ಸುಮಾರು ನಾಲ್ಕು ಮೂವತ್ತಕ್ಕೆ ಯಾವುದೋ ಕನಸಿನ ಲೋಕದಲ್ಲಿದ್ದವನಿಗೆ, ಎಂಪಿ ಶಂಕರ್ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಪ್ರಭಾಕರ್, ಶಕ್ತಿಪ್ರಸಾದ್ ಮುಂತಾದವರೆಲ್ಲ ಒಟ್ಟಿಗೆ ಗಹಗಹಿಸಿ ನಕ್ಕ ಹಾಗೆ ದನಿ ಕೇಳಿ ಎಚ್ಚರವಾಯಿತು. ಕೆಲಕ್ಷಣದ ನಂತರ ಅದು ಚೇಚಿ ಮನೆಯ ಕೋಳಿಯ ಕೂಗು ಎಂಬ ಕಟು ವಾಸ್ತವ ಅರಿವಿಗೆ ಬಂತು. ಸರಿ ‘ಸುಸು’ ಮಾಡಿ ನೀರು ಕುಡಿದು ಮಲಗಿದರಾಯಿತು ಎಂದು, ಎಲ್ಲ ಮುಗಿಸಿ ಮಲಗಿದರೆ, ಅದರ ಆರ್ಭಟ ಇನ್ನಷ್ಟು ಹೆಚ್ಚಾಯಿತು. ಹಾಗೂ ಹೀಗೂ ಹೊರಳಿ ಎದ್ದು ನೋಡಿದರೆ ಇನ್ನು ಆರೂಮೂವತ್ತು.
ವಸಂತಕುಮಾರ್ ಕಲ್ಯಾಣಿ ಪ್ರಬಂಧ ನಿಮ್ಮ ಓದಿಗೆ
ಹಳ್ಳಿಯಲ್ಲಿ ನೆಲೆಸಬೇಕೆಂಬುದು ನನ್ನ ಬಹುದಿನದ ಬಯಕೆಯಾಗಿದ್ದರೂ, ಅದು ಅಷ್ಟು ಸುಲಭ ಸಾಧ್ಯವಲ್ಲವೆಂದು ಮನವರಿಕೆಯಾಗಿತ್ತು. ಬೆಂಗಳೂರಿನ ಹೊರವಲಯದ ಹಳ್ಳಿಗಳು ಬದಲಾವಣೆಗೆ ಒಳಗಾಗುತ್ತಿರುವಾಗ, ಮೂಲ ನಿವಾಸಿಗಳ ಹಳ್ಳಿಯ ಸೊಗಡು, ಹೊರಗಿನಿಂದ ಬಂದವರ ಧಿಮಾಕು ಸೇರಿ ಮಿಶ್ರತಳಿಯ ಸಂಸ್ಕೃತಿ, ಸಂಸ್ಕಾರ ತುಂಬಿದ ಹೊರವಲಯದ ಹಳ್ಳಿ – ಪಟ್ಟಣದಲ್ಲಿ ಸೈಟು ಖರೀದಿಸಿ, ದಿಮ್ಮಸಂದ್ರದಲ್ಲಿ ಮನೆ ಕಟ್ಟಿಸಿ ಬರುವುದು ಅನಿವಾರ್ಯವಾಯಿತು.
ಆಗಷ್ಟೇ ನಿವೃತ್ತನಾದ ನಾನು ಮಗಳ ಬಾಣಂತನದಲ್ಲೂ ಶೇಕಡ 50ರಷ್ಟು ಸಮಯ ನೀಡಿ ಈಗ ಮನೆಯ ಉಸ್ತುವಾರಿ ಹೊರಬೇಕಾಯಿತು. ಕಾರಣ ನೀವು ಊಹಿಸಿದಂತೆ ಬೆಂಗಳೂರಿನ ಕೆಳಮಧ್ಯಮ ವರ್ಗದವರ, ಖಾಸಗಿ ಕಂಪನಿಯ ನೌಕರರ ಜೀವನ ಸಾಗಬೇಕಾದರೆ ಇಬ್ಬರು ದುಡಿಯುವುದು ಅನಿವಾರ್ಯವೆಂಬ ಕಟು ಸತ್ಯ.
ಸಹಜವಾಗಿಯೇ ಈ ಬಡಾವಣೆಗಳು ಬ್ರಾಹ್ಮಣರ ಅಗ್ರಹಾರವೋ, ಕೆಚ್ಚೆದೆಯ ಕನ್ನಡಿಗರ ಕೂಟವೋ ಆಗಿರಲು ಸಾಧ್ಯವೇ ಇಲ್ಲ. ಒಂದು ಕಾಲದ ಬೆಂಗಳೂರಿನಲ್ಲಿ ‘ಎನ್ನಡಾ’ ಮಂದಿ ಇದ್ದಂತೆ ಈಗ ‘ಎಕ್ಕಡಾ’ ಮಂದಿ ಹೆಚ್ಚಾಗಿ, ಕನ್ನಡ ಬರುತ್ತಾ?! ಎಂದರೆ, ‘ಅಕ್ಕರಲೇದು’ ಎಂದು ಸ್ವಲ್ಪವೂ ಅಕ್ಕರೆ ಇಲ್ಲದೆ ತಲೆಯ ಮೇಲೆ ಮೊಟಕಿದಂತೆ ಹೇಳಿಬಿಡುತ್ತಾರೆ. ಆದರೆ ನಾನು ತೆಗೆದುಕೊಂಡ ಸೈಟ್ ನಂಬರ್ ಹದಿಮೂರರ ಎಡಬಲ, ನಂಬರ್ ಹನ್ನೆರಡರಲ್ಲಿ ಮಲಯಾಳಿ ಚೇಚಿ ಒಬ್ಬರಿದ್ದರೆ, ಹದಿನಾಲ್ಕರಲ್ಲಿ ತಮಿಳ್ ತಲೈವಾ ಇದ್ದರು. ಅಮ್ಮನ ಹುಟ್ಟೂರು ಕಾಸರಗೋಡು ಆದ್ದರಿಂದ, ಅದೀಗ ಕೇರಳದ ಜಿಲ್ಲೆಯೇ ಆಗಿರುವಾಗ ತುಸು ನಂಬರ್ ಹನ್ನೆರಡರ ಮೇಲೆ ಮನ ವಾಲಿತು. ಅದರಲ್ಲೂ ಆ ಮನೆಯ ಒಬ್ಬಳೇ ವಿವಾಹಿತ ಮಗಳು ದೀಪಚೇಚಿ- ಅಕ್ಕ ಎಂದು ಬದಲಿಸಿ ಕರೆಯಲು ಕನ್ನಡಿಗರಿಗೆ ಸಂಕೋಚ- ಆ ಮನೆಗೆ ನಿಜಾರ್ಥದಲ್ಲಿ ಯಜಮಾನಿ. ಅವರ ಯಜಮಾನ ಯಥಾ ಪ್ರಕಾರ ದುಬೈಬಾಬು. ಅಪ್ಪ ಅಮ್ಮ ಸಣ್ಣದೊಂದು ಹೋಟೆಲ್ ನಡೆಸುತ್ತಿದ್ದು ಅಲ್ಲಿ ಸಿಗುವ ಮೀನಿನ ಊಟ ದಿಮ್ಮಸಂದ್ರದಲ್ಲೇ ವರ್ಲ್ಡ್ ಫೇಮಸ್. ಹಾಗಾಗಿ ಹೈಸ್ಕೂಲ್ ಓದುತ್ತಿರುವ ಮಗ ಶಾಲೆಗೆ ಹೋಗಿಬಿಟ್ಟರೆ ಚೇಚಿಯೇ ಮನೆಯ ಯಜಮಾನಿ.
