ಸಹಪಾಠಿಗಳು ಯಾರೂ ಕುತೂಹಲಿಗರಾದಂತೆ ಕಂಡು ಬರಲಿಲ್ಲ. ನಾನು ಕೆಲವು ಗೆಳೆಯರಲ್ಲಿ ಈ ವಿಚಾರವೆತ್ತಿ ನೋಡಿದೆ, ಅವರ್ಯಾರು ಸೊಪ್ಪು ಹಾಕಲಿಲ್ಲ. ಬೆಳಗ್ಗೆ ಪೇಪರ್ ತರುವವನನ್ನು ಕಾಯುತ್ತಾ ನಿಂತೆ. ಅವನದಾಗಲೇ ತಂದು ಕೊಟ್ಟು ಅದು ಅಧ್ಯಾಪಕರ ಕೊಠಡಿಗೆ ಹೋಗಿಯಾಗಿತ್ತು. ಇನ್ನು ಪತ್ರಿಕೆ ನಮಗೆ ಸಿಗಬೇಕಾದರೆ ಸಂಜೆಯಾದ್ರೂ ಆಗಬೇಕಿತ್ತು. ಸಂಜೆವರೆಗೂ ಕಾದೆ. ಕೊನೆಗೆ ಪತ್ರಿಕೆ ಸಿಕ್ಕಿತು. ಪತ್ರಿಕೆಯ ಎಲ್ಲಾ ಪುಟಗಳು ತಿರುವಿ ಹಾಕಿದೆ, ಪ್ರಾದೇಶಿಕ ಸುದ್ದಿಯಲ್ಲೂ ಹುಡುಕಿದೆ. ಯಾರೊಬ್ಬ ಪತ್ರಕರ್ತನ ಕಣ್ಣಿಗೆ ಅದು ಬಿದ್ದಿರಲಿಲ್ಲವೇನೋ. ನನಗಾದ ನಿರಾಶೆ ಅಷ್ಟಿಷ್ಟಲ್ಲ.
ಮುನವ್ವರ್ ಜೋಗಿಬೆಟ್ಟು ಪರಿಸರ ಕಥನ
ಆ ಹುಣ್ಣಿಮೆಯ ರಾತ್ರಿ ಸಂಬಂಧಿಕರ ಮಗನೊಬ್ಬ ತಾನು ಕಲಿಯುತ್ತಿದ್ದ ಹಾಸ್ಟೆಲಿನಿಂದ ತಪ್ಪಿಸಿಕೊಂಡು ಬೆಂಗಳೂರು ಬಸ್ಸು ಹತ್ತಿದ್ದ. ರೇಡಿಯೋ ಎದೆಯ ಮೇಲಿಟ್ಟು ಮಲಗಿ ರೇಡಿಯೋ ಟ್ಯೂನರ್ ತಿರುಗಿಸುತ್ತಿದ್ದ ಅಬ್ಬ ಈ ವಿಚಾರ ತಿಳಿದು ಜಗಲಿಗೆ ಬಂದು ಅವರನ್ನು ಕೂಡಿಕೊಂಡಿದ್ದರು. ಒಂದು ಕಿವಿ ರೇಡಿಯೋಗೆ ಬಿಟ್ಟು ಅಪ್ಪ ಹೊರಗಡೆ ಬಂದು ತಪ್ಪಿಸಿಕೊಂಡ ಹುಡುಗನ ಅಪ್ಪನ ಜೊತೆ ಬಿರುಸಿನ ಮಾತುಕತೆಗಿಳಿದಿದ್ದರು. ಇತ್ತ “ಕ್ರೂ, ಕ್ರೀ” ಶಬ್ದದ ನಡುವೆ “ಆಕಾಶವಾಣಿ ವಾರ್ತೆಗಳು, ಓದುತ್ತಿರುವವರು…” ಎಂದು ಸರಿಯಾಗಿ ಟ್ಯೂನಾಗದ ಬಾನುಲಿಯಿಂದ ಅರೆಬರೆ ಬೊಬ್ಬೆ ಕೇಳುತ್ತಿತ್ತು. ಅದೇ ಹೊತ್ತಲ್ಲಿ ನಾನು ಮೊಗಸಾಲೆಯಲ್ಲಿ ಕುಳಿತು ಶಿಕ್ಷಕರ ಶಿಕ್ಷೆ ಮಗ್ಗಿಯನ್ನು ಆಚೆಯ ಪುಟದಿಂದ ಈಚಿನ ಪುಟಕ್ಕೆ ಸರಿಯಾದ ಏಕಾಗ್ರತೆಯೂ ಸಿಗದೆ ಕಾಪಿ ಮಾಡುತ್ತಿದ್ದೆ. ಹೊರಗೆ ಅಂಗಳದಲ್ಲಿ ಗೂಢಾಲೋಚನೆಯಂತೆ ಅವರಿಬ್ಬರ ಮಾತುಕತೆ ನನಗೆ ಕೇಳಿಸುತ್ತಿತ್ತು. ಅರ್ಧ ಕಿವಿ ಅಲ್ಲಿಗೆ, ಇನ್ನರ್ಧ ಕಿವಿ ರೇಡಿಯೋ ಅರೆಬರೆ ವಾರ್ತೆಗೂ ಇಟ್ಟು ಈ ಮಗ್ಗಿ ಒಮ್ಮೆ ಮುಗಿಯಲೆಂದು ಪ್ರಾರ್ಥಿಸುತ್ತಾ ಬರೆಯುತ್ತಿದ್ದೆ.
ಆಗಿನ ಹುಡುಗರು ಹಾಸ್ಟೆಲ್ ನಿಂದ ತಪ್ಪಿಸಿದವರಾರೂ ಮನೆಗೆ ಬರುತ್ತಿರಲಿಲ್ಲ. ಮನೆಗೆ ಬಂದರೆ ಹಿಟ್ಲರ್ ನ ಯಾತನಾ ಶಿಬಿರದಷ್ಟು ಕಠೋರ ಶಿಕ್ಷೆ ಲಭ್ಯವಿರುವುದರಿಂದಲೇ ಹೆಚ್ಚಿನವರೂ ಅಲ್ಲಿಂದ ಬೆಂಗಳೂರಿಗೆ ಸಾಗ ಹಾಕುತ್ತಿದ್ದರು. ಈತನ್ಮಧ್ಯೆ ಬಾಹ್ಯಾಕಾಶದ ವಿಚಾರವೊಂದು ರೇಡಿಯೋದಲ್ಲಿ ಕೇಳಿ ಬರುತ್ತಿದ್ದುದ್ದು ಅರೆಬರೆಯಾಗಿ ಕೇಳುತ್ತಿತ್ತು, “ಎಷ್ಟೋ ವರ್ಷಗಳಿಗೊಮ್ಮೆ ಕಾಣುವ ಅಪೂರ್ವ ಕಾಣ್ಕೆ” ಅನ್ನುವಷ್ಟರಲ್ಲೆ “ಕೀಂ, ಕೀಂ” ಅಂತ ಟ್ಯೂನಾಗದ ರೇಡಿಯೋ ಇನ್ನೊಮ್ಮೆ ಅರಚಿಕೊಂಡಿತು. ನಾನು ಇದನ್ನು ವಿನಃ ಅದರೆಲ್ಲೇನೂ ನನಗೆ ವಿಶೇಷ ಆಸಕ್ತಿಯುದಿಸಲಿಲ್ಲ. ಸುಮ್ಮನೆ ಮಗ್ಗಿ, ಇತರ ಹೋಂ ವರ್ಕ್ ಎಂಬ ಶಾಲಾ ಹೊರೆಗಳನ್ನು ಇಳಿಸಿ ಹೊರಗಡೆ ಕಾಲಿಟ್ಟೆ. ಆ ಹೊತ್ತಿಗೆ ಉಮ್ಮ ಮತ್ತು ಅಕ್ಕಂದಿರು ಮನೆಯ ವರಾಂಡದಲ್ಲಿ ಕುಳಿತು ಅಬ್ಬ ಮತ್ತು ತಥಾಕಥಿತ ಸಂಬಂಧಿಕರ ಮಾತುಕತೆಯನ್ನೇ ಕೇಳಿಸುತ್ತಿದ್ದರು.
“ಅವನು ಓಡಿ ಹೋಗಿ ಮನೆಗೆ ಬರ್ಬೇಕು, ಕೈಕಾಲು ತುಂಡರಿಸಬೇಕು” ಎಂಬಂತೆ ರೋಷದಿಂದ ಅವುಡುಗಚ್ಚಿ ಅವರು ಮಗನನ್ನು ಕೊಲ್ಲಲು ತಯ್ಯಾರಾದಂತಿತ್ತು.
