ದೃಷ್ಟಿ ನಶಿಸಿದವರು ತಾವಿರುವ ಪರಿಸರದಲ್ಲಿ ಸ್ವತಂತ್ರವಾಗಿ ಬದುಕಲು ಈ ನಾಯಿ ಮಾಡುವ ಸಹಾಯ ಬೆಲೆಕಟ್ಟಲಾರದ್ದು. ಹಾಗಾಗಿಯೇ ಗೈಡ್ ಡಾಗ್ ಎಲ್ಲರಿಗೂ ಎಟುಕುವ ವರವಲ್ಲ. ಅದು ದುಬಾರಿ, ಅಪರೂಪ ಮತ್ತು ಅಪಾರ ಮೌಲ್ಯದ್ದು. ಅಲ್ಲಾವುದ್ದೀನ್ ದೀಪವನ್ನು ಉಜ್ಜಿದಾಗ ಭೂತ ಹೊರ ಚಿಮ್ಮಿ ಬಂದು ಕೊಟ್ಟ ಮೂರು ಅವಕಾಶಗಳನ್ನು ಅವನು ಎಷ್ಟು ಜೋಪಾನವಾಗಿ ಬಳಸಬೇಕಿತ್ತೋ ಅದಕ್ಕಿಂತಲೂ ಮುತುವರ್ಜಿಯಿಂದ ನಮಗೆ ಲಭಿಸುವ ಗೈಡ್ ಡಾಗ್ ಅನ್ನು ಜತನ ಮಾಡಬೇಕು. ಈ ಗೈಡ್ ಡಾಗ್ ಮಾಡುವ ಕೆಲಸವನ್ನು ಗಮನಿಸಿದಾಗ ಮಿತ್ರನಿಗಿಂತಲೂ ಅದು ಮಹಾ ಸಜ್ಜನ, ಅತ್ಯುತ್ತಮ ಪ್ರಜೆ ಎಂದೆನಿಸಿಬಿಡುತ್ತದೆ
ಡಾ.ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯ ಅಂಕಣ

 

ವಯಸ್ಸಾದ ಮೇಲೆ, ಕಣ್ಣುದೃಷ್ಟಿ ಇನ್ನೂ ಕ್ಷೀಣಿಸಿದಾಗ ಗೈಡ್ ಡಾಗಿಗೇ ಶರಣು ಎಂದು ಆಗಾಗ ನಾನು ಗೊಣಗಿಕೊಳ್ಳುವುದುಂಟು. ಹಿಂದೊಮ್ಮೆ ಪ್ರತಿವರ್ಷವೂ ಪಠ್ಯ ಬೋಧನೆ, ವಿದ್ಯಾರ್ಥಿಗಳ ಅಸೈನ್ಮೆಂಟ್ ಓದಿ ಅವನ್ನು ಮಾರ್ಕ್ ಮಾಡುವುದು, ಕಂಪ್ಯೂಟರ್ ಪರದೆ ನೋಡುವುದು, ಅಕಡೆಮಿಕ್ ಅಧ್ಯಯನಕ್ಕೆ ಸಂಬಂಧಿಸಿದ ನೂರೆಂಟು ಲೇಖನಗಳನ್ನ ಓದುವುದು ಸಾಕಾಗಿಹೋಗಿತ್ತು. ಕಣ್ಣುಗಳಿಗೆ ಸುಸ್ತಾಗಿಹೋಗಿತ್ತು. ಈ ಎಲ್ಲವನ್ನೂ ಬಿಟ್ಟುಬಿಟ್ಟು ಆಸ್ಟ್ರೇಲಿಯನ್ ಔಟ್ ಬ್ಯಾಕ್ ನಲ್ಲೆಲ್ಲೋ ಒಂದಷ್ಟು ಭೂಮಿ ಕೊಂಡು ಅಲ್ಲೊಂದು ಟೆಂಟ್ ಹೊಡೆದುಕೊಂಡು ಇದ್ದು ನಲಿನಲಿಯುವ ಹೂ ರಾಶಿ, ಬುಟ್ಟಿ ತುಂಬಾ ತರಕಾರಿ ಹಣ್ಣು ಬೆಳೆಯುವ ನಿರ್ಧಾರವನ್ನೂ ಮಾಡಿದ್ದೆ.

