ಬಳ್ಳಿ ಡಿಎನ್ಎ ಸರಪಣಿಯಂತೆ ಬೆಳೆದಂತೆಲ್ಲಾ ಅದರ ಜೊತೆಗೂಡಿ ನನ್ನ ಬಾಲ್ಯದ ನೆನಪುಗಳು ಬಿಚ್ಚಿಕೊಂಡು ನಮ್ಮಜ್ಜಿ, ನಮ್ಮಪ್ಪ ಬೆಳೆಯುತ್ತಿದ್ದ ಅವರೆಕಾಯಿ ಫಸಲು ಮನಸ್ಸಿಗೆ ಬಂದು ಕಣ್ಣಮುಂದೆ ಭದ್ರವಾಗಿ ಕೂತಿತ್ತು. ಅದು ಅವರೆ ಬಳ್ಳಿಯೇ ಹೌದು ಎನ್ನುವುದು ನಿಧಾನವಾಗಿ ಖಾತ್ರಿಯಾದಂತೆಲ್ಲಾ ರೋಮಾಂಚನವಾಗಿ ನಾಲ್ಕಾರು ಜನರ ಬಳಿ ಹೇಳಿಕೊಂಡು, ಗಾರ್ಡನಿಂಗ್ ಗುಂಪಿನಲ್ಲಿ ಫೋಟೋ ಹಾಕಿ ಎಲ್ಲರ ಊಹಾಪೋಹಗಳನ್ನು, ಶಿಫಾರಸ್ಸನ್ನು ಸ್ವೀಕರಿಸಿ ಕಡೆಗೆ ಕಾಯಿ ಬಿಡುವ ತನಕ ಕಾಯುವುದೇ ಒಳಿತು ಎಂಬ ತೀರ್ಮಾನಕ್ಕೆ ಬಂದಾಗಿದೆ. ಏನಾದರಾಗಲಿ, ನನ್ನ ಬಾಲ್ಯದ ನೆನಪುಗಳನ್ನಾಧರಿಸಿ ಅವರೆಬಳ್ಳಿಯ ರಹಸ್ಯವನ್ನು ಭೇದಿಸಿದ್ದು ತೃಪ್ತಿ ತಂದಿದೆ.
ಡಾ. ವಿನತೆ ಶರ್ಮಾ ಬರೆಯುವ ಅಂಕಣ
ನಮ್ಮೂರಿನಲ್ಲೀಗ ಶರತ್ಕಾಲ. ಹೊರಗಿನ ಹವಾಮಾನದಲ್ಲಿ ರವೆಯಷ್ಟು ಬಿಸಿಲು ಮತ್ತು ಸೆಕೆ ಕಡಿಮೆಯಾಗಿದೆಯಷ್ಟೆ ಹೊರತು ಹೆಚ್ಚಿನ ಬದಲಾವಣೆಯೇನಿಲ್ಲ. ಶರತ್ಕಾಲವಾದರೂ ಕೂಡ ಈ ಬ್ರಿಸ್ಬನ್ ನಗರದ ಪರಿಸರದಲ್ಲಿ ಎಲೆಗಳು ಉದುರುವ ಬದಲು ಅಲ್ಲಲ್ಲಿ ಗಿಡಗಳಲ್ಲಿ ಚಿಗುರು ಕಾಣುತ್ತಿದೆ. ರಂಗುರಂಗಿನ ಹೂಗಳು, ಅಚ್ಚಹಸಿರಿನ ಹುಲ್ಲು, ತುಂಬಿದ ಮೈ ಹೊತ್ತ ಮರಗಳು ಕಣ್ಣಿಗೆ ಹಬ್ಬವೆನಿಸಿದರೂ ಇವೆಲ್ಲಾ ಋತು ಬದಲಾವಣೆಯ ಪರಿಯನ್ನು ಮರೆಸಿ ಮರೆಮಾಚಿಬಿಟ್ಟಿದೆ. ವಿಚಿತ್ರವೆಂದರೆ ನಮ್ಮ ಕೈದೋಟದಲ್ಲಿ ಹಾಗಲಕಾಯಿಗಳು ಹೆಚ್ಚಿದಂತೆಲ್ಲಾ ಅದಕ್ಕೆ ಪೈಪೋಟಿ ನೀಡುವಂತೆ ಸೌತೆಕಾಯಿ ಬಳ್ಳಿ ಮರಿ ಹಾಕುತ್ತಿದೆ. ಮೆಣಸಿನಕಾಯಿ ಗಿಡ ಮತ್ತೆ ಚಿಗುರಿ ಪುಟಾಣಿ ಕಾಯಿಗಳು ಇಣುಕಿವೆ. ದೊಡ್ಡಪತ್ರೆ ಸೊಪ್ಪು ತಾನು ಎಲ್ಲಾ ಕಾಲಕ್ಕೂ ಸೈ ಎನ್ನುತ್ತಾ ಬೆಳೆಯುತ್ತಲೇ ಇದೆ. ಇವನ್ನು ಅಣಕಿಸುತ್ತಾ ಅವರೆಕಾಯಿ ಬಳ್ಳಿ ತಾನು ಮಹಾ ಸಾಂಪ್ರದಾಯಿಕ ಗಿಡ ಅನ್ನೋ ಥರ ತನ್ನ ಚಳಿಗಾಲದ ಫಸಲಿಗೆ ಮನಗೊಟ್ಟು ಹೂ ಬಿಡಲಾರಂಭಿಸಿದೆ. ಇದು ಅವರೆಯೋ ಅಥವಾ ಚಪ್ಪರದವರೆಯೋ ಎಂಬ ಮಹಾ ಜಿಜ್ಞಾಸೆಯುಂಟಾಗಿ ಅದನ್ನ ಖಚಿತಪಡಿಸಿಕೊಳ್ಳಲು ನಾನು ತುದಿಗಾಲಲ್ಲಿ ನಿಂತಿದ್ದೀನಿ. ಕಾಯಿ ಬಿಟ್ಟ ಮೇಲೆ ಗೊತ್ತಾಗುತ್ತದೆಯಾದರೂ ಚಡಪಡಿಕೆಯಂತೂ ನಿಂತಿಲ್ಲ. ಇದರ ಹುಟ್ಟೇ ಒಂದು ರಹಸ್ಯ ಪತ್ತೇದಾರಿ ಕಥೆಯಾಗಿತ್ತು ಅನ್ನೋದನ್ನ ಈಗ ನೆನೆಸಿಕೊಂಡರೆ ಅದರ ಹೂ ಕಾಯಿ ಅಷ್ಟೇನೂ ರಹಸ್ಯವಾಗಿಲ್ಲವೆನ್ನಿಸುತ್ತದೆ.
