ಅಹಲ್ಯೆಯು ಶಿಲೆಯಾಗಿರಲಿಲ್ಲವೆ?

ಅರೆಯುವ ಕಲ್ಲು
ರುಬ್ಬುವ ಕಲ್ಲು,
ಕಡೆಯುವ ಕಲ್ಲು,
ಇನ್ನೂ ಬೇಕೇನು ಬೇರೆ ಹೆಸರು?
ಸಪಾಟಾದ ಇದರ ನೆತ್ತಿಗೊಂದು
ಕೈ ಇಟ್ಟು ಗಸ್ತು ಹೊಡೆಯುವ
ಇದರ ಸುಸ್ತಿಗೆ
ಸೋತು ಬಿಡಲಾರಳು ಅವಳು!
ಕಲ್ಲನ್ನೇ ಸೋಲಿಸಿ
ಒಳಸೆಲೆಯ ಭರವಸೆಯ ಬೆಳಕಿಗೆ
ಕುಂತಲ್ಲೇ ಕಂದೀಲು ಹಿಡಿಯುವಳು.

ಬಿದ್ದ ಪದಾರ್ಥಗಳೆಲ್ಲ ಇಲ್ಲಿ
ರುಬ್ಬಿದಷ್ಟು ನುಣ್ಣಗಾಗುತ್ತದೆ.
ಅಕ್ಕಿ,
ಕಾಯಿ,
ಮನಸ್ಸು
ಎಲ್ಲದಕ್ಕೂ ಅರೆದಷ್ಟು
ಇನ್ನೂ ಹದವಾಗುವ ಬಯಕೆ.

ಇತ್ತೀಚೆಗೆ ಈ ಕಲ್ಲೇಕೋ
ಎದೆಗೆ ಮತ್ತಷ್ಟು ಸೆಳೆದುಕೊಳ್ಳುತ್ತಿದೆ….
ಬೇಕಾದಕ್ಕಿಂತ ಹೆಚ್ಚೇ ನುಣುಪು
ಮಾಡಿಬಿಡುತ್ತದೆಯೋ
ಎನ್ನುವ ಆತಂಕ
ಬಿದ್ದ ಬೆನ್ನಲ್ಲೇ
ತೊಳೆಯುವ ಭಯ!

ಮಿರ ಮಿರ ಮಿಂಚುವ
ನುಣ್ಣಗಿನ ಗುಂಡಗಿನ
ಅಂದದ ಈ ಕಲ್ಲಿಗೆ
ಲೋಕ ಕಂಡ ಮಾತೆಯರ
ಮನಸ್ಸೆಲ್ಲ ತಿಳಿದೂ
ಗುಟ್ಟನಡಗಿಸಿ ಬುದ್ಧನಂತಿದೆ!
ಅಹಲ್ಯೆಯು ಒಂದೊಮ್ಮೆ ಶಿಲೆಯಾಗಿರಲಿಲ್ಲವೆ?

ಅರಿಯುವ ಮುನ್ನವೇ
ಅರೆಯುವುದರೊಂದಿಗೆ
ಅರೆಯಿಸಿಕೊಂಡ ಮೃದು ಹೂವು,
ಹೂವಿನಂತೆಯೆ ಹಗುರ ಬದುಕು
ಎಂಬ ಭ್ರಮೆಯಲ್ಲಿಯೆ
ದಿನಕೊಂದಾವರ್ತಿ
ಎರಡಾವರ್ತಿ
ಹುಕಿ ಬಂದರೆ ಮೂರಾವರ್ತಿಯು
ಅರೆಯುವ ಅವಳು
ಹೂವು ಕಲ್ಲಿನ ಸಮಾಗಮ ಕಂಡ
ಈ ಶತಮಾನದ ಹೆಣ್ಣು.

ಹೂ ಮಾಲೆಯ ಬಾಲೆ

ನಡೆದಷ್ಟು ಮುಗಿಯದ ಹಾದಿ
ಹೋಗುವುದಾದರೂ ಎಲ್ಲಿಗೆ?
ಹೆಜ್ಜೆ ಮುಗಿದರು ಹಾದಿ ಮುಗಿಯದ
ಧಾವಂತದ ಸರದಿ….

ಭಯ ಹುಟ್ಟಿಸುವಂತೆ
ಭುರ್ರನೆ ನಾಗಾಲೋಟದಿ ಹೀಗೆ ಸಾಗುವ
ಕಾರುಗಳ ಕಾರುಬಾರು ಎಂತಹುದೋ !?
ದಿಗಿಲೊಳಗೆ ಎಲ್ಲವೂ ಪ್ರಶ್ನೆಗಳೇ…
ಉತ್ತರವಿಲ್ಲ ಎಲ್ಲವೂ ಅತೀತ

ಎಡೆಬಿಡದೆ ಸಾಗುವ
ಇವರೆಲ್ಲ ಹೋಗುತ್ತಿಲ್ಲವೇ
ಅಂದರೆ ಬರುತ್ತಿರುವರೇ
ಅದಾದರೂ ಎಲ್ಲಿಗೆ?
ಮುಗಿಯದ ಹಾದಿಯಿದ್ದರು
ನಮಗೆಲ್ಲಿಗೂ ಹೋಗಲೇ ಇರುವುದಿಲ್ಲವಲ್ಲ?
ದಾರಿಗುಂಟ ಸಾಗುವ
ತೀರದ ದಾಹದ ಕಣ್ಣು ನೋಡುವ
ಮತ್ತದೇ ಉತ್ತರವಿಲ್ಲದ ಪ್ರಶ್ನೆಗಳು.

ಮುಗಿಯದ ಹಾದಿಯ
ಗಿಜಿಗಿಡುವ ಲೋಕ ಸಾಗಾಟದಿ
ಹಾದಿ ಬದಿ ನಿಂತ
ದೊಡ್ಡ ಕನಸಿನ ಸಣ್ಣ ಕೂಸಿನ
ಪುಟ್ಟ ಕೈಯ್ಯೊಳಗಿನ ಮೃದು ಹೂಮಾಲೆ
ನಲುಗುವ ಮುನ್ನ
ಸಾರ್ಥಕವಾಗಲಿ ಬದುಕ ಪಯಣ.