“ಹಿಂಗ್ ಬಂದು ಸಮುದ್ರದಾಗೆ ತೇಲ್ತಾ ಇರುವಾಗ ಒಂದು ಕುಲ್ಡುಗೊಕ್ಕರೆ ಮೇಲ್ಗಡೆ ಹರ‍್ತಾ ನೀರ್ ಮೇಲಿರೋ ಕುಂಬಳ್‌ಕಾಯೀನಾ ನೋಡ್ತು. ಯಲಾ ಯಲಾ! ಒಂದ್ ವಾರಕ್ಕೆ ಆಗೋವಷ್ಟು ತಿನ್ನಕೆ ಸಿಕ್ತು ಕಣಲೆ ಅಂದ್ಕೊಂಡು ಕೊಕ್ನಾಗೆ ಕಚ್ಕೊಂಡ್ ಬಂದು ಒಂದು ದೊಡ್ಡ ಆಲದಮರದ ಮ್ಯಾಲೆ ಬಂದು ಕುತ್ಕೊಂಡ್ತು. ಕುತ್ಕಂಡು ಎಲ್ಡ್ ಕಾಲಾಗೆ ಕಾಯಿನ ಅಮುಕ್ಕೊಂಡು ಚಂದರ್ಕಿಗೆ ಬಾಯಿಹಾಕಿ ಮುಚ್ಚಳ ತಗೀತು. ಆಗ ಒಳಗಿದ್ದೋರೆಲ್ಲ ಅಲೆಲೆಲೆ, ಏಳ್ರಲಾ ಬೆಳಕ್ ಹರೀತು.”
ರಹಮತ್‌ ತರೀಕೆರೆ ಕಥಾ ಸಂಕಲನ “ಗೇರಮರಡಿ ಕತೆಗಳು”ದಿಂದ ಒಂದು ಕತೆ ನಿಮ್ಮ ಓದಿಗೆ

ನಮ್ಮ ಬೆಟ್ಟದಹಳ್ಳಿಯಂಥಾ ಒಂದ್ ಪಟ್ಟಣ. ಅಲ್ಲೊಬ್ಬ ಸೌಕಾರ. ಒಂದ್ ಹೊತ್ತಿನ ಸಾರಿಗೆ ಖಂಡುಗ ಮೆಣಸು ಅರೆಸೋನು. ಅಷ್ಟು ದೊಡ್ಡ ಕಾರುಬಾರು ಅವಂದು. ಒಂದ್ ಸಾರಿ ಅವನು ತನ್ನ ಮಗಳಿಗೆ ಮದುವೆ ಮಾಡ್‌ಬೇಕಾಗಿ ಬಂತು. ಒಂದುವಾರ ಮುಂಚೇನೇ ಇನ್ನೂರು ಗಾಡಿ ಕಟ್ಸಿ, ನಾನೂರು ಜನ ಆಳುಗುಳ್ಗೆ ಜತೆ ಮಾಡಿ, ಸೌದೆ ತರಾಕೆ ಅಂತ ಗುಡ್ಡುಕ್ ಕಳುಸ್ದ. ಆ ನಾನೂರು ಜನ ಬುತ್ತಿ-ಗಿತ್ತಿ ಕಟ್ಟುಸ್ಕೊಂಡ್ರು. ಕಂದಲಿ-ಕೊಡಲಿ ಹಗ್ಗ ತಗೊಂಡ್ರು. ಗುಡ್ಡಕ್ ಹೊಲ್ಟ್ರು. ಬಂದರೂ… ಬಂದರೂ… ಭಾಳ ದಾರಿ ಬಂದ್ರು, ಮದ್ಯಾನ ಆಗಿತ್ತು. ರಣರಣ ಬಿಸಲು ಹೊಡೀತಿತ್ತು. ಆಗ ಹಳೂರಂಥ ಒಂದೂರ್ ಸಿಕ್ತು.

