ಕಿಶೋರಿ ತರಬೇತಿಯ ಪ್ರಮುಖ ಆಶಯ ಹದಿಹರೆಯದ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳದ ವಿವಿಧ ರೂಪಗಳನ್ನು ಪರಿಚಯಿಸುವುದು ಮತ್ತು ಮಕ್ಕಳ ಸಾಗಾಟದ ಬಗ್ಗೆ ಎಚ್ಚರಿಕೆ ಮೂಡಿಸುವುದು. ಆ ವಯೋಮಾನದ ಮಕ್ಕಳಿಗೆ ಏನು ತಿಳಿದಿರುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ನಮ್ಮೆಲ್ಲರ ನಿರೀಕ್ಷೆಗಳು ಸುಳ್ಳಾದವು. ಮಕ್ಕಳ ಸಾಗಾಟ ಏಕೆ ಮಾಡುತ್ತಾರೆ ಎಂದಾಗ ಬಂದು ಉತ್ತರಗಳು ಇಂದಿನ ಮಕ್ಕಳು ತುಂಬಾ ಪ್ರಬುದ್ಧರಾಗಿದ್ದಾರೆ ಎಂಬ ಸಂದೇಶ ನೀಡುತ್ತಿದ್ದವು. ಜನರ ಕೈಗೆ ಸಿಕ್ಕರೆ ಹೊಡಿತಾರೆ ಅಂತ ಭಯಪಡುತ್ತಾರೆ ಎಂದರು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ
ಅಂದು ಶಾಲೆ ಮುಗಿಸಿ ಮನೆಯ ಕಡೆ ಹೊರಟಿದ್ದೆ. ಪೋಷಕಿಯೊಬ್ಬರು ನನಗೆ ಎದುರಾದರು. ಅವರ ತರಾತುರಿ, ಮೊಗದ ಮೇಲಿನ ಕೋಪ ನೋಡಿದರೆ ನನ್ನ ಮೇಲೆ ಏನೋ ಮಾತಿನ ಪ್ರಹಾರಕ್ಕೆ ಸಿದ್ಧರಾಗಿ ಬಂದಿರಬಹುದು ಎಂದು ಬಹುಬೇಗ ಅರ್ಥವಾಯಿತು. ಅದೆಷ್ಟೋ ವರ್ಷಗಳಿಂದ ಮಕ್ಕಳು ಮತ್ತು ಪೋಷಕರ ಮನಸ್ಸನ್ನು ಓದುತ್ತಿದ್ದೇನೆ. ಅವರ ಮೊಗದ ಮೇಲಿನ ಪ್ರತಿ ಗೆರೆಗೂ ಅರ್ಥ ತಿಳಿಯುವಷ್ಟು ಅನುಭವವನ್ನು ಶಿಕ್ಷಕ ವೃತ್ತಿ ನನಗೆ ಕಲಿಸಿದೆ. ಮೇಡಂ ನಿಲ್ಲಿ ಒಂದು ನಿಮಿಷ ಅಂದರು. ನಾನು ಏನಮ್ಮ ವಿಷಯ ನನಗೆ ಬಸ್‌ಗೆ ಟೈಮ್ ಆಗುತ್ತೆ.. ಅದೊಂದೇ ಬಸ್ ಇರೋದು ಬೇಗ ಹೇಳಿ ಎಂದೆನು. ನನ್ನ ಮಗಳನ್ನು ಏನೋ ತರಬೇತಿ ಕೊಡುತ್ತೇವೆ ಅಂತ ಕರ್ಕೊಂಡು ಹೋಗಿದ್ದರಲ್ಲ! ಹೌದಮ್ಮ, ಆದರೆ ನೆನ್ನೆ ನಿಮ್ಮ ಮಗಳನ್ನು ನಾನೇ ಸ್ವತಃ ನಿಮ್ಮ ಮನೆಗೆ ತಲುಪಿಸಿ ಬಂದೇ ಅಲ್ವಾ; ಈಗ ಏನಾಯಿತು? ಅವಳಿಗೆ ಹುಷಾರಿಲ್ಲವಾ? ಅದಕ್ಕೆ ಇಂದು ಶಾಲೆಗೆ ತಪ್ಪಿಸಿದ್ದೀರಾ? ಶಾಲೆಗೆ ಕಳಿಸಿಲ್ಲವಾ?
ನಿಮ್ಮ ಮೇಲೆ ನನಗೆ ಬಹಳ ಬೇಸರ ಆಗಿದೆ. ನಿಮ್ಮನ್ನು ತುಂಬಾ ಗೌರವಸ್ಥೆ ಅಂದುಕೊಂಡಿದ್ದೆ. ಆದರೆ ಅದೆಲ್ಲ ಸುಳ್ಳು ಎಂದಾಗ ಯಾಕೋ ನಿಂತ ದೇಹವೇ ಭಾರವೆನಿಸಿ ನೆಲದ ಮೇಲೆ ಕುಸಿದ ಅನುಭವವಾಯಿತು. ನನಗೆ ಶಾಲೆಯಲ್ಲಿ ಕೊಟ್ಟ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೆನಪಾಯಿತು. ಏನು ಮಾಡಿದೆನಮ್ಮಾ ಅಂತ ತುಸು ಹುಸಿಗೋಪ ತೋರಿದೆ. ನಿನ್ನೆ ತರಬೇತಿ ನೆಪದಲ್ಲಿ ನನ್ನ ಮಗಳ ಮನಸ್ಸಿಗೆ ಏನೇನೋ ತುಂಬಿದ್ದೀರಿ. ಅವಳಿನ್ನು ಚಿಕ್ಕವಳು. ನಾವು ಮನೆಯಲ್ಲಿ ಇಂತಹ ವಿಚಾರಗಳು ಕಿವಿಗೆ ಬೀಳದಂತೆ ಎಚ್ಚರ ವಹಿಸುತ್ತೇವೆ. ನೀವು ಟೀಚರ್, ಮೇಲಾಗಿ ಹೆಣ್ಣುಮಗಳು ನೀವು ಹೀಗೆಲ್ಲ ಮಾಡುತ್ತೀರಾ ಅಂದುಕೊಂಡಿರಲಿಲ್ಲ ಎಂದು ಅಸಮಾಧಾನದ ಬೆಂಕಿಯನ್ನು ಉಗುಳಿದರು. ಏನು ನಡೆದಿದೆ ಇವರ ಕೋಪಕ್ಕೆ ಕಾರಣವೇನು ಎಂದು ನನಗೆ ಅರ್ಥವಾಯಿತು. ನನಗೆ ಬಸ್ಸಿಗೆ ವೇಳೆಯಾಗುತ್ತಿತ್ತು. ಸರಿ ನಾಳೆ ಶಾಲೆ ಹತ್ತಿರ ಬನ್ನಿ ಅಮ್ಮ, ಇದರ ಬಗ್ಗೆ ಮಾತನಾಡೋಣ ಎಂದು ಧಾವಂತದಲ್ಲಿ ಬಸ್ ಹಿಡಿಯಲು ಹೆಜ್ಜೆಗಳನ್ನು ಬಿರಿಸುಗೊಳಿಸಿದೆ.
