ಅಂದು ಎಲ್ಲರಿಗೂ ಆಶ್ಚರ್ಯ, “ಸಿಸ್ಟರ್ ಎಷ್ಟು ಫ್ರೀಯಾಗಿದ್ದಾರೆ, ಒಳ್ಳೆ ಮೂಡಿನಲ್ಲಿದ್ದಾರೆ!” ಎಂದು. ಪಾಠ ಓದಿಸಿದರು… ತಪ್ಪು ಓದಿದರೂ ಅಷ್ಟೇನೂ ದಂಡಿಸಲಿಲ್ಲ. ಕಡೆಗೆ “ನಿನ್ನೆ ಫಿಲ್ಮ್ ತುಂಬಾ ಚಂದ ಇತ್ತಲ್ವ” ಎಂದರು. ಎಲ್ಲರೂ ಮರೆತು “ಹೌದು! ಹೌದು!” ಹಾಗೆ ಹೀಗೆ ಎಂಬ ಡಿಸ್ಕಶನ್ ಶುರುಮಾಡಿದರು. ಅದರ ಮುಂದಿನ ಪ್ರಶ್ನೆ “ಯಾರು ಯಾರು ನೋಡಿದ್ದೀರ?” ಎನ್ನುವುದಾಗಿತ್ತು. ಸಿಸ್ಟರ್ ತುಂಬಾ ಖುಷಿಯಲ್ಲಿ ಇದ್ದಾರೆ ಎಂದುಕೊಳ್ಳುತ್ತಾ ಫಿಲ್ಮ್ ನೋಡಿದವರೂ ನೋಡದೆ ಇರುವರೂ ಎಲ್ಲರೂ ನಾನು ನಾನು ಎಂದರು. ನಾನುಗಳ ಸಂಖ್ಯೆ ಹೆಚ್ಚಿದ್ದ ಕಾರಣಕ್ಕೆ, ಸಿನಿಮಾ ನೋಡಿಲ್ಲ ಎಂದು ಹೇಳಿ ಕುಳಿತೇ ಇರುವವರನ್ನು ಒಂದೆಡೆ ಬರಲು ಹೇಳಿದರು. ಅವರೂ ಹೋದರು. ಅವರ ಹೆಸರುಗಳು ಚೀಟಿಯಲ್ಲಿ ದಾಖಲಾದವು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ

ಕೊಡಗಿನಲ್ಲಿ ವರ್ಷಕಾಲ ಎನ್ನುವುದಕ್ಕಿಂತ ವರ್ಷಕಾಲದಲ್ಲಿ ಕೊಡಗು ಅನ್ನುವ ಮಾತು ಹೊಂದಿಕೆಯಾಗುತ್ತದೆ. ಮಳೆ ಯಾವಾಗ ಬರುತ್ತದೆ ಎಂದು ಹೇಳಲಾಗದು. ಕೊಡೆ ಕೈಯಲ್ಲಿ ಹಿಡಿದಿರಲೇಬೇಕು ಮಳೆ ಬಂದರೂ ಸರಿ ಬಿಸಿಲಾದರೂ ಸರಿ ಉಪಯೋಗಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ. ಜೊತೆಗೆ ವರ್ಷದಲ್ಲಿ ಬರುವ ಒಂದೆರಡು ಸೈಕ್ಲೋನ್ ಎಫೆಕ್ಟ್ ಬೇರೆ. ಚಂಡಮಾರುತ ಪ್ರಭಾವಕ್ಕೆ ಮಡಿಕೇರಿ ಇನ್ನಷ್ಟು ಸೆಟೆದುಕೊಳ್ಳುತ್ತಿತ್ತು. ಮಳೆಯಿಲ್ಲದೆ ಬಿಸಿಲೂ ಇಲ್ಲದೆ ಮಧ್ಯಾಹ್ನ ಎರಡು ಗಂಟೆಯಾದರೂ ಬೆಳಗ್ಗೆ ಏಳುಗಂಟೆಯೇನೋ ಎಂಬಂತೆ ತಣ್ಣಗೆ ಕೊರೆಯುವ ಚಳಿಯ ನಡುವೆ ಕಳೆದ ಎಷ್ಟೋ ದಿನಗಳು ಇಂದಿಗೆ ಬರಬಾರದೆ ಅನ್ನಿಸುತ್ತದೆ. ನಾವು ಹತ್ತನೆ ತರಗತಿಯಲ್ಲಿ ಇದ್ದಾಗೊಮ್ಮೆ ಸೈಕ್ಲೋನ್ ಪರಿಣಾಮದಿಂದ ಮಳೆ ಹೆಚ್ಚು ಬಂದು ತರಗತಿಯಲ್ಲಿ ನೀರು ನಿಂತಿದ್ದಾಗ ಅದನ್ನು ಸ್ವಚ್ಛ ಮಾಡಲು ಸಮಯ ಬೇಕಾಗಿತ್ತು. ನಾವೆಲ್ಲರೂ ಹೊರಗೆ ನಿಂತಿದ್ದೆವು. ಅದು ಸೋಮವಾರವಾದ್ದರಿಂದ ದೂರದರ್ಶನದಲ್ಲಿ ಹಿಂದಿನ ದಿನ ಪ್ರಸಾರವಾಗಿದ್ದ ಚಲನಚಿತ್ರದ ಬಗ್ಗೆ ಎಲ್ಲರ ಚರ್ಚೆ ಸಾಗಿತ್ತು.

ಅದನ್ನು ಯಾವುದೋ ಮಾಯದಲ್ಲಿ ಕೇಳಿಸಿಕೊಂಡ ನಮ್ಮ ಇಂಗ್ಲಿಷ್ ಸಿಸ್ಟರ್ ತರಗತಿಯೆಲ್ಲ ಸ್ಚಚ್ಛವಾದ ನಂತರ ಹಿಂದೆಂದೂ ಇಲ್ಲದ ಖುಷಿಯಲ್ಲಿ ಬಂದಿದ್ದರು, ಮಾತು ಮಾತಿಗೂ ನಗೆ ಚಟಾಕಿ ಹಾರಿಸುತ್ತಿದ್ದರು. ಎಲ್ಲರಿಗೂ ಆಶ್ಚರ್ಯ, “ಸಿಸ್ಟರ್ ಎಷ್ಟು ಫ್ರೀಯಾಗಿದ್ದಾರೆ, ಒಳ್ಳೆ ಮೂಡಿನಲ್ಲಿದ್ದಾರೆ!” ಎಂದು. ಪಾಠ ಓದಿಸಿದರು… ತಪ್ಪು ಓದಿದರೂ ಅಷ್ಟೇನೂ ದಂಡಿಸಲಿಲ್ಲ. ಕಡೆಗೆ “ನಿನ್ನೆ ಫಿಲ್ಮ್ ತುಂಬಾ ಚಂದ ಇತ್ತಲ್ವ” ಎಂದರು. ಎಲ್ಲರೂ ಮರೆತು “ಹೌದು! ಹೌದು1” ಹಾಗೆ ಹೀಗೆ ಎಂಬ ಡಿಸ್ಕಶನ್ ಶುರುಮಾಡಿದರು. ಅದರ ಮುಂದಿನ ಪ್ರಶ್ನೆ “ಯಾರು ಯಾರು ನೋಡಿದ್ದೀರ?” ಎನ್ನುವುದಾಗಿತ್ತು. ಸಿಸ್ಟರ್ ತುಂಬಾ ಖುಷಿಯಲ್ಲಿ ಇದ್ದಾರೆ ಎಂದುಕೊಳ್ಳುತ್ತಾ ಫಿಲ್ಮ್ ನೋಡಿದವರೂ ನೋಡದೆ ಇರುವರೂ ಎಲ್ಲರೂ ನಾನು ನಾನು ಎಂದರು. ನಾನುಗಳ ಸಂಖ್ಯೆ ಹೆಚ್ಚಿದ್ದ ಕಾರಣಕ್ಕೆ, ಸಿನಿಮಾ ನೋಡಿಲ್ಲ ಎಂದು ಹೇಳಿ ಕುಳಿತೇ ಇರುವವರನ್ನು ಒಂದೆಡೆ ಬರಲು ಹೇಳಿದರು. ಅವರೂ ಹೋದರು. ಅವರ ಹೆಸರುಗಳು ಚೀಟಿಯಲ್ಲಿ ದಾಖಲಾದವು. ಒಂದು ಕ್ಷಣ ಕಾಲ ಸ್ತಬ್ಧರಾದರು. ಮತ್ತೂ ಒಂದು ಕ್ಷಣ ಸುಮ್ಮನಿದ್ದು ಫಿಲ್ಮ್ ನೋಡಿದವರೆಲ್ಲರೂ ಬ್ಯಾಗ್ ಸಹಿತ ಸಿಸ್ಟರ್ ಜೋಸೆಫ್‌ ಕ್ಯಾಬಿನ್‌ಗೆ ಹೋಗಬೇಕು ಎಂದರು. ನಮ್ಮದೆ ತಲೆಯ ಮೇಲೆ ನಮ್ಮದೆ ಕೈ ಎನ್ನುವಂತೆ ಎಲ್ಲರೂ ಸಿಕ್ಕಿಬಿದ್ದಾಗಿತ್ತು ಇನ್ನೇನೂ ಮಾಡುವಂತಿರಲಿಲ್ಲ. ಆಫೀಸ್ ರೂಮಿನ ಹೊರಗೋಡೆ ಬುಡದಲ್ಲಿ ಪೇರೆಂಟ್ಸ್ ಬರುವವರೆಗೂ ನೆಲದಲ್ಲಿ ಕೂರಬೇಕಾದ ಸಂದರ್ಭ. ಅದೂ ಮುತ್ತಿನ ಹಾರದ ಪ್ರಭಾವ ಎಂದುಕೊಂಡು ಸುಮ್ಮನಾದೆವು. ಹತ್ತನೆ ತರಗತಿ ವಿದ್ಯಾರ್ಥಿಗಳು ಟಿ.ವಿ. ನೋಡ್ತಾರೆ, ಫಿಲ್ಮ್ ನೋಡಿದಾರೆ ಎನ್ನುವುದೇ ದೊಡ್ಡ ಆಪಾದನೆಯಾಗಿತ್ತು. ಇಂದಿನ ಮಾಧ್ಯಮಗಳು ಮೊಬೈಲ್ ಹುಚ್ಚಿನ ವಾತಾವರಣವಾಗಿದ್ದರೆ ಇನ್ನೇನು ಮಾಡುತ್ತಿದ್ದರೋ ತಿಳಿಯದು!