(ರಹಮತ್‌ ತರೀಕೆರೆ)

ಆಗ ಆ ಆಳ್ಗುಳು, ಲೇ ಇಲ್ಲೇ ಒಂಚಾವತ್ತು ಗಾಡಿ ಬಿಟ್ಟು ಸುದಾರಿಸ್ಕಳನರ‍್ರೋ ಅಂತ ಹೇಳಿ ಊರೊಳಿಕ್ ಹೋದರು. ಆ ಊರಾಗೊಂದ್ ಬಾವಿ. ಆ ಬಾವಿ ಮುಂದಿನ ಮನೆ ಊರ ಗೌಡುಂದು. ಆ ಗೌಡ ಇವರನೆಲ್ಲಾ ನೋಡಿ `ಏನ್ರಪ್ಪಾ, ಯಾವ್ ಕಡೇರು? ಎಲ್ಲಿಗ್ ಬಂದಿದೀರಿ?’ ಅಂತ ವಿಚಾರಿಸ್ದ. ಆಗ ಆಳ್ಗುಳು `ಸ್ವಾಮಿ, ನಾವು ಹಿಂಗೇ ಒಂದೊತ್ತಿಗೆ ಖಂಡುಗ ಮೆಣಸು ಅರಿಯೋ ಸಾವಕಾರನ ಮನೆ ಕೂಲಿ ಆಳ್ಗುಳು. ಅವನ ಮಗಳ್ ಮದ್ವಿಗೆ ಇನ್ನೂರ್ ಗಾಡಿ ಸೌದೆ ತರಾಕೆ ಬಂದಿದೀವಿ’ ಅಂದರು. ಆಗ ಅವನು ನಗ್ತಾ `ಅಯ್ಯೋ ದಡ್ಡಪ್ಪಗಳಿರಾ, ಇನ್ನೂರ್ ಗಾಡಿ ಸೌದಿ ತರಾಕೆ ಗುಡ್ಡುಕ್ ಯಾಕ್ ಹೋಗ್ತೀರಾ? ಮದ್ಯಾನದ್ ಬ್ಯಾಸಾಯದಾಗೆ ನನ್ಮನೆ ಆಳ್ಗುಳು ಮುರಕಂಬರೋ ಮೇಣಿ, ಈಚು, ನೇಗಲು ತುಂಬ್ಕಂಡ್ ಹೋಗ್ರಿ’ ಅಂತ ಹೇಳದ. ಆಮೇಲೆ ಅರ‍್ನೆಲ್ಲಾ ಒಳೀಕ್ ಕರಸಿ `ಅಮ್ಮಯ್ಯಾ ಇವ್ರಿಗೆ ನೀರ್‌ಕೊಟ್ಟು ಉಣ್ಣಕ್ ಇಕ್ರೆ’ ಅಂತಂದ.

ಅಯ್ಯೋ ಇವನ್ಮನೆ ಜ್ವಾಳ ಬೆಳಿಯಾ. ಒಂದೊತ್ತಿನ್ ಬ್ಯಾಸಾಯದಾಗೆ ಇನ್ನೂರು ಗಾಡಿ ಹತ್ಯಾರ ಮುರೀಬೇಕಾದ್ರೆ ಅದ್ಯಾವ್‌ನಾಡಿ ಬ್ಯಾಸಾಯ ಇದ್ದಾವು? ಅದ್ಯಾವ್ ನಾಡಿ ಜಮೀನಿದ್ದಾತು? ಅಂತ ಆಳ್ಗುಳು ಚೋಜ್ಗ ಪಟ್ಕೊಂಡು ಉಂಡು ಹೊರೀಕ್ ಬಂದ್ರು. ಅವರೆಲ್ಲಾ ಉಣ್ಣೋ ಹೊತ್‌ಗೆ ಗೌಡ, ಮದ್ಯಾನ್ ಬ್ಯಾಸಾಯದಾಗೆ ಮುರದ ನೇಗಲು, ಈಚು, ಮೇಣಿ ಇನ್ನೂರ್ ಗಾಡಿಗೆ ತುಂಬಿಸಿ ಕಳುಸ್ದ.

