ಸಮಾಜವು ಯಾವುದೋ ಸಂಕಟದಲ್ಲಿ ಬೇಯುತ್ತಿರುವಾಗ ಅಥವಾ ಸಂಭ್ರಮದಲ್ಲಿ ಮುಳುಗಿರುವಾಗ, ಹುಸಿನಂಬಿಕೆಗಳ ಹಿಂದೆ ಬಿದ್ದು ಕಣ್ಕಾಪು ಕಟ್ಟಿದ ಕುದುರೆಯಂತೆ ಓಡುತ್ತಿರುವಾಗ, ವಿವೇಕದಿಂದ ವರ್ತಿಸುವ ಕೆಲವೇ ಜನರನ್ನು ನಾವು ಕಾಣುತ್ತೇವೆ. ಅಂತಹವರು, ಪ್ರವಾಹದ ಅಬ್ಬರವೇನೇ ಇರಲಿ, ತನ್ನ ಸಾಮರ್ಥ್ಯವೆಷ್ಟಿದೆಯೋ ಅದರ ಸಂಪೂರ್ಣ ವಿನಿಯೋಗದೊಂದಿಗೆ, ಒಳಿತೊಂದನ್ನೇ ಮಾಡುವ ಪಣ ತೊಟ್ಟಿರುತ್ತಾರೆ. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ.
ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆಲ್ಲ ಜೀವನದಲ್ಲಿ ಹೊಸ ಬದಲಾವಣೆಗಳು ಆಗುತ್ತವೆ. ಆದರೆ ಕೊರೊನಾ ಸೋಂಕು ಕೂಡ ಜೀವನದಲ್ಲಿ ಎಷ್ಟೊಂದು ಬದಲಾವಣೆಗಳನ್ನು ತಂದುಬಿಟ್ಟಿದೆ ಎಂಬುದನ್ನು ಗಮನಿಸಿದಾಗ ಅಚ್ಚರಿಯೆನಿಸುತ್ತದೆ. ಬಹುಶಃ ಪ್ರತೀ ಬದಲಾವಣೆಯೂ ಮತ್ತೊಂದು ಪರಿವರ್ತನೆಗೆ ಪೂರಕವೆನಿಸುತ್ತದೆ. ಜಗತ್ತನ್ನೇ ಅಲ್ಲಾಡಿಸಿಬಿಟ್ಟ ಸೋಂಕು, ವೈಯಕ್ತಿಕ ಜೀವನ ಶೈಲಿಯನ್ನೂ ಎಷ್ಟೊಂದು ಬದಲಾಯಿಸಿದೆ. ಅದೇ ರೀತಿ, ಜನರ ಯೋಚನೆಯ ಶೈಲಿಯೂ ಬದಲಾಗಿದೆ. ಅಷ್ಟೇಕೆ, ಈ ಸೋಂಕು ಎಂಬುದು ಏರಿಳಿತಗಳಿಗೆ ವೇಗವರ್ಧಕದಂತೆ ಗೋಚರಿಸುತ್ತಿದೆ.
