“ದಿಗಿಲುಗೆ ಪರ್ಯಾಯ ಪದದಂತೆ ನೀನು ಮುಖವನ್ನು ಹಾಗೆ ಯಾಕೆ ಮಾಡಿಕೊಂಡೆ? ಮೊದಲು ನೀನು ನನ್ನ ಬದುಕಿನ ವಿಷಮವಾದ ಸಂಗತಿಗಳಿಂದ ಹೊರಗೆ ಬಂದುಬಿಡು. ನಾವು ಹೀಗೆ ನೋವಿನಲ್ಲಿ ಕಳೆದುಕೊಂಡ ಯಾವ ನಿಮಿಷವೂ ಮತ್ತೆ ಮರಳಿ ಬರುವುದಿಲ್ಲ. ಜೀವನ ದೇವರ ಕೊಟ್ಟ ವರ. ಹಾಗೆಂದು ನನಗೆ ನೋವೇ ಇಲ್ಲ ಎಂದುಕೊಳ್ಳಬೇಡ. ಎದೆಯಾಳದಲ್ಲಿ ಮಡುಗಟ್ಟಿರುವ ನೋವು ಹರಿತವಾಗಿ ಸದಾ ಚುಚ್ಚುತ್ತಲೇ ಇರುತ್ತದೆ. ಆದರೆ ಅದು ನನ್ನ ದೈನಂದಿನ ಬದುಕಿಗೆ ತೊಡಕಾಗದಂತೆ ನನ್ನ ನೋವನ್ನು ಎದೆಯ ಪಾತಾಳದಲ್ಲಿ ಹುದುಗಿಸಿಟ್ಟಿದ್ದೇನೆ.”
ಧನಪಾಲ ನಾಗರಾಜಪ್ಪ ಅನುವಾದಿಸಿದ ತೆಲುಗು ಕತೆಗಾರ ಸಲೀಂ ಅವರ ಸಣ್ಣಕತೆಗಳ ಸಂಕಲನ “ಕಾಡುವ ಕತೆಗಳು” ಪುಸ್ತಕದ ಒಂದು ಕತೆ ನಿಮ್ಮ ಓದಿಗೆ

 

ಅಂದು ಒಂದು ಹೆಸರಾಂತ ಕಾಲೇಜಿನ ವಾರ್ಷಿಕೋತ್ಸವದ ಸಮಾರಂಭ. ನಾನು ಅದರಲ್ಲಿ ಉಪನ್ಯಾಸವನ್ನು ಮಾಡಬೇಕಿದೆ. ವ್ಯಕ್ತಿತ್ವ ವಿಕಸನದ ಪುಸ್ತಕಗಳ ಲೇಖಕನಾಗಿ, ಉತ್ತಮ ವಾಗ್ಮಿಯಾಗಿ ನಾನು ತುಂಬಾ ಜನಪ್ರಿಯ. ದಿಲ್ಲಿಯ ಟ್ರಾಫಿಕ್ ನ ಮಹಾಸಾಗರವನ್ನು ಈಸಿಕೊಂಡು ಹೋಗಬೇಕೆಂದರೆ ಮನೆಯಿಂದ ಕನಿಷ್ಠ ಒಂದೆರಡು ಗಂಟೆಗಳು ಮುಂಚಿತವಾಗಿಯೇ ಹೊರಡುವುದು ಒಳಿತೆಂದು ಕಾಲೇಜಿನ ಕಾರ್ಯಕ್ರಮಕ್ಕೆ ಹೋಗಲು ಸಿದ್ಧನಾಗುತ್ತಿರುವಾಗ ಚರವಾಣಿ ಮೊಳಗಿತು. ಯಾವುದೋ ಹೊಸ ಸಂಖ್ಯೆಯಿಂದ ಕರೆ ಬರುತ್ತಿದೆ. ನನ್ನ ಪುಸ್ತಕಗಳನ್ನು ಓದಿದವರಲ್ಲಿ ಕೆಲವರು ಅಭಿಮಾನದಿಂದ ನನಗೆ ಕರೆ ಮಾಡಿ ಅಭಿನಂದನೆಗಳನ್ನು ತಿಳಿಸುವುದು ಸಾಮಾನ್ಯವಾದ ಸಂಗತಿ. ಕರೆಯನ್ನು ಸ್ವೀಕರಿಸಿ “ಹಲೋ, ಇತ್ತ ಕಡೆಯಿಂದ ರಾಮ್ ಪ್ರಸಾದ್. ಹೇಳಿ” ಎಂದೆ.

“ನಾನು ಸುಧಾಕರ್. ನಿನಗೆ ನೆನಪಿದೆಯಾ?” ಎಂದ ಕರೆ ಮಾಡಿದಾತ.

“ಯಾವ ಸುಧಾಕರ್?”

“ಕರ್ನೂಲ್ ವಜ್ರ ಮಹೋತ್ಸವದ ಕಾಲೇಜಿನಲ್ಲಿ ನಾವು ಒಟ್ಟಿಗೆ ಓದಿದೆವು. ನಾನು ನಿನ್ನ ಜೊತೆ ಒಂದೇ ಕೊಠಡಿಯಲ್ಲಿದ್ದೆನಲ್ಲಾ. ಈಗ ನೆನಪಾಯಿತೆ? ತುಂಬಾ ದೊಡ್ಡ ಲೇಖಕನಾಗಿಬಿಟ್ಟಿರುವೆಯಲ್ಲಾ. ಹಳೆಯ ದಿನಗಳನ್ನು, ಹಳೆಯ ಗೆಳೆಯರನ್ನು ಮರೆಯುವುದು ಸಹಜ. ನಿನ್ನ ಕಾಲಡಿಯ ಕಾರ್ಪೆಟ್ ಎತ್ತಿ ನೋಡು. ಅಲ್ಲಿ ಜಮೆಯಾಗಿರುವ ದುಮ್ಮು, ಧೂಳಿನಲ್ಲಿ ನನ್ನ ನೆನಪುಗಳು ಎಲ್ಲಾದರೂ ಕಾಣಿಸಬಹುದು.”

ಥಟ್ಟಂತ ಕಾಲೇಜಿನ ದಿನಗಳಲ್ಲಿನ ಆಪ್ತ ಸ್ನೇಹಿತ ಸುಧಾಕರ್ ನ ನೆನಪು ನನಗೆ ಬಂತು. ಬಿ.ಎ. ಓದುವಾಗ ಆತ ನನ್ನ ಸಹಪಾಠಿ. ಹಾಸ್ಟಲ್ ನಲ್ಲಿ ನಾವಿಬ್ಬರೂ ಒಂದೇ ಕೊಠಡಿಯಲ್ಲಿ ಇರುತ್ತಿದ್ದೆವು. ಆತ ತುಂಬಾ ಚೆನ್ನಾಗಿ ಹಾಡುತ್ತಿದ್ದ. ಆತನ ಕಂಠದಲ್ಲಿ ಘಂಟಸಾಲರವರ ಹಾಡುಗಳಿಗಿಂತ ಎಸ್.ಪಿ.ಬಿ. ಅವರ ಹಾಡುಗಳು ಚೆನ್ನಾಗಿ ಹೊರಹೊಮ್ಮುತ್ತಿದ್ದವು. ಯಾವಾಗಲೂ ನಗುನಗುತ್ತಾ, ನಗಿಸುತ್ತಾ ಲವಲವಿಕೆಯಿಂದ ಇರುತ್ತಿದ್ದ. ನನಗೆ ಒಂದು ಘಟನೆ ಚೆನ್ನಾಗಿ ನೆನಪಿದೆ. ಹಾಸ್ಟಲ್ ಗೆ ಸೇರಿದ ನಂತರ ಹತ್ತು ದಿನಗಳಾದ ಮೇಲೆ ನನಗೆ ವಿಪರೀತವಾದ ಜ್ವರ ಬಂತು. ನೀರಸದೊಂದಿಗೆ ನಿಶ್ಶಕ್ತಿಯೂ ಕೂಡ ಆವರಿಸಿತು. ಸುಧಾಕರ್ ರಾತ್ರಿ ಮೆಸ್ ನಿಂದ ಹಾಲು, ಬ್ರೇಡ್ ತಂದು ತಿನಿಸಿದ. ತಿಂದ ಮೇಲೆ ಹತ್ತು ನಿಮಿಷಗಳಿಗೆ ಎಲ್ಲವನ್ನು ವಾಂತಿ ಮಾಡಿಬಿಟ್ಟೆ. ನಮ್ಮ ಕೊಠಡಿಯ ತುಂಬಾ ಕೆಟ್ಟ ವಾಸನೆ ಹಬ್ಬಿತು. ನಾನು ಕಂಗಳನ್ನು ಮುಚ್ಚಿಕೊಂಡು ಮಲಗಿದೆ.

