ಕನ್ನಡದ ತರುಣ ಕತೆಗಾರ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ತಮ್ಮನ್ನು ಕಲಾಭ್ಯಾಸಿ ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರ ಮೊದಲ ಕಥಾಸಂಕಲನ ‘ನೀಲಕುರಿಂಜಿ’ ಕೇಂದ್ರ ಸಾಹಿತ್ಯ ಅಕಾಡೆಮಿಯ 2022ರ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಗಳು ಪ್ರಕಟವಾದಾಗ ಎದುರಾಗುವ ಸಂಭ್ರಮಗಳು, ಜೊತೆಗೇ ಬರುವ ಟೀಕೆಗಳು ಇತ್ಯಾದಿ ಸಾಹಿತ್ಯ ಕೃತಿಗಳು ಎದುರಿಸಬೇಕಾದ ʻಮಂಥನʼ ಎಂದು ಹೇಳುತ್ತ ಈ ಕ್ಷಣವನ್ನು ಸ್ವೀಕರಿಸಿದ್ದೇನೆ ಎನ್ನುತ್ತಾರೆ ದಾದಾಪೀರ್. ಕೆಂಡಸಂಪಿಗೆಯಲ್ಲಿ ‘ಜಂಕ್ಷನ್ ಪಾಯಿಂಟ್’ ಅಂಕಣ ಬರೆಯುತ್ತಿರುವ ದಾದಾಪೀರ್ ಪ್ರಶಸ್ತಿ ಪಡೆದ ಸಂಭ್ರಮವನ್ನು ಸಂಕೋಚದಿಂದಲೇ ಇಲ್ಲಿ ಹಂಚಿಕೊಂಡಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ. ಅಭಿನಂದನೆಗಳು. ಈ ಸಾಹಿತ್ಯ ಪಯಣ ಶುರುವಾದ ಬಗೆಯನ್ನು ನೆನಪಿಸಿಕೊಳ್ಳುವಿರಾ?
ವಂದನೆಗಳು. ಸಾಹಿತ್ಯಪಯಣವು ಪ್ರಜ್ಞಾಪೂರ್ವಕವಾಗಿ ಶುರುವಾದುದಲ್ಲ. ಆದರೆ ಶಾಲೆ, ಕಾಲೇಜು ತರಗತಿಗಳಲ್ಲಿ ನಾನು ಬರವಣಿಗೆಯನ್ನು ಪ್ರೀತಿಸಿದ್ದೆ. ಅದಕ್ಕೂ ಮೊದಲು ಓದುವುದು ಎಂದರೆ ನನಗೆ ಮತ್ತೂ ಇಷ್ಟವಾಗಿತ್ತು. ಹಾಗಾಗಿ ಅನಂತಮೂರ್ತಿ, ಲಂಕೇಶ್, ಕೇಶವ ಮಳಗಿ, ವಸುಧೇಂದ್ರ, ವಿವೇಕ್ ಶಾನುಭಾಗ್, ಗಿರೀಶ್ ಕಾರ್ನಾಡ್, ವೈದೇಹಿ, ಮಮತಾ ಸಾಗರ್..ಹೀಗೆ ಯಾರೆಲ್ಲಾ ಪುಸ್ತಕಗಳು ಸಿಗುತ್ತವೋ, ಅವರ ಪುಸ್ತಕಗಳನ್ನೆಲ್ಲ ಓದಿಬಿಡುತ್ತಿದ್ದೆ. ಕಾಲೇಜು ಮ್ಯಾಗಸೀನ್ ಗೆ ಲೇಖನ ಬರೆಯುತ್ತಿದ್ದೆನೇ ಹೊರತು, ಬೇರೆಲ್ಲೂ ಬರಹಗಳು ಪ್ರಕಟವಾಗಿರಲಿಲ್ಲ.
ಮತ್ತೆ ಈ ಕಥಾಲೋಕಕ್ಕೆ ಕಾಲಿಟ್ಟಿದ್ದು ಹೇಗೆ?
