ಯಾವುದಾದರೂ ಗಣ್ಯ ವ್ಯಕ್ತಿಗಳನ್ನು ಬರುವಿಕೆಯು ಮಧ್ಯಾಹ್ನ ಹನ್ನೊಂದು ಗಂಟೆಗೆ ಎಂದು ಇದ್ದರೂ ನಾವು ಭದ್ರತೆಯ ದೃಷ್ಟಿಯಿಂದ ಬೆಳಿಗ್ಗೆ ಐದು, ಆರು ಗಂಟೆಗೆ ಹೊರಟು ಅಲ್ಲಿ ಇರಬೇಕಾಗುತ್ತಿತ್ತು. ಅಲ್ಲಿ ಎಲ್ಲ ತಪಾಸಣೆಗಳನ್ನು ಮಾಡಿದ ನಂತರ ಆಸ್ಪತ್ರೆಯವರಾದ ನಾವು ಮೊದಲಿನ ಸುತ್ತಿನಲ್ಲಿ ಇರುತ್ತಿದ್ದೆವು. ಗಣ್ಯವ್ಯಕ್ತಿಗಳಿಗಾಗಿ ತಯಾರು ಮಾಡುತ್ತಿರುವ ಎಲ್ಲಾ ತಿನಿಸುಗಳನ್ನು, ನಾವು ಅಡುಗೆ ಮನೆಗೆ ಹೋಗಿ ಪರೀಕ್ಷಿಸಿ, ಅದರ ರುಚಿಯನ್ನು ಕೂಡ ನೋಡಬೇಕೆಂಬ ಸೂಚನೆ ನೀಡಲಾಯಿತು.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ನೆನಪುಗಳ ಮೆರವಣಿಗೆ ಸರಣಿಯ ಹೊಸ ಕಂತು ಇಲ್ಲಿದೆ.

 

ಆ ದಿನಗಳಲ್ಲಿ ಹಳ್ಳಿಯಲ್ಲಿ ರೋಗಿಗಳ ಚಿಕಿತ್ಸೆ ಮಾಡಲು ಯಾವುದೇ ವೈದ್ಯಕೀಯ ಸೌಲಭ್ಯ ಸರಿಯಾಗಿ ಇರಲಿಲ್ಲ. ವೈದ್ಯರ ಕೊರತೆಯಂತೂ ಅಪಾರವಾಗಿತ್ತು. ಕೊಡಗಿನಂತಹ ಒಂದು ಅತಿಯಾದ ಮಳೆ ಬೀಳುವ ಮತ್ತು ಚಳಿ ಇರುವ ಸ್ಥಳಕ್ಕೆ ಬರುವ ವೈದ್ಯರ ಸಂಖ್ಯೆ ಬಹಳ ಕಡಿಮೆ ಇತ್ತು.. ಇಲ್ಲಿಗೆ ಯಾರಾದರೂ ವೈದ್ಯರು ವರ್ಗವಾಗಿ ಬಂದರು ಕೆಲವೇ ದಿನಗಳಲ್ಲಿ ಪುನಹ ಮರು ವರ್ಗ ಮಾಡಿಕೊಂಡು ಇಲ್ಲಿಂದ ವಾಪಾಸು ಹೋಗುತ್ತಿದ್ದರು. ಆದರೆ ನನ್ನಂತಹ ಕೆಲವರು ಮಡಿಕೇರಿಗೆ ಒಮ್ಮೆ ಬಂದವರು ಇಲ್ಲಿಂದ ಇಲ್ಲಿಗೂ ಹೋಗದೆ ಇಲ್ಲಿಯೇ ಉಳಿದುಕೊಂಡು ಬಿಟ್ಟಿದ್ದೆವು.

