Advertisement
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಸೈಯದ್ ಸಲೀಂ ಕತೆ “ಬೂದು ಬಣ್ಣದ ಆಕಾಶ”

ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಸೈಯದ್ ಸಲೀಂ ಕತೆ “ಬೂದು ಬಣ್ಣದ ಆಕಾಶ”

ನಾನು ಭಯಪಟ್ಟ ಸಮಯ ಕೊನೆಗೂ ಬಂತು… ಬ್ರೂನೊವನ್ನು ಮೆರ್ಸಿ ಕಿಲಿಂಗ್ ಮಾಡುವ ಸಮಯ… ನಾನು ಬ್ರೂನೋ ಕಡೆಗೆ ದಯೆಯಿಂದ ನೋಡಿದೆ. ಅದು ಹಿಂದಿನಂತೆ ನನ್ನನ್ನು ಗುರುತಿಸುತ್ತಿಲ್ಲ. ತನ್ನ ತುಟಿಗಳನ್ನು ಚಾಚಿ ನಗುವುದು ಮರೆತಿದೆ. ಚುರುಕಾಗಿ ಚಲಿಸುತ್ತಿದ್ದ ಹಿಂದಿನ ಬ್ರೂನೊ ಇಲ್ಲ ಈಗ. ಅದರ ಚಲನೆಗಳಲ್ಲಿಯೂ, ವ್ಯವಹಾರದಲ್ಲಿಯೂ ಬಹು ಬದಲಾವಣೆಗಳು. ಅದು ಈಗ ವೈದ್ಯಶಾಸ್ತ್ರ ಸಂಶೋಧನೆಗೆ ಕೆಲಸಕ್ಕೆ ಬರದ ಪ್ರಾಣಿ.
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಸೈಯದ್ ಸಲೀಂ ಕತೆ “ಬೂದು ಬಣ್ಣದ ಆಕಾಶ”‌ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಬ್ರೂನೊ ತನ್ನ ಮುಂದಿರುವ ಕಂಪ್ಯೂಟರ್ ಸ್ಕ್ರೀನ್‌ನಲ್ಲಿ ಕಾಣಿಸುತ್ತಿರುವ ಚಿತ್ರಗಳನ್ನು ತೀಕ್ಷ್ಣವಾಗಿ ನೋಡುತ್ತಿತ್ತು. ಒಂದು ಕಡೆ ಗುಲಾಬಿ ಹೂವು, ಇನ್ನೊಂದು ಕಡೆ ರತ್ನದ ಹಾರ… ಸರಿಯಾದ ಚಿತ್ರವನ್ನು ಆಯ್ಕೆಮಾಡಿದರೆ ‘ಬನಾನಾ ಮಿಲ್ಕ್‌ಶೇಕ್’ ಬಹುಮಾನವಾಗಿ ಸಿಗುತ್ತದೆ ಎಂದು ಅದಕ್ಕೆ ಗೊತ್ತಿತ್ತು. ತಪ್ಪು ಮಾಡಿದರೆ ಶಿಕ್ಷೆ ತಪ್ಪುವುದಿಲ್ಲ ಎಂದೂ ಗೊತ್ತಿತ್ತು.

ಬ್ರೂನೋ ತನ್ನ ಬಲಗೈಯನ್ನು ಮುಂದೆ ಚಾಚಿ ಉದ್ದನೆಯ ಬೆರಳಿನಿಂದ ಹಾರದ ಕಡೆ ತೋರಿಸಿತು. ಕಳೆದ ಎರಡು ವಾರಗಳಿಂದ ಹಾರವನ್ನು ತೋರಿಸಿದಾಗಲೆಲ್ಲಾ ಅದಕ್ಕೆ ಸಿಹಿಯಾದ ಮಿಲ್ಕ್‌ಶೇಕ್ ಸಿಕ್ಕಿದ್ದನ್ನು ಅದು ನೆನಪಿಸಿಕೊಂಡಿತ್ತು. ಆದರೆ ಈ ಬಾರಿ ಇದ್ದಕ್ಕಿದ್ದಂತೆ ಕಂಟೈನರ್‌ ಒಳಗೆ ಅಂಧಕಾರ ಆವರಿಸಿತು.

ತಾನು ಮಾಡಿದ ತಪ್ಪೇನು ಎಂಬುದು ಬ್ರೂನೋಗೆ ಅರ್ಥವಾಗಲಿಲ್ಲ. ಐದು ನಿಮಿಷಗಳ ಕತ್ತಲಲ್ಲಿ ಕಳೆದ ನಂತರ ಬೆಳಕು ಬೆಳಗಿತು. ಮತ್ತೊಮ್ಮೆ ಅದರ ಮುಂದೆ ಕಂಪ್ಯೂಟರ್ ಸ್ಕ್ರೀನ್ ಇಡಲಾಯಿತು. ಬ್ರೂನೊ ಮತ್ತೆ ಹಾರವನ್ನೇ ತೋರಿಸಿತು. ತಕ್ಷಣವೇ ಕಂಟೈನರ್‌ನ ಬಲ್ಬ್ ಆರಿಹೋಯಿತು.

ಆರು ಸಲ ಪ್ರಯತ್ನಿಸಿದರೂ ಬ್ರೂನೋ ಅದೇ ತಪ್ಪನ್ನು ಮಾಡುತ್ತಲೇ ಇತ್ತು.

ನಿನ್ನೆಯವರೆಗೂ ಸರಿಯಾಗಿದ್ದ ಉತ್ತರ ಇಂದು ಬದಲಾಗಿದೆ ಎಂಬ ವಿಷಯವನ್ನು ಅದರ ಮೆದುಳು ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಅದೇ ಪ್ರಯೋಗವನ್ನು ಅದರ ಜೊತೆಗಿದ್ದ ಹೆಣ್ಣು ಕೋತಿ ಲಿಲ್ಲಿಯ ಮೇಲೆ ಮಾಡಿದೆ. ನಿನ್ನೆಯವರೆಗೂ ಲಿಲ್ಲಿ ಹಾರವನ್ನು ತೋರಿಸಿದರೆ ಅದಕ್ಕೆ ಬಾಳೆಹಣ್ಣು ಸಿಗುತ್ತಿತ್ತು. ಇಂದು ಮೊದಲು ಅದು ಹಾರವನ್ನೇ ತೋರಿಸಿತು. ತಕ್ಷಣ ಕತ್ತಲೆ ಮಾಡಿದೆ. ಐದು ನಿಮಿಷಗಳ ನಂತರ ಮತ್ತೆ ಸ್ಕ್ರೀನ್ ತೋರಿಸಿದಾಗ, ಅದು ಗುಲಾಬಿ ಹೂವನ್ನು ತೋರಿಸಿತು. ಉಳಿದ ಎರಡು ಕೋತಿಗಳೂ ಸಹ ಮೊದಲು ಹಾರ ತೋರಿಸಿ, ಶಿಕ್ಷೆಯಾಗುತ್ತದೆ ಎಂದು ಅರ್ಥವಾಗಿ, ಎರಡನೇ ಬಾರಿ ಗುಲಾಬಿ ಹೂವನ್ನೇ ತೋರಿಸಿದವು.

ಬಹುಮಾನ ನೀಡುವ ಚಿತ್ರ ಬದಲಾಗಿದೆ ಎಂಬ ವಿಷಯ ಇವುಗಳಿಗೆ ಅರ್ಥವಾದಂತೆ ಬ್ರೂನೋಗೆ ಯಾಕೆ ಅರ್ಥವಾಗಲಿಲ್ಲ ಎಂದು ನನಗೆ ಗೊತ್ತು. ಅದಕ್ಕೆ ಕಾರಣ ಒಂದು ತಿಂಗಳ ಹಿಂದೆ ಅದರ ಮೆದುಳಿನ ಒಂದು ಭಾಗಕ್ಕೆ ಇಂಜೆಕ್ಟ್ ಮಾಡಿದ ‘ಟಾಕ್ಸಿನ್’. ಅದರಿಂದಾಗಿ ಅಲ್ಲಿನ ಟಿಶ್ಯೂಗಳು ಹಾನಿಗೊಳಗಾಗಿವೆ.

ಇಲ್ಲಿರುವ ಮೂವತ್ತೆರಡು ಕೋತಿಗಳಲ್ಲಿ ಬ್ರೂನೋ ಅತ್ಯಂತ ಬುದ್ಧಿವಂತ ಗಂಡು ಕೋತಿ. ನಾನು ನ್ಯೂರೋಸೈಂಟಿಸ್ಟ್ ಆಗಿ ಇಲ್ಲಿ ಕೆಲಸಕ್ಕೆ ಸೇರಿದಾಗ ಅದರ ವಯಸ್ಸು ನಾಲ್ಕು ತಿಂಗಳು. ಎಷ್ಟು ಚೇಷ್ಟೆ ಮಾಡುತ್ತಿತ್ತೋ, ಅಷ್ಟೇ ಚುರುಕಾಗಿಯೂ ಇತ್ತು. ಪ್ರಯೋಗಗಳಿಗೆ ಬೇಕಾದ ಕೋತಿಗಳನ್ನು ಪ್ರಯೋಗಾಲಯದಲ್ಲೇ ಸಾಕುತ್ತಾರೆ.