ಸಂಬಂಧಗಳ ನಡುವಿನ ಗ್ರಹಿಕೆಯು ಈಗ ಮುಂಚಿನಂತಿಲ್ಲ. ನನ್ನ ಬೊಗಸೆಗೆ ಈ ದಿನವೊಂದನ್ನು ದೇವರು ಕರುಣಿಸಿದ್ದಾರೆ ಎಂಬ ಕೃತಜ್ಞತೆಯೊಂದಿಗೆ ಮುಂಜಾನೆ ಎದ್ದ ತಕ್ಷಣವೇ, ಈ ದಿನದ ಅವಕಾಶವನ್ನು ನಾನು ಹೇಗೆ ವಿನಿಯೋಗಿಸಬೇಕು ಎಂದು ಮಾಡುವ ನಿರ್ಣಯಗಳಲ್ಲಿಯೂ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಅದೇನೂ ಅಷ್ಟು ಸಕಾರಾತ್ಮಕವಾಗಿ ಗೋಚರಿಸುತ್ತಿಲ್ಲ. ಅನ್ ಲಾಕ್ ನ ಸಂದರ್ಭದಲ್ಲಿ ಈ ಮಾತು ಹೆಚ್ಚು ಪ್ರಸ್ತುತ ಎನಿಸುತ್ತದೆ. ಅನಿಶ್ಚಿತ ಸೋಂಕಿನ ದೆಸೆಯಿಂದ ಮುರುಟಿಕೊಂಡ ಮನಸ್ಸನ್ನು ಸಂತೈಸಲು ನಡೆಸುವ ಪ್ರಯತ್ನ ಒಂದುಕಡೆ. ಕಳೆದುಕೊಂಡ ಸಂಬಂಧಗಳ ಬಂಧವನ್ನು ಬಿಡಿಸಿಕೊಂಡು ಬದುಕು ಸಾಗಿಸಲು ಯತ್ನಿಸುವವರು ಮತ್ತೊಂದು ಕಡೆ. ಏನೇ ಆಗಲಿ, ಜೀವನವನ್ನು ಇಂದೇ ಅನುಭವಿಸಿಬಿಡಬೇಕು ಎಂಬ ಧಾವಂತ ಕೂಡ ಮಗದೊಂದು ಕಡೆ ಕಾಣಿಸುತ್ತದೆ.
ಕೊರೊನಾ ಸೋಂಕಿನ ಅಟ್ಟಹಾಸವನ್ನು ನೋಡುವಾಗಲೆಲ್ಲ ಜಗತ್ತನ್ನು ಕಾಡಿದ ಪ್ಲೇಗ್ ಸೋಂಕಿನ ನೆನಪಾಗುತ್ತದೆ. ಎಷ್ಟೋ ಕಥೆ ಕಾದಂಬರಿಗಳಲ್ಲಿ ಪ್ಲೇಗ್ ಸೋಂಕಿನ ಸಾಂದರ್ಭಿಕ ಉಲ್ಲೇಖಗಳನ್ನು ಸರಳವಾಗಿ ಓದುತ್ತ ಮುಂದೆ ಸಾಗಿದ್ದೇವೆ. ಯಾವುದೋ ಒಂದು ಕುಟುಂಬದ ಕತೆಯ ನಡುವೆ ಪಾತ್ರವೊಂದು ಪ್ಲೇಗ್ ಸೋಂಕಿಗೆ ಬಲಿಯಾಗಿ, ಅಲ್ಲಿಯೇ ಮುಕ್ತಾಯಗೊಂಡು ಬಿಡುವುದನ್ನು ಎಷ್ಟೊಂದು ಸಲೀಸಾಗಿ ಓದಿಬಿಟ್ಟಿದ್ದೇವೆ. ಎಸ್.ಎಲ್. ಭೈರಪ್ಪನವರು ಬಾಲ್ಯದಲ್ಲಿ ಪ್ಲೇಗ್ ನ ಸಂಕಟಗಳನ್ನು ಕಂಡುಂಡವರು. ಗೃಹಭಂಗ ಕಾದಂಬರಿಯಲ್ಲಿ ಅದರ ಚಿತ್ರಣವಿದೆ. ಶ್ರೀನಿವಾಸ ವೈದ್ಯರ ಹಳ್ಳ ಬಂತು ಹಳ್ಳ ಕೃತಿಯಲ್ಲಿಪ್ಲೇಗ್ ಸೋಂಕಿನ ನೋವುಗಳ ಚಿತ್ರಣವಿದೆ. ಜಗತ್ತನ್ನೇ ತಲ್ಲಣಿಸಿದ ಸೋಂಕಿನ ಕುರಿತು ವಿಶ್ವಸಾಹಿತ್ಯದಲ್ಲಿ ಪ್ಲೇಗ್ ಸ್ಥಾನ ಪಡೆದುಕೊಂಡಿದೆ.