ಇನ್ನೂರ್ ಗಾಡಿ ಹೊಡ್ಕಂಡು ಆಳ್ಗುಳು ತಮ್ ಪಟ್ಟಣದ ಕಡೀಕೆ ಹೊಲ್ಟ್ರು. ಹಿಂಗೇ ಬರಬೇಕಾದ್ರೆ ಚಾಕೇನಳ್ಳಿಯಂತ ಮತ್ತೊಂದೂರು ಕಾಣುಸ್ತು. ಎತ್ತೂ ಸೋತಿದ್ವು. ಲೇ ಇಲ್ಲೇ ಒಂಚಾವೊತ್ತು ಬಿಟ್ಟು ಎತ್ತಿಗೆ ನೀರ್ ಕುಡ್ಸನಾ ರ‍್ರಲಾ ಅಂದ್ಕೊಂಡು ಕೊಳ್‌ಬಿಚ್ಚಿ, ನೀರ್ ಕುಡಿಸಿ ಮೇವು ಹಾಕಿದ್ರು. ಅಷ್ಟೊತ್ತಿಗೆ ಒಂದಜ್ಜಿ ಬಂದು, `ಯಾವೂರಿನವರಪ್ಪ? ಎಲ್ಲಿಗೆ ಹೊಂಟ್ರಿ, ಯಾರ ಮನೇರು?’ ಅಂತ ಕೇಳ್ತು.

ಅದಕ್ಕೆ ಅವರಿದ್ದವರು, `ಹಿಂಗೇ ಖಂಡುಗ ಮೆಣಸು ಅರಿಯೋ ಸಾವ್ಕಾರನ ಮನೆ ಜನ ನಾವು. ಅವನ ಮಗಳ್ ಮದ್ವಿಗೆ ಇನ್ನೂರ್ ಗಾಡಿ ಸೌದೆ ತರಾಕೆ ಬಂದಿದೀವಿ’ ಅಂತ ಜಂಬದಿಂದ ಹೇಳ್ಕೊಂಡರು. ಆಗ ಅವಜ್ಜಿಗೆ ಸಿಟ್ ಬಂದು, `ನಾನ್ ಮೇಲೋ, ನಿಮ್ ಸೌಕಾರ ಮೇಲೋ ನೋಡನಾ’ ಅಂತ ತನ್ನ ಸೊಸೆಯಂದಿರಿಗೆ ಕರದು, `ಲೇ ಅಮ್ಮಯ್ಯಾ, ಹೊತ್ತಾರೆ
ಕಡೆದ ಬೆಣ್ಯಾಗೆ ಏರಿಕಗಟ್ರೆ’ ಅಂದ್ಲು.

ಅಂದಿದ್ದೆ ತಡ, ತಗೋ ನಮಪ್ಪ ಹಣ್ಣೇಗುಡ್ಡಕ್ಕೂ ಕಲ್ಲತ್ತಿಗಿರೀಗೂ ಏರಿ ಕಟ್ಟೇಬಿಟ್ರು.

ಶಿವಶಿವಾ ಈನಾಡಿ ಬೆಣ್ಣೆ ಇರಬೇಕಾದ್ರೆ ಅದೆಷ್ಟು ದನ-ಕರ ಇದ್ದಾವು. ಅದ್ಯಾವ್ ನಾಡಿ ಕರೇವು ಆಗ್ತಿದ್ದಾತು ಅಂತ ಆಳ್ಗುಳು ಬಾಯ್ ಮೇಲೆ ಕೈ ಇಟ್ಕೊಂಡ್ರು. ಆಮೇಲೆ ಇನ್ನೆಂಗಪ್ಪಾ ಹೋಗದು? ಅಂತ ಚಿಂತೆ ಮಾಡ್ತಾ ಕುಂತ್ಕಂಬಿಟ್ರು. ಅಷ್ಟೊತ್ತಿಗೆ ಇನ್ನೊಂದಜ್ಜಿ ಬರತಾಯಿತ್ತು. `ಯಾಕಪ್ಪಾ ನಿತ್ಕಂಬಿಟ್ರಿ ಏನ್ಕತೆ?’ ಅಂತ ಇಚಾರಿಸ್ತು. ಅದಕ್ಕೆ ಅವರು, ಅಜ್ಜೀ ಹಿಂಗಿಂಗೆ, ಹಿಂಗಿಂಗೆ ಅಂತಾ ಎಲ್ಲಾ ಹೇಳ್ಕೊಂಡ್ರು. ಆಗ ಅವಜ್ಜಿ, `ಅಯ್ಯೋ ಇಷ್ಟೇನಾ? ಇದಕ್ಕೆಲ್ಲಾ ಯಾಕಳ್ತೀರಾ ನನ್ ಮಕ್ಕಳ್ರ’ ಅಂತ ತನ್ ಮನ್ಯಾಗಿರೋ ಸೊಸೆಗಳಿಗೆ ಕರದು, `ಲೇ ಇವತ್ತು ಬೆಳಿಗ್ಗೆ ಹುಟ್ಟಿದ್ ಬೆಕ್ಕಿನ ಪಿಳ್ಳೆಗಳು ಇದಾವಲ್ಲ ತಂದು ಬಿಡ್ರಮ್ಮಿ’ ಅಂತು. ಅದೆಕೊಡ್ಲೆ ಅದೋಟ್ ಬೆಣ್ಣೇನೂ ಬೆಕ್ಕಿನ ಪಿಳ್ಳೆಗಳು ತಿಂದ್ಹಾಕ್ ಬಿಟ್ಟವು. ಆಗ ಆಳ್ಗುಳು ಅಜ್ಜಿಗೆ ಅಡ್ಡಬಿದ್ದು ‘ಹೋಗ್ ಬರ‍್ತೀವ್ ಕಣಜ್ಜಿ’ ಅಂತ ಗಾಡಿ ಹೊಡ್ಕಂಡು ಹೊಲ್ಟ್ರು.

