ಕೌಲೇದುರ್ಗ ಕೋಟೆ, ಚಿತ್ರದುರ್ಗದ ಕೋಟೆಯಂತೇ ಏಳು ಸುತ್ತಿನದು.ಶಿಥಿಲಾವಸ್ಥೆಯಲ್ಲಿದ್ದರೂ ತನ್ನ ಇತಿಹಾಸವನ್ನ ಹೇಳುವ ಹಠದಿಂದ ತ್ರಾಣ ಹಿಡಿದು ನಿಂತಿರುವ ಇದರ ಹೆಬ್ಬಾಗಿಲಿನ ಒಳ ಹೊಕ್ಕುತ್ತಿದ್ದ ಹಾಗೇ ರುದ್ರ ರಮಣೀಯ ಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತೆ.ದುರ್ಗದ ಸುತ್ತಲೂ ಹರಡಿನಿಂತ ಕರಿಕಲ್ಲಿನ ಗೋಡೆಗಳು ಒನಕೆಗಾತ್ರದ ಮಲೆ ಮಳೆಗೆ ಸವಾಲು ಹಾಕೋ ಹಾಗೆ ಇಪ್ಪತ್ತೈದು-ಮೂವತ್ತು ಅಡಿ ಎತ್ತರಕ್ಕೆ ಎದೆಯುಬ್ಬಿಸಿ ನಿಂತಿವೆ. ಆದರೂ ಎಷ್ಟೂ ಅಂತ ತಡೆದಾವು? ಶತಶತಮಾನಗಳ ಪೆಟ್ಟು, ಕಗ್ಗಲ್ಲನ್ನೂ ಮೆದುವಾಗಿಸುತ್ತ ನಡೆದಿದೆ.
ಕವಯತ್ರಿ ಚೇತನಾ ತೀರ್ಥಹಳ್ಳಿ ಬರೆದ ವಾರದ ಪ್ರವಾಸ ಕಥನ.
ಅಣ್ಣ ಸೈಕಲ್ಲೊರೆಸಿಟ್ಟುಕೊಂಡು ಬ್ಯಾಟು ಬಾಲು ಕ್ಯಾರಿಯರ್ ಗೆ ಸಿಕ್ಕಿಸಿ ತಯಾರಾಗಿ ನಿಂತಿದ್ದ. ಐದಲ್ಲ, ಹತ್ತಲ್ಲ, ಬರೋಬ್ಬರಿ ಇಪ್ಪತ್ತು ಕಿಲೋಮೀಟರು ದೂರ ಅಂವ ಸೈಕಲ್ಲಲ್ಲಿ ಹೊರಟಿದ್ದಕ್ಕೆ ಅಪ್ಪ ರೇಗಾಡಲು ಶುರುವಿಟ್ಟಿದ್ದರು.
‘ಹೆಣಾ ಹೊರಲಿಕ್ಕೆ ಹೋಗ್ತಾನಂತೇನು ಅಂವ ನಗರಕ್ಕೆ?’
‘ಇಲ್ಲ, ಕ್ರಿಕೆಟ್ ಆಡಕ್ಕೆ’ ಅಪ್ಪನ ಕೂಗಿಗೆ ಅಣ್ಣ ಹೊಸಿಲ ಮೇಲೆ ನಿಂತು ತಣ್ಣಗೆ ಉತ್ತರಿಸಿದ್ದ.
‘ಹೈದರಾಲಿ ಧೋಕಾ ಮಾಡಿ ನಗರ ಸಂಸ್ಥಾನದ ಮ್ಯಾಲ ಏರಿ ಬಂದಾಗ, ಭಾಳ ದೊಡ್ ಯುದ್ಧ ಆತು. ಮನೆ ಮನೆ, ಕೇರಿಕೇರಿಯಿಂದ ಯುವಕ್ರು, ಮುದುಕ್ರು ಅನ್ದೆ ಎಲ್ರೂ ದಂಡಿಗೆದ್ರು. ಯುದ್ಧದಾಗ್ ಎಷ್ಟ್ ಮಂದಿ ಸತ್ರು ಅಂದ್ರ… ಸತ್ ಸೈನಿಕರ ಹೆಣಾ ಹೊರ್ಲಿಕ್ಕೂ ಹೊರಗಿಂದ ಜನಾನ್ ಕರೆಸ್ಬೇಕಾತು!’ ಮಲೆನಾಡಿಗರದಲ್ಲದ ಭಾಷೆಯಲ್ಲಿ ಮಹತ್ತಿನ ಮಠದ ಬಳಿ ಇದ್ದೊಬ್ಬ ಅಯ್ಯ, ಸಂಜಯನ ಕಣ್ಣು ಮಾಡ್ಕೊಂಡು ಏನನ್ನೋ ಕಾಣ್ತಿರೋರ ಹಾಗೆ ಹೇಳ್ತಲೇ ಹೋದರು.