ಎರಡು ಬದಿ ಕಾಂಪೌಂಡ್ ಗೋಡೆ ಕಟ್ಟುವ ಪ್ರಮೇಯ ನಮಗೆ ಬರಲಿಲ್ಲ. ಪಂಚಾಯಿತಿ ವ್ಯಾಪ್ತಿ ಆದ್ದರಿಂದ ಇಂತಹ ಬದಿ ಇಷ್ಟೇ ಅಡಿ ಜಾಗ ಬಿಡಬೇಕೆಂಬ ಪಂಚಾಯತಿಯೇ ಇಲ್ಲ. ಎಲ್ಲಾ ಅವರವರ ಅನುಕೂಲ. ಮನೆ ಕಟ್ಟಿ ಬಂದ ಮೇಲೆಯೇ ಚೇಚಿ ಮನೆಯಲ್ಲಿ ನಾಯಿ ಇರುವ ವಿಷಯ ತಿಳಿದದ್ದು. ಚೇಚಿಯ ಮನೆ ಕಾರ್ನರ್ ಸೈಟ್‌ನಲ್ಲಿ ಇದ್ದುದರಿಂದ ಪೂರ್ವಕ್ಕೆ ಮುಖಮಾಡಿತ್ತು. ಅವರ ಮನೆಯ ಹಿಂಭಾಗ ನಮ್ಮ ಮನೆಯ ಬಲಕ್ಕಿತ್ತು. ಬಹುಷಃ ಅಲ್ಲಿಯವರೆಗೂ ಮುಂದೆ ಕಾವಲಿದ್ದ ನಾಯಿ ಹಿಂದಿನ ಷೆಡ್‌ಗೆ ವಾಸ ಬದಲಾಯಿಸಿತು. ನಾವೇನೂ ಪ್ರಾಣಿ ಪ್ರಿಯರಲ್ಲದಿದ್ದರೂ, ಹಗಲು ಹೊತ್ತಿನಲ್ಲಿ ಷೆಡ್‌ನ ಹೊರಗೆ ಠಳಾಯಿಸುವ ನಾಯಿಯೊಂದಿಗೆ ಸಣ್ಣಪುಟ್ಟ ಪ್ರೇಮ ತೋರಿಸಿ ವರ್ತಿಸುವುದು ಅನಿವಾರ್ಯವಾಯಿತು. ಹಾಗಾಗಿ ಅಳಿದುಳಿದ ಬ್ರೆಡ್ ಬಿಸ್ಕತ್ ಕೊಟ್ಟು ಬ್ಲಾಕಿಯೊಂದಿಗೆ ತಕ್ಕಮಟ್ಟಿಗೆ ಸ್ನೇಹ ಸಂಪಾದಿಸಿಕೊಂಡೆ.
ಮನೆಯಲ್ಲಿ ಹೆಚ್ಚಿನ ಅವಧಿ ನಾನೇ ಕಳೆಯಬೇಕಾದುದರಿಂದ, ಆಗಾಗ ಅದರ ಬೌಬೌ ಸ್ವಲ್ಪ ಕರ್ಕಶವೆನಿಸಿದರೂ, ಅದರಲ್ಲೂ ಚಿಂದಿ ಆಯುವವರು ಬಂದಾಗ ಆರ್ಭಟ ತುಸು ಜೋರೇ ಇದ್ದು -ಅವರು ಸಹ ಮಧ್ಯಾಹ್ನದ ಸಿಹಿ ನಿದ್ದೆಯ ಸಮಯದಲ್ಲೇ ಬರುತ್ತಿದ್ದರು- ಬೊಗಳಾಟದ ಸದ್ದು ಎರಡು ಮೂರು ನಿಮಿಷಗಳಲ್ಲೇ ಮುಗಿಯುತ್ತಿದ್ದುದರಿಂದ ಅಷ್ಟೇನೂ ಸಮಸ್ಯೆ ಆಗುತ್ತಿರಲಿಲ್ಲ. ಅಂತಹ ಬ್ಲಾಕಿ, ನಡುವೆ ಒಮ್ಮೆ ಅನಾರೋಗ್ಯಕ್ಕೆ ಒಳಗಾದರೂ ಬೇಗ ಚೇತರಿಸಿಕೊಂಡಿತು.
ಮೂರು ವರ್ಷ ಕಳೆದುದು ತಿಳಿಯಲಿಲ್ಲ. ಪ್ರಾಣಿ ಪಕ್ಷಿಗಳ ಆಯುರ್ ಲೆಕ್ಕದಲ್ಲಿ ನಾನು ಶತದಡ್ಡ. ಬ್ಲಾಕಿಗೆ ಎಷ್ಟು ವಯಸ್ಸಾಗಿತ್ತೋ ತಿಳಿಯದು. ಅದು ಪುನಃ ಕಾಯಿಲೆಗೆ ಒಳಗಾಯಿತು. ಅದು ಅದರ ಅಂತಿಮ ಯಾತ್ರೆಗೆ ಸಿದ್ಧವಾಗುತ್ತಿದೆ ಎಂಬ ಕಲ್ಪನೆ ನನಗಿರಲಿಲ್ಲ. ಅಲ್ಲದೆ ಅದರ ಸ್ಥಾನದಲ್ಲಿ ಬೇರೊಂದು ಪ್ರಾಣಿ ವಕ್ಕರಿಸಿ ನನಗೆ ಯಮ ಯಾತನೆ ನೀಡುವ ಯಾವ ಸೂಚನೆಯೂ ಇರಲಿಲ್ಲ. ಇಲ್ಲದಿದ್ದರೆ ಬ್ಲಾಕಿಯ ದೀರ್ಘಾಯುಸ್ಸಿಗಾಗಿ ಕಂಡ ಕಂಡ ದೇವರಿಗೆ ಹರಕೆ ಹೊರಬಹುದಿತ್ತು. ಆ ದಿನ ಬಂತು. ಬ್ಲಾಕಿ ಕಣ್ಣು ಮುಚ್ಚಿತು. ನನ್ನ ಕಣ್ಣಿನಲ್ಲಿ ನೀರಾಡುವಷ್ಟು ಗೆಳೆತನ ಏನು ಇರಲಿಲ್ಲ. ಬಾಯಿಯಲ್ಲಿ ಹಲ್ಲಿಯಂತೆ ಲೊಚ ಲೊಚ ಸದ್ದು ಮಾತ್ರ ಬಂತು. ಬ್ರೆಡ್ ಬಿಸ್ಕತ್ ತಿನ್ನುವಾಗ ನೆನಪಾಗುತ್ತಿತ್ತು ಅಷ್ಟೇ.
