ನಾನು ಎಲ್ಲರ ಜೊತೆಗೆ ಕುಳಿತು ಕೊನೆಯ ಹಂತದ ಕೆಲವು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾಗ, ನಿರ್ಗಮಿಸುತ್ತಿದ್ದ ಹಾಲಿ ಅಧ್ಯಕ್ಷರು ನನ್ನನ್ನು ಹುಡುಕಿಕೊಂಡು ಬಂದು ನನ್ನ ಕಿವಿಯಲ್ಲಿ, ಮುಂದಿನ ವರ್ಷದ ಹೊಸ ಕನ್ನಡ ಸಂಘದ ಸಮಿತಿಯಲ್ಲಿ ನಿಮಗೆ ಸಾಂಸ್ಕೃತಿಕ ತಂಡದ ಜವಾಬ್ದಾರಿ ಕೊಟ್ಟಿದ್ದೇವೆ ಅಂತ ತಿಳಿಸಿದರು. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತೆ ಆಗಿತ್ತು ಈ ಒಂದು ಆಹ್ವಾನ. ಹೆಚ್ಚು ಯೋಚಿಸದೆ ಹೂಂ ಅಂದುಬಿಟ್ಟೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹನ್ನೆರಡನೆಯ ಬರಹ

ಅಮೆರಿಕೆಗೆ ಹೋಗಬೇಕು ಅಂತ ಯೋಚನೆಯೂ ಇರದ ಸ್ಥಿತಿಯಿಂದ, ಅಲ್ಲಿಗೆ ಹೋಗಿ ಮನೆ ಮಾಡಿ ಅಲ್ಲಿಯೇ ಜೀವನ ಮಾಡುವಲ್ಲಿಗೆ ನಾವು ಬಂದು ತಲುಪಿದ್ದೆವು. ಬೆಂಗಳೂರಿನಲ್ಲಿ ಇದ್ದ ನಮ್ಮ ಸೌಖ್ಯ ವಲಯವನ್ನು ಬಿಟ್ಟು ಹೊಸದೊಂದು ವಲಯದಲ್ಲಿ ವಿಹಾರ ಮಾಡುತ್ತಿದ್ದೆವು. ಅಲ್ಲೊಂದು ನಮ್ಮದೇ ಆದ ಗೆಳೆಯರ ಬಳಗ ಸೃಷ್ಟಿ ಆಗಿತ್ತು. ಎಲ್ಲಿರುತ್ತೇವೆಯೋ ಅಲ್ಲಿ ಒಂದಿಷ್ಟು ಹೊಸ ಗೆಳೆಯರನ್ನು ಹಚ್ಚಿಕೊಳ್ಳುವುದು ನಮಗೆ ಅತಿ ಪ್ರೀತಿಯ ಹಾಗೂ ಸುಲಭದ ಕೆಲಸ. ಅಂತಹ ಎಷ್ಟೋ ಸಮಾನಮಾನಸ್ಕ ಮಿತ್ರರ ಒಡನಾಟ ನಮಗೆ ದೊರೆತಿತ್ತು. ಅವರನ್ನು ಹುಡುಕುವುದೂ ಬೇಕಾಗಿರಲಿಲ್ಲ. ಅಲ್ಲಿನ ಕನ್ನಡ ಸಂಘದ ಯಾವುದೇ ಸಭೆ ಸಮಾರಂಭಗಳಲ್ಲಿ ನಮಗೆ ಹೊಸ ಗೆಳೆಯರು ಸಿಗುತ್ತಿದ್ದರು.