ಆದರೆ ಭವಬಂಧನವನ್ನು, ಐಹಿಕ ಪ್ರಪಂಚದ ಆಗುಹೋಗುಗಳನ್ನು ಸುಮ್ಮನೆ ಹಾಗೇ ಬಿಟ್ಟುಬಿಟ್ಟು ಹೊರಟುಬಿಡಲು ಸುಲಭವೇ?! ಕಟ್ಟಿಕೊಂಡ ಪ್ರತಿದಿನದ ಬದುಕಿಗೊಂದು ಸಮರ್ಪಕ ಉತ್ತರವನ್ನು, ಸಮಜಾಯಿಷಿಯನ್ನು ಕೊಟ್ಟನಂತರವೇ ಬಿಡು ಮನಸ್ಸಿನಿಂದ ಈ ದಡವನ್ನು ದಾಟಿ ಆ ದಡಕ್ಕೆ ಹೋಗಲು ಸಾಧ್ಯ ಎನ್ನುವ ಅರಿವು ತಲೆ ಮೇಲೆ ಫಟ್ ಎಂದು ಮೊಟಕುತ್ತಿತ್ತು.

ವರ್ಷಗಳು ಕಳೆಯುತ್ತಿರುವಂತಲೇ, ಸದ್ಯದಲ್ಲೇ ಪೂರ್ತಿ ಕುರುಡುತನ ಆವರಿಸಿ ಗೈಡ್ ಡಾಗ್ ಮನೆಗೆ ಬರಲಿದೆ ಎಂದು ಹೇಳುತ್ತಲೇ ದಿನಗಳು ಸರಿದು ಹೋಗುತ್ತಿವೆ. ಗೈಡ್ ಡಾಗ್ ಅಗತ್ಯವಿದೆ ಎಂದು ಅರ್ಜಿ ಹಾಕಿಕೊಳ್ಳಲೂ ಕೂಡ ಇನ್ನೂ ಅರ್ಹತೆ ಸಿಕ್ಕಿಲ್ಲ. ಅರ್ಥಾತ್, ಇನ್ನೂ ಅಷ್ಟೊಂದು ಕುರುಡುತನ ಬಂದಿಲ್ಲ!!

ದೃಷ್ಟಿ ಕನಿಷ್ಠ ಮಾತ್ರ ಇದ್ದು ದಿನನಿತ್ಯದ ಕೆಲಸಕಾರ್ಯಗಳಿಗೆ ನೆರವು ಬೇಕಾದವರಿಗೆ ಮತ್ತು ಕುರುಡರಿಗೆ ಅಂತಹ ಅರ್ಹತೆ ಇದೆ. ಅವರೂ ಕೂಡ ಅರ್ಜಿ ಹಾಕಿಕೊಂಡು ವೈಟಿಂಗ್ ಲಿಸ್ಟ್ ಸೇರಿ ವರ್ಷಾನುಗಟ್ಟಲೆ ಕಾಯಬೇಕು. ಅವಕ್ಕೇನೋ ಡಿಮ್ಯಾಂಡ್ ತುಂಬಾ ಇದೆ; ಆದರೆ ಗೈಡ್ ಡಾಗ್ ಸಂಖ್ಯೆ ಕಡಿಮೆ. ಚಿಕ್ಕ ವಯಸ್ಸಿನಿಂದಲೇ ಅವನ್ನು ಗೈಡ್ ಡಾಗ್ ಆಗಲು ತರಬೇತಿ ಕೊಟ್ಟು ಬೆಳೆಸಲು ಸಾಕಷ್ಟು ಹಣ ಖರ್ಚಾಗುತ್ತದೆ. ಹಾಗಾಗಿ ಪೂರ್ಣಪ್ರಮಾಣದ ತರಬೇತಿ ಪಡೆದು ಅಂತಿಮ ಪರೀಕ್ಷೆಯಲ್ಲಿ ಪಾಸಾದ ಕೆಲವೇ ನಾಯಿಗಳಿಗೆ ನೂರಾರು ಜನ ಅರ್ಜಿದಾರರು ಕಾಯುತ್ತಿರುತ್ತಾರೆ. ಬೇಕೆಂದರೂ ಈ ಜನ್ಮದಲ್ಲಿ ನಿನಗೆ ಆ ನಾಯಿ ಸಿಕ್ಕೋದಿಲ್ಲ ಬಿಡು ಅಂತ ಮನೆಯವರೆಲ್ಲಾ ಚುಡಾಯಿಸುತ್ತಾರೆ.