ಆದರೆ ಈ ಎರಡು ವರ್ಷಗಳಲ್ಲಿ ಅಂತಹ ಸಾಂದರ್ಭಿಕವಾದ ಸಾಲುಗಳ ಭಾರವೆಷ್ಟು ಎನ್ನುವುದು ಈಗೆರಡು ವರ್ಷಗಳಲ್ಲಿ ಅರ್ಥವಾಗುತ್ತಿದೆ. ಪ್ಲೇಗ್ ಗೆ ಜನರು ಹೇಗೆ ಪ್ರತಿಕ್ರಿಯಿಸಿದ್ದರು ಎಂಬುದು ಕುತೂಹಲದ ಸಂಗತಿಯೆ. ಈಗ ಅಂತಹ ಉಲ್ಲೇಖ ಇರುವ ಕೃತಿಗಳನ್ನು ಮತ್ತೊಮ್ಮೆ ಓದಬೇಕೆನಿಸುತ್ತಿದೆ.
ಅಲೋಶಿಯಸ್ ಗೊನ್ಜಾಗಾ ಎಂಬ ಯುವಕನೊಬ್ಬನ ಕಥೆ ನೆನಪಾಗುತ್ತದೆ. ಇಟೆಲಿಯ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದಾತ. ಹಿರಿಯ ಮಗನಾದ್ದರಿಂದ, ಮನೆಗೆ ಆನುವಂಶಿಕವಾಗಿ ಬಂದ ಸೇನಾ ಕರ್ತವ್ಯವನ್ನು ಮುಂದುವರೆಸುವ ಹೊಣೆಗಾರಿಕೆ ಅವನ ಮೇಲಿರುತ್ತದೆ. ಆದರೆ ಅವನ ಮನಸ್ಸು ಧಾರ್ಮಿಕತೆಯತ್ತ ವಾಲುತ್ತದೆ. ಆರೋಗ್ಯವೂ ಅವನ ಕೈ ಹಿಡಿಯದೇ ಇದ್ದುದರಿಂದ ಸದಾ ಔಷಧಿಯ ನೆರವಿನಲ್ಲಿಯೇ ಬಾಳುವೆ ಮಾಡಬೇಕಾಗುತ್ತದೆ. ಅಚ್ಚರಿಯೆಂಬಂತೆ ಅವನು, ಸೌಕರ್ಯಗಳನ್ನು ಕೊಡಬಲ್ಲ ಸಿರಿವಂತಿಕೆಯನ್ನು ನಿರಾಕರಿಸುತ್ತಾನೆ.
ಅಷ್ಟಾಗಿದ್ದರೆ ಸರಿ ಎನ್ನಬಹುದಿತ್ತು. 1591ರಲ್ಲಿ ರೋಮ್ ದೇಶವನ್ನು ಪ್ಲೇಗ್ ಸೋಂಕು ಕಾಡಿದಾಗ, ಅಲೋಶಿಯಸ್ ಗೆ ಇನ್ನೂ 20 ತುಂಬಿರಬಹುದಷ್ಟೇ. ಜಗತ್ತೇ ಬಣ್ಣಮಯವಾಗಿ ಕಾಣಿಸುವ ವಯಸ್ಸು. ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಎಲ್ಲರೂ ದೂರ ದೂರಕ್ಕೆ ಓಡುತ್ತಿದ್ದಾಗ, ಅಲೋಶಿಯಸ್ ಮಾತ್ರ ರೋಗಿಗಳ ಆರೈಕೆಯ ಕೆಲಸವನ್ನು ಆಯ್ದುಕೊಳ್ಳುತ್ತಾನೆ. ಅನಾಥರಾಗಿ ತೀರಿಕೊಂಡ ಅನೇಕರಿಗೆ ಸಂಸ್ಕಾರ ಮಾಡುತ್ತಾನೆ. ಕೊನೆಗೆ ತನ್ನ 23 ನೇ ವಯಸ್ಸಿನಲ್ಲಿ ಅದೇ ರೋಗಕ್ಕೆ ಬಲಿಯಾಗುತ್ತಾನೆ. ಅದಾಗಿ ಸುಮಾರು 200 ವರ್ಷಗಳ ಬಳಿಕ ಅಲೋಶಿಯಸ್ ಗೆ ಸಂತ ಪದವಿ ದೊರೆಯುತ್ತದೆ. ಸೇಂಟ್ ಅಲೋಶಿಯಸ್ ಹೆಸರಿನ ಚರ್ಚ್ ಮಂಗಳೂರಿನಲ್ಲಿದೆ.
