ಈ ಪ್ರಪಂಚದ ಒಂದಷ್ಟು ದೇಶಗಳನ್ನು ಸುತ್ತುವಾಗ ಗಣೇಶನ ಖ್ಯಾತಿ ಅಚ್ಚರಿ ತಂದಿತ್ತು. ಯೂರೋಪ್, ಯುನೈಟೆಡ್ ಕಿಂಗ್ಡಮ್ ಅಲ್ಲಂತೂ ಗಣೇಶನ ಪರಿಚಯ ಸುಮಾರು ಜನರಿಗಿದೆ. ಅಂದಚೆಂದಕ್ಕೆಂದು ಅವನ ಮೂರ್ತಿಗಳನ್ನು ಇಟ್ಟಿರುವುದು ದಿಟ. ನಮ್ಮ ಆಸ್ಟ್ರೇಲಿಯದಲ್ಲೇಕೋ ಗಣಪನ ಹೆಸರು ಜನರಿಗೆ ಅಷ್ಟೊಂದು ಗೊತ್ತಿಲ್ಲ. ‘ಯು.ಕೆ. ಮತ್ತು ಅಮೇರಿಕಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾ ಇಪ್ಪತ್ತು ವರ್ಷಗಳಷ್ಟು ಹಿಂದಿದೆ’ ಎನ್ನುವ ಜಾಣ್ಣುಡಿ ನಿಜವೇನೂ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ನಿಮಗೆಲ್ಲ ಗೌರಿ-ಗಣೇಶ ಹಬ್ಬಗಳ ಶುಭಾಶಯಗಳು.
ಅಮ್ಮ-ಮಗನ ಹಬ್ಬ ಅದೇನೊ ವಿಶೇಷ ಅನುಭೂತಿ ಹುಟ್ಟಿಸುತ್ತದೆ. ಅದರಲ್ಲೂ ಗಣೇಶ ಅಂದರೆ ನಮಗೆಲ್ಲಾ ಖುಷಿಖುಷಿ. ನಮ್ಮನೆಯಲ್ಲಿ ವಿವಿಧ ಗಣೇಶ ವಿಗ್ರಹಗಳಿವೆ. ನಮ್ಮವರೆಂದು ಹೇಳಿಕೊಳ್ಳುವ ಬಂಧುಗಳು, ಸಂಬಂಧಿಗಳು ಇಲ್ಲದೆ ಈ ದೇಶದಲ್ಲಿ ‘ನಾವಿಬ್ಬರು, ನಮಗಿಬ್ಬರು’ ಎನ್ನುತ್ತಾ ಬದುಕುವಾಗ ಒಮ್ಮೊಮ್ಮೆ ಖಾಲಿತನ ಕಾಡುತ್ತದೆ. ಆ ಒಂಟಿತನದ ನಿಮಿಷಗಳಲ್ಲಿ ಮಕ್ಕಳಿಗೆ ಹೇಳುವುದು ‘ಗಣೇಶ ನಮ್ಮ ಬೆಸ್ಟ್ ಫ್ಯಾಮಿಲಿ ಫ್ರೆಂಡ್ ಕಣ್ರೊ, ಅಂಡ್ ಗಣೇಶ ನಮ್ಮ ಬಂಧು ಕೂಡ’. ಮಕ್ಕಳಿಗೆ ಹೇಳುವುದೋ ಅಥವಾ ನನಗೆ ನಾನೇ ಹೇಳಿಕೊಂಡು ಸಮಾಧಾನಪಟ್ಟುಕೊಳ್ಳುವುದೊ ಎನ್ನುವ ಸಣ್ಣ ಸಂಶಯ ಕೂಡ ತಲೆಯಿಡುತ್ತದೆ.
ಆಗ ನೆನಪಿಗೆ ಬರುವುದು ಒಂದು ಕಾಲದಲ್ಲಿ ನಾನು ಜಂಬಕೊಚ್ಚುವ ಧಾಟಿಯಲ್ಲಿ ಹೇಳುತ್ತಿದ್ದ ಮಾತು – ಐ ಆಮ್ ಎ ಗ್ಲೋಬಲ್ ಸಿಟಿಜನ್. ಹಾಗೆ ಹೇಳುವ ಕಾಲದಲ್ಲಿ ನಾನಿನ್ನೂ ಭಾರತದಲ್ಲೇ ಬದುಕುತ್ತಿದ್ದೆ, ಹೀಗೆ ಪರದೇಶಿ-ಅನಿವಾಸಿಯಾಗಿರಲಿಲ್ಲ. ಆಗೆಲ್ಲಾ ಹಾಗೆ ಹೇಳುವಾಗ ‘ನೂರು ಮತದ ಹೊಟ್ಟ ತೂರಿ’ ಕವಿವಾಣಿಯನ್ನು ಪಾಲಿಸುತ್ತಿದ್ದೀನಿ ಎಂದೆನಿಸುತ್ತಿತ್ತು. ಕುವೆಂಪುರವರ ಸಂದೇಶದಂತೆ ವಿಶ್ವಪಥದತ್ತ ಸಾಗಬೇಕು, ವಿಚಾರಬುದ್ಧಿಯಿಂದ ನಡೆಯಬೇಕು ಎನ್ನುವುದು ತಲೆಯಲ್ಲಿ ಕೂತಿತ್ತು. ಇದಕ್ಕೂ ಗಣೇಶನ ಹಬ್ಬಕ್ಕೂ ಇರುವ ಲಿಂಕ್ ಏನು ಎಂದು ನೀವು ಕೇಳುತ್ತಿದ್ದರೆ ನಾನು ಹೇಳುವುದು ಈ ಶತಮಾನದಲ್ಲಿ ಗಣೇಶನನ್ನು ನೋಡಿದರೆ ಅವನು ವಿಶ್ವ ಪ್ರಸಿದ್ಧನಾಗಿದ್ದಾನೆ. ವಿಶ್ವಪಥವನ್ನು ಸೂಚಿಸುವವನೂ ಆಗಿದ್ದಾನೆ. ಹೇಳಿಕೇಳಿ, ವಕ್ರತುಂಡ ವಿನಾಯಕನು ಸಿದ್ಧಿ-ಬುದ್ಧಿಗಳನ್ನು ದಯಪಾಲಿಸುವ ದೇವರಲ್ಲವೆ.
ಈ ಪ್ರಪಂಚದ ಒಂದಷ್ಟು ದೇಶಗಳನ್ನು ಸುತ್ತುವಾಗ ಗಣೇಶನ ಖ್ಯಾತಿ ಅಚ್ಚರಿ ತಂದಿತ್ತು. ಯೂರೋಪ್, ಯುನೈಟೆಡ್ ಕಿಂಗ್ಡಮ್ ಅಲ್ಲಂತೂ ಗಣೇಶನ ಪರಿಚಯ ಸುಮಾರು ಜನರಿಗಿದೆ. ಅಂದಚೆಂದಕ್ಕೆಂದು ಅವನ ಮೂರ್ತಿಗಳನ್ನು ಇಟ್ಟಿರುವುದು ದಿಟ. ನಮ್ಮ ಆಸ್ಟ್ರೇಲಿಯದಲ್ಲೇಕೋ ಗಣಪನ ಹೆಸರು ಜನರಿಗೆ ಅಷ್ಟೊಂದು ಗೊತ್ತಿಲ್ಲ. ‘ಯು.ಕೆ. ಮತ್ತು ಅಮೇರಿಕಕ್ಕೆ ಹೋಲಿಸಿದರೆ ಆಸ್ಟ್ರೇಲಿಯಾ ಇಪ್ಪತ್ತು ವರ್ಷಗಳಷ್ಟು ಹಿಂದಿದೆ’ ಎನ್ನುವ ಜಾಣ್ಣುಡಿ ನಿಜವೇನೂ.