ಅರ್ದಾ ದಾರಿ ಬಂದಿದ್ರು. ಅಷ್ಟೊತ್ತಿಗೆ ಕತ್ಲಾಗ್‌ಬಿಡ್ತು. ಮುಂಗಾರ್ ಗಾಳಿಮಳೆ ಸುರುವಾತು. ಅಲಲಲೆ! ಸೌದೆ ನೆಂದ್ ಬಿಡ್ತಾವ್ ಕಂಡ್ರೋ, ನಾವೂ ನೆಂದ್‌ಬಿಡ್ತೀವಿ ಕಂಡ್ರೋ ಅಂತ ಗಾಡಿಗುಳ್ನ ಹಾರಿಗ್ಗಲೆ ಓಡಿಸ್ಕೊಂಡ್ ಬಂದ್ರು. ಇಲ್ಲೇ ಎಲ್ಲಾರ ನೋಡಿ ರಾತ್ರಿ ಕಳಿಯನ ಅಂತ ತೀರ್ಮಾನಿಸಿದ್ರು. ಅಲ್ಲೊಂದ್ ಮನೆ ಕಾಣುಸ್ತು.

ಆ ಮನೀಗೆ ಬಂದು ಬಾಕಲು ತಟ್ಟಿದ್ರು. ಆ ಮನ್ಯಾಗೆ ಒಂದಜ್ಜಿ ತನ್ನ ಮೊಮ್ಮಗಳ ಕುಟೆ ವಾಸ ಮಾಡ್ತಿತ್ತು. ಅಜ್ಜಿ ಬಂದು ಬಾಕಲು ತಗದು, ‘ಯಾರಪ್ಪಾ ನೀವು ಏನ್ ಬೇಕಾಗಿತ್ತು?’ ಅಂತ ಕೇಳ್ತು.

