ಈ ಕಥೆಯು ಅನಂತ ಪಲಕುಗಳ ಕಾಪಿ ರಾಗದಂತೆ ಕಾಡುತ್ತದೆ. ಕಲಿತು ಪಟ್ಟಣದಲ್ಲಿ ಕೆಲಸಕ್ಕೆ ಸೇರುವ ಮಕ್ಕಳ ತಂದೆ ತಾಯಿಯಂದಿರ ನೋವಿನ ಶಾಯರಿಯಿದು. ವಯೋ ಸಹಜ ಗಜಿ ಬಿಜಿಗಳು ಬಾಂಬೆಯ ಲೋಕಲ್ ಟ್ರೈನ್‌ನಲ್ಲಿನ ಜನರಂತೆಯೇ ಮನದಲ್ಲಿ ತುಂಬಿದ್ದರೂ ಅವನ್ನೆಲ್ಲಾ ಮೀರಿ ಪ್ರೀತಿಯೊಂದಿರೆ ಸಾಕು ಜೀವಕ್ಕೆ ಎಂದು ಬದುಕುವ ಲೋಕದ ಎಲ್ಲಾ ತಂದೆ ತಾಯಿಯರ ಅಂತರಾಳವಿದು. ಚಿತ್ರದ ತುಂಬೆಲ್ಲಾ ಭಾವನಾತ್ಮಕ ಅಭಿವ್ಯಕ್ತಿ ಹರಡಿಕೊಂಡಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂ ಸಿನಿಮಾ ನಿರ್ದೇಶಕ ರತೀಶ್ ಪೊದುವಾಳ್ ನಿರ್ದೇಶನದ ‘ಆಂಡ್ರಾಯ್ಡ್ ಕುಂಜಪ್ಪನ್ Ver 5.25’ ಸಿನಿಮಾದ ವಿಶ್ಲೇಷಣೆ

ಅವಳ ಗೈರುಹಾಜರಿ 
ಉಸಿರಿನ ಕೊನೆಯ ಪಯಣ 
ಉಳಿದ ಮಾತುಗಳು 
ಎಲ್ಲವೂ ಕಾಡುತ್ತವೆ ನೆನಪುಗಳಲ್ಲಿ 
ಕಾರಣವಿದೆ 
ನದಿಯ ಬಾಜು, ಅಂಗಳದಲ್ಲಿ ಹೆಜ್ಜೆ ಊರುವವರಿಗೆ 
ಬಾಯಾರಿಕೆಯಾಗುವುದು ತೀವ್ರ ಬರಗಾಲದಲ್ಲೇ ಅಲ್ಲವೇ 

– ಮರಕುಟಿಗ 

(ರತೀಶ್ ಪೊದುವಾಳ್)

ಎಲ್ಲದರ ಮಹತ್ವ ಅರಿವಾಗುವುದು ಅವುಗಳ ಖಾಲಿತನದಲ್ಲಿ. ಬದುಕಿನ ನಡಿಗೆಯ ತುಂಬೆಲ್ಲಾ ಭುಜದ ಮೇಲೆ ಕುಳಿತ ತೋಳು, ಅವಳು ಕೆನ್ನೆಗಿಂಡಿದಾಗ ಮೂಡುವ ನಗು, ಅಮ್ಮನ ಅನನ್ಯ ಪ್ರೇಮ, ಅಪ್ಪನ ಆಸ್ಥೆ ಎಲ್ಲವೂ ತೀರಾ ಮಾಮೂಲಿ ಎಂದು ಭಾಸವಾಗುತ್ತದೆ. ಆದರೆ ಅಮ್ಮ ಉಳಿಸಿ ಹೋದ ಮಾಸಿದ ಬಣ್ಣದ ಅನಾಥ ಸೀರೆಗಳು, ಅಪ್ಪನ ಮುರಿದ ಕನ್ನಡಕ, ಕೆನ್ನೆಯ ಬಳಿ ಆಟವಾಡುತ್ತಿದ್ದ ಅವಳ ಜುಮುಕಿ, ಗೆಳೆಯನ ವಿಚಾರಣೆ, ಉಭಯ ಕುಶಲೋಪರಿ ಎಲ್ಲವೂ ಕಾಡುವುದು ಅವರೆಲ್ಲರೂ ನೆರಳಿಗೂ ನಿಲುಕದೆ ದೂರ ಸರಿದಾಗಲೇ. ಜೊತೆ ಜೊತೆಯಲಿ ಸಾಗುವ ಪ್ರತಿ ಸಂಗತಿಗಳು ಸಾಮಾನ್ಯವೆನಿಸಿ ಗಾಜಿನ ಪರದೆಯೊಳಗೆ ಕುಳಿತ ವಿಸ್ಮಯವ ಅಪ್ಪಿಕೊಳ್ಳಲು ಹೋಗುವ ಪ್ರಯತ್ನದಲ್ಲಿ, ನಿಷ್ಕಲ್ಮಶ ಒಲವ ಬೀರುವ ಕಣ್ಣುಗಳು ಕಳೆದು ಹೋಗುತ್ತದೆ. ಒಂಥರಾ ನಿವೃತ್ತಿಯ ನಂತರ ಮಾತು ಹರಿಸಲು ಹಂಬಲಿಸುವ ಬಸ್ಸು ನಿರ್ವಾಹಕನ ತೆರನಾದ ಬದುಕು ಎದುರಾಗುತ್ತದೆ. ಹೀಗೆ, ಕಾಣೆಯಾದ ಪ್ರೀತಿ, ಭಾವನೆಗಳ ಅರ್ಥವಿಸಿಕೊಳ್ಳದ ಜಗತ್ತು, ದೂರ ಸಾಗುವ ಮಕ್ಕಳು, ವಯಸ್ಸು ನೀಡುವ ಗೊಂದಲ, ತಲ್ಲಣಗಳು ಇವೆಲ್ಲವ ಹೊತ್ತು ಸಾಗುವ ಒಂದು ಭಾವಪೂರ್ಣ ಸಿಹಿ ಕಹಿಯ ಮಿಶ್ರಣವೇ ರತೀಶ್ ಪೊದುವಾಳ್ ನಿರ್ದೇಶನದ ‘ಆಂಡ್ರಾಯ್ಡ್ ಕುಂಜಪ್ಪನ್ Ver 5.25’ ಸಿನಿಮಾ.

ಅವರು ಭಾಸ್ಕರನ್. ಅರ್ಧ ಶತಮಾನದ ಓಟ ಮುಗಿಸಿ ಮುನ್ನಡೆಯುತ್ತಿರುವ ವ್ಯಕ್ತಿ. ಸಂಪ್ರದಾಯಗಳ ಕಠಿಣ ಪರಿಪಾಲಕ. ಬೇರೆ ಮನೆಗಳಲ್ಲಿ ಮಿಕ್ಸರ್ ತಿರುಗುತ್ತಿದ್ದರೂ, ಟಿವಿ ವಟಗುಟ್ಟುತ್ತಿದ್ದರೂ ಭಾಸ್ಕರನ್ ಮನೆಯಲ್ಲಿ ಕಲ್ಲುಗಳೇ ಮೊದಲು ತೆಂಗಿನ ಪದರದ ರುಚಿಯ ಸವಿಯುವುದು ಮತ್ತು ಪತ್ರಿಕೆಯೇ ಸುದ್ದಿಯ ಮೂಲ. ಪತ್ನಿಯನ್ನು ಕಳೆದುಕೊಂಡಿದ್ದ ಅವರಿಗೆ ಸುಬ್ರಮಣ್ಯನ್ ಏಕೈಕ ಸುಪುತ್ರ . ಮಗ ಇಂಜಿನಿಯರಿಂಗ್ ಪೂರ್ಣಗೊಳಿಸಿ, ಕೆಲಸಕ್ಕೆ ಹೋಗುತ್ತೇನೆಂದರೂ ಭಾಸ್ಕರನ್‌ಗೆ ದೂರದ ಊರಿಗೆ ಕಳುಹಿಸಲು ಇಷ್ಟವಿಲ್ಲ. ಇರುವ ಒಬ್ಬ ಮಗನ ಮಾತು ದೂರವಾದರೆ ತನ್ನ ಬದುಕು ಯಾರಿಗೂ ಬೇಡದ, ಹೊಸ ಸೇತುವೆಯ ಪಡೆದ ನದಿಯ ತೀರದ ಅಂಬಿಗನ ತೆರನಾದೀತು ಎಂಬ ದೂರಾಲೋಚನೆ. ಆದರೂ ಮಗನಿಗೆ ರಷ್ಯಾದಲ್ಲಿ ಕೆಲಸ ಸಿಕ್ಕಾಗ, ಜನರ ಮತ್ತು ಕಾಲದ ಒತ್ತಡಕ್ಕೆ ಸೋತ ಭಾಸ್ಕರನ್ ಆತನಿಗೆ ಹೋಗಲು ಒಲ್ಲದ ಮನಸ್ಸಿನಿಂದಲೇ ಸಮ್ಮತಿಯ ನೀಡುತ್ತಾರೆ. ಅದಕ್ಕೂ ಮೊದಲು ಸುಬ್ರಹ್ಮಣ್ಯನ್ ತಂದೆಯ ಅನಾರೋಗ್ಯ, ಅಸಹಾಯಕತೆಗೆ ಉತ್ತರವಾಗಿ ಹೋಂ ನರ್ಸ್‌ಗಳನ್ನು ನಿಯೋಜಿಸುತ್ತಾನೆ. ಆದರೆ ಭಾಸ್ಕರನ್‌ರ ಪ್ರಚಂಡ ‘ಇದಮಿಥಂ’ ಬದುಕಿನ ಶೈಲಿಗೆ ಅವರೆಲ್ಲರೂ ದಿನಗಳು ರದ್ದಿಯಾಗುತ್ತಿದ್ದಂತೆಯೇ ಬಂದ ದಾರಿಯಲ್ಲೇ ನಾಪತ್ತೆಯಾಗುತ್ತಾರೆ. ಅತ್ತ ರಷ್ಯಾದಲ್ಲಿ ಕೆಲಸ ಮಾಡುತ್ತಿರಬೇಕಾದರೆ ಸುಬ್ರಮಣ್ಯನ್‌ಗೆ ಮಲಯಾಳಿ ಮೂಲದ ಜಪಾನ್ ಸಂಜಾತೆ ಹಿಟೋಮಿಯೊಂದಿಗೆ ಪ್ರೇಮಾಂಕುರಗೊಳ್ಳುತ್ತದೆ. ಆಗ ಅಲ್ಲಿ ಸಂಶೋಧಿಸಿದ್ದ ಮನುಷ್ಯರಂತೆಯೇ ಕೆಲಸ ನಿರ್ವಹಿಸಬಲ್ಲ ರೋಬೋಟ್ ಅನ್ನು ಪ್ರಾಯೋಗಿಕ ಪರೀಕ್ಷಾರ್ಥದ ಅಂಗವಾಗಿ ಸುಬ್ರಮಣ್ಯನ್ ತನ್ನ ತಂದೆಯ ಬಳಿಗೆ ತೆಗೆದುಕೊಂಡು ಹೋಗುತ್ತಾನೆ. ಮನುಷ್ಯರ ಪಡಿಯಚ್ಚಿನಂತೆಯೇ ವರ್ತಿಸುವ ರೋಬೋಟ್ ಭಾಸ್ಕರನ್‌ರ ನಿರಂತರ ನಿರಾಕರಣೆಗೆ ಒಳಗಾದರೂ, ಬದುಕನ್ನು ಜಡಿಮಳೆಯಂತೆ ಕಾಡಿ, ಒದ್ದೆಗೊಳಿಸಿದ್ದ ಒಂಟಿತನ, ಪ್ರೀತಿಯ ಅಲಭ್ಯತೆಯು ಉಡುಗೊರೆಯಾಗಿ ನೀಡಿದ್ದ ಖಾಲಿತನಕ್ಕೆಲ್ಲಾ ಮುಲಾಮಿನಂತೆ, ಜಾದೂಗಾರನ ಮಾಯಾ ಕೋಲಿನಂತೆ  ಆಗಮಿಸಿದಂತೆ ಭಾಸವಾಗುತಿತ್ತು ಅವರಿಗೆ. ನಿಧಾನವಾಗಿ ರೋಬೋಟ್ ಯಾನೆ ಆಂಡ್ರಾಯ್ಡ್ ಕುಂಜಪ್ಪನ್ ಭಾಸ್ಕರನ್‌ರ ಮಾನಸ ಪುತ್ರನೇ ಆಯಿತು.

ಅಮ್ಮ ಉಳಿಸಿ ಹೋದ ಮಾಸಿದ ಬಣ್ಣದ ಅನಾಥ ಸೀರೆಗಳು, ಅಪ್ಪನ ಮುರಿದ ಕನ್ನಡಕ, ಕೆನ್ನೆಯ ಬಳಿ ಆಟವಾಡುತ್ತಿದ್ದ ಅವಳ ಜುಮುಕಿ, ಗೆಳೆಯನ ವಿಚಾರಣೆ, ಉಭಯ ಕುಶಲೋಪರಿ ಎಲ್ಲವೂ ಕಾಡುವುದು ಅವರೆಲ್ಲರೂ ನೆರಳಿಗೂ ನಿಲುಕದೆ ದೂರ ಸರಿದಾಗಲೇ. ಜೊತೆ ಜೊತೆಯಲಿ ಸಾಗುವ ಪ್ರತಿ ಸಂಗತಿಗಳು ಸಾಮಾನ್ಯವೆನಿಸಿ ಗಾಜಿನ ಪರದೆಯೊಳಗೆ ಕುಳಿತ ವಿಸ್ಮಯವ ಅಪ್ಪಿಕೊಳ್ಳಲು ಹೋಗುವ ಪ್ರಯತ್ನದಲ್ಲಿ, ನಿಷ್ಕಲ್ಮಶ ಒಲವ ಬೀರುವ ಕಣ್ಣುಗಳು ಕಳೆದು ಹೋಗುತ್ತದೆ.

ಆಂಡ್ರಾಯ್ಡ್ ಕುಂಜಪ್ಪನ್ ದಿನಸಿ ಸಾಮಗ್ರಿಗಳು, ತರಕಾರಿ, ಪತ್ರಿಕೆಗಳ ಕೊಂಡು ತರುತಿತ್ತು. ಅಡುಗೆ, ಬಟ್ಟೆ ಒಗೆಯುವುದು ಹೀಗೆ ದೈನಂದಿನ ಕೆಲಸಗಳಿಗೆ ಸಹಾಯ ಮಾಡುತಿತ್ತು. ಸ್ನಾನದ ನಂತರ ಒದ್ದೆ ತಲೆಯನ್ನು ಬಟ್ಟೆ ಹಿಡಿದು ಬೆಚ್ಚಗೆ ಮಾಡುತಿತ್ತು. ಫೇಸ್ಬುಕ್ ಮೂಲಕ ಭಾಸ್ಕರನ್‌ರ ಹಳೆಯ ಪ್ರೇಯಸಿಯ ಹುಡುಕಿ, ಅಂತಿಮ ಪೂರ್ಣವಿರಾಮವಿಟ್ಟ ಕಥೆಯು ಪುನರಾರಂಭಗೊಳ್ಳಲು ಕಾರಣಕರ್ತವಾಯಿತು. ಒಟ್ಟಾರೆಯಾಗಿ, ಅದರ ನಿರಪೇಕ್ಷ ಮನಸ್ಥಿತಿಯ ಕೆಲಸಗಳು ಭಾಸ್ಕರನ್ ಹೃದಯ ಗೆಲ್ಲುತ್ತಲೇ ಹೋದವು. ಮಗನ ಗೈರು ಮರೆತೇ ಹೋಗುವಂತೆ, ಪುತ್ರನಿಗಿಂತಲೂ ಹೆಚ್ಚು ಪ್ರೀತಿ, ಸಮಯ ಅವರಿಗೆ ಕುಂಜಪ್ಪನಲ್ಲಿ ದೊರಕುತಿತ್ತು. ಆದ್ದರಿಂದ ಭಾಸ್ಕರನ್, ಮಾನಸಿಕವಾಗಿ ಅದು ತನ್ನಂತೆಯೇ ಒಂದು ಜೀವವೆಂಬ ನಿರ್ಧಾರ ಮಾಡಿಕೊಂಡು ಅರೆಕ್ಷಣವೂ ಕುಂಜಪ್ಪನಿಲ್ಲದೇ ಇರಲು ಸಾಧ್ಯವಿಲ್ಲ ಎಂಬ ಭಾವಕ್ಕೆ ಬಂದು ತಲುಪಿದರು. ಆದರೆ ರೋಬೋಟ್‌ನ ಪ್ರಾಯೋಗಿಕ ಪರೀಕ್ಷಾ ಹಂತದ ಸಮಯ ಮುಗಿದದ್ದರಿಂದ ಅದನ್ನು ಮರಳಿ ಒಪ್ಪಿಸಬೇಕೆಂದು ತನ್ನ ಮೇಲುಸ್ತುವಾರಕ ತಿಳಿಸಿದಾಗ, ಸುಬ್ರಮಣ್ಯನ್‌ಗೆ ದಿಕ್ಕು ತೋಚದಂತಾಗುತ್ತದೆ. ಯಾಕೆಂದರೆ ಅದಾಗಲೇ ಒಂದು ರೀತಿಯಲ್ಲಿ ಮೀನು ಸಲಿಲವ ಅಪ್ಪಿಕೊಂಡಂತೆ, ಭಾನು ಬಾನನ್ನು ಹಿಡಿದುಕೊಂಡಂತೆ, ಭಾಸ್ಕರನ್ ಮತ್ತು ಕುಂಜಪ್ಪನ್ ಮಧ್ಯೆ ಬಿಗಿಯಾದ ಬಂಧವೇರ್ಪಟ್ಟು ಬಿಡಿಸಲಾಗದ ಹಂತಕ್ಕೆ ತಲುಪಿರುತ್ತದೆ. ಕೊನೆಗೆ ಎದುರಾಗುವ ತಿರುವುಗಳ ಪರಿಣಾಮ ಕುಂಜಪ್ಪನ ಜೊತೆಯಾಗಿ ಗೊತ್ತಿಲ್ಲದಂತೆ ಮನೆ ಬಿಟ್ಟು ಹೋಗುವ ಭಾಸ್ಕರನ್ ಮನೆಗೆ ಮರಳುವುದು ಕುಂಜಪ್ಪನ ಕಳೆದುಕೊಂಡು. ಹೀಗೆ ಭಾವ ಶರಧಿಯಲ್ಲಿ, ಆಸ್ಥೆಯ ಬಯಸುವ ಒಂಟಿ ಬದುಕಿನ ಕೇಳದ ಮಾತುಗಳ ಹೊತ್ತು ಸಾಗುವ ಹಾಯಿ ದೋಣಿಯೇ ಈ ‘ಆಂಡ್ರಾಯ್ಡ್ ಕುಂಜಪ್ಪನ್ ‘ ಚಿತ್ರ.

ಈ ಕಥೆಯು ಅನಂತ ಪಲಕುಗಳ ಕಾಪಿ ರಾಗದಂತೆ ಕಾಡುತ್ತದೆ. ಕಲಿತು ಪಟ್ಟಣದಲ್ಲಿ ಕೆಲಸಕ್ಕೆ ಸೇರುವ ಮಕ್ಕಳ ತಂದೆ ತಾಯಿಯಂದಿರ ನೋವಿನ ಶಾಯರಿಯಿದು. ವಯೋ ಸಹಜ ಗಜಿ ಬಿಜಿಗಳು ಬಾಂಬೆಯ ಲೋಕಲ್ ಟ್ರೈನ್‌ನಲ್ಲಿನ ಜನರಂತೆಯೇ ಮನದಲ್ಲಿ ತುಂಬಿದ್ದರೂ ಅವನ್ನೆಲ್ಲಾ ಮೀರಿ ಪ್ರೀತಿಯೊಂದಿರೆ ಸಾಕು ಜೀವಕ್ಕೆ ಎಂದು ಬದುಕುವ ಲೋಕದ ಎಲ್ಲಾ ತಂದೆ ತಾಯಿಯರ ಅಂತರಾಳವಿದು. ಚಿತ್ರದ ತುಂಬೆಲ್ಲಾ ಭಾವನಾತ್ಮಕ ಅಭಿವ್ಯಕ್ತಿ ಹರಡಿಕೊಂಡಿದೆ. ವಿಶೇಷತಃ ಭಾಸ್ಕರನ್‌ರ ಮುಗ್ಧತೆ. ಅವರು ಕುಂಜಪ್ಪನಿಗೆ ಲುಂಗಿ ಧಾರಣೆ ಮಾಡುವುದು ಮತ್ತು ವಸ್ತ್ರವ ಹೊಲಿಸುವುದು, ಜ್ಯೋತಿಷ್ಯರ ಬಳಿ ಅದರ ಭವಿಷ್ಯವ ಕೇಳುವುದು, ಮಳೆಯಲ್ಲಿ ನೆನೆಯುತ್ತಾ ಒಣಗಿದ ಬಟ್ಟೆಗಳನ್ನು ತೆಗೆಯುತ್ತಿದ್ದರೆ ಅನಾರೋಗ್ಯ ಕಾಡಬಹುದು ಎಂಬ ಆತಂಕವ ವ್ಯಕ್ತಪಡಿಸುವುದು ಹೀಗೆ ಮಗು ಮನಸ್ಸಿನ ನಿಷ್ಕಲ್ಮಶ ಭಾವ ಪ್ರಸ್ತುತತೆ ಅವರದ್ದು. ನಾನು ನನ್ನ ಯಜಮಾನರ ಆಜ್ಞಾ ಪಾಲಕ. ಅವರಿಗೆ ತೊಂದರೆಯನ್ನು ಉಂಟು ಮಾಡುವವನಲ್ಲ, ಕೇಡು ಬಯಸುವವನಲ್ಲ ಎನ್ನುತ್ತಾ ಪದೇ ಪದೇ ಕುಂಜಪ್ಪನ್ ಹೇಳುವ ಮಾತುಗಳೂ ಕೂಡ ಮನುಷ್ಯನ ಕೆಟ್ಟ ಮುಖಕ್ಕೆ ಕಪಾಳ ಮೋಕ್ಷದಂತಿದೆ. ನನಗೆ ಭಾವನೆಗಳು ಇಲ್ಲ ಎನ್ನುತ್ತಾ ಜೀವಿಸುವ ಕುಂಜಪ್ಪ ಹೃದಯವಿರುವವರಿಗಿಂತಲೂ ಮಿಗಿಲು ಎನಿಸಿಕೊಳ್ಳುತ್ತಾನೆ. ಈ ಚಿತ್ರದ ಕಥೆ ಡಾರ್ಕ್ ಕಾಮಿಡಿ ವರ್ಗಕ್ಕೂ ಸೇರುತ್ತದೆ. ಕುಂಜಪ್ಪನ್‌ನ ಜಾತಿ ಯಾವುದು ಎಂದು ಪ್ರಶ್ನಿಸುವ ಜನ, ಸುಬ್ರಮಣ್ಯನ್ ಮಾತನಾಡುತ್ತಿದ್ದಾಗಲೇ ಸಂಪರ್ಕ ಕಡಿತಗೊಂಡಾಗ ಭಾಸ್ಕರನ್ ‘ಮಕ್ಕಳು ಯಾವಾಗ ಮನೆಗೆ ಬರುತ್ತೀರೆಂದು ಕೇಳುವಾಗಲೇ ಸಿಗ್ನಲ್ ಹೋಗುತ್ತದೆ’ ಎನ್ನುವುದು, ಪ್ರಸನ್ನ ಫೇಸ್ಬುಕ್, ವಾಟ್ಸಪ್ಪ್, ಗೂಗಲ್‌ನಲ್ಲಿ ಲಭ್ಯವಿಲ್ಲ ಆದ್ದರಿಂದ ಆ ವ್ಯಕ್ತಿ ಈ ಜಗತ್ತಿನಲ್ಲೇ ಇಲ್ಲ ಎಂದು ಕುಂಜಪ್ಪನ್ ಹೇಳುವುದು ಹೀಗೆ ಹಲವು ಕಹಿ ಗುಳಿಗೆಗಳಿಗೆ ಸಿಹಿಯ ಲೇಪನ ನೀಡಿ ತೋರಿಸಲಾಗಿದೆ. ಈ ಕಥಾನಕದಲ್ಲಿರುವ ಸರಳ ಹಾಸ್ಯವೂ ಯಥೇಚ್ಚವಾಗಿ ನಗು ತರಿಸುತ್ತದೆ. ಟಿವಿ ಚಾನೆಲ್‌ನವರು ಬಂದು ಭಾಸ್ಕರನ್‌ರನ್ನು ಉದ್ದೇಶಿಸಿ “ಇದಾ ರೋಬೋಟ್” ಎನ್ನುವುದು, ಅವರ ಸಂಗೀತಕ್ಕೆ ದನಗಳು ಕಿರಿಕಿರಿಗೊಂಡು ಆಕ್ರಮಣಶಾಲಿತನ ತೋರಿಸುವುದು, ರೋಬೋಟ್‌ಗೆ ಕುಂಜಪ್ಪನ್ ಎಂದು ನಾಮಕರಣ ಮಾಡುವ ಪರಿ ಇಂತಹ ಹಲವು ದೃಶ್ಯಗಳು ಹೃದಯವ ಹಗುರಗೊಳಿಸುತ್ತದೆ.

