ಕೆರೆ ಒತ್ತುವರಿಯ ಕಾರಣಕ್ಕೆ ಮಳೆನೀರು ಗಂಟಿಚೋರರ ಓಣಿಗೆ ನುಗ್ಗಿತು. ನೀರುನಿಂತು ಆಡು ಕುರಿಗಳು ಸಾವನ್ನಪ್ಪಿದವು. ಮೇವಿನ ಬಣವೆಗಳು ನೀರಲ್ಲಿ ತೇಲಿದವು. ಹೀಗಾಗಿ ಗಂಟಿಚೋರರು ಇದರ ವಿರುದ್ಧ ಕೋರ್ಟಿಗೆ ಹೋದರು. ಕೋರ್ಟು ಕೆರೆಯನ್ನು ಪುನಶ್ಚೇತನ ಮಾಡಲು ಆದೇಶಿಸಿತು. ಈ ಆದೇಶ ಪಾಲನೆಯಾಗಲಿಲ್ಲ. ನಂತರ  ನ್ಯಾಯಾಂಗ ನಿಂದನೆ ದಾವೆ ಹೂಡಿದರು. ಇದಕ್ಕೆ ಪಿಡಬ್ಲುಡಿ ಎಂಜಿನಿಯರುಗಳು ಕೆರೆ ಪುನಶ್ಚೇತನ ಮಾಡಿದ ಬಗ್ಗೆ ಸುಳ್ಳು ಅಫಿಡವಿಟ್ ಹಾಕಿದರು.  ಇಷ್ಟೆಲ್ಲ ಆದರೂ ಗಂಟಿಚೋರ ಸಮುದಾಯವು ಎದುರಿಸುತ್ತಿದ್ದ ಸಮಸ್ಯೆ ಬಗೆಹರಿಯಿತೇ ಎಂಬುದು ಪ್ರಶ್ನೆ.
‘ಗಂಟಿಚೋರರ ಕಥನಗಳು ‘ಸರಣಿಯಲ್ಲಿ ಡಾ. ಅರುಣ್ ಜೋಳದ ಕೂಡ್ಲಿಗಿ  ಸಾಮಾಜಿಕ ಸವಾಲುಗಳ  ಕುರಿತು ಬರೆದಿದ್ದಾರೆ. 

ಈ ಸಮುದಾಯ ತನ್ನ ಸಹವರ್ತಿ ಜೀವನ ನಡೆಸುವ ಸಮುದಾಯಗಳ ಜತೆ ಸಾಮರಸ್ಯ ಇರುವಂತೆ ಸಂಘರ್ಷವೂ ಇದೆ. ಇಲ್ಲಿ ಸೆಟ್ಲಮೆಂಟುಗಳಲ್ಲಿದ್ದ ಸಮುದಾಯಗಳು ಸಹಜವಾಗಿ ಒಂದು ಏಕರೂಪಿ ಜೀವನ ವಿಧಾನಕ್ಕೆ ಹೊಂದಿಕೊಂಡ ಕಾರಣ ಇವರೆಲ್ಲಾ ಪರಸ್ಪರ ಸಣ್ಣಪುಟ್ಟ ಭಿನ್ನಾಭಿಪ್ರಾಯದೊಂದಿಗೆ ಬದುಕುತ್ತಿದ್ದರು. ಆದರೆ ಗ್ರಾಮೀಣ ಭಾಗದಲ್ಲಿ ಬದುಕುತ್ತಿದ್ದ ಗಂಟಿಚೋರ ಸಮುದಾಯದ ಬದುಕಿನ ಬಗೆಯು ತೀರಾ ಭಿನ್ನವಾಗಿದೆ. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಆಯಾ ಊರಿನ ಇತರೆ ಸಮುದಾಯಗಳ ಜತೆ ಗಂಟಿಚೋರ್ಸ್ ಸಮುದಾಯ ಸಂಘರ್ಷವನ್ನು ಮಾಡುತ್ತಲೇ ಬದುಕಬೇಕಾಗಿದೆ. ಇದರ ನೆಲೆಗಳು ಪ್ರಾದೇಶಿಕವಾಗಿ ಭಿನ್ನವಾಗಿದೆ. ಮುಖ್ಯವಾಗಿ ಮೇಲುಜಾತಿ ಸವರ್ಣೀಯರು ಈ ಸಮುದಾಯವನ್ನು ಶೋಷಣೆಗೆ ಒಳಗು ಮಾಡಿದ ಘಟನೆಗಳು ಹಲವಾರಿವೆ.

ಗದಗ ಬೆಟಗೇರಿ ಸೆಟ್ಲಮೆಂಟಲ್ಲಿ 1981-82 ರ ಸುಮಾರಿಗೆ ಸೆಟ್ಲಮೆಂಟ್ ವಾಸಿ ಸಮುದಾಯವೊಂದರ ಜತೆಗೇ ನಡೆದ ಸಂಘರ್ಷವೊಂದು ದೊಡ್ಡ ಆಘಾತವನ್ನುಂಟುಮಾಡಿದ ಬಗ್ಗೆ ನೆನಪಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಗಂಟಿಚೋರ ಸಮುದಾಯದ ಕನಿಷ್ಠ 50 ಕ್ಕೂ ಹೆಚ್ಚು ಮನೆಗಳವರು ಸೆಟ್ಲಮೆಂಟ್ ಬಿಟ್ಟು ವಲಸೆಹೋಗಿದ್ದಾಗಿ ಹೇಳುತ್ತಾರೆ. ಇವರುಗಳೆಲ್ಲಾ ಇದೀಗ ಬಾಂಬೆ, ಪುಣೆ, ಗೋವಾ ಮುಂತಾದ ನಗರಗಳಲ್ಲಿ ನೆಲೆಸಿದ್ದಾರಂತೆ. ನಮ್ಮ ಕ್ಷೇತ್ರಕಾರ್ಯದಲ್ಲಿಯೂ ಇಂತಹ ಹಲವು ಘಟನೆಗಳು ಸಿಕ್ಕವು.

ಶಿರಹಟ್ಟಿ ತಾಲೂಕು ಬಾಲೇಹೊಸೂರಿನ ಗಂಟಿಚೋರರು ನಿರಂತರವಾಗಿ ಸವರ್ಣೀಯರಿಂದ ಹಲ್ಲೆಗೆ ಒಳಗಾಗುತ್ತಲೇ ಬಂದಿದ್ದಾರೆ. ಈ ಸಂಘರ್ಷ ಈಗಲೂ ಚಾಲ್ತಿಯಲ್ಲಿದೆ. ಹಿಂದೆ ಸುಮಾರು 1960 ರ ದಶಕದ ಆಸುಪಾಸಿನಲ್ಲಿ ಸವರ್ಣೀಯರ ಜತೆ ಗಂಟಿಚೋರ್ಸ್ ಸಮುದಾಯದ ಜತೆ ಸಂಘರ್ಷವಾಗಿತ್ತು. ಇದರ ಪರಿಣಾಮ ಗೌಡ್ರು ಕರೆಯುತ್ತಾರೆಂದು ಗಂಟಿಚೋರ ಸಮುದಾಯದ ಒಬ್ಬೊಬ್ಬರನ್ನೇ ಕರೆದುಕೊಂಡು ಹೋಗಿ ಗೌಡ್ರ ಮನೆಯಲ್ಲಿ ಚೆನ್ನಾಗಿ ಹೊಡೆದು ಕಾಲು ಮುರಿಯುತ್ತಿದ್ದರಂತೆ. ಹೀಗೆ ಒಬ್ಬೊಬ್ಬರನ್ನೇ ಕರೆದುಕೊಂಡು ಹೋಗಿ ಹಲವರನ್ನು ಕಾಲುಮುರಿದು ನೋವಿನಲ್ಲಿ ಒದ್ದಾಡುವವರನ್ನು ಬಂಡಿಯಲ್ಲಿ ಮೂಟೆಯಂತೆ ಹೇರಿಕೊಂಡು ಬಂದು ಊರ ಮುಂದೆ ಕೆಡವಿ ಹೋಗಿದ್ದರಂತೆ. ಇಂತಹ ದಾರುಣ ಘಟನೆಯನ್ನು ಸಮುದಾಯದ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಶಿರಹಟ್ಟಿ ತಾಲೂಕು ಬಾಲೆಹೊಸೂರು ಪ್ರಕರಣ:

