ಇಲ್ಲಿ ನಲವತ್ತೊಂಬತ್ತು ಪುಟ್ಟ ಪುಟ್ಟ ಅಧ್ಯಾಯಗಳು ಇಡೀ ಕಾದಂಬರಿಯ ಸಾರಸತ್ವವನ್ನು ಉಣಬಡಿಸುತ್ತವೆ. ಹದವರಿತ ಭಾಷೆಯಲ್ಲಿ ಮೈನವಿರೇಳಿಸುವ ಸಂಭಾಷಣೆಗಳು ಓದುಗರಿಗೆ ಕಚಗುಳಿ ಇಡುತ್ತವೆ. ಲೇಖಕರ ಬಾಲ್ಯದ ಅನುಭವಗಳ ಒಟ್ಟು ಮೊತ್ತ ಈ ಕನಸೇ ಕಾಡು ಮಲ್ಲಿಗೆ. ಇಲ್ಲಿ ಬಹುತೇಕ ನೈಜ ಅನುಭವಗಳೆ ಕಾದಂಬರಿಯ ಜೀವ ದ್ರವ್ಯವಾಗಿದ್ದರೂ ಲೇಖಕರು ತಮ್ಮ ಬರಹದ ಸ್ವಾತಂತ್ರ್ಯವನ್ನು ಬಳಸಿಕೊಂಡು ಸಂದರ್ಭೋಚಿತವಾಗಿ ಪೂರಕ ಪಾತ್ರಗಳನ್ನ ಕಲ್ಪಿಸಿಕೊಂಡು ಆ ಕಥೆಗೆ ವಿಭಿನ್ನ ಆಯಾಮಗಳನ್ನು ಕಲ್ಪಿಸಿದ್ದಾರೆ.
ಮಧು ವೈ.ಎನ್.‌ ಕಾದಂಬರಿ “ಕನಸೇ ಕಾಡುಮಲ್ಲಿಗೆ” ಕುರಿತು ಅನಸೂಯ ಯತೀಶ್‌ ಬರಹ

ಮಧು. ವೈ.ಎನ್‌. ಅವರು “ಕನಸೇ ಕಾಡು ಮಲ್ಲಿಗೆ” ಮೂಲಕ ಕನ್ನಡ ಕಾದಂಬರಿ ಪ್ರಕಾರಕ್ಕೆ ತಮ್ಮ ಚೊಚ್ಚಲ ಕೊಡುಗೆ ನೀಡಿದ್ದಾರೆ. ಗದ್ಯ ಸಾಹಿತ್ಯದಲ್ಲಿ ಹಿಡಿತ ಸಾಧಿಸಿರುವ ಮಧು ಅವರು ಈಗಾಗಲೇ ‘ಕಾರೇಹಣ್ಣು’ ಮತ್ತು ‘ಫೀಪೋ’ ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತಂತ್ರಜ್ಞಾನ ಕುರಿತ ಇವರ ಲೇಖನಗಳ ಸಂಗ್ರಹ ‘ಡಾರ್ಕ್ ವೆಬ್’ ಅತಿ ಹೆಚ್ಚು ಚರ್ಚೆಗೊಳಗಾದ ಕೃತಿ. ಇವರ ಡಾರ್ಕ್ ವೆಬ್ ಕೃತಿ ಓದಿದಾಗ ನನಗೆ ಅಚ್ಚರಿಯಾಗಿತ್ತು. ಅದು ಟೆಕ್ನಾಲಜಿ ಅವೇರ್ನೆಸ್ ಮೂಡಿಸುವ ಕೃತಿಯಾದುದರಿಂದ ಅದೊಂದು ಮಾಹಿತಿ ಪೂರ್ಣ‌ ಹೊತ್ತಿಗೆಯಾಗಿದೆ, ಕಠಿಣ ವಿಚಾರಗಳೊಂದಿಗೆ ನೀರಸಭಾವ ಕಾಡುತ್ತದೆ ಎಂದು ಭಾವಿಸಿದ್ದೆನು.

ಈ ಕೃತಿಯನ್ನು ಓದಲು ಕೈಗೆತ್ತಿಕೊಂಡಾಗ ನನಗೆ ಈ ಕೃತಿಯಲ್ಲಿದ್ದ ತಂತ್ರಜ್ಞನಿಗಿಂತ ಮಧು ಅವರಲ್ಲಿದ್ದ ಕಥೆಗಾರನೇ ಹೆಚ್ಚು ಪ್ರಬಲವಾಗಿ ಪ್ರಕಟಗೊಂಡಿದ್ದಾನೆಂದು ಅನಿಸಿತು. ಸೊಗಸಾದ ನಿರೂಪಣೆ, ತಲುಪಿಸಬೇಕಾದ ಸಂಕೀರ್ಣ ವಿಷಯವನ್ನು ದೈನಿಕ ಘಟನೆಗಳೊಂದಿಗೆ ಸಮೀಕರಿಸಿ ಸರಳವಾಗಿ ಅರ್ಥೈಸುವ ಇವರ ನಿರೂಪಣೆ ಓದುಗರನ್ನು ಆವರಿಸಿಬಿಡುತ್ತದೆ.

(ಮಧು ವೈ.ಎನ್.‌)

ಈಗ ಈ ಮೂರು ಕೃತಿಗಳಿಗಿಂತ ವಿಭಿನ್ನತೆಗೆ ತೆರೆದುಕೊಂಡ ಕಾದಂಬರಿ ‘ಕನಸೇ ಕಾಡು ಮಲ್ಲಿಗೆ’. ಲೇಖಕರು ಬೆಳೆದ ತುಮಕೂರು ಮತ್ತು ಶಿರಾ ಪ್ರದೇಶಗಳ ಭಾಷಾ ಸೊಗಡನ್ನು ಗರ್ಭೀಕರಿಸಿಕೊಂಡು ಅಪ್ಪಟ ಗ್ರಾಮೀಣ ಶೈಲಿಯಲ್ಲಿ ಮೈದಾಳಿದ ಪ್ರೇಮ ಕಾದಂಬರಿ ಇದಾಗಿದೆ. ತನ್ನದೇ ಮೂಲ ಭಾಷೆಯಲ್ಲಿ ಬರೆದಾಗ ತನ್ನೆದೆಯ ಮಾತುಗಳನ್ನು, ಮೌನತಾಳಿದ್ದ ದನಿಯನ್ನು ಅತ್ಯಂತ ಪ್ರಾಮಾಣಿಕವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಧು ಅವರ ಈ ಪುಸ್ತಕ ಓದುವರನ್ನು ಸೆಳೆಯುತ್ತದೆ.

ರೆಸಿಡೆನ್ಷಿಯಲ್ ಶಾಲೆಯೊಂದರಲ್ಲಿ ಮುಗ್ಧ ಹುಡುಗ ಹುಡುಗಿಯ ನಡುವೆ ಅರಳುವ ಪ್ರೇಮ ಭಾವಗಳ ಕೌತುಕ ವಿಷಯವಸ್ತುವನ್ನು ಹೊಂದಿದ ಈ ಕಾದಂಬರಿ ರೋಮಾಂಚನಕಾರಿಯಾಗಿ ಮೂಡಿದೆ. ಈ ಕೃತಿಯಲ್ಲಿ ವಿಶಿಷ್ಟ ಎನಿಸಿದ ಅಂಶವೆಂದರೆ ‘ಮೊದಲಿಗಿಂತ ಮೊದಲು’ ಎಂಬ ಲೇಖನ ಗೋವಾ ಬೀಚ್‌ನ ರಮಣೀಯತೆಯೊಂದಿಗೆ ಕಾದಂಬರಿಗೆ ಎಂಟ್ರಿ ನೀಡಿ ‘ಕೊನೆಯ ನಂತರದ ಕೊನೆ’ ಲೇನನವು ಓದುಗರನ್ನು ಕಾದಂಬರಿಯಿಂದ ಎಕ್ಸಿಟ್ ಮಾಡುತ್ತದೆ.