ಮಾರನೇ ದಿನ ಶಾಲೆಗೆ ಬರುತ್ತಾರೆಂದು ಕಾದೆ. ವಿಪರೀತ ಕೋಪಗೊಂಡು ಮಗಳನ್ನು ಶಾಲೆಗೆ ಕಳಿಸಲಿಲ್ಲ. ಆಕೆಯೂ ಬರಲಿಲ್ಲ. ಸರಿ ಸುಮ್ಮನಾದೆ. ಆಮೇಲೆ ಶನಿವಾರ ಕಳೆದು ಸೋಮವಾರದೊಳಗೆ ತುಂಬಾ ಮನೆಗಳಲ್ಲಿ ಇದೇ ವಿಷಯ ಚರ್ಚೆಯಾಗಿದೆ. ಎಲ್ಲರೂ ಒಟ್ಟಾಗಿ ಕೇಳೋಣ ಎಂದು ಮಹಿಳಾ ಸೇನೆ ನನ್ನನ್ನು ಭೇಟಿಯಾಗುವುದಕ್ಕೆ ಬಂದಿತ್ತು. ಮೊದಲೇ ಒಂದಿಷ್ಟು ತಿಳಿದ ವಿಚಾರವಾದ್ದರಿಂದ ನನಗೆ ಇವರ ಆಗಮನ ಆಶ್ಚರ್ಯ ಮತ್ತು ಆತಂಕವನ್ನು ಉಂಟು ಮಾಡಲಿಲ್ಲ. ಬಂದವರನ್ನು ಸಾವಧಾನದಿಂದ ಮಾತನಾಡಿಸಿ ಕೂಡಿಸಿದೆ. ಏನು ಇವತ್ತು ನಮ್ಮ ಊರಿನ ತಾಯಂದಿರಿಗೆ ಶಾಲೆ ನೆನಪಾಗಿದೆ, ಅದು ಎಲ್ಲರೂ ಗುಂಪಿಕಟ್ಟಿಕೊಂಡು ಬರುವಷ್ಟು ಶಾಲೆ ನಿಮ್ಮನ್ನೆಲ್ಲ ಕಾಡಿದೆ. ಕಾರಣ ಏನು? ಅಂದೆ. ಒಬ್ಬರು ಒಂದೊಂದು ವಿಚಾರ ತೆಗೆದು ಸಮಜಾಯಿಶಿಗಳನ್ನು ಕೊಡತೊಡಗಿದರು. ಅವರಲ್ಲಿನ ಪ್ರಶ್ನೆಗಳು ಹೇಗಿದ್ದವು ಎಂದರೆ ನನ್ನ ಸ್ಥಿತಿ ಕಟಕಟೆಯಲ್ಲಿ ನಿಂತ ಕೈದಿಗಿಂತ ಹೀನಾಯವಾಗಿತ್ತು. ಆದರೂ ಕೋಪಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಭಾವಿಸಿದೆ. ಅವರ ಪ್ರಶ್ನೆಗಳ ಸುರಿಮಳೆಯನ್ನೆಲ್ಲ ನನ್ನ ಮೆದುಳಿನ ಬತ್ತಳಿಕೆಯಲ್ಲಿ ಸುರಕ್ಷಿತವಾಗಿ ಶೇಖರಿಸಿಕೊಂಡೆ. ಮುಂದೆ ಪ್ರಶ್ನೆ ಪತ್ರಿಕೆಗೆ ಉತ್ತರಿಸಬೇಕಾದ ವಿದ್ಯಾರ್ಥಿ ನಾನೇ ಅಲ್ವಾ. ಅವರ ಕೋಪಕ್ಕೆ ಕಾರಣವೂ ಇತ್ತು ಅದು ಹೀಗಿತ್ತು.
2012-13 ನೇ ಸಾಲಿನಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯದ ಅರಿವು ಮತ್ತು ಲೈಂಗಿಕ ಶೋಷಣೆ ವಿರುದ್ಧ ಜಾಗೃತಿ ಮೂಡಿಸಲು “ಕಿಶೋರಿ” ಎಂಬ ತರಬೇತಿಯನ್ನ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಲಾಗಿತ್ತು. ಸಾಧಾರಣವಾಗಿ 11 ರಿಂದ 18 ವಯೋಮಾನದ ಮಕ್ಕಳನ್ನು ಹದಿಹರೆಯದ ಮಕ್ಕಳು ಎನ್ನುತ್ತೇವೆ. ಸಂಪನ್ಮೂಲ ವ್ಯಕ್ತಿಯಾಗಿ ನಾನು ಭಾಗವಹಿಸಿದ್ದೆ. ಆ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಶಾಲೆಗಳ ಐದರಿಂದ ಎಂಟನೇ ತರಗತಿಯ ಹೆಣ್ಣು ಮಕ್ಕಳು ಆ ತರಬೇತಿಯ ಫಲಾನುಭವಿಗಳಾಗಿದ್ದರು. ನಾನು ಶಿಕ್ಷಕರಿಗೆ ಅದೆಷ್ಟೋ ತರಬೇತಿಗಳನ್ನು ನೀಡಿರುವೆ. ಆದರೆ ಹದಿಹರೆಯದ ಹೆಣ್ಣು ಮಕ್ಕಳಿಗೆ ಕಿಶೋರಿ ತರಬೇತಿ ನೀಡುವುದು ಅವೆಲ್ಲವನ್ನು ಮೀರಿದ ಚಾಲೆಂಜ್ ಆಗಿತ್ತು. ಕಾರಣ ಮಕ್ಕಳ ವಯೋಮಿತಿಗೆ ಅನುಗುಣವಾಗಿ ಇಂತಹ ಸೂಕ್ಷ್ಮ ವಿಚಾರವೊಂದನ್ನ ಅವರಿಗೆ ಅರ್ಥೈಸುವುದು ಸುಲಭದ ಮಾತಲ್ಲ. ಸಮಾಜದ ಪ್ರತಿಕ್ರಿಯೆಯನ್ನು ಎದುರಿಸಿ ಅವರ ಮನವೊಲಿಸುವುದು ಮತ್ತೊಂದು ಸವಾಲಾಗಿತ್ತು. ಎಲ್ಲದಕ್ಕೂ ಸಿದ್ಧವಾಗಿ ಇತರಬೇತಿ ನೀಡಲು ಹೋಗಿದ್ದೆ. ಮೊದಲ ಎರಡು ದಿನಗಳು ‘ಜೀವನ ಕೌಶಲಗಳು ಮತ್ತು ವ್ಯಕ್ತಿತ್ವ ವಿಕಸನ’, ‘ಯೋಗ ಮತ್ತು ಪ್ರಾಣಾಯಾಮ’ ‘ಸಾಮಾಜಿಕ ಅವಕಾಶಗಳು’, ‘ಲಿಂಗ ಸಮಾನತೆ’, ‘ಮಕ್ಕಳ ಹಕ್ಕುಗಳು’ ಮುಂತಾದ ವಿಷಯಗಳನ್ನು ಕುರಿತು ಚರ್ಚಿಸಲಾಯಿತು. ಇವೆಲ್ಲಾ ಪಠ್ಯಾಧಾರಿತ ವಿಚಾರಗಳೇ ಆಗಿರುವುದರಿಂದ ಗುಂಪು ಚರ್ಚೆ, ವಿಷಯ ಮಂಡನೆ, ಯೋಜನೆ ತಯಾರಿಕೆ ಇವೆಲ್ಲ ತುಂಬಾ ಸರಾಗವಾಗಿ ನಡೆದವು. ಪ್ರತಿದಿನ ಅವರದ್ದೇ ಶಾಲೆಯ ಅದೇ ವಿದ್ಯಾರ್ಥಿಗಳ ಮುಖ ನೋಡುತ್ತಿದ್ದ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಶಾಲೆಯ ಮಕ್ಕಳ ಒಡನಾಟ, ತಮ್ಮ ಶಾಲೆಗೆ ಹೆಸರು ತರಬೇಕು ಎಂಬ ಮಕ್ಕಳ ಪೈಪೋಟಿ ಅವರ ಶಕ್ತಿ ಸಾಮರ್ಥ್ಯಗಳನ್ನು ಮೀರಿ ಭಾಗವಹಿಸುವಂತೆ ಮಾಡಿದ್ದು ಅಚ್ಚರಿಯಾಯಿತು. ಮಾರನೇ ದಿನದ ತರಬೇತಿ ಹೊಸ ಆಯಾಮದಲ್ಲಿ ತೆರೆದುಕೊಂಡಿತು. ‘ಆರೋಗ್ಯ ಮತ್ತು ಸ್ವಚ್ಛತೆ’, ‘ಪೌಷ್ಟಿಕಾಂಶಗಳು’ ಇದರಲ್ಲಿ ವಿದ್ಯಾರ್ಥಿಗಳು ಅತ್ಯಂತ ಕುತೂಹಲದಿಂದ ಆಸಕ್ತಿಯಿಂದ ಭಾಗಿದಾರರಾದರು.
ಕಿಶೋರಿ ತರಬೇತಿಯ ಪ್ರಮುಖ ಘಟ್ಟ ‘ಸೃಷ್ಟಿಯ ಅದ್ಭುತಗಳು’ ಇದರಲ್ಲಿ ಮಾನವನ ದೇಹದ ಭಾಗಗಳ ಪರಿಚಯ, ಕಿಶೋರಾವಸ್ಥೆಯಲ್ಲಿ ದೇಹದಲ್ಲಿ ಆಗುವ ಬದಲಾವಣೆಗಳು, ಋತುಮಾನ ಅವಧಿಯ ಸ್ವಚ್ಛತೆ, ಮಾನವನಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಗಳು, ಇವುಗಳನ್ನು ಬೋಧಿಸಲು ಮುಖ್ಯ ಮಕ್ಕಳು ಉನ್ನತ ಶಿಕ್ಷಣಕ್ಕೆ ಹೋದಂತೆ ಇವೆಲ್ಲವನ್ನು ಸಮಗ್ರವಾಗಿ ವಿಸ್ತಾರವಾಗಿ ಓದುತ್ತರಾದರೂ ಹದಿಹರೆಯದ ಹೆಣ್ಣು ಮಕ್ಕಳಿಗೆ ಆಗತಾನೆ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಕಾಣಿಸಿಕೊಳ್ಳಲಾರಂಭಿಸಿರುತ್ತವೆ. ಆ ಸಮಯದಲ್ಲಿ ಹಾರ್ಮೋನ್ ವ್ಯತ್ಯಾಸಗಳಿಗೆ ಹೊಂದಿಕೊಳ್ಳಲು ಪರಿತಪಿಸುವ ವಯಸ್ಸದು. ಅಂತಹ ಮಕ್ಕಳಿಗೆ ಬೋಧಿಸುವುದು ಆ ತರಬೇತಿಯ ಆಶಯವಾಗಿತ್ತು. ಮಕ್ಕಳಿಗೆ ತಮ್ಮ ಬಾಲ್ಯದ ನೆನಪುಗಳನ್ನು ಮಂಡಿಸುತ್ತಾ ಅವರು ಬಾಲ್ಯದಲ್ಲಿ ನಡೆದ ಘಟನೆಗಳು, ಆಟ ತುಂಟಾಟಗಳನ್ನು ಕುರಿತ ಅನುಭವಗಳ ಹಂಚಿಕೆಯ ಅವಧಿ ಅತ್ಯಂತ ಪರಿಣಾಮಕಾರಿ ಹಾಗೂ ಆಹ್ಲಾದಕರವಾಗಿತ್ತು, ಮಾತ್ರವಲ್ಲ ನಮ್ಮನ್ನು ಕೂಡ ಬಾಲ್ಯಕ್ಕೆ ಕರೆದೊಯ್ದಿತು. ಅವರ ಸಂವೇದನೆಗಳನ್ನು ನಮ್ಮದಾಗಿ ಅನುಸಂಧಾನಿಸಿದರು. ಬಹಳ ಮುಖ್ಯವಾಗಿ ಮಕ್ಕಳಲ್ಲಿ ಉಂಟಾಗುತ್ತಿರುವ ದೈಹಿಕ ಬದಲಾವಣೆಗಳನ್ನು ಗುರುತಿಸಲು ಹೇಳಿದಾಗ ಮಕ್ಕಳು ಮುಜುಗರದಿಂದ ಮೌನಕ್ಕೆ ಶರಣಾದರು. ಸಂಕೋಚ ಪಡಬೇಡಿ ಎಂದು ಮಕ್ಕಳನ್ನು ಹುರಿದುಂಬಿಸುತ್ತಾ ಅವೆಲ್ಲ ಪ್ರಕೃತಿದತ್ತವಾಗಿ ಆಗುವ ಪ್ರಕ್ರಿಯೆಗಳು. ಪ್ರತಿಯೊಬ್ಬರು ಈ ಬದಲಾವಣೆಗೆ ಈಡಾಗಲೇಬೇಕು. ಆಗಲೇ ಅವರು ಆರೋಗ್ಯವಂತರು ಎನ್ನಲಾಗುತ್ತದೆ ಎಂದಾಗ ಸ್ತ್ರೀ ಪುರುಷರ ದೇಹದ ಹೊರಗಿನ ಭಾಗಗಳನ್ನು ಮಕ್ಕಳು ಹೇಳಿದರು. ದೇಹದ ಒಳಗಿನ ಭಾಗಗಳಲ್ಲಿ ಆಗುವ ಬದಲಾವಣೆಗಳನ್ನು ವಿವರಿಸಲಾಯಿತು. ಸಂಕೋಚ ಮತ್ತು ಕುತೂಹಲ ಭರಿತರಾಗಿ ಕೇಳಿದರು.
ಮಕ್ಕಳಿಗೆ ತಾವು ಕಿಶೋರಾವಸ್ಥೆಗೆ ಕಾಲಿಡುತ್ತಿದ್ದಂತೆ ತಮ್ಮ ದೇಹದಲ್ಲಿ ಆಗುವ ದೈಹಿಕ ಬದಲಾವಣೆಗಳಿಗೆ ಆತಂಕಗೊಳ್ಳದಂತೆ ಅತಿ ಸೂಕ್ಷ್ಮವಾಗಿ ದೈಹಿಕ ಬದಲಾವಣೆಗಳ ಅರಿವು ಮೂಡಿಸಲಾಯಿತು. ಆ ಸಮಯದಲ್ಲಿ ಗಂಡು ಮಕ್ಕಳಿಗೆ ಗಡ್ಡ ಮೀಸೆ ಬರುವುದು, ಧ್ವನಿಯಲ್ಲಿ ಬದಲಾವಣೆ ಕಾಣುವುದು. ಹೆಣ್ಣು ಮಕ್ಕಳಿಗೆ ಸ್ತನಗಳ ಬೆಳವಣಿಗೆ ಆಗುವುದು ಹೆಣ್ಣು ಮತ್ತು ಗಂಡು ಜನನಾಂಗಗಳಲ್ಲಿ ರೋಮಗಳು ಕಾಣಿಸಿಕೊಳ್ಳುವ ವಿಚಾರವನ್ನು ತಿಳಿಸಲಾಯಿತು. ಇವು ಜನನಾಂಗದ ಸುರಕ್ಷತೆಯ ದೃಷ್ಟಿಯಿಂದ ಅಗತ್ಯವಿದ್ದು ಆ ಭಾಗದ ಸ್ವಚ್ಛತೆಯ ಅನಿವಾರ್ಯತೆಯನ್ನ ತಿಳಿಸಲಾಯಿತು.
ಈ ತರಬೇತಿಯಲ್ಲಿ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕಾಗಿದ್ದು ಮುಟ್ಟಿನ ವಿಚಾರ. ಈ ವಿಚಾರ ಪ್ರಸ್ತಾಪಿಸಿ ಅದರ ಬಗ್ಗೆ ಪ್ರಶ್ನೆಗಳನ್ನು ನೀಡಿ ಉತ್ತರ ಬರೆಸಲಾಯಿತು. ಬಹುತೇಕ ಹೆಣ್ಣು ಮಕ್ಕಳು ಮುಟ್ಟು ಆದರೆ ಮೈಲಿಗೆಯಾಗುತ್ತೇವೆ. ದೇವಾಲಯಕ್ಕೆ ಹೋಗಬಾರದು, ಯಾರನ್ನು ಮುಟ್ಟಿಸಿಕೊಳ್ಳಬಾರದು, ದೇವರಿಗೆ ದೀಪ ಹಚ್ಚಬಾರದು, ಯಾರಿಗೂ ಅರಿಶಿಣ ಕುಂಕುಮ ಕೊಡಬಾರದು, ಶಾಲೆಗೂ ಹೋಗಬಾರದು, ಹುಣಸೆ ಮರದ ಕೆಳಗೆ ಓಡಾಡಬಾರದು, ಊರಿನಿಂದ ಹೊರಗಡೆ ಇರಬೇಕು ಮುಂತಾದ ಉತ್ತರಗಳನ್ನ ಬರೆದಿದ್ದರು. ಇವೆಲ್ಲವನ್ನು ನೋಡಿ ಆಶ್ಚರ್ಯವಾಯಿತು. ನಮ್ಮ ಸಮಾಜ ಎಷ್ಟೇ ಮುಂದುವರೆದಿದ್ದರೂ ಅದು ನಗರೀಕರಣ ಮತ್ತು ಜಾಗತೀಕರಣಕ್ಕೆ ತನ್ನನ್ನು ಒಟ್ಟಿಕೊಂಡಿದ್ದರೂ ಸಾಮಾಜಿಕವಾಗಿ ಬೆಳೆದು ಬಂದಿರುವ ಮುಟ್ಟಿನ ಅಂಶಗಳ ಹೊರತಾಗಿ ಅದರ ಹಿಂದಿನ ವೈಜ್ಞಾನಿಕ ಸತ್ಯದ ಅರಿವನ್ನ ಉಂಟು ಮಾಡಲಾಯಿತು.