ಗೈಡ್ ಡಾಗ್ (Guide Dog) ನಮಗೆ ಬೇಕೆಂದ ತಕ್ಷಣ ಸಿಕ್ಕುವ ಮುದ್ದು ಸಾಕು ನಾಯಿಯಂತೂ ಅಲ್ಲ. ಸಾಕುಪ್ರಾಣಿಗಳ ಕೇಂದ್ರಗಳಲ್ಲಿ ಅದು ಇರುವುದಿಲ್ಲ. ಅದಕ್ಕೊಂದು ವಿಶೇಷ ಸ್ಥಾನಮಾನವಿದೆ. ದೃಷ್ಟಿಮಾಂದ್ಯತೆ ಇರುವವರ ಪರಾವಲಂಬಿತನವನ್ನು ಕಡಿಮೆ ಮಾಡಿ ಅವರು ಸ್ವತಂತ್ರವಾಗಿ ಬದುಕಲು ಸಹಾಯ ಮಾಡುವ ಬಹಳ ಗೌರವದ ಕೆಲಸವನ್ನು ಗೈಡ್ ಡಾಗ್ ಮಾಡುತ್ತದೆ. ಜನರಲ್ಲಿ ಈ ವೃತ್ತಿಪರ ನಾಯಿಯ ಬಗ್ಗೆ ಗೌರವ ಮತ್ತು ಆದರವಿದೆ. ಬೇರೆಯವರ ಮೇಲೆ ಅವಲಂಬಿಸುವುದನ್ನು ಸ್ವಲ್ಪವೂ ಇಷ್ಟಪಡದ ಈ ವ್ಯಕ್ತಿ-ಕೇಂದ್ರಿತ ಸಮಾಜಕ್ಕೆ ಗೈಡ್ ಡಾಗ್ ಒಂದು ದೊಡ್ಡ ವರ.

ದೃಷ್ಟಿ ನಶಿಸಿದವರು ತಾವಿರುವ ಪರಿಸರದಲ್ಲಿ ಸ್ವತಂತ್ರವಾಗಿ ಬದುಕಲು ಈ ನಾಯಿ ಮಾಡುವ ಸಹಾಯ ಬೆಲೆಕಟ್ಟಲಾರದ್ದು. ಹಾಗಾಗಿಯೇ ಗೈಡ್ ಡಾಗ್ ಎಲ್ಲರಿಗೂ ಎಟುಕುವ ವರವಲ್ಲ. ಅದು ದುಬಾರಿ, ಅಪರೂಪ ಮತ್ತು ಅಪಾರ ಮೌಲ್ಯದ್ದು. ಅಲ್ಲಾವುದ್ದೀನ್ ದೀಪವನ್ನು ಉಜ್ಜಿದಾಗ ಭೂತ ಹೊರ ಚಿಮ್ಮಿ ಬಂದು ಕೊಟ್ಟ ಮೂರು ಅವಕಾಶಗಳನ್ನು ಅವನು ಎಷ್ಟು ಜೋಪಾನವಾಗಿ ಬಳಸಬೇಕಿತ್ತೋ ಅದಕ್ಕಿಂತಲೂ ಮುತುವರ್ಜಿಯಿಂದ ನಮಗೆ ಲಭಿಸುವ ಗೈಡ್ ಡಾಗ್ ಅನ್ನು ಜತನ ಮಾಡಬೇಕು.

ನಾಯಿ ಮನುಷ್ಯರ ಮಿತ್ರ ಎನ್ನುವುದು ಸರ್ವೇಸಾಧಾರಣ ಮಾತು. ಈ ಗೈಡ್ ಡಾಗ್ ಮಾಡುವ ಕೆಲಸವನ್ನು ಗಮನಿಸಿದಾಗ ಮಿತ್ರನಿಗಿಂತಲೂ ಅದು ಮಹಾ ಸಜ್ಜನ, ಅತ್ಯುತ್ತಮ ಪ್ರಜೆ ಎಂದೆನಿಸಿಬಿಡುತ್ತದೆ.

ಅವುಗಳ ಸಂಭಾವಿತನ, ಶಿಷ್ಟಾಚಾರವನ್ನು ನೋಡಿದರೆ ಬಂದು ಸ್ವಲ್ಪ ನಮ್ಮ ಪಕ್ಕದಮನೆಯವರಿಗೆ ಕ್ಲಾಸ್ ತೊಗೊಳ್ಳಿ ಅಂತ ಹೇಳೋಣ ಅನ್ನಿಸುವ ಮಾತು ನಾಲಿಗೆ ತುದಿಯಲ್ಲೇ ನಿಲ್ಲುತ್ತದೆ. ನಾಯಿ ಪಕ್ಕ ನಿಂತಿರುವ ಅದರ ಮನುಷ್ಯ ಅವಲಂಬಿಯನ್ನು ನೋಡಿ ನಾವು ಸ್ವಲ್ಪ ಹುಷಾರಾಗೇ ನಡೆದುಕೊಳ್ಳಬೇಕು, ಕಣ್ಣದೃಷ್ಟಿ ಇಲ್ಲದಿದ್ದರೇನಂತೆ ಅವರ ಕಿವಿ ಚುರುಕಾಗೆ ಕೆಲಸ ಮಾಡುತ್ತದೆ ಎನ್ನುವುದು ನೆನಪಾಗುತ್ತದೆ.

ನಾನು ನಾಯಿ ಮುಂದೆ ನಿಂತು ಒಹ್, ಯೂ ಆರ್ ಸೋ ಲವ್ಲೀ, ಹ್ಯಾಂಡ್ ಸಮ್, ಸೊ ವೆಲ್ ಬಿಹೇವಡ್, ಎಂದೆಲ್ಲ ಹೊಗಳುತ್ತಿದ್ದರೆ ಅವುಗಳ ಯಜಮಾನರೆಲ್ಲರ ಮುಖಗಳೂ ಕಮಲದಂತೆ ಅರಳುವುದಿಲ್ಲ. ಅಲ್ಲೋ ಇಲ್ಲೋ ಮಂದಹಾಸ ಕಾಣುತ್ತದೆ. ಕೆಲವೊಮ್ಮೆ ಮುಖ ಗಂಟಿಕ್ಕುವುದೂ, ಇದ್ಯಾವ ಶನಿಕಾಟವೋ ಅನ್ನೋ ಥರದ ಮುಖವೂ ಇರುತ್ತದೆ. ಶನಿಕಾಟ ನಿವಾರಣೆಗೆಂದೇನೋ ಎಂಬಂತೆ ಗೈಡ್ ಡಾಗ್ ಬಗ್ಗೆ ಪೋಸ್ಟರ್ ಗಳು ಬಂದವು. “ದಯವಿಟ್ಟು ನಮಗೆ ತೊಂದರೆ ಕೊಡಬೇಡಿ. ನಾವು ಕರ್ತವ್ಯದಲ್ಲಿ ನಿರತರಾಗಿರುವುದನ್ನು ಗೌರವಿಸಿ. ನಿರಾತಂಕವಾಗಿ ನಮ್ಮ ಕೆಲಸವನ್ನು ಮಾಡಲು ನಮ್ಮನ್ನು ನಮ್ಮ ಪಾಡಿಗೆ ಬಿಡಿ.” ಅವನ್ನು ಓದಿದ ಮೇಲೆ ಈ ನಾಯಿಗಳನ್ನು ನೋಡದರೆ ಗುಡ್ ಮಾರ್ನಿಂಗ್ ಎಂದು ಹೇಳಿ ಗೌರವ ಸೂಚಿಸುವ ಅಭ್ಯಾಸವಾಯ್ತು.

ಇಷ್ಟಕ್ಕೂ ಗೈಡ್ ನಾಯಿಯನ್ನು ಮುದ್ದಾಡುವುದು, ಅದರ ಬಳಿ ತಮ್ಮ ದಿನನಿತ್ಯದ ಕಷ್ಟಸುಖ, ನೋವುನಲಿವು, ಗೋಳು ತೋಡಿಕೊಳ್ಳುವುದು ಅದರ ಯಜಮಾನ ಅವಲಂಬಿಗೆ ಮಾತ್ರ ಇರುವ ಹಕ್ಕು. ಅವರ ಅದೃಷ್ಟಕ್ಕೆ ಕರುಬುತ್ತಾ ಆ ಹಕ್ಕನ್ನು ಸಾರ್ವಜನಿಕ ಹಕ್ಕು ಎಂದು ಜಾರಿಗೊಳಿಸಿದರೆ ಎಷ್ಟು ಚೆನ್ನ ಅನ್ನೋದು ಒಮ್ಮೊಮ್ಮೆ ಬೆಳಗಿನ ಜಾವದ ಕನಸಾಗಿಬಿಡುತ್ತದೆ! ಪ್ರಾಣಿದಯಾ ಸಂಘದ ಸದಸ್ಯತ್ವ ಇರುವುದರಿಂದ ಕನಸನ್ನು ಕಂಡ ಪಾಪಕ್ಕೆ ಪಶ್ಚಾತ್ತಾಪ ಪರಿಹಾರವುಂಟು ಎಂಬ ಸಮಾಧಾನವಿದೆ.

