ಠಕ್ಕರ ಹಿನ್ನೆಲೆಯಲ್ಲಿ ಗಂಟಿಚೋರರನ್ನು ನೋಡಿದರೆ ಮತ್ತೊಂದು ಆಯಾಮ ತೆರೆದುಕೊಳ್ಳುತ್ತದೆ. ಠಕ್ಕರು ದೊಡ್ಡಮಟ್ಟದ ಲೂಟಿ, ಕೊಲೆ ಸುಲಿಗೆ ಮುಂತಾದವುಗಳ ಮೂಲಕ ಜನರನ್ನು ಭಯಭೀತರನ್ನಾಗಿಸುತ್ತಿದ್ದರು. ಅವರು ಹೆಚ್ಚಾಗಿ ವ್ಯಾಪಾರಿಗಳನ್ನು ಲೂಟಿ ಮಾಡುತ್ತಿದ್ದರು. ಹಾಗಾಗಿ ಇವರು ಒಂದು ರೀತಿಯಲ್ಲಿ ಅಲೆಮಾರಿ ಕಳ್ಳರಾಗಿದ್ದರು. ಆದರೆ ಗಂಟಿಚೋರರ ಹೆಸರಲ್ಲೇ ‘ಗಂಟುಕಳ್ಳರು’ ಎಂದಿರುವುದು ಇವರ ಕಳ್ಳತನದ ಸ್ವರೂಪವನ್ನು ಕಾಣಿಸುತ್ತದೆ. ಹೀಗಾಗಿಯೇ ಇವರನ್ನು ಸಂತೆಕಳ್ಳರು ಎಂದೂ ಕರೆಯುತ್ತಿದ್ದರು.
ಅರುಣ್ ಜೋಳದ ಕೂಡ್ಲಿಗಿ ಬರೆಯುವ ಗಂಟಿಚೋರರ ಕಥನದ ಮೂರನೇಯ ಕಂತು ಇಲ್ಲಿದೆ.
ಎಲ್ಲ ಮಾಡುವುದು ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ
ನೆಲ್ಲುಗಳ ಕಟ್ಟಿಕೊಂಡು ಬಿದ್ರುಗಳ ಹೊತ್ತುಕೊಂಡು|
ಕೂಲಿಗಳ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ||
ಕಂಟಕತನದಿಂದ ಕಳ್ಳತನವನ್ನೇ ಮಾಡಿ|
ಕಟ್ಟಿ ಹೊಡಿಸಿಕೊಂಬುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ||
-ಕನಕದಾಸರು
ಬಿದ್ದೀಯಬೆ ಮುದುಕಿ ಬಿದ್ದೀಯಬೆ
ಬುಟ್ಟಿಯಲಿ ಪತ್ತಲಿಟ್ಟಿ
ಅದನು ಉಟ್ಟ ಹೊತ್ತೊಳು ಜೋಕಿ;
ಕೆಟ್ಟಗಂಟಿ ಚೌಡೇರು ಬಂದು
ಉಟ್ಟುದ್ದನ್ನೆ ಕದ್ದಾರ ಜೋಕಿ
ಬುದ್ದಿಗೇಡಿ ಮುದುಕಿ ನೀ ಬಿದ್ದೀಯಬೆ
-ಶಿಶುನಾಳ ಷರೀಫ
ಹೀಗೆ ಕಳ್ಳತನದ ಬಗ್ಗೆ ಕನಕದಾಸರು, ಕೆಟ್ಟ ಗಂಟಿಚೌಡೇರ ಬಗ್ಗೆ ಶಿಶುನಾಳ ಶರೀಫರು- ಗಂಟಿಚೋರ ಸಮುದಾಯದ ಕುರುಹುಗಳನ್ನು ದಾಖಲಿಸುತ್ತಾರೆ. ಇವರಿಬ್ಬರೂ ಗಂಟಿಚೋರ ಸಮುದಾಯ ನೆಲೆಗೊಂಡ ಭೌಗೋಳಿಕ ಪ್ರದೇಶದ ವ್ಯಾಪ್ತಿಯಲ್ಲಿಯೇ ಬದುಕಿ ಬಾಳಿದವರು ಎನ್ನುವುದೊಂದು ವಿಶೇಷ. ಈ ಹಿಂದೆ ನೋಡಿದಂತೆ ಠಕ್ಕರ ಚಾರಿತ್ರಿಕ ಹಿನ್ನೋಟವನ್ನು ಸರಿಯಾಗಿ ಗ್ರಹಿಸದೆ ‘ಗಂಟಿಚೋರ್’ ಸಮುದಾಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ನೇರವಾಗಿ ಠಕ್ಕರ ಜತೆ ಲಗತ್ತು ಮಾಡಲಾಗದಿದ್ದರೂ, ಹಲವಾರು ಸಂಗತಿಗಳಲ್ಲಿ ಗಂಟಿಚೋರ್ ಸಮುದಾಯದ ಬೇರುಗಳನ್ನು ಗುರುತಿಸಲು ಠಕ್ಕರ ವಿವರಗಳು ನೆರವಾಗುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಠಕ್ಕರ ಆಚರಣಾಲೋಕ ಮತ್ತು ರೂಢಿಗಳ ಹೋಲಿಕೆ ಗಂಟಿಚೋರ್ ಸಮುದಾಯದಲ್ಲಿ ರೂಢಿ ಆಚರಣೆಗಳಲ್ಲಿ ಕಾಣುತ್ತದೆ. ಅದರಲ್ಲಿ ಕೆಲವು ಸಾಮ್ಯವನ್ನು ನೋಡೋಣ, ಠಕ್ಕರ ಅಂಬಾಭವಾನಿ ಕರ್ನಾಟಕದಲ್ಲಿ ನೆಲೆಸಿದ ಗಂಟಿಚೋರ್ ಸಮುದಾಯದ ಆರಾಧನಾ ದೇವತೆಯೂ ಆಗಿದ್ದಾಳೆ. ಠಕ್ಕರ ನಂಬಿಕೆ ಲೋಕ ಗಂಟಿಚೋರ್ ಸಮುದಾಯದಲ್ಲಿ ಚೂರು ಬದಲಾವಣೆಯೊಂದಿಗೆ ಕಾಣುತ್ತದೆ. ಠಕ್ಕತನಕ್ಕೆ ದೇವಿಯ ‘ಶುಭಶಕುನ’ ಮುಖ್ಯವಾಗಿದೆ. ಅಂತೆಯೇ ಗಂಟಿಚೋರರಲ್ಲಿ ತುಡುಗುತನಕ್ಕೆ ದೇವಿಯ ಶಕುನವೂ ಸೇರಿದಂತೆ ಹನುಮಂತನ ‘ಶಕುನ’ ಮುಖ್ಯವಾಗಿದೆ. ಠಕ್ಕರಿಗೆ ಒಂದು ಗುಪ್ತಭಾಷೆ ಇತ್ತು, ಗಂಟಿಚೋರರಿಗೂ ಒಂದು ‘ವಡಾರಿ’ ಎಂಬ ಒಳಗಿನ ಮಾತಿದೆ. ಈ ಸಮುದಾಯದಲ್ಲಿ ‘ಕಾಶನೋರು’ ಎನ್ನುವ ಒಂದು ಕುಲವಿತ್ತು. ಈ ಕುಲದ ಹೆಸರು ‘ಕಾಶಿಯೋರು’ ಎನ್ನುವುದರ ಸವೆದ ರೂಪವಾಗಿದ್ದಲ್ಲಿ ಇದು ಇವರ ಉತ್ತರ ಭಾರತದ ಕಾಶಿಯ ಮೂಲವನ್ನೇನಾದರೂ ಸೂಚಿಸುತ್ತಿರುವ ಸಾಧ್ಯತೆ ಇದೆ. ಹೀಗೆ ಹಲವು ಸಂಗತಿಗಳಲ್ಲಿ ಠಕ್ಕರಿಗೂ ಗಂಟಿಚೋರರಿಗೂ ಸಾಮ್ಯವನ್ನು ಕಾಣಬಹುದಾಗಿದೆ.
