ಕುಮಾರಪ್ಪ ಕೊಲ್ಕತ್ತೆಯ ನ್ಯಾಶನಲ್ ಲೈಬ್ರರಿಯ ಕನ್ನಡ ವಿಭಾಗದಲ್ಲಿ ಅಧಿಕಾರಿ. ಮೂಲತಃ ಚಿತ್ರದುರ್ಗ ಜಿಲ್ಲೆಯ ಬಸಾಪುರ ಎಂಬ ಹಳ್ಳಿಯವರಾದ ಅವರು ಕಾಲುಶತಮಾನದಿಂದ ಕೊಲ್ಕತ್ತೆಯಲ್ಲಿದ್ದಾರೆ. ಅವರಿಗೆ ಒಮ್ಮೆ ಬಂಗಾಳ ಸಾಕಾಗಿ ಕರ್ನಾಟಕಕ್ಕೆ ಮರಳಿ ಬರುವ ಆಸೆಯಾಯಿತು. ಅದಕ್ಕಾಗಿ ಕರ್ನಾಟಕದ ಗ್ರಂಥಾಲಯಗಳಿಗೆ ಅರ್ಜಿ ಹಾಕಿಕೊಂಡು ಒಂದು ಸಂದರ್ಶನಕ್ಕೆ ಮೈಸೂರಿಗೆ ಬಂದರು. ಬಂದವರು ಕನ್ನಡ ಲೇಖಕರಾದ ಪ್ರಭುಶಂಕರ ಅವರನ್ನು ಭೇಟಿಯಾದರಂತೆ. ಪ್ರಭುಶಂಕರ ಅವರು ವಿಷಯ ತಿಳಿದು ‘ಕುಮಾರಪ್ಪ, ನಾನು ಇಂಟರ್ ವ್ಯೂ ಕಮಿಟಿಯಲ್ಲಿ ಇಲ್ಲ. ಇದ್ದಿದ್ದರೆ ನಿಮಗೆ ಖಂಡಿತ ಕೆಲಸ ಸಿಗದಂತೆ ನೋಡಿಕೊಳ್ಳುತ್ತಿದ್ದೆ’ ಎಂದು ಹೇಳಿದರಂತೆ. ಗಾಬರಿಯಾದ ಕುಮಾರಪ್ಪ ‘ಯಾಕೆ ಸಾರ್ ನಾನು ಏನಂಥ ತಪ್ಪು ಮಾಡಿದೆ?’ ಎಂದು ಕೇಳಲು, ‘ನೋಡಿ, ನೀವು ಮರಳಿ ಬಂದುಬಿಟ್ಟರೆ ಬಂಗಾಳಕ್ಕೂ ಕನ್ನಡಕ್ಕೂ ಇರುವ ಏಕೈಕ ಸಾಂಸ್ಕೃತಿಕ ಕೊಂಡಿಯೇ ಕಳಚಿಹೋಗುತ್ತದೆ. ನೀವಲ್ಲಿ ಇರುವುದರಿಂದ ಎರಡೂ ಭಾಷೆಗಳ ನಡುವೆ ಕೊಡುಕೊಳು ನಡೆಯುತ್ತಿದೆ. ಆದ್ದರಿಂದ ನೀವಲ್ಲೇ ಇದ್ದು ಕೆಲಸ ಮಾಡಬೇಕು’ ಎಂದರಂತೆ. ಪ್ರಭುಶಂಕರ್ ಮಾತಿನಲ್ಲಿ ಕನ್ನಡದ ಕೆಲಸಕ್ಕಾಗಿ ಒಬ್ಬ ವ್ಯಕ್ತಿಯ ವೈಯಕ್ತಿಕ ಆಶೋತ್ತರವನ್ನು ಮನ್ನಿಸದಿರುವ ಆಯಾಮವಿದೆ, ನಿಜ. ಆದರೆ ಅದರಲ್ಲಿ ಒಂದು ಸಾಂಸ್ಕೃತಿಕ ಸತ್ಯವೂ ಇದೆ. ಈ ಸತ್ಯವು ಕೊಲ್ಕತ್ತೆಗೆ ಹೋದಾಗ ನನಗೆ ನಿಜವೆಂದು ತೋರಿತು.
ಕುಮಾರಪ್ಪ ಅವರ ‘ಮಾತೆಯರು ಮಾನ್ಯರಾಗಿದ್ದಾಗ’ ಎಂಬ ದೇವಿಪ್ರಸಾದ ಚಟ್ಟೋಪಾಧ್ಯಾಯ ಕೃತಿಯ ಅನುವಾದವನ್ನು ಓದಿಕೊಂಡಿದ್ದೆ. ಬಾವುಲರ ಮೇಲೆ ಅವರು ಬಹಳ ಹಿಂದೆ ಬರೆದಿದ್ದ ಲೇಖನ ಓದಿ ಪ್ರಭಾವಿತನಾಗಿ ಬಾವುಲರನ್ನು ನೋಡುವ ಆಸೆ ಕಟ್ಟಿಕೊಂಡಿದ್ದೆ. ಅವರು ಕೂಡ ಒಮ್ಮೆ ಕನ್ನಡ ವಿವಿಗೆ ಬಂದಾಗ ನನ್ನನ್ನು ಹುಡುಕಿಕೊಂಡು ಬಂದು ಮಾತಾಡಿಸಿಹೋಗಿದ್ದರು. ಇಂತಹ ಸಣ್ಣಪುಟ್ಟ ನೆನಪಿನ ಎಳೆಗಳನ್ನು ಹಿಡಿದು ಕೊಲ್ಕತ್ತೆಗೆ ಬಂದಾಗ ಬಂಗಾಳವನ್ನು ನೋಡಲು ಸಹಾಯ ಮಾಡಬೇಕೆಂದು ವಿನಂತಿಸಿದ್ದೆ. ಆದರೆ ಕುಮಾರಪ್ಪನವರು ನಮಗಾಗಿ ಹೌರಾದಲ್ಲಿ ಕೋಣೆಯನ್ನು ಬುಕ್ ಮಾಡಿದ್ದಲ್ಲದೆ, ಸ್ಟೇಶನ್ನಿನಲ್ಲಿ ನಾವು ಇಳಿದ ಕೂಡಲೇ ಬಂದು ಕೈಯನ್ನು ಹಿಡಿದುಕೊಂಡರು. ಇದು ಕನ್ನಡದವರನ್ನು ಕಾಣಲು ಅವರಿಗಿದ್ದ ಕಾತರವೊ ಅವರ ಸಜ್ಜನಿಕೆಯ ಪರಿಣಾಮವೊ ತಿಳಿಯದು. ಆದರೆ ನಮಗಂತೂ ಅವರನ್ನು ಕಂಡ ಕೂಡಲೇ, ಹೊಸ ಪ್ರದೇಶದಲ್ಲಿ ಇರುವ ಸಹಜ ಅಪರಿಚಿತತೆಯ ಅಳುಕು ಅಲೇ ಬಾಜುಗೆ ಹರಿಯುತ್ತಿದ್ದ ಹೂಗ್ಲಿ ಹೊಳೆಯಲ್ಲಿ ಕೊಚ್ಚಿಹೋಯಿತು.
