ವಲಯ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಹೇಳಿದೆ. `ಬೀಜ ರೆಡಿಯಾಗಿದೆ. ಯಾವಾಗ ಬರುತ್ತೀರಿ?’ ಅವರೂ ಉತ್ಸುಕತೆಯಲ್ಲಿದ್ದರು. `ನಾಳೆಯೇ ಬರುತ್ತೇವೆ’ ಎಂದರು. ಹೇಳಿದ ಮಾತಿನಂತೆ ಅವರು ಮರುದಿನ ಹತ್ತು ಗಂಟೆಗೆ ಸರಿಯಾಗಿ ಉಪವಲಯ ಅರಣ್ಯಾಧಿಕಾರಿ ಅಲ್ಲದೆ ಇತರ ಆರು ಮಂದಿ ಸಿಬ್ಬಂದಿಯವರೊಂದಿಗೆ ಮನೆಗೆ ಬಂದರು. ನಾನು ಎಲ್ಲರಿಗೂ ಟೀ ಮತ್ತು ಬಿಸಿಬಿಸಿ ಗೆಣಸಿನ ಪೋಡಿ ಮಾಡಿ ಕೊಟ್ಟೆ. ಕಾಡಿನಲ್ಲಿ ಬಾಯಾರಿಕೆಯಾದರೆ ಎಂದು 5 ಲೀಟರ್ ಕ್ಯಾನ್‌ನಲ್ಲಿ ಮಜ್ಜಿಗೆ ತುಂಬಿಸಿಕೊಂಡೆ. ನಂತರ ನಾವೆಲ್ಲರೂ ನಮ್ಮ ಮನೆಯಿಂದ ಮೇಲೆ ಇರುವ ರಕ್ಷಿತಾರಣ್ಯಕ್ಕೆ ಕತ್ತಿ, ಕೋಲು, ಬೀಜ ಹಿಡಿದು ಪ್ರವೇಶಿಸಿದೆವು.
ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಮತ್ತೊಂದು ಬರಹ ಇಲ್ಲಿದೆ.
ಆನೆ ಸಾಕಲು ಹೊರಟದ್ದು ಯಾರು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುವುದು ಸಹಜ. ಬೇರೆ ಯಾರೂ ಅಲ್ಲ ನಾನೇ ಆನೆ ಸಾಕಲು ಹೊರಟವಳು. ಅದು ಹೇಗೆ ಅಂತೀರಾ? ಕಾಡಿನಲ್ಲಿರುವ ಆನೆಗೆ ಮೇವು ಬೆಳೆಸುವ ಕಾರ್ಯ ಆರಂಭಿಸುವ ಮೂಲಕ. ನನ್ನ ಆ ಪ್ರಯತ್ನವನ್ನು ಕೆಳಗೆ ವಿವರಿಸಿದ್ದೇನೆ.
ನಾನು ಕಳೆದ ವಾರ `ಕಲ್ಲುಬಾಳೆ ಬೆಳೆಸಿ ಆನೆ ಉಳಿಸಿ’ ಅಂಕಣ ಬರೆದಾಗ ಪತ್ರಿಕೆಯೊಂದರಲ್ಲಿ ವಿರಾಜಪೇಟೆಯ ಸಮೀಪ ಕೇರಳದಿಂದ ಬೆಂಗಳೂರಿಗೆ ಹೋಗುವ ಪ್ರೈವೇಟ್ ಬಸ್ಸೊಂದು ರಸ್ತೆಗಿಳಿದ ಆನೆಗೆ ಡಿಕ್ಕಿ ಹೊಡೆದು ಆ ಆನೆ ಬೆನ್ನು ಮೂಳೆ ಮುರಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆಯನ್ನು ಓದಿದೆ. ಅದು ಕಾಡಲ್ಲಿ ಮೇವು ಇದ್ದಿದ್ದರೆ ರಸ್ತೆಗೆ ಏಕೆ ಇಳಿಯುತ್ತಿತ್ತು? ಆನೆ ಉಳಿಸಲು ನನ್ನ ಮನೆ ಸುತ್ತಮುತ್ತಲಿನ ಕಾಡಲ್ಲಾದರೂ ಮೇವು ಬೆಳೆಸಲೇಬೇಕು ಎಂಬ ದೃಢ ನಿರ್ಧಾರ ಮಾಡಿದೆ. ಇನ್ನು ತಡ ಮಾಡಬಾರದು ಎಂದು ಮನೆಯಿಂದ 15 ಕಿ.