ಓ..ನಾನು ಟೀವಿ ಆಂಕರ್ ಆಗಬೇಕೆಂದು ಕನಸು ಕಾಣುತ್ತಲೇ ಇದ್ದೆ. ಅದೇ ಕನಸಿನ ಬೆಂಬತ್ತಿ ವಿಜಯನಗರದಿಂದ ಬೆಂಗಳೂರೆಂಬ ಮಾಯಾನಗರಿಗೆ ಬಂದೆ. ಅದಕ್ಕಾಗಿ ಅಡ್ಡಾಡಿದ ದಿನಗಳದ್ದು ಬೇರೆಯೇ ಕತೆ ಬಿಡಿ. ನಾನು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದುದರಿಂದ ಗಣಿತ ಪಾಠ ಮಾಡುವ ವೃತ್ತಿಯೇ ಸಿಕ್ಕಿತು. ಈಗ ನೋಡಿದರೆ ಅದುವೇ ಬಹಳ ಇಷ್ಟವಾಗುತ್ತಿದೆ. ಹೀಗೆ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ನಾನು ಒಂದು ಕವನ ಬರೆದು ಪ್ರಜಾವಾಣಿಗೆ ಕಳಿಸಿದ್ದೆ. ಅದು ಪ್ರಕಟವಾಗಿಬಿಡಬೇಕೇ.. ಈ ಪ್ರಕಟಿತ ಕವಿತೆಯೇ ನನ್ನಲ್ಲಿ ಬರವಣಿಗೆ ಕುರಿತು ವಿಶ್ವಾಸದ ಚಿಲುಮೆಯನ್ನುಸೃಷ್ಟಿಸಿದ್ದು ಎನ್ನಬೇಕು. ಈ ಖುಷಿಯೇ ಬರಹವನ್ನು ಮುಂದುವರೆಸಲು ಪ್ರೇರಣೆಯಾಯಿತು. ಆಮೇಲೆ ಕತೆ ಬರೆಯಬೇಕು ಅನಿಸಿತು. ಆಮೇಲೆ ನಾನು ನನ್ನ ಪಾಲಿಗೆಬಂದಿರುವ ಕೆಲಸಗಳನ್ನು ಮಾಡುತ್ತಾ ಹೋದೆನಷ್ಟೇ. ಕತೆಗಳನ್ನು ಬರೆದೆ. ಅದಕ್ಕಾಗಿ ಮತ್ತಷ್ಟು ಓದಿದೆ. ಈ ಓದುವಿಕೆಯೇ ನನ್ನಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ. ಬರೆಯಬೇಕು ಎನ್ನುವ ತುಡಿತವನ್ನೂ ಮೂಡಿಸಿದೆ.
ಬ್ಯುಸೀ ಬೆಂಗಳೂರಿನಲ್ಲಿ ಸಾಹಿತ್ಯ ಪ್ರೀತಿ ಮತ್ತಷ್ಟು ಗಟ್ಟಿಯಾಯಿತೇ?
ಹಾಗನಿಸುತ್ತದೆ. ಬೆಂಗಳೂರಿನಲ್ಲಿ ಮಮತಾ ಜಿ. ಸಾಗರ್ ಅವರ ನೇತೃತ್ವದಲ್ಲಿ ‘ಕಾವ್ಯಸಂಜೆ’ ತಂಡದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಅಲ್ಲಿನನಗೆ ಕವನಗಳ ಬಗ್ಗೆ, ವಿಶ್ವ ಸಾಹಿತ್ಯದ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ನಾವೇ ಕಟ್ಟಿಕೊಂಡ ‘ಗಲಾಟೆ ಗಂಧರ್ವರು’ ತಂಡದ ಮೂಲಕ ಕತೆಗಳನ್ನು ಓದುವ ಒಂದು ಅವಕಾಶವನ್ನು ನಾವೇ ಮಾಡಿಕೊಂಡೆವು. ಈ ತಂಡ ಸೃಷ್ಟಿಯಾದ ಬಗೆಯನ್ನು ಹೇಳಬೇಕು