‘ಕಾವಲು ದುರ್ಗ.’ ಅದು ಹೈದರಾಲಿ ಇಟ್ಟ ಹೆಸರು. ಹೆಣಾ ಹೊರಲಿಕ್ಕೂ ದಿಕ್ಕಿಲ್ಲದ ಹಾಗೆ ನಗರದ ಗಂಡಸರು ವೀರ ಮರಣ ಕಂಡಾಗ ಆತ ತನ್ನ ಸೈನ್ಯವನ್ನು ಅಲ್ಲಿಗೆ ತಂದು, ದುರ್ಗದ ಕೋಟೆಯಲ್ಲಿ ಕಾವಲಿಗಿರಿಸಿದ್ದ. ಕೌಲೇದುರ್ಗ ಅಂತಲೇ ಕರೆಸ್ಕೊಳ್ತಿದ್ದ ಕೋಟೆಯನ್ನ ಕಾವಲು ದುರ್ಗ ಅಂತ ಕರೆದ. ಆದರೇನಂತೆ? ಇವತ್ತಿಗೂ ಜನರ ಬಾಯಿಗೆ ಅದು, ಕೌಲೇದುರ್ಗವೇ.
ಆದರೆ ದುರ್ಗಕ್ಕೆ ಹೊಂದಿಕೊಂಡಿದ್ದ ನಗರ ಮಾತ್ರ ಇತ್ತೀಚಿನ ಎಲ್ಲ ಮಲೆನಾಡಿನ ಹಳ್ಳಿಗಳ ಹಾಗೆ ಯುವಕರನ್ನ ಪಟ್ಟಣಗಳಿಗೆ ಅಟ್ಟುತ್ತ, ಬಿದ್ದುಹೋದ ಅಡಿಕೆ ರೇಟಿಗೆ ಹಲುಬುತ್ತ, ಕೈಕೊಟ್ಟ ಶುಂಠಿ, ಉರುಳಾದ ವೆನಿಲ್ಲಾಗಳನ್ನ ಶಪಿಸ್ತಾ, ವಟಗುಟ್ಟುತ್ತ ನಿಂತಿದೆ. ಇಂಥಾ ನಗರವಲ್ಲದ ನಗರಕ್ಕೆ ಸೈಕಲ್ಲು ತುಳ್ಕೊಂಡು ಹೋದ ಅಣ್ಣ, ನೆಟ್ಟಾನೇರ ಮನೆಗೆ ಬಂದನಾ? ಇಲ್ಲ. ಅಂವ ಸುತ್ತಾಡಿ ಬಂದು ಬಾಗಿಲು ತಟ್ಟೋ ಹೊತ್ತಿಗೆ ಒಂದೂವರೆ ದಶಕದ ಹಿಂದಿನ ರಾತ್ರಿ ಒಂಭತ್ತು ಗಂಟೆ! ಹಾಗೆ ಬಂದವನ ಮೈ-ಕೈ ಎಲ್ಲ ಕೆಸರು ಕೆಸರು. ಮುಖ-ಮೂತಿ ತರಚು. ‘ತೆಗ್ದಾ ನನ್ ಮಗ ಮರ್ಯಾದೆಯ. ಯಾರ್ ಹತ್ರವೋ ಕಿತ್ತಾಡ್ಕಂಡು ಬಂದಾನ್ನೋಡು..’ ಅಣ್ಣನ ಗಾಯಕ್ಕೆ ಅಪ್ಪನ ಉಪ್ಪು. ತಗೋ! ಶುರುವಾಯ್ತು ಹೈದರಾಲಿ ಯುದ್ಧ!! ಅಮ್ಮ, ವೀರಮ್ಮಾಜಿಯ ಹಾಗೆ ನಡುವೆ ನುಗ್ಗಿ, ಅಪ್ಪನ ಬಲಕ್ಕೆ ಸೋತು ಹೈರಾಣಾದಳು.
