ರಸ್ತೆಯಲ್ಲಿ ಎಲ್ಲಾ ಮಕ್ಕಳು ಆಟವಾಡುತ್ತಿದ್ದರೆ ಇವನು ಒಳಗೆ ಕುಳಿತು ಕಿಟಕಿಯಿಂದ ನೋಡಿ ಸಂಭ್ರಮಿಸುತ್ತಿದ್ದ. ಇದನ್ನೆಲ್ಲಾ ಇವನು ಕಣ್ಣಾರೆ ಕಂಡರೆ ನಾನು ಆಟದ ಬಯಲಿಗೆ ಹೋಗಬೇಕು, ಆಟವಾಡಬೇಕು ಎಂದು ಹಠ ಮಾಡುವನೆಂದು ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿದೆವು. ನಾಲ್ಕು ಗೋಡೆಗಳ ನಡುವೆ ಬದುಕಿದ ಇವನಿಗೆ ಮೂರು ನಾಲ್ಕು ವರ್ಷವಾದರೂ ಹೊರ ಜಗತ್ತಿನ ಪರಿಚಯವಾಗಲಿಲ್ಲ. ಜನರ ಸಂಪರ್ಕವಂತೂ ಮರೀಚಿಕೆಯಾಯಿತು. ಇಂದು ಇವನ ಬೆಳವಣಿಗೆ ಮೇಲೆ ಈ ಥರನಾದ ಪರಿಣಾಮ ಬೀರಲು ಕಾರಣವಾಗಿ ಅವನಿಗೆ ಲೋಕಜ್ಞಾನ, ಸಾಮಾಜಿಕ ಬದುಕಿನಲ್ಲಿ ವ್ಯವಹಾರ ಬುದ್ಧಿ ಬೆಳೆಯಲಿಲ್ಲ ಎಂದರು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಅಂದು ತರಗತಿ ಪ್ರವೇಶಿಸಿ ಹಾಜರಾತಿ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಹಾಜರಾತಿಯಲ್ಲಿನ ಒಂದೊಂದೇ ಹೆಸರು ಕೂಗುತ್ತಾ ಹೋದಂತೆ ರಾಜು ಎಂಬ ವಿದ್ಯಾರ್ಥಿಯ ಹೆಸರು ಬಂತು. ಅವನು ಹಾಜರಾತಿ ಹೇಳಲಿಲ್ಲ. ನಾನು ಅತ್ತಿತ್ತ ಕತ್ತನ್ನು ಹೊರಳಿಸಿದೆ. ಕಂಗಳು ಅವನನ್ನು ಹುಡುಕತೊಡಗಿದವು. ಎಂದೂ ಶಾಲೆಗೆ ಗೈರು ಹಾಜರಾಗದ, ಶಾಲೆಗೆ ತಡವಾಗಿಯೂ ಬಾರದ ರಾಜು ಅಂದು ಶಾಲೆಗೆ ಬಂದಿರಲಿಲ್ಲ. ನಾನು ಏನಾಗಿರಬಹುದು ಎಂದು ಆಲೋಚಿಸುತ್ತಾ ಉತ್ತರದ ನಿರೀಕ್ಷೆಯಲ್ಲಿ ಮಕ್ಕಳೆಡೆಗೆ ನೋಟ ಬೀರಿದೆ. ಮಕ್ಕಳಿಗಿರುವ ವಿಶಿಷ್ಟ ಶಕ್ತಿ ಎಂದರೆ ಟೀಚರ್ ಮನಸೊಳಗಿನ ಪ್ರಶ್ನೆ ಕೇವಲ ಮುಖ ಚರ್ಯೆಯಿಂದಲೇ ಅರಿಯುವರು. ಒಮ್ಮೊಮ್ಮೆ ಸೈಕಾಲಜಿಯನ್ನು ಓದಿರುವವರು ನಾವಾ ಅಥವಾ ನಮ್ಮ ವಿದ್ಯಾರ್ಥಿಗಳಾ? ಎಂದು ನಾವು ಅಚ್ಚರಿ ಪಟ್ಟರೂ ಆಶ್ಚರ್ಯವಿಲ್ಲ.

ಅಂತೂ ನನ್ನ ದೃಷ್ಟಿ ಮಾತ್ರದಿಂದಲೇ ಪ್ರಶ್ನೆಯನ್ನು ಅರಿತ ಮಕ್ಕಳು ಮಿಸ್ ರಾಜುವಿಗೆ ಜ್ವರ ಅಂತೆ ಶಾಲೆಗೆ ಬರಲ್ಲ ಎಂದರು. ಅದು ಚಳಿಗಾಲದ ದಿನವಾದ್ದರಿಂದ ಚಳಿ- ಜ್ವರ ಆ ದಿನಗಳಲ್ಲಿ ಸಹಜವೆಂದು ಸುಮ್ಮನಾದೆ.

ಮಾರನೆಯ ದಿನ ರಾಜು ಶಾಲೆಗೆ ಬಂದಿರಲಿಲ್ಲ. ಅವನು ಓದಿನಲ್ಲಿ ಹೇಳಿಕೊಳ್ಳುವಂತಹ ಜಾಣನಲ್ಲದಿದ್ದರೂ, ಶಾಲೆಯಲ್ಲಿ ಎಲ್ಲ ಶಿಕ್ಷಕರಿಗೆ, ಮಕ್ಕಳಿಗೆ ಅವನೆಂದರೆ ಇಷ್ಟ. ಅದಕ್ಕೆ ಕಾರಣ ಅವನ ಮಗುವಿನಂತಹ ಮನಸ್ಸು, ಮುಗ್ಧತೆ, ಸೌಮ್ಯ ಹಾಗೂ ಸರಳ ಸ್ವಭಾವ. ಅವನ ವಯಸ್ಸಿಗೆ ತಕ್ಕಷ್ಟು ಬುದ್ಧಿವಂತನಲ್ಲ ಎಂದು ಅವನನ್ನು ನೋಡಿದವರಿಗೂ, ಆತನೊಂದಿಗೆ ಮಾತನಾಡಿದವರಿಗೂ ಸಹಜವಾಗಿ ತಿಳಿಯುತ್ತಿತ್ತು.