ನನಗೆ ಗೊತ್ತಿಲ್ಲದಂತೆ ಜನ್ಮತಳೆದ ಈ ಅವರೆ ಬಳ್ಳಿ ಆರಂಭದಲ್ಲಿ ಅತ್ಯಂತ ಕುತೂಹಲವನ್ನುಂಟು ಮಾಡಿತ್ತು. ಕೆಲತಿಂಗಳ ಹಿಂದೆ ನಾವು ಕೊಂಡು ತಂದು ಕೈದೋಟದ ತುಂಬಾ ಚೆಲ್ಲಿದ್ದ ಕಬ್ಬಿನ mulch ಮಣ್ಣಿನಲ್ಲಿ ಚೆನ್ನಾಗಿ ಊರಿದ ನಂತರದ ದಿನಗಳಲ್ಲಿ ಈ ಬಳ್ಳಿ ಕಣ್ತೆರೆದಿತ್ತು. ಬಳ್ಳಿ ಡಿಎನ್ಎ ಸರಪಣಿಯಂತೆ ಬೆಳೆದಂತೆಲ್ಲಾ ಅದರ ಜೊತೆಗೂಡಿ ನನ್ನ ಬಾಲ್ಯದ ನೆನಪುಗಳು ಬಿಚ್ಚಿಕೊಂಡು ನಮ್ಮಜ್ಜಿ, ನಮ್ಮಪ್ಪ ಬೆಳೆಯುತ್ತಿದ್ದ ಅವರೆಕಾಯಿ ಫಸಲು ಮನಸ್ಸಿಗೆ ಬಂದು ಕಣ್ಣಮುಂದೆ ಭದ್ರವಾಗಿ ಕೂತಿತ್ತು. ಅದು ಅವರೆ ಬಳ್ಳಿಯೇ ಹೌದು ಎನ್ನುವುದು ನಿಧಾನವಾಗಿ ಖಾತ್ರಿಯಾದಂತೆಲ್ಲಾ ರೋಮಾಂಚನವಾಗಿ ನಾಲ್ಕಾರು ಜನರ ಬಳಿ ಹೇಳಿಕೊಂಡು, ಗಾರ್ಡನಿಂಗ್ ಗುಂಪಿನಲ್ಲಿ ಫೋಟೋ ಹಾಕಿ ಎಲ್ಲರ ಊಹಾಪೋಹಗಳನ್ನು, ಶಿಫಾರಸ್ಸನ್ನು ಸ್ವೀಕರಿಸಿ ಕಡೆಗೆ ಕಾಯಿ ಬಿಡುವ ತನಕ ಕಾಯುವುದೇ ಒಳಿತು ಎಂಬ ತೀರ್ಮಾನಕ್ಕೆ ಬಂದಾಗಿದೆ. ಏನಾದರಾಗಲಿ, ನನ್ನ ಬಾಲ್ಯದ ನೆನಪುಗಳನ್ನಾಧರಿಸಿ ಅವರೆಬಳ್ಳಿಯ ರಹಸ್ಯವನ್ನು ಭೇದಿಸಿದ್ದು ತೃಪ್ತಿ ತಂದಿದೆ.
ನಮ್ಮ ರಾಣಿರಾಜ್ಯದಲ್ಲಿ ಮತ್ತು ಪಕ್ಕದ ರಾಜ್ಯವಾದ ನ್ಯೂ ಸೌತ್ ವೇಲ್ಸ್ ಕಡೆ ರೈತರು ಸಿಹಿಕಬ್ಬಿನ ಬೆಳೆಯ ಜೊತೆಗೆ ತಮ್ಮ ದನಗಳ ಮೇವಿಗಾಗಿ ಅವರೆಕಾಯಿ ಮತ್ತಿತರ ದ್ವಿದಳಧಾನ್ಯಗಳನ್ನು ಬೆಳೆಯುತ್ತಾರಂತೆ. ಹಾಗಂತ ತಿಳಿಸಿದ್ದು ವಿಕಿಪೀಡಿಯ ವಿಶ್ವಕೋಶ. ಸರಿ ಹಾಗಾದರೆ, ಒಣ ಕಬ್ಬಿನ mulch ಜೊತೆ ಅವರೆಯ ಬೀಜಗಳು ಸೇರಿದ್ದು ಅವು ನಮ್ಮ ಕೈದೋಟದಲ್ಲಿ ಮರುಜನ್ಮ ಪಡೆದಿವೆ, ಬಯಸದೆ ಬಂದ ಭಾಗ್ಯವಿದು ಎಂದು ಲೆಕ್ಕಾಚಾರ ಹಾಕಿ ದಕ್ಷಿಣದಿಂದ ಉತ್ತರಕ್ಕೆ ಪಯಣಿಸಿ ನಮ್ಮನೆಗೆ ಬಂದು ದರ್ಶನ ಕೊಟ್ಟಿರುವ ಈ ಹಸಿರುದೇವತೆಗಳಿಗೆ ಧನ್ಯವಾದ ಹೇಳಿ ಕೈಜೋಡಿಸಿ ನಮಿಸಿ ಖುಷಿಪಟ್ಟುಕೊಂಡಿದ್ದೀನಿ.