ಕೊಲ್ಕತ್ತೆಗೆ ಹೋಗಿಬರುವ ಬಹುತೇಕ ಕನ್ನಡ ಲೇಖಕರು ಕಲಾವಿದರು, ಅಲ್ಲಿನ ಪ್ರಸಿದ್ಧ ವಿಕ್ಟೋರಿಯಾ ಮೆಮೋರಿಯಲ್ ನೋಡದಿದ್ದರೂ, ಅಲ್ಲಿರುವ ಕುಮಾರಪ್ಪ ಅವರನ್ನು ಕಾಣುತ್ತಾರೆ ಎನ್ನಬಹುದು. ಅಥವಾ ಕನ್ನಡಿಗರು ಬರುವ ಸುಳಿವನ್ನು ಹೇಗೊ ಕಂಡುಹಿಡಿದು ಕುಮಾರಪ್ಪನವರೇ ಬಂದು ಅವರನ್ನು ಹಿಡಿದುಹಾಕುತ್ತಾರೆ ಎಂದರೂ ಸರಿಯೇ. ಕೊಲ್ಕತ್ತೆ ನೋಡುವ ಕನ್ನಡಿಗರಿಗೆ ಹಾದಿತೋರುವ ಕಾಯಕಕ್ಕೆ ತಮ್ಮನ್ನು ತಾವೇ ನಿಯೋಜಿಸಿಕೊಂಡಂತೆ ತೋರುತ್ತದೆ. ಈ ಬಗ್ಗೆ ಅವರಿಗೆ ಸಂಕೋಚವೇನಿಲ್ಲ. ಕುಮಾರಕೃಪೆಗೆ ಒಳಗಾದವರ ಪಟ್ಟಿ ನಿಡಿದಾಗಿದೆ. ಹಾ.ಮಾ. ನಾಯಕ, ಚಿದಾನಂದಮೂರ್ತಿ, ಜಿ.ಎಸ್. ಶಿವರುದ್ರಪ್ಪ, ಮಹದೇವ ಬಣಕಾರ, ಎಸ್.ಎಲ್. ಭೈರಪ್ಪ, ಶ್ರೀನಿವಾಸ ಕಪ್ಪಣ್ಣ, ಪ್ರಭುಶಂಕರ, ಪೀರ್ ಬಾಶಾ, ಸುಧಾಮೂರ್ತಿ, ಶೂದ್ರ ಶ್ರೀನಿವಾಸ, ವಿಕ್ರಮ ವಿಸಾಜಿ, ರಾಘವೇಂದ್ರ ಖಾಸನೀಸ, ಲಕ್ಷ್ಮೀನಾರಾಯಣ ಭಟ್ಟ, ಶಶಿಕಲಾ ವಸ್ತ್ರದ, ಚಂದ್ರಶೇಖರ ತಾಳ್ಯ, ಚಂದ್ರಶೇಖರ ಕಂಬಾರ, ರಾಘವೇಂದ್ರ ಪಾಟೀಲ -ಹೀಗೆ ಅಕ್ಷರಶಃ ನೂರಾರು ಜನ. ಈಗ ಈ ಪಟ್ಟಿಯಲ್ಲಿ ನಾವೂ ಸೇರಿಕೊಂಡೆವು ಅಷ್ಟೆ. (ಬಂಗಾಳ ಪ್ರವಾಸ ಕಥನ ಬರೆದಿರುವ ಎಚ್.ಎಸ್. ರಾಘವೇಂದ್ರರಾವ್ ಹೇಗೊ ಅವರಿಂದ ತಪ್ಪಿಸಿಕೊಂಡಂತಿದೆ.) ನಾವಿದ್ದಷ್ಟು ದಿನ, ಬಂಗಾಳವನ್ನು ಸಾಂಸ್ಕೃತಿಕವಾಗಿ ನೋಡಲು ಬೇಕಾದ ನೋಟಗಳನ್ನು ಕುಮಾರಪ್ಪ ಒದಗಿಸಿದರು. ತಮಗೆ ಗೊತ್ತಿರುವುದನ್ನೆಲ್ಲ ಪಟಪಟ ಹರಳುಹುರಿದಂತೆ ಮಾತಾಡಿ ಹಂಚಿಕೊಳ್ಳುವ ಅವರೊಬ್ಬ ಅಪೂರ್ವ ಮಾರ್ಗದರ್ಶಿ.