ಗಂಟಿಚೋರ್ ಪದಪಯಣವನ್ನು ನೋಡೋಣ, ಭಾಷಾ ತಜ್ಞರಾದ ಪ್ರೊ.ಕೆ.ವಿ. ನಾರಾಯಣ ಅವರು ಅಭಿಪ್ರಾಯ ಪಡುವಂತೆ, `ಗಂಟಿಚೋರ್’ ಮೊದಲ ನೋಟಕ್ಕೆ ಕನ್ನಡ ಪದವಲ್ಲ ಎಂಬುದು ಗೊತ್ತಾಗುತ್ತದೆ. ದ್ರಾವಿಡ ನುಡಿಗಳಲ್ಲಿ ಇದು ಇಲ್ಲ. ಆದರೆ ಪ್ರಾಕೃತ ಮೂಲದ್ದು ಇದ್ದೀತು. ಹಿಂದಿ ಮೊದಲಾದ ನುಡಿಗಳಲ್ಲಿ ಚೋರ ಚೋರಿ ಪದಗಳು ಬಳಕೆಯಲ್ಲಿವೆ. ಕರ್ನಾಟಕದಲ್ಲಿರುವ ಆದರೆ ಕನ್ನಡ ಮಾತನಾಡದ ಕೆಲವು ಅಲೆಮಾರಿ ಬುಡಕಟ್ಟುಗಳ ಹೆಸರಿನಲ್ಲಿ `ಚೋರ್’ ಪದ ವಾರ್ಗಿಕವಾದಂತಿದೆ. ಉದಾಹರಣೆಗೆ, ಗಂಟಿಚೋರ್. ಗಂಟಿ ಎಂದರೆ ದನ, ಹಸು, ಎಂಬೆಲ್ಲಾ ಅರ್ಥಗಳಿವೆ. ಈ ಪದ ಕೂಡ ಕನ್ನಡಕ್ಕೆ ಪ್ರಾಕೃತದಿಂದ ಬಂದದ್ದಿರಬೇಕು. ಗಂಟಿಚೋರರು ತುರುಗಳ್ಳರು ಎಂಬಂತೆ ಬಿಂಬಿಸಿರಬಹುದೇ? ಆಕರಗಳನ್ನು ಪರಿಶೀಲಿಸಬೇಕು. ಪ್ರಾಕೃತ ಮಾತನಾಡುತ್ತಿದ್ದ ಇಂದಿನ ಕರ್ನಾಟಕದ ಅಲೆಮಾರಿಗಳು ಮಧ್ಯಯುಗದ ಹೊತ್ತಿನಲ್ಲಿ ಆಕ್ರಮಣಕಾರಿ ಸೈನ್ಯಗಳ ಜತೆ ಬಂದವರು. ಇವರು ಸೈನ್ಯಕ್ಕಾಗಿ ಏನೇನು ಕೆಲಸ ಮಾಡಬೇಕಿತ್ತೋ ನಮಗೆ ಈಗ ತಿಳಿಯದು. ಅವರ ಇಂದಿನ ಬದುಕನ್ನು ಗಮನಿಸಿ ಏನನ್ನೂ ಹೇಳಲು ಆಗದು. ಇದು ಹೆಚ್ಚಿನ ಅಧ್ಯಯನ ಬಯಸುವ ಸಂಗತಿ’ ಎನ್ನುತ್ತಾರೆ. ಈ ಅಭಿಪ್ರಾಯ ಗಂಟಿಚೋರ್ ಪದ ಪಯಣದ ಬಗ್ಗೆ ಯೋಚಿಸುವಂತೆ ಮಾಡುತ್ತದೆ.
ಈ ಸಮುದಾಯದ ಹಿರಿಯರು ಹಿಂದೆ ಹೊಟ್ಟೆಗಿಲ್ಲದೆ ದೇವಸ್ಥಾನದ ಗಂಟೆಯನ್ನೂ ಕದ್ದಿದ್ದೆವು ಹಾಗಾಗಿ ನಮ್ಮನ್ನು ಜನರು ಗಂಟಿಚೋರರೆನ್ನುತ್ತಾರೆ ಎಂದು ವಿವರಿಸುತ್ತಾರೆ. ಬಹುಶಃ ಇದು `ಗಂಟಿಚೋರ್’ ಎನ್ನುವ ಪದವೇ ಸಮುದಾಯದಲ್ಲಿ ಈ ಬಗೆಯ ಕತೆಯನ್ನು ಹುಟ್ಟಿಸಿರಲಿಕ್ಕೆ ಸಾಧ್ಯವಿದೆ. ಮಹಾರಾಷ್ಟ್ರದ ಉಚಲ್ಯಾ ಸಮುದಾಯದ ಲೇಖಕ ಲಕ್ಷ್ಮಣ ಗಾಯಕವಾಡ ಅವರು ಬೆಂಗಳೂರಿನಲ್ಲಿ ನಡೆದ ಸೆಮಿನಾರಿನಲ್ಲಿಯೂ ಇದೇ ಕತೆಯನ್ನು ಹೇಳಿದ್ದರು. ಆದರೆ ದೇವಸ್ಥಾನದ ಗಂಟೆ ಕದಿಯುವುದರ ಜತೆ ಈ ಸಮುದಾಯ ಹೆಸರು ಸಮೀಕರಣವಾದಂತಿಲ್ಲ. ಬ್ರಿಟೀಷ್ ಅಧಿಕಾರಿಗಳ ಉಲ್ಲೇಖಗಳನ್ನು ಗಮನಿಸಿದರೆ ಬಂಡಲ್ ಥೀವ್ಸ್ ಎನ್ನುವ ಪದ ಬಳಸುತ್ತಾರೆ. ಬಂಡಲ್ ಎಂದರೆ ಗಂಟು. ಹೀಗಾಗಿ ಬಂಡಲ್ ಥೀವ್ಸ್, ಗಂಟುಗಳ ಕದಿಯುವವರು, ಗಂಟು ಕಳ್ಳರು ಮುಂದೆ ಇದೇ ಪದ ಗಂಟಿಚೋರ್ಸ್ ಆಗಿರುವ ಸಾಧ್ಯತೆಯೂ ಇರಬಹುದು. ಪ್ರೊ.ಕೆ.ವಿ. ನಾರಾಯಣ ಅವರು ಹೇಳುವಂತೆ ಗಂಟಿಚೋರ್ ಪದ ಪ್ರಾಕೃತ ಮೂಲದ್ದಿರಬೇಕು. ಇದಕ್ಕೆ ಹತ್ತನೆ ಶತಮಾನದ ವಡ್ಡಾರಾಧನೆಯ ಕತೆಯಲ್ಲಿ ಬರುವ ವಿದ್ಯುತ್ ಚೋರನೆಂಬ ರಿಸಿಯ ಕತೆ ಎನ್ನುವ ಕಥೆಯ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸಬಹುದು. ಮುಂದಿನ ಕಾಲಂನಲ್ಲಿ ಇದನ್ನು ವಿಸ್ತರಿಸಿ ಬರೆಯುವೆ.
