ಆಸ್ಟ್ರೇಲಿಯಾ ದೇಶದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನಪಂಗಡಗಳು ಎಷ್ಟೋ ಸಾವಿರ ವರ್ಷಗಳಿಂದ ಈ ನಾಡಿನಲ್ಲಿ ಬದುಕಿ ಬಾಳಿ, ನೆಲ-ಜಲ-ಪ್ರಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಸುಮಾರು ಅರವತ್ತು ಸಾವಿರ ವರ್ಷಗಳಿಗೂ ಹೆಚ್ಚಿನ ಕಾಲದಿಂದ ಈ ಖಂಡದಲ್ಲಿ ಅಬೊರಿಜಿನಲ್ ಜನರ ಇರುವಿಕೆಯ ಬಗ್ಗೆ ಅಧಿಕೃತ ಪುರಾವೆಗಳಿವೆ. ಬ್ರಿಟಿಷರ ವಸಾಹತು ಸ್ಥಾಪನೆಯಿಂದ ಆರಂಭವಾಗಿ ಇಲ್ಲಿನ ಮೂಲನಿವಾಸಿಗಳ ನಿರ್ಮೂಲನೆಗೆ ನಡೆದ ಪ್ರಯತ್ನಗಳು, ಅವರ ಅತ್ಯಂತ ಕ್ರೂರ ಆಡಳಿತದೊಡನೆ ಮುಂದುವರೆದು ಅನ್ಯಾಯಗಳ ನಡುವೆಯೂ ಬದುಕುಳಿದ ಅಬೊರಿಜಿನಲ್ ಜನರ ಜೀವನಗಾಥೆ ಇನ್ನೂ ಜ್ವಲಂತವಾಗಿದೆ.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಪತ್ರ
ನಾವೆಲ್ಲ NAIDOC ವಾರದಾಚರಣೆಯಲ್ಲಿದ್ದೀವಿ. ಈ ವರ್ಷ NAIDOC ಹಬ್ಬದ ಸಂದೇಶ ‘ಗೆಟ್ ಅಪ್, ಸ್ಟಾಂಡ್ ಅಪ್, ಶೋ ಅಪ್’ ಎನ್ನುವುದು. ಹೋದ ವರ್ಷವೆ ಥೀಮ್ ನಿರ್ಧರಿತವಾದರೂ ಯಾರಿಗೂ ಆಗ ಈ ಸಂದೇಶಕ್ಕೆ ನಿಜವಾಗಿಯೂ ಇಷ್ಟಾದರೂ ನ್ಯಾಯ ಸಲ್ಲುತ್ತದೆ ಎನ್ನುವ ಅಂದಾಜು ಇರಲಿಲ್ಲ. ಕಳೆದ ಜೂನ್ ತಿಂಗಳಿಂದ ಪ್ರತಿವಾರವೂ ಹೊಸ ಸರ್ಕಾರದ ನಡೆ-ನುಡಿಗಳಿಂದ ‘ಎದ್ದು ನಿಲ್ಲಿ ಕಾಣಿಸಿಕೊಳ್ಳಿ’ ಎಂಬುದು ಕಾರ್ಯರೂಪಕ್ಕೆ ಬರುತ್ತಿದೆ. ಚುನಾವಣೆ ಸಮಯದಲ್ಲಿಯೇ ಆಗಿನ ವಿರೋಧ ಪಕ್ಷದ ನಾಯಕತ್ವವು ದೇಶದೊಳಗೆ ಮೂಲನಿವಾಸಿ ಜನರ ನಾಯಕರು, ವಿಚಾರವಾದಿಗಳು, ಚಿಂತಕರ ಜೊತೆ ಸಂವಾದ ನಡೆಸಿ, ಅವರ ಜೊತೆ ಸೇರಿ ದೇಶದ ಪ್ರಗತಿಗಾಗಿ ಕೆಲಸ ಮಾಡುವುದಾಗಿ ಹೇಳಿದ್ದರು. ಅಧಿಕಾರ ಸ್ಥಾನಕ್ಕೆ ಚುನಾಯಿತರಾದ ಕೂಡಲೆ ಅದನ್ನು ನೆನಪಿಸಿಕೊಂಡು ವಾರದಿಂದ ವಾರಕ್ಕೆ ತಮ್ಮ ನಡೆನುಡಿಯಲ್ಲಿ ಕೊಟ್ಟ ಮಾತಿಗೆ ಸರ್ಕಾರವು ಬದ್ಧರಾಗಿರುವುದು ಕಾಣಿಸುತ್ತಿದೆ. ಎಲ್ಲಾ ಗುರುತರ ಸ್ಥಳಗಳಲ್ಲಿ, ಸರ್ಕಾರಿ ಕಟ್ಟಡಗಳ ಮೇಲೆ ಯೂನಿಯನ್ ಜಾಕ್ ಧ್ವಜದೊಂದಿಗೆ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರ ಬಾವುಟಗಳು ತಲೆಯೆತ್ತಿ ನಿಂತಿವೆ. ಸಿಡ್ನಿ ನಗರದ ಮಧ್ಯೆ ಇರುವ ಹೆಸರುವಾಸಿ ದೊಡ್ಡ ಸೇತುವೆ ನೆತ್ತಿಯ ಮೇಲೆ ಅಬೊರಿಜಿನಲ್ ಜನರ ಬಾವುಟ ಹಾರಾಡುತ್ತಿದೆ. ಎಲ್ಲೆಡೆಯಲ್ಲಿಯೂ NAIDOC ವಾರ ಹಬ್ಬದ ಪ್ರಸ್ತಾಪವಾಗಿದೆ. ಮೂಲನಿವಾಸಿ ಜನರ ಪರವಾಗಿ ಸಣ್ಣ ಸಣ್ಣ ಬದಲಾವಣೆಗಳು ಕಾಣಿಸಿಕೊಳ್ಳುತ್ತಿರುವುದು ಸಮಾಧಾನ ತರುತ್ತಿದೆ. ಕಡೆಗೂ ಅವರಿಗೆ ಸಲ್ಲಬೇಕಾದ ಸಾಮಾಜಿಕ ನ್ಯಾಯ ಸಲ್ಲುವ ಕಾಲ ಬಂದಿತೇನೋ ಎನ್ನುವ ಆಶಾಭಾವ ಗಟ್ಟಿಯಾಗುತ್ತಿದೆ.
ಆಸ್ಟ್ರೇಲಿಯಾ ದೇಶದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನಪಂಗಡಗಳು ಎಷ್ಟೋ ಸಾವಿರ ವರ್ಷಗಳಿಂದ ಈ ನಾಡಿನಲ್ಲಿ ಬದುಕಿ ಬಾಳಿ, ನೆಲ-ಜಲ-ಪ್ರಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಸುಮಾರು ಅರವತ್ತು ಸಾವಿರ ವರ್ಷಗಳಿಗೂ ಹೆಚ್ಚಿನ ಕಾಲದಿಂದ ಈ ಖಂಡದಲ್ಲಿ ಅಬೊರಿಜಿನಲ್ ಜನರ ಇರುವಿಕೆಯ ಬಗ್ಗೆ ಅಧಿಕೃತ ಪುರಾವೆಗಳಿವೆ. ಬ್ರಿಟಿಷರ ವಸಾಹತು ಸ್ಥಾಪನೆಯಿಂದ ಆರಂಭವಾಗಿ ಇಲ್ಲಿನ ಮೂಲನಿವಾಸಿಗಳ ನಿರ್ಮೂಲನೆಗೆ ನಡೆದ ಪ್ರಯತ್ನಗಳು, ಅವರ ಅತ್ಯಂತ ಕ್ರೂರ ಆಡಳಿತದೊಡನೆ ಮುಂದುವರೆದು ಅನ್ಯಾಯಗಳ ನಡುವೆಯೂ ಬದುಕುಳಿದ ಅಬೊರಿಜಿನಲ್ ಜನರ ಜೀವನಗಾಥೆ ಇನ್ನೂ ಜ್ವಲಂತವಾಗಿದೆ. ಅದು ಅದ್ಯಾವ ಕಾಲದಲ್ಲೋ ನಡೆದಿದ್ದ, ಮರೆತುಹೋದ ವಿಷಯವಲ್ಲ ಎಂಬುದನ್ನು ಮತ್ತೆ ನೆನಪಿಸಿದ್ದು ಹೋದ ವಾರ ತಾನೆ ಬಿಡುಗಡೆಯಾದ ೨೦೨೧ರ ಅಧಿಕೃತ ಜನಗಣತಿ ವಿವರಗಳು. ಆಗಸ್ಟ್ ೨೦೨೧ರಲ್ಲಿ ನಡೆದ ಜನಗಣತಿ ಪ್ರಕಾರ ಅಧಿಕೃತವಾಗಿ ದಾಖಲಾಗಿರುವ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನಸಂಖ್ಯೆ ೩.