ಯಾವುದೇ ಒಂದು ಅಮೆರಿಕೆಯ ಪ್ರಾಂತ್ಯಕ್ಕೆ ಹೋದರೂ ಅಲ್ಲಿ ಮೂರು ಬಗೆಯ ಭಾರತೀಯರು ಇರುತ್ತಾರೆ. ಎಷ್ಟೋ ವರ್ಷಗಳಿಂದ ಅಲ್ಲಿಯೇ ಇರುವವರು. ಅವರಿಗೆ ಮೂಲ-ಅನಿವಾಸಿಗಳು ಅಂತ ತಮಾಷೆಗೆ ಹೇಳುತ್ತಿದ್ದೆ. ಇನ್ನೊಂದು ಗುಂಪು ಹೊಸಬರದು. ಅವರು ಒಂದೋ ಭಾರತದಿಂದ ಹೊಸದಾಗಿ ಬಂದ ನಮ್ಮಂತವರು, ಅಥವಾ ಅದೇ ದೇಶದಲ್ಲಿ ಬೇರೆ ರಾಜ್ಯಗಳಿಂದ ಇನ್ನೊಂದು ರಾಜ್ಯಕ್ಕೆ ಬಂದವರು. ಮೂರನೆಯ ವರ್ಗ masters ಮಾಡಲು ಬಂದ ವಿದ್ಯಾರ್ಥಿಗಳದು. ಈ ಮೂವರಲ್ಲಿ ಮೂಲ-ಅನಿವಾಸಿಗಳು ಅಲ್ಲಿನ ಎಲ್ಲವನ್ನೂ ಬಲ್ಲವರು; ಆದ ಕಾರಣ ಹೊಸಬರಿಗೆಲ್ಲ ಅವರೇ ಹೆಚ್ಚು ಹೆಚ್ಚು ಸಹಾಯ ಮಾಡಬಲ್ಲವರೂ, ಸಲಹೆ ಸೂಚನೆಗಳನ್ನು ನೀಡುವವರೂ ಆಗಿರುತ್ತಾರೆ. ಹೀಗಾಗಿ ಹೊಸಬರು ಅಲ್ಲಿಗೆ ಬಂದು ಕಾಲಾಂತರದಲ್ಲಿ ಅಲ್ಲಿಯೇ ನೆಲೆಸುವ ಅವಕಾಶ ಬಂದರೆ ಅವರಿಗಾಗಿ ಒಂದು ಮನೆಯನ್ನು ಹುಡುಕಿಕೊಡುವವರೆಗೆ ಅವರು ಸಹಾಯ ಹಸ್ತ ಚಾಚುತ್ತಾರೆ.

ಹಾಗೆ ಸಿಕ್ಕ ಮೂಲ ಅನಿವಾಸಿ ಗೆಳೆಯ ಚಂದ್ರು, ನಾವು ಅಲ್ಲಿ ಇರುವವರೆಗೂ ಆಗಾಗ ನಮಗೆ ಫೋನ್ ಮಾಡಿ ವಿಚಾರಿಸುತ್ತಿದ್ದ. ಅವನ ಫೋನ್ ಯಾವಾಗಲೂ ಸಂಜೆ ಏಳು ಗಂಟೆಗೇನೇ ಬರುತ್ತಿತ್ತು. ನನಗೊಬ್ಬನಿಗೆ ಅಂತಲ್ಲ, ಅಲ್ಲಿನ ಹಲವಾರು ಕನ್ನಡಿಗರಿಗೆ ಆತ ದಿನವೂ ಕರೆ ಮಾಡುತ್ತಿದ್ದ. ಅದು ಹೇಗೆ ತಿಳಿಯಿತು ಅಂದರೆ, ಒಮ್ಮೊಮ್ಮೆ ಅವನ ಕರೆಯನ್ನು ಸ್ವೀಕರಿಸಲು ಸಾಧ್ಯವಾಗದೆ ಸ್ವಲ್ಪ ಸಮಯ ಬಿಟ್ಟು ಮತ್ತೆ ತಿರುಗಿ ಅವನಿಗೆ ಫೋನ್ ಮಾಡಿದರೆ engage ಬರುತ್ತಿತ್ತು. ಆದರೆ ಅವನ್ಯಾಕೆ ಅದೇ ವೇಳೆಗೆ ಸರಿಯಾಗಿ ಫೋನ್ ಮಾಡುತ್ತಿದ್ದ ಎಂಬುದರ ಬಗ್ಗೆ ಹಲವಾರು ಬಾರಿ ಯೋಚನೆ ಮಾಡಿದ್ದೆನಾದರೂ ನನಗೆ ಅದರ ಕುರಿತು ಮಾಹಿತಿ ಇರಲಿಲ್ಲ. ಮುಂದೊಮ್ಮೆ ಮಂಜು ಜೊತೆಗೆ ಮಾತಾಡುತ್ತಿದ್ದಾಗ ಅದರ ಮರ್ಮ ತಿಳಿಯಿತು. ಅಲ್ಲಿ ಸಾಮಾನ್ಯವಾಗಿ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಾರೆ. ಚಂದ್ರುನ ಹೆಂಡತಿ ಕೂಡ ಯಾವುದೋ software company ಯಲ್ಲಿ ಕೆಲಸ ಮಾಡುತ್ತಿದ್ದಳು. ಇಬ್ಬರೂ ಕೆಲಸ ಮಾಡುತ್ತಿದ್ದರೆ ಮನೆ ಕೆಲಸಗಳನ್ನು ನಿಭಾಯಿಸುವುದು ಕಷ್ಟ. ಇಲ್ಲಿನಂತೆ ಅಲ್ಲಿ ಮನೆ ಕೆಲಸದವರು ಸಿಗೋದಿಲ್ಲವಲ್ಲ. ಹೀಗಾಗಿ ಮನೆಯ ಜವಾಬ್ದಾರಿಗಳನ್ನು ಇಬ್ಬರೂ ಸಮನಾಗಿ ವಹಿಸಿಕೊಂಡಿರುತ್ತಾರೆ. ಅವುಗಳಲ್ಲಿ ತನ್ನ ಮನೆಯಲ್ಲಿ ಪಾತ್ರೆ ತೊಳೆಯುವ ಕೆಲಸ ಇವನ ಪಾಲಿಗೆ ಬಂದಿತ್ತು. ಅವನು ದಿನಂಪ್ರತಿ ಸಂಜೆ ಏಳು ಗಂಟೆಗೆ ಹಾಗೆ ಪಾತ್ರೆ ತೊಳೆಯುತ್ತಿದ್ದ. ಹಾಗೆ ಮಾಡುವಾಗ ಕಾಲಹರಣ ಮಾಡಲು ಯಾರಿಗಾದರೂ ಒಬ್ಬರಿಗೆ ಕರೆ ಮಾಡಿ ತಲೆ ತಿನ್ನುತ್ತಿದ್ದ. ಇದು ಗೊತ್ತಿದ್ದ ಎಷ್ಟೋ ಜನರು ಅವನ ಕರೆಯನ್ನು ಎತ್ತುತ್ತಿರಲಿಲ್ಲ, ಆಗ ಕೂಡಲೆ ಇನ್ನೊಬ್ಬರಿಗೆ ಕರೆ ಮಾಡುತ್ತಿದ್ದ! ಅವನ list ನಲ್ಲಿ ಹೊಸಬರೇ ಜಾಸ್ತಿ. ಅದರಲ್ಲಿ ನಾನೂ ಒಬ್ಬ! ಅವನ ಸುದ್ದಿಗಳು ಹಾಗೂ ಗಾಸಿಪ್‌ಗಳಿಗೆ ಪೂರ್ಣ ವಿರಾಮ ಅವನ ಪಾತ್ರೆ ತೊಳೆಯುವ ಕೆಲಸ ಮುಗಿದಾಗಲೆ ಆಗುತ್ತಿತ್ತು! ಎಷ್ಟೋ ಸಲ ಅವನ ಕೆಲವು ಸುದ್ದಿಗಳು ನೀರಸ ಅನಿಸಿದರೂ ಒಟ್ಟಿನಲ್ಲಿ ಅವನ ಜೊತೆಗೆ ಮಾತಾಡುವುದು ನನಗೆ ಇಷ್ಟವೆ ಆಗಿತ್ತು. ಅಲ್ಲಿನ ಎಷ್ಟೋ ವಿಷಯಗಳು ನನಗೆ ಅವನಿಂದ ತಿಳಿಯುತ್ತಿದ್ದವು. ನಾನು busy ಇದ್ದ ಸಂದರ್ಭಗಳಲ್ಲಿ ಅವನ ಕರೆಯನ್ನು ನಾನೂ ರಿಜೆಕ್ಟ್ ಮಾಡುತ್ತಿದ್ದೆ ಕೂಡ.