ವೀರಮ್ಮಾಜಿ, ಕೆಳದಿ ಸಂಸ್ಥಾನದ ಕೊನೆಯ ರಾಣಿ. ಹೈದರಾಲಿಯನ್ನ ಧೈರ್ಯದಿಂದ ಎದುರಿಸಿ, ಕೊನೆಗೆ ಕೌಲೇದುರ್ಗದ ಕೋಟೆಯಲ್ಲಿ ರಕ್ಷಣೆಯಲ್ಲಿ ಆಶ್ರಯ ಪಡೆದಿದ್ದಳು. ಹೈದರ್ ಆ ಕೋಟೆಯನ್ನ ವಶಪಡಿಸಿಕೊಂಡಿದ್ದು ಅವಳಿಂದ್ಲೇ. ಇವಳಿಗೂ ಹಿಂದೆ, ಕೆಳದಿಯರಾಣಿ ಚೆನ್ನಮ್ಮಾಜಿ ಇದೇ ಕೋಟೆಯಲ್ಲಿಯೇ ಪಟ್ಟಾಭಿಷಿಕ್ತಳಾಗಿದ್ದಳು.
ಉಧೋ ಅಂತ ನಡೆದೂ ನಡೆದೂ ದುರ್ಗ ಹತ್ತುತ್ತ ಎಂಥದೋ ಸಾಹಸ ಮಾಡುತ್ತಿದ್ದೇವನ್ನೋ ಹಮ್ಮಿಗೆ ಬಿದ್ದಿದ್ದ ನಮಗೆ, ಇದೇ ಕಾಡುಕೋಟೆಯೊಳಗೆ ಖಡ್ಗ ಹಿಡಿದು ಕಾದಾಡಿದ ಹೆಣ್ಣುಮಕ್ಕಳ ಕಥೆ ಕೇಳಿ ಮುಖ ಮುಚ್ಚಿಕೊಳ್ಳುವಷ್ಟು ನಾಚಿಕೆಯಾಯ್ತು. ಇದರಿಂದ ಇನ್ನೂ ಬೀಗಿದ ಅಯ್ಯ, ಅವರ ಹೋರಾಟದ ಕಥೆಯನ್ನು ಎಳೆಳೆಯಾಗಿ ಬಿಚ್ಚಿಟ್ಟರು. ಹಾಗೆ ಅವತ್ತು ಅಣ್ಣ ರಗಳೆ ಎಬ್ಬಿಸಿ ಹೋಗಿಬಂದಿದ್ದನಲ್ಲ, ಬಂದು ಬಯ್ಸಿಕೊಂಡವ ಹಾಸಿಗೆ ಮೇಲೆ ಕುಂತು ಉಡಾಫೆ ಕಣ್ಣು ಎಸೀತಾ ಹೇಳಿದ್ದ. ಹೆಂಗೆ ಛಾಕಾಛಕಾ ಹತ್ತಿಳಿದ್ವಿ ಗೊತ್ತಾ ದುರ್ಗಾನ? ಕ್ರಿಕೆಟ್ಟಿನ ನೆವದಲ್ಲಿ ಹಾಳು ಹುಡುಗರು ನಿಧಿ ಹುಡುಕಲಿಕ್ಕೆ ಹೋಗಿದ್ದರು!
ಇವತ್ತಿಗೂ ನಗರದಲ್ಲಿ ಮನೆ ಕಟ್ಟುವಾಗ, ಬಾವಿ ತೋಡುವಾಗ ಬಂಗಾರ ಸಿಗುತ್ತಲೇ ಇರತ್ತಂತೆ. ಹಳೆ ಮನೆ ಗೋಡೇಲಿ, ಫೌಂಡೇಷನ್ನಲ್ಲಿ ಚಿನ್ನದ ನಾಣ್ಯ ಮುಚ್ಚಿಡ್ತಿದ್ದರಂತೆ! ಕೇಳಿದ್ದಕ್ಕೆ ಅಯ್ಯ ನಕ್ಕರು. ಅಷ್ಟೇ.