೨ %. ಹೋದ ಸೆನ್ಸಸ್ ನಲ್ಲಿ ಅದು ಕೇವಲ ಶೇಕಡ ೩ ಇತ್ತು. ಇಸವಿ ೨೦೧೧ ರ ಜನಗಣತಿಯಲ್ಲಿ ಅವರ ಸಂಖ್ಯೆ ಕೇವಲ ಶೇಕಡ ೨. ೫ ಇತ್ತು (ಐದೂವರೆ ಲಕ್ಷ). ಈಗ ದೇಶದ ಒಟ್ಟೂ ೨೫ ಮಿಲಿಯನ್ ಜನಸಂಖ್ಯೆಯಲ್ಲಿ ಅವರು ಎಂಟು ಲಕ್ಷಕ್ಕೇರಿದ್ದು ಸದ್ಯ ಅದು ಮೇಲಕ್ಕೇರುತ್ತಿದೆ ಎನ್ನುವುದೇ ಬಹಳ ಉತ್ಸಾಹ ತರುವ ವಿಷಯ. ಏಕೆಂದರೆ ಹತ್ತೊಂಭತ್ತನೆ ಶತಮಾನದುದ್ದಕ್ಕೂ ಅವರ ಜನಾಂಗ ನಿರ್ಮೂಲನೆಗಾಗಿ ಅವ್ಯಾಹತ ಪ್ರಯತ್ನಗಳು ನಡೆದಿದ್ದವು. ಬಿಳಿಯರ ಆಳ್ವಿಕೆಯಿಂದ ಇಂದಿಗೂ ಮುಖ್ಯವಾಹಿನಿಯಾಗಿ ಉಳಿದಿರುವ ಆಂಗ್ಲೊ-ಯುರೋಪಿಯನ್ ಸಂಸ್ಕೃತಿ ಪ್ರಾಬಲ್ಯದಿಂದ ಇಲ್ಲಿನ ಮೂಲನಿವಾಸಿಗಳಿಗೆ ಬಹಳಷ್ಟು ಅನ್ಯಾಯಗಳಾಗಿವೆ. ಎಲ್ಲದರ ನಡುವೆ ಸಲ್ಲುವ ಮೂಲನಿವಾಸಿಗಳ ಅಂತಃಶಕ್ತಿ ಇಷ್ಟವಾಗುತ್ತದೆ.
NAIDOC ಹಬ್ಬದ ವಾರದಲ್ಲಿ ನೋವಿಗಿಂತಲೂ ನಲಿವಿನ ಆಚರಣೆಗೆ ಒತ್ತು ಕೊಡಲಾಗುತ್ತದೆ. ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರ ಸಾಧನೆಗಳನ್ನು ಗುರುತಿಸಿ ಸನ್ಮಾನ ಸಮಾರಂಭಗಳು ನಡೆಯುತ್ತಿವೆ. ಹಿಂದಿನ ಪೀಳಿಗೆಯ ಹಾಡುಗಾರರು, ಚುಕ್ಕಿ-ಕಲೆ ನಿಷ್ಣಾತರೊಂದಿಗೆ ಹೊಸ ತಲೆಮಾರಿನ ಸಂಗೀತ ಬ್ಯಾಂಡುಗಳು, ಹಿಪ್ ಹಾಪ್ ಜೊತೆ ಮೇಳೈಸಿದ ಅಬೊರಿಜಿನಲ್ ವಾದ್ಯಗಳು, ಅವರ ಕಥೆಗಳನ್ನು ಹೇಳುವ ನೃತ್ಯಗಳ ಹೊಸ ವೈವಿಧ್ಯತೆಗಳ ತಂಡಗಳು, ಚಲನಚಿತ್ರಗಳು, ಟಿವಿ ಸರಣಿಗಳು, ಟಾಕ್ ಷೋ, ದಿಗ್ಭ್ರಮೆ ಹುಟ್ಟಿಸುವ ವೇಗದಲ್ಲಿ ಬೆಳೆಯುತ್ತಿರುವ ಆರ್ಟಿಸ್ಟ್ ಮತ್ತು ಕ್ರೀಡಾಪಟುಗಳ ಪ್ರಪಂಚ, ಏನೆಲ್ಲಾ ನಡೆಯುತ್ತಿವೆ! ಒಂದು ಕಡೆ ಇಂತೆಲ್ಲಾ ಇರುವ ಹೊಸ ಪೀಳಿಗೆಯ, ಹೊಸ ನೀರು ಹರಿಯುತ್ತಿರುವ ಆತ್ಮವಿಶ್ವಾಸದ ಅಬೊರಿಜಿನಲ್ ಪ್ರಪಂಚವಿದ್ದರೆ ಇನ್ನೊಂದೆಡೆ ಅದನ್ನು ಅರಗಿಸಿಕೊಳ್ಳಲಾರದೆ, ನಂಬಲಾರದೆ ತಿರಸ್ಕರಿಸುವ ಬಿಳಿಯರ ಮುಖ್ಯವಾಹಿನಿ ಸಮಾಜವಿದೆ. ಇಪ್ಪತ್ತೊಂದನೆ ನವೀನ ಸಮಾಜದಲ್ಲಿ ನಮಗಿನ್ನೂ ಸ್ಪಷ್ಟವಾಗಿ ಕಾಣಿಸುವುದು, ಕೇಳಿಸುವುದು, ‘ಅಬೊರಿಜಿನಲ್ ಅಂದರೆ ಅರೆಬೆತ್ತಲು, ಸಂಸ್ಕೃತಿಹೀನ, ಪಶುಸಮಾನರಾದ ಕಪ್ಪು ಜನರು.’ ಕಪ್ಪು ಮೈಬಣ್ಣ ಕಂಡರೆ ದೂರ ಸರಿಯುವ ಬಿಳಿಯರು ಎಲ್ಲೆಲ್ಲೂ ಕಾಣಸಿಗುತ್ತಾರೆ. ಈ ತಿರಸ್ಕೃತ ಮನೋಭಾವನೆಯ ಸಂಕುಚಿತ ಚೂರಿಯಲುಗು ತಿವಿದ ಗೀರುಗಳೊಡನೆ ಬದುಕುತ್ತಿರುವ, ಬೆಳೆಯುತ್ತಿರುವ ಅಬೊರಿಜಿನಲ್ ಪ್ರಪಂಚಕ್ಕೆ ಇನ್ನೊಂದಷ್ಟು ಜೈಕಾರ ಹಾಕಲು ನನ್ನಂಥ ವಲಸೆಗಾರ ಜನರು NAIDOC ವಾರಕ್ಕಾಗಿ ಕಾಯುತ್ತಿರುತ್ತೀವಿ.
ನಮ್ಮ ರಾಣಿರಾಜ್ಯದ ರಾಜಧಾನಿ ಬ್ರಿಸ್ಬೇನ್ ನಗರದ Musgrave ಪಾರ್ಕ್ ನಲ್ಲಿ NAIDOC ವಾರದ ಶುಕ್ರವಾರದಂದು ನಡೆಯುವ ಫ್ಯಾಮಿಲಿ ಫನ್ ಡೇ ಭಾರಿ ಪ್ರಮಾಣದಲ್ಲಿ ನಡೆಯುತ್ತದೆ. ಸಾವಿರಾರು ಜನರು ಬಂದು ಸೇರುತ್ತಾರೆ. ವಿಧವಿಧ ಕಾರ್ಯಕ್ರಮಗಳು, ಭಾಷಣಗಳು, ಆಟೋಟಗಳು, ಪ್ರದರ್ಶನಗಳು, ಕಲಾವಸ್ತುಗಳು, ಆಹಾರ, ಉಡುಪು, ಎಂಬಂತೆ ಮಳಿಗೆಗಳಿರುತ್ತವೆ. ಇಳಿ ಮಧ್ಯಾಹ್ನದ ತನಕ ನಡೆಯುವ ಕಲಾಪಗಳನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ಆದರೆ ಕಳೆದೆರಡು ವರ್ಷಗಳಂತೆ ಈ ಬಾರಿಯೂ ಕೋವಿಡ್-೧೯ ಭಯದಲ್ಲಿ ಮುಖತಃ ನಡೆಯುವ ಈ ಭಾರಿ ಮಟ್ಟದ ಸಮಾವೇಶವನ್ನು ರದ್ದುಗೊಳಿಸಿ, ಸ್ಥಳೀಯವಾಗಿ ಚಿಕ್ಕ ಪುಟ್ಟ ಕಾರ್ಯಕ್ರಮಗಳನ್ನು ನಡೆಸಲು ಅನುಮತಿಯಿದೆ. ಕಲೆ, ಆರೋಗ್ಯ, ಶಿಕ್ಷಣ, ಸಂಗೀತ, ಅಬೊರಿಜಿನಲ್ ಜನರ ಲೋಕದೃಷ್ಟಿಯ ಬಗ್ಗೆ ಸಂವಾದ, ಸಂಸ್ಕೃತಿ ತಿಳುವಳಿಕೆ – ಹೀಗೆ ಕಾರ್ಯಕ್ರಮಗಳು ನಡೆಯುತ್ತಿವೆ.