ಸುಧಾಕರ್ ಒಂದು ಬಕೇಟಿನ ತುಂಬಾ ನೀರನ್ನು ತೆಗೆದುಕೊಂಡು ಬಂದು ಪೊರಕೆಯಿಂದ ಕೊಠಡಿಯನ್ನು ಸ್ವಚ್ಛ ಮಾಡಿದ. ಇಂತಹ ಕೆಲಸವನ್ನು ಯಾರು ಮಾಡುತ್ತಾರೆ! ನಮ್ಮ ಅಮ್ಮನೋ, ಅಕ್ಕನೋ ಬಿಟ್ಟರೆ ಬೇರೆ ಯಾರೂ ಸಹ ಇಂತಹ ಕೆಲಸವನ್ನು ಮಾಡುವುದಿಲ್ಲ. ಆವಾಗಿನಿಂದ ಸುಧಾಕರ್ ನನಗೆ ಬಹಳ ಆಪ್ತನಾಗಿಬಿಟ್ಟ. ಪದವಿಯ ವ್ಯಾಸಂಗ ಮುಗಿದ ಮೇಲೆ ಆತ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಎಂ.ಎ.ಗೆ ಸೇರಿದ. ನಮ್ಮ ಅಪ್ಪನಿಗೆ ದಿಲ್ಲಿಗೆ ವರ್ಗಾವಣೆ ಆಗಿದ್ದರಿಂದ ನಾನು ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಎಂ.ಎ.ಗೆ ಸೇರಿದೆ. ನಾವು ಆಗಾಗ ಪರಸ್ಪರ ಪತ್ರಗಳನ್ನು ಬರೆಯುವ ಮೂಲಕ ನಮ್ಮ ಸ್ನೇಹವನ್ನು ಕಾಪಿಟ್ಟುಕೊಂಡಿದ್ದೆವು. ಮುಂದೆ ಸುಧಾಕರ್ ಆಧೋನಿಯ ಕಾಲೇಜಿನಲ್ಲಿ ಉಪನ್ಯಾಸಕನಾದ. ನಾನು ಡಾಕ್ಟ್ರೇಟ್ ಗಾಗಿ ಅಮೇರಿಕಾಗೆ ಹೋದೆ. ಆಮೇಲೆ ನಮ್ಮ ನಡುವಿನ ಪತ್ರಗಳ ನಂಟು ಕಡಿಮೆಯಾಗತೊಡಗಿತು. ಹೊಸ ವರ್ಷ ಬಂದಾಗ ಶುಭಾರೈಕೆಗಳನ್ನು ಕೋರುವ ಕಾರ್ಡ್ ಗಳನ್ನು ಪರಸ್ಪರ ಕಳುಹಿಸುವುದಕ್ಕೆ ನಮ್ಮ ಪತ್ರ ವ್ಯವಹಾರ ಪರಿಮಿತವಾಗಿ ನಿಧಾನವಾಗಿ ಅದೂ ಸಹ ನಿಂತೇ ಹೋಯಿತು.

ನಾನು ದಿಲ್ಲಿಗೆ ಹಿಂತಿರುಗಿದ ಮೇಲೆ ಕೆಲವು ದಿನಗಳ ಕಾಲ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಅದರೊಡನೆ ಇಂಗ್ಲೀಷ್ ನಲ್ಲಿ ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು ಬರೆಯಲು ಆರಂಭಿಸಿದೆ. ನನ್ನ ಮೊದಲನೇ ಪುಸ್ತಕಕ್ಕೆ ಬಹಳ ಒಳ್ಳೆಯ ಹೆಸರು ಬಂತು. ಅದು ಆ ವರ್ಷದ ಅತಿ ಹೆಚ್ಚು ಮಾರಾಟವಾದ ಕೃತಿಯಾಗಿ ದಾಖಲೆಯನ್ನು ಮಾಡಿತು. ಆ ನಂತರ ಉದ್ಯೋಗವನ್ನು ಬಿಟ್ಟು ಪುಸ್ತಕಗಳ ರಚನೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡೆ. ಇದರೊಡನೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಣ ನೀಡುವ ಕೆಲಸವನ್ನು ಆರಂಭಿಸಿದೆ.

“ಇನ್ನೂ ನನ್ನ ನೆನಪಾಗಲಿಲ್ಲವೆ?” ನಾನು ಕೆಲವು ಕ್ಷಣಗಳ ಕಾಲ ಮೌನವಾಗಿದ್ದರಿಂದ ಮತ್ತೆ ಆತ ಕೇಳಿದ.

“ನಿನ್ನನ್ನು ಹೇಗೆ ಮರೆಯಬಲ್ಲೆ ಸುಧಾಕರ್? ನಮ್ಮ ನಡುವೆ ಬಹಳ ವರ್ಷಗಳು ವಿರಾಮದ ಚಿಹ್ನೆಗಳಾಗಿ ತಡೆಯೊಡ್ಡಿದವಲ್ಲಾ. ಆದ್ದರಿಂದಲೇ ಬೇಗ ನಿನ್ನ ನೆನಪಾಗಲಿಲ್ಲ” ಎಂದೆ ಚೂರು ತಪ್ಪಿತಸ್ಥಭಾವದಿಂದ.

“ನಾನು ಮಾತ್ರ ನಿನ್ನ ಪ್ರತಿ ಪುಸ್ತಕವನ್ನು ತಪ್ಪದೇ ಓದುತ್ತೇನೆ ಗೊತ್ತಾ? ಅದರಲ್ಲಿನ ಪ್ರತಿ ವಾಕ್ಯವನ್ನು ಓದುತ್ತಾ ನೀನು ನನ್ನೊಡನೆ ಮಾತಾಡುತ್ತಿರುವಂತೆ ಅನುಭೂತಿ ಪಡೆಯುತ್ತೇನೆ. ಆದ್ದರಿಂದಲೇ ನೀನು ಸದಾ ನನ್ನ ಹೃದಯಕ್ಕೆ ಸನಿಹವಾಗಿರುವೆ. ಅದು ಬಿಡು, ಈಗ ಸದ್ಯ ಏನು ಬರೆಯುತ್ತಿರುವೆ?”

“ದುಃಖದ ಸಮುದ್ರವನ್ನು ಒಂದೇ ಕೈಯಿಂದ ಈಜುತ್ತ ಹೇಗೆ ಸಂತೋಷವಾಗಿ ಇರಬಹುದೆಂದು ಸಾರುವ ಪುಸ್ತಕವನ್ನು ಬರೆಯುವ ಸಂಕಲ್ಪ ಮಾಡಿರುವೆ. ಮೊದಲು ಆ ಕೃತಿಗೆ ಅಗತ್ಯವಾದ ಕಚ್ಚಾ ಸರಕನ್ನು ಸಂಗ್ರಹಿಸಬೇಕಲ್ಲಾ. ಅದೇ ಕೆಲಸದಲ್ಲಿ ನಾನೀಗ ಮುಳುಗಿಹೋಗಿದ್ದೇನೆ. ನೀನು ದಿಲ್ಲಿಗೆ ಬರಬಾರದೆ? ನಾವು ಭೇಟಿಯಾಗಿ ಬಹಳ ವರ್ಷಗಳೇ ಆಗಿದೆ.”