ಆಸ್ಟ್ರೇಲಿಯನ್ನರಿಗೆ ಅವರೆಕಾಯಿ ಅವರ ದನದ ಆಹಾರವಾದರೆ ಈ ವಲಸೆಗಾರ್ತಿ ಭಾರತೀಯ ಹೆಂಗಸಿಗೆ ಅವರೆಬಳ್ಳಿಯು ಮೊಟ್ಟಮೊದಲ ಬಾರಿಗೆ ತನ್ನ ಕೈದೋಟದಲ್ಲಿ ಬೆಳೆಯುತ್ತಿರುವುದು ಅದೆಂತಹ ಅದ್ಭುತ ಅನುಭೂತಿ ಅನ್ನೋದನ್ನ ಹೇಗೆ ವ್ಯಕ್ತಪಡಿಸುವುದು? ಮಕ್ಕಳಿಗೆ ಹೇಳಿದರೆ ‘ಹಾಗಾದರೆ ಗ್ಯಾರಂಟಿ ನೀನು ಆ ಬೀನ್ಸ್ ಗಳನ್ನ ನಮಗೆ ತಿನ್ನಿಸುತ್ತೀಯ. ನಿನ್ನ ಪ್ರಯೋಗಗಳಿಗೆ ನಾವು ರೆಡಿ ಇಲ್ಲ ಅನ್ನೋದನ್ನ ಈಗಲೇ ಸ್ಪಷ್ಟಪಡಿಸಿದ್ದೀವಿ,’ ಅಂದುಬಿಟ್ಟರು.
ಹಾಗಲಬಳ್ಳಿ ಮತ್ತು ಈ ಅವರೆಬಳ್ಳಿಯ ಅರ್ಧಭಾಗ ನಮ್ಮ ಬೇಲಿ ಹಾರಿ ಪಕ್ಕದ ಮನೆಯ ಕಡೆ ಸೂರ್ಯರಶ್ಮಿ ಹೆಚ್ಚಿರುವುದರಿಂದ ಅಲ್ಲಿಗೆ ಹೋಗಿ ಹುಲುಸಾಗಿ ಬೆಳೆದಿವೆ. ಪುಣ್ಯಕ್ಕೆ ಈ ಪಕ್ಕದ ಮನೆಯ ಜನ ಒಳ್ಳೆಯವರು. ಬೆಳೆದು ದೊಡ್ಡದಾದ ಹಾಗಲಕಾಯಿಯನ್ನ ಕೊಯ್ದು ತಪ್ಪದೆ ನನಗೆ ಕೊಡುತ್ತಾರೆ. ಬಹುಶಃ ಹಾಗಲಕಾಯಿಯ ಅಂಕುಡೊಂಕು ರೂಪವನ್ನು ನೋಡಿಯೇ ಅವರು ಗಾಬರಿಯಾಗಿರಬೇಕು ಎಂದು ನನ್ನ ಗುಮಾನಿ. ಅವರ ಪುಟ್ಟ ಮಕ್ಕಳು ಹಾಗಲಕಾಯಿಯ ರೂಪವನ್ನ ನೋಡಿ ಹೌಹಾರಿದ್ದರಂತೆ. ಎಲ್ಲ ತರಕಾರಿ ಹಣ್ಣುಗಳು ಇಷ್ಟೇ ಗಾತ್ರವಿರಬೇಕು, ಇಂಥದ್ದೇ ರೂಪವಿರಬೇಕು, ಬಯಸಿದ ಆಕರ್ಷಕ ರೂಪವಿರಬೇಕು, ಅಂಕುಡೊಂಕಾದರೆ ಅದು ಕಸದ ಬುಟ್ಟಿಗೆ ಹೋಗಬೇಕು ಎನ್ನುವ ಈ ಸಮಾಜದಲ್ಲಿ ಇಂತಹ ಅಳತೆಗೋಲನ್ನು ಮೀರಿ ನಡೆದರೆ ಪಾಪ, ತರಕಾರಿ ಹಣ್ಣುಗಳಿಗೆ ಉಳಿಗಾಲವಿಲ್ಲ. ಪಕ್ಕದ ಮನೆಯ ಮಕ್ಕಳು ಒಮ್ಮೆ ಒಂದು ಹಾಗಲಕಾಯಿ ತಾನು ಬಳ್ಳಿಯೊಳಗೇ ಬಚ್ಚಿಟ್ಟುಕೊಂಡು ಬೆಳೆದು ದೊಡ್ಡದಾಗಿ ತೀರಾ ಹಣ್ಣಾಗಿ ಅದರ ಕೆಂಪನೆ ಮೈ ಬಿರಿದುಕೊಂಡು ಬೀಜಗಳು ಕಂಡಾಗ ‘ಈ ತರಕಾರಿ ಯಾವುದೋ ಪರಗ್ರಹದಿಂದ ಅನ್ಯಜೀವಿಗಳು ತಂದು ಹಾಕಿದ್ದಿರಬೇಕು,’ ಎಂದರಂತೆ. ಹಾಗಲಕಾಯಿಯ ಕಡುಕೆಂಪು ಹೊಟ್ಟೆಯೊಳಗಿದ್ದ ಬೀಜಗಳು ಆ ಮಕ್ಕಳಿಗೆ Jack and the Beanstalk ಕಥೆಯನ್ನು ನೆನಪಿಸಿದ್ದವಂತೆ.
