Advertisement
ಗೃಹ ತಪಸ್ವಿನಿಯ ಮೌನದ ಮಾತು: “ಊರ್ಮಿಳಾ” ಕಾದಂಬರಿಯ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರಹ

ಗೃಹ ತಪಸ್ವಿನಿಯ ಮೌನದ ಮಾತು: “ಊರ್ಮಿಳಾ” ಕಾದಂಬರಿಯ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರಹ

ನಿದ್ರೆಯನ್ನು ಯಾರಾದರು ಸ್ವಿಕರಿಸಿದರೆ ಮಾತ್ರ ನಾನು ಒಪ್ಪುವೆ ಎಂದಾಗ ಲಕ್ಷ್ಮಣ ನನ್ನ ನೆನಪಲ್ಲೆ ವಿರಹದಲ್ಲಿರುವೆ ಪತ್ನಿ ಊರ್ಮಿಳೆಗೆ ನನ್ನ ಪರವಾದ ನಿದ್ರೆ ಕರುಣಿಸು. ವನವಾಸದ ಅವಧಿ ಮುಗಿಯುವರೆಗೂ ಎಂದಾಗ ನಿದ್ರಾ ದೇವತೆ ಹಾಗೆ ಆಗಲಿ ತಥಾಸ್ತು ಎಂದು ಊರ್ಮಿಳೆ ಬಳಿ ಬಂದ ದೇವಿ ಊರ್ಮಿಳೆ ನಿನ್ನ ಪತಿ ನಿನಗೆ ಅವನ ಪರವಾದ ನಿದ್ರೆಯನ್ನು ಸ್ವಿಕರಿಸಲು ಹೇಳಿರುವನು. ಸ್ವಿಕರಿಸುವ ಇಚ್ಛೆ ಇದೆಯಾ ಮಹಾರಾಣಿ ಎಂದಾಗ ತನ್ನ ಪತಿಯು ನೀಡಿದನ್ನೂ ಬೇಡ ಎನ್ನಲಾಗದು; ಆಯಿತು, ಅವರಿಚ್ಚೆಯಂತೆ ನಾನು ಅವರ ನಿದಿರೆಯನ್ನು ಸ್ವಿಕರಿಸುತ್ತೇನೆ ಎನ್ನುತ್ತಾಳೆ.
ವಿಜಯಾ ವಿಷ್ಣುಭಟ್ ಬರೆದ “ಊರ್ಮಿಳಾ” ಕಾದಂಬರಿಯ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ್ ಬರಹ

ಕನ್ನಡದ ಹಿರಿಯ ಮತ್ತು ಕ್ರಿಯಾಶೀಲ ಲೇಖಕಿಯಾದ ವಿಜಯಾ ಭಟ್ ಅವರು ರಚಿಸಿದ “ಊರ್ಮಿಳೆ” ಕಾದಂಬರಿ ಆಧುನಿಕೋತ್ತರ ಕಾಲಘಟ್ಟದಲ್ಲಿ ಮಹತ್ವದ ವೈಚಾರಿಕ ಕಥನವಾಗಿದೆ. ರಾಮಾಯಣದಲ್ಲಿ ಬರುವ ಅನೇಕ ಪಾತ್ರಗಳು ತಮ್ಮ ವ್ಯಕ್ತಿ ವಿಶೇಷಗಳಿಂದ ಇಂದಿಗೂ ಜನ ಮಾನಸದಲ್ಲಿ ಚಿರಸ್ಥಾಯಿಯಾಗಿ ಗೌರವಕ್ಕೆ ಪಾತ್ರವಾಗಿವೆ. ರಾಮಾಯಣದಲ್ಲಿ ಬರುವ ಊರ್ಮಿಳೆಯ ಕಥನ ಅತ್ಯಂತ ಮಹತ್ವದ್ದು, ಆದರೆ ಸಂಪೂರ್ಣವಾಗಿ ರಾಮಾಯಣ ಕಥನದಲ್ಲಿ ಇದ್ದು ಇಲ್ಲದಂತೆ ಬದುಕಿದ ಮಹಾತ್ಯಾಗಿ ಊರ್ಮಿಳೆ ಇಂದಿಗೂ ಮೌನ ತಪಸ್ವಿನಿ ಎಂದು ಗೌರವಕ್ಕೆ ಪಾತ್ರಳಾಗಿದ್ದಾಳೆ.

ಊರ್ಮಿಳೆಯದು ಆಕ್ಷೇಪಗಳನ್ನು ಹೇರಲಾರದ ವ್ಯಕ್ತಿತ್ವ. ಇಂದಿಗೂ ರಾಮಾಯಣದ ಕೆನೆ ಪದರಿನ ಸ್ತ್ರೀ ಪಾತ್ರಗಳ ಕುರಿತಾಗಿ ಹಲವಾರು ಕಥನಗಳು ಬಂದಿವೆ. ಸರಳತೆ, ಸೌಜನ್ಯ, ಗುರು ಹಿರಿಯರಲ್ಲಿ ವಿನಯ ವಿಧೇಯತೆ ಗುಣಗಳಿಂದ ಬದುಕಿದವರು ರಾಮಾಯಣದಲ್ಲಿದ್ದಾರೆ. ಆದರೆ ಯಾವುದೇ ಊಹಾತ್ಮಕ ಚರ್ಚೆಗಳಿಗೆ ಆಸ್ಪದ ಕೊಡದಂತೆ ಬದುಕಿದವಳು ಊರ್ಮಿಳೆ. ಜನಕ ನಂದಿನಿಯರಾದರೂ ಸವಾಲುಗಳನ್ನು ಸ್ವೀಕರಿಸುವ ಅವಳ ಮನಸ್ಥಿತಿಗೆ ಅವಳೇ ಸಾಟಿ. ಲಕ್ಷ್ಮಣ ಹೊರಟದ್ದು ಕಾಡಿನ ವನವಾಸಕ್ಕೆ ಆದರೆ ಊರ್ಮಿಳೆಯದು ಮನೆವಾಸ. ಇವೆರಡು ಒಂದರ್ಥದಲ್ಲಿ ವ್ರತಾಚರಣೆಗಳೆ ಆಗಿರುವುದನ್ನು ಕಾಣಬಹುದಾಗಿದೆ.

(ವಿಜಯಾ ವಿಷ್ಣುಭಟ್)

ರಾಮಾಯಣ-ಮಹಾಭಾರತ ಮಹಾಕಾವ್ಯಗಳು, ಅವುಗಳಲ್ಲಿ ನಿರೂಪಿತವಾದ ಕತೆ, ಉಪಕತೆಗಳು ಭಾರತೀಯ ಜೀವನ ಪರಂಪರೆಯಲ್ಲಿ ಹಾಸು ಹೊಕ್ಕಾಗಿ ನಿಂತಿವೆ. ಚಿರನೂತನ ಈ ಮಹಾಕಾವ್ಯಗಳ ಪ್ರಭಾವ ಸುತ್ತ-ಮುತ್ತಲಿನ ಶ್ರೀಲಂಕಾ, ಮಲೇಷಿಯಾ, ಇಂಡೋನೇಷಿಯಾ, ಟಿಬೇಟ್ ಬ್ರಹ್ಮದೇಶ (ಬರ್ಮಾ), ನೇಪಾಳ, ಚೀನಾ ಅಪಘಾನಿಸ್ತಾನಗಳಂಥ ಹಲವಾರು ರಾಷ್ಟ್ರಗಳಲ್ಲಿ ಈ ಮಹಾಕಾವ್ಯದ ಕತೆಗಳು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಆಯಾ ರಾಷ್ಟ್ರಗಳ ಜನಮನದಲ್ಲಿ ಹಾಸು ಹೊಕ್ಕಾಗಿವೆ. ನಿತ್ಯ ನೂತನ ಕಥೆಗಳಾಗಿವೆ.

ಜಗತ್ತಿನಾದ್ಯಂತ ಲಕ್ಷಾಂತರ ಹಾಗೂ ನಮ್ಮ ದೇಶದಲ್ಲಿಯೂ ನೂರಾರು ರಾಮಾಯಣಗಳಿವೆ. ಬುಡಕಟ್ಟುಗಳು, ಆದಿವಾಸಿಗಳು, ಗ್ರಾಮಿಣರು, ಜನಪದರು, ಹಾಗೂ ವಿಶೇಷವಾಗಿ ಮಹಿಳೆಯರೇ ತಮ್ಮ ಅನುಭವದಲ್ಲಿ ಮೂಡಿಬಂದ ರಾಮಾಯಣವನ್ನು ಚಿತ್ರಿಸಿದ್ದಾರೆ. ರಾಮಾಯಣದಲ್ಲಿ ಬರುವ ಅನೇಕ ಉಪಕಥೆಗಳನ್ನು ತಮ್ಮ ಜೀವನಕ್ಕೆ ಹೊಂದಿಸಿಕೊಂಡು ಬದುಕುತ್ತಾ ಬಂದಿದ್ದಾರೆ.

ಕಾಶ್ಮೀರಿ, ಗುಜರಾತಿ, ಪಂಜಾಬಿ ಹೀಗೆ ದೇಶದಲ್ಲಿ ಎಷ್ಟು ಪುರಾಣಗಳಿವೆಯೋ ಅಷ್ಟೇ ವೈವಿದ್ಯಮಯ ಕಥನಗಳಿವೆ. ಹಾಗೆಯೇ ತಮ್ಮ-ಕಾಲ-ಸಂಸ್ಕೃತಿ-ಆಚಾರ ವಿಚಾರಗಳಿಗೆ ಹೊಂದಿಸಿಕೊಂಡು ಕಥೆಯಾದ ವೈವಿದ್ಯಮಯ ಪುರಾಣಗಳಿವೆ. ಇಂದಿಗೂ ಸಮಗ್ರ ರಾಮಾಯಣದ ಕಥನಗಳ ಜೊತೆಗೆ, ರಾಮಾಯಣದ ಪ್ರಮುಖ ಪಾತ್ರಗಳು ಹಾಗೂ ಅಲಕ್ಷಿತ ಪಾತ್ರಗಳನ್ನು ಮುಖ್ಯ ಭೂಮಿಕೆಯ ಪಾತ್ರಗಳಾಗಿ ವಿಭಿನ್ನ ಮತ್ತು ವೈಚಾರಿಕ ದೃಷ್ಟಿಕೋನದಲ್ಲಿ ಚಿತ್ರಿಸುತ್ತಿರುವುದಕ್ಕೆ ಪ್ರಸ್ತುತ ಈ ಕೃತಿ ಸಾಕ್ಷಿಯಾಗಿದೆ. ಆಯಾ ಕಾಲದೊಂದಿಗೆ ಮುಖಾಮುಖಿಯಾಗುವ ರಾಮಾಯಣದ ಪಾತ್ರಗಳು ಮತ್ತು ಕಥೆಗಳು ಇಂದಿಗೂ ಬಹು ಚರ್ಚಿತ ನೆಲೆಯಲ್ಲಿ ಅಭಿವ್ಯಕ್ತಿಯಾಗುತ್ತಲಿವೆ…