ಇನ್ನು ಠಕ್ಕರ ಹಿನ್ನೆಲೆಯಲ್ಲಿ ಗಂಟಿಚೋರರನ್ನು ನೋಡಿದರೆ ಮತ್ತೊಂದು ಆಯಾಮ ತೆರೆದುಕೊಳ್ಳುತ್ತದೆ. ಠಕ್ಕರು ದೊಡ್ಡಮಟ್ಟದ ಲೂಟಿ, ಕೊಲೆ ಸುಲಿಗೆ ಮುಂತಾದವುಗಳ ಮೂಲಕ ಜನರನ್ನು ಭಯಭೀತರನ್ನಾಗಿಸುತ್ತಿದ್ದರು. ಅವರು ಹೆಚ್ಚಾಗಿ ವ್ಯಾಪಾರಿಗಳನ್ನು ಲೂಟಿ ಮಾಡುತ್ತಿದ್ದರು. ಹಾಗಾಗಿ ಇವರು ಒಂದು ರೀತಿಯಲ್ಲಿ ಅಲೆಮಾರಿ ಕಳ್ಳರಾಗಿದ್ದರು. ಆದರೆ ಗಂಟಿಚೋರರ ಹೆಸರಲ್ಲೇ ‘ಗಂಟುಕಳ್ಳರು’ ಎಂದಿರುವುದು ಇವರ ಕಳ್ಳತನದ ಸ್ವರೂಪವನ್ನು ಕಾಣಿಸುತ್ತದೆ. ಹೀಗಾಗಿಯೇ ಇವರನ್ನು ಸಂತೆಕಳ್ಳರು ಎಂದೂ ಕರೆಯುತ್ತಿದ್ದರು. ಇವರದು ಉತ್ತರಭಾರತದ ಠಕ್ಕರಂತೆ ಬೃಹತ್ ಜಾಲವಾಗಿರದೆ ಸಣ್ಣಪುಟ್ಟ ಕಳ್ಳತನದಲ್ಲಿ ತೊಡಗಿಕೊಂಡ ಹೊಟ್ಟೆಪಾಡಿನ ಕಳ್ಳರಾಗಿದ್ದರು. ಮೇಲೆ ವಿವರಿಸಿದಂತೆ ಠಕ್ಕರ ಹಿನ್ನೆಲೆಯನ್ನು ‘ಸೈನಿಕ’ ನೆಲೆಯಿಂದ ನೋಡಲಾಯಿತು. ಹಾಗೆಯೇ ಗಂಟಿಚೋರರು ಚಾರಿತ್ರಿಕವಾಗಿ ಸೈನಿಕರಾಗಿದ್ದರೆ ಎನ್ನುವ ಪ್ರಶ್ನೆಯೊಂದು ಕಾಡುತ್ತದೆ. ಇದರ ಹಿನ್ನೆಲೆಯನ್ನು ಹುಡುಕುತ್ತಾ ಹೋದರೆ ಈ ಸಮುದಾಯ ಹಿಂದೆ ಸೈನಿಕ ಸಮುದಾಯವಾಗಿತ್ತು ಎನ್ನುವುದಕ್ಕೆ ಕೆಲವು ಪುರಾವೆಗಳು ಸಿಗುತ್ತವೆ. ಇದರ ಹುಡುಕಾಟದ ಕೆಲವು ಸಂಗತಿಗಳನ್ನು ನೋಡೋಣ.
ಅಪರಾಧಿ ಬುಡಕಟ್ಟುಗಳ ಬಗ್ಗೆ ನಡೆದ ಅಧ್ಯಯನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅವರ ಸಾಂಸ್ಕೃತಿಕ ಆಚರಣೆಗಳಲ್ಲಿ, ನೆನಪು ಸ್ಮೃತಿಲೋಕದಲ್ಲಿ ಸಿಗುವ ಗುರುತುಗಳು ಆಯಾ ಸಮುದಾಯದ ಮೂಲದ ಜತೆ ಸಂಬಂಧ ಬೆಸೆಯುತ್ತವೆ. ಅಂತೆಯೇ ಕೆಲವು ಸಮುದಾಯಗಳಲ್ಲಿ ಮೂಲದ ಜತೆ ಸಂಬಂಧ ಬೆಸೆಯದಷ್ಟು ಸ್ಮೃತಿಲೋಕಗಳು ಅಳಿಸಿಹೋಗಿದ್ದೂ ಇದೆ. ಅಂತಹವುಗಳ ಚರಿತ್ರೆ ಅಸ್ಪಷ್ಟವಾಗಿಯೇ ಉಳಿಯುತ್ತದೆ. ಗಂಟಿಚೋರ್ ಸಮುದಾಯದ ಅಧ್ಯಯನಕ್ಕೆ ತೊಡಗಿದಾಗಲೂ ಇಂಥದ್ದೇ ಮೂಲದ ಹುಡುಕಾಟ ತೊಡಕಾಗಿಯೇ ಸಂಭವಿಸಿತು. ಕಾರಣ ಗಂಟಿಚೋರ್ ಸಮುದಾಯದ ನೆನಪುಗಳಲ್ಲಿ ತಮ್ಮ ವೃತ್ತಿಯೇ ತುಡುಗುತನ ಅಥವಾ ಲೂಟಿ ಮಾಡುವಿಕೆ ಎನ್ನುವುದಕ್ಕೆ ಸೀಮಿತವಾಗಿತ್ತು.