ಮಕ್ಕಳಲ್ಲಿ ಹಿರಿಯನಾದ ಅಣ್ಣ ತನ್ನ ಪುಟ್ಟ ತಂಗಿಗೆ ‘ಏನೇ ಆದರೂ ಕೂಡ ಆ ಬೀಜಗಳನ್ನ ಮುಟ್ಟಬೇಡ. ಮುಟ್ಟಿದರೆ ಕಥೆಯಲ್ಲಿ ನಡೆಯುವಂತೆ ಬೀಜದಿಂದ ದೊಡ್ಡ ಬಳ್ಳಿ ಹುಟ್ಟಿ, ಅದು ಆಕಾಶವನ್ನು ಮುಟ್ಟುವ ಏಣಿಯಾಗಿ, ಅದನ್ನು ಆಕಾಶದ ಲೋಕದಲ್ಲಿರುವ giant ಜನರು ನೋಡಿ, ಬಳ್ಳಿಯನ್ನು ಹಿಡಿದು ಕೆಳಗಿಳಿದು ನಮ್ಮ ಲೋಕಕ್ಕೆ ಬಂದು ನಮ್ಮನ್ನು ಸಾಯಿಸಿಬಿಡುತ್ತಾರೆ,’ ಎಂದು ಉಪದೇಶ ಮಾಡಿದನಂತೆ. ಅದನ್ನು ಕೇಳಿದ ನಂತರ ಅವರಪ್ಪ ಭಯಭಕ್ತಿಯಿಂದ ಹಾಗಲಕಾಯಿ ಇನ್ನೂ ಹಸಿರಾಗಿರುವಾಗಲೇ ಕೊಯ್ದು ನನಗೆ ಕೊಟ್ಟು ಕೈತೊಳೆದುಕೊಳ್ಳುತ್ತಾರೆ.
ಇದಕ್ಕೆ ವ್ಯತಿರಿಕ್ತವಾಗಿ ಅವರಿಗೆ ಪರಿಚಯವಿರುವ passion fruit ಮತ್ತು winged bean ಕಂಡು ಅವರ ಮಕ್ಕಳು ಖುಷಿಪಡುತ್ತಿದ್ದಾರೆ. ಅಂದಹಾಗೆ ನಮ್ಮಿಬ್ಬರ ಮನೆಗಳನ್ನ ಬೇರ್ಪಡಿಸಿರುವ ಬೇಲಿಗುಂಟ ನಾನು ನೆಟ್ಟು ಬೆಳೆಸುತ್ತಿರುವ ಎಲ್ಲಾ ಹಣ್ಣುತರಕಾರಿಗಳಿಗೂ ಬೇಲಿ ಹಾರಿ ಅವರ ಮನೆಯಂಗಳದಲ್ಲಿ ಬೆಳೆಯುವುದೆಂದರೆ ಪಂಚಪ್ರಾಣ. ನಾನು ಬೆಳೆಯುವ ರಸಭರಿತ ನಿಂಬೆ ಹಣ್ಣು, passion fruit, ಕುಂಬಳಕಾಯಿ, ಜಾಜಿಹೂವು, ಪರಂಗಿ ಇತ್ಯಾದಿಗಳ ಬೆಳವಣಿಗೆಯನ್ನು ಅವರೂ ಗಮನಿಸುತ್ತಿರುತ್ತಾರಂತೆ. ಶ್ರಮ ನಿನ್ನದು, ಫಸಲು ನಮ್ಮದು ಎಂದೊಮ್ಮೆ ನಕ್ಕಿದ್ದರು. ಹಸಿರು ಬೆಳೆದಷ್ಟೂ ಎಲ್ಲರಿಗೂ ಸುಖವಲ್ಲವೇ ಎಂದು ಲೋಕಾಭಿರಾಮ ನಗೆಯಾಡಿದ್ದೆ. ನಮ್ಮ ಕೈದೋಟದಲ್ಲಿ ಹುಟ್ಟಿ ಅವರ ಬೇಲಿಯೊಳಗಡೆ ಬೆಳೆದು ಚೆನ್ನಾಗಿ ಫಸಲು ಕೊಡುತ್ತಿರುವ ಮುದ್ದು ಹುಟ್ಟಿಸುವ ಹಸಿರು winged beans ನೋಡಿ, ಗುರುತಿಸಿ ಅದನ್ನು ಅವರು ಸಂತೋಷದಿಂದ ತಿನ್ನುತ್ತಿದ್ದಾರಂತೆ. ಅವರೆಕಾಯಿ ಬಳ್ಳಿಯನ್ನ ನೋಡಿ ಅದೇನೆಂದು ಕೇಳಿದರು. ಅದರ ಹುಟ್ಟಿನ ಕಥೆಯನ್ನು ವಿವರಿಸಿ ಕಾಯಿ ಬಿಟ್ಟಮೇಲೆ ಅದೇನೆಂದು ಗೊತ್ತಾಗುತ್ತದೆ ಎಂದು ಹೇಳಿದ ಮೇಲೆ ಯಾಕೋ ಅನುಮಾನದ ಮುಖ ಮಾಡಿ ಕಾಯಿ ಬಿಟ್ಟಾಗ ನಿನಗೆ ಹೇಳುತ್ತೀವಿ, ಅಂದಷ್ಟೇ ಸುಮ್ಮನಾದರು. ಪಕ್ಕದಲ್ಲಿ ನಿಂತಿದ್ದ ತಮ್ಮ ಮಕ್ಕಳ ಕಡೆ ಒಮ್ಮೆ ದೃಷ್ಟಿ ಹಾಯಿಸಿ ಅವರಿಗೆ ಯಾವುದೇ ರೀತಿಯ ಆಘಾತವಾಗಿಲ್ಲವೆಂದು ಸಮಾಧಾನಪಟ್ಟುಕೊಂಡಿರಬೇಕು.