ಇದ್ದಕ್ಕಿದ್ದ ಹಾಗೆ ಒಂದು ದಿನ ಬಲಪಕ್ಕದ ಕಾಂಪೌಂಡಿನಲ್ಲಿ, ಚೇಚಿ ಮನೆಯ ಹಿಂಭಾಗ ಕೊಕ್ಕೊಕೋ … ಕೋ ದನಿ ಕೇಳಿಸಿತು. ಓಹೋ ಕೋಳಿ ತಂದಿದ್ದಾರೆ, ಸದ್ಯದಲ್ಲೇ ಯಾವುದೋ ಹಬ್ಬವಿರಬಹುದು. ಅಥವಾ ಅವರಿಗೆ ವಿಶು ಓಣಂ ನಂತಹ ಸಸ್ಯಾಹಾರಿ ಹಬ್ಬ ಬಿಟ್ಟರೆ ಉಳಿದೆಲ್ಲ ದಿನ ಮೀನು ಊಟ ಕಂಪಲ್ಸರಿಯಾದ್ದರಿಂದ, ಕೋಳಿಯ ವಿಲೇವಾರಿ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆ ಸಂಜೆ, ದಿನ ಪತ್ರಿಕೆಯಲ್ಲಿ ಹಾಗೆ ಕಣ್ಣಾಡಿಸುತ್ತಿದ್ದಾಗ ದಿನ ಭವಿಷ್ಯ ಗಮನಿಸಿದೆ. ನನ್ನ ರಾಶಿಯಲ್ಲಿ ಕೆಲವರಿಗೆ ಶನಿ ಏಳನೇಮನೆ ಪ್ರವೇಶಿಸುವುದರಿಂದ ವೃಥಾ ಕಲಹ, ನೆಮ್ಮದಿ ಹಾಳು… ಮುಂತಾಗಿ ಇತ್ತು. ನನ್ನ ತಾರುಣ್ಯದಲ್ಲಿ ಸಾಡೇಸಾತಿ ಮುಗಿದುದರಿಂದ, ಅಲ್ಲದೆ ನನ್ನ ಸಾಮಾನ್ಯ ವಿದ್ಯಾಭ್ಯಾಸಕ್ಕೂ ಸರ್ಕಾರಿ ನೌಕರಿ ಅಲಭ್ಯತೆಗೂ ನಾನು ಅದೇ ಕಾರಣ ನೀಡುತ್ತಿದ್ದುದರಿಂದ ನಾನೀಗ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಏಳರಾಟ ಇಲ್ಲದಿದ್ದರೂ ನನ್ನ ನೆಮ್ಮದಿ ಹಾಳಾಗುವುದೆಂಬುದಕ್ಕೆ ಮುಂಜಾನೆ ನಾಲ್ಕು ಮೂವತ್ತಕ್ಕೆ ನಾಂದಿಯಾಯಿತು.
ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು. ನನಗೆ ಬಾಲ್ಯದಿಂದ ಇಂದಿನವರೆಗೂ ಬೆಳಿಗ್ಗೆ ಬೇಗ ಏಳುವುದೆಂದರೆ ಅಲರ್ಜಿ. ಬೆಳಗಿನ ಜಾವದ ಸಿಹಿ ನಿದ್ದೆ ಸುಮಾರು ಏಳು-ಎಂಟರವರೆಗೂ ಮುಂದುವರೆಯಲೆಂಬ ಬಯಕೆ. ಆದರೆ ಅದಕ್ಕೆ ಬಾಲ್ಯದಿಂದಲೂ ಅವಕಾಶ ಕೂಡಿ ಬರಲಿಲ್ಲ. ಹೈಸ್ಕೂಲಿನಲ್ಲಿ ವಿಪರೀತ ವಿದ್ಯಾರ್ಥಿಗಳ ಸಂಖ್ಯೆ. ಕೊಠಡಿ ಸಾಲುವುದಿಲ್ಲವೆಂದು ಎಂಟನೇ ತರಗತಿಯ ಕೆಲವು ಸೆಕ್ಷನ್‌ಗಳನ್ನು ಬೆಳಿಗ್ಗೆ ಎಂಟಕ್ಕೆ ಶುರು ಮಾಡುತ್ತಿದ್ದರು. ಆಗೆಲ್ಲ ಸರ್ಕಾರಿ ಶಾಲೆಗಳಿಗೆ ಬೇಡಿಕೆಯಿದ್ದ ಹಾಗೂ ಅನಿವಾರ್ಯವೂ ಆಗಿದ್ದ ಕಾಲ. ಯಶವಂತಪುರದಿಂದ ಮಲ್ಲೇಶ್ವರಂ 18ನೇ ಕ್ರಾಸಿನ- ಕಲ್ ಬಿಲ್ಡಿಂಗ್, ಕಾಗೆ ಗಡಿಯಾರ, ದೊಡ್ಡಿ ಇತ್ಯಾದಿ ನಾಮಾಂಕಿತಗಳಿದ್ದ – ಸರ್ಕಾರಿ ಶಾಲೆಗೆ ನಡೆದು ಹೋಗುತ್ತಿದ್ದೆವು ಹಾಗೂ ಅಪ್ಪ್ ಅಂಡ್ ಡೌನ್ ಬಸ್ಸಿನ ಹತ್ತು ಪೈಸೆ ಉಳಿಸಿದರೆ, ಎರಡು ಇಡ್ಲಿ ತಿನ್ನಬಹುದಿತ್ತು. ಹಾಗಾಗಿ ಬೇಗ ಏಳುವುದು ಅನಿವಾರ್ಯ. ಭಾನುವಾರವೂ ಆ ಸುಖನಿದ್ರೆಯ ಭಾಗ್ಯವಿಲ್ಲ. ತಂದೆಯವರು ಕೆಲಸಕ್ಕೆ ಹೋಗುವಾಗ ಪೇಪರ್ ಕೊಂಡು ಹೋಗುತ್ತಿದ್ದರು. ಭಾನುವಾರ ನನ್ನನ್ನು ಎಬ್ಬಿಸಿ ಕಳಿಸುತ್ತಿದ್ದರು. ತಡವಾದರೆ ಪೇಪರ್ ಸಿಗಲ್ಲ. ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದ ಅಂಗಡಿ.
ನಂತರವೂ ಅನೇಕ ಕಾರಣಗಳಿಂದ- ಆಗಾಗ ಸಿಹಿ ನಿದ್ದೆಯ ಸೌಲಭ್ಯ ಸಿಗುತ್ತಿದ್ದರೂ -ಅದು ಸತತವಾಗಿರಲಿಲ್ಲ. ಅಂತಹುದರಲ್ಲಿ ಈಗ ನಿವೃತ್ತಿಯ ಐದು ವರ್ಷದ ನಂತರ ಅಂದರೆ 58+5 =63 ನೇ ವಯಸ್ಸಿನಲ್ಲಿ, ಅದೂ ನನ್ನ ಒತ್ತಾಯಕ್ಕೆ ಹೆಂಡತಿ ಕೆಲಸ ಬಿಟ್ಟು ಮನೆಯಲ್ಲಿ ಇದ್ದುದರಿಂದ, ಅವಳಿಗೆ ಅಡುಗೆ ತಿಂಡಿಗೆ ಸಹಾಯ ಮಾಡುವ, ಒಂದೂವರೆ ಕಿಲೋಮೀಟರ್ ದೂರದ ಬಸ್ಟಾಪ್‌ಗೆ ಬಿಟ್ಟು ಬರುವ ಕೆಲಸ ತಪ್ಪಿ, ಮೇಲಿನ ಮನೆಯಲ್ಲಿದ್ದ ಒಬ್ಬಳೇ ಮಗಳು ಮನೆಯಿಂದಲೇ ಕೆಲಸ ಶುರು ಮಾಡಿ ಅವಳ ಮಗನನ್ನು ನೋಡಿಕೊಳ್ಳುವ ನನ್ನ ಕೆಲಸಕ್ಕೆ ತುಸು ವಿರಾಮ ದೊರೆತಿರುವಾಗ, ಇನ್ನೇನು ಇನ್ಮೇಲೆ ನಾನು ಬೆಳಗ್ಗೆ ಎಂಟರವರೆಗೂ ಮಲಗಬಹುದು, ಅದರಲ್ಲೂ ಐದಕ್ಕೇನಾದರೂ ಎಚ್ಚರವಾದರೆ ಕಾಫಿಯೋ, ಟೀಯೋ, ಅಥವಾ ಪತಂಜಲಿ ದಿವ್ಯ ಪೇಯವೋ ಕುಡಿದು ಮುಸುಕೆಳೆದರೆ ಎಂಟರವರೆಗೂ ಗೊರಕೆ (ಬೇರೆಯವರು ಹೇಳುವಂತೆ) ಹೊಡೆಯಬಹುದೆಂಬ ನನ್ನ ಆಶಾ ಗೋಪುರ ಸುನಾಮಿಗೆ ಸಿಕ್ಕಿ ನೆಲಸಮವಾದರೆ??