ಇದ್ಯಾವುದೂ ನನಗೆ ಪರಿಣಾಮಕಾರಿ ಎನಿಸಲಿಲ್ಲ. ನಾನು ಸುಮ್ಮನೆ ಅಂಗಳಕ್ಕಿಳಿದು ಮನೆಯ ತೆಂಗಿನ ಮರಕ್ಕೊಮ್ಮೆ ನೋಡಿದೆ. ಬೆಳದಿಂಗಳ ಆ ರಾತ್ರಿ ಅದ್ಭುತವಾಗಿ ಕಂಡಿತು. ಅಷ್ಟುದ್ದ ತೆಂಗಿನ ಮರದಲ್ಲಿ ಅದೆಷ್ಟು ಕಾಯಿಗಳಿತ್ತು ಎಂಬುವುದು ಸ್ಪಷ್ಟವಾಗಿ ಕಾಣುವಷ್ಟು ಬೆಳಕು. ಅವರೆಲ್ಲರೂ ಗಹನವಾಗಿ ಹುಡುಗ ತಪ್ಪಿಸಿಕೊಂಡು ಎಲ್ಲಿಗೆ ಹೋದನೆಂದು ಚಿಂತಿಸುತ್ತಿರುವಾಗಲೇ ನಾನು ಆಕಾಶ ನೋಡುತ್ತಾ ನಿಂತೆ. ಹಾಲು ಬೆಳದಿಂಗಳು ಹೊರಗಿನ ಲೈಟು ಉರಿಸಿಲ್ಲದಿದ್ದರೂ ನಮ್ಮ ಅಂಗಳ ಸ್ಪಷ್ಟವಾಗಿ ಕಾಣಿಸುವಂತಿತ್ತು. ಹಾಗೇ ಚಂದ್ರನನ್ನು ಸವಿಯುತ್ತಾ ನಿಂತೆ. ಸುತ್ತಲೂ ಚುಕ್ಕಿ ಚುಕ್ಕಿ ನಕ್ಷತ್ರಗಳು. ಚಂದ್ರ ಸ್ವಲ್ಪ ಅಹಂನಲ್ಲಿ ಇತರ ನಕ್ಷತ್ರಗಳನ್ನು ಹಂಗಿಸುವಂತೆ ಕಂಡಿತು. ಚಂದ್ರನೊಳಗಿನ ಮೊಲದಾಕಾರವನ್ನು ಸುಮ್ಮನೆ ನೋಡುತ್ತಿದ್ದೆ. ಅದು ಮೊಲ ಬಿಟ್ಟು ಬೇರೆ ಯಾವುದೋ ಆಕೃತಿಯಿರಬಹುದೇ? ಎಂದೆಲ್ಲಾ ನಿಂತಲ್ಲೇ ತಲೆ ತಿರುಗಿಸಿ ನೋಟವನ್ನೆಲ್ಲಾ ಬದಲಿಸಿ ನೋಡಿದೆ. ಮಗುವಿನಂತೆಯೋ, ಮುಷ್ಟಿಯಂತೆಯೋ ಕಂಡಿರಬಹುದು, ಆದರೆ ಅನತಿ ದೂರದಲ್ಲಿದ್ದ ಆ ಜ್ವಾಜಲ್ಯಮಾನ ನಕ್ಷತ್ರ ನನ್ನೆಲ್ಲಾ ಏಕಾಗ್ರತೆಯನ್ನು ಕಸಿಯಿತು. ಅಷ್ಟೂ ನಕ್ಷತ್ರಗಳ ಮಧ್ಯೆ ಆ ಕೆಂಪಗಿನ ದೊಡ್ಡ ನಕ್ಷತ್ರ ನನಗೆ ವಿಚಿತ್ರವಾಗಿ ಕಂಡಿತು. ನಾನು ಆಕಾಶ ನೋಡಿ ಪರವಶನಾಗುತ್ತಿದ್ದರೆ ಹತ್ತಿರದಲ್ಲೇ ನಮ್ಮದೇ ಬೆಕ್ಕು ತೆಂಗಿನ ಮರದ ಬುಡದಲ್ಲಿ ಜಿಗಿಜಿಗಿದು ಆಟ ಆಡುತ್ತಾ ನನ್ನ ಏಕಾಗ್ರತೆ ಬೇಕಂತಲೇ ನಷ್ಟ ಪಡಿಸುವಂತೆ ಮಾಡುತ್ತಿತ್ತು. ಎರಡೆರಡು ಬಾರಿ ಬೆಕ್ಕು ಓಡಿಸಿ ಮತ್ತದೇ ಕೆಂಪು ನಕ್ಷತ್ರ ನೋಡುತ್ತಲಿದ್ದೆ.