ನಾನು. ಒಮ್ಮೆ ಬೆಂಗಳೂರಿನಲ್ಲಿ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ನೋಡಲು ಹೋಗುವ ಸಂದರ್ಭದಲ್ಲಿ ಸ್ನೇಹಿತರು ಸೇರಿಕೊಂಡು ಒಂದು ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡಿದ್ದೆವು. ನಾಟಕ ನೋಡಿದ ಬಳಿಕ ಅದನ್ನು ಡಿಲೀಟ್ ಮಾಡುವುದು ಬೇಡ, ಏನಾದರೂ ಚಟುವಟಿಕೆ ಮಾಡೋಣ ಎಂದು ನಿರ್ಧರಿಸಿದೆವು. ಬಳಿಕ ಅದು ನಿಧಾನವಾಗಿ ಕತೆ ಓದುವ ಗುಂಪಾಗಿ ತಾನೇ ರೂಪು ಪಡೆಯಿತು. ಸಾಹಿತ್ಯದಲ್ಲಿ ತಳವರ್ಗದ ಕತೆಗಳು, ದಲಿತ, ಮಹಿಳಾಪರ ಕತೆಗಳೇನೇನಿವೆ ಎಂದು ಹುಡುಕಿಕೊಂಡು ಓದುವ ಉದ್ದೇಶದಿಂದ ಹೀಗೆ ಒಟ್ಟುಸೇರುತ್ತಿದ್ದೆವು. ಈಗ ಈ ತಂಡದಲ್ಲಿ ಕತೆಗಳನ್ನುಓದುವುದರಿಂದ ಬೇರೆಯವರಿಗೆ ಎಷ್ಟು ಅನುಕೂಲವಾಗುತ್ತದೆ ಎನ್ನುವುದಕ್ಕಿಂತ ನಮಗೇ ಅದು ಹೆಚ್ಚು ಸಹಾಯವಾಗುತ್ತಿದೆ ಎಂದು ನಿಧಾನವಾಗಿ ಅರಿವಾಗುತ್ತಿದೆ.
ಗಣಿತ ನಿಮ್ಮ ಪ್ರೀತಿಯ ವಿಷಯ, ಜೊತೆಗೆ ಈ ಬರವಣಿಗೆ.. ಇವೆರಡೂ ಪೂರಕವೆನಿಸಿದೆಯೇ?
ಹೌದು. ಗಣಿತವೆನ್ನುವುದು ಹೇಗೆ ಅನಂತವಾದ ಒಂದು ಪರಿಕಲ್ಪನೆಯೋ, ಕಾವ್ಯ-ಕತೆ ಮುಂತಾದ ಕಲಾಜಗತ್ತು ಕೂಡ ಅನಂತವಾದ ಕಲ್ಪನೆಗೆ ಅವಕಾಶಕೊಡುವ ಕ್ಷೇತ್ರ. ಹಾಗಾಗಿ ನಾಟಕಗಳನ್ನು ನೋಡುವಾಗ ಅದರ ಕಟ್ಟುವಿಕೆ ಮತ್ತು ಗಣಿತಕ್ಕೆ ಸಾಮ್ಯತೆ ಇದೆ ಎಂದು ನನಗೆ ಅನಿಸುತ್ತದೆ. ಗಣಿತದಲ್ಲಿ ಬರುವ ತರ್ಕವು ಕೂಡ ನನಗೆ ಕಟ್ಟುವಿಕೆಗೆ ಸಂಬಂಧಿಸಿದ ಅನೇಕ ಪಾಠಗಳನ್ನು ಕಲಿಸಿದೆ. ಕಟ್ಟುವಿಕೆಯಲ್ಲಿ ಬಿಗಿ ಬಂಧ ಇರಬೇಕಿದ್ದರೆ ಗಣಿತವೇ ಬೇಕಲ್ಲ. ಗಣಿತ ಅಂತಲ್ಲ, ಯಾವುದೇ ಕ್ಷೇತ್ರದಿಂದ ಬಂದರೂ ನೋಡುವ ಕಣ್ಣಿದ್ದರೆ, ಅದು ಕಲಾಪ್ರಕಾರಕ್ಕೆ ಸಹಾಯ ಮಾಡಿಯೇ ಮಾಡುತ್ತದೆ ಎಂದೂ ಹೇಳಬಹುದೇನೋ. ಯಾವುದೇ ಅನುಭವ ಲೋಕ, ಯಾವುದೇ ಇತರ ಕಲಾಪ್ರಕಾರವು ನಮ್ಮ ಸೃಜನಶೀಲತೆಗೆ ಸಹಕಾರಿಯಾಗಿಯೇ ಇರುತ್ತದೆ.
