ಅವನ ಮಾತುಗಳು ನನ್ನೋಳಗೆ ನಡುಕ ತಂದವು, ತಲೆ ಗಿಮ್ಮೆಂದಿತು. “ಇಲ್ಲ ಇಲ್ಲ…. ನನ್ನ ಮಗನನ್ನು ನಾನು ಕೊಲ್ಲುವುದಿಲ್ಲ” ನೆಲದಲ್ಲಿ ಬಿದ್ದು ಹೊರಳಡಿದೆ. “ರೀಟಾ ಸಮಾಧಾನ ಮಾಡಿಕೊ. ನೀನು ಹೀಗೆ ವೃಥಾ ಭಾವುಕಳಾದರೆ ನಾನೇನೂ ಮಾಡಲು ಸಾಧ್ಯವಿಲ್ಲ. ಆದರೆ… ಮುಂದಾಗಬಹುದಾದ ಭೀಕರ ಪರಿಣಾಮವನ್ನು ಎದುರಿಸಲು ಸಿದ್ಧಳಾಗು” “ಅವನ ಬದಲು ನಾನೇ ಸಾಯುತ್ತೇನೆ, ಅವನನ್ನು ಮಾತ್ರ ಕೊಲ್ಲುವುದಿಲ್ಲ” ಅತ್ತು ರಂಪ ಮಾಡಿದೆ. ಕರಿಯಪ್ಪನ ಕಾಲು ಹಿಡಿದು ಗೋಳಾಡಿದೆ. ಆದರೆ ಕರಿಯಪ್ಪ ಬಹಳ ದೃಢವಾಗಿದ್ದ. “ಇದೊಂದೇ ದಾರಿ, ಅನ್ಯಮಾರ್ಗವಿಲ್ಲ” ಎನ್ನುತ್ತಾ ಸೈತಾನನಂತೆ ನನ್ನ ಕಾಡಿದ, ಕಾಡೇ ಕಾಡಿದ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮೀನಾ ಮೈಸೂರು ಬರೆದ ಕತೆ “ಇತಿ ವೃತ್ತಾಂತ” ನಿಮ್ಮ ಓದಿಗೆ

ನನ್ನ ಸಾವಿನ ಕಾರಣ, ನಾನು ಅನುಭವಿಸಿದ ಯಾತನೆ, ತಳಮಳ, ತುಮುಲಗಳನ್ನೆಲ್ಲಾ…. ನನ್ನೊಳಗಿಂದ ಹೊರ ಹಾಕಿಬಿಟ್ಟರೆ, ಕಡೇಪಕ್ಷ ನೆಮ್ಮದಿಯಾಗಿ ಸಾಯಬಹುದೆನ್ನಿಸಿತು. ಆ ನಿರಾಳತೆಯ ಭಾವವೇ ಇದನ್ನು ಬರೆಯಲು ಪ್ರೇರೇಪಿಸಿತು.

ಆತ್ಮಚರಿತ್ರೆಯೋ ಕಾದಂಬರಿಯೋ ಅಂತ ಹೆದರಿಕೊಳ್ಳಬೇಡಿ, ಅದನ್ನೆಲ್ಲಾ ಬರೆಯಲು ಸಮಯವೆಲ್ಲಿದೆ ನನಗೆ? ನನ್ನ ಬದುಕಿನ ಇಂಚು ಇಂಚನ್ನೂ ನಿಮ್ಮೊಡನೆ ಹಿಂಜುತ್ತಾ ಹಂಚಿಕೊಳ್ಳುವ ವ್ಯವಧಾನವೂ ನನಗಿಲ್ಲ. ನಾನು ಇನ್ನೇನು ಇಹಲೋಕದ ಯಾತ್ರೆ ಮುಗಿಸಿ ಹೊರಟು ನಿಂತ ಈ ಗಳಿಗೆಯಲ್ಲಿ ಎಲ್ಲವನ್ನೂ ಹೇಳಿ ಬಿಡುತ್ತೇನೆ, ದಯವಿಟ್ಟು ಕೇಳುವ ತಾಳ್ಮೆ ತೋರಿ.

ನನಗಾಗ ಕೇವಲ ಹದಿನೇಳು ವರ್ಷ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬಿ.ಎ. ಮುಗಿಸಿ ರಜಕ್ಕೆಂದು ಮನೆಗೆ ಬಂದಿದ್ದೆ. ಕಾಲೇಜಿನ ಝಗಮಗಿಸುವ ಬಣ್ಣಬಣ್ಣದ ಕನಸಿನ ಎಳೆ ಹಿಡಿದು ಎಂ.ಎ. ಓದಲು ಮಾನಸಗಂಗೋತ್ರಿಗೆ ಹೋಗುತ್ತೇನೆಂಬ ಆಸೆಯಲ್ಲಿ ಬೇಸಿಗೆ ರಜೆ ಮುಗಿಯುವುದನ್ನೇ ಜಾತಕ ಪಕ್ಷಿಯಂತೆ ಕಾದಿದ್ದೆ. ನನ್ನ ಆಸೆಗೆ ಸಂಚಕಾರ ಬರಲು ತಡವೇನೂ ಆಗಲಿಲ್ಲ. ಬಾಂಬೆಯಲ್ಲಿ ಕೆಲಸದಲ್ಲಿದ್ದ ನನ್ನಣ್ಣನ ಗೆಳೆಯ ಜೋನಾಥನ್ ನನ್ನ ಮದುವೆಯಾಗ ಬಯಸಿದ. ಅಲ್ಲಿಗೆ ನನ್ನ ವಿದ್ಯಾರ್ಥಿ ಜೀವನ, ಮೈಸೂರಿನ ರಂಗು ರಂಗಿನ ಬದುಕು ಬಣ್ಣ ಬಣ್ಣದ ಕನಸುಗಳು ಕೊನೆಗೊಂಡವು. ಹೆಗ್ಗಡದೇವನ ಕೋಟೆ ಬಳಿ ಸುಮಾರು ಒಂದು ನೂರು ಎಕರೆ ಜಮೀನು, ತೋಟದ ಮನೆ ಹಾಗೂ ಒಬ್ಬನೇ ಮಗನನ್ನು ಪಡೆದ ಕುಟುಂಬ. ಆ ಸುಖಿ ಕುಟುಂಬದ ಸುಪುತ್ರನೇ ಈ ಜೋನಾಥನ್.

ಸೌಂದರ್ಯದ ಜೊತೆಗೆ ಒಳ್ಳೆಯ ನಡತೆಯ ಹುಡುಗ ಒಳ್ಳೇ ಕೆಲಸ, ಕೈ ತುಂಬಾ ಸಂಬಳ. ಮಿಗಿಲಾಗಿ ತಲೆತಲಾಂತರ ಕೂತು ತಿಂದರೂ ಕರಗದಷ್ಟು ಆಸ್ತಿವಂತ. ಅಂದ ಮೇಲೆ, ಅದಕ್ಕಿಂತ ಸೌಭಾಗ್ಯ ಇನ್ನೇನು ಬೇಕು ಮನೆಯವರಿಗೆ? ಇಷ್ಟು ಬೇಗ ಮದುವೆ ಬೇಡವೆಂದು ನಾನೆಷ್ಟೇ ಪ್ರತಿಭಟಿಸಿದರೂ, ಯಾರೂ ಸೊಪ್ಪು ಹಾಕಲಿಲ್ಲ. ಅವರವರ ಮಾತುಗಳಲ್ಲಿ, ಅವರವರ ಕಲ್ಪನೆಗಳಲ್ಲಿ, ನನ್ನನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸಿಬಿಟ್ಟರು. ಫಾದರ್ ಬಂದು”ನೀನು ಪುಣ್ಯವಂತೆ” ಎನ್ನುತ್ತಾ ಪ್ರಾರ್ಥನೆ ಮಾಡಿ “ಸುಖ, ಸಂತೋಷ, ಶಾಂತಿ, ಸಂಭ್ರಮಗಳು ನಿನ್ನ ಪಾಲಾಗಲಿ ಮಗಳೆ” ಎಂದು ಆರ್ಶೀವದಿಸಿದರು.

ಅಮ್ಮ ಹೇಳಿ ಕೊಟ್ಟ ಸುಖ ಸಂಸಾರದ ಸೂತ್ರಗಳನ್ನು ಬಾಯಿ ಪಾಠ ಮಾಡಿಕೊಂಡು, ಗಂಡನೊಡನೆ ದೂರದ ಬಾಂಬೆಗೆ ಹೊರಟೇ ಬಿಟ್ಟೆ, ಸುಖ ಸಂಸಾರದ ಕನಸುಗಳನ್ನು ಹೊತ್ತುಕೊಂಡು. ಆ ಒಂದು ವರ್ಷ ಎಲ್ಲರ ಕಣ್ಣುಗಳನ್ನು ಕುಕ್ಕುವಂತಹ ದಿನಗಳು, ಒಂದೇ ಒಂದು ವರ್ಷ, ಕೇವಲ ಒಂದೇ ಒಂದು ವರ್ಷ!

ಮೊದಲ ಮಗ ಸುಪ್ರೀತನ ಬಸುರಿತನ, ಬಾಣಂತನ ಮುಗಿಸಿ ಇನ್ನೇನು ಬಾಂಬೆಗೆ ಹೊರಡಬೇಕು. ಅಷ್ಟರಲ್ಲಿ ಅತ್ತೆ-ಮಾವ ಭೀಕರ ರಸ್ತೆ ಅಪಘಾತಕ್ಕೀಡಾಗಿ ಮಾವ ಸ್ಥಳದಲ್ಲೇ ಸತ್ತು, ಸೊಂಟ ಮುರಿದ ಅತ್ತೆ ಹಾಸಿಗೆ ಹಿಡಿದರು. ಅಲ್ಲಿಗೆ ನನ್ನ ಸುಖ ಸಂಸಾರದ ಒಂದು ವರ್ಷದ ಸಿನಿಮಾ ಮುಗಿದೇ ಹೋಯ್ತು. ಅತ್ತೆಯ ಆರೈಕೆಗೆಂದು ಕೋಟೆಗೆ ಬಂದವಳಿಗೆ ಅದೇ ಭದ್ರಕೋಟೆಯಾಯಿತು. ಅದನ್ನು ಭೇದಿಸಿ ಹೊರಹೋಗುವುದು ನನಗೆ ಸಾಧ್ಯವಾಗಲೇ ಇಲ್ಲ. ಅತ್ತೆಯ ಸೇವೆಯ ಜೊತೆಗೆ ಒಂದು ನೂರು ಎಕರೆ ಜಮೀನಿನ ವ್ಯವಹಾರ ಅನಿವಾರ್ಯವಾಗಿ ನನ್ನ ಹೆಗಲಿಗೆ ಬಿತ್ತು. ನಾನು ಎರಡನೇ ಮಗ ಸುಮುಖನ ಬಸುರಿಯಾಗಿದ್ದಾಗ, ಎರಡು ವರ್ಷಗಳ ದೀರ್ಘಕಾಲ ಹಾಸಿಗೆಯಲ್ಲಿ ನರಳುತ್ತಿದ್ದ ಅತ್ತೆ ಏಸುವಿನ ಪಾದ ಸೇರಿದರು. ಮೊದ ಮೊದಲಿಗೆ ಒಂಟಿತನ ಭಯ ಎನಿಸಿದರೂ ಜೋನಾಥನ್ ಮುಂದೆ ಅತ್ತು ಕರೆದು ರಂಪ ಮಾಡಿದರೂ ನನ್ನ ಸಹಾಯಕ್ಕೆಂದು ಕೆಲಸದವರನ್ನು ನೇಮಿಸಿ, ನನ್ನನ್ನು ರಮಿಸಿ ಬಾಂಬೆಗೆ ಹಾರಿಬಿಟ್ಟರು. ಮತ್ತೆ ನಾನು ಆ ಬಾಂಬೆಯ ಮುಖವನ್ನೇ ನೋಡಲಿಲ್ಲ. ಎರಡು- ಮೂರು ತಿಂಗಳಿಗೊಮ್ಮೆ ಬಂದು ಹೋಗುವ ಗಂಡ, ನಾನು ಬೇಡ ಬೇಡವೆಂದೆರೂ ನನಗೆ ಬೇಕಾದದ್ದು-ಬೇಡವಾದದ್ದನ್ನೆಲ್ಲಾ ತಂದು ನನ್ನ ಕಾಲ ಬಳಿ ಸುರಿಯುತ್ತಿದ್ದರು. ಜೊತೆಯಲ್ಲಿರಲಾಗದ ಕೊರತೆಯನ್ನು ಈ ವಸ್ತು ವಿಶೇಷಗಳು ಕಟ್ಟಿ ಕೊಡುತ್ತವೆಂದು ನನ್ನ ಗಂಡ ನಂಬಿದಂತಿತ್ತು. ಎರಡು ಗಂಡು ಮಕ್ಕಳ ತಾಯಿಯಾಗಿ ಜಮೀನ್ದಾರಿಣಿಯ ಜವಾಬ್ದಾರಿಯನ್ನು ಅನಿವಾರ್ಯವಾಗಿ ಹೊತ್ತುಕೊಂಡು ಬಿಟ್ಟೆ. ಕಾಲ ಯಾರನ್ನೂ ಕೇಳದೆ ಓಡುತ್ತಿತ್ತು. ಓಡೇ ಓಡಿತು, ಓಡೇ ಓಡಿತು. ಓಡುವ ಕಾಲ ನನ್ನ ಬಳಿ ಕೂತು ನಿನಗೆ ಬೇಜಾರ? ನಿನ್ನನ್ನು ಒಂಟಿತನ ಕಾಡುತ್ತಾ? ನಿನಗೆ ಏನು ಬೇಕು? ಏನು ಬೇಡ? ಎಂದು ಕೇಳುವ, ವಿಚಾರಿಸಿಕೊಳ್ಳುವ ಸೌಜನ್ಯವನ್ನು ತೋರಲಿಲ್ಲ. ಅದು ನನ್ನನ್ನು ದಿವ್ಯವಾಗಿ ನಿರ್ಲಕ್ಷಿಸಿತು. ಗಂಡನಂತೂ ಇದನ್ನೆಲ್ಲಾ ಎಂದೂ ಕೇಳಲಿಲ್ಲವೆಂಬುದು ಬೇರೆ ಮಾತು. ಆಗ-ಈಗ ಬಂದು ಹೋಗುವ ಅಪ್ಪ-ಅಮ್ಮ, ಅಣ್ಣ, ಗೆಳತಿಯರ ಕಣ್ಣಲ್ಲಿ ನಾನು ಭಾರಿ ಶ್ರೀಮಂತೆ, ಯಾವುದಕ್ಕೂ ಕೊರತೆಯೇ ಇಲ್ಲದ ಸಮೃದ್ಧ, ಸಂತೃಪ್ತ ಸುಖಿ ಸಂಸಾರಿ.

