ಅಮ್ಮನ ಮಾತು ಕೇಳಿ ಭಾವುಕಳಾದ ಅವಳು, “ಕಷ್ಟ ಬಂದಾಗಲೇ ನಮ್ಮೋರು, ತಮ್ಮೋರು ಯಾರಂತ ಗೊತ್ತಾಗೂದು ಅಮ್ಮಾ. ತನ್ನ ದಣಿ ಮಾತು ಅಂದ್ರೆ ಶಾಸ್ನ ಅಂತ ಹೇಳ್ತಾನೇ ಇವ್ರು ಜೈಲಿಗೋದ್ರು. ದಣಿ ಈಗ ಗುರುತೇ ಇಲ್ಲದೋರ ಹಾಗೆ ಕಾರಲ್ಲಿ ಬರ‍್ರ ಹೋಯ್ತರೆ. ಬದುಕೇ ಮುಗದೋಯ್ತು ಅಂದ್ಕಂಡು ಹೊಳೆದಾಟಿ ಬಂದೆ. ನಮ್ಮೂರ ದೇವಿಯಮ್ಮನಿಗೊಂದು ಕಾಯ ಒಡೆಸ್ಕಂಡು ಹೋಗ್ವ ಅಂತ ಮನಸಿಗೆ ಭಾಳ ಅನಿಸ್ತಿತ್ತು. ಈಗ ನೋಡಿದ್ರೆ ಎಲ್ಲ ನಿರಾಳ ಆದಂಗೆ ಅನಿಸ್ತದೆ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಏಳನೆಯ ಕಂತು ನಿಮ್ಮ ಓದಿಗೆ

ನೀಲಿಯ ಅಮ್ಮ ಬೆಳಗಿನಿಂದಲೇ ಏನೋ ಧಾವಂತದಲ್ಲಿರುವಂತಿತ್ತು. ಚಿಲ್ಲರೆ ಹಣದಿಂದ ಮೊದಲುಗೊಂಡು ತನ್ನೆಲ್ಲ ಅಮೂಲ್ಯ ವಸ್ತುಗಳನ್ನು ತುಂಬಿಡುವ ಭಾರವಾದ ಟ್ರಂಕನ್ನು ಅಣ್ಣನ ಸಹಾಯದಿಂದ ಕೆಳಗಿಳಿಸಿದ್ದರು. ಅದರೊಳಗಿರುವ ಒಂದೊಂದೇ ಸೀರೆಗಳನ್ನು ತೆಗೆದು, ಸವರಿ ಮತ್ತೆ ಅಲ್ಲಿಯೇ ಇಡುತ್ತಿದ್ದರು. ಕೆಳಗಿನಿಂದಲೇ ಕೈ ಚಾಚಿ ಮುಚ್ಚಳ ತೆಗೆದು ಟ್ರಂಕಿನೊಳಗೆ ತೂರಿಸುತ್ತಿದ್ದ ಚಿಲ್ಲರೆ ನಾಣ್ಯಗಳನ್ನೆಲ್ಲ ಒಟ್ಟುಗೂಡಿಸಿ ಎಣಿಸುತ್ತಿದ್ದರು. ಮತ್ತೊಮ್ಮೆ ಹಾಸಿ, ಹೊದೆಯುವ ಬಟ್ಟೆಗಳನ್ನೆಲ್ಲ ಕಟ್ಟಿಡುವ ಮೂಟೆಯನ್ನು ಬಿಡಿಸಿ ಒಂದಿಷ್ಟು ಚಾದರ, ಸೀರೆಯ ದುಪ್ಪಡಿಗಳನ್ನು ಹೊರತೆಗೆದಿದ್ದರು. ನೀಲಿ ಇವೆಲ್ಲವನ್ನೂ ಗಮನಿಸುತ್ತಿರುವಾಗಲೇ ಹತ್ತು ಗಂಟೆಯ ಚಾ ಕುಡಿಯಲು ಮನೆಯೊಳಗೆ ಬಂದ ಅಪ್ಪ, “ಅವಳಿಗೊಂದು