ನಾನು ನನ್ನ ಜೀವನದ ಹದಿನೆಂಟು ವರ್ಷ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಾನು ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆ ಕೂಡ ಬಹಳ ಕಡಿಮೆ ಇತ್ತು. ಬೇರೆ ಕಡೆಯಿಂದ ಇಲ್ಲಿಗೆ ವರ್ಗವಾಗಿ ಬಂದವರು ಕೊಡಗಿನ ಇತರ ಹಳ್ಳಿಗಳಿಂದ ವಾಪಾಸ್ ಹೋದಂತೆ, ಇಲ್ಲಿಯೂ ಹೆಚ್ಚು ದಿನ ಇರುತ್ತಿರಲಿಲ್ಲ. ಹಾಗಾಗಿ ಇಲ್ಲಿ ಇದ್ದವರೇ ನಾವು ಎಲ್ಲ ಕೆಲಸಗಳನ್ನು ಮಾಡುತ್ತಾ ಹೋಗಬೇಕಿತ್ತು. ಇಂತಹ ಸಮಯದಲ್ಲಿ ನಮ್ಮ ಆಸ್ಪತ್ರೆಯ ರೋಗಿಗಳನ್ನು ಚಿಕಿತ್ಸೆ ಮಾಡುವುದರ ಜೊತೆಗೆ, ಅಪಘಾತದ ಚಿಕಿತ್ಸೆ ರಾತ್ರಿಯ ಪಾಳಿ, ಶವಪರೀಕ್ಷೆ, ಕೋರ್ಟಿನಲ್ಲಿ ಸಾಕ್ಷಿ, ಶಾಲಾ ಮಕ್ಕಳ ವೈದ್ಯಕೀಯ ಪರೀಕ್ಷೆ ಇತ್ಯಾದಿ ಕೆಲಸ ಮಾಡುತ್ತಿದ್ದೆವು. ಇಂದು ವೈದ್ಯಕೀಯ ಕಾಲೇಜು ಬಂದು, ಅಲ್ಲಿ ನೂರಕ್ಕಿಂತ ಹೆಚ್ಚು ವೈದ್ಯರಿದ್ದಾರೆ. ಸ್ನಾತಕೋತ್ತರ ಕಲಿಯುತ್ತಿರುವ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಇರುವುದರಿಂದ ಆಸ್ಪತ್ರೆ ತುಂಬಿ ತುಳುಕುತ್ತಿರುತ್ತದೆ.

ನನ್ನ ವೈದ್ಯಕೀಯ ಕಾರ್ಯಗಳ ಬಗ್ಗೆ, ಪರೀಕ್ಷೆಗಳ ಬಗ್ಗೆ ನನ್ನ ಕೆಲವು ಕಥನಗಳಲ್ಲಿ ವಿವರಿಸಿದ್ದೇನೆ, ಮತ್ತು ಮುಂದಕ್ಕೂ ವಿವರಿಸುತ್ತಾ ಹೋಗುತ್ತೇನೆ..

ಇಲ್ಲಿ, ನಾನು ಹೇಳುವ ವಿಷಯ ಕೊಡಗಿಗೆ ಬರುತ್ತಿದ್ದ ವಿ.ಐ.ಪಿ ಗಳಿಗೆ ಸಂಬಂಧಿಸಿದ್ದು. ಸಾಧಾರಣವಾಗಿ ಯಾವುದೇ ಗಣ್ಯ ವ್ಯಕ್ತಿಗಳು ಜಿಲ್ಲೆಗೆ ಬಂದಾಗ, ಅವರ ಜೊತೆಗೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು, ಮತ್ತು ಒಂದು ಆಂಬುಲೆನ್ಸ್ ವಾಹನ ಹೋಗಲೇಬೇಕು ಎಂಬ ಕಾನೂನು ಇದೆ. ಹಾಗಾಗಿ ಈ ಗಣ್ಯವ್ಯಕ್ತಿಗಳ ಹಿಂದೆ ಸಾಲುಸಾಲಾಗಿ ವಾಹನಗಳು ಹೋಗುತ್ತಿರುವುದನ್ನು ಇಂದಿಗೂ ನೋಡಬಹುದು.. ಆಗ ಜಿಲ್ಲಾಸ್ಪತ್ರೆಯಲ್ಲಿ ಇದ್ದ ಐದರಿಂದ ಹತ್ತು ವೈದ್ಯರಲ್ಲಿ ಒಬ್ಬರನ್ನು ಗಣ್ಯವ್ಯಕ್ತಿಗಳು ಬಂದಾಗ ಅವರ ಜೊತೆ ಕಳುಹಿಸುತ್ತಿದ್ದುದು ವಾಡಿಕೆ. ನಾನು ವಿಧಿವಿಜ್ಞಾನ ತಜ್ಞ. ಕೆಲವೊಮ್ಮೆ ದಾರಿಯಲ್ಲಿ ಯಾವುದೇ ಅಪಘಾತ ಸಂಭವಿಸಿದರೆ ಅದನ್ನು ನೋಡಿಕೊಳ್ಳಲು, ಗಣ್ಯ ವ್ಯಕ್ತಿಗಳ ಎಲ್ಲಾ ಆಹಾರ ವಿಚಾರಗಳನ್ನು ಮತ್ತು ವೈದ್ಯಕೀಯ ವಿವರಗಳನ್ನು ನೋಡಲು ನನ್ನನ್ನು ಕಳುಹಿಸಲಾಗುತ್ತಿತ್ತು. ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಆಗ ಇದ್ದದ್ದು ಒಂದೇ ಒಂದು ಆಂಬುಲೆನ್ಸ್. ಅದಕ್ಕೆ ಒಬ್ಬರು ವಾಹನ ಚಾಲಕ, ಬೌತೀಸ್ ಡಿಸೋಜ..

