆ ತಾನೇ ನಂಬಿ ನಿರ್ಮಿಸಿಕೊಂಡ ನೈತಿಕ ಚೌಕಟ್ಟನ್ನು ದಾಟುವ ಇಲ್ಲಿನ ಅನ್ನಾ ಕರೆನೀನಾ ಸನ್ನಡತೆ ಬದುಕಿಗಿಂಥ ದೊಡ್ಡದು ಎಂಬ ನಿಲುವು ತಳೆಯುತ್ತಾಳೆ. ಅಥವಾ ಲೇಖಕರು ಅಂಥ ನಿಲುವನ್ನು ಆಕೆಯಲ್ಲಿ ತುಂಬಿದ್ದಾರೆ.
ಟಾಲ್ಸ್‌ಟಾಯ್‌ರ ‘ಡೆಥ್ ಆಫ್ ಇವಾನ್ ಇಲ್ಯಿಚ್’ ಎಂಬ ನೀಳ್ಗತೆಯಲ್ಲೂ ಇಂಥದೇ ಸಂದರ್ಭ ಕಾಣಬಹುದು. ಇವಾನ್‌ನ ಹೆಂಡತಿ ಪ್ರಸ್‌ಕೋವ್ಯಾ ಗಂಡನ ಬಗ್ಗೆ ಅಸೂಯೆ ತೋರುತ್ತಿದ್ದಳು, ಅವಳಲ್ಲಿ ದುಷ್ಟತನ ತುಂಬಿತ್ತು ಎಂಬ ಮಾತು ನೀಳ್ಗತೆಯುದ್ದಕ್ಕೂ ಮತ್ತೆ ಮತ್ತೆ ಬರುತ್ತದೆ. ಆದರೆ ಆಕೆಯ ದುಷ್ಟತನವೇನು ಎಂಬುದನ್ನು ಓದುಗರೇ ಕಲ್ಪಿಸಿಕೊಳ್ಳಬೇಕೇ ವಿನಃ ವಿವರಗಳಲ್ಲಿ ಎಲ್ಲಿಯೂ ಬರುವುದಿಲ್ಲ. ಅವಳು “ಮಾತ್ರೆ ತೊಗೋ, ನನಗಾಗಿಯಾದರೂ ತೊಗೋ” ಎಂದರೂ ಇವಾನ್‌ನಿಗೆ ಕೋಪ. “ಹಂ, ಇವಳಿಗಾಗಿ ತೆಗೆದುಕೊಳ್ಳಬೇಕಂತೆ” ಅಂತ. ಹೆಂಗಸರು ಅಸೂಯೆಯುಳ್ಳವರು, ಸಣ್ಣತನ ಉಳ್ಳವರು ಎಂಬ ಮಾತನ್ನು ಕಾದಂಬರಿಗಳಲ್ಲಿ, ಸಿನಿಮಾಗಳಲ್ಲಿ ಎಷ್ಟು ಸಲ ಕೇಳಿಲ್ಲ! ಆದರೆ ಅಸೂಯೆ, ಸಣ್ಣತನ, ಹಿಡಿಶಾಪ, ಬೈಗುಳ ಇವೆಲ್ಲ ಅಸಹಾಯಕರ ಆಯುಧಗಳು ಎಂಬ ಒಳಮರ್ಮವನ್ನು ನಾವು ತಿಳಿದುಕೊಳ್ಳುವುದು ಎಂದು?
ಇಂಥ ಪ್ರಶ್ನೆ ಬಂದಾಗಲೆಲ್ಲ ಆ ಕಾಲದಲ್ಲಿ ಹೆಂಗಸರು ಹಾಗೆಯೇ ಯೋಚಿಸುತ್ತಿದ್ದರು ಎಂಬ ವಾದ ಹೂಡಿ ಪ್ರಶ್ನಿಸಿದವರ ಬಾಯಿ ಮುಚ್ಚಿಸುವುದು ಸುಲಭ. ಆದರೆ ಎಲ್ಲ ಕಾಲದಲ್ಲೂ ಎಲ್ಲ ಬಗೆಯ ಹೆಣ್ಣುಗಳೂ, ಗಂಡುಗಳೂ ಇರುವುದು ಸೃಷ್ಟಿ ನಿಯಮ. ಲೇಖಕರಾಗಿ ಯಾರ ಕಥೆಯನ್ನು ನಾವು ಹೇಳಲು ಆಯ್ದುಕೊಳ್ಳುತ್ತೇವೆ ಮತ್ತದನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದು ಎಲ್ಲ ಕಾಲದಲ್ಲೂ ಬರಹಗಾರರು ಒಡ್ಡಿಕೊಳ್ಳಬೇಕಾದ ಅಗ್ನಿಪರೀಕ್ಷೆ. ಹಾಗಂತ ನಾನು ಟಾಲ್ಸ್‌ಟಾಯ್‌ರನ್ನು ಬೈರಪ್ಪನವರಿಗೆ ಹೋಲಿಸುತ್ತಿಲ್ಲ. ಇನ್ನುಳಿದ ಎಲ್ಲ ಸಂಗತಿಗಳಲ್ಲೂ ವಿಶಾಲವಾಗಿ ಯೋಚಿಸುವ ಟಾಲ್ಸ್‌ಟಾಯ್ ಹೆಣ್ಣಿನ ವಿಷಯಕ್ಕೆ ಬಂದಾಗ ಮಾತ್ರ ಏಕೆ ಆಕೆಗೊಂದು ಚೌಕಟ್ಟು ನಿರ್ಮಿಸಿ ಹೆಣ್ಣಿನ ಚೈತನ್ಯವನ್ನು ಆ ಪರಿಮಿತಿಯೊಳಗೇ ಬಂಧಿಸಿಡುತ್ತಾರೆ ಎಂಬುದು ಓದುಗಳಾಗಿ ನನಗೆ ನೋವನ್ನುಂಟು ಮಾಡಿದ ವಿಷಯ.
