ಇಲ್ಲಿನ ಕವಿತೆಗಳಲ್ಲಿ ಅತಿರಂಜಿತ ಕಲ್ಪನೆಗಳಿಗಿಂತ ತನ್ನ ನಡುವಿನ ಬದುಕನ್ನೇ ಭಿನ್ನವಾಗಿ ಅವಲೋಕಿಸುತ್ತ, ಆ ಮೂಲಕವೇ ತನ್ನ ಭಾವನೆಗಳನ್ನು ಮಿಳಿತಗೊಳಿಸಿ ಕವಿತೆಯಲ್ಲಿ ಸ್ಪುರಿಸುತ್ತಾರೆ. ಕಾವ್ಯದಿಂದಲೇ ಏನನ್ನೋ ಗೆಲ್ಲಬಯಸುತ್ತೇನೆ ಎಂಬ ಸಣ್ಣ ಆಸೆಯಿಂದ, ಜೊತೆಗೆ ಆಸ್ಥೆಯಿಂದ ಹೇಳುವಂಥದನ್ನು ಹೇಳಿಕೊಂಡಿದ್ದಾರೆ. ಮಾತಿಗಿಂತ ಕಾವ್ಯವೇ ತನ್ನ ಅಭಿವ್ಯಕ್ತಿ ಮಾಧ್ಯಮ ಎನಿಸುವಂತಹ ಜೀವಂತಿಕೆಯ ಸಾಲುಗಳು ಕವಿತೆಗಳಲ್ಲಿವೆ.
ಜಗದೀಶ್‌ ಜೋಡುಬೀಟಿ ಕವನ ಸಂಕಲನ “ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ” ಕುರಿತು ಸಂಗೀತ ರವಿರಾಜ್‌, ಚೆಂಬು ಬರಹ

“ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ ” ಈ ಭಾವನಾತ್ಮಕ ಹೆಸರಿನ ಕವಿತಾ ಸಂಕಲನದ ಕರ್ತೃ ಪತ್ರಕರ್ತರಾಗಿ ಪ್ರಸಿದ್ಧರಾಗಿರುವ  ಕೊಡಗಿನ ಜಗದೀಶ್ ಜೋಡುಬೀಟಿ.  ಪತ್ರಕರ್ತರಿಗೆ ಇರಲೇಬೇಕಾದ ಸಮಾಜದ ಕುರಿತ ಕಾಳಜಿ ಇಲ್ಲಿನ ಕವಿತೆಗಳಲ್ಲಿಯೂ ಪಡಿಮೂಡಿ, ಸಮಾಜಮುಖಿ ಧೋರಣೆಯ ಹೆಚ್ಚಿನ ಕವಿತೆಗಳನ್ನು ನಾವಿಲ್ಲಿ ಕಾಣಬಹುದು.

ಎಲ್ಲಾ ಪುರುಷರು ಹೀಗೆ ಇರುವುದಿಲ್ಲ, ಶೌಚಾಲಯ, ನಾಯಕರು ಸ್ವಾಮಿ ಇವರು, ಮಾಯವಾಗಿದೆ, ಕವಿತೆ ನರಳುತ್ತಿದೆ ಇತ್ಯಾದಿ  ಕವಿತೆಗಳು ದೈನಂದಿನ ಬದುಕಿನ ಆಗು ಹೋಗುಗಳೇ ಆಗಿದ್ದರೂ ಇಲ್ಲಿರುವ ಒಳನೋಟ ಪ್ರತಿಯೊಬ್ಬ ಸಭ್ಯ ನಾಗರಿಕನನ್ನು ಎಚ್ಚರಿಸುವಂಥವು. ನಮ್ಮ ನಡುವಿನ ಈ ಪ್ರಪಂಚವನ್ನು ನನಗ್ಯಾಕೆ ಎಂದು ನಿರ್ಲಕ್ಷಿಸದೆ ಸಮಾಜಮುಖಿಯಾಗಿ ನಿಂತು ನೋಡುವ ಅಪರೂಪದ ಗುಣ ಇವರ ಕವಿತೆಗಳಲ್ಲಿದೆ.