ಇದೆಲ್ಲದರ ಮಧ್ಯೆ ನಮ್ಮನೆಯಲ್ಲಿ ನಾಲ್ಕನೇ ಬಾರಿ ಬಾಳೆಗಿಡ ಪ್ರಾಣಬಿಟ್ಟ ಕಥೆಯನ್ನ ಕೇಳಿ ಮರುಕ ತೋರಿಸಿದ್ದ ಪರಿಚಯದವರೊಬ್ಬರು ಈ ಅವರೆಬೀಜದಂತೆ ಒಂದು ದಿನ ಸದ್ದಿಲ್ಲದೇ ಬಂದು ಬೇರು ಸಮೇತವಿದ್ದ ಬಾಳೆಕಂದನ್ನು ನಮ್ಮ ಗೇಟಿನ ಮುಂದಿಟ್ಟು ಹೋಗಿದ್ದರು. ಸಂಜೆ ಆ ಬಾಳೆಗಿಡವನ್ನು ನೋಡಿ ಸಖೇದಾಶ್ಚರ್ಯವಾಗಿ ಇದು ಹೇಗೆ ಬಂತು, ಎಲ್ಲಿಂದ ಬಂತು ಎಂದೆಲ್ಲಾ ತಲೆ ಪತ್ತೇದಾರಿ ಕೆಲಸ ಮಾಡುತ್ತಲೇ ಫೋನಿನಲ್ಲಿ ಬಂದಿದ್ದ ಅವರ ಮೆಸೇಜನ್ನು ಓದಿ ಮನಸ್ಸು ಪುಳಕಗೊಂಡಿತ್ತು. ಜನರ ಜೊತೆಗಿನ ನೇರ ಸಂಪರ್ಕ, ಒಡನಾಟ ಕಡಿಮೆಯಾಗಿರುವ ಈ ದಿನಗಳಲ್ಲಿ ರಾತ್ರಿ ಮಲಗುವಾಗ ನೆನೆಯುವುದು ಆ ದಿನ ನೋಡಿದ್ದ ಬಣ್ಣಬಣ್ಣದ ಹೂಗಳು, ಚಿಟ್ಟೆ ದುಂಬಿ ಕ್ರಿಮಿಕೀಟಗಳನ್ನ. ಎಲ್ಲಿಂದಲೋ ಬಂದು ಸೇರಿಕೊಂಡು ನಮ್ಮನೆ ತೋಟದಲ್ಲಿ ಅಡ್ಡಾಡಿಕೊಂಡು ಏನೆಲ್ಲಾ ಹುಳುಹುಪ್ಪಟೆಗಳನ್ನು ಹುಡುಕಿ ತಿಂದು ತೇಗಿ ಬೆಳೆಯುತ್ತಿರುವ ಟರ್ಕಿ ಕೋಳಿ ಮರಿಯೊಂದು, ಜೊತೆಗೆ ಅವರೆಕಾಯಿ ಕನಸು.
ಆಸ್ಟ್ರೇಲಿಯನ್ನರಿಗೆ ಅವರೆಕಾಯಿ ಅವರ ದನದ ಆಹಾರವಾದರೆ ಈ ವಲಸೆಗಾರ್ತಿ ಭಾರತೀಯ ಹೆಂಗಸಿಗೆ ಅವರೆಬಳ್ಳಿಯು ಮೊಟ್ಟಮೊದಲ ಬಾರಿಗೆ ತನ್ನ ಕೈದೋಟದಲ್ಲಿ ಬೆಳೆಯುತ್ತಿರುವುದು ಅದೆಂತಹ ಅದ್ಭುತ ಅನುಭೂತಿ ಅನ್ನೋದನ್ನ ಹೇಗೆ ವ್ಯಕ್ತಪಡಿಸುವುದು?
