ನನ್ನ ಕೈಯಲ್ಲಿ
ನವಿಲಿನ ಮರಿ ಅಂದರೆ
ಯಾರೂ ನಂಬುವುದಿಲ್ಲ,
ಈ ಕವಿಗಳೇ ಹೀಗೆ
ಸುಳ್ಳೇ ಪಳ್ಳೇ ನಂಬುತ್ತಾರೆ
ಬರೆದು ನಂಬಿಸುತ್ತಾರೆ
ಕಲ್ಪನೆಯಲ್ಲಿ ಬದುಕು ನಡೆಯುವುದಿಲ್ಲ
ಹೊಟ್ಟೆ ತುಂಬುವುದಿಲ್ಲ
ಜನ ಬೈಯ್ಯುತ್ತಾರೆ
ಹಾಕಿ ಉಗಿಯುತ್ತಾರೆ.
ನನ್ನ ಕೈ ನನಗೆ ಸುಳ್ಳು ಹೇಳಿತಾ?
ನವಿಲ ಗರಿಯ ತೆಳು ತೆಳು ಎಸಳು ಉದ್ದ ಕೊಕ್ಕು
ಮಿದು ಚರ್ಮದ ರೋಮ ಕ್ಯಾವ್ ಕ್ಯಾವ್ ಕೂಗು
ಧ್ವನಿ ಅನುಭೂತಿ ಬೆರಳಿಗಂಟಿದ ಬಣ್ಣ.
ಇದು ಏನು ಗೊತ್ತಾ? ಪತ್ರಿಕೆಯ ಶೀರ್ಷಿಕೆಯಂತೆ
ಪಕ್ಕದವನು ಪ್ರಶ್ನಿಸಿದಾಗ
ಬಾತಿನ ಮರಿ ಎಂದು ಪೆಕರನಂತೆ
ಗೊತ್ತಿರುವ ತಪ್ಪು ಉತ್ತರ ಹೇಳಿ ನಕ್ಕಿದ್ದೆ.
ನನ್ನ ಗಡಸು ಚರ್ಮಕ್ಕೆ ಹಕ್ಕಿಯ ಸೊಂಪು ತಾಕಿದಾಗಿಂದ
ಕೈತಳದ ಮೇಲೆ ಅಗಲ ಪಾದ ಊರಿದಾಗಿಂದ.
ನನ್ನ ಈ ಕ್ಷಣ
ನವಿಲು
ಕವಿತೆ.
*********
ಬೇಸಿಗೆಯ ಕವಿತೆ
ಹೊಳೆಯಲ್ಲಿ
ಹರಿವ ನೀರು ಈಜುವ ಮೀನ
ಮಕ್ಕಳು
ಹಾರುವ ಹಕ್ಕಿ ಬೆಳೆಯುವ ಗಿಡ
ಅಟ್ಟದ ಬಿಸಿಲಲ್ಲಿ ಒಣಗುವ ಹಪ್ಪಳ
ಕೊಲ್ಲಾಪುರ ಚಾದರ
ಮರ ಹತ್ತಿ ಕೊಯ್ದ
ಹಿಂಡಿಗೆ ಶೀಯಾಳ
ದಿನಕ್ಕೆರಡು ಸಲ ಸ್ನಾನ
ಒದ್ದೆ ಪಂಜಿಯ ಜಪ
ಎಷ್ಟೆಲ್ಲ ಶೆಕೆ!
ಸ್ವಲ್ಪ ತಾಳಿ, ಎರಡು ಸಮಯ
ಚಿಟ್ಟೆಯ ಮೇಲೆ ಕೂರಿ
ಕುಡಿಯಲು ಮಜ್ಜಿಗೆ ತರುತ್ತೇನೆ
ಗುರುಗಣೇಶ್ ಉತ್ತರ ಕನ್ನಡದ ಯಲ್ಲಾಪುರದವರು. ಪತ್ರಿಕೋದ್ಯಮ, ಸಾಹಿತ್ಯ, ಪರಿಸರ ಮತ್ತು ಕೃಷಿಯ ವಿದ್ಯಾರ್ಥಿ. ಊರೂರು ಅಲೆದಾಟ ಖುಷಿಯ ಕೆಲಸ. ಓದು, ಬರಹ ಇವರ ಹವ್ಯಾಸಗಳು.
KachagULi iduva kavithegaLu. Very nice. Keep writing