ಸೈದ್ಧಾಂತಿಕ ಹಠಮಾರಿತನವು ಚೌಕಟ್ಟುಗಳನ್ನು ನಿರ್ಮಿಸುತ್ತದೆ. ಆ ಚೌಕಟ್ಟಿನಾಚೆ ಯೋಚಿಸುವ ಸಹನೆಯನ್ನೇ ಅದು ಕಳೆದುಕೊಳ್ಳುತ್ತದೆ. ತನ್ನ ಚೌಕಟ್ಟಿಗೆ ಒಗ್ಗದವರನ್ನು ಅದು ‘ಅನ್ಯ’ವಾಗಿಸುತ್ತ ಆ ‘ಅನ್ಯ’ವನ್ನು ದ್ವೇಷಿಸುತ್ತ ನಡೆಯುತ್ತದೆ. ಬಲಪಂಥ, ಎಡಪಂಥಗಳೆಂಬ ಚೌಕಟ್ಟುಗಳೂ ಹಾಗೆಯೇ ಕಾಣಿಸುತ್ತಿವೆ. ಅನೇಕರು ಬರಹಗಾರರನ್ನು ನಿರ್ದೇಶಿಸುವ ಪರಿ ಹೇಗಿದೆಯೆಂದರೆ, “ನೀವು ಆ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ, ಈ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ. ಸರಿಯಾಗಿ ನೀವದಕ್ಕೆ ಫಿಟ್ ಆಗದಿದ್ದರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ. ಚೌಕಟ್ಟಿಗೆ ತಕ್ಕಂತೆ ಮುದುರಿಕೊಳ್ಳಿ. ಆದರೆ ಚೌಕಟ್ಟು ಮಾತ್ರ ಅಲುಗಾಡಬಾರದು!” ಮನುಷ್ಯರಿಗಿಂತ ಚೌಕಟ್ಟುಗಳೇ ಮುಖ್ಯವಾಗುವ ವಿಪರ್ಯಾಸವಿದು.
ಇಂದು ಬಿಡುಗಡೆಯಾಗಲಿರುವ ಡಾ. ಗೀತಾ ವಸಂತ ಅವರ “ಅವಳ ಅರಿವು” ಅಂಕಣ ಬರಹಗಳ ಸಂಕಲನದ ಒಂದು ಲೇಖನ ನಿಮ್ಮ ಓದಿಗೆ

ನಾನೇಕೆ ಬರೆಯುತ್ತೇನೆ? ಎಂಬುದು ಬಹು ಸೂಕ್ಷ್ಮ ಪ್ರಶ್ನೆ. ಎಲ್ಲ ಲೇಖಕರೂ ಆಂತರ್ಯದಲ್ಲಿ ಕೇಳಿಕೊಳ್ಳಬೇಕಾದ ಮುಖ್ಯ ಪ್ರಶ್ನೆಯೂ ಹೌದು. ಈ ಪ್ರಶ್ನೆಗೆ ಸಿಗುವ ಎಲ್ಲ ಉತ್ತರಗಳನ್ನು ಒಟ್ಟಾಗಿ ನೋಡಿದರೆ ಎಷ್ಟೋ ಸಲ ಅವು ಒಂದಕ್ಕೊಂದು ವಿರುದ್ಧ ದಿಕ್ಕುಗಳಲ್ಲಿ ಚಲಿಸುತ್ತಿರುತ್ತವೆ. ಕೆಲವೊಮ್ಮೆ ತೀರ ಹತ್ತಿರದಲ್ಲಿಯೂ ಹಾಯ್ದುಹೋಗಬಹುದು. ಅಂದರೆ, ಬರೆಯುವುದಕ್ಕೆ ಯುನಿವರ್ಸಲ್ ಆದ ಕಾರಣಗಳಿಲ್ಲ. ಒಂದೇ ಬಗೆಯ ಒತ್ತಡ-ಒತ್ತಾಸೆಗಳು ಇಲ್ಲ. ಕೆಲವರಿಗೆ ಬರವಣಿಗೆ ತೀರ ಖಾಸಗಿಯಾದ ಸಂಗತಿ. ಅದು ಮನಸ್ಸಿನ ಒಳಕೋಣೆಯ ಮುಲುಕಾಟ.