ಪ್ರತಿದಿನ ಪ್ರಾಕ್ಟೀಸ್ ಇರುತ್ತಿತ್ತು. ನನ್ನನ್ನು ಒಂಭತ್ತು ಜನರ ಖೊಖೋ ತಂಡದಲ್ಲಿ ರನ್ನರ್‌ಗೆ ಮೂರನೆಯ ಬ್ಯಾಚ್‌ಗೆ ಕಳುಹಿಸುತ್ತಿದ್ದರು. ಮೊದಮೊದಲು ಮೂವತ್ತು ನಲವತ್ತು ಸೆಕೆಂಡ್‌ಗಳಲ್ಲಿ ಔಟಾಗುತ್ತಿದ್ದ ನಾನು ಕ್ರಮೇಣ ಆಟದ ಪಟ್ಟುಗಳನ್ನು ತಿಳಿದುಕೊಂಡು ಒಂದೊಂದೆ ಕಲಿಯುತ್ತಾ ಹೋದೆ. ದಿನಕಳೆದಂತೆ ಎರಡು ನಿಮಿಷ ಓಡುವಷ್ಟರ ಮಟ್ಟಿಗೆ ತರಬೇತಾದೆ. ಹಂತ ಹಂತವಾಗಿ ಆಡುತ್ತಾ ಮೊದಲನೆ ಬ್ಯಾಚ್‌ಗೆ ಶಿಫ್ಟಾದೆ. ಕೊನೆಗೆ ಗಂಡು ಮಕ್ಕಳ ಖೊಖೋ ಪಂದ್ಯಕ್ಕೆ ಕ್ಯಾಪ್ಟನ್ ಆಗುವಷ್ಟರಮಟ್ಟಿಗೆ ಪ್ರಾವೀಣ್ಯತೆ ಪಡೆದೆ. ಒಂದು ಅವಧಿಗೆ ಇರುವ ಏಳು ನಿಮಿಷದಲ್ಲಿ ಐದು ನಿಮಿಷ ಆಡಿಸಿದ್ದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

ಬಾಲ್ಯದಲ್ಲಿಯೆ ಪ್ರತ್ಯೇಕವಾದ ಮನಸ್ಥಿತಿ ನನ್ನದು. ಸುಲಭವಾಗಿ ಯಾರನ್ನೂ ಸ್ನೇಹಿತನನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ. ಅಥವಾ ನಾನೆ ಅಷ್ಟು ಸುಲಭವಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎಂದೇ ಹೇಳಬೇಕು. ಅದಕ್ಕೆ ಕಾರಣ ಗೊತ್ತಿಲ್ಲ; ಒಂದು ಹಂತದ ವಯಸ್ಸಿನವರೆಗೆ ಸಹಜವಾಗಿ ಆಟಪಾಠಗಳಲ್ಲಿ ಭಾಗವಹಿಸುತ್ತಿದ್ದ ನಾನು ಆಮೇಲೆ ಒಂಟಿಯಾಗಿರುತ್ತಿದ್ದದ್ದೆ ಹೆಚ್ಚು. ಅದೆ ಕಾರಣಕ್ಕೆ ಇರಬೇಕು; ಚಿಕ್ಕವಯಸ್ಸಿನಲ್ಲಿಯೆ ಪುಸ್ತಕಗಳನ್ನು ಓದುವುದಕ್ಕೆ ಪ್ರಾರಂಭಿಸಿದೆ. ಬಹುಶಃ ಮನೆಗೆ ನಮ್ಮಪ್ಪ ತರಿಸುತ್ತಿದ್ದ ಸುಧಾ, ಬಾಲಮಂಗಳದಂತಹ ಪುಸ್ತಕಗಳು ನನ್ನನ್ನು ಓದುವ ಹವ್ಯಾಸಕ್ಕೆ ತೊಡಗಿಸಿದವು ಅನಿಸುತ್ತದೆ.