ಆಸ್ಟ್ರೇಲಿಯ ದೇಶದ ಪ್ರತಿಯೊಂದು ರಾಜ್ಯದಲ್ಲೂ ಅವರವರದ್ದೇ ಆದ ಕೆಲವು ರೂಲ್ಸ್ ಇವೆ. ಇವು ಕೃಷಿ ಬೆಳೆ, ಹಣ್ಣುತರಕಾರಿ, ಗಿಡಮರಗಳ ತಳಿ, ಪ್ರಾಣಿಪಕ್ಷಿ ಸಾಕಣೆ ಇತ್ಯಾದಿ ವಿಷಯಗಳಲ್ಲಿ ಬಹಳ ಕಟ್ಟುನಿಟ್ಟಾಗಿ ಪಾಲನೆಯಾಗುತ್ತವೆ. ಪ್ರತಿ ರಾಜ್ಯದ ಹವಾಮಾನ, ಮಣ್ಣಿನ ಗುಣ, ಸ್ಥಳೀಯ ಪರಿಸರ ಬಹು ವಿಭಿನ್ನವಾಗಿರುವುದರಿಂದ ಈ ಕಾನೂನು ಕಾಯಿದೆಗಳು ಮುಖ್ಯವಾಗುತ್ತವೆ. ಅಂಥ ಒಂದು ಕಾಯಿದೆ ಬಾಳೆಗಿಡ ಮತ್ತು ಬಾಳೆಹಣ್ಣಿನ ಜಾತಿಗಳಿಗೂ ಅನ್ವಯಿಸುತ್ತದೆ. ಬೇರೆ ರಾಜ್ಯದಿಂದ ನಮ್ಮ ರಾಣಿರಾಜ್ಯಕ್ಕೆ ಬಾಳೆಗಿಡವನ್ನು ತರಲು ವಿಶೇಷ ಪರವಾನಗಿ ಇರಬೇಕಂತೆ. ನಮ್ಮ ರಾಜ್ಯದೊಳಗೆ ನಾವು ಸ್ಥಳೀಯರು ಬಾಳೆಗಿಡ ನೆಡಬೇಕು ಎಂದು ಇಚ್ಚಿಸಿದರೆ ಕೆಲವೊಂದು ಬಾಳೆ ಜಾತಿಯನ್ನು ಮಾತ್ರ ನೆಡಲು ಅನುಮತಿ ಇದೆ. ಸ್ಥಳೀಯ ತೋಟಗಾರಿಕೆ ವಿಭಾಗಗಳಲ್ಲಿ ಕೂಡ ಅದೇ ಜಾತಿಯದ್ದೇ ಬಾಳೆಗಿಡ ಮಾರಲಾಗುತ್ತದೆ. ಬಾಳೆಹಣ್ಣು ಮತ್ತು ಬಾಳೆಗಿಡದ ಜೊತೆ ತಳಕು ಹಾಕಿಕೊಂಡಿರುವ ವಿಶಿಷ್ಟ ಕ್ವಾರಂಟೈನ್ ಒಮ್ಮೊಮ್ಮೆ ಗಾಬರಿ ತರಿಸುತ್ತದೆ. ಈ ಕ್ವಾರಂಟೈನ್ ಕಾನೂನುಕಾಯಿದೆ ಗೊತ್ತಿಲ್ಲದೇ ಹೊರದೇಶದ ಬಾಳೆಹಣ್ಣಿನ ಸಮೇತ ಈ ದೇಶದೊಳಗೆ ಹಾಜರಾದರೆ ವಿಮಾನ ನಿಲ್ದಾಣದಲ್ಲೇ ನಿಮ್ಮನ್ನು ತಡೆಹಿಡಿಯಲಾಗುತ್ತದೆ.
ಬಹಳ ಹಿಂದೆ ನಾನು ಕೆನಡಾ ದೇಶದಿಂದ ವಾಪಸ್ ಆಸ್ಟ್ರೇಲಿಯಾಗೆ ಪಯಣಿಸುವಾಗ ಕಾರಣಾಂತರದಿಂದ ಮೂರು ಕಡೆ ವಿಮಾನ ನಿಲ್ದಾಣಗಳಲ್ಲಿ transit ಸಮಯವನ್ನು ಕಳೆಯಬೇಕಾಗಿ ಬಂದಿತ್ತು. ಒಂದುಕಡೆ ಬಾಳೆಹಣ್ಣನ್ನು ಕೊಂಡು ಒಂದನ್ನು ತಿಂದು ಇನ್ನೆರಡನ್ನು ಕ್ಯಾಬಿನ್ ಚೀಲದಲ್ಲಿ ಸೇರಿಸಿದ್ದೆ. ಆಸ್ಟ್ರೇಲಿಯಾಗೆ ಕಾಲಿಟ್ಟು ಸಿಡ್ನಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಮತ್ತು ಗಡಿ ನಿರ್ವಾಹಕ ತನಿಖೆ ತಂಡವನ್ನು ದಾಟುವ ಘಟ್ಟದಲ್ಲಿ ಕ್ವಾರಂಟೈನ್ ಪರೀಕ್ಷೆ ತಂಡದ ನಾಯಿಯೊಂದು ನನ್ನ ಬಳಿ ಲಗುಬಗೆಯಿಂದ ಬಂತು. ನನ್ನ ಜೀವನಪೂರ್ತಿ ಇದ್ದ ನಾಯಿ ಭಯ ಆಗ ಜಾಗೃತವಾಯ್ತು. ಹೃದಯ ಬಾಯಿಗೆ ಬಂದಿತ್ತು. ನಾಯಿ ಹತ್ತಿರ ಬಂದದ್ದೇ ನನ್ನನ್ನು ಸುತ್ತುಹಾಕುತ್ತ ಪದೇ ಪದೇ ಮೂಸುತ್ತಿತ್ತು. ನಾಯಿಯ ಕುತ್ತಿಗೆ ಪಟ್ಟಿ ಹಿಡಿದಿದ್ದ ಕ್ವಾರಂಟೈನ್ ಆಫೀಸರ್ ಹೆಂಗಸು ನನ್ನ ಚೀಲದ ಬಾಯಿ ಬಿಡಿಸಿ ನಾಯಿಗೆ ಮೂಸಲು ಹೇಳಿದಳು. ಆಜ್ಞೆಯನ್ನ ಪರಿಪಾಲಿಸಿದ ನಾಯಿ ಬಲು ನಾಜೂಕಾಗಿ ಬೊಗಳಿತು.