ಸೀರೆ ಇದ್ರೆ ಕೊಡೆ. ನಿಂಗೆ ಈ ಸಲ ಅಡಿಕೆ ಮಾರಿದ ಮೇಲೆ ತಂದ್ಕೊಡ್ತೆ.” ಎಂದಿದ್ದರು. ಅದಕ್ಕೆ ಅಮ್ಮ, “ಅದೇ ಹುಡುಕ್ತಾ ಇದ್ದೇನೆ. ಹಳೆಸೀರೆ ಮಾತ್ರ ಕೊಟ್ರೆ ಏನಂದುಕೊಳ್ತಾಳೋ? ತುಂಬಿದ ಬಸುರಿ ಬೇರೆ. ಉಡಿತುಂಬಲಾದರೂ ಒಂದು ಹೊಸಸೀರೆ ಕೊಡುವ ಅಂದ್ರೆ ಯಾವುದೂ ಇಲ್ಲ.” ಎಂದವಳೇ ಥಟ್ಟನೆ ಮೊನ್ನೆ ತಂಗಿಯ ಮನೆಗೆ ಹೋದಾಗ ಕೊಟ್ಟ ಹೊಸಸೀರೆಯೊಂದರ ನೆನಪಾಗಿ ಅಲ್ಲಿಯೇ ಗಿಳಿಗೂಟದಲ್ಲಿ ತೂಗುಬಿಟ್ಟಿದ್ದ ಚೀಲದಲ್ಲಿದ್ದ ಹೊಸಸೀರೆಯನ್ನು ಈಗಾಗಲೇ ತೆಗೆದಿಟ್ಟಿದ್ದ ಇತರ ಬಟ್ಟೆಗಳೊಂದಿಗೆ ಸೇರಿಸಿಟ್ಟಳು. ಅಮ್ಮನ ಹೊಸಸೀರೆಯ ನುಣುಪಿನ ಮೇಲೆ ಕೈಯ್ಯಾಡಿಸುತ್ತಿದ್ದ ನೀಲಿ, “ಅಮ್ಮಾ, ಇದು ಚಂದಿದೆ ಸೀರೆ. ಯಾರಿಗೂ ಕೊಡಬೇಡ. ನೀನೇ ಉಟ್ಟುಕೋ. ಬೆಳಗಿನಿಂದ ಯಾರಿಗೆ ಕೊಡಲೆಂದು ಇವುಗಳನ್ನೆಲ್ಲ ಒಟ್ಟುಗೂಡಿಸುತ್ತಿರುವೆ?” ಎಂದು ಅಮ್ಮನ ಗಲ್ಲ ಹಿಡಿದು ಕೇಳಿದಳು. ಅಮ್ಮ ಒಂದು ದುರಂತ ಕತೆಯನ್ನು ನೀಲಿಗೆ ಅರ್ಥವಾಗುವಂತೆ ತಿಳಿಗೊಳಿಸಿ ಹೇಳಿದಳು.

*****

ಆ ಹೆಣ್ಣು ಈ ಊರಿನಿಂದ ಇನ್ನೊಂದು ಊರಿಗೆ ಮದುವೆಯಾಗಿ ಹೋಗುವಾಗ ಹೊಳೆತುಂಬುವಂತೆ ಹೆಂಗಳೆಯರು ಕಣ್ಣೀರ ಧಾರೆ ಹರಿಸಿದ್ದರು. ತೋಟದಂಚಿಗೆ ಅರಳುವ ಸುಂದರ ದಾಸವಾಳ ಹೂವಿನಂತವಳು ಅವಳು. ಎಲ್ಲರೊಂದಿಗೆ ಹೊಂದಿಕೊಂಡು ಬದುಕುತ್ತಾ, ಸದಾ ಮೊಗದಲ್ಲೊಂದು ಲಾಸ್ಯವನ್ನು ತುಂಬಿಕೊಂಡ, ಯಾರಿಗೆ ಕಷ್ಟವೆಂದರೂ ಕೈಚಾಚುವ ಕರುಣೆಯ ಕಡಲಿನಂತವಳು. ಬೈದವರಿಗೂ ತಿರುಗಿ ಬಿರುನುಡಿಯಾಡದ ಆ ಹುಡುಗಿ ಎಲ್ಲರ ಕೈಗೂಸಿನಂತೆ ಬೆಳೆದವಳು. ಅದ್ಯಾಕೋ ಎಲ್ಲರಂತೆ ಹತ್ತಿರದ ಯಾವೂರಿಗೂ ಅವಳ ಸಂಬಂಧ ಕೂಡಿಬರದೇ ಬಸ್ಸಿನಲ್ಲಿಯೇ ಹೋಗಿಬರಬೇಕಾದಷ್ಟು ದೂರದ ಊರಿಗೆ ಅವಳನ್ನು ಮದುವೆ ಮಾಡಿ ಕೊಡಬೇಕಾಯಿತು. ಎಳೆಬಾಳೆಯಂತೆ ನಾಜೂಕಿನವಳಾದ ಅವಳಿಗೆ ಸಿಕ್ಕಿದ ಗಂಡ ಮಾತ್ರ ಬಲಭೀಮನಂಥವನು. ಹೇಗೋ ಸಂಸಾರ ಸರಾಗವಾಗಿ ಎರಡು ಹೆಣ್ಣು ಪಿಳ್ಳೆಗಳಿಗೆ ಅವಳು ತಾಯಿಯಾಗಿ, ಮತ್ತೊಂದು ಮಗುವನ್ನು ಗರ್ಭದಲ್ಲಿ ಹೊತ್ತ ಗಳಿಗೆಯಲ್ಲಿಯೇ ಅನಾಹುತವೊಂದು ನಡೆದುಹೋಗಿತ್ತು. ಅವನು ಕೆಲಸ ಮಾಡುವ ಪುಡಾರಿಯ ಮಗನೊಬ್ಬ ಕುಡಿತದ ಅಮಲಿನಲ್ಲಿ ನಡೆದ ಹೊಡೆದಾಟದಲ್ಲಿ ಎದುರಿಗಿದ್ದವನ ಉಸಿರನ್ನೇ ನಿಲ್ಲಿಸಿಬಿಟ್ಟಿದ್ದ. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಬೇಕೆಂದು ಶತಾಯಗತಾಯ ಹೋರಾಡುತ್ತಿದ್ದ ಪುಡಾರಿಗೆ ಇದೊಂದು ತೀವ್ರತರವಾದ ಹಿನ್ನಡೆಯಾಗಿತ್ತು. ಹೇಗಾದರೂ ಪ್ರಕರಣದ ಗಂಭೀರತೆಯನ್ನು ಕಡಿಮೆ ಮಾಡಲು ಬಯಸಿದ ಆತ ತನ್ನ ನಂಬಿಗಸ್ಥ ಕೆಲಸಗಾರನಾದ ಇವಳ ಗಂಡನನ್ನು ಕೊಲೆಯ ಆಪಾದನೆಯ ಮೇಲೆ ಜೈಲುಸೇರುವಂತೆ ಮನವೊಲಿಸಿದ್ದ.

ಉಡಿತುಂಬಲಾದರೂ ಒಂದು ಹೊಸಸೀರೆ ಕೊಡುವ ಅಂದ್ರೆ ಯಾವುದೂ ಇಲ್ಲ.” ಎಂದವಳೇ ಥಟ್ಟನೆ ಮೊನ್ನೆ ತಂಗಿಯ ಮನೆಗೆ ಹೋದಾಗ ಕೊಟ್ಟ ಹೊಸಸೀರೆಯೊಂದರ ನೆನಪಾಗಿ ಅಲ್ಲಿಯೇ ಗಿಳಿಗೂಟದಲ್ಲಿ ತೂಗುಬಿಟ್ಟಿದ್ದ ಚೀಲದಲ್ಲಿದ್ದ ಹೊಸಸೀರೆಯನ್ನು ಈಗಾಗಲೇ ತೆಗೆದಿಟ್ಟಿದ್ದ ಇತರ ಬಟ್ಟೆಗಳೊಂದಿಗೆ ಸೇರಿಸಿಟ್ಟಳು.