`ಅಜ್ಜೀ ಅಜ್ಜೀ, ನಾವು ಹಿಂಗೆ ಖಂಡುಗ ಮೆಣಸು ಅರಿಯೋ ಸಾವ್‌ಕಾರನ ಮನೇರು. ಮದುವೆ ಸೌದಿ ತರಾಕೆ ಬಂದಿದ್ವಿ. ಮಳೀಗೆ ಸಿಗಾ ಹಾಕ್ಕೊಂಡ್ ಬಿಟ್ಟಿದೀವಿ’ ಅಂದ್ರು. `ಅಯ್ಯೋ ನನ್ ಮಕ್ಕಳ್ರಾ ರ‍್ರಪ್ಪಾ ಒಳೀಕೆ. ಜಾಗ ಕೊಡ್ತೀನಿ’ ಅಂತ ಹೇಳಿ ಹಿತ್ತಲಕಡೆಯಿಂದ ಒಂದು ಕುಂಬಳಕಾಯಿ ತಂದು, ಅದಕ್ಕೆ ಚಂದ್ರಿಕೆ ಹಾಕಿ ಅದರಾಗೆ ಇನ್ನೂರು ಗಾಡಿಗಳನ್ನ ಇನ್ನೂರು ಜತೆ ಎತ್ತುಗಳನ್ನ, ನಾನೂರು ಜನ ಆಳ್‌ಗಳನ್ನ ತುಂಬಿ ಚಂದ್ರಿಕೆ ಮುಚ್ಚಿ ನಡುಮನ್ಯಾಗೆ ತಂದಿಟ್ಲು. ತಾನ್ ಮಾತ್ರ ಮೊಮ್ಮಗಳ್ ಜತೆ ಅಟ್ಟದ ಮ್ಯಾಲೆ ಮಲಕ್ಕೊಂಡ್ಲು. ನಡೂರಾತ್ರಿಯಾಗಿತ್ತು. ಆಗ ಮೊಮ್ಮಗಳು ‘ಅಜ್ಜೀಅಜ್ಜೀ, ಹುಚ್ಚೆ ಹೊಯ್ತೀನಿ’ ಅಂದ್ಲು. ಅದುಕ್ಕೆ ಅಜ್ಜಿ ‘ಇಲ್ಲೇ ಹೊಯ್ಯಡಗಿ’ ಅಂತಂದ್ಲು. ಆಕೆ ಹೊಯ್ಯಾಕೆ ಸುರು ಮಾಡಿದ್ಲು. ಹುಯ್‌ದ್ಲು ಹುಯ್‌ದ್ಲು, ತಗೋ ನಮಣ್ಣ, ಅದೇ ಒಂದು ದೊಡ್ ಹಳ್ಳ ಆಗ್‌ಬಿಡ್ತು! ಅದ್ರಾಗೆ ಜನ ಗಾಡಿ ತುಂಬಿದ ಕುಂಬಳಕಾಯಿ ತೇಲ್ಕೊಂಡ್ ತೇಲ್ಕೊಂಡ್ ಸಮುದ್ರ ಬಂದು ಸರ‍್ತು.

ಹಿಂಗ್ ಬಂದು ಸಮುದ್ರದಾಗೆ ತೇಲ್ತಾ ಇರುವಾಗ ಒಂದು ಕುಲ್ಡುಗೊಕ್ಕರೆ ಮೇಲ್ಗಡೆ ಹರ‍್ತಾ ನೀರ್ ಮೇಲಿರೋ ಕುಂಬಳ್‌ಕಾಯೀನಾ ನೋಡ್ತು. ಯಲಾ ಯಲಾ! ಒಂದ್ ವಾರಕ್ಕೆ ಆಗೋವಷ್ಟು ತಿನ್ನಕೆ ಸಿಕ್ತು ಕಣಲೆ ಅಂದ್ಕೊಂಡು ಕೊಕ್ನಾಗೆ ಕಚ್ಕೊಂಡ್ ಬಂದು ಒಂದು ದೊಡ್ಡ ಆಲದಮರದ ಮ್ಯಾಲೆ ಬಂದು ಕುತ್ಕೊಂಡ್ತು. ಕುತ್ಕಂಡು ಎಲ್ಡ್ ಕಾಲಾಗೆ ಕಾಯಿನ ಅಮುಕ್ಕೊಂಡು ಚಂದರ್ಕಿಗೆ ಬಾಯಿಹಾಕಿ ಮುಚ್ಚಳ ತಗೀತು. ಆಗ ಒಳಗಿದ್ದೋರೆಲ್ಲ ಅಲೆಲೆಲೆ, ಏಳ್ರಲಾ ಬೆಳಕ್ ಹರೀತು.