ಮಕ್ಕಳು ಶಾಲೆಗೆ ಸೇರುವವರೆಗೂ ಅವರ ಬೇಕು-ಬೇಡಗಳನ್ನು ಪೂರೈಸುವುದರಲ್ಲಿ, ಅವರನ್ನು ಸಂಭಾಳಿಸುವುದರಲ್ಲಿ, ತೋಟ-ತುಡಿಕೆಗಳ ರೇಜಿಗೆಯಲ್ಲಿ ಕಾಲ ಸರಿದದ್ದೇ ಗೊತ್ತಾಗಲಿಲ್ಲ. “ಕೋಟೆಯಲ್ಲಿ ಸರಿಯಾದ ಶಾಲೆಯಿಲ್ಲ, ಮೈಸೂರಿಗೆ ಮಕ್ಕಳು ಓಡಾಡುವುದು ಕಷ್ಟವಾಗುತ್ತೆ” ಎಂದೆಲ್ಲಾ ನೆಪಗಳನ್ನು ಹೇಳುತ್ತಾ…. ನನ್ನ ಗಂಡ, ಮಕ್ಕಳಿಬ್ಬರನ್ನು ಊಟಿಯ ವಸತಿ ಶಾಲೆಗೆ ಸೇರಿಸಿ ತಾಯಿ- ಮಕ್ಕಳನ್ನು ಅಗಲಿಸಿದರು. ಆಗ ನಾನು ನಿಜಕ್ಕೂ ಅನಾಥೆಯಾದೆ. ಅಲ್ಲಿಂದ ನನ್ನ ಈ ಕಥೆ ಪ್ರಾರಂಭವಾಯಿತು. ಕೋಟೆಯಲ್ಲಿ ನನಗೆ ಸಂಬಂಧಿಕರಾಗಲಿ, ಸ್ನೇಹಿತೆಯರಾಗಲಿ ಯಾರೂ ಇರಲಿಲ್ಲ, ಬೆಳಿಗ್ಗೆಯಿಂದ ಸಂಜೆಯವರೆಗೂ ತೋಟದಲ್ಲಿ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಿದ್ದೆ. ಚರ್ಚ್‌ನಲ್ಲೂ ಸಮಾನ ಮನಸ್ಕರಾರೂ ಇರುತ್ತಿರಲಿಲ್ಲ.

ಜೊತೆಗೆ ಇತರ ಹೆಂಗಸರಂತೆ ಸಿಂಗಾರ ಮಾಡಿಕೊಂಡು ಬಂಗಾರ ಧರಿಸಿಕೊಂಡು ಹೋಗುವುದರಲ್ಲಿ ಅರ್ಥ ಕಳೆದುಕೊಂಡಿದ್ದೆ, ಭಾನುವಾರಗಳಿರಲಿ, ಹಬ್ಬಗಳಲ್ಲೂ ಕೂಡ ಚರ್ಚಿಗೆ ಹೋಗುವುದನ್ನು ನಿಲ್ಲಿಸಿ ಬಿಟ್ಟಿದ್ದೆ. ಹೀಗಾಗಿ ಇಲ್ಲಿ ನನಗೆ ಆತ್ಮೀಯರೆಂಬುವರಾರೂ ಸಿಗಲೇ ಇಲ್ಲ. ನನ್ನ ಕಷ್ಟ ಸುಖವನ್ನು ಹಂಚಿಕೊಳ್ಳುವವರಿಲ್ಲದೆ, ಕೇಳುವವರಿಲ್ಲದೆ ಒಂಟಿಯಾಗಿ ಬಿಟ್ಟೆ! ಎರಡು ಮೂರು ದಿನಕ್ಕೊಮ್ಮೆ ಫೋನ್ ಮಾಡುತ್ತಿದ್ದ ಗಂಡ ತೆಂಗಿನ ಕಾಯಿ ಬೆಲೆ, ಭತ್ತದ ಬೆಲೆ ವಿಚಾರಿಸಿ ಅದನ್ನು ಯಾರಿಗೆ ಮಾರ ಬೇಕು? ಆ ದುಡ್ಡನ್ನು ಏನು ಮಾಡಬೇಕು? ಇತ್ಯಾದಿ ವ್ಯವಹಾರಿಕ ಮಾತುಗಳು ಮುಗಿದ ಮೇಲೆ, “ನೀನು ಚೆನ್ನಾಗಿದ್ದೀಯಾ ಬೇಜಾರಾದರೆ ನಿಮ್ಮಮ್ಮನ ಮನೆಗೆ ಬೆಳಿಗ್ಗೆ ಹೋಗಿ ಸಂಜೆ ಬಂದು ಬಿಡು” ಎಂದು ಉಚಿತ ಸಲಹೆ, ಮಾರ್ಗದರ್ಶನಗಳ ಮಹಾಪೂರವನ್ನೇ ಹರಿಸಿ ಕೊನೆಯಲ್ಲಿ “ಐ ಲವ್ ಯು ರೀಟಾ” ಎಂಬ ಸಾಂಪ್ರದಾಯಿಕ ಮಾತಿನಲ್ಲಿ ಮಾತು ಮುಗಿಸುತ್ತಿದ್ದರು. ಓದಿನ ಹೆಸರಿನಲ್ಲಿ ಮಕ್ಕಳು ಮನೆ ಬಿಟ್ಟು ಹೋದ ಮೇಲೆ, ಅಖಂಡ ಒಂಟಿತನ, ಅನಾಥ ಪ್ರಜ್ಞೆ ಭೂತದಂತೆ ಕಾಡತೊಡಗಿತು. ಕೂತಲ್ಲಿ ನಿಂತಲ್ಲಿ ಶನಿಯಂತೆ ಹಿಂಬಾಲಿಸುತಿತ್ತು. ಅದರಲ್ಲೂ ಸಂಜೆಯಾಗುತಿದ್ದಂತೆ, ಏನೋ ಬೇಸರ, ಏನೋ ಕೊರತೆ, ಏನೇನೋ….. ಬೇಕು ಬೇಡಗಳು, ಜೋರಾಗಿ ಅಳಬೇಕೆನ್ನಿಸುತಿತ್ತು.

ಮನೆ ಮುಂದೆ ಮಾರುತಿ ಕಾರು ನಿಂತಿದೆ, ನಿಂತೇ ಇದೆ, ಆದರೆ ಹೋಗುವುದೆಲ್ಲಿಗೆ? ಜೊತೆ ಯಾರು? ಸುಮ್ಮನೆ ಮುದುರಿ ಮೂದೇವಿಯಂತೆ ಕೂತು ಬಿಡುತ್ತಿದ್ದೆ. ಸಂಜೆಯ ಗವ್ ಎನ್ನುವ ಕತ್ತಲು, ಜೀ ಜೀ.. ಎನ್ನುವ ಜೀರುಂಡೆ ಸದ್ದು, ಮರದಿಂದ ದಪ್ಪೆಂದು ಉದುರುವ ತೆಂಗಿನ ಕಾಯಿ ಅಥವಾ ತೆಂಗಿನ ಗರಿ, ಬೆಳಕಿನ ಹುಳುಗಳನ್ನು ಕಂಡು ಬೌ ಎನ್ನುವ ನಾಯಿಗಳು…. ಇವುಗಳೇ ನನ್ನ ಸಂಗಾತಿಗಳಾದವು. ಸಂಜೆ ಬೀಸುವ ತಂಗಾಳಿ ನನಗೆಂದೂ ಹಾಯ್ ಎನಿಸುತ್ತಿರಲಿಲ್ಲ, ನನ್ನೊಳಗಿನ ಕಿಚ್ಚಿಗೆ ತಂಪನ್ನೆರೆಯುತ್ತಿರಲಿಲ್ಲ. ಹೀಗಾಗಿ “ಎಡಕಲ್ಲು ಗುಡ್ಡದಮೇಲೆ” ಚಿತ್ರದ “ವಿರಹಾ ನೂರು ನೂರು ತರಹ” ಹಾಡನ್ನು ಹಾಡಿಕೊಳ್ಳುತ್ತಾ ಮತ್ತಷ್ಟು ವಿರಹದುರಿಯಲ್ಲಿ ನರಳುತ್ತಿದ್ದೆ. ಇದನ್ನೆಲ್ಲಾ ಜೋನಾಥನ್ ಎಂದೂ ಅರ್ಥ ಮಾಡಿಕೊಳ್ಳಲಿಲ್ಲ, ಬಾಂಬೆಯ ಕೆಲಸ ಬಿಡಲು ಅವರೆಂದೂ ಸಿದ್ಧರಿರಲಿಲ್ಲ. ಅಲ್ಲಿಯ ಅಧಿಕಾರ, ಸ್ಥಾನಮಾನ, ಓಲೈಸುವ ಜನರನ್ನೆಲ್ಲಾ ಬಿಟ್ಟು ಬಂದು ಬರಿ ರೈತನಾಗಿ ಬದುಕುವುದು ಅವರಿಗೆ ಸಾಧ್ಯವಿಲ್ಲ ಅಂತ ನನಗೆ ಚೆನ್ನಾಗಿ ಗೊತ್ತಿತ್ತು. ನನ್ನನ್ನು ಮಾತ್ರ ಜಮೀನ್ದಾರಿಣಿ ಪಟ್ಟದಲ್ಲಿ ಕೂರಿಸಿ, ತನ್ನ ಆಸ್ತಿಯ ಹೊರೆ ಹೊರಿಸಿ ತಾನು ಮಾತ್ರ ಹಕ್ಕಿಯಂತೆ ಹಾರಾಡಿಕೊಂಡಿದ್ದರು. ಒಮ್ಮೆ ಬಂದರೆ ಒಂದು ವಾರ ನಿಲ್ಲುತ್ತಿದ್ದರು. ಆಗ ತೋಟವನ್ನೆಲ್ಲಾ ಸುತ್ತಾಡಿ. ತೋಟಕ್ಕೆ ಏನೇನು ಮಾಡಬೇಕೆಂದು ಪಟ್ಟಿ ಮಾಡಿಡುತ್ತಿದ್ದರು. ಶೇರ್ಸ್‌, ಇನ್ವೆಸ್ಟಮೆಂಟ್‌ಗಳ ಲೆಕ್ಕಾಚಾರದಲ್ಲಿ ಕಾಲಕಳೆಯುತಿದ್ದರು. ಬ್ಯಾಂಕು, ಸ್ನೇಹಿತರು, ಮೈಸೂರು, ಮಕ್ಕಳನ್ನು.. ನೋಡಲೆಂದು ಊಟಿ… ಅಂತ ಅಲೆದಾಡುವುದರಲ್ಲಿ ಅವರ ರಜ ಮುಗಿದೇ ಹೋಗುತ್ತಿತ್ತು. “ಅಯ್ಯೋ, ಸಾರಿ ರೀಟಾ ಈ ಸಲವೂ ನಿನ್ನ ಸಿನೆಮಾಗೆ ಕರೆದುಕೊಂಡು ಹೋಗಲು ಆಗಲೇ ಇಲ್ಲ ನೋಡು, ಮುಂದಿನ ಸಲ ಸಿನೆಮಾಗೆ ಕರೆದುಕೊಂಡು ಹೋಗುವೆ, ಬೇಜಾರು ಮಾಡಿಕೋ ಬೇಡ ಪ್ಲೀಜ್..” ಎನ್ನುತ್ತಾ ಕೆನ್ನೆ ಸವರಿ, ಒಮ್ಮೆ ಆಲಂಗಿಸಿ, ಮತ್ತೆ ನನ್ನನ್ನು ಒಂಟಿತನದ ತೆಕ್ಕೆಗೆ ನಿರ್ದಾಕ್ಷಣ್ಯವಾಗಿ ತಳ್ಳಿ ತಾನು ಮಾತ್ರ ನಿರ್ಲಿಪ್ತನಾಗಿ ಹಾರಿ ಬಿಡುತ್ತಿದ್ದ.