ಈ ಎರಡು ವರ್ಷಗಳಲ್ಲಿ ಅಂತಹ ಸಾಂದರ್ಭಿಕವಾದ ಸಾಲುಗಳ ಭಾರವೆಷ್ಟು ಎನ್ನುವುದು ಈಗೆರಡು ವರ್ಷಗಳಲ್ಲಿ ಅರ್ಥವಾಗುತ್ತಿದೆ. ಪ್ಲೇಗ್ ಗೆ ಜನರು ಹೇಗೆ ಪ್ರತಿಕ್ರಿಯಿಸಿದ್ದರು ಎಂಬುದು ಕುತೂಹಲದ ಸಂಗತಿಯೆ.
ಸಮಾಜವು ಬೇಸರದಲ್ಲಿ ಖಿನ್ನವಾಗಿದ್ದಾಗ, ಅಥವಾ ಸಂಭ್ರಮದಲ್ಲಿ ಕೇಕೆ ಹಾಕುತ್ತಿರುವಾಗ, ಹುಸಿನಂಬಿಕೆಗಳ ಹಿಂದೆ ಬಿದ್ದು ಕಣ್ಕಾಪು ಕಟ್ಟಿದ ಕುದುರೆಯಂತೆ ಓಡುತ್ತಿರುವಾಗ, ವಿವೇಕದಿಂದ ವರ್ತಿಸುವ ಕೆಲವೇ ಜನರನ್ನು ನಾವು ಕಾಣುತ್ತೇವೆ. ಅಂತಹವರು, ಪ್ರವಾಹದ ಅಬ್ಬರವೇನೇ ಇರಲಿ, ತನ್ನ ಸಾಮರ್ಥ್ಯವೆಷ್ಟಿದೆಯೋ ಅದರ ಸಂಪೂರ್ಣ ವಿನಿಯೋಗದೊಂದಿಗೆ, ಒಳಿತೊಂದನ್ನೇ ಮಾಡುವ ಪಣ ತೊಟ್ಟಿರುತ್ತಾರೆ.
ಇದಕ್ಕೆ ಮಹಾತ್ಮಾ ಗಾಂಧೀಜಿ ಅವರಿಗಿಂತ ದೊಡ್ಡ ಉದಾಹರಣೆ ಕಾಣಿಸಲಿಕ್ಕಿಲ್ಲ. ಭಾರತವು ಸ್ವತಂತ್ರವಾಗಬೇಕು, ಸ್ವರಾಜ್ಯ ಪರಿಕಲ್ಪನೆಯನ್ನು ಈ ದೇಶದಲ್ಲಿ ಸಾಕಾರಗೊಳಿಸಬೇಕು ಎಂಬ ಉದ್ದೇಶದಿಂದ ಜೀವನದುದ್ದಕ್ಕೂ ಅಹೋರಾತ್ರಿ ಎಂಬಂತೆ ಕೆಲಸ ಮಾಡಿದ ಗಾಂಧೀಜಿ, ನಿಜಕ್ಕೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಆ ಗಳಿಗೆಯಲ್ಲಿ ಸಂಭ್ರಮದಲ್ಲಿ ಭಾಗಿಯಾಗಲಿಲ್ಲ. ದೇಶವಿಭಜನೆಯ ಪರಿಣಾಮಗಳು ಅವರನ್ನು ಕಂಗೆಡಿಸಿದ್ದವು. ಭಾರತದ ಭವಿಷ್ಯವು ಹೀಗೆ ರಕ್ತಸಿಕ್ತವಾಗಿಯೇ ಸಾಗುವುದೇ ಎಂಬ ಆತಂಕ ಅವರನ್ನು ಕಾಡುತ್ತಿತ್ತು.