ಒಂದು ಪುಟ್ಟ ನಾಯಿಯ ಮುಂದೆ ಕೂತು ಇಡೀ ಚೀಲವನ್ನು ಬಿಚ್ಚಿ ಚೀಲದೊಳಗಿದ್ದ ನನ್ನ ಬಹು ಬೆಲೆಬಾಳುವ ಖಾಸಗಿ ಪ್ರಪಂಚವನ್ನು ಬಯಲು ಮಾಡುವ ಪ್ರಸಂಗ ಎದುರಾಯಿತು. ನಾಯಿ ಭಯದ ಜೊತೆ ನನ್ನದೇನೂ ತಪ್ಪಿಲ್ಲವಾದರೂ ಅನುಮಾನಕ್ಕೀಡಾಗಿದ್ದ ಅವಮಾನ ಸೇರಿಕೊಂಡು ಥೂ ನಾಯಿ ಜನ್ಮವೇ ಎನ್ನುವಂತಾಗಿತ್ತು. ಆ ಹೆಂಗಸು ನನ್ನ ಮಾಯಾ ಬಜಾರ್ ಚೀಲದೊಳಗಿಂದ ಪ್ರತ್ಯಕ್ಷವಾದ ಪ್ರತಿಯೊಂದು ವಸ್ತುವನ್ನೂ ಕೂಲಂಕುಷವಾಗಿ ನೋಡಿ, ಒಮ್ಮೊಮ್ಮೆ ಕೆಲವೊಂದನ್ನು ನಾಯಿ ಮುಖದ ಮುಂದಿಟ್ಟು ನೋಡಿ ಪರೀಕ್ಷಿಸಿದಳು. ಎಲ್ಲವೂ ಸರಿಯಿದೆ, ಎಂದಳು. ನಾಯಿ ಮಾತ್ರ ಅಲ್ಲಿಂದ ಕದಲದೆ ಮತ್ತೊಮ್ಮೆ ನಾಜೂಕಾಗಿ ಬೊಗಳಿತು. ಕ್ವಾರಂಟೈನ್ ಆಫೀಸರ್ ಹೆಣ್ಣು ತಾನೂ ಕೂಡ ನಾಯಿಯ ಪಕ್ಕ ನೆಲದ ಮೇಲೆ ಕುಳಿತೇಬಿಟ್ಟಳು. ‘ವಾಟ್ ಐಸ್ ಇಟ್ ಮೈ ಲಿಟಲ್ ಒನ್? ವಾಟ್ ಐಸ್ ದಿ ಮ್ಯಾಟರ್ ಹಿಯರ್? ವಾಟ್ ಆರ್ ಯೂ ಟ್ರೈಯಿಂಗ್ ಟು ಟೆಲ್ ಮೀ?’ ಎಂದೆಲ್ಲ ಸಂಭಾಷಣೆ ಆರಂಭಿಸಿದಳು.
ಈ ಬಾರಿ ಮಾತ್ರ ನಾಯಿ ಬೊಗಳುವಿಕೆಗೆ ನನ್ನ ಭೂಲೋಕದ ಅವತಾರ, ಅಸ್ತಿತ್ವದ ಬುಡವೇ ಅಲ್ಲಾಡಿ ಅದುರಿತ್ತು. ನನಗೆ ಗೊತ್ತಿಲ್ಲದೆ ಯಾರಾದರೂ ನನ್ನ ಚೀಲದೊಳಗೆ ಯಾವುದಾದರೂ ಡ್ರಗ್ಸ್ ಸೇರಿಸಿದ್ದರೇನೋ ಅನ್ನುವ ಆಲೋಚನೆ ಮೊಳಕೆಯೊಡೆದು ಕ್ಷಣಮಾತ್ರದಲ್ಲಿ ಬಳ್ಳಿಯಾಗಿ ಹಬ್ಬಿಬಿಟ್ಟಿತು. ಆ ಕಾಲದಲ್ಲಿ ನಾನಿನ್ನೂ ಪಿಎಚ್ ಡಿ ಮಾಡುತ್ತಾ ವಿದ್ಯಾರ್ಥಿ ವೀಸಾದಲ್ಲೇ ಇದ್ದೆ. ವಿಮಾನ ನಿಲ್ದಾಣದಲ್ಲಿ ಕ್ವಾರಂಟೈನ್ ತಂಡದ ಮುಂದೆ ಅಪರಾಧಿ ಪಟ್ಟ ಹೊತ್ತು ಕೂತಿದ್ದ ತೃತೀಯ ಜಗತ್ತಿನ ಬಡಪಾಯಿ ವಿದ್ಯಾರ್ಥಿಯಾದ ನನ್ನ ಪರಿಸ್ಥಿತಿ ಕೆಟ್ಟರೆ ಏನೆಲ್ಲಾ ಆಗಬಹುದೆನಿಸಿ ಭಯವಾಗಿ ಈ ಪುಟ್ಟ ನಾಯಿಯೇ ಆಕಾಶದಿಂದ ಕೆಳಗಿಳಿದು ಬಂದ giant ರಾಕ್ಷಸನಂತೆ ಭಾಸವಾಯಿತು.