ವಸಾಹತುಶಾಹಿ ಆಡಳಿತಗಾರರು ದಾಖಲಿಸಿದ ದಾಖಲೆಗಳಲ್ಲಿಯೂ ಈ ಸಮುದಾಯದ ವೃತ್ತಿಯೇ ಕಳ್ಳತನ ಅಥವಾ ತುಡುಗುತನ ಎಂದು ದಾಖಲಾಗಿದೆ. ಈ ದಾಖಲೆಗಳನ್ನು ಆಧರಿಸಿದ ಅಧ್ಯಯನಕಾರರೂ ಈ ಸಮುದಾಯದ ವೃತ್ತಿಯೇ ಕಳ್ಳತನ ಎನ್ನುವಲ್ಲಿಗೆ ತಲುಪಬೇಕಾಗುತ್ತದೆ. ಆದರೆ ವಸಾಹತುಶಾಹಿ ಆಡಳಿತದ ಚರಿತ್ರೆಯ ಕಟ್ಟುವಿಕೆಗೆ ತುಂಬಾ ಮಿತಿಗಳಿದ್ದವು. ಸ್ಥಳೀಯ ಸಮುದಾಯದ ಚರಿತ್ರೆಯ ಆಳಕ್ಕೆ ಹೋಗಿ ದಾಖಲಿಸುವ ಅನಿವಾರ್ಯ ಕೂಡ ಅವರಿಗಿರಲಿಲ್ಲ. ಹಾಗಾಗಿ ಈ ಸಮುದಾಯಗಳನ್ನು ದಾಖಲಿಸುವ ಹೊತ್ತಿಗೆ ಇದ್ದ ಚಹರೆಗಳನ್ನು ಆಯಾ ಸಮುದಾಯದ ನಿಜ ಚಹರೆಗಳೆಂತಲೂ ಮೂಲಚಹರೆಗಳೆಂತಲೂ ದಾಖಲಿಸಿದರು. ಈ ಬಗ್ಗೆ ಮಾನವಶಾಸ್ತ್ರೀಯ ಅಧ್ಯಯನಗಳು ಹಲವು ರೀತಿಯಲ್ಲಿ ಟೀಕೆ ಪ್ರಶ್ನೆಗಳನ್ನು ಎತ್ತಿವೆ. ಆ ಮೂಲಕ ವಸಾಹತುಶಾಹಿ ಆಡಳಿತಗಾರರ ದಾಖಲಾತಿಯ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿವೆ.
ಠಕ್ಕರ ಅಂಬಾಭವಾನಿ ಕರ್ನಾಟಕದಲ್ಲಿ ನೆಲೆಸಿದ ಗಂಟಿಚೋರ್ ಸಮುದಾಯದ ಆರಾಧನಾ ದೇವತೆಯೂ ಆಗಿದ್ದಾಳೆ. ಠಕ್ಕರ ನಂಬಿಕೆ ಲೋಕ ಗಂಟಿಚೋರ್ ಸಮುದಾಯದಲ್ಲಿ ಚೂರು ಬದಲಾವಣೆಯೊಂದಿಗೆ ಕಾಣುತ್ತದೆ. ಠಕ್ಕತನಕ್ಕೆ ದೇವಿಯ ‘ಶುಭಶಕುನ’ ಮುಖ್ಯವಾಗಿದೆ. ಅಂತೆಯೇ ಗಂಟಿಚೋರರಲ್ಲಿ ತುಡುಗುತನಕ್ಕೆ ದೇವಿಯ ಶಕುನವೂ ಸೇರಿದಂತೆ ಹನುಮಂತನ ‘ಶಕುನ’ ಮುಖ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಸಮುದಾಯದ ಅಧ್ಯಯನಕಾರರು ಆಯಾ ಸಮುದಾಯದ ಸ್ಮೃತಿಲೋಕಕ್ಕೂ ಹಿಂದಣದ ಲೋಕ ಕಾಣುವ ಮತ್ತು ವಸಾಹತುಶಾಹಿ ಆಡಳಿತಗಾರರ ದಾಖಲೆಗಳಿಗಿಂತ ಎಷ್ಟು ದೂರ ಹಿಂದೆ ಸರಿಯಲು ಸಾಧ್ಯವಿದೆ ಎನ್ನುವ ಹುಡುಕಾಟ ಮಾಡಬೇಕಾಗಿದೆ. ಅದು ಸಮುದಾಯ ಅಧ್ಯಯನಗಳ ಅನಿವಾರ್ಯ ಕೂಡ ಆಗಿದೆ. ಹಾಗೆ ಮಾಡಿದ ಹುಡುಕಾಟದ ಕೆಲವು ಸಂಗತಿಗಳನ್ನು ಚರ್ಚಿಸಲಾಗಿದೆ. ಈ ಅಂಶಗಳನ್ನು ಆಧರಿಸಿ ಗಂಟಿಚೋರ್ ಸಮುದಾಯ ಮೂಲತಃ ಸೈನಿಕ ಸಮುದಾಯವಾಗಿರಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ. ಆ ಅಂಶಗಳು ಕೆಳಗಿನಂತಿವೆ,
1. ಸದ್ಯಕ್ಕೆ ಲಭ್ಯವಾದ ದಾಖಲೆಯ ಪ್ರಕಾರ ಮಹಾರಾಷ್ಟ್ರದ ಪ್ರಖರ ವೈಚಾರಿಕ ಲೇಖಕರಾದ ಗೋವಿಂದ ಪನ್ಸಾರೆ ಅವರ ಬಹುಚರ್ಚಿತ ಕೃತಿ ‘ಶಿವಾಜಿ ಯಾರು?’ ಎನ್ನುವ ಪುಸ್ತಕದಲ್ಲಿ ಒಂದು ದಾಖಲೆ ಸಿಗುತ್ತದೆ. ಮಹಾರಾಷ್ಟ್ರದಲ್ಲಿ ಶಿವಾಜಿಯು ಪ್ರಾಬಲ್ಯಕ್ಕೆ ಬಂದದ್ದನ್ನು ವಿವರಿಸುತ್ತಾ ಪನ್ಸಾರೆಯವರು:
‘ಶಿವಾಜಿಯ ಹೆಸರಿನಿಂದ ವರ್ಣಶ್ರೇಷ್ಠತ್ವವನ್ನು ಸ್ಥಾಪಿಸಲು ಬಯಸುವವರು ಗಮನದಲ್ಲಿಡಬೇಕಾದ ಸಂಗತಿ ಎಂದರೆ, ಶಿವಾಜಿಯ ಸ್ವರಾಜ್ಯ ಕಾರ್ಯದಲ್ಲಿ ಹೆಚ್ಚಿನ ಸಂಗತಿಗಳೆಲ್ಲ ಉಚ್ಚವರ್ಣದವರವಾಗಿರಲಿಲ್ಲ. ಅಲ್ಲದೆ ಅವರು ಸರದಾರ ಜಮೀನ್ದಾರರೂ ಆಗಿರಲಿಲ್ಲ. ಅವರು ಕೆಳವರ್ಗದವರಾದ ದೀನ ದಲಿತರಾದ ರೈತರಾಗಿದ್ದರು. ಯಾವ ಮಾಳವರ ಛಲದಿಂದ, ಪ್ರಾಮಾಣಿಕ ನಿಷ್ಠೆಯಿಂದ ಮತ್ತು ಅಸೀಮ ತ್ಯಾಗದಿಂದ ಶಿವಾಜಿ ಪ್ರಚಂಡ ಪರಾಕ್ರಮವನ್ನು ವ್ಯಕ್ತಪಡಿಸುವುದು ಸಾಧ್ಯವಾಯಿತೋ ಆ ಮಾಳವರೆಲ್ಲರೂ ಸಾಮಾನ್ಯ ರೈತರಾಗಿದ್ದರು.