ಅಷ್ಟೆಲ್ಲ ಆದರೂ ಕಿಡಿಗೇಡಿ ಕನಸುಗಳು ಆಲೋಚನೆಗಳು ದಾಂಧಲೆ ಮಾಡುತ್ತಲೇ ಇವೆ. ಶಾಲೆಗಳಲ್ಲಿ ಗೈಡ್ ನಾಯಿ ಕೂಡ ಮಕ್ಕಳಿಗೆ ಶಿಷ್ಟಾಚಾರದ ನಡವಳಿಕೆಯನ್ನ ಹೇಳಿಕೊಡುವಂಥ ಅವಕಾಶವನ್ನು ಕಲ್ಪಿಸಿಕೊಟ್ಟು ಶಾಲೆಗಳಲ್ಲಿ ಅವುಗಳನ್ನು ಕೆಲಸಕ್ಕೆ ನೇಮಿಸಿಕೊಂಡರೆ ಹೇಗೆ ಅನ್ನೋದು ಅಂಥಾ ಒಂದು ಆಲೋಚನೆ. ಅದರಿಂದ ಮಕ್ಕಳಿಗಾಗುವ ಆನಂದವನ್ನು ಕಣ್ಮುಚ್ಚಿಕೊಂಡು ಊಹಿಸಿಕೊಂಡರೆ ನಮ್ಮ ನಮ್ಮ ಹೇಳಹೆಸರಿಲ್ಲದ ಅತಿಸಾಮಾನ್ಯ ಪ್ರಪಂಚಗಳಲ್ಲಿಯೂ ಕೂಡ ಸಣ್ಣಪುಟ್ಟ ಸುಖವುಂಟು ಅನ್ನೋದಂತೂ ಗ್ಯಾರಂಟಿ.

ಭವಬಂಧನವನ್ನು, ಐಹಿಕ ಪ್ರಪಂಚದ ಆಗುಹೋಗುಗಳನ್ನು ಸುಮ್ಮನೆ ಹಾಗೇ ಬಿಟ್ಟುಬಿಟ್ಟು ಹೊರಟುಬಿಡಲು ಸುಲಭವೇ?! ಕಟ್ಟಿಕೊಂಡ ಪ್ರತಿದಿನದ ಬದುಕಿಗೊಂದು ಸಮರ್ಪಕ ಉತ್ತರವನ್ನು, ಸಮಜಾಯಿಷಿಯನ್ನು ಕೊಟ್ಟನಂತರವೇ ಬಿಡು ಮನಸ್ಸಿನಿಂದ ಈ ದಡವನ್ನು ದಾಟಿ ಆ ದಡಕ್ಕೆ ಹೋಗಲು ಸಾಧ್ಯ ಎನ್ನುವ ಅರಿವು ತಲೆ ಮೇಲೆ ಫಟ್ ಎಂದು ಮೊಟಕುತ್ತಿತ್ತು.

ಹೊರಾಂಗಣ ಪರಿಸರದಿಂದ, ನಿಸರ್ಗದಿಂದ, ಪ್ರಾಣಿಗಳ ಒಡನಾಟದಿಂದ ಮಾನಸಿಕ ಆರೋಗ್ಯಕ್ಕೆ ತುಂಬಾ ಒಳಿತಾಗುವುದು ಎಂದು ಅಧ್ಯಯನಗಳು ಹೇಳುತ್ತಿರುವುದರಿಂದ ಶಾಲೆಗಳಲ್ಲಿ ಹಸಿರು-ಕಲಿಕೆ, ಮತ್ತು ಸಾಕುಪ್ರಾಣಿಗಳಿದ್ದರೆ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ತೋರುತ್ತಾರೆ ಅನ್ನೋದು ನಿಜವಾದ ಮಾತು. ಆದ್ದರಿಂದ ನಮ್ಮ ಸಜ್ಜನ, ಸಂಭಾವಿತ, ಸುಶಿಕ್ಷಿತ ಪ್ರಜೆ ಮತ್ತು ಅತ್ಯುತ್ತಮ ಮಟ್ಟದ ಪೂರ್ತಿ ತರಬೇತಿ ಪಡೆದ ಗೈಡ್ ನಾಯಿಗೂ ಕೂಡ ಟೀಚರ್ ಪಟ್ಟ ಕೊಡಬಹುದು. ಕೆಲ ಪರ್ಯಾಯ ಶಾಲೆಗಳಲ್ಲಿ ಪ್ರಾಣಿಪಕ್ಷಿಗಳೂ ಕೂಡ ಮಕ್ಕಳ ಜೊತೆ ಸ್ವತಂತ್ರದಿಂದ ಓಡಾಡುತ್ತಿರುತ್ತವೆ ಅನ್ನೋದನ್ನ ನಾನೇ ಕಣ್ಣಾರೆ ನೋಡಿ ಆನಂದಿಸಿ ಅನುಭವಿಸಿ ಶಭಾಷ್ ಎಂದಿರುವುದರಿಂದ, ಸಾಕಷ್ಟು ವೈಜ್ಞಾನಿಕ ಪುರಾವೆಗಳಿರುವುದರಿಂದ ಕೂಡ ಇಂತಹ ಶಿಫಾರಸುಗಳನ್ನ ಮಾಡಲು ಧೈರ್ಯವಿದೆ.

