ಆ ಕಾಲ್ದಾಗೆ ಊರಾಗೆ ದೊಡ್ಡ ಸಿರಿವಂತನ ಮನೆಯವರಿಂದ ಹಿಡಿದು ಮಧ್ಯಮ ವರ್ಗ, ಬಡವರ ಮನೆಯವರಿಗೆಲ್ಲರಿಗೂ ಇದೇ ಕಲಿಕಾ ಮಂದಿರವಾಗಿತ್ತು. ಈಗಿನಂತೆ ಆಗಿನ್ನೆಲ್ಲಿಯ ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್? ಎಲ್ಲರಿಗೂ ಒಂದೇ ಸಿಲಬಸ್. ಆಗ ಈಗಿನಂತೆ ಹಳದಿ ಕಲರ್ ಬಸ್ಸುಗಳು ಸಹ ಬರ್ತಾ ಇರಲಿಲ್ಲ. ಎಲ್ರೂ ಕನ್ನಡ ಮಾಧ್ಯಮದಲ್ಲೇ ಓದಬೇಕಾಗಿತ್ತು. ಈಗಿನಂತೆ ಒಂದನೇ ತರಗತಿಗೂ ಇಂಗ್ಲೀಷ್ ಇರಲಿಲ್ಲ. ಐದನೇ ತರಗತಿಯಿಂದ ಎಬಿಸಿಡಿ ಕಲಿಸ್ತಾ ಇದ್ರು. ಆರನೇ ತರಗತಿಗೆ ಹಿಂದಿ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ
ಸರಣಿಯ ಮೊದಲ ಕಂತು ನಿಮ್ಮ ಓದಿಗೆ

ಚಿಕ್ಕವರಿದ್ದಾಗ ಬೇಗ ದೊಡ್ಡವರಾಗಬೇಕು ಅನಿಸುತ್ತೆ; ದೊಡ್ಡವರಾದ ಮೇಲೆ ಚೆನ್ನಾಗೇನೋ ಅನಿಸುತ್ತೆ. ಆದರೆ ದೊಡ್ಡವರಾದಾಗ ಬಾಲ್ಯಾನೇ ಚೆಂದಿತ್ತೇನೋ ಅನಿಸುತ್ತೆ. ಬಹುತೇಕರದ್ದು ಇದೇ ಮನೋಸ್ಥಿತಿ! ವರ್ತಮಾನದಲ್ಲಿ ಬದುಕುವುದು ಕಡಿಮೆ. ಆದರೆ ಹಾಗೆಯೇ ಚಿಕ್ಕವರಾಗಿಯೇ ಇರೋಕೆ ಆಗಲ್ವಲ್ಲ. ಕಾಲ ಕಳೀತಾ ಹೋದಂಗೆ ದೊಡ್ಡವರಾಗಲೇಬೇಕಲ್ಲವಾ? ನೀವೇನೇ ಹೇಳಿ. ಬಾಲ್ಯದ ನೆನಪುಗಳೇ ಚೆಂದ. ಚಿಕ್ಕ ಮಕ್ಕಳನ್ನು ನೋಡಿದಾಗ ನಮಗೆ ನಮ್ಮ ಬಾಲ್ಯವೂ ನೆನಪಿಗೆ ಬಂದು ಮನದಲ್ಲಿ ಖುಷಿ ತರಿಸುತ್ತೆ. ಇಂಥಾ ಅನುಭವಗಳನ್ನು ಯಾವಾಗ್ಲಾದ್ರೂ ನಮ್ಮ ಬಾಲ್ಯದ ಗೆಳೆಯರೆಲ್ಲರೂ ಒಂದೆಡೆ ಸೇರಿದಾಗ ಹಂಚಿಕೊಂಡು ಖುಷಿ ಪಡ್ತೇವೆ. ಅದರಲ್ಲೂ ಹಳ್ಳೀಲಿ ಬೆಳೆದ ಮಕ್ಕಳ ಬಾಲ್ಯದ ಅನುಭವಗಳು ಚೆಂದವಿರ್ತವೆ. ಈಗೀಗ ಹಳ್ಳೀದೂ ಮೊದಲಿನಂತಿಲ್ಲ ಬಿಡಿ. ಪಟ್ಟಣದವ್ರದಂತೂ ಕೇಳಲೇ ಬೇಡಿ. ಇಂದು ಇರುವ ಬೇಬಿ ಸಿಟ್ಟಿಂಗು, ಚೂರು ದೊಡ್ಡವಾದಂಗೆ ಕಾನ್ವೆಂಟ್, ಶಾಲೆ, ಟ್ಯೂಷನ್, ಕೋಚಿಂಗ್ ಕ್ಲಾಸು, ಆ ಕ್ಲಾಸು ಈ ಕ್ಲಾಸು ಮಾರ್ಕ್ಸು, ಗ್ರೇಡು, ಅದೂ ಇದೂ ಅಂತ ಪಾಪ! ಕಬ್ಬಿನ ಗಾಣದಲ್ಲಿ ಹಾಕಿದ ಕಬ್ಬಿನಂತಿರುತ್ತದೆ ಅವರ ಸ್ಥಿತಿ! ಕೆಲವರದ್ದು ಇದಕ್ಕೆ ಹೊರತಿರಬಹುದು. ಇದ್ರೆ ಸಂತೋಷ. ಸದ್ಯ ನನ್ನ ಬಾಲ್ಯ ಖುಷಿಯಾಗಿತ್ತು. ಕಾರಣ ನಾ ಹತ್ತನೇ ಕ್ಲಾಸ್‌ವರೆಗೂ ಹುಟ್ಟಿ ಬೆಳೆದದ್ದು ಹಳ್ಳೀಲಿ. ಓದಿದ್ದೂ ಸರ್ಕಾರಿ ಹಾಗೂ ಅನುದಾನಿತ ಶಾಲೇಲಿ.

ಇತ್ತ ಮಲೆನಾಡೂ ಅಲ್ಲದ, ಬಯಲುಸೀಮೆಯೂ ಅಲ್ಲದ ಅರೆಮಲ್ನಾಡಾದ ಊರಿನಲ್ಲಿ ಜನಿಸಿದ ನನ್ನ ಹುಟ್ಟೂರು ಚನ್ನಗಿರಿ ತಾಲ್ಲೂಕಿನಿಂದ ಹತ್ತಿರದಲ್ಲಿರುವ ಹೆಬ್ಬಳಗೆರೆ. ಮಳೆಯಾಶ್ರಿತ ಭೂಮಿ ಇರುವ ಪ್ರದೇಶ. ಈಗಿದ್ದಂತೆ ಆಗ ಅಡಿಕೆ ತೋಟಗಳು ಇರಲಿಲ್ಲ. ಹತ್ತಿ, ಜೋಳ, ರಾಗಿ ಮುಖ್ಯ ಬೆಳೆಗಳಾಗಿ ಬೆಳೀತಿದ್ದ ಗ್ರಾಮ. ಹೆದ್ದಾರಿಯ ಪಕ್ಕದಲ್ಲಿದ್ದರೂ ಬೆಳೆಗಳನ್ನು ಮಳೆಯನ್ನೇ ನಂಬಿ ಬೆಳೆಯಬೇಕಾದ್ದರಿಂದ ಈ ಗ್ರಾಮದ ಕೆಲವೇ ಜನರನ್ನು ಹೊರತುಪಡಿಸಿ ಬಹುತೇಕರ ಜೀವನ ಹೆದ್ದಾರಿಯಂತೆ ಸುಗಮವಾಗಿರಲಿಲ್ಲ! ಇದ್ದುದರಲ್ಲೂ ನಮ್ಮ ಮನೆಯದ್ದು ಕಲ್ಲು‌, ಹೊಂಡಗಳಿಂದ ಕೂಡಿದ್ದ ದಾರಿಯಾಗಿತ್ತು. ಆದರೆ ಬೆಳೆದದ್ದು ಮಾತ್ರ ಇದೇ ತಾಲ್ಲೂಕಿನ ನನ್ನಜ್ಜನ ಊರು ನಲ್ಕುದುರೆಯಲ್ಲಿ. ಹಿಂದೊಮ್ಮೆ ಓಡುತ್ತಿದ್ದ ಕುದುರೆಗೆ ‘ನಿಲ್ಲು ಕುದುರೆ, ನಿಲ್ಲು‌ ಕುದುರೆ’ ಎಂದು ಕೂಗಿ ಕರೆದುದಕ್ಕೆ ಪ್ರಾರಂಭದಲ್ಲಿ ‘ನಿಲ್ಲು ಕುದುರೆ’ ಎಂಬುದೇ ಊರ ಹೆಸರಾಗಿ ಬರ್ತಾ ಬರ್ತಾ ‘ನಲ್ಕುದುರೆ’ ಆಯ್ತು ಎಂಬ ಕಥೆಯನ್ನು ಊರಿಗೆ ಈ ಹೆಸರೇಕೆ ಬಂತು? ಎಂದು ಕೆಲವರು ಹೇಳೋದು ಕೇಳಿದ್ನೇ ಹೊರತು ಇದರ ಬಗ್ಗೆ ಅಷ್ಟು ಗೊತ್ತಿಲ್ಲ..

ನನ್ನ ಹುಟ್ಟೂರಿಗೂ ಬೆಳೆದ ಊರಿಗೂ ಅಜಗಜಾಂತರ ವ್ಯತ್ಯಾಸ. ಬೆಳೆದ ಊರು ಭದ್ರಾ ನದಿಯ ನೀರಿನ ಸೌಲಭ್ಯವಿರುವ ಊರು. ಎಲ್ಲೆಡೆಯೂ ಹಚ್ಚಹಸಿರಿನಿಂದ ಕೂಡಿರುವ ಭತ್ತ ಬೆಳೆಯೋ ಪ್ರದೇಶ. ಅಂದು ಶಿವಮೊಗ್ಗ ಜಿಲ್ಲೆಗೆ‌ ಈ ಎರಡೂ ಊರುಗಳು ಸೇರಿದ್ದವು. ಅಂದಿನ ಕಾಲಕ್ಕೇ ಸಾಕಷ್ಟು ವಿದ್ಯಾವಂತರಿಂದ ಕೂಡಿದ್ದ ಊರು ನಲ್ಕುದುರೆ. ನಾನು ಹುಟ್ಟಿದ ಮನೆಯ ಆರ್ಥಿಕ ಸ್ಥಿತಿಗಿಂತ ಬೆಳೆದ ಮನೆಯ ಸ್ಥಿತಿ ಚೆನ್ನಾಗಿತ್ತು. ನಾನು ಚಿಕ್ಕವನಾಗಿದ್ದಾಗ ತುಂಬಿದ ಟೀ ಲೋಟ ಕೈ ಮೇಲೆ ಬಿದ್ದು ಕೈ ಸುಟ್ಟುಕೊಂಡ ಕಾರಣಕ್ಕೆ ನನ್ನಜ್ಜಿ(ಅಮ್ಮನ ಅಮ್ಮ)ನನ್ನನ್ನು ಬರೀ ಒಂದು ವರ್ಷದವನಾಗಿದ್ದಾಗಲೇ ಅವಳೂರಿಗೆ ಕರೆದುಕೊಂಡು ಹೋಗಿದ್ರಂತೆ. ಅಂದಿನಿಂದ ನನ್ನ ಬಾಲ್ಯದ ಜೀವನವನ್ನು ತಂದೆ ತಾಯಿಯ ಜೊತೆಯಲ್ಲಿ ಕಳೆಯಲಿಲ್ಲ. ಬದಲಾಗಿ ಅಜ್ಜ ಅಜ್ಜಿಯ ಮನೆಯಲ್ಲಿಯೇ ಕಳೆದೆ. ಇರೋ ಹಲವು ಮೊಮ್ಮಕ್ಕಳಲ್ಲಿ ತುಸು ಹೆಚ್ಚೇ ಪ್ರೀತಿ ತೋರಿಸಿ ಬೆಳೆಸಿದ್ರು ನಮ್ಮಜ್ಜ ಅಜ್ಜಿ.