ಜನಮಾನಸದಲ್ಲಿ ಮರೆತುಹೋಗದ ಪಾತ್ರ ಊರ್ಮಿಳೆ ರಾಮಾಯಣ ಎಂದರೆ ತಟ್ಟನೆ ನೆನಪಾಗೊ ಪಾತ್ರಗಳು ರಾಮ ಸೀತೆ ದಶರಥ ರಾವಣ ಲಕ್ಷ್ಮಣ ಹಣಮಂತ ಇತ್ಯಾದಿಯಷ್ಟೆ. ಆದರೆ ಇವೆಲ್ಲದರ ನಡುವೆ ಇನ್ನೊಂದು ಮುಖ್ಯಪಾತ್ರವಿದೆ; ಅದು ಲಕ್ಷ್ಮಣನ ಹೆಂಡತಿ ಊರ್ಮಿಳೆ. ರಾಮ ಸೀತೆ ಲಕ್ಷ್ಮಣರು ವನವಾಸಕ್ಕೆ ತೆರಳಿದರೆ ಊರ್ಮಿಳೆ ಅರಮನೆಯಲ್ಲಿಯೆ ವನವಾಸ ಅನುಭವಿಸಿದಳು. ಎಲ್ಲ ರಾಜಕುವರಿಯರಂತೆ ನಕ್ಕು ನಲಿದು ಅಷ್ಟೈಶ್ವರ್ಯ ಹೊಂದಿದರೂ ಊರ್ಮಿಳೆಯ ಸುಖ ಶಾಂತಿ ಶೂನ್ಯವೆ ಆಯಿತು. ವಾಲ್ಮೀಕಿ ರಾಮಾಯಣದಲ್ಲಿ ಕವಿ ಕಡೆಗಣಿಸಲ್ಪಟ್ಟ ಪಾತ್ರಗಳಲ್ಲಿ ಊರ್ಮಿಳೆಯ ಪಾತ್ರವೂ ಒಂದು. ರಾಮ, ಲಕ್ಷ್ಮಣ, ಸೀತೆ, ಹದಿನಾಲ್ಕು ವರ್ಷಗಳ ಕಾಲ ವನವಾಸ ಮಾಡಿದರೆ ಊರ್ಮಿಳೆ ಅರಮನೆಯಲ್ಲೇ ತನ್ನ ಅಂತರಂಗದಲ್ಲೇ ವನವಾಸ ಮಾಡುತ್ತಾಳೆ. ಬರೀ ವನವಾಸವಲ್ಲ, ಅದೊಂದು ತಪಸ್ಸು, ಅವಳು ಯಾವ ತಪಸ್ವಿಗೂ ಕಡಿಮೆ ಇಲ್ಲ.

ಜನಪದ ರಾಮಾಯಣದಲ್ಲಿ ಊರ್ಮಿಳೆಯ ಪಾತ್ರ ಮಹಾನ್ ಸತಿಯರ ಸಾಲಿನಲ್ಲಿದೆ. ಲಕ್ಷ್ಮಣ ಕಾಡಿಗೆ ಹೊರಟದಿನದಂದು ಆಘಾತಗೊಂಡ ಈಕೆ ಗಂಡ ಮರಳುವವರೆಗೂ ಅಲಂಕಾರವಿಲ್ಲದೆ ಆಹಾರವಿಲ್ಲದೆ ಜೀವ ಕಳೆ ಕಳೆದುಕೊಂಡು ಬದುಕುತ್ತಾಳೆ. ಜನಪದ ರಾಮಾಯಣದ ಊರ್ಮಿಳೆಯ ಪಾತ್ರ ಚಿತ್ರಣ ತುಂಬಾ ಮನಂಬುಗುವಂತಿದೆ. ಊರ್ಮಿಳೆ ಒಲೆಯ ಮೇಲೆ ಅನ್ನಕ್ಕೆ ಇಟ್ಟುಕೊಂಡು ಲಕ್ಷ್ಮಣನ ಬರುವಿಕೆಗಾಗಿ ಕಾಯುತ್ತಿರುತ್ತಾಳೆ. ಅವಳ ಅಂತಃಪುರದ ಹೊಸ್ತಿಲಲ್ಲೆ 14 ವರ್ಷ ಕಾಯುತ್ತಾಳೆ. ಒಲೆಯ ಮೇಲಿನ ಅನ್ನ ಹಾಗೆಯೇ ಬೇಯುತ್ತಿದೆ. ಒಲೆಯ ಉರಿ ಮತ್ತು ಕೆಂಡ ಕೂಡಾ ಹಾಗೆಯೇ ಇರುತ್ತದೆ. ರಾಮ ರಾವಣರ ಯುದ್ಧ ನಂತರ ರಾಮ ಮರಳಿ ಅಯೋಧ್ಯೆಗೆ ಬರುವ ಸುದ್ದಿ ಊರ್ಮಿಳೆಗೆ ಜೀವ ಬಂದಂತಾಗುತ್ತದೆ. ಅತ್ತೆ ಸುಮಿತ್ರಾ ಹಾಗೂ ಇತರ ಸಹೋದರಿಯರು ಸಖಿಯರು ಮಂಗಳ ಸ್ನಾನ ಮಾಡಿ ದುಕುಲ ಉಡಲು ಹೇಳುತ್ತಾರೆ. ಆದರೆ ಅವಳು ಮಾತ್ರ ಯಾವುದೇ ಅಲಂಕಾರ ರೇಷ್ಮೆ ಬಟ್ಟೆಯನ್ನು ಧರಿಸಧಿರಲು ನಿರ್ಧರಿಸುತ್ತಾಳೆ. ಕಾರಣ ತನ್ನ ಪತಿ ಜೊತೆಯಲ್ಲಿ ಇಲ್ಲದಿರುವಾಗ ಇಷ್ಟು ದಿನ ತಾನು ಯಾವ ಅಲಂಕಾರ ಯಾವ ಸಂತೋಷದಲ್ಲಿ ಭಾಗಿಯಾದವಳಲ್ಲ. ಅವನು ಹೋದ ದಿನ ತಾನು ಹೇಗಿದ್ದಳೊ ಅವನು ಬಂದ ದಿನವು ತಾನು ಹಾಗೆಯೇ ಇರಬೇಕು. ಇದು ಅವಳ ಒಳ ಮನಸ್ಥಿತಿ ಮೂಲಕ ಸೂಕ್ಷ್ಮವಾಗಿ ನೋವಿನ ಹತ್ತಿಕ್ಕಲಾರದ ಬಂಡಾಯದ ದನಿಯಾಗಿ ಕಂಡು ಬರುತ್ತದೆ. ಅವನಿಗೂ ಅನಿಸಬೇಕು. ನಾನು ಕೈ ಹಿಡಿದ ಸತಿಯನ್ನು ಲೆಕ್ಕಿಸದೆ ರಾಮನೊಂದಿಗೆ ಹೊರಟೆ; ಆದರೆ ಸತಿಯ ಮನೋಗಥ ಅರಿಯದೆ ತಾನು ಮಾಡಿದ್ದು ಎಷ್ಟು ಸರಿ ಎಂಬ ಆತ್ಮ ನಿರೀಕ್ಷೆ ಅವನಲ್ಲಿ ಮೂಡಬೇಕೆಂಬ ಹಠದಿಂದ ಊರ್ಮಿಳೆ ಮುಖದಲ್ಲಿ ಮಾತ್ರ ಮಂದಹಾಸ ನಗೆ ಹೊತ್ತು ಅಯೋಧ್ಯೆಯ ಅರಮನೆಯಲ್ಲಿ ಬಾಗಿಲಲ್ಲಿ ಕಾಯುತ್ತ ನಿಲ್ಲುತ್ತಾಳೆ. ಹೀಗೆ ಮೌಖಿಕ ಅಥವಾ ತೋಂಡಿ ಸಂಪ್ರದಾಯದ ರಾಮಾಯಣದ ಜನ ಕಥನಗಳು ಕುತೂಹಲಕಾರಿಯಾಗಿವೆ.

ಕನ್ನಡ ಸಾಹಿತ್ಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಗಾತ್ಮಕ ರಚನೆಗಳು ಕಾಣಸಿಗುತ್ತಿವೆ. ಜನಪದ ರಾಮಾಯಣದಲ್ಲಿ ಊರ್ಮಿಳೆ ಕುರಿತಾಗಿ ಮಹತ್ವದ ಕಥೆಗಳಿವೆ. ಊರ್ಮಿಳೆ ಅನ್ನಕ್ಕೆ ಅಕ್ಕಿ ಇಟ್ಟು ಗಂಡನಿಗಾಗಿ ಕಾಯುತ್ತಿರುತ್ತಾಳೆ. ಆದರೆ ಲಕ್ಷ್ಮಣ ಈಕೆಗೆ ಹೇಳದೆ ಕೇಳದೆ ರಾಮನೊಂದಿಗೆ ವನವಾಸಕ್ಕಾಗಿ ಕಾಡಿಗೆ ಹೊರಡುತ್ತಾನೆ. ವಿಷಯ ತಿಳಿದ ಊರ್ಮಿಳೆ ಆಘಾತಕ್ಕೆ ಒಳಗಾಗುತ್ತಾಳೆ. ಲಕ್ಷ್ಮಣ 14 ವರ್ಷ ವನವಾಸ ಮುಗಿಸಿ ಬರುವವರೆಗೂ ಊರ್ಮಿಳೆ ಒಲೆಯ ಮೇಲಿಟ್ಟ ಅಕ್ಕಿ ಕುದಿಯುತ್ತಲೇ ಇತ್ತು ಎಂಬುದು ಜನಪದ ರಾಮಾಯಣದ ವಿಶೇಷ ಘಟನೆಯಾಗಿದೆ.

ರಾವಣ ಸಂಹಾರದ ನಂತರ ವನವಾಸದ ಅವಧಿ ಮುಗಿದು ರಾಮ ಲಕ್ಷ್ಮಣ ಸೀತೆಯರು ಅಯೋಧ್ಯೆಗೆ ಮರಳಿ ಬರುವ ದಿನ ಅಕ್ಕಿ ಬೆಂದು ಅನ್ನವಾಗಿತ್ತಂತೆ. ಅಂದರೆ ಅಕ್ಕಿಯ ಕುದಿಯುವಿಕೆ ಊರ್ಮಿಳೆಯ ಅಂತರಂಗದ ಬೇಗುದಿಯನ್ನು ಪ್ರತಿನಿಧಿಸುವ ಪ್ರತಿಮಾತ್ಮಕತೆಯಾಗಿ ಇಲ್ಲಿ ಕಾಣಬಹುದಾಗಿದೆ. ಕುದಿಯುವ ಅಕ್ಕಿಯಂತೆ ಅವಳ ಮನಸ್ಸಿನ ತಳಮಳ, ಬದುಕು ಬೆಂದು ಅಡುಗೆಯಾಗಬೇಕಾದರೆ ಕುದಿಯುತ್ತಲೇ ಇರಬೇಕು ಎಂಬ ಹಿರಿಯರ ಸಹಜ ಮಾತು ಊರ್ಮಿಳೆಯ ಬದುಕಿಗೆ ಹಿಡಿದ ಕನ್ನಡಿಯಾಗಿದೆ. ಅಕ್ಕಿಯೊಂದಿಗೆ ಬದುಕು ಮತ್ತು ಅರಿವು ಬೇಯಬೇಕು ಎಂಬುದಕ್ಕೆ ಊರ್ಮಿಳೆಯ ಪಾತ್ರ ಜೀವಂತ ಸಾಕ್ಷಿಯಾಗಿದೆ.