ಆಗೆಲ್ಲಾ ಆಕಾಶವೆಂದರೆ ಅಷ್ಟಕ್ಕಷ್ಟೆ. ಕುತೂಹಲದಿಂದ ಆಕಾಶ ನೋಡುವುದು ಮಳೆಯ ಮೋಡಕ್ಕೆ, ಅದೂ ಬಿಟ್ಟರೆ ವಿಮಾನದ ಸದ್ದು ಕೇಳಿದರೆ ಹೊರ ಬರುವುದು, ಮತ್ತೂ ಅಂದರೆ ಜೆಟ್ ವಿಮಾನ ಉಳಿಸಿ ಹೋದ ಬಿಳಿಯ ಗೆರೆಗಳನ್ನು ರಾಕೆಟ್ ಎಂದು ಭಾವಿಸುವುದು. ಇವಿಷ್ಟೇ ಆಕಾಶದ ಕುತೂಹಲ. ಸುಮಾರು ಹೊತ್ತು ಮಾತನಾಡಿದ ಬಳಿಕ ಸಂಬಂಧಿ ಹೊರಟು ಹೋದರು. ಅಬ್ಬ ಒಳಗೆ ಬರುತ್ತಿದ್ದಂತೆ ಉಮ್ಮ ಮತ್ತು ಅಕ್ಕಂದಿರು ಹಿಂಬಾಲಿಸಿದರು. ನಾನೂ ಅವರ ಜೊತೆ ಕೂಡಿಕೊಂಡೆ. ಇನ್ನು ಬೆಳಕಾಗದೆ ಹೊರ ಹೋಗುವಂತಿಲ್ಲ ಎಂಬಂತೆ ಅಪ್ಪ ಬಾಗಿಲು ಹಾಕಿ ಚಿಲಕ ಭದ್ರಪಡಿಸಿದರು.
ಒಂದೈದು ನಿಮಿಷ ಕಳೆಯಿತು. ಅಷ್ಟರಲ್ಲೇ ಕರೆಂಟ್ ಕೈ ಕೊಟ್ಟಿತು. ಉಮ್ಮ ಗಾಜಿನ ಬಾಟಲಿಯಲ್ಲಿ ತಯ್ಯಾರಿಸಿದ ಸೀಮೆ ಎಣ್ಣೆ ದೀಪ ಉರಿಸಿದರು. ಅಷ್ಟೊತ್ತಿಗೆ ನಮ್ಮ ಬೆಕ್ಕು ಓಡಿ ಬಂದು ಮೊಗಸಾಲೆಯ ಕಲ್ಲು ಬೆಂಚಿನಡಿಗೆ ನುಗ್ಗಿತು. ಸುಮಾರು ಹೊತ್ತು ಮೂಗಿನ ಹೊಳ್ಳೆಗಳಿಗೆ ಸೀಮೆ ಎಣ್ಣೆಯ ಹೊಗೆ ತಾಕಿಸಿಕೊಂಡ ಬಳಿಕ ಕರೆಂಟು ಬಂತು. ಕಲ್ಲು ಬೆಂಚಿನ ಕೆಳಗೆ ಆಡುತ್ತಿದ್ದ ಬೆಕ್ಕು ನಮ್ಮನ್ನೊಮ್ಮೆ ಕಳ್ಳ ನೋಟವಿತ್ತು ಪೇರಿ ಕಿತ್ತಿತ್ತು. ಹೇಗೂ ಕರೆಂಟು ಬಂತಲ್ಲವೆಂದು ದೀಪ ಆರಿಸಿದೆ, ಅಷ್ಟರಲ್ಲೇ ಕಲ್ಲು ಬೆಂಚಿನ ಕೆಳಗೆ ಏನೋ ಕೊಸರಾಡಿದಂತೆ ಕಂಡಿತು. ಸ್ವಲ್ಪ ಹತ್ತಿರ ಬಂದವನಿಗೆ ದಿಗಿಲು ಹಾರಿತು.