ಹೀಗೆ ಒಂದು ದಿನ ರೈಲಿನಲ್ಲಿ ಸಂಚಾರ ಮಾಡುತ್ತಿದ್ದೆ. ನಿಲ್ದಾಣವೊಂದರಲ್ಲಿ ಗೈಡ್ ಡಾಗ್ ಮತ್ತು ಅದರ ಯಜಮಾನಿ ಹತ್ತಿಕೊಂಡರು. ಅವರು ನಿಧಾನವಾಗಿ ತಮ್ಮ ಕೋಲನ್ನು ಬಳಸುತ್ತಾ ಅಂಗವಿಕಲರು, ಗರ್ಭಿಣಿ ಮತ್ತು ಅನಾರೋಗ್ಯ ಪೀಡಿತರಿಗೆಂದೇ ಮೀಸಲಿರುವ ಬಾಗಿಲ ಹತ್ತಿರದ ಖುರ್ಚಿಯಲ್ಲಿ ಕೂತರು. ಅವರ ಪಕ್ಕದಲ್ಲಿ ನೆಲದ ಮೇಲೆ ಶಿಸ್ತಾಗಿ ಗೈಡ್ ನಾಯಿ ಕೂತಿತು. ಅವರ ಹಿಂದಿನ ಖುರ್ಚಿಯಲ್ಲಿ ನಾನು ಕೂತಿದ್ದೆ. ಅಚಾನಕ್ಕಾಗಿ ಅವರ ಮಾತುಕತೆಯನ್ನು ಕೇಳಿಸಿಕೊಳ್ಳುವ ಸಂದರ್ಭ ಬಂದುಬಿಟ್ಟಿತು.

ನಾಯಿಯ ಹೆಸರು ಆಸ್ಕರ್. ವಯಸ್ಸು ಏಳು. ಅವರಿಬ್ಬರೂ ಆಗಷ್ಟೇ ರೀಡಿಂಗ್ ಕ್ಲಬ್ ಭೇಟಿ ಮುಗಿಸಿ ಮನೆಗೆ ಮರಳುತ್ತಿದ್ದರು. ರೀಡಿಂಗ್ ಕ್ಲಬ್ಬೇ??!!! ಆಕೆಗೆ ಅಂಧತ್ವ ಇರುವುದು ಎದ್ದು ‘ಕಾಣುತ್ತಿತ್ತು’. ಕಪ್ಪು ಕನ್ನಡಕ, ಅಂಧರ ಕೋಲು ಮತ್ತು ಜೊತೆಗಿರೋ ಗೈಡ್ ನಾಯಿ!! ಆಕೆ ರೈಲು ಹತ್ತುವಾಗ ಆಚೆ ರೈಲು ಸಿಬ್ಬಂದಿ ಕೂಡ ನಿಂತಿದ್ದು ಆಕೆಯನ್ನು ಗಮನಿಸಿದ್ದರು. ಪ್ಲಾಟ್ ಫಾರ್ಮ್ ಮತ್ತು ರೈಲಿನ ಬಾಗಿಲಿಗೂ ನಡುವೆ ಸಣ್ಣ ಅಂತರವಿರುವುದರಿಂದ ಅದರ ಬಗ್ಗೆ ಪದೇ ಪದೇ ಸೂಚನೆ ಕೊಡುತ್ತಲೇ ಇರುತ್ತಾರೆ.