ಗಣ್ಯ ವ್ಯಕ್ತಿಗಳು, ಸರಕಾರದ ಕೆಲಸಕ್ಕಾಗಿ, ಅಥವಾ ಇನ್ನು ಯಾವುದೇ ಪ್ರವಾಸಕ್ಕೆಂದು ಕೊಡಗಿನ ಗಡಿಗೆ ಬರುವಾಗ ಅವರನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳಿಂದ ಹಿಡಿದು ಅನೇಕರು ಜಿಲ್ಲೆಯ ಗಡಿಯವರೆಗೆ ಹೋಗಿ ಅಲ್ಲಿಂದ ಅವರ ಜೊತೆ ಅವರು ಎಲ್ಲಿ ಹೋಗುತ್ತಾರೆ ಮತ್ತು ಜಿಲ್ಲೆಯಲ್ಲಿ ಎಷ್ಟುದಿನ ಇರುತ್ತಾರೋ ಅಲ್ಲಿಯವರೆಗೆ ಅವರ ಜೊತೆ ಹೋಗಬೇಕು. ಅದಕ್ಕೂ ಕೆಲವು ಕಾನೂನುಗಳು ಅಥವಾ ಪ್ರೋಟೋಕಾಲ್ ಇದೆ. ಗಣ್ಯವ್ಯಕ್ತಿಗಳ ಮುಂದೆ ಒಂದು ಪೈಲೆಟ್ ಜೀಪ್. ಅದು ಸೈರನ್ ಮಾಡುತ್ತಾ ಮುಂದೆ ಸಾಗುತ್ತಿರುತ್ತದೆ. ವಿಐಪಿ ವಾಹನದ ಹಿಂದೆ ಜಿಲ್ಲಾಧಿಕಾರಿ, ಅದರ ನಂತರ ಪೋಲೀಸ್ ವರಿಷ್ಠಾಧಿಕಾರಿ, ಮೂರನೇ ವಾಹನ ಆಂಬುಲೆನ್ಸ್. ನಂತರ ಸಾಲು ಸಾಲು ಇತರ ಸರ್ಕಾರಿ ನೌಕರರು. ಅವರ ಹಿಂದೆ ಬೇರೆ ರಾಜಕೀಯ ವ್ಯಕ್ತಿಗಳ ವಾಹನಗಳು. ಯಾವುದಾದರೂ ಗಣ್ಯ ವ್ಯಕ್ತಿಗಳನ್ನು ಬರುವಿಕೆಯು ಮಧ್ಯಾಹ್ನ ಹನ್ನೊಂದು ಗಂಟೆಗೆ ಎಂದು ಇದ್ದರೂ ನಾವು ಭದ್ರತೆಯ ದೃಷ್ಟಿಯಿಂದ ಬೆಳಿಗ್ಗೆ ಐದು, ಆರು ಗಂಟೆಗೆ ಹೊರಟು ಅಲ್ಲಿ ಇರಬೇಕಾಗುತ್ತಿತ್ತು. ಅಲ್ಲಿ ಎಲ್ಲ ತಪಾಸಣೆಗಳನ್ನು ಮಾಡಿದ ನಂತರ ಆಸ್ಪತ್ರೆಯವರಾದ ನಾವು ಮೊದಲಿನ ಸುತ್ತಿನಲ್ಲಿ ಇರುತ್ತಿದ್ದೆವು. ಹಾಗಾಗಿ ಇಂತಹ ಎಲ್ಲಾ ಪರಿಸ್ಥಿತಿಯಲ್ಲಿ ನಾನು ಅಲ್ಲಿಗೆ ಹೋಗುತ್ತಿದ್ದರಿಂದ, ಕೊಡಗಿನಲ್ಲಿ ಇದ್ದ ಹೆಚ್ಚಿನ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಪರಿಚಯ ನನಗೆ ಆಗ ಇತ್ತು.