ದಿನ ಕಳೆಯುವಷ್ಟರಲ್ಲಿ ಬಂದ ಪೋಲೀಸರ ಪಡೆ ತನ್ನ ಗಂಡನನ್ನು ಕೈಗೆ ಕೋಳ ಹಾಕಿ ಕರೆದುಕೊಂಡು ಹೋದಾಗಲೇ ಇವಳಿಗೆ ಪರಿಸ್ಥಿತಿಯ ಅರಿವಾದದ್ದು. ಕೊಲೆ ನಡೆದ ರಾತ್ರಿ ತನ್ನ ಮಗ್ಗುಲಲ್ಲಿಯೇ, ಮಕ್ಕಳೆರಡನ್ನು ತನ್ನ ತೋಳುಗಳ ಮೇಲೆ ಮಲಗಿಸಿಕೊಂಡು ಮಲಗಿದ್ದ ಗಂಡ ಕೊಲೆ ಮಾಡಿರುವುದಾದರೂ ಹೇಗೆ? ಎಂಬುದು ಅವಳಿಗೆ ಅರ್ಥವೇ ಆಗಲಿಲ್ಲ. ಇದನ್ನೇ ಅಳುತ್ತಳುತ್ತಲೇ ಪೋಲೀಸರ ಎದುರಿಗೆ ಹೇಳಿದಳಾದರೂ ಅವರು ಏನು ಹೇಳುವುದಿದ್ದರೂ ಕೋರ್ಟಿನಲ್ಲಿ ಹೇಳಿ ಎನ್ನುತ್ತಲೇ ಗಂಡನನ್ನು ಜೀಪ್ ಹತ್ತಿಸಿ ಹೋಗಿದ್ದರು. ನಾಲ್ಕಾರು ದಿನದಲ್ಲಿಯೇ ನಿನ್ನನ್ನು ಬಿಡಿಸಿ ತರುವುದಾಗಿ ಮಾತುಕೊಟ್ಟ ಪುಡಾರಿ ಇದೀಗ ಮುಖ ತಪ್ಪಿಸಿ ತಿರುಗುತ್ತಿದ್ದ. ನಿನ್ನ ಹೆಂಡತಿ ಮಕ್ಕಳ ಕಾಳಜಿ ತನ್ನದು ಎಂದವನೀಗ ಇದ್ದ ಎರಡೆಕರೆ ಗದ್ದೆಯನ್ನೂ ತನಗೇ ಕೊಟ್ಟುಬಿಡು ಎಂದು ಪುಸಲಾಯಿಸುತ್ತಿದ್ದ. ಜಗತ್ತಿನ ಕತ್ತಲೆಯನ್ನು ಕಂಡಿರದ ಹುಡುಗಿ ಈಗ ಕಂಗೆಟ್ಟಿದ್ದಳು. ಗಟ್ಟಿ ಮನಸು ಮಾಡಿ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಕಣ್ಣು ನೆಟ್ಟಿದ್ದಳು. ಹೊಟ್ಟೆಯಲ್ಲಿರುವ ಕೂಸು ಬೇಡವೆಂದರೂ ಬೆಳೆಯುತ್ತ ಅವಳ ಚಿಂತೆಯನ್ನು ಹೆಚ್ಚಿಸುತ್ತಿತ್ತು. ಇದೆಲ್ಲ ನಡೆದು ಆರುತಿಂಗಳ ನಂತರ ಅವಳೀಗ ಹೊಳೆಸಾಲಿಗೆ ಬರುತ್ತಿದ್ದಾಳೆ. ಹಾಗೆಂದು ಹೆರಿಗೆಗೆ ಇಲ್ಲಿಯೇ ಇರುವಂತಿಲ್ಲ. ಅಲ್ಲಿ ಗಂಡನ ಊರಿನಲ್ಲಿರುವ ಮನೆ, ದನ, ಹೊಲದ ಕೆಲಸಗಳೆಲ್ಲ ನಡೆಯಬೇಕು. ಒಂದೆರಡು ದಿನಗಳಿಗೆಂದು ಇಲ್ಲಿಗೆ ಬರುತ್ತಿರುವ ಅವಳ ಸಾಂತ್ವನಕ್ಕೆ ಇಡಿಯ ಊರು ಸಜ್ಜಾಗುತ್ತಿದೆ. ನೀಲಿಯ ಅಮ್ಮನೂ ತನ್ನ ಪಾಲನ್ನು ಸಲ್ಲಿಸಲು ಬೆಳಗಿನಿಂದ ಒದ್ದಾಡುತ್ತಿದ್ದಾಳೆ. ಎಷ್ಟಾದರೂ ತನ್ನ ಮುಂದೆ ಆಡಿ ಬೆಳೆದ ಕೂಸು. ಕಷ್ಟ ಕಾಲದಲ್ಲಿ ಕೈಬಿಡಲಾಗುತ್ತದೆಯೆ?