ಹಳೆಯ ವತನದಾರರು ಸರದಾರರು ಆರಂಭದಲ್ಲಿ ಶಿವಾಜಿಗೆ ಹೆಚ್ಚಿನ ಬೆಂಬಲ ವ್ಯಕ್ತಪಡಿಸಲಿಲ್ಲ. ಆದರೆ ಶಿವಾಜಿ ಚಿಕ್ಕ ದೊಡ್ಡ ಹೊಸ ಸೇನಾ ನಾಯಕರನ್ನು ನಿರ್ಮಾಣ ಮಾಡಿದನು. ಇವರೆಲ್ಲಾ ಹುಟ್ಟಿನಿಂದ ಜನಸಾಮಾನ್ಯರಾಗಿದ್ದರು, ಶೌರ್ಯ ಪರಾಕ್ರಮದಿಂದ ಬೆಳೆದವರು. ಪನ್ಹಾಳದ ಮುತ್ತಿಗೆಯಿಂದ ಪಾರಾಗಲು ಸಹಕರಿಸಿದ ‘ಶಿವಾ’ ನಾವಿ(ಕ್ಷೌರಿಕ)ನಾಗಿದ್ದ. ಅಫಜಲಖಾನನ ವಧೆಯ ಕಾಲಕ್ಕೆ ಶಿವಾಜಿಯ ನಂಬಿಗಸ್ಥ, ಚಪಲ ಯೋಧನಾಗಿ ಜೊತೆಗೆ ಹೋದ ಜೀವಾ ಮಹಾಲನೂ ಸಹ ಜಾತಿಯಿಂದ ನಾವಿಯಾಗಿದ್ದ. ಅವನ ಅಡ್ಡಹೆಸರು ಸಂಕಪಾಳ. ಅವನು ಜಾವಳಿ ಪ್ರಾಂತ್ಯದ ಮೌಜೇ ಕೊಂಡಿವಲಿಯವನು. ಅವನೂ ಸಹ ಒಬ್ಬ ಸಾಮಾನ್ಯ ಪ್ರಜೆ.
ಶಿವಾಜಿಯ ಗೂಢಚಾರ ಪ್ರಮುಖನಾದ ಬಹಿರಜಿ ನಾಯಕನು ರಾಮೋಶಿ(ಗಂಟುಚೋರ) ಜಾತಿಯವನಾಗಿದ್ದನು. ಒಕ್ಕಲುತನ ಮಾಡುವ ಉಪಜೀವಿಕೆಯಲ್ಲಿ ಬದುಕುತ್ತಿರುವ ಸಾಮಾನ್ಯ ಕುಣಬಿ (ರೈತರು)ಯನ್ನು ಶಿವಾಜಿ ತನ್ನ ಸಾಥಿದಾರರನ್ನಾಗಿ ಮಾಡಿಕೊಂಡು ರಾಜ್ಯ ಸ್ಥಾಪಿಸಿದ. ಒಕ್ಕಲುತನ ಮಾಡುವ ಮರಾಠ ಕುಣಬಿಗಳನ್ನು ಪರಂಪರೆಯಿಂದ ಶೂದ್ರ ಎಂದು ಬಗೆಯುತ್ತಿದ್ದರು.
ವ್ಯಕ್ತಿಗತ ಉದಾಹರಣೆಗಳ ಜತೆಗೆ ಸಮುದಾಯಗಳ ಉಲ್ಲೇಖವೂ ಇತಿಹಾಸದಲ್ಲಿದೆ. ಸಭಾಸದರ ಭಖರಿಯಲ್ಲಿ ಒಂದು ಉಲ್ಲೇಖವಿದೆ. ಬೇಡರು, ತಕ್ಕಡಿಯವರಿಗೆಲ್ಲಾ ಅವರವರ ಶಕ್ತಿಗೆ ತಕ್ಕಂತೆ ಉದ್ಯೋಗ ನೀಡಲಾಯಿತು. ಹೀಗಾಗಿ ಶಿವಾಜಿಯ ರಾಜ್ಯದಲ್ಲಿ ಗುನ್ಹೆ ಮತ್ತು ಉಪದ್ರವ ಎಂದಿಗೂ ತಲೆದೋರಲಿಲ್ಲ. ಗುನ್ಹೆಗಾರರು ಎಂದು ಭಾವಿಸುವ ಜನರಿಗೆ ಅವರ ಪರಾಕ್ರಮಕ್ಕೆ ಅವಕಾಶ ಸಿಗುತ್ತದೆ. ಹೀಗಾಗಿ ಅವರು ಸಾಮಾನ್ಯವಾಗಿ ಉಪದ್ರವ ಮಾಡುವುದಿಲ್ಲ.
ಶಿವಾಜಿಯು ನೌಕಾದಳ ನಿರ್ಮಿಸಿದ್ದು ಪರಂಪರಾಗತ ಕ್ಷತ್ರಿಯ ಅಥವಾ ಮರಾಠರ ಸಹಾಯದಿಂದಲ್ಲ. ನೌಕಾದಳದ ಪ್ರಮುಖ ನಾವಿಕ ಮುಸಲ್ಮಾನನಾಗಿದ್ದನಂತೆ, ನೌಕಾದಳದ ಬಹುಸಂಖ್ಯೆಯ ಸೈನಿಕರೆಲ್ಲಾ ಅಂಬಿಗ, ಸೋನಕೋಳಿ, ಭಂಡಾರಿ, ಮುಸಲ್ಮಾನ ಮುಂತಾದ ಜಾತಿಯ ಜನರೇ ಇದ್ದರು. ಸಮುದ್ರದಿಂದ ಉಪಜೀವನ ನಡೆಸುತ್ತಿದ್ದ ಕಷ್ಟಜೀವಿಗಳನ್ನೇ ಶಿವಾಜಿ ಸೈನಿಕರನ್ನಾಗಿಸಿದ.