ಈ ಕೌಲೇ ದುರ್ಗ ಇರೋದು ತೀರ್ಥಹಳ್ಳಿಯಿಂದ ೨೦ ಕಿಲೋಮೀಟರು ದೂರದಲ್ಲಿ. ಸಹಜವಾಗೇ ದುರ್ಗಮವಾದ, ಕಡಿದಾದ ಬೆಟ್ಟಗುಡ್ಡಗಳ ಸ್ಥಳ ಇದು. ಈ ದುರ್ಗದ ಕೆಳಗಿರೋ ‘ಕೌಲೆ’ ಅನ್ನುವ ಹಳ್ಳಿಯಿಂದಾಗಿಯೇ ಅದಕ್ಕೆ ಕೌಲೇದುರ್ಗ ಅನ್ನೋ ಹೆಸರು ಬಂದಿದ್ದು. ಪುರಾಣೇತಿಹಾಸದ ಕಾಲದಲ್ಲಿ ಇಲ್ಲಿನ ಅರಣ್ಯಗಳನ್ನ ‘ಕಾಮ್ಯಕ ವನ’ ಅಂತ ಕರೆಯಲಾಗ್ತಿತ್ತಂತೆ. ಅಂದಹಾಗೆ, ಕೌಲೇದುರ್ಗವನ್ನ ಕೆಲವು ಶಾಸನಗಳಲ್ಲಿ ‘ಭುವನಗಿರಿದುರ್ಗ’ ಅಂತಲೂ ಕರೆಯಲಾಗಿದೆ. ಇದು, ಕೆಳದಿಯ ಅರಸರು ಇಟ್ಟ ಹೆಸರು.
ಅಂದ ಹಾಗೆ, ಮೊದಲ ಬಾರಿಗೆ ಕೌಲೇದುರ್ಗದ ಮೇಲೊಂದು ಕೋಟೆ ಕಟ್ಟಿಸಿದ್ದು ಬೆಳಗುತ್ತಿ ನಾಡಿನ ಪಾಳೇಗಾರರು. ನಂತರ ಅದು ಕೌಲೆ ಗ್ರಾಮಾಧಿಕಾರಿಗಳಾದ ತೊಲೆತಮ್ಮ-ಮುಂಡಿಗೆ ತಮ್ಮ ಅನ್ನುವ ಸಹೋದರ ಸ್ವಾಧೀನಕ್ಕೆ ಬಂದು, ಅವರು ಕೋಟೆಯನ್ನ ಮತ್ತಷ್ಟು ಭದ್ರಪಡಿಸಿದರು. ಇದು, ಪಾಳೇಗಾರರಿಂದ ವಿಜಯನಗರದ ಕೈಗೆ, ಅವರ ನಂತರದ ಅರಾಜಕತೆಯ ಕಾಲದಲ್ಲಿ ಕೆಳದಿ ಅರಸರ ಕೈಗೆ, ಅವರಿಂದ ಹೈದರನ ವಶಕ್ಕೆ, ಅವನ ಮಗ ಟಿಪ್ಪುವಿನಿಂದ ಆಂಗ್ಲರ ತೆಕ್ಕೆಗೆ ದಾಟಿ ದಾಟಿ, ಭಾರತದೊಡನೆ ತಾನೂ ಸ್ವತಂತ್ರವಾಯ್ತು.