ಈಚೆಗೆ 2011 ರಲ್ಲಿ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮಿಯ ಮಠದ ಉತ್ತರಕ್ಕೆ ಕೆರೆ ಇತ್ತು. ಸ್ವಾಮಿಗಳು ಈ ಕೆರೆಯನ್ನು ಆಕ್ರಮಿಸಿ ರಸ್ತೆಯನ್ನು ಉತ್ತರಕ್ಕೆ ಬದಲಿಸಿದರು. ಕೆರೆಜಾಗವನ್ನೆಲ್ಲಾ ಆಕ್ರಮಣ ಮಾಡಿ ಒಂದಷ್ಟನ್ನು ಮಾತ್ರ ಉಳಿಸಿದ್ದರು. ನಂತರ ಬಸ್‌ಸ್ಟ್ಯಾಂಡಿಗೆ ಮಠ ಕಾಣಬೇಕೆಂದು ಊರವರ ನೆರವಲ್ಲಿ ಆಜುಬಾಜಿದ್ದ ಮನೆಗಳನ್ನು ಕೆಡವಿಸಿದರು. ಏಪ್ರಿಲ್ ತಿಂಗಳು 2011 ರಲ್ಲಿ ಗಂಟಿಚೋರ್ ಸಮುದಾಯದ ಫಕ್ಕೀರೇಶ ಸಾಲಿ ಎನ್ನುವವರ ಮನೆಯನ್ನೂ ಕೆಡವಿದರು. ಹಾಗಾಗಿ ಫಕ್ಕೀರೇಶ ಸ್ವಾಮಿ ವಿರುದ್ಧ ದೂರುನೀಡಿದ. ಈ ದೂರನ್ನು ಸ್ವಾಮಿ ತನ್ನ ಪ್ರಭಾವ ಬಳಸಿ ಡಿಸ್ಟ್ರಿಕ್ಟ್‌ ಕೋರ್ಟಲ್ಲಿ ಡಿಸ್‍ಮಿಸ್ ಮಾಡಿಸಿದ. ನಂತರ ದೂರು ಹೈಕೋರ್ಟಿಗೆ ಹೋಯಿತು.

ಕೆರೆ ಒತ್ತುವರಿಯ ಕಾರಣಕ್ಕೆ ಮಳೆನೀರು ಗಂಟಿಚೋರರ ಓಣಿಗೆ ನುಗ್ಗಿತು. ನೀರುನಿಂತು ಆಡು ಕುರಿಗಳು ಸಾವನ್ನಪ್ಪಿದವು. ಮೇವಿನ ಬಣವೆಗಳು ನೀರಲ್ಲಿ ತೇಲಿದವು. ಹೀಗಾಗಿ ಗಂಟಿಚೋರರು ಇದರ ವಿರುದ್ಧ ಕೋರ್ಟಿಗೆ ಹೋದರು. ಕೋರ್ಟು ಕೆರೆಯನ್ನು ಪುನಶ್ಚೇತನ ಮಾಡಲು ಆದೇಶಿಸಿತು. ಈ ಆದೇಶ ಪಾಲನೆಯಾಗಲಿಲ್ಲ. ನಂತರ  ನ್ಯಾಯಾಂಗ ನಿಂದನೆ ದಾವೆ ಹೂಡಿದರು. ಇದಕ್ಕೆ ಪಿಡಬ್ಲುಡಿ ಎಂಜಿನಿಯರುಗಳು ಕೆರೆ ಪುನಶ್ಚೇತನ ಮಾಡಿದ ಬಗ್ಗೆ ಸುಳ್ಳು ಅಫಿಡವಿಟ್ ಹಾಕಿದರು. ಇದು ಕೋರ್ಟಲ್ಲಿ ಬಾಕಿ ಉಳಿಯಿತು.