ಹೀಗೆ ಉತ್ತರಾರ್ಧದ ಕಾಲಘಟ್ಟದಲ್ಲಿರುವ ಮನುಷ್ಯನೊಬ್ಬನ ಬದುಕು ಬವಣೆಗಳು, ಕಳೆದುಹೋದ ಪ್ರೇಮದ ನೆನಪುಗಳು, ಒಂಟಿತನದ ಸಂಕಟಗಳಿಗೆ ಕಥೆಯ ಬಣ್ಣ ಹಚ್ಚಿ ಪ್ರಸ್ತುತಗೊಳಿಸುವ ಪ್ರಯತ್ನವೇ ‘ಆಂಡ್ರಾಯ್ಡ್ ಕುಂಜಪ್ಪನ್ ‘ ಚಿತ್ರ.

ಭಾಸ್ಕರನ್ ಆಗಿ ಸೂರಜ್ ವೆಂಜರಮೂಡು ಅವರದ್ದು ಅಭಿನಯವಲ್ಲ. ಪರಕಾಯ ಪ್ರವೇಶ. ಯುವಕನೊಬ್ಬ ವಯೋವೃದ್ಧರ ಸಣ್ಣ ಸಣ್ಣ ಅಂಶಗಳನ್ನು ಗಮನಿಸಿ ಅಂತೆಯೇ ಅಭಿನಯಿಸುವುದು, ಆ ಪರಿಯ ಪರಿಪೂರ್ಣತೆ ಪ್ರಶಂಸಾರ್ಹ. ಸುಬ್ರಮಣ್ಯನ್ ಆಗಿ ಸೌಬಿನ್ ಶಾಹಿರ್, ಪ್ರಸನ್ನನ್ ಆಗಿ ಸೈಜು ಕುರುಪ್, ಹಿಟೋಮಿಯಾಗಿ ಕೆಂಡಿ ಜಿರ್ಡೂ ಮನದಲುಳಿಯುವ ಅಭಿವ್ಯಕ್ತಿ. ಉಳಿದೆಲ್ಲಾ ಪಾತ್ರಗಳು ಹಾಡುಗಾರನಿಗೆ ತಕ್ಕ ಹಿನ್ನೆಲೆಯಂತೆ ಸುಂದರ. ಬಿಜಿಬಲ್ ಸಂಗೀತ ಬೇಸಿಗೆಯಲ್ಲಿ ಬೀಸುವ ತಂಗಾಳಿಯಂತೆಯೇ ಇನ್ನೂನು ಬೇಕಾಗಿದೆ ಅನ್ನಿಸುವ ರೀತಿಯದ್ದು. ವಿಶೇಷತಃ ಕಲ್ಲು ಹೃದಯ ಕರಗಿದೆ ಎಂಬ ಅರ್ಥ ಬರುವ ಹಾಡು, ಅದೆಷ್ಟು ಕಾಡುತ್ತದೆ ಎಂದರೆ ಥೇಟು ಚಂದದ ಕನಸು ಸಾಗಲಿ ಎಂದು ನಿದ್ದೆಯ ಮುಂದುವರೆಸುವಂತೆಯೇ. ಸನು ವರ್ಗಿಸ್ ಕ್ಯಾಮೆರಾ ಕಣ್ಣುಗಳು ನೀಲಿ ಬಿಳಿ ಡಬ್ಬಿಯ ಬಸ್ಸು, ಚಹದ ಅಂಗಡಿಯನ್ನು ಸೊಗಸಾಗಿ ಕಾಡುವಂತೆಯೇ ಕದ್ದಿದೆ. ಇನ್ನು ಚಿತ್ರದ ಸೂತ್ರಧಾರ ರತೀಶ್ ಪೊದುವಾಳ್ ಈ ತರಹದ ಯಾರಿಗೂ ಕೇಳದ ಮಾತಿಗೆ ದನಿಯಾದದ್ದು ಸ್ವಾಗತಾರ್ಹ. ಹಾಸ್ಯ, ಭಾವುಕತೆಯ ಮೂಲಕ ಸಮಾಜಕ್ಕೆ ತಾನು ಹೇಳಬೇಕಿನಿಸಿದ ಸಂಗತಿಗಳಿಗೆ ಜಾಲರಿ ಹಿಡಿಯದೆ ಪ್ರಸ್ತುತಗೊಳಿಸಿದ್ದು ಉಲ್ಲೇಖಾರ್ಹ ಸಂಗತಿ.