ಮುಂದಿನ ದಿನವೂ ರಾಜು ಶಾಲೆಗೆ ಬಂದಿರಲಿಲ್ಲ. ನಾನು ಇತರ ವಿದ್ಯಾರ್ಥಿಗಳನ್ನು ಕುರಿತು “ಏನ್ರೋ, ಮಕ್ಕಳಾ… ರಾಜುನಾ ಎಲ್ಲಿಗೆ ಕಳಿಸಿದ್ರಿ, ಅವನನ್ನು ಏನಾದರೂ ಆಸ್ಪತ್ರೆಗೆ ಅಡ್ಮಿಟ್ ಮಾಡಿಬಿಟ್ರಾ” ಎಂದು ತಮಾಷೆಗೆ ಕೇಳಿದೆ. ಅಷ್ಟರಲ್ಲಿ “ಹೌದು ಮಿಸ್, ಅವನನ್ನು ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಡ್ಮಿಟ್ ಮಾಡಬೇಕು ಅಂದರಂತೆ. ಅವನೀಗ ಆಸ್ಪತ್ರೆಯಲ್ಲಿ ಇದ್ದಾನೆ” ಅಂತ ತರಗತಿಯ ಮೂಲೆಯಿಂದ ದನಿಯೊಂದು ಹಾರಿ ಬಂದು ಚಳಿಯಿಂದ ಮುದುಡಿ ಕುಳಿತಿದ್ದ ನನ್ನ ಕಿವಿಗಳನ್ನ ನೆಟ್ಟಗೆ ನಿಲ್ಲಿಸಿತು.

ಬೇಸಿಗೆ ಬಂತೆಂದರೆ ಸಾಕು, ಬಿಸಿಲಿನ ತಾಪಕ್ಕೆ ಮಕ್ಕಳು ಹುಷಾರು ತಪ್ಪಿ ಶಾಲೆ ತಪ್ಪಿಸುತ್ತಾರೆ. ಮಳೆಗಾಲ ನೆಗಡಿ, ಕೆಮ್ಮು, ಜ್ವರ ಹೊತ್ತು ತರುತ್ತದೆ. ಇನ್ನೂ ಚಳಿಗಾಲ ಬಂತೆಂದರೆ ಸಾಕಪ್ಪ ಸಾಕು ಈ ಚಳಿ ಅನಿಸುವಷ್ಟು ಬೇಸರ ತರಿಸುತ್ತದೆ. ಯಾವ ಕಾಲ ಸರಿಯೋ ಎಂದು ಗೊಣಗೊತ್ತಾ ನಾನು ಕೆ ಎಸ್ ಎನ್ ಅವರ ಕವಿತೆಯನ್ನು ನೆನಪಿಸಿಕೊಂಡು ಪಾಠ ಪ್ರಾರಂಭಿಸಿದೆ.

ಊಟ ಬಡಿಸಲು ಬಂದ ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿ, “ಮೇಡಂ ರಾಜುಗೆ ಚಳಿ ಜ್ವರ ಬಿಡುತ್ತಿಲ್ಲವಂತೆ, ಅವನನ್ನ ದೊಡ್ಡಾಸ್ಪತ್ರೆಗೆ ಸೇರಿಸಿದ್ದಾರೆ. ಪಾಪ ಏನು ತಿಳಿಯದ ಪಾಪದ ಕೂಸದು, ನೋವಾದರೂ ಹೇಳುವುದಿಲ್ಲ, ಹಸಿವಾದರೂ ಗೊತ್ತಾಗಲ್ಲ. ನೋಡಿದರೆ ಕರುಳು ಕಿತ್ತು ಬರುತ್ತೆ ಅಂದರು. ಅವರ ಮಾತು ಕೇಳಿ ಅವರ ಮನಸಿನೊಳಗಿರುವ ಅಂತಃಕರಣಕ್ಕೆ ನಾನು ಮಾರುಹೋದೆ. ಅವರು ನನಗೆ ಕೇವಲ ಅಡಿಗೆ ಸಿಬ್ಬಂದಿಯಾಗಿ ಮಾತ್ರ ಕಾಣಲಿಲ್ಲ. ಶಾಲಾ ಮಕ್ಕಳ ಬಗ್ಗೆ ಅವರ ಕಾಳಜಿಗೆ ಶಿಕ್ಷಕರಾದ ನಾವು ಸಾಟಿಯಾಗಲಾರೆವು ಎನಿಸಿತು. ಹುದ್ದೆ ಯಾವುದಾದರೇನು? ನೋವಿಗೆ, ದುಃಖಕ್ಕೆ, ಕಷ್ಟಕ್ಕೆ ಮಿಡಿಯುವ ಹೃದಯ ಬೇಕಷ್ಟೇ. ಅಂತಹ ಸ್ಪಂದನ ಗುಣ ಅಡುಗೆ ಆಂಟಿಯಲ್ಲಿ ಕಂಡು ನಾನು ಮತ್ತಷ್ಟು ಮಗದಷ್ಟು ನನ್ನ ವಿದ್ಯಾರ್ಥಿಗಳ ಬಗ್ಗೆ ಪ್ರೀತ್ಯಾಧರ ತೋರಬೇಕು ಎನಿಸಿತು.

ಅಡುಗೆ ಆಂಟಿಗೆ ಸಮಾಧಾನ ಹೇಳುತ್ತಾ “ನೀವು ಭಯ ಬೀಳಬೇಡಿ, ಈಗಿನ ಮೆಡಿಕಲ್ ಸೈನ್ಸ್ ತುಂಬಾ ಮುಂದುವರೆದಿದೆ. ನೆಗಡಿ ಕೆಮ್ಮು ಜ್ವರಕ್ಕೆ ನೀವು ಇಷ್ಟೊಂದು ಆತಂಕ ಪಡುವ ಅಗತ್ಯವಿಲ್ಲ. ಬೇಗ ಗುಣವಾಗುತ್ತಾನೆ. ನೀವು ನೆಮ್ಮದಿಯಿಂದ ಇರಿ” ಎಂದೆ. ಆಗ ಅವರು “ಅಯ್ಯೋ! ಮೇಡಂ ಅವರೇ, ನಾನು ಈಗಿನ ಪರಿಸ್ಥಿತಿ ನೋಡಿ ಹೇಳುತ್ತಿಲ್ಲ. ಆ ಹುಡುಗನ ಜೀವನದಲ್ಲಿ ಇಂತಹ ಅನಾಹುತಗಳು ಬಹಳ ನಡೆಯುತ್ತಿರುತ್ತವೆ, ಇದೇನು ಹೊಸದಲ್ಲ ಬಿಡಿ. ಪಾಪ ಆ ಮಗ ಅತಿಯಾದ ಮುದ್ದಿಗೆ ಸಿಕ್ಕಿ ಹೀಗಾಯ್ತು” ಅಂತ ಒಗಟಿನಂತೆ ಹೇಳಿ ಅಕ್ಕಿ ಬೆಳೆ ತೂಗಲು ಹೋದರು.