ಬರವಣಿಗೆಯಲ್ಲಿ ಒಳಗಿನೊಳಗನ್ನು ಅಭಿವ್ಯಕ್ತಿಸುವುದೆಂದರೆ ಕನ್ನಡಿಯ ಮುಂದೆ ಬೆತ್ತಲಾಗಿ ನಿಂತಂತೆ. ಒಂದು ಬಗೆಯಲ್ಲಿ ಗಾಬರಿಯಾದರೆ, ಇನ್ನೊಂದು ಬಗೆಯಲ್ಲಿ ಬಿಡುಗಡೆಯ ನಿರಾಳತೆ ಹಾಗೆಯೇ ಗಾಬರಿ, ಮುಜುಗರ. ಏಕೆಂದರೆ ನಾವು ನಮ್ಮ ಬತ್ತಲೆಯನ್ನು ನೋಡಿಕೊಂಡೇ ಇಲ್ಲ! ಸದಾ ಒಂದಿಲ್ಲೊಂದು ಆವರಣಗಳನ್ನು ಹೊದ್ದುಹೊದ್ದು, ಕೊನೆಗೆ ಅವು ನಮ್ಮ ಚರ್ಮವೇ ಆಗಿಬಿಡುವಂಥ ಅನಿವಾರ್ಯತೆಯಲ್ಲಿ ಆ ನಿಜನೋಟವನ್ನು ಕಳೆದುಕೊಂಡಿದ್ದೇವೆ. ಒಂಟಿಯಾಗಿ ನಿಂತು ನಮ್ಮದೇ ಅಸಲಿ ಧ್ವನಿಯನ್ನು ಆಲಿಸುವ, ಅಸಲಿ ರೂಪವನ್ನು ಕಾಣುವ ಹಂಬಲದ ಅಭಿವ್ಯಕ್ತಿಯಾಗಿ ಬರವಣಿಗೆ ಒದಗುತ್ತದೆ; ಒದಗಬೇಕು. ಬರಹ ಬಿಡುಗಡೆಯ ಭಾವ ಹೇಗೆಂದರೆ, ಒಳಗೊಳಗೇ ಭಾರವಾಗಿ ಬಾಧಿಸುವ ಸಂಗತಿಗಳು ಅಕ್ಷರಗಳಲ್ಲಿ ಹರಿದು ಹಗುರಾಗುತ್ತವೆ. ನಿರಾಳಗೊಳಿಸುವ ಸಾಧ್ಯತೆಯಾಗಿ ಬರವಣಿಗೆ ಕೈಹಿಡಿಯುತ್ತದೆ.

ಬರವಣಿಗೆಯೆಂಬುದು ಅನ್ವೇಷಣೆಯೂ ಹೌದು. ಬರೆಯುತ್ತ ಬರೆಯುತ್ತಲೇ ತೆರೆಯುವ ಅಸಂಖ್ಯ ದಾರಿಗಳ ಈ ಪಯಣ ಪೂರ್ವನಿಶ್ಚಿತವಲ್ಲ. ಅನುಭವದ ಸ್ವರೂಪವನ್ನು ಅರಿಯುತ್ತ, ಆಲೋಚನೆಗಳಿಗೆ ಆಕಾರ ಕೊಡುತ್ತ, ಅದನ್ನು ಹೇಗೆಲ್ಲ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬಹುದೆಂದು ಯೋಚಿಸುವಾಗ ಅದು ಪಕ್ಕಾ ಸೃಜನಕ್ರಿಯೆ. ಈ ಕ್ರಿಯೆಯನ್ನು ಸೂಕ್ಷ್ಮಗೊಳಿಸುತ್ತ ನಡೆದಂತೆಲ್ಲ ಅದು ಕಲೆಗಾರಿಕೆ. ಕಲೆಯ ಮೂಲಕ ಅನುಭವ, ಆಲೋಚನೆಗಳು ದಾಟುವಾಗ, ದಾಟಿಸುವ ಬರಹಗಾರನೂ, ಸ್ವೀಕರಿಸುವ ಓದುಗನೂ ಏಕಕಾಲಕ್ಕೆ ಸೂಕ್ಷ್ಮಗೊಳ್ಳುತ್ತಾರೆ.