ಈ ಕೆರೆ ಒತ್ತುವರಿ ಜಾಗದಲ್ಲಿ ತಾಲೂಕು ಪಂಚಾಯತಿ ಮಾರಾಟ ಮಳಿಗೆ ಕಟ್ಟತೊಡಗಿತು. ಇದನ್ನು ತಡೆದು ಅನಂತ ಕಟ್ಟೀಮನಿ ದಾವೆ ಹೂಡಿದರು. ಈ ದಾವೆಗಳು ಸ್ವಾಮಿಯನ್ನು ಕೆರಳಿಸಿತ್ತು. ಪರಿಣಾಮ ಊರಿನವರನ್ನು ಗಂಟಿಚೋರ ಸಮುದಾಯದ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದರು. ಊರಿನ ಅಭಿವೃದ್ಧಿ ಕಾರ್ಯಕ್ಕೆ ಗಂಟಿಚೋರರು ಎದುರಾಗಿದ್ದಾರೆಂದು ಹುಯಿಲೆಬ್ಬಿಸಿದರು. ಇದರಿಂದ ಊರವರಿಗೆ ಗಂಟಿಚೋರರ ಮೇಲೆ ದ್ವೇಷ ಬೆಳೆಯಲು ಕಾರಣವಾಯಿತು.

ಇಂತಹ ವಾತಾವರಣದಲ್ಲಿ 26.9.2014 ರಂದು ಬಿತ್ತಾಟ ಮಾಡಲು ಗಂಟಿಚೋರ ಸಮುದಾಯದ ಕೇಶವ, ದತ್ತಾತ್ರೇಯ, ರಾಮಪ್ಪ, ಮಾರುತಿ, ಯಮನಪ್ಪ, ವಿನಾಯಕ ಹೊಲಕ್ಕೋದರು. ಇವರ ಮೇಲೆ ಪೂರ್ವ ನಿಯೋಜಿತ ದಾಳಿಯಾಯಿತು. ಈ ದಾಳಿಗೆ ತತ್ತರಿಸಿದರು. ಮೂವರ ಕಾಲು ಒಬ್ಬರ ಕೈ ಮುರಿಯಿತು. ಇದು ಕ್ರಿಮಿನಲ್ ದೂರಾಯಿತು. ಸ್ಥಳೀಯ ಪೋಲೀಸ್ ಹೆಚ್ಚು ಸಹಕರಿಸಲಿಲ್ಲ. ಈ ಸಂಬಂಧ ಇನ್ವಿಸ್ಟಿಗೇಷನ್ ಆಫೀಸರ್ ಬದಲಿಸಲು ಪ್ರತಿಭಟಿಸಿದರು. ಆಗಿನ ಜಿಲ್ಲಾಧಿಕಾರಿ ಎನ್.ಎಸ್.ಪ್ರಸನ್ನ ಕುಮಾರ್ ಘಟನೆಯನ್ನು ಅರಿತು ಇನ್ವಿಸ್ಟಿಗೇಷನ್ ಆಫೀಸರನ್ನು ಬದಲಿಸಿದರು. ಜಿನೇಂದ್ರ ಕಣಗಾವಿ, ಅಡಿಷನಲ್ ಎಸ್.ಪಿ ಅವರು ಇನ್ವೆಷ್ಟಿಗೇಷನ್ನಿನಿಂದಾಗಿ ದೌರ್ಜನ್ಯವೆಸಗಿದವರ ಮೇಲೆ ಜನವರಿ 2015 ರಲ್ಲಿ ಚಾರ್ಜ್‌ಶೀಟ್ ಹಾಕಿದರು. ಪರಿಣಾಮ ದಿಂಗಾಲೇಶ್ವರ ಸ್ವಾಮಿಗೆ ವಾರೆಂಟ್ ಬಂತು. ಈ ಬೆಳವಣಿಗೆ ಸ್ವಾಮಿಯನ್ನು ಮತ್ತಷ್ಟು ಕೆರಳಿಸಿದವು. ಗಂಟಿಚೋರ ಸಮಾಜವನ್ನು ದಮನ ಮಾಡದೆ ತನಗೆ ಉಳಿಗಾಲವಿಲ್ಲವೆಂದು ಅವಕಾಶಕ್ಕಾಗಿ ಕಾಯುತ್ತಿದ್ದರು.

ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಆಯಾ ಊರಿನ ಇತರೆ ಸಮುದಾಯಗಳ ಜತೆ ಗಂಟಿಚೋರ್ಸ್ ಸಮುದಾಯ ಸಂಘರ್ಷವನ್ನು ಮಾಡುತ್ತಲೇ ಬದುಕಬೇಕಾಗಿದೆ. ಇದರ ನೆಲೆಗಳು ಪ್ರಾದೇಶಿಕವಾಗಿ ಭಿನ್ನವಾಗಿದೆ. ಮುಖ್ಯವಾಗಿ ಮೇಲುಜಾತಿ ಸವರ್ಣೀಯರು ಈ ಸಮುದಾಯವನ್ನು ಶೋಷಣೆಗೆ ಒಳಗು ಮಾಡಿದ ಘಟನೆಗಳು ಹಲವಾರಿವೆ.

ಈ ಸಂದರ್ಭಕ್ಕೆ ಮೇ 2015ಕ್ಕೆ ಪಂಚಾಯ್ತಿ ಚುನಾವಣೆ ಬಂತು. ಚುನಾವಣೆಯಲ್ಲಿ ಗಂಟಿಚೋರರನ್ನು ಬಿಡಬೇಕೆಂಬ ಊರವರ ತೀರ್ಮಾನವಾಯಿತು. ಗಂಟಿಚೋರರು ನಾವು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪತ್ರಿಕೆಯಲ್ಲಿ ವರದಿಯಾಯಿತು. ಊರಿನ ವಿರೋಧದ ನಡುವೆಯೂ ಎರಡು ವಾರ್ಡಿಗೆ ಸ್ಪರ್ಧಿಸಿ ಒಬ್ಬರು ಗೆದ್ದರು. ಇದು ಸ್ವಾಮಿಯನ್ನು ಇನ್ನಷ್ಟು ಕೆರಳಿಸಿತು.