“ನಿನ್ನನ್ನು ನಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲು ನಾನು ನಿನಗೆ ಕರೆ ಮಾಡಿದೆ. ನಮ್ಮ ಕಾಲೇಜಿನಲ್ಲೂ ನಿನ್ನ ಸಾಹಿತ್ಯದ ಅಭಿಮಾನಿಗಳು ಬಹಳ ಮಂದಿ ಇದ್ದಾರೆ ಗೊತ್ತಾ? ನಿನ್ನ ಪುಸ್ತಕಗಳನ್ನು ನಾನು ಓದಿದ ಮೇಲೆ ನನ್ನ ವಿದ್ಯಾರ್ಥಿಗಳಿಂದಲೂ ಓದಿಸುತ್ತಿರುತ್ತೇನೆ. ಇನ್ನೊಂದು ವರ್ಷದಲ್ಲಿ ನಾನು ನಿವೃತ್ತನಾಗಲಿದ್ದೇನೆ. ಅಷ್ಟರೊಳಗೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಕುರಿತು ನಿನ್ನದೊಂದು ಉಪನ್ಯಾಸವನ್ನು ಏರ್ಪಡಿಸಬೇಕೆನ್ನುವುದು ನನ್ನ ಆಸೆ. ಅದರೊಂದಿಗೆ ನಿನ್ನೊಡನೆ ಒಂದೆರಡು ದಿನಗಳನ್ನು ಕಳೆದು, ನಮ್ಮ ಹಳೆಯ ನೆನಪುಗಳನ್ನು, ಮಧುರವಾದ ಆ ಅನುಭೂತಿಗಳನ್ನು ಮತ್ತೆ ತಾಜಾಗೊಳಿಸಿಕೊಳ್ಳುವ ಆಸೆ ನನಗೆ. ದಯಮಾಡಿ ಆಗುವುದಿಲ್ಲವೆಂದು ಮಾತ್ರ ಹೇಳಬೇಡ.”

ನನಗೂ ಸುಧಾಕರ್ ನನ್ನು ಭೇಟಿಯಾಗಬೇಕೆಂದು ಆ ಕ್ಷಣದಲ್ಲಿ ಆಸೆಯಾಯಿತು. “ಸದ್ಯಕ್ಕೆ ಒಂದು ಕೆಲಸದ ಮೇಲೆ ಹೊರಗೆ ಹೋಗುತ್ತಿದ್ದೇನೆ. ಹಿಂತಿರುಗಿ ಬಂದ ಮೇಲೆ ಆರಾಮವಾಗಿ ಮಾತಾಡೋಣ. ಟ್ರಾವೆಲ್ ಏಜೆಂಟ್ ನ ಜೊತೆ ಮಾತಾಡಿ ಪಯಣಕ್ಕೆ ರಿಸರ್ವೇಷನ್ ಮಾಡಿಸಿಕೊಳ್ಳುತ್ತೇನೆ. ನಿಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಎರಡು ದಿನಗಳು ಮುಂಚಿತವಾಗಿಯೇ ಬರುವೆ ಸರಿಯಾ?” ಎಂದೆ ಉತ್ಸಾಹದಿಂದ.

* * * *

ರೈಲುಗಾಡಿಯಿಂದ ಇಳಿದೊಡನೆ ಸುಧಾಕರ್ ಎದುರಾಗಿ ಬಂದು ಅಪ್ಪಿಕೊಂಡ. ಎಷ್ಟು ವರ್ಷಗಳಾಗಿಯಿತೋ ನೋಡಿ. ಮನುಷ್ಯ ಬಹಳ ಬದಲಾಗಿಹೋಗಿದ್ದೇನೆ. ಆತ ನನ್ನನ್ನು ಗುರುತುಹಿಡಿದಿದ್ದರಿಂದ ಸರಿಹೋಯಿತು. ಅದೇ ನಾನಾಗಿದ್ದಿದ್ದರೆ ಗುರುತು ಹಿಡಿಯಲಾಗುತ್ತಿರಲಿಲ್ಲ. ಆತ ತಾನು ಇರಬೇಕಾದ ತೂಕಕ್ಕಿಂತ ಸುಮಾರು ಹತ್ತು ಕೇಜಿಗಳಷ್ಟು ಹೆಚ್ಚಿಗೆ ಇರುತ್ತಾನೆ ಅಂತ ಅನಿಸುತ್ತಿದೆ. ಹೊಟ್ಟೆ ಮುಂದಕ್ಕೆ ಉಬ್ಬಿದೆ. ಕೂದಲು ಬೆಳ್ಳಗಾಗಿವೆ.
ತನ್ನ ಕಾರಿನಲ್ಲೇ ಮನೆಗೆ ಕರೆದುಕೊಂಡು ಹೋದ.

“ಅದು ಸ್ನಾನದ ಕೊಠಡಿ. ಗೀಸರ್ ಆನ್ ಮಾಡಿಟ್ಟಿದ್ದೇನೆ. ಮೊದಲು ಸ್ನಾನ ಮಾಡು. ಆಮೇಲೆ ನಿನಗೆ ನಾನು ಬಿಸಿಬಿಸಿ ದೋಸೆಗಳನ್ನು ಮಾಡಿಕೊಡುವೆ.”

“ಮನೆಯಲ್ಲಿ ನೀನು ಒಬ್ಬನೇ ಇರುವೆಯಾ ಸುಧಾಕರ್? ತಂಗಿ ಮತ್ತು ಮಕ್ಕಳು ಎಲ್ಲಿ? ಅವರು ಊರಿಗೆ ಹೋಗಿರುವರೆ? ಅಯ್ಯೋ! ನಾನು ಬರಬಾರದ ಸಮಯದಲ್ಲಿ ಬಂದು ನಿನಗೆ ಕಷ್ಟ ಕೊಡುತ್ತಿದ್ದೇನೆ. ಹೀಗೆಂದು ಮೊದಲೇ ಹೇಳಿದ್ದಿದ್ದರೆ ನಾನು ಪ್ರಯಾಣವನ್ನು ಮುಂದೂಡುತ್ತಿದ್ದೆನಲ್ಲಾ” ಎಂದೆ.

“ನಿನ್ನ ತಂಗಿಯಿಲ್ಲ ಅಂತ ಕಾಲೇಜಿನ ವಾರ್ಷಿಕೋತ್ಸವ ನಿಲ್ಲುವುದಿಲ್ಲವಲ್ಲಾ. ನೀನು ಮೊದಲು ಸ್ನಾನಾದಿಗಳನ್ನು ಮುಗಿಸಿಕೋ. ನನ್ನ ಅಡುಗೆ ಚೆನ್ನಾಗಿಯೇ ಇರುತ್ತದೆ. ನೀನೇನೂ ಭಯಪಡಬೇಡ” ಎಂದ ಮತ್ತೆ ನಗುತ್ತಾ. ನಾವು ಜೊತೆಯಲ್ಲಿ ಓದುತ್ತಿದ್ದಾಗ ಹೇಗೆ ಹಾಯಾಗಿ ನಗುತ್ತಿದ್ದನೋ ಹಾಗೆಯೇ ಈಗಲೂ ನಗುತ್ತಿದ್ದಾನೆ. ಎಳೆಯ ಮಗುವಿನಂತಹ ನಗು!

ಸ್ನಾನ ಮಾಡಿ ಬರುವಷ್ಟರಲ್ಲಿ ಊಟದ ಮೇಜಿನ ಮೇಲೆ ತಟ್ಟೆಗಳನ್ನಿಟ್ಟು ದೋಸೆಗಳು, ಕಡಲೇಬೀಜದ ಚಟ್ನಿಯನ್ನು ಬಡಿಸಿದ. ಆಹಾ ಎಷ್ಟು ರುಚಿ!

“ತಂಗಿಗಿಂತಲೂ ನೀನೇ ಚೆನ್ನಾಗಿ ಅಡುಗೆ ಮಾಡುವೆ ಅಂತ ಅನಿಸುತ್ತದೆ. ಹೌದು, ಇಷ್ಟಕ್ಕೂ ತಂಗಿ ಯಾವ ಊರಿಗೆ ಹೋಗಿದ್ದಾಳೆ? ಯಾವಾಗ ವಾಪಸ್ಸು ಬರುತ್ತಾಳೆ? ನಾನು ಹಿಂತಿರುಗಿ ಹೋಗುವುದರೊಳಗೆ ಬರುವಳೆ?” ಎಂದು ಕೇಳಿದೆ.

“ಆ ವಿಷಯಗಳನ್ನು ಸಾವಕಾಶವಾಗಿ ಹೇಳುವೆ. ಮೊದಲು ನೀನು ನಿನ್ನ ಬಗ್ಗೆ ಹೇಳು? ನಿನಗೆ ಎಷ್ಟು ಜನ ಮಕ್ಕಳು? ಏನು ಮಾಡುತ್ತಿದ್ದಾರೆ?”

