ನಾವು ಬಳಸುವ ಸಂಖ್ಯೆಗಳು, ವಿಜ್ಞಾನದಲ್ಲಿ ಬರುವ ಅಳತೆಯ ಮಾನಗಳು, ಇತಿಹಾಸದ ಇಸವಿಗಳು, ಸಮಯ, ಕಾಲಗಣನೆ ಮೊದಲಾದ ಯಾವುದೇ ಸಂದರ್ಭವನ್ನು ತೆಗೆದುಕೊಳ್ಳಿ. ಅಲ್ಲಿ ಗಣಿತ ಎಂಬ ಭಾಷೆಯನ್ನು ಬಳಸದೇ ಇದ್ದರೆ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಗಣಿತ ಎಂಬ ಭಾಷೆಗೆ ಅಂಕೆಗಳೇ ಅಕ್ಷರಗಳು. ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು ಅದರ ವ್ಯಾಕರಣ ಎಂದು ಒಮ್ಮೆ ಯೋಚಿಸಿ ನೋಡು ಆಗ ನೀನು ಗಣಿತ ವಿಷಯವನ್ನು ನೋಡುವ ದಿಕ್ಕೇ ಬದಲಾಗುತ್ತದೆ.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಇಂದಿನ ಬರಹ

ಬಾಲ್ಯದಿಂದಲೂ ನಾಟಕ, ಯಕ್ಷಗಾನ ನನ್ನ ಮೆಚ್ಚಿನ ಹವ್ಯಾಸ. ಕಾಲೇಜು ದಿನಗಳಲ್ಲೂ ಅದೇ ಮುಂದುವರೆದು ಬಿ.ಎಡ್‌ ಮಾಡಿ ಅಧ್ಯಾಪಕನಾದೆ. ಕೇವಲ ಮಾತಿನ ಪಾಠವನ್ನು ಕೇಳುವುದು ಎಂದಿಗೂ ನನಗೆ ಸಾಧ್ಯ ಆಗದ ಕೆಲಸ. ಚರ್ಚೆಯಲ್ಲಿ ಭಾಗವಹಿಸುವುದು ಸಾಧ್ಯವಾದರೆ ಮಾತ್ರ ನಾನು ಕೇಳಿಸಿಕೊಳ್ಳುತ್ತಿದ್ದೆ. ಸಂಶಯ ಇರುವುದನ್ನು ಪ್ರಶ್ನಿಸಿ ಅದಕ್ಕೆ ಪರಿಹಾರ ಅಥವಾ ಪೂರಕ ವಿಚಾರಗಳನ್ನು ತಿಳಿದು, ಆನಂತರ ಯಾವುದಾದರೂ ಪುಸ್ತಕದ ಉಲ್ಲೇಖ ಬಂದರೆ ಅದನ್ನು ಓದಿ ಮತ್ತೆ ಚರ್ಚೆ ಮಾಡುತ್ತಾ ಕಲಿಯುವುದು ನನ್ನ ಕಲಿಕೆಯ ವಿನ್ಯಾಸವಾಗಿತ್ತು. ಕಾರಣ ಇಲ್ಲದೇ ಕಲಿಯುವುದು ನನ್ನಿಂದ ಸಾಧ್ಯ ಆಗದ ಮಾತಾಗಿತ್ತು.

ಶಿಕ್ಷಕರ ತರಬೇತಿ ಪಡೆಯುತ್ತಿದ್ದಾಗಲೂ ನಮ್ಮ ಪ್ರಾಧ್ಯಾಪಕರಿಗೆ ಪ್ರಶ್ನೆ ಕೇಳದ ದಿನವೇ ಇರಲಿಲ್ಲ. ಯಾವುದೋ ಒಂದು ಕುತೂಹಲಕರ ವಿಷಯ ಸಿಕ್ಕಿಬಿಟ್ಟರೆ ಅದರ ಆಳದವರೆಗೆ ಹುಡುಕುತ್ತಾ, ಪ್ರಶ್ನಿಸುತ್ತಾ, ಚರ್ಚಿಸುತ್ತಾ ಕಲಿಯುತ್ತಿದ್ದವನು. ಏಕಮುಖ ಉಪನ್ಯಾಸ ಅಥವಾ ಉಪದೇಶ ನನ್ನಿಂದ ಕೇಳಿಸಿಕೊಳ್ಳಲು ಸಾಧ್ಯವಾಗುತ್ತಿದ್ದುದು ಕಡಿಮೆ. ವಿಷಯದ ಜೊತೆ ಅನುಸಂಧಾನ ಮಾಡಿದರೆ ಮಾತ್ರ ನನಗೆ ಕಲಿಯುವುದು ಸಾಧ್ಯವಾಗುತ್ತಿತ್ತು.

