ಎಲ್ಲಾ ನಾಯಿಗಳು ಸ್ನೇಹಿತರಾಗುವುದಿಲ್ಲ. ಕೂರಾನಿಗೆ ಹಸ್ಕಿ ನಾಯಿಗಳನ್ನು ಕಂಡರೆ ಆಗುವುದಿಲ್ಲ. ಅಂತಹ ನಾಯಿಗಳ ಹತ್ತಿರವು ಸುಳಿಯುವುದಿಲ್ಲ ಅವನು. ಪಾರ್ಕಿನಲ್ಲಿ ಹಲವಾರು ನಾಯಿಗಳು ಬಂದರು ಅವನು ಆಟವಾಡುವುದು ಕೆಲವೊಂದು ನಾಯಿಗಳ ಜೊತೆಗೆ ಮಾತ್ರ. ಶಾಲೆಯಲ್ಲಿ ನಡೆಯುವ ಹಾಗೆ ಇಲ್ಲಿಯೂ ಬುಲ್ಲಿ ಆಗುತ್ತದೆ. ಕೆಲವೊಂದು ಡಾಮಿನೇಟಿಂಗ್ ನಾಯಿಗಳಿರುತ್ತವೆ. ತಮ್ಮ ಮಟ್ಟದ ನಾಯಿಗಳ ಜೊತೆಗೆ ಮಾತ್ರ ಬೆರೆಯುವ ಇವು ಉಳಿದವುಗಳನ್ನ ತುಚ್ಛವಾಗಿ ನೋಡುತ್ತ ಕೆಲವೊಮ್ಮೆ ಗುಂಪು ಕಟ್ಟಿಕೊಂಡು ಅಟ್ಟಾಡಿಸುತ್ತವೆ. ನಾವು ಪಾರ್ಕಿಗೆ ಹೋದ ಶುರುವಿನಲ್ಲಿ ಇಂತಹದೇ ಒಂದು ದೊಡ್ಡ ನಾಯಿ ಕೂರಾನ ಮೇಲೆ ಆಕ್ರಮಣ ಮಾಡಿತ್ತು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಹತ್ತನೆಯ ಕಂತು

ಮನಸ್ಸಿನಲ್ಲಿ ಎಷ್ಟೇ ದುಗುಡವಿದ್ದರು ಸ್ನೇಹಿತರ ಜೊತೆ ಸೇರಿದಾಗ ಮನಸ್ಸು ತುಂಬಿ ನಗುತ್ತೇವೆ. ಯಾರ ಜೊತೆಗು ಹಂಚಿಕೊಳ್ಳಲಾಗದ ಮಾತುಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಸಲುಗೆಯಿರುವುದು ಸ್ನೇಹಕ್ಕೆ ಮಾತ್ರ. ಕೆಲಸದ ಒತ್ತಡದಲ್ಲಿ ಸ್ನೇಹಿತರನ್ನು ಭೇಟಿ ಮಾಡಲಾಗದೇ ಪರಿತಪಿಸುತ್ತ, ವಾಟ್ಸಪ್ ಗ್ರೂಪಿನಲ್ಲಿ ಅನೇಕ ಸಲ ಪ್ಲಾನ್ ಮಾಡಿ ಅದು ಕೈಗೂಡದೇ ಮತ್ತೆ ನೂರಾರು ಮೇಸೆಜುಗಳನ್ನು ಕಳುಹಿಸುತ್ತ, ಬರಲಾರೆ ಎನ್ನುವವರಿಗೆ ಬೈದು ಕೊನೆಗೂ ಸ್ನೇಹಿತರನ್ನು ಸಂಧಿಸುವ ಪ್ಲಾನ್ ಫಿಕ್ಸ್ ಆಗಿ ಆ ದಿನ ದುಂಡು ಮೇಜಿನ ಸುತ್ತ ಎಲ್ಲರು ಕೂತು ಹರಟುವಾಗಿನ ನೆಮ್ಮದಿ ಮತ್ತೆಲ್ಲು ದಕ್ಕುವುದಿಲ್ಲ.

ಪ್ರಾಣಿಗಳು ಸಹ ಇಷ್ಟೇ ಪ್ರೀತಿಯಿಂದ ಸ್ನೇಹವನ್ನು, ಸ್ನೇಹಿತರನ್ನು ನಿಭಾಯಿಸುತ್ತವೆ, ಅವರನ್ನು ಭೇಟಿಯಾಗಲು ಹಾತೊರೆಯುತ್ತವೆ. ನಮ್ಮ ಕೂರಾ ದುಶ್ಯಂತನಿಗಾಗಿ ಕಾಯುವ ಶಾಕುಂತಲೆಯ ಹಾಗೆ ಸಂಜೆಗೆ ಕಾಯುತ್ತಿರುತ್ತಾನೆ. ಕೆಲವೊಮ್ಮೆ ಕೆಲಸದ ಕಾರಣದಿಂದ ತಡವಾದರೆ ನಮ್ಮ ಹತ್ತಿರ ಬಂದು ಪ್ರಶ್ನಾರ್ಥಕ ಕಣ್ಣುಗಳಿಂದ ನೋಡುತ್ತಾನೆ. ಬಾಗಿಲ ಹತ್ತಿರ ಹೋಗಿ ನಿಲ್ಲುತ್ತಾನೆ, ನೇತು ಹಾಕಿರುವ ಅವನ ಲೀಶ್ ಮೂಸುತ್ತಾನೆ. ಇದಾವುದಕ್ಕು ನಾವು ಗಮನ ಕೊಡದೇ ಇದ್ದರೆ ಹತ್ತಿರ ಬಂದು ಬೈಯ್ಯುವುದನ್ನು ಕಲಿತಿದ್ದಾನೆ. ಬೈಯ್ಯುವುದೆಂದರೆ ಶಬ್ದವೇ ಇಲ್ಲದ ಬೊಗಳುವಿಕೆ. ಅದು ಥೇಟ್ ಬೈದ ಹಾಗೆಯೇ ಕಾಣಿಸುತ್ತದೆ. ಒಮ್ಮೊಮ್ಮೆ ಮೈ ಮರೆತು ಕೂತಿದ್ದಾಗ ಅವನು ಬಂದು ಬೈಯ್ಯುವುದನ್ನು ನೋಡಿ ನಮ್ಮಜ್ಜನೋ ಅಜ್ಜಿಯೋ ಅವನ ರೂಪದಲ್ಲಿ ಬಂದಿದ್ದಾರೆ ಎನ್ನಿಸಿ ಬಿಡುತ್ತದೆ.

ಅಮೇರಿಕಾದಲ್ಲಿ ನೆರೆಹೊರೆಯವರ ಪರಿಚಯ ಸುಲಭವಾಗಿ ಆಗಬೇಕೆಂದರೆ ಒಂದು ಮಕ್ಕಳಿರಬೇಕು ಇಲ್ಲ ನಾಯಿ ಇರಬೇಕು. ನಾವು ಹೊಸ ಮನೆಯಲ್ಲಿ ವಾಸ್ತವ್ಯ ಹೂಡಿ ಆರು ತಿಂಗಳಾಗಿದ್ದರು ಕೂರಾ ಬರುವವರೆಗೆ ನಮ್ಮ ಮನೆಯ ಸುತ್ತಮುತ್ತಲಿನವರ ಜೊತೆಗೆ ಹೇಳಿಕೊಳ್ಳುವಂತಹ ಪರಿಚಯವಾಗಿರಲಿಲ್ಲ. ಅವನನ್ನು ಪ್ರತಿದಿನ ಪಾರ್ಕಿಗೆ ಕರೆದುಕೊಂಡು ಹೋಗಲು ಶುರು ಮಾಡಿದ ಮೇಲೆ ಅಕ್ಕಪಕ್ಕದವರಷ್ಟೇ ಅಲ್ಲ, ಆಚೆ ಬೀದಿ, ಮುಂದಿನ ಓಣಿ, ಪಕ್ಕದ ಏರಿಯಾನವರೆಲ್ಲ ಪರಿಚಯವಾಗಿದ್ದಾರೆ. ಪಾರ್ಕಿಗೆ ಹೋದರೆ ನಾಯಿಗಳ ಶೋ ನೋಡಲು ಬಂದಿದ್ದೇವೇನೋ ಎನ್ನುವಷ್ಟು ನಾಯಿಗಳು! ಡಚ್ಚೆಸ್, ನೀಕಾ, ಬೆಲ್ಲಾ, ಹರ್ಷೀ, ಶೈಲಾ, ಚಾರ್ಲಿ ಇವರೆಲ್ಲ ಪಾರ್ಕಿನಲ್ಲಿ ಸಿಗುವ ಕೂರಾನ ಸ್ನೇಹಿತರು. ಇವರೆಲ್ಲರು ಪ್ರತಿದಿನ ತಪ್ಪದೇ ಪಾರ್ಕಿಗೆ ಬರುತ್ತಾರಾದ್ದರಿಂದ ನಾಯಿಗಳ ಜೊತೆಗೆ ಅವರ ಪೋಷಕರು ಸಹ ಆಪ್ತರಾಗಿ ಒಂದು ದಿನ ಯಾರಾದರು ತಪ್ಪಿಸಿದರೆ ಯಾಕೆ ಬರಲಿಲ್ಲವೋ ಎಂದು ಕಳವಳ ಪಡುವಷ್ಟು ಹತ್ತಿರವಾಗಿದ್ದಾರೆ.