ಬರಹಕ್ಕೆ ಬೇಕಾದ ಸೃಜನಶಕ್ತಿ ವೈಯಕ್ತಿಕವಾದುದು. ಬರಹಕ್ಕೆ ಕಾರಣವಾಗುವ ಲೋಕಗ್ರಹಿಕೆಯೂ ವೈಯಕ್ತಿಕವೇ. ಬರಹವೆಂಬುದು ಬರಿಯ ಪ್ರತಿಕ್ರಿಯೆಯಲ್ಲ. ಅದು ಸ್ವ-ಶೋಧದ ಪ್ರಕ್ರಿಯೆಯೂ ಹೌದು. ಆದರೆ, ಬರಹವು ‘ಸಾಹಿತ್ಯ’ ವೆಂಬ ಸಾಮೂಹಿಕ ಆಕೃತಿಯಲ್ಲಿ ಪ್ರವೇಶಿಸಿದಾಗ ಸಾಮುದಾಯಿಕ ಜವಾಬ್ದಾರಿಯಲ್ಲೂ ಪಾತ್ರವಹಿಸಬೇಕಾಗುತ್ತದೆ. ಆಗಲೇ ಬರಹಗಾರರು ಕವಲುದಾರಿಯ ಮುಂದೆ ನಿಲ್ಲುತ್ತಾರೆ. ತಾನು ಅಭಿವ್ಯಕ್ತಿಸಲು ಹಾತೊರೆಯುತ್ತಿರುವುದೇನನ್ನು? ತನಗನಿಸಿದ್ದನ್ನು ಬರೆಯಬೇಕೇ? ಅಥವಾ ಸಾಹಿತಿ ಏನು ಬರೆಯಬೇಕೆಂದು ಕಾಲ-ಸಂದರ್ಭ-ಸಮಾಜಗಳು ಅಪೇಕ್ಷಿಸುತ್ತವಲ್ಲ ಅದನ್ನು ಬರೆಯಬೇಕೇ ಎಂಬ ದ್ವಂದ್ವಕ್ಕೆ ಎದುರಾಗುತ್ತಾರೆ. ಈ ಪ್ರಶ್ನೆಯನ್ನು ಹದಿಹರೆಯದ ದಿನಗಳಲ್ಲಿ ಬರಹಗಾರರ ಕಮ್ಮಟವೊಂದರಲ್ಲಿ ನಾನು ಮುಗ್ಧವಾಗಿ ಕೇಳಿದ್ದೆ. ಅಲ್ಲಿ ಕನ್ನಡದ ಪ್ರಮುಖ ಲೇಖಕರ ಹಾಗೂ ವಿಮರ್ಶಕರ ಸಮೂಹವೇ ಇತ್ತು. ಇದೊಂದು ತುಂಬ ಮಹತ್ವದ ಪ್ರಶ್ನೆ… ಎಂದೇನೋ ಹೇಳಿದ್ದರು ಆಗ. ಸಮರ್ಪಕ ಉತ್ತರ ಮಾತ್ರ ಸಿಗಲಿಲ್ಲವೆಂದೆನಿಸಿತ್ತು. ಹಾಗೆ ಸಿದ್ಧ ಉತ್ತರಗಳು ಇರುವುದಿಲ್ಲ ಎಂದು ಆಗ ತಿಳಿದಿರಲಿಲ್ಲ. ಆದರೆ, ಈ ಪ್ರಶ್ನೆ ಈಗಲೂ ಎದುರಾಗುತ್ತಲೇ ಇರುವುದು ಸುಳ್ಳಲ್ಲ.