“ಹಾವು ಹಾವು” ಎಂದು ಜೋರಾಗಿ ಕಿರುಚಿಕೊಂಡೆ. ನನ್ನ ಕೂಗಿಗೆ ಮನೆಯವರೆಲ್ಲಾ ಮೊಗಸಾಲೆಯಲ್ಲಿ ಜಮಾಯಿಸಿದರು. ಉಮ್ಮ “ಎಲ್ಲಿ” ಎಂದು ಕೇಳಿದಾಗಲೇ ಕಲ್ಲು ಬೆಂಚಿನ ನೆರಳಿನಿಂದ ಗಾಯಗೊಂಡ ಕಟ್ಟು ಹಾವೊಂದು ಹರಿಯುತ್ತಾ ಬೆಳಕಿಗೆ ಬಂದತ್ತ ಕೈ ತೋರಿಸಿದೆ. ಸಿಮೆಂಟು ನೆಲದಲ್ಲಿ ಸರಿಯಾಗಿ ಹರಿಯಲಾಗದೆ ಜಾರಿ ಜಾರಿ ಮತ್ತಷ್ಟು ಹೆದರಿಕೊಂಡು ಕಚ್ಚಲೆಂದು ಹಿಂದು ಮುಂದು ತಲೆ ಎತ್ತಿ ಕುಟುಕುತ್ತಿತ್ತು. ತಲೆಗೆ ಮಾರಣಾಂತಿಕ ಗಾಯ ಬೆಕ್ಕು ಕಡಿದದ್ದರಿಂದಲೇ ಆಗಿದ್ದೆಂದು ನೋಡುವಾಗಲೇ ಸರ್ವವಿಧಿತವಾಗಿತ್ತು. ಕಟ್ಟು ಹಾವು ಅಥವಾ ಕಡಂಬಳ ವಿಪರೀತ ವಿಷಕಾರಿ, ಇಲಿ, ಹಲ್ಲಿಗಳನ್ನು ತಿಂದು ಬದುಕುವ ಇವುಗಳು ಹೆಚ್ಚಾಗಿ ಮನೆಯ ಸುತ್ತ ಮುತ್ತ ಕಂಡು ಬರುವ ಪರಿಸರದ ಹಾವು. ಎಚ್ಚರ ತಪ್ಪಿದರೆ ಸಾವು ಕಟ್ಟಿಟ್ಟ ಬುತ್ತಿ. ಹೆಚ್ಚಾಗಿ ಕಪ್ಪಗಿನ ಬಣ್ಣಕ್ಕಿರುವ ಹಾವು ಮಧ್ಯೆ ಬಿಳಿ ಪಟ್ಟೆಗಳನ್ನು ಹೊಂದಿರುವುದರಿಂದಲೇ ಕಟ್ಟು ಹಾವು ಎಂಬ ಹೆಸರು ಬಂದಿರುವುದು. ಇವುಗಳೇ ಬಣ್ಣವನ್ನೇ ಹೋಲುವ ನಿರುಪದ್ರವಿ ಹಾವೊಂದಿದೆ. ಅದು ತೋಳಹಾವು, ಹೆಚ್ಚಾಗಿ ಗೋಧಿ, ಭತ್ತದ ಕೃಷಿ ಭೂಮಿಯಲ್ಲಿ ಕಾಣಿಸಿಕೊಳ್ಳುವಂತದ್ದೇ. ಜನ ಕಟ್ಟು ಹಾವೆಂದು ಭಾವಿಸಿ ಈ ನಿರುಪದ್ರವಿ ಹಾವನ್ನು ಅಜ್ಞಾನದಿಂದ ಕೊಲ್ಲುವುದು ಕಂಡು ಬರುತ್ತಿದೆ. ಕೋಲೊಂದರಲ್ಲಿ ಎತ್ತಿ ಉಮ್ಮ ಗಾಯಗೊಂಡ ಹಾವನ್ನು ಹೊರಗಿನ ಅಂಗಳಕ್ಕೆಸೆದು ಬಿಟ್ಟರು. ಅದನ್ನು ಅಲ್ಲೇ ಕಾಯುತ್ತಿದ್ದಂತಿದ್ದ ಬೆಕ್ಕು ತನ್ನ ಬೇಟೆಯನ್ನೆತ್ತಿಕೊಂಡು ಕತ್ತಲಲ್ಲಿ ಅಂತರ್ಧಾನವಾಯಿತು.
ಬೆಳದಿಂಗಳ ಆ ರಾತ್ರಿ ಅದ್ಭುತವಾಗಿ ಕಂಡಿತು. ಅಷ್ಟುದ್ದ ತೆಂಗಿನ ಮರದಲ್ಲಿ ಅದೆಷ್ಟು ಕಾಯಿಗಳಿತ್ತು ಎಂಬುವುದು ಸ್ಪಷ್ಟವಾಗಿ ಕಾಣುವಷ್ಟು ಬೆಳಕು. ಅವರೆಲ್ಲರೂ ಗಹನವಾಗಿ ಹುಡುಗ ತಪ್ಪಿಸಿಕೊಂಡು ಎಲ್ಲಿಗೆ ಹೋದನೆಂದು ಚಿಂತಿಸುತ್ತಿರುವಾಗಲೇ ನಾನು ಆಕಾಶ ನೋಡುತ್ತಾ ನಿಂತೆ.