ಒಂದು ನಾಯಿಯಿಂದ ನನ್ನ ಜೀವನ ಹಾಳಾಗುವ ಪ್ರಸಂಗ ಬಂತಲ್ಲಾ, ಹಾಳು ನಾಯಿ ಜನ್ಮವೇ ಎನ್ನುವ ಬಯ್ಗುಳ ಬಾಯಿಗೆ ಬಂದು ಅದೇನಾದರೂ ನಾಯಿಗೆ ತಿಳಿದುಬಿಟ್ಟರೆ ಅದು ಇನ್ನೊಮ್ಮೆ ಅದೇ ತರಹದ ಸಂಭಾವಿತ ಸೋಗಿನ ನಾಜೂಕು ಬೊಗಳಿಕೆಯನ್ನು ತನ್ನ ಬಾಯಿಂದ ಹೊರಬಿಟ್ಟರೆ ಆ ಕ್ವಾರಂಟೈನ್ ಹೆಂಗಸು ನನ್ನನ್ನು ಇನ್ನೇನೆಲ್ಲಾ ಫಜೀತಿಗೆ ಸಿಲುಕಿಸಬಹುದು ಎನ್ನಿಸಿ ತೆಪ್ಪಗಾದೆ.
ತಲೆಯೊಳಗೆ ಇಷ್ಟೆಲ್ಲಾ ಹುಳಗಳು ಓಡಾಡುತ್ತಿರುವಾಗಲೇ ಆ ಹೆಣ್ಣು, ‘ನೀನೇನಾದರೂ ನಿನ್ನ ಚೀಲದೊಳಗೆ ಬಾಳೆಹಣ್ಣನ್ನು ಇಟ್ಟುಕೊಂಡಿದ್ದೆಯಾ?’ ಅಂತ ಕೇಳಿದಳು. ‘ಬಾಳೆಹಣ್ಣಾ, ಇಲ್ಲವಲ್ಲ, ಎಲ್ಲಿ, ಯಾವಾಗ,’ ಎಂದೆಲ್ಲಾ ತಡಬಡಿಸಿದೆ. ನನ್ನ ಮುಖವನ್ನೊಮ್ಮೆ ದೃಷ್ಟಿಸಿ ನೋಡಿ ಅವಳು ಈ ಬಡಪಾಯಿ ಗಿರಾಕಿ ಅನುಮಾನ ತರುವ ಡ್ರಗ್ಸ್ ಡೀಲರ್ ಅಲ್ಲ ಅನ್ನೋ ತೀರ್ಮಾನಕ್ಕೆ ಬಂದಿರಬೇಕು. ‘ಇನ್ನೊಮ್ಮೆ ಸರಿಯಾಗಿ ಜ್ಞಾಪಿಸಿಕೊಂಡು ಹೇಳು,’ ಅಂದಳು. ಆಗ ನಾನು transit ವಿಮಾನ ನಿಲ್ದಾಣವೊಂದರಲ್ಲಿ ಕೊಂಡಿದ್ದ ಕೆನಡಾ ದೇಶದ ಬಾಳೆಹಣ್ಣು ಇದೋ ನಾ ಬಂದೆ ಎನ್ನುವಂತೆ ನೆನಪಿನ ಅಂಗಳಕ್ಕೆ ಜಿಗಿಯಿತು. ‘ಹೌದು, ಚೀಲದಲ್ಲಿ ಬಾಳೆ ಹಣ್ಣು ಇತ್ತು. ಅದನ್ನು ವಿಮಾನದಿಂದ ಇಳಿದಮೇಲೆ ಇಲ್ಲೇ ಕಸದ ಡಬ್ಬದಲ್ಲಿ ಬಿಸಾಡಿದೆ,’ ಎಂದವಳಿಗೆ ಹೇಳಿದೆ. ಕರಾರುವಕ್ಕಾಗಿ ಕಸದ ಡಬ್ಬ ಎಲ್ಲಿತ್ತು, ಹೇಗಿತ್ತು ಎಂದೆಲ್ಲಾ ಮತ್ತಷ್ಟು ವಿವರಗಳನ್ನ ಕೇಳಿ ಪಡೆದ ಮೇಲೆ ಅವಳು ‘ಬಾಳೆಹಣ್ಣನ್ನು ನಮ್ಮ ದೇಶದೊಳಗೆ ತರುವುದೆಂದರೆ ಡ್ರಗ್ಸ್ ಅಥವಾ ಬಾಂಬ್ ತಂದಂತೆಯೇ.’ ಎನ್ನುತ್ತಾ ನಕ್ಕು ಯೂ ಆರ್ ಫ್ರೀ ಟು ಗೋ ಅಂದಳು. ನಾಯಿಗೆ ಅಸಮಾಧಾನವಾಗಿ ಮೈ ಅಲ್ಲಾಡಿಸಿತು. ‘ಇಟ್ಸ್ ಓಕೆ ಲಿಟಲ್ ಬಾಯ್, ಶಿ ಐಸ್ ಕ್ಲೀನ್,’ ಅಂದ ಆ ಮಹರಾಯ್ತಿಗೆ ಮನಸ್ಸಿನಲ್ಲೇ ನೂರು ನಮಸ್ಕಾರ ಹೇಳಿದೆ. ಅಪ್ಪಿತಪ್ಪಿಯೂ ಮತ್ತೊಮ್ಮೆ ‘ಲಿಟಲ್ ಬಾಯ್’ ನಾಯಿಯ ಕಡೆ ತಿರುಗಲಿಲ್ಲ.
ಈಗ ನಮ್ಮನೆಯಲ್ಲಿ ನೆಟ್ಟಿರುವ, ಯಾರೋ ಪುಣ್ಯಾತ್ಮರು ಕೊಟ್ಟಿರುವ ಬಾಳೆಗಿಡವನ್ನ ನೋಡಿದರೆ ಇಂಥದ್ದೆಲ್ಲ ಕಥೆಗಳು ಮರುಕಳಿಸಿ ಕೋವಿಡ್ ಕಾಲದಲ್ಲಿ ಸಂಡಿಗೆ ತಿನ್ನುವಂತೆನಿಸಿದೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.