ಕುಮಾರಪ್ಪನವರ ವಿಶೇಷತೆಯೆಂದರೆ, ಕನ್ನಡಿಗರಿಗೆ ಬಂಗಾಳದಲ್ಲಿ ಅಡಗಿರುವ ಕರ್ನಾಟಕದ ಚರಿತ್ರೆಯನ್ನು ತೋರಿಸಲು ಅವರು ಮಾಡುವ ಯತ್ನ. ಸಂಶೋಧನೆಯಲ್ಲಿ ಆಸಕ್ತಿಯಿರುವ ನನಗಿದು ಬಹಳ ಸಂತೋಷ ಕೊಟ್ಟಿತು. ಬಂಗಾಳದಲ್ಲಿ ಅನೇಕ ಕನ್ನಡಿಗರಿದ್ದಾರೆ. ಅಲ್ಲಿ ನಾನಿದ್ದ ಕಾಲಕ್ಕೆ ಕೊಲ್ಕತ್ತೆಯ ಮೈಸೂರು ಅಸೋಸಿಯೇಶನ್ನಿಗೆ ಹೋಗಿ, ಅಲ್ಲಿ ಸೇರಿದ ಕನ್ನಡಿಗರ ಜತೆ ಮಾತುಕತೆ ಮಾಡಿದೆ. ಹೆಚ್ಚಿನವರು ಐದಾರು ವರ್ಷ ಇದ್ದು ವರ್ಗಾವಣೆ ಪಡೆದು ಬ್ಯಾಂಕ್ ಅಧಿಕಾರಿಗಳು; ಮತ್ತೆ ಕೆಲವರು ವ್ಯಾಪಾರಿಗಳು; ಇನ್ನೂ ಕೆಲವರು ಬಹುಕಾಲದಿಂದ ಬಂಗಾಳದಲ್ಲೇ ನೆಲೆಸಿದ್ದಾರೆ. ಅವರಿಗೆ ಬಂಗಾಳಿಯೂ ಚೆನ್ನಾಗಿ ಬರುತ್ತದೆ. ಆದರೆ ಅವರು ಎರಡು ಪ್ರಾಂತ್ಯಗಳ ಸಾಂಸ್ಕೃತಿಕ ಕೊಡುಕೊಳೆಯ ಕೊಂಡಿಯಾಗ ಬಯಸಿದವರಲ್ಲ. ತಮ್ಮ ಪಾಡಿಗೆ ತಾವು ಬದುಕಿರುವರು. ಈ ಹಿನ್ನೆಲೆಯ್ಲಿ ಕನ್ನಡಕ್ಕೆ ಬೇಕಾದ ಸಾಹಿತ್ಯ ಮತ್ತು ಚಿಂತನೆಯನ್ನು ಬಂಗಾಳಿಯಿಂದ ಕೊಡುವ ಮತ್ತು ಕನ್ನಡದನ್ನು ಬಂಗಾಳಿಗಳಿಗೆ ಪರಿಚಯಿಸುತ್ತಿರುವ ಕುಮಾರಪ್ಪನವರ ಪಾತ್ರದ ಪರಿಯೇ ಬೇರೆ.
ಕನ್ನಡಕ್ಕೆ ಭಾರತೀಯ ಭಾಷೆಗಳ ಮೂಲಕ ಮೂಲಕ ಸಾಕಷ್ಟು ಸಾಹಿತ್ಯ ಮತ್ತು ಚಿಂತನೆ ಬಂದಿದೆ. ಬರುತ್ತಿದೆ. ಆದರೆ ಹೆಚ್ಚಿನದು ಹಿಂದಿ ಇಲ್ಲವೇ ಅಂಗ್ರೇಜಿ ಭಾಷೆಯ ಮಧ್ಯಸ್ಥಿಕೆಯ ಮೂಲಕವೇ ಬಂದಿದೆ. ಅಂಗ್ರೇಜಿಯ ಮೂಲಕ ಭಾರತೀಯ ಭಾಷೆಯೊಂದರ ಸಾಹಿತ್ಯ ಇನ್ನೊಂದು ಭಾರತೀಯ ಭಾಷೆಗೆ ಹೋದರೆ, ಅದರ ಸಾಂಸ್ಕೃತಿಕ ಸತ್ವದಲ್ಲಿ ಎಂತಹುದೊ ಊನವಾಗುತ್ತದೆ ಎಂದು ನನ್ನ ಅನಿಸಿಕೆ. ಈ ಹಿನ್ನೆಲೆಯಲ್ಲಿ ಬಂಗಾಳಿ ಮತ್ತು ಕನ್ನಡದ ನಡುವೆ ನೇರ ಕೊಡುಕೊಳು ಮಾಡುತ್ತಿರುವ ಕುಮಾರಪ್ಪನವರ ಕೆಲಸ ಮುಖ್ಯವಾದುದು. ಈ ಕೆಲಸ ಕನ್ನಡಕ್ಕೆ ಹೊಸತಲ್ಲ. ಒಂದು ಶತಮಾನದಿಂದ ನಡೆದಿದ್ದೇ. ಮೊದಲಿಗೆ ಬಂಗಾಳಿಯಿಂದ ನೇರ ಅನುವಾದ ಆರಂಭಿಸಿದವರು ಬಿ. ವೆಂಕಟಾಚಾರ್ಯರು. ಅವರು ಬಂಕಿಮಚಂದ್ರರ ‘ಆನಂದಮಠ’ ಕಾದಂಬರಿಯನ್ನು ಕನ್ನಡಕ್ಕೆ ತಂದರು. (ವೆಂಕಟಾಚಾರ್ಯರು ಬಂಗಾಳದ ಧೀಮಂತ ಚಿಂತಕ ಈಶ್ವರಚಂದ್ರ ವಿದ್ಯಾಸಾಗರ ಅವರಿಂದ ಬಂಗಾಳಿ ಕಲಿತವರಂತೆ.) ನಂತರದ ಹೆಸರು ಶರಚ್ಚಂದ್ರ ಚಟರ್ಜಿಯವರ ಕಾದಂಬರಿಗಳನ್ನು ಕನ್ನಡಕ್ಕೆ ತಂದ ಕೂಡಲಿ ಚಿದಂಬರಂ ಅವರದು. ಶರಚ್ಚಂದ್ರರು ತಮ್ಮ ಕಾದಂಬರಿಯ ಒಂದು ಹಸ್ತಪ್ರತಿಯನ್ನು ಕರ್ನಾಟಕಕ್ಕೆ ಕಳಿಸಿಕೊಟ್ಟು ಅದು ಬಂಗಾಳಿಮೂಲದ ಜತೆಗೇ ಕನ್ನಡದಲ್ಲೂ ಪ್ರಕಟವಾಗುವ ವ್ಯವಸ್ಥೆ ಇಟ್ಟುಕೊಂಡಿದ್ದರಂತೆ. (ಅವರ ಹಸ್ತಪ್ರತಿಯಿಂದಲೇ ಅನುವಾದ ಮಾಡುತ್ತಿದ್ದವರು ಕೂಡಲಿಯವರೇನು?) ಇನ್ನು ಟಾಗೂರರ ಕಾದಂಬರಿಗಳನ್ನು ತಂದ ಸಾವಿತ್ರಮ್ಮನವರಿಗೆ ಬಂಗಾಳಿ ಬರುತ್ತಿರಲಿಲ್ಲವೆಂದು ತಿಳಿದುಬರುತ್ತದೆ. ಅಂತೂ ವೆಂಕಟಾಚಾರ್ಯ ಮತ್ತು ಕೂಡಲಿಯವರ ನೇರ ಅನುವಾದ ಪರಂಪರೆ ಒಂದು ಕಾಲದ ನಂತರ ನಿಂತಿತು. ಕುಮಾರಪ್ಪ ಬಂಗಾಳಕ್ಕೆ ಹೋದ ಬಳಿಕ ಅದು ಮತ್ತೆ ಆರಂಭವಾಗಿದೆ. ಹೂಗ್ಲಿಹೊಳೆಯ ನೀರು ಮತ್ತೆ ಕಾವೇರಿಯನ್ನು ಕೂಡತೊಡಗಿದೆ. ಅದರಲ್ಲೂ ಬಂಗಾಳದಲ್ಲಿ ವಾಸವಿದ್ದುಕೊಂಡು ಅನುವಾದ ಮಾಡಿದವರು ಕುಮಾರಪ್ಪ ಒಬ್ಬರೇ ಎಂದು ಕಾಣುತ್ತದೆ.
ಕುಮಾರಪ್ಪ ಈಗಾಗಲೇ 25ರಷ್ಟು ಕೃತಿಗಳನ್ನು ಬಂಗಾಳಿಯಿಂದ ಕನ್ನಡಿಸಿದ್ದಾರೆ. ಅವುಗಳಲ್ಲಿ ಬಂಗಾಳದ ಧೀಮಂತ ಚಿಂತಕ ದೇವೀಪ್ರಸಾದ ಚಟ್ಟೋಪಾಧ್ಯಾಯ ಅವರ ಕೃತಿಗಳಿವೆ; ಮಹಾಶ್ವೇತಾದೇವಿ ಹಾಗೂ ಆಶಾಪೂರ್ಣದೇವಿ ಅವರ ಕಾದಂಬರಿಗಳಿವೆ; ರಾಮಕೃಷ್ಣರ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ಅಭೇದಾನಂದರು ತಮ್ಮ ಗುರುವನ್ನು ಕುರಿತು ಬರೆದಿರುವ ಜೀವನಚರಿತ್ರೆಯಿದೆ; ಶರಚ್ಚಂದ್ರ ಚಟರ್ಜಿಯವರು ಮಕ್ಕಳಿಗೆಂದು ಬರೆದ ಕತೆಗಳಿವೆ; ನನಗೆ ಇವರ ಅನುವಾದಗಳಲ್ಲಿ ಕುತೂಹಲ ಹುಟ್ಟಿಸುವುದು ಬಂಗಾಳದ ಸಾಮಾನ್ಯ ಮಹಿಳೆಯರು ಬರೆದುಕೊಂಡ ಆತ್ಮಕಥೆಗಳ ಅನುವಾದ. ಉದಾ.ಗೆ, ಸುಶ್ಮಿತಾ ಬಂದೋಪಾಧ್ಯಾಯ ಅವರ ‘ಕಾಬೂಲಿವಾಲಾನ ಬಂಗಾಳಿ ಹೆಂಡತಿ’ ಇಂತಹುದು. ಬಂಗಾಳಿ ಹುಡುಗಿಯಾದ ಸುಶ್ಮಿತಾ ಆಫಘನ್ ತರುಣನನ್ನು ಮದುವೆಯಾಗಿ ಆಫಘಾನಿಸ್ಥಾನದಲ್ಲಿ ಪಟ್ಟಪಾಡನ್ನು ಕುರಿತ ಕಥನವಿದು. ಇನ್ನೊಂದು ಬೇಬಿ ಹಾಲ್ದಾರ್ ಅವರ ‘ನೋವು ತುಂಬಿದ ಬದುಕು’. ಇದು ಗಂಡನ ಹಿಂಸೆ ತಾಳಲಾರದೆ ತನ್ನ ಎಳೆಯ ಮಕ್ಕಳನ್ನು ಕಟ್ಟಿಕೊಂಡು ದೆಹಲಿಗೆ ಹೋದ ಹುಡುಗಿಯೊಬ್ಬಳು, ಅಲ್ಲಿನ ಸ್ಲಮ್ಮುಗಳಲ್ಲಿದ್ದು ಬದುಕನ್ನು ಕಟ್ಟಿಕೊಳ್ಳಲು ಮಾಡಿದ ಹೋರಾಟದ ಕಥೆ. ಇದು ಇಲ್ಲಿಗೇ ನಿಂತಿಲ್ಲ. ಕುಮಾರಪ್ಪನವರ ಮನೆಗೆ ಹೋದಾಗ ಅವರ ಕಪಾಟಿನಲ್ಲಿ ಕನ್ನಡಕ್ಕಿಂತ ಬಂಗಾಳಿ ಪುಸ್ತಕಗಳೇ ತುಂಬಿಕೊಂಡಿದ್ದನ್ನು ಕಂಡು ಕಾರಣ ಕೇಳಿದೆ. ‘ರಿಟೈರ್ಡ್ ಆಗಿ ಕರ್ನಾಟಕಕ್ಕೆ ಬಂದ ಮೇಲೆ ಅನುವಾದಿಸುವುದಕ್ಕೆ’ ಎಂದು ಉತ್ತರಿಸಿದರು.