ಆಯಾಕಾಲದ ಬರವಣಿಗೆಯನ್ನು ನಿರ್ದೇಶಿಸುವುದು ಸಾಹಿತ್ಯಕ ಕಾರಣಗಳಷ್ಟೇ ಆಗಿರುವುದಿಲ್ಲ ಎಂಬುದು ಗಮನಾರ್ಹ ಸಂಗತಿ. ಆಯಾ ಕಾಲದ ಸಾಮಾಜಿಕ ಸಂರಚನೆ, ಸಾಂಸ್ಕೃತಿಕ ಮಾದರಿಗಳು, ರಾಜಕೀಯ ಒತ್ತಡಗಳು, ಅಧಿಕಾರ ವಿನ್ಯಾಸಗಳು ಎಲ್ಲವೂ ಪರೋಕ್ಷವಾಗಿ ಬರವಣಿಗೆಯ ದಿಕ್ಕನ್ನು ಪ್ರಭಾವಿಸುತ್ತಿರುತ್ತವೆ. ವೈಯಕ್ತಿಕ ಸಂವೇದನೆಗಳು ನಿರ್ವಾತದಲ್ಲಿ ರೂಪುಗೊಳ್ಳುವುದಿಲ್ಲ. ಸಮೂಹ ಸ್ಮೃತಿಗಳು ಆಳದಲ್ಲೆಲ್ಲೋ ಅವುಗಳನ್ನು ರೂಪಿಸುತ್ತಿರುತ್ತವೆ. ವ್ಯಕ್ತಿಗೆ ಅರಿವಿಲ್ಲದೆಯೇ ವ್ಯಕ್ತಿಯೊಳಗೆ ಸಮೂಹವು ಧ್ವನಿಸುವುದು ಅಭಿವ್ಯಕ್ತಿಯ ಅಚ್ಚರಿ. ಪರಂಪರೆ ಮತ್ತು ವ್ಯಕ್ತಿ ಪ್ರತಿಭೆ ಎಂಬ ಟಿ.ಎಸ್.ಎಲಿಯಟ್‍ನ ಪರಿಕಲ್ಪನೆಯನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ಇದು ವ್ಯಕ್ತಿ ಪ್ರತಿಭೆಯ ಮಾತಾಯಿತು. ವ್ಯಕ್ತಿ ಪ್ರತಿಭೆಯಿಂದಲೇ ಜನಿಸಿದ ‘ಸಾಹಿತ್ಯ’ವೆಂಬ ಸಾಮೂಹಿಕ ಆಕೃತಿಯು ಸಮೂಹ ಸ್ಮೃತಿಯ ಭಾಗವಾಗುತ್ತ, ಮೌಲ್ಯ ಮಾದರಿಗಳನ್ನೂ, ಚಿಂತನ ಕ್ರಮಗಳನ್ನೂ ರೂಢಿಸುತ್ತ ಅರಿವಿನ ಭಾಗವಾಗುತ್ತದೆ. ಇದೊಂದು ಚಕ್ರವಿದ್ದಂತೆ.

ಚರಿತ್ರೆಯನ್ನು ಗಮನಿಸಿದಾಗ, ಸಾಮೂಹಿಕ ಅರಿವಿನ ಎಚ್ಚೆತ್ತ ರೂಪವಾಗಿ ಸಾಹಿತ್ಯ ಕಾಣುತ್ತ ಬಂದಿದೆ. ಪಂಪಯುಗದ ಧಾರ್ಮಿಕ ಪ್ರಜ್ಞೆ ಪಂಪನೊಬ್ಬನದಲ್ಲ. ಅದು ಆ ಕಾಲದೊಂದಿಗೆ ರೂಪತಳೆದದ್ದು. ಹಾಗೆಯೇ ವಚನಕಾರ ಚಿಂತನ ಕ್ರಮ ಆ ಕಾಲದ ಸಾಮಾಜಿಕ ಸ್ಥಿತ್ಯಂತರಗಳನ್ನು ಒಳಗೊಂಡಂತೆ ರಚನೆಯಾದದ್ದು. ಇಂದಿನ ಸಂದರ್ಭಕ್ಕೆ ಬಂದರೆ, ಪ್ರಜಾಪ್ರಭುತ್ವದ ಮೌಲ್ಯಗಳು ನಮ್ಮ ಚಿಂತನ ವಿನ್ಯಾಸದ ಹಿಂದೆ ಕೆಲಸಮಾಡುತ್ತಿವೆ. ಕಾಲ-ದೇಶಗಳನ್ನು ಬಿಟ್ಟು ಬರೆಯಲಾರೆವು ಎಂಬುದು ನಿಜ. ಆದರೂ ಕಾಲದೇಶಗಳಲ್ಲಿ ಕಾಲೂರಿ ನಿಂತೇ ಕಾಲದೇಶಗಳನ್ನು ಮೀರುವ ಕ್ರಮವೊಂದಿದೆ. ಕುವೆಂಪು ಪ್ರತಿಪಾದಿಸುವ ವಿಶ್ವಮಾನವ ಪ್ರಜ್ಞೆ, ಬೇಂದ್ರೆ ಪ್ರತಿಪಾದಿಸುವ ವಿಶ್ವಮೈತ್ರಿಗಳು ನೆಲದ ವಾಸ್ತವವನ್ನು ನಿರಾಕರಿಸದೇ, ವಾಸ್ತವದ ಮಿತಿಗಳನ್ನು ಮೀರಿ ಹಾರುವ ಪ್ರಯತ್ನಗಳಾಗಿವೆ. ಇಂಥ ಮೀರುವ ಶಕ್ತಿ ಹಾಗೂ ಸ್ವಾತಂತ್ರ್ಯಗಳು ಸದಾ ನಮ್ಮನ್ನು ಮುಕ್ತ ಅರಿವಿಗೆ ತೆರೆದಿಡುತ್ತವೆ.