ಈ ಸಮುದಾಯದ ಯುವಕನೊಬ್ಬನ ಹತ್ತಿರ `ನೀವು ಸ್ವಾಮಿ ವಿರುದ್ಧ’ ಎಲೆಕ್ಷನ್ ಮಾಡಿದಿರಿ ಎಂದು ಜಗಳ ಶುರುವಾದದ್ದೇ, ಊರಿಗೇ ಊರೇ ಒಟ್ಟಾಗಿ ಗಂಟಿಚೋರರನ್ನು ಹೊಡೆಯಲು ಮುನ್ನುಗ್ಗಿದ್ದಾರೆ. ಧಿಡೀರ್ ಹಿಂಡು ಜನರ ದಾಳಿಗೆ ಸಮುದಾಯ ತತ್ತರಿಸಿ ದಿಕ್ಕಾಪಾಲಾಗಿದೆ. ಈ ಸಂದರ್ಭಕ್ಕೆ ಸಿಕ್ಕ ಮಹಾಂತಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಯಿತು. ತೀವ್ರ ಗಾಯಗೊಂಡಾಗ ಸ್ಥಳೀಯ ಪೋಲೀಸರು ತಕ್ಷಣಕ್ಕೆ ಕೇಸ್ ದಾಖಲಿಸಿಕೊಳ್ಳಲಿಲ್ಲ. ಸಂಜೆಯ ಹೊತ್ತಿಗೆ ನಾಗರಾಜ ಗುಡಿಗೇರಿ ಎನ್ನುವವರಿಂದ ಕಂಪ್ಲೇಂಟ್ ಮಾಡಿಸಲಾಯಿತು. ಮಹಾಂತಪ್ಪ ಹನುಮಂತಪ್ಪ ಗುಡಿಗೇರಿ ಗಲಭೆಯಾಗಿ ಒಂದು ವಾರಕ್ಕೆ ಸಾವನ್ನಪ್ಪಿದರು. ಇದರ ಬಗೆಗಿನ ಇನ್ವಿಷ್ಟಿಗೇಷನ್ನನ್ನು ಕೂಡ ಸರಿಯಾಗಿ ಮಾಡಲಿಲ್ಲ. ಈ ಘಟನೆಗೆ ಮುಖ್ಯ ಪ್ರೇರಕರಾಗಿದ್ದ ದಿಂಗಾಲೇಶ್ವರ ಸ್ವಾಮಿಯನ್ನು ಬಿಟ್ಟು ಚಾರ್ಜ್‌ಶೀಟ್‌ ಹಾಕಿದ್ದರು. ಇದನ್ನು ವಿರೋಧಿಸಿ ಜಿಲ್ಲಾ ಕೋರ್ಟಿಗೆ ಅಪ್ಲಿಕೇಷನ್ ಹಾಕಿದ್ದರು. ಇದರ ಪರಿಣಾಮ ದಿಂಗಾಲೇಶ್ವರ ಸ್ವಾಮಿಯ ಮೇಲೆ ಅಡಿಷನಲ್ ಚಾರ್ಜ್‌ಶೀ ಹಾಕಿದ್ದಾರೆ. ಹಾಗಾಗಿ ಸದ್ಯಕ್ಕೆ ಸ್ವಾಮಿಗೆ ವಾರೆಂಟ್ ಇದೆ. ಇಷ್ಟಾಗಿಯೂ ಅರೆಸ್ಟ್‌ ಆಗಿಲ್ಲ. ಅಪರಾಧಿಗಳಿಗೆ ಶಿಕ್ಷೆಯೂ ಆಗುತ್ತಿಲ್ಲ.

(ಘಟನೆಯ ಮಾಹಿತಿ ನೀಡಿದ ವಕ್ತಾರ: ಅನಂತ ಕಟ್ಟೀಮನಿ)

ಗೋಕಾಕ ತಾಲೂಕು ಹಳ್ಳೂರು ಪ್ರಕರಣ:

ಗೋಕಾಕ ತಾಲೂಕಿನ ಹಳ್ಳೂರಿನಲ್ಲಿ ಊರಿನ ಜನರು ಅದರಲ್ಲಿಯೂ ಸ್ತ್ರೀ ಸಂಘಗಳು ಸೇರಿ ಮದ್ಯನಿಷೇಧವನ್ನು ಮಾಡಿಸಿದ್ದವು. ಹೀಗೆ ಮದ್ಯ ನಿಷೇಧ ಮಾಡಿದ್ದ ಸಂದರ್ಭದಲ್ಲಿ ಹಳ್ಳೂರಿನ ನಿಂಗಪ್ಪ ಪ್ರಭು ಗಂಟಿಚೋರ ಎನ್ನುವವರು ತನಗೆ ಕುಡಿಯಲೆಂದು ಎರಡು ಪಾಕೇಟ ಸಾರಾಯಿಯನ್ನು ಮನೆಯಲ್ಲಿ ಇಟ್ಟುಕೊಂಡಿದ್ದನಂತೆ. ಹೀಗೆ ತನಗಾಗಿ ಮನೆಯಲ್ಲಿ ಇಟ್ಟುಕೊಂಡದ್ದನ್ನು ತಪ್ಪಾಗಿ ಗ್ರಹಿಸಿ ಸಾರಾಯಿ ಮಾರುತ್ತಾನೆ ಎಂದು ಆರೋಪ ಹೊರಿಸಲಾಗಿದೆ. 4.6.2016 ರಂದು ಈ ಆರೋಪವನ್ನೇ ನಿಜವೆಂದುಕೊಂಡು ಮನೆಯಲ್ಲಿ ಮಲಗಿದ್ದ ನಿಂಗಪ್ಪನನ್ನು ಎಬ್ಬಿಸಿಕೊಂಡು ಹೋಗಿ, ಊರ ಮುಂದಿನ ಮಹಾಲಕ್ಷ್ಮಿಗುಡಿಯ ಮುಂದಕ್ಕೆ ತಂದು ನಿಲ್ಲಿಸಿದ್ದಾರೆ. ಸಾರಾಯಿ ಮಾರಿದ ತಪ್ಪಿಗೆ ಎನ್ನುವಂತೆ ಆತನ ಅರ್ಧ ತಲೆ, ಅರ್ಧ ಮೀಸೆ ಬೊಳಿಸಿ, ಅರೆನಗ್ನನನ್ನಾಗಿಸಿ, ಸಾರಾಯಿಯನ್ನು ಒತ್ತಾಯಪೂರ್ವಕವಾಗಿ ಕುಡಿಸಿ, ಆತನ ಕೊರಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ ಎಂದು ಹಳ್ಳೂರಿನ ಸುರೇಶ್ ಬೂತಪ್ಪಗೋಳ್ ಹೇಳಿದರು.

