ಶುರುವಿನಲ್ಲಿ ಅವನಿಗೆಂದು ತಂದ ಅದೆಷ್ಟು ಕಾಲರ್ ಹಗ್ಗಗಳನ್ನು ತಿಂದು ಹಾಕಿದನೋ… ಈಗಲು ಮನೆಯಲ್ಲಿ ಅವನು ಅರ್ಧ ಕಚ್ಚಿದ ಚಪ್ಪಲಿ, ಇಲಿ ತಿಂದವರಂತಾದ ಕಟ್ಟಿಗೆಯ ಕುರ್ಚಿಯ ಕೈ, ಅರ್ಧ ಹರಿದು ಹೋದ ರಬ್ಬರಿನ ಡೋರ್ ಸ್ಟಾಪರ್, ನೆತ್ತಿಯ ಮೇಲೆ ತೂತಾಗಿರುವ ನನ್ನ ಕ್ಯಾಪ್, ತುದಿ ಹರಿದು ಹೋಗಿರುವ ಕಾರ್ಪೆಟ್ ಎಲ್ಲವು ಅವನ ತುಂಟತನಕ್ಕೆ ಸಾಕ್ಷಿ ಎಂಬಂತಿವೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಮೂರನೆಯ ಕಂತು

ನಾಯಿಗಳನ್ನು ಸಾಕುವುದೆಂದರೆ ಮಕ್ಕಳನ್ನು ಸಾಕಿದಂತೆಯೇ. ಮಕ್ಕಳು ದೊಡ್ಡವರಾಗಿ ಬಿಡುತ್ತಾರೆ. ಆದರೆ ನಾಯಿಗಳು ಕೊನೆಯವರೆಗು ಮಕ್ಕಳೇ. ನಮ್ಮಿಂದ ದೂರ ಹೋಗಲು ಬಯಸದೇ, ನಮ್ಮ ಹಿಂದೆ ಮುಂದೆ ಓಡಾಡಿಕೊಂಡು, ಚೂರು ಪ್ರೀತಿಗಾಗಿ ಕಾಯುವ ಈ ಜೀವಿಗಳ ಮುಗ್ಧತೆಯನ್ನು ಎಷ್ಟೆಂದು ವರ್ಣಿಸುವುದು? ಇಲ್ಲಿ ಅಮೇರಿಕಾದಲ್ಲಿ ಮಕ್ಕಳನ್ನು ಮಾಡಿಕೊಳ್ಳುವ ಮೊದಲು ನಾಯಿಯೊಂದನ್ನು ಸಾಕಿ ಎಂದು ಹೇಳುತ್ತಾರೆ. ಅದನ್ನು ನೋಡಿಕೊಳ್ಳುವುದು ಪುಟ್ಟ ಮಗುವನ್ನು ನೋಡಿಕೊಳ್ಳುವಷ್ಟೇ ಸಹನೆಯ ಕೆಲಸವಾಗಿರುವುದರಿಂದ ಒಂದೆರಡು ವರ್ಷಗಳ ಕಾಲ ಸಾಕಿ ಮತ್ತೆ ಯಾರಿಗಾದರು ಕೊಟ್ಟು ಬಿಡುವ ಟ್ರಯಲ್ ಮಂದಿ ಇದರಿಂದ ದೂರ ಉಳಿಯುವುದೇ ಒಳಿತು. ಹೊಟ್ಟೆಗೆ ಏನೋ ಒಂದು ಹಾಕಿದರಾಯಿತು, ಹಾಕಿದ್ದನ್ನು ತಿಂದುಕೊಂಡು ಇಡಿ ದಿನ ಮಲಗಿರುತ್ತದೆ, ಅದನ್ನು ಸಾಕುವುದರಲ್ಲಿ ಏನು ಮಹಾ ಕೆಲಸವಿದೆ ಎಂದಿರೇ? ಕೂರಾಪುರಾಣ ಓದಿದಂತೆಲ್ಲ ನಿಮಗೆ ಅರ್ಥವಾಗುತ್ತದೆ ಎಂದಷ್ಟೇ ಹೇಳಬಲ್ಲೆ.