“ನನಗೆ ಇಬ್ಬರು ಮಕ್ಕಳು. ಮಗ ಸಿ.ಎ ಮಾಡಿ, ಬ್ಯಾಂಕಿನಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಮಗಳು ಇಂಜಿನೀಯರಿಂಗ್ ಮಾಡಿದ್ದಾಳೆ. ಅವರಿಬ್ಬರಿಗೂ ಮದುವೆ ಆಗಿದೆ. ಅವರಿಗೂ ಕೂಡ ಮಕ್ಕಳಾಗಿವೆ. ಐದು ವರ್ಷಗಳ ಹಿಂದೆಯೇ ನಾನು ತಾತನಾದೆ ಗೊತ್ತಾ? ಜೀವನ ಸರಾಗವಾಗಿ ಸಾಗುತ್ತಿದೆ ಎನ್ನುವುದಕ್ಕಿಂತ ಸಂತೋಷವಾಗಿ, ಸಂತೃಪ್ತಿಯಿಂದ ಸಾಗುತ್ತಿದೆ ಎಂದರೆ ತಪ್ಪೇನಲ್ಲ. ಯಾವುದೇ ಚಿಂತೆ ಗಿಂತೆ ಇಲ್ಲದ ಅದ್ಭುತವಾದ ಜೀವನ ನಮ್ಮದೆಂದು ಚೂರು ಹೆಮ್ಮೆ ನನಗೆ.

“ಹೀಗೆ ಕೇಳುತ್ತಿದ್ದರೆ ಎಷ್ಟು ಸಂತೋಷವಾಗಿದೆಯೋ.”

“ಸುಧಾಕರ್, ನೀನು ಹೇಳು.”

“ನೀನು ನೋಡುತ್ತಿರುವೆಯಲ್ಲಾ ನಾನೂ ಸಹ ಸಂತೋಷವಾಗಿರುವೆ. ಭಯ, ಬೇಸರಗಳು ಇಲ್ಲದ ಜೀವನವಾಗಿರುವುದರಿಂದಲೇ ಚೆನ್ನಾಗಿ ತಿಂದು ಹೊಟ್ಟೆಯನ್ನು ಬೆಳೆಸಿಕೊಳ್ಳುತ್ತಿದ್ದೇನೆ” ಎನ್ನುತ್ತಾ ಜೋರಾಗಿ ನಕ್ಕನು.

“ನಿನಗೆ ಮಕ್ಕಳು ಎಷ್ಟು ಮಂದಿ? ಅವರು ಏನು ಮಾಡುತ್ತಿದ್ದಾರೆ? ಸ್ವಲ್ಪ ವಿವರವಾಗಿ ಹೇಳು?” ಎಂದೆ.

“ಅಷ್ಟು ಆತುರ ಯಾಕೆ? ನೀನು ಇನ್ನೂ ಎರಡು ದಿನಗಳು ನನ್ನ ಜೊತೆಯೇ ಇರುತ್ತೀಯಲ್ಲಾ. ಅದನ್ನೆಲ್ಲಾ ಮಾತಾಡಲು ಬಹಳ ಸಮಯವಿದೆ. ಮೊದಲು ನಿನಗೆ ಬಿಸಿಬಿಸಿ ಕಾಫಿ ಮಾಡಿಕೊಂಡು ಬರುವೆಯಿರು” ಎನ್ನುತ್ತಾ ಆತ ಎದ್ದು ಅಡುಗೆ ಮನೆಯೊಳಕ್ಕೆ ಹೋದ.

ಎರಡು ಕಪ್ಪುಗಳಲ್ಲಿ ಹಬೆಯಾಡುತ್ತಿರುವ ಕಾಫಿಯನ್ನು ತಂದು ನನ್ನ ಕೈಗೊಂದನ್ನು ಕೊಟ್ಟು ತಾನೊಂದನ್ನು ತೆಗೆದುಕೊಂಡ.

“ನಮ್ಮ ಕಾಲೇಜಿನ ಸಿಬ್ಬಂದಿಯೆಲ್ಲಾ ಇಂದು ನೀನು ಬರುವೆಯೆಂದು ಕಾತರದಿಂದ ಕಾಯುತ್ತಿದ್ದಾರೆ. ನಾವು ಮೊದಲು ಕಾಲೇಜಿಗೆ ಹೋಗೋಣ. ನೀನು ಒಂದು ಗಂಟೆಯ ಕಾಲ ನಮ್ಮ ಕಾಲೇಜಿನ ಸಿಬ್ಬಂದಿಗೆ ವ್ಯಕ್ತಿತ್ವ ವಿಕಸನದ ಕುರಿತು ಕ್ಲಾಸ್ ತೆಗೆದುಕೋ. ಪ್ರಾಂಶುಪಾಲರ ಅನುಮತಿಯನ್ನು ನಾನು ಮೊದಲೇ ತೆಗೆದುಕೊಂಡಿದ್ದೇನೆ. ನಮ್ಮ ಪ್ರಾಂಶುಪಾಲರೂ ಸಹ ನಿನ್ನ ಅಭಿಮಾನಿಗಳೇ. ನಿನ್ನನ್ನು ಭೇಟಿಯಾಗಲು ಅವರೂ ಸಹ ಕಾತರದಿಂದ ಕಾಯುತ್ತಿದ್ದಾರೆ. ನೀನೊಬ್ಬ ತಾರೆಯಲ್ಲವೆ” ಎನ್ನುತ್ತಾ ನಕ್ಕನು.

ಕಾಫಿ ಕುಡಿಯುತ್ತಾ ಗೋಡೆಯ ಮೇಲಿನ ಭಾವಚಿತ್ರದ ಮೇಲೆ ದೃಷ್ಟಿ ಹರಿಯಿತು. ಟೆನ್ನಿಸ್ ರಾಕೇಟ್ ಹಿಡಿದುಕೊಂಡು ವೈಯ್ಯಾರವಾಗಿ ನಿಂತಿರುವ ಸುಮಾರು ಇಪ್ಪತ್ತು ವರ್ಷಗಳ ಯುವತಿಯ ಭಾವಚಿತ್ರ. ಬೆಳ್ಳನೆಯ ಉಡುಗೆಯಲ್ಲಿ ದೇವಕನ್ಯೆಯಂತೆ ಇದ್ದಾಳೆ.

“ಈಕೆ ನಿನ್ನ ಮಗಳೆ? ಎಷ್ಟು ಅಂದವಾಗಿದ್ದಾಳೆ! ಈಗ ಏನು ಮಾಡುತ್ತಿದ್ದಾಳೆ?” ಎಂದು ಕೇಳಿದೆ.

“ಕಂಪ್ಯೂಟರ್ ಇಂಜಿನೀಯಂರಿಂಗ್ ಮಾಡಿದ್ದಳು. ಈಗ ಸದ್ಯಕ್ಕೆ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾಳೆ.”

“ಮದುವೆ ಆಯಿತೆ?”

“ಮದುವೆ ಆಗಿದೆ. ಅವಳಿಗೆ ಒಂದು ಪಾಪೂ ಕೂಡ.”

“ಅಷ್ಟಕ್ಕೆ ಯಾಕೆ ನಿಲ್ಲಿಸಿದೆ. ಮತ್ತೆ ಏನಾದರೂ ಹೇಳು. ಅಭಿನಂದನೆಗಳು, ನೀನೂ ಸಹ ತಾತನಾಗಿ ಬಡ್ತಿ ಪಡೆದುಕೊಂಡಿರುವೆ” ಎನ್ನುತ್ತಾ ಆತನ ಭುಜವನ್ನು ಪ್ರೀತಿಯಿಂದ ತಟ್ಟಿದೆ.

ವಸಂತ ವರಿಸಿದ ಮಳೆಯಂತೆ ಆತ ನಕ್ಕನು. ಗಾಳಿಗೆ ಅಲುಗಾಡುವ ಕಾಡು ಮಲ್ಲಿಗೆಯ ಗಿಡದಂತೆ ನಕ್ಕನು.

“ಆ ಪಕ್ಕದ ಭಾವಚಿತ್ರದಲ್ಲಿರುವ ಹದಿನೆಂಟು ವರ್ಷದ ಹುಡುಗ ನಿನ್ನ ಮಗನಾಗಿರಬೇಕಲ್ಲಾ. ಅವನಲ್ಲಿ ನಿನ್ನ ಹೋಲಿಕೆಗಳು ಎದ್ದು ಕಾಣುತ್ತವೆ. ಅವನ ಹಿಂದೆ ಕಾಣುತ್ತಿರುವ ಕಟ್ಟಡ ತಾನು ಓದಿದ ಕಾಲೇಜಿನ ಕ್ಯಾಂಪಸ್ ನಲ್ಲಿನದ್ದಿರಬೇಕು.”