ಸುಮಾರು ನಾಲ್ಕು ಮೂವತ್ತಕ್ಕೆ ಯಾವುದೋ ಕನಸಿನ ಲೋಕದಲ್ಲಿದ್ದವನಿಗೆ, ಎಂಪಿ ಶಂಕರ್ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಪ್ರಭಾಕರ್, ಶಕ್ತಿಪ್ರಸಾದ್ ಮುಂತಾದವರೆಲ್ಲ ಒಟ್ಟಿಗೆ ಗಹಗಹಿಸಿ ನಕ್ಕ ಹಾಗೆ ದನಿ ಕೇಳಿ ಎಚ್ಚರವಾಯಿತು. ಕೆಲಕ್ಷಣದ ನಂತರ ಅದು ಚೇಚಿ ಮನೆಯ ಕೋಳಿಯ ಕೂಗು ಎಂಬ ಕಟು ವಾಸ್ತವ ಅರಿವಿಗೆ ಬಂತು. ಸರಿ ‘ಸುಸು’ ಮಾಡಿ ನೀರು ಕುಡಿದು ಮಲಗಿದರಾಯಿತು ಎಂದು, ಎಲ್ಲ ಮುಗಿಸಿ ಮಲಗಿದರೆ, ಅದರ ಆರ್ಭಟ ಇನ್ನಷ್ಟು ಹೆಚ್ಚಾಯಿತು. ಹಾಗೂ ಹೀಗೂ ಹೊರಳಿ ಎದ್ದು ನೋಡಿದರೆ ಇನ್ನು ಆರೂಮೂವತ್ತು. ಹೊರಗೆ ಬಂದು ನೋಡಿದವನಿಗೆ ಇನ್ನೊಂದು ಅಚ್ಚರಿ! ಕೂಗು ಕೇಳಿ ಹೊರಳಿ ನೋಡಿದರೆ ಕೂಗುತ್ತಿದ್ದುದು ಕೋಳಿಯಲ್ಲ ಹುಂಜ!! ಅಣ್ಣಾವ್ರ ‘ಬೆಳ್ಳಿ ಮೂಡಿತು ಕೋಳಿ ಕೂಗಿತು’ ಹಾಡು ಗುನುಗುವಾಗ ಅವರ ಹಾಗೆ ಕುಣಿಯುತ್ತಿದ್ದವನು ನಾನು (ಒಬ್ಬನೇ ಇದ್ದಾಗ) ಅಣ್ಣಾವ್ರು ಸುಳ್ಳು ಹೇಳಲು ಸಾಧ್ಯವೇ?! ಅಥವಾ ಎರಡೂ ಸರದಿ ಮೇಲೆ ಕೂಗಬಹುದೇ? ಗಮನಿಸಿ ನೋಡಿದಾಗ ಎರಡು ಕೋಳಿಗಳೂ ಒಂದು ಹುಂಜವೂ ಇತ್ತು. ಆ ಎರಡು ಕೋಳಿಗಳು ತಮ್ಮಷ್ಟಕ್ಕೆ ತಾವು ಹಾಡು ಗುನುಗುವ ಹಾಗೆ ಕಂಡರೆ ಈ ಹುಂಜ ಮಾತ್ರ ಅಬ್ಬರಿಸಿ ಬೊಬ್ಬಿರಿಯುತ್ತಿತ್ತು. ನನಗೆ ನನ್ನ ಅರುವತ್ತಮೂರನೇ ವಯಸ್ಸಿನಲ್ಲಿ ಜ್ಞಾನೋದಯವಾಗಿತ್ತು. ಕೋಳಿ ಕೂಗುವುದೆಂದರೆ ಅದು ನಿಜವಾದ ಅರ್ಥದಲ್ಲಿ ಹುಂಜ ಕೂಗುವುದೇ ಎಂದು. ಅಲ್ಲಿಂದ ನನ್ನ ನಿರಂತರ ಅಧ್ಯಯನ ಶುರುವಾಯಿತು.
ಮನೆಯಲ್ಲಿ ಹೆಚ್ಚಿನ ಅವಧಿ ನಾನೇ ಕಳೆಯಬೇಕಾದುದರಿಂದ, ಆಗಾಗ ಅದರ ಬೌಬೌ ಸ್ವಲ್ಪ ಕರ್ಕಶವೆನಿಸಿದರೂ, ಅದರಲ್ಲೂ ಚಿಂದಿ ಆಯುವವರು ಬಂದಾಗ ಆರ್ಭಟ ತುಸು ಜೋರೇ ಇದ್ದು -ಅವರು ಸಹ ಮಧ್ಯಾಹ್ನದ ಸಿಹಿ ನಿದ್ದೆಯ ಸಮಯದಲ್ಲೇ ಬರುತ್ತಿದ್ದರು- ಬೊಗಳಾಟದ ಸದ್ದು ಎರಡು ಮೂರು ನಿಮಿಷಗಳಲ್ಲೇ ಮುಗಿಯುತ್ತಿದ್ದುದರಿಂದ ಅಷ್ಟೇನೂ ಸಮಸ್ಯೆ ಆಗುತ್ತಿರಲಿಲ್ಲ.
ರಾತ್ರಿ ಮಲಗುವಾಗಲೇ ಎಷ್ಟು ಹೊತ್ತಿಗೆ ಹುಂಜದ ಆರ್ಭಟಕ್ಕೆ ಎಚ್ಚರವಾಗಬಹುದು.. ಎಂಬ ಯೋಚನೆ. ನನಗೆ ತಿಳಿದ ಮಟ್ಟಿಗೆ ಸುಮಾರು ನಾಲ್ಕು ಮೂವತ್ತರಿಂದ ನಾಲ್ಕು ನಲವತ್ತರ ಒಳಗೆ. ಸುಮಾರು ಹತ್ತರಿಂದ ಹನ್ನೆರಡು ಬಾರಿ ಕೂಗುತ್ತಿತ್ತು. ನಂತರ ವಿರಾಮ. ಅದು ಮುಗಿಯುತ್ತೋ ಮುಂದುವರೆಯುವುದೋ ಎಂಬ ನಿರೀಕ್ಷೆಯಲ್ಲಿ ನಿದ್ದೆ ನನ್ನಿಂದ ಎದ್ದು ಹೋಗಿರುತ್ತಿತ್ತು. ನಾನು ಮಾತ್ರ ಹಾಸಿಗೆಯಲ್ಲೇ. ಪುನಃ ಇನ್ನೇನು ನಿದ್ದೆ ಹತ್ತಿತೆನ್ನುವಾಗ ಸುಮಾರು ಆರು ಗಂಟೆಯಿಂದ ಸತತ ಅರ್ಧ ಗಂಟೆ ಕೋ ಕೋ. ಇನ್ನೊಮ್ಮೆ ಗಮನಿಸಿದೆ… ಒಂದು ಕೂಗಿಗೂ ಇನ್ನೊಂದಕ್ಕೂ ನಡುವೆ ಸುಮಾರು ಹನ್ನೆರಡು ಸೆಕೆಂಡುಗಳ ಅಂತರ. ಆದರೆ ಮತ್ತೊಮ್ಮೆ ಗಮನಿಸುವಾಗ ಇದು ಹದಿನೈದು ಸೆಕೆಂಡ್ ಆಗಿತ್ತು!! ಹೋಗಲಿ ರಾತ್ರಿ (?) ಸರಿ ನಿದ್ದೆ ಆಗಲಿಲ್ಲವೆಂದು, ಸ್ನಾನ ಪೂಜೆ, ತಿಂಡಿ, (ಮಾತ್ರೆ) ಮುಗಿಸಿ, ಪೇಪರ್ ಹಿಡಿದು ಮಂಚದ ಮೇಲೆ ಅಡ್ಡಾದರೆ ಅದರ ಸುಳಿವು ಆ ಪಾಪಿ ಮುಂಡೆದಕ್ಕೆ ಹೇಗೆ ತಿಳಿಯುತ್ತಿತ್ತೋ… ಮತ್ತೆ ಶುರು ಕೊಕ್ ಕೋ ಕೋ… ಮಧ್ಯಾಹ್ನದ ಊಟದ ನಂತರ ಸುಧಾ, ತರಂಗ ಕೈಯಲ್ಲಿ ಹಿಡಿದು ಮಂಚಕ್ಕೊರಗಿದರೆ ಎರಡರಿಂದ ಎರಡು ಮೂವತ್ತಕ್ಕೆ ಸಣ್ಣ ನಿದ್ರೆ ತೆಗೆಯುವ ಅಭ್ಯಾಸ. ಈಗಲೂ ಅದಕ್ಕೆ ಅದರ ಸಿಕ್ಸ್ತ್ ಸೆನ್ಸ್ ಹೇಳಿಬಿಡುತ್ತಿತ್ತು. ಶುರು… ಕೊಕ್ಕೋ ಕೋ ಕೋ….. ನನಗೆ ಅದರ ದನಿ ಕೇಳಿದಾಗಲೆಲ್ಲ ಮೈ ಉರಿಯಲು ಶುರು… ಆದರೆ ನನ್ನ ಹೆಂಡತಿಗೆ ಅದು ರಾಗವಾಗಿ ಲೋ..ಕ..ನಾ..ಯ..ಕಾ.. ಎನ್ನುವಂತೆ ಕೇಳುವುದಂತೆ. ಅವಳಿಂದ ಕಲಿತ ಮೊಮ್ಮಗನೂ ಕೋಳಿ …ಸಾರಿ… ಹುಂಜ ಕೂಗಿದಾಗ ಲೋ..ಕ..ನಾ..ಯ..ಕಾ… ಅಂತ ರಿಪೀಟ್ ಮಾಡುತ್ತಿದ್ದ. ನನಗೆ ಉರಿ ಈ ದೇಶವನ್ನ ವಂಶಾಡಳಿತದಿಂದ ಹೊರ ತಂದ ಮಹಾಪುರುಷ ಜೆ.ಪಿ. ಅವರ ಬಿರುದು ಅದು ಎಂದು ಅಬ್ಬರಿಸಿದ ಮೇಲೆ ಆ ಪದಾವಳಿ ನಿಂತು ಹೋಯಿತು.
ರಾತ್ರಿ ಆದಂತೆ ಯೋಚನೆ. ಚಳಿಗಾಲವಾದ್ದರಿಂದ ಎಲ್ಲಾ ಕಿಟಕಿಗಳನ್ನ ಹಾಕುವುದು, ಬೆಳಗಿನ ಜಾವ ಎದ್ದಾಗ ರೂಮಿನ ಬಾಗಿಲನ್ನು ಹಾಕುವುದು. ಉಹೂಂ ಆದರೂ ಅದರ ಆರ್ಭಟ ಶೇಕಡಾ ಹತ್ತರಷ್ಟು ಮಾತ್ರ ಕಡಿಮೆ. ಅರೆ… ಹೀಗೇಕೆ..? ಎಂದು ಹುಡುಕ ಹೊರಟವನಿಗೆ ತಿಳಿದ ಸತ್ಯ, ನಮ್ಮ ಮನೆಗೆ ಹಾಕಿಸಿದ್ದುದು ಉಳಿತಾಯದ ದೃಷ್ಟಿಯಿಂದ ಅಲ್ಯೂಮಿನಿಯಂ ಫ್ರೇಂನ ಸ್ಲೈಡಿಂಗ್ ಕಿಟಕಿಗಳು. ಅದು ಸಂಪೂರ್ಣ ಸೌಂಡ್ ಪ್ರೂಫ್ ಅಲ್ಲ. ಚೇಚಿ ಮನೆಯವರಿಗೆ ಸೌಂಡ್ ಕೇಳುವುದಿಲ್ಲವೋ? ಅವರ ಮನೆಯ ಕಿಟಕಿ ಮರದ್ದು… ಅಲ್ಲದೇ ಅವರು ಕಿಟಕಿ ಸಂಪೂರ್ಣ ಬಂದ್ ಮಾಡಿ ಇನ್ನೊಂದು ಬದಿಯ ಕೋಣೆಗಳಲ್ಲಿ ಮಲಗುತ್ತಿದ್ದರು. ನನ್ನ ಹೆಂಡತಿಗೆ ಕೇಳಿದರೆ ‘ನಾನು ಅದನ್ನು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ’ ಎಂದು ವೇದಾಂತ ಹೇಳಿದಳು. ಸರಿ ನಾನೂ ಪ್ರಯತ್ನಿಸೋಣ ಎಂದು ಆ ರಾತ್ರಿ ಕಳೆದು ಬೆಳಗಿನ ಜಾವ ಕೊಕ್ಕೋ..ಕೋ..ಕೋ..ಶುರುವಾದಾಗ ಓಂ ನಮಃ ಶಿವಾಯ ಹೇಳಿಕೊಳ್ಳಲು ಪ್ರಾರಂಭಿಸಿದೆ. ಒಮ್ಮೊಮ್ಮೆ ಗೋವಿಂದಾಯ ನಮಃ. ಇಬ್ಬರೂ ಕೈ ಹಿಡಿಯಲಿಲ್ಲ. ಕಾರಣ ಗಮನವೆಲ್ಲಾ ಕೊಕ್ಕೊಕೊ ಕಡೆಗೆ!