ಕೋಲ್ಕತ್ತದಲ್ಲಿ ಕೋಮು ಸಂಘರ್ಷವು ರಕ್ತಪಾತವನ್ನೇ ಸೃಷ್ಟಿಸಿತ್ತು. ಅಲ್ಲಿಗೆ ತೆರಳಿದ ಗಾಂಧೀಜಿ ಅಲ್ಲಿ ಉಪವಾಸ ಆಚರಿಸಿದರು. ಚರಕದಿಂದ ನೂಲುತ್ತ ಸ್ವಾತಂತ್ರ್ಯ ಲಭಿಸಿದ ದಿನವನ್ನು ಆಚರಿಸಿದರು. ಉಪವಾಸ ಮತ್ತು ನೂಲುವಿಕೆ ಅವರ ಅಂತರಂಗದ ಆಶಯವನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮವೇ ಆಗಿತ್ತು.
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವಾಗಿದ್ದರೆ, ಗಾಂಧೀಜಿ ಆಗಸ್ಟ್ 9ರಂದೇ ಕೋಲ್ಕತ್ತಕ್ಕೆ ತೆರಳಿದ್ದರು. ಭೀಕರವಾದ ಕೋಮುಗಲಭೆಯ ಕಾರಣದಿಂದಾಗಿ, ಅಲ್ಲಿ ಉಂಟಾದ ರಕ್ತಪಾತವು ಸ್ವಾತಂತ್ರ್ಯ ಲಭಿಸಿದ ಸಂಭ್ರಮದ ಆಚರಣೆಗೆ ಜಾಗವನ್ನೇ ಬಿಟ್ಟುಕೊಟ್ಟಿರಲಿಲ್ಲ.
ದೇಶದಾದ್ಯಂತ ಧ್ವಜಾರೋಹಣ, ಘೋಷಣೆಗಳು, ದೇಶಭಕ್ತಿ ಗೀತೆಗಳ ಇಂಪು ಧ್ವನಿಯು ಕೇಳಿಸುತ್ತಿತ್ತು. ಆದರೆ ಅವುಗಳ ನಡುವೆ ಗಾಂಧೀಜಿಯವರ ಕಿವಿಗೆ ದೇಶವಿಭಜನೆಯ ಕಾರಣದಿಂದ ಸೃಷ್ಟಿಯಾದ ಕೋಮುಗಲಭೆಯ ರಕ್ತಪಾತದ ಧ್ವನಿಯೇ ಕೇಳಿಸುತ್ತಿತ್ತು. ಸದ್ಯಕ್ಕೆ ತಮ್ಮ ಮುಂದಿರುವ ಕರ್ತವ್ಯ ಈ ಗಲಭೆಗಳನ್ನು ನಿಯಂತ್ರಿಸುವುದು ಮತ್ತು ನೊಂದವರಿಗೆ ಸಾಂತ್ವನ ಹೇಳುವುದು ಎಂಬುದು ಗಾಂಧೀಜಿಯವರ ಪಾಲಿಗೆ ಆ ಕ್ಷಣದ ವಿವೇಕವಾಗಿತ್ತು.