“ಹೌದು ನೀನು ಹೇಳಿದ್ದು ನಿಜ. ಇದು ಮದರಾಸಿನ ಐಐಟಿ ಕ್ಯಾಂಪಸ್ ನಲ್ಲಿ ಮೊದಲ ವರ್ಷದ ಕೆಮಿಕಲ್ ಇಂಜಿನೀಯರಿಂಗ್ ಓದುತ್ತಿದ್ದಾಗಿನ ಭಾವಚಿತ್ರ.”

“ದುಃಖದ ಸಮುದ್ರವನ್ನು ಒಂದೇ ಕೈಯಿಂದ ಈಜುತ್ತ ಹೇಗೆ ಸಂತೋಷವಾಗಿ ಇರಬಹುದೆಂದು ಸಾರುವ ಪುಸ್ತಕವನ್ನು ಬರೆಯುವ ಸಂಕಲ್ಪ ಮಾಡಿರುವೆ. ಮೊದಲು ಆ ಕೃತಿಗೆ ಅಗತ್ಯವಾದ ಕಚ್ಚಾ ಸರಕನ್ನು ಸಂಗ್ರಹಿಸಬೇಕಲ್ಲಾ. ಅದೇ ಕೆಲಸದಲ್ಲಿ ನಾನೀಗ ಮುಳುಗಿಹೋಗಿದ್ದೇನೆ. ನೀನು ದಿಲ್ಲಿಗೆ ಬರಬಾರದೆ? ನಾವು ಭೇಟಿಯಾಗಿ ಬಹಳ ವರ್ಷಗಳೇ ಆಗಿದೆ.”

“ನೋಡಿದೆಯಾ ನೀನು ಹೇಳದಿದ್ದರೂ ಈ ಭಾವಚಿತ್ರಗಳೇ ನಿನ್ನ ಮಕ್ಕಳ ಬಗ್ಗೆ ಎಲ್ಲವನ್ನೂ ಹೇಳಿಬಿಟ್ಟವು. ನನ್ನ ಜೀವನದಂತೆಯೇ ನಿನ್ನ ಜೀವನವೂ ಸಹ ಸುಖ-ಸಂತೋಷಗಳಿಂದ ತುಂಬಿ, ಹೂವು, ಹಣ್ಣುಗಳಿಂದ ಕಳೆಗಟ್ಟಿದ ಬನದಂತೆ ಶೋಭಿಸುತ್ತಿದೆ ಅಂತ ನನಗೆ ಅನಿಸುತ್ತಿದೆ. ನಿನ್ನದೂ ಕೂಡ ಸಂತೃಪ್ತಿಕರವಾದ ಜೀವನವೆಂದು ನಿನ್ನ ಮುಖದಲ್ಲಿ ಸದಾ ತುಳುಕುವ ಕಿರುನಗೆಯಿಂದಲೇ ತಿಳಿಯುತ್ತದೆ.”

ಸುಧಾಕರ್ ಈ ಸಲ ಜೋರಾಗಿ ನಕ್ಕನು. “ನಮ್ಮ ಸೊಲ್ಲನ್ನು ಆಮೇಲೆ ಮುಂದುವರೆಸೋಣ. ಬೇಗ ಕಾಲೇಜಿಗೆ ಹೋಗೋಣ ನಡೆ. ಈಗಾಗಲೇ ತಡವಾಗಿದೆ” ಎಂದ.

“ಇಷ್ಟಕ್ಕೂ ತಂಗಿಯ ಭಾವಚಿತ್ರವೆಲ್ಲಿ?” ಎಂದು ಕೇಳುತ್ತಾ ಎಲ್ಲಾ ಗೋಡೆಗಳ ಮೇಲೆ ಕಣ್ಣಾಯಿಸಿದೆ.

“ಅವಳು ನನ್ನ ಎದೆಯಲ್ಲಿ ಜೋಪಾನವಾಗಿದ್ದಾಳೆ. ಆದ್ದರಿಂದಲೇ ನನಗೆ ಇನ್ನೂ ಅವಳ ಭಾವಚಿತ್ರವನ್ನು ಗೋಡೆಗೆ ಏರಿಸುವ ಅಗತ್ಯ ಬರಲಿಲ್ಲ” ಎನ್ನುತ್ತಾ ನನ್ನ ಕೈ ಹಿಡಿದುಕೊಂಡು ಆ ಕೊಠಡಿಯಿಂದ ಹೊರಗೆ ಎಳೆದುಕೊಂಡುಹೋದ.

ಪ್ರಾಂಶುಪಾಲರು ನನ್ನನ್ನು ಅತ್ಯಂತ ಪ್ರೀತ್ಯಾದರಗಳಿಂದ ಬರಮಾಡಿಕೊಂಡರು. ಕಾಲೇಜಿನ ಉಪನ್ಯಾಸಕರೆಲ್ಲರೂ ಸಭಾಂಗಣದಲ್ಲಿ ಆಸೀನರಾದ ಮೇಲೆ ಅವರು ನನ್ನನ್ನು ಗೌರವಯುತವಾಗಿ ಸಭಾಂಗಣದೊಳಕ್ಕೆ ಕರೆದುಕೊಂಡು ಹೋದರು. ನನ್ನನ್ನು ಕುರಿತಾದ ಪರಿಚಯದ ಮಾತುಗಳನ್ನು ಆಡುವಾಗ ಸುಧಾಕರ್ ನನ್ನನ್ನು ಹೊಗಳಿ ಆಕಾಶಕ್ಕೆ ಏರಿಸಿಬಿಟ್ಟ. ವಿದ್ಯಾರ್ಥಿಗಳ ಭವಿಷ್ಯತ್ತನ್ನು ಬಂಗಾರವಾಗಿಸುವ ಉಪನ್ಯಾಸಕರ ಹೊಣೆಯ ಬಗ್ಗೆ ನಾನು ಸುಮಾರು ಒಂದು ಗಂಟೆಯ ಕಾಲ ಲೀಲಾಜಾಲವಾಗಿ ಮಾತಾಡಿದೆ. ಹಾಗೆ ಮಾತಾಡುತ್ತಲೇ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಅಂಶಗಳನ್ನೂ ಅದರಲ್ಲೇ ಸೇರಿಸಿದೆ. ಎಲ್ಲರೂ ನನ್ನನ್ನು ಬಹಳ ಮೆಚ್ಚಿಕೊಂಡರು. ನನ್ನಂತಹ ದೊಡ್ಡ ವ್ಯಕ್ತಿ ತನ್ನ ಗೆಳೆಯನಾದುದ್ದು ಅದೃಷ್ಟವೆಂದು ಸುಧಾಕರ್ ನನ್ನೂ ಕೂಡ ಅಲ್ಲಿದ್ದವರೆಲ್ಲಾ ಪ್ರಶಂಸಿದರು.

ಅದರ ಜೊತೆಗೆ “ಸುಧಾಕರ್ ನಂತಹ ವ್ಯಕ್ತಿಯೊಂದಿಗಿನ ಸ್ನೇಹವೇ ದೊಡ್ಡ ವರ. ಆತನು ನಮ್ಮ ಕಾಲೇಜಿಗೆಲ್ಲಾ ಒಂದು ಉತ್ಸಾಹ, ಉತ್ತೇಜನ. ಸದಾ ನಗು ನಗುತ್ತಾ, ನಗಿಸುತ್ತಾ ಜೀವನದಲ್ಲಿ ಪ್ರತಿ ಕ್ಷಣವನ್ನು ಎಳೆಯ ಮಗುವಿನಂತೆ ಆಸ್ವಾದಿಸುತ್ತಾ ಆನಂದವಾಗಿ ಬದುಕುವುದು ಆತನಿಗಷ್ಟೇ ಸಾಧ್ಯವಾಗಬಲ್ಲದು. ನಮಗೂ, ನಮ್ಮ ವಿದ್ಯಾರ್ಥಿಗಳಿಗೆ ಆತನೇ ಒಂದು ಪ್ರೇರಣಾಶಕ್ತಿ. ಆತ ಎಷ್ಟು ಓದಿದರೂ ಇನ್ನೂ ಉಳಿದುಹೋಗುವ ಶ್ರೇಷ್ಠ ಪುಸ್ತಕವಿದ್ದಂತೆ. ನಿಮಗೆ ಆತನು ಗೆಳೆಯನಾದುದ್ದು ನಿಮ್ಮ ಅದೃಷ್ಟವೂ ಕೂಡ” ಎಂದು ಅನೇಕರು ಹೇಳಿದರು.