ಓದುವುದರಲ್ಲಿ ನಾನು ಸಾಮಾನ್ಯವಾಗಿ ತರಗತಿಗೆ ಮೊದಲಿಗನಾಗಿರುತ್ತಿದ್ದೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಆಗಾಗ ಸಿನಿಮಾದ ಹಾಡುಗಳನ್ನು ಹೇಳುತ್ತಿದ್ದದ್ದು ಇದೆ. ಹಾಗಂತ ನನಗೆ ಅಹಂಕಾರವಿತ್ತು ಅಂತಲ್ಲ; ನನ್ನೊಳಗೆ ಬೆಳೆದ ಬಹುಕಾಲ ಕಾಡಿದ ಕೀಳರಿಮೆ ಕಾರಣವಿರಬಹುದು. ಅದು ನನ್ನ ಸೂಕ್ಷ್ಮಮತಿ ಬುದ್ದಿಯ ಕಾರಣವಿರಬಹುದು. ಸ್ವಲ್ಪಮಟ್ಟಿಗೆ ಮನೆಯಲ್ಲಿ ಉಂಟಾದ ಆರ್ಥಿಕ ಕಾರಣಗಳು ನನ್ನನ್ನು ಒಂಟಿಯಾಗಿಸಿದವು. ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆನಾದರೂ ಸಹಪಾಠಿಗಳೊಂದಿಗೆ ಬೆರೆಯುವುದು ಅಪರೂಪವಾಯಿತು. ಬಹುಶಃ ಅದಕ್ಕೆ ಜಾತಿಯಂಥ ಸಾಮಾಜಿಕ ಕಾರಣವಿದ್ದಿರಬಹುದು (ಇದೆ ಕಾರಣವೆಂದು ಖಚಿತವಾಗಿ ಹೇಳಲಾರೆ, ಅದು ನನ್ನ ಮನಸ್ಸಿನ ಭಾವನೆಯೂ ಇರಬಹುದು) ಮನೆಯಲ್ಲಿಯೆ ಹೆಚ್ಚು ಇರುತ್ತಿದ್ದೆ.

ಅದು ಏಳನೆಯ ತರಗತಿಯ ಕೊನೆಯ ವರ್ಷ. ಒಂದಿಷ್ಟು ಪ್ರಬುದ್ಧರಾಗಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಬಂದಿತ್ತು. ಆದ್ದರಿಂದ ಬಾಲ್ಯದಲ್ಲಿ ಆಡಿದಂತೆ ಆಡುತ್ತಿರಲಿಲ್ಲ. ಮನೆಯಲ್ಲಿಯೆ ಸ್ವಲ್ಪ ಅತಿಯಾಗಿ ಆಡಿದರೆ ಮುಂದಿನ ವರ್ಷ ಹೈಸ್ಕೂಲಿಗೆ ಹೋಗ್ತೀರಾ ಎಂಬ ಎಚ್ಚರಿಕೆಯ ಮಾತು ಆಗಾಗ ನಮ್ಮ ಶ್ರವಣಗಳಿಗೆ ಕೇಳಿಸುತ್ತಲೆ ಇರುತ್ತಿತ್ತು. ಆಟಗಳಲ್ಲಿ ನಾನು ಭಾಗವಹಿಸುತ್ತಿದ್ದದ್ದು ಕಡಿಮೆಯೇ. ಯಾಕೆಂದರೆ ಆಟಕ್ಕೆ ಬೇಕಾದ ದೇಹದಾರ್ಢ್ಯತೆ ನನ್ನದಾಗಿರಲಿಲ್ಲ. ನಾನು ಸಣಕಲು ದೇಹದವ, ಕಬ್ಬಡ್ಡಿಯಂತ ಆಟಗಳಂತೂ ನನ್ನಿಂದ ಬಹಳಷ್ಟು ದೂರ. ಅದರಲ್ಲಿ ಭಾಗವಹಿಸಿದರೆ ಅವಮಾನ ಗ್ಯಾರಂಟಿ ಎಂಬ ಭಾವನೆ ನನ್ನಲ್ಲಿ ಬೇರೂರಿತ್ತು. ಕೆಲವು ಸಂದರ್ಭಗಳಲ್ಲಿ ಈ ಕುರಿತು ಸಹಪಾಠಿಗಳು ಹೀಯಾಳಿಸುವುದು ನಗುವುದು ನಡೆದೆ ಇರುತ್ತಿತ್ತು. ಅವಾಗಲೆಲ್ಲಾ ಮನಸ್ಸಿಗೆ ನೋವಾಗುತ್ತಿತ್ತು. ನನಗೂ ಒಳ್ಳೆಯ ದೇಹವಿದ್ದರೆ ನಾನು ಎಲ್ಲರೊಂದಿಗೆ ಇನ್ನೂ ಜೋರಾಗಿ ಜಗಳವಾಡಬಹುದಿತ್ತೆನಿಸುತ್ತಿತ್ತು. ಆದರೆ ನಾನು ದಪ್ಪ ಆಗಲೇ ಇಲ್ಲ. ಮನೆಯಲ್ಲಿ ನನ್ನನ್ನು ಸಾಕುವುದಕ್ಕೆ ತುಂಬಾ ಕಷ್ಟಪಡುತ್ತಿದ್ದರು. ಹಾಗಂತ ನಾನು ಖಾಯಿಲೆಯ ಮನುಷ್ಯ ಖಂಡಿತ ಅಲ್ಲ. ನನಗೆ ಚಿಕ್ಕ ವಯಸ್ಸಿನಲ್ಲಿ ಜ್ವರದಂತಹ ಖಾಯಿಲೆ ಬಂದದ್ದು ನೆನಪೆ ಇಲ್ಲ. ತುಂಬಾ ಚಟುವಟಿಕೆಯಿಂದ ಇರುತ್ತಿದ್ದೆ. ಸ್ವಲ್ಪ ಓದಿದರೆ ಸಾಕು ನೆನಪಿನಲ್ಲಿರುತ್ತಿತ್ತು. ಬಹುಶಃ ಅದು ನನ್ನನ್ನು ಸೋಮಾರಿಯನ್ನಾಗಿ ಮಾಡಿತು ಅನಿಸುತ್ತದೆ. ಈಗಲೂ ಓದಿದ್ದನ್ನುಪದೆ ಪದೆ ಓದುವುದು ಕಡಿಮೆಯೇ. ಒಮ್ಮೆ ಓದಿದರೆ ಆ ಪುಸ್ತಕವನ್ನು ಮತ್ತೆ ಎಂದೂ ಓದುವುದಿಲ್ಲ. ಅಕಸ್ಮಾತ್ ಓದಬೇಕೆಂದೆನಿಸಿದರೆ ಅಲ್ಲಲ್ಲಿ ಇಷ್ಟವಾದ ಭಾಗಗಳನ್ನು ಓದುತ್ತೇನೆ. ಮತ್ತೆ ವಿಷಯಕ್ಕೆ ಬರುತ್ತೇನೆ.

ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಆಗಾಗ ಸಿನಿಮಾದ ಹಾಡುಗಳನ್ನು ಹೇಳುತ್ತಿದ್ದದ್ದು ಇದೆ. ಹಾಗಂತ ನನಗೆ ಅಹಂಕಾರವಿತ್ತು ಅಂತಲ್ಲ; ನನ್ನೊಳಗೆ ಬೆಳೆದ ಬಹುಕಾಲ ಕಾಡಿದ ಕೀಳರಿಮೆ ಕಾರಣವಿರಬಹುದು. ಅದು ನನ್ನ ಸೂಕ್ಷ್ಮಮತಿ ಬುದ್ದಿಯ ಕಾರಣವಿರಬಹುದು. ಸ್ವಲ್ಪಮಟ್ಟಿಗೆ ಮನೆಯಲ್ಲಿ ಉಂಟಾದ ಆರ್ಥಿಕ ಕಾರಣಗಳು ನನ್ನನ್ನು ಒಂಟಿಯಾಗಿಸಿದವು. ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದೆನಾದರೂ ಸಹಪಾಠಿಗಳೊಂದಿಗೆ ಬೆರೆಯುವುದು ಅಪರೂಪವಾಯಿತು