ಇದರೊಂದಿಗೆ ಇನ್ನೊಂದು ಮಹತ್ತರವಾದ ಜನಪದ ಕಥೆಯಿದೆ. ಶೃಂಗಾರಗೊಂಡ ಊರ್ಮಿಳೆ ಮುಂಬಾಗಿಲಲ್ಲಿ ಗಂಡನಿಗಾಗಿ ಕಾಯುತ್ತಿರುತ್ತಾಳೆ. ಆತ ಕಾಡಿಗೆ ಹೊರಟ ಸುದ್ದಿ ಕೇಳಿ ದಿಗ್ಭ್ರಾಂತಳಾಗಿ ಹಾಗೆಯೇ 14 ವರ್ಷ ನಿಲ್ಲುತ್ತಾಳೆ. ಮರಳಿ ಗಂಡ ಲಕ್ಷ್ಮಣ ಬರುವ ಸುದ್ದಿಯನ್ನು ಅತ್ತೆ ಸುಮಿತ್ರೆ ಹೇಳಿದಾಗ ಊರ್ಮಿಳೆಯ ಮುಖದಲ್ಲಿ ಯಾವುದೇ ಭಾವ ಬದಲಾಗುವುದಿಲ್ಲ. ಸುಮಿತ್ರೆ ಒತ್ತಾಯಪೂರ್ವಕವಾಗಿ ಊರ್ಮಿಳೆಗೆ ಹೇಳುತ್ತಾಳೆ. ಮಗಳೆ ನೀನು ಹೋಗಿ ಸ್ನಾನ ಮಾಡಿ ಹೊಸ ದುಕುಲ ತೊಡು ಅಂದಾಗ ಊರ್ಮಿಳೆ ಹೇಳುತ್ತಾಳೆ. 14 ವರ್ಷದಿಂದಲೂ ನಾನು ಅಲಂಕಾರಗೊಂಡಿಲ್ಲ; ಪನ್ನಿರ ಸ್ನಾನವಿಲ್ಲ. ಈಗ ನಾನು ಸರ್ವಾಲಂಕಾರಗೊಂಡರೆ ಲಕ್ಷ್ಮಣನಿಗೆ ಹೇಗೆ ಗೊತ್ತಾಗಬೇಕು? ನಾನು ಅವನಂತೆ ಗೃಹ ತಪಸ್ಸಿನಿಯಾಗಿ ಬದುಕಿದ್ದೆ ಅನ್ನೋದು. ಅರಮನೆಯಲ್ಲಿ ಉಂಡು, ಉಟ್ಟು, ತಿಂದು, ತಿರುಗಿ ಆರಾಮಾಗಿ ನಾನು ಬದುಕಿದ್ದೇನೆ ಎಂದು ಲಕ್ಷ್ಮಣ ತಿಳಿದರೆ ನನ್ನ ನೋವು, ಸಂಕಟ, ಸಾತ್ವಿಕ ಸಿಟ್ಟು, ನನ್ನ ಮೌನ, ನಾನು ಕಳೆದುಕೊಂಡ ಯೌವನ, ಅಂತರಂಗದ ಪ್ರತಿಭಟನೆ, ಹತ್ತಿಕ್ಕಲಾರದ ಈ ಬಂಡಾಯದ ಧ್ವನಿ ಅವನ ಅರಿವಿಗೆ ಹೇಗೆ ಬಂದೀತು ಎಂದು ತನ್ನ ನೋವನ್ನು ಹೊರ ಹಾಕುತ್ತಾಳೆ.

ಇನ್ನೊಂದು ಜನಜನಿತ ಕಥನದ ಭಾಗವನ್ನು ಗಮನಿಸಿದಾಗ ರಾಮಸೀತೆಯ ರಕ್ಷಣೆಗೆ ನಿಂತ ಲಕ್ಷ್ಮಣ ಆಯಾಸದಿಂದ ನಿದ್ರೆ ಬರಲು ಎಲ್ಲಿ ತನ್ನ ಪರಿಪಾಲನೆಯಿಂದ ಅನಾಹುತವಾಗುತ್ತೊ ಎಂದು ನಿದ್ರಾದೇವಿಯನ್ನು ಸ್ಮರಿಸಿದಾಗ ನಿದ್ರಾದೇವಿ ಪ್ರತ್ಯಕ್ಷಗೊಂಡಾಗ, “ಅಮ್ಮಾ ನನಗೆ ನಿದ್ರೆಯನ್ನು ಕರುಣಿಸದಿರು. ವನವಾಸದ ಎಲ್ಲ ಅವಧಿ ನಾನು ಪ್ರಭು ರಾಮ ಸೀತೆಯ ರಕ್ಷಕನಾಗಿ ಜಾಗೃತನಾಗಿರಬೇಕು. ಹೀಗಾಗಿ ವರ ನೀಡು” ಎಂದಾಗ ನಿದ್ರಾದೇವಿ ನಗುತ್ತ ನನಗಿದು ಸಾಧ್ಯವಿಲ್ಲ ಆಯಾಸಗೊಂಡ ದೇಹ ನಿದ್ರಿಸಲೇಬೇಕು ಅದು ನಿಯಮ ಎಂದಾಗ ಇದಕ್ಕೆ ಪರಿಹಾರವೇನು ದಯವಿಟ್ಟು ತಿಳಿಸು ಎನ್ನುತ್ತಾನೆ. ನಿನ್ನ ನಿದ್ರೆಯನ್ನು ಯಾರಾದರು ಸ್ವಿಕರಿಸಿದರೆ ಮಾತ್ರ ನಾನು ಒಪ್ಪುವೆ ಎಂದಾಗ ಲಕ್ಷ್ಮಣ ನನ್ನ ನೆನಪಲ್ಲೆ ವಿರಹದಲ್ಲಿರುವೆ ಪತ್ನಿ ಊರ್ಮಿಳೆಗೆ ನನ್ನ ಪರವಾದ ನಿದ್ರೆ ಕರುಣಿಸು. ವನವಾಸದ ಅವಧಿ ಮುಗಿಯುವರೆಗೂ ಎಂದಾಗ ನಿದ್ರಾ ದೇವತೆ ಹಾಗೆ ಆಗಲಿ ತಥಾಸ್ತು ಎಂದು ಊರ್ಮಿಳೆ ಬಳಿ ಬಂದ ದೇವಿ ಊರ್ಮಿಳೆ ನಿನ್ನ ಪತಿ ನಿನಗೆ ಅವನ ಪರವಾದ ನಿದ್ರೆಯನ್ನು ಸ್ವಿಕರಿಸಲು ಹೇಳಿರುವನು. ಸ್ವಿಕರಿಸುವ ಇಚ್ಛೆ ಇದೆಯಾ ಮಹಾರಾಣಿ ಎಂದಾಗ ತನ್ನ ಪತಿಯು ನೀಡಿದನ್ನೂ ಬೇಡ ಎನ್ನಲಾಗದು; ಆಯಿತು, ಅವರಿಚ್ಚೆಯಂತೆ ನಾನು ಅವರ ನಿದಿರೆಯನ್ನು ಸ್ವಿಕರಿಸುತ್ತೇನೆ ಎನ್ನುತ್ತಾಳೆ. ಇಲ್ಲಿ ಗಮನಿಸ ಬೇಕಾದ ಮುಖ್ಯ ಅಂಶವೆಂದರೆ ಲಕ್ಷ್ಮಣ ಯಾವುದೇ ನಿರ್ಧಾರ ತೆಗೆದು ಕೊಳ್ಳುವ ಸಂದರ್ಭದಲ್ಲಿಯೂ ಎಂದೂ ಹೆಂಡತಿ ಊರ್ಮಿಳೆಯ ಸಮ್ಮತಿಯನ್ನಾಗಲಿ ಹಾಗೂ ಅನುಮತಿಯನ್ನಾಗಲಿ ತೆಗೆದುಕೊಳ್ಳದೆ ಏಕಮುಖಿಯಾಗಿಯೇ ಎಲ್ಲ ಸೂಕ್ಷ್ಮ ವಿಚಾರಗಳನ್ನು ನಿರ್ಧರಿಸುತ್ತಾನೆ. ಅದರೆ ಊರ್ಮಿಳೆ ಮಾತ್ರ ತನ್ನಂತರಂಗದ ಕೆಂಡವನ್ನು ಉಡಿಯಲ್ಲಿ ಕಟ್ಟಿಕೊಂಡು ಬದುಕನನ್ನೆ ತ್ಯಾಗ ಮಾಡಿದ ಹೆಣ್ಣಾಗಿ ನೋವು ನುಂಗಿದಷ್ಟು ಅದು ನಂಜಾದರೂ ಬದುಕನ್ನು ಸಾರ್ಥಕ ಪಡಿಸಿಕೊಂಡ ಹೆಣ್ಣು ಊರ್ಮಿಳೆ. ವರ ಪಡೆದ ನಂತರ ದಿನದ ಹೆಚ್ಚಿನ ಸಮಯ ಊರ್ಮಿಳೆ ನಿದ್ರೆಯಲ್ಲಿಯೆ ಕಳೆಯುತ್ತಾಳೆ. ನೂರಾರು ಕನಸು ಹೊತ್ತು ಬಂದ ಯೌವನಾವಸ್ಥೆಯ ವಸಂತದಲ್ಲಿ ಹೂವಾಗಿರುವ ಹೆಣ್ಣುಮನದ ಈ ಊರ್ಮಿಳೆ ವಿರಹ, ನಿದ್ರೆ, ಅರಮನೆಯ ಹಿರಿಯರ ಸೇವೆ ಪತಿಯ ನೆನಪಿನೊಂದಿಗೆ ಬದುಕನ್ನೇ ವರವಾದಂತೆ ಸ್ವೀಕರಿಸುವ ಮೂಲಕ ಮೌನತಪಸ್ವಿನಿಯಾಗಿ ಬದಕುತ್ತಾಳೆ.

ಪ್ರಸ್ತುತ ಈ ಕೃತಿಯಲ್ಲಿ ಸಂಕೀರ್ಣವಾದ ಕಥನ ಶೈಲಿಗಳು, ಹೊಸ ವಸ್ತುಗಳ ಆಯ್ಕೆ, ಮುನ್ನೆಲೆಗೆ ಬರುತ್ತಿರುವ ಸ್ತ್ರೀವಾದಿ ಸಿದ್ಧಾಂತದ ಬದಲಾವಣೆ ದನಿಗಳು, ಲೇಖಕಿಯರ ಮುಕ್ತ ಅಭಿವ್ಯಕ್ತಿ, ಅಪರೂಪದ ಅಭಿವ್ಯಕ್ತಿ , ಅಸೀಮ ಅಸ್ಮಿತೆ, ಎಲ್ಲವೂ ಸೇರಿ ಸಮಕಾಲೀನ ಕನ್ನಡ ಸಾಹಿತ್ಯದ ಇಂದಿನ ಸ್ವರೂಪವನ್ನೇ ಬದಲಿಸುತ್ತಿವೆ. ಈ ನಿಟ್ಟಿನಲ್ಲಿ ವಿಜಯಾ ಅವರ ಊರ್ಮಿಳೆ ಹೊಸ ಬಗೆಯ ಕಣ್ಣೋಟ ಒಂದನ್ನು ಕೃತಿ ಮೂಲಕ ಒದಗಿಸುವಲ್ಲಿ ಯಶಸ್ವಿಯಾಗಿದೆ.

ಅಧುನಿಕ ಕಾಲಘಟ್ಟದಲ್ಲಿಯೂ ಹೆಣ್ಣು ಇಂತಹ ಅನೇಕ ಅಗ್ನಿದಿವ್ಯಗಳನ್ನು ಎದುರಿಸುತ್ತಲೆ ಸಾಗಿದ್ದಾಳೆ. ಜಾಗತಿಕ ಸ್ತ್ರೀವಾದಿ ಚಿಂತನೆಯ ಮೂರನೇ ಅಲೆಯಲ್ಲಿ ನಾವಿದ್ದೇವೆ. ಅದು ಚಳುವಳಿಯ ಕಾಲಘಟ್ಟವಾದರೂ ನಮ್ಮ ಕಣ್ಣೋಟ ಮತ್ತು ತಿಳುವಳಿಕೆಯ ಪರಿಧಿಯನ್ನು ದಾಟಿ ಊರ್ಮಿಳೆಯಂತಹ ಅನೇಕ ಪಾತ್ರಗಳು ನಮ್ಮ ಮುಂದಿವೆ. ಜೀವನದಲ್ಲಿ ದುತ್ತೆಂದು ಎದುರಾಗುವ ಇಂತಹ ಸಂಕಟ ಸವಾಲುಗಳನ್ನು ಹೆಣ್ಣೊಬ್ಬಳು ತನ್ನ ಅರಿವಿನ ಮೂಲಕವೇ ಉತ್ತರ ಕಂಡುಕೊಳ್ಳುವ ಬಗೆಯನ್ನು ನಾವೀಗ ಬಿಡುಗಡೆ ಅಂತ ಕರೆದುಕೊಳ್ಳಬಹುದು. ಈ ಬಿಡುಗಡೆ ನಮ್ಮನ್ನು ನಾವು ಸುರಕ್ಷಿತ ವಲಯದಲ್ಲಿ ಗುರುತಿಸಿಕೊಳ್ಳುವ ಜಾಣ್ಮೆಯಾಗಿರಬಹುದು ಅಥವಾ ನಮ್ಮಷ್ಟಕ್ಕೆ ನಾವೇ ಸೇಫ್ ಜೋನ್ ಒಂದನ್ನು ನಿರ್ಮಿಸಿಕೊಳ್ಳುವ ಮೂಲಕ ಇಂತಹ ಸಂಘರ್ಷ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಹುದು.