ಪ್ರಶಸ್ತಿಯ ನಂತರದ ಸಂಭ್ರಮಗಳು ಮತ್ತು ಟೀಕೆಗಳ ಬಗ್ಗೆ ಏನಾದರೂ ಹೇಳುವಿರಾ?
ಸ್ಪರ್ಧೆಗಳು ಒಂದು ಪ್ರಜಾಪ್ರಭುತ್ವ ರೀತಿಯಲ್ಲಿ ಕೆಲಸ ಮಾಡುತ್ತವೆ ಎಂದುಕೊಂಡಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಕುಳಿತ ಹುಡುಗ-ಹುಡುಗಿಯರು ಹೆಸರು ಕೂಡ ಒಂದು ಸ್ಪರ್ಧೆಯ ಮೂಲಕ ನಾಲ್ಕು ಜನರ ಅರಿವಿಗೆ ಬರಬಹುದು. ‘ತಾನೂ ಬರೆಯಬಲ್ಲೆ’ ಎಂಬ ವಿಶ್ವಾಸವನ್ನು ಬರಹಗಾರರ ಮನದಲ್ಲಿ ಈ ಸ್ಪರ್ಧೆಗಳು ಮೂಡಿಸಬಹುದು ಎಂದುಕೊಂಡಿದ್ದೇನೆ. ಪ್ರಶಸ್ತಿಗಳು ಅವರಿಗೆ ಬರೆಯಲು ಹೆಚ್ಚಿನ ಹುಮ್ಮಸ್ಸನ್ನು ಕೊಡುತ್ತವೆ. ಇನ್ನು ಇವತ್ತಿನ ಓದುಗರು ಯಾರು ಎಂಬುದು ನಮಗೆ ಗೊತ್ತಿಲ್ಲ. ಈ ಮಹಾ ಜಗತ್ತಿನಲ್ಲಿ ಮುಂಚಿನಂತೆ ಅದನ್ನು ಗುರುತಿಸಿಕೊಳ್ಳುವುದು ಕೂಡ ಈಗ ಸುಲಭವಿಲ್ಲ. ಪ್ರಶಸ್ತಿ ಬಂದ ಸಿನಿಮಾಗಳನ್ನು ನಾವು ಹುಡುಕಿಕೊಂಡು ಹೋಗಿ ನೋಡುತ್ತೇವಲ್ಲ. ಹಾಗೆಯೇ ಪುಸ್ತಕಗಳೂ ಕೂಡ ಸುದ್ದಿಗೆ ಬರುತ್ತವೆ. ಅವು ಪ್ರಶಸ್ತಿಗಳ ಮೂಲಕ ಒಂದಿಷ್ಟು ಹೆಚ್ಚು ಚರ್ಚೆಗೆ ಅವಕಾಶ ಪಡೆಯುತ್ತವೆ. ಆದರೆ ಪ್ರಶಸ್ತಿ ಬಂದಾಗ ಖುಷಿಪಟ್ಟು, ಮತ್ತೆ ನಾವು ನಮ್ಮ ಕಲಾಭ್ಯಾಸಕ್ಕೆ ಮರಳಲೇಬೇಕು. ಅದೊಂದು ಜವಾಬ್ದಾರಿ.