ಮುಗಿಸುವ ಮುನ್ನ :

ಬದುಕೆಂಬುದು ಬಸ್ಸಿನಂತೆ. ಆರಂಭದಲ್ಲಿ ಪಯಣಿಗರು ಹತ್ತುತ್ತಲೇ ಹೋಗುತ್ತಾರೆ. ಮಾತು, ನಗು, ಪ್ರೀತಿ, ಗಮನ ಹೆಚ್ಚುತ್ತದೆ, ಕತ್ತಲಾಗುತ್ತಿದ್ದಂತೆಯೇ ಆಗಸವ ತುಂಬುವ ಮಿಂಚು ಹುಳಗಳಂತೆ. ಆದರೆ ಪಯಣ ಅಂತ್ಯದತ್ತ ಸಾಗುತ್ತಲೇ ಪ್ರಯಾಣಿಕರೆಲ್ಲರೂ ಇಳಿಯುವ ಕಾತುರತೆ, ತಮ್ಮ ಲಗೇಜುಗಳ ಹುಡುಕಾಟದಲ್ಲಿ ತೊಡಗುತ್ತಾರೆ. ಸೀಟುಗಳು ಖಾಲಿಯಾಗುತ್ತವೆ. ಒಂಟಿತನವೊಂದು ಉಳಿದು ಹೋಗುತ್ತದೆ. ಅದೇ ರೀತಿ ವಯಸ್ಸು ದಾಟುತ್ತಲೇ ಎಲ್ಲಾ ಸಾಮೀಪ್ಯಗಳನ್ನು ಕಾಲ ಆಪೋಶನ ತೆಗೆದುಕೊಳ್ಳುತ್ತದೆ. ಮಾತು ಸಾಗಿಸುವ ಸೇತುವೆ ಮಾಯವಾಗುತ್ತದೆ. ಆದ್ದರಿಂದ ಆ ಕಾಲಘಟ್ಟ ಬಯಸುವುದು ತನ್ನ ಬದುಕನ್ನು ಪ್ರೀತಿಸಬೇಕು ಮತ್ತು ಸಂಭ್ರಮಿಸಬೇಕು ಎಂಬುವುದನ್ನು. ಜಯಂತ ಕಾಯ್ಕಿಣಿಯವರ ಸಾಲುಗಳಿವೆಯಲ್ಲಾ ‘ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ, ನಾ ನಿನ್ನಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ’ ಎಂದು. ಅದೇ ರೀತಿ ಮಾಗಿದಂತೆಯೇ ಮಗುವಾಗಬೇಕು. ಅಳಬೇಕು, ನಗಬೇಕು, ಮಾತನಾಡಬೇಕು ತನ್ನ ಗೆಳೆಯ, ಪ್ರೇಯಸಿ, ತಂದೆ, ತಾಯಿ, ಮಕ್ಕಳ ರೂಪದಲ್ಲಿರುವ ತನ್ನ ಆತ್ಮದೊಂದಿಗೆಯೇ.