ಬರವಣಿಗೆಯೆಂಬುದು ಅನ್ವೇಷಣೆಯೂ ಹೌದು. ಬರೆಯುತ್ತ ಬರೆಯುತ್ತಲೇ ತೆರೆಯುವ ಅಸಂಖ್ಯ ದಾರಿಗಳ ಈ ಪಯಣ ಪೂರ್ವನಿಶ್ಚಿತವಲ್ಲ. ಅನುಭವದ ಸ್ವರೂಪವನ್ನು ಅರಿಯುತ್ತ, ಆಲೋಚನೆಗಳಿಗೆ ಆಕಾರ ಕೊಡುತ್ತ, ಅದನ್ನು ಹೇಗೆಲ್ಲ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬಹುದೆಂದು ಯೋಚಿಸುವಾಗ ಅದು ಪಕ್ಕಾ ಸೃಜನಕ್ರಿಯೆ. ಈ ಕ್ರಿಯೆಯನ್ನು ಸೂಕ್ಷ್ಮಗೊಳಿಸುತ್ತ ನಡೆದಂತೆಲ್ಲ ಅದು ಕಲೆಗಾರಿಕೆ.

ಸಿದ್ಧಾಂತ ಹಾಗೂ ಸಾಹಿತ್ಯವನ್ನು ಒಂದೇ ಆಗಿ ನೋಡಲು ಹೊರಟಾಗ ನಾವು ಮೀರಿ ಹಾರುವ ಬಲವನ್ನು ಕಳೆದುಕೊಳ್ಳುತ್ತೇವೆ. ಅದರಲ್ಲೂ ಸೈದ್ಧಾಂತಿಕ ಸ್ಪಷ್ಟತೆ ಬೇರೆ, ಸೈದ್ಧಾಂತಿಕ ಹಠಮಾರಿತನವೇ ಬೇರೆ. ಸೈದ್ಧಾಂತಿಕ ಹಠಮಾರಿತನವು ಚೌಕಟ್ಟುಗಳನ್ನು ನಿರ್ಮಿಸುತ್ತದೆ. ಆ ಚೌಕಟ್ಟಿನಾಚೆ ಯೋಚಿಸುವ ಸಹನೆಯನ್ನೇ ಅದು ಕಳೆದುಕೊಳ್ಳುತ್ತದೆ. ತನ್ನ ಚೌಕಟ್ಟಿಗೆ ಒಗ್ಗದವರನ್ನು ಅದು ‘ಅನ್ಯ’ವಾಗಿಸುತ್ತ ಆ ‘ಅನ್ಯ’ವನ್ನು ದ್ವೇಷಿಸುತ್ತ ನಡೆಯುತ್ತದೆ. ಬಲಪಂಥ, ಎಡಪಂಥಗಳೆಂಬ ಚೌಕಟ್ಟುಗಳೂ ಹಾಗೆಯೇ ಕಾಣಿಸುತ್ತಿವೆ. ಅನೇಕರು ಬರಹಗಾರರನ್ನು ನಿರ್ದೇಶಿಸುವ ಪರಿ ಹೇಗಿದೆಯೆಂದರೆ, “ನೀವು ಆ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ, ಈ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ. ಸರಿಯಾಗಿ ನೀವದಕ್ಕೆ ಫಿಟ್ ಆಗದಿದ್ದರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ. ಚೌಕಟ್ಟಿಗೆ ತಕ್ಕಂತೆ ಮುದುರಿಕೊಳ್ಳಿ. ಆದರೆ ಚೌಕಟ್ಟು ಮಾತ್ರ ಅಲುಗಾಡಬಾರದು!” ಮನುಷ್ಯರಿಗಿಂತ ಚೌಕಟ್ಟುಗಳೇ ಮುಖ್ಯವಾಗುವ ವಿಪರ್ಯಾಸವಿದು. ಸೈದ್ಧಾಂತಿಕ ಚೌಕಟ್ಟಿನಲ್ಲಿ ಹುದುಗಲಿಚ್ಛಿಸದವರನ್ನು ಇಂದು ಎಡಬಿಡಂಗಿಗಳು, ಅವಕಾಶವಾದಿಗಳು ಎಂದೆಲ್ಲ ಜರಿಯಲಾಗುತ್ತಿದೆ. ಎಲ್ಲಾದರೂ ಒಂದು ಕಡೆ ಇರಲೇಬೇಕೇಂಬ ಫರ್ಮಾನು ಹೊರಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕುವೆಂಪು ಪ್ರತಿಪಾದಿಸಿದ ವಿಶ್ವಮಾನವತತ್ವ ನೆನಪಾಗುತ್ತದೆ. ವಿಶ್ವಮಾನವ ಗೀತೆಯಲ್ಲಿ ಕುವೆಂಪು ‘ಎಲ್ಲ ತತ್ವದೆಲ್ಲೆ ಮೀರಿ’ ನಿರ್ದಿಗಂತವಾಗಿ ಏರಬೇಕೆಂದು ಪ್ರತಿಪಾದಿಸುತ್ತಾರೆ. ಇದನ್ನು ಅವಕಾಶವಾದವೆನ್ನೋಣವೆ? ವಿಶ್ವಮಾನವತ್ವ ಎನ್ನುವುದು ಕೂಡ ಒಂದು ತತ್ವ-ಸಿದ್ಧಾಂತವಲ್ಲ. ಅದು ಅನಂತವಾಗಿ ವಿಕಸಿತವಾಗುತ್ತ ಚಲಿಸುತ್ತಲೇ ಇರುವ ಅದಮ್ಯ ಸಾಧ್ಯತೆ. ಹಾಗೆ ವಿಕಾಸವಾಗಲು ಬೇಕಾದದ್ದು ಸಾಮಾಜಿಕ, ರಾಜಕೀಯ ಸಿದ್ಧಾಂತಗಳೋ, ಸೋಕಾಲ್ಡ್ ಜ್ಞಾನಮಾದರಿಗಳೋ ಅಲ್ಲ. ಬದಲಿಗೆ, ಯಾವುದೂ ನಮ್ಮನ್ನು ಕಟ್ಟಿಹಾಕದಂತೆ ನೋಡಿಕೊಳ್ಳಲು ಬೇಕಾದ ಅಗಾಧ ಆಂತರಿಕ ಸ್ವಾತಂತ್ರ್ಯ ಹಾಗೂ ಹೊಸಹೊಸದಾಗಿ ಹುಟ್ಟಲು ಬೇಕಾದ ಅನನ್ಯ ಸೃಜನಶೀಲತೆ. ಚಲನೆಯೇ ಬೇಡ ಎನ್ನುವಲ್ಲಿ, ಮತ್ತೊಂದು ಅಭಿಪ್ರಾಯ ಇರಲೇಬಾರದು ಎನ್ನುವ ಹಠಮಾರಿತನದಲ್ಲಿ ಪರಿವರ್ತನಶೀಲತೆಯಿಂದಲೇ ಸಾಧ್ಯವಾಗುವ ವಿಕಾಸದ ನಡಿಗೆ ನಿಂತುಹೋಗುತ್ತದೆ. ವಿಕಾಸಗೊಳ್ಳಲು-ಹಿಗ್ಗಲು ಸ್ಪೇಸ್ ಬೇಕು. ಅದೇ ನಿರ್ದಿಗಂತಗೊಳ್ಳುವುದು. ಕುಬ್ಜತೆಯಿಂದ ಹೊಒರಬಂದು ಅನಂತ ತಾನ್ ಅನಂತವಾಗುವುದು ಹಾಗೆ. ಎಲ್ಲಿಯೂ ನಿಲ್ಲದ ಲೋಕಪ್ರವಾಹದಲ್ಲಿ ಒಂದಾಗುವುದು. ಇಂಥ ಚಲನಶೀಲತೆಯನ್ನು ಒಳ ಎಚ್ಚರದಲ್ಲಿ ಗಮನಿಸುತ್ತ ಅದಕ್ಕೆ ಆಕಾರ ಕೊಡುವಂಥ ಸಾಹಿತ್ಯ ನಮಗೆ ಬೇಕು. ಅಂಥ ಸಾಹಿತ್ಯ ರೂಪುಗೊಳ್ಳಲು ಅಂಥ ಘನ ಮನಸ್ಸುಗಳೂ ಬೇಕು.