ಮಧ್ಯಾಹ್ನ ಹೊಟೇಲಿನಲ್ಲಿ ಊಟ ಮಾಡಿದ ಮೇಲೆ ಆಧೋನಿಯ ಕೋಟೆಯನ್ನು ನೋಡಲು ಹೋದೆವು. ಅಲ್ಲಿಂದ ಮಹಾಲಕ್ಷ್ಮೀ ಅಮ್ಮನವರ ಆಲಯಕ್ಕೆ ಕರೆದುಕೊಂಡು ಹೋದ. ಅದು ಅಮೃತಶಿಲೆಯಿಂದ ಕಟ್ಟಿರುವ ದೊಡ್ಡ ದೇವಾಲಯ. “ಆಧೋನಿಯ ಜನರಿಗೆ ಈಕೆಯೆಂದರೆ ಬಹಳ ಭಕ್ತಿ ಗೊತ್ತಾ? ಈಕೆಯನ್ನು ಎಲ್ಲರೂ ಪ್ರೀತಿಯಿಂದ ಅವ್ವ ಅಂತಲೂ ಕರೆಯುತ್ತಾರೆ ಗೊತ್ತಾ?” ಎಂದ ಸುಧಾಕರ್.

ಮೊಘಲರ ಕಾಲದಲ್ಲಿ ಜನರ ನೀರಡಿಕೆಯನ್ನು ತಣಿಸಲು ಕಟ್ಟಿಸಿದ ವೆಂಕಣ್ಣನ ಬಾವಿಯನ್ನೂ ಕೂಡ ತೋರಿಸಿದ. ಅದು ತುಂಬಾ ದೊಡ್ಡದಾದ ಬಾವಿ. ಸುಮಾರು ನೂರು ಅಡಿಗಳಷ್ಟು ವ್ಯಾಸವಿರುವ ಬಾವಿ. ಈಗ ಒಣಗಿಹೋಗಿದೆ. “ನಮ್ಮ ಆಧೋನಿಯಲ್ಲಿ ನೋಡಬಹುದಾದ ಸ್ಥಳಗಳು ಇಷ್ಟೇ. ಇದು ನಿಮ್ಮ ದಿಲ್ಲಿಯಂತೆ ಅಲ್ಲ. ತುಂಬಾ ಚಿಕ್ಕ ಊರು” ಎನ್ನುತ್ತಾ ಸುಧಾಕರ್ ಉಲ್ಲಾಸವಾಗಿ ನಕ್ಕನು.

ಅಷ್ಟು ಹೊತ್ತಿಗಾಗಲೇ ಸಮಯ ಸಂಜೆ ಆರು ಗಂಟೆಯಾಗುತ್ತಿತ್ತು. ನಾವಿಬ್ಬರೂ ಮನೆಗೆ ಮರಳಿದೆವು. ಮತ್ತೊಮ್ಮೆ ಆತ ಕಾಫಿ ಮಾಡಿಕೊಟ್ಟು “ರಾತ್ರಿಗೆ ನೀನು ಏನು ಊಟ ಮಾಡುವೆ ಹೇಳು? ಫ್ರಿಡ್ಜ್ ನಲ್ಲಿ ಏನೇನು ತರಕಾರಿಗಳಿವೆಯೋ ನೋಡಬೇಕು. ನಮಗೆ ಅವುಗಳನ್ನು ಬಿಟ್ಟು ಬೇರೆ ಏನಾದರೂ ಅಗತ್ಯವಾದರೆ ಮಾರುಕಟ್ಟೆಗೆ ಹೋಗಿ ತೆಗೆದುಕೊಂಡು ಬರಬೇಕು” ಎಂದ.

“ನೀನು ಯಾಕೆ ಅಷ್ಟು ಕಷ್ಟಪಡುವೆ. ನಾವು ರಾತ್ರಿ ಹೊಟೇಲಿಗೆ ಹೋಗಿ ಊಟ ಮಾಡೋಣ” ಎಂದೆ.

“ಬೇಡ ಮಧ್ಯಾಹ್ನ ಹೊಟೇಲಿನಲ್ಲೇ ತಿಂದೆವಲ್ಲಾ. ಆ ತಿಂಡಿಗಳು ಹುಲ್ಲನ್ನು ಜಗಿದಂತೆ ಅನಿಸುವುದಿಲ್ಲವೆ? ನೀನು ನನ್ನ ಅತಿಥಿ. ನಿನಗೆ ನಳಪಾಕದ ರುಚಿ ತೋರಿಸದಿದ್ದರೂ ಕನಿಷ್ಠ ಪಕ್ಷ ಸುಧಾ ಮಧುರವಾದ ಸ್ವಾದಿಷ್ಟವಾದ ಭೋಜನವನ್ನು ನೀಡಬೇಕಲ್ಲಾ. ಮೊದಲು ಏನು ಅಡುಗೆ ಮಾಡಲಿ ಹೇಳು?”
“ಏನಾದರೂ ಮಾಡು, ನಿನ್ನ ಇಷ್ಟ. ಆದರೆ ಹೆಚ್ಚಿಗೆ ಮಾಡಬೇಡ. ಸಾರು ಒಂದು ಪಲ್ಯ ಅಷ್ಟೇ ಸಾಕು” ಎಂದೆ.

ಸೌತೇಕಾಯಿಯ ಪಲ್ಯ, ಆಲೂಗಡ್ಡೆಯ ಗೊಜ್ಜು, ಮೆಣಸಿನ ಸಾರು, ಕೆನೆಭರಿತ ಮೊಸರು ಎಲ್ಲಾ ಎಷ್ಟು ರುಚಿಯಾಗಿವೆ! ನನ್ನ ಹೆಂಡತಿಯೂ ಕೂಡ ಇಷ್ಟು ರುಚಿಯಾದ ಅಡುಗೆಯನ್ನು ಮಾಡಲಾರಳು.

“ಅಡುಗೆ ಮಾಡುವುದರಲ್ಲಿ ನೀನು ಬಹಳ ಪ್ರಾವೀಣ್ಯತೆಯನ್ನು ಸಂಪಾದಿಸಿರುವೆ” ಎಂದೆ ತೃಪ್ತಿಯಿಂದ ತೇಗುತ್ತಾ.

“ನೀನು ಚೆನ್ನಾಗಿ ಕೈ ಪಳಗಿದ ಲೇಖಕ. ನಾನು ರುಚಿಕರವಾಗಿ ಅಡುಗೆ ಮಾಡಬಲ್ಲ ಭಟ್ಟ” ಎಂದ ನಗುತ್ತಾ.

“ಹತ್ತು ವರ್ಷಗಳಿಂದ ನನ್ನದು ಸ್ವಯಂಪಾಕವಲ್ಲವೆ? ಇಂಗ್ಲೀಷ್ ಸಾಹಿತ್ಯವನ್ನು ಅರಗಿಸಿಕೊಂಡಂತೆ ಪಾಕಶಾಸ್ತ್ರವನ್ನೂ ಸಹ ಅರಿತುಕೊಂಡಿರುವೆ ಅಷ್ಟೇ” ಮತ್ತೊಮ್ಮೆ ಆತ ನಕ್ಕನು.

“ಏನಾಯಿತು? ನನ್ನ ತಂಗಿ ಏನಾದಳು?”

“ಅವಳಿಗೆ ಯಾವಾಗಲೂ ಆತುರವೇ. ರಾತ್ರಿ ಹತ್ತು ಗಂಟೆಯ ರೈಲಿಗೆ ಹೋಗಬೇಕೆಂದರೆ ಎಂಟು ಗಂಟೆಗೆಲ್ಲಾ ರೈಲ್ವೇ ನಿಲ್ದಾಣಕ್ಕೆ ಹೋಗಿ ಕಾದು ಕುಳಿತುಕೊಳ್ಳುವ ಸ್ವಭಾವದವಳು. ಹತ್ತು ವರ್ಷಗಳ ಹಿಂದೆಯೇ ಸಾವನ್ನು ಹುಡುಕಿಕೊಂಡು ಹೊರಟುಹೋದಳು” ಎಂದನು ತಣ್ಣಗೆ. ಆತನ ಮುಖದಲ್ಲಿ ವಿಷಾದದ ಛಾಯೆಗಳೇನೂ ಕಾಣಿಸಲೇ ಇಲ್ಲ.

“ಅಷ್ಟು ದುಃಖಕರವಾದ ವಿಷಯವನ್ನು ಯಾವುದೋ ತಣ್ಣನೆಯ ಸುದ್ದಿಯನ್ನು ಹೇಳುವಂತೆ ಹೇಳುತ್ತಿರುವೆಯಲ್ಲಾ” ಎಂದೆ ಆಶ್ಚರ್ಯದಿಂದ.