ಈವಾಗ ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ಒಂದು ವಿಮರ್ಶಾ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಒಂದು ಪುಸ್ತಕವನ್ನು ಬೇರೆ ವಿಮರ್ಶಕರು ನೋಡದೇ ಇದ್ದರೂ, ಓದುಗರು ಅದನ್ನೆತ್ತಿಕೊಂಡು ಓದಿ ಬರೆಯುತ್ತಿದ್ದಾರೆ ಎಂದರೆ ಕೃತಿಯು ಓದುಗರನ್ನು ತಲುಪಿದೆ ಎಂದರ್ಥ ಅಲ್ಲವೇ. ಕೃತಿಯೊಂದರಲ್ಲಿ ಹೂರಣವು ಗಟ್ಟಿಯಾಗಿದ್ದರೆ ಅದು ಜನರನ್ನು ತಲುಪುತ್ತದೆ ಎಂಬುದನ್ನು ಸಾಮಾಜಿಕ ಜಾಲತಾಣದ ಮೂಲಕ ಅರ್ಥ ಮಾಡಿಕೊಳ್ಳಬಹುದು. ಎರಡನೆಯದಾಗಿ ಪ್ರಶಸ್ತಿಗಳೆಲ್ಲ ಇರುವುದಕ್ಕೇ ಹೊಸ ಹೊಸ ಕೃತಿಗಳ ಹೆಸರುಗಳು ಓದುಗರ ಬಾಯಲ್ಲಿ ಓಡಾಡುತ್ತವೆ ಅಲ್ಲವೇ. ಮತ್ತೆ ಮತ್ತೆ ಅದದೇ ಕೃತಿಗಳ ಉಲ್ಲೇಖವಾಗುವ ಅಪಾಯ ತಪ್ಪುತ್ತದೆ ಅಲ್ಲವೇ. ಎಷ್ಟೇ ಸಾಂಸ್ಕೃತಿಕ ರಾಜಕಾರಣವಿಲ್ಲ ಎಂದು ಹೇಳಿದರೂ, ಅದು ಇದ್ದೇ ಇದೆ. ಆದರೆ ಅಂತಹ ಅಪಾಯಗಳನ್ನು ತಪ್ಪಿಸಲು ಈ ಪ್ರಶಸ್ತಿಗಳು ನೆರವಾಗುತ್ತವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ಟೀಕೆ-ಸಂಭ್ರಮಗಳ ಬಗ್ಗೆ ಹೇಳುವುದಾದರೆ, ಒಂದು ವಿಷಯವು ಚರ್ಚೆಗೆ ಒಳಗಾಗುವುದಾದರೆ ಆಗಲಿ ಅಲ್ಲವೇ. ಅದನ್ನು ನಾನು ಕಡೆಗೋಲಿನ ರೂಪಕದ ಮೂಲಕ ಹೇಳಬಯಸುತ್ತೇನೆ. ಪರ-ವಿರೋಧ, ಪಂಥ- ಪಂಗಡ ಎಂಬೆಲ್ಲ ಚರ್ಚೆಗಳು ಚೆನ್ನಾಗಿ ನಡೆಯಲಿ, ಆ ಎಲ್ಲ ಮಂಥನಗಳನ್ನು ಹಾದುಕೊಂಡು ಒಂದು ಕೃತಿಯು ಸಾಗಲಿ ಅಲ್ಲವೇ. ಆಗ ಏನೋ ಒಂದು ಫಲಿತಾಂಶ ಸಿಕ್ಕೇ ಸಿಗತ್ತೆ. ಮಂಥನವಾಗದೇ ಇರುವುದಕ್ಕಿಂತ, ಆ ಪ್ರಕ್ರಿಯೆ ನಡೆಯಲಿ ಎನ್ನುವುದು ಒಳಿತಲ್ಲವೇ. ಆದರೆ ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲ ವಿಮರ್ಶೆಗಳ ಬಗ್ಗೆಯೂ ಭಾರೀ ಭ್ರಮೆಗಳೂ ಇರಬೇಕಾಗಿಲ್ಲ. ಎಚ್ಚರ ಮತ್ತು ಭ್ರಮೆಯ ನಡುವಿನ ಹಾದಿಯನ್ನು ಲೇಖಕರೇ ಗುರುತಿಸಿಕೊಂಡಿರಬೇಕು.
ನೀಲಕುರಿಂಜಿ ಕತೆಗಳ ಬಗ್ಗೆ?