(ಜಗದೀಶ್‌ ಜೋಡುಬೀಟಿ)

“ಬರುವುದಾದರೆ ಬಾ” ಈ ಸಂಕಲನದಲ್ಲಿರುವ ಒಂದು ಅರ್ಥಗರ್ಭಿತ ಕವಿತೆ. ಬರುವುದಾದರೆ ಬಾ ನನ್ನೆದೆಯ ಗರ್ಭಗುಡಿಗೆ/ ಆಚಾರ ವಿಚಾರ ಮಡಿ ಮೈಲಿಗೆಗಳ ಕಟ್ಟು ಪಾಡುಗಳಿಲ್ಲ / ಜಾತಿ ಭೇದಗಳ ಬೆಸೆಯುವಿಕೆಗೆ ಮನ್ನಣೆಯಿಲ್ಲ.. ಹೀಗೆ ಸಾಗುತ್ತದೆ.
ವಾಸ್ತವದಲ್ಲಿ ಇವರ ಕವಿತೆಗಳೆಲ್ಲವೂ ನಿಜ. ಇವು ಕಲ್ಪನೆಗಳೋ, ಅನುಭವಗಳೋ ಏನೇ ಆದರೂ ಇಲ್ಲಿರುವ ತಾತ್ವಿಕ ಹುಡುಕಾಟದಲ್ಲಿ ನೈಜತೆಯಿದೆ, ಸ್ಪಷ್ಟತೆಯಿದೆ ಮತ್ತು ಹುರುಳಿದೆ. ಗಾಂಧಿ ಮತ್ತೊಮ್ಮೆ ಸತ್ತ ಎಂಬ ಅಭಿವ್ಯಕ್ತಿಯಲ್ಲಿ ವಾಸ್ತವದ ವಿಚಾರಗಳೆಲ್ಲವು ಹೇಗೆ ಮನಸ್ಸಿಗೆ ಕಾಡುವಂತೆ ಅಭಿವ್ಯಕ್ತಿಗೊಂಡಿದೆ ಎಂದರೆ ಸಂಕೇತಗಳ ಮೂಲಕವೇ ಕವಿತೆ ಗೆದ್ದಿದೆ. ಗಾಂಧಿ ತತ್ವಗಳು ಮತ್ತೊಮ್ಮೆ ಸತ್ಯವಾಗಲಿ ಎಂಬ ಭಾವನೆ ಮನದಲ್ಲಿ ಮೂಡುತ್ತದೆ.

“ಒಂಟಿ ಹುಡುಗಿ ಹನ್ನೆರಡರ ರಾತ್ರಿ ನಡೆದು ಹೋಗುತಿದ್ದಾಳಲ್ಲ
 ಅಲ್ಲೇ ಅಲ್ಲೇ ನನಗೆ ನನಗೆ ಗಾಂಧಿ ಸಿಕ್ಕ!
ಹುಡುಗಿಯ ಕೈಯಲ್ಲಿಯ ಸಿಗರೇಟು
ಬೀರು ಬಾಟಲಿ ಕಂಡು ಕಿಸಕ್ಕನೆ ನಕ್ಕ!”

ಇಂಥ ಕಟು ವಾಸ್ತವಗಳ ಎಳೆಗಳನ್ನು ಬಿಡಿಸಿಟ್ಟ ಸತ್ಯದ ಸಾಲುಗಳಲ್ಲಿ ಕವಿತೆಗಳ ಗಟ್ಟಿತನವಿದೆ. ಗಾಂಧಿಯ ಕುರಿತಾಗಿ, ಗಾಂಧಿ ಧ್ಯಾನ, ಕವಿತೆಗಳಿಗೆ ವಿಚ್ಛೇದನ ನೀಡಲಾಗಿದೆ. ಕವಿತೆಗಳಲ್ಲಿ ಗಾಂಧಿಯ ಸತ್ವಗಳ ಸಾರವಿದೆ. ಇವರ ಕವಿತೆಗಳು ವಿಶಿಷ್ಟವೆನಿಸುವುದು ಯಾವುದನ್ನು ಮುಚ್ಚಿಡದೆ ನಿರ್ಭಿಡೆಯಿಂದ ಮನಸ್ಸು ತೆರೆದು ಹೇಳುವುದರಿಂದ ಕವಿತೆಗಳು ಭಿನ್ನವಾಗಿದೆ. ಬಡವರ ಎಲುಬಿನಲ್ಲೇ ಕಟ್ಟುವವರು ಮೂರು ಅಂತಸ್ತಿನ ಮಹಲು / ಇವರು ನಮ್ಮ ನಾಯಕರು ಸ್ವಾಮಿ / ನಮ್ಮನಾಳುವ ನಾಯಕರು. ಈ ಅರ್ಥವತ್ತಾದ ಕವಿತೆಯಲ್ಲಿ ನ್ಯಾಯವನ್ನು ಛೇಡಿಸಿರುವುದು ಸಮಾಜದ ಪರವಾದ ಧ್ವನಿಯಾಗಿದೆ. ಇಂತಹ ಸಾವಿರಾರು ಒಳಧ್ವನಿಗಳು ಹೊರಹೊಮ್ಮಬೇಕು, ಅನ್ಯಾಯವನ್ನು ಮೆಟ್ಟಿ ನಿಲ್ಲಬೇಕು ಎಂಬುದು ಕವಿತೆಯ ಆಶಯ.

“ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ” ಈ ಸಂಕಲನದಲ್ಲಿ ವೈವಿಧ್ಯಮಯ ವಿಷಯಗಳ ಕವಿತೆಗಳು ಅಡಕವಾಗಿದೆ. ಪ್ರೀತಿ, ಅನುಕಂಪ, ಮಾನವೀಯತೆಯನ್ನೊಳಗೊಂಡ ನಯ ನಾಜೂಕಿನ ಸಾಲುಗಳ ನಡುವೆಯೂ ಬಂಡಾಯದ, ಆಕ್ರೋಶದ ಸ್ವರವು ಹೊರಹೊಮ್ಮುತ್ತದೆ.  ಇವರದು ಬಡವರ, ಅಸಹಾಯಕರ, ಜೊತೆಗೆ ಹೆತ್ತವರ ನೋವು ನಲಿವುಗಳನ್ನು ಸೂಕ್ಷ್ಮವಾಗಿ ಅರಿತ ಸಹೃದಯ ಕವಿ ಮನಸ್ಸು. “ದಲಿತ ತಾಯಿಯ ಎದೆ ಹಾಲಿಗೆ / ಬ್ರಾಹ್ಮಣರ ಹಸುಳೆ ತುಟಿಯನ್ನಿಟ್ಟು ಹಸಿವ ನೀಗಿಸಿಕೊಂಡಿತ್ತು / ಜಾತಿ ಧರ್ಮ ಎನ್ನುವವರಿಗೆ ಹೊಟ್ಟೆ ತುಂಬಿದ ಮಗುವಿನ  ಕಿರುನಗೆ ಪರಿವರ್ತನೆಯ ಪಠ್ಯ / ಸಾಹುಕಾರ ಕೂಲಿ ಕಾರ್ಮಿಕ ಒಂದೇ / ಪುನರ್ಚೆತನ ಕೇಂದ್ರಗಳಲ್ಲಿ ಆಶ್ರಿತರು … ಹೀಗೆ ಸಾಗುವ ಕವಿತೆಯಲ್ಲಿ ಪ್ರಕೃತಿಯ ಶಾಪಕ್ಕೆ ತಲೆ ಬಾಗಿದ ಕೊಡಗಿನ ಜನಜೀವನದ ನಿರ್ದಯತೆಯಿದೆ.

ಇಲ್ಲಿನ ಕವಿತೆಗಳಲ್ಲಿ ಅತಿರಂಜಿತ ಕಲ್ಪನೆಗಳಿಗಿಂತ ತನ್ನ ನಡುವಿನ ಬದುಕನ್ನೇ ಭಿನ್ನವಾಗಿ ಅವಲೋಕಿಸುತ್ತ, ಆ ಮೂಲಕವೇ ತನ್ನ ಭಾವನೆಗಳನ್ನು ಮಿಳಿತಗೊಳಿಸಿ ಕವಿತೆಯಲ್ಲಿ ಸ್ಪುರಿಸುತ್ತಾರೆ.  ಕಾವ್ಯದಿಂದಲೇ ಏನನ್ನೋ ಗೆಲ್ಲಬಯಸುತ್ತೇನೆ  ಎಂಬ ಸಣ್ಣ ಆಸೆಯಿಂದ, ಜೊತೆಗೆ  ಆಸ್ಥೆಯಿಂದ ಹೇಳುವಂಥದನ್ನು ಹೇಳಿಕೊಂಡಿದ್ದಾರೆ.  ಮಾತಿಗಿಂತ ಕಾವ್ಯವೇ  ತನ್ನ ಅಭಿವ್ಯಕ್ತಿ ಮಾಧ್ಯಮ ಎನಿಸುವಂತಹ ಜೀವಂತಿಕೆಯ ಸಾಲುಗಳು ಕವಿತೆಗಳಲ್ಲಿವೆ. “ಅಮ್ಮಾ ನೀನು ಮನೆಯಲ್ಲಿಲ್ಲದಿದ್ದರೆ ಅಪ್ಪನ ಸಿಗರೇಟಿನ ಹೊಗೆ ಕೋಣೆ ತುಂಬಿರುತ್ತದೆ/ ನಲ್ಲಿ ನೀರು ಗುಟುರು ಹಾಕುತ್ತಾ ಹನಿಯುತ್ತದೆ / ಖಾಲಿ ಕೊಡಗಳು, ಕೋಣೆಗಳು ಎಲ್ಲವೂ ಅಪಹಾಸ್ಯ ಮಾಡುತ್ತವೆ.” ಎಷ್ಟೊಂದು ಸುಂದರವಾದ ಸಾಲುಗಳಿವು. ಅಮ್ಮನತ್ತಿರ ಏನು ಹೇಳದೆ ಕವಿತೆಯಲ್ಲಿ ಎಲ್ಲವನ್ನೂ ಹೇಳಿದ್ದಾರೆ ಎಂಬಂತೆ ಭಾಸವಾಗುವ ಸಾಲುಗಳಿವು. ತುಂಬಾ ಸರಳವಾಗಿ, ಆಪ್ತವಾಗಿ ಆದರೆ ಗಟ್ಟಿಯಾಗಿ ನೇಯ್ದ ಇಂತಹ ಹಲವಾರು ಕವಿತೆಗಳು ಸಂಕಲನದಲ್ಲಿದೆ.