ಕೌಲೇದುರ್ಗ ಕೋಟೆ, ಚಿತ್ರದುರ್ಗದ ಕೋಟೆಯಂತೇ ಏಳು ಸುತ್ತಿನದು. ಸುರಕ್ಷತೆ ಮಾತ್ರವಲ್ಲ ನಿರ್ಮಾಣದ ದೃಷ್ಟಿಯಿಂದಲೂ ಭರ್ಜರಿಯಾಗಿ ಕಾಣುತ್ತದೆ ಇದು. ಶಿಥಿಲಾವಸ್ಥೆಯಲ್ಲಿದ್ದರೂ ತನ್ನ ಇತಿಹಾಸವನ್ನ ಹೇಳುವ ಹಠದಿಂದ ತ್ರಾಣ ಹಿಡಿದು ನಿಂತಿರುವ ಇದರ ಹೆಬ್ಬಾಗಿಲಿನ ಒಳ ಹೊಕ್ಕುತ್ತಿದ್ದ ಹಾಗೇ ರುದ್ರ ರಮಣೀಯ ಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತೆ. ದುರ್ಗದ ಬೆಟ್ಟಕ್ಕೆ ಹೋಗುವಾಗ ನಮಗೆ ಮೊದಲು ಸಿಗೋದು ಮಹಾಮಹತ್ತಿನ ಮಠ. ಕೌಲೇದುರ್ಗದ ಇತಿಹಾಸಕ್ಕೂ, ಮಠಕ್ಕೂ , ಕೆಳದಿ ಸಂಸ್ಥಾನಕ್ಕೂ ಬಹಳ ಹಿಂದಿನ ನಂಟು. ದುರ್ಗದ ಕಥೆ ಹೇಳೋದೆಂದರೆ, ಮಹತ್ತಿನ ಮಠದವರಿಗೆ ಎಲ್ಲಿಲ್ಲದ ಹುರುಪು. ಅಲ್ಲಿನ ಸ್ವಾಮೀಜಿ, ಕೌಲೇದುರ್ಗದ ಇತಿಹಾಸದ ಮೇಲೆ ಬೆಳಕುಚೆಲ್ಲುವಂಥ ಕಾರ್ಯಕ್ರಮಗಳನ್ನ ನಿರಂತರವಾಗಿ ಹಮ್ಮಿಕೊಳ್ತಿರ್ತಾರೆ. ಈ ಮಠ ದಾಟಿ ಮುಂದೆ ಬಂದರೆ, ಗ್ರಾಮದ ಸುತ್ತ ಇರೋ ರಕ್ಷಣಾಗೋಡೆಗಳನ್ನ ನೋಡಬಹುದು. ಇವು ಕೂಡ ಈಗಲೋ ಆಗಲೋ ಅಂತ ಮೃತ್ಯುಂಜಯ ಜಪ ಮಾಡ್ತಾ ತಮ್ಮ ಪಾಳಿಗೆ ಕಾದು ಕುಂತಿವೆ. ದುರ್ಗದ ಸುತ್ತಲೂ ಹರಡಿನಿಂತ ಕರಿಕಲ್ಲಿನ ಗೋಡೆಗಳು ಒನಕೆಗಾತ್ರದ ಮಲೆ ಮಳೆಗೆ ಸವಾಲು ಹಾಕೋ ಹಾಗೆ ಇಪ್ಪತ್ತೈದು-ಮೂವತ್ತು ಅಡಿ ಎತ್ತರಕ್ಕೆ ಎದೆಯುಬ್ಬಿಸಿ ನಿಂತಿವೆ. ಆದರೂ ಎಷ್ಟೂ ಅಂತ ತಡೆದಾವು? ಶತಶತಮಾನಗಳ ಪೆಟ್ಟು, ಕಗ್ಗಲ್ಲನ್ನೂ ಮೆದುವಾಗಿಸುತ್ತ ನಡೆದಿದೆ. ಇಲ್ಲಿಂದ ಮುಂದೆ, ಉರುಟು ಕಲ್ಲುಗಳ ಏರುದಾರಿ. ಹೀಗೇ ಹತ್ತುತ್ತ ಹೆಚ್ಚೂಕಡಿಮೆ ಒಂದು ಕಿಲೋಮೀಟರ್ ದೂರ ಬಂದರೆ, ಕೋಟೆಯ ಮೊದಲ ಸುತ್ತಿನ ಹೆಬ್ಬಾಗಿಲು ಬಾಯಿ ಕಳ್ಕೊಂಡು ಸ್ವಾಗತಕ್ಕೆ ಸಜ್ಜಾಗಿ ನಿಂತಿರುತ್ತೆ.