ಕೊಡಗಿಗೆ ಬರುತ್ತಿದ್ದ ಗಣ್ಯ ವ್ಯಕ್ತಿಗಳು ಕೂಡ ಒಬ್ಬೊಬ್ಬರು ಒಂದೊಂದು ರೀತಿಯವರು.. ಬಂದವರು ಹೆಚ್ಚಾಗಿ ಮಡಿಕೇರಿಯ ಸುದರ್ಶನ್ ಗೆಸ್ಟ್ ಹೌಸಿನಲ್ಲಿ ಮಾತ್ರ ಉಳಿದುಕೊಳ್ಳುತ್ತಿದ್ದರು. ಈಗಿನಂತೆ ಆಗ ಯಾವುದೇ ರೆಸಾರ್ಟ್‌ಗಳು ಇರಲಿಲ್ಲ.

ನನ್ನ ಈ ಆಂಬುಲೆನ್ಸ್ ವಿ.ಐ.ಪಿ. ತಿರುಗಾಟದಲ್ಲಿ ನಾನು ಕಂಡಂತಹ ಅನೇಕರಲ್ಲಿ, ಭಾರತದ ಅಂದಿನ ಪ್ರಧಾನಿ ಶ್ರೀ ಪಿ.ವಿ. ನರಸಿಂಹ ರಾವ್, ನಾನು ಸದಾ ಇಷ್ಟ ಪಡುವ ಹಿರಿಯ ರಾಜಕೀಯ ಮುತ್ಸದ್ದಿ ಶ್ರೀ ಲಾಲ್ ಕೃಷ್ಣ ಅಡ್ವಾಣಿಜೀ, ಅನೇಕ ಮುಖ್ಯಮಂತ್ರಿಗಳು, ಸುಪ್ರೀಂಕೋರ್ಟ್ ನ್ಯಾಯಾಧೀಶರು ಮತ್ತು ಅನೇಕ ಮಂತ್ರಿಗಳು. ಹೀಗೆ ಬಂದವರಲ್ಲಿ ಹೆಚ್ಚಿನವರು ತಮ್ಮ ಕಾರ್ಯಕ್ರಮವನ್ನು ಮುಗಿಸಿಕೊಂಡ ನಂತರ ತಲಕಾವೇರಿಗೆ ಹೋಗುವುದು ಬಹಳಷ್ಟು ನಿಶ್ಚಯವಾಗಿತ್ತು. ಆದುದರಿಂದ ತಲಕಾವೇರಿಗೆ ನನ್ನ ಸವಾರಿ ಆಗಾಗ ಹೋಗುತ್ತಲೇ ಇತ್ತು. ಹೆಲಿಕಾಪ್ಟರ್‌ನಲ್ಲಿ ಬರುವ ಗಣ್ಯ ವ್ಯಕ್ತಿಗಳನ್ನು ನಾವು ಹೆಲಿಪ್ಯಾಡಿನ ಪಕ್ಕದಿಂದಲೇ, ಅವರ ಜೊತೆ ಸೇರಿ, ಅವರು ತಂಗುವ ಸುದರ್ಶನ್ ವಸತಿ ಗೃಹದಲ್ಲಿ ಬಿಡಬೇಕು.