ಸರಿ! ಪೇರೆಂಟ್ಸ್ ಬಂದಾಗ ಅಟೆಂಡರ್ ಮೋಸೆಸ್, ಇಲ್ಲ ಡೆಲ್ಫಿನ್ ಮೇಡಮ್ ಬಂದು ಒಂದೊಂದೆ ಹೆಸರನ್ನು ಕರೆಯುತ್ತಿದ್ದರು. ಹೆಸರು ಬಂದವರು “ದೇವರು ಹೊಸೆದ ಪ್ರೇಮದ ದಾರ….!” ಎಂದು ಕರ್ಕಶವಾಗಿಯೇ ಹಾಡುತ್ತಾ ಎದ್ದು ಜೋಸೆಫ್‌ ಬಳಿ ಹೋಗಿ ಬೈಗುಳದ ಸಿಂಚನ ಮಾಡಿಸಿಕೊಂಡು ತರಗತಿ ಪ್ರವೇಶ ತೆಗೆದುಕೊಂಡಾಯಿತು. ಇಷ್ಟೆಲ್ಲಾ ಆಗುವ ವೇಳೆಗೆ ಒಂದು ವಾರ. ಅಲ್ಲಿಂದಾಚೆಗೆ ಸಿಸ್ಟರ್ ಮೆರಿಲೋಬೊ ಏನು ಕೇಳಿದರೂ ಯಾರೂ ತುಟಿ ಬಿಚ್ಚುತ್ತಿರಲಿಲ್ಲ. ಯಾವುದಕ್ಕೂ ಉತ್ತರ ನೀಡುತ್ತಿರಲಿಲ್ಲ. ಬಹುಶಃ ಪ್ರತಿಭಟನೆಯ ಒಂದು ವಿಧಾನವಾಗಿತ್ತೋ ತಿಳಿಯದು. ಆದರೆ ಅವರು ಹೇಳಿಕೊಟ್ಟ ಇಂಗ್ಲಿಷ್ ಬೇಸಿಕ್ಸ್ ತುಂಬಾ ಚೆನ್ನಾಗಿದೆ. ಕನ್ನಡ ಮಾಧ್ಯಮದವರಾದರೂ ಇಂಗ್ಲಿಷಿನಲ್ಲಿ ಕನ್ನಡದಷ್ಟೇ ಅಂಕಗಳನ್ನು ತೆಗೆದಿದ್ದೇವೆ, ಹಾಗಾಗಿ ಸಿಸ್ಟರ್ ಮೆರಿಲೋಬೊ ನಿಮಗೆ ಅನಂತ ಧನ್ಯವಾದಗಳು. ಸಿಸ್ಟರ್ ಜೋಸೆಫ್ ಬೈದರು ಅನ್ನುವ ಬೇಸರವಂತೂ ಇಲ್ಲ. ಅವರು ನಮ್ಮನ್ನಗಲಿ ವರ್ಷವಾಗುತ್ತಿದೆ. ಭಾವಪೂರ್ಣ ನೆನಕೆಗಳು ಸಿಸ್ಟರ್…….

ಹೊರಳಿ ಚಳಿಯ ಮಾತಿಗೆ ಬಂದರೆ ಮಡಿಕೇರಿ ಚಳಿಯೆಂದರೆ ಬರಿ ಚಳಿಯೇ ಮೂಳೆಯೊಳಕ್ಕೂ ಗಾಳಿ ನುಗ್ಗಿಸಿ ಹಲ್ಲುಗಳಿಂದ ತಕದಿಮಿ ಹೇಳಿಸುವಂಥ ಚಳಿಯದು. ಅನುಭವಿಸಿದವರಿಗೆ ಮಾತ್ರ ತಿಳಿಯುವ ಮರ್ಮವದು. ಬಟ್ಟೆಗಳನ್ನು ಮೈಗೆ ಹಾಕಿಕೊಳ್ಳುವುದಲ್ಲ. ಬಟ್ಟೆಯೊಳಗೆ ನಾವೆ ತೂರುವಂಥ ಅವಸ್ಥೆ ಅಂಥ ಮಳೆಯಲ್ಲಿ-ಚಳಿಯಲ್ಲಿ ಹಾಲು, ತರಕಾರಿ, ಹೂಗಳನ್ನು ವ್ಯಾಪಾರ ಮಾಡುವುದು ಪ್ರಯಾಸದ ಕೆಲಸವೇ. ರೈನ್ ಕೋಟ್‌ಗಳು ಮಳೆಯ ಹೊಡೆತಕ್ಕೆ ಜಗ್ಗಿ ಬೀಳುವ ಜಡಿ ಮಳೆಯದು. ಮಳೆ ಗಾಲದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರವೆ ಇರುವುದಿಲ್ಲ. ಮಳೆ ಹೆಚ್ಚಾದರಂತೂ ಸಂಜೆ ಆರರಿಂದ ಏಳು ಗಂಟೆಯೊಳಗೆ ಇಡೀ ನಗರವೇ ಸ್ತಬ್ಧವಾದಂತೆ ಗೋಚರವಾಗುತ್ತದೆ.