ಆದರೆ ಕುಮಾರಪ್ಪ ಬಂಗಾಳಿಯಿಂದ ಕನ್ನಡಕ್ಕೆ ತಂದಷ್ಟು ಕನ್ನಡದಿಂದ ಬಂಗಾಳಿಗೆ ಹಾಯಿಸಿಲ್ಲ ಅನಿಸಿತು. ಅವರು ಕನ್ನಡದ ಕತೆ ಕವಿತೆಗಳನ್ನು ಬಂಗಾಳಿಯಲ್ಲಿ ಬಿಡಿಬಿಡಿಯಾಗಿ ಪ್ರಕಟಿಸಿರುವುದುಂಟು. ಅವರು ಅನುವಾದಿಸಿರುವ ಕನ್ನಡ ದಲಿತ ಕಾವ್ಯ ಬಂಗಾಳದಲ್ಲಿ ಖ್ಯಾತವಾಗಿದೆ. ಬಂಗಾಳಿ ದಲಿತ ಸಾಹಿತ್ಯ ಚಳುವಳಿಯ ಕಾರ್ಯಕ್ರಮಗಳಲ್ಲಿ ಅವರು ಅನುವಾದಿಸಿದ ಸಿದ್ದಲಿಂಗಯ್ಯನವರ ‘ದಲಿತರು ಬಂದರು ದಾರಿಬಿಡಿ' ಕವನವನ್ನು
‘ದಲಿತರ್ ಆಸ್ ಚೆನ್ ರಾಸ್ತಾದಾವ್, ದಲಿತರ್ ಹಾತೆ ರಾಜ್ಯದಾವ್’ ಎಂದು ಹಾಡಲಾಗುತ್ತದೆಯಂತೆ. ಕನ್ನಡದಿಂದ ಬಂಗಾಳಿ ಅನುವಾದಿಸುವ ಪ್ರಮಾಣ ಕಡಿಮೆಯಾಗಿರಲು ಕಾರಣ ಕೇಳಿದೆ. ‘ಬಂಗಾಳಿಗೆ ಅನುವಾದ ಮಾಡಿದ್ರೆ ಪ್ರಕಾಶಕರು ಸಿಕ್ಕೋದು ಕಷ್ಟ. ಜತೆಗೆ ನನಗೆ ಬಂಗಾಳಿ ಓದಲು ಬರುತ್ತೆ. ಮಾತಾಡ್ತೀನಿ. ಕೇಳಿಸಿಕೊಳ್ತೀನಿ. ಆದರೆ ಬರೆಯೋದರಲ್ಲಿ ಅಷ್ಟು ಅನುಭವವಿಲ್ಲ. ಈಗೀಗ ಅದನ್ನೂ ರೂಢಿಸಿಕೊಳ್ತಿದೀನಿ’ ಎಂದು ಉತ್ತರ ಹೇಳಿದರು. ಅವರೀಗ ರಾಘವೇಂದ್ರ ಪಾಟೀಲರ ‘ತೇರು’ ಕಾದಂಬರಿಯನ್ನು ಬಂಗಾಳಿಗೆ ಅನುವಾದಿಸುತ್ತಿದ್ದಾರೆ. ಅವರಿಗೆ ಆಲನಹಳ್ಳಿಯವರ ‘ಕಾಡು’ ಕಾದಂಬರಿಯನ್ನು ಬಂಗಾಳದಲ್ಲಿ ಜನಪ್ರಿಯರಾಗಿರುವ ಅನಂತಮೂರ್ತಿ ಲೇಖನಗಳನ್ನು ಅನುವಾದಿಸುವ ಆಸೆಯಿದೆ. ಇಡೀ ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಪರಿಚಯಿಸುವ ಒಂದು ದೊಡ್ಡ ಕೃತಿಯನ್ನು ಬಂಗಾಳಿಯಲ್ಲಿ ಬರೆಯುವ ಆಸೆಯಿದೆ.
ಸದ್ಯ ಬಂಗಾಳಿಯಲ್ಲಿ ಕನ್ನಡದ ಯಾವ ಲೇಖಕರು ಜನಪ್ರಿಯರು ಎಂದು ಕುತೂಹಲವಿತ್ತು. ಕೇಳಿದೆ. ಉತ್ತರ ಅನಿರೀಕ್ಷಿತವಾಗಿರಲಿಲ್ಲ. ಅವರೆಂದರೆ ಅನಂತಮೂರ್ತಿ, ಬಿ.ವಿ.ಕಾರಂತ, ಗಿರೀಶ್ ಕಾರ್ನಾಡ್, ಈಗೀಗ ಭೈರಪ್ಪನವರು. ಅಂದರೆ ಕುವೆಂಪು ಬೇಂದ್ರೆ ಕಾರಂತ ಮಾಸ್ತಿ ಪುತಿನ ನರಸಿಂಹಸ್ವಾಮಿ ಲಂಕೇಶ್ ದೇವನೂರು ತೇಜಸ್ವಿ ಇವರು ಬಂಗಾಳದಲ್ಲಿ ಅಷ್ಟು ಪರಿಚಿತರಲ್ಲ. ಇವರು ಹಿಂದಿಯಲ್ಲಿಯೂ ಮರಾಠಿಯಲ್ಲಿಯೂ ಅಷ್ಟು ಪರಿಚಿತರಲ್ಲ. ಇದೊಂದು ವಿಚಿತ್ರ ಪರಿಸ್ಥಿತಿ; ಅನುವಾದದ ರಾಜಕಾರಣದಲ್ಲಿ ಇಂಗ್ಲಿಷಿಗೆ ಹೋಗುವ್ಯದು ಎಲ್ಲ ಲೇಖಕರಿಗೂ ಸಾಧ್ಯವಾಗುವುದಿಲ್ಲ. ಆದರೆ ನಮ್ಮ ಎಲ್ಲ ಪ್ರತಿಭಾವಂತ ಲೇಖಕರು ಬೇರೆ ಭಾಷೆಗಳಲ್ಲಿ ಪ್ರತಿನಿಧಿತವಾಗುವುದು ಸಾಧ್ಯವಾಗಬೇಕು.