ಈ ಉಲ್ಲೇಖವು ಸದ್ಯಕ್ಕೆ ಗಂಟಿಚೋರ್ ಸಮುದಾಯವು ಶಿವಾಜಿಯ (1630-80) ಕಾಲಘಟ್ಟದಲ್ಲಿ ಸೈನಿಕರಾಗಿದ್ದಂತೆ ಕಾಣುತ್ತದೆ. ಇದಕ್ಕೆ ಈ ಉಲ್ಲೇಖದಲ್ಲಿ ಬರುವ ಹಲವು ಸಂಗತಿಗಳು ನೆರವಾಗುತ್ತವೆ. ದಲಿತ ಕೆಳಜಾತಿಗಳನ್ನು ಶಿವಾಜಿ ಸೈನ್ಯಕ್ಕೆ ಸೇರಿಸಿಕೊಂಡು ತನ್ನ ರಕ್ಷಣಾಬಲವನ್ನು ಹೆಚ್ಚಿಸಿಕೊಂಡದ್ದನ್ನು ಬಹುಪಾಲು ಸಂಶೋಧಕರು ಒಪ್ಪಿಕೊಳ್ಳುತ್ತಾರೆ.
2. ಮರಾಠಿ ಮೂಲದ ಭಾವಸಾರ ಕ್ಷತ್ರಿಯರು ಅಂಬಾಭವಾನಿ ಭಕ್ತರು. ರಟ್ಟರ ಕಾಲದಲ್ಲಿ ಇವರು ಸೈನಿಕ ಸೇವೆ ಸಲ್ಲಿಸಿದರೆಂದು ಇತಿಹಾಸಕಾರರ ಅಭಿಪ್ರಾಯ. ಭವಾನಿ ಆರಾಧಕರಾಗಿದ್ದ ಶಿವಾಜಿಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಸೇನೆ ವಿಸರ್ಜನೆಗೊಂಡ ಬಳಿಕ ಉತ್ತರ ಕರ್ನಾಟಕದ ಭಾಗಗಳಲ್ಲಿ ನೆಲೆ ನಿಂತರು. ಅಂಬಾಭವಾನಿಗೆ ಉತ್ತರ ಕರ್ನಾಟಕದಲ್ಲಿ ನೆಲೆ ಸಿಕ್ಕಿದ್ದು ಶಿವಾಜಿ ಹಾಗೂ ಪೇಶ್ವೆಗಳ ಸೈನಿಕ ವಲಸೆಯಿಂದ. ಸಮುದಾಯಗಳು ಸೈನಿಕರಾಗಿ ಯುದ್ಧ ಮತ್ತು ಕೋಟೆ ರಕ್ಷಣೆಯ ಭಾಗವಾಗಿ ಹೊಸ ಪ್ರದೇಶಕ್ಕೆ ವಲಸೆ ಹೋಗಿ ನೆಲೆ ನಿಂತಾಗ ತಮ್ಮ ದೈವಗಳನ್ನೂ ಸಾಗಿಸುತ್ತವೆ ಎನ್ನುವ ರಹಮತ್ ತರೀಕೆರೆ ಅವರ `ಕರ್ನಾಟಕದ ಶಾಕ್ತಪಂಥ’ ಕೃತಿಯಲ್ಲಿನ ವಿವರಗಳನ್ನು ನೋಡಿದರೆ, ಉತ್ತರ ಕರ್ನಾಟಕದಲ್ಲಿ ನೆಲೆ ನಿಂತ ಗಂಟಿಚೋರ್ ಸಮುದಾಯಕ್ಕೂ ಈ ಸಮುದಾಯದ ಆರಾಧ್ಯ ದೈವವಾಗಿ ಅಂಬಾಭವಾನಿ ಪೂಜೆಗೊಳ್ಳುವುದಕ್ಕೂ ಸಂಬಂಧವಿದೆ. ಈ ಹಿನ್ನೆಲೆಯೂ ಗಂಟಿಚೋರರು ಮೂಲತಃ ಸೈನಿಕರಾಗಿದ್ದಕ್ಕೆ ಸಾಕ್ಷಿಯನ್ನು ಒದಗಿಸುತ್ತದೆ.
3. ಗಂಟಿಚೋರ್ ಸಮುದಾಯದ ಆರಾಧನ ಪದ್ಧತಿ ಮತ್ತು ಆಚರಣೆಗಳನ್ನು ನೋಡಿದರೆ ಈ ಸಮುದಾಯದವರು ಶಾಕ್ತೇಯರು ಎನ್ನುವುದು ಖಚಿತವಾಗುತ್ತದೆ ಈ ಹಿನ್ನೆಲೆಯಲ್ಲಿ ಗಂಟಿಚೋರರು ಆರಂಭಿಕ ಕಾಳಿ ಆರಾಧಕರು ಎನ್ನುವ ಸಂಗತಿಯೇ ಯುದ್ಧದ ಜತೆ ನಂಟು ಬೆಸೆಯುತ್ತದೆ. ಕಾರಣ ಕಾಳಿ ಮೂಲತಃ ಯುದ್ಧದೇವತೆ. ಸೈನಿಕ ಸಮುದಾಯಗಳು ಮೂಲತಃ ಆರಾಧನೆ ಮಾಡುತ್ತಿದ್ದುದು ಕಾಳಿಯನ್ನು ಒಳಗೊಂಡಂತೆ ಸ್ತ್ರೀದೈವಗಳನ್ನು ಎನ್ನುವುದು ಖಚಿತವಾಗಿರುವ ಸಂಗತಿ. ಲಕ್ಷ್ಮಿಯು ಯುದ್ಧದಲ್ಲಿ ವಿಜಯ ದಯಪಾಲಿಸು ಎಂದು ‘ವಿಜಯಲಕ್ಷ್ಮಿ’ಯಾಗಿಯೂ, ಸಂಪತ್ತಿನ ಲೂಟಿ ಹೆಚ್ಚಾಗಲಿ ಎಂದು ‘ಐಶ್ವರ್ಯಲಕ್ಷ್ಮಿ’ಯಾಗಿಯೂ ಯುದ್ಧದ ಸಂದರ್ಭದಲ್ಲಿ ಆರಾಧನೆಗೊಳ್ಳುತ್ತಿದ್ದಳು. ಅಂತೆಯೇ ಸೈನಿಕ ಸಮುದಾಯವೂ ಈ ಕಾರಣಕ್ಕೆ ಲಕ್ಷ್ಮಿಯನ್ನು ಆರಾಧಿಸುತ್ತಿತ್ತು. ಈ ಹಿನ್ನೆಲೆಯನ್ನು ನೋಡಿದರೆ ಲಕ್ಷ್ಮಿಯ ಆರಾಧನೆಯೂ ಗಂಟಿಚೋರ್ ಸಮುದಾಯದಲ್ಲಿದೆ. ರಾಯಭಾಗ ಸಮೀಪದ ಶಾಹು ಪಾರ್ಕ್‌ನಲ್ಲಿರುವ ಗಂಟಿಚೋರರು ಲಕ್ಷ್ಮಿಯನ್ನು ಮುಖ್ಯ ದೇವತೆಯನ್ನಾಗಿ ಆರಾಧಿಸುತ್ತಾರೆ. ಗೋಕಾಕ್ ಫಾಲ್ಸ್ ನಲ್ಲಿಯೂ ಲಕ್ಕವ್ವನ ಆರಾಧನೆ ಇದೆ. ಹೀಗೆ ಶಾಕ್ತೇಯ (ಆರಾಧಕ ) ಸಮುದಾಯವಾಗಿರುವ ಗಂಟಿಚೋರ್ ಸಮುದಾಯದ ಈ ಸಂಗತಿಗಳು ಇವರು ಮೂಲತಃ ಸೈನಿಕ ಸಮುದಾಯವಾಗಿರುವುದನ್ನು ಸಾಕ್ಷೀಕರಿಸುತ್ತವೆ.