ಬಿಗ್ ಬಜಾರ್, ಮೋರ್, ರಿಲಯನ್ಸ್ ಟ್ರೆಂಡ್ಸ್ ಇವುಗಳು ಬರುವುದಕ್ಕೂ ಮೊದಲು ನೇತ್ರಾಸ್, ಭಗತ್ಸ್ ಎಂಬ ಸೂಪರ್ ಮಾರ್ಕೆಟ್‌ಗಳು ಇದ್ದವು. ಅಡುಗೆಗೆ ಬೇಕಾದ ಸಾಮಾಗ್ರಿಗಳಲ್ಲಿ ವಿದೇಶಿ ಅಂದರೆ ಚೈನಾಗ್ರಾಸ್, ಬ್ರೊಕೊಲಿ ಇತ್ಯಾದಿಗಳನ್ನು ಕಂಡಾಗ ಇವುಗಳ ಅಗತ್ಯ ನಮಗಿತ್ತೆ? ನಮ್ಮಲ್ಲೇ ಎಷ್ಟು ನಾಡು ತರಕಾರಿಗಳಿವೆ; ಇರುವುದನ್ನು ಬಿಟ್ಟು ಅನ್ಯದೇಶಿ ತರಕಾರಿಗಳ ವ್ಯಾಮೋಹ ನಮಗೇಕೆ ಎನ್ನುವ ಅಭಿಪ್ರಾಯವನ್ನು ಅನೇಕ ಹಿರಿಯರು ವ್ಯಕ್ತಪಡಿಸಿದ್ದನ್ನು ಹಲವಾರು ಬಾರಿ ಕೇಳಿದ ನೆನಪು. ರೊಟ್ಟಿ, ಕಡುಬುಗಳು ಹೆಚ್ಚು ಪ್ರಚಲಿತದಲ್ಲಿರುವ ಕೊಡಗಿನಲ್ಲಿ ನೂಡಲ್ಸ್, ಪಾಸ್ತಾಗಳು ಪ್ರವೇಶಿಸಿದಾಗ ಅನೇಕರು ಮುಜುಗರ ಅನುಭವಿಸಿದ್ದಿದೆ.

ಮೈಸೂರು ಭಾಗದಲ್ಲಿ ದೀಪಾವಳಿಗೆ ಇರುವ ಸಂಭ್ರಮ ಕೊಡಗಿನಲ್ಲಿ ಹುತ್ತರಿಗೆ ಇದೆ. ದೀಪಾವಳಿಯಲ್ಲಿ ಇಲ್ಲಿ ಪಟಾಕಿ ಸದ್ದು ಕಡಿಮೆ ಆದರೆ ಹುತ್ತರಿಯಲ್ಲಿ ಇಡೀ ನಗರವೇ ಪಟಾಕಿ ಬೆಳಕಿನೋಕುಳಿಯಲ್ಲಿ ಮಿಂದೇಳುತ್ತಿರುತ್ತದೆ. ಹೊಸ ಪೈರನ್ನು ಅರ್ಥಾತ್ ಕದಿರನ್ನು ತರುವುದು ವಿಶೇಷ. ಮನೆ ಮಟ್ಟಿಗೆ ಅಲ್ಲದೆ ಶಾಲಾ-ಕಾಲೇಜು ಸರಕಾರಿ ಕಛೇರಿಗಳಲ್ಲೂ ಹೊಸ ಕದಿರನ್ನು ಕಟ್ಟಿ ಸಂಭ್ರಮಿಸುವುದಿದೆ. ತಂಬಿಟ್ಟು, ಮರಗೆಣಸಿನ ಖಾದ್ಯಗಳು ವಿಶೇಷ ಇತರೆ ಭಾಗದಂತೆ ತಂಬಿಟ್ಟನ್ನು ಉಂಡೆ ಮಾಡುವುದಿಲ್ಲ… ಹುಡಿ ಹುಡಿಯಾಗಿರುತ್ತದೆ. ಕುಸುಲಕ್ಕಿ, ಬೆಳ್ತಕ್ಕಿ ಇದಕ್ಕೆ ಬಳಕೆಯಾಗುತ್ತದೆ. ಹುತ್ತರಿ ಕೋಲಾಟ ಎಂಬ ಕೋಲಾಟ ಪ್ರದರ್ಶನಗಳು ಇರುತ್ತವೆ.