ಅವಳ ಕಥೆ ಕೇಳಿದ ನೀಲಿಗೆ ಅವಳನ್ನು ನೋಡುವ ಬಯಕೆ. ಅವಳ ಬರವಿಕೆಗೆ ಕಾಯುತ್ತಾ ಮನೆಯ ಬಾಗಿಲಿನಲ್ಲೇ ಕುಳಿತುಬಿಟ್ಟಿದ್ದಾಳೆ. ಚಿಕ್ಕಿ ಕೊಟ್ಟ ಹೊಸಸೀರೆಯನ್ನು ಅವಳಿಗೆ ತಾನೇ ಕೊಡುವೆನೆಂದು ಅಮ್ಮನಿಗೆ ಹೇಳಿದ್ದಾಳೆ. ಸುಮಾರು ಹೊತ್ತಿಗೆ ತುಂಬಿದ ಹೊಟ್ಟೆಯನ್ನು ಹೊತ್ತ ಹೆಣ್ಣು ಜೀವವೊಂದು ನಿಧಾನವಾಗಿ ಇವಳ ಮನೆಯ ಕಡೆಗೇ ನಡೆದುಬರುತ್ತಿರುವುದು ಕಂಡಿತು. ಅವಳೊಂದಿಗೆ ಆಚೀಚೆಯಲ್ಲಿ ತನಗಿಂತಲೂ ಚಿಕ್ಕವರಾದ ಹುಡುಗಿಯರಿಬ್ಬರೂ ಕುಣಿಯುತ್ತ ಬರುತ್ತಿದ್ದರು. ಅವಳು ಬಂದೊಡನೇ ಅಮ್ಮ ಬಿಸಿ, ಬಿಸಿಯ ಚಾ ತಂದು ಕೊಟ್ಟರು. ಅವಳು ತಲೆಬಗ್ಗಿಸಿ ತನ್ನ ಕತೆಯನ್ನು ಅಮ್ಮನಿಗೆ ಹೇಳಿದಳು. ಅಪ್ಪ, ಅಮ್ಮ ಇಬ್ಬರೂ ಅವಳನ್ನು ಸಾಂತ್ವನಗೊಳಿಸುತ್ತಿದ್ದರು. ನೀಲಿ ಸೀರೆಯ ಗಂಟನ್ನು ಅವಳಿಗೆ ಕೊಟ್ಟಳು. “ಬರುವುದು ಮಳೆಗಾಲ, ಮಳೆಗಾಲದ ಹೆರಿಗೆಯೆಂದರೆ ಹೆಣ್ಣಿಗೆ ಭಾರೀ ಕಷ್ಟ. ಬಾಣಂತಿ ಬಟ್ಟೆಗಳನ್ನು ಒಣಗಿಸುವ ಉಸಾಬರಿ ಯಾರಿಗೂ ಬೇಡ. ಹಾಗಂತ ಮಗುವನ್ನು ಒದ್ದೆಬಟ್ಟೆಯಲ್ಲಿಟ್ಟು ಥಂಡಿ ಹಿಡಿಸಬೇಡ.” ಎನ್ನುತ್ತಲೇ ಅಮ್ಮ ಹಳೆಯ ಬಟ್ಟೆಯ ಗಂಟನ್ನು ಅವಳ ಕೈಗಿಟ್ಟಳು.