ಪಾರ್ಕಿನಲ್ಲಿ ಒಂದು ಸಣ್ಣ ಮೇಳವೇ ನೆರೆದಿರುತ್ತದೆ. ಹೆತ್ತವರಿಗೆ ಹೆಗ್ಗಣ ಶ್ರೇಷ್ಟ ಎನ್ನುವ ಗಾದೆ ಮಾತನ್ನು ತುಸು ಬದಲಾಯಿಸಿ ಸಾಕಿದವರಿಗೆ ತಮ್ಮ ನಾಯಿಯೇ ಶ್ರೇಷ್ಟ ಎಂದು ಹೇಳಬಹುದೇನೋ.. ಅಲ್ಲಿರುವ ಅಷ್ಟೂ ಹೊತ್ತು ಅವರ ನಾಯಿಯ ಪರಾಕ್ರಮ, ತುಂಟಾಟ, ಆರೋಪಗಳನ್ನು ಕೇಳಿಸಿಕೊಳ್ಳುತ್ತ ನಮ್ಮ ಕೂರಾಪುರಾಣ ಹೇಳುತ್ತ ಮನುಷ್ಯರೆನ್ನಿಸಿಕೊಂಡವರು ಒಂದು ಕಡೆ ಗುಂಪಾಗಿ ನಿಂತರೆ ನಾಯಿಗಳು ಈ ಏರಿಯಾ ನಂದು ಎಂಬಂತೆ ಒಂದರ ಹಿಂದೆ ಒಂದರಂತೆ ಓಡುತ್ತ ಆಟವಾಡುತ್ತಿರುತ್ತವೆ.