ಮತ್ತೆಲ್ಲ ವಿಚಾರಗಳಲ್ಲಿ ಉದಾತ್ತರಾಗಿ ಯೋಚಿಸುತ್ತಾರಲ್ಲ, ಇದೊಂದು ವಿಷಯದಲ್ಲಿ ಮಾಫಿ ಮಾಡಿಬಿಡಬಹುದು ಎನ್ನುವಂತೆಯೇ ಇಲ್ಲ. ಮಾನವತೆಯ ಅರ್ಧದಷ್ಟು ಸಂಖ್ಯೆಯಲ್ಲಿರುವ ಒಂದು ವರ್ಗವನ್ನು ಸಮಾನವಾಗಿ ಕಾಣಲಾರದವರು ಇತರ ಪುಟ್ಟ ಗುಂಪುಗಳ ನ್ಯಾಯಕ್ಕಾಗಿ ಹೋರಾಡಿದರೆ ಅದು ಕೇವಲ ತೋರಿಕೆಯೇ ಸರಿ. ಅಮೆರಿಕನ್ ಕಾದಂಬರಿಗಾರ್ತಿ ಟೋನಿ ಮಾರಿಸನ್ ತಮ್ಮ “ಪ್ಲೇಯಿಂಗ್ ಇನ್ ದಿ ಡಾರ್ಕ್” ಎಂಬ ಸಾಹಿತ್ಯ ವಿಮರ್ಶಾ ಗ್ರಂಥದಲ್ಲಿ ಇಂಥದೇ ಬಗೆಯ ಪ್ರಶ್ನೆ ಎತ್ತುತ್ತಾರೆ. “ಅಮೆರಿಕದಲ್ಲಿ ಗುಲಾಮಗಿರಿ ಚಾಲ್ತಿಯಲ್ಲಿದ್ದ ಕಾಲದಲ್ಲಿಯೂ ಸಾಹಿತಿಗಳಿದ್ದರು, ವಿಚಾರವಾದಿಗಳಿದ್ದರು. ತಮ್ಮ ಸಹಚರಿಗಳನ್ನೇ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದುದನ್ನು ಕಂಡು ಇವರ ಮನಸ್ಸು, ಬುದ್ಧಿ ಒಂಚೂರೂ ನರಳಲಿಲ್ಲವಲ್ಲ” ಅಂತ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಹೆಣ್ಣಿನ ಸಮಾನತೆಯ ವಿಷಯ ಬಂದಾಗ ಇಂದಿನ ಲೇಖಕರೂ, ಸಹೃದಯರೂ ಅದೇ ಬಗೆಯ ಜಾಣ ಕಿವುಡನ್ನು ಪ್ರದರ್ಶಿಸುತ್ತಾರಲ್ಲವೇ?
ಟಾಲ್ಸ್‌ಟಾಯ್ ಕಾಣಿಸಲು ಇಚ್ಛಿಸಿದ ಅನ್ನಾ ಬದಲಾದ ಕಾಲದಲ್ಲಿ ಹೊಸ ಓದುಗರಲ್ಲಿ ನೂತನವಾಗಿ ಅರಳಬಲ್ಲವಳು. ಆಕೆ ಪ್ರಶ್ನೆಗಳನ್ನು ಎಬ್ಬಿಸುತ್ತಾಳೆ, ನರಳಿಸುತ್ತಾಳೆ. ಈ ದೀರ್ಘ ಬರವಣಿಗೆಯಲ್ಲಿ ತೊಡಗಿಕೊಂಡಾಗ ಬಹುಶಃ ಟಾಲ್ಸ್‌ಟಾಯ್ ಕೂಡ ಈ ಬಗ್ಗೆ ಚಿಂತಿಸಿದ್ದರೋ ಏನೋ ಎಂಬ ಪ್ರಶ್ನೆಯೂ ಏಳದಿರದು!
ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. ಸದ್ಯ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ಧ್ಯಾನಕೆ ತಾರೀಖಿನ ಹಂಗಿಲ್ಲ, ಜೀನ್ಸು ತೊಟ್ಟ ದೇವರು (ಕವನ ಸಂಕಲನಗಳು) ಪುನರಪಿ (ಕಾದಂಬರಿ) ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು (ನಾಟಕಗಳು) ದೂರ ದೇಶವೆಂಬ ಪಕ್ಕದ ಮನೆ (ಪ್ರಬಂಧಗಳು.) ಮಾಕೋನ ಏಕಾಂತ (ಕಥಾ ಸಂಕಲನ) ಇವರ ಪ್ರಕಟಿತ ಕೃತಿಗಳು.
Excellent summary and insight into this novel. I still haven’t dared to read this novel. I get scared because of its sheer size!! I have read the summary of this novel several times and have watched on the screen too. ಪಾತ್ರಗಳಿಗೆ ಮೊದಲೇ ತೀರ್ಮಾನಗಳನ್ನು ಕೊಟ್ಟು ಕತೆ ಬರೆಯುವುದನ್ನು ತುಂಬ ಪ್ರಸಿದ್ಧ ಕತೆಗಾರರಲ್ಲಿ ಇತ್ತು, ಇದೆ. You have rightly identified the similarities.