4. ಗಂಟಿಚೋರ್ ಸಮುದಾಯದಲ್ಲಿ ಸಾವಿನ ಸಂದರ್ಭದಲ್ಲಿ ಮಾಡುವ ಆಚರಣೆಯೊಂದಿದೆ. ಈ ಆಚರಣೆಯ ಮೂಲವನ್ನು ನೋಡಿದರೆ ಸೈನ್ಯವೃತ್ತಿಗೆ ಸಂಬಂಧಿಸಿದಂತೆ ಕಾಣುತ್ತದೆ. ಗಂಟಿಚೋರರಲ್ಲಿ ಸತ್ತವರನ್ನು ದೈವಕ್ಕೇರಿಸುವ ಆಚರಣೆ ಇದೆ. ಈ ಸಂದರ್ಭದಲ್ಲಿ ಸತ್ತವರ ಮುಖ ಮಾಡಿಸಲಾಗುತ್ತದೆ. ಮುಖ ಮಾಡಿಸುವುದೆಂದರೆ ಗಂಡಾದರೆ ಹನುಮಂತ ಅಥವಾ ಗಂಡು ದೈವದ ಚಿತ್ರದ ಬಿಲ್ಲೆ, ಹೆಣ್ಣಾಗಿದ್ದರೆ ಅಂಬಾಭವಾನಿ ಅಥವಾ ಯಲ್ಲಮ್ಮನ ಮುಖಚಿತ್ರದ ಬಿಲ್ಲೆಯನ್ನು ಟಂಕಿಸಿ ದೇವರ ಗದ್ದುಗೆಗೆ ಇಡುತ್ತಾರೆ. ಈ ಬಿಲ್ಲೆಗಳು ಸಾಮಾನ್ಯವಾಗಿ ಎಲ್ಲಾ ಭಾಗದ ಗಂಟಿಚೋರ್ ಸಮುದಾಯದಲ್ಲೂ ಕಂಡುಬರುವ ಒಂದು ಆಚರಣೆಯಾಗಿದೆ.
ಈ ಆಚರಣೆಯ ಮೂಲ ಮನುಷ್ಯರನ್ನು ಮೂರ್ತೀಕರಿಸುವುದು ಮತ್ತು ದೈವತ್ವಕ್ಕೇರಿಸುವುದೇ ಆಗಿದೆ. ಸಾಮಾನ್ಯವಾಗಿ ಈ ಆಚರಣೆಯು ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಹುಟ್ಟಿದೆ. ಸೈನಿಕರು ಅಕಾಲಿಕ ಮರಣ ಹೊಂದಿದರೆ ಅವರ ಉಳಿದ ಆಯಸ್ಸನ್ನು ಮೂರ್ತೀಕರಿಸಿ ಆರಾಧಿಸುವುದಿದೆ. ಈ ಹಿನ್ನೆಲೆಯಲ್ಲಿಯೇ ವೀರಗಲ್ಲುಗಳ ಸ್ಥಾಪನೆಯನ್ನು ನೋಡಬಹುದು. ಹೀಗೆ ಅಕಾಲಿಕ ಸಾವಿನ ನಂತರ ಮನುಷ್ಯರನ್ನು ಮೂರ್ತೀಕರಿಸುವ ಪರಂಪರೆ ಸೈನಿಕ ಸಮುದಾಯಗಳಲ್ಲಿತ್ತು. ಇದು ಮೂಲದ ಚಹರೆಯನ್ನು ಬದಲಿಸಿಕೊಂಡು ಕಾಲಾನಂತರದಲ್ಲಿ ಸಾವನ್ನಪ್ಪಿದ ಎಲ್ಲರ ಮುಖ ಮಾಡಿಸುವುದು ಒಂದು ಆಚರಣೆಯಾಗಿ ಬದಲುಗೊಂಡಿರಬಹುದು. ಈ ಆಚರಣೆ ಕೂಡ ಗಂಟಿಚೋರ್ ಸಮುದಾಯ ಮೂಲತಃ ಸೈನಿಕ ಸಮುದಾಯವಾಗಿತ್ತು ಎನ್ನುವುದಕ್ಕೆ ಪುರಾವೆಯಾಗಿದೆ.