ಬಾಲ್ಯದಲ್ಲಿ ನಾನು ಬಹಳ ತುಂಟ. ಅಲ್ಲೇ ಇದ್ದ ಶಿಶುವಿಹಾರಕ್ಕೆ ಹೋಗ್ತಿದ್ದೆ. ಅಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದ ಕಮಲಮ್ಮ ಮನೆ ಮನೆಗೆ ಬಂದು ನಮ್ಮನ್ನೆಲ್ಲ ಕರೆದುಕೊಂಡು ಹೋಗಿ, ವಾಪಸ್ಸು ಮನೆಗೆ ಬಿಡೋ ಕೆಲಸ ಮಾಡ್ತಿದ್ರು. ಪ್ರಾಮಾಣಿಕವಾಗಿ ಈ ಕೆಲಸ ಮಾಡ್ತಿದ್ರು. ಅಂಗನವಾಡಿಯಲ್ಲಿ ಲಲಿತಾ ಮೇಡಂ ಟೀಚರ್ ಆಗಿ ಕೆಲಸ ಮಾಡ್ತಿದ್ರು. ಇವರು ಕಲಿಸೋ ವಿಧಾನಾನೇ ಡಿಫರೆಂಟ್ ಆಗಿ ಇತ್ತು. ಅಲ್ಲೇ ಪಕ್ಕದಲ್ಲಿದ್ದ ಈರಣ್ಣನ ಗುಡಿ ರಿಪೇರಿ ಮಾಡ್ಸೋಕೆ ಅಂತಾ ತಂದ ಮರಳ ರಾಶಿಯ ಹತ್ರ ನಮ್ಮನ್ನು ಕರೆದುಕೊಂಡು ಹೋಗ್ತಾ ಇದ್ರು. ಕಲ್ಲುಗಳನ್ನು ಆರಿಸಿಕೊಂಡು ಬರೋಕೆ ತಿಳಿಸಿ ಮರಳ ಮೇಲೆ‌ ಬರೆದ ಅಕ್ಷರದ ಮೇಲೆ ಕಲ್ಲು ಜೋಡಿಸಲು ಹೇಳ್ತಿದ್ರು. ನೋಟ್ ಬುಕ್ಕಿಲ್ಲ, ಪೆನ್ನಿಲ್ಲ, ಪೆನ್ಸಿಲ್ಲೂ ಇಲ್ಲ. ಈಗಿನ ಮಕ್ಕಳಿಗಿದ್ದಂತೆ ಯೂನಿಫಾರಂ‌ ಇರಲಿಲ್ಲ‌. ಚಡ್ಡಿ ಹಾಕ್ಕೋಂಡು ಬರದೇ ಇರೋ ಕೆಲ ಹುಡುಗರೂ ಇರ್ತಾ ಇದ್ರು! ಅದೇನು ಪ್ರಾಮಾಣಿಕತೆ, ಡೆಡಿಕೇಷನ್ನು!