ಈ ನಾಯಿಗಳು ಒಂದರಿಂದ ಎರಡು ವರ್ಷದವರೆಗೆ ಬಹಳ ತುಂಟರಾಗಿರುತ್ತವೆ. ಅವುಗಳ ಮೇಲೆ ಎಷ್ಟು ಗಮನವಿದ್ದರು ಸಾಲದು. ಚಿಕ್ಕ ಮಕ್ಕಳು ಹಲ್ಲು ಬರುವಾಗ ಕೈಗೆ ಸಿಕ್ಕಿದ್ದನ್ನೆಲ್ಲ ಬಾಯಿಗೆ ಹಾಕಿಕೊಂಡು ಅಗಿಯಲು ನೋಡುತ್ತವಲ್ಲ.. ಹಾಗೆಯೇ ಈ ಪಪ್ಪಿಗಳು ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುತ್ತವೆ. ಕೂರಾನೂ ಅಷ್ಟೇ. ಇಡೀ ದಿನ ಅವನನ್ನು ನೋಡಿಕೊಳ್ಳುವುದು ಸಾಕಾಗಿ ಬಿಡುತ್ತಿತ್ತು. ಅಷ್ಟು ಕಾಟ. ಕತ್ತಿಗೆ ಕಾಲರ್ ಹಾಕಿ ಉದ್ದನೆಯ ಹಗ್ಗವೊಂದನ್ನು ಅವನ ಕುತ್ತಿಗೆಗೆ ಹಾಕಿದರೆ ಆ ಹಗ್ಗವನ್ನೇ ತಿನ್ನಲು ಶುರು ಮಾಡಿ ಬಿಡುವವ. ನೋಡ ನೋಡುತ್ತಿದ್ದಂತೆ ಆ ಹಗ್ಗ ಹದಿನಾರು ದಾರಗಳಾಗಿ ಇನ್ನು ನನಗಾಗುವುದಿಲ್ಲ ಎಂದು ತಂತಾನೇ ತುಂಡರಿಸಿಕೊಂಡು ಬಿಡುತ್ತಿತ್ತು. ಕತ್ತಿಗೆ ಹಾಕಿರುವ ಹಗ್ಗ, ಚಪ್ಪಲಿ, ಅಡುಗೆ ಮನೆಯಲ್ಲಿ ಕೈ ಒರೆಸಲು ಹಾಕಿರುವ ಟವೆಲ್ಲುಗಳು, ಬಟ್ಟೆ, ಚಾರ್ಜರ್.. ಏನೇ ಸಿಗಲಿ ಅದನ್ನೆಲ್ಲ ತಿನ್ನುವುದೇ. ನ್ಯಾಪಕಿನ್ ಒಂದನ್ನು ಅವನ ಬಾಯಿಯಿಂದ ತೆಗೆದು ಎತ್ತಿಟ್ಟು ಬರುವಷ್ಟರಲ್ಲಿ ಇನ್ನೇನೋ ಒಂದು ಅವನ ಬಾಯಲ್ಲಿ ಇರುತ್ತಿತ್ತು. ಇಸಿದುಕೊಳ್ಳಲು ಹೋದರೆ ಮನೆ ತುಂಬ ಓಡಾಟ. ಹಲ್ಲುಗಳ ನಡುವೆ ಕಚ್ಚಿ ಹಿಡಿದು ಕೊಡಲೊಲ್ಲೆ ಎಂದು ಹಟ. ಅದನ್ನು ಅವನು ಕೊಡಬೇಕೆಂದರೆ ಮತ್ತೇನೋ ಒಂದನ್ನು ಆಮಿಷ ತೋರಿಸಬೇಕು. ಕೈಯ್ಯಲ್ಲಿ ಬಿಸ್ಕೆಟ್ ಹಿಡಿದು ಕುಕಿ ಬೇಕಾ ಎನ್ನುತ್ತಲೋ, ಗಜ್ಜರಿಯ ತುಂಡನ್ನು ತೋರಿಸಿ ಕ್ಯಾರೆಟ್ ಬೇಕಾ ಎನ್ನುತ್ತಲೋ ನಯವಾಗಿ ಕೇಳಬೇಕು. ಅವನ ಮುಂದೆ ನಿಲ್ಲಬೇಕು. ಆಗ ಅವನು ಕಣ್ಣುಗಳನ್ನು ಅತ್ತಿತ್ತ ಹೊರಳಿಸಿ, ಬಹಳ ಯೋಚಿಸಿ ಕೊಟ್ಟರೆ ತನಗೇನು ಲಾಭ ಎಂದೆಲ್ಲ ಲೆಕ್ಕ ಹಾಕಿ ಕೊನೆಗೆ ಕೊಡುವ ಮನಸ್ಸು ಮಾಡುತ್ತಿದ್ದ. ಸಣ್ಣದೊಂದು ಯುದ್ಧ ಗೆದ್ದಂತಹ ಸಂಭ್ರಮ ಆಗ. ಶುರುವಿನಲ್ಲಿ ಅವನಿಗೆಂದು ತಂದ ಅದೆಷ್ಟು ಕಾಲರ್ ಹಗ್ಗಗಳನ್ನು ತಿಂದು ಹಾಕಿದನೋ… ಈಗಲು ಮನೆಯಲ್ಲಿ ಅವನು ಅರ್ಧ ಕಚ್ಚಿದ ಚಪ್ಪಲಿ, ಇಲಿ ತಿಂದವರಂತಾದ ಕಟ್ಟಿಗೆಯ ಕುರ್ಚಿಯ ಕೈ, ಅರ್ಧ ಹರಿದು ಹೋದ ರಬ್ಬರಿನ ಡೋರ್ ಸ್ಟಾಪರ್, ನೆತ್ತಿಯ ಮೇಲೆ ತೂತಾಗಿರುವ ನನ್ನ ಕ್ಯಾಪ್, ತುದಿ ಹರಿದು ಹೋಗಿರುವ ಕಾರ್ಪೆಟ್ ಎಲ್ಲವು ಅವನ ತುಂಟತನಕ್ಕೆ ಸಾಕ್ಷಿ ಎಂಬಂತಿವೆ.

ಅವನು ಮನೆಗೆ ಬಂದ ನಾಲ್ಕನೇ ದಿನಕ್ಕೆ ಅವನೊಡನೆ ಒಂದಿಷ್ಟು ಫೋಟೋಗಳನ್ನು ತೆಗೆಸಿಕೊಂಡು ‘ನಾನು ಈ ನಾಯಿ ತಂದೆ’ ಎಂದೆಲ್ಲ ಸೋಷಿಯಲ್ ಮೀಡಿಯಾನಲ್ಲಿ ಹಾಕಿಕೊಂಡು ಹೆಮ್ಮೆ ಪಟ್ಟುಕೊಂಡಿದ್ದಾಯಿತು. ಅವನೊಂದಿಗೆ ಫೋಟೊ ತೆಗೆಸಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಿಂತಲ್ಲಿ ನಿಲ್ಲದ, ಕೂತಲ್ಲಿ ಕೂರದ, ಪುಟು ಪುಟು ಎಂದು ಮನಸ್ಸು ತಿಳಿದತ್ತ ಓಡುವ ತುಂಟನದು. ಹಿಡಿದು ಕೂರಿಸಲು ಹೋದರೆ ಸಕ್ಕರೆಯಂತಹ ಹಲ್ಲಿನಲ್ಲಿ ಕಚ್ಚಿ ಬಿಡುತ್ತೇನೆ ಎಂದು ಹೆದರಿಸುವ ಡೋಂಗಿ ಬೇರೆ. ಪುಸಕ್ಕನೆ ಕೈಯ್ಯಿಂದ ಜಾರಿ ಹೋಗಿ ಬಿಡುವ ಅವನೊಂದಿಗೆ ಫೋಟೊ ತೆಗೆಸಿಕೊಳ್ಳುವ ಹೊತ್ತಿಗೆ ನಾವು ಒಂದೆರಡು ಕೆಜಿ ಕಡಿಮೆಯಾಗಿದ್ದೆವು. ಕೊನೆಗು ಅವನು ಫೋಟೊದಲ್ಲಿ ನಮ್ಮನ್ನು ಕಚ್ಚಿ ತಪ್ಪಿಸಿಕೊಂಡು ಹೋಗುವ ಪೋಸ್‌ನಲ್ಲಿಯೇ ಸೆರೆಯಾದ.