ಇಲ್ಲಿ ನಲವತ್ತೊಂಬತ್ತು ಪುಟ್ಟ ಪುಟ್ಟ ಅಧ್ಯಾಯಗಳು ಇಡೀ ಕಾದಂಬರಿಯ ಸಾರಸತ್ವವನ್ನು ಉಣಬಡಿಸುತ್ತವೆ. ಹದವರಿತ ಭಾಷೆಯಲ್ಲಿ ಮೈನವಿರೇಳಿಸುವ ಸಂಭಾಷಣೆಗಳು ಓದುಗರಿಗೆ ಕಚಗುಳಿ ಇಡುತ್ತವೆ. ಲೇಖಕರ ಬಾಲ್ಯದ ಅನುಭವಗಳ ಒಟ್ಟು ಮೊತ್ತ ಈ ಕನಸೇ ಕಾಡು ಮಲ್ಲಿಗೆ. ಇಲ್ಲಿ ಬಹುತೇಕ ನೈಜ ಅನುಭವಗಳೆ ಕಾದಂಬರಿಯ ಜೀವ ದ್ರವ್ಯವಾಗಿದ್ದರೂ ಲೇಖಕರು ತಮ್ಮ ಬರಹದ ಸ್ವಾತಂತ್ರ್ಯವನ್ನು ಬಳಸಿಕೊಂಡು ಸಂದರ್ಭೋಚಿತವಾಗಿ ಪೂರಕ ಪಾತ್ರಗಳನ್ನ ಕಲ್ಪಿಸಿಕೊಂಡು ಆ ಕಥೆಗೆ ವಿಭಿನ್ನ ಆಯಾಮಗಳನ್ನು ಕಲ್ಪಿಸಿದ್ದಾರೆ.

ಲೇಖಕರ ಬಾಲ್ಯ ಗ್ರಾಮ್ಯ ಜಗತ್ತಿನೊಂದಿಗೆ ಬೆಸೆದುಕೊಂಡಿದ್ದರಿಂದ ಗ್ರಾಮೀಣ ಪ್ರದೇಶಗಳ ವರ್ಣನೆ ಹಾಗೂ ಪ್ರಕೃತಿಯ ಮನಮೋಹಕ ದೃಶ್ಯಾವಳಿಗಳು ಇಂದಿನ ಆಧುನಿಕ ಜನರಿಗೆ ಹೊಸದೊಂದು ಆಪ್ತ ಲೋಕವನ್ನು ಪರಿಚಯಿಸುತ್ತವೆ. ವಸತಿ ಶಾಲೆಗಳು ಅಲ್ಲಿನ ಮಕ್ಕಳ ಅನುಭವಗಳು ಯಥೇಚ್ಛವಾಗಿ ಇಡಿಕಿರಿದಿವೆ‌. ಯುವ ಲೇಖಕರಾದ ಮಧು ಅವರು ತಮ್ಮ ವಯೋಸಹಜ ಭಾವನೆಗಳನ್ನು ಹಸಿ ಬಿಸಿಯಾಗಿಯೇ ತಾನು ಸೃಷ್ಟಿಸಿದ ಪಾತ್ರಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಆದರೂ ಸೌಜನ್ಯದ ಚೌಕಟ್ಟನ್ನು ಮೀರದೆ ಹದಿಹರೆಯದ ತರಲೆ ತುಂಟಾಟಗಳನ್ನು ಸೊಗಸಾದ ನಿರೂಪಣೆಯಲ್ಲಿ ಬಂಧಿಸಿದ್ದಾರೆ. ಬಾಲ್ಯದನುಭವಗಳ ಕಣಜವಾದ ಕಾದಂಬರಿ ಓದುಗರನ್ನು ತಮ್ಮ ಬಾಲ್ಯಕ್ಕೆ ಕರೆದೊಯ್ಯುತ್ತವೆ.

ಈ ಕಾದಂಬರಿಯಲ್ಲಿ ಹಾಸ್ಯ, ವ್ಯಂಗ್ಯ, ನೋವು, ಹತಾಶೆ, ಹಂಬಲಿಕೆ, ಹರುಷ, ನಿರಾಸೆ, ದುಃಖ, ಪ್ರೀತಿ, ಪ್ರೇಮ, ಸರಸ, ಭಾವಗಳು ಮಿಳಿತವಾಗಿವೆ. ಹಳ್ಳಿಗಾಡಿನ ಬೈಗುಳಗಳನ್ನ ಯತೇಚ್ಛವಾಗಿ ಬಳಸಿಕೊಂಡಿರುವ ಲೇಖಕರು ವಿಷಯದ ತೀವ್ರತೆಗೆ ಕೆಲವೊಂದು ನುಡಿಗಟ್ಟುಗಳನ್ನು ಪರಿಚಯಿಸಿದ್ದಾರೆ. ಸಂಯೋಜಿತ ದೀರ್ಘ ವಾಕ್ಯಗಳ ರಚನೆಯ ಗೋಜಿಗೆ ಹೋಗದೆ ಸರಳ ವಾಕ್ಯಗಳ ಮೂಲಕ ಕಾದಂಬರಿಗೆ ಸುಂದರ ರೂಪ ಕೊಟ್ಟಿದ್ದಾರೆ.