ಕುಮಾರಪ್ಪ ಬಂಗಾಳದಲ್ಲಿದ್ದು ಮಾಡುತ್ತಿರುವ ಕೆಲಸಗಳನ್ನು ನೋಡುವಾಗ, ಎಲ್ಲ ರಾಜ್ಯಗಳಲ್ಲೂ ಇಂತಹ ಸಾಂಸ್ಕೃತಿಕ ಮನಸ್ಸುಗಳಿದ್ದರೆ ಕನ್ನಡಕ್ಕೆ ಕರ್ನಾಟಕಕ್ಕೆ ಎಷ್ಟು ಒಳ್ಳೆಯದು ಅನಿಸಿತು. ನಮಗೆ ಮರಾಠಿ, ಕೊಂಕಣಿ, ಮಲೆಯಾಳ, ತಮಿಳು ತೆಲುಗುಗಳಲ್ಲಿ ಸಾಂಸ್ಕೃತಿಕ ರಾಯಭಾರಿಗಳು ಇದ್ದಾರೆ. ಗುಜರಾತಿ ಒಡಿಯಾ ಅಸ್ಸಾಮಿ ಕಾಶ್ಮೀರಿಗಳಲ್ಲಿ ಇದ್ದಂತಿಲ್ಲ. ಅಸ್ಸಾಮಿ ಭಾಷೆಯಲ್ಲಿ ದೊಡ್ಡ ವಿದ್ವತ್ತುಳ್ಳ, ಗೌಹಾತಿಯಲ್ಲಿ ಕಾಲುಶತಮಾನವಿದ್ದ ಎಂ.ಎಸ್. ಪ್ರಭಾಕರ್ ಅಥವಾ ಕಾಮರೂಪಿ ಅವರಿದ್ದಾರೆ. ಈಗ ಅವರನ್ನು ಏನಾದರೂ ಕೊಡಿ ಎಂದು ಕಾಡಬೇಕು. ಕನ್ನಡಕ್ಕೆ ಮಾತ್ರವಲ್ಲ ನಮ್ಮೆಲ್ಲ ರಾಜ್ಯಗಳಲ್ಲಿ ಎಲ್ಲ ಭಾರತೀಯ ಭಾಷೆಗಳಲ್ಲಿ ಪರಿಣತಿ ಪಡೆದ ಒಬ್ಬೊಬ್ಬರು ಇರುವುದು ಅಗತ್ಯ. ಅದರಲ್ಲೂ ಆಯಾ ರಾಜ್ಯಗಳಲ್ಲೇ ಇದ್ದು ಅಲ್ಲಿನ ಭಾಷೆ ಕಲಿತು ಕನ್ನಡಕ್ಕೆ ಕೊಡುವವರು ಇರುವುದು ಅಗತ್ಯ. ಬಹಳ ಹಿಂದೆ ವಿಷ್ಣುಪದ ಭಟ್ಟಾಚಾರ್ಯ ಅವರು ಕಾರಂತರ ‘ಮರಳಿ ಮಣ್ಣಿಗೆ’ಯನ್ನೂ ಚದುರಂಗರ ‘ವೈಶಾಖ’ವನ್ನೂ ಅನುವಾದಿಸಿದರು. ಕುಮಾರಪ್ಪ ಇಂತಹುದೇ ಕೆಲಸವನ್ನು ಬಂಗಾಳದಲ್ಲಿದ್ದು ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ಇದು ಬಂಗಾಳಿಗಳಿಗೆ ಗೊತ್ತಿದೆ. ಆದರೆ ಕನ್ನಡಿಗರಿಗೇ ಗೊತ್ತಿರುವಂತಿಲ್ಲ.
ವಿಶೇಷವೆಂದರೆ, ಕುಮಾರಪ್ಪನವರು ಬಂಗಾಳಿ ಲೇಖಕರ ಜತೆ ಸಂಪರ್ಕ ಇರಿಸಿಕೊಂಡಿರುವುದು. ನಾನು ಕೊಲ್ಕತ್ತೆಯಲ್ಲಿದ್ದಾಗ, ಬಂಗಾಳದ ಪ್ರಸಿದ್ಧ ನಾಟಕಕಾರ ರುದ್ರಪ್ರತಾಪ ಸೇನರಿಗೆ 75 ವರ್ಷ ತುಂಬಿ, ಒಂದು ಸನ್ಮಾನ ಕಾರ್ಯಕ್ರಮ ಏರ್ಪಟ್ಟಿತ್ತು. ಬಂಗಾಲಕ್ಕೆ ಕೆಲವು ವರ್ಷಗಳ ಹಿಂದೆ ಪ್ರವಾಸ ಹೋಗಿದ್ದ ಪೀರ್ ಬಾಶಾ ಅವರು ಸೇನರನ್ನು ಸಂದರ್ಶನ ಮಾಡಿದ್ದರು. ಆಂಗ್ರಿ ಓಲ್ಡ್ ಮ್ಯಾನ್ ಎಂದು ಪ್ರಸಿದ್ಧರಾದ ರುದ್ರಪ್ರತಾಪ ಸೇನರು ತೀಕ್ಷ್ಣ ಚಿಂತನೆಯ ಲೇಖಕರು. ಅವರನ್ನು ಕಂಡು ಮಾತಾಡಬೇಕು ಅನಿಸಿ ಕುಮಾರಪ್ಪನವರಿಗೆ ಕೇಳಿದೆ. ಕುಮಾರಪ್ಪ ಅವರ ಫೋನು ನಂಬರನ್ನು ಕಂಠಪಾಠ ಮಾಡಿದ ಪದ್ಯದಂತೆ ಪಟಪಟ ಹೇಳಿದರು. ಮಾತ್ರವಲ್ಲ ನಮ್ಮನ್ನು ಆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದರು. ಅಲ್ಲಿ ಅನೇಕ ಬಂಗಾಳಿ ಲೇಖಕರನ್ನು ಪರಿಚಯಿಸಿದರು. ಅವರು ಇಟ್ಟುಕೊಂಡಿರುವ ಆಪ್ತ ಸಂಬಂಧ ಕಂಡು ನನಗೆ ಸೋಜಿಗವಾಯಿತು.