ಪ್ರತಿವರ್ಷದಂತೆ ಆ ವರ್ಷವೂ ಹೋಬಳಿಮಟ್ಟದ ಕ್ರೀಡಾಕೂಟಕ್ಕೆ ಹೋಗಬೇಕಾಗಿರುವುದರಿಂದ ತಂಡಗಳ ಆಯ್ಕೆ ಮಾಡುತ್ತಿದ್ದರು. ಕ್ರೀಡೆಯಲ್ಲಿ ನಮ್ಮ ಶಾಲೆ ಹೋಬಳಿಯಲ್ಲಿಯೆ ಹೆಸರುಮಾಡಿತ್ತು. ಹಾಗಾಗಿ ಶಿಕ್ಷಕರು ಪ್ರತಿವರ್ಷವೂ ತಂಡಗಳನ್ನು ಆಯ್ಕೆ ಮಾಡುತ್ತಿದ್ದರು. ಅದರಲ್ಲಿಯೂ ಖೊಖೋ ಆಟಕ್ಕೆ ಹೆಚ್ಚು ಪ್ರಾಮುಖ್ಯತೆ ಮತ್ತು ಅದರ ಕ್ರೇಜ್ ಬಹಳವಿತ್ತು. ಸಾಮಾನ್ಯವಾಗಿ ಪ್ರತಿ ಊರಿನ ಅರ್ಧಜನರು ಕ್ರೀಡಾಕೂಟ ಮುಗಿಯುವವರೆಗೂ ಆ ಸ್ಥಳದಲ್ಲಿಯೇ ಇರುತ್ತಿದ್ದರೂ ಜಗಳವಾದರಂತೂ ಜಾತ್ರೆಯಂತೆ ಜನ ಸೇರುತ್ತಿದ್ದರು ಈಗ ಹಾಗೆ ಸೇರುವುದು ಕಡಿಮೆಯೆ. ನಾನು ರನ್ನಿಂಗ್ ರೇಸ್‌ ಸೇರುತ್ತಿದ್ದದ್ದು ಕಡಿಮೆಯೆ. ಹೈಜಂಪಲ್ಲಿ ಭಾಗವಹಿಸಿದ್ದೆ; ಸೆಕೆಂಡ್ ಪ್ರೈಸ್ ಬಂದಿತ್ತು. ನನ್ನ ದೇಹ ತೆಳ್ಳಗಿದ್ದುದರಿಂದ ಹೇಗೊ ಎಗರುತ್ತಿದ್ದೆ. ನಮ್ಮ ಏಳನೆಯ ತರಗತಿಯಲ್ಲಿ ಇದ್ದದ್ದೆ ಹದಿನೈದೊ ಹದಿನಾರೊ ವಿದ್ಯಾರ್ಥಿಗಳು. ಅದರಲ್ಲಿಯೂ ಖೊಖೋ ಆಟಕ್ಕೆ ಈ ತರಗತಿಯ ಮಕ್ಕಳೆ ಹೆಚ್ಚು ಭಾಗವಹಿಸಬೇಕು. ನನ್ನನ್ನಂತೂ ತಗೋಳಲ್ಲ. ಯಾಕಂದ್ರೆ ರನ್ನಿಂಗ್ ಮಾಡಲು ಬರಲ್ಲ… ನಾನೊ ಸಣಕಲು ದೇಹದವ ಅಂದುಕೊಂಡರೆ ನನ್ನನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದರು. ನಮ್ಮದೆ ಶಾಲೆಯ ಸೀನಿಯರ್ಸ್‌ಗಳೆ ನಮಗೆ ಟ್ರೈನರ್‌ಗಳು ಕೆಲವರಿಗೆ ನನ್ನನ್ನು ಕಂಡರೆ ಆಗುತ್ತಿರಲಿಲ್ಲ. ಯಾಕೆ ಅಂತ ನಮ್ಮಪ್ನಾಣೆ ಇವತ್ತಿಗೂ ಗೊತ್ತಿಲ್ಲ.