ಕಮಲಜ್ಜಿಯಂತೂ ನಮ್ಮನ್ನೆಲ್ಲಾ ತುಂಬಾ ಚೆನ್ನಾಗಿ ನೋಡಿಕೊಳ್ತಾ ಇದ್ರು. ಮಧ್ಯಾಹ್ನಕ್ಕೆ ಅಂತಾ ಉಪ್ಪಿಟ್ಟು ಕೆಲವೊಮ್ಮೆ ಉಂಡೆ ಕೊಡ್ತಾ ಇದ್ರು. ಕೆಲ ಮಕ್ಕಳು ಚಡ್ಡೀಲೇ ಕಕ್ಕ ಮಾಡ್ಕೊಂಡು ಗಲೀಜು ಮಾಡ್ಕೊಂಡ್ರೂ ಕಮಲಮ್ಮಾನೇ ಕ್ಲೀನ್ ಮಾಡ್ತಿದ್ರು! ಮೇಡಂ ಅಕ್ಷರ ಕಲಿಸೋ ಜೊತೆಗೆ ಹಾಡನ್ನೂ ಹೇಳಿಕೊಡೋರು. ನಾನು ರೆಗ್ಯುಲರ್ ಆಗಿ ಶಿಶುವಿಹಾರಕ್ಕೆ ಹೋಗ್ತಾ ಇರ್ಲಿಲ್ಲ. ಕಮಲಜ್ಜಿ ಬರೋ ಸಮಯದಾಗೆ ಅಟ್ಟದ ಮೇಲೋ, ಕಣದ ಬಣವೆಯ ಮಧ್ಯೆಯೋ ಹೋಗಿ ಅಡಗಿ ಕುಳಿತು ಬಿಡ್ತಾ ಇದ್ದೆ. ಮಾತು ಮಾತ್ರ ಜಾಸ್ತಿ ಆಡ್ತಾ ಇದ್ದದ್ದನ್ನು ನೋಡಿ ಬಲು ಚೂಟಿ ಇದಾನೆ ನಮ್ಮ ಮೊಮ್ಮಗ ಅಂತಾ ಬಹಳ ಖುಷಿ ಪಡ್ತಿದ್ರು ನಮ್ಮಜ್ಜ ಅಜ್ಜಿ. ಕೆಲವೊಮ್ಮೆ ಅವರ ಮಾತು ಕೇಳ್ದೇ ಇದ್ದಾಗ ನರಸಜ್ಜಿ ಕೈಲಿ ಹಿಡಿದುಕೊಡ್ತೇನೆ ಅಂತಾ ನನಗೆ ಹೆದರಿಸುತ್ತಾ ಇದ್ರು. ಆ ಅಜ್ಜಿ ಬಾಯಲ್ಲಿ ಒಂಥರಾ ‘ಹ್ಞಾ ಹ್ಞೋ …..’ ಅಂತಾ ಶಬ್ದ ಮಾಡ್ತಾ, ತೋರು ಬೆರಳನ್ನು ಆಡಿಸುತ್ತಾ ನನ್ನೆಡೆಗೆ ತೋರಿಸುತ್ತಾ ಇದ್ದರೆ ನನಗೆ ಭಯವೋ ಭಯ. ಈ ಅಜ್ಜಿ ಎಲ್ಲಿಯೇ ಕಾಣಲಿ ಹೆದರಿ ಮನೆ ಕಾಣೋವರೆಗೂ ಓಟ ಕೀಳ್ತಾ ಇದ್ದೆ. ಇತ್ತ ಶಿಶುವಿಹಾರಕ್ಕೆ ಸರಿಯಾಗಿ ಹೋಗದೇ ಇದ್ದುದ್ದಕ್ಕೋ ಏನೋ(?) ನಮ್ಮಜ್ಜ ಶಾಲೆ ಸೇರಿಸೋಕೆ ಊರಲ್ಲಿದ್ದ ಗೌರ್ನಮೆಂಟ್ ಸ್ಕೂಲಿಗೆ ಹೋದ್ರು.

ಆ ಕಾಲ್ದಾಗೆ ಊರಾಗೆ ದೊಡ್ಡ ಸಿರಿವಂತನ ಮನೆಯವರಿಂದ ಹಿಡಿದು ಮಧ್ಯಮ ವರ್ಗ, ಬಡವರ ಮನೆಯವರಿಗೆಲ್ಲರಿಗೂ ಇದೇ ಕಲಿಕಾ ಮಂದಿರವಾಗಿತ್ತು. ಈಗಿನಂತೆ ಆಗಿನ್ನೆಲ್ಲಿಯ ಸಿಬಿಎಸ್‌ಇ, ಐಸಿಎಸ್‌ಇ ಸಿಲಬಸ್? ಎಲ್ಲರಿಗೂ ಒಂದೇ ಸಿಲಬಸ್. ಆಗ ಈಗಿನಂತೆ ಹಳದಿ ಕಲರ್ ಬಸ್ಸುಗಳು ಸಹ ಬರ್ತಾ ಇರಲಿಲ್ಲ. ಎಲ್ರೂ ಕನ್ನಡ ಮಾಧ್ಯಮದಲ್ಲೇ ಓದಬೇಕಾಗಿತ್ತು. ಈಗಿನಂತೆ ಒಂದನೇ ತರಗತಿಗೂ ಇಂಗ್ಲೀಷ್ ಇರಲಿಲ್ಲ. ಐದನೇ ತರಗತಿಯಿಂದ ಎಬಿಸಿಡಿ ಕಲಿಸ್ತಾ ಇದ್ರು. ಆರನೇ ತರಗತಿಗೆ ಹಿಂದಿ! ಇನ್ನು ಆಗ ಅಡ್ಮಿಷನ್ ತಂತ್ರವೇ ಡಿಫರೆಂಟ್. ಈಗಿನಂತೆ ಮಕ್ಕಳನ್ನು ಅಡ್ಮಿಷನ್‌ಗೆ ಚೆಕ್ ಮಾಡೋಕೆ ಪರೀಕ್ಷೆ ಗಿರೀಕ್ಷೆ ಏನೂ ಇರಲಿಲ್ಲ. ತಲೆ ಮೇಲೆ ಕೈ ಹಿಡಿದು ಕಿವಿ ಮುಟ್ಟಿಸಬೇಕಾಗಿತ್ತು. ಕಿವಿ ಮುಟ್ಟಿದರೆ ಮಾತ್ರ ಅಡ್ಮಿಷನ್. ಇಲ್ಲ ಅಂದ್ರೆ ಅಡ್ಮಿಷನ್ ಇಲ್ಲ!

ನಂಗೂ ಇದೇ ರೀತಿ ಪರೀಕ್ಷೆಗೊಳಪಡಿಸಿದಾಗ ಕೈ ಮುಟ್ಲೇ ಇಲ್ಲ. ನಮ್ಮಜ್ಜ ನನ್ನ ಹೊರಗೆ ಕರೆತಂದು ಕಿವಿ ಮುಟ್ಟಿಸೋಕೆ ಬೇರೆ ಬೇರೆ ತಂತ್ರಾನ ಹೇಳಿಕೊಟ್ರು. ಕೈಯನ್ನು ಸ್ವಲ್ಪ ಮುಂದಕ್ಕೆ ಅಥವಾ ಹಿಂದಕ್ಕೆ ಎಳೆದುಕೋ, ಕಿವಿ ಸಿಗುತ್ತೆ ಅಂತಾ ಕಿವಿಯಲ್ಲಿ ಉಸುರಿದ್ರು. ಬಸ್ಸಪ್ಪ ಮೇಷ್ಟ್ರ ಎದುರಿಗೆ ಮತ್ತೆ ಮತ್ತೆ ಶಾಲೆ ಸೇರೋಕೆ ಅಂತಾ ಆಸೆಯಿಂದ ಕೈ‌ನ ನಮ್ಮಜ್ಜ ಹೇಳಿಕೊಟ್ಟಂತೆ ತಲೆಯ ಮುಂಭಾಗದಲ್ಲಿ ಹಿಡಿದು ಮುಟ್ಟಿಸೋಕೆ ಹೋದೆ. ಆದರೆ ಮೇಷ್ಟ್ರಿಗೆ ನನ್ನ ಯೋಜನೆ ತಿಳಿದು ತಲೆಯ ಮಧ್ಯದಲ್ಲಿ ಕೈ ಹಿಡ್ಕೊಂಡು ಕಿವಿ ಮುಟ್ಸೋಕೆ ಹೇಳಿ ಕೈಯನ್ನು