ಎರಡು ಕೋಳಿಗಳು ಇದ್ದವೆಂದು ಹೇಳಿದೆನಲ್ಲ… ಅದರಲ್ಲಿ ಒಂದಕ್ಕೆ ಕುತ್ತಿಗೆ ಬಳಿ ಗಾಯವಾದಂತಾಗಿತ್ತು. ಒಮ್ಮೆ ಅವುಗಳ ಆಟ ಗಮನಿಸುತ್ತಾ, ಕಣ್ಣಲ್ಲಿ ಕಿಡಿ ಕಾರುತ್ತಾ ನಿಂತಿದ್ದೆ. ಬಾಯಲ್ಲಿ ಶತ್ರು ನಿವಾರಣಾ ಮಂತ್ರ…. ಬಾಲ್ಯದಲ್ಲಿ ನಡೆದ ಕಥೆಯೊಂದರಲ್ಲಿ ಋಷಿಯ ಕಣ್ಣೋಟಕ್ಕೆ ಹಕ್ಕಿ ಸುಟ್ಟು ಬಿದ್ದಂತೆ ಆಗಲಿಲ್ಲ. ಆದರೆ ಇನ್ನೊಂದು ವಿಷಯ ಸ್ಪಷ್ಟವಾಯಿತು. ಆ ಎರಡು ಕೋಳಿಗಳಲ್ಲಿ ಒಂದು ಹುಂಜದ ಪಕ್ಕದಲ್ಲಿ ಸ್ಟೈಲಾಗಿ ಓಡಾಡಿಕೊಂಡು ಕಾಳು ತಿನ್ನುತ್ತಿದ್ದರೆ ಇನ್ನೊಂದು ಕೋಳಿ ಹತ್ತಿರ ಹೋದಾಗ ಮೊದಲ ಕೋಳಿ ಓಡಿಸಿಬಿಡುತ್ತಿತ್ತು.. ಅದಕ್ಕೆ ಹುಂಜದ ಸಾತ್ ಕೂಡ!! ಅವುಗಳ ದಾಳಿಯಿಂದಲೇ ಒಂದು ಕೋಳಿಯ ಕುತ್ತಿಗೆಯ ಗಾಯ.
ತಕ್ಷಣ ಹೊಳೆಯಿತು.. ಜೀ ಕನ್ನಡದಲ್ಲಿ ಅಥವಾ ಕಲರ್ಸ್ ಕನ್ನಡದಲ್ಲಿ ‘ಸುಬ್ಬಲಕ್ಷ್ಮಿ ಸಂಸಾರ’ ಎನ್ನುವ ಧಾರಾವಾಹಿ ಬರುತ್ತಿತ್ತು. ಆಗಾಗ ಅದನ್ನು ನನ್ನ ಶ್ರೀಮತಿ ನೋಡುತ್ತಿದ್ದಳು. ನಾನು ಮಧ್ಯಮಧ್ಯ ಗಮನಿಸುತ್ತಿದ್ದೆ. ಇವುಗಳ ಕಥೆಯೂ ಆ ಸೀರಿಯಲ್‌ನಂತೆಯೇ…. ಇದು ಸುಬ್ಬಲಕ್ಷ್ಮಿಯ ಕೇಸೇ… ಇನ್ನೊಂದು ಶನಾಯ. ಹುಂಜ ಗುರುಮೂರ್ತಿ ಅಲಿಯಾಸ್ ಗ್ಯಾರಿ. ಆದರೆ ಸೀರಿಯಲ್‌ನಲ್ಲಿ ಸುಬ್ಬಲಕ್ಷ್ಮಿ ದಪ್ಪಗಿದ್ದರೆ ಶನಾಯಾ ಕಡ್ಡಿ ಖಂಡೆ ರಾಣಿ. ಇದರಲ್ಲಿ ನನ್ನ ಪ್ರಕಾರ ಗಾಯ ಆಗಿದ್ದು ಸುಬ್ಬಲಕ್ಷ್ಮಿಗೆ. ಗ್ಯಾರಿ ಮಾತ್ರ ಡುಮ್ಮಿ ಶನಾಯ ಜೊತೆ ಖುಷಿಯಾಗಿ ಓಡಾಡಿಕೊಂಡಿದ್ದ. ಇದರ ನಡುವೆ ಸುಬ್ಬಲಕ್ಷ್ಮಿ -ಗ್ಯಾರಿ, ಶನಾಯರ ಕಾಟ ತಡೆಯಲಾರದೆ- ಕಾಂಪೌಂಡ್ ಹತ್ತಿ, ನಮ್ಮ ಆವರಣಕ್ಕೆ ಜಂಪ್ ಮಾಡಿ… ನಾಲ್ಕಾರು ಕಡೆ ಕಕ್ಕ ಮಾಡಿ ಬಿಡುತ್ತಿತ್ತು. ಅಲ್ಲದೆ ಅಪರೂಪಕ್ಕೆ ಚಿಗುರಿದ್ದ ಗಿಡಗಳ ಎಲೆಗಳನ್ನೆಲ್ಲ ಸ್ವಾಹ ಮಾಡಿಬಿಡುತ್ತಿತ್ತು. ನನಗೋ ಅವುಗಳ ಕಕ್ಕ ಬಳಿಯಲೇನೂ ಬೇಸರ ಇಲ್ಲ, ಗಿಡ ಹಾಳಾದರೂ ಚಿಂತೆಯಿಲ್ಲ.. ಆ ಹುಂಜದ ಕರ್ಕಶ ದನಿ ತಪ್ಪಿದರೆ ಸಾಕಿತ್ತು. ಅದರಲ್ಲೂ ಒಮ್ಮೆ ಗಮನಿಸುವಾಗ (ನಾನು ಅಂಗಳಕ್ಕೆ ಇಳಿದಾಗಲೆಲ್ಲ ಗಮನಿಸುತ್ತಿದ್ದುದೇ ಆ ಹುಂಜವನ್ನು, ಅದೇನಾದರೂ ಶಿವನ ಪಾದ ಸೇರಿರಬಹುದೇ ಅಥವಾ ಚೇಚಿ ಕುಟುಂಬದ ಹೊಟ್ಟೆ…?) ಅದು ಕೂಗಲು ಶುರು ಮಾಡಿತು…. ಅಬ್ಬಾ… ಏನದರ ಭಂಗಿ. ತನ್ನ ದೇಹದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡು, ನೀಳ ಕುತ್ತಿಗೆಯನ್ನು ಇನ್ನಷ್ಟು ನೇರ ಮಾಡಿ -ಕೃಷ್ಣಮೂರ್ತಿ ಪುರಾಣಿಕರ, ರಾಧಾ ದೇವಿಯವರ ಕಾದಂಬರಿಗಳಲ್ಲಿ, ಜಾನಪದದಲ್ಲಿ ಹೆಣ್ಣು ತವರ ಬಿಟ್ಟು ಹೊರಡುವಾಗ ಬಣ್ಣಿಸುತ್ತಾರಲ್ಲ ಹಾಗೆ -ಗಂಟಲ ಸೆರೆಯುಬ್ಬಿಸಿ ಧ್ವನಿ ಹೊರದಬ್ಬಿತು. ನೋಡಿ ನಾನು ಬೆರಗಾಗಿ ಬಿಟ್ಟೆ. ಹಳ್ಳಿಗಳಲ್ಲೇನೋ ಸರಿ.. ಎಲ್ಲರೂ ಹೊಲಗದ್ದೆಗಳ ಕೆಲಸಕ್ಕೆ ಬೆಳಗು ಮುಂಜಾನೆ ಹೊರಡುವವರೇ… ಅವರನ್ನೆಬ್ಬಿಸಲಿ. ಆದರೆ… ಈ ಊರುಗಳಲ್ಲಿ, ಎಲ್ಲಾ ಶಿಫ್ಟಿನ ಕೆಲಸಗಾರರು ಇರುತ್ತಾರೆ. ನಮ್ಮ ಅಳಿಯನೇ ಮದ್ಯರಾತ್ರಿ ಬಂದು ಮಲಗುತ್ತಾನೆ ಅಂತವರ ಪಾಡೇನು?