ಸಾಹಿತ್ಯವೆಂದರೆ ಕಟ್ಟುವುದು ಹಾಗೂ ಕಟ್ಟು ಬಿಚ್ಚುವುದು. ಅದು ಆವರಣಗಳನ್ನು ಕಳಚಿ ಬಯಲಾಗುವ ಅವಕಾಶವೇ ಹೊರತು ಆವರಣಗಳನ್ನು ಸೃಷ್ಟಿಸುವ ಅವಕಾಶವಾದಿತನವಲ್ಲ. ಬಯಲಾಗುವುದೆಂದರೆ ಅರಿವಿನ ಮಿತಿಗಳನ್ನು ಮೀರುವುದು. ಅಂಥ ಮೀರುವಿಕೆಗೆ ಬಹುದೊಡ್ಡ ಧಾರಣಶಕ್ತಿ ಬೇಕು. ಪೂರ್ವಗ್ರಹಗಳಿಂದ ಹೊರಬಂದು ಹೊಸದೊಂದು ಸ್ಪೇಸ್ ಸಾಧ್ಯವಾಗಿಸಿಕೊಳ್ಳಲು ಅಪಾರ ಸಹನೆ, ಸಮಗ್ರದೃಷ್ಟಿ ಹಾಗೂ ಜವಾಬ್ದಾರಿಯುತ ನಡೆ ಬೇಕು. ಜಾತ್ಯತೀತ, ಧರ್ಮನಿರಪೇಕ್ಷ, ಪ್ರಗತಿಪರ ಎಂಬ ಪದಗಳು ಇಂಥದೇ ದೃಷ್ಟಿ ಹಾಗೂ ಧ್ಯೇಯಗಳನ್ನುಳ್ಳ ಪರಿಕಲ್ಪನೆಗಳು. ಆದರೆ ಇಂಥ ಪದಗಳನ್ನು ಪುಂಖಾನುಪುಂಖವಾಗಿ ಬಳಸುವ ಇಂದಿನ ಕಾಲಮಾನದಲ್ಲಿ ಬಹುತೇಕರು ಅದನ್ನು ಬರಿಯ ರಾಜಕೀಯ ಸಂದರ್ಭದಲ್ಲಿಟ್ಟು ನೋಡುತ್ತಿರುವುದು ಗಮನಕ್ಕೆ ಬರುತ್ತದೆ. ಆ ಪದಗಳು ಕೆಲವರ ಸ್ವತ್ತು ಮಾತ್ರ ಎಂಬ ಧೋರಣೆಯೊಂದು ಮೈದಳೆಯುತ್ತಿದೆ. ನೈಜವಾದ ಜೀವಪರ ಕಳಕಳಿಯಿರುವ ಎಲ್ಲ ಬರಹಗಾರರ ಉದ್ದೇಶವೂ ಜಾತಿ, ಮತ ಹಾಗೂ ಸಿದ್ಧ ನಂಬಿಕೆ ಮತ್ತು ಆಲೋಚನಾ ಕ್ರಮಗಳ ಮಿತಿಯನ್ನು ಮೀರುವುದು ಹಾಗೂ ಅವುಗಳ ಹೆಸರಿನಲ್ಲಿ ಸ್ಥಾಪಿತವಾಗುವ ಅಧಿಕಾರ ಸಂಬಂಧಗಳನ್ನು, ಶ್ರೇಷ್ಠ-ಕನಿಷ್ಟ, ಮುಖ್ಯ-ಅಮುಖ್ಯವೆಂಬ ಕಲ್ಪನೆಗಳನ್ನು ದಾಟುವುದೇ ಆಗಿರುತ್ತದೆ. ಇಂಥ ‘ದಾಟು’ವಿಕೆಯನ್ನು, ಚಲನಶೀಲತೆಯನ್ನು, ಪರಿವರ್ತನಶೀಲತೆಯನ್ನು ಅನುಮಾನಿಸುವ, ಅವಮಾನಿಸುವ ಪೂರ್ವಗ್ರಹ ಪೀಡಿತ ದೃಷ್ಟಿಯೊಂದು ಸಾಹಿತ್ಯ ವಲಯದಲ್ಲಿ ಗಟ್ಟಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದು ಪೂರ್ವಗ್ರಹವೇ ಆಗಿದ್ದರೆ ಎಂದಾದರೂ ಕಳಚಬಹುದೆಂಬ ಆಶಾಭಾವ ಹೊಂದಬಹುದು. ಆದರೆ, ಬೇಕೆಂತಲೇ ನಿರ್ಮಿಸಿಕೊಂಡಿರುವ ರಚನೆಗಳಲ್ಲಿ ನಿಂತು ಹೊರಗಿರುವವರನ್ನು ತಪ್ಪಿತಸ್ಥರನ್ನಾಗಿ ಕಾಣುವ ಕ್ರಮದಲ್ಲಿಯೇ ದೋಷವಿದೆಯೆನಿಸುತ್ತದೆ. ಇಂಥ ಅನುಕೂಲಸಿಂಧು ರಚನೆಗಳು ಮಹಾಕೋಟೆಗಳಾಗುತ್ತ ಯಾರನ್ನು ಒಳಸೆಳೆದುಕೊಳ್ಳಬೇಕು, ಯಾರನ್ನು ಹೊರಗಿಡಬೇಕು ಎಂಬ ಸ್ವಾರ್ಥ ರಾಜಕಾರಣದಲ್ಲಿ ಪರ್ಯವಸನಗೊಳ್ಳುತ್ತವೆ. ಲೇಖಕರಲ್ಲಿ ಇಂಥ ಮನಸ್ಥಿತಿ ಹೆಚ್ಚಾದಂತೆಲ್ಲ ಆವರಣಗಳು ರೂಪುಗೊಳ್ಳುತ್ತಲೇ ಹೋಗುತ್ತವೆ. ಅಸಹನೆ ಹೆಚ್ಚುತ್ತದೆ. ಬರಹವು ಆವರಣಗಳನ್ನು ಕಳಚಿಕೊಂಡು ಬಯಲಾಗುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ.

ವ್ಯಕ್ತಿತ್ವ, ಸಮಾಜ, ಸಂಸ್ಕೃತಿ, ಧರ್ಮ, ರಾಜಕಾರಣ…. ಇವೆಲ್ಲವೂ ಒಂದೊಂದು ರಚನೆಗಳೇ. ಈ ರಚನೆಗಳ ಹಿಂದಿನ ನೈಜಸ್ವರೂಪವನ್ನು ಶೋಧಿಸುವ ಸಾಹಿತ್ಯದ ಕಳಕಳಿಯನ್ನು ಮತ್ತೊಮ್ಮೆ ಧರಿಸದ ಹೊರತೂ ನಮ್ಮ ಬರಹಕ್ಕೆ ನೈತಿಕ ಶಕ್ತಿ ಒದಗುವುದಿಲ್ಲ. ಮಾತುಸೋತ ಪ್ರಸಕ್ತ ಸಂದರ್ಭದಲ್ಲಿ ಮತ್ತೆಮತ್ತೆ ಕನ್ನಡಿಯ ರೂಪಕ ಕಾಡುತ್ತದೆ. ಕನ್ನಡಿಗೆ ಈಗ ಜಿಡ್ಡುಹತ್ತಿದೆ. ಅದನ್ನು ಸರಿಯಾಗಿ ತೊಳೆಯದಿದ್ದರೆ ನಮ್ಮ ರೂಪ ವಿಕೃತವಾಗಿ ಕಾಣುತ್ತದೆ. ನಮ್ಮ ನುಡಿಗಳು ತಿರುಚಲ್ಪಟ್ಟಂತೆ ತೋರುತ್ತವೆ. ಕನ್ನಡಿಯ ಮುಂದೆ ಬೆತ್ತಲಾದಂತೆ ಅಂತಃಸಾಕ್ಷಿಯೆದುರು ನಾವು ಬರಹಗಾರರೆನಿಸಿಕೊಂಡವರು ಬೆತ್ತಲಾಗಬೇಕಿರುವುದು ಈ ಕ್ಷಣದ ತುರ್ತು. ಪ್ರಾಯಶಃ ಆಗ ಹೊರಗೆ ಬಯಲು ಕಾದಿರಬಹುದು. ಆವರಣಗಳನ್ನು ಕಳಚಿಕೊಳ್ಳಲು ಒಟ್ಟಿಗೆ ನಡೆಯುವ ನಡೆ ಸಹಾಯಕಾರಿಯಾದೀತು. ಅಲ್ಲವೇ?

(ಸಖೀಗೀತ 17 (ಜುಲೈ 15, 2017)
(ಕೃತಿ: ಅವಳ ಅರಿವು (ಅಂಕಣ ಬರಹಗಳು), ಲೇಖಕರು: ಡಾ. ಗೀತಾ ವಸಂತ, ಪ್ರಕಾಶಕರು: ಜನ ಪ್ರಕಾಶನ, ಬೆಲೆ: 200/-)