ಅಂತೆಯೇ ಗೋಕಾಕ ತಾಲೂಕಿನ ಮೂಡಲಗಿ ಪೋಲೀಸ್ ಠಾಣೆಯಲ್ಲಿ ಈ ಸಂಬಂಧಿ ಕಂಪ್ಲೇಟನ್ನು (108/2016) ಕೊಡಲಾಗಿದೆ. ಈ ಕಂಪ್ಲೇಂಟ್ ಪ್ರತಿಯಲ್ಲಿ ಸಂತ್ರಸ್ತ ನಿಂಗಪ್ಪನು ಹೇಳಿಕೆ ನೀಡಿದಂತೆ ತನ್ನನ್ನು ಹೀಗೆ ಅವಮಾನಿತನನ್ನಾಗಿ ಮಾಡಿ ಊರಲ್ಲಿ ಮೆರವಣಿಗೆ ಮಾಡಿದ್ದನ್ನು ಹೊರಗೆ ಸುದ್ದಿ ಮುಟ್ಟಿಸಿದರೆ ನಿನ್ನನ್ನು ಜೀವಂತ ಸುಟ್ಟುಬಿಡುವುದಾಗಿ ಊರವರು ಹೆದರಿಸಿದ್ದಾಗಿ ಹೇಳಿಕೊಂಡಿದ್ದಾನೆ. ಹೀಗೆ ನಿಂಗಪ್ಪನನ್ನು ಅಮಾನವೀಯವಾಗಿ ನಡೆಸಿಕೊಂಡ ಘಟನೆಯನ್ನು ಕೆಲವರು ಮೊಬೈಲಿನಲ್ಲಿ ರೆಕಾರ್ಡ್‌ ಮಾಡಿಕೊಂಡು ಟಿ.ವಿ. ಮಾಧ್ಯಮಕ್ಕೆ ನೀಡಿದ್ದಾರೆ. ನಾನು ನೋಡಿದ ಟಿ.ವಿ 9 ರ ವರದಿಯಲ್ಲಿ ಸಂತ್ರಸ್ತನದೇ ತಪ್ಪು ಎನ್ನುವಂತೆ ಸುದ್ದಿಯನ್ನು ಬಿತ್ತರಿಸಿದೆ. ಅಂತೆಯೇ ಈ ಘಟನೆಯನ್ನು ಕುರಿತು ಕಂಪ್ಲೇಂಟ್ ಕೊಟ್ಟರೂ ಸರಿಯಾಗಿ ಪೋಲಿಸರು ಕ್ರಮವಹಿಸಿಲ್ಲದ ಬಗ್ಗೆ ಗಂಟಿಚೋರ್ ಸಮುದಾಯದ ಕೆಲವರು ನನ್ನ ಬಳಿ ಹೇಳಿಕೊಂಡರು. ಹೀಗೆ ಕಂಪ್ಲೇಟ್ ಕೊಟ್ಟ ಕಾರಣ ಎರಡನೇ ಬಾರಿಯೂ ಸಂತ್ರಸ್ತ ನಿಂಗಪ್ಪನ ಮೇಲೆ ಹಲ್ಲೆ ಮಾಡಲಾಗಿದೆ.