ಬದುಕು ಹೀಗೆ ಒಂದು ರೀತಿಯ ಲೆಕ್ಕಾಚಾರದಲ್ಲಿ, ಏರು ಪೇರುಗಳಿಲ್ಲದೆ ಬಾಳ ಬಂಡಿ ಸರಳರೇಖೆಯಂತೆ ಸಾಗುತ್ತಿತ್ತು. ಈ ಏಕತಾನತೆ ಕಾಲಚಕ್ರಕ್ಕೆ ಬೇಡವಾಯಿತೇನೋ. ಒಂದು ಸಣ್ಣ ಪರಿಚಯ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿತು. ರಜೆಯಲ್ಲೊಮ್ಮೆ ಜೋನಾಥನ್ ಬಂದಿದ್ದಾಗ, ಸಂಜೆಯ ಅಪರೂಪದ ಪಾನಗೋಷ್ಠಿಗೆಂದು ಬ್ಯಾಂಕಿನ ಮ್ಯಾನೇಜರ್ ಕರಿಯಪ್ಪನನ್ನು ಮನೆಗೆ ಕರೆತಂದರು. ಅದೇ ನನ್ನ ಗಂಡ ಮಾಡಿದ ಮಹಾ ಘೋರ ಅಪರಾಧ! ಅವರು ಮಾಡಿದ ಅಪರಾಧಕ್ಕೆ ನಾನು ವೃಥಾ ಬಲಿಪಶುವಾದೆ.

ಕರಿಯಪ್ಪ ಎಂದೆನಲ್ಲ, ಹೆಸರು ಕೇಳಿ ಅಮಾವಾಸ್ಯೆ ಎಂದುಕೊಂಡಿರೋ ಅದು ಖಂಡಿತಾ ನಿಜ, ಬರಿ ಕಪ್ಪು ಅಷ್ಟೇ ಅಲ್ಲ, ಅಂತಹ ಲಕ್ಷಣವಂತನೂ ಅಲ್ಲ, ಆದರೆ ಅವನ ಮಾತುಗಾರಿಕೆಯ ಮೋಡಿ ಎಂತಹವರನ್ನು ಮರುಳು ಮಾಡಿ ಬಿಡುತ್ತಿತ್ತು. ವಾಚಾಳಿತನ ತುಸು ಹೆಚ್ಚೇ… ಆದರೂ ಒಂಥರಾ ಇಷ್ಟವಾಗುತ್ತಿದ್ದ. ನನ್ನ ಗಂಡ ಊರಿಗೆ ಹೋದ ಮೇಲೆ ಕರಿಯಪ್ಪ ಯಾವುದೋ ಪೇಪರ್‌ಗೆ ಸಹಿ ಹಾಕಿಸಿಕೊಂಡು ಹೋಗಲೆಂದು ಬಂದ. “ಸಂಜೆ ಒಬ್ಬರೇ ಮನೆಯಲ್ಲಿರಲು ಬೇಸರ ಇಲ್ಲವಾ?” ಅಂತ ಇನ್ನೊಮ್ಮೆ ಬಂದ, ನನ್ನ ಬೇಸರ ಕಳೆಯಲೆಂದು ಮತ್ತೊಮ್ಮೆ ಬಂದ, ನನ್ನ ಒಂಟಿತನ ಕಳೆಯಲೆಂದು ಮಗದೊಮ್ಮೆ ಬಂದ… ಹೀಗೆ ಒಮ್ಮೆ. ಇನ್ನೊಮ್ಮೆ, ಮತ್ತೊಮ್ಮೆ, ಮಗದೊಮ್ಮೆ…. ಅಂತ ಬಂದವ ಸದಾ ಬರಲು ಪ್ರಾರಂಭಿಸಿದ, ಒಮ್ಮೆ ಮೆಲ್ಲ ಮೆಲ್ಲನೆ ನನ್ನ ಬಳಿ ಬಂದು ಕೆನ್ನೆ ತಟ್ಟಿದ, ನಾನು ಬೆಚ್ಚಿ ಹಿಂದೆ ಸರಿದಾಗ “ಸೊಳ್ಳೆಯಿತ್ತು” ಎಂದ. ಮತ್ತೊಮ್ಮೆ ಅದು ಇದು ಮಾತನಾಡುತ್ತಾ ನನ್ನ ಪಕ್ಕ ಬಂದು ಕೂತ, ಏನೋ ಜೋಕ್ ಹೇಳಿ ನಗುತ್ತಾ ತೀರಾ ಸಹಜವೆಂಬಂತೆ ನನ್ನ ತೊಡೆ ತಟ್ಟಿದ. ಮಗದೊಮ್ಮೆ ನನ್ನ ಕೈ ಹಿಡಿದು ಹಸ್ತರೇಖೆ ಓದುತ್ತೇನೆನ್ನುತ್ತಾ.. ನನ್ನ ಕೈಯನ್ನು ತುಟಿಗೊತ್ತಿಕೊಂಡು ಹೂ ಮುತ್ತನಿತ್ತ. ಇನ್ನೊಮ್ಮೆ ಚಳಿಯ ಸಂಜೆಯಲ್ಲಿ ಬಂದವ ನನ್ನನ್ನು ಅನಾಮತ್ ತಬ್ಬಿಕೊಂಡು “ಚಳಿ ಅಲ್ಲವಾ” ಎಂದ. ಹೀಗೆ, ನಿಧಾನವಾಗಿ ನನ್ನನ್ನು ಖೆಡ್ಡಕ್ಕೆ ಕೆಡವಿಕೊಂಡ….. ಅವನೊಂದಿಗಿನ ಈ ಸಂಬಂಧವೇ……. ಇಂದಿನ ದುರಂತ ನಾಯಕಿಯ ಪಟ್ಟಕ್ಕೆ ದಾರಿ ಮಾಡಿಕೊಟ್ಟಿತು. ಕೆಲಸ ಮುಗಿಸಿ ಆಳುಗಳು ತೋಟದಿಂದ ಹೋದ ಮೇಲೆ ಇರುಳಲ್ಲಿ ನಾನು ಕರಿಯಪ್ಪನಾಗಮನಕ್ಕೆ ಮೈಯೆಲ್ಲಾ ಪುಟಿಯುತ್ತಾ ಕಾಯುತ್ತಿದ್ದೆ, ನಮ್ಮ ನಾಯಿಗಳಿಗೆ ಕರಿಯಪ್ಪನ ಹೆಜ್ಜೆ ಸದ್ದು ಅಭ್ಯಾಸವಾಗಿ ಅವ ಬಂದಾಗ ಅವು ಬೊಗಳುತ್ತಲೂ ಇರಲಿಲ್ಲ. ನನ್ನ ಒಂಟಿತನ ಕಳೆಯಲು ಸಂಗಾತಿ ಸಿಕ್ಕ, ಹುಣ್ಣಿಮೆಯ ಬೆಳದಿಂಗಳೂಟಕ್ಕೆ ಗೆಳೆಯ ಸಿಕ್ಕ, ಹರಟೆ ಕೊಚ್ಚಲು, ದಿನಚರಿ ಒಪ್ಪಿಸಲು ಸ್ನೇಹಿತನೊಬ್ಬ ಸಿಕ್ಕ ಸಂಭ್ರಮ, ಸಡಗರಗಳು ಮತ್ತೆ ಮರಳಿ ನನ್ನದಾದವು.

ದಿನಗಳು ಉರುಳಿ ಮಕ್ಕಳಿಬ್ಬರೂ ನನ್ನ ಮೀರಿಸುವಂತೆ ಬೆಳೆದು ನಿಂತರು. ಸುಪ್ರೀತ ಮೈಸೂರಿನ ರಾಮಕೃಷ್ಣ ಆಶ್ರಮ ಸೇರಿದ, ಸುಮುಖ ಊಟಿಯಲ್ಲೇ ಓದು ಮುಂದುವರೆಸಿದ. ಹೀಗಾಗಿ ಗಂಡ- ಮಕ್ಕಳಿಬ್ಬರು ನನ್ನ ಬದುಕಿನಲ್ಲಿ ಅತಿಥಿಗಳಾಗೇ ಉಳಿದರು. ಇವರುಗಳು ಅತಿಥಿಗಳಾದರೆಂದೇ….. ಕರಿಯಪ್ಪ ನನ್ನ ಸಂಗಾತಿಯಾದ. ತೋಟದ ನನ್ನ ಮನೆಗೆ ಹೇಳದೆ ಕೇಳದೆ ಯಾರೂ ಬರುವ ಸಾಹಸ ಮಾಡುತ್ತಿರಲಿಲ್ಲವಾಗಿ ನನ್ನ ಕರಿಯಪ್ಪನ ಸ್ನೇಹ-ಸಂಬಂಧಗಳು ಆತಂಕದಿಂದ ಮುಕ್ತವಾಗಿ ನಿರ್ಭಡೆಯಲ್ಲಿ ಸಾಗಿತ್ತು. ಕರಿಯಪ್ಪ ಬಂದಾಗ ನಾನು ನಾನಾಗಿರುತ್ತಿರಲಿಲ್ಲ, ಮೈ ಮನಗಳೆರಡೂ ನನ್ನ ಅಂಕೆಯಲ್ಲಿರುತ್ತಿರಲಿಲ್ಲ. ಅಂಕೆ-ಅಂಕುಶಗಳು ಇಲ್ಲದಿದ್ದರಿಂದಲೇ.. ನಾನು ಕರಿಯಪ್ಪನ ಬೆಚ್ಚನೆಯ ಅಪ್ಪುಗೆಯಲ್ಲಿದ್ದಾಗೊಮ್ಮೆ ಧುತ್ತನೆ ನನ್ನ ಎರಡನೆಯ ಮಗ ಸುಮುಖ ಬಾಗಿಲಲ್ಲಿ ಬಂದು ನಿಲ್ಲಬೇಕೇ? “ಓ ಜೀಸಸ್” ಭೂಮಿ ಬಾಯಿ ಬಾಯಿಬಿಡಬಾರದೆ? ಕರಿಯಪ್ಪನ ಹಿಡಿತ ಸಡಿಲಾಗಿ ನಾನಲ್ಲೇ ಕುಸಿದೆ, ಕರಿಯಪ್ಪ ಕಂಬಿಕಿತ್ತ. ಮಗ ಸೀದಾ ರೂಮು ಸೇರಿದ. ನನಗೆ ಭಯ, ದುಃಖ ಅವಮಾನಗಳೆಲ್ಲಾ ಸೇರಿ ಮನಸ್ಸು ವಿಚಿತ್ರ ಯಾತನೆಗೆ ಸಿಲುಕಿತು. ಬಿಕ್ಕಿ ಬಿಕ್ಕಿ ಅತ್ತೆ, ಅದೆಷ್ಟೋ ಹೊತ್ತು ಆದ ಮೇಲೆ ಕೊನೆಗೆ ನನ್ನನ್ನು ನಾನೇ ಸಂತೈಸಿಕೊಂಡು ಧೈರ್ಯ ಮಾಡಿ ಮಗನ ರೂಮಿಗೆ ಕಾಲಿಟ್ಟೆ. ಅಂಗಾತ ಮಲಗಿ ನರಳುತ್ತಿದ್ದ ಮಗನ ಮೈಯನ್ನು ಹೆದರುತ್ತಲೇ ಮುಟ್ಟಿದೆ. ಮೈ ಕಾದ ಬಾಣಲೆಯಾಗಿತ್ತು. ಅವನ ಬಳಿ ಕೂತು ಗೊಳೋ ಎಂದು ಅತ್ತೆ, ಅವನೂ ಅತ್ತ, ಜ್ವರದ ನಿತ್ರಾಣದಲ್ಲಿದ್ದ ಮಗನಿಗೆ ಜ್ವರದ ಮಾತ್ರೆಯೊಂದಿಗೆ ನಿದ್ರೆ ಮಾತ್ರೆಯೊಂದನ್ನು ಕೊಟ್ಟು ಬಿಸಿ ಹಾಲನ್ನು ಕುಡಿಸಿದೆ. ಮಗ ನಿದ್ದೆ ಹೋದ ಮೇಲೆ ಒಂಥರ ತಳಮಳ, ಭಯ ಕಾಡತೊಡಗಿತು.