ಕುಮಾರಪ್ಪನವರೀಗ ಕೊಲ್ಕತ್ತೆಯಲ್ಲೇ ಸ್ವಂತ ಮನೆ ಮಾಡಿಕೊಂಡು ನೆಲೆನಿಂತಿದ್ದಾರೆ. ಅವರ ಕೆಲಸದಲ್ಲಿರುವ ಅಪಾರ ವಿರಾಮವೊ ಅವರು ಪಡುತ್ತಿರುವ ಏಕಾಂಗಿತನವೊ ಕಾರಣವಾಗಿ, ಅವರು ನ್ಯಾಶನಲ್ ಲೈಬ್ರರಿಗೆ ಬರುವ ಕನ್ನಡ ಪುಸ್ತಕಗಳನ್ನೆಲ್ಲ ಓದುತ್ತಾರೆ. ಸದಾ ಪಾದರಸದಂತೆ ಹಲವಾರು ಮಹಡಿಗಳಿರುವ ಲೈಬ್ರರಿಯಲ್ಲಿ ಕೆಳಕ್ಕೂ ಮೇಲಕ್ಕೂ ಓಡಾಡುತ್ತಿರುತ್ತಾರೆ. ನ್ಯಾಶನಲ್ ಲೈಬ್ರರಿಯಲ್ಲಿರುವ ಅನೇಕ ಪುಸ್ತಕಗಳಿಗೆ ನೂರರಿಂದ ಇನ್ನೂರು ವರ್ಷ ಆಯಸ್ಸು. ಅವುಗಳಲ್ಲಿ ಕರ್ನಾಟಕ ಕುರಿತು ಬ್ರಿಟಿಶ್ ಅಧಿಕಾರಿಗಳು ಲೇಖಕರು ಮಾಡಿರುವ ದಾಖಲೆ ಮತ್ತು ಟಿಪ್ಪಣಿಗಳಿವೆ. ಕುಮಾರಪ್ಪ ಕೊಲ್ಕತ್ತೆಗೆ ಹೋದ ಪ್ರತಿಯೊಬ್ಬ ಕನ್ನಡಿಗರನ್ನು ಎಳೆದುಕೊಂಡು ಹೋಗಿ, ಆ ಪುಸ್ತಕಗಳ ಧೂಳುಕೊಡವಿ, ಅವನ್ನೆಲ್ಲ ತೋರಿಸುತ್ತಾರೆ. ನ್ಯಾಶನಲ್ ಲೈಬ್ರರಿಯ ಆರ್ಕೈವ್ಸಿಗಂತೂ ಖಂಡಿತ ಕರೆದೊಯ್ಯುತ್ತಾರೆ. ಅಲ್ಲಿ ಕರ್ನಾಟಕದ ಉಲ್ಲೇಖಗಳಿರುವ ಶತಮಾನಗಳ ಹಿಂದಿನ ಹಸ್ತಪ್ರತಿಗಳನ್ನು ನಕ್ಷೆಗಳನ್ನು ತೋರಿಸುತ್ತಾರೆ. ಅವರ ಜತೆ ನ್ಯಾಶನಲ್ ಲೈಬ್ರರಿಯಲ್ಲಿ ಓದಲು ಅಲ್ಲ, ಬರೀ ಸುತ್ತಲು ಒಂದು ದಿನ ಸಾಲದು. ಕನ್ನಡದಲ್ಲಿ ಯಾರೇ ಸಂಶೋಧನೆ ಮಾಡಲಿ, ನ್ಯಾಶನಲ್ ಲೈಬ್ರರಿ ನೋಡದೆ ಮಾಡಿದರೆ, ಅದಕ್ಕೆ ಅರ್ಥವಿಲ್ಲ ಎಂದು ಅವರ ನಂಬಿಕೆ. ನಾನು ಅಲ್ಲಿದ್ದಷ್ಟು ದಿನ ಗಮನಿಸುತ್ತಿದ್ದೆ. ಬಂದ ಬಂಗಾಳಿ ಓದುಗರು ಕೂಡ ಕುಮಾರಪ್ಪ ಅವರನ್ನು ತಮಗೆ ಬೇಕಾದ ಪುಸ್ತಕಕ್ಕಾಗಿ ಕೇಳುತ್ತಿದ್ದರು. ಕುಮಾರಪ್ಪ ಚೂರೂ ಬೇಜಾರಾಗದೆ ಅವರಿಗೆ ಬೇಕಾದ ಪುಸ್ತಕವನ್ನು ಹುಡುಕಿಕೊಡುತ್ತಿದ್ದರು.
ಕಂಡವರಿಗೆ ಸಹಾಯ ಮಾಡುವುದರಲ್ಲಿ ತನ್ನನ್ನು ತೆತ್ತುಕೊಳ್ಳುವ ಈ ಪರೋಪಕಾರಿ ಪಾಪಣ್ಣನಿಗೆ ಕೆಲವು ಕನ್ನಡದ ಲೇಖಕರು ಅಷ್ಟು ಗೌರವದಿಂದ ನಡೆಸಿಕೊಂಡಿಲ್ಲ ಎಂದು ಮಾತಾಡುತ್ತ ನನಗೆ ತಿಳಿಯಿತು. ಕುಮಾರಪ್ಪನವರ ಮಡದಿ ತಮ್ಮ ಗಂಡ ದೊಡ್ಡ ಅಧಿಕಾರಿಯಾಗಿ ಹೀಗೆ ಕನ್ನಡಿಗರ ಸೇವೆ ಮಾಡುತ್ತ ದಣಿಯುವುದಲ್ಲದೆ, ಒಂದು ಮಾತು ಅನಿಸಿಕೊಂಡು ನೋಯುವುದಕ್ಕೆ ಬೇಸರವನ್ನು ತೋಡಿಕೊಂಡರು. ನಾನೂ ಅವರ ಅಭಿಪ್ರಾಯ ಅನುಮೋದಿಸಿದೆ. ಆದರೇನು ಮಾಡುವುದು? ಕುಮಾರಪ್ಪ ಬದಲಾಗುವುದಿಲ್ಲ. ಅವರಲ್ಲಿ ಕೊಲ್ಕತ್ತೆಯ ಮಳೆನೀರನ್ನೂ ಕೊಳೆನೀರನ್ನೂ ಸಮಾನವಾಗಿ ಸ್ವೀಕರಿಸಿ ಹರಿಯುವ ಹೂಗ್ಲಿಯ ಗುಣವಿದೆ. ನಾವು ಹೀಗೆ ಮಾತಾಡುತ್ತಿರುವಾಗ, ಕುಮಾರಪ್ಪ ಯಾರಿಗೊ ಕೊಲ್ಕತ್ತೆಗೆ ಬಂದ ಕೂಡಲೇ ತಮಗೆ ಫೋನು ಮಾಡಬೇಕೆಂದು ತಮ್ಮ ಸೆಲ್ ನಂಬರನ್ನು ಕೊಡುತ್ತಿದ್ದರು. ಮರುದಿನ ಹಾಸ್ಯಲೇಖಕ ನರಸಿಂಹಮೂರ್ತಿ ಬರುವವರಿದ್ದರು ಎಂದು ಹಿಂದುಗಡೆಯಿಂದ ತಿಳಿಯಿತು. ಪ್ರಭುಶಂಕರ್ ಹೇಳಿದ ಮಾತು ನಿಜ. ಕುಮಾರಪ್ಪ ಇಲ್ಲದೆ ಯಾವ ಲೇಖಕರ ಕೊಲ್ಕತ್ತಾ ಪ್ರವಾಸವೂ ಪೂರ್ಣಗೊಳ್ಳುವುದಿಲ್ಲ. ಆದರೆ ಅದಕ್ಕೆ ಕುಮಾರಪ್ಪ ತೆರುತ್ತಿರುವ ಬೆಲೆ ದೊಡ್ಡದಾಗಿದೆ.