ಶಿಕ್ಷಕನಾಗಿ ನಾನು ಕೆಲಸ ಪ್ರಾರಂಭ ಮಾಡಿದಾಗಲೂ ತರಗತಿಯಲ್ಲಿ ಏಕಮುಖ ಉಪದೇಶ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಗಣಿತ ವಿಷಯದ ಶಿಕ್ಷಕನಾದ ಕಾರಣ ನಾನು ಹಾಗೆ ಮಾಡಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ತರಗತಿಯಲ್ಲಿ ಸುಮಾರು 40-50 ಮಕ್ಕಳಲ್ಲಿ ಪ್ರತಿ ಮಗುವಿಗೂ ಗಮನ ಕೊಡಲು ಪ್ರಯತ್ನ ಮಾಡುವುದು ನನ್ನ ಅಭ್ಯಾಸವಾಗಿತ್ತು.

ಒಂದು ಲೆಕ್ಕವನ್ನು ಬೋರ್ಡಿನ ಮೇಲೆ ಬಿಡಿಸಿ ಅದನ್ನು ಮಕ್ಕಳು ಬರೆದುಕೊಂಡ ನಂತರ ಒಂದಿಷ್ಟು ಅಭ್ಯಾಸದ ಲೆಕ್ಕಗಳನ್ನು ಹಾಕಿ ಮಕ್ಕಳು ಹೇಗೆ ಮಾಡುತ್ತಾರೆ ಎಂದು ತರಗತಿಯ ತುಂಬಾ ಓಡಾಡಿಕೊಂಡಿರುವುದು ನನ್ನ ಅಭ್ಯಾಸ. ಮಕ್ಕಳು ಲೆಕ್ಕ ಮಾಡಿದ ನಂತರ ಸರ್‌ ನನ್ನದು ಸರಿಯಾ ಎಂದು ಎದ್ದು ನಿಲ್ಲುತ್ತಿದ್ದರು. ಅವರ ಹತ್ತಿರ ಹೋಗಿ ಅವರ ಪುಸ್ತಕ ನೋಡಿ ಅವರಿಗೆ ಹಿಮ್ಮಾಹಿತಿ ಕೊಡುವುದು ಸಾಧ್ಯವಾಗುತ್ತಿತ್ತು.

ತರಗತಿಯ ಮಧ್ಯೆ ಎದ್ದು ನಿಂತು ಸರ್‌ ಇದು ಅರ್ಥವಾಗಲಿಲ್ಲ ಎಂದು ಹೇಳಲು ಸಾಧ್ಯವಾಗದ ಮಕ್ಕಳು ಹತ್ತಿರ ಹೋದಾಗ ಸರ್‌ ಇದು ಹೇಗೆ? ಯಾಕೆ ತಪ್ಪು? ಎಂದು ಮೆಲ್ಲನೆ ಕೇಳುತ್ತಿದ್ದರು. ಆಗ ಅವರ ಸಂಶಯ, ಅವರ ಯೋಚನಾ ಕ್ರಮ ನನಗೂ ತಿಳಿಯುತ್ತಿತ್ತು ಮತ್ತು ಅಗತ್ಯ ಬಿದ್ದಾಗ ಇತರ ಮಕ್ಕಳಿಗೂ ಇನ್ನೊಮ್ಮೆ ವಿವರಿಸಿ ಹೇಳುವ ಅಗತ್ಯ ಇದೆಯೋ ಎಂದು ತಿಳಿಯುತ್ತಿತ್ತು.

ಏಕಮುಖ ಉಪನ್ಯಾಸ ಅಥವಾ ಉಪದೇಶ ನನ್ನಿಂದ ಕೇಳಿಸಿಕೊಳ್ಳಲು ಸಾಧ್ಯವಾಗುತ್ತಿದ್ದುದು ಕಡಿಮೆ. ವಿಷಯದ ಜೊತೆ ಅನುಸಂಧಾನ ಮಾಡಿದರೆ ಮಾತ್ರ ನನಗೆ ಕಲಿಯುವುದು ಸಾಧ್ಯವಾಗುತ್ತಿತ್ತು.