ತಲೆಯ ಮಧ್ಯದ ಮೇಲಿದ್ದಾಗ ಒತ್ತಿ ಹಿಡಿದ್ರು. ಆದರೆ ಈ ಸಲ ನನಗೆ ಕೈ ಎಳೆದು ಎಳೆದೂ ಮುಟ್ಟೋಕೆ ಪ್ರಯತ್ನ ಮಾಡಿದ್ರೂ ಅದು ವಿಫಲ ಪ್ರಯತ್ನವಾಯಿತು. ಇದು ನನ್ನಿಂದ ಸಾಧ್ಯ ಆಗದೇ ಇದ್ದುದನ್ನು ನೋಡಿ ಬಸ್ಸಪ್ಪ ಮೇಷ್ಟ್ರು ದಾಖಲು ಮಾಡಿಸಿಕೊಳ್ಳೋಕೆ ಸುತರಾಂ ಒಪ್ಲೇ ಇಲ್ಲ. ಒಂದೊಮ್ಮೆ ಬಸ್ಸಪ್ಪ ಮೇಷ್ಟ್ರು ಈ ವಿಷಯದಲ್ಲಿ ಹೊಂದಾಣಿಕೆ ಮಾಡ್ಕೊಂಡಿದ್ದಿದ್ರೆ ಆ ವರ್ಷಾನೇ ಒಂದನೇ ಕ್ಲಾಸು ಸೇರಿಬಿಡ್ತಿದ್ದೆ. ಆದರೆ ಇದು ಆಗ್ಲಿಲ್ಲ. ನಮ್ಮಜ್ಜ ಆಗ ಬಂದ ದಾರಿಗೆ ಸುಂಕವಿಲ್ಲ ಅಂತಾ ವಾಪಸ್ಸು ಮನೆಗೆ ಕರ್ಕೊಂಡು ಹೋದ್ರು. ನನಗೆ ಒಳಗೊಳಗೆ ಒಂಥರಾ ಖುಷಿ! ಆರಾಮಾಗೆ ಮನೆಯಲ್ಲಿ ತಿಂದ್ಕೊಂಡು ಆಡ್ಕೊಂಡು ಇರಬಹುದು ಅಂತಾ ಹೋದೆ.

ಇವತ್ತಿಗೂ ನನಗೆ ಕೈಯನ್ನು ಯಾಕೆ ಹಾಗೆ ಕಿವಿಗೆ ಮುಟ್ಟಿಸ್ತಾ ಇದ್ರು ಅಂತ ಗೊತ್ತಿಲ್ಲ. ಸ್ವತಃ ಮೇಷ್ಟ್ರು ಆದ್ರೂ ನಾನೂ ಸಹ ಈ ರೀತಿ ಯಾವುದೇ ಮಕ್ಕಳಿಗೆ ಮಾಡಿಲ್ಲ. ನನ್ನ ಮಕ್ಕಳಿಗೂ ಅವರನ್ನು ಸೇರಿಸಿಕೊಂಡ ಶಾಲೆಯವರು ಈ ರೀತಿ ಮಾಡಿಲ್ಲ. ಇದೊಂಥರಾ ಡಿಫರೆಂಟ್ ಟೆಕ್ನಿಕ್. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಿದೆ. ಗುರು ಶಿಷ್ಯರ ಸಂಬಂಧ, ಸಿಲಬಸ್, ಕಲಿಸೋ ವಿಧಾನ, ಮಾಡೋ ಪರೀಕ್ಷೆ ಎಲ್ಲವೂ ಬದಲಾಗಿದೆ. ಆದರೆ ‘ವರ್ಣ ಮಾತ್ರಂ ಕಲಿಸಿದಾತಂ ಗುರು’ ಎಂಬಂತೆ ಶುರುವಿನಲ್ಲಿಯೇ ನನಗೆ ಕಲಿಸಿದ ಲಲಿತಾ ಮೇಡಂ ಹಾಗೂ ನಮ್ಮ‌ ರಕ್ಷಣೆಯ‌ ವಿಷಯದಲ್ಲಿ‌ ಮುತುವರ್ಜಿ ವಹಿಸುತ್ತಿದ್ದ ಕಮಲಮ್ಮನನ್ನು ಮರೆಯಲು ಸಾಧ್ಯವಿಲ್ಲ.