ನಾಲ್ಕು ಅಡಿ ಎತ್ತರ ಮತ್ತು ನಾಲ್ಕುವರೆ ಅಡಿ ಉದ್ದದ ವಿಶಾಲವಾದ ಪಂಜರಗಳಲ್ಲಿ ಕೋತಿ ಜೋಡಿಯೊಂದಿಗೆ ಅವುಗಳಿಗೆ ಹುಟ್ಟಿದ ಮರಿಗಳನ್ನು ಕೂಡ ಇಡುತ್ತಾರೆ. ಅವು ಆಟವಾಡಲು ಕಂಟೈನರ್‌ನಲ್ಲೇ ಅಗತ್ಯವಿರುವ ಎಲ್ಲಾ ಸೌಲಭ್ಯಗಳಿವೆ.

ಒಂದು ವರ್ಷ ವಯಸ್ಸುವರೆಗೆ ಬ್ರೂನೋ ತಾಯಿಯೊಂದಿಗೆ ಇರುತ್ತಿತ್ತು. ನಂತರ ಸ್ವತಂತ್ರವಾಗಿ ವರ್ತಿಸತೊಡಗಿತು. ನಾನು ಲ್ಯಾಬ್‌ಗೆ ಬಂದಾಗ ನನ್ನತ್ತ ತುಂಬಾ ಕುತೂಹಲದಿಂದ ನೋಡುತ್ತಿತ್ತು… ಅದರ ಕಣ್ಣುಗಳಲ್ಲಿ ಹೊಳಪು ಕಾಣುತ್ತಿತ್ತು. ಅದು ನಗುತ್ತಿರುವಂತೆ ಅನಿಸುತ್ತಿತ್ತು. ಈಗ ಅದಕ್ಕೆ ನಾಲ್ಕು ವರ್ಷಗಳು.

ಇತ್ತೀಚೆಗೆ ನನ್ನನ್ನು ಬ್ರೂನೋ ನೋಡಿದಾಗಲೆಲ್ಲಾ ಸಂತೋಷದಿಂದ ಜಿಗಿಯುತ್ತಿತ್ತು. ತನ್ನ ದವಡೆಯನ್ನು ಚಾಚಿ, ತುಟಿಗಳನ್ನು ಮೇಲಕ್ಕೆತ್ತಿ, ತನ್ನ ಎಲ್ಲಾ ಹಲ್ಲುಗಳನ್ನು ತೋರಿಸುವ ರೀತಿಯಲ್ಲಿ ನಗುತ್ತಿತ್ತು. ನಾನು ಮಾತನಾಡಿದರೆ ಗಮನದಿಂದ ಕೇಳುತ್ತದೆ. ಮೆಮೊರಿ ಪರೀಕ್ಷೆಗಳಲ್ಲಿ, ಪಜಲ್‌ಗಳಲ್ಲಿ ತುಂಬಾ ಚುರುಕಾಗಿ ಭಾಗವಹಿಸುತ್ತಿತ್ತು.

ಈ ಪ್ರಯೋಗಾಲಯದಲ್ಲಿ ಪಾರ್ಕಿನ್ಸನ್ಸ್, ಎಡಿಎಚ್‌ಡಿ, ಆಟಿಸಂ ರೋಗಗಳಿಗೆ ಸರಿಯಾದ ಔಷಧಗಳನ್ನು ಕಂಡುಹಿಡಿಯಲು ಕೋತಿಗಳ ಮೇಲೆ ನರವೈಜ್ಞಾನಿಕ ಸಂಬಂಧಿತ ಪ್ರಯೋಗಗಳು ನಡೆಯುತ್ತಿವೆ. ಈಗ ಇರುವ ಕೋತಿಗಳೆಲ್ಲಾ ಮರಾರ್ ಜಾತಿಯ ಕೋತಿಗಳು. ರಕ್ತದಲ್ಲಿನ ಆರ್.ಎಚ್. ಫ್ಯಾಕ್ಟರ್ ಬಗ್ಗೆ ತಿಳಿಯಲು, ರೇಬೀಸ್, ಪೊಲಿಯೊ, ಸಿಡುಬು ಇತ್ಯಾದಿ ರೋಗಗಳಿಗೆ ಲಸಿಕೆಗಳನ್ನು ಕಂಡುಹಿಡಿಯಲು ವಿಜ್ಞಾನಿಗಳಿಗೆ ಸಹಕಾರ ಮಾಡಿವೆ ಇಂತಹ ಕೋತಿಗಳು. ಮಾನವನ ಡಿಎನ್‌ಎಗೆ ಇವುಗಳ ಡಿಎನ್‌ಎ ತೊಂಬತ್ತ್ಮೂರು ಶೇಕಡಾ ಸಾಮ್ಯ ಇರುವುದರಿಂದ ಇವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

(ಸೈಯದ್ ಸಲೀಂ)

ನಾನು ಸ್ವಭಾವತಃ ಪ್ರಾಣಿ ಪ್ರೇಮಿ. ಆದ್ದರಿಂದ ಜಂತುಗಳ ಮೇಲೆ ನಡೆಯುವ ಪ್ರಯೋಗಗಳಗೆ ವಿರೋಧಿ. ಮಾನವ ರೋಗಗಳಿಗೆ ಔಷಧಗಳನ್ನು ಕಂಡುಹಿಡಿಯಲು ಮೂಕ ಪ್ರಾಣಿಗಳನ್ನು ಹಿಂಸಿಸುವುದು ದಾರುಣವಲ್ಲವೇ. ಪ್ರಾಣಿಗಳ ದೇಹಕ್ಕೆ ವಿವಿಧ ಔಷಧಿಗಳನ್ನು ಚುಚ್ಚಿದಾಗ ಎಷ್ಟು ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು… ಪ್ರತಿ ವರ್ಷ ಕೋಟ್ಯಂತರ ಇಲಿಗಳು, ಗಿನಿ ಹಂದಿಗಳು, ಮೊಲಗಳು, ಹಂದಿಗಳು ಮತ್ತು ಕೋತಿಗಳನ್ನು ಬಲಿ ನೀಡುವುದು ರಾಕ್ಷಸತ್ವ ವಲ್ಲದೇ ಇನ್ನೇನು?

ಈ ಪ್ರಯೋಗಾಲಯದಲ್ಲೂ ಕೋತಿಗಳು ಹಿಂಸೆಗೆ ಒಳಗಾಗುತ್ತಿವೆ. ಆದರೂ ಮನಸ್ಸನ್ನು ಕಠಿಣಗೊಳಿಸಿ ನಾನು ಇಲ್ಲಿ ಸೇರಲು ಮುಖ್ಯ ಕಾರಣ ‘ಸ್ವಾರ್ಥವೇ’… ಆದರೆ, ನನಗೆ ಬೇರೆ ದಾರಿಯಿರಲಿಲ್ಲ. ನಾನು ಚಾರ್ಜ್ ತೆಗೆದುಕೊಂಡ ನಂತರ ಹಿಂದೆ ಅನುಸರಿಸಿದ ಪದ್ಧತಿಗಳಲ್ಲಿ ತುಂಬಾ ಬದಲಾವಣೆಗಳನ್ನು ತಂದೆ. ತಪ್ಪು ಮಾಡಿದರೆ ಮೈಲ್ಡ್ ಕರೆಂಟ್ ಶಾಕ್ ಕೊಡುತ್ತಿದ್ದರು. ನಾನು ಕಂಟೈನರ್ ಬೆಳಕು ಆರಿಸಿ ಕತ್ತಲು ಮಾಡುವ ಪದ್ಧತಿ ಜಾರಿಗೊಳಿಸಿದೆ. ಕೋತಿಗಳು ಕತ್ತಲೆಯಲ್ಲಿ ತಾಳ್ಮೆ ಕಳೆದುಕೊಳ್ಳುತ್ತವೆ. ಆಪರೇಷನ್‌ಗೆ ಬಳಸುವ ಥಿಯೇಟರ್ ಸ್ಯಾನಿಟೈಜ್ಡ್ ಸ್ಥಿತಿಯಲ್ಲಿ ಇರಲು ಎಚ್ಚರಿಕೆಗಳು ತೆಗೆದುಕೊಂಡೆ. ಆಪರೇಷನ್ ನಂತರ ಗಾಯಗಳು ಇನ್ಫೆಕ್ಷನ್ ಆಗದಂತೆ ಅನುಭವಜ್ಞರಿಬ್ಬರು ವೆಟರಿನರಿ ಡಾಕ್ಟರ್‌ಗಳನ್ನು ಏರ್ಪಡಿಸಿದೆ. ಪಾರ್ಕಿನ್ಸನ್, ಎಡಿಎಚ್‌ಡಿ, ಆಟಿಸಂ ಡಿಸಾರ್ಡರ್ ಬಗ್ಗೆ ತಿಳಿಯಬೇಕಾದರೆ ಮೆದುಳಿನ ಯಾವ ಭಾಗ ಹಾನಿಗೊಳಗಾಗುವುದರಿಂದ ಇಂತಹ ರೋಗಗಳು ಬರುತ್ತವೆ ಎಂಬುದು ತಿಳಿಯುವುದು ಅಗತ್ಯ.