ಗಣಿತವನ್ನು ಕೆಲವರು ನೋಡಿ ಕಲಿಯುತ್ತಾರೆ, ಕೆಲವರು ಮಾಡಿ ಕಲಿಯುತ್ತಾರೆ, ಕೆಲವರು ಅರ್ಥಮಾಡಿಕೊಂಡು ಕಲಿಯುತ್ತಾರೆ. ಕೆಲವರಿಗೆ ಗಣಿತದ ಲೆಕ್ಕಗಳನ್ನು ಕಲಿಯಲು ಹಲವಾರು ಬಾರಿ ಮತ್ತೆ ಮತ್ತೆ ಹೇಳಿಕೊಡಬೇಕಾಗುತ್ತದೆ ಅಥವಾ ಅವರಿಂದ ಮಾಡಿಸಬೇಕಾಗುತ್ತದೆ.

ಅಧ್ಯಾಪಕರ ಕೊಠಡಿಯಲ್ಲಿ ನಮ್ಮ ಮಧ್ಯೆ ನಡೆಯುತ್ತಿದ್ದ ಚರ್ಚೆಯಲ್ಲಿ ತಿಳಿಯುತ್ತಿದ್ದುದು ಏನೆಂದರೆ ಕೆಲವು ಮಕ್ಕಳು ಗಣಿತ ಕಲಿಕೆಯಲ್ಲಿ ಉತ್ತಮವಾಗಿದ್ದರೂ ಅವರ ಭಾಷಾ ಕಲಿಕೆಯಲ್ಲಿ ತೊಂದರೆ ಇರುವುದು ಇತರರಿಂದ ತಿಳಿಯುತ್ತಿತ್ತು. ಭಾಷೆಯ ಕಲಿಕೆಯಲ್ಲಿ ಬಹಳ ಚೂಟಿಯಾಗಿದ್ದ ಮಕ್ಕಳು ಗಣಿತದಲ್ಲಿ ಹಿಂದೆ ಇರುತ್ತಿದ್ದುದು ಉಂಟು.

ಈ ಬಗ್ಗೆ ನನ್ನ ಅಧ್ಯಾಪಕರೊಬ್ಬರಲ್ಲಿ ನಾನು ಒಂದು ದಿನ ಚರ್ಚೆ ಮಾಡುತ್ತಿದ್ದಾಗ ಅವರು ಒಂದು ಮಾತು ಹೇಳಿದರು. ಅರವಿಂದ್‌ ನಾನೊಂದು ಮಾತು ಹೇಳುತ್ತೇನೆ ನಿನ್ನ ಅಭಿಪ್ರಾಯ ಹೇಳು ಎಂದರು. ಸರಿ ಹೇಳಿ ಎಂದೆ. ‘ಗಣಿತವನ್ನು ನಾನು ಒಂದು ಭಾಷೆ ಎಂದು ಹೇಳುತ್ತೇನೆ. ನೀನೇನು ಹೇಳುತ್ತೀಯಾ’ ಎಂದು ಕೇಳಿದರು, ಅದುವರೆಗೆ ಭಾಷೆಯನ್ನು ಚೆನ್ನಾಗಿ ಕಲಿತರೆ ಮಾತ್ರ ಗಣಿತ ಬರುತ್ತದೆ ಎಂದು ನಂಬಿದ್ದ ನನಗೆ ಇದು ಹೇಗೆ ಸಾಧ್ಯ ಎಂಬ ಗೊಂದಲ ಉಂಟಾಯಿತು. ಅದು ಹೇಗೆ ಸಾಧ್ಯ ಸರ್‌ ಗಣಿತ ಚೆನ್ನಾಗಿ ಬರಬೇಕಾದರೆ ಭಾಷೆ ಬರಬೇಕು. ಆದರೆ ಗಣಿತ ವಿಷಯವನ್ನೆ ಒಂದು ಭಾಷೆ ಎಂದು ಹೇಗೆ ಅರ್ಥಮಾಡಿಕೊಳ್ಳುವುದು, ಸ್ವಲ್ಪ ಬಿಡಿಸಿ ಹೇಳಿ ಎಂದೆ.

ನಾವು ಬಳಸುವ ಸಂಖ್ಯೆಗಳು, ವಿಜ್ಞಾನದಲ್ಲಿ ಬರುವ ಅಳತೆಯ ಮಾನಗಳು, ಇತಿಹಾಸದ ಇಸವಿಗಳು, ಸಮಯ, ಕಾಲಗಣನೆ ಮೊದಲಾದ ಯಾವುದೇ ಸಂದರ್ಭವನ್ನು ತೆಗೆದುಕೊಳ್ಳಿ. ಅಲ್ಲಿ ಗಣಿತ ಎಂಬ ಭಾಷೆಯನ್ನು ಬಳಸದೇ ಇದ್ದರೆ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಗಣಿತ ಎಂಬ ಭಾಷೆಗೆ ಅಂಕೆಗಳೇ ಅಕ್ಷರಗಳು. ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು ಅದರ ವ್ಯಾಕರಣ ಎಂದು ಒಮ್ಮೆ ಯೋಚಿಸಿ ನೋಡು ಆಗ ನೀನು ಗಣಿತ ವಿಷಯವನ್ನು ನೋಡುವ ದಿಕ್ಕೇ ಬದಲಾಗುತ್ತದೆ ಎಂದರು.

ಹೀಗೆ ಯೋಚಿಸಲು ಪ್ರಾರಂಭಿಸಿದಾಗ ನಾನು ಶಿಕ್ಷಕನಾಗಿ ಗಣಿತವನ್ನು ಹೇಗೆ ಕಲಿಸಬೇಕು ಎಂಬ ನನ್ನ ದೃಷ್ಟಿಕೋನ ನಿಧಾನವಾಗಿ ಬದಲಾಗಲು ಪ್ರಾರಂಭವಾಯಿತು. ಅದುವರೆಗೂ ಇವನು ದಡ್ಡ, ಇವನು ಚೂಟಿ, ಇವನಿಗೆ ಗಣಿತ ಬರಬೇಕಾದರೆ ಹಲವು ಬಾರಿ ಹೇಳಿಕೊಡಬೇಕು, ಇವನಿಗೆ ಕಲಿಕೆಯಲ್ಲಿ ಆಸಕ್ತಿಯೇ ಇಲ್ಲ ಎಂದೆಲ್ಲಾ ದೂರಲು, ಕಾರಣ ಹೇಳಲು ಮುಂದಾಗುತ್ತಿದ್ದ ನಾನು ಪ್ರತಿ ಮಗುವೂ ವಿಭಿನ್ನವಾಗಿ ಕಲಿಯುತ್ತದೆ. ಮಗುವಿಗೆ ಸುಲಭವಾಗಿ ಅರ್ಥವಾಗುವ ವಿಧಾನದಲ್ಲಿ ಹೇಳಿದರೆ ಮಗು ನಾವು ಕಲಿಸುವುದನ್ನು ಗ್ರಹಿಸುತ್ತದೆ ಮತ್ತು ಸುಲಭವಾಗಿ ಕಲಿಯುತ್ತದೆ ಎಂಬುದು ನಿಧಾನವಾಗಿ ಅರ್ಥವಾಗುತ್ತಾ ಹೋಯಿತು.