‘ಅತಿಯಾದ ಮುದ್ದು’ ಏನಿದು! ಇವರು ಏನು ಹೇಳಿ ಹೋದರು, ಏನೂ ಅರ್ಥವಾಗಲಿಲ್ಲ. ನನಗೆ ಅರಿವಿಲ್ಲದೆ ತಲೆಕೆರೆದುಕೊಂಡೆ. ಅಷ್ಟರಲ್ಲಿ ಎದುರಿಗೊಬ್ಬ ಶಿಕ್ಷಕರು ಬರೋದು ನೋಡಿ ತಲೆ ಕೂದಲನ್ನು ಸರಿಪಡಿಸಿಕೊಂಡು ಶಿಸ್ತಾಗಿ ತರಗತಿಗೆ ಹೋದೆ. ಅಂತೂ ಆ ಅಡುಗೆ ಆಂಟಿಯ ಒಗಟಿನ ಉತ್ತರ ಹುಡುಕುವುದರಲ್ಲಿ ಶಾಲಾ ಗಂಟೆ ಶಬ್ದ ಕೇಳಿಸಿತು. ಮನೆಗೆ ಬಂದು ಕಾಫಿ ಕುಡಿದು ಸ್ವಲ್ಪ ವಿರಮಿಸಿದೆ. ನಂತರ ರಾಜುವಿನ ಕಡೆಗೆ ಮನಸ್ಸು ಹೊರಳುತ್ತಿತ್ತು. ಅವನೆಂದರೆ ನನಗೆ ಚಿರಪರಿಚಿತ. ಆದರೆ ಇಂದೇಕೋ ಅಪರಿಚಿತನಂಥ ಭಾವ ಕಾಡಿತು. ನಾನು ರಾಜವಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಹೋಗದಿರುವ ಬಗ್ಗೆ ಬೇಸರ ಮೂಡಿತು. ಅವನ ಕಡಿಮೆ ಬುದ್ಧಿವಂತಿಕೆ ಹಿಂದೆ ಏನೋ ಕಾರಣವಿರಬಹುದಾ? ನಾವು ಶಿಕ್ಷಕರಾಗಿ ಅದನ್ನ ತರಗತಿಯಲ್ಲಿ ಗುರುತಿಸುವಲ್ಲಿ ಸೋತೆವಾ? ಎನಿಸಿತು. ಕೂಡಲೇ ಅದೇನು ವಿಷಯ ಈಗಲೇ ತಿಳಿದುಕೊಳ್ಳಬೇಕೆಂಬ ಹಂಬಲ ಅತಿಯಾಯಿತು. ತಕ್ಷಣ ಅಡುಗೆಯವರ ಲ್ಯಾಂಡ್ ಲೈನ್‌ಗೆ ನಮ್ಮ ಮನೆಯ ಲ್ಯಾಂಡ್ ಲೈನ್‌ನಿಂದ ಕಾಲ್ ಮಾಡಿದೆ. ಆ ಸಮಯಕ್ಕೆ ಫೋನ್ ಕನೆಕ್ಟ್ ಆಗಲಿಲ್ಲ. ನಾನೇಕೆ ಇಷ್ಟು ಆತುರ ಪಡುತ್ತಿರುವೆ. ನಾಳೆ ಹೇಗಿದ್ದರೂ ಶಾಲೆಗೆ ಹೋಗಲೇಬೇಕು ಅವರನ್ನು ನೇರವಾಗಿ ವಿಚಾರಿಸಿದರೆ ಆಯ್ತಲ್ಲ ಎಂದು ಸಮಾಧಾನ ಮಾಡಿಕೊಂಡು ಅಡಿಗೆ ಕಾರ್ಯದಲ್ಲಿ ಮಗ್ನಳಾದೆ.

ಆ ಬೆಳಗ್ಗೆ ನಮ್ಮ ಮನೆಯ ಲ್ಯಾಂಡ್ಲೈನ್‌ಗೆ ಕರೆಯೊಂದು ಬಂದಿತು. ನಾನು ಫೋನ್ ರಿಸೀವ್ ಮಾಡಿ ಹಲೋ ಯಾರು ಎಂದೆ, ಮೇಡಂ ನಾನು ರಾಜು ಅಮ್ಮ ಎಂದರು. ಆ ಶಬ್ದ ಕೇಳಿ ಯಾಕೋ ಗಾಬರಿಯಾಯಿತು. ತಲೆಯೊಳಗೆ ಕಾರಣಗಳು ಪ್ರವಾಹದಂತೆ ಹರಿಯಲಾರಂಭಿಸಿದವು. ರಾಜು ಆಸ್ಪತ್ರೆಯಲ್ಲಿದ್ದ ಅವನಿಗೆ ಏನಾದರೂ…. ಇಲ್ಲ ಇಲ್ಲ ಹಾಗೇನೂ ಆಗಿರಲಿಕ್ಕಿಲ್ಲಾ ಎಂದು ಶರವೇಗದ ಮನಸ್ಸಿನ ಓಟಕ್ಕೆ ಲಗಾಮು ಹಾಕಿ ಸಾವರಿಸಿಕೊಳ್ಳುತ್ತಾ, “ಹೇಳಿ ಅಮ್ಮ, ಏನಾಯ್ತು? ರಾಜು ಹೇಗಿದ್ದಾನೆ?” ಎಂದೆ. “ಅಯ್ಯೋ ಅವನಿಗೆ ಏನು ದಾಡಿ, ಗುಂಡ್ಕಲ್ ಇದ್ದಂಗೆ ಇದಾನೆ. ಅವನಿಂದ ಅನುಭವಿಸುವ ಕರ್ಮ ಮಾತ್ರ ನಮ್ಮದು…” ಎಂದರು. ಆ ತಾಯ ಬೇಸರದ ಛಾಯೆ ಸರಿಸಲು “ಅಮ್ಮ ಹಾಗೆಲ್ಲ ಯಾಕೆ ಮಾತನಾಡುತ್ತೀರಾ? ಈ ಚಳಿಗಾಲದಲ್ಲಿ ಕಾಯಿಲೆ ಸಹಜವಲ್ಲವೇ…. ಈಗ ಹೇಗಿದ್ದಾನೆ? ಯಾಕೆ ಹುಷಾರು ತಪ್ಪಿದ?” ಎಂದೆ. “ಅವತ್ತು ತೋಟದಲ್ಲಿ ಜೋಳ ಕಾಯಲು ಕಳಿಸಿದ್ದೋ ಇಡೀ ರಾತ್ರಿ ಮನೆಗೆ ಬಾರದೆ ಚಳಿಯಲ್ಲಿ ನಡುಗಿ ಹೀಗೆ ರೋಗ ಬರಿಸಿಕೊಂಡು ಆಸ್ಪತ್ರೆಯಲ್ಲಿ ಬಿದ್ಕೊಂಡವ್ನೆ” ಎಂದು ಬರಬರ ಹೇಳುತ್ತಾ ಮೂರು ದಿನ ಶಾಲೆಗೆ ಅವನು ಶಾಲೆಗೆ ಬರಲ್ಲ ಎನ್ನುತ್ತಾ ಫೋನನ್ನು ಕುಕ್ಕಿದರು. ನನಗೆ ಒಂಥರ ಸಂಕೋಚವಾಯಿತು. ಈ ತಾಯಿಯ ಕೋಪ ನನ್ನ ಮೇಲೋ, ಮಗನ ಮೇಲೆ ಅಥವಾ ಖಾಯಿಲೆಯ ಮೇಲೋ ಎಂದು ಒಂದೂ ತಿಳಿಯದಿದ್ದರೂ ಆ ತಾಯ ಅಸಹಾಯಕತೆಗೆ ಮನಸ್ಸು ಮರುಗಿತು.