ಎಲ್ಲ ಕಾಲದಲ್ಲಿಯೂ ಸೀತೆ ಊರ್ಮಿಳೆ ಗಾಂಧಾರಿ ಅಹಲ್ಯೆ ಕುಂತಿ ದ್ರೌಪದಿ ಮಂಡೋದರಿಯಂತಹ ಹೆಣ್ಣುಮಕ್ಕಳ ನಮ್ಮ ನಡುವೆ ಇದ್ದಾರೆ. ಆದರೆ ನಮ್ಮ ಬರವಣಿಗೆಯ ಸಾಹಿತ್ಯ ಪ್ರಕಾರಗಳ ಪಾತ್ರಗಳು ಮಾತ್ರ ಸುಖಾಂತ್ಯ ಮತ್ತು ದುಃಖಾಂತ್ಯವನ್ನು ಹೇಳುತ್ತವೆ. ಆದರೆ ವಾಸ್ತವಿಕವಾಗಿ ಸೂಕ್ಷ್ಮವಾಗಿ ಗಮನಿಸಿದಾಗ ಸಮಾಜ ಮತ್ತು ಕುಟುಂಬದ ಚೌಕಟ್ಟಿನಲ್ಲಿ ಹೆಣ್ಣು ತನಗಾದ ನೋವು ಅವಮಾನಗಳನ್ನು ಮುಚ್ಚಿಕೊಂಡು ತಣ್ಣನೆಯ ನಿಟ್ಟುಸಿರನ್ನು ನೆಯ್ದು ಅಳು ನುಂಗಿ ನಗುವ ಗಟ್ಟಿಗಿತ್ತಿಯರನ್ನೆ ಕಾಣುತ್ತೇವೆ. ಈ ದಿಸೆಯಲ್ಲಿ ಪ್ರಸ್ತುತ ಊರ್ಮಿಳೆ ಕಾದಂಬರಿಯೂ ಶತ ಶತಮಾನಗಳಿಂದಲೂ ಉಳಿದುಕೊಂಡು ಬಂದ ಅನೇಕ ಪ್ರಶ್ನೆಗಳಿಗೆ ಮುಖಾಮುಖಿಯಾಗಿ ಉತ್ತರ ಕಂಡುಕೊಳ್ಳವ ಬಗೆ ಈ ಕಥನದಲ್ಲಿ ಭಿನ್ನವಾಗಿದೆ. ರಾಮಾಯಣದ ಹೆಚ್ಚಿನ ಪಾಲು ಸೀತೆಯ ಪಾತ್ರದ ದಟ್ಟ ಪ್ರಭಾವಕ್ಕೆ ಒಳಗಾದ ಕಾರಣದಿಂದ ಉಳಿದ ಮಹತ್ವದ ಪಾತ್ರಗಳು ತನವನ್ನು ಸ್ಥಾಪಿಸಲೇಬೇಕೆಂಬ ಹಪಾಹಪಿಯಲ್ಲಿ ಹುಟ್ಟಿದವಳು “ಉರ್ಮಿಳೆ”. ಇದು ಸ್ತ್ರೀವಾದದ ಹಿನ್ನೆಲೆಯಲ್ಲಿ ಬರೆಯುವುದಕ್ಕೆ ಹೇಳಿ ಮಾಡಿಸಿದಂತಹ ವಸ್ತುವಾಗಿದೆ.

ವಾಸ್ತವವಾಗಿ ವಾಲ್ಮೀಕಿಯೇ ಉರ್ಮಿಳೆಯ ಪರವಾಗಿದ್ದಾರೆ. ಒಂದು ಹೆಣ್ಣು ಗಂಡನನ್ನು ಅಗಲಿ ದೂರವಿದ್ದರೂ ತನ್ನ ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ರ‍್ಯದ ಗರಿಷ್ಠತೆಯನ್ನು ಮೀರಿ ಕೇವಲ ಕುಲದ ಗೌರವಕ್ಕಾಗಿ ಬದುಕಿದ ಉರ್ಮಿಳೆ ರಾಮಾಯಣದಲ್ಲಿ ಆದರ್ಶತೆಗೆ ಇನ್ನೊಂದು ಮುಖವಾಗಿದ್ದಾಳೆ. ತಂದೆಯ ವಚನ ಪಾಲನೆಗಾಗಿ ರಾಮ ಸೀತೆ ವನವಾಸಕ್ಕೆ ಹೊರಟು ನಿಲ್ಲುತ್ತಾರೆ. ಜೊತೆಗೆ ಲಕ್ಷ್ಮಣ ಕೂಡ ರಾಮ ಅದೆಷ್ಟು ವಿನಂತಿಸಿದರೂ ಕೇಳದ ಅನುಜ ಜೊತೆ ಬರಲು ಬೇಡಿಕೊಳ್ಳುತ್ತಾನೆ. ಈ ವಿಷಯ ತಿಳಿದ ಊರ್ಮಿಳೆಯೂ ಅವರೊಂದಿಗೆ ಬರುವ ಇಚ್ಚೆ ವ್ಯಕ್ತಪಡಿಸುತ್ತಾಳೆ. ಆದರೆ ಲಕ್ಷ್ಮಣ ನಮ್ಮ ತಾಯಿಯರ ಉಪಚರಿಸುವ ಜವಾಬ್ದಾರಿ ನಿನಗೆ ವಹಿಸುತ್ತಿರುವೆ. ನೀನು ಅರಮನೆಯಲ್ಲಿರಬೇಕು. ಇದು ನನ್ನ ಆಜ್ಞೆ ಎನ್ನುತ್ತಾನೆ. ದುಃಖಿತಳಾದ ಹೆಂಡತಿಯನ್ನು ಲಕ್ಷ್ಮಣ ಸಮಾಧಾನಿಸುತ್ತ, “ನೀನು ಇನ್ನೆಂದೂ ಕಣ್ಣೀರು ಹಾಕಬಾರದು” ಎಂಬ ವಚನವನ್ನು ಪಡೆದು ರಾಮನೊಂದಿಗೆ ಕಾಡಿಗೆ ತೆರಳುತ್ತಾನೆ. ತಪಸ್ವಿನಿಯಂತೆ ವಿರಹಿಯಂತೆ ಬದುಕುತ್ತ ದಿನಗಳೆಯುವ ಘೋರ ದಿನಗಳು ಊರ್ಮಿಳೆ ಪಾಲಿಗೆ ಬಂದೊದಗುತ್ತವೆ.

ಲಕ್ಷ್ಮಣ ಕಾಡಿಗೆ ಅಣ್ಣನೊಂದಿಗೆ ಹೊರಡಲು ಸಿದ್ಧನಾದಾಗ ಒಂದು ಮಾತನ್ನು ಧರ್ಮಪತ್ನಿ ಊರ್ಮಿಳೆಯ ಅನುಮತಿಗಾಗಿ ಕೇಳಬೇಕೆನ್ನುವ ವಿಷಯದಲ್ಲಿ ಮೌನವಾಗಿದ್ದು ಕೂಡಾ ಗಂಡಾಳ್ವಿಕೆಯ ಅಘೋಷಿತ ಮೌಲ್ಯವಾಗಿದೆ. ಸೀತೆ ರಾಮನೊಂದಿಗೆ ಕಾಡಿನಲ್ಲಿದ್ದಾಳೆ. ಮಾಂಡವಿ ಭರತನೊಂದಿಗೆ ಶೃತಕಿರ್ತಿ ಶತ್ರುಘ್ನನೊಂದಿಗೆ ಇದೇ ಅಯೋಧ್ಯೆಯ ಅರಮನೆಯಲ್ಲಿದ್ದಾರೆ. ಆದರೆ ನಾನು ಮತ್ತು ಲಕ್ಷ್ಮಣ ಮಾತ್ರ ಏಕಾಂಗಿಗಳಾಗಿ, ಧರ್ಮ ಮತ್ತು ರಾಜಕಾರಣಗಳ ಸುಳಿಗೆ ಸಿಕ್ಕು ನಲಗಿದ್ದಂತು ಸತ್ಯ. ಪಿತೃವಾಕ್ಯ ಪರಿಪಾಲನೆ ರಾಮನಿಗೆ ಧರ್ಮವಾದರೆ ಲಕ್ಷ್ಮಣನಿಗೂ ಅದು ಧರ್ಮವೇ ಆದುದು ಹೇಗೆ? ಭರತನಿಗೆ ಪಟ್ಟ ಕಟ್ಟುವ ಹಾಗೂ ರಾಮನಿಗೆ ವನವಾಸದ ಶಿಕ್ಷೆ ಪ್ರಕಟಣೆ ಮಾಡುವ ಕೈಕೇಯಿಯ ರಾಜಕಾರಣ ಲಕ್ಷ್ಮಣನಿಗಷ್ಟೇ ಅಲ್ಲ ನನ್ನನ್ನು ಪ್ರಪಾತಕ್ಕೆ ತಳ್ಳಿದ್ದಂತು ಸತ್ಯ. ಈ ತರ್ಕ ಮತ್ತು ವಾದಗಳನ್ನು ಯಾರ ಮುಂದೆ ತಾನು ಮಂಡಿಸಲಿ ಎಂಬ ಉರ್ಮಿಳೆಯ ಅಂತರಂಗದ ತೊಳಲಾಟ ಈ ಕೃತಿಯುದ್ದಕ್ಕೂ ಧ್ವನಿಸಿದೆ.

ಈ ಕಥನದ ನಾಯಕಿ ಊರ್ಮಿಳಾ ಯಾರೆಂದು ಗಮನಿಸಿದಾಗ, ಭಾರತೀಯ ಮಹಾಕಾವ್ಯ ರಾಮಾಯಣದಲ್ಲಿನ ಒಂದು ಪಾತ್ರ. ರಾಮಾಯಣದ ಪ್ರಕಾರ ಮಿಥಿಲೆಯ ರಾಜ ಜನಕ ಹಾಗೂ ರಾಣಿ ಸುನೈನಾಳ ಪುತ್ರಿ ಮತ್ತು ಸೀತೆಯ ತಂಗಿ. ಅವಳು ರಾಮನ ಕಿರಿಯ ಸಹೋದರ ಲಕ್ಷ್ಮಣನ ಹೆಂಡತಿ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು – ಅಂಗದಾ ಮತ್ತು ಚಂದ್ರಕೇತು. ಲಕ್ಷ್ಮಣನು ರಾಮ ಮತ್ತು ಸೀತಾಳೊಂದಿಗೆ ವನವಾಸಕ್ಕೆ ಹೊರಟು ನಿಂತಾಗ ಉರ್ಮಿಳಾ ಅವರೊಂದಿಗೆ ಹೊರಡಲು ಸಿದ್ಧಳಾಗಿದ್ದಳು. ಆದರೆ ಲಕ್ಷ್ಮಣನು ತನ್ನ ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳಲು ಅಯೋಧ್ಯೆಗೆ ಹಿಂತಿರುಗುವಂತೆ ಕೇಳಿಕೊಂಡನು. ಉರ್ಮಿಳಾ ನಿರ್ಧಾರದಿಂದ ತನ್ನ ಸಾಟಿಯಿಲ್ಲದ ತ್ಯಾಗದಿಂದ ಗಮನಾರ್ಹವಾಗಿದ್ದಾಳೆ.