ಬ್ರೂನೊ ಮೆದುಳಿನ ಮೇಲೆ ನಡೆಯುತ್ತಿರುವ ಪ್ರಯೋಗದ ಉದ್ದೇಶವೂ ಅದೇ. ಒಂದು ವರ್ಷ ಹಿಂದೆ ಬ್ರೂನೊ ಮೆದುಳಿಗೆ ಶಸ್ತ್ರಚಿಕಿತ್ಸೆ ಆಯಿತು. ಮೊದಲು ಬ್ರೂನೊ ತಲೆಯಲ್ಲಿ ಕೂದಲನ್ನು ಷೇಪ್ ಮಾಡಿದರು. ಆಪರೇಷನ್ ಥಿಯೇಟರ್‌ಗೆ ಕರೆದೊಯ್ದು ಅರಿವಳಿಕೆ ನೀಡಿದರು. ತಲೆಗೆ ಎಂಟು ಸಣ್ಣ ರಂಧ್ರಗಳನ್ನು ಮಾಡಿ, ಮೆಟಲ್ ಟ್ಯೂಬ್‌ಗಳನ್ನು ಹಾಕಿ, ಸೂಜಿಗಳ ಮೂಲಕ ಗ್ರೇ ಮ್ಯಾಟರ್ ಭಾಗಕ್ಕೆ ಕಡಿಮೆ ಪ್ರಮಾಣದ ಟಾಕ್ಸಿನ್ ಇಂಜೆಕ್ಟ್ ಮಾಡಿದರು. ಇದರ ಪ್ರಭಾವದಿಂದ ಮೆದುಳಿನ ಆ ಭಾಗ ಹಾನಿಗೊಳಗಾಗಿ ಕೆಲಸ ಮಾಡುವುದನ್ನು ನಿಲ್ಲಿಸಿತು. ಅದರ ನಂತರ, ಬ್ರೂನೋನ ನಡವಳಿಕೆಯಲ್ಲಿನ ಬದಲಾವಣೆಗಳನ್ನು ಅಧ್ಯಯನ ಮಾಡಿ ರೆಕಾರ್ಡ್ ಮಾಡುತ್ತಿದ್ದೆವು.

ಅದರಿಂದ ಪಾರ್ಕಿನ್ಸನ್ ಅಥವಾ ಎಡಿಎಚ್‌ಡಿ ಅಥವಾ ಆಟಿಸಂ ಲಕ್ಷಣಗಳು ರೂಪಿಸದಿದ್ದರೆ, ಬೇರೆ ಭಾಗಕ್ಕೆ ಟಾಕ್ಸಿನ್ ಇಂಜೆಕ್ಟ್ ಮಾಡಿ, ಅದರ ಸ್ವಭಾವದ ಬದಲಾವಣೆಗಳನ್ನು ಗಮನಿಸುತ್ತಾರೆ. ತಲೆಯಲ್ಲಿ ಮಾಡಿದ ಎಂಟು ರಂಧ್ರಗಳನ್ನು ಬಳಸಿದ ನಂತರ ಸಹ ಆಶಿಸಿದ ಫಲಿತಾಂಶ ಬರದಿದ್ದರೆ, ಆ ಕೋತಿಯನ್ನು ಮೆರ್ಸಿ ಕಿಲಿಂಗ್ ಪದ್ಧತಿಯಲ್ಲಿ ಕೊಂದು, ಆಳವಾದ ಗುಂಡಿ ತೋಡಿ ಮಣ್ಣು ಹಾಕುತ್ತಾರೆ. ಬ್ರೂನೊದೊಂದಿಗೆ ನಾವು ಆಶಿಸಿದ ಫಲಿತಾಂಶ ಬರದೇ ಇದ್ದರಿಂದ, ಒಂದು ವಾರದ ನಂತರ ನಾನು ಮೆದುಳಿನ ಇನ್ನೊಂದು ಭಾಗಕ್ಕೆ ಟಾಕ್ಸಿನ್ ಹಾಕಿ, ತಿಂಗಳು ಗಮನಿಸಿದೆ. ಫಲಿತಾಂಶ ಸಂತೃಪ್ತಿಕರವಾಗದೇ ಇದ್ದರಿಂದ ಬೇರೆ ಭಾಗಕ್ಕೆ ಇಂಜೆಕ್ಟ್ ಮಾಡಿದೆ.

ಮೆದುಳಿನ ಎಂಟು ಭಾಗಗಳಲ್ಲೂ ಟಿಷ್ಯೂಗಳನ್ನು ನಾಶಮಾಡಿದ ನಂತರ ಸಹ ನಿರೀಕ್ಷಿತ ಫಲಿತಾಂಶ ಬರದಿದ್ದರೆ? ನನಗೆ ಹಠಾತ್ ಭಯವಾಯಿತು. ಬ್ರೂನೊವನ್ನೂ ಕೊಂದುಬಿಡುತ್ತಾರೆ. ಆ ಆಲೋಚನೆಯೇ ದೇಹವನ್ನು ಕಂಪಿಸುವಂತೆ ಮಾಡಿತು. ಕಣ್ಣುಗಳಲ್ಲಿ ನೀರು ತುಂಬಿತು.

*****

ಮನೆಗೆ ತಲುಪಿದಾಗ ರಾತ್ರಿ ಎಂಟು ಗಂಟೆಯಾಗಿತ್ತು. ಅಪ್ಪನಿಗೆ ಪ್ರತಿದಿನ ರಾತ್ರಿ ಏಳು ಗಂಟೆಗೆ ಊಟ ಮಾಡುವ ಅಭ್ಯಾಸವಿತ್ತು. ಅವರು ಸೋಫಾದಲ್ಲಿ ಕುಳಿತು ಟಿವಿಯಲ್ಲಿ ಸುದ್ದಿ ನೋಡುತ್ತಿದ್ದರು. ನಾನು ಮನೆಗೆ ಬರುವವರೆಗೂ ಅಮ್ಮ ಊಟ ಮಾಡುತ್ತಿರಲಿಲ್ಲ.

ಬೆಡ್‌ರೂಂನಿಂದ ತುಷಾರ್‌ನ ಕಿರುಚಾಟ ಜೋರಾಗಿ ಕೇಳಿಸುತ್ತಿತ್ತು.

“ಅವನು ಒಳಗೆ ಏನು ಮಾಡುತ್ತಿದ್ದಾನೆ? ಅನ್ನ ತಿಂದಿದ್ದಾನಾ?” ನಾನು ಬೆಡ್‌ರೂಮ್‌ ಕಡೆಗೆ ನಡೆಯುತ್ತಾ ಕೇಳಿದೆ. “ಹೋಗಿ ನೋಡು. ನಿನಗೆ ಗೊತ್ತಾಗುತ್ತದೆ. ನಾನು ಅವನಿಗೆ ಎರಡು ಬಾರಿ ಊಟಕ್ಕೆ ಕರೆ ಮಾಡಿದರೂ ಅವನು ಬರಲಿಲ್ಲ,” ಅಮ್ಮ ಹೇಳಿದಳು. ನಾನು ಬಾಗಿಲನ್ನು ತಳ್ಳಿ ಒಳಗೆ ಹೋದೆ.

ತುಷಾರ್ ಟ್ರಾಂಪೊಲೈನ್ ಮೇಲೆ ಹಾರಿದವನಂತೆ ಮಂಚದ ಮೇಲಿದ್ದ ಡನ್‌ಲಪ್ ಬೇಡ್ ಮೇಲೆ ಹಾರಿ ಕಿರುಚುತ್ತಿದ್ದ.

ಅವನು ಒಂದು ಕ್ಷಣ ನನ್ನತ್ತ ನಿರಾಳವಾಗಿ ನೋಡಿದ, ನಂತರ ಮತ್ತೆ ಜೋರಾಗಿ ಕಿರುಚುತ್ತಾ ಜಿಗಿಯಲು ಪ್ರಾರಂಭಿಸಿದ. ಬೆಳಿಗ್ಗೆ ಆಫೀಸ್‌ಗೆ ಹೋದ ಅಮ್ಮ ರಾತ್ರಿ ಎಂಟು ಗಂಟೆಗೆ ಬಂದರೆ, ಯಾವುದೇ ಮಗು ಸಂತೋಷದಿಂದ ಓಡಿಹೋಗಿ ತನ್ನ ತಾಯಿಯನ್ನು ಅಪ್ಪಿಕೊಳ್ಳುತ್ತದೆ. ನಾನು ಅಷ್ಟು ಅದೃಷ್ಟಶಾಲಿಯಾಗಿರಲಿಲ್ಲ. “ಆಡಿದ್ದು ಸಾಕು ಕಂದಾ. ನಿನಗೆ ಹಸಿವಿಲ್ಲವೇ? ನನಗೆ ನಿಜವಾಗಿಯೂ ಹಸಿವಾಗಿದೆ. ಊಟ ಮಾಡೋಣ” ಎಂದು ನಾನು ಮೆಲ್ಲನೆ ಹೇಳಿದೆ. ಅವನು ನನ್ನನ್ನು ನಿರ್ಲಕ್ಷಿಸಿದ. ನಾನು ಹಾಸಿಗೆಯ ಹತ್ತಿರ ಹೋಗಿ ಅವನ ಕೈ ಹಿಡಿದು ಅವನನ್ನು ತಡೆದು, “ನೀನು ಬೀಳಲಿದ್ದೀಯ ಕಂದಾ… ಕೆಳಗೆ ಬಾ” ಎಂದು ಹೇಳಿದೆ.