ಮೀ. ದೂರದ ಸಂಪಾಜೆಯಲ್ಲಿರುವ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಹೋದೆ. ಅವರನ್ನು ಕಂಡು ನಾನೊಬ್ಬ ಕೃಷಿಕ ಮಹಿಳೆ ಎಂದು ನನ್ನ ಪರಿಚಯ ಹೇಳಿ ಆಮೇಲೆ ಕೇಳಿದೆ- `ಆನೆಗಳು ನಾಡಿಗೆ ಯಾಕೆ ಬರುತ್ತವೆ?’ ಅವರು ಹೇಳಿದರು-`ಈಗ ಕಾಡಲ್ಲಿ ಆನೆಗಳಿಗೆ ತಿನ್ನಲಿಕ್ಕೆ ಏನುಂಟು? ಆಹಾರ ಹುಡುಕಿಕೊಂಡು ಅವು ಊರಿಗೆ ಬರುತ್ತವೆ’. ಇದೇ ಉತ್ತರಕ್ಕೆ ಕಾಯುತ್ತಿದ್ದ ನಾನು ಹೇಳಿದೆ – `ಈಗ ಆನೆಗಳಿಗೆ ಆಹಾರದ ಅಭಾವ ಕಾಡುತ್ತಿದೆ ಎಂದು ನೀವು ಹೇಳುತ್ತೀರಿ. ಅದಕ್ಕೆ ಆನೆಗಳಿಗೆ ನಾವು ಕಾಡಿನಲ್ಲಿ ಮೇವು ಬೆಳೆಸುವ ಪ್ರಯತ್ನ ಮಾಡಿದರೆ ಹೇಗೆ? ಕಲ್ಲುಬಾಳೆ ಆನೆಗಳಿಗೆ ಪ್ರಿಯವಾಗಿರುವುದರಿಂದ ಅದನ್ನು ಕಾಡಿನಲ್ಲಿ ಬೆಳೆಸಬೇಕೆಂದು ನನ್ನ ಸಲಹೆ. ಏಕೆಂದರೆ ಇದನ್ನು ಬೆಳೆಸಲು ಉಳಿದ ಗಿಡಮರ ಬೆಳೆಸುವಂತೆ ಕಷ್ಟ ಇಲ್ಲ. ಅರಣ್ಯ ಇಲಾಖೆಗೆ ಗಿಡಗಳ ನರ್ಸರಿ ಮಾಡುವ ಖರ್ಚೂ ಇಲ್ಲ. ಕಾಡಿನಲ್ಲಿ ನೇರವಾಗಿ ಕಲ್ಲುಬಾಳೆಯ ಬೀಜಗಳನ್ನು ಬಿತ್ತಿದರಾಯಿತು. ಕಲ್ಲುಬಾಳೆ ನೆಲದ ತೇವಾಂಶವನ್ನು ಕಾಪಾಡುತ್ತದೆ. ಕಾಡಿನಲ್ಲಿ ಕಲ್ಲುಬಾಳೆ ಬೆಳೆಸಿದರೆ ನಾಡು ಉಳಿಸಿದಂತೆ ಆಗುತ್ತದೆ. ಈ ಬಗ್ಗೆ ನೀವು ಗಂಭೀರವಾಗಿ ಚಿಂತಿಸಿ ನಿರ್ಧಾರ ಕೈಗೊಳ್ಳಬೇಕು.
ಆನೆ ಹಾವಳಿ ತಪ್ಪಿಸಲು ಸರ್ಕಾರ ಕಾಡಿನಲ್ಲಿ ಕಲ್ಲುಬಾಳೆ ಬೀಜ ಬಿತ್ತುವ ಕೆಲಸವನ್ನೂ ಮಾಡಲಿ. ಇದರ ಆರಂಭವನ್ನು ಮೊದಲಿಗೆ ನಾವೇ ಮಾಡೋಣ’. ನನ್ನ ಮಾತುಗಳನ್ನು ಸಾವಧಾನದಿಂದ ಕೇಳಿದ ವಲಯ ಅರಣ್ಯ ಅಧಿಕಾರಿಗಳು ಉತ್ತರಿಸಿದರು-`ನಿಮ್ಮ ಸಲಹೆ ಸ್ವಾಗತಾರ್ಹ. ಜೂನ್, ಜುಲೈ ತಿಂಗಳಿನಲ್ಲಿಯಾದರೆ ಕಾಡಿನಲ್ಲಿ ಬೀಜ ಬಿತ್ತುವ ಕಾರ್ಯಕ್ರಮ ಸರ್ಕಾರದ ವತಿಯಿಂದ ನಡೆಯುತ್ತದೆ. ಆದರೂ ಪರ್ವಾಗಿಲ್ಲ. ನೀವು ಬೀಜ ಸಂಗ್ರಹಿಸಿ ಕೊಟ್ಟರೆ ಸದ್ಯದಲ್ಲೇ ನಾನು ನಮ್ಮ ಸಿಬ್ಬಂದಿಯವರೊಡಗೂಡಿ ನಿಮ್ಮ ಊರಿಗೆ ಬರುತ್ತೇವೆ. ಕಾಡಿನಲ್ಲಿ ಆನೆಗಳು ಊರಿಗೆ ನುಗ್ಗುವ ದಾರಿ ನೋಡಿಕೊಂಡು ಅಂಥ ಜಾಗದಲ್ಲಿ ಬೀಜ ಬಿತ್ತೋಣ’. ನನ್ನ ಮಾತನ್ನು ಅವರು ಇಷ್ಟು ಸುಲಭವಾಗಿ ಒಪ್ಪಬಹುದು ಎಂದು ನಾನಂದುಕೊಂಡಿರಲಿಲ್ಲ.