ಲಕ್ಷ್ಮಣ ಊರ್ಮಿಳೆಗೆ ಅಂಗದ ಮತ್ತು ಚಂದ್ರಖೇತು ಇಬ್ಬರು ಮಕ್ಕಳು ಬದುಕು ನೋವಿನಲ್ಲೆ ಕಳೆದು ಬದುಕಿನ ಕೊನೆಯೂ ದುರಂತವೆ ಊರ್ಮಿಳೆಯದ್ದು. ಈ ಲೋಕದಲ್ಲಿ ಲಕ್ಷ್ಮಣನ ಆಯಸ್ಸು ಅವಧಿ ಪೂರ್ಣಗೊಂಡಾಗ ಪ್ರಭು ರಾಮಚಂದ್ರರ ಇಚ್ಚೆಯಂತೆ ಸಾಗರದ ಮೂಲಕ ದೇಹ ತ್ಯಜಿಸಲು ಹೊರಟು ನಿಂತ ವಿಷಯ ತಿಳಿದು ಊರ್ಮಿಳೆ ಆ ಸಾಗರದ ದಡದಲ್ಲೆ ಗಂಧದ ಕಟ್ಟಿಗೆಗಳಿಗೆ ಅಗ್ನಿಸ್ಪರ್ಶ ಮಾಡಿ ಸೀತೆಯಂತೆಯೆ ಅಗ್ನಿಪ್ರವೇಶಿಸಿ ಮುತ್ತೈದೆ ಸಾವನ್ನು ಪಡೆಯುತ್ತಾಳೆ. ಊರ್ಮಿಳೆಯ ಚಿತೆಯ ಅಗ್ನಿಜ್ವಾಲೆ ಕಾಣುತ್ತಲೆ ಲಕ್ಷ್ಮಣ ಸಮುದ್ರದ ಆಳಕ್ಕಿಳಿದು ದೇಹತ್ಯಾಗ ಮಾಡಿ ಮೋಕ್ಷ ಹೊಂದುತ್ತಾನೆ.

ತಂದೆಯ ವಚನದಂತೆ ಶ್ರೀರಾಮಚಂದ್ರನು ವನವಾಸಕ್ಕೆಂದು ತನ್ನ ಮಡದಿಯ ಜೊತೆ ಕಾಡಿಗೆ ತೆರಳುವ ಸಂದರ್ಭದಲ್ಲಿ ಊರ್ಮಿಳೆಯ ಪತಿ ಲಕ್ಷ್ಮಣನು ಸಹ ಕಾಡಿಗೆ ಹೋಗಲು ಇಚ್ಛಿಸಿದಾಗ ಶ್ರೀರಾಮಚಂದ್ರನು ತನ್ನ ನಾದಿನಿಯಾದ ಊರ್ಮಿಳೆಯ ಅಂತರಾಳದಲ್ಲಿನ ವ್ಯಾಕುಲತೆಯನ್ನು ಅರಿಯುವಲ್ಲಿ ವಿಫಲನಾಗಿ, ತನ್ನ ಜೊತೆ ಲಕ್ಷ್ಮಣನನ್ನು ಸಹ ಕಾಡಿಗೆ ಕರೆದೊಯ್ಯುತ್ತಾನೆ. ಲಕ್ಷ್ಮಣನು ತನ್ನ ತಂದೆ ತಾಯಿಯರನ್ನು ನೋಡಿಕೊಳ್ಳಲು ಹೇಳಿ ಅವಳನ್ನು ಅಯೋಧ್ಯೆಯಲ್ಲೇ ಬಿಟ್ಟು ಹೋಗುತ್ತಾನೆ. ರಾವಣನಿಂದ ಅಪಹೃತಳಾಗುವ ಮುನ್ನ ಸೀತಾಮಾತೆ ತನ್ನ ಪತಿಯೊಂದಿಗೆ ಕಾನನದಲ್ಲಿ ವನ-ಚರ-ಪ್ರಾಣಿ-ಪಕ್ಷಿಗಳೊಂದಿಗೆ ಆನಂದದಿಂದ ಕಾಲಕಳೆಯುತ್ತಿದ್ದರೆ, ಇತ್ತ ತನ್ನ ಪತಿಯ ಬರುವಿಕೆಗಾಗಿಯೇ ಊರ್ಮಿಳೆ ಹದಿನಾಲ್ಕು ವರ್ಷಗಳ ಕಾಲ ಅರಮನೆಯಲ್ಲಿ ಕಾಯುತ್ತಿರುತ್ತಾಳೆ. ಲಕ್ಷ್ಮಣ ಮತ್ತು ಊರ್ಮಿಳೆಗೆ ಅಂಗದ ಹಾಗೂ ಚಂದ್ರಕೇತು ಎಂಬ ಇಬ್ಬರು ಮಕ್ಕಳಿದ್ದರು. ರಾಮಾಯಣದಲ್ಲಿ ಮೌನ ತಪಸ್ವಿನಿ ಗೃಹ ತಪಸ್ವನಿ ಯಾದ ಊರ್ಮಿಳಾ ತನ್ನ ನಿರ್ಧಾರ ಮತ್ತು ಅತೀ ಕಾಠಿಣ್ಯ ನಿಯಮ ಪರಿಪಾಲನೆ ಮೂಲಕ ಸಾಟಿಯಿಲ್ಲದ ತ್ಯಾಗಕ್ಕೆ ಊರ್ಮಿಳಾ ಹೆಸರಾಗಿದ್ದಾಳೆ.

ಸೀತೆ ಮತ್ತು ಊರ್ಮಿಳೆ ಬಾಂಧವ್ಯ ಸಹೋದರಿಯರಾದರು ಸ್ನೇಹಿತೆಯಂತಿತ್ತು. ಸೀತೆಯಷ್ಟೆ ಸೌಂದರ್ಯ ಜಾಣ್ಮೆ ಭಕ್ತಿ ಊರ್ಮಿಳೆಯಲ್ಲಿತ್ತು ಅವಳು ಸೌಂದರ್ಯದ ಖಣಿ ಅಷ್ಟೆಯಲ್ಲ ಉತ್ತಮ ಚಿತ್ರಕಲಾವಿದೆ ಕೂಡ ಆಗಿದ್ದಳು. ಊರ್ಮಿಳೆ ಅನುಪಮ ಸೌಂದರ್ಯದ ಯುವರಾಣಿ ಜನಕ ಮಹಾರಾಜ ಹಾಗೂ ಮಹಾರಾಣಿ ‘ಸುನೈನಾ’ಳ ಮಗಳು ಊರ್ಮಿಳೆಗೆ “ಜಾನಕಿ” ಎಂದೂ ಕೂಡ ಕರೆಯಲಾಗುತಿತ್ತು.(ಉಲ್ಲೇಖ: ಜನಪದ ರಾಮಾಯಣ) ಸೀತೆ ಜನಕನಿಗೆ ದತ್ತುಪುತ್ರಿ ಭೂಮಿಯಲ್ಲಿ ದೊರೆತವಳು. ಶಿವಧನಸ್ಸುನು ಮುರಿದು ಸೀತೆಯ ಪಡೆದ ಶ್ರೀರಾಮಚಂದ್ರನು ಜೊತೆಗೆ ಇದ್ದ ಅನುಜ ಲಕ್ಷ್ಮಣನಿಗೆ ವಿಶ್ವಾಮಿತ್ರರ ಸಲಹೆಯಂತೆ ಊರ್ಮಿಳೆಯನ್ನು ಜನಕ ಮಹಾರಾಜ ಧಾರೆಯೆರೆಯುತ್ತಾನೆ. ಸೀತೆ ಮತ್ತು ಊರ್ಮಿಳೆ ಜೊತೆಯಾಗಿಯೆ ಅಯೋಧ್ಯೆಗೆ ಬರುತ್ತಾರೆ.

ರಾಜಸ್ಥಾನದ ಭರತಪುರ ಜಿಲ್ಲೆಯಲ್ಲಿ, ಲಕ್ಷ್ಮಣ ಮತ್ತು ಊರ್ಮಿಳೆಗೆ ಮೀಸಲಾಗಿರುವ ಒಂದು ದೇವಸ್ಥಾನ ಇದೆ. ಭರತಪುರದ ರಾಜ ಬಲವಂತ್ ಸಿಂಗ್ ಈ ದೇವಾಲಯವನ್ನು 1870 ನೇ ಶತಮಾನದಲ್ಲಿ ಕಟ್ಟಿಸಿದರು. ನಂತರ ಆ ದೇವಾಲಯವು ಭರತಪುರದ ರಾಜ ಕುಟುಂಬದಿಂದ ರಾಯಲ್ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಊರ್ಮಿಳೆ ಲಕ್ಷ್ಮಣನ ಸತಿ. ಜನಕರಾಜನ ಔರಸಪುತ್ರಿ. ವಾಸ್ತವವಾಗಿ ಇವಳು ಜಾನಕಿ; ಆದರೆ ಆ ಹೆಸರಿನಿಂದ ಪ್ರಸಿದ್ಧವಾದವಳು, ಜನಕರಾಜನ ಸಾಕುಮಗಳು ಸೀತೆ. ರಾಮಲಕ್ಷ್ಮಣರಿಗೆ ಸೀತಾ ಊರ್ಮಿಳೆಯರು ಧರ್ಮಸಂಬಂಧ ಸದೃಶರಾಗಿ, ಸದೃಶರೂಪಸಂಪದರಾಗಿ ಇದ್ದಾರೆಂದು ಋಷಿ ವಿಶ್ವಾಮಿತ್ರನೇ ಜನಕರಾಜನಿಗೆ ಹೇಳಿ ಅವರ ಮದುವೆಯನ್ನು ನಿರ್ಧರಿಸುತ್ತಾನೆ. ಸೀತಾದೇವಿಯನ್ನು ಶ್ರೀರಾಮನಿಗೆ ಧಾರೆಯೆರೆದ ಕೈಯಲ್ಲೇ ಅದೇ ರೀತಿಯಲ್ಲೇ ಜನಕರಾಜ ಊರ್ಮಿಳೆಯನ್ನು ಲಕ್ಷ್ಮಣನಿಗೆ ಧಾರೆಯೆರೆಯುತ್ತಾನೆ- ಲಕ್ಷ್ಮಣಾಗಚ್ಛ. ಭದ್ರಂತೆ! ಊರ್ಮಿಲಾಮುದ್ಯತಾಂ ಮಯಾ. ಪ್ರತೀಚ್ಛ ಪಾಣಿಂ ಗೃಹ್ಣೀಷ್ವ; ಮಾಭೂತ್ ಕಾಲಸ್ಯ ಪರ್ಯಯಃ! ಎಂದು. ಮುಂದೆ ತನ್ನೊಡನೆ ವನವಾಸಕ್ಕೆ ಬರುತ್ತಿರುವ ಲಕ್ಷ್ಮಣನಿಗೆ ರಾಮ ಹೇಳುತ್ತಾನೆ. ನಿನ್ನ ಮನದನ್ನೆಯರಿಗೆಲ್ಲ ಹೇಳಿಬಿಟ್ಟು ಬಾ ಎಂದು! ಪ್ರಾಯಶಃ ವಾಲ್ಮೀಕಿ ಇಲ್ಲಿ ಊರ್ಮಿಳೆಯನ್ನು ಗಮನದಲ್ಲಿಟ್ಟುಕೊಂಡಿರಬೇಕು.