ಅವನು ಕೋಪದಿಂದ ಹಾಲ್‌ಗೆ ಓಡಿ ಬಂದ. ಡೈನಿಂಗ್ ಟೇಬಲ್ ಮೇಲಿರುವ ಅವನ ಪಿಂಗಾಣಿ ಪ್ಲೇಟನ್ನು ಕೆಳಗೆ ಎಸೆ. ಅದು ಧ್ವನಿ ಮಾಡುತ್ತಾ ತುಂಡುಗಳಾಗಿ ಒಡೆಯಿತು. ವಾಟರ್ ಜಗ್ ಅನ್ನು ಕೆಳಗೆ ಎಸೆದ.

ನೀರಿನಿಂದ ತುಂಬಿದ ಗಾಜಿನ ಗ್ಲಾಸ್ ಅನ್ನು ಎಸೆಯಲು ತೊಡಗಿದ ಸಮಯದಲ್ಲಿ ತ್ವರಿತವಾಗಿ ನಾನು ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡೆ. ಅವನು ಕೆಲವು ನಿಮಿಷಗಳ ಕಾಲ ಕಷ್ಟಪಟ್ಟನು. ಅವನ ಕೋಪ ಕಡಿಮೆಯಾಗಲಿಲ್ಲ, ಆದ್ದರಿಂದ ಅವನು ನನ್ನ ಕೈ ಮೇಲೆ ಗಿಚ್ಚಿದ, ಕಚ್ಚಿದ. ನಾನು ಅದನ್ನು ಸಹಿಸಿಕೊಂಡೆ.

ಕೆಲವು ನಿಮಿಷಗಳ ನಂತರ, ಅವನು ಶಾಂತನಾದ. ಅಮ್ಮ ಹಾಲ್ ಅನ್ನು ಶುಚಿಮಾಡಿದ ನಂತರ, ನಾವು ಮೂವರು ಊಟ ಮಾಡಿದೆವು. ತುಷಾರ್ ಬೆಡ್‌ರೂಮ್‌ಗೆ ಹೋಗಿ ಆಟವಾಡಲು ಪ್ರಾರಂಭಿಸಿದ.

“ಯಾಕೆ ತಾಯಿ ಇವತ್ತು ಇಷ್ಟೊಂದು ಅಸಮಾಧಾನಗೊಂಡಿದ್ದೀಯಾ?” ಅಪ್ಪ ಕೇಳಿದರು. ಅವರ ಧ್ವನಿಯಲ್ಲಿನ ವಾತ್ಸಲ್ಯವನ್ನು ನೋಡಿ ನನ್ನ ಕಣ್ಣುಗಳಲ್ಲಿ ನೀರು ಬಂತು.

“ಏನೂ ಇಲ್ಲ ಅಪ್ಪಾ,” ಎಂದೆ.

“ತುಷಾರ್ ಮಾಡುತ್ತಿರುವುದನ್ನು ನಿಲ್ಲಿಸಿದರೂ, ತಡೆದರೂ, ‘ಬೇಡ’ ಎಂದರೂ ಅವನು ವೈಲೆಂಟ್‌ಆಗಿ ವ್ಯವಹರಿಸುತ್ತಾನೆ, ಮುಂದಿರುವವರಿಗೆ ಹಾನಿ ಮಾಡುತ್ತಾನೆ ಅಥವಾ ತನಗೆ ತಾನು ಹಾನಿ ಮಾಡಿಕೊಳ್ಳುತ್ತಾನೆ ಎಂದು ನೀ ಹೇಳುತ್ತಿರುವೆಯಲ್ಲ, ಇಂದು ನೀ ಅವನ ಟ್ಯಾಂಟ್ರಮ್‌ಗಳಿಗೆ ಕಾರಣವಾಗಿದಿ ಎಂದರೆ ನಿನ್ನ ಮನಸ್ಸಲ್ಲಿ ಏನೋ ಗೊಂದಲವಿದೆ ಎಂದು ತಿಳಿಯುತ್ತದೆ. ನಿನ್ನ ಮನಸ್ಸನ್ನು ಕಾಡುತ್ತಿರುವುದೇನು ಹೇಳು” ಎಂದರು.
ಹೋಗಿ ಅಪ್ಪನ ಪಕ್ಕದ ಕುರ್ಚಿಯಲ್ಲಿ ಕುಳಿತೆ.

“ನಿನ್ನ ಮನಸ್ಸಿನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ನಾನು ಊಹಿಸಬಲ್ಲೆ ತಾಯಿ. ಔಷಧ ಪರೀಕ್ಷೆಗಳಿಗೆ ಪ್ರಾಣಿಗಳನ್ನು ಬಳಸುವುದು ನಿನಗೆ ಇಷ್ಟವಿಲ್ಲ. ಪ್ರಯೋಗಗಳ ಹೆಸರಿನಲ್ಲಿ ಅವುಗಳಿಗೆ ನೀಡಲಾಗುವ ಚಿತ್ರಹಿಂಸೆಯನ್ನು ನೀನು ಸಂಪೂರ್ಣವಾಗಿ ವಿರೋಧಿಸುತ್ತೀಯ. ಆದರೆ, ಕಳೆದ ನಾಲ್ಕು ವರ್ಷಗಳಿಂದ, ನೀನು ಕೆಲಸ ಮಾಡುತ್ತಿರುವ ಪ್ರಯೋಗಾಲಯದಲ್ಲಿ ನಿನ್ನ ಕಣ್ಣೆದುರೇ ಕೋತಿಗಳಿಗೆ ಚಿತ್ರಹಿಂಸೆ ನೀಡುವುದನ್ನು ನೋಡುವುದನ್ನು ಸಹಿಸಲಾಗುತ್ತಿಲ್ಲ” ಎಂದು ಅಪ್ಪ ಹೇಳಿದರು.

ನಾನು ಮಾನಸಿಕವಾಗಿ ಅನುಭವಿಸುತ್ತಿರುವ ಹಿಂಸೆಯನ್ನು ಅಪ್ಪ ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ… ನಾವು ಅನುಭವಿಸುವ ಮೌನವೇದನೆ ಆತ್ಮೀಯರಿಗೆ ತಿಳಿಯುವಂತೆ ಇತರರಿಗೆ ತಿಳಿಯುವುದಿಲ್ಲ.

“ಹೌದು ಅಪ್ಪಾ. ನನ್ನ ಸ್ವಭಾವಕ್ಕೆ ವಿರುದ್ಧದ ಕೆಲಸ ಮಾಡುತ್ತಿದ್ದೇನಲ್ಲ. ಆದ್ದರಿಂದ ಒತ್ತಡಕ್ಕೆ ಒಳಗಾಗುತ್ತಿದ್ದೇನೆ” ಎಂದೆ.

“ಮಾನವಕುಲ ಎದುರಿಸುತ್ತಿರುವ ಭಯಾನಕ ಕಾಯಿಲೆಗಳಿಗೆ ಔಷಧಗಳನ್ನು ಕಂಡುಹಿಡಿಯಲು, ಕೆಲವು ಪ್ರಾಣಿಗಳ ಜೀವಗಳನ್ನು ತ್ಯಾಗ ಮಾಡಬೇಕು” ಎಂದು ಅಪ್ಪ ಹೇಳಿದರು.

“ತುಷಾರ್‌ಗೆ ಎಡಿಎಚ್‌ಡಿ ಇರಲಿಲ್ಲವಾದರೆ ನಾನು ಲ್ಯಾಬ್‌ಗೆ ಸೇರ್ತಿರಲಿಲ್ಲ ಅಪ್ಪಾ. ಪಾರ್ಕಿನ್ಸನ್, ಎಡಿಎಚ್‌ಡಿ, ಆಟಿಸಂ ಡಿಸಾರ್ಡರ್‌ಗಳನ್ನು ಸಂಪೂರ್ಣ ನಿರ್ಮೂಲನ ಮಾಡುವ ಔಷಧಗಳಿಗಾಗಿ ಮಾಡುತ್ತಿರುವ ಪ್ರಯೋಗಗಳು ಆದ್ದರಿಂದ ಭಾಗವಹಿಸಿದ್ದೇನೆ. ತಾಯಿ ಅಲ್ಲವಾ? ಏನೋ ಆಸೆ. ಎಡಿಎಚ್‌ಡಿಗೆ ಔಷಧ ಕಂಡುಹಿಡಿಯಬಲ್ಲೆ ಎಂದರೆ ನನ್ನ ಮಗನೊಂದಿಗೆ ಆ ರೋಗಕ್ಕೆ ಬಾಧೆಪಡುತ್ತಿರುವ ಲಕ್ಷಾಂತರ ಮಕ್ಕಳಿಗೆ, ಆ ಭಾರವನ್ನು ಹೊತ್ತಿರುವ ಅಮ್ಮಂದಿರಿಗೆ ಉಪಶಮನ ದೊರೆಯುತ್ತದೆ ಎಂಬ ಆಸೆ!”

“ಪ್ರಾಣಿಗಳ ಮೇಲೆ ಪರೀಕ್ಷೆಗಳು ಮಾಡುವ ಅಗತ್ಯವಿಲ್ಲದಂತೆ ವಿವಿಧ ಪರ್ಯಾಯ ಪದ್ಧತಿಗಳು ಈಗ ಲಭ್ಯವಿವೆ ಎಂದು ಕೇಳಿದ್ದೇನೆ. ಸೆಲ್ ಕಲ್ಚರ್‌ಗಳು, ಆರ್ಗನ್ಸ್ ಆನ್ ಚಿಪ್ಸ್… ಇವುಗಳ ಹೊರತಾಗಿ ಕಂಪ್ಯೂಟರ್ ಮಾಡೆಲಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಬಹುದಲ್ಲವೇ” ಎಂದು ಕೇಳಿದರು.

