“ದುಡ್ಡಿನ ಮದ ಹತ್ತಿರುವ ಮಕ್ಕಳು, ದುಡ್ಡೇ ದೊಡ್ಡಪ್ಪ ಎನ್ನುವ ಆಡಳಿತ ಮಂಡಳಿ, ನಮ್ಮ ವೈಯಕ್ತಿಕ ಬದುಕಿನ ಕಷ್ಟಗಳೇ ಹಾಸಿಹೊದ್ದುಕೊಳ್ಳುವಷ್ಟು ಇರುವಾಗ ಈ ಪೀಡೆಗಳಿಗೆ ಪುಸ್ತಕದಲ್ಲಿರೋದನ್ನ ಹೇಳಿಕೊಟ್ಟು ಬಂದರೆ ಆಯ್ತು. ಊರ ಉಸಾಬರಿ ನಮಗ್ಯಾಕೆ? ಬದುಕೋ ದಾರಿ ಹುಡುಕಬೇಕು. ಟ್ಯೂಷನ್ ಮಾಡಿದರೆ, ಪಿಪಿಟಿ, ಸ್ಟಡಿ ಮೆಟೀರಿಯಲ್ ಮಾಡಿ ಮಾರ್ಕೆಟ್‌ಗೆ ಬಿಟ್ಟರೆ ಸಂಪಾದನೆಯಾದರೂ ಆಗತ್ತೆ. ಇವರನ್ನು ತಿದ್ದಿದರೆ ಏನು ಸಿಗತ್ತೆ?” ಎನ್ನುವ ಮನೋಭಾವ ಶಿಕ್ಷಕರಲ್ಲಿ ಹೆಚ್ಚುತ್ತಿದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

ಕೆಲವು ಸಲ ಸೋತು ಹೋದೆವು ಅನ್ನಿಸುತ್ತೆ. ಆ ಹೊತ್ತಿಗೆ ನಮ್ಮನ್ನು ನಂಬುವವರು, ಬಲ ತುಂಬುವವರು ಸಿಕ್ಕರೆ ಸಾಕು. ಒಂದೇ ಒಂದು ಮಾತಿಗೆ ಜಗತ್ತನ್ನೇ ಎದುರಿಸಿ ನಿಲ್ಲಬಲ್ಲೆನೆಂಬ ಆತ್ಮವಿಶ್ವಾಸ, ಈ ಪ್ರಪಂಚಕ್ಕೆ ನನ್ನಂತಹವರಿಂದಲೂ ಪ್ರಯೋಜನವಿದೆ. ಭರವಸೆ ಹುಟ್ಟಿಸುವ ತಾಕತ್ತು ಇರುತ್ತದೆ. ಅದು ಕಾಲಕಾಲಕ್ಕೆ ಎಲ್ಲರಿಂದ ಪಡೆಯಬೇಕಾದ ವಂತಿಗೆಯಲ್ಲ. ಈ ಜಗತ್ತು ಪವಿತ್ರ ವೃತ್ತಿಗಳೆಂದು ಗುರುತಿಸಿದ ಶಿಕ್ಷಕರು ಹಾಗೂ ವೈದ್ಯರು ನಮ್ಮಲ್ಲಿ ಬಿತ್ತಬಹುದಾದ ಬೀಜ. ಸಣ್ಣವಯಸ್ಸಿನ ಹಸಿನೆಲದಲ್ಲಿ ಶಿಕ್ಷಕರು, ಮಧ್ಯವಯಸ್ಸಿನ ಗಟ್ಟಿನೆಲದಲ್ಲಿ ವೈದ್ಯರು ಭರವಸೆಯ ಸಸಿಯೊಂದನ್ನು ನೆಡಬೇಕು. ಆದರೆ ವಾಸ್ತವ ಹಾಗಿದೆಯೇ?