ಸರಿ ನನ್ನ ಸಮಸ್ಯೆಗೆ ಪರಿಹಾರವೇನು?
೧) ಮನೆ ಖಾಲಿ ಮಾಡಿ ಹೋಗೋಣ.… ಸಾಧ್ಯವಿಲ್ಲ ಸ್ವಂತ ಮನೆ.
೨) ಏನಾದರೂ ಹಾಕಿ ಅದನ್ನು ಸಾಯಿಸಿ!…. ಶಾಂತಂಪಾಪಂ!!
೩) ಚೇಚಿ ಹತ್ತಿರ ಸಮಾಧಾನದಿಂದ ಮಾತನಾಡಿ, ಅನಿವಾರ್ಯವಾದರೆ ದೀರ್ಘ ದಂಡ ಹಾಕಿ – ಛೆ… ನಾನು ಹಿರಿಯ, ನಮ್ಮ ಮನೆಯಲ್ಲಿ ಕೋಲಾಹಲ!
೪) ಅವುಗಳ ಬೆಲೆಯನ್ನು ಕೊಟ್ಟು ನೀವೇ ಇದನ್ನು ಸ್ವಾಹ ಮಾಡಿ ಎನ್ನುವುದು.
ತಿಂಗಳಿಗೆ ಅದು ಎಷ್ಟು ಮೊಟ್ಟೆ ಇಡಲು ಸಹಕರಿಸುತ್ತದೊ ಅದನ್ನು ಕೊಂಡು ತಂದು ಇವರಿಗೆ ಕೊಟ್ಟುಬಿಡುವುದು.…. ಎಕ್ಸೆಟ್ರಾ ..
ಎಕ್ಸೆಟ್ರಾ…
ಈ ನಡುವೆ ‘ಸುಬ್ಬಲಕ್ಷ್ಮಿ’ ಕಾಣೆಯಾಗಿದ್ದಳು. ಶನಾಯ ದಾರಿ ಸುಗಮವಾಗಿತ್ತು. ನಾನು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಅವುಗಳ ಅರಚಾಟ ತಡೆಯಲಾರದೆ -ಅದರಲ್ಲೂ ಹಿಂದಿನ ಸಂಜೆ ಮಗಳಿಗೆ ರೆಕಾರ್ಡಿಂಗ್ ಮಾಡಲು ತೊಂದರೆಯಾದುದನ್ನು ನೆನೆಸಿಕೊಂಡು -ಯಾರಿಗೋ ಬಯ್ಯುವಂತೆ ಕಿರುಚಾಡಿಕೊಂಡು ಆ ಹುಂಜಕ್ಕೆ ಶಾಪ ಹಾಕುತ್ತಿದ್ದೆ. ಬಹುಷಃ ಪ್ರಾಣಿ ಪ್ರಿಯ ಅಳಿಯ ಗಮನಿಸಿರಬಹುದು. ಮಾರನೇ ದಿನ ಕೊರಿಯರ್‌ನಲ್ಲಿ ಬಂದಿತ್ತು… ಎರಡು ಜೊತೆ ಇಯರ್ ಪ್ಲಗ್‌ಗಳು. ಸರಿ.. ಅದನ್ನು ಪ್ರಯತ್ನಿಸೋಣ.. ಎಂದು ಮಲಗುವಾಗ ತಲೆಯ ಬಳಿ ಇಟ್ಟುಕೊಂಡು, ಬೆಳಗಿನ ಜಾವ ಎಚ್ಚರಿಕೆ ಆದಾಗ ಧರಿಸಿಕೊಂಡು, ಮುಕ್ಕಾಲು ಕಿವಿಯೊಳಗೆ ತೂರಿಸಿದರೂ…. ಶೇಕಡ 25 ರಷ್ಟು ಶಬ್ದ ಕಡಿಮೆಯಾಯಿತು ಅಷ್ಟೇ.
ಹೀಗೆ ಯೋಚಿಸುತ್ತಿದ್ದಾಗ ಹಳೆಯ ಒಂದು ಘಟನೆ ನೆನಪಾಯಿತು. ಒಂದು ಬೆಳಿಗ್ಗೆ ಟಿ.ಸಿ. ಪಾಳ್ಯ ಜಂಕ್ಷನ್‌ನಲ್ಲಿ ಹಸಿರು ಸಿಗ್ನಲ್‌ಗಾಗಿ ಕಾದು ಬೈಕ್ ನಿಲ್ಲಿಸಿಕೊಂಡಿದ್ದಾಗ, ತೃತೀಯ ಲಿಂಗಿಯೊಬ್ಬಳು ಬಂದಳು. ಮೊದಲೇ ನನಗೆ ಭಿಕ್ಷೆ ಬೇಡುವವರ ಕಂಡರೆ ಮೈ ಉರಿ. ನಾನು ಏನೂ ಹೇಳದೆ ಮುಖ ತಿರುಗಿಸಿದೆ. ಅವಳು ಸುಮ್ಮನೆ ಗೊಣಗಿಕೊಂಡು ಇನ್ನೊಬ್ಬರ ಬಳಿ ಹೋದಳು. ಪಕ್ಕದಲ್ಲಿದ್ದ ಇನ್ನೊಬ್ಬ ಜಂಟ್ಲಮನ್ “ಇಂಥವರಿಗೆಲ್ಲ ಏನೂ ಕೊಡಬಾರದು, ನೀವು ಸರಿಯಾಗಿ ಮಾಡಿದಿರಿ” ಎಂದ. ಮೊದಲೇ ಒಂದು ಅಂಕದ ಪ್ರಶ್ನೆಗೆ ಐದು ಅಂಕಗಳಿಗಾಗುವಷ್ಟು ಉತ್ತರ ಬರೆಯುವ ನಾನು ಅದರ ಬಗ್ಗೆ ಕೊರೆಯತೊಡಗಿದೆ. ಅದರಲ್ಲಿ ಏನು ಕೇಳಿಸಿಕೊಂಡಳೋ, ಬಂದವಳು ಏಕವಚನದಲ್ಲಿ ಬಯ್ಯಲು ಶುರು ಮಾಡಿದಳು.”ತಾಕತ್ತಿದ್ರೆ ದುಡ್ಡು ಕೊಡು ಇಲ್ಲ ಅಂದ್ರೆ ಮುಚ್ಚಿಕೊಂಡಿರು. ಭಾಷಣ ಮಾಡಬೇಡ” ಹೀಗೆ ಏನೇನೋ ಜೊತೆಗೆ ಆಂಗಿಕ ಅಭಿನಯವಂತೂ…… ನಾನು ತಡೆಯಲಾರದೆ ಇಂಗ್ಲೀಷ್ ಪಾಂಡಿತ್ಯ ತೋರಿಸಿ, ಅವಳ ಸಂಸ್ಕೃತಕ್ಕೆ ಸರಿಯಾಗಿ ಉತ್ತರ ಕೊಡಲು ಆರಂಭಿಸುವಷ್ಟರಲ್ಲಿ ಸಿಗ್ನಲ್‌ನ ಹಸಿರು ದೀಪ ನನ್ನನ್ನು ಕಾಪಾಡಿತ್ತು. ಈಗ ತಟ್ಟನೆ ಅದು ಯಾಕೆ ನೆನಪಾಯಿತು ಅಂದರೆ.. ಎಲ್ಲಿಯೋ ಓದಿದ್ದೆ. ಈ ಹಿಜಡಾಗಳಿಗೆ ಒಬ್ಬಳು ದೇವಿ ಇದ್ದಾಳೆ. ಅವಳ ಹೆಸರು ‘ಬಹೂಚಾರ ಮಾತಾ’ ಎಂದೇನೋ ಇದೆ. ಅವಳ ವಾಹನ ಹುಂಜ. ಆ ಮಾತೆಗೇನಾದರೂ ನನ್ನ ಆ ವರ್ತನೆ ಸಿಟ್ಟುತರಿಸಿ… ಅವಳು ತನ್ನ ವಾಹನಕ್ಕೆ ನನ್ನ ಮೇಲೆ ಸೇಡು ತೀರಿಸಲು ಹೇಳಿರಬಹುದೋ?!!