“ಹೌದಪ್ಪಾ, ಚಿಪ್ಸ್ ಮತ್ತು ಕೋಶ ಸಂಸ್ಕೃತಿಯ ಮೇಲಿನ ಅಂಗಗಳು ಇತರ ಅಂಗಗಳ ಮೇಲೆ ಪರಿಣಾಮ ಬೀರುವ ಕಾಯಿಲೆಗಳಿಗೆ ತುಂಬಾ ಉಪಯುಕ್ತವಾಗಿವೆ ಎಂಬುದು ನಿಜ. ಆದರೆ, ಮೆದುಳಿಗೆ ಸಂಬಂಧಿಸಿದ ಅಸ್ವಸ್ಥತೆಗಳಿಗೆ ಅವುಗಳ ಉಪಯುಕ್ತತೆ ಬಹಳ ಸೀಮಿತವಾಗಿದೆ.”

“ಯಾಕೆ? ನನಗೆ ಅರ್ಥವಾಗುವಂತೆ ಹೇಳು” ಎಂದರು.

“ವಿಶ್ವದಲ್ಲಿರುವ ನಮಗೆ ಅರ್ಥವಾಗದ ಅನೇಕ ರಹಸ್ಯಗಳಂತೆಯೇ ಮೆದುಳಿನ ಸಂಕೀರ್ಣತೆಗಳು ಮಾನವ ಬುದ್ಧಿಗೆ ಸಂಪೂರ್ಣವಾಗಿ ಗೊತ್ತಿಲ್ಲ ಅಪ್ಪಾ. ಆಕಾಶದಲ್ಲಿ ಕಾಣುವ ಕೋಟ್ಯಂತರ ನಕ್ಷತ್ರಗಳಂತೆ ಗ್ರೇ ಮ್ಯಾಟರ್, ವೈಟ್ ಮ್ಯಾಟರ್‌ನಲ್ಲಿ ಕೋಟ್ಯಂತರ ನ್ಯೂರಾನ್‌ಗಳು ಒಂದರೊಂದಕ್ಕೆ ಜೋಡಿಸಿವೆ.
ಮೆದುಳಿನ ಒಂದು ಕ್ಯೂಬಿಕ್ ಮಿಲಿಮೀಟರ್ ಟಿಷ್ಯೂ ಅನ್ನು ಸ್ಕ್ಯಾನ್ ಮಾಡಲು ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ಅದರ ಪೂರ್ಣ ನಿರ್ಮಾಣವನ್ನು ತಿಳಿಯಲು 1.4 ಪೆಟಾಬೈಟ್‌ಗಳಷ್ಟು ಡೇಟಾ ಬೇಕಾಗಿತ್ತು. ಸರಳವಾಗಿ ಹೇಳುವುದಾದರೆ ಹೆಚ್ಚು ರಿಜೊಲ್ಯೂಷನ್‌ನ 14,000 ಸಿನಿಮಾಗಳ ಮಾಹಿತಿಯನ್ನು ಮರಳಿನಲ್ಲಿ ಇಟ್ಟಿರುವ ಹಾಗೆ. ಆದ್ದರಿಂದ ಮೆದುಳು ಸಂಬಂಧಿತ ರೋಗಗಳನ್ನು ನಿರ್ಮೂಲನ ಮಾಡುವುದು ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿದೆ”

“ಪಾರ್ಕಿನ್ಸನ್ ಮತ್ತು ಎಡಿಎಚ್‌ಡಿಗೆ ಈಗಾಗಲೇ ಕೆಲವು ಔಷಧಿಗಳು ಲಭ್ಯವಿದೆ, ಅಲ್ಲವಾ? ಮತ್ತು ನಿಮ್ಮ ಪ್ರಯೋಗಾಲಯದಲ್ಲಿ ಯಾವ ಪ್ರಯೋಗಗಳನ್ನು ಮಾಡಲಾಗುತ್ತಿದೆ?”

“ಹೌದು ಅಪ್ಪಾ. ಕೆಲವು ಔಷಧಿಗಳಿವೆ. ಆದರೆ ಅವು ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತವೆ. ಅದನ್ನು ಸಂಪೂರ್ಣವಾಗಿ ಗುಣಪಡಿಸುವ ಯಾವುದೇ ಔಷಧಿಗಳಿಲ್ಲ. ಮೆದುಳಿನಲ್ಲಿರುವ ನ್ಯೂರೋಟ್ರಾನ್ಸ್‌ ಮೀಟರ್‌ಗಳಲ್ಲಿನ ಅಸಮತೋಲನದಿಂದ ಈ ಅಸ್ವಸ್ಥತೆಗಳು ಉಂಟಾಗುತ್ತವೆ. ಕೆಲವು ಸ್ಥಳಗಳಲ್ಲಿ, ಮೆದುಳಿನ ಟಿಷ್ಯೂಗಳಿಗೆ ಹಾನಿಯೂ ಕಾರಣವಾಗಬಹುದು. ಮೊದಲನೆಯದಾಗಿ, ಯಾವ ಪ್ರದೇಶವು ಹಾನಿಗೊಳಗಾಗಿದೆ ಮತ್ತು ಯಾವುದು ಈ ರೋಗಗಳಿಗೆ ಕಾರಣವಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನಾವು ಮಾಡುತ್ತಿರುವುದು ಅದನ್ನೇ. ಹಾನಿಗೊಳಗಾದ ಮೆದುಳಿನ ಕೋಶಗಳನ್ನು ಪುನರುತ್ಪಾದಿಸುವ ಜ್ಞಾನದಲ್ಲಿ ವಿಜ್ಞಾನಿಗಳು ತ್ವರಿತ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಅವು ಶೀಘ್ರದಲ್ಲೇ ಯಶಸ್ವಿಯಾಗುತ್ತವೆ ಎಂದು ನನಗೆ ವಿಶ್ವಾಸವಿದೆ. ಆಗ ಅಂತಹ ನ್ಯೂರಾಲಜಿಕಲ್ ಡಿಸಾರ್ಡರ್‌ಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು” ಎಂದು ಹೇಳಿದೆ.
ಬೆಡ್‌ರೂಮ್‌ಗೆ ಹೋಗಿ ಹಾಸಿಗೆಯ ಮೇಲೆ ಮಲಗಿದೆ. ನನಗೆ ತುಂಬಾ ಸುಸ್ತಾಗಿರುವ ಅನುಭವವಾಯಿತು… ಅತಿಯಾದ ದೈಹಿಕ ಪರಿಶ್ರಮದಿಂದಲ್ಲ, ಮಾನಸಿಕ ಬಳಲಿಕೆಯಿಂದ.

ತುಷಾರ್ ಬೆಡ್ ಸುತ್ತಲೂ ಓಡುತ್ತಾ, ಕೈಯಲ್ಲಿರುವ ಸ್ಕೇಲ್‌ನೊಂದಿಗೆ ವಾರ್ಡ್‌ರೋಬ್ ಮೇಲೆ, ಬಾಗಿಲಿನ ಮೇಲೆ ಬಡಿಯುತ್ತಾ ಶಬ್ದ ಮಾಡುತ್ತಿದ್ದ. ಎಂತಹ ಸುಂದರವಾದ ಜೀವನವನ್ನು ಕಲ್ಪಿಸಿಕೊಂಡಿದ್ದೆ… ಪಿಜಿಯಲ್ಲಿ ರಾಹುಲ್ ಜೊತೆ ನನಗಿದ್ದ ಪರಿಚಯ ಕೆಲವೇ ತಿಂಗಳುಗಳಲ್ಲಿ ಪ್ರೀತಿಯಾಗಿ ಬದಲಾಯಿತು. ರಾಹುಲ್ ಪ್ರೈವೇಟ್ ಬ್ಯಾಂಕ್‌ನಲ್ಲಿ ಡೆಪ್ಯೂಟಿ ಮ್ಯಾನೇಜರ್. ನನ್ನ ಅಕೌಂಟ್ ಅಲ್ಲಿಯೇ ಇರುವುದರಿಂದ ಕೆಲಸಕ್ಕೆ ಹೋಗುವ ಎಲ್ಲ ಸಮಯ ರಾಹುಲ್ ನಗು ಆತ್ಮೀಯವಾಗಿ ಮಿನುಗುತ್ತಿತ್ತು. ಎಷ್ಟು ಸುಂದರ ನಗು… ಮೆಸ್ಮರೈಜಿಂಗ್ ಸ್ಮೈಲ್… ನನ್ನ ಎಲ್ಲಾ ಕೆಲಸಗಳನ್ನು ಯಾವುದೇ ಶ್ರಮವಿಲ್ಲದೆ ಮಾಡಿಸುತ್ತಿದ್ದ. ಅವನು ನನ್ನನ್ನು ಎಷ್ಟು ಇಷ್ಟಪಡುತ್ತಾನೆಂದು ನನಗೆ ಅರ್ಥವಾದಾಗ ನನಗೂ ಅವನು ಇಷ್ಟವಾಗತೊಡಗಿದೆ. ಒಳ್ಳೆಯವನು, ಒಳ್ಳೆಯ ಮನಸ್ಸು, ನನ್ನನ್ನು ಪ್ರೀತಿಸುವವನು, ಒಳ್ಳೆಯ ಉದ್ಯೋಗ… ಇಷ್ಟಕ್ಕಿಂತ ಹೆಚ್ಚು ಯಾವುದೇ ಹುಡುಗಿ ಬಯಸುತ್ತಾಳೆ? ಪಿಜಿ ಮುಗಿದ ಎರಡು ವರ್ಷಗಳ ನಂತರ ರಾಹುಲ್‌ನೊಂದಿಗೆ ಮದುವೆಯಾಯಿತು.