ನಾನು ಯಾರೊಂದಿಗೂ ಹೆಚ್ಚು ಜಗಳ ಮಾಡುತ್ತಿದ್ದವನಲ್ಲ. ಮಾತನಾಡುವುದೂ ಕಮ್ಮಿಯೆ. ಅದು ಮುಂದೆ ಹೈಸ್ಕೂಲ್ಗೆ ಹೋಗ್ತೀವಿ ಅನ್ನೊ ಭಾವನೆಯಿಂದಲೊ ಏನೊ ಒಂದಿಷ್ಟು ದೊಡ್ಡವನಾದಂತೆ ಒಬ್ಬನೆ ಇರಲು ಇಷ್ಟಪಡುತ್ತಿದ್ದೆ. ಹಾಗಾಗಿ ನನ್ನನ್ನ ಗೊಣಗಿಕೊಂಡೆ ಸೇರಿಸಿಕೊಂಡರು. ಪ್ರತಿದಿನ ಪ್ರಾಕ್ಟೀಸ್ ಇರುತ್ತಿತ್ತು. ನನ್ನನ್ನು ಒಂಭತ್ತು ಜನರ ಖೊಖೋ ತಂಡದಲ್ಲಿ ರನ್ನರ್‌ಗೆ ಮೂರನೆಯ ಬ್ಯಾಚ್‌ಗೆ ಕಳುಹಿಸುತ್ತಿದ್ದರು. ಮೊದಮೊದಲು ಮೂವತ್ತು ನಲವತ್ತು ಸೆಕೆಂಡ್‌ಗಳಲ್ಲಿ ಔಟಾಗುತ್ತಿದ್ದ ನಾನು ಕ್ರಮೇಣ ಆಟದ ಪಟ್ಟುಗಳನ್ನು ತಿಳಿದುಕೊಂಡು ಒಂದೊಂದೆ ಕಲಿಯುತ್ತಾ ಹೋದೆ. ದಿನಕಳೆದಂತೆ ಎರಡು ನಿಮಿಷ ಓಡುವಷ್ಟರ ಮಟ್ಟಿಗೆ ತರಬೇತಾದೆ. ಹಂತ ಹಂತವಾಗಿ ಆಡುತ್ತಾ ಮೊದಲನೆ ಬ್ಯಾಚ್‌ಗೆ ಶಿಫ್ಟಾದೆ. ಕೊನೆಗೆ ಗಂಡು ಮಕ್ಕಳ ಖೊಖೋ ಪಂದ್ಯಕ್ಕೆ ಕ್ಯಾಪ್ಟನ್ ಆಗುವಷ್ಟರಮಟ್ಟಿಗೆ ಪ್ರಾವೀಣ್ಯತೆ ಪಡೆದೆ. ಒಂದು ಅವಧಿಗೆ ಇರುವ ಏಳು ನಿಮಿಷದಲ್ಲಿ ಐದು ನಿಮಿಷ ಆಡಿಸಿದ್ದೆ. ಎದುರಾಳಿ ತಂಡದವರು ಆ ಹುಡ್ಗ ಚೆನ್ನಾಗಿ ಆಡುತ್ತಾನೆ, ಆತನನ್ನು ಬಿಟ್ಟು ಬೇರೆಯವರನ್ನು ಔಟ್ ಮಾಡಿ ನಂತರ ಆತನನ್ನು ಔಟ್ ಮಾಡುವಿರಂತೆ ಎಂದುಹೇಳುವಷ್ಟರ ಮಟ್ಟಿಗೆ ಹೆಸರಾದೆ ಎಂಬುದೆ ನನಗೂ ಖುಷಿ. ಹೋಬಳಿಮಟ್ಟದ ಕ್ರೀಡೆಯಲ್ಲಿ ಚೆನ್ನಾಗಿ ಆಟವಾಡಿ ಫೈನಲ್ ವರೆಗೂ ಹೋಗಿದ್ದು ನೆನಪಿಸಿಕೊಂಡರೆ ಇವತ್ತಿಗೂ ಖುಷಿಯಾಗುತ್ತದೆ. ನಂತರದ ದಿನಗಳಲ್ಲಿ ಅದು ನನ್ನಲ್ಲಿ ಒಂದಿಷ್ಟು ಆತ್ಮವಿಶ್ವಾಸವನ್ನು ಮೂಡಿಸಿತ್ತು. ಯಥಾಪ್ರಕಾರ ಓದುವುದರಲ್ಲಿ ಯಾವಾಗಲೂ ಮುಂದೆಯೇ. ಆದರೆ ಈ ಸಣಕಲು ದೇಹ ಮತ್ತು ಒಂಟಿತನ ಬಹಳದಿನಗಳವರೆಗೂ ನನ್ನನ್ನು ಕಾಡಿತ್ತು.