ತಡೆಯಲಾರದೆ ನಾನೇ ಕರಿಯಪ್ಪನಿಗೆ ಫೋನ್ ಮಾಡಿದೆ. ಬಹುಶಃ ನಾನು ಮಾಡಿದ ಘನಘೋರ ತಪ್ಪೆಂದರೆ ಅದು. ಕರಿಯಪ್ಪ ಸರಿ ರಾತ್ರಿ ಮನೆಗೆ ಬಂದ, ಬಂದವ ಬರಿ ಕೈಲಿ ಬರಲಿಲ್ಲ, ಪುಟಾಣಿ ಶೀಷೆಯೊಂದಿಗೆ ಬಂದ. ಮಗನ ರೂಮಿನ ಬಾಗಿಲನ್ನು ಮುಚ್ಚಿ, ಚಿಲಕ ಭದ್ರಪಡಿಸಿ, ಬಂದು ಒಂದೇ ಸಮನೆ ನನ್ನ ತಲೆ ತಿಂದ. “ಸುಮುಖನನ್ನು ಮುಗಿಸದ ಹೊರತು ನಮಗೆ ಬೇರೆ ದಾರಿಯೇ ಇಲ್ಲ, ಈಗ ಅವನು ಮನೆಯಿಂದ ಅಚೆ ಹೋದನೆಂದರೆ ನಮ್ಮಿಬ್ಬರ ಗುಟ್ಟು ರಟ್ಟಾಗುತ್ತದೆ. ಅಲ್ಲಿಗೆ ನಮ್ಮಿಬ್ಬರಿಗೂ ಮತ್ತೆಲ್ಲಿಯ ಬದುಕು? ನಾನೇನೋ ನನ್ನಷ್ಟಕ್ಕೆ ಹೋಗಿ ಬಿಡುವೆ, ನಿನ್ನ ಮಾನ-ಮರ್ಯಾದೆ ಬೀದಿಗೆ ಬೀಳುತ್ತದೆ, ಆಗ ನೀನೇನು ಮಾಡುತ್ತೀ? ನನಗೂ ಹೆಂಡತಿ ಮಕ್ಕಳಿರುವುದರಿಂದ ನಿನ್ನನ್ನು ಮದುವೆ ಆಗುವುದು ಸಾಧ್ಯವೂ ಇಲ್ಲ. ದಯವಿಟ್ಟು ನನ್ನ ಬಗ್ಗೆಯೂ ಯೋಚಿಸು. ನಿನ್ನನ್ನು ನಾನು ಅಗಾಧವಾಗಿ ಪ್ರೀತಿಸುವುದರಿಂದಲೇ… ಈಗ ನೀನು ಕರೆದೆ ಅಂತ ತಡರಾತ್ರಿಯಲ್ಲೂ ಓಡಿಬಂದಿಲ್ಲವಾ? ನಿನ್ನ ಕಷ್ಟ ಸುಖ ಹಂಚಿಕೊಳ್ಳುತ್ತಿಲ್ಲವಾ? ನನ್ನ ಬಗ್ಗೆ ನಿನಗೆ ನಿಜವಾದ ಪ್ರೀತಿಯಿದ್ದರೆ… ಈ ಪ್ರಕ್ಯಕ್ಷ ಸಾಕ್ಷಿಯನ್ನು ಇಲ್ಲವಾಗಿಸಬೇಕು” ಅವನ ಮಾತುಗಳು ನನ್ನೋಳಗೆ ನಡುಕ ತಂದವು, ತಲೆ ಗಿಮ್ಮೆಂದಿತು. “ಇಲ್ಲ ಇಲ್ಲ…. ನನ್ನ ಮಗನನ್ನು ನಾನು ಕೊಲ್ಲುವುದಿಲ್ಲ” ನೆಲದಲ್ಲಿ ಬಿದ್ದು ಹೊರಳಡಿದೆ. “ರೀಟಾ ಸಮಾಧಾನ ಮಾಡಿಕೊ. ನೀನು ಹೀಗೆ ವೃಥಾ ಭಾವುಕಳಾದರೆ ನಾನೇನೂ ಮಾಡಲು ಸಾಧ್ಯವಿಲ್ಲ. ಆದರೆ… ಮುಂದಾಗಬಹುದಾದ ಭೀಕರ ಪರಿಣಾಮವನ್ನು ಎದುರಿಸಲು ಸಿದ್ಧಳಾಗು” “ಅವನ ಬದಲು ನಾನೇ ಸಾಯುತ್ತೇನೆ, ಅವನನ್ನು ಮಾತ್ರ ಕೊಲ್ಲುವುದಿಲ್ಲ” ಅತ್ತು ರಂಪ ಮಾಡಿದೆ. ಕರಿಯಪ್ಪನ ಕಾಲು ಹಿಡಿದು ಗೋಳಾಡಿದೆ. ಆದರೆ ಕರಿಯಪ್ಪ ಬಹಳ ದೃಢವಾಗಿದ್ದ. “ಇದೊಂದೇ ದಾರಿ, ಅನ್ಯಮಾರ್ಗವಿಲ್ಲ” ಎನ್ನುತ್ತಾ, ಜೋನಾಥನ್‌ಗೆ ಗೊತ್ತಾದರೆ ಆಗಬಹುದಾದ ಅನಾಹುತದ ದೃಶ್ಯಗಳನ್ನು ನನ್ನ ಕಣ್ಣಿಗೆ ಕತ್ತಲಡರುವತನಕ ವರ್ಣಿಸಿದ. ಸೈತಾನನಂತೆ ನನ್ನ ಕಾಡಿದ, ಕಾಡೇ ಕಾಡಿದ. “ನಾಳೆ ಬೆಳಿಗ್ಗೆ ಅವ ಎದ್ದಾಗ ಹಾಲಿಗೆ ಈ ಸಯನೈಡ್ ಹನಿಯೊಂದನ್ನು ಮಿಶ್ರಮಾಡು ಮತ್ತೆನನ್ನೂ ನೀನು ಮಾಡಬೇಕಿಲ್ಲ. ಮಿಕ್ಕದ್ದನ್ನು ನನಗೆ ಬಿಡು, ನಾಳೆ ಸಂಜೆ ಬರುತ್ತೇನೆ, ಅರ್ಥವಾಯಿತಲ್ಲ?” ಹತ್ತು ಸಲವಾದರೂ ಹೇಳಿದ ಅನ್ನಿಸುತ್ತದೆ, ಹೊರಡುವ ಮುನ್ನ ನನ್ನ ಕೈ ಮೇಲೆ ಆಣೆ ಇಟ್ಟು “ಇದು ಜೀಸಸ್ ಮೇಲಾಣೆ” ಎಂದು ಹೇಳಿ ಹೊರಟು ಹೋದ.

ಅವನೊಳಗಿನ ಸೈತಾನ ನನ್ನೊಳಗೆ ಹೊಕ್ಕ ಇಡೀ ರಾತ್ರಿ ಮಗನ ಪಕ್ಕದಲ್ಲೇ ಕುಳಿತ್ತಿದ್ದೆ. ನಡು ನಡುವೆ ಬೆಚ್ಚುತ್ತಾ ಬೆದರುತ್ತಾ ಸೂರ್ಯ ಮೂಡುವುದರೊಳಗೆ ಅರೆ ಹುಚ್ಚಿಯಾದೆ. ಬೆಳಿಗ್ಗೆ “ಅಮ್ಮಾ” ಎಂದು ನರಳುತ್ತಾ ಮಗ ಎಚ್ಚರಾದ. ತಲೆಯೊಳಗಿನ ಸೈತಾನನ ಆದೇಶದಂತೆ ಕರಿಯಪ್ಪನ ಸಂಮೋಹಿನಿಗೆ ಒಳಗಾದವಳಂತೆ ಹಾಲಿಗೆ ಸಯನೈಡ್ ಮಿಶ್ರಮಾಡಿ ಮಗನಿಗೆ ಕುಡಿಸಿಯೇ ಬಿಟ್ಟೆ. “ನನ್ನ ಹೊಟ್ಟೆಯಲ್ಲಿ ಹುಟ್ಟಿದ ತಪ್ಪಿಗೆ ಇದೇ ನನ್ನ ಗಿಷ್ಟ್” ಅಂದುಕೊಂಡೆ. ಕೈಗಳು ಅದುರು ರೋಗ ಬಂದಂತೆ ನಡುಗುತ್ತಲೇ ಇದ್ದವು ಸುಮುಖ ಮತ್ತೆ ಅಮ್ಮ ಎನ್ನಲಿಲ್ಲ. ನೋಡ ನೋಡುತ್ತಾ ಚಿರಶಾಂತಿಗೆ ಸಂದು ಬಿಟ್ಟ! ಆಗ…. ಆಗ ತಲೆಯೊಳಗೆ ದಿಗ್ಗನೆ ದೀಪ ಹೊತ್ತಿದಂತೆ ಎಚ್ಚರವಾಯಿತು. “ಓ ಜೀಸಸ್. ನಾನೇನು ಮಾಡಿಬಿಟ್ಟೆ? ತಲೆ ತಲೆ ಚಚ್ಚಿಕೊಂಡೆ ಹುಚ್ಚಿಯಂತೆ ಮಗನ ಮೇಲೆ ಬಿದ್ದು ಹೊರಳಾಡಿದೆ.

ಅಂದು ಸಂತೆಯ ದಿನವಾದುದರಿಂದ ಆಳುಗಳು ಕೆಲಸಕ್ಕೆ ಬರಲಿಲ್ಲ. ನನ್ನನ್ನು ಅಳಬೇಡ ಎನ್ನುವರು. ಹೀಗೇಕೆ ಮಾಡಿದೆ ಎಂದು ಕೆನ್ನೆಗೆ ಬಾರಿಸಿ ಆಕ್ರೋಶ ತೋರಿಸುವವರು ಯಾರೂ ಇರಲಿಲ್ಲ. ದಿಗ್ಭ್ರಾಂತತಳಾಗಿ ದೆವ್ವ ಹಿಡಿದವಳಂತೆ ಕಲ್ಲಾಗಿ ಕೂತಿದ್ದವಳಿಗೆ ಬೆಳೆಗು ಮುಗಿದು ಸಂಜೆಯಾದದ್ದು, ಕರಿಯಪ್ಪ ಬಂದಾಗಲೇ ತಿಳಿದದ್ದು.