ಮುಟ್ಟು ಎನ್ನುವುದು ಒಂದು ನೈಸರ್ಗಿಕವಾದ ಪ್ರಕ್ರಿಯೆಯಾಗಿದೆ. ಋತು ಪ್ರಕ್ರಿಯೆ ಎನ್ನುವುದು ಇನ್ನೊಬ್ಬಳು ತಾಯಿಯಾಗಲು ದೈಹಿಕವಾಗಿ ಸಿದ್ಧಳಾಗುವ ಒಂದು ಹಂತ ಎಂಬ ಅರಿವನ್ನ ಬಿತ್ತಲಾಯಿತು. ಆ ಸಂದರ್ಭದಲ್ಲಿ ದೇಹದಿಂದ ರಕ್ತ ಹೋಗುವುದರಿಂದ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಆ ಸಮಯದಲ್ಲಿ ಸ್ವಲ್ಪ ಬೆನ್ನು ನೋವು, ಹೊಟ್ಟೆ ನೋವು, ವಾಂತಿ ಆಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಅಂತಹ ಸಂದರ್ಭದಲ್ಲಿ ಹೆಚ್ಚು ನೀರಿರುವ ಆಹಾರ ಪದಾರ್ಥಗಳು, ಹಣ್ಣು ಹಂಪಲುಗಳನ್ನು ತಿನ್ನಬೇಕು. ಅತಿಯಾದ ಭಾರವಿರುವಂತಹ ಕೆಲಸಗಳನ್ನ ಮಾಡಬಾರದು, ಹೊಟ್ಟೆಗೆ ಒತ್ತಡ ಬೀಳುವ ಕೆಲಸ ಮಾಡಬಾರದು ಎಂದು ಹೇಳುವ ಮೂಲಕ ಅದು ಯಾವ ಅಶುದ್ಧತೆಯ ಸಂಕೇತವು ಅಲ್ಲ. ಅದೊಂದು ಪರಿಶುದ್ಧ ಪ್ರಕ್ರಿಯೆ ಎಂಬ ಅನೇಕ ವಿಷಯಗಳನ್ನು ಮಕ್ಕಳೊಂದಿಗೆ ಚರ್ಚಿಸಲಾಯಿತು. ಬಹಳ ಮುಖ್ಯವಾಗಿ ಆ ಒಂದು ಅವಧಿಯಲ್ಲಿ ಚರ್ಚಿಸಿದ ಅಂಶ ಮುಟ್ಟಿನ ಸಮಯದ ಸ್ವಚ್ಛತೆ ಹೇಗಿರಬೇಕು ಎಂಬುದು. ಆಗ ಪ್ರತಿದಿನ ಸ್ನಾನ ಮಾಡುವುದು, ದೇಹದಿಂದ ರಕ್ತ ಹೋಗುವಾಗ ಬಟ್ಟೆಗಳನ್ನ ಬಳಸದೆ ಸ್ಯಾನಿಟರಿ ಪ್ಯಾಡ್‌ಗಳನ್ನ ಬಳಸುವ ವಿಚಾರವನ್ನು ಮಕ್ಕಳ ಮುಂದೆ ಇಡಲಾಯಿತು.
ಬಟ್ಟೆಗಳನ್ನು ಬಳಸಿದಾಗ ಅದು ಒದ್ದೆಯಾದಾಗ ಬದಲಿಸಬೇಕು ಕಡಿಮೆ ಎಂದರು ದಿನಕ್ಕೆ ಮೂರು ಸಾರಿಯಾದರೂ ಬಟ್ಟೆ ಬದಲಿಸಬೇಕು ತೆಗೆದ ಬಟ್ಟೆಯನ್ನು ಸ್ವಚ್ಛವಾಗಿ ತೊಳೆದು ಸೂರ್ಯನ ಬಿಸಿಲಿನಲ್ಲಿ ಒಣಗಿಸಬೇಕು ಆದರೆ ಈಗ ಹೊಸದಾಗಿ ಬಂದಿರುವ ಪ್ಯಾಡ್‌ಗಳು ಬಟ್ಟೆಗಳಿಗಿಂತ ಹೆಚ್ಚು ಸೂಕ್ತ ಹಾಗೂ ಆರೋಗ್ಯಕರ ಎನ್ನುವ ಸೂಚನೆ ನೀಡಲಾಯಿತು.
ಆಗ ಮಕ್ಕಳಿಂದ ಬಂದ ಉತ್ತರ ಹೌದು ಮಿಸ್ ನಾವು ಯಾರು ಈಗ ಬಟ್ಟೆ ಬಳೆಸುವುದಿಲ್ಲ.
ನಮಗೆ ಶಾಲೆಯಲ್ಲಿ ಶುಚಿ ಕಿಟ್ಟನ್ನು ನೀಡುತ್ತಾರೆ. ಅಲ್ಲಿರುವ ಪ್ಯಾಡ್‌ಗಳನ್ನು ಬಳಸುತ್ತೇವೆ ಎಂದರು.
ಹೌದು ಎಲ್ಲ ಶಾಲೆಗಳಲ್ಲೂ ಹದಿ ಹರಿಯದ ಹೆಣ್ಣು ಮಕ್ಕಳಿಗೆ ಪ್ಯಾಡ್‌ಗಳನ್ನ ನೀಡುವ ವ್ಯವಸ್ಥೆ ಇದೆ. ದೊಡ್ಡ ದೊಡ್ಡ ಶಾಲೆಗಳಲ್ಲಿ ಅವುಗಳನ್ನು ಸುಡುವ ವ್ಯವಸ್ಥೆಯು ಕೂಡ ಇರುತ್ತದೆ. ಆಗ ಒಂದು ಹುಡುಗಿ ಹೇಳಿದಳು, ಮಿಸ್ ನಾನು ದಿನಕ್ಕೆ ಮೂರು ಸಾರಿ ಬದಲಾಯಿಸುವೆ. ಆದರೆ ನನ್ನ ಗೆಳತಿ ಇಡೀ ದಿನ ಒಂದೇ ಪ್ಯಾಡ್ ಬಳಸುತ್ತಾಳೆ. ಬ್ಲೀಡಿಂಗ್ ಆಗಿಲ್ಲ ಅಂದ್ರೆ ಮಾರನೇ ದಿನವೂ ಅದನ್ನೇ ಬಳಸುತ್ತಾಳೆ ಎಂದಾಗ ನನಗೆ ಬಹು ಆತಂಕವಾಯಿತು. ಬೇಡ ಮಕ್ಕಳೇ ಅಂತಹ ಕೆಲಸವನ್ನು ಎಂದೂ ಮಾಡಬೇಡಿ. ದಿನಕ್ಕೆ ಕನಿಷ್ಠ ಮೂರು ಬರಿಯಾದರೂ ಪ್ಯಾಡ್ ಬದಲಾಯಿಸಬೇಕು. ರಕ್ತಸ್ರಾವ ಆಗಿಲ್ಲದ್ದಿದ್ದರೂ ಪರವಾಗಿಲ್ಲ. ಹೆಚ್ಚು ಕಾಲ ನೀವು ಬಳಸಿದ್ದನ್ನೇ ಬಳಸಿದರೆ ತುರಿಕೆ ಉಂಟಾಗುವ ಅವಕಾಶಗಳಿರುತ್ತವೆ. ಅಲ್ಲಿ ರೋಗಾಣುಗಳು ಬೆಳೆದು ಅದು ತಮ್ಮ ಜನನಾಂಗದ ಮೂಲಕ ಗರ್ಭಕೋಶವನ್ನು ಪ್ರವೇಶಿಸಿ ಕಾಯಿಲೆಗಳಿಗೂ ದಾರಿಯಾಗಬಹುದು. ಗರ್ಭಕೋಶ ಹೆಣ್ಣು ಮಕ್ಕಳಿಗೆ ಬಹು ಮುಖ್ಯವಾದದ್ದು. ಅದು ಸೋಂಕಿನಿಂದ ಏನಾದರೂ ಅಪಾಯಕ್ಕೆ ಒಳಗಾದರೆ ಮುಂದೆ ಮಕ್ಕಳಾಗುವ ಅವಕಾಶಗಳು ಕಡಿಮೆಯಾಗುತ್ತವೆ. ಅದರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅದು ಸಾಧ್ಯವಾಗಬೇಕಾದರೆ ನೀವೆಲ್ಲರೂ ಮುಟ್ಟಿನ ಸಮಯದಲ್ಲಿ ಅತಿ ಜಾಗರೂಕತೆಯಿಂದ ಸ್ವಚ್ಛತೆಯ ಅಂಶಗಳನ್ನು ಪಾಲಿಸಬೇಕು ಎಂಬ ವಿಚಾರಗಳನ್ನು ತಿಳಿಸಲಾಯಿತು.