ಇನ್ನೊಂದು ಪ್ರಸಂಗವನ್ನು ಹೇಳಲೆಬೇಕು; ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಷಣಗಳಲ್ಲಿ ಪ್ರಬಂಧ ಬರೆಯುವುದರಲ್ಲಿ ಸಾಮಾನ್ಯವಾಗಿ ನನ್ನ ಹೆಸರು ಇರುತ್ತಿತ್ತು. ಅದು ಎಷ್ಟುದ್ದದ ಪ್ರಬಂಧವಾದರೂ ಓದಿ ಮನನ ಮಾಡಿಕೊಂಡು ಗುಂಡಾಗಿ ಬರೆಯುತ್ತಿದ್ದೆ. ಸಾಮಾನ್ಯವಾಗಿ ಬಹುಮಾನ ಬರುತ್ತಿತ್ತು. ಒಮ್ಮೆ ಮಾತ್ರ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಮೈರಾಡ ಅನ್ನೋ ಎನ್ ಜಿ ಓ ದಿಂದ ಶಿಕ್ಷಕರಾಗಿ ಬಂದಿದ್ದ ಶಿಕ್ಷಕರೊಬ್ಬರು (ಬಹುಶಃ ರಾಜಪ್ಪ ಮೇಷ್ಟ್ರು ಅಥವಾ ಹನುಮಂತರಾಯಪ್ಪ ಮೇಷ್ಟ್ರು) ನನಗೆ ಗಾಂಧೀಜಿ ಚಿತ್ರ ಬರೆಯುವುದನ್ನು ಒಂದೆ ದಿನದಲ್ಲಿ ಹೇಳಿಕೊಟ್ಟಿದ್ದರು. ನಾನು ಅದನ್ನು ಚೆನ್ನಾಗಿ ಅಭ್ಯಾಸ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಾನು ಚಿತ್ರ ಚೆನ್ನಾಗಿ ಬಿಡಿಸಿದ್ದೆನಾದರೂ ಅದಕ್ಕೆ ಪೇಂಟಿಂಗ್ ಮಾಡಿರಲಿಲ್ಲ. ಪೆನ್ಸಿಲ್‌ನಲ್ಲಿ ಬಿಡಿಸಿದ್ದ ಚಿತ್ರ ತೀರ್ಪುಗಾರರ ಮೆಚ್ಚುಗೆ ಪಡೆದಿತ್ತು. ಇನ್ನೊಬ್ಬನು ಗಾಂಧಿ ಚಿತ್ರ ಬಿಡಿಸಿದ್ದ. ಆದರೆ ಅದಕ್ಕೆ ಕಲರ್ ತುಂಬಿದ್ದ. ನನ್ನ ಗಾಂಧಿ ಕಪ್ಪು ಬಿಳುಪಿನ ಗಾಂಧಿ ಹಾಗಾಗಿ ಮೊದಲನೆ ಪ್ರೈಸ್ ಬರಲಿಲ್ಲ. ಎರಡನೆಯ ಪ್ರೈಸ್‌ ನನ್ನದೆ ಚಿತ್ರಕ್ಕೆ ಬರಬೇಕಾಗಿತ್ತು. ಅದಕ್ಕಾಗಿ ವಾಗ್ವಾದವೂ ನಡೆಯಿತು ಎಂದು ನೆನಪು. ಕೊನೆಗೆ ತೀರ್ಪುಗಾರರ ತಂಡದಲ್ಲಿದ್ದ ಶಿಕ್ಷಕರ ಶಾಲೆಯ ವಿದ್ಯಾರ್ಥಿಗೆ ಅದನ್ನು ಕೊಡಲಾಗಿತ್ತು (ಇವತ್ತಿಗೂ ಬಹುತೇಕ ಪ್ರತಿಭಾ ಸ್ಪರ್ಧೆಗಳಲ್ಲಿ ಹೀಗೆ ನಡೆಯುತ್ತದೆ) ನನಗೆ ಪ್ರೈಸ್ ಬರುತ್ತದೆ ಎಂದುಕೊಂಡವನಿಗೆ ನಿರಾಸೆ ಕಾದಿತ್ತು. ಕೊನೆಗೆ ತೃತೀಯ ಬಹುಮಾನ ಕೊಡಲಾಯಿತು. ಅದಕ್ಕೆ ಇಪ್ಪತ್ತು ರೂಪಾಯಿ ಬಹುಮಾನವಾಗಿ ಕೊಟ್ಟಿದ್ದರು ಅಂತ ಕಾಣುತ್ತದೆ. ಇವತ್ತಿಗೂ ನನಗೆ ಆ ಕಪ್ಪು ಬಿಳುಪಿನ ಗಾಂಧಿ ಚಿತ್ರ ಸ್ಮೃತಿ ಪಟಲದಲ್ಲಿ ಅಚ್ಚೊತ್ತಿದೆ.