ಮರುದಿನ ಶಾಲೆಗೆ ಹೋಗಿದ್ದೆ. ವಿಜ್ಞಾನ ತರಗತಿಯೆಂದರೆ ನನಗೆ ತುಂಬಾ ಇಷ್ಟ. ಕ್ರಮೇಣ ವಿಜ್ಞಾನವನ್ನು ಭೌತ, ಜೀವ, ರಸಾಯನ ಎಂಬ ವಿಭಜನೆ ಮಾಡಿ ಕೈಗೆಟುಕದಂತೆ ಮಾಡಿದವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ. ಹಾಗೆಯೇ ಪಾಠ ಮಾಡಲು ಅಧ್ಯಾಪಕರು ತರಗತಿಗೆ ಬಂದರು. ಹಾಜರಿ ಮುಗಿದ ಬಳಿಕ “ಯಾರೆಲ್ಲಾ ನಿನ್ನೆ ಮಂಗಳ ಗ್ರಹ ನೋಡಿದ್ದೀರಿ?” ಕೇಳಿದರು. ಎಲ್ಲರೂ ಮುಖ ಮುಖ ನೋಡಿಕೊಂಡರು. ಯಾರಿಗೂ ಅರ್ಥವೇ ಆಗಿರಲಿಲ್ಲ. ಮತ್ತೆ ವಿವರಿಸತೊಡಗಿದವರೇ, “ನಿನ್ನೆ ರಾತ್ರಿ ನಕ್ಷತ್ರದಂತೆ ಕೆಂಪಗೆ ಹೊಳೆಯುವ ನಕ್ಷತ್ರ ಒಂದಿತ್ತು, ಸುಮಾರು ವರ್ಷಕ್ಕೊಮ್ಮೆ ಬಂದು ಹೋಗುವ ಅಪೂರ್ವ ಗಳಿಗೆಯದು” ಸುಮಾರು ಹೊತ್ತು ಅದರ ಬಗ್ಗೆ ಪ್ರವಚನ ನೀಡಿದರು. ಆಹ್, ನಾನು ನೋಡಿದ್ದೆನಲ್ಲಾ ಎಂಬ ಉತ್ತರ ಗಂಟಲವರೆಗೂ ಬಂತಾದರೂ ನಾನು ಅದನ್ನೇ ನೋಡಿದ್ದಾಗಿರಬಹುದಾ ಎಂಬ ಸಣ್ಣ ಸಂಶಯವೇ ನನ್ನನ್ನು ತಡೆದು ಹಾಕಿತು. ಮತ್ತೆ ಆ ದಿನ ಉಲ್ಕೆಗಳು, ಧೂಮಕೇತು, ಆಕಾಶಯ ಕಾಯಗಳ ಬಗ್ಗೆ ತುಂಬಾ ಹೇಳಿದ್ದರು. ಬಹುಶಃ ಆ ದಿನ ಫ್ಲೈಯಿಂಗ್ ಸಾಸರ್ಸ್ ಬಗ್ಗೆಯೂ ಹೇಳಿದ್ದಿರಬೇಕು. ಕುತೂಹಲ ಅಧಿಕವಾಗಿ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕಲು ಮನಸ್ಸು ಬಯಸಿತ್ತು.
ಅದಾಗಿ ಸುಮಾರು ವರ್ಷ ಕಳೆದರೂ ನನ್ನ ಕುತೂಹಲದ ಕಣ್ಣೊಂದು ಆಕಾಶದಿಂದ ತಪ್ಪಿರಲಿಲ್ಲ. ಒಮ್ಮೆ ಧೂಮಕೇತುವಿನ ವಿಚಾರ ಅಮ್ಮನಲ್ಲಿ ಹೇಳುತ್ತಿದ್ದೆ. “ಆಕಾಶದಲ್ಲಿ ಧೂಮಕೇತು ಅಂತ ಇದೆ, ಅದಕ್ಕೆ ಬಾಲವಿದೆ” ಅಂಥೆಲ್ಲಾ ವಿವರಣೆ ಕೊಡುತ್ತಿದ್ದಂತೆ ಹೊರಗೆ ಕೆಲಸ ಮುಗಿಸಿ ಅಂಗಜ ಮಧ್ಯಾಹ್ನದ ಊಟಕ್ಕೆಂದು ಒಳ ಬಂದ. ಅವನಿಗೆ ಊಟ ಬಡಿಸಲು ಹೊರಟ ಉಮ್ಮನ ದಂಬಾಲು ಬಿದ್ದು, ಪೀಡಿಸುತ್ತಾ ನಾನು ಕಥೆ ಮುಂದುವರಿಸಿದ್ದೆ. ಉಮ್ಮ ಕೇಳಿಸಿಕೊಳ್ಳುವ ಪುರ್ಸೊತ್ತಿಲ್ಲದೆ, ಅಂಗಜನಿಗೆ ಊಟ ಬಡಿಸುತ್ತಿದ್ದರು. ನನ್ನ ಚರ್ವಿತಚರ್ವಣ ಮುಂದುವರಿಸುತ್ತಲೇ ಇದ್ದೆ. ಇದನ್ನೇ ಕೇಳಿಸಿಕೊಂಡ ಅಂಗಜನೂ ಕಥೆಗೆ ಕಿವಿಯಾದ. “ಅಲ್ಲ ನಿನ್ಗೆ ಗೊತ್ತುಂಟ, ನಾವು ಸಣ್ಣವರಿರುವಾಗ ಒಮ್ಮೆ ನಮ್ಮ ಗದ್ದೆಗೆ ಉಲ್ಕೆ ಬಿತ್ತಂತೆ. ಬಿದ್ದು ಸುಮಾರು ಗದ್ದೆ ಎಲ್ಲಾ ಸುಟ್ಟು ಹೋಯಿತಂತೆ. ಆಕಾಶದಲ್ಲೆಂದಲೋ ಬಂದ ಬೇಂಕಿಯುಂಡೆಯಂತ ವಸ್ತು ಬಿತ್ತಂತೆ. ಬಹುಶಃ ನೀನು ಹೇಳುವ ಧೂಮಕೇತು ಅದೇ ಇರಬೇಕು” ಎಂದು ಅಂಗಜ ನಂಬಿಸಿ ಬಿಟ್ಟ. ನನಗೆ ಅದೊಂದು ಅದ್ಭುತ ಪರಿಸರ ಕಥೆಯಾಗಿ ಕಂಡಿತ್ತು. ಅದನ್ನೇ ಧೂಮಕೇತೆಂದು ನಂಬಿದ್ದೆ. ಅದು ಬಿದ್ದ ಕಡೆ ಬೃಹತ್ ಕಣಿವೆಗಳಾಗುವುದೆಲ್ಲಾ ಕ್ರಮೇಣ ಕೇಳಿಸಿಕೊಂಡ ಬಳಿಕ ಅದು ಶುದ್ಧ ಸುಳ್ಳೆಂದು ತೀರ್ಮಾನಿಸಿದೆ. ಇತ್ತೀಚೆಗೆ ಹಾರುವ ತಟ್ಟೆಗಳು, ಯು.ಎಫ್ .ಓ ಗಳ ಬಗ್ಗೆ ಓದಿದಾಗ ಯಾಕೋ ಈ ಕಥೆಯನ್ನು ನಖಶಿಖಾಂತ ಸುಳ್ಳೆಂದು ಪ್ರತಿಪಾದಿಸಲೂ ನಾನು ಅಧೀರನಾದೆ. ಯಾವುದೋ ಅನ್ಯಗ್ರಹದ ಜೀವಿಗಳಿಂದ ಬಂದ ಬೆಳಕಿನ ಕಿಡಿ ಯಾಕಿರಬಾರದೆಂದು ನನ್ನೊಳಗೆ ತೀರ್ಮಾನಿಸಿಕೊಂಡೆ.
ಧೂಮಕೇತು, ಆಕಾಶ ಕಾಯಗಳ ಬಗ್ಗೆ ವಿಪರೀತ ಕುತೂಹಲ ಹುಟ್ಟಿದ ಬಳಿಕ ನನಗೂ ಆಕಾಶದಲ್ಲಿ ಸ್ವಲ್ಪ ಕುತೂಹಲ ಅಧಿಕವಾಗಿತ್ತು. ನಾನು ಎಂಟನೇ ತರಗತಿಯಲ್ಲಿದ್ದಾಗ ಒಮ್ಮೆ ಹಾಸ್ಟೆಲ್ ನಲ್ಲಿ ಪ್ರಾರ್ಥನೆ ಮುಗಿದು ಸಾಲಿನಲ್ಲಿ ಹೊರಟಿದ್ದೆವು. ನಾನು ಸುಮ್ಮನೆ ಆಕಾಶ ದಿಟ್ಟಿಸುತ್ತಿದ್ದವನಿಗೆ ಬಿಳಿಯ ಬೆಳಕೊಂದು ಆಕಾಶದ ಮೂಲಕ ಹಾದು ಹೋದದ್ದು ಕಂಡಿತು. ಬಹಳ ಹತ್ತಿರದಿಂದಲೇ ಎಂಬಂತೆ ತೆಂಗಿನ ಮರಕ್ಕೂ ಸ್ವಲ್ಪ ಎತ್ತರದಲ್ಲಿ ಹಾದು ಹೋಗಿ ಮಾಯವಾಯಿತು. ನಾನು ಸಾಲು ತಪ್ಪಿಸಿ “ಅದೋ, ಅದೋ” ಎಂದು ಕೆಲವರಿಗೆ ತೋರಿಸಿ ಅಧ್ಯಾಪಕರಿಂದ ಅಶಿಸ್ತಿಗಾಗಿ ಪೆಟ್ಟು ತಿಂದೆ.