ನನ್ನ ಪೈಶಾಚಿಕ ಕೃತ್ಯಕ್ಕೆ ಶಬ್ಬಾಸ್‌ಗಿರಿ ಕೊಟ್ಟು ಗುದ್ದಲಿ ಹಿಡಿದುಕೊಂಡು ಬಿದಿರುಮೆಳೆಯತ್ತ ನಡೆದ. ಒಂದೂವರೆ ಗಂಟೆಯ ನಂತರ ಬೆವರು ಸುರಿಸುತ್ತಾ ಬಂದ ಕರಿಯಪ್ಪ ಸುಮುಖನ ಹೆಣವನ್ನು ಹಾಸಿಗೆ ಮೇಲಿದ್ದ ಬೆಡ್‌ಶೀಟ್‌ನೊಂದಿಗೆ ಸುತ್ತಿದ, ಅವನ ಶೂಗಳನ್ನು ಅದರಲ್ಲಿ ಸೇರಿಸುವುದನ್ನು ಮರೆಯಲಿಲ್ಲ. ಕರಿಯಪ್ಪ ಬೇತಾಳನಂತೆ ಹೆಣವನ್ನು ಹೊತ್ತು ನಡೆದ. ನಾನು ಹುಚ್ಚಿಯಂತೆ ಅಳುತ್ತಾ ಅವನನ್ನು ಹಿಂಬಾಲಿಸಿದೆ. ನಾನು ಹೆತ್ತ, ನಾನು ಕೊಂದ ಕರುಳ ಕುಡಿಯನ್ನು ಗುಂಡಿಯಲ್ಲಿಟ್ಟು ಮಣ್ಣು ಮುಚ್ಚಿದೆವು. ಇದಕ್ಕಿಂತ ಕರುಣಾಜನಕ, ಹೃದಯ ವಿದ್ರಾವಕ ಸ್ಥಿತಿ ಯಾವ ತಾಯಿಗೂ ಬಾರದಿರಲಿ “ಓ ಜೀಸಸ್, ನನ್ನ ನಿಷ್ಕರುಣಿ ಮುದ್ದು ಮಗನನ್ನು ನಿನ್ನ ತೋಳತೆಕ್ಕೆಗೆ ತೆಗೆದುಕೋ, ನಿನ್ನಲ್ಲಾದರೂ ಅವನಿಗೆ ಸುಖ ಶಾಂತಿಗಳು ಸಿಗಲಿ” ನನ್ನ ಪ್ರಾರ್ಥನೆ ಮುಗಿಯುವ ಮೊದಲೇ ಕರಿಯಪ್ಪ ನನ್ನನ್ನು ಅಲ್ಲಿಂದ ಹೊರಡಿಸಿದ. ಕರಿಯಪ್ಪ ಸ್ನಾನ ಮಾಡಿ ಸೂತಕ ಕಳೆದುಕೊಂಡು ಬಿಟ್ಟ. ಆದರೆ ನಾನು? ಭೀಕರ ಪಾಪಪ್ರಜ್ಞೆಯಲ್ಲಿ ಮಹಾ ಯಾತನೆಗೆ ಸಿಕ್ಕಿ ನರಳತೊಡಗಿದೆ. ನನ್ನ ಬದುಕಿನ ಕರಾಳ ಅಧ್ಯಾಯ ಒಂದು ಕೊನೆಗೊಂಡಿತು ಅಂತ ನೀವು ತಿಳಿದಿರೇನು? ಖಂಡಿತಾ ಇಲ್ಲ, ಕರಾಳ ಅಧ್ಯಾಯ ಈಗ ಪ್ರಾರಂಭವಾಯಿತು. ನಮ್ಮ ಪಾಪ ಕೃತ್ಯ ಕಳೆದು ಕೆಲವು ತಾಸುಗಳಾಗಿರಲಿಲ್ಲ. ಆಗಲೇ ಫೋನ್ ಟ್ರಿನ್ ಟ್ರಿನ್ ಎಂದಿತು. ಅತ್ತ ಗಂಡನ ದನಿ ಮೈ ನಡುಗತೊಡಗಿತು. ಜೋಲಿ ತಪ್ಪಿದ ನನ್ನನ್ನು ಕರಿಯಪ್ಪ ಹಿಡಿದುಕೊಂಡ, “ರೀಟಾ ಹೇಗಿದ್ದೀಯಾ? ಊಟ ಆಯ್ತಾ? ನಾನು ಉತ್ತರಿಸುವಷ್ಟರಲ್ಲಿ “ಸುಮುಖನಿಗೆ ಕೊಡು” ಎಂದರು. ಮತ್ತೆ ತಲೆ ಗಿರ್ ಎಂದಿತು, ಗಂಟಲು ಕಟ್ಟಿತು. ಕರಿಯಪ್ಪ “ಇಲ್ಲಿಗೆ ಬಂದಿಲ್ಲ ಅನ್ನು” ಅಂತ ಕೈಸನ್ನೆ ಮಾಡಿದ. “ಇಲ್ಲ ಅವನಿಲ್ಲಿಗೆ ಬಂದಿಲ್ಲ” ಎಂದದ್ದು ನನ್ನ ದನಿಯಾಗಿರಲಿಲ್ಲ. ನನ್ನೊಳಗಿದ್ದ ಪಿಶಾಚಿಯ ದನಿಯಾಗಿದ್ದಿರಬಹುದು. “ಯಾಕೆ ಗಂಟಲಿಗೇನಾಗಿದೆ” “ಹುಷಾರಿಲ್ಲ” “ಸರಿ ಸರಿ ಯಾವುದಾದರೂ ಔಷಧಿ ತಗೋ, ಊಟಿಗೆ ಫೋನ್ ಮಾಡಿದ್ದೆ, ನಿನ್ನೆಯೇ ಮನೆಗೆ ಹೋದ ಅಂದರು, ಅಲ್ಲಿಗೆ ಬಂದಿಲ್ಲವೆಂದರೆ ಮೈಸೂರಿಗೆ ಹೋಗಿರಬಹುದು, ನಾನು ವಿಚಾರಿಸುತ್ತೇನೆ, ನೀನೇನು ಗಾಬರಿಯಾಗಬೇಡ” ಫೋನ್ ಇಟ್ಟು ಮತ್ತೆ ಗೋಳೋ ಎಂದೆ, “ಓ ಜೀಸಸ್ ನನ್ನ ತಂದೆಯೆ, ನನ್ನನ್ನೇಕೆ ಸೃಷ್ಟಿಸಿದೆ? ನನ್ನನ್ನು ಏಕೆ ಇಂತಹ ಪಾಪ ಕೃತ್ಯಕ್ಕೆ ಪ್ರರೇಪಿಸಿದೆ?” ಹುಚ್ಚಿಯಾದೆ. ಕರಿಯಪ್ಪ ತನ್ನ ಎದೆಗಾನಿಸಿಕೊಂಡು ಸಮಧಾನಿಸಿದ. “ಈಗ ಆದದ್ದೆಕ್ಕೆಲ್ಲಾ ಐಯಾಮ್ ವೆರಿ ವೆರಿ ಸಾರಿ. ನಾನು ಸಾರಿ ಎಂದಾಕ್ಷಣ ನಿನಗಾಗಿರುವ ಅನ್ಯಾಯ ಸರಿಪಡಿಸಲಾಗುವುದಿಲ್ಲ. ಆದರೆ ರೀಟಾ ಇದು ಬಿಟ್ಟು ನಮಗೆ ಬೇರೆ ದಾರಿಯೇ ಇರಲಿಲ್ಲ. ನಾನು ನನ್ನಷ್ಟಕ್ಕೆ ಹೊರಟು ಹೋಗಬಹುದಿತ್ತು, ಆದರೆ ನನ್ನ ಪ್ರೀತಿಯ ರೀಟಾಳನ್ನು ನಡು ನೀರಿನಲ್ಲಿ ಬಿಟ್ಟು ಹೋಗುವಷ್ಟು ಕ್ರೂರಿ ನಾನಲ್ಲ. ನಿನ್ನ ಸಂತೋಷ ಹಂಚಿಕೊಂಡಂತೆ, ನಿನ್ನ ಕಷ್ಟವನ್ನು ಹಂಚಿಕೊಳ್ಳಬಯಸುವೆ. ಐ ಲವ್ ಯು ರೀಟಾ, ಈಗ ಆದದ್ದೆಲ್ಲಾ ಕೆಟ್ಟ ಕನಸು ಎಂದುಕೊಂಡು ಮರೆತು ಬಿಡು, ನಿನ್ನ ಗಂಡನೆದುರು ಏನೂ ಗೊತ್ತಿಲ್ಲದವಳಂತೆ ನಟಿಸಿಬಿಡು, ಮಗನನ್ನೇ ಕೊಲ್ಲುವ ಧೈರ್ಯ ಮಾಡಿದ ನಿನಗೆ ಅವ ಬಂದಿಲ್ಲ ಅಂತ ಸಾಧಿಸಲು ಅಷ್ಟೇನೂ ಕಷ್ಟವಾಗಲಾರದು” ನೇರವಾಗಿ ನನ್ನೆದೆಗೆ ಚೂರಿ ಹಾಕಿ ತಿರುಚಿದ ಕರಿಯಪ್ಪ “ಬಹುಶಃ ನಾಳೆ ನಾಡಿದ್ದರಲ್ಲಿ ನಿನ್ನ ಗಂಡ ಬಂದರೂ ಬರಬಹುದು, ಬಿ ಕೇರ್‌ಫುಲ್” ಸಮಾಧಾನಿಸಿ ಸಂತೈಸಿ ಹೊರಟುಹೋದ.

ಎರಡು ಗಂಡು ಮಕ್ಕಳ ತಾಯಿಯಾಗಿ ಜಮೀನ್ದಾರಿಣಿಯ ಜವಾಬ್ದಾರಿಯನ್ನು ಅನಿವಾರ್ಯವಾಗಿ ಹೊತ್ತುಕೊಂಡು ಬಿಟ್ಟೆ. ಕಾಲ ಯಾರನ್ನೂ ಕೇಳದೆ ಓಡುತ್ತಿತ್ತು. ಓಡೇ ಓಡಿತು, ಓಡೇ ಓಡಿತು. ಓಡುವ ಕಾಲ ನನ್ನ ಬಳಿ ಕೂತು ನಿನಗೆ ಬೇಜಾರ? ನಿನ್ನನ್ನು ಒಂಟಿತನ ಕಾಡುತ್ತಾ? ನಿನಗೆ ಏನು ಬೇಕು? ಏನು ಬೇಡ? ಎಂದು ಕೇಳುವ, ವಿಚಾರಿಸಿಕೊಳ್ಳುವ ಸೌಜನ್ಯವನ್ನು ತೋರಲಿಲ್ಲ. ಅದು ನನ್ನನ್ನು ದಿವ್ಯವಾಗಿ ನಿರ್ಲಕ್ಷಿಸಿತು. ಗಂಡನಂತೂ ಇದನ್ನೆಲ್ಲಾ ಎಂದೂ ಕೇಳಲಿಲ್ಲವೆಂಬುದು ಬೇರೆ ಮಾತು

ಕರಿಯಪ್ಪ ಭವಿಷ್ಯ ನುಡಿದಂತೆ ಮಧ್ಯಾಹ್ನಕ್ಕೆ ನನ್ನ ಗಂಡ ಬಂದಿಳಿದ, ಮಗನ ಕಣ್ಮರೆಯಿಂದ ನಾನು ಕಂಗಾಲಾಗಿರಬೇಕೆಂದು ತಿಳಿದು ನನ್ನನ್ನು ಸಮಾಧಾನಿಸಿಯೆ ಸಮಾಧಾನಿಸಿದ. ನನಗೆಲ್ಲಿಯ ಸಮಾಧಾನ? ಅವನ ಗೆಳೆಯರ ಮನೆಗೆಲ್ಲಾ ಹೋಗಿ ಬಂದದ್ದಾಯಿತು. ಪೊಲೀಸರಿಗೆ ದೂರು ನೀಡಿದ್ದೂ ಆಯಿತು. ಗಂಡನ ಹಿಂದೆಯೇ ಬಂದ ಸುಪ್ರೀತನೂ ಹತಾಶೆಯಲಿ ಸುತ್ತಾಡಿದ, ಇಬ್ಬರೊಡನೆಯೂ ನಾನು ತುಟಿಯೊಡೆಯಲಿಲ್ಲ. ಎಲ್ಲವೂ ಯಾಂತ್ರಿಕವಾಗಿ ಸಾಗಿತು. ಮೂರು ದಿನದ ನಂತರ ಇಬ್ಬರೂ ನಿರಾಶೆಯಲ್ಲಿ ವಾಪಸ್ಸು ಹೋದರು.

ಸಧ್ಯ ನನ್ನ ಪಾಪದ ವಾಸನೆಯು ಅವರಿಗೆ ತಟ್ಟಲಿಲ್ಲ ಅಂತ ಸಮಾಧಾನವಾಯಿತಾದರೂ…….. ನನಗೆಲ್ಲಿಯ ಸಮಾಧಾನ? ಕೂತರೆ ನಿಂತರೆ ಸುಮುಖನ ಭೂತ ನನ್ನ ಕಾಡಿ ಕಂಗೆಡಿಸತೊಡಗಿತು. ಒಬ್ಬಳೇ ಇರುವುದು ಅಸಾಧ್ಯವೆನಿಸಿತು. ಸುಮುಖ ಪ್ರಪಾತಕ್ಕೆ ಬೀಳುತ್ತಿರುವಂತೆಯೂ, ತನ್ನ ಜೊತೆಗೆ ನನ್ನ ಕೈ ಹಿಡಿದು ಎಳೆಯುತ್ತಿರುವಂತೆಯೂ ಭಾಸವಾಗಿ ಬೆಚ್ಚಿ ಬೀಳುತ್ತಿದ್ದೆ. ದುಗುಡ ತಡೆಯಲಾಗದೆ ನಾನಾಗಿಯೇ ಮತ್ತೊಮ್ಮೆ ಕರಿಯಪ್ಪನಿಗೆ ಫೋನಾಯಿಸಿ ನನ್ನ ಗೋರಿಯನ್ನು ನಾನೇ ತೋಡಿಕೊಂಡೆ. ಎಂದಿನಂತೆ ಹಾಲಿನ ಸೋಫಾದ ಮೇಲೆ ಕರಿಯಪ್ಪ ಅವನ ತೊಡೆಯ ಮೇಲೆ ತಲೆಯಿಟ್ಟು ಬಿಕ್ಕುತ್ತಿದ್ದೆ, ನನ್ನ ತಲೆ ತಟ್ಟುತ್ತಾ ಕರಿಯಪ್ಪ ಸಮಾಧಾನಿಸುತ್ತಿದ್ದ. ದಡಕ್ಕನೆ ಬಾಗಿಲು ತೆರೆದುಕೊಂಡಿತು. ಬಾಗಿಲಲ್ಲಿ ನನ್ನ ಗಂಡ ಜೋನಾಥನ್! ಗರ ಬಡಿದವನಂತೆ ಕ್ಷಣ ನಿಂತು ಒಳಗೆ ಅಡಿಯಿಡದೆ ಹೊರ ನಡೆದೇ ಬಿಟ್ಟ. ಆ ಮೇಲೆ ಕರಿಯಪ್ಪನೂ ಹೋದ. ನಾನು ಮಾತ್ರ ಜೀವಂತ ಶವದಂತೆ ಜಡವಾಗಿ ಉಳಿದೆ. ಇನ್ನು ಗಂಡನಿಗೆ ಮುಖ ತೋರಿಸುವುದು ಸಾಧ್ಯವೇ ಇಲ್ಲ. ಇಲ್ಲಿಗೆ ನನ್ನ ಬದುಕೆಂಬ ನಾಟಕಕ್ಕೆ ತೆರೆಬಿತ್ತು. ಬದುಕನ್ನು ಮುಗಿಸುವ ನಿಶ್ಚಯಕ್ಕೆ ಬಂದವಳೇ… ಇದೋ ಈ ಪತ್ರ ಬರೆಯುತ್ತಾ ಕೂತೆ, ನಡು ನಡುವೆ ಏನೋ ನೆನಪು, ನೋವು, ವಿಷಾದ, ಹತಾಶೆ, ಅಸಹನೆಯ ಭಾವಗಳು ಒಂದಾದ ಮೇಲೊಂದರಂತೆ ಮೂಡಿ ನನ್ನ ಹಿಂಡಿ ಹಿಪ್ಪೆ ಮಾಡುತ್ತಿವೆ. ರಾತ್ರಿ ಕಳೆದು ಹಗಲಾದದ್ದು ನನ್ನ ಗಮನಕ್ಕೆ ಬಾರಲೇ ಇಲ್ಲ. ಸಾಲೊಂದನ್ನು ಬರೆದು ಮತ್ತೊಂದು ಸಾಲಿಗಾಗಿ ಕಾಯುತ್ತಾ ಕೂತೆ, ಗೇಟು ಸದ್ದಾದದ್ದು ಕೇಳಿಸಿತು. ನನ್ನ ಬದುಕಿನ ಎರಡು ಮಹಾಪಾತಕಗಳು ಘಟಿಸುವಾಗ ಸದ್ದಾಗದಿದ್ದ ಗೇಟು ಇಂದು ಸದ್ದು ಮಾಡಿತು. ಕಿಟಕಿಯಲ್ಲಿ ಇಣಕಿದೆ, ನನ್ನ ಗಂಡ ಮತ್ತು ಮಗ ಸುಪ್ರೀತ! ಕೂಡಲೇ ಈ ಹಾಳೆಗಳನ್ನು ಹಾಸಿಗೆಯ ಕೆಳಗಿಟ್ಟು ಮಲಗಿಕೊಂಡಂತೆ ನಟಿಸಿದೆ. ಇಬ್ಬರೂ ಮನೆಯೊಳಗೆ ಬಂದರೂ ನನ್ನ ಬಳಿ ಬರಲಿಲ್ಲ. ಕೆಲ ಕ್ಷಣಗಳ ನಂತರ ಅವರಿಬ್ಬರೂ ಮನೆಯಿಂದ ಹೊರ ನಡೆದರು. ಟಾಮಿಯನ್ನು ಕೂಗಿ ಕರೆದರು. ಟಾಮಿ ಅವರನ್ನು ಬಿದಿರು ಮೆಳೆಯತ್ತ ಕರೆದೊಯ್ಯುತ್ತಿದೆ, ಇನೇನು ಕೆಲವೇ ನಿಮಿಷಗಳಲ್ಲಿ ನನ್ನ ಪಾಪದ ಗುಟ್ಟು ಸ್ಫೋಟಗೊಳ್ಳಲಿದೆ. ಇನ್ನು ತಡಮಾಡಬಾರದು, “ಓ ದೇವರೇ ನನ್ನಂತಹವಳಿಗೆ ಮರುಜನ್ಮವನ್ನು ದಯವಿಟ್ಟು ಕೊಡಬೇಡ, ಓ ಜೀಸಸ್ ಕರುಣಾಮಯನಾದ ತಂದೆ ಏಸುವೆ, ಎಲ್ಲರನ್ನೂ ಕ್ಷಮಿಸಿ ಒಪ್ಪಿಕೊಳ್ಳುವ ದಯಾಮಯನಾದ ಸ್ವಾಮಿಯೇ ಅರಿಯದೆ ತಪ್ಪು ಮಾಡಿದ ಈ ಪಾಪಿ ಮಗಳನ್ನು ಕ್ಷಮಿಸು, ದಯವಿಟ್ಟು ಕ್ಷಮಿಸು. ದಯವಿಟ್ಟು ಮನ್ನಿಸು, ತಪ್ಪು ಒಪ್ಪಿಕೊಂಡು ಪಶ್ಚಾತಾಪ ಪಡುತ್ತಿರುವ ಈ ನಿನ್ನ ಮಗಳನ್ನು ನಿನ್ನ ತೋಳತೆಕ್ಕೆಗೆ ತೆಗೆದುಕೋ, ಓ ಕರ್ತೃವೇ” ಪ್ರಾರ್ಥಿಸಿ, ಇದೋ ಸಯನೈಡ್ ಮೊರೆ ಹೋಗುತ್ತಿರುವೆ, ನಿಮಗಿದೋ ಕೊನೆಯ ನಮಸ್ಕಾರ!

*****

ನನ್ನ ಪ್ರೀತಿಯ ಮಡದಿ ರೀಟಾ ಕರಿಯಪ್ಪನ ತೊಡೆಯ ಮೇಲೆ! ನಾನೆಂದೂ ಕಲ್ಪಿಸಿಕೊಳ್ಳಲಾಗದ ದೃಶ್ಯವದು. ನಾನೇ ಪರಿಚಯಿಸಿದ ಕರಿಯಪ್ಪ ನನ್ನ ಹೆಂಡತಿಯನ್ನೇ ಮೋಹಪರವಶ ಪಡಿಸಿಕೊಳ್ಳಬಹುದೆಂಬ ಕಿಂಚಿತ್ ಅನುಮಾನವೂ ನನಗೇಕೆ ಬರಲಿಲ್ಲ? ಓ ಜೀಸಸ್, ರೀಟಾಗೆ ನಾನೇನು ಕಡಿಮೆ ಮಾಡಿದ್ದೆ ನೂರು ಎಕರೆ ಜಮೀನಿನ ಒಡೆತನ. ಅವಳು ಬಯಸುವ ಸಕಲ ಸೌಭಾಗ್ಯವನ್ನೂ ಅವಳ ಕಾಲಬುಡದಲ್ಲಿ ತಂದು ಸುರಿಯುತ್ತಿದ್ದೆ. ಅದರೂ ರೀಟಾ ಹೀಗೇಕೆ ಮಾಡಿದಳು? ನನಗೇಕೆ ಇಂತಹ ಅವಮಾನ ಮಾಡಿದಳು? ಮನೆಯ ಮಾನ- ಮರ್ಯಾದೆಯನ್ನು ಹರಾಜು ಹಾಕಿ ಮನೆತನದ ಗೌರವ-ಅಂತಸ್ತುಗಳನ್ನು ಗಾಳಿಗೆ ತೂರಿಬಿಟ್ಟಳು. ಕ್ಷಣ ಮಾತ್ರವೂ ನನಗಲ್ಲಿ ನಿಲ್ಲಲಾಗಲಿಲ್ಲ. ನಾನು ಕಂಡ ದೃಶ್ಯ ಸತ್ಯವೋ ಅಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳವುದು ನನಗೆ ಬೇಕಿರಲಿಲ್ಲ. ನನಗೆ ಕಂಡದ್ದು, ನನ್ನ ಕಣ್ಣಿನೊಳಕ್ಕೆ ಇಳಿಯುವ ಮೊದಲೇ….. ಅಲ್ಲಿಂದ ಓಡಿ ಬಂದಿದ್ದೆ. ಅದನ್ನು ಸಹಿಸಿಕೊಳ್ಳಲಾರದೆ ಓಡಿ ಬಂದನೋ, ಎದುರಿಸಲಾಗದೆ ಹೇಡಿಯಂತೆ ಓಡಿ ಬಂದೆನೋ….. ಗೊತ್ತಿಲ್ಲ, ಏನನ್ನೂ ಯೋಚಿಸಲಾಗದೆ ಬಂದ ಟ್ಯಾಕ್ಸಿಯಲ್ಲೇ ಮತ್ತೆ ಮೈಸೂರಿಗೆ ಹಿಂದಿರುಗಿ ಬಂದಿದ್ದೆ, ಸುಮುಖನ ಸುಳಿವು ಸಿಗದೆ ಕಂಗಾಲಾಗಿದ್ದ ನನಗೆ ರೀಟಾ ಕರಿಯಪ್ಪರ ಪ್ರಸಂಗ ಬರಸಿಡಿಲನ್ನೆರಗಿಸಿತು.