ಬದುಕಿನುದ್ದಕ್ಕೂ ಇಂತಹ ಹಲವಾರು ನಿರಾಸೆಗಳು ನನ್ನನ್ನು ಕಾಡಿವೆ. ಬದುಕುವ ಛಲವನ್ನು ಇನ್ನಷ್ಟು ಹೆಚ್ಚಿಸಿವೆ. ಸಾಮಾನ್ಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾನು ತಪ್ಪದೇ ಭಾಗವಹಿಸುತ್ತಿದ್ದೆ, ಏಕಪಾತ್ರಾಭಿನಯ ಮಾಡುತ್ತಿದ್ದದ್ದು ಉಂಟು. ಒಮ್ಮೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನನಗೆ ಏಕಲವ್ಯ ಪಾತ್ರ ಕೊಟ್ಟಿದ್ದರು. ಮೆರವಣಿಗೆ ಸಂದರ್ಭದಲ್ಲಿ ಆ ಪಾತ್ರದ ವೇಷಧಾರಿಗಳು ವೇಷ ತೊಟ್ಟುಕೊಂಡೆ ಊರಿನ ತುಂಬ ಮೆರವಣಿಗೆಯಲ್ಲಿ ಭಾಗವಹಿಸಬೇಕಾಗಿತ್ತು. ಅದಕ್ಕೆ ಕಾಸ್ಟ್ಯೂಮ್ ಎಲ್ಲಿ ತರುವುದು. ಅದರಿಂದ ಶಿಕ್ಷಕರೆ ಹದ್ದಿನ ಪುಕ್ಕಗಳನ್ನು ಸೇರಿಸಿ ನೋಟ್ ಬುಕ್ಕಿನ ರಟ್ಟಿನಿಂದ ಒಂದು ಕಿರೀಟ ಮಾಡಿದ್ದರು. ಅದೆ ವರ್ಷ ನಮ್ಮ ಅಕ್ಕನ ಮದುವೆಯ ಸಿದ್ಧತೆಯೂ ನಡೆದಿತ್ತು. ಆ ಮದುವೆಗೆ ಇನ್ನು ಕಾಲಾವಕಾಶ ಇದ್ದಿದ್ದರಿಂದ ಅಕ್ಕನ ಮದುವೆಗೆ ತಂದಿದ್ದ ಸೀರೆಯಲ್ಲಿಯೆ ಒಂದು ಹಳದಿಬಣ್ಣದ, ಚಿತ್ರಗಳಿರುವ ಸೀರೆಯನ್ನು ನನಗೆ ಕಚ್ಚೆಯಂತೆ ಹಾಕಿದ್ದರು. ಇನ್ನು ಕೆಲವರಿಗೆ ಬೇರೆ ಪಾತ್ರಗಳನ್ನು ನೀಡಿ ಅವರಿಗೂ ವೇಷವನ್ನು ಹಾಕಿ ಮೆರವಣಿಗೆ ಮಾಡಲಾಗಿತ್ತು. ಅದು ಇಡೀ ಊರಿನ ಗಮನವನ್ನು ಸೆಳೆದಿತ್ತು. ಏಕಲವ್ಯನ ಪಾತ್ರವನ್ನು ಅಭಿನಯಿಸಲಾಗಿತ್ತು. ಅದನ್ನು ಅನೇಕರು ಮೆಚ್ಚಿದ್ದರು. ಇಂತಹ ಅನೇಕ ಪ್ರಸಂಗಗಳು ನನ್ನನ್ನು ಬೆಳೆಸಿವೆ. ಅನೇಕ ಶಿಕ್ಷಕರುಗಳು ನೀಡಿದ ಅಕ್ಷರದ ಅರಿವು ಬದುಕಿನ ತಿಳಿವಿಗೆ ಕಾರಣವಾಗಿದೆ ಮತ್ತೆ ಮತ್ತೆ ಬಾಲ್ಯ ನೆನಪಾಗುತ್ತಲೆ ಇರುತ್ತದೆ ಅದರ ಜೊತೆಗೆ ನಡೆದವರು ಕೂಡಾ….

(ಮುಂದುವರಿಯುವುದು…)