ಸಿದ್ಧಾಂತಗಳು ಎಷ್ಟೇ ಉದಾತ್ತವಾಗಿದ್ದರೂ ಅದನ್ನು ಜಾರಿಗೊಳಿಸುವ ವಿಧಾನ ಸರಿಯಿಲ್ಲದಿದ್ದರೆ ಎಲ್ಲಾ ಅನರ್ಥವೇ ಆಗುತ್ತದೆ ಎಂಬುದು ಇದರ ಮುಖ್ಯ ಸಾರ. ಒಂದು ತೋಟದಲ್ಲಿರುವ ಪ್ರಾಣಿಗಳೆಲ್ಲಾ ದುಷ್ಟ ಒಡೆಯನ ವಿರುದ್ಧ ಬಂಡೆದ್ದು ತೋಟವನ್ನು ವಶಪಡಿಸಿಕೊಂಡು ಸಮಾನತೆಯ ಸಮಾಜ ಕಟ್ಟಲು ಹೊರಡುವ ಕತೆಯಿದು. ಆದರೆ ಕಾಲಕಳೆಯುತ್ತಾ ಹೋದಂತೆ ನಾಯಕನ ಆದರ್ಶಗಳೆಲ್ಲಾ ಮಣ್ಣುಪಾಲಾಗಿ ಅವನೂ ಒಬ್ಬ ಭ್ರಷ್ಟನೇ ಆಗುತ್ತಾನೆ. ಒಂದು ಕೆಟ್ಟ ಸಮಾಜದಲ್ಲಿನ ಎಲ್ಲಾ ಗುಣಗಳು ಅಲ್ಲೂ ಬರುತ್ತದೆ. ಪ್ರಬಲರು ಪ್ರಬಲರಾಗುತ್ತಲೇ ಹೋಗುತ್ತಾರೆ, ದುರ್ಬಲರು ದುರ್ಬಲರಾಗುತ್ತಲೇ ಹೋಗುತ್ತಾರೆ. ಪ್ರಬಲರಾದ ಹುದ್ದೆಯಲ್ಲಿರುವವರಿಂದ ದುರ್ಬಲರ ಶೋಷಣೆ ನಿರಂತರವಾಗಿ ನಡೆಯುತ್ತದೆ.
ಗಿರಿಧರ್ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ
ಕೆಲವು ಬಾರಿ ಏನಾಗುತ್ತದೆ ಅಂದರೆ ಒಂದು ವ್ಯವಸ್ಥೆಯ ವಿರುದ್ಧ ನೇರವಾಗಿ ಮಾತನಾಡಲಾಗುವುದಿಲ್ಲ. ಮಾಮೂಲಿ ಕಥಾ ಕಾದಂಬರಿ ರೂಪದಲ್ಲಿ ಬರೆದರೂ ವಿವಾದಕ್ಕೊಳಗಾಗುವ ಅಥವಾ ನಿಷೇಧಾಜ್ಞೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಅದಕ್ಕೆ ಅತ್ಯಂತ ಸೃಜನಶೀಲವಾಗಿ ಕಾಲ್ಪನಿಕವಾದ ಕಥಾವಸ್ತುಗಳನ್ನಿಟ್ಟುಕೊಂಡು ಪ್ರತಿಭಟನೆ ಮಾಡುವುದು. ನಾನು ಸಾಹಿತ್ಯವನ್ನು ಅಥವಾ ಸಾಹಿತ್ಯದ ವಿವಿಧ ಪ್ರಾಕಾರಗಳನ್ನು ಶಿಸ್ತುಬದ್ಧವಾಗಿ ಕಲಿತವನಲ್ಲ. ಅದಕ್ಕೆ ಆ ರೀತಿಯ ಸಾಹಿತ್ಯಕ್ಕೆ ಏನು