ಎಂದಿನಂತೆ ಮೂರನೇ ದಿನ ಶಾಲೆಗೆ ಹೋಗುವುದರೊಳಗೆ ರಾಜವಿನ ತಂದೆ ಶಾಲೆಯಲ್ಲಿ ತರಗತಿ ಶಿಕ್ಷಕಿಯಾದ ನನ್ನನ್ನು ಭೇಟಿಯಾಗಲು ಕಾಯುತ್ತಾ ನಿಂತಿದ್ದರು. ನನ್ನ ನೋಡುತ್ತಿದ್ದಂತೆ ನಮಸ್ಕಾರ ಟೀಚರ್ ಅಂದರು. “ಬನ್ನಿ ಸರ್, ರಾಜುವಿಗೆ ಹುಷಾರಿಲ್ಲ ಅಂತ ತಿಳೀತು. ಈಗ ಹೇಗಿದ್ದಾನೆ. ಪರವಾಗಿಲ್ಲ…. ಅವನು ಸುಧಾರಿಸಿಕೊಂಡು ಶಾಲೆಗೆ ಬರಲಿ. ನೀವು ಆರಾಮಾಗಿ ಇರಿ” ಅಂದೆ. “ಹೇಗೆ ಆರಾಮಾಗಿ ಇರೋದು ಟೀಚರ್, ಕಾಲ ಮಿಂಚಿ ಹೋಗಿದೆ. ಇನ್ನೇನಿದ್ದರೂ ಬಂದಿದ್ದನ್ನ ಎದುರಿಸುವುದು ಅಷ್ಟೇ” ಎಂದರು. ಈ ಮಾತು ಕೇಳಿ ಒಂದು ಕ್ಷಣ ನನ್ನ ಹೃದಯದ ಬಡಿತವೇ ನಿಂತಂತಾಯಿತು. “ಏನಾಯಿತು?” ಎಂಬ ಆತಂಕದಲ್ಲಿ ನಾನು ಬಾಯಿ ತಪ್ಪಿ “ರಾಜು ಹೋಗಿಬಿಟ್ನಾ” ಅಂದೆ. “ಇಲ್ಲಾ ಮೇಡಮ್ ಹುಷಾರಾಗುತ್ತಿದ್ದಾನೆ. ದೇವರು ಅವನನ್ನ ನಮಗೆ ಸರಿಯಾಗಿಯೇ ಕೊಟ್ಟ. ಆದರೆ ನಾವೇ ಅವನ ಬದುಕನ್ನು ನರಕ ಮಾಡಿ ಬಿಟ್ಟೆವು. ನಮ್ಮ ತಪ್ಪಿನಿಂದ ನನ್ನ ಕಂದ ಪ್ರತಿದಿನ ಒಂದಲ್ಲ ಒಂದು ತೊಂದರೆಗೆ ಈಡಾಗುತ್ತಿದೆ. ನಮ್ಮಂತಹ ಅಪ್ಪ ಅಮ್ಮ ಯಾವ ಮಕ್ಕಳಿಗೂ ಇರಬಾರದು” ಎಂದು ಬಿಕ್ಕಳಿಸಿದರು. ಅವನ ಕಥೆ ಹೇಳಲು ಆರಂಭಿಸಿದರು. ಆ ತಂದೆಯ ಕಣ್ಣೀರು ಕಂಡು ನನ್ನ ಕಂಗಳು ನನ್ನಗರಿವಿಲ್ಲದೆ ಕಂಬನಿ ಮಿಡಿದವು.

“ಅಳು ನಿಲ್ಲಿಸಿ ಯಜಮಾನರೆ. ಯಾವ ತಂದೆ ತಾಯಿಗಳೂ ತಮ್ಮ ಮಕ್ಕಳಿಗೆ ಕೇಡು ಬಗೆಯುವುದಿಲ್ಲ. ಹಾಗೇನಾದರೂ ಆದರೆ ಅದಕ್ಕೆ ಬೇರೆಯೇ ಕಾರಣವಿರುತ್ತದೆ. ನಾನು ಕಂಡಂತೆ ನೀವಿಬ್ಬರು ಮಗನನ್ನು ತುಂಬಾ ಪ್ರೀತಿಯಿಂದ ಸಾಕಿದ್ದೀರಿ. ಸಮಾಧಾನದಿಂದ ಇರಿ. ಎಲ್ಲವೂ ಸರಿಯಾಗುತ್ತದೆ” ಎನ್ನುತ್ತಾ, “ಆಸ್ಪತ್ರೆ ಖರ್ಚಿಗೆ ಏನಾದರೂ ಹಣ ಬೇಕಿತ್ತಾ? ಸಂಕೋಚವಿಲ್ಲದೆ ಕೇಳಿ” ಎಂದೆ. “ಇಲ್ಲ ಟೀಚರ್ ನಾನು ಹಣ ಕೇಳಲು ಬರಲಿಲ್ಲ. ನನ್ನ ಕಂದನನ್ನ ಗುಣ ಮಾಡಿ ಅಷ್ಟೇ ಸಾಕು” ಎಂದರು. ನಾನು “ಇದೇನು ಹೇಳುತ್ತಿದ್ದೀರಿ, ನಿಮ್ಮ ಮಗನನ್ನು ನಾನು ಗುಣ ಮಾಡಲು ಸಾಧ್ಯವೇ? ನಾನು ಡಾಕ್ಟರ್ ಅಲ್ಲಾ, ಟೀಚರ್. ಅಗತ್ಯ ಬಂದರೆ ಯಾವುದಾದರೂ ಒಳ್ಳೆಯ ಆಸ್ಪತ್ರೆಗೆ ಚಿಕಿತ್ಸೆ ಗೆ ಕರೆದೊಯ್ಯೋಣ” ಎಂದೆ.

ಅವನ ಕಾಯಿಲೆಗೆ ಮದ್ದು ನಿಮ್ಮ ಬಳಿಗೆ ಇದೆ. ಅದು ದೊರೆತು ಅವನು ಜಾಣನಾದರೆ ನಾವು ಪದೇ ಪದೇ ಆಸ್ಪತ್ರೆ ಮೆಟ್ಟಿಲು ಏರುವ ಪ್ರಸಂಗವಾಗಲಿ, ಊರ ಜನರ ಮುಂದೆ ಕ್ಷಮೆಗಾಗಿ ಕೈ ಕಟ್ಟಿ ನಿಲ್ಲುವ ಸಂದರ್ಭವಾಗಲಿ ಬಾರದು ಎಂದು ದೈನ್ಯತೆಯಿಂದ ಹೇಳಿದರು. ಮೂರು ದಿನಗಳಿಂದ ಹೇಳಿದ ಎಲ್ಲರ ಮಾತುಗಳು ನನ್ನ ತಲೆಯನ್ನು ಗೊಂದಲದ ಗೂಡಾಗಿಸಿದ್ದವು. ಈಗ ಅವನ ಅಪ್ಪನೇ ಶಾಲೆಗೆ ಬಂದಿದ್ದಾರೆ. ಈ ಗೊಂದಲದ ಗೂಡಿನ ಬೀಗವನ್ನು ಅವರಿಂದಲೇ ತೆಗೆಸಬೇಕು. ಬಗ್ಗಡದಂತೆ ಆಗಿದ್ದ ನನ್ನ ಮನಸ್ಸನ್ನು ತಿಳಿನೀರ ಕೊಳವಾಗಿಸಿಕೊಳ್ಳಬೇಕೆಂದು ತೀರ್ಮಾನಿಸಿದೆ.

ಶಾಲೆಯ ಪಕ್ಕದ ತೋಟದಿಂದ ಒಂದು ಎಳನೀರು ತರಿಸಿ ರಾಜುವಿನ ಅಪ್ಪನಿಗೆ ನೀಡುತ್ತಾ ಮೊದಲು ಎಳನೀರು ಕುಡಿಯಿರಿ ಆಮೇಲೆ ಮಾತನಾಡೋಣ ಎಂದು ಹೇಳಿ, ನನ್ನ ಅನುಪಸ್ಥಿತಿಯಲ್ಲಿ ಗಲಾಟೆ ಮಾಡುತ್ತಿದ್ದ ತರಗತಿ ಕೊಠಡಿಗೆ ಹೋಗಿ ಹುಡುಗರಿಗೆ ಒಂದು ಅವಧಿಗೆ ಆಗುವಷ್ಟು ವರ್ಕ್ ನೀಡಿ ಬಂದೆ. ನಂತರ ಅವರ ಎದುರಿನ ಚೇರ್‌ನಲ್ಲಿ ಕುಳಿತು “ಹೇಳಿ ಏನಾಯ್ತು? ನೀವು ರಾಜುಗೆ ಮಾಡಿದ ಅನ್ಯಾಯವಾದರೂ ಏನು?” ಎಂದು ಪ್ರಶ್ನಿಸಿದೆ.

“ಮೇಡಂ ನಮಗೆ ಮೂರು ಮಕ್ಕಳು ಗೊತ್ತಲ್ವಾ ನಿಮಗೆ…” ಅಂದರು. “ಹೌದು ಇಬ್ಬರು ಗಂಡು ಮಕ್ಕಳು ಒಬ್ಬ ಮಗಳು ಇದ್ದಾಳೆ, ರಾಜುವಿಗೆ ಮಾತ್ರ ಸ್ವಲ್ಪ ಕಡಿಮೆ ಬುದ್ಧಿ ಉಳಿದವರಿಬ್ಬರು ತುಂಬಾ ಜಾಣರಿದ್ದಾರೆ. ಏನು ಮಾಡಕ್ಕಾಗುತ್ತೆ ಎಲ್ಲಾ ಬೆರಳು ಸಮವಾಗಿರಲು ಆಗುತ್ತಾ? ಅವನಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಮುಂದುವರೆಯಲಿ ಬಿಡಿ, ನೀವು ವೃಥಾ ಚಿಂತೆ ಮಾಡಬೇಡಿ” ಎಂದು ಸಮಾಧಾನ ಮಾಡಲು ಯತ್ನಿಸಿದೆನು.

ನಾನು ರಾಜವಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಹೋಗದಿರುವ ಬಗ್ಗೆ ಬೇಸರ ಮೂಡಿತು. ಅವನ ಕಡಿಮೆ ಬುದ್ಧಿವಂತಿಕೆ ಹಿಂದೆ ಏನೋ ಕಾರಣವಿರಬಹುದಾ? ನಾವು ಶಿಕ್ಷಕರಾಗಿ ಅದನ್ನ ತರಗತಿಯಲ್ಲಿ ಗುರುತಿಸುವಲ್ಲಿ ಸೋತೆವಾ? ಎನಿಸಿತು. ಕೂಡಲೇ ಅದೇನು ವಿಷಯ ಈಗಲೇ ತಿಳಿದುಕೊಳ್ಳಬೇಕೆಂಬ ಹಂಬಲ ಅತಿಯಾಯಿತು. ತಕ್ಷಣ ಅಡುಗೆಯವರ ಲ್ಯಾಂಡ್ ಲೈನ್‌ಗೆ ನಮ್ಮ ಮನೆಯ ಲ್ಯಾಂಡ್ ಲೈನ್‌ನಿಂದ ಕಾಲ್ ಮಾಡಿದೆ.