ಈ ವಸತಿಗೃಹದಲ್ಲಿ ಆಗ ನನಗೆ ಕೊಟ್ಟಂತಹ ಒಂದು ವಿಶೇಷ ಕೆಲಸವೇನೆಂದರೆ, ಅಲ್ಲಿ ತಯಾರು ಮಾಡುತ್ತಿರುವ ಗಣ್ಯವ್ಯಕ್ತಿಗಳ ಎಲ್ಲಾ ತಿನಿಸುಗಳನ್ನು, ನಾವು ಅಡುಗೆ ಮನೆಗೆ ಹೋಗಿ ಪರೀಕ್ಷಿಸಿ, ಅದರ ರುಚಿಯನ್ನು ಕೂಡ ನೋಡಬೇಕು. ಇದು ಟೀ ಫ್ಯಾಕ್ಟರಿಗಳಲ್ಲಿ ಇರುವ ಟೀ ಟೆಸ್ಟರ್ ಎಂಬ ಒಂದು ಸ್ಪೆಷಲ್ ಡ್ಯೂಟಿ ತರ. ಇದು ಒಂದು ಕಾನೂನು! ನನಗೆ ಅನಿಸುವ ಮಟ್ಟಿಗೆ ರುಚಿಯ ಬಗ್ಗೆ ನನ್ನ ನಾಲಗೆ ಏನು ಹೇಳುತ್ತದೆ, ಆ ರುಚಿಯನ್ನು ಬಂದ ಗಣ್ಯವ್ಯಕ್ತಿಗಳು ಇಷ್ಟಪಡಬೇಕು ಎಂದೇನೂ ಇಲ್ಲ. ಬರುತ್ತಿದ್ದವರು ಹೆಚ್ಚಿನವರು ಬಿಪಿ, ಶುಗರ್ ಇದ್ದ ವ್ಯಕ್ತಿಗಳು. ಹಾಗಾಗಿ ಉಪ್ಪು, ಖಾರ, ಹುಳಿ, ಸಕ್ಕರೆ, ಜಾಸ್ತಿ ಇರಬಾರದು. ರುಚಿಯ ಜೊತೆಗೆ ಶುಚಿತ್ವದ ಬಗ್ಗೆಯು ನೋಡಲಿ ಎಂದು ಕೂಡ ಇರಬಹುದು.

ನಾನು ವಿಧಿವಿಜ್ಞಾನ ತಜ್ಞ. ಕೆಲವೊಮ್ಮೆ ದಾರಿಯಲ್ಲಿ ಯಾವುದೇ ಅಪಘಾತ ಸಂಭವಿಸಿದರೆ ಅದನ್ನು ನೋಡಿಕೊಳ್ಳಲು, ಗಣ್ಯ ವ್ಯಕ್ತಿಗಳ ಎಲ್ಲಾ ಆಹಾರ ವಿಚಾರಗಳನ್ನು ಮತ್ತು ವೈದ್ಯಕೀಯ ವಿವರಗಳನ್ನು ನೋಡಲು ನನ್ನನ್ನು ಕಳುಹಿಸಲಾಗುತ್ತಿತ್ತು. ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಆಗ ಇದ್ದದ್ದು ಒಂದೇ ಒಂದು ಆಂಬುಲೆನ್ಸ್. ಅದಕ್ಕೆ ಒಬ್ಬರು ವಾಹನ ಚಾಲಕ, ಬೌತೀಸ್ ಡಿಸೋಜ..

ಹಿಂದಿನ ಕಾಲದಲ್ಲಿ ರಾಜರ ಆಸ್ಥಾನದಲ್ಲಿ ರಾಜನ ಅಡುಗೆಯನ್ನು ತಿಂದು ಪರೀಕ್ಷಿಸಿ ನೋಡಲೆಂದೇ ಕೆಲವರನ್ನು ನೇಮಿಸಿಕೊಳ್ಳುತ್ತಿದ್ದರು. ಅಂದರೆ ರಾಜನ ಆಹಾರಕ್ಕೆ ಯಾರಾದರೂ ವಿಷವನ್ನು ಬೆರೆಸುವ ಸಾಧ್ಯತೆ ಇದ್ದು, ಅದರಲ್ಲಿ ಯಾವುದಾದರೂ ತೊಂದರೆ ಇದ್ದರೆ, ತಿಂದವನು ವಾಂತಿ-ಬೇಧಿ ಮಾಡಿಕೊಂಡು, ಇಲ್ಲ ಕೊನೆಗೆ ಸತ್ತರೂ ಸಾಯಲಿ ಎಂಬ ಒಂದು ದೂ(ದು )ರಾಲೋಚನೆ. ಇಲ್ಲಿ ಅದು ಇರಲಿಕ್ಕಿಲ್ಲ ಎಂದು ನನ್ನ ಒಂದು ಊಹೆ!!