ಹೇಳುತ್ತಾರೆಂದು ಗೊತ್ತಿಲ್ಲ. ಉದಾಹರಣೆಗೆ ಜೋನಾಥನ್ ಸ್ವಿಫ್ಟ್ ಅವರು ಬರೆದ ‘Gulliver’s Travel’ ಅಥವಾ ಗಲಿವರನ ಪ್ರಯಾಣ ತೆಗೆದುಕೊಳ್ಳಿ. ಮೇಲ್ನೋಟಕ್ಕೆ ಮಕ್ಕಳ ಕಾಲ್ಪನಿಕ ಕಾದಂಬರಿಯಂತೆ ಕಂಡರೂ ಆಗಿನ ಐರ್ಲೆಂಡ್ ಮತ್ತು ಆಂಗ್ಲನಾಡುಗಳ ರಾಜಕೀಯ ವ್ಯವಸ್ಥೆಗಳನ್ನು ತೀಕ್ಷ್ಣವಾಗಿ ವಿಮರ್ಶೆಗೆ ಗುರಿಪಡಿಸುತ್ತದೆ. ಅದರಲ್ಲೂ ಕುದುರೆಗಳ ನಾಡಿಗೆ ಹೋದಾಗಿನ ಅಧ್ಯಾಯದಲ್ಲಿ ಆ ಕಾಲದ ಆಡಳಿತ ವ್ಯವಸ್ಥೆ, ಮಾನವನ ದುರಾಸೆ, ಅನಗತ್ಯ ಯುದ್ಧಗಳ ಕುರಿತು ತೀಕ್ಷ್ಣವಾಗಿಯೇ ತಿವಿಯುತ್ತದೆ. ಅದೇ ರೀತಿ ಹಾಲಿವುಡ್ಡಿನ ಆ್ಯನಿಮೇಶನ್ ಚಲನಚಿತ್ರ ಝೂಟೋಪಿಯಾದಲ್ಲೂ ರೇಸಿಸಂ ಬಗ್ಗೆ, ಸರಕಾರಿ ವ್ಯವಸ್ಥೆಯ ಬಗ್ಗೆ, ಪೂರ್ವಗ್ರಹತೆಯ ಬಗ್ಗೆ ಇತ್ಯಾದಿಗಳ ವಿಡಂಬನೆಗಳನ್ನು ಸಹ ಕಾಣಬಹುದು.
ಈ ರೀತಿಯ ಕಥಾವಸ್ತುವುಳ್ಳ ಕಾದಂಬರಿಗಳಲ್ಲಿ ಅದ್ಭುತವಾದ ಕಾದಂಬರಿಯೆಂದರೆ ಇಂಗ್ಲೆಂಡಿನ ಜಾರ್ಜ್ ಓರ್ವೆಲ್ ೧೯೪೦ರ ದಶಕದಲ್ಲಿ ಬರೆದ ‘Animal Farm’ ಅಥವಾ ಕನ್ನಡದಲ್ಲಿ ಯತಾರ್ಥ ಅನುವಾದ ಮಾಡಿದರೆ ‘ಪ್ರಾಣಿಗಳ ತೋಟ’ ಎಂದು ಕರೆಯಬಹುದಾದ ಕಾದಂಬರಿ. ಬಹಳ ದಿನದಿಂದ ಓದಬೇಕೆಂದುಕೊಂಡಿದ್ದೆ. ಆದರೆ ಓದುವ ಮುಹೂರ್ತ ಕೂಡಿಬರಲೇ ಇಲ್ಲ. ಇತ್ತೀಚೆಗೆ ಅದು ಕನ್ನಡಕ್ಕೆ ಅನುವಾದವಾಗಿರುವ ಸುದ್ದಿ ಕೇಳಿದಾಗ ಕೂಡಲೇ ತರಿಸಿದೆ. ಗೊತ್ತಿದ್ದರೆ ಮೂಲ ನುಡಿಯಲ್ಲಿ ಓದಿದರೇ ಒಳ್ಳೆಯದೇ. ಆದರೆ ಕನ್ನಡದಲ್ಲಿ ಇದ್ದರೆ ಬೇರೆ ಭಾಷೆಯಲ್ಲಿ ಓದಲು ಮನಸ್ಸು ಒಪ್ಪುವುದಿಲ್ಲ.