“ನಾನು ಏನು ಮಾಡಲಿ ಹೇಳು? ಸತ್ತುಹೋದವರ ಜೊತೆಯಲ್ಲಿ ಬದುಕಿರುವವರು ಹೋಗಲಾಗುವುದಿಲ್ಲ. ಉಸಿರಿರುವ ತನಕ ಬದುಕಲೇಬೇಕು. ಕಾಲವಾದವರ ಕುರಿತು, ಬದುಕಿನಲ್ಲಿ ನಡೆದ ಕಹಿ ಘಟನೆಗಳ ಕುರಿತು ಚಿಂತಿಸುತ್ತಾ ಉಳಿದ ಚೂರು ಜೀವನವನ್ನು ದುಃಖಮಯವನ್ನು ಮಾಡಿಕೊಳ್ಳುವುದರಿಂದ ಏನು ಪ್ರಯೋಜನ? ದಿನವೂ ಓದುವ ಭಗವದ್ಗೀತೆಯಲ್ಲಿ ಹೇಳಿರುವುದು ಇದನ್ನೇ ಅಲ್ಲವೆ?” ಎಂದ.

“ಹತ್ತು ವರ್ಷಗಳ ಹಿಂದೆ ಅಂದರೆ ಆಗ ನಿನಗೆ ಸುಮಾರು ನಲವತ್ತೈದು ವರ್ಷಗಳು ವಯಸ್ಸಿರಬಹುದಲ್ಲಾ. ಆಕೆಗೆ ಏನಾಯಿತು? ಏನಾದರೂ ಅನಾರೋಗ್ಯದ ಸಮಸ್ಯೆಯೆ?”

“ಹೌದು ಅದೂ ಕೂಡ ಅನಾರೋಗ್ಯವೇ. ಮಾನಸಿಕ ಅನಾರೋಗ್ಯ. ಅದಕ್ಕೆ ಮದ್ದು ಇಲ್ಲವಲ್ಲಾ!”

“ಸ್ವಲ್ಪ ಬಿಡಿಸಿ ಹೇಳು.”

“ಮಗಳಿಗೆ ಮದುವೆಯಾದ ಎರಡು ವರ್ಷಗಳಿಗೆಲ್ಲಾ ವಿಚ್ಛೇದನವಾಯಿತು. ಅಳಿಯನಿಗೆ ಒಳ್ಳೆಯ ಉದ್ಯೋಗ, ವ್ಯಕ್ತಿ ನೋಡಲು ಚೆನ್ನಾಗಿಯೇ ಇದ್ದಾನೆಂದು ಮದುವೆ ಮಾಡಿದೆವು. ಅವನು ಹೆಂಡತಿಯನ್ನು ಕಿತ್ತು ತಿನ್ನುವ ವಿಕೃತ ಮನಸ್ಕನೆಂದು ನಾವು ಮೊದಲೇ ಗುರುತಿಸಲಾಗಲಿಲ್ಲ. ಅದು ತಿಳಿಯುವಷ್ಟರಲ್ಲಿ ಅವಳಿಗೆ ಒಂದು ವರ್ಷದ ಮಗು. ಎಲ್ಲಾ ಕಷ್ಟವನ್ನು ನನ್ನ ಮಗಳು ಧೈರ್ಯದಿಂದಲೇ ಎದುರಿಸಿದಳು. ತಾನು ಮಾಡುವ ಕೆಲಸದಲ್ಲೇ ಮಗುವಿನ ಲಾಲನೆ-ಪಾಲನೆ ಮಾಡುತ್ತಾ ಮನಃಶ್ಶಾಂತಿಯನ್ನು ಕಂಡುಕೊಂಡಳು. ಆದರೆ ನನ್ನ ಮಡದಿಯೇ ತನ್ನ ಮಗಳಿಗಾದ ಅನ್ಯಾಯವನ್ನು ಸಹಿಸಿಕೊಳ್ಳಲಿಲ್ಲ. ಅವಳು ಮಗಳದ್ದೇ ಕೊರಗಿನಲ್ಲಿ ದಿನೇ ದಿನೇ ಕುಗ್ಗಿ ಹೋದಳು. ಅದೇ ಸಮಯದಲ್ಲಿ ಐಐಟಿಯಲ್ಲಿ ಮೂರನೇ ವರ್ಷದ ಇಂಜಿನೀಯರಿಂಗ್ ಓದುತ್ತಿದ್ದ ಮಗ ಹಾಸ್ಟಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಯಹತ್ಯೆಯನ್ನು ಮಾಡಿಕೊಂಡ. ನನಗೆ ಸುದ್ದಿ ತಿಳಿಯಿತು. ನಾನು ಬೇಡ ಎಂದರೂ ನನ್ನೊಡನೆ ಮದರಾಸಿಗೆ ಬಂದಳು. ಬೆಳದ ಮಗನನ್ನು ಹೆಣವಾಗಿ ನೋಡಿ ಭರಿಸಲಾಗದೆ ಪ್ರಜ್ಞೆಯನ್ನು ಕಳೆದುಕೊಂಡು ಕುಸಿದು ಬಿದ್ದಳು. ಆಮೇಲೆ ಅವಳು ಆರು ತಿಂಗಳುಗಳು ಕೂಡ ಬದುಕಲಿಲ್ಲ. ತಾನೂ ಕೂಡ ಸತ್ತುಹೋದರೆ ತನ್ನ ಮಗನನ್ನು ಆ ಲೋಕದಲ್ಲಿ ಭೇಟಿಯಾಗಬಹುದು ಎಂದುಕೊಂಡಳೇನೋ ಹುಚ್ಚಿ!”

“ದಿಗಿಲುಗೆ ಪರ್ಯಾಯ ಪದದಂತೆ ನೀನು ಮುಖವನ್ನು ಹಾಗೆ ಯಾಕೆ ಮಾಡಿಕೊಂಡೆ? ಮೊದಲು ನೀನು ನನ್ನ ಬದುಕಿನ ವಿಷಮವಾದ ಸಂಗತಿಗಳಿಂದ ಹೊರಗೆ ಬಂದುಬಿಡು. ನಾವು ಹೀಗೆ ನೋವಿನಲ್ಲಿ ಕಳೆದುಕೊಂಡ ಯಾವ ನಿಮಿಷವೂ ಮತ್ತೆ ಮರಳಿ ಬರುವುದಿಲ್ಲ. ಜೀವನ ದೇವರ ಕೊಟ್ಟ ವರ. ಹಾಗೆಂದು ನನಗೆ ನೋವೇ ಇಲ್ಲ ಎಂದುಕೊಳ್ಳಬೇಡ. ಎದೆಯಾಳದಲ್ಲಿ ಮಡುಗಟ್ಟಿರುವ ನೋವು ಹರಿತವಾಗಿ ಸದಾ ಚುಚ್ಚುತ್ತಲೇ ಇರುತ್ತದೆ. ಆದರೆ ಅದು ನನ್ನ ದೈನಂದಿನ ಬದುಕಿಗೆ ತೊಡಕಾಗದಂತೆ ನನ್ನ ನೋವನ್ನು ಎದೆಯ ಪಾತಾಳದಲ್ಲಿ ಹುದುಗಿಸಿಟ್ಟಿದ್ದೇನೆ. ಜೀವನ ಒಂದು ಪ್ರವಾಹವಿದ್ದಂತೆ. ಅದು ನಮ್ಮನ್ನು ತನ್ನೊಡನೆ ಎಳೆದುಕೊಂಡು ಹೋಗುತ್ತಿರುತ್ತದೆ. ಮಡದಿ, ಮಕ್ಕಳು ಕೆಲ ಕಾಲ ನಮ್ಮೊಡನೆ ಪ್ರಯಾಣ ಮಾಡುತ್ತಾರೆ. ಅವರ ನಿಲ್ದಾಣ ಬಂದಾಗ ಬದುಕಿನ ಬಂಡಿಯಿಂದ ಕೆಳಗಿಳಿದು ನಮ್ಮಿಂದ ಬೇರೆಯಾಗಿ ಕಾಲ ಗರ್ಭದಲ್ಲಿ ಕರಗಿಹೋಗುತ್ತಾರೆ. ಇಲ್ಲಿ ಯಾರೂ ಶಾಶ್ವತವಲ್ಲ. ಒಬ್ಬರು ಸ್ವಲ್ಪ ಮುಂದೆ ಹೋದರೆ ಇನ್ನೊಬ್ಬರು ಆಮೇಲೆ ಹೋಗುತ್ತಾರೆ ಅಷ್ಟೇ. ಅನಿವಾರ್ಯವಾದುದ್ದಕ್ಕೆ ಎಷ್ಟು ಕಾಲ ನೋವುಣ್ಣಬೇಕು?” ಎನ್ನುತ್ತಾ ನಕ್ಕನು.