ಬ್ರಿಸ್ಬೇನ್ನಿನ ಕೊರೆಯುವ ಚಳಿರಾತ್ರಿಗಳಲ್ಲಿ ಟಿವಿ ಮುಂದೆ ಕಂಬಳಿ ಹೊದ್ದು ಮೈ ಚಾಚಿಕೊಂಡು ನಾವು ದೇಶೀಯ ಮಟ್ಟದ ನ್ಯಾಷನಲ್ ಇಂಡೀಜಿನಸ್ ಟೆಲಿವಿಷನ್ (NITV) ಯಲ್ಲಿ ಪ್ರಸಾರವಾದ NAIDOC ವಾರದ ವಿಶೇಷ ಕಾರ್ಯಕ್ರಮಗಳನ್ನು ವೀಕ್ಷಿಸಿದೆವು. ಅವಲ್ಲಿ ಕೆಲವನ್ನು ಹೆಸರಿಸಲೇ ಬೇಕು. Araatika Rise Up!, Firestarter-The Story of Bangarra ಮತ್ತು ನಾಲ್ಕು-ಭಾಗಗಳ True Colours ಸರಣಿ. Araatika Rise Up! ಹೇಳಿದ್ದು ದಶಕಗಳಿಂದಲೂ ಅಬೊರಿಜಿನಲ್ ಕ್ರೀಡಾಪಟುಗಳು ಅನುಭವಿಸುತ್ತಿದ್ದ ಜನಾಂಗೀಯ ದ್ವೇಷದ ನೋವು ಮತ್ತು ಅದರ ನಿವಾರಣೆಯ ಹೆಜ್ಜೆಯಾಗಿ ಕ್ರೀಡಾಪಟುಗಳು ತಮ್ಮದೇ ಆದ ವಿಶಿಷ್ಟ ಅಬೊರಿಜಿನಲ್ ನೃತ್ಯವನ್ನು ರೂಪಿಸಿದ್ದು. ಈ ನೃತ್ಯವನ್ನು ಆಟದ ಆರಂಭಿಕ ಸಂಕೇತವಾಗಿ ಅಳವಡಿಸಿಕೊಂಡು ತಮ್ಮ ಸಂಸ್ಕೃತಿಯನ್ನು ಹೆಮ್ಮೆಯಿಂದ ತೋರಿಸಿ ವೀಕ್ಷಕರಲ್ಲಿ ಅರಿವು ಮೂಡಿಸುವ ಪ್ರಯತ್ನವೂ ಆಗಿದೆ. Firestarter-The Story of Bangarra ಡಾಕ್ಯುಮೆಂಟರಿ ಹೇಳಿದ್ದು ಸಿಡ್ನಿ ನಗರದ ವಿಶ್ವವಿಖ್ಯಾತ ನೃತ್ಯ ಕಂಪನಿ Bangarra ಹುಟ್ಟಿ ಬೆಳೆದ ಕಥೆ. Bangarra ಎಂದರೆ wiradjuri ಅಬೊರಿಜಿನಲ್ ಭಾಷೆಯಲ್ಲಿ ಬೆಂಕಿ ಮಾಡುವುದು (fire starter). ಈ ನೃತ್ಯ ಕಂಪನಿಗೀಗ ನಲವತ್ತು ವರ್ಷಗಳು. ೧೯೮೦ರ ದಶಕದಲ್ಲಿ ಆಸ್ಟ್ರೇಲಿಯಕ್ಕೆ ಬಂದ ಆಫ್ರಿಕನ್-ಅಮೆರಿಕನ್ ಮಹಿಳೆಯೊಬ್ಬರು ಇನ್ನಿಬ್ಬರು ಮಹಿಳೆಯರ ಜೊತೆ ಸೇರಿಕೊಂಡು ಈ ಕಂಪನಿಯನ್ನು ಸ್ಥಾಪಿಸಿದ್ದು. ಅದನ್ನು ಬೆಳೆಸಿದ್ದು