ಹುತ್ತರಿ ಕಳೆಯುತ್ತಿದ್ದಂತೆ ನಮ್ಮ ಸಂತಜೋಸೇಫರ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಳೆಗಟ್ಟಲು ಪ್ರಾರಂಭವಾಗುತ್ತದೆ. ನನಗೆ ತಿಳಿದ ಮಟ್ಟಿಗೆ ಡಿಸೆಂಬರ್ 22 ರಂದೇ ವಾರ್ಷಿಕೋತ್ಸವದ ಸಂಭ್ರಮ. ವರ್ಷದಲ್ಲಿ ಅತ್ಯಂತ ಚಿಕ್ಕ ಹಗಲಿನ ದಿನವದು. ಹಾಗಾಗಿ ದಿನಾಂಕ ಸರಿಯಾಗಿ ನೆನಪಿದೆ. ಒಂದು ವರ್ಷ ವೇದಿಕೆ ಕಾರ್ಯಕ್ರಮವಾದರೆ ಇನ್ನೊಂದು ವರ್ಷ ಮೈದಾನದ ಕಾರ್ಯಕ್ರಮ. ವೇದಿಕೆ ಕಾರ್ಯಕ್ರಮಕ್ಕೆ ಇಡೀ ಶಾಲೆಯ ಮಕ್ಕಳು ಭಾಗವಹಿಸಲು ಅವಕಾಶವಿರುತ್ತಿರಲಿಲ್ಲ. ಆದರೆ ಗ್ರೌಂಡಿನಲ್ಲಿ ಮಾಡುವ ಕಾರ್ಯಕ್ರಮಕ್ಕೆ ಸರಿ ಸುಮಾರು 2,750 ಸಂಖ್ಯೆಯ ಅಷ್ಟೂ ಮಕ್ಕಳು ಭಾಗವಹಿಸುತ್ತಿದ್ದುದು ವಿಶೇಷ. ಹೈಸ್ಕೂಲ್ ಮಕ್ಕಳಿಗೆ ಪಥಸಂಚಲನ ಇರುತ್ತಿತ್ತು. ಅದಕ್ಕೆ ಮಾರ್ಗದರ್ಶನ ಮಾಡಲು ಎನ್.ಸಿ.ಸಿ ಅಧಿಕಾರಿಗಳು ಪೋಲಿಸ್ ಅಧಿಕಾರಿಗಳು ಬರುತ್ತಿದ್ದರು. ಶಾಂತಿ, ದಯಾ, ನೀತಿ, ನಿರ್ಮಲ ಎಂಬ ಹೆಸರಿನ ನಾಲ್ಕು ಗುಂಪುಗಳು ಇರುತ್ತಿದ್ದವು. ಈಗದನ್ನು ಕಲರ್‌ಗಳಲ್ಲಿ ಮಾತ್ರವೆ ಗುರುತಿಸುತ್ತಾರೆ. ಪ್ರತೀ ತರಗತಿಗಳಲ್ಲಿಯೂ ದೀಪದ ಚಿತ್ರ ಹೊಂದಿದ ನೀತಿ, ಎರಡು ಹಸ್ತಗಳನ್ನು ಚಾಚಿದ ದಯಾ, ಹಾರುವ ಪಾರಿವಾಳ ಚಿತ್ರವಿರುವ ಶಾಂತಿ, ಲಿಲ್ಲಿ ಹೂಗಳ ಗೊಂಚಲಿರುವ ನಿರ್ಮಲ ಗುಂಪುಗಳ ಚಾರ್ಟ್ ಇರುತ್ತಿತ್ತು. ಅಲ್ಲಿ ಗುಡ್ ಮಾರ್ಕ್ಸ್ ಬ್ಯಾಡ್ ಮಾರ್ಕ್ಸ್‌ಗಳನ್ನು ಟೀಚರ್‌ಗಳು ಕೊಡುತ್ತಿದ್ದರು. ಆದ್ದರಿಂದ ಗುಂಪಿನ ಗೌರವ ಕಾಪಾಡಬೇಕೆಂಬ ಎಚ್ಚರ ಪ್ರತಿಯೊಬ್ಬರಲ್ಲಿಯೂ ಇರುತ್ತಿತ್ತು.