ಹೀಗೆ ಅವನನ್ನು ಜಗತ್ತಿಗೆ ತೋರಿಸಬೇಕೆಂಬ ಆಸೆ ಅದಮ್ಯವಾಗಿತ್ತು. ವಾಕಿಂಗ್ ಕರೆದುಕೊಂಡು ಹೋಗಲು ಶುರು ಮಾಡಿದೆವು. ನಮ್ಮ ಜೊತೆಯೇ ನಡೆಯಬೇಕಲ್ಲ ಅವನು. ಅವನಿಗೆ ಎಲ್ಲವು ದಾರಿಯೇ. ಮನೆಯಿಂದ ಹೊರಗೆ ಕರೆದುಕೊಂಡು ಹೋಗುವ ಮೊದಲು ಮನೆಯಲ್ಲಿಯೇ ಅವನೊಂದಿಗೆ ತಾಲೀಮು ನಡೆಸಿದೆವು. ಹಾಲಿನ ಒಂದು ಬದಿಯಿಂದ ಇನ್ನೊಂದು ಬದಿಗೆ ಅವನನ್ನು ಕರೆದುಕೊಂಡು ಹೋಗುವುದು (ಕೈಯ್ಯಲ್ಲಿ ಬಿಸ್ಕೆಟ್ಟಿನ ತುಂಡುಗಳನ್ನು ಹಿಡಿದುಕೊಂಡು!). ಬಿಸ್ಕೆಟ್ಟಿನ ಆಸೆಗೆ ಅವನು ನಮ್ಮನ್ನೇ ನೋಡುತ್ತ ಹೆಜ್ಜೆ ಹಾಕುತ್ತಿದ್ದ. ಹೀಗೆ ಅವನಿಗೆ ವಾಕಿಂಗ್ ತರಬೇತಿ ಆಯಿತು. ಹಗ್ಗದ ಒಂದು ತುದಿಯನ್ನು ಹಿಡಿದುಕೊಂಡು ಇನ್ನೊಂದು ತುದಿಯನ್ನು ಅವನ ಕಾಲರಿಗೆ ಸಿಕ್ಕಿಸಿ ಅವನು ಪುಟ್ಟ ಹೆಜ್ಜೆಗಳನ್ನಿಡುತ್ತ, ತುಂಡು ಬಾಲವನ್ನು ಅಲ್ಲಾಡಿಸುತ್ತ, ರಸ್ತೆಯಲ್ಲಿ ಕಂಡದ್ದನ್ನು ಮೂಸುತ್ತ ನಡೆಯುವಾಗ ಅವನ ಮೇಲೆಯೇ ಎಲ್ಲ ಧ್ಯಾನ. ನೇರ ದಾರಿಯಲ್ಲಿ ನಡೆಯುವುದಂತೂ ಗೊತ್ತೇ ಇಲ್ಲ. ಈಗ ಒಂದು ವರ್ಷದ ಬಳಿಕವೂ! ಹುಲ್ಲು, ಹೂವು, ಚಾಕೋಲೆಟ್ ಪೇಪರ್, ಕಲ್ಲು ಎಲ್ಲವು ತನ್ನನ್ನು ಕರೆಯುತ್ತಿವೆ ಎಂಬಂತೆ ಓಡುತ್ತ ಹೋಗುವ ಇವನನ್ನು ಎಳೆದುಕೊಂಡು ಮನೆಯ ಹತ್ತಿರದ ಪಾರ್ಕಿಗೆ ಕರೆದುಕೊಂಡು ಹೋದೆವು. ಬಿಫೋರ್ ಕೂರಾ ಅಂದರೆ ಕೂರಾ ನಮ್ಮ ಮನೆಗೆ ಇನ್ನೂ ಬರದೇ ಇದ್ದ ಸಮಯದಲ್ಲಿ ಈ ಪಾರ್ಕಿಗೆ ಪ್ರತಿದಿನವು ವಾಕಿಂಗಿಗೆಂದು ಬರುತ್ತಿದ್ದೆವಾದರೂ ಯಾವತ್ತು ಇಲ್ಲಿನ ನಾಯಿಗಳ ಪಾರ್ಕಿನತ್ತ ಗಮನ ಹೋಗಿರಲಿಲ್ಲ. ಹೇಳುತ್ತಾರಲ್ಲ, ನೀವು ಹೊಸ ಕಾರನ್ನು ತೆಗೆದುಕೊಂಡ ಮೇಲೆ ಅದೇ ಮಾಡೆಲ್ಲಿನ ಕಾರುಗಳು ಕಾಣಿಸಲು ಶುರು ಮಾಡುತ್ತವೆಂದು. ಹಾಗೆಯೇ ನಮ್ಮ ಮನೆಗೆ ನಾಯಿಯನ್ನು ತಂದ ಮೇಲೆ ನಾಯಿಗೆ ಸಂಬಂಧಿಸಿದ ಎಲ್ಲ ಸಂಗತಿಗಳು ನಮ್ಮ ಗಮನಕ್ಕೆ ಬರತೊಡಗಿದ್ದವು.