ಎಲ್ಲಾ ನಾಯಿಗಳು ಸ್ನೇಹಿತರಾಗುವುದಿಲ್ಲ. ಕೂರಾನಿಗೆ ಹಸ್ಕಿ ನಾಯಿಗಳನ್ನು ಕಂಡರೆ ಆಗುವುದಿಲ್ಲ. ಅಂತಹ ನಾಯಿಗಳ ಹತ್ತಿರವು ಸುಳಿಯುವುದಿಲ್ಲ ಅವನು. ಪಾರ್ಕಿನಲ್ಲಿ ಹಲವಾರು ನಾಯಿಗಳು ಬಂದರು ಅವನು ಆಟವಾಡುವುದು ಕೆಲವೊಂದು ನಾಯಿಗಳ ಜೊತೆಗೆ ಮಾತ್ರ. ಶಾಲೆಯಲ್ಲಿ ನಡೆಯುವ ಹಾಗೆ ಇಲ್ಲಿಯೂ ಬುಲ್ಲಿ ಆಗುತ್ತದೆ. ಕೆಲವೊಂದು ಡಾಮಿನೇಟಿಂಗ್ ನಾಯಿಗಳಿರುತ್ತವೆ. ತಮ್ಮ ಮಟ್ಟದ ನಾಯಿಗಳ ಜೊತೆಗೆ ಮಾತ್ರ ಬೆರೆಯುವ ಇವು ಉಳಿದವುಗಳನ್ನ ತುಚ್ಛವಾಗಿ ನೋಡುತ್ತ ಕೆಲವೊಮ್ಮೆ ಗುಂಪು ಕಟ್ಟಿಕೊಂಡು ಅಟ್ಟಾಡಿಸುತ್ತವೆ. ನಾವು ಪಾರ್ಕಿಗೆ ಹೋದ ಶುರುವಿನಲ್ಲಿ ಇಂತಹದೇ ಒಂದು ದೊಡ್ಡ ನಾಯಿ ಕೂರಾನ ಮೇಲೆ ಆಕ್ರಮಣ ಮಾಡಿತ್ತು. ಮೂರ್ನಾಲ್ಕು ನಾಯಿಗಳು ತನ್ನ ಮೇಲೆರಗಿ ಬರುತ್ತಿರುವುದನ್ನು ನೋಡಿ ಹೆದರಿ ಓಡಿದ ಕೂರಾ ಮೂಲೆ ಸೇರಿ ಕುಂಯ್ಯಗುಟ್ಟಿದ್ದ. ಆಗ ಇನ್ನೂ ಸಣ್ಣವನಿದ್ದರಿಂದ ದೊಡ್ಡ ನಾಯಿಗಳಿಗೆ ಹೆದರಿಕೊಳ್ಳುತ್ತಿದ್ದ. ಈಗ ಧೈರ್ಯ ಬಂದಿದೆ. ಹಾಗೆ ಯಾವುದಾದರು ನಾಯಿ ಪರಾಕ್ರಮ ತೋರಿಸಲು ಯತ್ನಿಸಿದರೆ ಪ್ರತಿಯಾಗಿ ಇವನು ಸಹ ಬೊಗಳಿ ಅದನ್ನು ಓಡಿಸುತ್ತಾನೆ.

ಮೊದಲೆಲ್ಲ ಆ ನಾಯಿಯನ್ನು ಕಂಡಾಗಲೆಲ್ಲ ಹೆದರಿಕೊಳ್ಳುತ್ತಿದ್ದವನು ಈಗ ಅದು ಎಲ್ಲಿಯೇ ಕಂಡರೂ ನಿಂತಲ್ಲಿಂದಲೇ ಗಟ್ಟಿಯಾಗಿ ಬೊಗಳುತ್ತಾನೆ. ಮನುಷ್ಯ ಸಹಜ ಸ್ವಭಾವಗಳಂತೆಯೇ ಎಲ್ಲಾ ಜೀವಿಗಳ ಸ್ವಭಾವವು ಒಂದೇ ತೆರನಾಗಿರುತ್ತದಲ್ಲ ಎಂದು ಆಶ್ಚರ್ಯ!

ಈ ನಾಯಿಗಳು ಪಾರ್ಕಿನಲ್ಲಷ್ಟೇ ಅಲ್ಲ ದಾರಿಯಲ್ಲಿ ಎಲ್ಲೇ ಕಂಡರು ತಮ್ಮ ಸ್ನೇಹಿತರನ್ನು ಗುರುತಿಸುತ್ತವೆ. ನಾವು ನಡೆಯುತ್ತ ಪಾರ್ಕಿನ ಕಡೆಗೆ ಹೊರಟಾಗ ಕಾರಿನಲ್ಲಿ ಹೋಗುವ ಡಚ್ಚೆಸ್ ನಾಯಿ ಕೂರಾನನ್ನು ನೋಡಿ ಹೊರಗೆ ತಲೆ ಹಾಕಿ ಬೊಗಳುತ್ತದೆ. ಇದು ಪಾರ್ಕಿನ ಸ್ನೇಹಿತರ ಕಥೆಯಾದರೆ ಇಲ್ಲೇ ನಮ್ಮ ಮನೆಯ ಹಿತ್ತಲಿನಲ್ಲಿರುವ ನಾಯಿಗಳ ಸ್ನೇಹ ಇನ್ನೊಂದು ಕಥೆ. ನಮ್ಮ ಮನೆಯ ಅಕ್ಕಪಕ್ಕದ ಪ್ರತಿ ಮನೆಯಲ್ಲು ನಾಯಿ ಇದೆಯಾದ್ದರಿಂದ ಮಧ್ಯದಲ್ಲಿರುವ ಬೇಲಿಗಳಾಚೆಗೆ ಅವುಗಳ ಸ್ನೇಹದಾಟ ನಡೆಯುತ್ತಿರುತ್ತದೆ. ಒಂದು ಹೊರಗೆ ಬಂದರೆ ಸಾಕು ಉಳಿದವಕ್ಕು ಸಹ ತಾವು ಹೊರಗೆ ಹೋಗಬೇಕು ಎಂದು ಚಡಪಡಿಕೆ. ಒಂದು ಬೊಗಳಿದರೆ ಸಾಕು ಸುಮ್ಮನಿರುವ ಎಲ್ಲವು ಸಹ ಬೊಗಳಲು ಶುರು. ಯಾವುದಾದರು ಒಂದು ಊಳಿಡಲು ಶುರು ಮಾಡಿದರಂತು ಮುಗಿಯಿತು ಎಲ್ಲಾ ದಿಕ್ಕಿನಿಂದಲೂ ಕೇಳಿಸತೊಡಗುತ್ತದೆ. ನಮ್ಮ ಮನೆಯ ಪಕ್ಕದಲ್ಲಿವರು ನಾಯಿಯನ್ನು ಸದಾ ಹಿತ್ತಲಿನಲ್ಲಿಯೇ ಬಿಡುತ್ತಾರಾದ್ದರಿಂದ ಕೂರಾ ಆಗಾಗ ಹೋಗಿ ಬೇಲಿಯ ಹತ್ತಿರ ಕೂತು ಕುಂಯ್ಯ ಕುಂಯ್ಯ ಮಾಡುತ್ತ ಅದರೊಂದಿಗೆ ಸಂಭಾಷಿಸುತ್ತಾನೆ. ನಮ್ಮ ಮೇಲೆ ದೂರು ಹೇಳುತ್ತಿರುತ್ತಾನೆ ಎಂದು ನನಗನ್ನಿಸುತ್ತದೆ.