ಅದೂ ಅಲ್ಲದೇ ಕೆಂಡಸಂಪಿಗೆಯಲ್ಲಿ ಅನುವಾದಿತ ಕೃತಿಗಳ ಕುರಿತೇ ಹೆಚ್ಚು ಬರೆಯುತ್ತಿದ್ದೆನೆಯೇ ಅನ್ನೋ ಅನುಮಾನ ಬಂದು ಯೋಚಿಸಿದಾಗ, ಉತ್ತರ ಹೌದು ಅಂತಲೇ ಅನ್ನಿಸಿತು. ಕೆಂಡಸಂಪಿಗೆಯ ಅಂಕಣದಲ್ಲಿ ಇದುವರೆಗೆ ಆರು ಅನುವಾದಿತ ಕೃತಿಗಳ ಕುರಿತು ಬರೆದಿದ್ದೇನೆ. ಮೊದಲು ಬರೆದ ಅದ್ಭುತಯಾನ, ಮಿಲೇನಿಯಂ ಸರಣಿ, ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ, ಫಾಲೋವಿಂಗ್ ಫಿಷ್, ಭಿನ್ನ ಅಭಿಪ್ರಾಯ ಮತ್ತು ಸಫಾ ಅನುವಾದಿತ ಕೃತಿಗಳಾಗಿದ್ದವು. ಕನ್ನಡ ಎಷ್ಟೇ ಅದ್ಭುತ ಭಾಷೆಯಾಗಿದ್ದರೂ ಕೂಡಾ ಮುಖ್ಯವಾಗಿ ಕನ್ನಡದ ವ್ಯಾಪ್ತಿ ಕರ್ನಾಟಕ ಮಾತ್ರ. ಸೀಮಿತ ಭೌಗೋಳಿಕ ವ್ಯಾಪ್ತಿಯ ನುಡಿಯ ಶ್ರೀಮಂತಿಕೆ ಹೆಚ್ಚಿಸಲು ದೇಶದ ಹಾಗೂ ಪ್ರಪಂಚದ ಎಲ್ಲೆಡೆಯಿಂದ ಅರಿವನ್ನು ತರುವುದು ಅನಿವಾರ್ಯ. ಈ ದೃಷ್ಟಿಯಲ್ಲಿ ಅನುವಾದ ಕನ್ನಡದ ಬೆಳವಣಿಗೆಗೆ ಅತೀ ಮಹತ್ವದ್ದಾಗಿದೆ. ಒಂದು ದಿನ ಮೈಸೂರಿನ ‘ಅರಿವು’ ಎಂಬ ಕನ್ನಡ ಮಾಧ್ಯಮ ಶಾಲೆಯನ್ನು ನಡೆಸುತ್ತಿರುವವರಲ್ಲಿ ಮುಖ್ಯರಾದ ಜನಾರ್ದನ ಚನ್ನಗಿರಿಯವರಲ್ಲಿ ಮಾತನಾಡುತ್ತಿದ್ದಾಗ ಕನ್ನಡದಲ್ಲಿ ಮಕ್ಕಳ ಪುಸ್ತಕಗಳ ಬಹಳ ಕಮ್ಮಿ, ಅದಕ್ಕೆ ಹೆಚ್ಚಾಗಿ ಆಂಗ್ಲ ಪುಸ್ತಕಗಳನ್ನು ಕೂಡಾ ತರಿಸಬೇಕಾಗುವುದರ ಬಗ್ಗೆ ಹೇಳಿದ್ದರು.
ಕೆಲ ಬರಹಗಾರರು ಅನುವಾದ ಸಾಹಿತ್ಯವೆಂದರೆ ಎರಡನೆ ದರ್ಜೆಯದ್ದು ಹಾಗೂ ಅನುವಾದ ಮಾಡುವ ಬರಹಗಾರರ ಶ್ರಮವನ್ನು ಕಡೆಗಣಿಸಿ ಮಾತನಾಡಿದ್ದನ್ನು ಓದಿದ ನೆನಪು. ಆದರೆ ಅನುವಾದ ಖಂಡಿತ ಸುಲಭವಲ್ಲ. ಒಂದು ಹೊತ್ತಿಗೆಯನ್ನು ಸರಿಯಾಗಿ ಅರ್ಥೈಸಿಕೊಂಡು ಕನ್ನಡೀಕರಿಸುವುದು ಬಹಳ ಸವಾಲಿನ ಕೆಲಸ. ಮತ್ತೊಂದು ಕಷ್ಟವೇನೇಂದರೆ ಮುಕ್ಕಾಲು ಭಾಗ ಕೃತಿಗಳು ಮೂಲ ಭಾಷೆಯಿಂದ ನೇರ ಅನುವಾದವಾಗದೇ ಆಂಗ್ಲದ ಮೂಲಕ ಬರುತ್ತವೆ. ಆಗ ಎಷ್ಟೇ ಪ್ರಯತ್ನಪಟ್ಟರೂ ಒಂದು ಹಂತದ ಡೈಲ್ಯೂಶನ್ ಆಗಿಬಿಡುತ್ತದೆ.