ಬಾಂಬೆಯಲ್ಲಿ ಇಡೀ ವಾರ ಕಛೇರಿಯ ಬಿಗಿ ವಾತಾವರಣದಿಂದ ನನಗೆ ಬಿಡುಗಡೆ ಬೇಕಾಗುತ್ತಿತ್ತು. ಮೈ-ಮನಸುಗಳೆರಡೂ ರಿಲಾಕ್ಸ್ ಬಯಸುತ್ತಿದ್ದವು. ಹೀಗಾಗಿ ಗೆಳತಿ ಲಕ್ಷ್ಮಿಯ ಸಹವಾಸ ಅನಿವಾರ್ಯವಾಗಿತ್ತು. ಆದರೆ ನನ್ನ ರೀಟಾಗೆ ಏನಾಗಿತ್ತು? ನಾನವಳಿಗೆ ಏನು ಕಡಿಮೆ ಮಾಡಿದ್ದೆ? ನನ್ನ ಪ್ರೀತಿಯ ರೀಟಾ ಹೀಗೆ ಮಾಡಬಹುದು ಅಂತ ನನಗೆ ಹೊಳೆಯಲಿಲ್ಲವೇಕೆ?.. ಯೋಚಿಸುವುದರಲ್ಲಿ ಮೈಸೂರಿನ ರಾಮಕೃಷ್ಣಾಶ್ರಮ ತಲುಪಿದ್ದೆ. ನನ್ನ ಕಂಗಾಲಾದ ಮುಖ ಕಂಡು ಹೆದರಿದ ಸುಪ್ರೀತ “ಏನಪ್ಪಾ ಎನಿ ನ್ಯೂಸ್?” ತಲೆ ಅಲ್ಲಾಡಿಸುತ್ತಾ ಅವನನ್ನೂ ಕರೆದುಕೊಂಡು ಹೋಟೆಲ್ ಒಂದರಲ್ಲಿ ರೂಮು ತೆಗೆದುಕೊಂಡೆ, ಮಗನನ್ನು ತಬ್ಬಿಕೊಂಡು ಬಿಕ್ಕಿಬಿಕ್ಕಿ ಅತ್ತೆ, ತಬ್ಬಿಬ್ಬಾದ ಮಗ “ಸಮಾಧಾನ ಮಾಡಿಕೋ ಅಪ್ಪ, ವಿಷಯ ಎನು ಅಂತ ಹೇಳು, ಎನಿ ಬ್ಯಾಡ್ ನ್ಯೂಸ್?”

“ಆಹಾಂ ಒಂಥರಾ ಕೆಟ್ಟ ಸುದ್ದಿನೆ” “ಏನದು” ಸುಪ್ರೀತ ಉದ್ವೇಗಗೊಂಡ. “ನಿಮ್ಮಮ್ಮ….. ಬೇರೆಯವರ ಜೊತೆ ಇದ್ದದ್ದನ್ನು ಕಂಡೆ”. ಮಗನಿಗೆ ಹೇಳ ಬೇಕೊ ಹೇಳಬಾರದೋ ಕ್ಷಣ ಮಾತ್ರವೂ ಯೋಚಿಸದೆ ಹೇಳಿಯೇ ಬಿಟ್ಟೆ. ಮೂಕನಾದ ಮಗ ತಲೆ ಕೆಳಹಾಕಿ ಕೂತು ಬಿಟ್ಟ. ನಾನು ಮನದಲ್ಲೇ ಕರಿಯಪ್ಪನ ಮೇಲೆ ಕೋಪಗೊಂಡೆ, ರೀಟಾಳ ಮೇಲೆ ಸಿಡಿಮಿಡಿಗೊಂಡೆ. ಕೋಪ, ಅಸಹನೆ, ಅವಮಾನಗಳು ಒಂದರ ಹಿಂದೆ ಒಂದರಂತೆ ಮೂಡತೊಡಗಿದವು, ಇವರಿಬ್ಬರ ಚಾಳಿ ತಿಳಿದ ಸುಮುಖ ದೇಶಾಂತರ ಏನಾದರು ಹೋಗಿಬಿಟ್ಟನಾ? ಎಂಬ ಯೋಚನೆಯ ಅಲೆಯೊಂದು ತೇಲಿ ಬಂತು. ನಾನು ಊರಿಗೆ ಹೋಗದಿರೆ, ಆ ದೃಶ್ಯ ನನ್ನ ಕಣ್ಣಿಗೆ ಬೀಳದಿದ್ದರೆ ಚೆನ್ನಾಗಿತ್ತು. ಮಗನ ಕಣ್ಮರೆಯಿಂದ ಕಂಗಾಲಾಗಿರುತ್ತಾಳೆಂದುಕೊಂಡು ಪಾಪ ಅಂತ ಬಂದರೆ, ಅವಳೇ ನನ್ನನ್ನು ಕಂಗಾಲಾಗಿಸಿದಳು.

ಮನಸ್ಸು ಜರ್ಝರಿತಗೊಂಡಿತು. ಮಗ ತನ್ನಷ್ಟಕ್ಕೆ ತಾನು ಬಿಕ್ಕುತ್ತಿದ್ದ, ತಲೆಯೊಳಗೆ ಚಿಂತೆಯ ಹುಳು ಕೊರೆಯುತ್ತಿತ್ತು. ಇದ್ದಕ್ಕಿದ್ದಂತೆ ಎನೋ ಹೊಳೆದಂತಾಗಿ ಎದ್ದು ಕೂತೆ. ಅಂದು ಸುಮುಖ ಕಾಣೆಯಾದನೆಂದು ಊರಿಗೆ ಹೋದ ದಿನ ಟಾಮಿ ನನ್ನ ಪ್ಯಾಂಟ್ ಹಿಡಿದು ಜಗ್ಗುತ್ತಾ ಅದೆಲ್ಲಿಗೋ ಕರೆಯಿತು. ಮಗ ಕಾಣದ ಆತಂಕದಲ್ಲಿದ್ದ ನಾನು ಟಾಮಿ ಕರೆದಲ್ಲಿಗೆ ಹೋಗುವ ಮನಸ್ಥಿತಿಯಲ್ಲಂತೂ ಇರಲಿಲ್ಲ. ಆದರೆ ಈಗ ಆನೋ ಅನ್ನಿಸುತ್ತಿದೆ, ಬಹುಶಃ ಟಾಮಿ ನನಗೆ ಏನೋ ಹೇಳ ಬಯಸುತ್ತಿತ್ತು ಅಂತ. ಆ ಯೋಚನೆ ಬಂದದ್ದೇ ಚಡಪಡಿಕೆ ಶುರುವಾಯ್ತು. ನಿದ್ರೆ ಮಾತ್ರೆ ನುಂಗಿಯೂ ಇಡೀ ರಾತ್ರಿ ನಿದ್ರೆ ಮಾಡದೆ ಕಳೆದೆ.

ಬೆಳಗಾಗುತ್ತಲೇ… ಮಗನನ್ನು ಆತುರಾತುರವಾಗಿ ಹೊರಡಿಸಿಕೊಂಡು ಟ್ಯಾಕ್ಸಿಯಲ್ಲಿ ಊರಿಗೆ ಹೊರಟೇ ಬಿಟ್ಟೆ. ರೀಟಾಳ ದ್ರೋಹ, ವಂಚನೆಗಳೊಂದಿಗೆ ಈಗ ಸುಮುಖನೂ ಹೊಕ್ಕು ತಲೆಯಲ್ಲಿ ಅಗ್ನಿಪರ್ವತ ಸ್ಪೋಟಗೊಂಡಿತು.

ಅಪ್ಪ-ಅಮ್ಮ ಸತ್ತಾಗಲೂ ಇಂತಹ ತಳಮಳ, ಸಂಕಟಗಳು ಆಗಿರಲಿಲ್ಲ. “ಜೀಸಸ್ ಮತ್ತೇನು ಕಾದಿದೆಯೋ”….ತಳಮಳ, ವಿಚಿತ್ರ ಸಂಕಟ, ದುಃಖ, ಅಸಹನೆಗಳೆಲ್ಲಾ ಕಲೆಸಿಕೊಂಡ ಮನಸ್ಥಿತಿಯಲ್ಲೇ ಕೋಟೆ ತಲುಪಿದೆವು.

ಎಂದಿನಂತೆ ಮುಚ್ಚಿದ ಬಾಗಿಲನ್ನು ತಳ್ಳಿದೆ, ರೂಮಿನ ಬಾಗಿಲೂ ತೆರೆದಿತ್ತು. ರೀಟಾ ಮಲಗಿದ್ದು ಕಂಡಿತು. ಅವಳನ್ನು ನೋಡಿಯೂ ನೋಡದಂತೆ ಒಳ ನಡೆದೆವು. ಟಾಯ್ಲೆಟ್ ಹೋಗಿ ಹೊರ ಬಂದದ್ದೇ ಟಾಮಿಯನ್ನು ಕೂಗಿಕರೆದೆ. ಅದು ಪುನಃ ಅಂದು ಮುಖ ಮಾಡಿದ್ದತ್ತಲೇ ಇಂದೂ ಕರೆಯಿತು. ಸೀದಾ ಬಿದಿರುಮೆಳೆಯತ್ತ ಕರೆದೊಯ್ಯಿತು. ನೆಲವನ್ನು ಕಾಲಿಂದ ಕೆರೆಯಿತು, ನನ್ನ ತಳಮಳದ ಕಾರಣ ಅರ್ಥವಾಗಿ ಬಿಟ್ಟಿತು. ನಾನು ಸುಪ್ರೀತ ಮಣ್ಣನ್ನು ತೆಗೆದೆವು. ಸಡಿಲಗೊಂಡಿದ್ದ ಮಣ್ಣು ನಿರಾಯಾಸವಾಗಿ ಬರುತ್ತಿತ್ತು. ಮಣ್ಣಿನೊಡನೆ ಬಂದ ಸುಮುಖನ ಶೂ ಮೊದಲಿಗೆ ಕಂಡಿತು. ನಂತರ ಆಗಲೇ ಗೆದ್ದಲು ಹತ್ತಿದ್ದ ಅವನ ದೇಹ. “ಓ ಜೀಸಸ್” ಸುಪ್ರೀತ ಕಿರುಚಿದ, ಅವನನ್ನು ತಬ್ಬಿ ಹಿಡಿದು ಇಬ್ಬರೂ ಅದೆಷ್ಟೋ ಹೊತ್ತು ಬಿಕ್ಕಿ ಬಿಕ್ಕಿ ಅತ್ತೆವು, ನನ್ನ ಪಾಲಿಗೆ ವಿಧಿ ಯಾಕಿಷ್ಟು ಕ್ರೂರವಾಯಿತೋ ಕಾಣೆ? ಆ ಕ್ಷಣ ರೀಟಾಳಿಗೂ ಇದೇ ಗತಿ ಕಾಣಿಸಬೇಕೆನ್ನಿಸಿತು. ಪಕ್ಕಾ ವ್ಯವಹಾರಸ್ಥನಾದ ನಾನು ಆ ಕ್ಷಣದಲ್ಲೂ ಏನೆಲ್ಲಾ ಲೆಕ್ಕಾಚಾರ ಹಾಕಿದೆ, ರೀಟಾಳಿಗೂ ಇದೇಗತಿ ಕಾಣಿಸಿದರೆ ಈ ನೂರು ಎಕರೆ ತೋಟ ಹಾಳಾಗುತ್ತದೆ, ಆಮೇಲೆ ನಾವಿಬ್ಬರು ನಿಜಕ್ಕೂ ತಬ್ಬಲಿಗಳಾಗಿ ಬಿಡುತ್ತೇವೆ… ಆಮೇಲೆ ಪೋಲೀಸ್ ಕೈಗೆ ಸಿಕ್ಕಿಹಾಕಿಕೊಂಡರೆ ಬದುಕೇ ಮುಗಿದು ಹೋಗುತ್ತದಲ್ಲ… ಅಲ್ಲಿಗೆ ಚಿಂತೆಯನ್ನು ತುಂಡರಿಸಿ, ಸುಮುಖನ ಕೊರಳ ಮೇಲಿದ್ದ ಶಿಲುಬೆಯನ್ನು ಕಣ್ಣಿಗೊತ್ತಿಕೊಂಡು, “ದಯಾಮಯನಾದ ಭಗವಂತನೇ ನನ್ನ ಈ ಹತಭಾಗ್ಯ ಮಗನಿಗೆ ಕರುಣೆ ತೋರಿ ಮುಕ್ತಿ ನೀಡು, ನಿನ್ನೆಡೆಗೆ ಬರಮಾಡಿಕೋ”