ನನಗೀಗ ಅರುವತ್ತಮೂರು ನಾನು ಎಪ್ಪತ್ತು – ಎಪ್ಪತ್ತೈದರವರೆಗೆ ಬದುಕಿರಬಹುದು. ಈ ಹುಂಜ ಎಷ್ಟು ವರ್ಷ ಮಹಾ ಬದುಕೀತು. ಇಂಟರ್ನೆಟ್‌ನಲ್ಲಿ ಸರ್ಚ್ ಮಾಡಿದೆ. ಹುಂಜದ ಜೀವಿತಾವಧಿ ಸುಮಾರು ಹತ್ತು ವರ್ಷಗಳು ಎಂದು ತಿಳಿದು ತಲೆ ಮೇಲೆ ಕೈ ಹೊತ್ತುಕೊಂಡೆ. ಅದೇ ದಿನ ನನ್ನ ತಂಗಿಯ ಸೊಸೆ- ಆಳ್ವಾಸ್‌ನಲ್ಲಿ ಲೆಕ್ಚರರ್ ಆಗಿದ್ದವಳು- ಬಂದಳು. ಮಧ್ಯಾಹ್ನದ ಕೊಕ್ಕೋಕೋ ಕೇಳಿಸಿಕೊಂಡಳು. ‘ಓಹೋ ಇದು ಇಲ್ಲೂ ಉಂಟಾ ಮಾಮಾ’ ಎಂದಳು. ನಾನು ಕುತೂಹಲದಿಂದ ಪ್ರಶ್ನಿಸಿದೆ. ಅವಳ ಮಾತಿನಿಂದ ನನಗೆ ಅವಳು ಬಹಳ ಹತ್ತಿರವೆನಿಸಿದಳು. ಕಾರಣ ನನ್ನ ಎಲ್ಲಾ ಸಮಸ್ಯೆಗಳನ್ನು ಅವಳು ದಾಟಿ ಬಂದಿದ್ದಳು. ನನ್ನ ಅನುಭವಗಳು, ನನ್ನ ಅಸಹನೆ, ಸಿಟ್ಟು ಎಲ್ಲಾ ಸಹಜ …ಎಂಬಂತೆ ಮಾತಾಡಿದಳು. (ನಮ್ಮ ಮನೆಯವರು ನನ್ನನ್ನೇ ವಿಚಿತ್ರವಾಗಿ ನೋಡುತ್ತಿದ್ದರು) ಅದರ ಉಪಟಳವಿಲ್ಲದಿದ್ದರೆ ಅವಳು ಮಾಸ್ಟರ್ ಡಿಗ್ರಿಯಲ್ಲಿ ಇನ್ನಷ್ಟು ಅಂಕ ಪಡೆಯಬಹುದಾಗಿತ್ತು… ಎಂದಳು.
ಸದ್ಯ, ನಾನೊಬ್ಬನೇ ಹುಚ್ಚ ಅಲ್ಲ ಎಂದು ನಿರಾಳವಾಯಿತು.
ಮಧ್ಯಾಹ್ನ ಅದರ ಅರಚಾಟಕ್ಕೆ ನಿದ್ದೆ ಬಾರದೆ, ವಿಜಯಮ್ಮನವರ ‘ಕುದಿಎಸರು’ ಓದುತ್ತಿದ್ದೆ. ಅದರಲ್ಲಿ ಅವರು ಬಾಲ್ಯದಲ್ಲಿ ಮೈಮೇಲೆ ದೇವರು ಬಂದಂತೆ ನಟಿಸಿ, ಕೆಲವು ಸಮಸ್ಯೆಗಳಿಂದ ಪಾರಾಗಿ, ಕೆಲವು ಸವಲತ್ತುಗಳನ್ನು ಪಡೆದುಕೊಂಡ ವಿಷಯವಿತ್ತು. ಅದನ್ನೇ ಯೋಚಿಸಿ ಕಣ್ಣು ಮುಚ್ಚಿ ಅಡ್ಡಾಗಿದ್ದೆ.
‘ಯುರೇಕಾ’ ಹೊಳೆಯಿತು! ಕೊನೆಯ ಉಪಾಯ, ಮನೆಯ ಹತ್ತಿರದಲ್ಲೇ ಚೇಚಿ ಮನೆಯ ಇನ್ನೊಂದು ಬದಿ ಇರುವ ಮುನೇಶ್ವರನ ಸಣ್ಣ ಗುಡಿಗೆ… ಕೆಲವರು ಕೋಳಿ ಬಲಿ… ಕೊಡುತ್ತಿದ್ದರು. ಸರಿ ನನ್ನ ಮೈ ಮೇಲೆ ಮುನೇಶ್ವರನನ್ನು ಆಹ್ವಾನಿಸಿಕೊಂಡು ಚೇಚಿ ಮನೆಯ ಹುಂಜ ನನಗೆ ಬೇಕೆಂದು ಅಬ್ಬರಿಸಿದರೆ?! ಹೇಗೂ ಬಾಲ್ಯದಿಂದಲೂ ನಾಟಕಗಳಲ್ಲಿ ಅಭಿನಯಿಸಿದ ಅಭ್ಯಾಸವಿದೆ. ಈ ಕೊನೆ ಉಪಾಯಕ್ಕಾಗಿ ತಾಲೀಮು ನಡೆಸುತ್ತಿದ್ದೇನೆ.
ನಿಮ್ಮೆಲ್ಲರ ಹಾರೈಕೆಯಿಂದ ಪುನಃ ನನ್ನ ಮುಂಜಾವಿನ ಸಿಹಿ ನಿದ್ದೆಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ.
ವಸಂತಕುಮಾರ್ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಬಾಲರಾಜನೂ ಕ್ರಿಕೆಟ್ಟಾಟವೂ’ ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. ‘ಕಾಂಚನ ಮಿಣಮಿಣ’ (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.