ಕುಮಾರಪ್ಪ ನಮ್ಮನ್ನು ಕೊಲ್ಕತ್ತೆಯ ಅನೇಕ ಗ್ರಂಥಾಲಯಗಳಿಗೆ, ಬುಕ್ ಫೇರಿಗೆ, ಬಂಗಾಳಿ ಬಿರಿಯಾನಿ ಸಿಗುವ ‘ಅನಾರ್ಕಲಿ’ಗೆ, ಸಿನಿಮಾ ಮಂದಿರಕ್ಕೆ ಕರೆದೊಯ್ದರು. ಒಂದು ದಿನ ಕುಮಾರಪ್ಪ ನಮಗೆ ಮನೆಗೂ ಕರೆದೊಯ್ದು ಔತಣ ಕೊಟ್ಟರು. ಕೊನೆಯ ದಿನ ಅವರನ್ನು ನಾವು ಹೂಗ್ಲಿ ನದಿ ಕಡಲನ್ನು ಕೂಡುವ ಗಂಗಾಸಾಗರ ದ್ವೀಪಕ್ಕೆ ನಾವು ಕರೆದೊಯ್ದೆವು. 25 ವರುಷದ ತಮ್ಮ ಅನುಭವಗಳನ್ನು ಕುಮಾರಪ್ಪ ಕಡಲಿನ ಅಲೆಅಲೆಯಂತೆ ಹೇಳುತ್ತಾ ಹೋದರು. ಮಹಾ ತಮಾಶೆಯ ದೃಷ್ಟಿಕೋನವುಳ್ಳ ಅವರು ನೂರಾರು ಘಟನೆಗಳನ್ನು ಹೇಳಿ ನಗಿಸುತ್ತಾರೆ. ದಯವಿಟ್ಟು ಇದನ್ನೆಲ್ಲ ಬರೀರಿ ಒಂದು ಅದ್ಭುತ ಕಥನವಾಗುತ್ತದೆ ಎಂದೆ. ಆದರೂ ಅವರು ತಮ್ಮ ಮಾತಿನಲ್ಲಿ ಬಂಗಾಳಿಗಳನ್ನು ‘ಮಹಾಸೋಮಾರಿಗಳು’ ಎಂದು ಕರೆದಿದ್ದು ವಿಚಿತ್ರವೆನಿಸಿತು. ಕೃಷ್ಣಾನಂದ ಕಾಮತರು 40 ವರ್ಷಗಳ ಹಿಂದೆ ಬರೆದ ‘ವಂಗದರ್ಶನ’ದಲ್ಲಿ ಕೂಡ ಬಂಗಾಳಿಗಳ ಮೇಲೆ ಇಂತಹವೇ ಟೀಕೆಗಳಿವೆ. ಭಾರತಕ್ಕೆ ಇಷ್ಟೊಂದು ಲೇಖಕರನ್ನೂ ಚಿಂತಕರನ್ನೂ ಸ್ವಾತಂತ್ರ್ಯ ಹೋರಾಟಗಾರರನ್ನೂ ಕಲಾವಿದರನ್ನೂ ಸಿನಿಮಾ ನಿರ್ದೇಶಕರನ್ನೂ ಕೊಟ್ಟಿರುವ ನಾಡನ್ನು ಹೀಗೆ ಕರೆಯಬಹುದೇ ಎಂದು ನನಗೆ ಅನುಮಾನ. ಕಾಮತರ ಹೇಳಿಕೆಗಳಲ್ಲಿ ಒಂದು ಶಬ್ದವನ್ನೂ ತೆಗೆದುಹಾಕುವಂತಿಲ್ಲ ಎಂದು ಕುಮಾರಪ್ಪ ಖಂಡಿತ ದನಿಯಲ್ಲಿ ಹೇಳಿದರು.ತಾವು ಕೆಲಸ ಮಾಡುವ ಸಂಸ್ಥೆಯಲ್ಲಿ ಸಂಘಗಳನ್ನು ಕಟ್ಟಿಕೊಂಡು ಮೈಗಳ್ಳರಾಗಿರುವ ಸರ್ಕಾರಿ ನೌಕರರನ್ನು ಕಂಡೊ ಅಥವಾ ತಮ್ಮ ಏರಿಯಾದ ಮಧ್ಯಮವರ್ಗದ ಜನರನ್ನು ಮನಸ್ಸಲ್ಲಿ ಇಟ್ಟುಕೊಂಡೊ ಕುಮಾರಪ್ಪ ಈ ಪೂರ್ವಗ್ರಹ ರೂಪಿಸಿಕೊಂಡಿರಬಹುದೇ? ಅವರ ಆಕ್ಷೇಪವು ಬಂಗಾಳದ ಹಳ್ಳಿಗರಿಗೆ ಅನ್ವಯವಾಗುತ್ತದೆಯೇ? ಕಾಲುಶತಮಾನದ ಅನುಭವ ಅವರದು. ನನ್ನದೊ ಕೆಲವೇ ದಿನಗಳ ಓಡಾಟ. ಆದರೂ ಬಂಗಾಳದ ಕೆಲವು ಹಳ್ಳಿಗಳಲ್ಲಿ ಓಡಾಡಿ ಬಂದ ನನಗೆ ಅವರ ಹೇಳಿಕೆಯನ್ನು ಒಪ್ಪಬೇಕು ಎಂದು ಅನಿಸಲಿಲ್ಲ.
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.