ಅವಳಿಗೆ ಸುಮಾರು ನಲವತ್ತರ ಆಚೆಈಚೆ ವಯಸ್ಸು ಇರಬಹುದು. ಅವಳ ಮಾತಿನಿಂದ ಓದಿನ ಗುಂಪಿಗೆ ಸೇರಿದವರೆಂದು ತಿಳಿಯಿತು. ಅಂದಹಾಗೆ ಅವಳೊಬ್ಬಳೇ ನಾಯಿಯೊಂದಿಗೆ ಮಾತನಾಡುತ್ತಿದ್ದದ್ದು, ಆಗಾಗ್ಗೆ ಆಸ್ಕರ್ ಅವರ ಕಡೆ ನೋಡುತ್ತಿತ್ತು. ಅವಳ ಮಾತುಗಳೆಲ್ಲವೂ ಅವನಿಗೆ ಅರ್ಥವಾಗುತ್ತಿತ್ತು ಎಂದು ಕಾಣುತ್ತದೆ. ಆಸ್ಕರ್ ವೈಲ್ಡ್ ಆರಾಧಕರೇನೋ ಅನ್ನಿಸಿತು. ಆದರೆ ಮಾತಿನಲ್ಲಿ ಆ ಇಂಗ್ಲಿಷ್ ನಾಟಕಕಾರನ ಹೆಸರು ಸುಳಿಯಲಿಲ್ಲ.

ಸರಿ ಮಾತು ಆಹಾರದ ಕಡೆ ಹೊರಳಿತು. “ಆಸ್ಕರ್, ಅವರು ಮಾಡಿದ್ದ ಕೇಕ್ ತುಂಬಾ ರುಚಿಯಾಗಿತ್ತು ಅಲ್ಲವೇ, ನೀನೂ ಕೂಡ ಸ್ವಲ್ಪ ತಿಂದೆ, ಅದೃಷ್ಟವಂತ ನೀನು”, ಅಂದಳಾಕೆ. ಆಗೊಮ್ಮೆ ಮಾತ್ರ ಆಸ್ಕರನಿಗೆ ಸುಮ್ಮನಿರಲು ಆಗಲೇ ಇಲ್ಲ. ಚಿಕ್ಕದಾಗಿ ನಾಯಿ ಭಾಷೆಯಲ್ಲಿ ‘ಹೌದು ಹೌದು’ ಅಂತು. ಅವನು ಬೊವ್ ಬೊವ್ ಅಂದಿದ್ದೆ ತಡ ಹಲವಾರು ತಲೆಗಳು ಅವನತ್ತ ತಿರುಗಿದವು. ತಕ್ಷಣ ಜಾಗರೂಕನಾಗಿ ಆಸ್ಕರ್ ಗಂಭೀರ ಮುಖ ಧರಿಸಿ ಲಂಡನ್ ನಗರದ ರಾಣಿಯ ಸಿಪಾಯಿಗಳು ಬೊಂಬೆಗಳಂತೆ ನಿಂತಿರುತ್ತಾರಲ್ಲ ಹಾಗೆ ಕಡೆದಿಟ್ಟ ಶಿಲ್ಪದಂತೆ ಮೌನ ಧರಿಸಿಬಿಟ್ಟಿತು. ಆಕೆ ಮಾತು ಮುಂದುವರೆಸಿದರು.

ಮುಂದಿನ ಹತ್ತು ನಿಮಿಷಗಳಲ್ಲಿ ಆ ಹೆಂಗಸು ಮೆಲು ದನಿಯಲ್ಲಿ ‘ಅವರ’ ಬಗ್ಗೆ ಮಾತನಾಡಿದಳು. ಅವರ ಹೇರ್ ಸ್ಟೈಲ್ ಹೇಗಿತ್ತು, ಮನೆ ಒಪ್ಪಓರಣವಾಗಿತ್ತೇ, ಫರ್ನಿಚರ್ ಬೆಲೆಬಾಳುವಂಥದ್ದೇ, ಎಂದೆಲ್ಲ ಆಸ್ಕರನನ್ನು ಕೇಳಿದಳು. ‘ಅವರು’ ಹಾಕಿದ ಕಂಟ್ರಿ ಮ್ಯೂಸಿಕ್ ಹಾಡುಗಳು ಅದೆಷ್ಟು ಉತ್ಸಾಹದಿಂದ ಇತ್ತು ಅಲ್ಲವೇ, ‘ಅವರ’ ಕೈಹಿಡಿದುಕೊಂಡು ಡಾನ್ಸ್ ಮಾಡಬೇಕು ಎಂದೆನಿಸಿತ್ತು, ಎನ್ನುತ್ತಾ ಅವಳು ನಿಧಾನವಾಗಿ ಬಹಳ ಮೃದುವಾಗಿ ನಿಟ್ಟುಸಿರುಬಿಟ್ಟಳು. ಆಸ್ಕರ್ ಇಷ್ಟೇಇಷ್ಟು ಎಂಬಂತೆ ಅವಳ ಕಾಲ್ಗಳ ಬಳಿಗೆ ಸರಿದು ಸ್ವಲ್ಪ ಅವಳಿಗೆ ಒರಗಿದಂತೆ ಮಾಡಿತು. ಅವಳು ಅದೇ ಮೆಲು ದನಿಯಲ್ಲಿ “ಥಾಂಕ್ಯೂ ಮೈ ಡಾರ್ಲಿಂಗ್, ನನಗೆ ಗೊತ್ತು, ನನ್ನ ಅಂತರಂಗದ ಮಾತುಗಳು ನಿನಗೆ ಪೂರ್ತಿ ಅರ್ಥವಾಗುತ್ತವೆ”, ಅಂದಳು. “ಪುನಃ ಅವರನ್ನು ಭೇಟಿಯಾಗಲು ಒಂದು ತಿಂಗಳಿಡೀ ಕಾಯಬೇಕು, ಆದರೆ ಅವರೇ ಮಾಡಿದ ಕೇಕ್ ತಿನ್ನಲು ಸಿಗುವುದಿಲ್ಲ, ನಿನಗೆ ಗೊತ್ತಿದೆಯಲ್ಲವೇ”, ಅಂದಳು. ಬಹುಶಃ ಬುಕ್ ಕ್ಲಬ್ ಸದಸ್ಯರು ತಿಂಗಳಿಗೊಮ್ಮೆ ಒಬ್ಬೊಬ್ಬರ ಮನೆಯಲ್ಲಿ ಸೇರುತ್ತಾರೇನೋ ಎಂದುಕೊಂಡೆ.