ಎಷ್ಟೊಂದು ಮಧುರ ಅನುಭವಗಳು… ಎಷ್ಟೊಂದು ಸಿಹಿ ಭಾವನೆಗಳು… ಇದೇ ಸ್ವರ್ಗ ಎಂದು ಅನಿಸುತ್ತಿತ್ತು. ವಸಂತ ಸ್ಪರ್ಶಿಸಿದ ಕಾಡಿನಂತೆ, ಮಂಜುಳ ವೀಣಾ ನಾದದಂತೆ, ಹೂವಿನ ಮಕರಂದ ಆಸ್ವಾದಿಸುವ ಭ್ರಮರವಂತೆ, ಸಾವಿರ ಮಳೆಬಿಲ್ಲುಗಳು ಹೊರಹೊಮ್ಮುವಂತೆ…. ಜೀವನವು ಹಲವು ಬಣ್ಣಗಳಿಂದ ತುಂಬಿದೆ….

ತುಷಾರ್ ಹುಟ್ಟಿದ ನಂತರ ಜೀವನ ಹೆಚ್ಚು ಶೋಭಾಯಮಾನವಾಗಿ ಕಂಡುಬಂದಿತು.

ಆದರೆ ಜೀವನದಲ್ಲಿ ಸಂತೋಷಗಳ ಅವಧಿ ಕಡಿಮೆ ಎಂದು ತ್ವರಿತವಾಗಿ ತಿಳಿಯಿತು. ರಾಹುಲನಿಗೆ ಅದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಹರ್ಷಿತಾಳೊಂದಿಗೆ ಸನ್ನಿಹಿತ ಸಂಬಂಧ ಎಂದು ತಿಳಿದ ದಿನ ದೊಡ್ಡ ಜಗಳವೇ ನಡೆಯಿತು.

“ನಮ್ಮಿಬ್ಬರ ನಡುವೆ ಅಂತಹ ಸಂಬಂಧ ಏನೂ ಇಲ್ಲ. ಅದು ಕೇವಲ ವದಂತಿ” ಎಂದು ಅವನು ಹೇಳುತ್ತಾನೆಂದು ನಾನು ನಿರೀಕ್ಷಿಸಿದೆ. ಒಂದು ವೇಳೆ ನಿಜವಾಗಿಯೂ ಇದ್ದರೂ, “ನಾನು ತಪ್ಪು ಮಾಡಿದೆ. ನನ್ನನ್ನು ಕ್ಷಮಿಸು. ನಾನು ಮತ್ತೆಂದೂ ಅಂತಹ ತಪ್ಪನ್ನು ಮಾಡುವುದಿಲ್ಲ” ಎಂದು ಹೇಳುವ ಮೂಲಕ ಅವನು ವಿಷಾದಿಸುತ್ತಾನೆ ಎಂದು ನಾನು ಭಾವಿಸಿದೆ. ಆದರೆ ಅವನು ನಾಚಿಕೆಯಿಲ್ಲದೆ, “ಹೌದು. ನನಗೆ ಅವಳು ಇಷ್ಟ. ಹರ್ಷಿತಾ ಜೊತೆ ದೈಹಿಕ ಸಂಬಂಧ ಹೊಂದಿದ್ದೇನೆ ಎಂಬುದು ನಿಜ. ಆದರೆ ಏನು ತಪ್ಪಾಗಿದೆ? ನಾನು ಯಾವಾಗಲೂ ನಿನಗೆ ಕಡಿಮೆ ಮಾಡುತ್ತಿಲ್ಲವಲ್ಲ. ಆ ಹುಡುಗಿಯನ್ನು ಮದುವೆಯಾಗುವ ಉದ್ದೇಶ ನನಗಿಲ್ಲ. ಜಸ್ಟ್ ಫನ್. ಅಷ್ಟೇ. ನೀನು ಅದರ ಬಗ್ಗೆ ಏಕೆ ಇಷ್ಟೊಂದು ಗಲಾಟೆ ಮಾಡುತ್ತಿದ್ದೀಯೋ ನನಗೆ ಅರ್ಥವಾಗುತ್ತಿಲ್ಲ” ಎಂದ.

“ಪ್ರೀತಿಸುತ್ತೇನೆ ಅಂತ ಅಲ್ವಾ ನನ್ನ ಹಿಂದೆ ಬಿದ್ದೆ. ನಿನ್ನ ಪ್ರೀತಿ ನಿಜವಾಗಿದೆ ಅಂತ ನಂಬಿ ಅಲ್ವಾ ಮದುವೆಯಾಗಿದ್ದು. ಹೀಗೆ ಮಾಡುವುದು ನಂಬಿಕೆ ದ್ರೋಹವಲ್ಲವೇ?” ಎಂದೆ.

“ನಾನು ಇನ್ನೂ ನಿನ್ನನ್ನು ಗಾಢವಾಗಿ ಪ್ರೀತಿಸುತ್ತೇನೆ. ಸೌಮ್ಯಾ, ಹರ್ಷಿತಾ ಮೇಲಿನದು ಪ್ರೀತಿ ಅಲ್ಲ. ಲಸ್ಟ್. ಅಷ್ಟೇ. ಆ ಹುಡುಗಿ ಇನ್ನೂ ಮೂರು ವರ್ಷಗಳಲ್ಲಿ ಮದುವೆಯಾಗುತ್ತಾಳೆ. ಆಗ ಅವಳು ಯಾರು, ನಾನು ಯಾರು! ಅದು ತಾತ್ಕಾಲಿಕ ಬಂಧ. ನಮ್ಮದು ಶಾಶ್ವತ ಬಂಧ, ಡಿಯರ್ ” ಎಂದು ಅವನು ನಗುತ್ತಾ ಹೇಳಿದ.

ನಿನ್ನೆಯವರೆಗೆ ಮೆಸ್ಮರೈಜಿಂಗ್ ಆಗಿ ಕಂಡ ನಗು ಇದೀಗ ಮಾಯಲ ಮರಾಠಿ ನಗುಗಳಂತೆ ವ್ಯಂಗ್ಯವಾಗಿ ಕಂಡಿತು.

‘ನಾನು ಕೂಡ ನಿನ್ನೊಂದಿಗೆ ಸಂಸಾರ ಮಾಡುತ್ತಾ ಬೇರೆ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರೆ ಒಪ್ಪುತ್ತೀಯಾ?’ ಕೇಳಿದೆ.
ನನ್ನ ಕೆನ್ನೆಯನ್ನು ಒಡೆಯುವಂತೆ ಹೊಡೆದು, ಕೋಪವಾಗಿ ಕೋಣೆಯಿಂದ ಹೊರಗೆ ಹೋದ.

ಎರಡು ಕುಟುಂಬಗಳ ಹಿರಿಯರೊಂದಿಗೆ ಪಂಚಾಯತಿ ಆಯಿತು.

“ಅವನು ‘ನಿನ್ನನ್ನು ಬಿಡುತ್ತಿಲ್ಲ, ಆ ಹುಡುಗಿಯನ್ನು ಮದುವೆಯಾಗುವ ಉದ್ದೇಶವಿಲ್ಲ ಎಂದು ಹೇಳುತ್ತಿದ್ದಾನೆ. ನೀನು ಕೆಲವು ದಿನ ಕಣ್ಣು ಮುಚ್ಚಿದರೆ ಆ ಹುಡುಗಿ ಮದುವೆಯಾಗಿ ಹೊರಟು ಹೋಗುತ್ತಾಳೆ. ಇಷ್ಟು ಸಣ್ಣ ವಿಷಯಕ್ಕೆ ಹಸಿರಾಗಿರುವ ಸಂಸಾರದಲ್ಲಿ ಕಿಚ್ಚಿಡುತ್ತೀಯೆ” ಅಂತ ಸಲಹೆ ಕೊಡುವವರೇ ಎಲ್ಲರೂ.

ಆ ಸಮಯ ನನ್ನನ್ನು ಸಪೋರ್ಟ್ ಮಾಡಿದ್ದು ನಮ್ಮ ಅಮ್ಮ.

ಡೈವೋರ್ಸ್ ಗಾಗಿ ಕೋರ್ಟ್ ಆಶ್ರಯಿಸಿದೆ. ಅವರು ವಿಚ್ಛೇದನ ಮಂಜೂರು ಮಾಡಿದಾಗ ತುಷಾರ್‌ಗೆ ಮೂರು ವರ್ಷಗಳು…

ಅವನು ಒಂದು ವರ್ಷದ ಮಗುವಾಗಿದ್ದಾಗಿನಿಂದ ರಾಹುಲ್ ಜೊತೆ ಆರಂಭವಾದ ಜಗಳಗಳು, ವಿಚ್ಛೇದನಕ್ಕಾಗಿ ನ್ಯಾಯಾಲಯದ ಪ್ರದಕ್ಷಿಣೆಗಳು, ಅನುಭವಿಸಿದ ಮೊಕದ್ದಮೆಗಳು, ಅದರ ಪರಿಣಾಮವಾಗಿ ಅನುಭವಿಸಿದ ಮಾನಸಿಕ ಹಿಂಸೆ… ಇವುಗಳಿಂದ ನಾನು ತುಷಾರ್ ಅನ್ನು ನಾನು ಸರಿಯಾಗಿ ನೋಡಿಕೊಳ್ಳಲಿಲ್ಲ ನಿಜ. ಅವನ ಎಲ್ಲಾ ಅಗತ್ಯಗಳನ್ನು ಸಂಪೂರ್ಣವಾಗಿ ಅಮ್ಮನೇ ನೋಡಿಕೊಂಡಳು. ರಾಹುಲ್‌ನಿಂದ ಬೇರ್ಪಟ್ಟ ನಂತರ, ಶಾಂತಿ ಸಿಕ್ಕದ್ದರಿಂದ ತುಷಾರ್ ಅನ್ನು ಹತ್ತಿರಕ್ಕೆ ತೆಗೆದುಕೊಳ್ಳುವ ಅವಕಾಶ ಸಿಕ್ಕಿತು. ಆಗ ಅವನ ಸ್ವಭಾವದಲ್ಲಿರುವ ವೈಪರೀತ್ಯಗಳನ್ನು ನಾನು ಗಮನಿಸಿದೆ. ಅವನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅವನು ಹೈಪರ್‌ಆಕ್ಟಿವ್… ಆ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ಮಾಡುವ ಗಲಾಟೆ ಬಗ್ಗೆ ನನಗೆ ತಿಳಿದಿದೆ. ಆದರೆ ತುಷಾರ್ ಗಲಾಟೆ ಅದಕ್ಕೆ ಎರಡು ಪಟ್ಟು.

ಏನಾದರೂ ಹೇಳಿದರೆ ಕೇಳುವುದಿಲ್ಲ. ಹೇಳಿದ ಕೆಲಸ ಮಾಡುವುದಿಲ್ಲ. ಮಕ್ಕಳೊಂದಿಗೆ ಆಟ ಆಡುವುದಿಲ್ಲ. ಆಟದಲ್ಲಿ ನಿಮಿಷಗಳಲ್ಲಿ ಆಸಕ್ತಿ ಕಳೆದು ಬೇರೆ ಆಟ ಆರಂಭಿಸುತ್ತಾನೆ. ಇಂಪಲ್ಸಿವ್ ಕೆಲಸಗಳು ಮಾಡುತ್ತಾನೆ. ಆದರೆ ಪರಿಣಾಮಗಳ ಬಗ್ಗೆ ಯೋಚಿಸುವುದಿಲ್ಲ. ನಿದ್ದೆ ಬರಿಸುವುದು ದೊಡ್ಡ ಸಮಸ್ಯೆ. ನಿದ್ದೆ ಬಂದರೂ ಮಧ್ಯೆ ಎದ್ದು ಕೂರುತ್ತಾನೆ. ತೀವ್ರ ಅಸಹನೆ, ಕೋಪ, ಏಕಾಗ್ರತೆ ಇಲ್ಲದಿರುವುದು, ಚಿಕ್ಕ ವಿಷಯಕ್ಕೂ ಅತಿಯಾಗಿ ಪ್ರತಿಕ್ರಿಯೆ, ನಿರ್ಲಕ್ಷ್ಯ, ದುರಂತ ಸಂಭವಿಸುತ್ತದೆ ಎಂಬ ಭಯ ಇಲ್ಲದಿರುವುದು, ಹಿಂಸಾತ್ಮಕ ವ್ಯವಹಾರ ಇತ್ಯಾದಿ ಲಕ್ಷಣಗಳು ಕಂಡುಬರತೊಡಗಿದ್ದರಿಂದ ನನ್ನಲ್ಲಿ ಅನುಮಾನ ಬೆಳೆಯಿತು. ದೃಢೀಕರಣಕ್ಕಾಗಿ ಚೈಲ್ಡ್ ಸೈಕಿಯಾಟ್ರಿಸ್ಟ್‌ಗೆ ತೋರಿಸಿದೆ. ನನ್ನ ಅನುಮಾನ ನಿಜವಾಯಿತು. ತುಷಾರ್‌ಗೆ ಎಡಿಎಚ್‌ಡಿ ಇದೆ. ಅಟೆನ್ಷನ್ ಡೆಫಿಸಿಟ್ ಹೈಪರ್ ಯಾಕ್ಟಿವಿಟಿ ಡಿಸಾರ್ಡರ್… ರಾಹುಲ್ ನನ್ನನ್ನು ದ್ರೋಹ ಮಾಡಿದ ದಿನವೂ ಇಷ್ಟು ಬೇಸರ ಪಡಲಿಲ್ಲ. ವಿಚ್ಛೇದನ ನಂತರ ಸಿಂಗಲ್ ಪೇರೆಂಟ್ ಆದಾಗಲೂ ಆತಂಕಕ್ಕೆ ಒಳಗಾಗಲಿಲ್ಲ. ಆದರೆ ನನ್ನ ಪ್ರಾಣದ ಪ್ರಾಣನಾದ ನನ್ನ ಮಗನಿಗೆ ಎಡಿಎಚ್‌ಡಿ ಇದೆ ಎಂದು ದೃಢಪಟ್ಟಾಗ ಅಂತಹ ದುಃಖದಲ್ಲಿ ಮುಳುಗಿದೆ. ಎರಡು ವರ್ಷಗಳು ಬಿಹೇವಿಯರಲ್ ಥೆರಪಿ ನೀಡಿದೆ. ಅವನಿಗೀಗ ಎಂಟು ವರ್ಷಗಳು… ಎಡಿಎಚ್‌ಡಿ ಇರುವ ಮಕ್ಕಳು ದೊಡ್ಡವರಾದಾಗ ಪಾರ್ಕಿನ್ಸನ್ ರೋಗ ಬರಬಹುದು. ಎಡಿಎಚ್‌ಡಿ, ಪಾರ್ಕಿನ್ಸನ್‌ಗೆ ಡೋಪಮೈನ್ ನ್ಯೂರೋಟ್ರಾನ್ಸ್‌ಮಿಟರ್ ಕಾರಣ.

ಆಟವಾಡಿ ಸುಸ್ತಾಗಿ, ಪಕ್ಕದಲ್ಲಿ ಮಲಗಿದ್ದ ತುಷಾರ್ ಮೇಲೆ ಕೈ ಇಟ್ಟು ಕಣ್ಣು ಮುಚ್ಚಿದೆ. ನನ್ನ ಕಣ್ಣಲ್ಲಿ ಅನಾಯಾಸವಾಗಿ ನೀರು ಹರಿಯಿತು.

*****

ಬ್ರೂನೊ ತಲೆಯ ಎಂಟನೇ ರಂಧ್ರಕ್ಕೆ ಟಾಕ್ಸಿನ್ ಹಾಕಿದ ನಂತರ ಅದರ ವ್ಯವಹಾರದ ಬದಲಾವಣೆಗಳನ್ನು ಗಮನಿಸುತ್ತಿದ್ದೆ. ವಾರ ಕಳೆದಂತೆ ಅದರಲ್ಲಿ ಅಸಹನೆ, ಗೊಂದಲ ಸ್ಪಷ್ಟವಾಗಿ ಕಂಡುಬಂದಿತು. ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ಕಂಟೈನರ್ ಒಂದು ಮೂಲೆಯಿಂದ ಇನ್ನೊಂದಕ್ಕೆ ಅವಿರಳ ತಿರುಗಾಟ. ಲಿಲ್ಲಿಯನ್ನು ಹೊಡೆದು ಕೊರೆಯುತ್ತಾ ಹಿಂಸಿಸುತ್ತಿದೆ. ನಿದ್ರೆಯೂ ಕಡಿಮೆಯಾಗುತ್ತಿದೆ.

ಇವೆಲ್ಲ ಎಡಿಎಚ್‌ಡಿ ಲಕ್ಷಣಗಳು ಆದ್ದರಿಂದ ನನ್ನ ಖುಷಿಗೆ ಅಂತ್ಯ ಇಲ್ಲ. ಮೆದುಳಿನ ಯಾವ ಭಾಗದ ನ್ಯೂರಾನ್ ಹಾನಿಗೊಳಗಾಗುವುದರಿಂದ ಎಡಿಎಚ್‌ಡಿ ಬರುತ್ತದೆ ಎಂದು ಖಚಿತಪಡಿಸಿದ್ದರಿಂದ ಆ ಡಿಸಾರ್ಡರ್‌ಗೆ ಎರಡು ವಿಧಗಳ ಪರಿಹಾರ ಸಾಧ್ಯ. ಮೆದುಳಿನ ಆ ಭಾಗಕ್ಕೆ ಯಾವ ಔಷಧ ಹಾಕಿದರೆ ನ್ಯೂರಾನ್‌ಗಳು ಪುನರುಜ್ಜೀವನಗೊಳ್ಳುತ್ತವೆ ಎಂಬುದು ಒಂದು. ಪ್ರಯೋಗಾಲಯದಲ್ಲಿ ಅಂತಹ ಮೆದುಳು ಕಣಗಳನ್ನು ಉತ್ಪಾದಿಸಿ ಆ ಭಾಗಕ್ಕೆ ಅಳತೆ ಮಾಡುವುದು ಇನ್ನೊಂದು. ಎಡಿಎಚ್‌ಡಿ ರೋಗಿಗಳನ್ನು ಆರೋಗ್ಯವಂತರನ್ನಾಗಿ ಮಾಡಲು ತನ್ನ ದೇಹವನ್ನು ಬಲಿಕೊಟ್ಟ ಬ್ರೂನೊ ಈಗ ನನ್ನ ಕಣ್ಣಿಗೆ ದೇವದೂತನಂತೆ ಕಾಣುತ್ತದೆ.