ಕನ್ನಡದಲ್ಲಿ ನಾನು ಓದಿದವರಲ್ಲಿ ಅದ್ಭುತ ಅನುವಾದಕರೆಂದರೆ ತೇಜಸ್ವಿ ಮತ್ತು ರವಿ ಬೆಳಗೆರೆ. ಅತ್ಯಂತ ಸಾಮಾನ್ಯ ಜನರಿಗೂ ಅರ್ಥವಾಗುವಂತೆ, ಅನುವಾದವೆಂದು ಸ್ವಲ್ಪವೂ ಅನ್ನಿಸದೇ ಕನ್ನಡೀಕರಿಸುವ ಅದ್ಭುತ ಕಲೆ ಇವರಿಬ್ಬರಿಗಿತ್ತು. ಮೂಲ ಅನುವಾದಕ್ಕೆ ಧಕ್ಕೆಯಾಗದಂತೆ ಕನ್ನಡದ ನುಡಿಗಟ್ಟು, ಬೈಗುಳಗಳನ್ನು ತರುವ ರೀತಿ ನಿಜಕ್ಕೂ ಅದ್ಭುತ.
ನಾನು ಓದಿದ ಮತ್ತೊಂದು ಅದ್ಭುತವಾದ ಅನುವಾದಿತ ಕೃತಿ ವಿ.ಎಸ್. ಖಾಂಡೇಕರ್ ಅವರು ಬರೆದ ಯಯಾತಿ. ಇನಾಂದಾರ್ ಅವರು ಬಹಳ ಮನಮುಟ್ಟುವಂತೆ ಕನ್ನಡೀಕರಿಸಿದ್ದಾರೆ. ಅದೇ ರೀತಿ ಇನ್ನೊಂದು ವಿಶಿಷ್ಟ ಅನುವಾದಿತ ಕೃತಿ ವೈವಿ ರೆಡ್ಡಿಯವರ ಭಿನ್ನ ಅಭಿಪ್ರಾಯ. ಇಲ್ಲಿ ಶ್ರೀರಾಂ ಅವರು ಕನ್ನಡ ಮತ್ತು ತೆಲುಗು ಎರಡೂ ಅವತರಿಣಿಕೆಗಳ ಅವಲೋಕಿಸಿ ಅನುಮಾನವಿದ್ದಾಗ ಸ್ವತಃ ರೆಡ್ಡಿಯವರಲ್ಲಿ ಕೇಳಿ ಬರೆದಿದ್ದು.
ಮೇಲೆ ಹೇಳಿದಂತೆ ಅನುವಾದ ಸುಲಭದ ಕೆಲಸವಲ್ಲ. ಮಕ್ಕಳ ಕಥೆ ಅನುವಾದಿಸಬೇಕಾದರೆ ಮಕ್ಕಳಾಗಿ, ವೈಜ್ಞಾನಿಕ ಅಥವಾ ಸಂಶೋಧನಾ ಗ್ರಂಥಗಳ ಅನುವಾದಿಸಬೇಕಾದರೆ ಕ್ಲಿಷ್ಟಕರವಾಗದಂತೆ ಅನುವಾದಿಸಿಬೇಕಾಗುತ್ತದೆ, ಟೆಕ್ನಿಕಲ್ ಟರ್ಮ್‌ಗಳು ಬಂದಾಗ ಇನ್ನಷ್ಟು ಎಚ್ಚರಿಕೆ ಅಗತ್ಯ. ಇಲ್ಲವಾದರೆ ಪುಸ್ತಕದ ಸೊಬಗೇ ಹೊರಟುಹೋಗುವುದು.