100ಮೀ, 200 ಮೀ, 400 ಮೀ ಜಾವಲಿನ್ ಎಸೆತ, ಡಿಸ್ಕಸ್ ಥ್ರೋ… ಹೂಕಟ್ಟುವ ಸ್ಪರ್ಧೆ, ಬಾಯಲ್ಲಿ ನಿಂಬೆ ಹಣ್ಣು ಇಟ್ಟು ಓಡುವುದು ಕಪ್ಪೆ ಜಿಗಿತ ಇವಿಗಳನ್ನು ತರಗತಿ ಮಟ್ಟದಲ್ಲಿ ಬ್ಲಾಕ್ ಮಟ್ಟದಲ್ಲಿ ಮಾಡಿ ಫೈನಲ್ಸ್‌ಗೆ ಸೆಲೆಕ್ಟ್ ಮಾಡುತ್ತಿದ್ದರು. ಹಾಗೆ 100 ಮೀ ಓಟದ ಸ್ಪರ್ಧೆಯಲ್ಲಿ ಓಡುವಾಗ ಸ್ನಾಯು ಸೆಳೆತಕ್ಕೆ ಒಳಗಾದ ನ್ಯಾನ್ಸಿ ಎಂಬ ಸೀನಿಯರ್ ಒದ್ದಾಡಿದ ಪರಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಹೂ ಕಟ್ಟುವ ಸ್ಪರ್ಧೆಯಲ್ಲಂತೂ ನಮ್ಮ ತರಗತಿಯ ಮಂಜುಳ ಯಾವಾಗಲೂ ಮೊದಲ ಸ್ಥಾನ ಪಡೆಯುತ್ತಿದ್ದಳು. ನಾನು ಏಳನೆಯ ತರಗತಿಯಲ್ಲಿದ್ದಾಗ ತೆಂಗಿನ ಕಾಯಿ ಚಿಪ್ಪಿಗೆ ಬಣ್ಣದ ಪೇಪರ್ ಅಲಂಕಾರ ಮಾಡಿ ಡ್ರಿಲ್ ಮಾಡಿಸಿದ್ದರು. ಆಗಿನ ನಮ್ಮ ಕ್ಲಾಸ್ ಟೀಚರ್ ಸಿಸಿಲಿ ಟೀಚರ್ ಅವರ ಸೃಜನ ಶೀಲತೆಗೆ ಸಾಕ್ಷಿ… ಮತ್ತೆ ನಾವು ಹೈಸ್ಕೂಲಿಗೆ ಬಂದ ನಂತರ ಅದೇ ತೆಂಗಿನ ಚಿಪ್ಪಿನ ಡ್ರಿಲ್ ಮಾಡಿಸಿದ್ದರು. ಅದರ ಜನಪ್ರಿಯತೆ ಎಷ್ಟಿತ್ತೆಂದರೆ ಪೋಲಿಸ್ ವಾರ್ಷಿಕ ಕ್ರೀಡಾಕೂಟದಲ್ಲೂ ಪ್ರದರ್ಶನ ಮಾಡುವಂತಾಯಿತು.