ನಾನು ಭಯಪಟ್ಟ ಸಮಯ ಕೊನೆಗೂ ಬಂತು… ಬ್ರೂನೊವನ್ನು ಮೆರ್ಸಿ ಕಿಲಿಂಗ್ ಮಾಡುವ ಸಮಯ… ನಾನು ಬ್ರೂನೋ ಕಡೆಗೆ ದಯೆಯಿಂದ ನೋಡಿದೆ. ಅದು ಹಿಂದಿನಂತೆ ನನ್ನನ್ನು ಗುರುತಿಸುತ್ತಿಲ್ಲ. ತನ್ನ ತುಟಿಗಳನ್ನು ಚಾಚಿ ನಗುವುದು ಮರೆತಿದೆ. ಚುರುಕಾಗಿ ಚಲಿಸುತ್ತಿದ್ದ ಹಿಂದಿನ ಬ್ರೂನೊ ಇಲ್ಲ ಈಗ. ಅದರ ಚಲನೆಗಳಲ್ಲಿಯೂ, ವ್ಯವಹಾರದಲ್ಲಿಯೂ ಬಹು ಬದಲಾವಣೆಗಳು. ಅದು ಈಗ ವೈದ್ಯಶಾಸ್ತ್ರ ಸಂಶೋಧನೆಗೆ ಕೆಲಸಕ್ಕೆ ಬರದ ಪ್ರಾಣಿ.

ಅದನ್ನು ಕೊಲ್ಲಬೇಡ ಎಂದು ಲ್ಯಾಬ್ ಡೈರೆಕ್ಟರ್ ನೀರವ್ ಅವರನ್ನು ಕೇಳಿಕೊಂಡೆ.

“ಅದನ್ನು ಕೊಲ್ಲದೇ ಇರುವುದರಿಂದ ಏನು ಲಾಭ? ಅದರ ಆಹಾರ ಖರ್ಚು ವ್ಯರ್ಥ. ಅದು ಈಗ ವಿವಿಧ ಮಾನಸಿಕ ರೋಗಗಳಿಂದ ಬಾಧೆಪಡುತ್ತಿದೆ. ಇನ್ಫೆಕ್ಷನ್ ತಡೆಯಲು ಎಷ್ಟು ಆಂಟಿಬಯಾಟಿಕ್‌ಗಳನ್ನು ಹಾಕಿದ್ದೇವೆ ನೆನಪಿದೆಯೇ? ಅವುಗಳ ಸೈಡ್ ಎಫೆಕ್ಟ್‌ಗಳಿಂದ ಅದರ ಆಂತರಿಕ ಅಂಗಗಳು ಹಾನಿಗೊಳಗಾಗಿವೆ ಎಂಬುದು ನಿಮಗೆ ಗೊತ್ತಿಲ್ಲವೇ?” ಎಂದ.

“ಬ್ರೂನೊ ಮಾನವಕುಲಕ್ಕೆ ಮಾಡಿದ ಕಲ್ಯಾಣವನ್ನು ಹೇಗೆ ಮರೆಯಬಹುದು? ಭವಿಷ್ಯದಲ್ಲಿ ಎಡಿಎಚ್‌ಡಿಗೆ ಪರಿಹಾರ ಕಂಡರೆ ಆ ಕ್ರೆಡಿಟ್ ಬ್ರೂನೊಗೇ ದೊರೆಯುತ್ತದೆ. ಅದಕ್ಕೆ ನಾವು ಕೊಡುವ ಪ್ರತಿಫಲ ಇದೇನಾ?” ಎಂದೆ.

“ಅದನ್ನು ಕೊಲ್ಲುವುದೇ ನಾವು ಅದಕ್ಕೆ ಮಾಡಬಹುದಾದ ದೊಡ್ಡ ಕೊಡುಗೆ” ಎಂದ.

“ಅದನ್ನು ನನಗೆ ಕೊಟ್ಟುಬಿಡಿ. ನಾನು ಬೆಳೆಸಿಕೊಳ್ಳುತ್ತೇನೆ” ಎಂದೆ.

“ನಿಮಗೆ ಏನಾದರೂ ಹುಚ್ಚಾ? ವಿವಿಧ ಮಾನಸಿಕ ದೈಹಿಕ ರೋಗಗಳೊಂದಿಗಿನ ಬ್ರೂನೊವನ್ನು ಬೆಳೆಸುವುದು ಎಷ್ಟು ಕಷ್ಟ, ಅದರಲ್ಲಿ ಎಷ್ಟು ರಿಸ್ಕ್ ಇದೆ ಎಂಬುವುದು ಯೋಚಿಸಿದ್ದೀರಾ?” ಹೇಳಿದ.

“ಆ ವಿಷಯದಲ್ಲಿ ನನಗೆ ಸ್ಪಷ್ಟವಾದ ತಿಳುವಳಿಕೆ ಇದೆ. ಪರ್ವಾಗಿಲ್ಲ. ನನ್ನ ಮಗು ಎಡಿಎಚ್‌ಡಿಯಿಂದ ಬಾಧೆಪಡುತ್ತಿದ್ದಾನೆ ಎಂದು ನಿಮಗೆ ಗೊತ್ತು. ಅಂತಹ ಲಕ್ಷಾಂತರ ಮಕ್ಕಳಿಗಾಗಿ ಅದು ದೈಹಿಕ ಹಿಂಸೆಯನ್ನು ಸಹಿಸಿತು. ನಾನು ಅದಕ್ಕಾಗಿ ಆ ಮಟ್ಟದ ಕಷ್ಟವನ್ನು ಸಹಿಸಬಲ್ಲೆ” ಎಂದೆ. ನಾನು ಅವನನ್ನು ಮನವೊಲಿಸಿ, ಬ್ರೂನೊವನ್ನು ಮನೆಗೆ ತಂದೆ.

ಬ್ರೂನೊಗಾಗಿ ವರಾಂಡದ ಖಾಲಿ ಸ್ಥಳದಲ್ಲಿ ಅಲ್ಯೂಮಿನಿಯಂನಿಂದ ಚಿಕ್ಕ ಕೋಣೆ ಕಟ್ಟಿಸಿದೆ.

ಈಗ ರಾತ್ರಿ ಮನೆಗೆ ಬಂದಾಗ ಬೆಡ್‌ರೂಂನಲ್ಲಿ ತುಷಾರ್ ಕಿರುಚುತ್ತಾ ಗಲಾಟೆ ಮಾಡುತ್ತಿದ್ದರೆ, ಹೊರಗಡೆ ಬ್ರೂನೋ ತನ್ನ ಕೋಣೆಯ ಗೋಡೆಗಳನ್ನು ಬಡಿಯುತ್ತಾ ಅಶಾಂತವಾಗಿ ಓಡಾಡುತ್ತಿರುತ್ತದೆ.

ಈಗ ನನ್ನ ಮನೆಯಲ್ಲಿ ಎಡಿಎಚ್‌ಡಿಯಿಂದ ಬಳಲುತ್ತಿರುವ ಇಬ್ಬರು ಮಕ್ಕಳಿದ್ದಾರೆ.

About The Author

ಕೋಡಿಹಳ್ಳಿ ಮುರಳಿಮೋಹನ್

ಕೋಡಿಹಳ್ಳಿ ಮುರಳಿಮೋಹನ್ ತೆಲುಗು ಬರಹಗಾರ, ಸಂಪಾದಕ, ಅನುವಾದಕ ಮತ್ತು ತೆಲುಗು ವಿಕಿಪೀಡಿಯನ್. ಡಾ.ಎಚ್. ನರಸಿಂಹಯ್ಯನವರ ಆತ್ಮಕಥೆ "ಹೋರಾಟದ ಹಾದಿ" ಯನ್ನ ತೆಲುಗು ಭಾಷೆಯಲ್ಲಿ "ಪೋರಾಟಪಥಂ" ಹೆಸರಿನಲ್ಲಿ ಅನುವಾದಿಸಿದ್ದಾರೆ. ಊರು ಹಿಂದೂಪುರ ಬಳಿಯ ಲೇಪಾಕ್ಷಿ ಮಂಡಲದ ಕೋಡಿಹಳ್ಳಿಯವರಾದ ಇವರು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದು, ಪ್ರಸ್ತುತ ದಕ್ಷಿಣ ಮಧ್ಯ ರೈಲ್ವೇಯಲ್ಲಿ ಹಿರಿಯ ವಿಭಾಗದ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