ಈ ಹೆಬ್ಬಾಗಿಲ ಮುಂದೊಂದು ಜಗಲಿ, ಕಾವಲುಗಾರರ ಗೂಡು. ಹೀಗೇ… ಒಂದು, ಎರಡು, ಮೂರು, ನಾಲ್ಕು, ಐದನೇ ಸುತ್ತಿನವರೆಗೂ ತಲೆ ಎತ್ತಿ ನಿಂತಿರುವ ಹೆಬ್ಬಾಗಿಲುಗಳು. ಈ ಕೋಟೆ ಕೈಚಾಚಿ ನಿಂತ ಹಾದಿಯುದ್ದಕ್ಕೂ ದಟ್ಟ ಕಾಡು, ಹಚ್ಚ ಹಸಿರು. ಇದರ ನಡುವಲ್ಲಿ ಕುದುರೆ, ಆನೆ, ಪದಾತಿದಳಗಳಿಗೆ ಸಾಗಲು ಸುಲಭವಾಗುವಂತೆ ದುಂಡುಕಲ್ಲಿನ ಏರು ರಸ್ತೆ.
ಆದ್ರೆ, ಇಷ್ಟೆಲ್ಲ ನಿರ್ಮಾಣಗಳಾಗಿದ್ದು ಮೂಲ ನಿರ್ಮಾಣಕಾರರಿಂದಲ್ಲ, ಕೆಳದಿಯ ಅರಸರಿಂದ. ಅದರಲ್ಲೂ ಹದಿನಾರನೆಯ ಶತಮಾನದಲ್ಲಿ ಆಳಿದ ವೆಂಕಟಪ್ಪ ನಾಯಕನಿಂದ. ಈತ, ಪಾಳೆಯಗಾರರಿಂದ ಈ ಕೋಟೆಯನ್ನು ಗೆದ್ದುಕೊಂಡಿದ್ದ. ಅಂದಿನ ಆಳರಸರಿಗೆ ಈ ದುರ್ಗಮ ಸುಂದರಿಯೊಂದು ವೀರಪಣ! ವೆಂಕಟಪ್ಪ ನಾಯಕ ಬಹಳ ಬುದ್ಧಿವಂತ ಅರಸ. ಬೆಟ್ಟದ ಮೇಲೆ ನೀರು ಸಂಗ್ರಹಿಸೋ ತೊಟ್ಟಿಗಳನ್ನ ಕಟ್ಟಿಸಿ, ಅಲ್ಲಿಂದ ಕಾಲುವೆ ಮೂಲಕ ಅದು ದೇವಸ್ಥಾನಕ್ಕೆ, ಅರಮನೆಗೆ ಹರಿದು ಬರುವಂತೆ ಏರ್ಪಾಟು ಮಾಡಿಸಿದ್ದ. ಕೋಟೆಯ ಹೊರಗೆ ಅಗ್ರಹಾರ ಕಟ್ಟಿಸಿ, ಅಲ್ಲೊಂದು ಸಮುದಾಯ ಭವನ ಕಟ್ಟಿಸಿದ್ದ. ಅದೇ ಕಲ್ಯಾಣ ಮಹಲ್. ಇದೊಂದು ಅತಿ ಸುಂದರವಾದ ಕಟ್ಟಡವಾಗಿದ್ದು, ಇಂದು ಅದರ ಅವಶೇಷಗಳನ್ನಷ್ಟೆ ನೋಡಬಹುದು.