ರಾಮಲಕ್ಷ್ಮಣ ಸೀತೆಯರು ವನವಾಸವನ್ನು ಕೈಕೊಂಡಾಗ ಊರ್ಮಿಳೆ ಅಯೋಧ್ಯೆಯಲ್ಲೇ ಉಳಿಯುತ್ತಾಳೆ. ಪತಿ ವಿರಹದಿಂದ ಅವಳು ಪಟ್ಟ ಪಾಡೇನು, ಮುಂದೆ ಅವಳಿಗೆ ಏನಾಯಿತು ಎಂಬ ವಿವರಗಳು ವಾಲ್ಮೀಕಿಯ ರಾಮಾಯಣದಲ್ಲಿ ಬರುವುದಿಲ್ಲ. ಈ ದಿಶೆಯಲ್ಲಿ ವಿಜಯಮ್ಮನವರು ರಚಿಸಿದ ಈ ಕಾದಂಬರಿ ಊರ್ಮಿಳೆಯ ಸ್ವಗತವನ್ನು ತೆರೆದಿಡುವ ಮಹತ್ವದ ಕಾರ್ಯ ಮಾಡುತ್ತದೆ.

ಮಹಾಶ್ವೇತಾ ದೇವಿಯವರ ಸೀತೆಯಂತೆ ಇಲ್ಲಿ ಊರ್ಮಿಳಾ ತನ್ನ ಅಂತರಂಗದ ತುಮುಲುಗಳನ್ನು ಹೇಳಿಕೊಂಡು ಹಗುರಾಗ ಬಯಸುತ್ತಾಳೆ. ಆಧುನಿಕ ಸ್ತ್ರೀವಾದದ ನಾಲ್ಕನೇ ಅಲೆಯಲ್ಲಿ ನಾವಿದ್ದೇವೆ. ಈ ನಿಟ್ಟಿನಲ್ಲಿ ಹೆಣ್ಣೊಬ್ಬಳ ಹೃದಯ ಸಂವೇದನೆಗೆ ಧ್ವನಿಯಾಗುವ ಅನೇಕ ಕಥನಗಳು ರಚಿಸಲ್ಪಟ್ಟಿದೆ. ಅರಮನೆಯ ಅರಗಿಣಿಗಳಾಗಿ ಬದುಕಬೇಕಾದ ನವ ವಧುಗಳು ಕಾಡಿನಲ್ಲಿ ಅರಮನೆಯಲ್ಲಿ ಬೆಂದು ನೊಂದು ತಾಪ ಪಡುವಂತಾದುದು ವಿಪರ್ಯಾಸ.

ಮಾಂಡವಿ ಶೃತಕೀರ್ತಿಯರು ಭರತ ಶತ್ರುಘ್ನನೊಂದಿಗೆ ಹಾಗೂ ಸೀತೆ ರಾಮನೊಂದಿಗೆ ಇದ್ದಾರೆ. ಈ ಕಷ್ಟಕರ ಕಾಲದಲ್ಲಿಯೂ ಸತಿ ಪತಿಯರು ಜೊತೆಯಲ್ಲಿ ಇದ್ದರೆ ಎಂತಹ ಸಂಕಟ ಪರೀಕ್ಷೆ ಎದುರಾದರೂ ಹೋರಾಡಬಹುದು. ಆದರೆ ಊರ್ಮಿಳೆ ಮಾತ್ರ ಒಬ್ಬಂಟಿಯಾಗಿದ್ದಾಳೆ. ಕನಿಷ್ಟಪಕ್ಷ ಲಕ್ಷ್ಮಣ ಕಾಡಿಗೆ ಹೋಗುವಾಗ ತನ್ನನ್ನೊಂದು ಮಾತು ಕೇಳಬೇಕು ಅಥವಾ ತನ್ನ ನಿರ್ಧಾರವನ್ನು ತಿಳಿಸಬೇಕೆಂಬ ಸಣ್ಣ ಯೋಚನೆ ಕೂಡಾ ಮಾಡದೆ ನಾರು ಉಡಿಗೆ ಧರಿಸಿ ರಾಮನ ಹಿಂದೆಯೇ ಸೀತೆ ಅವಳ ಹಿಂದೆ ಲಕ್ಷ್ಮಣ ನಡೆದೆ ಬಿಟ್ಟುದು ಊರ್ಮಿಳೆಯ ಅಂತರಂಗವನ್ನು ಘಾಸಿಗೊಳಿಸಿದೆ.

ಭಾರತದ ಮಣ್ಣಿನಲ್ಲಿ ಹುಟ್ಟಿಬೆಳೆದ ಜಾನಪದ, ಜೈನ, ಬೌದ್ಧ ಪರಂಪರೆಯ ರಾಮಾಯಣಗಳು, ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾಗಿಯೇ ದಾಖಲಿಸಲ್ಪಟ್ಟವೆ. ಕ್ರಿ.ಪೂ. 1 ನೇ ಶತಮಾನದ ವಿಮಲಸೂರಿಯ ಕಥೆಯನ್ನು ಒಳಗೊಂಡಂತೆ ವೈದಿಕ ರಾಮಾಯಣದ ಕಥೆಯನ್ನು ಜೈನ ಮತ್ತು ಬೌದ್ಧರು ಧರ್ಮದ ಆಶಯಗಳಿಗೆ ತಕ್ಕಂತೆ ಹೊಂದಿಸಿಕೊಂಡು ಬರೆದಿದ್ದಾರೆ. ಕನ್ನಡ ಸಾಹಿತ್ಯ ಸಂದರ್ಭದಲ್ಲಂತೂ ಜೈನ ಸಾಹಿತಿಗಳ ರಚನೆಗಳು ವಿಪುಲವಾಗಿವೆ. ಎರಡು ಮಹಾಕಾವ್ಯಗಳ ಕಥಾವಸ್ತುಗಳೇ ಧರ್ಮ ಮತ್ತು ಕಾವ್ಯಧರ್ಮಗಳ ಸಾರ್ಥಕತೆಗೆ ಸಾಕ್ಷಿಯಾಗಿವೆ. ವೈದಿಕ ರಾಮಾಯಣ ಬುದ್ಧ ಪೂರ್ವಯುಗದ ರಚನೆಯಾಗಿದ್ದರಿಂದ ತದನಂತರದ ಕವಿಗಳು ಆಶ್ರಯಿಸಿರುವ ಧರ್ಮಕ್ಕೆ ಋಣಿಯಾಗಲೆಂದೇ ಲೌಕಿಕ-ಅಲೌಕಿಕ ಕಾವ್ಯರಚಿಸಿ ಕೃತಾರ್ಥರಾಗಿದ್ದಾರೆ. ಪಂಪನ ಹಿರಿಯರು ವೈದಿಕದಿಂದ ಜೈನ ಮತಾವಲಂಬಿಗಳಾಗಿರುವುದನ್ನು ಗಮನಿಸಿದರೆ, ಯುಗಧರ್ಮಕ್ಕೆ ಋಣಿಯಾದ ಜೈನ, ಬೌದ್ಧರು ಕಾವ್ಯಗಳ ಮುಖೇನ ಧಾರ್ಮಿಕಾನುಸಂಧಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದನ್ನು ಕಾಣಬಹುದು. ಹಲವಾರು ಪಂಥಗಳ, ಹಲವಾರು ಸಂಪ್ರದಾಯಗಳಲ್ಲಿ ಚಿತ್ರ-ವಿಚಿತ್ರ ರಾಮಾಯಣಗಳು ರಚಿತವಾಗಿವೆ. ಬೌದ್ಧ ಸಂಪ್ರದಾಯದ ರಾಮಾಯಣದಲ್ಲಿ ರಾವಣನ ಪಾತ್ರವೇ ಇಲ್ಲ ಎಂದ ಮೇಲೆ ಸೀತಾಪಹರಣವಾಗಲೀ ರಾಮಯಣದ ಯುದ್ಧಗಳಾಗಲಿ ಸಂಭವಿಸುವ ಪ್ರಮೇಯವೇ ಇಲ್ಲ. ಆಶ್ಚರ್ಯವೆಂದರೆ ರಾಮ, ಲಕ್ಷ್ಮಣ, ಸೀತೆ ಎಲ್ಲ ಅಣ್ಣ-ತಂಗಿಯರು, ಅಣ್ಣ ತಂಗಿಯರು ಲಗ್ನವಾಗುವ ಸಂಪ್ರದಾಯ ಬುದ್ಧನ ಶಾಕ್ಯಕುಲದಲ್ಲಿ ಪ್ರಚಲಿತವಾಗಿತ್ತು. ಈ ರಾಮಾಯಣ ಒಂದು ಶಾಂತ ಸಮುದ್ರ.

ಮಹಾಕವಿ ರವೀಂದ್ರನಾಥರು ರಾಮಾಯಣ ಕಾವ್ಯದ ಪಾತ್ರಗಳ ಕುರಿತಾಗಿ ಅನಾದರ ಎಂಬ ತಮ್ಮದೊಂದು ವಿಮರ್ಶೆಯಲ್ಲಿ ಊರ್ಮಿಳೆಯ ಬಗ್ಗೆ ಸಹಾನುಭೂತಿಯಿಂದ ಬರೆದಿದ್ದಾರೆ. ಉಷೋದಯದ ಪೂರ್ವದಿಗಂತದಲ್ಲಿ ಮೂಡುವ ತಾರೆ ಸೂರ್ಯೋದಯಾನಂತರದ ತುಂಬು ಬೆಳಕಿನಲ್ಲಿ ಮುಳುಗಿಹೋಗುವಂತೆ, ಸೀತಾದೇವಿಯ ಕಣ್ಣೀರಿನಲ್ಲಿ ಊರ್ಮಿಳಾದೇವಿ ಸಂಪೂರ್ಣವಾಗಿ ಕೊಚ್ಚಿಹೋದಳೆಂದು ನಿಟ್ಟುಸಿರಿಟ್ಟಿದ್ದಾರೆ.

ವಾಲ್ಮೀಕಿ ಮಹಾಕವಿ ತನ್ನ ಕಲ್ಪನಾಶಕ್ತಿಯ ಕರುಣ ಜಲವೆಲ್ಲವನ್ನೂ ಸೀತಾದೇವಿಯ ಪುಣ್ಯಾಭಿಷೇಕದಲ್ಲಿಯೇ ಹೆಚ್ಚು ಮುಳಗಿದಂತಿದೆ. ಆದರೆ ಊರ್ಮಿಳೆಯನ್ನು ಕುರಿತಾಗಿ ಹೇಳುವಾಗ ಕಳೆಗುಂದಿದ ಮುಖವುಳ್ಳವಳೂ ಸಮಸ್ತ ಐಹಿಕ ಸುಖದಿಂದ ವಂಚಿತಳೂ ಆಗಿ ಸೀತಾದೇವಿಯ ಛಾಯೆಯಲ್ಲಿ ಅವಕುಂಠನವತಿಯಾಗಿ ನಿಂತಿರುವ ಮತ್ತೊಬ್ಬ ರಾಜಕುಮಾರಿಯ ಚಿರದುಃಖದಿಂದ ತಪ್ತವಾದ ನಮ್ರ ಲವಾಟದ ಮೇಲೆ ತನ್ನ ಕಮಂಡಲುವಿನ ಒಂದು ತೊಟ್ಟು ನೀರನ್ನೂ ಚಿಮುಕಿಸಿಲ್ಲವಲ್ಲ ಎಂದು ಮಹಾಕವಿ ರವೀಂದ್ರನಾಥರು ವಿಮರ್ಶಿಸುತ್ತಾರೆ. ವಾಲ್ಮೀಕಿ ಮಹರ್ಷಿಗಳು ಸೀತೆಗೆ ಕೊಟ್ಟಿರುವ ಮಹತ್ವವನ್ನು ರಾಮಾಯಣದ ಇತರ ಸ್ತ್ರೀ ಪಾತ್ರಗಳ ಸಂವೇದನೆಗಳಿಗೂ ಒತ್ತು ನೀಡಬಹುದಿತ್ತು ಎಂಬುದು ಅತೀ ಮಹತ್ವದ ಚಿಂತನೆಯಾಗಿದೆ.