ಅವತ್ತು ಚಂದ್ರು ಕರೆ ಮಾಡಿದಾಗ ಕೂಡ ಸಂಜೆ 7. “ಮತ್ತೇನ ನಡಿಸಿ ಲಾ ಗುರು..” ಅಂತ ಶುರು ಮಾಡಿದ. ಹಿಂದೆ ಪಾತ್ರೆಗಳ ಖಣ ಖಣ ಸಂಗೀತ ಕೇಳುತ್ತಿತ್ತು. ಮುಂದಿನ ತಿಂಗಳು ದೀಪಾವಳಿ function ಐತಿ ಗೊತ್ತಾತೊ ಇಲ್ಲೋ? ಎಷ್ಟೋ ವಿಷಯಗಳು ನನಗೆ ಗೊತ್ತಾಗುತ್ತಿದ್ದುದೆ ಇವನಿಂದ. news channel ನಂತೆಯೇ ಸುದ್ದಿ ಬಿತ್ತರಿಸುವ ಇವನಿಗೆ BBC ಎಂಬ ಅಡ್ಡ ಹೆಸರನ್ನೂ ಕೂಡ ಅಲ್ಲಿನವರು ಕೊಟ್ಟಿದ್ದರು. ಸಿರಿಗಂಧ ಕನ್ನಡ ಸಂಘ ನೆಬ್ರಾಸ್ಕ ಎಂಬ ಒಂದು ಅನಿವಾಸಿ ಕನ್ನಡಿಗರ ಬಳಗ ಅಲ್ಲಿದೆ. ಅಲ್ಲಿನ ಕನ್ನಡಿಗರಲ್ಲೇ ಒಬ್ಬರು ಪ್ರತಿ ವರ್ಷ ಅದರ ಅಧ್ಯಕ್ಷರು ಆಗಿರುತ್ತಾರೆ. ಯುಗಾದಿ, ದೀಪಾವಳಿ, ಶಿವರಾತ್ರಿ, ಹೊಸವರ್ಷ, ಹೋಳಿ ಹಬ್ಬಗಳ ಹಾಗೂ ಮತ್ತೇನಾದರೂ ಸಭೆ ಸಮಾರಂಭಗಳ ನಿರ್ವಹಣೆ ಮಾಡುವುದು ಅವರ ಜವಾಬ್ದಾರಿ. ಈ ಎಲ್ಲ ಮಾಹಿತಿಗಳನ್ನು e-mail ಹಾಗೂ WhatsApp ಮೂಲಕ ಎಲ್ಲ ಕನ್ನಡಿಗರಿಗೆ ತಲುಪಿಸುವುದು ಕೂಡ ಅವರ ಹಾಗೂ ಅವರ ಸಮೀತಿಯ ಒಂದು ಜವಾಬ್ದಾರಿ. ಆದರೆ ಅವರಿಗಿಂತ ಮೊದಲೇ ಅದನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತಿದ್ದನಲ್ಲ ನಮ್ಮ ಕಾರಭಾರಿ!

ಅಲ್ಲಿಗೆ ಹೋದ ಮೇಲೆ ನಾನು ಭಾಗವಹಿಸಬೇಕಾದ ಮೊದಲ ಸಮಾರಂಭ ಇದಾಗಿತ್ತು. ಹಿಂದು ದೇವಸ್ಥಾನದ ಹಾಲ್‌ನಲ್ಲಿ ಈ ಸಮಾರಂಭ ನಡೆಯುವುದಿತ್ತು. ಅದಕ್ಕಾಗಿ ಪೂರ್ವಭಾವಿಯಾಗಿ ಹಲವು ತಯಾರಿಗಳು ನಡೆಯುತ್ತಿವೆ ಎಂಬ ವಿಷಯವೂ ನನಗೆ ಇವನಿಂದಲೇ ತಿಳಿಯಿತು. ಕನ್ನಡ ಸಂಘದ ಆಗಿನ ಅಧ್ಯಕ್ಷ ರಾಜು ಎಂಬುವವರು ಆಗಿದ್ದರು ಅಂತ ತಿಳಿಯಿತು. ಅವರೂ ಕೂಡ ಚಂದ್ರು ತರಹ ಅಲ್ಲಿಯ ಮೂಲ-ಅನಿವಾಸಿ. ಅವರ ಅಧ್ಯಕ್ಷೀಯ ಅವಧಿ ಮುಗಿದು ಈಗ ಬೇರೆ ಹೊಸಬರ ತಂಡ ಕನ್ನಡ ಸಂಘದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿತ್ತು. ಇಂತಹ ಹಲವಾರು ವಿಷಯಗಳನ್ನು ನನಗೆ ತಿಳಿಸಿ “ಆತಲಾ ಮತ್ತ ಸಿಗೋಣ” ಅಂತ ಹೇಳಿದಾಗ ಹಿಂದಿನಿಂದ ಕೇಳುತ್ತಿದ್ದ ಪಾತ್ರೆಗಳ ಕಲರವ ನಿಂತಿತ್ತು. ಪಾತ್ರೆ ತೊಳೆದಾದ ಮೇಲೆ ನನ್ನ ಜೊತೆಗೆ ಮಾತಾಡಲು ಪುರುಸೊತ್ತು ಇರಬೇಕಲ್ಲ ಚಂದ್ರನಿಗೆ!