ಅವರು ಒಪ್ಪಿದ್ದು ನನಗೆ ಹೇಳತೀರದಷ್ಟು ಖುಷಿ ಕೊಟ್ಟರೂ ಬೀಜ ಎಲ್ಲಿಂದ ಸಂಪಾದನೆ ಮಾಡುವುದು ಎಂಬ ಸಮಸ್ಯೆ ಎದುರಾಯಿತು. ನನ್ನ ಮನೆಯಲ್ಲಿರುವ ಕಲ್ಲುಬಾಳೆ ಗೊನೆ ಎಳೆಯದು. ಅದು ಹಣ್ಣಾಗುವಾಗ ಕಡು ಬೇಸಿಗೆ ಬರುತ್ತದೆ. ಆ ಸಮಯದಲ್ಲಿ ಬೀಜ ಬಿತ್ತಿಯೂ ಪ್ರಯೋಜನವಿಲ್ಲ. ಈಗಾದರೆ ಮಳೆ ಆಗೊಂದು ಈಗೊಂದು ಬರುತ್ತಿರುವುದರಿಂದ ನೆಲ ಹಸಿಯಾಗಿದೆ. ಈಗಲೇ ಬೀಜ ಬಿತ್ತಬೇಕು. ಹೀಗೆ ಚಿಂತಿಸುತ್ತಿರುವಾಗ ಪಕ್ಕನೆ ಆ ಕಂಪ್ಯೂಟರ್ ಶಿಕ್ಷಕಿಯ ನೆನಪಾಯಿತು. ಅವರ ಮನೆಯೂ ಸಂಪಾಜೆಯಲ್ಲೇ ಇರುವುದು. ವಲಯ ಅರಣ್ಯಾಧಿಕಾರಿಗಳ ಕಚೇರಿಯಿಂದ ಸೀದಾ ಅವರ ಮನೆಗೆ ಹೋದೆ. `ಕಲ್ಲುಬಾಳೆ ಬೀಜ ಇದೆಯಾ?’ ವಿಚಾರಿಸಿದೆ. `ಕೇಜಿಗೆ 200 ರೂಪಾಯಿ ಕೊಟ್ಟರೆ ಕೊಡುತ್ತೇವೆ’ ಎಂದು ಅವರ ತಂದೆ ಹೇಳಿದರು. `ಸರಿ’ ಎಂದು ನಾನು 400 ರೂಪಾಯಿ ಕೊಟ್ಟು 2 ಕೇಜಿ ಬೀಜ ಮನೆಗೆ ತಂದೆ.