ಆದರೆ ಆಸ್ಟ್ರೇಲಿಯಾ-ಭಾರತೀಯ ವಿವಿಧ ಸಂಘಗಳು ಗಣೇಶ ಹಬ್ಬದ ಆಚರಣೆಯನ್ನು ತಪ್ಪದೆ ಪಾಲಿಸುತ್ತಾರೆ. ಇದೇ ವಾರಾಂತ್ಯ ಅಥವಾ ಮುಂದಿನ ವಾರಾಂತ್ಯದಲ್ಲಿ ನಡೆಯುವ ಹಬ್ಬದಾಚರಣೆಯಲ್ಲಿ ಪೂಜೆ, ಆರತಿ, ಪ್ರಸಾದ ವಿನಿಯೋಗ ಜೊತೆಗೆ ಮಕ್ಕಳ ಚಟುವಟಿಕೆಗಳು. clay ಗಣಪತಿ ಮಾಡುವುದು, ಅದಕ್ಕೆ ಬಣ್ಣ ಹಚ್ಚುವ ಕಲೆ, ರಂಗೋಲಿ ಪ್ರದರ್ಶನ, ಭಾರತೀಯ ಸಾಂಪ್ರದಾಯಿಕ ಉಡುಗೆ-ತೊಡುಗೆ, ಒಂದಷ್ಟು ಹಾಡು-ನೃತ್ಯಗಳು ಮಕ್ಕಳನ್ನು ಸೆಳೆಯುತ್ತವೆ. ವಾರಪೂರ್ತಿ ಉದ್ಯೋಗನಿಮಿತ್ತ ಪಾಶ್ಚಾತ್ಯ ಉಡುಪು ತೊಡುವ ಭಾರತೀಯ ಹೆಂಗಳೆಯರಿಗೆ ರೇಷ್ಮೆಸೀರೆ ಉಟ್ಟು ಆಭರಣಗಳನ್ನು ಪ್ರದರ್ಶಿಸುವ, ಗೆಳತಿಯರೊಂದಿಗೆ ನಲಿದಾಡುವ ಸದವಕಾಶ. ಗಂಡಸರು ಇವನ್ನೆಲ್ಲ ನೋಡುತ್ತಾ ಹರಟೆ ಹೊಡೆಯುತ್ತಾ ತಮ್ಮ ಬಾಸ್‌ಗಳ, ಕಂಪನಿಗಳ ಬಗ್ಗೆ ಆಡಿಕೊಳ್ಳುವುದು ಒಂದು ಥೆರಪಿಯಾಗುತ್ತದೆ. ಹೆಂಗಸರು ಕೂಡ ಇದನ್ನು ಮಾಡುತ್ತಾರೆ ಬಿಡಿ.