ಪುಸ್ತಕಕ್ಕೆ ಹಿಂದಿರುಗಿ ಬಂದರೆ, ಇದು ಬರೀ ನೂರು ಚಿಲ್ಲರೆ ಪುಟಗಳ ಕಾದಂಬರಿ. ಪಂಟರಾದರೆ ಒಂದುವರೆ ಗಂಟೆಯಲ್ಲಿ, ಇಲ್ಲವಾದರೆ ಎರಡು ಎರಡೂವರೆ ಗಂಟೆಗಳಲ್ಲಿ ಓದಬಹುದಾದ ಕಾದಂಬರಿ. ಸಿದ್ಧಾಂತಗಳು ಎಷ್ಟೇ ಉದಾತ್ತವಾಗಿದ್ದರೂ ಅದನ್ನು ಜಾರಿಗೊಳಿಸುವ ವಿಧಾನ ಸರಿಯಿಲ್ಲದಿದ್ದರೆ ಎಲ್ಲಾ ಅನರ್ಥವೇ ಆಗುತ್ತದೆ ಎಂಬುದು ಇದರ ಮುಖ್ಯ ಸಾರ. ಒಂದು ತೋಟದಲ್ಲಿರುವ ಪ್ರಾಣಿಗಳೆಲ್ಲಾ ದುಷ್ಟ ಒಡೆಯನ ವಿರುದ್ಧ ಬಂಡೆದ್ದು ತೋಟವನ್ನು ವಶಪಡಿಸಿಕೊಂಡು ಸಮಾನತೆಯ ಸಮಾಜ ಕಟ್ಟಲು ಹೊರಡುವ ಕತೆಯಿದು. ಆದರೆ ಕಾಲಕಳೆಯುತ್ತಾ ಹೋದಂತೆ ನಾಯಕನ ಆದರ್ಶಗಳೆಲ್ಲಾ ಮಣ್ಣುಪಾಲಾಗಿ ಅವನೂ ಒಬ್ಬ ಭ್ರಷ್ಟನೇ ಆಗುತ್ತಾನೆ. ಒಂದು ಕೆಟ್ಟ ಸಮಾಜದಲ್ಲಿನ ಎಲ್ಲಾ ಗುಣಗಳು ಅಲ್ಲೂ ಬರುತ್ತದೆ. ಪ್ರಬಲರು ಪ್ರಬಲರಾಗುತ್ತಲೇ ಹೋಗುತ್ತಾರೆ, ದುರ್ಬಲರು ದುರ್ಬಲರಾಗುತ್ತಲೇ ಹೋಗುತ್ತಾರೆ. ಪ್ರಬಲರಾದ ಹುದ್ದೆಯಲ್ಲಿರುವವರಿಂದ ದುರ್ಬಲರ ಶೋಷಣೆ ನಿರಂತರವಾಗಿ ನಡೆಯುತ್ತದೆ. ಸಮಾನತೆಯೆಂಬ ಹೆಸರಿನ ಸಿಹಿ ಲೇಪಿಸಿದ ಅಸಮಾನತೆಯ ಗುಳಿಗೆಯಂತಾಗುತ್ತದೆ ಅಲ್ಲಿನ ಪ್ರಜೆಗಳ ಅರ್ಥಾತ್ ಪ್ರಾಣಿಗಳ ಅವಸ್ಥೆ. ‘ಎಲ್ಲರೂ ಸಮಾನರು’ ಎಂಬಲ್ಲಿನ ಆದರ್ಶವಾಕ್ಯ ‘ಕೆಲವರು ಹೆಚ್ಚು ಸಮಾನರು’ ಎಂಬಲ್ಲಿಗೆ ತಲುಪುತ್ತದೆ. ಕಥೆಯ ಮುಖ್ಯ ಸಾರಾಂಶ ಹೇಳಿದ್ದರೂ ಇದು ಪತ್ತೆದಾರಿ ಕಾದಂಬರಿಯಲ್ಲದ ಕಾರಣ ಬೇಸರಗೊಳ್ಳುವ ಅಗತ್ಯವಿಲ್ಲ. ಕತೆಯ ನಿಜವಾದ ಸತ್ವ ಇರುವುದು ಹೇಗೆ ಎಲ್ಲರೂ ಸಮಾನರು ಅನ್ನುವಲ್ಲಿಂದ ಕೆಲವರು ಹೆಚ್ಚು ಸಮಾನರು ಅನ್ನುವಲ್ಲಿಗೆ ತಲುಪಿತು ಅನ್ನುವುದೇ ಆಗಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನುವಂತೆ ೧೧೨ ಪುಟಗಳಷ್ಟೇ ಇದ್ದರೂ ಇದು ಜಗತ್ಪ್ರಸಿದ್ಧವಾದ ಕಾದಂಬರಿ. ಪ್ರತಿಯೊಂದು ಅಕ್ಷರವನ್ನೂ ಕೂಡಾ ಬಿಡದೇ ಓದುವಂತಿದೆ.