ನಂತರ ಮಕ್ಕಳಲ್ಲಿ ಮಾನಸಿಕವಾಗಿ ಆಗುವ ಬದಲಾವಣೆಗಳ ಚರ್ಚೆಯಲ್ಲಿ ಲವಲವಿಕೆಯ ಭಾಗವಹಿಸುವಿಕೆ ಕಂಡು ಬಂತು. ಆ ಸಂದರ್ಭದಲ್ಲಿ ಹೇಳಿದ ಅವರದೇ ಬದಲಾವಣೆಗಳಿವು. ಕನ್ನಡಿಯ ಮುಂದೆ ನೋಡಿಕೊಳ್ಳಬೇಕು ಎನಿಸುತ್ತದೆ, ನಮ್ಮ ಸೌಂದರ್ಯ ಕಂಡು ನಾವೇ ಹೆಮ್ಮೆ ಪಡುತ್ತೇವೆ, ಇತರರಿಗಿಂತ ನಾವು ಚೆನ್ನಾಗಿ ಕಾಣಬೇಕೆನಿಸುತ್ತದೆ, ಬೇರೆಯವರು ನಮ್ಮನ್ನು ಹೊಗಳಲಿ ಎಂದು ಹಂಬಲಿಸುತ್ತೇವೆ, ಪದೇಪದೇ ಗಂಡು ಮಕ್ಕಳಿಂದ ಆಕರ್ಷಿತರಾಗುತ್ತೇವೆ. ಸಣ್ಣಪುಟ್ಟ ವಿಷಯಗಳಿಗೂ ಕಿರಿಕಿರಿಯಾಗುತ್ತದೆ, ಮನೆಯಲ್ಲಿ ಬೇರೆ ಯಾವಾಗಲೂ ನೀವು ದೊಡ್ಡವರಾಗುತ್ತಿದ್ದೀರಿ ಹಾಗೆ ಮಾಡಬೇಡ ಹೀಗೆ ಮಾಡಬೇಡ ಎಂದು ಸದಾ ಲಕ್ಷ್ಮಣ ರೇಖೆ ಹಾಕುತ್ತಿರುತ್ತಾರೆ. ಇದರಿಂದ ಮನಸ್ಸಿಗೆ ತುಂಬಾ ಹಿಂಸೆ ಅನಿಸುತ್ತದೆ. ಇವೆಲ್ಲ ನಮಗೆ ಬೇಸರವೆನಿಸುತ್ತದೆ ಎಂದಾಗ ಮಕ್ಕಳಲ್ಲಿ ಆಗತಕ್ಕಂತಹ ಭಾವನಾತ್ಮಕ ಬದಲಾವಣೆಗಳನ್ನ ನಾನು ಹೇಳಲು ಏನು ಉಳಿಯಲಿಲ್ಲ. ಎಲ್ಲವೂ ಅವರ ಅರಿವಿಗೆ ಬಂದಿದ್ದು ಅವರೇ ಅದನ್ನು ಹೇಳಿದರು.
ಈ ವಿಚಾರವನ್ನು ಮುಂದಿಟ್ಟುಕೊಂಡು ನಾನು ನೋಡಿ ಮಕ್ಕಳೇ ಈ ವಯಸ್ಸಿನಲ್ಲಿ ದೇಹದಲ್ಲಿ ಹೇಗೆ ಬದಲಾವಣೆಗಳು ಆಗುತ್ತವೆ ಹಾಗೆ ನಿಮ್ಮ ಮಾನಸಿಕವಾಗಿಯೂ ಬದಲಾವಣೆಗಳು ಕಂಡುಬರುತ್ತವೆ. ಆಗ ನೀವು ಆವೇಶ, ಆತಂಕ, ಭಯ, ಕಿರಿಕಿರಿ, ನಾಚಿಕೆ, ಸಂಕೋಚ, ಮುಜುಗರಕ್ಕೆ ಒಳಗಾಗದಂತೆ ಆತ್ಮವಿಶ್ವಾಸದಿಂದ ನಡೆದುಕೊಳ್ಳಬೇಕು. ಮನಸ್ಸು ಚಂಚಲವಾಗಿರುತ್ತದೆ. ಹಾಗಾಗಿ ಅದು ಹರಿಯುವ ದಿಕ್ಕಿಗೆ ಚಲಿಸಲು ಬಿಡಬಾರದು. ಸರಿ ತಪ್ಪುಗಳನ್ನ ಪರಾಮರ್ಶಿಸಿ ಮುಂದೆ ಹೆಜ್ಜೆ ಇಡಬೇಕು. ಈ ವಯಸ್ಸಿನಲ್ಲಿ ಸಹಜವಾಗಿ ಪ್ರೀತಿ ಪ್ರೇಮ ಎಂಬ ಸುಳಿಯಲ್ಲಿ ಸಿಲುಕುತ್ತೀರಿ. ಆದರೆ ಅದೆಲ್ಲ ನಿಮ್ಮ ವಯಸ್ಸಿನಲ್ಲಿ ಆಗುವ ಹಾರ್ಮೋನುಗಳ ವ್ಯತ್ಯಾಸ ಅಷ್ಟೇ. ನೀವು ವಿರುದ್ಧ ಲಿಂಗಗಳಲ್ಲಿ ಆಕರ್ಷಿತರಾಗುತ್ತೀರಿ. ಆದರೆ ಅದೆಲ್ಲ ಈ ವಯಸ್ಸಿನ ತುರ್ತು ಅಲ್ಲ. ನೀವು ಈ ಸಮಯದಲ್ಲಿ ಮನಸ್ಸನ್ನು ಓಡುವ ಕುದುರೆಯಂತೆ ಬಿಡದೆ ಸರಿಯಾದ ಲಗಾಮು ಹಾಕಿ ವಿವೇಚನಾ ಪೂರ್ಣವಾಗಿ ನಡೆಸಿಕೊಂಡಾಗ ನಿಮ್ಮ ಭವಿಷ್ಯ ಸುಂದರವಾಗಿರುತ್ತದೆ. ಈಗ ನಿಮ್ಮೆಲ್ಲರ ಗುರಿ ಕೇವಲ ವಿದ್ಯಾಭ್ಯಾಸದ ಕಡೆಗೆ ಮಾತ್ರ ಇರಬೇಕು. ದಾರಿ ತಪ್ಪಿಸುವ ವಿಚಾರಗಳು ಸಾವಿರ ಬಂದರು ನಿಮ್ಮಲ್ಲಿ ದೃಢತೆ ಇರಬೇಕು. ಆಗಲೇ ನೀವು ಭವಿಷ್ಯದಲ್ಲಿ ಒಂದು ಒಳ್ಳೆ ಬದುಕನ್ನು ಕಟ್ಟಿಕೊಂಡು ನಿಮ್ಮ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದಾಗ ಎಲ್ಲರೂ ಕಿವಿಯಾನಿಸಿದರು.
ಕಿಶೋರಿ ತರಬೇತಿಯ ಪ್ರಮುಖ ಆಶಯ ಹದಿಹರೆಯದ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳದ ವಿವಿಧ ರೂಪಗಳನ್ನು ಪರಿಚಯಿಸುವುದು ಮತ್ತು ಮಕ್ಕಳ ಸಾಗಾಟದ ಬಗ್ಗೆ ಎಚ್ಚರಿಕೆ ಮೂಡಿಸುವುದು. ಆ ವಯೋಮಾನದ ಮಕ್ಕಳಿಗೆ ಏನು ತಿಳಿದಿರುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ನಮ್ಮೆಲ್ಲರ ನಿರೀಕ್ಷೆಗಳು ಸುಳ್ಳಾದವು. ಮಕ್ಕಳ ಸಾಗಾಟ ಏಕೆ ಮಾಡುತ್ತಾರೆ ಎಂದಾಗ ಬಂದು ಉತ್ತರಗಳು ಇಂದಿನ ಮಕ್ಕಳು ತುಂಬಾ ಪ್ರಬುದ್ಧರಾಗಿದ್ದಾರೆ ಎಂಬ ಸಂದೇಶ ನೀಡುತ್ತಿದ್ದವು. ಜನರ ಕೈಗೆ ಸಿಕ್ಕರೆ ಹೊಡಿತಾರೆ ಅಂತ ಭಯಪಡುತ್ತಾರೆ ಎಂದರು. ಮಿಸ್ ಬಿಕ್ಷೆ ಬೇಡಿಸಲು, ದೇವರಿಗೆ ಬಲಿ ಕೊಡಲು, ಮನೆ ಕೆಲಸಕ್ಕೆ ಇರಿಸಲು ಮಕ್ಕಳನ್ನು ಕದ್ದು ಮಾರುತ್ತಾರೆ.