ನಾಯಿಗಳು ಪಾರ್ಕಿನಲ್ಲಿ ಮಾಡುವ ಆಟೋಪಗಳು ಅಷ್ಟಿಷ್ಟಲ್ಲ. ಒಂದು ದಿನ ಒಂದರ ಹಿಂದೊಂದರಂತೆ ತಲೆ ಕೆಟ್ಟು ಓಡುತ್ತಿದ್ದ ನಾಯಿಗಳು ಅತ್ತ ಮುಖ ಮಾಡಿ ಇನ್ನೊಬ್ಬರ ಜೊತೆಗೆ ಮಾತನಾಡುತ್ತ ನಿಂತಿದ್ದ ಅಜ್ಜನನ್ನು ಬೀಳಿಸಿ ಬಿಟ್ಟಿದ್ದವು. ಇನ್ನೊಂದು ದಿನ ನಿಯಾ ಎಂಬಾಕೆಯ ಮೇಲೆ ಕೂರಾ ಮೈ ಮೇಲೆ ಹತ್ತಿ ಅವರ ಉಗುರು ಪರಚಿ ಅವಳ ಕೈ ಮೇಲೆ ಗಾಯವಾಗಿ ಬಿಟ್ಟಿತ್ತು. ಒಮ್ಮೊಮ್ಮೆ ನಾಯಿಗಳು ಜಗಳಕ್ಕೆ ಇಳಿದು ಬಿಡುತ್ತವೆ. ಗುಂಪು ಕಟ್ಟಿಕೊಂಡು ಮೈ ಮೇಲೆ ರೋಷಾವೇಷ ಬಂದವರ ಹಾಗೆ ಎಗರಾಡುವ ಅವುಗಳ ಜಗಳ ಬಿಡಿಸುವ ಹೊತ್ತಿಗೆ ಪೋಷಕರಿಗೆ ಸಾಕಾಗಿ ಬಿಡುತ್ತದೆ. ಕೆಲವು ಪೋಷಕರು ಬಹಳ ಸ್ಟ್ರಿಕ್ಟ್ ಆಗಿರುತ್ತಾರೆ. ನಾಯಿಗಳನ್ನು ಬಹಳ ಸೂಕ್ಷ್ಮವಾಗಿ ಪೋಷಿಸುವ ಇವರು ಅವುಗಳ ಸ್ವಭಾವವನ್ನು ಅರ್ಥ ಮಾಡಿಕೊಳ್ಳದೇ ತೀರಾ ಕಾಳಜಿಯಲ್ಲಿ ಮುಟ್ಟಿದರೆ ಕರಗುವುದು ಎಂಬಂತೆ ವರ್ತಿಸುತ್ತಾರೆ. ಈ ರೀತಿ ಎಲ್ಲಾ ವಿಧಗಳನ್ನು ಪಾರ್ಕಿನಲ್ಲಿ ಕಾಣಬಹುದು.