ವಸಾಹತೋತ್ತರ ಕಾಲಘಟ್ಟದಲ್ಲಿ ಪುರಾಣ ಚರಿತ್ರೆಯ ಕೃತಿಗಳ ಅವಲೋಕನದಲ್ಲಿ ಆಧುನಿಕ ಭಾರತೀಯ ಸಾಹಿತ್ಯದಲ್ಲಿ ಊರ್ಮಿಳೋದಯವಾಗುತ್ತದೆ. ಉತ್ತರದ ಹಿಂದಿ ಭಾಷೆ ಕವಿಗಳಲ್ಲಿ ಮೈಥಿಲೀಶರಣಗುಪ್ತರು, ಬಾಲಕೃಷ್ಣವರ್ಮರು ಊರ್ಮಿಳಾ ಕಾವ್ಯಗಳನ್ನೇ ರಚಿಸಿದರೆ, ದಕ್ಷಿಣದಲ್ಲಿ ಭಾರತಿ ಅವರು ತಪಸ್ವಿನೀ ಎಂಬ ನಾಟಕವನ್ನೂ ಪು.ತಿ.ನ. ಅವರು ಬೀಳ್ಕೊಡಿಗೆ ಎಂಬ ಕಿರುನಾಟಕವನ್ನೂ ಕೀರ್ತಿನಾಥ ಕುರ್ತಕೋಟಿಯವರು ಉರ್ಮಿಳಾ ಭಾವಗೀತವನ್ನೂ ಬರೆದಿದ್ದಾರೆ.

ಕವಿ ಕುವೆಂಪು ತಮ್ಮ ಮಹಾಕಾವ್ಯದಲ್ಲಿ ಊರ್ಮಿಳೆಯನ್ನು ಕುರಿತು ಮೊದಲು ಅಷ್ಟಷಟ್ಪದಿಯ ಪ್ರಾರಂಭಿಕ ಕೆಲವು ಪದ್ಯ ಸಾಲುಗಳ ಜಲಿ ನೀಡಿದರೇ ಹೊರತು ಪ್ರತ್ಯೇಕ ಕಾವ್ಯವನ್ನೇ ರಚಿಸುವ ಗೋಜಿಗೆ ಹೋಗಲಿಲ್ಲ. ಶ್ರೀರಾಮಾಯಣ ದರ್ಶನಂ ದಲ್ಲಿ ಈ ಮಹಾಸತಿ ಊರ್ಮಿಳೆಯ ಪಾತ್ರವೆಂಥದು ಎಂಬುದರ ಸ್ಪಷ್ಟ ದರ್ಶನವಿದ್ದರು ಅಷ್ಟೊಂದು ಮಹತ್ವಪೂರ್ಣ ಸಂವೇದನಾ ಶೀಲ ಪಾತ್ರವಾಗಿ ಚಿತ್ರಿಸಿಲ್ಲ.

ಕುವೆಂಪುರವರು ತಮ್ಮ ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲಾದರೂ ಊರ್ಮಿಳೆಯನ್ನು ತೋರುವುದು ಕಡೆಯಲ್ಲಿ ಒಮ್ಮೆ ಮಾತ್ರವೇ. ಪರೋಕ್ಷವಾಗಿ ಊರ್ಮಿಳೆಯ ಚಿತ್ರ ಇನ್ನೆರಡು ಮೂರು ಬಾರಿ ಮಾತ್ರ ಸುಳಿದರೂ ಆಕೆಯ ಅದೃಶ್ಯ ತೇಜಃಪುಂಜದಿಂದ ಇಡೀ ಕಾವ್ಯದ ಘಟನೆಯೆಲ್ಲ ಮಿಂದು ಪ್ರಕಾಶಮಾನ ಕಾಂತವಾಗುತ್ತದೆ. ಊರ್ಮಿಳಾ ಲಕ್ಷ್ಮಣರ ಅನರುಕ್ತ ತ್ಯಾಗದ ಮಹಿಮೆಯನ್ನು ಸೀತಾರಾಮರು ಕಲ್ದವಸಿಯ ಮೂಲಕ ತಿಳಿದು ತಮ್ಮ ಜೀವನ ಸಂಯಮವನ್ನು ಜಾಗೃತಗೊಳಿಸಿಕೊಳ್ಳುವ ಪ್ರಸಂಗವನ್ನು ಗಮನಿಸಿದಾಗ ಲಕ್ಷ್ಮಣ ಮತ್ತು ಊರ್ಮಿಳೆಯ ದಾಂಪತ್ಯದ ಮಹೋನ್ನತ ಅನುಭವ ಆಗುತ್ತದೆ.

ಮೌಖಿಕ ಪರಂಪರೆಯ ರಾಮಾಯಣಗಳಲ್ಲಿ ರೂಪಗೊಂಡ ಸಾಂಸ್ಕೃತಿಕ ವಾತಾವರಣ ತುಂಬ ಭಿನ್ನವಾದುದು. ಪೌರಾಣಿಕ ಕಥಾನುಸಂಧಾನದಲ್ಲಿ ಹೆಣೆಯಲ್ಪಟ್ಟ ವೈದಿಕ ರಾಮಾಯಣವು ಸಧ್ಯ ಪ್ರಚಲಿತವಿರುವ ಕಥೆಗಳ ಆಕಾರವಾಗಿದೆ. ವಾಲ್ಮೀಕಿ ರಾಮಾಯಣ ರೂಪುಗೊಳ್ಳುವುದಕ್ಕಿಂತ ಪೂರ್ವದಲ್ಲೇ ಅಂದರೆ ಕ್ರಿ.ಪೂ. 30 ರ ಹೊತ್ತಿಗೆ ಬೌದ್ಧ ಸಾಂಪ್ರದಾಯಕ ಕತೆ ಲಿಪಿಯಲ್ಲಿದ್ದರೆ ಜೈನ ಸಾಂಪ್ರದಾಯಕ ಕತೆ ಮೌಖಿಕ ಪ್ರಚಾರದಲ್ಲಿತ್ತು.

ಭಾರತದಲ್ಲಿ ಹಲವಾರು ಸಂಪ್ರದಾಯದ ಕವಿಗಳಿಂದ ರಚಿತವಾದ ವಿಭಿನ್ನ ವಿಚಿತ್ರ ರಾಮಾಯಣ, ಮಹಾಭಾರತ ಕತೆಗಳನ್ನು ನಾವು ಕಾಣಬಹುದಾಗಿದೆ. ವೈದಿಕ ಸಂಪ್ರದಾಯದ, ಜೈನ, ಬೌದ್ಧ ಸಂಪ್ರದಾಯದ ಇನ್ನು ಹಲವಾರು ಕವಿಗಳಿಂದ ರಚಿತವಾದ ರಾಮಾಯಣ-ಮಹಾಭಾರತದ ಕತೆಗಳಿವೆ. ಭಾರತದಲ್ಲಿ ಎಷ್ಟೊಂದು ಬಗೆಯ ಅಸಂಖ್ಯ ರಾಮಾಯಣಗಳಿವೆ ಎಂಬುದನ್ನು ಗದುಗಿನ ಭಾರತದ ಮಹಾನ್ ಕವಿ ಕುಮಾರವ್ಯಾಸ ಬಹು ಮಾರ್ಮಿಕವಾಗಿ ನಿರೂಪಿಸಿದ್ದಾನೆ. ತಾನೇಕೆ ರಾಮಾಯಣವನ್ನು ಬರೆಯದೇ ಮಹಾಭಾರತದ ಕಾವ್ಯ ರಚನೆ ಮಾಡಿದೆ ಎಂದು ಸಮರ್ಥಿಸಿಕೊಳ್ಳುವಾಗ “ತಿಣಿಕಿದನು ಘಣಿರಾಯ ರಾಮಾಯಣದ ಭಾರದಲಿ” ಎಂದು ಉದ್ಘರಿಸಿದ್ದಾನೆ. ಇಡೀ ಭೂಮಂಡಲವನ್ನೇ ಆದಿ ಶೇಷನೆಂಬ ನಾಗರಹಾವು ತನ್ನ ಹೆಡೆಯ ಮೇಲೆ ಹೊತ್ತು ನಿಂತಿದೆ. ಇಡೀ ಭೂಮಂಡಲದ ಭಾರವನ್ನೇ ಲೀಲಾಜಾಲವಾಗಿ ತನ್ನ ಹೆಡೆಯ ಮೇಲಿರಿಸಿಕೊಂಡ ಈ ನಾಗನಿಗೆ ಸಹಸ್ರಾರು ಕವಿಗಳು ಬರೆದ ರಾಮಾಯಣಗಳ ಭಾರದಿಂದ ತಿಣುಕಿ ಹೋದ ಎಂದ ಮಾರ್ಮಿಕವಾಗಿ ಹೇಳುತ್ತ, ಈ ಕಾರಣದಿಂದ ತಾನು ಬರೆಯಲು ಮಹಾಭಾರತ ಕಾವ್ಯವನ್ನು ಆಯ್ದುಕೊಂಡೆ ಎಂದು ನಿರೂಪಿಸಿದ್ದಾನೆ.

ಇಷ್ಟಾದರೂ ಇಂದಿಗೂ ರಾಮಾಯಣಗಳ ಕಾವ್ಯರಚನೆ ನಿಂತಿಲ್ಲ. ಈ ಶತಮಾನದ ರಾಷ್ಟ್ರಕವಿ ಕುವೆಂಪುರವರು “ರಾಮಾಯಣ ದರ್ಶನಂ” ಎಂಬ ಮಹಾಕಾವ್ಯವನ್ನು ಬರೆಯುವಾಗ “ರಾಮಾಯಣಂ ಕಣಾ ಇದು ವಿರಾಮಾಯನಂ” ಎಂದರೆ ರಾಮಾಯಣಕ್ಕೆ ವಿರಾಮವೆಂಬುದೇ ಇಲ್ಲ. ರಾಮಾಯಣ ಎಂದೆಂದಿಗೂ ಚಿರನೂತನ, ನವನವೋನ್ಮೇಶಶಾಲಿನಿ ಎಂದು ತಾವು ರಾಮಾಯಣ ಕಾವ್ಯ ಬರೆಯಲು ಆಯ್ಕೆ ಮಾಡಿಕೊಂಡದ್ದನ್ನು ಸಮರ್ಥಿಸಿಕೊಂಡಿದ್ದಾರೆ.

ಶ್ರೀರಾಮಾಯಣದರ್ಶನಂ-ಕುಣಿದಳುರಿಯ ಊರ್ವಶಿ ಭಾಗವನ್ನು ಅವಲೋಕಿಸಿದಾಗ ಕಂಡು ಬರುವ ಘಟನೆಗಳು ನಿಜಕ್ಕೂ ಓದುಗರನ್ನು ಸೆರೆಹಿಡಿದು ಆಳವಾದ ಚಿಂತನೆಗೆ ಹಚ್ಚುತ್ತವೆ. ಅಯೋಧ್ಯೆಗೆ ಹಿಂತಿರುಗಿದ ಸೀತಾರಾಮ ಲಕ್ಷ್ಮಣರನ್ನು ದೂರದಿಂದ ಸ್ವಾಗತಿಸಲು ತನ್ನ ತಪೋವನದ ತವರನ್ನುಳಿದು ಮಿಂದು ಮಡಿಯುಡಲು ಹೊರಟ ಊರ್ಮಿಳೆ ತಂಗಿ ಮಾಂಡವಿಗೆ

“ಚಿಃ! ಕಡಲ್ಗಿಗರ್ ಪನಿಗೇಂ ಪ್ರದರ್ಶನಂ?
ದೇವರ ತಪಕ್ಕಿದಿರ್ ನಮ್ಮದೊರ್ ತೃಣಮಲ್ತೆ;
ಸಂತೋಷ ಸಮಯದೊಳ್
ತೋರ್ಪುದನ್ಮಚಿತವೆಮ್ಮ ಕಷ್ಟಮಂ;
ತನ್ನ ತಾನು ಇಲ್ಲಗೈವುದೆ ಎಲ್ಲ ಸಾಧನೆಗೆ ಕೊನೆಯ ಗುರಿ;
ಮೇಣ್ತಪಕ್ಕೆ ಕೇಳ್, ತಂಗೆ, ಪರಮಪ್ರಯೋಜನಂ!”