ಈ ಮೂವರಲ್ಲಿ ಮೂಲ-ಅನಿವಾಸಿಗಳು ಅಲ್ಲಿನ ಎಲ್ಲವನ್ನೂ ಬಲ್ಲವರು; ಆದ ಕಾರಣ ಹೊಸಬರಿಗೆಲ್ಲ ಅವರೇ ಹೆಚ್ಚು ಹೆಚ್ಚು ಸಹಾಯ ಮಾಡಬಲ್ಲವರೂ, ಸಲಹೆ ಸೂಚನೆಗಳನ್ನು ನೀಡುವವರೂ ಆಗಿರುತ್ತಾರೆ. ಹೀಗಾಗಿ ಹೊಸಬರು ಅಲ್ಲಿಗೆ ಬಂದು ಕಾಲಾಂತರದಲ್ಲಿ ಅಲ್ಲಿಯೇ ನೆಲೆಸುವ ಅವಕಾಶ ಬಂದರೆ ಅವರಿಗಾಗಿ ಒಂದು ಮನೆಯನ್ನು ಹುಡುಕಿಕೊಡುವವರೆಗೆ ಅವರು ಸಹಾಯ ಹಸ್ತ ಚಾಚುತ್ತಾರೆ.

ಮುಂದೆ ಬರುತ್ತಿದ್ದ ದೀಪಾವಳಿ ಹಬ್ಬದ ಆಚರಣೆಗೆ ನಾವೆಲ್ಲ ತುಂಬಾ ಉತ್ಸುಕತೆಯಿದ ಕಾಯುತ್ತಿದ್ದೆವು. ಕನ್ನಡ ಸಂಘದ ಸಮಿತಿಯ ಹೊರತಾಗಿ ಇನ್ನೂ ಹಲವು ಉತ್ಸಾಹಿಗಳು ಒಂದೊಂದು ಜವಾಬ್ದಾರಿ ಹೊತ್ತಿದ್ದರು. ಅದರಲ್ಲೇ ಕೆಲವರು ಸೇರಿ ಒಂದು ನಾಟಕವನ್ನೂ ಮಾಡುತ್ತಿದ್ದಾರೆ ಅಂತ ತಿಳಿಯಿತು. ನನಗೂ ಅಂತಹ ಹಲವಾರು ಚಟುವಟಿಕೆಗಳಲ್ಲಿ ಆಸಕ್ತಿ ಇತ್ತು ಹಾಗೂ ಭಾಗವಹಿಸುವ ಮನಸ್ಸು ಇತ್ತು. ಆದರೆ ಆಗ ತಾನೇ ಬಂದಿದ್ದೇನಾದ್ದರಿಂದ ಮುಂದಿನ ಸಮಾರಂಭದಲ್ಲಿ ನೋಡಿದರಾಯ್ತು ಅಂತ ಸುಮ್ಮನಾದೆ. ಅಲ್ಲಿನ ಅನಿವಾಸಿ ಕನ್ನಡಿಗರ ಮಕ್ಕಳು ಕೂಡ ಇಂತಹ ಸಮಾರಂಭಗಳಲ್ಲಿ ತಮ್ಮನ್ನು ತಾವು ತುಂಬಾ ಚೆನ್ನಾಗಿ ತೊಡಗಿಸಿಕೊಳ್ಳುತ್ತಾರೆ. ಅಂತಹ ಹಲವಾರು ಮಕ್ಕಳ ತಂಡಗಳು ಕನ್ನಡದ ಚಲನಚಿತ್ರದ ಹಾಡುಗಳಿಗೆ ನೃತ್ಯ ಮಾಡಲು ತಯಾರಿ ನಡೆಸಿದ್ದರು. ಹೀಗೆಯೇ ಒಂದಾವುದೋ ತಂಡದಲ್ಲಿ ನನ್ನ ಮಗಳನ್ನೂ ಸೇರಿಸಿಕೊಂಡರು. ಅದರಲ್ಲಿ ಒಬ್ಬರು ಸೌಮ್ಯ ಎಂಬುವವರು ಮಕ್ಕಳಿಗೆ ನೃತ್ಯ ಸಂಯೋಜನೆ ಮಾಡಿ ಅವರಿಗೆ ತಮ್ಮ ಮನೆಯಲ್ಲೇ practice ಮಾಡಿಸುತ್ತಿದ್ದರು. ಅದಕ್ಕಾಗಿ ಮಗಳನ್ನು ಅವರ ಮನೆಗೆ ಕರೆದುಕೊಂಡು ಹೋಗುತ್ತಿದ್ದೆವು. ನೃತ್ಯಕ್ಕಾಗಿ ಅವರು ಆರಿಸಿಕೊಂಡಿದ್ದ ಹಾಡಿನಲ್ಲಿ ಆಂಗ್ಲ ಹಿಂದಿ ಪದಗಳೆ ಹೆಚ್ಚು ಇದ್ದವು. ನಾನು ಅವರಿಗೆ, ನಿಮಗೆ ಡಾನ್ಸ್ ಮಾಡಿಸಲು ಕನ್ನಡದ ಹಾಡು ಸಿಗಲೇ ಇಲ್ಲವೇ ಅಂತ ಕೇಳುತ್ತಾ ಕಾಲೆಳೆದೆ. ಈಗ ತಾನೇ ಬಂದ ಇವನಾರು ಅಂತ ನನ್ನನ್ನು ತುಸು ಕೋಪದಲ್ಲೇ ನೋಡಿದರಾದರೂ ಅದನ್ನು ತೋರ್ಪಡಿಸದೆ, ಅಂತಹ ಹಾಡು ಸಿಗಲಿಲ್ಲ ಅಂತ ಅಂದರು. ಕನ್ನಡ ಪರ ಹೋರಾಟಗಾರ ಗಂಡನನ್ನು ನನ್ನ ಹೆಂಡತಿ ಕೆಂಗಣ್ಣಿನಿಂದ ನೋಡಿ, ಸುಮ್ಮನೆ ಬಾಯಿ ಮುಚ್ಚಿಕೊಂಡು ಇರಲು ಆಗದೆ ಅಂತ, ತನ್ನ ಬಾಯಿ ತೆಗೆಯದೆ ಗದರಿದಳು!

ಅಲ್ಲಿನ whatsapp group ನಲ್ಲಿ ಕೂಡ ನಾನು ಕನ್ನಡದಲ್ಲೇ ಕೀಲಿಸುತ್ತಿದ್ದೆ. ಅದನ್ನು ಹಲವರು ಗಮನಿಸಿ, ನೀವು ಕನ್ನಡದಲ್ಲಿ ಚೆನ್ನಾಗಿ ಬರೆಯುತ್ತೀರಿ ಅಂತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ನಾನು ಬರೆಯುತ್ತಿದ್ದುದು ಅಲ್ಲಿಯವರಿಗಿಂತ ತಕ್ಕಮಟ್ಟಿಗೆ ಚೆನ್ನಾಗಿತ್ತೇ ಹೊರತು ನಾನೇ ಅತ್ಯತ್ತಮ ಎಂಬ ಭಾವನೆ ಖಂಡಿತ ನನಗಿರಲಿಲ್ಲ. ಕನ್ನಡಿಗರು ಆದಷ್ಟು ಕನ್ನಡ ಬಳಸಲಿ ಎಂಬ ದೃಷ್ಟಿಯಿಂದ ಹಾಗೆ ಕನ್ನಡದಲ್ಲೇ ವ್ಯವಹರಿಸುತ್ತಿದ್ದೆ. ಆದರೆ ಎಷ್ಟೋ ಜನರಿಗೆ ಕನ್ನಡದಲ್ಲಿ ಮಾತನಾಡಲು ಬರುತ್ತಿತ್ತಾದರೂ ಓದಲು ಕಷ್ಟವಾಗುತ್ತಿತ್ತು. ಹೀಗಾಗಿ ಕೆಲವೊಮ್ಮೆ ಆಂಗ್ಲ ಭಾಷೆಯಲ್ಲಿ ಬರೆಯುವುದು ಅನಿವಾರ್ಯವೂ ಆಗುತ್ತಿತ್ತು.