ಒಂದು ವಾರದಿಂದ ವಾಟ್ಸಾಪ್ ಗುಂಪುಗಳಲ್ಲಿ ವಿಚಾರ ವಿನಿಮಯವಾಗುತ್ತಿದೆ. Clay ಗೌರಿ-ಗಣೇಶ ಮೂರ್ತಿಗಳು ಎಲ್ಲಿ ಸಿಗುತ್ತವೆ, ಒಬ್ಬಟ್ಟು -ಹೋಳಿಗೆ ಎಲ್ಲಿ ಸಿಗುತ್ತದೆ, ಗಣೇಶ ಇವೆಂಟ್ ಎಲ್ಲೆಲ್ಲಿ ನಡೆಯುತ್ತದೆ ಇತ್ಯಾದಿ. ವಾರದಲ್ಲೊಮ್ಮೆ ನನ್ನ ಸಹೋದ್ಯೋಗಿ ಅವರ ಮಕ್ಕಳ ಚಟುವಟಿಕೆಗಳ ಬಗ್ಗೆ ಹೇಳುತ್ತಾ, ವಾರಾಂತ್ಯವೂ ಬಿಡುವಿರುವುದಿಲ್ಲ ಎಂದರು. ಹೌದು, ನಾನೂ ಕೂಡ ಅದನ್ನೆಲ್ಲ ದಾಟಿ ಬಂದಿರುವೆ, ಈಗ ನನ್ನ ಮಕ್ಕಳನ್ನು ಕಾಡಿಬೇಡಿ ಮಾತನಾಡಿಸಬೇಕು ಎಂದೇ. ಅವರು ‘ವಾರಾಂತ್ಯಗಳಲ್ಲಿ ಏನು ಮಾಡುತ್ತೀಯ’ ಎಂದು ಕೇಳಿದರು. ನನ್ನ ಕೈತೋಟ, ನಡಿಗೆ ಇತ್ಯಾದಿ ಇರುತ್ತದೆ, ಎನ್ನುತ್ತಾ ನಾನು ಈ ವಾರಾಂತ್ಯದಲ್ಲಿ ನಮ್ಮ ಇಂತಿಂಥ ದೊಡ್ಡ ಹಬ್ಬಗಳಿವೆ, ಎಂದರೆ ಅವರು ‘ಹೌದಾ, ಅದರ ಬಗ್ಗೆ ನಾನೆಂದೂ ಕೇಳಿಲ್ಲ’ ಅಂದರು. ‘ಹೌದು ನೋಡಿ, diversity ವಿಷಯದಲ್ಲಿ ನಾವೆಲ್ಲಾ ಪರಸ್ಪರ ಇನ್ನೂ ಬಹಳಷ್ಟು ತಿಳಿದುಕೊಳ್ಳುವುದಿದೆ’ ಎಂದೆ.
ಬರೀ ಗಣೇಶನ ಬಗ್ಗೆಯೇ ಹೇಳಿದರೆ ಅವನಮ್ಮನಿಗೆ ಕಸಿವಿಸಿಯಾಗುತ್ತದೆ. ಅದು ಹೇಗೆಂದರೆ ಆಗಾಗ ಸಂಜೆ ನನ್ನ ಮಗ ಟೀ ಮಾಡಿಕೊಂಡು ಚಪ್ಪರಿಸುತ್ತಾ ಕುಡಿಯುತ್ತಾನೆ. ಪಕ್ಕದ ಕೋಣೆಯಲ್ಲಿ ಕೂತ ನಾನಿನ್ನೂ ಕೆಲಸ ಮಾಡುತ್ತಾ ಕಂಪ್ಯೂಟರ್ ಕೀಬೋರ್ಡ್ ಕುಟ್ಟುತ್ತಿರುತ್ತೀನಿ. ಅವನು ಟೀ ಸವಿಯುವುದು ನನ್ನ ಗಮನಕ್ಕೆ ಬರುತ್ತದೆ ಆದರೆ ಅಮ್ಮನಿಗೂ ಒಂದು ಕಪ್ ಟೀ ಕೊಡಬೇಕು ಅನ್ನುವುದನ್ನು ‘ಅಯ್ಯೋ ಮರೆತೇಬಿಟ್ಟೆ’ ಎಂದು ಹೇಳಿ ತೇಲಿಸುತ್ತಾನೆ. ‘ಎಲ್ಲೋ ನನ್ನ ಟೀ’ ಎಂದು ದನಿಯೇರಿಸಿದಾಗ ಅಡುಗೆ ಮನೆಗೆ ಹೋಗುತ್ತಾನೆ, ಮತ್ತೆ ಟೀ ಮಾಡಲು. ಸದ್ಯಕ್ಕೇನೂ ಗೊಣಗಾಟವಿಲ್ಲ. ಅವನಿಗೆ, ನನಗೆ ವಯಸ್ಸಾದಂತೆ ಏನಾಗುತ್ತದೊ ಗೊತ್ತಿಲ್ಲ.