ಶ್ರೀ ನರಸಿಂಹ ರಾವ್ ಅವರು ಸಾಮಾನ್ಯರಂತೆ ಇದ್ದರು. ಅವರಲ್ಲಿ ಅಹಂ ಅಥವಾ ಬಿಗುಮಾನ ನಾನು ಅಂದು ಕಂಡಿಲ್ಲ. ಅವರದೇ ಖಾಸಗಿ ವೈದ್ಯರು ಜೊತೆಗೆ ಇದ್ದರೂ, ನನಗೆ ಅವರ, ನಾಡಿ (ಪಲ್ಸ್ ), ರಕ್ತದ ಒತ್ತಡ ( ಬಿ.ಪೀ ) ಎಲ್ಲವನ್ನೂ ಪರೀಕ್ಷಿಸಲು ಹೇಳಲಾಯಿತು. ಆ ಸಮಯದ ಮಧ್ಯೆ ನನ್ನ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೂಡಾ ಕೇಳಿದರು.

ಇನ್ನು ಫೀ. ಮಾ. ಕೆ ಎಂ ಕಾರ್ಯಪ್ಪರನ್ನು ಬಹಳ ಸಮೀಪದಿಂದ ನೋಡಿ, ಅವರ ಆರೋಗ್ಯದ ಪರೀಕ್ಷೆ ಮಾಡುವ, ಅವರಿಗೆ ಚಿಕಿತ್ಸೆ ನೀಡುವ ಭಾಗ್ಯ ನನಗೆ ಸುಮಾರು ತಿಂಗಳುಗಳ ಕಾಲ ಕೂಡಾ ಸಿಕ್ಕಿತ್ತು. ಈ ವಿವರಗಳನ್ನು ನನ್ನ ಪುಸ್ತಕ “ವೈದ್ಯ ಕಂಡ ವಿಸ್ಮಯ ” ದಲ್ಲಿ ವಿವರವಾಗಿ ಬರೆದಿದ್ದೇನೆ.