ವೃತ್ತಿಸಂಬಂಧಿತವಾಗಿ ಹಲವಾರು ರಂಗದಲ್ಲಿನ ಸಾಧಕರನ್ನು ಮಾತನಾಡಿಸುವಾಗ, ಸಂದರ್ಶಿಸುವಾಗ ಅವರು ತಪ್ಪದೇ ನೆನೆಯುವ ವ್ಯಕ್ತಿಗಳಲ್ಲಿ ಬಹುಪಾಲು ಶಿಕ್ಷಕರದ್ದು. ಬಡತನ, ಮಂಕುಬುದ್ಧಿ, ಕೀಳರಿಮೆ, ಮೌಢ್ಯ, ಹದಗೆಟ್ಟ ಕೌಟುಂಬಿಕ ಪರಿಸ್ಥಿತಿ ಇಂತಹವುಗಳ ಮಧ್ಯೆ ನೆಮ್ಮದಿಯ ಬಾಲ್ಯ ಲಭಿಸದೆ ಹೋದರೂ ಶಿಕ್ಷಕರು ಕಲಿಸಿದ ಪಾಠ, ಜೀವನಮೌಲ್ಯಗಳು, ತೋರಿದ ಉದಾತ್ತತೆ, ವಿಶ್ವಾಸಗಳು ಬದುಕನ್ನು ಸುಂದರಗೊಳಿಸಿರುತ್ತದೆ. ಸಾಧಕರೆಂದು ಅವರನ್ನು ಅಭಿನಂದಿಸಿದಾಗ, ಸಂದರ್ಶಿಸಿದಾಗ ಅವರು ಕೃತಜ್ಞತೆಯಿಂದ ಶಿಕ್ಷಕರನ್ನು ನೆನೆಯುತ್ತಾರೆ. “ಈಗೆಲ್ಲಿ ಅಂತಹ ಶಿಕ್ಷಕರು? ಅಂತಹ ವಿದ್ಯಾರ್ಥಿಗಳು?” ಎನ್ನದಿರಿ. ಹಣವೊಂದಿದ್ದರೆ ಎಲ್ಲವನ್ನೂ ಪಡೆಯಬಹುದೆಂಬ ಮನಃಸ್ಥಿತಿಯನ್ನು ಮಕ್ಕಳು, ಶಿಕ್ಷಕರಾದಿಯಾಗಿ ಎಲ್ಲರೂ ಹೊಂದಿರುವಾಗ ಈ ಬಗೆಯ ಚಿಂತನೆಯೇ ಪೂರ್ವಕಾಲದ್ದು ಎನ್ನಿಸಿರಬಹುದು. “ಬಿಟ್ಟಿ ಪಾಠ ಮಾಡ್ತಿಲ್ಲ. ತಿಂಗಳಾ ತಿಂಗಳಾ ಸಂಬಳ ಎಣಿಸೋಲ್ವಾ?” ಎನ್ನುವ ಮನೋಭಾವದ ಪೋಷಕರು ಮಕ್ಕಳಿಗೆ ತಾನೆ ಯಾವ ಸಂಸ್ಕಾರ ನೀಡಲು ಸಾಧ್ಯ?

ಅದಕ್ಕೆ ಸರಿಯಾಗಿ “ದುಡ್ಡಿನ ಮದ ಹತ್ತಿರುವ ಮಕ್ಕಳು, ದುಡ್ಡೇ ದೊಡ್ಡಪ್ಪ ಎನ್ನುವ ಆಡಳಿತ ಮಂಡಳಿ, ನಮ್ಮ ವೈಯಕ್ತಿಕ ಬದುಕಿನ ಕಷ್ಟಗಳೇ ಹಾಸಿಹೊದ್ದುಕೊಳ್ಳುವಷ್ಟು ಇರುವಾಗ ಈ ಪೀಡೆಗಳಿಗೆ ಪುಸ್ತಕದಲ್ಲಿರೋದನ್ನ ಹೇಳಿಕೊಟ್ಟು ಬಂದರೆ ಆಯ್ತು. ಊರ ಉಸಾಬರಿ ನಮಗ್ಯಾಕೆ? ಬದುಕೋ ದಾರಿ ಹುಡುಕಬೇಕು. ಟ್ಯೂಷನ್ ಮಾಡಿದರೆ, ಪಿಪಿಟಿ, ಸ್ಟಡಿ ಮೆಟೀರಿಯಲ್ ಮಾಡಿ ಮಾರ್ಕೆಟ್‌ಗೆ ಬಿಟ್ಟರೆ ಸಂಪಾದನೆಯಾದರೂ ಆಗತ್ತೆ. ಇವರನ್ನು ತಿದ್ದಿದರೆ ಏನು ಸಿಗತ್ತೆ?” ಎನ್ನುವ ಮನೋಭಾವ ಶಿಕ್ಷಕರಲ್ಲಿ ಹೆಚ್ಚುತ್ತಿದೆ. ಪ್ರತಿವರ್ಷ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಶಿಕ್ಷಣಸಂಸ್ಥೆಯಿಂದ ಹೊರಬಂದು, ದುಡ್ಡು ದುಡಿಯುವ ಯಂತ್ರಗಳಾಗುತ್ತಿದ್ದಾರೆ.