ನೀಲಕುರಿಂಜಿ ಕತೆಗಳು ನನ್ನ ಮೊದಲ ಕಥಾಸಂಕಲನ. ಇಲ್ಲಿರೋ ಕತೆಗಳೆಲ್ಲ ತುಂಬಾ ಕಾಡಿದಾಗ ಬರೆದವು. ಕತೆಗಳ ತಂತ್ರ ಭಾಷೆ ಎಲ್ಲವೂ ಅವುಗಳ ಪಾಡಿಗೇ ಒಲಿದು ಬಂದಿವೆ. ಅದಕ್ಕಾಗಿಯೇ ಈ ಕತೆಗಳು ಓದುಗರಿಗೆ ಇಷ್ಟವಾಗಿದೆ ಅನಿಸುತ್ತದೆ.
ಮತ್ಯಾವ ಹವ್ಯಾಸಗಳು ನಿಮ್ಮ ಜೊತೆಗಿವೆ.
ನನಗೆ ಕಲಾಪ್ರದರ್ಶನಗಳನ್ನು ನೋಡುವುದೆಂದರೆ ಇಷ್ಟ. ನಾನಂತೂ ಚಿತ್ರಗಳನ್ನು ಬಿಡಿಸಲಾರೆ. ಆದರೆ ಕಲಾಪ್ರದರ್ಶನಗಳೆಂದರೆ ನನಗೆ ಇಷ್ಟ. ಸ್ನೇಹಿತರೊಡನೆ ಪಟ್ಟಾಂಗ ಮಾಡುವುದಂತೂ ಬಹಳ ಮುಖ್ಯ. ಅಥವಾ ಅದನ್ನು ‘ಬದುಕುವುದು’ ಎಂದು ಹೇಳಬಹುದೇನೋ. ಓದು, ನಾಟಕ ನೋಡುವುದು, ಸಿನಿಮಾ ನೋಡುವುದು ಇದ್ದೇಇದೆ. ನನಗೆ ನನ್ನನ್ನು ಕಲಾಭ್ಯಾಸಿ ಎಂದು ಗುರುತಿಸಿಕೊಳ್ಳುವುದು ಇಷ್ಟ. ಈ ಅಭ್ಯಾಸ ಪ್ರಕ್ರಿಯೆಯಲ್ಲಿ ಕತೆ, ಕವನಗಳು ಕೈ ಹಿಡಿಯುತ್ತಿವೆ. ಇಲ್ಲಿವರೆಗೆ ಎಲ್ಲವೂ ಚೆಂದಾಗಿ ನಡೆದಿದೆ. ಒಳಿತೇ ಆಗುತ್ತದೆ ಎಂದು ನಂಬಿದ್ದೇನೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಅಭಿನಂದನೆಗಳು ದಾದಾಪೀರ್! ಇನ್ನಷ್ಟು ಮುಂದೆ ಬನ್ನಿ, ಹೀಗೆಯೇ ಒಳ್ಳೆಯ ಬರಹಗಳನ್ನ ಹಂಚಿ !
Congratulations Dadapeer keep the spirit and keep writing 🌹
ದಾದಾಪೀರಗೆ ಬರವಣಿಗೆ ಇಷ್ಟ. ನನಗೆ ದಾದಾಪೀರ ಇಷ್ಟ… 9448441471.
ಎಚ್ಚರದಲ್ಲಿದ್ದುಕೊಂಡೆ ಬರೆಯಬೇಕೆಂಬ ನಿಮ್ಮ ಆಶಯ ಈಗಿನ ಬರಹಗಾರರಿಗೆ ತಲುಪಲಿ..
ಅಭಿನಂದನೆಗಳು..!!!
ಯಾವದೇ.. ಸ್ಥಾನ ಮಾನ ಆಸೆ ಪಡದೆ, ನನ್ನ ಕೆಲಸ ಓದು ಬರಹ ಅಷ್ಟೇ… ಅನ್ನುವ ದಿಟ್ಟ ನಿರ್ಧಾರ ಇವತ್ತು ನಿಮಗೆ ತಕ್ಕ ಫಲ, ನಿಮ್ಮ ಈ ಬರವಣಿಗೆ ಮಾದರಿಯಾಗಲಿ ಅಭಿನಂದನೆಗಳು ದಾದಾ 💐💐