ಸಹಪಾಠಿಗಳು ಯಾರೂ ಕುತೂಹಲಿಗರಾದಂತೆ ಕಂಡು ಬರಲಿಲ್ಲ. ನಾನು ಕೆಲವು ಗೆಳೆಯರಲ್ಲಿ ಈ ವಿಚಾರವೆತ್ತಿ ನೋಡಿದೆ, ಅವರ್ಯಾರು ಸೊಪ್ಪು ಹಾಕಲಿಲ್ಲ. ಬೆಳಗ್ಗೆ ಪೇಪರ್ ತರುವವನನ್ನು ಕಾಯುತ್ತಾ ನಿಂತೆ. ಅವನದಾಗಲೇ ತಂದು ಕೊಟ್ಟು ಅದು ಅಧ್ಯಾಪಕರ ಕೊಠಡಿಗೆ ಹೋಗಿಯಾಗಿತ್ತು. ಇನ್ನು ಪತ್ರಿಕೆ ನಮಗೆ ಸಿಗಬೇಕಾದರೆ ಸಂಜೆಯಾದ್ರೂ ಆಗಬೇಕಿತ್ತು. ಸಂಜೆವರೆಗೂ ಕಾದೆ. ಕೊನೆಗೆ ಪತ್ರಿಕೆ ಸಿಕ್ಕಿತು. ಪತ್ರಿಕೆಯ ಎಲ್ಲಾ ಪುಟಗಳು ತಿರುವಿ ಹಾಕಿದೆ, ಪ್ರಾದೇಶಿಕ ಸುದ್ದಿಯಲ್ಲೂ ಹುಡುಕಿದೆ. ಯಾರೊಬ್ಬ ಪತ್ರಕರ್ತನ ಕಣ್ಣಿಗೆ ಅದು ಬಿದ್ದಿರಲಿಲ್ಲವೇನೋ. ನನಗಾದ ನಿರಾಶೆ ಅಷ್ಟಿಷ್ಟಲ್ಲ. ನನ್ನ ನತದೃಷ್ಟತೆಗೆ ನಾನೇ ಹಳಿದುಕೊಳ್ಳುತ್ತಾ ಮತ್ತೆ ಸಂಜೆಯ ಪ್ರಾರ್ಥನೆಗಾಗಿ ಸರತಿಯಲ್ಲಿ ನಿಂತೆ.
ಇತ್ತೀಚೆಗೆ ಬಾಹ್ಯಾಕಾಶದ ಬಗ್ಗೆ ಓದಿದ ಪುಸ್ತಕಗಳಿಂದ ಇದು ಕ್ಷುದ್ರ ಗ್ರಹಗಳಿಂದ ಉಂಟಾಗುವುದೆಂದು ತಿಳಿದು ಬಂತು. ಅಸಂಖ್ಯಾತ ಗ್ರಹಗಳಲ್ಲದ ಆಕಾಶ ಕಾಯಗಳಿಂದ ಉತ್ಪತ್ತಿಯಾಗುವ ಬೆಳಕಿನ ತುಂಡುಗಳು ಭೂಮಿಯ ಕಡೆಗೆ ಅಪ್ಪಳಿಸುವುದಿದೆ. ಅದರಲ್ಲಿ ಹೆಚ್ಚಿನವುಗಳು ಸಾಗರಕ್ಕೆ ಅಪ್ಪಳಿಸುವುದರಿಂದ ಭೂಮಿಗೆ ಅಷ್ಟೇನು ದೊಡ್ಡ ಅನಾಹುತಗಳಾಗುವುದಿಲ್ಲ. ಕೆಲವೊಮ್ಮೆ ನಿರ್ಜನ ಪ್ರದೇಶಕ್ಕೋ, ಬೆಟ್ಟ ಗುಡ್ಡಗಳಿಗೋ ಬಿದ್ದು ಹೋಗುವುದಿದೆ. ಅಂತಹ ಯಾವುದೋ ಒಂದು ಉಲ್ಕೆಯೂ ನಾನು ಕಂಡಿರಬಹುದೆಂಬ ತೀರ್ಮಾನಕ್ಕೆ ಬಂದೆ. ಅನತಿ ದೂರದಲ್ಲಿ ಅರಬೀ ಸಮುದ್ರಕ್ಕೂ ಬಿದ್ದು ಹೋಗಿರಲೂಬಹುದು. ಯಾರು ಬಲ್ಲವರು?
ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..