ಗಾಡಿ ಹೂಡನಾ ಏಳ್ರೋ ಅಂತ ಮಾತಾಡಿದ್ರು. ಕೊಕ್ಕರೆ ಹೆದರ್‌ಕೊಂಡು ಮತ್ತೆ ಮುಚ್ಚಳ ಮುಚ್ಚಿ ಹಾರ್‌ಬಿಡ್ತು. ಅಯ್ ಇನ್ನೂ ಕತ್ಲೈತೆ ಮಲಿಕ್ಯಳ್ರೋ ಅಂತ ಆಳ್ಗುಳು ಮತ್ತೆ ಮಲಕ್ಕೊಂಡ್ರು. ಆಗ ಒಬ್ಬ ಮೀನ್ ಶಿಕಾರಿ ಮಾಡೋನು ಬಂದು ಆಲದಮರದ ಕೆಳೀಕೆ ಮಲಕ್ಕೊಂಡ. ಮರದ್ ಮೇಲಿರೋ ಕುಂಬಳಕಾಯಿ ಕಣ್ಣಿಗೆ ಬಿತ್ತು. ಎಲ್ಲಾರ ಗಾಳಿಗೀಳಿಗೆ ಮೈಮೇಲೆ ಬಿದ್ದಾತು ಅಂತ ನೆಲಕ್ಕೂ ಅದಕ್ಕೂ ಒಂದು ಮೀಸೆಕೂದಲು ಕಿತ್ತು ಅಕ್ಕಳಿಗೆ ಕೊಟ್ಟ. ಆಗ ಅಲ್ಲಿಗೆ ಬಂದೋರು, ಇದ್ಯಾವನೋ ಬಂಡೀ ಜಾಡ್ನಾಗೆ ಗೂಟ ನೆಟ್ಟಿದಾನೆ ಅಂತ ಹಗ್ಗ ಹಾಕಿ ಎಳಸಿದ್ರು. ಹಂಗಾದರೂ ಆ ಕೂದಲನ್ನ ಅರಗು ಮಾಡಾಕೆ ಆಗಲಿಲ್ಲ. ಇದೆಂತಾ ಗೂಟವೋ? ಅಂತ ತಲೇಮೇಲೆ ಕೈ ಹೊತ್ಕಂಡ್ ಕುಂತ್‌ಬಿಟ್ರು. ಆಗ ಅಲ್ಲೇ ಪುಳೆ ಆರ‍್ಸಾಕೆ ಅಂತ ಬಂದಿದ್ದ ಅಜ್ಜಿ ಬಂದು ಇದೇನ್ಮಹಾ ಅಂತ ಹೆಬ್ಬೆಟ್ಟಿನಾಗೆ ನೂಕಿ ಬೀಳುಸ್ತು.

ಕತೆ ಕೇಳಿದೆಲಾ, ಈಗೇಳು ನೋಡನಾ. ಒಂದ್ ಹೊತ್ತಿನ ಸಾರಿಗೆ ಖಂಡಗ ಮೆಣಸು ಅರಿಯೋನು ದೊಡ್ಡೋನೊ? ಒಂದ್ ಹೊತ್ತಿನ ಬ್ಯಾಸಾಯದಾಗೆ ಇನ್ನೂರು ಗಾಡಿ ಮೇಣಿ, ಈಚು ಮುರಿಯೋನು ದೊಡ್ಡೋನೊ? ಒಂದ್ ಹೊತ್ ಕಡೆದ ಬೆಣ್ಯಾಗೆ ಏರಿಗಟ್ಟಿಸಿದೊಳ್ ದೊಡ್ಡವಳೋ? ಬೆಕ್ಕಿನ ಪಿಳ್ಳೆಯವಳು ದೊಡ್ಡೋಳೊ? ಇನ್ನೂರು ಗಾಡಿ ನಾನೂರು ಜನಾನೆ ಒಂದ್ ಕುಂಬಳಕಾಯಲ್ಲಿ ತುಂಬಿದೋಳು ದೊಡ್ಡೋಳೊ? ಅಂಥಾ ಕಾಯೀನೇ ತೇಲ್ಕೊಂಡ್ ಹೋಗೋ ಹಂಗೆ ಹುಚ್ಚೆ ಹೊಯ್ದೋಳು ದೊಡ್ಡೋಳೋ? ಅಂಥಾ ಭಾರಾನ ಕೊಕ್ನಾಗೆ ಕಚ್ಕೊಂಡ್ ಬಂದ ಕೊಕ್ಕರೆ ಮೇಲೋ? ಮೀಸೆಕೂದಲು ಕಿತ್ತಿ ಗೂಟ ಕೊಟ್ಟೋನು ದೊಡ್ಡೋನೋ? ಅದನ್ನ ಹೆಬ್ಬೆಟ್ಟಿನಾಗೆ ಬೀಳಿಸಿದವಳು ದೊಡ್ಡೋಳೋ? ಯಾರು ದೊಡ್ಡೋರು?

(ಕೃತಿ: ಗೇರಮರಡಿ ಕತೆಗಳು (ಕಥಾಸಂಕಲನ), ಲೇಖಕರು: ರಹಮತ್ ತರೀಕೆರೆ, ಪ್ರಕಾಶನ: ಅಮೂಲ್ಯ ಪುಸ್ತಕ (9448676770), ಪುಟಗಳು: 132, ಬೆಲೆ: 150/-)