ಈ ಘಟನೆಯ ವೀಡಿಯೋ ನೋಡಿದರೆ, ಎಲುಬು ತೊಗಲಷ್ಟೇ ಇರುವ ಅನಾರೋಗ್ಯದ ಸ್ಥಿತಿಯಲ್ಲಿದ್ದಂತೆ ಕಾಣುವ ನಿಂಗಪ್ಪನ ಮೇಲೆ ಊರವರು ಮಾಡಿದ ಹಲ್ಲೆ ನಿಜಕ್ಕೂ ಖಂಡನೀಯ. ಈತನ ಮೇಲಿನ ಸಾರಾಯಿ ಮಾರುವ ಆರೋಪ ಸುಳ್ಳೆಂದು ಗಂಟಿಚೋರ ಸಮುದಾಯದ ಹಿರಿಯರು ಮತ್ತು ಈ ಭಾಗದ ಸಮುದಾಯದ ವಕೀಲರೂ ಆಗಿರುವ ಉದಯಕುಮಾರ್ ಸಿಂಪಿಯವರು ಸ್ಪಷ್ಟಪಡಿಸುತ್ತಾರೆ. ಇಷ್ಟಾಗಿಯೂ ಒಂದು ಹಂತದಲ್ಲಿ ಸಂತ್ರಸ್ತ ತಪ್ಪು ಮಾಡಿದ್ದರೂ ಊರವರು ಮಾನವ ಘನತೆಗೆ ಕುಂದು ಬರುವಂತೆ ತಲೆ ಮೀಸೆ ಬೊಳಿಸಿ ಅರೆನಗ್ನಾವಸ್ಥೆಯಲ್ಲಿ ಚಪ್ಪಲಿಹಾರ ಹಾಕಿ ಮೆರವಣಿಗೆ ಮಾಡಿದ್ದು ಅಕ್ಷಮ್ಯ ಅಪರಾಧ್ಯ. ಯಾರೊಬ್ಬರು ತಪ್ಪು ಮಾಡಿದಾಗಲೂ, ಅವರನ್ನು ಶಿಕ್ಷಿಸುವ ಹಕ್ಕು ಬೇರೆ ಯಾರೊಬ್ಬರಿಗೂ ನೀಡಿಲ್ಲ. ಇದು ಅಸಂವಿಧಾನಿಕ ನಡೆಯಾಗಿದೆ. ಅಂತೆಯೇ ಈ ಘಟನೆಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹಾಗಾಗಿ ಈ ಘಟನೆಗೆ ಕಾರಣವಾದ ಎಲ್ಲರೂ ಅಪರಾಧಿಗಳಾಗುತ್ತಾರೆ. ಇವರನ್ನು ಶಿಕ್ಷಿಸಬೇಕಾಗಿರುವುದು ಸರಿಯಾದ ಸಂವಿಧಾನಿಕ ಕ್ರಮವಾಗಿದೆ. ಈ ಘಟನೆಯಲ್ಲಿ ಭಾಗಿಯಾದವರಿಗೆ ಶಿಕ್ಷಿಸಲು ಒತ್ತಡ ತರುವಂತೆ ಗಂಟಿಚೋರ ಸಮುದಾಯದ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕಿದೆ.

(ಘಟನೆಯ ಮಾಹಿತಿ ನೀಡಿದ ವಕ್ತಾರ: ಉದಯಕುಮಾರ್ ಸಿಂಪಿ, ಸುರೇಶ್ ಬೂತಪ್ಪಗೋಳ)