“ಆಸ್ಕರ್ ನನ್ನ ಮುದ್ದು ಗೆಳೆಯನೇ (ಮೈ ಬಡ್ಡಿ), ನಿಜ ಹೇಳು, ನಾನು ಮಾತನಾಡಿದಾಗಲೆಲ್ಲ ಅವರು ನನ್ನ ಕಡೆ ತಿರುಗುತ್ತಿದ್ದರೇ, ನನ್ನ ಬಗ್ಗೆ ಸ್ವಲ್ಪವಾದರೂ ಅವರಿಗೆ ಆಸಕ್ತಿ ಇದೆಯೆಂಬ ಕುರುಹು ನಿನಗೆ ಕಂಡಿತೇ”, ಎಂದು ನಾಯಿಯ ಬಳಿ ವಿಚಾರಿಸಿದಳು. ಆಸ್ಕರ್ ಪುನಃ ಅವಳ ಮುಖವನ್ನು ನೋಡಿತು. ಅವಳ ಏಕಮುಖ ಮಾತುಕತೆಯನ್ನು ಕೇಳುತ್ತಿದ್ದ ಆಗಂತುಕಳಾದ ನಾನು ಗೊತ್ತಿಲ್ಲದೆಯೇ ಅವರ ಕನಸಿನ ಲೋಕದ ಕೇಳುಗಳಾಗಿದ್ದೆ. ಆಸ್ಕರ್ ಮತ್ತು ನನ್ನದು ಇಬ್ಬರ ಕಿವಿಗಳೂ ನಿಮಿರಿತ್ತು. ಆದರೆ ಆಸ್ಕರ್ ಮಾತನಾಡದೆ ಸುಮ್ಮನೆ ತಿರುಗಿ ಯಜಮಾನಿ ಮುಖವನ್ನೇ ದೃಷ್ಟಿಸಿತು. ಅವನು ಹೂಂ ಅಂದನೇ ಅಥವಾ ಉಹುಂ ಅಂದನೇ? ಉತ್ತರವೇನೆಂಬುದುತಿಳಿಯದೆ ಪೇಚಾಡಿದೆ. ಜೊತೆಗೊಂದಿಷ್ಟು ಕುತೂಹಲವೂ ಆಯ್ತು – ಆಸ್ಕರ್, ‘ಇದೆ ನನ್ನ ಉತ್ತರ’ ಎನ್ನುವಂತೆ ಹಾಗೆ ಪದೇ ಪದೇ ಅವಳ ಮುಖವನ್ನ ನೋಡಿದರೆ ಅದು ಅವಳಿಗೆ ತಿಳಿಯುತ್ತದೆಯೇ?

ರೈಲು ನಿಂತಿತು. ಅವರಿಬ್ಬರೂ ಇಳಿದುಹೋದರು. ಪ್ರಶ್ನೆಗಳು ಹಾಗೆ ಉಳಿದಿವೆ.