ವಲಯ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಹೇಳಿದೆ. `ಬೀಜ ರೆಡಿಯಾಗಿದೆ. ಯಾವಾಗ ಬರುತ್ತೀರಿ?’ ಅವರೂ ಉತ್ಸುಕತೆಯಲ್ಲಿದ್ದರು. `ನಾಳೆಯೇ ಬರುತ್ತೇವೆ’ ಎಂದರು. ಹೇಳಿದ ಮಾತಿನಂತೆ ಅವರು ಮರುದಿನ ಹತ್ತು ಗಂಟೆಗೆ ಸರಿಯಾಗಿ ಉಪವಲಯ ಅರಣ್ಯಾಧಿಕಾರಿ ಅಲ್ಲದೆ ಇತರ ಆರು ಮಂದಿ ಸಿಬ್ಬಂದಿಯವರೊಂದಿಗೆ ಮನೆಗೆ ಬಂದರು. ನಾನು ಎಲ್ಲರಿಗೂ ಟೀ ಮತ್ತು ಬಿಸಿಬಿಸಿ ಗೆಣಸಿನ ಪೋಡಿ ಮಾಡಿ ಕೊಟ್ಟೆ. ಕಾಡಿನಲ್ಲಿ ಬಾಯಾರಿಕೆಯಾದರೆ ಎಂದು 5 ಲೀಟರ್ ಕ್ಯಾನ್‌ನಲ್ಲಿ ಮಜ್ಜಿಗೆ ತುಂಬಿಸಿಕೊಂಡೆ. ನಂತರ ನಾವೆಲ್ಲರೂ ನಮ್ಮ ಮನೆಯಿಂದ ಮೇಲೆ ಇರುವ ರಕ್ಷಿತಾರಣ್ಯಕ್ಕೆ ಕತ್ತಿ, ಕೋಲು, ಬೀಜ ಹಿಡಿದು ಪ್ರವೇಶಿಸಿದೆವು. ಆಗ ತಾನೆ ಹಾಕಿ ಹೋದ ಆನೆಯ ಲದ್ದಿ ನಮ್ಮನ್ನು ಸ್ವಾಗತಿಸಿತು. ಅಲ್ಲಿ ಎಲ್ಲಾ ಕಡೆ ಮುಗಿಲಿಗೆ ಮುಟ್ಟುವ ದಪ್ಪ ದಪ್ಪ ಮರಗಳಿದ್ದವು ವಿನಾ ಆನೆಗಳು ತಿನ್ನುವ ಬಿದಿರು ಇತ್ಯಾದಿ ಮೇವು ಕೆಲವು ಕಡೆಗಳಲ್ಲಷ್ಟೇ ಇತ್ತು.
ನಮ್ಮ ಜೊತೆ ಯಾವುದೇ ಹಮ್ಮುಬಿಮ್ಮು ಇಲ್ಲದೆ, ಇಂಬಳ ಕಚ್ಚಿದರೂ ಲೆಕ್ಕಿಸದೆ ವಲಯ ಅರಣ್ಯಾಧಿಕಾರಿ ಅವರೂ ಬೀಜ ಬಿತ್ತಿದರು. ಮಧ್ಯಾಹ್ನ ಸುಮಾರು ಎರಡು ಗಂಟೆಯಷ್ಟು ಹೊತ್ತಿಗೆ ನಮ್ಮ ಕೆಲಸ ಮುಗಿಯಿತು. ಹೊರಡುವಾಗ ಅವರು ಹೇಳಿದರು- `ಬೀಜ ರೆಡಿ ಮಾಡಿ ಇಡಿ. ಮಳೆಗಾಲ ಆರಂಭವಾಗುವಾಗ ಬೇರೆ ಕಾಡುಗಳಲ್ಲಿ ಬೀಜ ಬಿತ್ತೋಣ. ಇದರ ಫಲಿತಾಂಶ ಏನಾಗುವುದು ಎಂದು ಕಾದು ನೋಡೋಣ’. ನಾನು ಆಗಲಿ ಎಂಬಂತೆ ತಲೆಯಾಡಿಸಿದೆ. ಇದು ಯಶಸ್ಸು ಆದರೆ ಆನೆ ಉಳಿಸುವಲ್ಲಿ ನನ್ನ ಅಳಿಲುಸೇವೆ ಎಂದು ಮನದಲ್ಲಿ ಅಂದುಕೊಂಡೆ.
ನಾನು ಈಗ ನಾವು ಬಿತ್ತಿದ ಆ ಕಲ್ಲುಬಾಳೆಯ ಬೀಜಗಳು ಮೊಳಕೆ ಒಡೆದು, ಗಿಡಗಳಾಗಿ ಬೆಳೆದು ಆನೆಗಳಿಗೆ ಆಹಾರವಾಗುವುದನ್ನು ಕಾಯುತ್ತಿದ್ದೇನೆ.
ಲೇಖಕಿ ಸಹನಾ ಕಾಂತಬೈಲು ಸಂಪಾಜೆಯ ದಬ್ಬಡ್ಕದವರು. ಕೃಷಿ ಮಹಿಳೆ. ಇವರ ಮತ್ತೊಂದು ಕೃತಿ ‘ಇದು ಬರಿ ಮಣ್ಣಲ್ಲ’ ಲಲಿತ ಪ್ರಬಂಧಗಳ ಸಂಕಲನ ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿದೆ.
Wah, idu nijakku olleya kelasa Sahana avre. Nimma mattu nimma jotege sahakarisida elrigu nannadondu dodda salam.
ಲೇಖಕಿಯ ಸಾಮಾಜಕ ಕಳಕಳಿ ಎಲ್ಲರಿಗೂ ಮಾದರಿ, ಅಭಿನಂದನಿಯ, ಮತ್ತು ಪ್ರಶಂಸನಿಯ ?