ಜನರು ತಮ್ಮ ಹುಟ್ಟೂರನ್ನು ತೊರೆದು ನೆಲೆಕಳೆದುಕೊಂಡು ನರಳಬಾರದು. ಪಾಕಿಸ್ತಾನದ ಹಿಂದೂಗಳು ಅಲ್ಲಿಯೇ ಜೀವನ ನಡೆಸುವಂತಾಗಬೇಕು, ಭಾರತದ ಮುಸ್ಲಿಮರು ಇಲ್ಲಿಯೇ ಜೀವನ ನಡೆಸುವಂತಾಗಬೇಕು. ತಮ್ಮೂರು ಎಂಬ ಖುಷಿಯನ್ನು ಜನರಿಂದ ಕಿತ್ತುಕೊಳ್ಳಬಾರದು ನಿಲುವು ಅವರದಾಗಿತ್ತು. ಅದೇ ಆಶಯದೊಂದಿಗೆ ತಮ್ಮ ಕೆಲಸ ಮಾಡುತ್ತಿದ್ದರು.
ಪ್ರಸಿದ್ಧರು ಇಂತಹ ಕೆಲಸಗಳನ್ನು ಮಾಡಿದಾಗ ಅದು ನಮ್ಮ ಅರಿವಿಗೆ ಬರಬಹುದು. ಆದರೆ ನಮ್ಮ ಸುತ್ತಮುತ್ತಲೂ ಹೀಗೆ ತಮ್ಮೊಳಗಿನ ವಿವೇಕವು ಹೇಳುವ ಕೆಲಸಗಳನ್ನು ಮಾಡುವ ಎಷ್ಟೋ ಜನರು ಇರುತ್ತಾರೆ. ಪ್ರಚಾರದ ಹಂಗಿಲ್ಲದೇ ಪರರಿಗಾಗಿ ದುಡಿಯುವವರನ್ನು ಗಮನಿಸಿರುತ್ತೇವೆ. ಹಾಗಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪರಿಸ್ಥಿತಿಗಳೂ ಪ್ರೇರಕವಾಗಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಅವಕಾಶಗಳು ಲಭ್ಯವಾದಾಗ ಯಾವುದರ ಪರ ನಿಲ್ಲುವುದು ಸಾಧ್ಯವಾಗುತ್ತದೆ ಎಂಬುದು ವ್ಯಕ್ತಿಯ ವೈಯಕ್ತಿಕ ಸಾಮರ್ಥ್ಯವನ್ನು ಅವಲಂಬಿಸಿದೆ.
ರಕ್ತಪಾತ, ಕೊಲೆಯಂತಹ ಹುಚ್ಚಾಟಗಳಲ್ಲಿ ಜಗತ್ತು ಮುಳುಗಿದ್ದು ಹಿಟ್ಲರನ ಕಾಲದಲ್ಲಿ. ಹಿಟ್ಲರನ ಆಜ್ಞೆಗಳನ್ನು ಜಾರಿಮಾಡುತ್ತಿದ್ದ ಕಟುಕ ಅಧಿಕಾರಿಯ ಹೆಸರು ಹೆನ್ರೀಚ್ ಹಿಮ್ಲರ್. ಹಿಟ್ಲರ್ ನ ನಂತರದ ಸ್ಥಾನದಲ್ಲಿದ್ದವನು. ಹಿಟ್ಲರ್‌ನ ಆಜ್ಞೆಗಳನ್ನು ಭಕ್ತಿಯಿಂದ ಜಾರಿ ಮಾಡುತ್ತಿದ್ದನೆಂದ ಮೇಲೆ, ಅವನು ಎಂಥಾ ಪಾಶವೀ ಮನಸ್ಸಿನ ವ್ಯಕ್ತಿಯಾಗಿರಬಹುದು!
ಅವನಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ, ಹಲವಾರು ಮಂದಿ ವೈದ್ಯರು ಆತನಿಗೆ ಚಿಕಿತ್ಸೆ ಕೊಟ್ಟರು. ಆದರೆ ಯಾವ ಚಿಕಿತ್ಸೆಯೂ ಫಲಿಸಲಿಲ್ಲ. ಆ ವೇಳೆಗೆ ಡಾ. ಫೆಲಿಕ್ಸ್ ಕ್ರೆಸ್ಟನ್ ಎಂಬ ವೈದ್ಯ ಬಹಳ ಪ್ರಸಿದ್ಧಿ ಪಡೆದಿರುತ್ತಾನೆ. ಅವನೇನೂ ಸಾಂಪ್ರದಾಯಿಕವಾಗಿ ಡಾಕ್ಟರಿಕೆ ಓದಿದವನಲ್ಲ. ಮಸಾಜ್ ಮಾಡುವವನಾಗಿದ್ದ ಅವನಿಗೆ, ಟಿಬೆಟ್‌ನ ವೈದ್ಯಪದ್ಧತಿ ಕಲಿಯುವ ಅವಕಾಶ ಸಿಕ್ಕಿತ್ತು. ಕೈಗುಣ ಚೆನ್ನಾಗಿದೆ ಎಂಬ ಪ್ರಸಿದ್ಧಿಯಿಂದಾಗಿ ಅವನ ವಿಷಯ ಹಿಮ್ಲರನ ಕಿವಿಗೆ ಬಿದ್ದಿತ್ತು.
ಆದರೆ ಮಾನವೀಯತೆಯ ಬಗ್ಗೆ ಅಪಾರ ನಂಬಿಕೆಯೊಂದಿಗೆ, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಕ್ರೆಸ್ಟೆನ್ ಡಾಕ್ಟರ್, ಹಿಟ್ಲರ್‌ನನ್ನು ದ್ವೇಷಿಸುತ್ತಿದ್ದ. ಇನ್ನು ಅವನ ಆಜ್ಞೆಗಳನ್ನು ಜಾರಿ ಮಾಡುವ ಹಿಮ್ಲರನ ಬಗ್ಗೆ ಒಳ್ಳೆಯ ಭಾವನೆ ಮೂಡಲು ಹೇಗೆ ಸಾಧ್ಯ? ಆದರೆ ವೃತ್ತಿಧರ್ಮ ಎಂಬಂತೆ, ಹಿಮ್ಲರ್‌ನೊಳಗೆ ನರಳುತ್ತಿದ್ದ ಒಬ್ಬ ರೋಗಿಯನ್ನು ಡಾಕ್ಟರ್ ಗುರುತಿಸುತ್ತಾನೆ. ಅವನ ಚಿಕಿತ್ಸೆಯಿಂದ ಹಿಮ್ಲರ್ ಗುಣಮುಖನಾಗುತ್ತಾನೆ. ಪದೇ ಪದೇ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ ಚಿಕಿತ್ಸೆ ಕೊಡುವ ಕಾಯಂ ಡಾಕ್ಟರ್ ಆಗುತ್ತಾನೆ.
ಅಷ್ಟೊಂದು ಪಾಶವೀ ಕೃತ್ಯಗಳನ್ನು ಮಾಡುತ್ತಿದ್ದ, ದಿನಬೆಳಗಾದರೆ ಸಾವಿರ ಸಾವಿರ ಜನರ ಕೊಲೆಗಳನ್ನು ಮಾಡುವ ಆದೇಶಗಳಿಗೆ ಸಹಿ ಹಾಕುವ ಹಿಮ್ಲರ್‌ಗೇ ಸಾವು ಹತ್ತಿರ ಬರುವಂತೆ ಮಾಡುವುದು ಸಾಧ್ಯವಿಲ್ಲವೇ. ಕ್ರೆಸ್ಟೆನ್ ಡಾಕ್ಟರ್ ಮನಸ್ಸಿನಲ್ಲಿ ಇಂತಹ ಗೊಂದಲಗಳು ಮೂಡಿರಬಹುದೇನೋ. ಅಪಾಯದ ಎರಡಲಗಿನ ಕತ್ತಿಯ ಮೇಲಿನ ನಡಿಗೆ ಆ ಡಾಕ್ಟರದ್ದಾಗಿತ್ತು. ಏನೇ ಆಗಲಿ, ಜೀವ ಉಳಿಸುವುದಷ್ಟೇ ನನ್ನ ಕೆಲಸ. ಇತರರು ಕೂಡ ಜೀವ ಉಳಿಸುವ ಕೆಲಸವನ್ನೇ ಮಾಡಬೇಕು ಎಂಬ ಧ್ಯೇಯವನ್ನು ಅವನು ನಂಬಿದ್ದ.