“ಜಾತಸ್ಯ ಹಿ ಧ್ರುವೋ ಮೃತ್ಯು. . . ನ ತ್ವಂ ಶೋಚಿತು ಮರ್ಹಸಿ” ಎಂಬ ಭಗವದ್ಗೀತೆಯಲ್ಲಿರುವ ಶ್ಲೋಕ ನನ್ನ ಎದುರೇ ಸಾಕಾರವಾಗಿ ನಿಂತಿರುವಂತೆ ಭಾಸವಾಯಿತು.

* * * *

ಸುಧಾಕರ್ ಅವರ ಕಾಲೇಜಿನ ವಾರ್ಷಿಕೋತ್ಸವ ಮುಗಿದುಹೋಯಿತು. ನಾನು ದಿಲ್ಲಿಗೆ ವಾಪಸ್ಸು ಹೋಗಲು ಸಿದ್ಧನಾದ ಮೇಲೆ ನನ್ನನ್ನು ಬಿಳ್ಕೊಡಲು ಆತ ರೈಲು ನಿಲ್ದಾಣದ ತನಕ ನನ್ನೊಡನೆ ಬಂದ.

ರೈಲುಗಾಡಿ ಅಂಕಣಕ್ಕೆ ಬಂದ ಮೇಲೆ ನನ್ನನ್ನು ಬಿಳ್ಕೊಳ್ಳುವಾಗ “ನೀನು ಈಗ ಬರೆಯಬೇಕೆಂದು ಸಂಕಲ್ಪಿಸಿರುವ ಪುಸ್ತಕವನ್ನು ಆದಷ್ಟೂ ಬೇಗ ಬರೆದು ಮುಗಿಸು. ನನಗೊಂದು ಪ್ರತಿಯನ್ನು ಕಳುಹಿಸುವುದು ಮಾತ್ರ ಮರೆಯಬೇಡ” ಎಂದ ಆತ.

“ನಾನು ಆ ಪುಸ್ತಕ ಬರೆಯುವ ಆಲೋಚನೆಯನ್ನೇ ಕೈ ಬಿಟ್ಟಿದ್ದೇನೆ” ಎಂದೆ.

“ಯಾಕೆ?” ಎಂದ ಆತ ಆಶ್ಚರ್ಯದಿಂದ.

“ಹಾಗೆ ಆಲೋಚಿಸಲು ಎರಡು ಕಾರಣಗಳಿವೆ. ಮೊದಲನೇ ಕಾರಣ ಏನೆಂದರೆ ನನ್ನಂತೆ ಸುಖಕರವಾದ ಜೀವನವನ್ನು ನಡೆಸುತ್ತಿರುವ ವ್ಯಕ್ತಿಗೆ ದುಃಖ ಸಮುದ್ರವನ್ನು ಸಂತೋಷವಾಗಿ ಹೇಗೆ ಈಸಬಹುದೆಂದು ವಿವರಿಸುವ ಪುಸ್ತಕವನ್ನು ಬರೆಯುವ ಅರ್ಹತೆ ಇಲ್ಲ. ಅದಕ್ಕೆ ಅಗತ್ಯವಾದ ಅನುಭವ, ಅರ್ಹತೆ ನಿನ್ನಂತಹವರಿಗೆ ಮಾತ್ರವೇ ಇದೆ. ಎರಡನೇ ಕಾರಣ ಏನೆಂದರೆ ಭಗವದ್ಗೀತೆ ಇರುವಾಗ ಅಂತಹ ಪುಸ್ತಕ ಬರೆಯಬೇಕಾದ ಅಗತ್ಯವೇನೂ ಇಲ್ಲ ಎಂದು ನನಗೀಗ ಅರಿವಾಗಿದೆ. ಶೋಖ ರಾಹಿತ್ಯತೆ, ಆನಂದ ಪ್ರಾಪ್ತಿಗಳೇ ಗೀತೆಯ ಪ್ರಧಾನ ಲಕ್ಷ್ಯ. ನಿನಗೆ ನಾನು ಕೃತಜ್ಞನಾಗಿದ್ದೇನೆ” ಎಂದೆ.

ಬಿಳಿಯ ಕಮಲಗಳು ಅರಳಿದಾಗ ಮೂಡುವ ಕಾಂತಿಯಂತಹ ತಿಳಿ ನಗೆಯನ್ನು ಬೀರುತ್ತಾ ಸುಧಾಕರ್ ನನ್ನನ್ನು ಬಿಳ್ಕೊಟ್ಟನು.

ಸೈಯ್ಯದ್ ಸಲೀಂ: ಸಲೀಂ ಇವರ ಕಾವ್ಯನಾಮ. ಮೂಲತಃ ಅವಿಭಜಿತ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ತ್ರೋವಗುಂಟ ಎಂಬ ಗ್ರಾಮದವರು. ವಾಲ್ತೇರ್ ನ ಆಂಧ್ರ ವಿಶ್ವವಿದ್ಯಾಲಯದಿಂದ ಭೂಭೌತಿಕ ಶಾಸ್ತ್ರದಲ್ಲಿ ಎಮ್ ಎಸ್ಸಿ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಇಲ್ಲಿಯವರೆಗೆ ಇವರು ತೆಲುಗು ಭಾಷೆಯಲ್ಲಿ ಮೂರು ಕವನ ಸಂಕಲನಗಳು, ಹತ್ತು ಕಥಾ ಸಂಕಲನಗಳು ಮತ್ತು ಇಪ್ಪತ್ತಾರು ಕಾದಂಬರಿಗಳನ್ನು ರಚಿಸಿದ್ದಾರೆ. ಇವರ ಕೆಲವು ಕಾದಂಬರಿಗಳು ಮತ್ತು ಹಲವು ಕಥೆಗಳು ಕನ್ನಡ, ಮರಾಠಿ, ತಮಿಳು, ಮಲೆಯಾಳಿ, ಒರಿಯಾ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡಿವೆ.
ಇವರು ರಚಿಸಿರುವ ವೆಂಡಿ ಮೇಘಂ ಎಂಬ ಕಾದಂಬರಿ ಉಸ್ಮಾನಿಯ ವಿಶ್ವವಿದ್ಯಾಲಯ, ಪಾಲಮೂರು ವಿಶ್ವವಿದ್ಯಾಲಯ ಮತ್ತು ಮಹಾತ್ಮಗಾಂಧಿ ವಿಶ್ವವಿದ್ಯಾಲಯಗಳಲ್ಲಿ ತೆಲುಗು ಎಂ.ಎ. ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರು ರಚಿಸಿರುವ ತಲಾಕ್, ಲಾಕುಲು ಮತ್ತು ನೂಕುಲು ಎಂಬ ಸಣ್ಣ ಕಥೆಗಳು ರಾಯಲಸೀಮ ವಿಶ್ವವಿದ್ಯಾಲಯದಲ್ಲಿ ಪಠ್ಯಂಶವಾಗಿವೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಇವರ ಸಾಹಿತ್ಯದ ಮೇಲೆ ಮೂವರು ವಿದ್ಯಾರ್ಥಿಗಳು ಪಿಹೆಚ್.ಡಿ ಮತ್ತು ಒಂಬತ್ತು ಮಂದಿ ವಿದ್ಯಾರ್ಥಿಗಳು ಎಂ.ಫಿಲ್ ಮಾಡಿದ್ದಾರೆ. ಇವರು ರಚಿಸಿರುವ ಕಾಲುತುನ್ನ ಪೂಲ ತೋಟ ಕಾದಂಬರಿಗೆ 2010ನೇ ಇಸವಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಸಿರುವ WORLDS BEST STORIES (ಭಾಗ-2) ಎಂಬ ಕಥಾ ಸಂಪುಟದಲ್ಲಿ ಇವರು ರಚಿಸಿರುವ ಆರೋ ಅಲ್ಲುಡು ಎಂಬ ಸಣ್ಣ ಕಥೆಯೂ ಕೂಡ ಒಂದಾಗಿರುವುದು ಹೆಗ್ಗಳಿಕೆಯಾಗಿದೆ.