ಒಬ್ಬ ಸಹೋದರ ತ್ರಯರು. ಈ ಮೂವರು ಅಬೊರಿಜಿನಲ್ ಸಹೋದರರು Bangarra ವನ್ನು ಬೆಳೆಸುತ್ತಾ ಅಬೊರಿಜಿನಲ್ ಜನರ ಕಥೆಗಳನ್ನು ನೃತ್ಯರೂಪಕದಲ್ಲಿ ಹೇಳಿದರು. ಮೂವರಲ್ಲಿ ಒಬ್ಬನಿಗೆ ಸಂಗೀತದ ಪ್ರತಿಭೆ, ಇನ್ನೊಬ್ಬನಿಗೆ ನೃತ್ಯ ಮಾಡುವ ದೈತ್ಯ ಪ್ರತಿಭೆ, ಮತ್ತೊಬ್ಬನಿಗೆ ಅಪೂರ್ವ ಕಲ್ಪನಾ ಶಕ್ತಿಗಳಿದ್ದವು. ಮೂವರ ಮೇಳದಿಂದ ಇಂದು Bangarra ಅತ್ಯದ್ಭುತ ನೃತ್ಯರೂಪಕ ತಂಡವಾಗಿದೆ. ಇನ್ನು ನಾಲ್ಕು-ಭಾಗಗಳ True Colours ಕ್ರೈಂ ಕಥೆಯ ಸರಣಿಯನ್ನು ಪೂರ್ತಿಯಾಗಿ ಅಬೊರಿಜಿನಲ್ ತಂಡವೊಂದು ತಯಾರಿಸಿದ್ದು, ಸರಣಿಯಲ್ಲಿ ಇಂಗ್ಲಿಷ್ ಭಾಷೆಯೊಂದಿಗೆ ಸ್ಥಳೀಯ ಅಬೊರಿಜಿನಲ್ ಭಾಷೆಗಳನ್ನೂ ಉಪಯೋಗಿಸಿ ಕಥೆ ಹೇಳುವುದರ ಮೂಲಕ ಇಪ್ಪತ್ತೊಂದನೆ ಶತಮಾನದ ಅಬೊರಿಜಿನಲ್ ಜೀವನವನ್ನು ತೋರಿಸಿದ್ದಾರೆ.
ಅಬೊರಿಜಿನಲ್ ಆಸ್ಟ್ರೇಲಿಯಾ ಬೆಳೆಯುತ್ತಿದೆ. ತನ್ನನ್ನು ತುಳಿದಿದ್ದ, ಅದುಮಿದ್ದ ಅನ್ಯಾಯಗಳ ನಡುವೆಯೂ ಸಾಗಿರುವ ಈ ಬೆಳವಣಿಗೆಯನ್ನು ನೋಡುತ್ತಾ, ಅದರ ಒಂದು ಕಿರು ಹನಿಯಾಗಿ ನನ್ನಂಥ ವಲಸೆಗಾರರಿದ್ದೀವಿ ಎನ್ನುವುದು ಬಹಳ ಹೆಮ್ಮೆಯ ವಿಷಯ. ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರ ಆಸ್ಟ್ರೇಲಿಯಾ ಹೀಗೇ ಬೆಳೆಯಲಿ, ಹಿನ್ನೆಡೆಯಿಲ್ಲದ ಆತ್ಮವಿಶ್ವಾಸದಿಂದ ತನ್ನ ವಿಶೇಷ ಅಸ್ಮಿತೆಯನ್ನು ತೋರುತ್ತ ತಲೆಯೆತ್ತಿ ನಿಂತು ಪ್ರಪಂಚಕ್ಕೆಲ್ಲಾ ಪ್ರಖರ ಬೆಳಕಿನಿಂದ ಕಾಣಿಸಿಕೊಳ್ಳಲಿ ಎಂದು ಈ NAIDOC ವಾರದಲ್ಲಿ ಹಾರೈಸೋಣ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.