ಹೌದು ಮೇಡಂ, ನೀವು ಹೇಳಿದ್ದು ನಿಜ ನಮಗೆ ಮದುವೆಯಾಗಿ ಹತ್ತು ವರ್ಷಗಳಾದರೂ ಮಕ್ಕಳಿರಲಿಲ್ಲ. ಜನರ ಬಾಯಿ ಮುಚ್ಚಿಸಲು ಆಗುತ್ತಾ ಹೇಳಿ. ಪ್ರತಿದಿನ ರಣ ಹದ್ದುಗಳಂತೆ ನಮ್ಮನ್ನ ಕುಕ್ಕಿ ಕುಕ್ಕಿ ಹಂಗಿಸುತ್ತಿದ್ದರು. ನಾನೇನು ಗಂಡ್ಸು ಹೊರಗೆ ಹೋಗುತ್ತೇನೆ. ಆದರೆ ನನ್ನ ಹೆಂಡತಿಯ ಪರಿಸ್ಥಿತಿಯ ಬೇರೆ. ಅವಳು ದಿನ ಜನರ ನಡುವೆ ಬದುಕಬೇಕು. ಜನರ ನಿಂದನೆ, ಅವಮಾನಗಳಿಗೆ ಬೇಸತ್ತು ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದಳು. ಇನ್ನೇನು ನಮ್ಮ ಬದುಕು ಇಷ್ಟೇ, ಮಕ್ಕಳ ಯೋಗ ನಮ್ಮ ಬದುಕಿಗೆ ಇಲ್ಲ ಎಂದುಕೊಳ್ಳುತ್ತಿರುವಾಗ ಅಚಾನಕ್ಕಾಗಿ ಸಂತಸದ ಸುದ್ದಿಯೊಂದು ಹಾರಿ ಬಂತು. ಬರಡಾದ ಮನದ ತೋಟದ ತುಂಬಾ ಸುಗಂಧದ ಲೇಪನ ಹಚ್ಚಿತು, ದೇವರ ದಯೆ ಈ ರಾಜು ಮಡಿಲು ತುಂಬಿದ. ಇಡೀ ಕುಟುಂಬ ಸಡಗರ ಸಂಭ್ರಮದಲ್ಲಿ ತೇಲಿತು. ಇಡೀ ಊರಿಗೆ ಊಟ ಹಾಕಿಸಿ ಮಗನಿಗೆ ನಾಮಕರಣ ಮಾಡಿದೆವು… ಎಂದು ನಡೆದ ಕಥೆಯ ಹೇಳಿದರು.

ಇದರಲ್ಲಿ ಎಲ್ಲವೂ ತುಂಬಾ ಖುಷಿ ಪಡುವ ವಿಷಯವೇ ಇದೆ. ಇದರಲ್ಲಿ ನೀವು ಚಿಂತಿಸಲು ನೋವು ಪಡಲು ಕಾರಣವೇನಿದೆ ಎಂದೆ. ಇದೆ ಮೇಡಂ ಇಲ್ಲಿಯವರೆಗೂ ಯಾವ ತಪ್ಪು ನಡೆಯಲಿಲ್ಲ. ಇನ್ನು ಮುಂದಿನ ಕಥೆಯೇ ರಾಜುವಿನ ಬದುಕಿನ ದಿಕ್ಕನ್ನು ಬದಲಿಸಿತು. ಅದಕ್ಕೆ ನಾನು ನನ್ನ ಹೆಂಡತಿಯು ಕಾರಣವಾಗಿ ಬಿಟ್ಟೆವು ಎಂದು ದುಃಖಿಸಿದರು.

ಏನು ಅರ್ಥವಾಗದಿದ್ದರೂ ಅವರ ಮುಂದಿನ ಮಾತುಗಳನ್ನು ಕೇಳಲು ಬಕಪಕ್ಷಿಯಂತೆ ಕಾಯುತ್ತಾ ಕಣ್ಣು ಮಿಟುಕಿಸದಂತೆ ಅವರ ಮುಖವನ್ನು ನೋಡುತ್ತಾ ಶಿಕ್ಷಕರ ಪಾಠವನ್ನು ಶ್ರದ್ಧೆಯಿಂದ ಕೇಳುವ ವಿಧೇಯ ವಿದ್ಯಾರ್ಥಿಯಂತೆ ಅವರೆದುರು ಕುಳಿತಿದ್ದೆನು.

ವಿವಾಹವಾದ ದೀರ್ಘಕಾಲದ ನಂತರ ರಾಜು ಹುಟ್ಟಿದನು. ನಮಗೆಲ್ಲ ಅವನೇ ಜಗತ್ತು. ಅವನ ಮೇಲೆ ಎಷ್ಟು ಕಾಳಜಿ ಎಂದರೆ ಒಂದು ಸಣ್ಣ ಸೊಳ್ಳೆ ನೊಣ ಕೂಡ ಅವನ ಮೇಲೆ ಕೂರಲು ಬಿಡಲಿಲ್ಲ. ಹಗಲು ರಾತ್ರಿ ಒಬ್ಬರ ನಂತರ ಮತ್ತೊಬ್ಬರು ತೊಟ್ಟಿಲ ಬಳಿಯೆ ಕುಳಿತು ಸಾಕಿದೆವು. ಅವನು ಅತ್ತಿದ್ದು ನಾವು ನೋಡಲೇ ಇಲ್ಲ. ಅವನು ಕೇಳುವ ಮೊದಲೇ ಅವನ ಅಗತ್ಯಗಳನ್ನು ಪೂರೈಸುತ್ತಿದ್ದೆವು. ಮಗು ಹೆಚ್ಚು ನಕ್ಕರು ಸುಸ್ತಾಗಬಹುದು ಎಂದು ಅತಿಯಾದ ಕಾಳಜಿ ಮಾಡಿದೆವು. ಅವನಿಗೆ ಎಲ್ಲಾ ಮಕ್ಕಳಂತೆ ತೆವಳುವ ಅವಕಾಶವಾಗಲಿ, ತೊಡರು ಹೆಜ್ಜೆಗಳನ್ನು ಇಟ್ಟು ನಡೆಯುವ ಅವಕಾಶವಾಗಲಿ ನಾವು ಸರಿಯಾಗಿ ನೀಡಲೇ ಇಲ್ಲ. ಇದೆಲ್ಲ ತಪ್ಪು, ಅಸಹಜ ಕ್ರಿಯೆ ಎಂದು ನಮಗೆ ಅಂದು ಅನಿಸಲಿಲ್ಲ. ರಾಜನಂತೆ ಬೆಳೆಸುತ್ತಿದ್ದೇವೆ ಎಂಬ ತಪ್ಪು ಕಲ್ಪನೆಯಲ್ಲಿ ಮುಳುಗಿ ಅವನ ಬಾಲ್ಯದ ಆಟ ತುಂಟಾಟಗಳನ್ನು ಬಲಿ ಕೊಟ್ಟೆವು.

ರಾಜುವನ್ನು ಮನೆಯಿಂದ ಆಚೆ ಬಿಡುತ್ತಿರಲಿಲ್ಲ. ಅಥವಾ ಅವನು ಹೊರಗೆ ಬಂದರೆ ಜನರೊಡನೆ ಜಗಳ ಹೊಡೆದಾಟ ಮಾಡಿಕೊಂಡು ಏನಾದರೂ ಅಪಾಯ ಮಾಡಿಕೊಳ್ಳಬಹುದೆಂಬ ಭಯ ನಮ್ಮದಾಗಿತ್ತು.