ಟ್ಯೂಸಡೇ ಎಂಬಾಕೆ ತನ್ನ ನಾಯಿ ಸ್ಯಾಮಿಯನ್ನು ಕರೆದುಕೊಂಡು ಪ್ರತಿದಿನವು ಬರುತ್ತಾಳೆ. ಈ ಪಾರ್ಕಿಗೆ ಆಕೆ ಓಜಿ ಆದ್ದರಿಂದ ಅಲ್ಲಿ ಬರುವ ಎಲ್ಲರೂ ಅವಳಿಗೆ ಪರಿಚಿತರು. ಎಲ್ಲಾ ನಾಯಿಗಳನ್ನು ತನ್ನ ನಾಯಿಯಷ್ಟೇ ಪ್ರೀತಿಸುವ ಈಕೆ ಆಗಾಗ ಚೆಂಡು, ಟ್ರೀಟ್ ಇತ್ಯಾದಿಗಳನ್ನು ಕೊಟ್ಟು ನಾಯಿಗಳ ಫೇವರೆಟ್ ಆಗಿದ್ದಾಳೆ. ಬೆನ್ನು ತುಸು ಬಾಗಿರುವ ಇಳಿವಯಸ್ಸಿನ ಅಜ್ಜನೊಬ್ಬನಿದ್ದಾನೆ. ಬಿಳಿ ಕೂದಲಿನ ಪುಟಾಣಿ ನಾಯಿಯನ್ನು ಅದೆಷ್ಟು ಪ್ರೀತಿಸುತ್ತಾನೆಂದರೆ ಎಷ್ಟೇ ಚಳಿ, ಜೋರು ಗಾಳಿಯಿದ್ದರು ಅದರ ವಾಕಿಂಗ್ ತಪ್ಪುವುದಿಲ್ಲ. ಚಳಿಗಾಲದಲ್ಲಿ ಅವನು ತನ್ನ ನಾಯಿಗೆ ಬಣ್ಣ ಬಣ್ಣದ ಮುದ್ದಾದ ಸ್ವೆಟರುಗಳನ್ನು ಹಾಕುವುದನ್ನು ನೋಡುವುದೇ ಚೆಂದ. ಮತ್ತೊಬ್ಬಳು ಶೆರಿಲ್ ಎಂಬ ಬಾಯಿಬಡುಕಿ ಅಜ್ಜಿ. ಮರವನ್ನು ಸಹ ಮಾತನಾಡಿಸುವ ಶಕ್ತಿ ಇರುವ ಅವಳಿಗೆ ಎಲ್ಲಾರೂ ಸ್ನೇಹಿತರು. ಅವಳು ಬಂದರೆ ಸಾಕು ಪಾರ್ಕಿನಲ್ಲಿ ಪಾರ್ಟಿ ಆಗುತ್ತಿದೆಯೇನೋ ಎನ್ನುವ ಹಾಗೆ ಜೋರು ಮಾತು, ನಗು, ಗದ್ದಲ. ನಮ್ಮನ್ನು ಸಹ ಅಷ್ಟೇ ಹಚ್ಚಿಕೊಂಡಿರುವ ಶೇರಿಲ್ ನಮ್ಮನೆಗೆ ಗಣೇಶ ಚತುರ್ಥಿಗೆ ಬಂದು ಹೋಗುವಷ್ಟು ಆತ್ಮೀಯಳಾಗಿದ್ದಾಳೆ. ಹೀಗೆ ಕೂರಾನಿಂದಾಗಿ ನಮಗೆ ಹೊಸ ಪ್ರಪಂಚವೇ ದಕ್ಕಿದೆ.

ಮುಂದುವರೆಯುತ್ತದೆ…

(ಹಿಂದಿನ ಕಂತು: ಕಾರು ಪ್ರಯಾಣವೆಂದರೆ ಮೇಲೇಳುತ್ತವೆ ಕಿವಿಗಳು..)