ಇವಷ್ಟೇ ಅಲ್ಲದೆ, ಈ ದುರ್ಗದ ಒಡಲಲ್ಲಿ ಇನ್ನೂ ಸಾಕಷ್ಟು ದೇವಸ್ಥಾನಗಳು, ಶಾಸನಗಳು, ಸಮಾಧಿಗಳು ಇವೆ. ಕೋಟೆಯ ಹೊರಗೆ, ಅಂದಿನ ಅರಸರು, ಕಿಲ್ಲೇದಾರರು ಕಟ್ಟಿಸಿದ ಕೆರೆಗಳಿದ್ದು, ಅವು ಇಂದಿಗೂ ಉಪಯುಕ್ತವಾಗಿವೆ. ಹೀಗೇ ದುರ್ಗದ ಅಚ್ಚರಿಗಳನ್ನ ನಮ್ಮೆದುರು ಕಾಣಿಸುತ್ತ ನಡೆದ ಅಯ್ಯ, ಅದು ಕೆಳದಿ ಅರಸರ ಟಂಕಸಾಲೆಗೂ ಜಾಗ ನೀಡಿತ್ತೆಂದು ಹೇಳಿದರು. ಆದರೆ, ಅದು ಇಂಥದ್ದೇ ಜಾಗದಲ್ಲಿ ಎಂದೇನೂ ನಿರ್ದಿಷ್ಟವಾಗಿ ತೋರಿಸದೇ, ಆ ಬಗ್ಗೆ ಶಾಸನಗಳಲ್ಲಿ ಹೇಳಲಾಗಿದೆ ಅಂತ ಮಾತಿನ ದಾಖಲೆ ಒದಗಿಸಿದಾಗ, ನಮಗೂ ಇದ್ದಿರಬಹುದು ಅನಿಸಿತು.
ಇಳಿ ಸಂಜೆಯಾಗಿತ್ತು. ನಾವೀಗ ದುರ್ಗದ ತುತ್ತ ತುದಿಯಲ್ಲಿ. ಏಳುಸುತ್ತಿನ ಕೋಟೆ ಅಮಾಯಕವಾಗಿ ಬಿದ್ದುಕೊಂಡಿತ್ತು. ಯುದ್ಧದ, ರಹಸ್ಯದ, ಪಿತೂರಿಯ, ಸೈನಿಕತನದಲ್ಲಿ ಉಶ್ ಉಶ್ ಆಗಿಹೋದ ಅದೆಷ್ಟೋ ಪ್ರೇಮಗಾಥೆಗಳ, ವಿರಹದುರಿಯ ಕೊಲಾಜಿನಂತೆ ಕಂಡಿತು. ಎಡಕ್ಕೆ ತಿರುಗಿದರೆ, ಉರಿದು, ಉರಿಸಿ, ಬೇಯಿಸಿ ಸಾಕಾದ ಸೂರ್ಯ, ತಣ್ಣಗಾಗಲು ಹವಣಿಸ್ತ ಸಮುದ್ರಕ್ಕೆ ಜಾರಲು ಸಜ್ಜಾಗುತ್ತಿದ್ದ. ಇನ್ನೂ ಅಳಿದುಳಿದ ಕೆಂಪು ಕಕ್ಕುತ್ತಲೇ ಇದ್ದ.
ಆಗುಂಬೆಯಲ್ಲಿ ನಿಂತಾಗ ಖುಶಿ ಕೊಡುವ, ಕವನ ಹುಟ್ಟಿಸುವ ಸೂರ್ಯಾಸ್ತ, ಇಲ್ಲಿ ನೆತ್ತರುಗುಳುತ್ತಿರೋ ಹಾಗೆ ಕಾಣಿಸ್ತಿತ್ತು. ಸೂತಕದ ವಾಸನೆ ಗವ್ವನೆ ಅಡರತೊಡಗಿತು. ಯಾರೋ ಕಳ್ಳು ಕಾಯಿಸಲು ಶುರುವಿಟ್ಟಿದ್ದರು. ಕಥೆ ಹೇಳುತ್ತ ಗಕ್ಕನೆ ನಿಂತ ಅಯ್ಯ, ಸೇವಕರ ವಂಚನೆಯಿಂದ ಸತ್ತ ಕೆಳದಿಯ ಸೋಮಶೇಖರನಾಯಕನ ಪುನರವತಾರದ ಹಾಗೆ, ಏನನ್ನೋ ನೆನೆಯುತ್ತ, ಕಲ್ಲುಕಲ್ಲನ್ನೂ ತಬ್ಬಿಕೊಳ್ಳುತ್ತ, ಗೊಣಗುತ್ತ ಉಳಿದುಬಿಟ್ಟರು.