ಹೀಗಿರುವಾಗ, ಅಂದೊಂದು ದಿನ ಕರ್ನಾಟಕದ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆಯವರು ಸೋಮವಾರಪೇಟೆಗೆ ಬರುವ ಒಂದು ಕಾರ್ಯಕ್ರಮ ಇತ್ತು. ಹಾಗಾಗಿ ನಾವು ಬೆಳ್ಳಂಬೆಳ್ಳಗೆ ಹೊರಟು ಸೋಮವಾರಪೇಟೆ ತಲುಪಿದೆವು. ಅಲ್ಲಿನ ಶಾಲಾ ಮೈದಾನದಲ್ಲಿ ಅವರ ಹೆಲಿಕಾಪ್ಟರ್ ಬಂದು ಇಳಿಯಲು ಎಲ್ಲಾ ವ್ಯವಸ್ಥೆಗಳು ಮಾಡಿಕೊಂಡಿದ್ದರು. ಸುಮಾರು ಹತ್ತು ಗಂಟೆಗೆ ಹೆಲಿಕಾಪ್ಟರ್ ಹಾಸನದಿಂದ ಹೊರಟಿದೆ ಎಂಬ ಸುದ್ದಿ ಪೊಲೀಸರಿಗೆ ಬಂದಿತ್ತು. ಸರಿ ಇನ್ನೇನು ಅರ್ಧ ಗಂಟೆಯ ಒಳಗೆ ಬಂದುಬಿಡುತ್ತಾರೆ ಎಂದು ಎಲ್ಲರೂ ನಮ್ಮ ತಯಾರಿಗಳನ್ನು ಮಾಡಿಕೊಂಡು ಸಾಲಾಗಿ ನಿಂತುಕೊಂಡೆವು. ಅರ್ಧ ಗಂಟೆ ಆಯಿತು, ಮುಕ್ಕಾಲು ಗಂಟೆ ಆಯಿತು ಹೆಲಿಕಾಪ್ಟರ್‌ನ ಸುಳಿವಿಲ್ಲ. ಎಲ್ಲರ ಮನದಲ್ಲಿ ಏನೋ ಒಂದು ಆತಂಕ ಶುರುವಾಗಿದೆ. ಎಲ್ಲರೂ ಗುಸುಗುಸು ಮಾತನಾಡಲು ತೊಡಗಿದರು. ಅಷ್ಟರಲ್ಲಿ ಪೊಲೀಸರ ವಾಕಿ-ಟಾಕಿಯಲ್ಲಿ ಬಂದ ಸುದ್ದಿಯಲ್ಲಿ, ಹೆಲಿಕಾಪ್ಟರ್ ನಲ್ಲಿ ಯಾವುದೋ ಒಂದು ಸಣ್ಣ ತೊಂದರೆಯಾಗಿ ದಾರಿಯಲ್ಲಿ ಎಲ್ಲೋ ಅದು ಇಳಿದಿದೆ ಎಂದಿತ್ತು. ಹೆಲಿಕಾಪ್ಟರ್ ತೊಂದರೆ ಏನು, ಯಾವ ರೀತಿಯದ್ದು ಯಾರಿಗೂ ತಿಳಿದಿಲ್ಲ. ಅಲ್ಲಿಗೆ ಎಲ್ಲರ ಜಂಘಾಬಲ ಇಳಿದು ಹೋಗಿದೆ. ಕೂಡಲೇ ಎಲ್ಲರೂ ತಮ್ಮ ತಮ್ಮ ವಾಹನವನ್ನು ಏರಿ, ಅತ್ತ ಧಾವಿಸಿದ್ದಾರೆ. ವಾಹನಗಳಲ್ಲಿ ಮುಂದೆ ಯಾವುದು ಹಿಂದೆ ಯಾವುದು ಎಂಬುದನ್ನು ಯೋಚಿಸದೆ ಎಲ್ಲರೂ ಹಾಸನದ ದಾರಿಯಲ್ಲಿ ದೌಡಾಯಿಸಿದ್ದಾರೆ. ನಮ್ಮದು ಹಳೆಯ ಕಾಲದ ಅಂಬುಲೆನ್ಸ್. ಒಂದು ದೊಡ್ಡ ಗಾಡಿ ಕೂಡ. ಆದರೂ ಪಾಪದ ಬೌತೀಸ್ ಆಕ್ಸಿಲರೇಟರ್ ಅನ್ನು ಒತ್ತಿದ್ದವನು ಕಾಲು ತೆಗೆಯಲೇ ಇಲ್ಲ. ನಮ್ಮ ಮುಂದೆ ಮೂರ್ನಾಲ್ಕು ವಾಹನ. ಅದರ ಹಿಂದೆ ನಾವು. ಯಾವ ಸ್ಪೀಡಿನಲ್ಲಿ ಹೋಗಿದ್ದೇವೆ ಎಂಬುದನ್ನು ಯೋಚಿಸಿದರೆ ಈಗಲೂ ಭಯ ಆಗುತ್ತದೆ! ಆ ದಾರಿಯಲ್ಲಿ ಹೆಚ್ಚು ಸಂಚಾರ ಇರಲಿಲ್ಲ. ಆದರೂ ಹೋಗುತ್ತಿದ್ದ ಕೆಲವು ವಾಹನಗಳನ್ನು ಓವರ್ ಟೇಕ್ ಮಾಡಿಕೊಂಡು ಮುನ್ನುಗ್ಗಿದೆವು.