“ಅಪ್ಪ ಸತ್ತಿದ್ದಾರೆ ಅನ್ನುತ್ತಿದ್ದಾರೆ / ಅಕ್ಕ ಪಕ್ಕ ಮನೆಯವರು, ನೆಂಟರಿಷ್ಟರು/ಸತ್ತಿದ್ದು ಅಪ್ಪನಲ್ಲ / ಕೈ ಬಳೆ, ಕಾಲುಂಗುರ ಸಿಂಧೂರ, ಬಿಳಿಸೀರೆ ಉಟ್ಟು ಅಪ್ಪನ ಆತ್ಮದೊಡನೆ ಮಾತನಾಡುವ ಅಮ್ಮ/ ಅಪ್ಪ ಸತ್ತಂತೆ ನಟಿಸುತ್ತಿದ್ದಾರೆ / ಗೋಡೆಯ ಮೇಲಿನ ಚಿತ್ರದಲ್ಲಿ.”  ಇಂತಹ ಅದ್ಭುತ ಸಾಲುಗಳ ಕವಿತೆಯನ್ನು ಕೇವಲ ವರ್ಣನೆಗೆ  ಮಾತ್ರ ಸೀಮಿತಗೊಳಿಸದೆ ಗಂಡ ಹೆಂಡತಿಯ ಸಂಬಂಧಕ್ಕೆ ಚಂದನೆಯ ಚೌಕಟ್ಟು ನೀಡಿದ್ದಾರೆ. ಸಂಬಂಧಗಳಿಗೆ ಮಹತ್ವ ಕೊಡುವ ಇಂತಹ ಸಾಲುಗಳಲ್ಲಿ ನೈಜ್ಯ ಅನುಕಂಪದ ಸಂವೇದನೆಯಿದೆ. ನಮ್ಮ ಎದೆಯಲ್ಲೂ ಇದು ಮಾರ್ದನಿಸುತ್ತದೆ. ಇಂತಹ ಹೃದಯ ಆರ್ದ್ರಗೊಳಿಸುವ ಕವಿತೆಗಳು ಇನ್ನೂ ಹೆಚ್ಚೆಚ್ಚು ರೂಪುಗೊಳ್ಳಲಿ ಎಂಬುದು ನಮ್ಮೆಲ್ಲರ ಆಶಯ.

ಇಲ್ಲಿನ ಕವಿತೆಗಳನ್ನು ಓದಿದ ನಂತರ “ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?” ಎಂಬ ಕುವೆಂಪು ವಾಣಿಯ ಸಾಲೊಂದು ಮನಸ್ಸಿನಲ್ಲಿ ಬಂದು ಬೇರೂರಿದಂತೆ ಭಾಸವಾಗುತ್ತದೆ. ಡಾ. ತೀತೀರ ರೇಖಾ ವಸಂತ ಹಾಗೂ ಭಾರದ್ವಾಜ್ ಕೆ. ಆನಂದ ತೀರ್ಥರ ಮುನ್ನುಡಿಗಳೊಂದಿಗೆ, ಚೀ. ಜ. ರಾಜೀವ ಇವರ ಬೆನ್ನುಡಿ ಯೊಂದಿಗೆ ಚಂದು ಪ್ರಕಾಶನದಿಂದ ಈ ಕೃತಿ ಪ್ರಕಟಗೊಂಡಿದೆ.