ಭಲೇ ಮಕ್ಕಳಾ, ಇವುಗಳಿಗೆಲ್ಲ ನೀವು ಬಲಿಯಾಗಬೇಡಿ, ಜಾಗೃತವಾಗಿರಬೇಕು ಎನ್ನುತ್ತಿದ್ದಾಗ ನಾವೆಲ್ಲ ಅವರ ಕೈಗೆ ಸಿಗಲ್ಲ ಬಿಡಿ ಮಿಸ್, ಮಕ್ಕಳ ಕಳ್ಳರು ಊರುಗಳ ಕಡೆಗೆ ಜನರು ಇರುವ ಜಾಗದಲ್ಲಿ ಬರಲ್ಲ ಎಂದು ಅತಿ ಆತ್ಮವಿಶ್ವಾಸದಿಂದ ಹೇಳಿದರು. ಹಾಗೆಲ್ಲ ಹೇಳಲು ಆಗಲ್ಲ ಕಂಡ್ರೋ ಎಂದೆ. ನಿಜ ಟೀಚರ್ ನಮ್ಮ ಅಪ್ಪ ಹೇಳುತ್ತಿದ್ದರು. ಬೀದಿಯ ಅನಾಥ ಮಕ್ಕಳು, ಭೂಕಂಪ, ಪ್ರವಾಹ, ಬರ ಬಂದಾಗ ಅಪ್ಪ ಅಮ್ಮನನ್ನು ಕಳೆದುಕೊಂಡವರು, ಯುದ್ಧದಲ್ಲಿ ಸತ್ತು ಹೋದವರ ಮಕ್ಕಳನ್ನು ಕದ್ದು ಹೆಚ್ಚು ದುಡ್ಡಿಗೆ ಮಾಡುತ್ತಾರಂತೆ. ಆ ಮಕ್ಕಳ ಕೈ ಕಾಲು ಮುರಿದು ಭಿಕ್ಷೆ ಬೇಡಿಸುತ್ತಾರಂತೆ. ಏನಮ್ಮ ಇಷ್ಟೊಂದು ವಿಷಯ ತಿಳಿದುಕೊಂಡಿದ್ದಿಯಾ? ನೀನು ತುಂಬಾ ಜಾಣೆ ಅಂದಾಗ ಕೆಲಸ ಮಾಡಲು, ಇಟ್ಟಿಗೆ ಹಾಕಲು ಮಕ್ಕಳನ್ನು ಹೆದರಿಸಿ ಕೆಲಸ ಮಾಡಿಸ್ಕೋತಾರಂತೆ ಮಿಸ್ ಇದನ್ನು ನಾನು ನಮ್ಮ ಅಣ್ಣ ಪಾಠ ಓದುವಾಗ ಕೇಳಿಸಿಕೊಂಡಿದ್ದೆ ಎಂದಳು. ಆ ಅವಧಿಯ ಬೋಧನೆ ನಿಜಕ್ಕೂ ತುಂಬಾ ಸರಾಗ ಅನಿಸಿತು. ನೋಡಿ ಮಕ್ಕಳ ಹದಿನೆಂಟು ವರ್ಷದೊಳಗಿನ ಮಕ್ಕಳನ್ನು ಮನೆ ಕೆಲಸ, ಭಿಕ್ಷಾಟನೆ, ವೇಶ್ಯಾವಾಟಿಕೆ, ಬಲಿ ಕೊಡಲು ಅಥವಾ ಬೇರೆ ಇತರೆ ಲಾಭದ ಉದ್ದೇಶದಿಂದ ಮಕ್ಕಳನ್ನು ಹೆದರಿಸಿ, ಬಲಪ್ರಯೋಗಿಸಿ ಕುಟುಂಬದಿಂದ ಬೇರ್ಪಡಿಸಿ ಬೇರೆಡೆಗೆ ಸಾಗಿಸುವುದನ್ನು ಮಕ್ಕಳ ಸಾಗಾಣಿಕೆ ಎನ್ನುತ್ತೇವೆ. ಇದಕ್ಕೆ ಹೆಚ್ಚು ಬಲಿಯಾಗುವವರು ಹೆಣ್ಣು ಮಕ್ಕಳೇ ವೇಶ್ಯಾವಾಟಿಕೆಯ ಜಾಲಗಳ ಬಗ್ಗೆ ತಿಳಿಸುತ್ತಾ ಅಂತಹ ಯಾವುದೇ ವ್ಯಕ್ತಿಗಳ ಆಸೆ ಆಮಿಷಗಳಿಗೆ ಬಲಿಯಾಗಬಾರದು ಎಂದು ವಿವರಿಸಲಾಯಿತು.
ತರಬೇತಿಯ ಕೊನೆಯ ದಿನ ಲೈಂಗಿಕ ಕಿರುಕುಳ ವಿಷಯದ ಮೇಲೆ ಕೇಂದ್ರೀಕರಿಸಿತ್ತು.
ಮಕ್ಕಳನ್ನ ನಾಲ್ಕು ಗುಂಪು ಮಾಡಿ ಒಂದೊಂದು ಗುಂಪಿಗೆ ಒಂದೊಂದು ಪ್ರಕರಣದ ಚೀಟಿಗಳನ್ನು ನೀಡಿ ಅವುಗಳ ಬಗ್ಗೆ ಗುಂಪು ಚರ್ಚೆ ಮಾಡಲು ತಿಳಿಸಲಾಯಿತು. ಇವೆಲ್ಲವೂ ಹೆಣ್ಣು ಮಕ್ಕಳ ಮೇಲೆ, ಮನೆಯೊಳಗೆ ಮನೆಯ ಹೊರಗೆ ಆಗುವ ಲೈಂಗಿಕ ಕಿರುಕುಳದ ಕರಾಳ ರೂಪವನ್ನು ಪರಿಚಯಿಸುವ ವಿಷಯಗಳಾಗಿದ್ದು ಅವುಗಳ ಕಡೆ ಮಕ್ಕಳ ಗಮನ ಸೆಳೆಯುವುದು ಈ ತರಬೇತಿಯ ಉದ್ದೇಶವಾಗಿತ್ತು.
ಪ್ರಕರಣ ೧
ಸಂಗೀತ ಅವಳ ಗೆಳತಿ ಶಿವಮ್ಮನ ಮನೆಗೆ ಬಿಡುವಾದಗೆಲ್ಲ ಹೋಗುತ್ತಿದ್ದಳು. ಶಿವಮ್ಮನ ಅಣ್ಣ ಇಬ್ಬರಿಗೂ ಪಾಠ ಹೇಳಿಕೊಡುತ್ತಿದ್ದನು. ಸಂಗೀತಾಗೆ ಅವನ ಮೇಲೆ ಬಹಳ ಗೌರವವಿತ್ತು. ತನಗೂ ಅಂತಹ ಒಬ್ಬ ಅಣ್ಣ ಇದ್ದರೆ ಎಷ್ಟು ಚೆನ್ನಾಗಿತ್ತು ಅಂತ ಅಂದುಕೊಳ್ಳುತ್ತಿದ್ದಳು. ಒಂದು ದಿನ ಶಿವಮ್ಮ ಹೊಟ್ಟೆ ನೋವು ಅಂತ ಪಾಠಕ್ಕೆ ಬರಲಿಲ್ಲ. ಆ ದಿನ ಅವಳ ಅಣ್ಣ ಸಂಗೀತಳನ್ನು ಬಿಗಿಯಾಗಿ ಹಿಡಿದು ಅಪ್ಪಿಕೊಂಡು ಮುತ್ತು ಕೊಟ್ಟನು.
ಪ್ರಕರಣ ೨
ಸರಸ 11 ವರ್ಷದ ಸಣ್ಣಕಲು ಹುಡುಗಿ. ಅದೊಂದು ದಿನ ಮನೆಯಲ್ಲಿ ಯಾರೂ ಇರಲಿಲ್ಲ. ಅವಳ ಚಿಕ್ಕಪ್ಪ ಮನೆಗೆ ಬಂದು ಅವಳು ಒಂಟಿಯಾಗಿರುವುದನ್ನು ನೋಡಿ ಅವಳ ಸಮೀಪ ಬಂದು ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅವಳ ಬಟ್ಟೆಯನ್ನು ಬಿಚ್ಚಿ ಕಿರುಚಿದರೆ ಸಾಯಿಸುತ್ತೇನೆ ಎಂದ. ಆಮೇಲೆ ಅವನು ಬಟ್ಟೆ ಬಿಚ್ಚಿ ಅವಳ ಮೇಲೆ ಬಿದ್ದು ನೋವು ಮಾಡಿದ. ಯಾರಿಗಾದರೂ ಹೇಳಿದರೆ ಕೊಂದುಬಿಡುತ್ತೇನೆ ಎಂದು ಹೆದರಿಸಿದ. ಸರಸ ಅಂದಿನಿಂದ ಖಿನ್ನಳಾದಳು.
ಪ್ರಕರಣ ೩
ಗಿರಿಜಾ ಶಾಲೆಗೆ ಹೋಗುವ ದಾರಿಯಲ್ಲಿ ಒಂದು ಚಿಕ್ಕ ಓಣಿ ದಾಟಬೇಕಿತ್ತು. ಅಲ್ಲಿ ಹೆಚ್ಚು ಜನ ಇರುತ್ತಿರಲಿಲ್ಲ. ಅಲ್ಲಿ ಒಬ್ಬ ಹುಡುಗ ನನ್ನ ಬಟ್ಟೆಯೆತ್ತಿ ಜನನಾಂಗವನ್ನು ತೋರಿಸುತ್ತಿದ್ದ. ಅವಳಿಗದು ಬಹಳ ಕಿರಿಕಿರಿಯಾಗುತ್ತಿತ್ತು.