ಮತ್ತೆ ಗೌರಿ ವಿಷಯಕ್ಕೆ ಬರುತ್ತೀನಿ. ಇವತ್ತು ಗೌರಿ ಹಬ್ಬದ ದಿನ ಆಸ್ಟ್ರೇಲಿಯಾದ ಕೇಂದ್ರ ಸರಕಾರ ಸಚಿವ ಸಂಪುಟವು ದೇಶದ ಎಲ್ಲಾ ಹೆಂಗಸರಿಗೆ ಸಂತಸ ಕೊಡುವ ಘೋಷಣೆಯೊಂದನ್ನು ಮಾಡಿದೆ. ಹೆಂಗಸರ ಮೇಲೆ ನಡೆಸುವ ಲೈಂಗಿಕ ಕಿರುಕುಳ, ದೌರ್ಜನ್ಯ, ಕೌಟುಂಬಿಕ ಹಿಂಸೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುಮಾರು ಐದು ಬಿಲಿಯನ್ ಡಾಲರ್ (ಕರಾರುವಕ್ಕಾಗಿ ೪.೭ ಬಿಲಿಯನ್) ಕೊಡಲು ಮುಂದಾಗಿದೆ. ಇದನ್ನು ಘೋಷಿಸಿದ ಪ್ರಧಾನಿ ಆಲ್ಬಾನೀಸಿ ಹೇಳಿದ್ದು ಕಳೆದ ಒಂದು ದಶಕದ ಕೆಲಸ, ಆಧಾರ ಅಂಕಿಸಂಖ್ಯೆ, ಈ ಒಂದು ಸಮಸ್ಯೆಯಿಂದ ಸರಕಾರಗಳಿಗೆ ಬೀಳುತ್ತಿರುವ ಖರ್ಚು ಎಲ್ಲವನ್ನೂ ಪರಿಶೀಲಿಸಿ ಈ ನಿರ್ಧಾರವನ್ನು ಮಾಡಲಾಗಿದೆ ಎಂದಿದ್ದಾರೆ. ಈ ಬಿಲಿಯನ್ ಗಟ್ಟಲೆ ಹಣವು ಹೆಂಗಸರ ವಿರುದ್ಧ ನಡೆಯುತ್ತಿರುವ ಕೌಟುಂಬಿಕ ಹಿಂಸೆ/ದೌರ್ಜನ್ಯಗಳ ಕುರಿತು ಸತತವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ, ರಾಜ್ಯ ಸರಕಾರಗಳಿಗೆ, ಕಾನೂನುಕಟ್ಟಳೆಗಳನ್ನು ಪುನರ್ ಪರಿಶೀಲಿಸಲು ಎಂಬಂತೆ ನಾನಾ ಕಾರಣಗಳಿಗೆ ಹಣ ಹೂಡುತ್ತಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ಗಂಭೀರ ಪ್ರಯತ್ನಗಳನ್ನು ನಡೆಸಿ ಸಮಸ್ಯೆಯನ್ನು ಪರಿಹರಿಸಲು ಹೊಸ ಉತ್ಸಾಹ ಮೂಡಿದೆ.