ಅರೆ! ಅಪ್ಪ ಇವತ್ತು ನಗರಕ್ಕೆ ಹೋಗ್ತೀವಿ ಅಂದಾಗ ಹೆಣಾ ಹೊರಲಿಕ್ಕಾ? ಅಂತ ಕೇಳಲೇ ಇಲ್ಲ! ಆದರೂ ಮನಸ್ಸು ಹೆಣಭಾರವಾಗಿತ್ತು. ದುರ್ಗದ ಭವ್ಯತೆಯ ಹಿಂದಿನ ನರಳುವಿಕೆಗಳು ಕಥೆಯಾಗಿ ಅಲ್ಲಿ ಕುಂತುಬಿಟ್ಟಿತ್ತು.
ಕೌಲೇ ದುರ್ಗಕ್ಕೆ ಹೋಗುವವರಿಗೆ ಸೂಚನೆ- ಈ ಕವಲೇ ದುರ್ಗಕ್ಕೆ ಹೋಗೋದು ಬಹಳ ಸುಲಭ. ರಾಜ್ಯದ ಬಹುತೇಕ ಪ್ರಮುಖ ನಗರಗಳಿಂದ ಶಿವಮೊಗ್ಗೆಗೆ ಬಸ್ ಸೌಕರ್ಯವಿದ್ದೇ ಇದೆ. ಅಲ್ಲಿಂದ ತೀರ್ಥಹಳ್ಳಿಗೆ ಕೇವಲ ೬೦ ಕಿಲೋಮೀಟರು. ಅಲ್ಲಿಂದ ಕವಲೇದುರ್ಗಕ್ಕೆ ಕೇವಲ ೧೬ ಕಿಲೋಮೀಟರು. ಹದಿನೈದಿಪ್ಪತ್ತು ನಿಮಿಷದ ಪ್ರಯಾಣವಷ್ಟೆ. ತೀರ್ಥಹಳ್ಳಿಯಿಂದ ಗಂಟೆಗೊಂದರಂತೆ ಬಸ್ಸುಗಳೂ ದೊರೆಯುತ್ತವೆ. ಸಮುದ್ರ ಮಟ್ಟದಿಂದ ೫೦೫೬ ಅಡಿ ಎತ್ತರವಿರುವ ದುರ್ಗಕ್ಕೆ ಚಳಿಗಾಲದಲ್ಲಿ ಭೇಟಿಕೊಡುವವರು ಸೂಕ್ತ ವ್ಯವಸ್ಥೆಯೊಂದಿಗೆ ಹೊರಡುವುದೊಳಿತು. ಮಳೆಗಾಲದಲ್ಲಿ ಚಾರಣದ ಸಾಹಸ ಬೇಡ ಅನ್ನೋದು ಸಲಹೆ. ಅದನ್ನ ಮೀರೋದು ಚಾರಣಿಗರ ಹುಮ್ಮಸ್ಸು! ಅಂದಹಾಗೆ, ಕವಲೇದುರ್ಗ ಒಂದು ರುದ್ರ ರಮಣೀಯ ಸ್ಥಳ. ಗುಂಪಾಗಿ ಹೋಗುವುದು ಉಚಿತ. ದಯವಿಟ್ಟು ತಿಂಡಿ ತೀರ್ಥ (ಎಲ್ಲ ಬಗೆಯ) ಕೊಂಡೊಯ್ದ ಪ್ಲಾಸ್ಟಿಕ್ ಕಂಟೈನರ್ ಗಳನ್ನು ಅಲ್ಲೇ ಬಿಸುಟು ತಣ್ಣಗೆ ಮಲಗಿರುವ ನಿಸರ್ಗಕ್ಕೆ ಧಕ್ಕೆ ತರಬಾರದಾಗಿ ವಿನಂತಿ.
ಕವಯತ್ರಿ, ಲೇಖಕಿ, ಪತ್ರಕರ್ತೆ ಮತ್ತು ಸಾಮಾಜಿಕ ಹೋರಾಟಗಾರ್ತಿ. ತೀರ್ಥಹಳ್ಳಿಯವರು. ಈಗ ಬೆಂಗಳೂರು. ಭಾಮಿನಿ ಷಟ್ಪದಿ ಇವರ ಹೆಸರಾಂತ ಅಂಕಣ ಕಾದಂಬರಿ.