ಹೇಳುವ ಮಾತುಗಳು ಇಂದಿಗೂ ಬಹು ಆಯಾಮದಲ್ಲಿ ಚರ್ಚೆಗೆ ಒಳಪಟ್ಟಿವೆ. ಮಹಾಕವಿ ಕುವೆಂಪುರವರು ಊರ್ಮಿಳೆಯ ಮುಖವಾಣಿಯಾಗಿ ಹೀಗೆ ನುಡಿಯುವ ಪ್ರಸಂಗವಾಗಲಿ, ಊರ್ಮಿಳಾದೇವಿಯನ್ನು ದೇವತಾ ಪ್ರತಿಮೆಯಾಗಿ ಮೂರ್ತೀಭವಿಸುವಲ್ಲಿ ಯಶಸ್ವಿಯಾಗುವಂತೆ ಯಾವ ಪ್ರತ್ಯೇಕ ಸಮಗ್ರ ಕಾವ್ಯವನ್ನು ರಚಿಸುವ ಗೋಜಿಗೆ ಹೋಗಿಲ್ಲ. ಕಾರಣ ಸಂಯಮ ತಪಸ್ಸಿನ ಮಹಿಮಾಜ್ಯೋತಿಯಾದ ಊರ್ಮಿಳೆಯ ಪಾತ್ರವೈಭವ ಧ್ವನಿವ್ಯಂಜಿತವಾಗುವಂತೆ ವಿಸ್ತೃತ ವರ್ಣನೆಯಿಂದಾಗದು. ಅದು ಏನಿದ್ದರು ಆ ಪಾತ್ರವು ಮೌನವನ್ನು ಮಾತಿನಿಂದ, ಸಂಯಮವನ್ನು ದುಂದುಗಾರಿಕೆಯಿಂದ ಸಾಧಿಸುವುದಾದರೂ ಹೇಗೆ? ಎಂಬ ಸಾತ್ವಿಕ ಪ್ರಶ್ನೆ ಹುಟ್ಟುವುದು ಸಹಜವಾದುದು.

ಊರ್ಮಿಳಾ ಪಾತ್ರದ ಮಹತ್ತೇನಿದ್ದರೂ ರಾಮಾಯಣ ಮಹಾಗೀತದಲ್ಲಿ ಶ್ರುತಿಯಂತೆ ಅಶ್ರುತವಾಗಿರುವುದರಲ್ಲಿಯೆ ಹೊರತು, ಆಕೆಯನ್ನೇ ಮುನ್ನೆಲೆಯ ಪಾತ್ರವನ್ನಾಗಿ ಚಿತ್ರಿಸಿದ್ದಲ್ಲಿ, ಕಾವ್ಯ ನಾಯಕಿ ಸೀತೆಯ ಪಾತ್ರಕ್ಕೆ ಪರ್ಯಾಯ ನಾಯಕಿಯನ್ನಾಗಿ ಊರ್ಮಿಳೆಯನ್ನು ಕಟೆದು ನಿಲ್ಲಿಸುವಲ್ಲಿನ ಸವಾಲಿಯಿಂಥ ಸೀತೆಯ ವ್ಯಕ್ತಿತ್ವ ಮತ್ತು ಊರ್ಮಿಳೆಯ ವ್ಯಕ್ತಿತ್ವವನ್ನು ಹಾಗೂ ಅವರವರ ವೈಯಕ್ತಿಕ ವ್ಯಕ್ತಿ ವಿಶೇಷತೆಯನ್ನು ಜತನದಿಂದ ಕಾಪಿಟ್ಟುಕೊಳ್ಳುವುದರ ಮೂಲಕ ಸ್ಪರ್ಧಿ ಮತ್ತು ಪ್ರತಿ ಸ್ಪರ್ಧಿಯ ಭಾವನೆಗಳಿಗೆ ಅವಕಾಶವನ್ನು ನೀಡದಿರುವುದು ಕಾವ್ಯದ ನಿಜವಾದ ಅಂತಸತ್ವದ ಆಶಯವಾಗಿದೆ. ಈ ದೃಷ್ಟಿಯಿಂದ ಕವಿ ಕುವೆಂಪು ಅವರ ಸ್ತ್ರೀ ಪಾತ್ರ ಸೃಷ್ಟಿಯು ವಿಭಿನ್ನ ವಿಶೇಷ ಮತ್ತು ಅನನ್ಯ ಶ್ರೇಷ್ಠವಾದುದಾಗಿವೆ.

ಖ್ಯಾತ ವಿಮರ್ಶಕರಾದ ಶ್ರೀ ಎಸ್.ಎನ್.ಎಸ್.ಎಚ್ ಅವರ ವಿಮರ್ಶೆಯ ಮಾತು ಯಾವ ಕಾಲಕ್ಕೂ ಪ್ರಸ್ತುತವಾಗಿವೆ. ಊರ್ಮಿಳೆ ತಪಸ್ವಿನಿಯೆ ಆಗಿರಬೇಕೊ ಅಥವಾ ಬರಿಯ ವಿರಹಿಣಿಯಾಗಿರಬೇಕೊ ಅಥವಾ ಇನ್ನೂ ಮುಂದುವರೆದು ತ್ಯಾಗಜೀವಿ ಸಹಿಷ್ಣುತೆಯ ಪ್ರತೀಕ ಪ್ರತಿರೋಧವನ್ನು ನೀಡದ ನಿರುಮ್ಮಳ ಪಾತ್ರ ಎಂಬುದಕ್ಕೆ ವಾಲ್ಮೀಕಿಗಳೇ ಸೂಚ್ಯ ಉತ್ತರವಿತ್ತಿದ್ದಾರೆ.

ಈ ಹಿಂದೆ ಚರ್ಚಿಸಿದಂತೆ ತೊಂಡಿ ಸಂಪ್ರದಾಯದ ಜಾನಪದ ಕಥೆಗಳೂ ಈಕೆಯನ್ನು ತಪಸ್ವಿನಿಯನ್ನಾಗಿಯೆ ಕಲ್ಪಿಸಿದೆ. ಮೌಖಿಕ ಕಥನದ ಒಂದು ಕಥೆಯ ಪ್ರಕಾರ, ಊರ್ಮಿಳೆ ಲಕ್ಷ್ಮಣನಿಗಾಗಿ ಬಿಸಿನೀರು ಹಿಡಿದು ಬಾಗಿಲಿಗೆ ಬಂದವಳು ರಾಮ ವನವಾಸದ ಸುದ್ದಿ ತಿಳಿದು ಹಾಗೆಯೇ ಅಲ್ಲೇ ಪತಿಯ ಆಗಮನಕ್ಕಾಗಿ ಕಾದು ನಿಲ್ಲುತ್ತಾಳೆ. ವನವಾಸದಿಂದ ಬಂದ ಪತಿಯ ಕಾಲಿಗೆ ಅದೇ ತಂಬಿಗೆಯ ಬಿಸಿ ನೀರೆರೆದು ಎದುರುಗೊಳ್ಳುತ್ತಾಳೆ. ಮತ್ತೊಂದು ಕಥೆಯ ಪ್ರಕಾರ, ಆಕೆ ವನವಾಸ ವಾರ್ತೆ ತಿಳಿದಾಗ ಸ್ನಾನ ಮಾಡುತ್ತಿರುತ್ತಾಳೆ. ಪತಿ ಹಿಂಬರುವ ತನಕ ಅಲ್ಲೆ ಒದ್ದೆ ಮಡಿಯಲ್ಲಿರುತ್ತಾಳೆ. ವಾಸ್ತವವಾಗಿಯೂ ಅವಳು ಗೃಹತಪಸ್ವಿನಿಯೆಯಾಗಿಯೇ ಕಂಡರಿಸಿದ್ದಾಳೆ. ರಾಮಾಯಣದಲ್ಲಿ ಬರಬಹುದುದಾದ ಇಬ್ಬರು ಕಥಾ ನಾಯಕಿಯರ ಪಾತ್ರಗಳ ಶ್ರೇಷ್ಠಯ ಚರ್ಚೆ ಹಾಗೂ ಪ್ರತಿಸೃಷ್ಟಿಯ ಗೊಂದಲಕ್ಕೆ ಆಸ್ಪದವನ್ನು ನೀಡಿಲ್ಲ.

ರಾಮಾಯಣದ ಪ್ರತಿಯೊಂದು ಮಹಿಳಾ ಪಾತ್ರವು ವಿಶಿಷ್ಟವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಊರ್ಮಿಳೆಯ ಸ್ವಗತ ಮನವನ್ನು ಚಿಂತನೆಗೆ ಹಚ್ಚುವಂತಿದೆ. ಮಹಾತ್ಯಾಗಿ ಊರ್ಮಿಳೆಯ ಬಗ್ಗೆ ಪುರಾಣದಲ್ಲಿ ಸಿಗುವ ಮಾಹಿತಿಗಳು ಬಹಳ ಕಡಿಮೆ. ಅತಿ ವಿಶೇಷವಾದ, ವಿಚಿತ್ರವಾದ ಸಂಗತಿಗಳು ಊರ್ಮಿಳೆ ಬಗ್ಗೆ ತಿಳಿದು ಬಹಳ ಖೇದವೆನಿಸಿತು. ಬಹಳ ಸೊಗಸಾದ ಕಥಾನಿರೂಪಣೆ.

ಇಂತಹ ಅಪರೂಪದ ಮಹಿಳಾ ಪಾತ್ರಕ್ಕೆ ಜೀವತುಂಬಿ ಊರ್ಮಿಳೆಯ ಸ್ವಗತವು ಇಂದಿನ ಹೆಣ್ತನದ ಅಭಿವ್ಯಕ್ತಿಯೂ ಆಗಿದೆ ಎಂಬುದನ್ನು ಈ ಕೃತಿ ಸಮರ್ಥವಾಗಿ ದಾಖಲಿಸಿದೆ. ಇಂತಹ ಮಹತ್ವದ ಚಿಂತನೆಗೆ ಸಹೃದಯರನ್ನು ತೊಡಗಿಸಿದ ಹಿರಿಯರಾದ ವಿಜಯಾ ಭಟ್ ಅವರಿಗೆ ಅಭಿನಂದನೆಗಳು. ಮುಂಬರುವ ದಿನಗಳಲ್ಲಿ ಇನ್ನು ಅತ್ಯುತ್ತಮ ಕೃತಿಗಳು ಹೊರಬರಲಿ ಎಂದು ಮನದಾಳದಿಂದ ಆಶಿಸುವೆ.

About The Author

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

ಮೈತ್ರೇಯಿಣಿ ಗದಿಗೆಪ್ಪಗೌಡರ  ಮೂಲತಃ ಹುಬ್ಬಳ್ಳಿಯವರು. ಸದ್ಯ ಬೆಳಗಾವಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕೆಲವು ಹನಿಗವಿತೆ ಮತ್ತಿತರ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