5. ಹದಿನಾರನೇ ಶತಮಾನದಲ್ಲಿ ರಜಪೂತ ದೊರೆ ರಾಣಾ ಪ್ರತಾಪ್ ಸಿಂಗ್ ತನ್ನ ಸೈನ್ಯದಲ್ಲಿ ಕೆಲವು ಬುಡಕಟ್ಟುಗಳನ್ನು ಸೇರಿಸಿಕೊಂಡಿದ್ದ. ಈತನು ಬುಡಕಟ್ಟುಗಳನ್ನು ಯುದ್ಧಾಳುಗಳನ್ನಾಗಿ ಬದಲಾಯಿಸಿದ್ದನು. ಇದು ಹೀಗೆ 18ನೇ ಶತಮಾನದವರೆಗೆ ನಡೆದಿದೆ. ದಕ್ಷಿಣ ಭಾರತದಲ್ಲಿ ‘ಕಲ್ಲರ್’ ಮತ್ತು ‘ಮಾರ್ವಾರ್’ ಬುಡಕಟ್ಟುಗಳು ಸೈನ್ಯದಲ್ಲಿ ಸೇರಿದ್ದರು. ಟಿಪ್ಪು ಸುಲ್ತಾನನಲ್ಲಿ ಬೋಯಾ ಬುಡಕಟ್ಟು ಸೈನ್ಯದಲ್ಲಿ ಸೇರಿತ್ತು. ಹೀಗೆ ಬುಡಕಟ್ಟು ಮತ್ತು ಸೇನೆ ಒಂದರೊಳಗೊಂದು ಬೆಸೆಯುವ ಕಾಲಘಟ್ಟವೂ ಇದಾಗಿತ್ತು. ಈ ಮೇಲಿನ ಸಂಗತಿಗಳ ಹಿನ್ನೆಲೆಯಲ್ಲಿ ಚರ್ಚೆಯನ್ನು ಮುಂದುವರಿಸುವುದಾದರೆ ‘ಲೂಟಿ’ ಎನ್ನುವ ಪದ ಕಳ್ಳತನಕ್ಕೆ ಸಂವಾದಿಯಾಗಿ ಬಳಕೆಯಾದ ಪದವಲ್ಲ. ಈ ಪದವು ಅರಸುಮನೆತನಗಳ ಸೋಲು ಗೆಲುವಿನ ಜತೆ ತಳಕು ಹಾಕಿಕೊಂಡಿದೆ. ಒಬ್ಬ ಪ್ರಬಲ ರಾಜನಾಗಬೇಕಾದರೆ ತನ್ನ ರಾಜಬೊಕ್ಕಸವನ್ನು ತುಂಬಿಸಿಕೊಳ್ಳಬೇಕಿತ್ತು. ಹೀಗೆ ಪ್ರಬಲ ಬೊಕ್ಕಸವನ್ನು ತುಂಬಿಸಿಕೊಳ್ಳಲು ಸೈನಿಕರು ಯುದ್ಧಾಕ್ರಮಣದ ಭಾಗವಾಗಿಯೇ ‘ಲೂಟಿ’ ಮಾಡುತ್ತಿದ್ದರು. ಈ ಲೂಟಿಯೇ ಕಾಲಾನಂತರ ‘ಕಳ್ಳತನ’ ಎಂಬ ಪದದ ಜತೆ ಸಮಾನಾಂತರವಾಗಿ ಬಳಕೆಯಾದಂತೆ ಕಾಣುತ್ತದೆ.
ಲೂಟಿ, ಆಕ್ರಮಣ, ಸಂಪತ್ತನ್ನು ದೋಚುವಿಕೆ, ಅನ್ಯರ ಸ್ವತ್ತನ್ನು ತನ್ನದಾಗಿಸಿಕೊಳ್ಳುವಿಕೆ ಇವೆಲ್ಲಾ ರಾಜಶಾಹಿಯ ಕಾಲದ ಶೌರ್ಯ ಸಾಹಸ ವಿಜಯದ ಪ್ರತೀಕವಾಗಿದ್ದವು. ಈ ಎಲ್ಲಾ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದವರು ಸೈನಿಕರು. ಅಂತೆಯೇ ಲೂಟಿತನಕ್ಕೆ ಧೈರ್ಯ, ಸಾಹಸ, ಕೌಶಲ್ಯ ಕೂಡ ಸೈನ್ಯದಲ್ಲಿ ಸಿಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬ್ರಿಟಿಷ್ ಆಡಳಿತದ ಕಾರಣಕ್ಕೆ ವಿಸರ್ಜನೆಯಾದ ಸೈನಿಕ ಸಮುದಾಯಗಳು ತಮಗೆ ಗೊತ್ತಿರುವ ‘ಲೂಟಿ’ಯನ್ನು ಹೊಟ್ಟೆಪಾಡಿಗಾಗಿ ಬಳಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಗಂಟಿಚೋರ್ ಸಮುದಾಯವನ್ನು ಪರಿಶೀಲಿಸಿದಾಗ ‘ಲೂಟಿ’ಯ ಪ್ರವೃತ್ತಿಯೇ ‘ಚೋರ’ತನದ ಪ್ರವೃತ್ತಿಯ ಆಯಾಮ ಪಡೆದು ಗಂಟಿಚೋರ್ ಹೆಸರು ಬಂದಿರುವ ಸಾಧ್ಯತೆ ಇದೆ.
ಈ ಮೇಲಿನ ಎಲ್ಲಾ ಸಂಗತಿಗಳನ್ನು ಗಮನಿಸಿದರೆ ಗಂಟಿಚೋರ್ ಸಮುದಾಯವು ಮೂಲತಃ ಸೈನಿಕ ಸಮುದಾಯವಾಗಿತ್ತು. ಇದಕ್ಕೂ ಮೂಲದಲ್ಲಿ ದುಡಿವ ವರ್ಗದ ಕೆಳಸಮುದಾಯವಾಗಿರುವ ಸಾಧ್ಯತೆ ಇದೆ. ಹೀಗೆ ದುಡಿವ ವರ್ಗದಿಂದ ಸ್ಥಳೀಯ ರಾಜಶಾಹಿ ಆಡಳಿತದಲ್ಲಿ ಇವರೆಲ್ಲಾ ಅನಿವಾರ್ಯವಾಗಿ ಸೈನ್ಯಕ್ಕೆ ಸೇರಿದ್ದಾರೆ. ಅಂತೆಯೇ ಬ್ರಿಟಿಷರನ್ನು ಒಳಗೊಂಡ ವಸಾಹತುಗಳು ಸ್ಥಳೀಯ ರಾಜರನ್ನು ವಶಪಡಿಸಿಕೊಂಡ ನಂತರದಲ್ಲಿ ಸೈನ್ಯಗಳು ವಿಸರ್ಜನೆಯಾಗಿ ಈ ಸಮುದಾಯಗಳು ಮುಂದೆ ಹೊಟ್ಟೆಪಾಡಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಹಾಗೆ ಹೊಟ್ಟೆಪಾಡಿನ ಚಟುವಟಿಕೆಯಲ್ಲಿ ‘ಚೋರತನ’ವನ್ನು ಅವಲಂಬಿಸಿದ್ದರ ಪರಿಣಾಮ ಗಂಟಿಚೋರರಾಗಿರುವ ಸಾಧ್ಯತೆಗಳಿವೆ.
(ಚಿತ್ರಗಳು: ಲೇಖಕರ ಸಂಗ್ರಹದಿಂದ)
ಅರಣ್ ಜೋಳದಕೂಡ್ಲಿಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಜೋಳದಕೂಡ್ಲಿಗಿಯವರು. ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು, ಪ್ರಸ್ತುತ ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ಮುಗಿಸಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010), ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017) ಓದು ಒಕ್ಕಾಲು ( ಸಾಹಿತ್ಯ ವಿಮರ್ಶೆ, 2020) ಕೊರೋನಾ ಜಾನಪದ (ನವಜಾನಪದ ಕುರಿತ ಸಂಶೋಧನ ಲೇಖನಗಳ ಸಂಕಲನ, 2020) ನಡುವೆ ಸುಳಿವ ಹೆಣ್ಣು ( ಮಂಜಮ್ಮ ಜೋಗತಿ ಅವರ ಆತ್ಮಕಥನದ ನಿರೂಪಣೆ, 2020)