ಅಮ್ಮನ ಮಾತು ಕೇಳಿ ಭಾವುಕಳಾದ ಅವಳು, “ಕಷ್ಟ ಬಂದಾಗಲೇ ನಮ್ಮೋರು, ತಮ್ಮೋರು ಯಾರಂತ ಗೊತ್ತಾಗೂದು ಅಮ್ಮಾ. ತನ್ನ ದಣಿ ಮಾತು ಅಂದ್ರೆ ಶಾಸ್ನ ಅಂತ ಹೇಳ್ತಾನೇ ಇವ್ರು ಜೈಲಿಗೋದ್ರು. ದಣಿ ಈಗ ಗುರುತೇ ಇಲ್ಲದೋರ ಹಾಗೆ ಕಾರಲ್ಲಿ ಬರ‍್ರ ಹೋಯ್ತರೆ. ಬದುಕೇ ಮುಗದೋಯ್ತು ಅಂದ್ಕಂಡು ಹೊಳೆದಾಟಿ ಬಂದೆ. ನಮ್ಮೂರ ದೇವಿಯಮ್ಮನಿಗೊಂದು ಕಾಯ ಒಡೆಸ್ಕಂಡು ಹೋಗ್ವ ಅಂತ ಮನಸಿಗೆ ಭಾಳ ಅನಿಸ್ತಿತ್ತು. ಈಗ ನೋಡಿದ್ರೆ ಎಲ್ಲ ನಿರಾಳ ಆದಂಗೆ ಅನಿಸ್ತದೆ. ನಮ್ಮ ತಾಯಮನಿ ಕೇರಿಯ ನಾಲ್ಕಾಳುಗಳು ನಾಳೀಕೆ ಬಂದು ಗದ್ದಿ ಹೂಟಿ ಮಾಡಿ ಬೀಜ ಬಿತ್ತಿ ಬರೂಕೆ ತಯಾರಾಗವ್ರೆ. ಚಿಟ್ಗನ ತಳಿ ಬೀಜ ಬಿತ್ತಿದ್ರೆ ನೆಟ್ಟಿ ಮಾಡೋ ರಗಳೆನೂ ಇಲ್ಲ ಕಾಣಿ. ಆಚಿ ಕೇರಿಯ ಬೀಣಗೌಡ ನಾಕ ಕೊಳಗ ಬೀಜ ನನಗಂತಾನೇ ತೆಗದಿಟ್ಟವ್ನೆ. ಗದ್ದಿ ಬೇಸಾಯ ಒಂದಾದ್ರೆ ಉಂಬೂಕೇನೂ ತೊಂದರೆಯಿಲ್ರಾ. ಗೇರುಬೀಜ, ಅಡಿಕೆ ಅಂತ ಮೆಣಸು, ಜೀರಿಗೆ ಸಾಮಾನ ತರಬೌದು. ನಮ್ಮ ಚಿಕ್ಕಮ್ಮ ಮಗೂ ಹುಟ್ಟಿ ಅಂಬೆಗಾಲ ಹಾಕೂವರೆಗೂ ನಿನ್ನ ಸಂಗ್ತಿಗೆ ಬರ್ತೆ ಅಂತು. ಈ ಮಕ್ಕಳನ್ನ ಕಟ್ಗಂಡು ಯಾವ್ದಾರ ಕೆರೇನೋ, ಬಾವೀನೋ ನೋಡ್ಕಬೇಕು ಅನಿಸಿಬಿಟ್ಟಿತ್ತು. ಈಗ ಬೆಳಕ ಹರ್ದ ಹಾಗೆ ಅನಿಸ್ತಿದೆ.” ಎನ್ನುತ್ತಲೇ ಕಣ್ಣೀರಾದಳು.

“ಎಂಥಾ ಮಾತು ಅಂತ ಆಡ್ತೀಯೆ ನೀನು? ಕಷ್ಟ ಮನುಷ್ಯರಿಗೆ ಬರ್ದೆ ಮರಕ್ಕೆ ಬರ್ತದ್ಯೇನೆ? ಹಂಗಾರೆ ನಾವೆಲ್ಲ ಸತ್ತೇ ಹೋಗಿದ್ರು ಅಂತ ತಿಳಕಂಡ್ಯೋ ಹೇಗೆ? ನಿನ್ನ ಗಂಡ ನೋಡೂಕೆ ಒಳ್ಳೆ ಆನಿ ಥರ ಇರಬಹುದು. ಆದ್ರೆ ಗುಣದಲ್ಲಿ ಬಂಗಾರದಂಥವ. ಎಂಥ ಮಾಡೂದು ಹೇಳು, ಬಣ್ಣದ ಮಾತಿಗೆ ಮರುಳಾಗಿ ಬದುಕ ಮೂರಾಬಟ್ಟೆ ಮಾಡ್ಕಬಿಟ್ಟ. ಆದ್ರೂ ನಮ್ ಪ್ರಯತ್ನ ನಾವು ಮಾಡ್ವ. ಈ ಸಲ ಪೇಟೆಗೆ ಹೋದಾಗ ನನ್ನ ಪರಿಚಯದ ಒಬ್ಬ ವಕೀಲರಿದ್ರು. ಅವರನ್ನೊಂದು ಮಾತು ಕೇಳಿ ಬತ್ತೆ. ಎಷ್ಟಾರೂ ಒಳ್ಳೆ ಗುಣನಡತೆ ಇರೋ ಮನುಷರನ್ನ ಒಂದ ಹತ್ತು ವರ್ಷ ಕಳೆದ ಮೇಲೆ ಬಿಟ್ಟೇ ಬಿಡ್ತ್ರು. ಅಲ್ಲಿವರೆಗೆ ಮನೆ, ಬದುಕು ನೋಡ್ಕಂಡು ಇರಬೇಕು.” ಎನ್ನುತ್ತಲೇ ನೀಲಿಯ ಅಪ್ಪ ಅವಳಿಗೆ ಜೀವನದ ಪಾಠ ಹೇಳಿದರು. ಚೂರು ಗೆಲುವಾದಂತೆ ಕಂಡ ಅವಳು, “ಹೌದು ನೋಡ್ರ. ತಿಂಗಳಿಗೊಂದು ಸಲ ನೋಡೂಕೆ ಬಿಡ್ತಾರೆ ನಂಗೆ. ಮೊದಲೆರಡು ತಿಂಗಳು ಹೋದಾಗ ಬೇಜಾರು ಮಾಡ್ಕಂಡು ಮಾತೇ ಆಡ್ತಿರಲಿಲ್ಲ. ಒಂದ್ಸಲ ಅಂತೂ ನಿನ್ನ ಹೊಟ್ಟೇಲಿ ಇರೋ ಪಿಂಡದಿಂದ್ಲೇ ಹೀಗೆಲ್ಲ ಆಗ್ತಿರೋದು. ಮೊದ್ಲು ಅದನ್ನು ತೆಗಿಸು ಅಂತೆಲ್ಲ ರಂಪಾಟ ಮಾಡಿಬಿಟ್ಟಿದ್ರು. ಆದರೆ ಹಿಂದಿನ ತಿಂಗಳು ಹೋದಾಗ ಭಾರೀ ಖುಶೀಲಿದ್ರು. ಜೈಲಿನಲ್ಲಿರೋರಿಗೆಲ್ಲ ಯಕ್ಷಗಾನ ಕಲಿಸೂಕೆ ಶುರುಮಾಡ್ಕಂಡರಂತೆ. ಆಟ ಅಂದ್ರೆ ಅವರಿಗೆ ಜೀವ ಕಾಣಿ. ಈ ಸಲ ಅದೆಂಥದ್ದೋ ಸ್ವಾತಂತ್ರ್ಯ ದಿನಕ್ಕೆ ಇವ್ರು ಕಲಿಸಿದ ಯಕ್ಷಗಾನನೇ ಮಾಡ್ತರಂತೆ ಜೈಲಿನಲ್ಲಿ. ಹಾಂಗ ನೋಡಿದ್ರೆ ಇವ್ರ ಗುಣ ನಡತೆ ನೋಡಿ ಬೇಗನೆ ಬಿಡೂರು ಅನಿಸ್ತು. ಮತ್ತೆ ನಮ್ಮ ಕೈಯ್ಯಲ್ಲಿ ಎಂಥಾ ಅದೆ?” ಎನ್ನುತ್ತಾ ಆಕಾಶ ದಿಟ್ಟಿಸಿದಳು.

ಕಣ್ಣೀರು ತುಂಬಿಕೊಂಡು, ಮಕ್ಕಳಿಬ್ಬರನ್ನು ಎರಡು ಸೊಂಟದ ಮೇಲೆ ಕೂರಿಸಿಕೊಂಡು ತನ್ನನ್ನು ದಾಟಿಬಂದ ಈ ಹೆಣ್ಣು ಮರಳಿ ಹೋಗುವಾಗ ತನ್ನ ಪರಿವಾರದೊಡನೆ ರಾಶಿ, ರಾಶಿ ಧಾನ್ಯ, ಬಟ್ಟೆ, ತಿನಿಸುಗಳೊಂದಿಗೆ ಸಾಗಿಹೋಗುವುದನ್ನು ನೋಡಿದ ಹೊಳೆ ಇನ್ನಷ್ಟು ಖುಶಿಯಿಂದ ಫಳಫಳನೆ ಹೊಳೆಯುತ್ತಾ ಹರಿಯತೊಡಗಿತು.