ಅಂತೂ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆವು. ಹಾಡು, ನಾಟಕ, ನೃತ್ಯಗಳೆಂಬ ವೈವಿಧ್ಯಮಯ ಆಚರಣೆಗಳು, ರುಚಿಯಾದ ಊಟ ಇವೆಲ್ಲವೂ ಒಂದು ಬಗೆಯ ಹುರುಪು ಕೊಟ್ಟಿದ್ದು ಹೌದು. ಹಾಗೆಯೇ ನಾನು ಎಲ್ಲರ ಜೊತೆಗೆ ಕುಳಿತು ಕೊನೆಯ ಹಂತದ ಕೆಲವು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾಗ, ನಿರ್ಗಮಿಸುತ್ತಿದ್ದ ಹಾಲಿ ಅಧ್ಯಕ್ಷರು ನನ್ನನ್ನು ಹುಡುಕಿಕೊಂಡು ಬಂದು ನನ್ನ ಕಿವಿಯಲ್ಲಿ, ಮುಂದಿನ ವರ್ಷದ ಹೊಸ ಕನ್ನಡ ಸಂಘದ ಸಮಿತಿಯಲ್ಲಿ ನಿಮಗೆ ಸಾಂಸ್ಕೃತಿಕ ತಂಡದ ಜವಾಬ್ದಾರಿ ಕೊಟ್ಟಿದ್ದೇವೆ ಅಂತ ತಿಳಿಸಿದರು. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತೆ ಆಗಿತ್ತು ಈ ಒಂದು ಆಹ್ವಾನ. ಹೆಚ್ಚು ಯೋಚಿಸದೆ ಹೂಂ ಅಂದುಬಿಟ್ಟೆ. ನಾನು ಅಲ್ಲಿಗೆ ಬಂದು ಕೆಲವೇ ತಿಂಗಳು ಆಗಿತ್ತು. ಆದರೂ ನನ್ನ ಪ್ರತಿಭೆ ಇವರಿಗೆ ಇಷ್ಟು ಬೇಗ ಗೊತ್ತಾಗಿ ಹೋಯಿತಲ್ಲ ಅಂತ ನನ್ನ ಬಗ್ಗೆ ನನಗೆ ಹೆಮ್ಮೆ ಆಯಿತು. ಹೊಸ ಅಧ್ಯಕ್ಷರಾಗಿ ಗಣೇಶ ಎಂಬುವವರು ಆಯ್ಕೆಯಾಗಿದ್ದರು. ಅವರೂ ಕೂಡ ತುಂಬಾ ಪ್ರತಿಭಾವಂತರು ಹಾಗೂ ಒಳ್ಳೆಯ ಮನಷ್ಯ. ಅವರ ಜೊತೆಗೆ stage ಮೇಲೆ ನಿಲ್ಲಿಸಿ ಹೊಸ ತಂಡವನ್ನು ಎಲ್ಲರಿಗೂ ಪರಿಚಯಿಸಲಾಯಿತು.

ಕನ್ನಡದಲ್ಲಿ type ಮಾಡುತ್ತಿದ್ದ ವ್ಯಕ್ತಿ ನಾನಾಗಿದ್ದರಿಂದ, ಸಮಾರಂಭದ ನಂತರ ಹಲವರು ನನ್ನನ್ನು ಗುರುತಿಸಿ ಮಾತಾಡಿಸಿದರು. ಅವರಲ್ಲಿ ಅಲ್ಲಿಯೇ ಹಲವಾರು ವರ್ಷಗಳಿಂದ ಇದ್ದ ಮೂರ್ತಿ ಎಂಬ ಒಬ್ಬರು ಹಿರಿಯರು ನನಗೆ ತುಂಬಾ ಪ್ರೀತಿಯಿಂದ ಮಾತನಾಡಿಸಿ ನಿಮ್ಮ ಕನ್ನಡ ಬರವಣಿಗೆ ನೋಡಿ ಬಹಳ ಖುಷಿ ಆಯ್ತು. ನೀವು ಮತ್ತೆ ಏನೇನು ಬರೆದಿದ್ದೀರಿ ಅಂತ ಕೇಳಿ ತಿಳಿದುಕೊಂಡರು. ಓದುವುದರಲ್ಲಿ ಆಸಕ್ತಿ ಇದ್ದ ಇನ್ನೂ ಕೆಲವರು, ತಾವು ಓದಿದ ಪುಸ್ತಕಗಳ ಬಗ್ಗೆ ಹಾಗೂ ತಮ್ಮ ಬರವಣಿಗೆಯ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು. ಕೆಲವರಿಗೆ ನನ್ನ ದೊಡ್ಡಪ್ಪ ದಿ. ಶ್ರೀ. ಕೀರ್ತಿನಾಥ ಕುರ್ತಕೋಟಿ ಅವರ ಬಗ್ಗೆಯೂ ಗೊತ್ತಿತ್ತು. ನಾನು ಅವರ ತಮ್ಮನ ಮಗ ಎಂಬ ವಿಷಯ ಗೊತ್ತಾಗಿ ಖುಷಿ ಪಟ್ಟರು. ನಾನು ಬರವಣಿಗೆಯಲ್ಲಿ ತೊಡಗಿಸಿಕೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡಬಹುದಾದಂತಹ ಸಂದರ್ಭದಲ್ಲಿ ಧಿಡೀರ್‌ ಅಂತ ಅಮೆರಿಕೆಗೆ ಬಂದು ಕೂತಿದ್ದೆ. ಬೆಂಗಳೂರಿನಲ್ಲಿ ಕೆಲವು ಸಾಹಿತ್ಯಿಕ ಸಭೆ ಸಮಾರಂಭಗಳಿಗೆ ಹೋಗುತ್ತಿದ್ದೆ. ಅದಕ್ಕೆಲ್ಲ ಇಲ್ಲಿಗೆ ಬಂದ ಮೇಲೆ ಅವಕಾಶವೇ ಇಲ್ಲದಂತೆ ಆಗಿತ್ತು. ಅಂತಹ ಸಂದರ್ಭದಲ್ಲಿ ವಿದೇಶದ ಮಣ್ಣಿನಲ್ಲಿ ಕೂಡ ಸಾಹಿತ್ಯ ರಚನೆಗೆ ಒಂದು ಅನುಕೂಲ ವಾತಾವರಣ ಇದೆಯಲ್ಲ ಅಂತ ತಿಳಿದು ತುಂಬಾ ಖುಷಿಯಾಯ್ತು.

ಇನ್ನೇನು ಮನೆಗೆ ಹೋಗಬೇಕು ಅಷ್ಟರಲ್ಲಿ ಚಂದ್ರು ಸಿಕ್ಕ. “ಏನ ಲಾ ಬಂದ ಕೂಡಲೆ chance ಹೊಡದೆಲ್ಲ. Cultural team ನ್ಯಾಗ ಮಸ್ತ ಪ್ರೊಗ್ರಾಂ ಕೊಡಬೇಕು ನೋಡು” ಅಂತ ಬೆನ್ನು ತಟ್ಟಿದ. ಇಲ್ಲೆ ಹಳಬರು ಯಾರೂ ಇಂಥಾ ಜವಾಬ್ದಾರಿ ತೊಗೊಳಲಾಕ ಮುಂದ ಬರಂಗೆ ಇಲ್ಲ ನೋಡಲಾ… ಅಂದ. ಆಗ, ಇವರು ಯಾಕೆ ನನ್ನನ್ನೇ ಆರಿಸಿದರು ಅಂತ ಆಗ ನನಗೆ ತಿಳಿಯಿತು! ಈಗೀಗ ಭಾರತದಿಂದ ಬಂದವರಾದರೆ ಹೊಸ ಹುರುಪು ಇರುತ್ತದೆ ಎಂಬ ಕಾರಣಕ್ಕೆ ಕನ್ನಡ ಸಂಘದ ಸಮಿತಿಯಲ್ಲಿ ನನ್ನನ್ನು ತೂರಿಸಿದ್ದರು, ನನ್ನ ಪ್ರತಿಭೆ ನೋಡಿ ಅಲ್ಲ! ಆದರೂ, ಅಲ್ಲಿ time pass ಹೇಗೆ ಮಾಡೋದು ಎಂಬ ಚಿಂತೆಯಲ್ಲಿದ್ದ ನನಗೆ ನನ್ನ ಇಷ್ಟದ ಒಂದು ಹೊಸ ಜವಾಬ್ದಾರಿ ಸಿಕ್ಕಿತ್ತು. ನಮ್ಮ ಮುಂದಿನ ತಯಾರಿ ಯುಗಾದಿ ಹಬ್ಬದ ಸಮಾರಂಭ ಆಗಿತ್ತು. ಅದಕ್ಕಾಗಿ ಏನೇನು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಬಹುದು ಅಂತ ನನ್ನ ತಲೆಗೆ ಹಲವಾರು ಯೋಚನೆಗಳು ಮುತ್ತಿದ್ದವು…

(ಮುಂದುವರಿಯುವುದು..)

(ಹಿಂದಿನ ಕಂತು: ಬಾಯಲ್ಲಿರುವ ಬಿಸಿ ತುಪ್ಪವೇ!)