ಚಿಕಿತ್ಸೆ ನೀಡುತ್ತ, ಹಿಮ್ಲರ್‌ಗೆ ಆಪ್ತನಾದ ಡಾಕ್ಟರ್, ನಿಧಾನವಾಗಿ ಅವನ ಅಂತರಂಗದ ಗೆಳೆಯನಾಗುತ್ತಾನೆ. ಡಾಕ್ಟರ್ ಜೊತೆ ಮಾತನಾಡುತ್ತ, ಆಡುತ್ತ, ಹಿಮ್ಲರ್‌ಗೆ ತನ್ನ ಅಂತರಂಗದೊಳಗೆ ಇರುವ ಮನುಷ್ಯನನ್ನು ನೋಡುವುದು ಸಾಧ್ಯವಾಗುತ್ತದೆ. ಸಾವಿನ ದವಡೆಗೆ ಹೋಗಬೇಕೆಂಬ ಆದೇಶಗಳಿಗೆ ಬದಲಾಗಿ, ಹಿಮ್ಲರ್, ಜನರಿಗೆ ಬದುಕು ನೀಡುವ ಆದೇಶಗಳಿಗೆ ಹಿಟ್ಲರ್‌ಗೆ ಗೊತ್ತಾಗದಂತೆ ಸಹಿ ಹಾಕುವಂತಾಗುತ್ತದೆ. ಸ್ವಯಂ ಬುದ್ಧಿಗೇ ಮಂಕು ಬಡಿದಂತೆ, ಹಿಟ್ಲರ್‌ನನ್ನು ಆರಾಧಿಸುವುದು ಸರಿಯಲ್ಲ ಎಂಬ ಮಿಂಚೊಂದು ಅವನ ಅಂತರಂಗದಲ್ಲಿ ಮೂಡುತ್ತದೆ.
ಕೊನೆಗೆ ಈ ಸಾಮಾನ್ಯ ವೈದ್ಯನೊಬ್ಬ ಹದಿನೆಂಟು ಲಕ್ಷ ಯುದ್ಧಕೈದಿಗಳನ್ನು ಸಾವಿನ ದವಡೆಯಿಂದ ಪಾರಾಗುವಂತೆ ಮಾಡುವಲ್ಲಿ ಸಫಲನಾಗುತ್ತಾನೆ. 1945ರ ಮಾರ್ಚ್ 12ರಂದು ಐತಿಹಾಸಿಕವಾದ Contract in the name of Humanityಗೆ ಹಿಮ್ಲರ್ ಸಹಿ ಹಾಕುತ್ತಾನೆ. ಹಿಟ್ಲರ್‌ನ ಅರಿವಿಗೆ ಬಾರದಂತೆ, ಹಿಮ್ಲರ್ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ, ಅವನ ಮನಪರಿವರ್ತನೆ ಮಾಡುವುದು ಸಾಧ್ಯವಾದುದು ಡಾ. ಕ್ರೆಸ್ಟೆನ್‌ಗೆ. ಡಾಕ್ಟರ್ ನಂಬಿದ್ದು, ವಿವೇಕದ ಒಳದನಿಯನ್ನಷ್ಟೇ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಮಿಲೇನಿಯಂ ಸರಣಿ ’ಮಹಾಯುದ್ಧ-3’ ಪುಸ್ತಕದಲ್ಲಿ ‘ಮಂತ್ರಹಸ್ತ’ ಎಂಬ ಶೀರ್ಷಿಕೆಯಡಿ ಡಾ. ಕ್ರೆಸ್ಟೆನ್ ಕತೆಯಿದೆ.
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.