ಪ್ರಾರ್ಥಿಸಿ ಸರಸರನೆ ಮಣ್ಣನ್ನು ಮುಚ್ಚಿದೆವು. ಆ ಅಂತಹ ಸಮಯದಲ್ಲೂ ನನ್ನ ಮನಸ್ಸು ಜಾಗೃತಗೊಂಡಿತು. ಯಾರಾದರೂ ಬಂದು ಬಿಟ್ಟರೆ? ಸುಪ್ರೀತನ ಮುಖದಲ್ಲಿ ಪ್ರೇತಕಳೆಯಿತ್ತು, ಭಾರವಾದ ಮನಸ್ಸಿನಲ್ಲಿ ಕಾಲನ್ನು ಎಳೆಯುತ್ತಾ ಮನೆಗೆ ಹಿಂದಿರುಗಿದೆವು. ಅರೆ ಈಗಲೂ ರೀಟಾ ಅದೇ ಭಂಗಿಯಲ್ಲಿ ಮಲಗಿದ್ದಂತೆ ಕಂಡಿತು. ಕೆಟ್ಟದನ್ನು ನೋಡಿ,ಕೇಳಿ ಘಾಸಿಗೊಂಡು ಆಘಾತಗಳಿಂದ ಕಂಗಾಲಾಗಿದ್ದ ನನಗೆ ಅವಳು ಮಲಗಿದ್ದ ರೀತಿ ಮತ್ತೇನನ್ನೋ ಕೆಟ್ಟದ್ದನ್ನೇ ಹೇಳುತ್ತಿದೆ ಅನ್ನಿಸಿತು. ಅಥವಾ ನನ್ನ ಒಳ ಮನಸ್ಸು ಆ ದುರಂತನ್ನು ಬಯಸಿತ್ತು. ನನಗರಿವಿಲ್ಲದೆ ಅವಳ ಬಳಿ ಸಾರಿದೆ, ಎಡಗೈಯಲ್ಲಿ ಪತ್ರವಿತ್ತು, ಪಕ್ಕದಲ್ಲಿ ಸಯನೈಡೆ ಶೀಷೆ ಬಿದ್ದಿತ್ತು. ಅದಾಗಲೇ ಅವಳು ಸುಮುಖನ ಬಳಿ ಹೋಗಿಯಾಗಿತ್ತು, ಓ ಜೀಸಸ್!!

(ಮೀನಾ ಮೈಸೂರು)

ನನ್ನ ಮೆಚ್ಚಿನ ಕಥೆ “ಇತಿ ವೃತ್ತಾಂತ”
“ಇತಿ ವೃತ್ತಾಂತ” ನನ್ನ ಮೆಚ್ಚಿನ ಕಥೆಗಳಲ್ಲೊಂದು. ಪಾದ್ರಿಯಾಗಿರುವ ಆಗಿರುವ ಗೆಳತಿ ಸುಜಾತ ಹೆಚ್.ಡಿ.ಕೋಟೆಯಲ್ಲಿದ್ದರು, ಆಗ ಅವರ ಮನೆಯಲ್ಲಿ ಒಂದು ರಾತ್ರಿ ಉಳಿದಿದ್ದೆ. ಇಡೀ ರಾತ್ರಿ ಮಾತು ಮಾತು, ಮಾತಿನ ನಡುವೆ ಈ ಕಥೆಯ ಹುಳುವನ್ನು ನನ್ನ ತಲೆಗೆ ಬಿಟ್ಟರು. ಆ ಹುಳು ಸುಮಾರು ದಿನ ನನ್ನ ತಲೆಯನ್ನು ಕೊರೆಯುತ್ತಿತ್ತು. ಈ ಕೊರೆತದಿಂದ ತಪ್ಪಿಸಿಕೊಳ್ಳಲು ಅದನ್ನು ಹೊರಹಾಕದೆ ವಿಧಿಯಿರಲಿಲ್ಲ. ಅದಕ್ಕೊಂದು ಕಥೆಯ ರೂಪ ಕೊಟ್ಟು, ಪತ್ರಕರ್ತ ಗೆಳೆಯರೂಬ್ಬರಿಗೆ ಕಳುಹಿಸಿ ಬಿಟ್ಟೆ. ಅವರು ಕಥೆ ಓದಿ ಹೌಹಾರಿ ಬಿಟ್ಟರು, ಲಲನೆಯರು, ಕೋಮಲಾಂಗಿಯರು ಬರೆಯುವ ಕಥೆಯೆ ಇದು ಎಂದು ತಿರಸ್ಕರಿಸಿ ಬಿಟ್ಟರು. ಹಾಗಾಗಿ ಅದಕ್ಕೆ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಭಾಗ್ಯ ಲಭಿಸಲೇ ಇಲ್ಲ.
ಓದಿ ವಿದ್ಯಾವಂತಳಾದ ಹೆಣ್ಣನ್ನು ಕೂಡ ಕೇವಲ ತನ್ನ ಆಸ್ತಿ ಕಾಯುತ್ತಾ ತನ್ನ ಕುಟುಂಬ ಸಲಹುತ್ತಾ ಇರಲಿ ಎಂದೆ ಈಗಲೂ ಭಾವಿಸುವ ವಿದ್ಯಾವಂತ ಗಂಡಂದಿರಿದ್ದಾರೆ. ಈ ಕಥೆಯಲ್ಲಿ ಗಂಡ ದೂರದಲ್ಲಿ ತನಗಿಷ್ಟ ಬಂದ ಹಾಗೆ ಬದುಕುತ್ತಾ ಆರಾಮಾಗಿದ್ದಾನೆ. ಎಂದೋ ಒಮ್ಮೆ ಬಂದು ತನ್ನ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿ ಹೊರಟು ಹೋಗುತ್ತಿರುತ್ತಾನೆ, ಒಮ್ಮೆಯಾದರೂ ಹೆಂಡತಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಸೂಕ್ಷ್ಮತೆಯಿಲ್ಲದ ಸ್ವಾರ್ಥಿ ಅನುಕೂಲ ಸಿಂಧು ಗಂಡ, ಎಂದಿಗೂ ಯಾವ ಕಾರಣಕ್ಕೂ ತಮ್ಮ ಸೌಲಭ್ಯ ಸೌಕರ್ಯಗಳನ್ನು ತ್ಯಾಗ ಮಾಡದೆ ಇರುವಂತಹ ಗಂಡುಗಳನ್ನು ಚಿತ್ರಿಸುವ ಅವಕಾಶ ನನಗೆ ಒದಗಿತು. ಇಂತಹ ಗಂಡಸರ ಬಗ್ಗೆ ನನಗಿದ್ದ ಬೇಸರ, ಪೂರ್ವಾಗ್ರಹವನ್ನು ಸರಿಯಾಗಿ ಅಭಿವ್ಯಕ್ತಿಸಲು ಯತ್ನಿಸಿದ್ದೇನೆ.
ಗಂಡ ಬಂದು ಹೋದ ಆ ಎರಡು ದಿನಗಳ ನಂತರ ಮತ್ತೆ ಹೀಗೆ ಎಸ್ಟೇಟ್‌ಗಳಲ್ಲಿ ಒಂಟಿಯಿರುವ ಅತೃಪ್ತ ಅಸಹಾಯಕ ಹೆಣ್ಣುಗಳ ದೌರ್ಬಲ್ಯವನ್ನು ಆಸೆಗಳನ್ನು ದುರುಪಯೋಗ ಮಾಡಿಕೊಳ್ಳುವ ಗಂಡುಗಳು ಆ ಹೆಂಗಳೆಯರ ಬದುಕನ್ನೆ ಹೇಗೆ ನುಂಗಿ ನೊಣೆಯುತ್ತಾರೆ, ಎಂಬುದಕ್ಕೆ ಈ ಕಥೆ ಉದಾಹರಣೆಯಾಗಿದೆ. ಗಂಡು ತನ್ನ ತೆವಲಿಗಾಗಿ, ತನ್ನ ರಕ್ಷಣೆಗಾಗಿ ಎಂತಹ ಪೈಶಾಚಿಕ ಕೆಲಸಕ್ಕು ಸೈ, ಕಾಮನ ಸುಳಿಯಲ್ಲಿ ಸಿಲುಕಿದ ಹೆಣ್ಣು ಅದು ಹೇಗೆ ಭ್ರಮಾಧೀನಳಾಗಿ ತನ್ನ ಬದುಕನ್ನೇ ಬಲಿ ಕೊಟ್ಟುಕೊಳ್ಳುತ್ತಾಳೆ ಎಂಬ ವಿಷಾದದ ಈ ಕಥೆ ಇಂಹತ ಸ್ಥಿತಿಯಲ್ಲಿರುವ ಹೆಣ್ಣು ಮಕ್ಕಳನ್ನು ಒಂಚೂರು ಎಚ್ಚರಿಸುವಂತಾದರೆ ಸಾಕು ಎಂಬ ಆಶಯ ನನ್ನದು. ಆದರೆ ವಯಸ್ಸು, ಒಂಟಿತನ, ವಿರಹಗಳ ದಳ್ಳುರಿಯಲ್ಲಿ ತನ್ನನ್ನು ತಾನೇ ಧಹಿಸಿಕೊಂಡು ಬದುಕನ್ನು ದುರಂತಮಯ ಮಾಡಿಕೊಳ್ಳುವ ಈ ಕಥಾ ನಾಯಕಿ ಒಂಚೂರು ವಿವೇಕಶಾಲಿಯಾಗ ಬೇಕಿತ್ತು, ನಿಶೆ ಏರಿದವಳಂತೆ ಕರಿಯಪ್ಪನ ಮಾತು ಕೇಳಬಾರದಿತ್ತು, ಸ್ವಂತ ಮಗನಿಗೆ ವಿಷ ಉಣಿಸುವಂತ ಕ್ರೂರತನ ತೋರಬಾರದಿತ್ತು…… ನಿಜ, ಆದರೆ ನಮ್ಮ ಸಮಾಜದಲ್ಲಿ ಶೀಲದ ಕಲ್ಪನೆಯಿದೆಯಲ್ಲ ಅದು ಕೇವಲ ಹೆಣ್ಣಿಗೆ ಮಾತ್ರ ಆರೋಪಿಸಿ, ಗಂಡನ್ನು ಸರ್ವತಂತ್ರ ಸ್ವತಂತ್ರನನ್ನಾಗಿಸಿರುವುದರಿಂದ ಹೆಣ್ಣು ಮತ್ತು ಈ ಸಮಾಜ ಈಗಲೂ ಶೀಲಕ್ಕೆ ಹೆಚ್ಚು ಮಹತ್ವ ಕೊಡುವುದರಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ, ಕಾಮ ಎಲ್ಲಾಜೀವಿತ ಜೀವಿಗಳಿಗೂ ಅತ್ಯಂತ ಅಗತ್ಯವಾದುದರಿಂದ ಅದನ್ನು ಸರಳೀಕರಿಸಿ ನೋಡುವ ಮನಸ್ಥಿತಿಯನ್ನು ನಾವು ನಮ್ಮ ಮಕ್ಕಳಿಗೆ ಕಲಿಸಬೇಕೆ ಹೊರತು ಅದನ್ನು ವೈಭವೀಕರಿಸಿ ಹೆಣ್ಣುಗಳ ಮಾನಸಿಕ ಆತಂಕಕ್ಕೆ, ಆಘಾತಕ್ಕೆ, ಆತ್ಮಹತ್ಯೆಗೆ ಕಾರಣವಾಗಲೇಬಾರದು. ಈ ಆಶಯದಿಂದ ನಾನು ಈ ಕತೆಯನ್ನು ಬರೆದೆ. ಓದುಗರ ಮೇಲೆ ಒಂದಿಷ್ಟು ಪ್ರಭಾವ ಬೀರಬಹುದೆಂಬ ನಂಬಿಕೆಯಿಂದಾಗಿ ಈ ಕಥ ನನ್ನ ಮೆಚ್ಚಿನ ಕಥೆಯೂ ಹೌದು.