ಪ್ರಕರಣ ೪
ಸಹನಾಗೆ ನಾಟಕದಲ್ಲಿ ಭಾಗವಹಿಸುವುದು ಎಂದರೆ ತುಂಬಾ ಇಷ್ಟ. ಅವಳಿಗೆ ರಾಜನ ಪಾತ್ರ ಸಿಕ್ಕಿದ್ದು ಖುಷಿ ಆಯ್ತು. ನಾಟಕದ ದಿನ ಭರ್ಜರಿ ವೇಷ ಹಾಕಲು ಅವಕಾಶ ಸಿಕ್ಕಿತು. ಚೆನ್ನಾಗಿ ಅಭಿನಯಿಸಿದಳು. ವೇಷ ಬಿಚ್ಚುವ ಹೊತ್ತಿಗೆ ಮೇಕಪ್ ಮಾಡಲು ಬಂದ ಯುವಕ ಅವಳ ದೇಹದ ಮುಟ್ಟಬಾರದ ಅಂಗಗಳನ್ನು ಮುಟ್ಟಿದ. ಹೆದರಿದ ಶಹನಾಜ್ ಅಂದಿನಿಂದ ನಾಟಕದಲ್ಲಿ ಅಭಿನಯಿಸುವುದನ್ನು ಬಿಟ್ಟುಬಿಟ್ಟಳು.
ಈ ವಿಷಯಗಳನ್ನು ನೀಡಿ ಯಾವ ಆಯಾಮಗಳಲ್ಲಿ ಈ ವಿಷಯಗಳನ್ನು ಚರ್ಚೆ ಮಾಡಬೇಕೆಂದು ತಿಳಿಸಲಾಗಿತ್ತು. ಈ ಪ್ರಕರಣಗಳನ್ನು ಓದಿದಾಗ ಏನೆನಿಸಿತು?
ಇಂತಹ ಕಿರುಕುಳದಿಂದ ಏನೇನು ಕೆಟ್ಟ ಪರಿಣಾಮಗಳಾಗುತ್ತವೆ?
ಯಾಕೆ ಇಂತಹ ವಿಚಾರಗಳನ್ನು ಯಾರೂ ಕೇಳುವುದಿಲ್ಲ?
ಇಂತಹ ಕಿರುಕುಳಗಳಿಂದ ಹೇಗೆ ರಕ್ಷಣೆ ಪಡೆಯಬಹುದು?
ಮಕ್ಕಳೆಲ್ಲ ಈ ವಿಚಾರಗಳನ್ನು ಕುರಿತು ಚರ್ಚಿಸಿದರು. ನಂತರ ಮಕ್ಕಳಿಗೆ ಪ್ರಬುದ್ಧವಾದ ಭಾಷೆಯಲ್ಲಿ ಘಟನೆಗಳನ್ನು ವಿವರಿಸಲು ಬರದಿದ್ದರೂ ಸಣ್ಣ ಸಣ್ಣ ಪದಗಳಲ್ಲಿ ತಮ್ಮ ಗುಂಪಿನ ವಿಚಾರಗಳನ್ನು ಮಂಡಿಸಿದರು. ಕೊನೆಗೆ ಮಕ್ಕಳ ವಿಚಾರಗಳು ಹೀಗಿದ್ದವು.
ಯಾವುದೇ ಗಂಡು ಮಕ್ಕಳು ನಮ್ಮನ್ನ ಅಪ್ಪಿಕೊಳ್ಳುವುದು, ಮುತ್ತು ಕೊಡುವುದು ಮಾಡಿದಾಗ ಯಾರಿಗಾದರೂ ಹೇಳಬೇಕು. ಸಂಬಂಧಗಳ ಬಗ್ಗೆ ಸದಾ ಎಚ್ಚರಿಕೆ ಇರಬೇಕು. ಸಾಧ್ಯವಾದಷ್ಟು ಜನರು ಇಲ್ಲದ ಪ್ರದೇಶಗಳಲ್ಲಿ ಓಡಾಟವನ್ನ ಕಡಿಮೆ ಮಾಡಬೇಕು.
ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಮಕ್ಕಳಿಗೆ ವಿವರಿಸಲಾಯಿತು.
ಅಂತಹ ಪರಿಸ್ಥಿತಿ ಎದುರಾದಾಗ ನೀವು ಹೇಗೆ ರಕ್ಷಣೆ ಪಡೆದುಕೊಳ್ಳುತ್ತೀರಿ ಎನ್ನುತ್ತಿದ್ದಾಗ ಮಕ್ಕಳೆಲ್ಲ ಸಿನಿಮಾದಲ್ಲಿದ್ದ ದೃಶ್ಯಗಳನ್ನು ಮರು ಸೃಷ್ಟಿಸಿಕೊಂಡು ಕಾರದಪುಡಿ ಬ್ಯಾಗಿನಲ್ಲಿಟ್ಟುಕೊಂಡು ಹೋಗುತ್ತೇವೆ. ಕೈಯನ್ನು ಜೋರಾಗಿ ಕಚ್ಚಿ ಬಿಡಿಸಿಕೊಳ್ಳುತ್ತೇವೆ. ಜೋರಾಗಿ ಕೂಗಿ ಜನರ ಗುಂಪನ್ನು ಸೇರಿಸುತ್ತೇವೆ ಎಂದು ತಮ್ಮ ಜಾಣ್ಮೆಯ ಉತ್ತರಗಳನ್ನು ನೀಡಿದರು.
ನೋಡಿ ಮಕ್ಕಳೇ ನೀವು ಇದುವರೆಗೂ ಮಂಡಿಸಿದ ವಿಷಯಗಳನ್ನು ಗಮನಿಸಿ. ನಿಮಗೆ ಇಷ್ಟವಾಗದಂತಹ ಮಾತುಗಳನ್ನು ಯಾರಾದರೂ ಆಡಿದರೆ ಆ ವಿಷಯವನ್ನು ನೀವು ನಿಮ್ಮ ಹತ್ತಿರದವರಿಗೆ ಕೊನೆ ಪಕ್ಷ ಟೀಚರ್ ಗಮನಕ್ಕಾದರೂ ತರಬೇಕು. ಮನೆಯಲ್ಲಿ ಅಪ್ಪ ಅಮ್ಮ ಬಯ್ಯುತ್ತಾರೆ ಎಂಬ ಆತಂಕ ಬೇಡ. ಇಂತಹ ಘಟನೆಗಳು ನಡೆದಾಗ ಇಲ್ಲಿ ಮಕ್ಕಳ ತಪ್ಪು ಏನು ಇರುವುದಿಲ್ಲ ಎಂಬ ಅರಿವು ಎಲ್ಲರಿಗೂ ಇರುತ್ತದೆ. ನಿಮ್ಮ ಸಹಾಯಕ್ಕಾಗಿ ಮಕ್ಕಳ ಸಹಾಯವಾಣಿಗಳಿರುತ್ತವೆ. ಶಾಲೆಯಲ್ಲಿ ಶಿಕ್ಷಕರು ಹೀಗೆ ವರ್ತಿಸಿದರು ಕೂಡ ನೀವು ಅದನ್ನು ಒಪ್ಪಿಕೊಳ್ಳದೆ ಪ್ರತಿಭಟಿಸಬೇಕು. ಬಹಳ ಮುಖ್ಯವಾಗಿ ನೀವು ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ ಬಗ್ಗೆ ತಿಳಿಯಬೇಕು ಎಂದಾಗ ಗುಡ್ಡಚ್ ಬ್ಯಾಡ್ ಟಚ್ ಗೊತ್ತಾ ಮಕ್ಕಳೇ ಎನ್ನುತ್ತಿದ್ದಂತೆ ಹೌದೆಂದು ಮಕ್ಕಳು ಉತ್ತರಿಸಿದರು. ಟೀಚರ್ ಕಳೆದ ತಿಂಗಳು ಆರೋಗ್ಯ ಕೇಂದ್ರದಿಂದ ಸಿಸ್ಟರ್ ಮತ್ತು ಬ್ರದರ್ ಅವರು ಬಂದಾಗ ನಮಗೆಲ್ಲ ವಿಡಿಯೋ ತೋರಿಸಿದರು ಎಂದಾಗ ಬಹಳ ಖುಷಿಯಾಯಿತು. ಸರಿ ಮಕ್ಕಳೇ ಹಾಗಾದರೆ ನಾನು ಮತ್ತೊಮ್ಮೆ ವಿಚಾರ ಹೇಳುವುದಿಲ್ಲ. ನಾನು ಕೆಲವು ಹೇಳಿಕೆ ಹೇಳುತ್ತಾ ಹೋಗುವೆ, ನೀವು ಅವುಗಳಲ್ಲಿ ಗುಡ್ ಟಚ್ ಬ್ಯಾಡ್ ಟಚ್‌ಗಳನ್ನು ಗುರುತಿಸಿದರೆ ಸಾಕು.
ಅಮ್ಮ ಅಥವಾ ಅಜ್ಜಿ ಸ್ನಾನ ಮಾಡಿಸುವಾಗ ನಿನ್ನ ದೇಹದ ಭಾಗಗಳನ್ನು ಮುಟ್ಟುವುದು.