ಎದುರಿನಿಂದ ಬರುತ್ತಿದ್ದ ಕೆಲವರು ಮತ್ತು ಕೆಲವು ವಾಹನದಲ್ಲಿನ ಜನ ನಮ್ಮ ಮೆರವಣಿಗೆಯನ್ನು ನೋಡಿ ಕೈಬೀಸುತ್ತಾ ಸಾಗುತ್ತಿದ್ದರು. ಸ್ವಲ್ಪ ದೂರ ಹೋಗುತ್ತಿದ್ದಾಗ, ಯಾವುದೋ ಒಂದು ಟೆಂಪೋ ಬರುತ್ತಿದ್ದು, ಅದರಲ್ಲಿ ಕೂಡಾ ಕೆಲವರು ನಮ್ಮ ಕಡೆ ಕೈ ಬೀಸುವುದು ಕಂಡುಬಂತು. ಇದು ಸಾಮಾನ್ಯ ಎಂಬಂತೆ ಎಲ್ಲಾ ವಾಹನಗಳು ಮುಂದೆ ಹೋದಾಗ, ನನಗೇನೋ ಸಣ್ಣ ಸಂಶಯ ಬಂದು ನಮ್ಮ ಚಾಲಕನನ್ನು ಸ್ವಲ್ಪ ನಿಧಾನಿಸು ಎಂದೆ. ನಮ್ಮತ್ತ ಕೈ ಬೀಸುತ್ತಿದ್ದ, ಕರೆಯುತ್ತಿದ್ದ ವ್ಯಕ್ತಿಗಳ ಮಧ್ಯೆ ಒಂದು ಬೆಳ್ಳನೆಯ ಕುರುಚಲು ಗಡ್ಡದ ವ್ಯಕ್ತಿಯನ್ನು ನೋಡಿದ ಕೂಡಲೇ ನನಗೆ ಅವರು ಯಾರು ಎಂದು ಗೊತ್ತಾಯ್ತು. ಅವರು ನಮ್ಮ ಮಾನ್ಯ ಮುಖ್ಯಮಂತ್ರಿ ಶ್ರೀ ಹೆಗಡೆಯವರು. ಕೂಡಲೇ ಗಾಡಿ ನಿಲ್ಲಿಸಿ, ಬಾಗಿಲನ್ನು ಗಡಿಬಿಡಿಯಲ್ಲಿ ತೆಗೆದು, ರೋಡಿನ ಬಲಭಾಗಕ್ಕೆ ಓಡಿದೆ. ಅಷ್ಟರಲ್ಲಿ, ನಾವು ನಿಂತದನ್ನ ಕಂಡು, ನಮ್ಮ ಅಂಬುಲೆನ್ಸ್ ಹಿಂದಿನವರು ಅವರ ವಾಹನಗಳನ್ನು ನಿಲ್ಲಿಸಿದರು. ಮುಂದೆ ಹೋಗಿದ್ದ ಕೆಲವು ವಾಹನಗಳು ಹಾಗೆಯೇ ಹೋಗಿಬಿಟ್ಟಿದ್ದವು. ಟೆಂಪೋ ಬಳಿ ಹೋಗಿ ನೋಡಿದರೆ ಸದಾ ಹಸನ್ಮುಖಿಯಾಗಿದ್ದ ಮಾನ್ಯ ಮುಖ್ಯಮಂತ್ರಿಗಳು, ಅಲ್ಲಿ ನಮ್ಮನ್ನು ನೋಡಿ ನಗು ಬೀರಿದರು.

ವಿಷಯ ಇಷ್ಟೇ. ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಗುಡುಗಳಲೆ ಮೈದಾನದಲ್ಲಿ ಇಳಿದಿದೆ. ಈ ಮೈದಾನ ಎತ್ತುಗಳ ಜಾತ್ರೆಗೆ ಬಹಳ ಹೆಸರುವಾಸಿ. ಬಹಳ ದೊಡ್ದ ಮೈದಾನ ಕೂಡ. ಹೆಲಿಕಾಪ್ಟರ್ ನಿಂದ, ಕೆಳಗೆ ಇಳಿದು, ಅತ್ತಿತ್ತ ನೋಡಿದ ಮಾನ್ಯ ಮುಖ್ಯಮಂತ್ರಿಯವರಿಗೆ, ಪಕ್ಕದಲ್ಲೇ ಇದ್ದ ಹೆದ್ದಾರಿಯಲ್ಲಿ ಬರುತ್ತಿದ್ದ ಒಂದು ಟೆಂಪೋ ಕಂಡಿದೆ. ತಾವು ಯಾರು ಎಂಬುದನ್ನು ಅವರಿಗೆ ಹೇಳಿ, ಆ ಟೆಂಪೋವನ್ನು ಹತ್ತಿ ಸೋಮವಾರಪೇಟೆ ಕಡೆ ಬರುತ್ತಿದ್ದರು.

ಆಗಿನವರ ಸರಳತೆ ಮತ್ತು ಈಗಿನವರ ದರ್ಬಾರನ್ನು ನೀವು ತೂಗಿ ನೋಡಿ. ಇಂದು ಯಾರೇ ಗಣ್ಯರು ಚುನಾವಣೆ ಸಮಯದ ಹೊರತು ಪಡಿಸಿ, ಟೆಂಪೋವನ್ನು ಹತ್ತಿ ಬರುವ ಛಾನ್ಸ್ ಇದೆಯೇ.?…