ಶಾಲೆ ಕಟ್ಟಡಗಳಿಂತ ನಮಗೆ ಆಟದ ಮೈದಾನಗಳೆ ಅತ್ಯಂತ ವಿಶಾಲವಾಗಿದ್ದವು. ಇತರೆ ಖಾಸಗಿಯವರ ಕೈಗೆ ಸಿಕ್ಕಿದ್ದರೆ ಅದರಲ್ಲಿಯೇ ಕೋಟಿಗಟ್ಟಲೆ ಹಣ ಮಾಡಿಬಿಡುತ್ತಿದ್ದರೇನೋ. ಒಂದು ಮೈದಾನ ಸೀನಿಯರ್ ಕಾಲೇಜ್ ಕಡೆಗೂ, ಇನ್ನೊಂದು ಮುಸಲ್ಮಾನರ ಸ್ಮಶಾನದ ಕಡೆಗೂ ಇನ್ನೊಂದು ಶಾಲಾ ಆವರಣದಲ್ಲಿಯೇ ಇತ್ತು. ಫುಟ್ ಬಾಲ್ ವಾಲಿಬಾಲ್ ಬಾಸ್ಕೆಟ್ ಬಾಲಿಗೆ ಥ್ರೋಬಾಲ್‌ಗೆ ಕೊಕೊಗೆ ಅತ್ಯಂತ ವಿಶಾಲವಾದ ಕೋರ್ಟ್‌ಗಳು ಇದ್ದವು.


ಡಿಸೆಂಬರ್ 22 ಕ್ಕೆ ಸ್ಕೂಲ್ ಡೇ ಆದರೂ 23ಕ್ಕೆ ಎಲ್ಲರೂ ಹಾಜರಾಗಬೇಕಿತ್ತು. ಶಾಲೆಗೆ ಹಾಕಿದ ಬಂಟಿಂಗ್ಸ್ ಇತ್ಯಾದಿಗಳನ್ನು ತೆಗೆಯಲು. ಬೇಗ ಮನೆಗೆ ಕಳಿಸುತ್ತಾರೆ ಎನ್ನುವ ಕಾರಣಕ್ಕೆ ಬಂಟಿಂಗ್ಸನ್ನು ನೀಟಾಗಿ ಸುತ್ತದೆ ಉಂಡೆ ಮಾಡಿ ಕೊಟ್ಟು ಸಿಸ್ಟರ್ ಗ್ರೆಟ್ಟ ರಿಂದ ಹಸಿಕೋಲಿನಿಂದ ಹೊಡೆತ ತಿಂದ ಆ ಹೊತ್ತನ್ನು ಮರೆಯಲಾಗದು. ಮಾಡುವ ಪ್ರತಿ ಕಾರ್ಯದಲ್ಲೂ ಶ್ರದ್ಧೆ ಬಯಸುವ ಅವರ ನಿಲುವಿನಲ್ಲಿ ತಪ್ಪಿಲ್ಲ ಅಲ್ಲವೇ! ಮುಂದಿನದು ಕ್ರಿಸ್ಮಸ್ ರಜೆ ಡಿಸೆಂಬರ್ 24 ರಿಂದ ಡಿಸೆಂಬರ್ 31ರವರೆಗೆ ಜನವರಿ ಒಂದರಿಂದ ಶಿಸ್ತುಬದ್ಧವಾಗಿ ತರಗತಿಗಳು ನಡೆಯುತ್ತಿದ್ದವು. ಪಠ್ಯಕ್ರಮಗಳು ಮುಗಿದ ನಂತರ ಗ್ರೌಂಡಿನಲ್ಲಿ ಓದಲು ಬಿಡುತ್ತಿದ್ದರು. ಗ್ರೂಪ್ ಸ್ಟಡಿ ದಿನಗಳ ಮೆಲುಕು ಮುಂದಿನ ವಾರ…