ಶಿಕ್ಷಕರು ಮುಜುಗರ ಆಗುವಂತೆ ನಿನ್ನ ದೇಹದ ಭಾಗಗಳನ್ನ ಮುಟ್ಟುವುದು.
ಅಪರಿಚಿತರು ನಿಮ್ಮ ಭುಜ ತಟ್ಟಿ ಅಥವಾ ಸೊಂಟ ಮುಟ್ಟಿ ಮಾತನಾಡಿಸುವುದು.
ನಿಮ್ಮ ಪಕ್ಕದ ಮನೆಯ ಹುಡುಗ ಮುತ್ತು ಕೊಡುವುದು.
ನಿನಗೆ ಚಾಕ್ಲೇಟ್ ಕೊಡಿಸುವೆ, ಐಸ್ ಕ್ರೀಮ್ ಕೊಡಿಸುವೆ ಎಂದು ಹೊರಗಡೆ ಬೈಕಿನಲ್ಲಿ ಕರೆದುಕೊಂಡು ಹೋಗುವುದು.
ಚಿಕ್ಕಪ್ಪ ಅಥವಾ ದೊಡ್ಡಪ್ಪ ಮಾವ ಅಣ್ಣ ತಮ್ಮ ಅಥವಾ ಪಕ್ಕದ ಮನೆಯವರು ನಿನ್ನ ಮೈ ಕೈಯನ್ನೆಲ್ಲ ನಿನ್ನ ವಿರೋಧದ ನಡುವೆಯೂ ಮುಟ್ಟುವುದು.
ಮಕ್ಕಳು ತಮ್ಮ ತಮ್ಮ ಉತ್ತರಗಳನ್ನು ಹೇಳಿದರು. ಆ ಉತ್ತರಗಳನ್ನು ನೋಡಿದಾಗ ಮಕ್ಕಳಿಗೆ ಇಷ್ಟೆಲ್ಲಾ ಅರಿವಿರುವುದು ತಿಳಿಯಿತು. ಅಂತಿಮವಾಗಿ ಮಕ್ಕಳೇ ನೀವೆಲ್ಲರೂ ಮಕ್ಕಳ ಸಾಗಾಣಿಕೆ ಹಾಗೂ ಲೈಂಗಿಕ ಕಿರುಕುಳದಿಂದ ಜಾಗೃತವಾಗಿರಬೇಕೆಂದು ಹೇಳುತ್ತಾ ಅಂತಿಮವಾಗಿ ಮಕ್ಕಳ ಸಹಾಯವಾಣಿಗಳ ಪರಿಚಯ ಮಾಡಿ ಅಗತ್ಯ ಬಂದಾಗ ಈ ಸಹಾಯವಾಣಿಗೆ ಕರೆ ಮಾಡಿದರೆ ಅವರು ನಿಮಗೆ ನೆರವಾಗುತ್ತಾರೆ. ನಿಮಗೆ ಕಾನೂನಿನ ರಕ್ಷಣೆ ಸಿಗುತ್ತದೆ ಎಂದು ಧೈರ್ಯ ತುಂಬಲಾಯಿತು.
ಈ ವಿಷಯ ಮಕ್ಕಳಿಗೆ ಹೇಳಿಕೊಟ್ಟಿದ್ದರಿಂದಲೇ ಪೋಷಕರು ಈ ಬಗ್ಗೆ ನನ್ನ ಮೇಲೆ ಕೋಪಗೊಂಡಿದ್ದರು. ಆಗ ನಾನು ಪೋಷಕರನ್ನು ಕುರಿತು ನೋಡಿ ತಾಯಂದಿರಾ ನಾನು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ನನ್ನ ಉದ್ದೇಶ ನಿಮ್ಮ ಮಕ್ಕಳನ್ನ ರಕ್ಷಿಸುವುದಾಗಿದೆ. ನಾವು ಯಾವುದೇ ವಿಷಯವನ್ನು ಮುಚ್ಚಿಟ್ಟು ಬಚ್ಚಿಟ್ಟಷ್ಟು ಅದರ ಬಗ್ಗೆ ಕುತೂಹಲ ಹೆಚ್ಚಾಗಿ ಮಕ್ಕಳು ತಪ್ಪು ಮಾಡುವ ಅವಕಾಶಗಳು ಇರುತ್ತವೆ. ಮಕ್ಕಳಿಗೆ ಕೆಲವು ವಿಚಾರಗಳನ್ನು ಸೂಕ್ಷ್ಮವಾಗಿ ಪರಿಚಯಿಸಿದಾಗ ಇರುತ್ತಾರೆ ಹೆಚ್ಚಿನ ಪ್ರಸಂಗಗಳಲ್ಲಿ ಪುರುಷರೇ ಅಪರಾಧಿಗಳಾಗಿದ್ದು ಮನೆಯ ಕುಟುಂಬದ ಸದಸ್ಯರು ಅಥವಾ ಸಂಬಂಧಿಕರು ಮಕ್ಕಳನ್ನು ಶೋಷಣೆ ಮಾಡುತ್ತಾರೆ ಅಥವಾ ಅಧಿಕಾರ ಉಳ್ಳವರು ಅಕಸ್ಮಾತ್ ಪರಿಚಿತರು ನಿಮ್ಮ ಮಕ್ಕಳಿಗೆ ತೊಂದರೆ ಮಾಡಬಹುದು. ಮಕ್ಕಳು ಇನ್ನು ಚಿಕ್ಕವಾಗಿರುವುದರಿಂದ ಅವುಗಳಿಗೆ ಆಸೆ ಅಂಶ ತೋರಿಸಿ ಮೋಸ ಮಾಡಬಹುದು. ಸಂಬಂಧಿಕರು ನೆರೆಹೊರೆಯವರು ಅಧಿವೇಶನಕ್ಕೆ ಬರುವ ಹುಡುಗರು, ಕೆಲಸದವರು ಅಡುಗೆಯವರು ವಾಹನ ಚಾಲಕರು ಶಿಕ್ಷಕರು ಯಾರಾದರೂ ಅಪರಾಧ ಮಾಡಬಹುದು. ಹಾಗಾಗಿ ಅವರೆಲ್ಲರ ಬಗ್ಗೆ ಎಚ್ಚರ ವಹಿಸಲು ಮಕ್ಕಳಿಗೆ ತಿಳಿಸಿದ್ದರಲ್ಲಿ ತಪ್ಪೇನಿದೆ ನಮ್ಮ ಉದ್ದೇಶ ಸಂಬಂಧಿಕರ ವಿರುದ್ಧ ಮಕ್ಕಳನ್ನು ಕಟ್ಟುವುದು ಅಲ್ಲ, ಅವರ ವರ್ತನೆಗಳು ಮಿತಿಮೀರಿದ್ದಾಗ ಮಕ್ಕಳು ಜಾಗೃತರಾಗಿ ಇರಬೇಕೆಂದು ತಿಳಿಸಲಾಯಿತು. ಇದೆಲ್ಲಾ ನಿಮ್ಮ ಮಕ್ಕಳ ಹಿತ ದೃಷ್ಟಿಯಿಂದಲೇ ವಿನಹ ಸರ್ಕಾರ ಇದ್ದಾಗ ನಮಗಾಗಲಿ ಯಾವುದೇ ದುರುದ್ದೇಶ ಇಲ್ಲದ ಪೋಷಕರು ಅಥವಾ ಹೌದು ಮಿಸ್ ನೀವು ಹೇಳೋದು ತಪ್ಪಿಲ್ಲ, ಆದರೆ ನಮಗೆ ಯಾಕೋ ವಿಷಯ ಕೇಳಿದ ತಕ್ಷಣ ಬಿಡಿಸಿ ಹೇಳಿದ್ದರಿಂದ ನಮಗೀಗ ಅದು ಅರ್ಥವಾಯಿತು. ಸರಿ ಮೇಡಂ ನಾಳೆ ನನ್ನ ಮಗಳನ್ನು ಶಾಲೆಗೆ ಕಳಿಸುತ್ತೇನೆ ಎಂದು ಆ ತಾಯಿ ಹೇಳಿದರು ಇಂತಹ ಸಂದರ್ಭಗಳಲ್ಲಿ ಶಿಕ್ಷಕರು ತಾಳ್ಮೆ ಕಳೆದುಕೊಳ್ಳದೆ ಪೋಷಕರಿಗೆ ಮನವರಿಕೆಯನ್ನು ಮಾಡಿಕೊಡಬೇಕಾಗುತ್ತದೆ.
ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು ‘ಕೃತಿ ಮಂಥನ’, ‘ನುಡಿಸಖ್ಯ’, ‘ಕಾವ್ಯ ದರ್ಪಣ’ ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.