ಇತಿಹಾಸದ ಆಸಕ್ತರಿಗೆ ಮತ್ತು ಅಂತರರಾಷ್ಟ್ರೀಯ ವಿಷಯಗಳಲ್ಲಿ ಆಸಕ್ತರಾದವರಿಗೆ ಇದು ಯಾವುದಕ್ಕೆ ಸಂಬಂಧಪಟ್ಟಂತೆ ಬರೆದಿದ್ದು ಎಂದು ಊಹಿಸುವುದು ಕಷ್ಟವೇನಲ್ಲ. ಸಮಾನತೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಷ್ಯಾದ ಕಮ್ಯುನಿಸ್ಟ್ ಪಕ್ಷದ ಸ್ಟಾಲಿನ್, ಟ್ರೋಟ್ಸ್ಕಿ ಮೊದಲಾದವರನ್ನು ಕಲ್ಪನೆಯಲ್ಲಿಟ್ಟುಕೊಂಡು ಸೃಷ್ಟಿಸಲಾದ ಪಾತ್ರಗಳು. ಶೋಷಣೆಯ ವಿರುದ್ಧ ಹೋರಾಡಿದವರೇ ಶೋಷಕರಾಗಿ ಬದಲಾಗುವ, ಸಮಾನತೆಯ ಹೆಸರಿನಲ್ಲಿ ಸರ್ವಾಧಿಕಾರ ತಂದು ಸಾಮಾನ್ಯ ಜನರ ಸ್ವಾತಂತ್ರ್ಯಹರಣ ಮಾಡಿ ಉದಾತ್ತ ಮೌಲ್ಯಗಳನ್ನು ಮಣ್ಣುಪಾಲು ಮಾಡಿದ್ದನ್ನು ಓರ್ವೆಲ್ ಬಹಳ ತೀಕ್ಷ್ಣವಾಗಿ ವಿಡಂಬನೆ ಮಾಡಿದ್ದಾರೆ.
ಆದರೆ ನಾವು ಇದನ್ನು ಬರೀ ಒಂದು ಸಿದ್ಧಾಂತದವರ ವಿರುದ್ಧ ಬರೆದ ಬರಹವೆಂದು ಭಾವಿಸಿ ಅದು ಮಾತ್ರ ಉಪಯೋಗವಿಲ್ಲದ್ದು ಅನ್ನುವ ತೀರ್ಮಾನಕ್ಕೆ ಬರುವುದೋ, ಇಲ್ಲಾ ಬರೀ ಅದನ್ನು ಮಾತ್ರ ವಿಮರ್ಶೆ ಮಾಡಲು ಇದನ್ನು ಬಳಸಿಕೊಂಡರೆ, ಇಲ್ಲಿನ ಕಥಾವಸ್ತುವನ್ನು ಇಂದಿನ ರಾಜಕೀಯಕ್ಕೆ, ಇಂದಿನ ರಾಜಕಾರಣಿಗಳಿಗೆ ಹೋಲಿಸಲು ಆಗದಿದ್ದರೆ ನಮ್ಮ ಓದನ್ನು ಅಪೂರ್ಣವೆಂದೇ ಹೇಳಬೇಕಾಗುತ್ತದೆ. ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಇದು ಬಹಳ ಆಳವಾಗಿ ಚಿಂತನೆ ಮಾಡಬೇಕಾದ, ಗೆಳೆಯರೊಡನೆ ಕೂಡಿ ಚರ್ಚಿಸಬೇಕಾದ ವಿಷಯಗಳು ಇಲ್ಲಿವೆ.
ಇದನ್ನು ಸಹನಾ ಹೆಗಡೆಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅವರು ಮಾಡುವ ಅನುವಾದ ಸರಳ ಮತ್ತು ಸುಂದರವಾಗಿರುವ ಕಾರಣ ನನಗೆ ಇಷ್ಟವಾಗುತ್ತದೆ. ಹಿಂದೆ ಇವರೇ ಅನುವಾದಿಸಿದ Following Fish ಬಗ್ಗೆ ಬರೆದಿದ್ದೆ. ಇದು ಸರಕಾರದ ವತಿಯಿಂದ ಅನುವಾದಿಸಲ್ಪಟ್ಟ ಕಾರಣ ಬೆಲೆಯೂ ಕೈಗೆಟಕುವ ದರದಲ್ಲಿದೆ (೮೦ ರೂಪಾಯಿಗಳು, ಅಂಚೆವೆಚ್ಚ ಸೇರಿ ನೂರು ರೂಪಾಯಿಯೊಳಗೆ ಕೈಗೆಟುಕಬಹುದು). ಹೊಸದಾಗಿ ಓದಲು ಶುರುಮಾಡಿದವರಿಗೆ, ಅಷ್ಟೊಂದು ಓದುವ ಹವ್ಯಾಸವಿಟ್ಟುಕೊಳ್ಳದೇ ಅಪರೂಪಕ್ಕೆ ಓದುವವರಿಗೆ ಕೂಡಾ ಸೂಕ್ತವಾದ ಕಾದಂಬರಿ. ದಯವಿಟ್ಟು ಕೊಂಡು ಓದಿ.
ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.