ಈ ಪಾರ್ಕಿನ ಒಂದು ಬದಿಯಲ್ಲಿ ಕಬ್ಬಿಣದ ಫೆನ್ಸ್ ಹಾಕಿ, ಹಸಿರಾದ ಹುಲ್ಲು ಬೆಳೆಸಿ ನಾಯಿಗಳಿಗೆ ಆಟವಾಡಲೆಂದು ವಿಶಾಲವಾದ ಜಾಗ ಕಲ್ಪಿಸಿದ್ದರು. ಅದರಲ್ಲಿಯೇ ಸಣ್ಣ ನಾಯಿಗಳಿಗೆ ಅಂದರೆ ಹದಿನೈದು ಕೆಜಿ ತೂಕದೊಳಗಿನ ನಾಯಿಗಳಿಗೆ ಪ್ರತ್ಯೇಕವಾದ ಜಾಗ. ಹದಿನೈದು ಕೆಜಿಗಿಂತಲು ಹೆಚ್ಚಿನ ತೂಕವಿದ್ದ ನಾಯಿಗಳಿಗೆ ತುಸು ದೊಡ್ಡದಾದ ಜಾಗ. ನಾಯಿಗಳ ತೂಕ ಅವುಗಳ ವಯಸ್ಸಿಗೆ ಸಂಬಂಧ ಪಟ್ಟಿರುವುದಿಲ್ಲ. ಕೆಲವು ನಾಯಿಗಳು ದೊಡ್ಡವಾದ ಮೇಲೆಯೂ ಹದಿನೈದು ಕೆಜಿಯ ಒಳಗೇ ಇರುತ್ತವೆ. ಕೂರಾನಿಗೆ ಈಗಿನ್ನು ಹದಿನಾರು ತಿಂಗಳು ಆದರೆ ಈಗ ಅವನ ತೂಕ ಇಪ್ಪತ್ತೈದು ಕೆಜಿಗಿಂತ ಹೆಚ್ಚಿದೆ.

ಶುರುವಿನಲ್ಲಿ ಕೂರಾನಿಗೆ ನಾಲ್ಕು ತಿಂಗಳಿದ್ದಾಗ ಅವನ ತೂಕ ಕಡಿಮೆ ಇದ್ದುದರಿಂದ ಚಿಕ್ಕ ನಾಯಿಗಳ ಪಾರ್ಕಿಗೆ ಹೋಗುತ್ತಿದ್ದೆವು. ನಾಯಿಯನ್ನು ಕಂಡರೆ ರಸ್ತೆ ಬದಲಾಯಿಸುತ್ತಿದ್ದ ನಾನು ಈಗ ಅಂತಹ ಅನೇಕ ನಾಯಿಗಳ ಮಧ್ಯದಲ್ಲಿ ಓಡಾಡುವುದೆಂದರೆ ನನ್ನ ಮಟ್ಟಿಗೆ ಅದು ದೊಡ್ಡ ಬದಲಾವಣೆ. ಆ ಮರಿಗಳೋ.. ಪುಟಾಣಿಗಳು. ಎತ್ತಿಕೊಂಡರೆ ಎದೆ ತುಂಬುವಂತಹ ಮುದ್ದು ಮರಿಗಳು ಪುಟು ಪುಟು ಎಂದು ಓಡಿ ಬರುತ್ತಿದ್ದರೆ ಹಿಡಿ ಪ್ರೀತಿಯೇ ಹೀಗೆ ಜೀವ ತುಂಬಿಕೊಂಡು ನನ್ನ ಹತ್ತಿರ ಬರುತ್ತಿದೆಯೇನೋ ಎನ್ನುವ ಹಾಗೆ. ಯಾರೇ ಗೇಟ್ ತೆಗೆದರೆ ಸಾಕು ಓಡಿ ಓಡಿ ಬಂದು ಎರಡು ಕೈಗಳನ್ನೆತ್ತಿ ಮೈ ಮೇಲೆ ಹತ್ತಲು ಶುರು. ಮೊದಲೆಲ್ಲ ಅವು ಹೀಗೆ ಮೈ ಮೇಲೆ ಹತ್ತಲು ಬಂದಾಗ ಒಂದು ಹೆಜ್ಜೆ ದೂರ ಸರಿಯುತ್ತಿದ್ದೆ. ಪ್ರತಿದಿನ ಹೋಗಲು ಶುರು ಮಾಡಿದ ಮೇಲೆ ಅಭ್ಯಾಸವಾಗತೊಡಗಿತು. ಅಲ್ಲಿ ಬಹಳಷ್ಟು ನಾಯಿ ಪೋಷಕರ ಪರಿಚಯವಾಯಿತು. ಅವರೆಲ್ಲರ ಬಗ್ಗೆ, ಅವರ ನಾಯಿಗಳ ಬಗ್ಗೆ ಬರೆಯಲಿಕ್ಕೆ ಬಹಳಷ್ಟಿದೆ. ಅದನ್ನೆಲ್ಲ ಮುಂದೆ ಬರೆಯುವೆ.


ಅವರ ಪರಿಚಯವಾದ ಮೇಲೆ ನಮಗೆ ನಾಯಿಗಳನ್ನು ಹೇಗೆಲ್ಲ ನೋಡಿಕೊಳ್ಳಬೇಕು ಎಂದು ಗೊತ್ತಾಯಿತು. ನಾಯಿಗಳಿಗೆಂದೇ ಅಷ್ಟು ವಿಧವಾದ ಆಟದ ಸಾಮಾನುಗಳಿವೆ ಎಂದು ತಿಳಿದದ್ದು ಸಹ ಆಗಲೇ. ಬಗೆಬಗೆಯ ಚೆಂಡುಗಳು, ಸದಾ ಕಚ್ಚುತ್ತಲೇ ಇರುವ ಅವುಗಳಿಗೆ ಕಚ್ಚಲು ಸಹಾಯವಾಗುವಂತಹ ಆಟಿಕೆಗಳು ಅಷ್ಟೇ ಅಲ್ಲ, ಅವುಗಳಿಗು ಬಟ್ಟೆಗಳು, ಕಾಲಿಗೆ ಪುಟ್ಟ ಶೂಸ್ ಎಲ್ಲ ಇರುತ್ತವೆ ಎಂದಾಗ, ಅಂತಹವನ್ನು ನೋಡಿದಾಗ ವಿಸ್ಮಯವಾಗಿದ್ದು ಸುಳ್ಳಲ್ಲ. ಕೂರಾ ನಾವು ಸಾಕುತ್ತಿರುವ ಮೊದಲ ನಾಯಿ ಎಂದು ಹೇಳಿದಾಗ ಅವರೆಲ್ಲ ಬಹಳ ಖುಷಿಯಲ್ಲಿ ಅಭಿನಂದಿಸಿದ್ದರು. ಆಗ ಗೊತ್ತಾಗಿದ್ದು ನಾವು ಕೂರಾನಿಗೆ ಕೆಲವೊಂದು ವ್ಯಾಕ್ಸಿನ್‌ಗಳನ್ನು ಹಾಕಿಸಬೇಕು ಎಂದು.

(ಮುಂದುವರೆಯುತ್ತದೆ)
(ಹಿಂದಿನ ಕಂತು: ಏನೆಂದು ಹೆಸರಿಡುವುದು ಈ ಚೆಂದದ ಕೂಸಿಗೆ?)