ಗೌರಿಗೂ ಈ ನಿಧಿಗೂ ಯಾವ ಲಿಂಕ್ ಎನ್ನುತ್ತೀರಾ? ಗೌರಿ ದುಃಖ ಶಿವನಿಗೆ (ಗಂಡಸಿಗೆ) ಹ್ಯಾಗೆ ಗೊತ್ತಾಗುತ್ತದೆ ಅನ್ನೋ ಮಾತಿಲ್ಲವೇ. ಮನೆಮನೆಯಲ್ಲೂ ಗೌರಿಗಳಿದ್ದಾರೆ. ಅವರಲ್ಲಿ ಅದೆಷ್ಟೋ ಮಂದಿ ಹಬ್ಬ ಮಾಡುವಾಗ ಒಳಗೊಳಗೇ ಅತ್ತುಕೊಳ್ಳುತ್ತಿರುವ ಸಂದರ್ಭಗಳಿರಬಹುದು. ಗಂಡಂದಿರು, ಗಂಡಸರು ಕೊಡುವ ಕಿರುಕುಳವನ್ನು ಸುಮಾರು ಹೆಂಗಸರು ಹೇಳುವುದಿಲ್ಲ, ಇದೂ ಕೂಡ ಸಮಸ್ಯೆಯನ್ನು ಉಲ್ಬಣಿಸುತ್ತದೆ, ಎನ್ನುತ್ತಾರೆ ಕೌಟುಂಬಿಕ ಹಿಂಸೆ ಕ್ಷೇತ್ರದಲ್ಲಿ ಕೆಲಸ ಮಾಡುವವರು.
ಆದರೆ ಹೆಂಗಸರು ಕೊಡುವ ಕಿರುಕುಳದ ಬಗ್ಗೆ ಗಂಡಸರು ಬಾಯಿಬಿಡುವಂತೆಯೇ ಇಲ್ಲ. ಸುಮ್ಮನೆ ಒಂದು ಗರ್ಲ್ ಫ್ರೆಂಡ್ ಸ್ನೇಹಸಂಬಂಧವನ್ನು ಬೆಳೆಸಲೂ ಕೂಡ ಹಿಂದೇಟು ಹೊಡೆಯುವಂತಾಗಿದೆ ಈ ಕಾಲ. ಮಾತೆತ್ತಿದರೆ ‘ಇದು ಡೀವಿ ಬಿಹೇವಿಯರ್’ (DV – Domestic Violence) ಅನ್ನುತ್ತಾರೆ ಹುಡುಗಿಯರು, ಎಂದು ಮಗರಾಯ ವಾದಿಸುತ್ತಾನೆ. ಯಾರೂ ನಮ್ಮನ್ನು ನಂಬುವುದಿಲ್ಲ, ನಮ್ಮ ದುಃಖವನ್ನು ಯಾರ ಬಳಿ ಹೇಳುವುದು, ಎಂದು ಗೋಳುಕರೆದ. ಗೌರಿ-ಗಣೇಶರಂತೆ ನೀನೂ ಕೂಡ ಅಮ್ಮನ ಮುದ್ದಿನ ಕೂಸು, ಅಮ್ಮ ಜೆಂಡರ್ inequalityಯನ್ನು ವಿರೋಧಿಸುತ್ತಾಳೆ. ನಾನು ಜೆಂಡರ್-ಸಪೋರ್ಟಿವ್ ಅಂತ ಹೇಳೋ, ಎಂದು ನನ್ನ ಬುದ್ಧಿಮಾತು. ಬೆಳೆದ ಮಕ್ಕಳಿಗೆ ಹೆಚ್ಚು ಬುದ್ಧಿವಾದ ಹೇಳುವ ಕಾಲವಲ್ಲ ಇದು.
ಮತ್ತೆ ನನ್ನ ಮನಸ್ಸು ಗಣೇಶನತ್ತ. ತನ್ನರ್ಧದಲ್ಲಿ ಗೌರಿಯನ್ನು ಇರಿಸಿಕೊಂಡ ಶಿವನು, ಪರ್ವತ ಕುವರಿ ಪಾರ್ವತಿಯೂ, ಅವಳು ಸೃಷ್ಟಿಸಿದ ಮುದ್ದು ಗಣಪನು, ಅವನ ತಮ್ಮರಾಯ ಸ್ಕಂದನು ನಮ್ಮೆಲ್ಲರನ್ನೂ ಹರಸಲಿ. ಎಲ್ಲರೂ ಎಲ್ಲವೂ ಸುಖೀಮಯವಾಗಿರಲಿ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
Good