ಈ ಕಾದಂಬರಿ ದೃಶ್ಯ ಕಥನದ ಅನುಭೂತಿ ನೀಡುತ್ತದೆ. ಓದುತ್ತಾ ಹೋದಂತೆ ಪಾತ್ರಗಳು, ಸಂಭಾಷಣೆಗಳು, ಸ್ಥಳ, ಘಟನೆಗಳು ನಮ್ಮೊಳಗೆ ಇರುವಂತೆ, ನಮ್ಮ ಅಕ್ಕಪಕ್ಕ ಸರಿದು ಹೋದಂತೆ ಭಾಸವಾಗುತ್ತವೆ. ಅಂತಹ ಶಾಬ್ದಿಕ ಚಮತ್ಕಾರಿಕೆ ಭಾವನಾತ್ಮಕತೆ ಇಲ್ಲಿ ಕಾಣುತ್ತದೆ.
ಅತಿರೇಖಕ್ಕೆ ಆಸ್ಪದವಿಲ್ಲದ ಪದ ಭಾವಗಳ ಪ್ರಯೋಗಶೀಲತೆ ಗಮನ ಸೆಳೆಯುತ್ತದೆ. ವಿಶಿಷ್ಟ ಲಹರಿ, ಗಹನವಾದ ಸಂಗತಿಗಳ ಚರ್ಚೆ, ಸೂಕ್ಷ್ಮ ವಿಚಾರಗಳ ಜಾಣ್ಮೆಯ ಅವಲೋಕನ, ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡುವ ಸನ್ನಿವೇಶಗಳು ಮನೋಜ್ಞವಾಗಿ ಮೂಡಿಬಂದಿದ್ದು ಓದುಗರಿಗೆ ಅಪ್ಯಾಯಮಾನವಾಗುತ್ತವೆ.

ಪ್ರೀತಿ ಪ್ರೇಮ ಅಂದಿಗೂ ಇಂದಿಗೂ ಸಾಮಾಜಿಕ ಮಾನ್ಯತೆ ಪಡೆಯುವಲ್ಲಿ ಪೂರ್ಣ ಯಶಸ್ಸು ಸಾಧಿಸಿಲ್ಲ. ಹಾಗಾದರೆ ಈ ಪ್ರೇಮ ಕಾದಂಬರಿಯಲ್ಲಿ ಪ್ರೇಮವನ್ನು ಸಮಾಜ ಒಪ್ಪಿ ಮನ್ನಣೆ ನೀಡಿತಾ? ತಿರಸ್ಕರಿಸಿತಾ? ಪ್ರೇಮಿಗಳು ಒಂದಾಗಿ ಪ್ರೇಮ ಲೋಕದಲ್ಲಿ ಬದುಕಿದರಾ?

ಇಲ್ಲಿ ಪ್ರೇಮಕಥೆ ದುರಂತ ಕಂಡಿತಾ? ಅಥವಾ ಸುಖಾಂತ್ಯಗೊಂಡಿತಾ? ಈಎಲ್ಲಾ ಪ್ರಶ್ನೆಗಳೊಂದಿಗೆ ಸಾಗುವ ಕುತೂಹಲಕಾರಿ ಕಾದಂಬರಿಯೇ ಕನಸು ಕಾಡುಮಲ್ಲಿಗೆ. ಇವುಗಳಿಗೆಲ್ಲ ಉತ್ತರ ದೊರೆಯಲು ಕಾದಂಬರಿಯನ್ನು ನೀವೊಮ್ಮೆ ಓದಲೇಬೇಕು. ಈ‌ ಕಾದಂಬರಿ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಹೊಸ ಆಯಾಮದಲ್ಲಿ ಪ್ರಕಟಗೊಳ್ಳುವ ಲಕ್ಷಣಗಳನ್ನು ಹೊಂದಿದೆ ಎಂಬ ಭಾವ ಮೂಡಿಸುತ್ತದೆ.

(ಕೃತಿ: ಕನಸೇ ಕಾಡುಮಲ್ಲಿಗೆ (ಕಾದಂಬರಿ), ಲೇಖಕರು: ಮಧು ವೈ.ಎನ್.‌, ಪ್ರಕಾಶಕರು: ನೆಲಮುಗಿಲು ಪ್ರಕಾಶನ, ಬೆಲೆ: 300/-)