ರಸ್ತೆಯಲ್ಲಿ ಎಲ್ಲಾ ಮಕ್ಕಳು ಆಟವಾಡುತ್ತಿದ್ದರೆ ಇವನು ಒಳಗೆ ಕುಳಿತು ಕಿಟಕಿಯಿಂದ ನೋಡಿ ಸಂಭ್ರಮಿಸುತ್ತಿದ್ದ. ಇದನ್ನೆಲ್ಲಾ ಇವನು ಕಣ್ಣಾರೆ ಕಂಡರೆ ನಾನು ಆಟದ ಬಯಲಿಗೆ ಹೋಗಬೇಕು, ಆಟವಾಡಬೇಕು ಎಂದು ಹಠ ಮಾಡುವನೆಂದು ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿದೆವು. ನಾಲ್ಕು ಗೋಡೆಗಳ ನಡುವೆ ಬದುಕಿದ ಇವನಿಗೆ ಮೂರು ನಾಲ್ಕು ವರ್ಷವಾದರೂ ಹೊರ ಜಗತ್ತಿನ ಪರಿಚಯವಾಗಲಿಲ್ಲ. ಜನರ ಸಂಪರ್ಕವಂತೂ ಮರೀಚಿಕೆಯಾಯಿತು. ಇಂದು ಇವನ ಬೆಳವಣಿಗೆ ಮೇಲೆ ಈ ಥರನಾದ ಪರಿಣಾಮ ಬೀರಲು ಕಾರಣವಾಗಿ ಅವನಿಗೆ ಲೋಕಜ್ಞಾನ, ಸಾಮಾಜಿಕ ಬದುಕಿನಲ್ಲಿ ವ್ಯವಹಾರ ಬುದ್ಧಿ ಬೆಳೆಯಲಿಲ್ಲ ಎಂದರು.

ಅಷ್ಟು ಕೇಳಿದಾಗ ನನಗೆ ರಾಜುವಿನ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಕ್ಕಿತು. ಅವನ ಮಾನಸಿಕ, ಭಾವನಾತ್ಮಕ ಹಾಗೂ ‌ಬೌದ್ಧಿಕ ವಲಯಗಳ ದುರ್ಬಲ ಬೆಳವಣಿಗೆಗೆ ಸಕಾರಣ ತಿಳಿಯಿತು.

ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಮೇಲೆ ಸಮಾಜದ ಪ್ರಭಾವ ಎಷ್ಟು ಮುಖ್ಯವಾಗುತ್ತದೆ ಎಂಬುದಕ್ಕೆ ರಾಜು ನಮ್ಮ ಮುಂದೆ ನಿದರ್ಶನವಾಗಿ ನಿಲ್ಲುತ್ತಾನೆ. ಶಿಕ್ಷಣದ ಪ್ರಮುಖ ಆಶಯ ಮಗು ದೈನಿಕ ಬದುಕು ನಿರ್ವಹಣೆಯ ಕೌಶಲಗಳನ್ನು, ತಿಳುವಳಿಕೆಯನ್ನು ಪಡೆಯುವುದಾಗಿದೆ‌. ಅದು ಬರಬೇಕಾದರೆ ಮಗು ಪ್ರಕೃತಿಯೊಂದಿಗೆ ಸಹಜವಾಗಿ ಬದುಕಬೇಕು. ಜನರೊಡನೆ ಬದುಕಬೇಕು.

ಅದು ಸರಿ ಯಜಮಾನರೇ, ರಾಜು ಈಗ ಏನು ಎಡವಟ್ಟು ಮಾಡಿಕೊಂಡು ಚಳಿ ಜ್ವರ ಬಂದು ಮಲಗಿರುವನು ಎಂದೆನು. ಆಗ ಅವರು ರಾಜುವಿಗೆ ಕಾಯಿಲೆ ಬಂದಿರುವ ಹಿನ್ನೆಲೆಯನ್ನು ವಿವರಿಸಿದರು. ನಮ್ಮ ಹೊಲದಲ್ಲಿ ಜೋಳ ಬೆಳೆದಿದ್ದೆವು. ಕಳೆದ ಭಾನುವಾರ ನಾವು ನಮ್ಮ ಸಂಬಂಧಿಕರ ಮನೆಗೆ ಹೋಗುವುದಿತ್ತು. ಬೆಳಗ್ಗೆ ತಿಂಡಿ ಮಾಡಿ ಮಧ್ಯಾಹ್ನ ಮತ್ತು ರಾತ್ರಿಗೂ ಅಡುಗೆ ಮಾಡಿಟ್ಟು ರಾಜುವನ್ನು ಮನೆಯಲ್ಲಿ ಬಿಟ್ಟು ಹೋದೆವು. ಜೋಳದ ಕಾವಲಿಗೆ ರಾಜುವನ್ನು ನೇಮಿಸಿದ್ದೆವು. ಅವನಿಗೆ ಸಮಯ ತಿಳಿಯುತ್ತಿರಲಿಲ್ಲ. ಅವನು ಮನೆಗೆ ಯಾವಾಗ ಬರಬೇಕು ಎಂದು ಹೇಳಲು ಚಿಂತೆಯಾಯಿತು.