ನನ್ನ ತರಗತಿಯಲ್ಲಿ ಸಂತೋಷ ಎಂಬ ವಿದ್ಯಾರ್ಥಿ ಇದ್ದ. ಹೆಸರಿಗೆ ತಕ್ಕಂತೆ ಸದಾ ಸಂತೋಷವಾಗಿ ಲವಲವಿಕೆಯಿಂದ ತರಗತಿಯಲ್ಲಿ ಇರುತ್ತಿದ್ದ. ಆತನಿಗೆ ರಟ್ಟು, ಆವೆಮಣ್ಣು, ಮೊದಲಾದ ವಸ್ತುಗಳಿಂದ ಬೇರೆ ಬೇರೆ ಆಕೃತಿಗಳನ್ನು ಮಾಡುವುದು ತುಂಬಾ ಆಸಕ್ತಿಯ ವಿಷಯವಾಗಿತ್ತು. ಹೀಗಿರುವಾಗ ಗಣಿತ ಕಲಿಕೆಯಲ್ಲಿ ಕೂಡ ಮುಂದಿರಬೇಕು ಎಂಬುದು ನನ್ನ ನಂಬಿಕೆಯಾಗಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಗಣಿತ ಆತನಿಗೆ ಕಬ್ಬಿಣದ ಕಡಲೆ ಆಗಿತ್ತು. ದೇವರ ಭಯವೇ ಜ್ಞಾನದ ಆರಂಭ ಎಂಬಂತೆ ಮಾಸ್ಟರ ಭಯವೇ ಕಲಿಕೆಯ ಆರಂಭ ಎಂದು ನಂಬಿದ್ದ ಆತನ ಪೋಷಕರು ಅಧ್ಯಾಪಕ ಎಂದರೆ ಭಯೋತ್ಪಾದಕ ಎಂದು ನಂಬಿಸಿದ್ದರು ಅಥವಾ ಹಾಗೊಂದು ಭಾವನೆ ಆತನ ಒಳಗಿತ್ತು ಎಂದು ತಿಳಿಯಿತು.
ಯಾವಾಗ ಇದು ಅರ್ಥವಾಯಿತೋ ಆತನನ್ನು ಹತ್ತಿರ ಕರೆದು ನಿಧಾನವಾಗಿ ಆತನೊಡನೆ ಮಾತಾಡಿ, ಅವನ ಮಾದರಿ ತಯಾರಿಯ ಬಗೆಗಿನ ಆಸಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆನೋ ಆತ ತರಗತಿಯಲ್ಲಿ ಸ್ವಲ್ಪ ಸಮಾಧಾನದಿಂದ ಪಾಠ ಕೇಳಲಾರಂಭಿಸಿದ. ನನಗಿದ್ದ ಚಿತ್ರ ಬರೆಯುವ ಆಸಕ್ತಿಯನ್ನು ಅವನಿಗೂ ತೋರಿಸಿದೆ. ನಿಧಾನವಾಗಿ ನನ್ನ ಮತ್ತು ಅವನ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಆರಂಭವಾಯಿತು. ನಿಧಾನವಾಗಿ ಅವನ ಗಣಿತ ಕಲಿಕೆಯೂ ಸುಧಾರಿಸಿತು. ಇಂದು ಆತ ಇಂಜಿನಿಯರಿಂಗ್‌ ಮುಗಿಸಿ ಉದ್ಯೋಗದಲ್ಲಿದ್ದಾನೆ.

ಗಣಿತ ಕಲಿಕೆಯ ವಿಷಯದಲ್ಲಿ ನಾವು ಮಗುವಿಗೆ ಕಲಿಸುವ ವಿಧಾನ ಮಾತ್ರವಲ್ಲ ನಾವು ಮಗುವಿಗೆ ಎಷ್ಟು ಹತ್ತಿರವಾಗಿದ್ದೇವೆ ಎಂಬುದೂ ಕೂಡಾ ಆತನಿಗೆ ಆಸಕ್ತಿ ಮೂಡಿಸಲು ಕಾರಣವಾಗುತ್ತದೆ. ಎಷ್ಟೋ ಬಾರಿ ಗಣಿತ ಮಾತ್ರವಲ್ಲ ಬಹಳಷ್ಟು ವಿಷಯಗಳು ಯಾರೋ ಒಬ್ಬ ವ್ಯಕ್ತಿಯ ಕಾರಣಕ್ಕಾಗಿ ಇಷ್ಟವಾಗುತ್ತವೆ. ಕಲಿಕೆಯಲ್ಲಿ ಆಸಕ್ತಿ ಮೂಡಲು ಯಾರಾದರೂ ಕಾರಣವಾಗಬೇಕಾಗುತ್ತದೆ. ಶಾಲೆಯ ಮಕ್ಕಳನ್ನು ತನ್ನ ಮಕ್ಕಳಂತೆ ಪ್ರೀತಿಸುವ ಶಿಕ್ಷಕ ಸಿಕ್ಕಿಬಿಟ್ಟರೆ ಗಣಿತ ಎಂಬ ಕಬ್ಬಿಣದ ಕಡಲೆಯನ್ನು ನೆನೆಸಿ, ಅದನ್ನು ಮೊಳಕೆ ಬರಿಸಿ, ಮಗುವಿನ ಗಂಟಲಲ್ಲಿ ಇಳಿಸುವುದು ಖಂಡಿತ ಸಾಧ್ಯವಾಗಬಹುದು ಎಂಬುದನ್ನು ನಾನು ಸಂತೋಷನಿಂದ ಕಲಿತೆ.