ಇಂದಿನ ರೋಗಿ-ವೈದ್ಯರ ಸಂಬಂಧವಂತೂ ಇದಕ್ಕಿಂತ ಶೋಚನೀಯ. ರೋಗಿಯ ಪದವಿ, ಅಂತಸ್ತು, ಹಣಕಾಸಿನ ಪರಿಸ್ಥಿತಿಯನ್ನು ಅಂದಾಜು ಮಾಡುತ್ತಲೇ ಪುಟಗಟ್ಟಲೆ ಟೆಸ್ಟ್ ಬರೆಯುವ, ಹಿಡಿಹಿಡಿ ಮಾತ್ರೆ ನುಂಗಿಸುವ, ಚಿಕಿತ್ಸೆಯ ಹೆಸರಿನಲ್ಲಿ ಲಕ್ಷಾಂತರ ಪೀಕುವ ವೈದ್ಯರೇ ಹೆಚ್ಚು. ಈ ರೀತಿ ರೋಗಿಯ ಮಾನಸಿಕ, ಭಾವನಾತ್ಮಕ ಪರಿಸ್ಥಿತಿಗೆ ಲಕ್ಷ್ಯವೇ ಕೊಡದೆ ದೇಹ, ಬುದ್ಧಿ, ಮನಸ್ಸುಗಳನ್ನು ಬೇರೆ ಬೇರೆಯೆಂದು ಚಿಕಿತ್ಸೆ ನೀಡುವ ವೈದ್ಯರಿಂದ ಸಾಂತ್ವನ, ಸಮಾಧಾನ ನಿರೀಕ್ಷಿಸುವುದೇ ತಪ್ಪು ಎನಿಸುತ್ತದೆ. ಗೂಗಲ್ ರೇಟಿಂಗ್ ನೋಡಿ ವೈದ್ಯರನ್ನು ಅಳೆಯುವ, ವೈದ್ಯರಿಗಿಂತ ತಾವು ಅಲ್ಲಿ ಇಲ್ಲಿ ಓದಿ ತಿಳಿದ ಅರೆಬರೆ ಜ್ಞಾನವೇ ಹೆಚ್ಚೆಂದು ನಂಬುವ ರೋಗಿಗಳು ದಿನಕ್ಕೊಬ್ಬ ವೈದ್ಯರನ್ನು ಬದಲಿಸುತ್ತಲೇ ಹೋಗುತ್ತಾರೆ. ಯಾರನ್ನೂ ನಂಬದ, ತನ್ನಲ್ಲೂ ವಿಶ್ವಾಸವಿರಿಸದ, ಏನು ಬೇಕೆಂದು ತಿಳಿಯದೆ ಹುಡುಕಾಟದಲ್ಲೇ ಆಯುಷ್ಯ ಕಳೆಯುವ ವ್ಯಕ್ತಿ ರೋಗಿಯಾಗಿಯೇ ಉಳಿಯುತ್ತಾನೆ. ಹೀಗೆ ವೈದ್ಯ ಹಾಗೂ ರೋಗಿಯ ನಡುವಿನ ಸಂಬಂಧದ ತಂತು ಕಡಿದು ದಶಕಗಳಾಗಿವೆ. ನಾವು ಮಾತ್ರ ವೈಜ್ಞಾನಿಕ ಪ್ರಗತಿಯ ಬಗ್ಗೆ ಹೆಮ್ಮೆಪಡುತ್ತಾ, ತಾಯಿಬೇರಿಗೆ ಬಿದ್ದ ಕೊಡಲಿಪೆಟ್ಟನ್ನು ಗಮನಿಸದೆ ಸಾಧಿಸಿದ ಒಣಹಮ್ಮಿನಲ್ಲಿ ಮುಳುಗಿದ್ದೇವೆ.

ಈ ಸಂಗತಿಗಳು ಕ್ಷುಲ್ಲಕವಂತೂ ಅಲ್ಲ. ದೇಶಕಟ್ಟುವ ಶಿಕ್ಷಕರು ಹಾಗೂ ಆರೋಗ್ಯಪೂರ್ಣ ಸಮಾಜದ ಅಡಿಪಾಯವಾದ ವೈದ್ಯರನ್ನು ನಿರ್ಲಕ್ಷಿಸುವುದು ಸಾಧುವೆ? ಇವರೊಂದಿನ ಸಂಬಂಧದ ತಂತು ಕಡಿದುಕೊಂಡ ವಿದ್ಯಾರ್ಥಿಗಳು, ರೋಗಿಗಳಿಂದ ಸಮಾಜ ಸ್ವಸ್ಥವಾಗಿರಬಲ್ಲದೆ? ಶಿಕ್ಷಕರು ಹಾಗೂ ವೈದ್ಯರು ಹೊಣೆಗಾರಿಕೆ ಮರೆಯಬಹುದೆ? ಬೆಚ್ಚಿಬೀಳಿಸುವ ವಾಸ್ತವವಿದು. ನಮ್ಮ ನೆಲೆಯಲ್ಲಿ ಸಾಧ್ಯವಾದಷ್ಟು ಬದಲಾವಣೆ ತರಲು, ಮತ್ತೆ ಮನುಷ್ಯ ಸಹಜ ಸಂಬಂಧಗಳನ್ನು ಬೆಸೆಯುವ ಪ್ರಯತ್ನ ಮಾಡೋಣ. ಆಗಬಹುದೆ?