ನಾನು ಯಾವಾಗ ಮನೆಗೆ ಬರಬೇಕು ಎಂದು ರಾಜ ಪ್ರಶ್ನಿಸಿದನು. ನಾವು ಇವನು ಬೇಗ ಮನೆಗೆ ಬಂದು ಊರ ಹುಡುಗರ ಜೊತೆ ಸೇರಿ ತೋಟ ಕಾಯುವುದಿಲ್ಲ ಎಂದು ಭಯಗೊಂಡೆವು. ನಮ್ಮ ಹಳ್ಳಿಯಲ್ಲಿ ಪ್ರತಿದಿನ ಸಂಜೆ ಆರು ಗಂಟೆಗೆ ಬೀದಿ ದೀಪಗಳು ಬೆಳಗುತ್ತಿದ್ದವು. ಅದೇ ಸಮಯ ತಿಳಿಯಲು ಸೂಕ್ತವೆಂದು ಭಾವಿಸಿ ರಾಜವಿಗೆ ನೀನು ಹೊಲದ ಮಧ್ಯೆ ಇರುವ ಬಂಡೆಯ ಮೇಲೆ ಕುಳಿತು ಗಿಳಿ ಕಾಗೆಗಳನ್ನು ಕಾಯುತ್ತಿರು. ಸಂಜೆ ಊರೊಳಗೆ ಬೀದಿ ದೀಪಗಳು ಹತ್ತಿಕೊಳ್ಳುತ್ತವೆ. ಆಗ ನೀನು ಮನೆಗೆ ಬಾ ಎಂದೆವು. ಇವನು ಬೇಗ ಮನೆಗೆ ಬರದಂತೆ ತಡೆಯಲು ನೋಡು ಬೀದಿ ದೀಪಗಳು ಕಂಡಾಗ ಮಾತ್ರ ಮನೆಗೆ ಬಾ ಎಂದು ಸ್ವಲ್ಪ ಗಡಸು ದನಿಯಲ್ಲಿ ಹೇಳಿದೆವು. ನಮ್ಮ ದುರದೃಷ್ಟವೋ ಏನೋ ವಿದ್ಯುಚ್ಛಕ್ತಿಯ ವ್ಯತ್ಯಯ ಉಂಟಾಗಿ ಕರೆಂಟ್ ಬಂದಿಲ್ಲ. ಇವನು ಆ ಕೊರೆಯುವ ಚಳಿಯಲ್ಲಿ ದೀಪಗಳು ಬೆಳಗುವುದನ್ನೇ ಕಾಯುತ್ತಾ ಬಂಡೆಯ ಮೇಲೆ ಕುಳಿತಿದ್ದಾನೆ. ದೀಪ ಹತ್ತಿಕೊಳ್ಳಲಿಲ್ಲಾ. ಬೆಳಗ್ಗೆ ನಾವು ಊರಿಂದ ಮನೆಗೆ ಬಂದಾಗ ಮನೆಯಲ್ಲಿ ರಾಜು ಇರದಿದ್ದನ್ನು ನೋಡಿ ಗಾಬರಿಯಾಯಿತು. ಊರಿನಲ್ಲಿ ವಿಚಾರಿಸಿದಾಗ ಜನರು ನಿನ್ನೆ ರಾತ್ರಿ ಪೂರ್ತಿ ಕರೆಂಟು ಇರಲಿಲ್ಲ. ಎಲ್ಲಾ ಬೇಗ ಮಲಗಿದೆವು. ರಾಜುವನ್ನು ಗಮನಿಸಲಿಲ್ಲ ಎಂದರು. ತಕ್ಷಣ ನನಗೆ ಏನಾಗಿದೆ ಎಂದು ಊಹಿಸಲು ಹೆಚ್ಚು ಸಮಯ ಬೇಕಾಗಲಿಲ್ಲ. ಕೂಡಲೇ ನಾನು ನನ್ನ ಹೆಂಡತಿ ಹೊಲದೆಡೆಗೆ ಓಡಿದೆವು. ಬಂಡೆಯ ಮೇಲೆ ಚಳಿಯಿಂದ ತರತರ ನಡುಗುತ್ತ ಮಲಗಿದ್ದನು ಎಂದು ಒತ್ತರಿಸಿ ಬರುವ ದುಃಖವನ್ನು ತಡೆಯುತ್ತಾ ಹೇಳಿದರು.

ಇದನ್ನೆಲ್ಲ ಕೇಳಿ ನನಗೂ ಅತೀವ ಸಂಕಟವಾಯಿತು. ಹುಟ್ಟಿನಿಂದ ವಿಕಲತೆ ಹೊಂದುವುದು ಒಂದು ರೀತಿಯ ದುರದೃಷ್ಟವಾದರೆ, ಹುಟ್ಟಿನಿಂದ ಎಲ್ಲವೂ ಸರಿ ಇದ್ದವರನ್ನು ನಮ್ಮ ಮೂರ್ಖತನದಿಂದ ಬುದ್ದಿಹೀನರನ್ನಾಗಿ ಮಾಡುವ ನಡೆಗೆ ಸಂಕೋಚವೆನಿಸಿತು. ಆಗ ನಾನು ರಾಜುವಿನ ತಂದೆಯನ್ನು ಸಮಾಧಾನ ಮಾಡುತ್ತಾ ಯಜಮಾನರೇ, ಆಗಿದ್ದು ಆಯಿತು. ಈಗ ಕಳೆದ ವಿಚಾರವನ್ನು ಚಿಂತಿಸಿ ಫಲವಿಲ್ಲ. ಇನ್ನು ಮುಂದೆ ನೀವು ಅವನನ್ನ ಹೆಚ್ಚು ಸಮಯ ಮಕ್ಕಳ ಜೊತೆ ಬೆರೆಯಲು ಬಿಡಿ. ಸಮಾಜದ ಜನರ ಮಧ್ಯದಲ್ಲಿ ಅವನನ್ನ ಹೆಚ್ಚು ಸಮಯ ಕಾಲ ಕಳೆಯುವಂತಹ ಅವಕಾಶ ಕಲ್ಪಿಸಿ ನೀವು ಮಾಡುವ ಎಲ್ಲ ಕೆಲಸಗಳಲ್ಲಿ ಅವನನ್ನು ಭಾಗಿ ಮಾಡಿಕೊಳ್ಳಿ. ದಿನಸಿ ತರಲು, ಡೈರಿಗೆ ಹಾಲು ತರಲು ಅವನನ್ನೇ ಬಳಸಿಕೊಳ್ಳಿ. ಕಥೆಗಳ ಮೂಲಕ ಅವನಲ್ಲಿ ನಿತ್ಯ ಜೀವನ ಘಟನೆಗಳನ್ನು, ಸವಾಲುಗಳನ್ನು, ಎದುರಿಸುವ ವಿಧಾನಗಳನ್ನು ಅರ್ಥ ಮಾಡಿಸಿ. ನಾವು ಕೂಡ ಶಾಲೆಯಲ್ಲಿ ಇದರ ಬಗ್ಗೆ ಹೆಚ್ಚು ಗಮನ ವಹಿಸಿ ಅವನ ಸಹಜ ಬೆಳವಣಿಗೆಗೆ ನೆರವಾಗೋಣ ಎಂದು ಸಾಂತ್ವನ ಹೇಳಿದೆ.

ಹೌದು ಪೋಷಕರೇ ಅಗತ್ಯಕ್ಕಿಂತ ಅತಿಯಾದ ನಮ್ಮ ಪ್ರೀತಿ, ಕಾಳಜಿ ನಮ್ಮ ಮಕ್ಕಳ ಬದುಕಿನ ಮೇಲೆ ದುಷ್ಪರಿಣಾಮ ಬೀರಬಾರದು. ಎಲ್ಲರಂತೆ ಎಲ್ಲರೊಡನೇ ಬದುಕಲು ಬಿಡಬೇಕು ಎಂಬುದನ್ನು ಅರಿಯಲು ಈ ರಾಜುವಿನ ಕಥೆಯೇ ಸಾಲದೇ?